ಅಶ್ವಥ್‌ ಅವರು ೨೯ನೇ ಡಿಸೆಂಬರ್, ೧೯೩೯ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದರು. ಶ್ರೀಧರ ರಾಮರಾಯರು ಹಾಗೂ ತಾಯಿ ಶಾರದಮ್ಮ ದಂಪತಿಗಳಿಗೆ ಹುಟ್ಟಿದ ಮೂರು ಗಂಡು ಮಕ್ಕಳಲ್ಲಿ ಇವರೇ ಕಿರಿಯವರು.

ಅಶ್ವಥ್‌ಅವರ ಮುತ್ತಜ್ಜ, ವಿಜಯಪುರ ತಾಲ್ಲೂಕಿನ ಕುಗ್ರಾಮ ಚೆನ್ನರಾಯಪಟ್ಟಣದಲ್ಲಿ ಒಂದು ದೇವಸ್ಥಾನವನ್ನು ಕಟ್ಟಿಸಿದ್ದವರು. ಹೀಗಾಗಿ ‘ಸಿ’ಎಂದರೆ ಚೆನ್ನರಾಯಪಟ್ಟಣ ಎಂದು ಗುರುತಿಸಬಹುದು.

ಸಂಗೀತದ ಪರಂಪರೆಯ ಬಗ್ಗೆ ಹೆಚ್ಚಿಗೆ ಹೇಳಲು ಏನಿಲ್ಲದಿದ್ದರೂ ಅವರ ಸೋದರತ್ತೆ ವೀಣೆ ನುಡಿಸುತ್ತಿದ್ದರೆಂದು ಕೇಳಿದ್ದೇವೆ. ಅದನ್ನು ಬಿಟ್ಟರೆ, ಅವರ ಅಣ್ಣಂದಿರಿಬ್ಬರೂ ಸಿ. ವಿಶ್ವನಾಥರಾವ್‌ಮತ್ತು ಸಿ. ನಾಗರಾಜರಾವ್‌ನಾಟಕದಲ್ಲೂ ಗಾಯನದಲ್ಲೂ ಪರಿಣತಿ ಪಡೆದಿದ್ದವರು. ಅದುವೇ ಅಶ್ವಥ್‌ಅವರಿಗೆ ಸ್ಪೂರ್ತಿಯಾಗಿ ಸಂಗೀತದಲ್ಲಿ ಮುಂದುವರೆಯಲು ಅನುವು ಮಾಡಿಕೊಟ್ಟಿತು.

ಸುಮಾರು ೧೦ ವರ್ಷದ ಹುಡುಗನಾಗಿದ್ದಾಗ, ಅಶ್ವಥ್‌ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ (ತನ್ನ ತಾತನ ಮನೆ ಚಾಮರಾಜಪೇಟೆಯಲ್ಲಿದ್ದಿದ್ದರಿಂದ) ಸುಗಮ ಸಂಗೀತದ ದಿಗ್ಗಜರಲ್ಲೊಬ್ಬರಾದ ಪಿ. ಕಾಳಿಂಗರಾವ್‌ಅವರ ಧ್ವನಿ ತಟ್ಟೆಗಳಲ್ಲಿ ತೇಲಿ ಬರುತ್ತಿದ್ದ ‘ಯಾರು ಹಿತವರು ಈ ಮೂವರೊಳಗೆ’, ‘ಮಾಡು ಸಿಕ್ಕದಲ್ಲ’ ಮುಂತಾದ ಗೀತೆಗಳಿಂದ ಪ್ರಭಾವಿತರಾದರು. ಹೀಗೇ ಹಿಂದಿ ಚಲನ ಚಿತ್ರದ ಅನಭಿಷಿಕ್ತ ದೊರೆ ಕೆ.ಎಲ್‌. ಸೈಗಾಲ್‌ಅವರ ಶಾರೀರಕ್ಕೂ, ಧಾಟಿಗೂ ಮೋಡಿಹೋಗಿದ್ದರು ಹಾಗೂ ಮಹಮ್ಮದ್‌ರಫಿ ಅವರ ಗಾಯನವನ್ನು ಕೇಳಿ ಆಕರ್ಷಿತರಾದವರು.

೧೯೪೮-೫೦ ರಲ್ಲಿ ನರಸಿಂಹರಾಜ ಕಾಲೊನಿಯ ಈಗ ವಾಸವಾಗಿರುವ ಸ್ವಂತ ಮನೆಗೆ ಆಗಮನ. ಬಸವನಗುಡಿಯ ಎಪಿಎಸ್‌ಮಿಡ್ಲ್ ಸ್ಕೂಲಿನಲ್ಲಿ ವಿದ್ಯಾಭ್ಯಾಸ ಪ್ರಾರಂಭಿಸಿ ಮುಇಂದೆ ೧೯೫೬-೬೦ರಲ್ಲಿ ಬಸವನಗುಡಿ ನ್ಯಾಷನಲ್‌ಕಾಲೇಜಿನಲ್ಲಿ ಬಿ.ಎಸ್ಸಿಪದವೀಧರರಾದರು. ತನ್ನ ಮಿಡ್ಲ್, ಹೈಸ್ಕೂಲು ದಿನಗಳಲ್ಲಿ ರಾಮಕೃಷ್ಣ ಆಶ್ರಮದ ಭಜನೆಗಳಲ್ಲಿ ಭಾಗಿಯಾಗುತ್ತ, ಅದರ ಪರಿಣಾಮವಾಗಿ, ಸಂಗೀತದಲ್ಲಿ ಮತ್ತಷ್ಟು ಹೆಚ್ಚು ಆಸಕ್ತಿ ಉಂಟಾಯಿತು. ಕಾಲೇಜುದಿನಗಳಲ್ಲಿ ಹಿಂದಿ ಚಲನಚಿತ್ರ ಗೀತೆಗಳಿಂದ ಪ್ರಭಾವಿತರಾಗಿ, ಆಗಿನ ದಿನಗಳಲ್ಲೇ ಕನ್ನಡ ಕವಿತೆಗಳಿಗೆ ಸ್ವರಸಂಯೋಜಿಸಲು ಪ್ರಾರಂಭಿಸಿದ್ದರು. ಕೆ.ಎಸ್‌. ನರಸಿಂಹಸ್ವಾಮಿಯವರ ‘ಮೈಸೂರು ಮಲ್ಲಿಗೆ’ಯ ಬಹುತೇಕ ಗೀತೆಗಳು ಆ ದಿನಗಳಲ್ಲೇ ರಾಗ ಸಂಯೋಜಿಸಲ್ಪಟ್ಟವು. ಸುಮಾರು ೧೯೬೩ರಲ್ಲಿ ಮನೆಯಲ್ಲಿ ನಡೆಯುತ್ತಿದ್ದ ಗಣೇಶ ಉತ್ಸವದ ಸಂಧರ್ಭದಲ್ಲಿ ದೇವಗಿರಿ ಶಂಕರರಾವ್‌ಜೋಷಿಯವರ ಪರಿಚಯವಾಗಿ ಏಳು ವರ್ಷಗಳ ಕಾಲ ಅವರಲ್ಲಿ ಹಿಂದುಸ್ತಾನಿ ಸಂಗೀತಾಭ್ಯಾಸ ಮಾಡಿದವರು. ಸಂಗೀತ ಸಂಯೋಜಕರಾಗಿ ಮೊದಲು ಪರಿಚಯವಾದದ್ದು ನಾಟಕ ಕ್ಷೇತ್ರದಿಂದ; ‘ನಟರಂಗ’ ಸಂಸ್ಥೆಯ ಸ್ಥಾಪಕ ಸದಸ್ಯರಾಗಿ, ಅಲ್ಲಿನ ಎಲ್ಲ ನಾಟಕಗಳಿಗೂ ಅಶ್ವಥ್‌ಅವರದೇ ಸಂಗೀತ-ಅತ್ಯಂತ ಜನಪ್ರಿಯತೆ ತಂದು ಕೊಟ್ಟ ನಾಟಕ ‘ಕಾಕನಕೋಟೆ’. ಸುಮಾರು ೧೯೬೫ರಿಂದ ಈ ವರೆಗೆ ಸಂಗೀತ ನೀಡಿರುವ ನಾಟಕಗಳು ೩೫.

ನಾಟಕ, ಚಲನಚಿತ್ರ, ಸುಗಮ ಸಂಗೀತ ಮೂರೂ ಕ್ಷೇತ್ರಗಳಲ್ಲಿ ಸಂಗೀತ ನಿರ್ದೇಶಕರಾಗಿ ಜನರ ಮೇಲೆ ಪ್ರಭಾವ ಬೀರುತ್ತಿರುವ ಸಂಗೀತಗಾರರು ಸಿ. ಅಶ್ವಥ್‌ಎಂದರೆ ಅಧಿಕ ಪ್ರಶಂಸೆಯ ಮಾತಾಗುವುದಿಲ್ಲ ಎಂಬುದು ನನ್ನ ದೃಢ ನಂಬಿಕೆ. ಮಾಸ್ತಿಯವರ ‘ಕಾಕನಕೋಟೆ’ಯಿಂದ ಚಲನಚಿತ್ರ, ಕುವೆಂಪು ಅವರ ‘ಸ್ಮಶಾನಕುರುಕ್ಷೇತ್ರ’ದಿಂದ ನಾಟಕ ಮತ್ತು ‘ಶರೀಫರ ಗೀತೆ’ಗಳಿಂದ ಸುಗಮ ಸಂಗೀತ ಎಂದು ಎಲ್ಲ ಕ್ಷೇತ್ರದಲ್ಲೂ ಇಟ್ಟ ಮೊದಲ ಹೆಜ್ಜೆಯಲ್ಲೇ ತನ್ನನ್ನು ಸಮರ್ಥ, ಸೃಜನಶೀಲ, ಸಾಹಿತ್ಯಾಸಕ್ತಿಯುಳ್ಳ ಸಂಗೀತಗಾರ ಎಂದು ಸಮರ್ಥಿಸಿಕೊಂಡವರು. ರಂಗ ಸಂಗೀತದಲ್ಲಿ ಎತ್ತಿದ ಕೈಯೆನಿಸಿದ ಬಿ.ವಿ. ಕಾರಂತರೇ ಅಶ್ವಥ್‌ಅವರನ್ನು ಹೀಗೆಂದು ಪ್ರಶಂಸಿಸಿದ್ದಾರೆ. “ನಿಮ್ಮ ಸೃಜನಶೀಲ ಸಂಯಓಜನೆ ಹಾಗೂ ಸಾಧನೆಯನ್ನು ನಓಢಿ ನನಗೆ ಹೊಟ್ಟೆಉರಿ ಬಂದಿದೆ.”

ಲಂಕೇಶ್‌ಅವರ ‘ಬಿರುಕು’, ಗಿರೀಶ್‌ಕಾರ್ನಾಡರ ‘ಹಯವದನ’, ‘ತುಫಲಕ್‌’, ‘ನಾಗಮಂಡಲ’, ‘ತಲೆದಂಡ’, ಕುವೆಂಪು ಅವರ ‘ರಕ್ತಾಕ್ಷಿ’, ‘ಬಿರುಗಾಳಿ’, ‘ಓಥೆಲೊ’, ‘ಮಿಡ್‌ಸಮ್ಮರ್ಸ್ ನೈಟ್‌ಡ್ರೀಮ್ಸ್‌’, ‘ಕಕೇಶಿಯನ್‌ಚಾಕ್‌ಸರ್ಕಲ್‌’, ‘ಊರುಭಂಗ’, ‘ಮೃಚ್ಚಕಟಿಕ’, ‘ಭೈರವಿ’, ಇತ್ಯಾದಿ ನಾಟಕಗಳಲ್ಲಿ ಅವರ ಪ್ರಯೋಗಶೀಲ ಸಂಗೀತ ಇಂದಿಗೂ ನೆನಪಿನಲ್ಲಿಡುವಂಥದ್ದು. ‘ಟಿಪಿಕಲ್‌ಟಿ.ಪಿ. ಕೈಲಾಸಂ’ ಹಾಗೂ ‘ನಾಗಮಂಡಲ’ ನಾಟಕಗಳ ಹಾಡುಗಳು ಧ್ವನಿಸುರುಳಿಗಳಾಗಿ ಹೊರಬಂದು ಕರ್ನಾಟಕದ ಮನೆ ಮಾತಾಗಿದೆ.

ಅಶ್ವಥ್‌ಅವರ ಸ್ನೇಹಿತರು ನಟರಂಘದ ‘ಕಾಕನ ಕೋಟೆ’ ನಾಟಕವನ್ನು  ಚಿತ್ರವಾಗಿ ಹೊರತರಲಿಚ್ಛಿಸಿದಾಗ, ಚಲನಚಿತ್ರಕ್ಕೂ ಸಹ ಅಶ್ವಥ್‌ಅವರದೇ ಸಂಗೀತ. ಈ ಮೊಟ್ಟ ಮೊದಲ ಚಿತ್ರದಲ್ಲೇ ಅವರ ಜಾನಪದ ಸೊಗಡಿನ ಸಂಗೀತ ನಾಡಿನಾದ್ಯಂತ ಜನರ ಮೆಚ್ಚುಗೆ ಪಡೆಯಿತು. ‘ಸರ ನೋಡು’ಹಾಗೂ ಬೆಟ್ಟದ ತುದಿಯಲ್ಲಿ’ ಎರಡೂ ಗೀತೆಗಳಲು ಎಲ್ಲರೂ ಗುನುಗುವಂತೆ ಆದವು. ‘ಕಾಕನ ಕೋಟೆ’ ಚಲನ ಚಿತ್ರಕ್ಕೆ ಅಶ್ವಥ್‌ಸಂಗೀತ ನೀಡಿದ ಸಮಯದಲ್ಲಿ ಶ್ರೀಯುತರಾದ ಜಿ.ಕೆ. ವೆಂಕಟೇಶ್‌, ವಿಜಯಭಾಸ್ಕರ್, ಎಂ.ರಂಗರಾವ್‌, ರಾಜನ್‌ನಾಗೇಂದ್ರ ಮುಂತಾದ ಘಟಾನುಘಟಿಗಳು ಆಗಲೇ ಚಲನಚಿತ್ರ ರಂಗದಲ್ಲಿ ಪ್ರಸಿದ್ಧರಾಗಿದ್ದರು. ಇವರೆಲ್ಲರೂ ಸಾಮರ್ಥ್ಯಶಾಲಿಗಳು ಎಂದು ವಿವರಿಸಬೇಕಿಲ್ಲ; ಹೀಗಿರುವ ಸಮಯದಲ್ಲೂ ಅಶ್ವಥ್‌ಅವರು ತಮ್ಮ ಸಂಗೀತದಲ್ಲಿ ಸ್ವಂತಿಕೆಯ ಛಾಪನ್ನು ಒತ್ತಿ ಕನ್ನಡ ಚಲನಚಿತ್ರರಂಗದ ಸಂಗೀತಕ್ಕೆ ಒಂದು ಹೊಸ ಆಯಾಮ ಕೊಟ್ಟವರು. ಉತ್ತರ ಭಾರತದ ಖ್ಯಾತ ಸಂಗೀತ ನಿರ್ದೇಶಕ ಎಸ್‌.ಡಿ. ಬರ್ಮನರ ಅಭಿಮಾನಿಯಾದ ಅಶ್ವಥ್‌, ತಮ್ಮ ಗಾಯನ ಹಾಗೂ ಸಂಗೀತ ಸಂಯೋಜನೆಯಲ್ಲಿ ಬರ್ಮನರ ಪ್ರಭಾವವಿರುವುದನ್ನು ತಾವೇ ಒಪ್ಪಿಕೊಳ್ಳುತ್ತಾರೆ.

ಅದುವರೆಗೆ ಚಲನಚಿತ್ರದಲ್ಲಿ ಭಾವಗೀತೆಗಳು ಬಳಸಲ್ಪಟ್ಟಿದ್ದಂತೆ ಅಶ್ವಥ್‌ಅವರ ಸಂಗೀತದಲ್ಲೂ ಭಾವಗೀತೆಗಳ ಬಳಕೆಯಾಗಿದೆ. ಅವರ ಸಾಹಿತ್ಯಾ ಸಕ್ತಿ ಸಂಗೀತದೊಂದಿಗೆ ಬೆರೆತು ಅವರನ್ನು ಶ್ರೇಷ್ಠ ಸಂಗೀತ ನಿರ್ದೇಶಕರ ಪಂಙಯಲ್ಲಿ ಸೇರಿಸುವಂತಾಗಿದೆ.

ಸಂಗೀತ ಮಾತ್ರವಲ್ಲದೆ, ಒಂದು ಚಲನಚಿತ್ರದ ಬಗ್ಗೆ ಸಂಪೂರ್ಣ ಆಸಕ್ತಿ ತೋರಿಸಿ, ಕಥೆ, ಚಿತ್ರಕಥೆ ಇತ್ಯಾದಿಗಳಲ್ಲೂ ಪಾಲ್ಗೊಂಡು ಚಿತ್ರದ ಯಶಸ್ಸಿಗೆ ಪಾತ್ರರಾಗುತ್ತಿದ್ದರು. ಸಂತ ಶಿಶುನಾಳ ಶರೀಫ, ಮೈಸೂರ ಮಲ್ಲಿಗೆ, ಚಿನ್ನಾರಿ ಮುತ್ತ, ಕೊಟ್ರೇಶಿ ಕನಸು, ನಾಗಮಂಡಲ ಚಿತ್ರಗಳು ರಾಜ್ಯಮಟ್ಟದಲ್ಲೂ, ರಾಷ್ಟ್ರಮಟ್ಟದಲ್ಲೂ ಪ್ರಶಸ್ತಿಗಳನ್ನು ಪಡೆದುಕೊಂಡ ಚಿತ್ರಗ ಳು.

ವಿಶಿಷ್ಟ ಶೈಲಿಯ ಧ್ವನಿಯುಳ್ಳ ಅಶ್ವಥ್‌ಅವರು ಜಿ.ಕೆ. ವೆಂಕಟೇಶ್‌, ವಿಜಯಭಾಸ್ಕರ್, ಉಪೇಂದ್ರ ಕುಮಾರ್, ರಾಜನ್‌ನಾಗೇದ್ರ, ಎಂ. ರಂಗರಾವ್‌, ಹಂಸಲೇಖ, ಇಳಯರಾಜ ಅವರ ಸಂಗೀತಕ್ಕೂ ಹಿನ್ನೆಲೆ ಗಾಯಕರಾಗಿ ಕಂಠದಾನ ಮಾಡಿದ್ದಾರೆ.

೧೯೭೫ ರಿಂದ ೧೯೮೦ರವರೆಗೆ ಸುಮಾರು ಇಪ್ಪತ್ತು ಚಿತ್ರಗಳಿಗೆ ಎಲ್‌. ವೈದ್ಯನಾಥನಕ್‌, ಗುಣಸಿಂಗ್‌ಅವರ ಸಹಾಯದೊಂದಿಗೆ ಮದರಾಸಿನಲ್ಲಿ ಸಂಗೀತ ನಿರ್ದೇಶನ ಮಾಡಿ, ೮೦ ರಿಂದ ೮೬ ರ ವರೆಗೆ ಚಲನಚಿತ್ರದ ಸಂಬಂಧವೇ ಇಲ್ಲದೆ, ಮತ್ತೇ ೮೬ರಲ್ಲಿ ‘ಶಂಖನಾದ’ ಹಾಗೂ ೧೯೮೭ರಲ್ಲಿ ‘ಆಸ್ಪೋಟ’ ಚಿತ್ರದ ಮೂಲಕ ಕರ್ನಾಟಕದಲ್ಲೇ, ಕನ್ನಡದ ಸ್ಥಳೀಯ ಕಲಾವಿದರಿಗೆ ಹೆಚ್ಚು ಅವಕಾಶ ದೊರಕುವಂತೆ ಮಾಡಿದ ಸಂಗೀತ ನಿರ್ದೇಶಕ ಅವರು.

ಅಶ್ವಥ್‌ಅವರ ಚಲನಚಿತ್ರ ಸಂಗೀತದ ಬಗ್ಗೆ ಪತ್ರಿಕೆಗಳಲ್ಲಿ ಬಂದಿರುವ ಪ್ರಶಂಸನೀಯ ಸುದ್ದಿಗಳು ಅನೇಕಾನೇಕ. ಅವರು ಸಂಗೀತ ನೀಡಿರುವ ‘ನಾಗಮಂಡಲ’ ಚಿತ್ರದ ೧೭ ಹಾಡುಗಳು ಪತ್ರಿಕಾ ವಲಯದಲ್ಲಿ ಅತಿ ಹೆಚ್ಚು ಮನ್ನಣೆ ಪಡೆದಿದೆ.

ಸುಗಮ ಸಂಗೀತದಲ್ಲಿ ಕಾಳಿಂಗರಾವ್‌, ಮೈಸೂರು ಅನಂತಸ್ವಾಮಿ ನಂತರ ನಿರಂತರವಾದ ಸ್ಥಾನ ಪಡೆದಿರುವ ವ್ಯಕ್ತಿ ಅಶ್ವಥ್‌. ಸ್ವರ ಸಂಯೋಜಕರಾಗಿ ಸುಗಮ ಸಂಗೀತದಲ್ಲಿ ಒಂದು ಹೊಸ ಅಲೆಯನ್ನು ಎಬ್ಬಿಸಿ, ೧೯೮೦ರ ದಶಕದಿಂದ ಸುಗಮ ಸಂಗೀತದ ರೂಪು ಬದಲಾಗಿ ಇಡೀ ಸುಗಮ ಸಂಗೀತ ಕ್ಷೇತ್ರವನ್ನು ಬೆರಗುಗೊಳಿಸಿದೆ.

ಸುಗಮ ಸಂಗೀತದಲ್ಲಿ ಸಾಹಿತ್ಯವೇ ಪ್ರಧಾನ ಎಂಬ ಸಿದ್ಧಾಂತ ಅವರದು. ‘ಶಿಶುನಾಳ ಶರೀಫರ ಗೀತೆಗಳು’ ಮೊಟ್ಟಮೊದಲು ಅವರು  ಸ್ವರಸಂಯೋಜಿಸಿ ಹೊರ ತಂದ ಧ್ವನಿಸುರುಳಿ. ಆವರೆಗೂ ಶರೀಫರ ಬಗ್ಗೆ ಹೆಚ್ಚು ಅರಿತಿರದ ಕರ್ನಾಟಕ ಜನತೆಗೆ ಶರೀಫರ ಗೀತೆಗಳು ‘ಕರ್ನಾಟಕದ ಕಬೀರ’ ನನ್ನು ಪರಿಚಯಿಸಿತು. ಇದುವರೆಗೆ ಅಶ್ವಥ್‌ಅವರ ಸ್ವರಸಂಯೋಜನೆಯಲ್ಲಿ ಎಂಟು ಧ್ವನಿಸುರುಳಿಗಳಲ್ಲಿ ಶರೀಫರದೆ ಎಪ್ಪತ್ತೆರಡು ಗೀತೆಗಳು ಹೊರಬಂದಿದೆ.

೧೯೮೦ ರಿಂದ ಈ ವರೆಗೆ ೬೫ಕ್ಕೂ ಹೆಚ್ಚಿನ ಧ್ವನಿ ಸುರುಳಿಗಳಿಗೆ ಸ್ವರ ಸಂಯೋಜಿಸಿ ಬೇಂದ್ರೆ, ಕುವೆಂಪು, ನರಸಿಂಹಸ್ವಾಮಿ, ಡಿ.ವಿ.ಜಿ., ಗೋಪಾಲಕೃಷ್ಣ ಅಡಿಗ, ಶಿವರುದ್ರಪ್ಪ, ಪು.ತಿ.ನ. ಲಕ್ಷ್ಮೀನಾರಆಯಣ ಭಟ್ಟ, ಕಂಬಾರ, ವೆಂಕಟೇಶ ಮೂರ್ತ್ಪಿ ಲಕ್ಷ್ಮಣರಾವ್‌, ಸಿದ್ಧಲಿಂಗಯ್ಯ, ದೊಡ್ಡರಂಗೇಗೌಡ, ವ್ಯಾಸರಾವ್‌ಮುಂತಾದವರ‍ಕವನಗಳನ್ನು ಕರ್ನಾಟಕದ ಮನೆ ಮನಗೆ ತಲುಪಿಸಿದ್ದಾರೆ. ವೈವಿಧ್ಯಮಯ ಸಂಗೀತ ನೀಡುವಲ್ಲಿ, ಅಶ್ವಥ್‌ಅವರದು ಎತ್ತಿದ ಕೈ.

ಕುವೆಂಪು ಅವರ ‘ವೈಚಾರಿಕ’ ಗೀತೆಗಳಿಗೆ ಸ್ವರಸಂಯೋಜಿಸಿ ಇಡೀ ಕರ್ನಾಟಕದ ಮೂಲೆ ಮೂಲೆಯಿಂದ ಪ್ರತಿಭಾಶೋಧ ನಡೆಸಿ, ಆಯ್ದ ಗಾಯಕ-ಗಾಯಕಿಯರಿಗೆ ತರಬೇತಿ ನೀಡಿ ಒಂದು ಸಾವಿರ ಗಾಯಕ ಗಾಯಕಿಯರಿಂದ ಸಮೂಹ ಗಾಯನದ ಕಾರ್ಯಕ್ರಮ ‘ಮನುಜಮತ ವಿಶ್ವಪಥ’ ಬೆಂಗಳೂರಿನ ಬಸವನಗುಡಿ ನ್ಯಾಷನಲ್‌ಕಾಲೇಜು ಮೈದಾನದಲ್ಲಿ ನಡೆಸಿದ ಹೆಗ್ಗಳಿಕೆ ಅಶ್ವಥ್ ಅವರದು  ಕಾರ್ಯಕ್ರಮ ನಡೆದ ದಿನಾಂಕ ೩೦-೧೨.೧೯೯೯.

ಬಸವಣ್ಣನವರ ವಚನಗಳನ್ನು  ಸಮೂಹಗಾಯನದ ಧ್ವನಿಸುರುಳಿಯಾಗಿ ಹೊರ ತಂದ ಅಶ್ವಥ್‌, ೪೩ ವಚನಗಳನ್ನು ೧೦ ಗೀತೆಗಳ ರೂಪದಲ್ಲಿ ವೈವಿಧ್ಯಮಯ ಸ್ವರಸಂಯೋಜನೆ ಮಾಡಿದ್ದಾರೆ.

ಕಿರುತೆರೆಯಲ್ಲೂ ತಮ್ಮ ಛಾಪನ್ನು ಒತ್ತಿರುವ ಅಶ್ವಥ್‌ನಾಗಾಭರಣ ಅವರ ನಮ್ಮ ನಮ್ಮಲ್ಲಿ , ಶ್ರೀಸಾಮಾನ್ಯ, ತಿರುಗುಬಾಣ, ಗೆಳತಿ, ಓ ಬೆಳಕೆ, ಆಫೀಸಾಯಣ; ಜಿ.ವಿ. ಅಯ್ಯರ್ ಅವರ ಅದೃಷ್ಟ ರೇಖೆ; ಸೀತಾರಾಂ ಅವರ ಮಾಯಾಮೃಗ, ಮನ್ವಂತರ; ಗಿರೀಶ್‌ಕಾಸರವಳ್ಳಿಯವರ ಗೃಹಭಂಗ ಇತ್ಯಾದಿ ಧಾರಾವಾಹಿಗಳಿಗೆ ಸಂಗೀತ ನೀಡಿ, ಅವುಗಳ ಶೀರ್ಷಿಕೆ ಗೀತೆಗಳು ಸುಗಮ ಸಂಗೀತ ಕಾರ್ಯಕ್ರಮಗಳಲ್ಲಿ ಮೆಚ್ಚಿನ ಗೀತೆಗಳಾಗಿಬಿಟ್ಟಿವೆ. ಇದಲ್ಲದೆ ಎಂ.ಎಸ್‌. ಸತ್ಯು ಅವರ ‘ಮಲ್ಕ’ ಕಿರುಚಿತ್ರಕ್ಕೂ ಸಂಗೀತ ನೀಡಿದ್ದಾರೆ.

೧೯೭೪ರಲ್ಲಿ ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಕರ್ನಾಟಕದರ್ಶನಕ್ಕೆ ಸಂಗೀತ ನೀಡಿದ್ದರು. ೧೯೮೨ರಲ್ಲಿ ‘ಏಷಿಯಾಡ್‌೮೨’ಕ್ಕೂ ಅವರದೇ ಸಂಗೀತ.

೧೯೮೫ರಲ್ಲಿ ನಡೆದ ‘ವಿಶ್ವಕನ್ನಡ ಸಮ್ಮೇಳನ’ದಲ್ಲಿ ೩೦೦ ಮಕ್ಕಳಿಗೆ ತರಬೇತಿ ನೀಡಿ ಹಾಡಿಸಿದ ಹೆಗ್ಗಳಿಕೆ. ೧೯೮೭ರಲ್ಲಿ ಜವಹರಲಾಲ್‌ನೆಹರು ೧೦೦ನೇ ಜನ್ಮದಿನಾಚರಣೆಯ ಸಲುವಾಗಿ ಏಳು ಭಾಷೆಗಳಲ್ಲಿ ಗೀತೆಗಳಿಗೆ ಸ್ವರ ಸಂಯೋಜಿಸಿ ‘ಶ್ರದ್ಧಾಂಜಲಿ’ ಧ್ವನಿ ಸುರುಳಿ ಹೊರತರಲು ಶ್ರಮಿಸಿದ್ದಾರೆ. ದೂರದರ್ಶನದಲ್ಲಿ ಕನ್ನಡ ಕವಿಗಳ ೬೦ಕ್ಕೂ ಹೆಚ್ಚು ಗೀತೆಗಳನ್ನು ‘ಗೀತಮಾಧುರಿ’ ಕಾರ್ಯಕ್ರಮದ ಮೂಲಕ ಕನ್ನಡ ಜನತೆಗೆ ತಲುಪಿಸಿದ್ದಾರೆ.

೧೯೮೭-೯೦ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ದುಡಿದಿದ್ದಾರೆ. ಬೆಂಗಳೂರಿನಲ್ಲಿ ನಡೆದ ೪ನೇ ರಾಷ್ಟ್ರೀಯ ಕ್ರೀಡಾ ಮೇಳಕ್ಕೆ ಸಂಗೀತ ನೀಡಿದ್ದಾರೆ.

ಸುಗಮ ಸಂಗೀತದ ಬಗ್ಗೆ ಅವರು ಬರೆದಿರುವ ಪುಸ್ತಕ, ಅಶ್ವಥ್‌ಅವರ ಈ ಕ್ಷೇತ್ರದ ಬಗ್ಗೆಯ ಕಾಳಜಿ, ಅವರ ಸಿದ್ಧಾಂತ, ನಿಲುವು ಇತ್ಯಾದಿಗಳನ್ನು  ಎತ್ತಿ ಹಿಡಿಯುವಲ್ಲಿ ಸಫಲವಾಗಿದೆ. ಅವರ ೧೫೫ ಹಾಡುಗಳಿಗೆ ಸ್ವರಲಿಪಿ ವಿಶ್ಲೇಷಣೆ ನೀಡಿ ‘ಸ್ವರ ಮಾಧುರಿ’ ಪುಸ್ತಕವನ್ನು ಪ್ರಕಟಿಸಿದ್ದಾರೆ.

ಕನ್ನಡನಾಡು, ನುಡಿ, ಸಂಸ್ಕೃತಿ ಬಗ್ಗೆ ಗೌರವವುಳ್ಳ ಕೆಲವೇ ಕಲಾವಿದರಲ್ಲಿ ಅಶ್ವಥ್‌ಒಬ್ಬರು. ಕನ್ನಡ ಭಾಷೆಯನ್ನು ಎಲ್ಲೆಲ್ಲೂ ತಲುಪಿಸಲು ಏನೇನು ಸಾಧ್ಯವೋ ಅವುಗಳಿಗೆಲ್ಲಾ ಪ್ರಯತ್ನಪಟ್ಟು ಸಾಧಿಸುವಲ್ಲಿ ಆಸಕ್ತಿ ತೋರುವವರು. ಸಹಕಲಾವಿದರಿಗೆ ಏನಾದರೂ ತೊಂದರೆಯಿದ್ದಲ್ಲಿ, ನಿವಾರಿಸಲು ಮುನ್ನುಗ್ಗಲು ಎಂದೂ ಹಿಂಜರಿಯದವರು. ಯಾವುದೇ ಕಾರ್ಯಕ್ರಮ ಅಥವಾ ಧ್ವನುಮುದ್ರಣದಲ್ಲಿ ತನಗೆ ತುಸು ಕಷ್ಟವಾದರೂ ಸಹ ಸಹಕಲಾವಿದರ ತೃಪ್ತಿಯ ಬಗ್ಗೆ ಕಾಳಜಿ ವಹಿಸುವವರು. ಕವಿಗಳಿಗೂ ಕಲಾವಿದರಿಗೂ ಹೆಚ್ಚಿನ ಸಂಪರ್ಕ ಬೆಳೆಯುವಂತೆ ಮಾಡಿದ ಪ್ರಮುಖ ಸಂಗೀತಗಾರರು. ಸುಮಾರು ೨೨ ಕವಿಗಳು-ಕಲಾವಿದರನ್ನು ಒಟ್ಟಿಗೆ ಸೇರಿಸಿ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಧ್ವನಿ’ ಸುಗಮ ಸಂಗೀತ ಕೇಂದ್ರದ ವತಿಯಿಂದ ಸನ್ಮಾನಿಸಿದ ಕಾರ್ಯಕ್ರಮ ಇದಕ್ಕೆ ನಿದರ್ಶನ. ಹಿರಿಯರಾದ ಮೈಸೂರು ಅನಂತಸ್ವಾಮಿ ಅವರಿಗೆ ಸಲ್ಲಬೇಕಾದ ಸಕಲ ಗೌರವಗಳನ್ನೂ ಇತ್ತು ‘ಧ್ವನಿ’ ಕಾರ್ಯಕ್ರಮಗಳಲ್ಲಿ ಅವರನ್ನು ಮೊದಲು ಹಾಡಿಸಿ, ತಾನು ಕೊನೆಯ ಕೆಲವು ಗೀತೆಗಳನ್ನು ಹಾಡಿ ದೊರಕಬೇಕಾದ ಸ್ಥಳವನ್ನು ಅವರಿಗಾಗೇ ಬಿಟ್ಟುಕೊಟ್ಟು, ಅವರ ಕೊನೆಯ ದಿನಗಳಲ್ಲಿ ಅತಿ ಹೆಚ್ಚು ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದ್ದ ಅಶ್ವಥ್‌ಅವರ ವ್ಯಕ್ತಿತ್ವ ನಿಜಕ್ಕೂ ದೊಡ್ಡದು.

೧೯೮೮ರಲ್ಲಿ ಕರ್ನಾಟಕದ ರಾಯಭಾರಿಯಾಗಿ ಮ್ಯಾಂಚೆಸ್ಟರ್ ನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

೧೯೫೫ರಲ್ಲಿ ಅಮೆರಿಕ ಸಂಯುಕ್ತ ರಾಷ್ಟ್ರಗಳ ಪ್ರವಾಸ ಮಾಡಿ ಸುಮರು ೯೦ದಿನಗಳು ಅಮೆರಿಕಾದ ಕನ್ನಡಿಗರಲ್ಲಿ ಸುಗಮ ಸಂಗೀತಾಸಕ್ತಿಯನ್ನು ಹೆಚ್ಚಿಸಲು ಶ್ರಮ ಪಟ್ಟವರು.

೨೦೦೦ದಲ್ಲಿ ಮತ್ತೆ ಅಮೆರಿಕ ಪ್ರವಾಸ ಮಾಡಿ, ಸುಮಾರು ೫೦ಕ್ಕೂ ಹೆಚ್ಚು ಗಾಯಕರಿಗೆ ತರಬೇತಿ ನೀಡಿ ‘ಹ್ಯೂಸ್ಟನ್‌ವಿಶ್ವಕನ್ನಡ ಸಮ್ಮೇಳನದಲ್ಲಿ ಕುವೆಂಪು ಗೀತೆಗಳ ಸಮೂಹ ಗಾಯನ ಕಾರ್ಯಕ್ರಮ ನೀಡಿದ ಹೆಮ್ಮೆ ಅವರದ್ದಾಗಿದೆ.

ಬೆಂಗಳೂರಿನ ಇಂಡಿಯನ್‌ಟೆಲಿಫೋನ್‌ಇಂಡಸ್ಟ್ರೀಸ್‌, ಸಂಸ್ಥೆಯಲ್ಲಿ ಇಂಜಿನಿಯರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ತಮ್ಮನ್ನು ಸಂಗೀತ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಅಶ್ವಥ್‌ಅವರ ಕಲಾಸಾಧನೆ ಮಹತ್ವದ್ದು. ಅವರಿಗೆ ಈ ವರೆಗೆ ಸಂದಿರುವ ಪ್ರಶಸ್ತಿ ಪುರಸ್ಕಾರಗಳು:

ಸ್ಪಂದನ ಚಿತ್ರಕ್ಕಾಗಿ ಲಯನ್ಸ್‌ಕ್ಲಬ್‌(ದಕ್ಷಿಣ) ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ (೧೯೭೮), ‘ಸ್ಪಂದನ’ ಚಿತ್ರಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶಕ ರಾಜ್ಯ ಪ್ರಶಸ್ತಿ (೧೯೭೮), ‘ಏನೇಬರಲಿ ಪ್ರೀತಿ ಇರಲಿ’ ಪ್ರಶಸ್ತಿ (೧೯೭೯), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೮೬), ‘ಸುಗಮ ಸಂಗೀತ’ ಕೃತಿಗಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ (೧೯೮೭/೮೮),*ಮೈಸೂರ ಮಲ್ಲಿಗೆ ಚಿತ್ರಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶನಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ (೧೯೯೨), ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಷಿಪ್‌(೧೯೯೪), ‘ಚಿನ್ನಾರಿ ಮುತ್ತ’ ಚಿತ್ರಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶನಕ್ಕೆ ರಾಜ್ಯ ಪ್ರಶಸ್ತಿ (೧೯೯೪), ‘ನಾಗಮಂಡಲ’ಕ್ಕಾಗಿ ಚಿತ್ರಪ್ರೇಮಿಗಳ ಸಂಘದ ಪರವಾಗಿ ಅತ್ಯುತ್ತಮ  ಸಂಗೀತ ನಿರ್ದೇಶಕ ಪ್ರಶಸ್ತಿ ಪ್ರತಿಷ್ಠಿತ ಸಂತ ಶಿಶುನಾಳ ಶರೀಫ ಪ್ರಶಸ್ತಿ (೧೯೯೭), ‘ವರ್ಷಋತು’ ಚಿತ್ರಕ್ಕಾಗಿ ಅತ್ಯುತ್ತಮ ಹಿನ್ನೆಲೆ ಗಾಯಕ ರಾಜ್ಯ ಪ್ರಶಸ್ತಿ (೧೯೯೯), ಆಕಾಶವಾಣಿಯ ‘ಬಿ.ಹೈ’ ಕಂಪೋಸರ್ ಹಾಗೂ ಗಾಯಕರಾಗಿ ಸೇವೆ ಸಲ್ಲಿಸುತ್ತಿರುವ ಅಶ್ವಥ್‌ಅವರ ೩೦ ವರ್ಷಗಳ ಕೊಡುಗೆಯನ್ನು ಸ್ಮರಿಸಿ ಆಕಾಶವಾಣಿಯಿಂದ ಸನ್ಮಾನ, ಬೆಂಗಳೂರು ಗಾಯನ ಸಮಾಜದ ವತಿಯಿಂದ ೧೯೯೯ರಲ್ಲಿ ವರ್ಷದ ಕಲಾವಿದ ಪುರಸ್ಕಾರ. ೧೯೯೫ರಿಂದ ನಾಗಪುರದ `South Central zone cultural centre’ ನ ಕರ್ನಾಟಕದ ಸದಸ್ಯರು

ಸುಗಮ ಸಂಗೀತದ ಪೋಷಣೆ, ಬೆಳವಣಿಗೆಗಾಗಿ ದುಡಿಯುತ್ತಿರುವ ವ್ಯಕ್ತಿಗಳಲ್ಲಿ ಅಶ್ವಥ್‌ಅವರದೂ ಮುಖ್ಯ ಪಾತ್ರವಿದೆ.