-೫-೧೯೧೫ ರಂದು ಕಲ್ಕತ್ತೆಯಲ್ಲಿ ಜನಿಸಿದ ಮಣಿಯವರ ಮನೆತನ ಸಂಗೀತಕ್ಕೆ ಹೆಸರಾದುದು. ಇವರ ತಾತ ಅನ್ನಸ್ವಾಮಿ ಭಾಗವತರು. ಗಾಯಕರು ಮತ್ತು ಪಿಟೀಲು ವಾದಕರು. ತಂದೆ ಸಿ.ಎ. ರಾಮಕೃಷ್ಣ ಭಾಗವತರು ಪಿಟೀಲು ವಿದ್ವಾಂಸರು. ಚಿಕ್ಕಪ್ಪ ಸುಬ್ಬಯ್ಯರ್ ಮೃದಂಗ ವಾದಕರು. ತಾತನವರಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದು ಮುಂದೆ ಪಾಲ್ಘಾಟ್‌ ರಾಮ ಭಾಗವತರ್, ಚೆಂಬೈ ವೈದ್ಯನಾಥ ಭಾಗವತರ್ ಹಾಗೂ ಮೈಸೂರು ಟಿ. ಚೌಡಯ್ಯನವರಲ್ಲಿ ಗಾಯನ ಮತ್ತು ಪಿಟೀಲು ವಾದನಗಳಲ್ಲಿ ಶಿಕ್ಷಣ ಪಡೆದರು. ಚೌಡಯ್ಯನವರ ಮಾರ್ಗದರ್ಶನ, ಪ್ರೋತ್ಸಾಹಗಳೆರಡೂ ಧಾರಾಳವಾಗಿ ಲಭಿಸಿ ಮಣಿ ಅವರು ಯುವಕರಾಗಿದ್ದಾಗಲೇ ಮೈಸೂರು ವಾಸುದೇವಾಚಾರ್ಯರು, ಮುತ್ತಯ್ಯ ಭಾಗವತರು, ಟಿ.ಆರ್. ಮಹಾಲಿಂಗಂ ಅಂತಹ ವಿದ್ವಾಂಸ ಶ್ರೇಷ್ಠರಿಗೆ ಪಕ್ಕವಾದ್ಯ ನುಡಿಸುವ ಅವಕಾಶ ಪಡೆದರು. ಗುರುಗಳೊಡನೆ ಸಹ ವಾದಕರಾಗಿಯೂ ತಮ್ಮ ಪ್ರತಿಭೆಯನ್ನು ಮೆರೆದರು.

ನಮ್ಮ ದೇಶದ ಎಲ್ಲಾ ಪ್ರಮುಖ ಸ್ಥಳಗಳಲ್ಲಿಯೂ, ಉತ್ಸವಗಳಲ್ಲಿಯೂ ಇವರ ಪಿಟೀಲು ವಾದನವು ನಡೆದಿದೆ. ಆಕಾಶವಾಣಿ- ದೂರದರ್ಶನಗಳಿಂದಲೂ ಇವರ ಕಾರ್ಯಕ್ರಮಗಳು ಪ್ರಸಾರವಾಗಿವೆ. ಶಿಷ್ಯರಿಗೆ ತರಬೇತಿ ನೀಡುವುದರಲ್ಲಿ ಶ್ರದ್ಧೆ, ಆಸಕ್ತಿ, ಉತ್ಸಾಹಗಳಿರುವ ಇವರಿಗೆ ಹಲವಾರು ಸಂಸ್ಥೆಗಳ ಸನ್ಮಾನಗಳು ಪ್ರಾಪ್ತವಾಗಿವೆ. ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಈ ಹಿರಿಯ ಕಲಾವಿದರನ್ನು ಗುರುತಿಸಿ ‘ಕರ್ನಾಟಕ ಕಲಾಶ್ರೀ’ ಎಂದು ಸನ್ಮಾನಿಸಿದೆ. ಪ್ರತಿಷ್ಠಿತ ಟಿ. ಚೌಡಯ್ಯ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆಯೂ ಇವರಿಗಿದೆ. ತಿರುಚಿ ಆಕಾಶವಾಣಿ ನಿಲಯದ ಕಲಾವಿದರಾಗಿಯೂ ಕೆಲವು ಕಾಲ ಸೇವೆ ಸಲ್ಲಿಸಿದರು.

ಒಂಭತ್ತು ದಶಕಗಳನ್ನು ದಾಟಿರುವ ಮಣಿ ಅವರು ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ.