ಜನನ: ೨೯-೧೨-೧೯೩೯, ಬೆಂಗಳೂರಿನಲ್ಲಿ

ಮನೆತನ: ಕಲಾವಿದರ ಮನೆತನ. ತಂದೆ ಶ್ರೀಧರ ರಾಮರಾಯರು-ತಾಯಿ ಶಾರದಮ್ಮ. ಅಣ್ಣಂದಿರಾದ ಸಿ. ವಿಶ್ವನಾಥ್‌ರಾವ್, ಸಿ.ನಾಗರಾಜರಾವ್ ಗಾಯಕರು ಹಾಗೂ ರಂಗನಟರಾಗಿದ್ದವರು. ವಿಶ್ವನಾಥರಾವ್ ಕೆಲವು ಚಲನಚಿತ್ರಗಳಲ್ಲೂ ನಟಿಸಿದ್ದಾರೆ.

ಗುರು ಪರಂಪರೆ: ದೇವಗಿರಿ ಶಂಕರರಾವ್ ಜೋಶಿಯವರಲ್ಲಿ ಹಿಂದೂಸ್ಥಾನಿ ಸಂಗೀತ ಕಲಿಕೆ. ಕಾಳಿಂಗರಾಯರ ಧ್ವನಿ ಮುದ್ರಿಕೆಗಳಲ್ಲಿನ ಹಾಡು ಕೇಳಿ ಅದರಿಂದ ಪ್ರಭಾವಿತರಾಗಿ ಸುಗಮ ಸಂಗೀತದ ಕಡೆಗೆ ಆಕರ್ಷಣೆ.

ಸಾಧನೆ: ಮೊದ ಮೊದಲು ರಾಮಕೃಷ್ಣಾಶ್ರಮದಲ್ಲಿ ನಡೆಯುತ್ತಿದ್ದ ಭಜನೆಗಳಲ್ಲಿ ಪಾಲ್ಗೊಂಡು ತಾವೇ ರಾಗ ಸಂಯೋಜಿಸಿ ಹಾಡುಗಳನ್ನು ಹಾಡುತ್ತಿದ್ದರು-ಹಿಂದಿ ಚಲನಚಿತ್ರರಂಗದ ಅನಭಿಷಕ್ತ ದೊರೆ ಕುಂದನ್ ಲಾಲ್‌ ಸೈಗಾಲ್, ಅವರ ಗಾನ ವೈಖರಿ ಮೋಡಿಗೆ ಒಳಗಾಗಿ ಅದೇ ಶೈಲಿಯಲ್ಲಿ ಹಾಡಲು ಅಭ್ಯಸಿಸಿದರು. ಮತ್ತೊಬ್ಬ ಹಿನ್ನೆಲೆ ಗಾಯಕ ಮಹಮದ್ ರಫಿ ಅವರ ಗಾನಕ್ಕೆ ಮಾರು ಹೋಗಿದ್ದರು. ತಾವು ಓದುತ್ತಿದ್ದ ಕಾಲೇಜುಗಳಲ್ಲಿ ಚಿತ್ರಗೀತೆಗಳ ಗಾಯನ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದವರು. ಮುಂದೆ ಕನ್ನಡ ಗೀತೆಗಳಿಗೆ ರಾಗ ಸಂಯೋಜನೆ ಮಾಡಿ, ಕೆ.ಎಸ್. ನರಸಿಂಹಸ್ವಾಮಿ ಅವರ ಮೈಸೂರು ಮಲ್ಲಿಗೆ, ಶಿಶುನಾಳ ಶರೀಫರ ಗೀತೆಗಳನ್ನು ಹಾಡುತ್ತಿದ್ದುದೇ ಅಲ್ಲದೆ ಮಂಕು ತಿಮ್ಮನ ಕಗ್ಗದ ಕೆಲವು ಗೀತೆಗಳಿಗೂ ರಾಗ ಅಳವಡಿಸಿ ರಾಜಕುಮಾರ್ ಅವರ ಕೈಲಿ ಹಾಡಿಸಿದ ದಾಖಲೆ ಇವರದು. ನಾಟಕ -ಚಲನಚಿತ್ರ-ಸುಗಮ ಸಂಗೀತ ಕ್ಷೇತ್ರಗಳಲ್ಲಿ ಸಂಗೀತ ನಿರ್ದೇಶಕರಾಗಿ ಗುರುತಿಸಲ್ಪಟ್ಟರು.

ಟಿ.ಪಿ. ಕೈಲಾಸಂರವರ ನಾಟಕಗಳ ಗೀತೆಗಳು, ಕುವೆಂಪುರವರ ಸ್ಮಶಾನ ಕುರುಕ್ಷೇತ್ರ, ಮಾಸ್ತಿಯವರ ಕಾಕಾನಕೋಟೆ, ಕಾರ್ನಾಡ್‌ರ ಹಯವದನ ನಾಟಕಗಳಿಗೆ ಸಂಗೀತ ಸಂಯೋಜನೆ, ಕಾಕನಕೋಟೆ, ಶಿಶುನಾಳ ಶರೀಫ, ಸ್ಪಂದನ ಮುಂತಾದ ಚಲನಚಿತ್ರಗಳಿಗೂ ನಿರ್ದೇಶಕರಾಗಿ ದುಡಿದಿದ್ದಾರೆ. ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯಕರಾಗಿ ಸಹ ಪಾಲ್ಗೊಂಡಿದ್ದಾರೆ.

೧೯೬೫ರಿಂದ ೬೮ರವರೆಗೆ ಆಕಾಶವಾಣಿಯ ಮೂಲಕ ಲಘು ಸಂಗೀತದಲ್ಲಿ ಸ್ವರಚಿತ ಗೀತೆಗಳನ್ನು ಹಾಡಿದ್ದಾರೆ. ಮುಂದೆ ರಾಜ್ಯಾದ್ಯಂತ ರಾಷ್ಟ್ರಾದ್ಯಂತ ಹೊರ ರಾಷ್ಟ್ರಗಳಲ್ಲಿ ಸಹಸ್ರಾರು ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಜಾನಪದ ಶೈಲಿಯಲ್ಲಿ ಹಾಡುವ ಪರಿಶ್ರಮವಿದ್ದುರಾಗ ಸಂಯೋಜಿಸಿ ಹಾಡಿರುತ್ತಾರೆ. ರತ್ನಮಾಲಾ ಪ್ರಕಾಶ್, ಮಾಲತಿ ಶರ್ಮ, ಸುಪ್ರಿಯಾ ಆಚಾರ್ಯ, ಪಲ್ಲವಿ ಅರುಣ್ ಇವರೊಡನೆ ಸಹ ಗಾಯಕರುಗಳಾಗಿ ಪಾಲ್ಗೊಂಡಿದ್ದಾರೆ. ಅಮೆರಿಕದಲ್ಲಿನಡೆಯುವ ’ಅಕ್ಕ’ ಸಮ್ಮೇಳನದಲ್ಲಿ ಅಶ್ವಥ್‌ರವರ ಗಾಯನವಿಲ್ಲದೆ ಕಾರ್ಯಕ್ರಮ ನಡೆಯುವಂತೆಯೇ ಇಲ್ಲ, ಸುಗಮ ಸಂಗೀತ ಕ್ಷೇತ್ರದ ಸಾಮ್ರಾಟರಾಗಿ ಮೆರೆದಿದ್ದಾರೆ. ಸ್ವರಮಾಧುರಿ ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ. ಬೆಂಗಳೂರು ಐ.ಟಿ.ಐ. ಸಂಸ್ಥೆಯಲ್ಲಿ ಸೇವೆಯಲ್ಲಿದ್ದು ಸ್ವಯಂ ನಿವೃತ್ತಿ ಪಡೆದಿದ್ದಾರೆ.

ಪ್ರಶಸ್ತಿ-ಸನ್ಮಾನ: ಸ್ಪಂದನ ಚಿತ್ರಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ, ರಾಜ್ಯ ಪ್ರಶಸ್ತಿ ೧೯೮೫-೮೬ರಲ್ಲಿ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮೈಸೂರು ಮಲ್ಲಿಗೆ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಫಿಲಂಫೇರ್‌ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಫೆಲೋಶಿಪ್, ಹೀಗೇ ಹತ್ತು ಹಲವು ಪ್ರಶಸ್ತಿಗಳೇ ಅಲ್ಲದೆ ೧೯೯೭ರ ಪ್ರತಿಷ್ಠಿತ ಸಂತ ಶಿಶುನಾಳ ಪ್ರಶಸ್ತಿ, ಬೆಂಗಳೂರು ಗಾಯನ ಸಮಾಜದಿಂದ ವರ್ಷದ ಕಲಾವಿದ ಸನ್ಮಾನ ಸಹ ಇವರಿಗೆ ಸಂದಿದೆ.