ಜನಪ್ರಿಯ ತರಕಾರಿ ಕುಂಬಳಕಾಯಿ ವಿವಿಧ ಗಾತ್ರ, ಆಕಾರ, ಬಣ್ಣಗಳಲ್ಲಿ ದೊರೆಯುತ್ತದೆ. ತೋಟಗಳಲ್ಲಿಯೇ ಅಲ್ಲದೆ ಹೊಲ, ಗದ್ದೆ, ಹಿತ್ತಲು, ಬೇಲಿ ಮುಂತಾಗಿ ಬೆಳೆಯುತ್ತಾರೆ. ಹಳ್ಳಿಗಳಲ್ಲಿ ಇದರ ಬಳ್ಳಿಗಳನ್ನು ಮನೆಗಳ ಛಾವಣಿಗಳ ಮೇಲೆ ಹಬ್ಬಿಸಿರುತ್ತಾರೆ. ಹೂವೂ ಸಹ ಉತ್ತಮ ತರಕಾರಿಯೇ.

ಪೌಷ್ಟಿಕ ಗುಣಗಳು : ಸಿಹಿಗುಂಬಳ ಪೌಷ್ಟಿಕ ತರಕಾರಿ. ಅದರಲ್ಲಿ ಹೆಚ್ಚಿನ ಪ್ರಮಾಣದ ಶರ್ಕರಪಿಷ್ಟ, ಪ್ರೋಟೀನ್, ಜೀವಸತ್ವಗಳು ಹಾಗು ಖನಿಜ ಪದಾರ್ಥಗಳಿರುತ್ತವೆ. ಎಲೆ ಮತ್ತು ಹೂಗಳಲ್ಲಿ ಅಧಿಕ ಪೋಷಕಾಂಶಗಳಿದ್ದು, ಇದರ ಸೇವನೆಯಿಂದ ಶರೀರ ಬಲಗೊಳ್ಳುತ್ತದೆ.

೧೦೦ ಗ್ರಾಂ ಕಾಯಿಗಳಲ್ಲಿನ ವಿವಿಧ ಪೋಷಕಾಂಶಗಳು

  ತಿರುಳು ಎಲೆ ಹೂವು
ತೇವಾಂಶ ೯೨.೬ ಗ್ರಾಂ ೮೧.೧ ಗ್ರಾಂ ೮೯.೧ಗ್ರಾಂ
ಶರ್ಕರಪಿಷ್ಟ ೪.೬ಗ್ರಾಂ ೭.೯ಗ್ರಾಂ ೫.೮ಗ್ರಾಂ
ಪ್ರೊಟೀನ್ ೧.೪ಗ್ರಾಂ ೪.೬ಗ್ರಾಂ ೫.೨ಗ್ರಾಂ
ಕೊಬ್ಬು ೦.೧ಗ್ರಾಂ ೦.೮ಗ್ರಾಂ ೦.೮ಗ್ರಾಂ
ಒಟ್ಟು ಖನಿಜ ಪದಾರ್ಥ ೦.೬ಗ್ರಾಂ ೨.೭ಗ್ರಾಂ ೧.೪ಗ್ರಾಂ
ರಂಜಕ ೩೦ ಮಿ.ಗ್ರಾಂ ೧೧೨ಮಿ.ಗ್ರಾಂ ೬೦ಮಿಗ್ರಾಂ
ಕ್ಯಾಲ್ಸಿಯಂ ೧೦ ಮಿಗ್ರಾಂ ೩೯೨ಗ್ರಾಂ ೧೨೦ ಮಿಗ್ರಾಂ
ಕಬ್ಬಿಣ ೨.೭ಮಿಗ್ರಾಂ
ಪೊಟ್ಯಾಷಿಯಂ ೧೩೯ ಮಿ.ಗ್ರಾಂ
’ಎ’ ಜೀವಸತ್ವ ೮೪ ಐಯು
ರೈಬೋಪ್ಲೇವಿನ್ ೦.೦೪ ಮಿಗ್ರಾಂ
ಥಯಮಿನ್ ೦.೦೮ ಮಿಗ್ರಾಂ
’ಸಿ’ ಜೀವಸತ್ವ ೨.೦ ಮಿಗ್ರಾಂ

ಔಷಧೀಯ ಗುಣಗಳು : ಇವುಗಳನ್ನು ಬೇಯಿಸಿ, ತಿನ್ನಬೇಕು. ಕುಂಬಳಕಾಯಿ ತಿನ್ನುತ್ತಿದ್ದಲ್ಲಿ ಕಣ್ಣುಗಳ ದೃಷ್ಟಿ ಸುಧಾರಿಸುತ್ತದೆ ಹಾಗೂ ಮೂಲವ್ಯಾಧಿಗೆ ಒಳ್ಳೆಯದು. ಬೀಜವನ್ನು ಅರೆದು ಹಸುವಿನ ಹಾಲು ಮತ್ತು ಜೇನುತುಪ್ಪಗಳೊಂದಿಗೆ ಬೆರೆಸಿ ಸೇವಿಸುತ್ತಿದ್ದಲ್ಲಿ ಶರೀರದ ತೂಕ ಹೆಚ್ಚುತ್ತದೆಯಲ್ಲದೆ ಜ್ಞಾಪಕ ಉತ್ತಮಗೊಳ್ಳುತ್ತದೆ. ಬೀಜಗಳಲ್ಲಿ ಜಂತುನಾಶಕ ಗುಣಗಳಿವೆ. ಸುಟ್ಟಗಾಯ, ಊತ ಮುಂತಾದವುಗಳಿಗೆ ಇದರ ಎಲೆಗಳನ್ನು ಬಿಸಿಮಾಡಿ ಹೊದಿಸಿ ಕಟ್ಟುತ್ತಾರೆ.

ಉಗಮ ಮತ್ತು ಹಂಚಿಕೆ: ಇದು ಉತ್ತರ ಮತ್ತು ದಕ್ಷಿಣ ಅಮೇರಿಕಾ ನಿವಾಸಿ. ಭಾರತಕ್ಕೆ ಬಂದ ವಾಸ್ಕೋಡಗಾಮ ಇದನ್ನು ತಂದು ಹರಡಿದ. ಇದನ್ನುಭಾರತದ ಎಲ್ಲಾ ಕಡೆ ಬೆಳೆದು ಬಳಸುತ್ತಾರೆ.

ಸಸ್ಯ ವರ್ಣನೆ : ಸಿಹಿ ಗುಂಬಳ ಕುಕುರ್ಬಿಟೇಸೀ ಕುಟುಂಬಕ್ಕೆ ಸೇರಿದ ವಾರ್ಷಿಕ ಬಳ್ಳಿ. ಕಾಂಡ ಬಲಹೀನ; ನೆಲದ ಮೇಲೆ ತೆವಳಿ ಹರಡುತ್ತದೆ. ಆಸರೆ ಸಿಕ್ಕಲ್ಲಿ ನುಲಿಬಳ್ಳಿಗಳ ನೆರವಿನಿಂದ  ಮೇಲಕ್ಕೇರಬಲ್ಲದು. ಕವಲು ಹಂಬುಗಳು ಹಲವಾರು, ಬಣ್ಣ ಹಸುರು. ಎಲೆಗಳಿಗೆ ಉದ್ದ ತೊಟ್ಟು, ಹೃದಯಾಕಾರಿತ, ಸ್ಪುಟವಾದ ನರಬಲೆ ಕಟ್ಟು. ಹೂವು ಏಕಲಿಂಗಿಗಳು, ಗಾತ್ರದಲ್ಲಿ ದೊಡ್ಡವು, ಹಳದಿ ಬಣ್ಣ, ಉದ್ದನಾಗಿ ಬಟ್ಟಲು ಇಲ್ಲವೇ ಗಂಟೆಯ ಆಕಾರ, ಗಂಡು ಹೂವು ಕಾಯಿ ಕಚ್ಚುವುದಿಲ್ಲ. ಅಂಡಾಶಯ ಅಧೋಸ್ಥಿತಿಯದು. ಉದ್ದ, ಅದುಮಿದಂತೆ ಮುಂತಾಗಿ ಹಲವು ಆಕಾರಗಳು, ಕೆಂಪು, ಹಳದಿ, ಹಸುರು ಮಿಶ್ರಿತ ಕೆಂಪು ಅಥವಾ ವಿವಿಧ ಬಣ್ಣಗಳ ಕಲೆಗಳು ಇಲ್ಲವೇ ಪಟ್ಟಿಗಳು, ಗಾತ್ರದಲ್ಲಿ ಅರ್ಧ ಕಿ.ಗ್ರಾಂ ನಿಂದ ಹಿಡಿದು ಐವತ್ತು ಕಿ.ಗ್ರಾಂವರೆಗೂ ತೂಗುತ್ತವೆ. ತಿರುಳು ಮಂದ; ಹಳದಿ ಬಣ್ಣ, ಸ್ಪರ್ಶಕ್ಕೆ ನಯ, ಗಟ್ಟಿ, ಒಳಗಿನ ಪೊಳ್ಳುಭಾಗ ಜಾಸ್ತಿ, ಅದರ ಒಳಗೋಡೆಯ ದಿಂಡಿಗೆ ಬೀಜಗಳಿಂದ ಆವೃತವಾದ ಲೋಳೆ ಪದರ ಕಂಡುಬರುತ್ತದೆ. ಬೀಜಗಳ ಸಂಖ್ಯೆ ಅಧಿಕ, ಬುಡದತ್ತ ಸಂಕುಚಿತ, ತುದಿಯತ್ತ ಅಗಲ, ಬೀಜನಯ, ದಂತ ಬಿಳುಪಿನ ತೆಳು ಸಿಪ್ಪೆ, ಪಪ್ಪು ಎರಡು ಬೇಳೆಗಳು, ಜಿಡ್ಡುಯುತ, ಸಸ್ಯಭಾಗಗಳ ಮೇಲೆಲ್ಲಾ ತುಪ್ಪಳ, ಹೂಗಳಲ್ಲಿ ಜೇನುನೊಣಗಳಿಂದ ಪರಾಗಸ್ಪರ್ಶ ಕಾರ್ಯ ಬೇರು ಸಮೂಹ ಮಣ್ಣಿನಲ್ಲಿ ಆಳವಾಗಿ ಇಳಿದಿರುತ್ತದೆ.

ತಳಿ ಅಭಿವೃದ್ಧಿ: ಈ ಬೆಳೆಯಲ್ಲಿ ಸ್ವಲ್ಪಮಟ್ಟಿನ ತಳಿ ಅಭಿವೃದ್ಧಿ ಕಾರ್ಯ ನಡೆದಿದ್ದು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಕೆಲವೊಂದು ಉತ್ತಮ ಆಯ್ಕೆಗಳನ್ನು ಬೇಸಾಯಕ್ಕೆ ಬಿಡುಗಡೆ ಮಾಡಿದೆ. ಅಧಿಕ ಇಳುವರಿ, ಹೆಚ್ಚಿನ ಕೆರೊಟಿನ್ ಅಂಶ ಹಾಗೂ ಹಣ್ಣಿನ ನೊಣಗಳಿಗೆ ನಿರೋಧಕ ಮತ್ತು ಮಧ್ಯಮ ಗಾತ್ರದ ಕಾಯಿಗಳನ್ನು ಬಿಡುವ ತಳಿಗಳ ಅಗತ್ಯ ಬಹಳಷ್ಟಿದೆ. ಅರ್ಕಾಸೂರ್ಯಮುಖಿ ಮತ್ತು ಅರ್ಕಾಚಂದನ್ ಉತ್ತಮ ಕೊಡುಗೆಗಳು.

ಹವಾಗುಣ :  ಬೇಸಾಯಕ್ಕೆ  ಬೆಚ್ಚಗಿನ ಹವಾಗುಣ ಸೂಕ್ತ. ದಿನಗಳಲ್ಲಿ ಹೆಚ್ಚು ಕಾಲ ಬಿಸಿಲು ಬೆಳಕುಗಳಿದ್ದರೆ ಗಂಡು ಹೂವು ಅಧಿಕ ಸಂಖ್ಯೆಯಲ್ಲಿ ಬಿಡುತ್ತವೆ. ಕರ್ನಾಟಕದಲ್ಲಿ ಇದರ ಬೇಸಾಯಕ್ಕೆ ಜೂನ್-ಜುಲೈ ಮತ್ತು ಜನವರಿ-ಫೆಬ್ರುವರಿ ತಿಂಗಳುಗಳು ಸೂಕ್ತ. ಬೇಸಿಗೆ ಕಾಲದ ಬೆಳಗಿಂತ ಮಳೆಗಾಲದ ಬೆಳೆ  ಚೆನ್ನಾಗಿ ಫಲಿಸುತ್ತದೆ.

ಭೂಗುಣ : ನೀರು ಬಸಿಯುವ ಮರಳು ಮಿಶ್ರಿತ ಗೋಡು ಮಣ್ಣಿನ ಭೂಮಿಯಾದಲ್ಲಿ ಸೂಕ್ತ. ಕೆಂಪುಗೋಡು ಹಾಗೂ ಸಾಧಾರಣ ಕಪ್ಪು ಮಣ್ಣುಗಳಲ್ಲಿ ಸಹ ಬೆಳೆಯಬಹುದು. ಜೌಗಿನಿಂದ ಕೂಡಿದ ಹಾಗೂ ತಗ್ಗು ಪ್ರದೇಶಗಳು ಸೂಕ್ತವಿರುವುದಿಲ್ಲ.

ತಳಿಗಳು

. ಅರ್ಕಾಸೂರ್ಯಮುಖಿ: ಮಂಗಳೂರಿನ ಸ್ಥಳೀಯ ತಳಿ (ಐಐಎಚ್‌ಆರ್-೭೯) ಯಿಂದ ಆರಿಸಿ ವೃದ್ಧಿಪಡಿಸಲಾಗಿದೆ. ಕಾಯಿ ಗಾತ್ರದಲ್ಲಿ ಸಣ್ಣ, ಗುಂಡಾಕಾರ, ಎರಡೂ ತುದಿಗಳು ಅದುಮಿದಂತೆ, ಸಮತಟ್ಟಾಗಿರುತ್ತವೆ. ಕಾಯಿಗಳ ಬಣ್ಣ ದಟ್ಟ ಕಿತ್ತಳೆ, ಕೆನೆಬಿಳುಪು ಗೆರೆಗಳು. ಬಿಡಿಕಾಯಿಗಳ ತೂಕ ೧ ರಿಂದ ೧.೫ ಕಿ.ಗ್ರಾಂ ತಿರುಳು ಕಿತ್ತಳೆ ಹಳದಿ ಬಣ್ಣ; ಸಂಗ್ರಹಣಾ ಮತ್ತು ಸಾಗಾಣಿಕೆ ಗುಣಗಳು ಉತ್ತಮ. ಹಣ್ಣಿನ ನೊಣಗಳಿಗೆ ನಿರೋಧಕ. ಬಿತ್ತನೆಯಾದ ೧೦೦ ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಬಳ್ಳಿಯೊಂದಕ್ಕೆ ೮-೧೦ ಕಾಯಿ, ಹೆಕ್ಟೇರಿಗೆ ೩೫ ಟನ್ನುಗಳಷ್ಟು ಫಸಲು ಸಾಧ್ಯ.

. ಅರ್ಕಾಚಂದನ್: ರಾಜಸ್ತಾನದ ತಳಿಯೊಂದರಿಂದ (ಐಐಎಚ್‌ಆರ್-೧೦೫) ಆರಿಸಿ ವೃದ್ಧಿ ಮಾಡಲಾಯಿತು. ಇದು ಬೇಸಾಯಕ್ಕೆ ಬಂದದ್ದು ೧೯೭೨ ರಲ್ಲಿ. ಕಾಯಿಗಳು ಗಾತ್ರದಲ್ಲಿ ಸಾಧಾರಣ ದೊಡ್ಡವು. ಸರಾಸರಿ ೨ ರಿಂದ ೩ ಕಿ.ಗ್ರಾಂ ತೂಗುತ್ತವೆ. ಗುಂಡಗೆ, ಎರಡೂ ತುದಿಗಳತ್ತ ಅದುಮಿದಂತೆ, ಸಿಪ್ಪೆ ಬಿಳಕಂದು ಬಣ್ಣ; ಕಾಯಿಗಳು ಬಲಿತಾಗ ಕೆನೆ ಬಿಳುಪು ಕಲೆಗಳು ಕಾಣಿಸಿಕೊಳ್ಳುತ್ತವೆ. ತಿರುಳು ಬಿಗು, ಹೊಳಪು, ಕಿತ್ತಳೆ ಬಣ್ಣ, ಅಧಿಕ ಕೆರೊಟಿನ್ ಜೀವಸತ್ವಯುತ, ವಾಸನೆ ಹಿತಕರ, ಬೆಂದಾಗ ಸ್ವಾದಿಷ್ಟಭರಿತ, ಕಾಯಿಗಳ ಸಂಗ್ರಹಣಾ ಗುಣ ಉತ್ತಮ. ಬಳ್ಳಿಗಳಲ್ಲಿ ತಲಾ ೨ ರಿಂದ ೫ ಕಾಯಿಗಳು. ಬಿತ್ತನೆಯಾದ ೧೧೫ ರಿಂದ ೧೩೦ ದಿನಗಳಲ್ಲಿ ಕೊಯ್ಲಿಗೆ  ಬರುತ್ತವೆ. ಹೆಕ್ಟೇರಿಗೆ ೩೨ ಟನ್ನುಗಳಷ್ಟು ಫಸಲು ಸಾಧ್ಯ.

. ಕೊಯಮತ್ತೂರು: ಇದು ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದ ಕೊಡುಗೆ; ತಡವಾಗಿ ಅಂದರೆ, ಸುಮಾರು ೧೭೫ ದಿನಗಳಲ್ಲಿ ಕಾಯಿ ಕೊಯ್ಲಿಗೆ ಬರುತ್ತವೆ. ಕಾಯಿಗಳು ದೊಡ್ಡವು, ಸರಾಸರಿ ೭-೮ ಕಿ.ಗ್ರಾಂ ತೂಗುತ್ತವೆ. ನೋಡಲು ಆಕರ್ಷಕ, ಗೋಲಾಕಾರವಿರುತ್ತವೆ. ಬಳ್ಳಿಗಳಲ್ಲಿ ತಲಾ ೭-೮ ಕಾಯಿಸಿಗುತ್ತವೆ.ಹೆಕ್ಟೇರಿಗೆ ೨೫ ರಿಂದ ೨೬ ಟನ್ನುಗಳಷ್ಟು ಫಸಲು ಸಾಧ್ಯ.

. ಕೊಯಮತ್ತೂರು: ಇದೂ ಸಹ ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದ ಕೊಡುಗೆಯೇ ಆಗಿದೆ. ಇದರ ಕಾಯಿ ಸಣ್ಣವು. ಸರಾಸರಿ ೨ ಕಿ.ಗ್ರಾಂ ಗಳಷ್ಟು ತೂಗುತ್ತವೆ. ಹೆಕ್ಟೇರಿಗೆ ಸುಮಾರು ೨೨ ಟನ್ನುಗಳಷ್ಟು ಫಸಲು ಸಾಧ್ಯ.

ಭೂಮಿ ಸಿದ್ಧತೆ ಮತ್ತು ಬಿತ್ತನೆ: ೨,೫ ರಿಂದ ೩ ಮೀಟರ್  ಉದ್ದ ಮತ್ತು ೧.೨ ಮೀಟರ್ ಅಗಲ ಪಾತಿಗಳನ್ನು ತಯಾರಿಸಿ, ಪೂರ್ಣಪ್ರಮಾಣದ ರಂಜಕಾಂಶ ಹಾಗು ಪೊಟ್ಯಾಷ್ ಸತ್ವಗಳನ್ನು ಸಮನಾಗಿ ಹರಡಿ ಮಣ್ಣಿನಲ್ಲಿ ಬೆರೆಸಬೇಕು. ಬೀಜವನ್ನು ಶೇಕಡಾ ೦.೧ ಕಾರ್ಬೆಂಡಜಿಂ ದ್ರಾವಣದಲ್ಲಿ ಸುಮಾರು ೧೫ ನಿಮಿಷಗಳ ಕಾಲ ಅದ್ದಿ ಉಪಚರಿಸಿ ಪ್ರತಿ ಪಾತಿಗೆ ೩ ರಿಂದ ೪ ರಂತೆ ಬಿತ್ತಬೇಕು. ನಾಲ್ಕೈದು ದಿನಗಳಲ್ಲಿ ಮೊಳೆಯುತ್ತವೆ. ಹೆಕ್ಟೇರಿಗೆ ೫ ಕಿ.ಗ್ರಾಂ ಬೀಜ ಬೇಕಾಗುತ್ತದೆ.

ಗೊಬ್ಬರ: ಹೆಕ್ಟೇರಿಗೆ ೨೫ ಟನ್ ತಿಪ್ಪೆಗೊಬ್ಬರ, ೧೦೦ ಕಿ.ಗ್ರಾಂ ಸಾರಜನಕ, ೧೦೦ ಕಿ.ಗ್ರಾಂ. ರಂಜಕ ಮತ್ತು  ೪೦ ಕಿ.ಗ್ರಾಂ ಪೊಟ್ಯಾಷ್ ಸತ್ವಗಳನ್ನು ಕೊಡಬೇಕಾಗುತ್ತದೆ.

ನೀರಾವರಿ: ಮಳೆಗಾಲದಲ್ಲಿ ಕಡಿಮೆ ನೀರು ಸಾಕು. ಇತರ ದಿನಗಳಲ್ಲಿ ವಾರಕ್ಕೊಮ್ಮೆ ನೀರು ಕೊಡಬೇಕು. ಬೇಸಿಗೆಯಲ್ಲಿ ಮೂರು ನಾಲ್ಕು ದಿನಗಳಿಗೊಮ್ಮೆ ನೀರು ಕೊಡಬೇಕಾಗುತ್ತದೆ.

ಅಂತರ ಬೇಸಾಯ: ಬಿತ್ತನೆಯಾದ ಒಂದು ತಿಂಗಳ ನಂತರ ಉಳಿದ ಅರ್ಧ ಸಾರಜನಕವನ್ನು ಮೇಲಗೊಬ್ಬರವಾಗಿ ಕೊಟ್ಟು, ನೀರು ಹಾಯಿಸಬೇಕು. ಕಾಯಿಗಳ ತಳಭಾಗ ಹಸಿಮಣ್ಣನ್ನು ತಾಕುವಂತಿದ್ದರೆ ಅವುಗಳಿಗೆ ಒಣಹುಲ್ಲಿನ ಹೊದಿಕೆ ಹರಡಬೇಕು.

ಕೊಯ್ಲು ಮತ್ತು ಇಳುವರಿ: ಹಳದಿ ಕೆಂಪು, ಕಿತ್ತಳೆ ಹಳದಿ ಮುಂತಾಗಿ ಬಣ್ಣ ತಾಳಿದ ಪೂರ್ಣಬಲಿತ ಕಾಯಿಗಳನ್ನು ಮಾತ್ರವೇ ಕಿತ್ತು ತೆಗೆಯಬೇಕು. ಅವುಗಳಲ್ಲಿ ತೊಟ್ಟು ಭಾಗ ಇದ್ದರೆ ಒಳ್ಳೆಯದು. ಹೆಕ್ಟೇರಿಗೆ ೨೦ ರಿಂದ ೩೫ ಟನ್ನುಗಳಷ್ಟು ಇಳುವರಿ ಸಾಧ್ಯ. ಕಿತ್ತ ಕಾಯಿಗಳು ಜಜ್ಜಿಹಾಳಾಗದಂತೆ ಸಾಗಿಸಬೇಕು. ಬೆಳೆ ಅವಧಿಯಲ್ಲಿ ಮೂರು ನಾಲ್ಕು ಕೊಯ್ಲುಗಳಿರುತ್ತವೆ.

ಕೀಟ ಮತ್ತು ರೋಗಗಳು: ಕೀಟಗಳಲ್ಲಿ ಸಸ್ಯಹೇನು ಮತ್ತು ಕುಂಬಳದ ದುಂಬಿ ಮತ್ತು ರೋಗಗಳಲ್ಲಿ ಬೂದಿರೋಗ ಮುಖ್ಯವಾದವು. ಅವುಗಳ ಹತೋಟಿ ಕಲ್ಲಂಗಡಿಯಲ್ಲಿದ್ದಂತೆ.

ಬೀಜೋತ್ಪಾದನೆ: ಇದು ಪರಕೀಯ ಪರಾಗಸ್ಪರ್ಶದ ಬೆಳೆ. ಹೆಕ್ಟೇರಿಗೆ ೩೦೦-೪೦೦ ಕಿ.ಗ್ರಾಂ ಬೀಜ ದೊರಕುತ್ತದೆ.

* * *