ಸಿ. ಎಫ್. ಆಂಡ್ರೂಸ್ — ಇಂಗ್ಲೆಂಡಿನಲ್ಲಿ ಹುಟ್ಟಿ ಆಂಡ್ರೂಸ್ ಇಂಗ್ಲಿಷರ ಮುಷ್ಟಿಯಲ್ಲಿದ್ದ ಭಾರತಕ್ಕೆ ಬಂದು ಸೇವೆಯಲ್ಲಿ ಮುಳುಗಿದರು. ಬ್ರಿಟಿಷ್ ಸಾಮ್ರಾಜ್ಯದಿಂದ ಹೊರಗಿರುವ ಸ್ವತಂತ್ರ ಭಾರತದ ಕನಸನ್ನು ಮೊಟ್ಟಮೊದಲು ಕಂಡವರು ಆಂಡ್ರೂಸ್. ದೂರದೂರದ ದೇಶಗಳಲ್ಲಿ ಭಾರತೀಯ ಕೆಲಸಗಾರರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಡಿದರು. ಭಾರತದಲ್ಲಿ ಬಡವರ, ಕಷ್ಟದಲ್ಲಿರುವವರ, ರೋಗಿಗಳ ಸೇವೆ ಮಾಡಿ ಭಾರತೀಯರಿಂದ ದೀನಬಂಧು ಎಂದು ಕರೆಸಿಕೊಂಡರು.

ಸಿ. ಎಫ್. ಆಂಡ್ರೂಸ್

ಭಾರತವನ್ನು ಇಂಗ್ಲಿಷರು ಆಳುತ್ತಿದ್ದ ಕಾಲ. ಇಂಗ್ಲಿಷ ರವರೊಬ್ಬ ಭಾರತಕ್ಕೆ ಬಂದು ನೆಲೆಸಿ ಭಾರತೀಯರ ಹಕ್ಕು ಬಾಧ್ಯತೆ ಗಳಿಗಾಗಿ ಹೋರಾಡಿದ ಎಂದರೆ ಆಶ್ಚರ್ಯವಾಗುವುದಿಲ್ಲವೇ ?

ಈತ ಭಾರತವನ್ನೆ ತನ್ನ ತಾಯ್ನಾಡು ಎಂದು ಭಾವಿಸಿದ. ತನ್ನ ತಾಯಿ ಸಾವಿನ ಮಡಿಲಿನಲ್ಲಿದ್ದರೂ ದೀನದಲಿತರ ಸೇವೆಯಲ್ಲೆ ಮುಳುಗಿದ- ಅದರಿಂದಲೇ ತಾಯಿಗೆ ಪ್ರೀತಿ ಎಂದು. ತನ್ನ ಜನ ಮಾಡಿದ ತಪ್ಪಿಗೆ, ಬಡ ಸಿಪಾಯಿಯ ಕಾಲು ಹಿಡಿದು ಕ್ಷಮೆ ಬೇಡಿದ.

ಎರಡು ರಾಷ್ಟ್ರಗಳ ಜನರು ಅಣ್ಣತಮ್ಮಂದಿರಂತೆ ಬಾಳಬೇಕೆಂದು ತನ್ನ ಬಾಳನ್ನು ತೆಯ್ದ, ಬಡವರು- ದುಃಖಿಗಳಿಗಾಗಿ ಜೀವನವನ್ನೇ ಧಾರೆ ಎರೆದ ಪುಣ್ಯಜೀವ, ದೀನ ಬಂಧು ಆಂಡ್ರೂಸರು.

ನನಗೆ ಅನ್ನ ಹಾಕುತ್ತೀಯ ?

ಚಾರ್ಲ್ಸ ಫ್ರಿಯರ್ ಆಂಡ್ರೂಸರು ೧೮೭೧ರ ಫೆಬ್ರವರಿ ೧೨ರಂದು ನ್ಯೂಕಾಸಲ್‌ನಲ್ಲಿ ಹುಟ್ಟಿದರು. ಇವರ ತಂದೆ ಜಾನ್ ಎಡ್ವಿನ್ ಆಂಡ್ರೂಸ್, ತಾಯಿ ಮೇರಿ ಚಾರ್ಲ್ಸ ಆಂಡ್ರೂಸ್. ಬಾಲಕ ಚಾರ್ಲಿ ಆಗಾಗ ಕಾಯಿಲೆ ಬೀಳುತ್ತಿದ್ದ. ಇದರಿಂದ ತಾಯಿಯ ಮತ್ತು ಮಗನ ಪ್ರೀತಿ ಹೆಚ್ಚಾಯಿತು. ಚಿಕ್ಕಂದಿನಲ್ಲಿ ತಾಯಿಯು ಹೇಳುತ್ತಿದ್ದ ಕ್ರಿಸ್‌ಮಸ್ ಕತೆಗಳಿಂದ ಚಾರ್ಲಿ ಪ್ರಭಾವಿತನಾದ. ಶಾಲೆಯಲ್ಲಿ ಕಲಿತುದಕ್ಕಿಂತ ಮನೆಯಲ್ಲಿ ತಂದೆಯಿಂದ ಕಲಿತುದೇ ಹೆಚ್ಚು.

ತಂದೆಯು ಮಕ್ಕಳಿಗೆ ಚರಿತ್ರೆ, ರಾಜಕಿಯ ಮತ್ತು ಧರ್ಮದ ವಿಷಯವಾಗಿ ಆಗಾಗ ಹೇಳುತ್ತಿದ್ದರು. ಬ್ರಿಟಿಷ್ ವೀರರ ಚರಿತ್ರೆಯನ್ನು ಕೇಳುತ್ತಾ ಬಾಲಕ ಚಾರ್ಲಿ ಅಂದುಕೊಳ್ಳುತ್ತಿದ್ದ, ಪ್ರಪಂಚದಲ್ಲೆಲ್ಲಾ ಬ್ರಿಟಿಷ್ ಚಕ್ರಾಧಿಪತ್ಯವೇ ಉದಾತ್ತವಾದದ್ದು ಎಂದು. ಹಾಗೆಯೇ ಬ್ರಿಟಿಷರ ವಿರುದ್ಧ ಹೋರಾಡಿದ ಭಾರತೀಯ ಸಾಹಸಿಗಳ ಕತೆಗಳನ್ನು ಕೇಳಿ ಹುಡುಗನ ಕಲ್ಪನೆ ಗರಿಗೆದರುತ್ತಿತ್ತು.

ಒಮ್ಮೆ ಮನೆಗೆ ಹಿಂದಿರುಗಿದ ಚಾರ್ಲಿ ತಾಯಿಯನ್ನು ಕೇಳಿದ : “ಅಮ್ಮಾ, ನನಗೆ ಪ್ರತಿನಿತ್ಯ ಅನ್ನವನ್ನು ಹಾಕುತ್ತೀಯಾ?”

ತಾಯಿಗೆ ಅಚ್ಚರಿ, ಏಕೆ ಎಂದು.

ಬಾಲಕ ಹೇಳಿದ : “ ಅಮ್ಮಾ, ಭಾರತದಲ್ಲಿ ಜನರು ಅನ್ನವನ್ನು ತಿನ್ನುತ್ತಾರಂತೆ, ನಾನು ದೊಡ್ಡವನಾಗಿ ಭಾರತಕ್ಕೆ ಹೋದರೆ ಅಲ್ಲಿನ ರೀತಿಗಳಿಗೆ ಹೊಂದಿಕೊಳ್ಳಬೇಡವೇ ?”

“ಹೋಗೋ ಹುಚ್ಚು ಹುಡುಗ” ತಾಯಿಯು ಪ್ರೀತಿಯಿಂದ ಗದರಿದಳು.

ಮುಂದೆ ಮಗನು ತನ್ನಿಂದ ದೂರವಾಗಬಹುದು ಎಂಬ ನೋವಿತ್ತು ಆಕೆಯ ಗದರಿಕೆಯಲ್ಲಿ.

ಭಾರತದಲ್ಲಿ ಹುಟ್ಟಿದ ದಿನ

ಚಾರ್ಲಿ ಆಂಡ್ರೂಸನಿಗೆ ಹತ್ತೊಂಬತ್ತು ವರ್ಷವಾಯಿತು. ತಾನು ಯಾವ ಕೆಲಸವನ್ನು ಹಿಡಿಯಬೇಕೆಂಬುದರ ತೀರ್ಮಾನ ಆಂಡ್ರೂಸ್ ಇನ್ನೂ ಮಾಡಿರಲಿಲ್ಲ. ಮನದಾಳದಲ್ಲಿ ಒಮ್ಮೊಮ್ಮೆ ತಲೆಯೆತ್ತುತ್ತಿದ್ದ ಆಸೆ- ತಾನು ದೀನರ ಸೇವೆ ಮಾಡಬೇಕು !

೧೮೯೩ ರಲ್ಲಿ ಪ್ರಾಚೀನ ಸಾಹಿತ್ಯದ ಕೊನೆಯ ಪರೀಕ್ಷೆಯಲ್ಲಿ ಆಂಡ್ರೂಸರು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ೧೯೦೩ ರ ವರೆಗೆ ಉಪಾಧ್ಯಾಯ ವೃತ್ತಿಯನ್ನು ನಡೆಸಿದರು. ಉಪದೇಶಕನಾಗಿ ಕೆಲವು ದಿನ ಕೆಲಸ ಮಾಡಿದರು.

೧೯೦೪ ರ ಮಾರ್ಚ್ ೩೦, ಆಂಡ್ರೂಸ್ ಭಾರತಕ್ಕೆ ಕಾಲಿಟ್ಟ ದಿನ. ’ಅದು ನಾನು ಭಾರತದಲ್ಲಿ ಹುಟ್ಟಿದ ದಿನ ಎಂದು ಭಾವಿಸಿದರು ಆಂಡ್ರೂಸರು. ಹೊಸ ಅನುಭವಗಳ ಪ್ರಪಂಚಕ್ಕೆ ಕಾಲಿಟ್ಟ ದಿನವದು.

ದೆಹಲಿಯ ಸೇಂಟ್ ಸ್ಟೀವನ್ ಕಾಲೇಜಿಗೆ ಆಂಡ್ರೂಸರು ಸೇರಿದರು.

ಮೂರು ಭಾಗಗಳು

ಆಂಡ್ರೂಸರ ಜೀವನವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು. ೧೯೦೩ರವರೆಗೆ, ಭಾರತಕ್ಕೆ ಬರುವ ಮೊದಲಿನ ಅವಧಿಯನ್ನು ಅವರು ’ಇಂಗ್ಲಿಷರವ’ನಾಗಿ ಕಳೆದರು. ಸುಸಂಸ್ಕೃತ ಮನೆತನದಿಂದ ಮಧ್ಯಮ ವರ್ಗದ ಕುಟುಂಬದಿಂದ ಬಂದ ವಿಶಾಲ ಮನೋಭಾವದ ವ್ಯಕ್ತಿಯಾಗಿದ್ದರು. ಬ್ರಿಟಿಷರ ಸಂಸ್ಕೃತಿಯೇ ಯೋಗ್ಯವಾದುದು, ಬ್ರಿಟಿಷರು ನಡೆಸುವ ಸಂಸ್ಥೆಗಳೇ ಉತ್ತಮವಾದುವು ಎಂಬ ನಂಬಿಕೆ ಅವರಲ್ಲಿತ್ತು.

೧೯೦೪ ರಲ್ಲಿ ಆಂಡ್ರೂಸರು ಭಾರತಕ್ಕೆ ಬಂದರು. ೧೯೧೨ ರ ವರೆಗೆ ಭಾವನೆಗಳ ಘರ್ಷಣೆ, ಮಾನಸಿಕ ಹೊಯ್ದಾಟ ಇವುಗಳಿದ್ದರೂ ಅತಿ ಶಿಸ್ತಿನ ಜೀವನವನ್ನು ನಡೆಸಿದರು. ಇದು ತರಪೇತಿಯ ಕಾಲ. ೧೯೧೨ರಿಂದ ೧೯೪೦ರ ವರೆಗೆ ಸೇವೆಯ ವರ್ಷಗಳು.

ಪೂರ್ಣ ಸ್ವಾತಂತ್ರ್ಯ

ಭಾರತಕ್ಕೆ ಬಂದಾಗ ಅವರು ಕಂಡುದು – ಬಿಳಿಯ ಮೈ ಚರ್ಮ ಹೊಂದಿದ್ದ ಇಂಗ್ಲಿಷರಿಗೆ ಎಲ್ಲ ವಿಷಯಗಳಲ್ಲೂ ಇದ್ದ ಪ್ರಾಧಾನ್ಯ. ಭಾರತವು ದಾರಿದ್ರ್ಯದ ಬೀಡಾಗಿತ್ತು. ಇಲ್ಲಿನ ಜನರ ಕೌಶಲವನ್ನು ಉಪಯೋಗಿಸಿಕೊಂಡು ಇಂಗ್ಲಿಷರು ಲಾಭ ಹೊಂದುತ್ತಿದ್ದರು. ಇಂಗ್ಲಿಷರು ಭಾರತೀಯರನ್ನು ಕೆಲಸಕ್ಕಿಟ್ಟ ಆಳುಗಳಂತೆ ನಡೆಸಿಕೊಳ್ಳುತ್ತಿದ್ದರು.

ಆಂಡ್ರೂಸರು ಇಂಗ್ಲೆಂಡಿನಿಂದ ಬಂದವರಾದರೂ, ಭಾರತೀಯರ ಆತ್ಮಗೌರವಕ್ಕೆ ತಕ್ಕಂತೆ ಇಂಗ್ಲಿಷರು ಅವರನ್ನು ಕಾಣುತ್ತಿಲ್ಲ ಎಂಬುದನ್ನು ಕಂಡು ಮನನೊಂದರು. ಭಾರತೀಯರು ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳಬೇಕು, ಇಂಗ್ಲಿಷರಿಂದ ಮೂಡಿ ಬಂದ ಆದರ್ಶಗಳೇ ಅವರದಾಗಬಾರದು ಎಂದು ಅವರು ಬಯಸಿದರು. ತಾವೂ ಭಾರತೀಯರಲ್ಲಿ ಒಬ್ಬರಾಗಬೇಕು ಎಂದು ತವಕಪಟ್ಟರು.

ಆ ದಿನಗಳಲ್ಲಿ ಭಾರತೀಯ ಮುಖಂಡರನೇಕರು ’ಭಾರತದ ಆಡಳಿತವನ್ನೂ ಭಾರತೀಯರೇ ನಡೆಸಲಿ, ಆದರೆ ಬ್ರಿಟಿಷ್ ಚಕ್ರಾಧಿಪತ್ಯದ ಭಾಗವಾಗಿರಲಿ’ ಎಂದು ಬಯಸಿದ್ದರು. ಆದರೆ ಆಂಡ್ರ್ರೂಸರು ’ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಬೇಕು, ಬ್ರಿಟಿಷ್ ಚಕ್ರಾಧಿಪತ್ಯದ ಸ್ನೇಹಿತ ರಾಷ್ಟ್ರವಾಗಬೇಕು’ ಎಂದು ಒತ್ತಿಹೇಳಿದರು.

ಫೈಲುಗಳ ಸಮಸ್ಯೆಗಳಲ್ಲ

ಕ್ರಮೇಣ ಆಂಡ್ರೂಸರಿಗೆ ಮನವರಿಕೆಯಾಯಿತು- ಬ್ರಿಟಿಷರ ಆಡಳಿತದಿಂದ ತಾವು ತಿಳಿದುಕೊಂಡಿರುವುದಕ್ಕಿಂತ ಹೆಚ್ಚಿನ ನಷ್ಟ ಭಾರತಕ್ಕಾಗಿದೆಯೆಂದು.

ಒಮ್ಮೆ ಒಂದು ಸಭೆಯಲ್ಲಿ ಆಂಡ್ರೂಸರು ಹೇಳಿದರು : “ಬಿಳಿಯರ ಮತ್ತು ಭಾರತೀಯರ ಮಧ್ಯೆ ವಿಚಾರ ವಿನಿಮಯವು ನಿಸ್ಸಂಕೋಚವಾಗಿ ನಡೆಯಬೇಕು.”ಕೂಡಲೇ ವೃದ್ಧರೊಬ್ಬರು ಎದ್ದುನಿಂತು ಹೇಳಿದರು : “ಇದು ಸಾಧ್ಯವೇ ಇಲ್ಲ.”. ಮುಂದುವರಿದು, “ನಿಮ್ಮ ಬಳಿ ನಿಸ್ಸಂಕೋಚವಾಗಿ ಮಾತನಾಡಬಹುದು. ಆದರೆ ಬಿಳಿಯ ಅಧಿಕಾರಿಗಳೊಂದಿಗೆ ಇಂತಹ ಬಿಚ್ಚು ಮನಸ್ಸಿನ ಮಾತುಕತೆ ಸಾಧ್ಯವಿಲ್ಲ. ಏಕೆಂದರೆ ನಾವು ನಿಮ್ಮ ಕೈಕೆಳಗಿರುವ ಜನಗಳು” ಎಂದರು.

ಆಂಡ್ರೂಸರಿಗೆ ಇದು ನಂಬಲಾರದ ಸತ್ಯವಾಗಿತ್ತು.

ಆಳುವ ಜನತೆಗೂ ಭಾರತೀಯರಿಗೂ ನಿಸ್ಸಂಕೋಚವಾಗಿ ವಿಚಾರ ವಿನಿಮಯ ಮಾಡಿಕೊಳ್ಳುವ ಅವಕಾಶವೇ ಇಲ್ಲದೆಹೋದರೆ ಬ್ರಿಟಿಷರ ಆಡಳಿತವು ಭಾರತದಲ್ಲಿ ಸೋತಿದೆ ಎಂದು ಆಂಡ್ರೂಸರಿಗನ್ನಿಸಿತು. ಆಂಡ್ರೂಸರು ಊರೂರು ಸಂಚರಿಸಿದರು. ಸರ್ಕಾರದಲ್ಲಿರುವ ಬಿಳಿಯ ಅಧಿಕಾರಿಗಳಿಗೂ ಅವರ ಕೈಕೆಳಗಿನ ಭಾರತೀಯ ಅಧಿಕಾರಿಗಳಿಗೂ ಎಷ್ಟು ಅಂತರವಿದೆಯೆನ್ನುವುದು ಹಲವು ಸಂದರ್ಭಗಳಿಂದ ಆಂಡ್ರೂಸರಿಗೆ ತಿಳಿಯಿತು.

ತನ್ನ ಬ್ರಿಟಿಷ್ ಮಿತ್ರರನ್ನು, ಅಧಿಕಾರದಲ್ಲಿರುವವರನ್ನು ಆಂಡ್ರೂಸರು ಕೇಳಿಕೊಂಡರು : “ಜನತೆಯೊಂದಿಗೆ ನೀವು ನೇರ ಸಂಪರ್ಕ ಬೆಳೆಸಿ. ಅವರ ನಿಜವಾದ ಬೇಡಿಕೆಗಳನ್ನು ಮೊದಲು ತಿಳಿದುಕೊಳ್ಳಿ.” ಅಧಿಕಾರಿಗಳು ರಾಶಿರಾಶಿಯಾಗಿ ಹಾಕಿದ್ದ ಫೈಲುಗಳತ್ತ ಬೆರಳು ಮಾಡಿ, “ಇದನ್ನು ನೋಡಿ, ನಮಗೆ ಬಿಡುವೆಲ್ಲಿದೆ ?” ಎಂದರು.

ಇದೇ ತಪ್ಪು, ಸಮಸ್ಯೆಗಳು, ಮನುಷ್ಯರ ಸಮಸ್ಯೆಗಳು, ’ಫೈಲು’ಗಳ ಸಮಸ್ಯೆಗಳಲ್ಲ ಎನ್ನಿಸಿತು ಆಂಡ್ರೂಸರಿಗೆ.

ರವೀಂದ್ರರ ಬಲಗೈ

ರವೀಂದ್ರನಾಥ ಠಾಕೂರರು ಭಾರತದ ಹಿರಿಯ ಕವಿ. ಇವರಿಗೆ ನೊಬೆಲ್ ಬಹುಮಾನವು ಬಂದಿತ್ತು. ಠಾಕೂರರ ಕವಿತೆಗಳಿಗೆ ಆಂಡ್ರೂಸರು ಮಾರುಹೋಗಿದ್ದರು. ರವೀಂದ್ರರ ’ಗೀತಾಂಜಲಿ’ಯ ಕವಿತೆಗಳನ್ನು ಆಲಿಸಿದಾಗ, ತಾಯಿಯ ಜೋಗುಳವನ್ನು ಕೇಳಿದಂತೆ, ನಾರ್ಥಂಬ್ರಿಯದ ಕಡಲ ಅಲೆಗಳ ನಾದವನ್ನು ಆಲಿಸಿದಂತೆ ಭಾಸವಾಗುತ್ತಿತ್ತು. ಠಾಕೂರರ ಕವಿತೆಗಳು ಬಂಗಾಳೀ ಭಾಷೆಯಲ್ಲಿದ್ದವು. ಅದನ್ನು ಇಂಗ್ಲಿಷ್ ಸಾಹಿತ್ಯ ಪ್ರಪಂಚಕ್ಕೆ ಪರಿಚಯ ಮಾಡಿಕೊಡಲು ಆಂಡ್ರೂಸರು ಶ್ರಮಿಸಿದರು. ಗುರುವನ್ನು ಗೌರವಿಸುವ ಶಿಷ್ಯನಂತೆ ಆಂಡ್ರೂಸರು ರವೀಂದ್ರರನ್ನು ಗುರುಸ್ಥಾನದಲ್ಲಿರಿಸಿದರು.

ರವೀಂದ್ರರು ಸ್ಥಾಪಿಸಿದ್ದ ಶಾಂತಿನಿಕೇತನದ ನಿರ್ಮಲ ವಾತಾವರಣಕ್ಕೆ ಮನಸೋತು ಶಾಂತಿನಿಕೇತನದಲ್ಲಿರಲು ಆಂಡ್ರೂಸರು ಬಂದರು. ಶಾಂತಿನಿಕೇತನದಲ್ಲಿದ್ದರೂ ಅವರು ಗೂಢಚಾರರೆಂಬ ಅಪವಾದವು ತಪ್ಪಿರಲಿಲ್ಲ. ಇದನ್ನು ಆಂಡ್ರೂಸರು ನಿರೀಕ್ಷಿಸಿರಲಿಲ್ಲ. ತಮಗೆ ಅಪವಾದ ಬಂದ ದಿನಗಳಲ್ಲಿ ಠಾಕೂರರ ಬಳಿ ಹೆಚ್ಚು ಸಮಯವನ್ನು ಅವರು ಕಳೆಯುತ್ತಿದ್ದರು.

ಬಂಗಾಳಿಗಳಲ್ಲದವರು ಶಾಂತಿನಿಕೇತನಕ್ಕೆ ಸೇರಿದುದು ಇದೇ ಮೊದಲು. ಅಲ್ಲಿನ ಸಹೋದ್ಯೋಗಿಗಳು ಮೊದಮೊದಲು ಇವರ ವಿಷಯದಲ್ಲಿ ಅನುಮಾನಪಟ್ಟರು. ಇದು ಆಂಡ್ರೂಸರಿಗೆ ಪೆಟ್ಟಿನ ಮೇಲೆ ಪೆಟ್ಟು.

ದೇವರಿಂದ ಕರೆ ಬಂದಿತು

ದೇವರಿಂದ ಹೊಸ ಕರೆ ಬರುತ್ತದೆ ಎಂದು ಆಂಡ್ರೂಸರು ನಿರೀಕ್ಷಿಸುತ್ತಿದ್ದರು. ’ದೇವರ ಕೈಯಲ್ಲಿ ನನ್ನನ್ನು ಒಪ್ಪಿಸಿಕೊಂಡಿದ್ದೇನೆ. ಅವನು ಎಲ್ಲಿಗೆ ಹೋಗೆಂದರೆ ಅಲ್ಲಿಗೆ ಹೋಗುತ್ತೇನೆ. ಏನು ಕೆಲಸ ಮಾಡೆಂದರೆ ಅದನ್ನು ಮಾಡುತ್ತೇನೆ’ ಎನ್ನುತ್ತಿದ್ದರು.

ಕೊನೆಗೂ ಆಂಡ್ರೂಸರು ನಿರಿಕ್ಷಿಸಿದ ಕರೆ ಬಂದೇ ಬಂದಿತು.

ಭಾರತೀಯರು ಕೆಲಸವನ್ನು ಹುಡುಕಿಕೊಂಡು ದಕ್ಷಿಣ ಆಫ್ರಿಕಾಕ್ಕೆ ಬಂದಿದ್ದರು. ಇವರಿಗೆ ದಕ್ಷಿಣ ಆಫ್ರಿಕಾದ ತೋಟಗಳಲ್ಲಿ ಕೆಲಸ ಸಿಕ್ಕಿತು. ಭಾರತೀಯ ಕೆಲಸಗಾರರನ್ನು ’ಕೂಲಿ ಹಡಗು’ಗಳಲ್ಲಿ ತುಂಬಿಸಿ ಆಫ್ರಿಕಾಕ್ಕೆ ಕರೆದೊಯ್ಯುತ್ತಿದ್ದರು. ಒಂದು ತೋಟದಲ್ಲಿ ಐದು ವರ್ಷ ಬಿಡದೆ ಇವರು ದುಡಿಯಬೇಕೆಂಬ ಒಪ್ಪಂದವಾಗುತ್ತಿತ್ತು. ಉಸಿರನ್ನು ಹಿಂತೆಗೆದುಕೊಳ್ಳಲೂ ಸಾಧ್ಯವಿಲ್ಲದಷ್ಟು ದುಡಿತ. ಜೊತೆಗೆ ಭಾರತೀಯರು ಮಾತ್ರ ೩ ಪೌಂಡ್ ನೆಲಸು ತೆರಿಗೆ (ಪೋಲ್ ಟಾಕ್ಸ್) ಕೊಡಬೇಕಾಗಿತ್ತು. ತೆರಿಗೆಯನ್ನು ಕೊಡದಿದ್ದರೆ ತಡಯಲಾರದಷ್ಟು ಹಿಂಸೆ ಕೊಡುತ್ತಿದ್ದರು. ಬದುಕಿರುವವರೆಗೂ ತೋಟದ ಮಾಲಿಕರ ಕೈಯಲ್ಲಿ ಸಿಕ್ಕಿ ನರಳಬೇಕಾಗಿತ್ತು. ಕ್ರೈಸ್ತ ಧರ್ಮದ ಪ್ರಕಾರ ನಡೆದ ಮದುವೆಗಳು ಮಾತ್ರ ಮದುವೆ, ಇತರ ಧರ್ಮಗಳ ಪ್ರಕಾರ ವಿವಾಹ ನಡೆದರೆ ಅವರು ಗಂಡ ಹೆಂಡತಿಯರಲ್ಲ ಎಂಬ ಆಜ್ಞೆ ಸರ್ಕಾರದಿಂದ ಹೊರಟಿತು. ಕ್ರೈಸ್ತರಲ್ಲಿ ಬಿಳಿಯರಿಗೆ ಮತ್ತು ಇತರರಿಗೆ ಪ್ರತ್ಯೇಕ ಚರ್ಚ್.

೧೯೦೭ರಲ್ಲಿ ಗಾಂಧೀಜಿಯವರು ಭಾರತೀಯರಿಗಾಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ದಕ್ಷಿಣ ಆಫ್ರಿಕದ ಭಾರತೀಯರ ಸ್ಥಿತಿಗತಿಗಳ ವಿವರಗಳನ್ನು ತಿಳಿದಾಗ ಆಂಡ್ರೂಸರಿಗೆ ಬಹಳ ದುಃಖವಾಯಿತು. ಅಲ್ಲಿನ ಭಾರತೀಯರಿಗೆ ತಮ್ಮಿಂದಾದ ಸಹಾಯವನ್ನು ಮಾಡಲು ನಿಶ್ಚಯಿಸಿದರು. ಭಾರತದಲ್ಲಿದ್ದುಕೊಂಡೇ ಪರಿಹಾರ ನಿಧಿಯನ್ನು ಕೂಡಿಸುವುದು, ದಕ್ಷಿಣ ಆಫ್ರಿಕದಲ್ಲಿ ಭಾರತೀಯರು ಪಡುತ್ತಿರುವ ಕಷ್ಟವನ್ನು ಭಾರತದಲ್ಲಿರುವ ಭಾರತೀಯರಿಗೆ ತಿಳಿಸುವಂತಹ ಲೇಖನಗಳನ್ನು ಬರೆಯುವುದು ಮುಂತಾದ ಕೆಲಸಗಳನ್ನು ಮಾಡಿದರು.

ಇಷ್ಟಕ್ಕೆ ಆಂಡ್ರೂಸರಿಗೆ ತೃಪ್ತಿಯಾಗಲಿಲ್ಲ ಎನ್ನಿಸಿತು. ದಕ್ಷಿಣ ಆಫ್ರಿಕದ ನೇಟಾಲ್‌ನಲ್ಲಿ ಭಾರತೀಯರ ಮೇಲೆ ಗುಂಡು ಹಾರಿಸಿದುದನ್ನು ಕೇಳಿ ಅವರ ಮನಸ್ಸು ತೀರ ನೊಂದಿತ್ತು. ’ಇಂಗ್ಲಿಷರವನಾದ ನಾನು, ನನ್ನ ಜನಗಳು ಮತ್ತೊಂದು ಜನಾಂಗಕ್ಕೆ ಅವಮಾನ ಮಾಡುತ್ತಿರುವಾಗ ಸುಮ್ಮನಿರಬೇಕೆ ? ಇಂಗ್ಲಿಷರವನಾಗಿ ನಾನು ಇದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಡವೇ ?’ ಆಂಡ್ರೂಸರ ಮನಸ್ಸಿನಲ್ಲಿ ವಿಚಾರಮಥನ ನಡೆದಿತ್ತು.

ದಕ್ಷಿಣ ಆಫ್ರಿಕ

ದೇವರ ಕರೆಗೆ ಓಗೊಟ್ಟು ಆಂಡ್ರೂಸರು ದಕ್ಷಿಣ ಆಫ್ರಿಕಕ್ಕೆ ಹೋದರು.

ದಕ್ಷಿಣ ಆಫ್ರಿಕದ ಸರ್ಕಾರ ಭಾರತೀಯರ ಕಷ್ಟಗಳನ್ನು ವಿಚಾರಿಸಲು ಒಂದು ಸಮಿತಿಯನ್ನು ನೇಮಿಸಿತು. ಭಾರತೀಯ ಕೆಲಸಗಾರರ ನರಕದ ಸ್ಥಿತಿಯನ್ನು ಸಮಿತಿಗೆ ತಿಳಿಸಲು ಸಾಕ್ಷ್ಯ ಸಿದ್ಧಮಾಡಲು ಆಂಡ್ರೂಸರು ಹಗಲು ರಾತ್ರಿ ದುಡಿದರು.

ಈ ಸಮಯದಲ್ಲಿ ಆಂಡ್ರೂಸ್ ಮತ್ತು ಗಾಂಧೀಜಿ ಆಪ್ತರಾದರು. ಕೆಲವೇ ದಿನಗಳ ಪರಿಚಯದಲ್ಲಿ ಅವರಿಬ್ಬರೂ ಮೋಹನ್, ಚಾರ್ಲಿ ಎಂದು ಕರೆಯುವಷ್ಟು ಆತ್ಮೀಯರಾದರು.

ಆಂಡ್ರೂಸರು ದರ್ಬಾನ್‌ನಲ್ಲಿದ್ದಾಗ ತಾಯಿಯ ಸಾವನ್ನು ಹೊತ್ತುತಂದ ಕಾಗದ ಬಂದಿತು. ಇದು ಆಂಡ್ರೂಸರಿಗೆ ಅನಿರೀಕ್ಷಿತ ಆಘಾತ.

ತಾಯಿಯ ವಿಯೋಗವಾದ ಅವರು ಠಾಕೂರರಿಗೆ ಬರೆದ ಪತ್ರದಲ್ಲಿ, ’ಭಾರತವನ್ನು ನಾನು ಇಷ್ಟೊಂದು ಪ್ರೀತಿಸಲು ಏನು ಕಾರಣವೋ ಅರಿಯೆ. ನನ್ನ ತಾಯಿಯು ನನ್ನಲ್ಲಿ ಎಣೆಯಿಲ್ಲದ ಪ್ರೀತಿಯನ್ನು ತೋರಿಸಿದ್ದರಿಂದಲೇ ಭಾರತದ ಮೇಲಿನ ನನ್ನ ಪ್ರೀತಿ ಇಷ್ಟು ಬೇಗನೆ ಬೆಳೆಯಿತು ಎನ್ನಿಸುತ್ತದೆ. ನನ್ನ ತಾಯಿಯ ಸಾವಿನಿಂದ ಆಕೆಯನ್ನು ಇಲ್ಲಿನ ಭಾರತೀಯರ ಮನೆಗಳಲ್ಲಿ ಕಾಣುತ್ತಿದ್ದೇನೆ. ಅವಳ ಚೇತನ ಇಲ್ಲಿನ ಭಾರತೀಯರ ಕಣ್ಣುಗಳಲ್ಲಿ, ಇಲ್ಲಿನ ತಾಯಂದಿರ ಮುಖಗಳಲ್ಲಿ ಬೆಳಗುತ್ತಿದೆ’ ಎಂದು ಬರೆದರು.

ಆಂಡ್ರೂಸ್, ಗಾಂಧೀಜಿ ಇವರೆಲ್ಲರ ಶ್ರಮಕ್ಕೆ ಸ್ವಲ್ಪವಾದರೂ ಪ್ರತಿಫಲ ಸಿಕ್ಕಿತು. ದಕ್ಷಿಣ ಆಫ್ರಿಕಾದ ಭಾರತೀಯರ ಕಷ್ಟಗಳನ್ನು ಸ್ವಲ್ಪ ಕಡಿಮೆ ಮಾಡುವ ಶಾಸನವನ್ನು ಅಲ್ಲಿನ ಸರ್ಕಾರ ಮಾಡಿತು.

ಬಿಳಿಯರಲ್ಲದ ಗಾಂಧೀಜಿಗೆ ಬಿಳಿಯರಾದ ಆಂಡ್ರೂಸರು ಗೌರವ ಕೊಡುವುದನ್ನು ಸಹಿಸದೆ ಪತ್ರಿಕೆಗಳು ಟೀಕಿಸಿದವು. ದಕ್ಷಿಣ ಆಫ್ರಿಕದಲ್ಲಿ ಭಾರತೀಯರೊಡನೆ ಬೀದಿಗಳಲ್ಲಿ ಹೋಗುವುದು ನಿಷೇಧ. ಬಿಳಿಯರು ಭಾರತೀಯರ ಜೊತೆ ಸ್ವಲ್ಪ ಹೊತ್ತು ಇರುವುದು ಸಹ ಅಲ್ಲಿನ ಸರ್ಕಾರದ ಮತ್ತು ಬಹುಮಂದಿ ಬಿಳಿಯರ ದೃಷ್ಟಿಯಲ್ಲಿ ಮಹಾಪರಾಧ. ಆದರೆ ಆಂಡ್ರೂಸರು ಈ ನಿಷೇಧವನ್ನು ಲೆಕ್ಕಿಸದೆ ಭಾರತೀಯರೊಡನೆ ಬೆರೆತರು.

ಫಿಜಿ

ದಕ್ಷಿಣ ಆಫ್ರಿಕದಲ್ಲಿ ಮಾತ್ರವಲ್ಲ ವಿದೇಶದಲ್ಲಿರುವ ಭಾರತೀಯರ ಸಮಸ್ಯೆಗಳತ್ತ ಕಣ್ಣುಹರಿಸಿ ಆಂಡ್ರೂಸ್ ಖಂಡಗಳನ್ನು ಸುತ್ತಿದರು. ಅವರು ಭೇಟಿಕೊಟ್ಟ ಸ್ಥಳಗಳಲ್ಲಿ ಫಿಜಿಯೂ ಒಂದು.

ಫಿಜಿ ಆಸ್ಟ್ರೇಲಿಯಾದಲ್ಲಿರುವ ಒಂದು ಸಣ್ಣ ದ್ವೀಪ. ಫಿಜಿಯ ಭಾರತೀಯ ಕೆಲಸಗಾರರ ಸ್ಥಿತಿ ದಕ್ಷಿಣ ಆಫ್ರಿಕದ ಕೆಲಸಗಾರರ ಸ್ಥಿತಿಗಿಂತ ಶೋಚನೀಯವಾಗಿತ್ತು. ವಲಸೆ ಹೋದ ಭಾರತೀಯರಲ್ಲಿ ಅಲ್ಲಿನ ಕಷ್ಟಗಳನ್ನು ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡವರೇ ಹೆಚ್ಚು.

ಫಿಜಿಯಲ್ಲಿನ ಕಬ್ಬಿನ ತೋಟದ ಮಾಲಿಕರಿಗೆ ವಲಸೆ ಪದ್ಧತಿ ರದ್ದುಮಾಡುವ ಇಷ್ಟವಿರಲಿಲ್ಲ. ಈ ಪದ್ಧತಿ ರದ್ದಾದರೆ ಅವರ ವ್ಯಾಪಾರವೇ ಮುರಿದುಬೀಳುವ ಸ್ಥಿತಿಯಲ್ಲಿತ್ತು. ಆಸ್ಟ್ರೇಲಿಯಾದ ಸಮಸ್ತ ಕೈಗಾರಿಕೋದ್ಯಮಗಳ ಆಡಳಿತ ಈ ಮಾಲಿಕರ ಕೈಯಲ್ಲಿತ್ತು.

ಆಂಡ್ರೂಸರು ಫಿಜಿಯಲ್ಲಿದುದು ಕೇವಲ ಐದು ದಿನಗಳು ಮಾತ್ರ. ಆದರೆ ಅಷ್ಟೇ ದಿನದಲ್ಲಿ ಅವರು ಸಾಧಿಸಿದುದು ಅಪಾರ. ಮೂಲೆಮೂಲೆ ಅಲೆದರು. ಸಾಕಷ್ಟು ಪ್ರತ್ಯಕ್ಷ ಆಧಾರಗಳನ್ನು ಸಂಗ್ರಹಿಸಿದರು.

ಒಂದಲ್ಲ ಒಂದು ಕಾರಣದಿಂದ ಫಿಜಿಯಲ್ಲಿ ಹೋರಾಟ ಮುಂದುವರೆಯಬೇಕಾಯಿತು. ಆಂಡ್ರೂಸರ ದೇಹಾರೋಗ್ಯವು ಕೆಟ್ಟಿತು. ಆದರೂ ಊರೂರು ತಿರುಗಿದರು. ತೀರಾ ಹಾಸಿಗೆಯನ್ನೇ ಹಿಡಿಯುವಂತಾಯಿತು. ಆದರೂ ಬಿಡದೇ ಮಲಗಿದಲ್ಲಿಂದಲೇ ಪತ್ರಗಳನ್ನು ಮನವಿಗಳನ್ನು ಹೇಳಿ ಬರೆಯಿಸುತ್ತಿದ್ದರು. ಎದ್ದುನಿಲ್ಲುವಷ್ಟು ಶಕ್ತಿ ದೇಹಕ್ಕೆ ಬಂದೊಡನೆ ಪುನಃ ಊರೂರು ತಿರುಗಿ ಜನರನ್ನು ಎಚ್ಚರಿಸುವುದು.

ಇದೆಲ್ಲದರ ಪರಿಣಾಮವಾಗಿ ಬ್ರಿಟಿಷ್ ಸರ್ಕಾರವು ವಲಸೆ ಪದ್ಧತಿಯ ರದ್ದಿನ ಆಜ್ಞೆಯನ್ನು ಮತ್ತೆ ಹೊರಡಿಸಿತು.

ವಲಸೆ ಪದ್ಧತಿಯೇನೋ ರದ್ದಾಯಿತು. ಆದರೆ ಫಿಜಿಯ ವಾತಾವರಣ ಹಿಂದಿನಂತೆಯೇ ಇತ್ತು. ಅಗತ್ಯ ವಸ್ತುಗಳ ಬೆಲೆ ಏರಿತ್ತು. ವಲಸೆ ಬಂದ ಕೆಲಸಗಾರರು ಹಸಿವಿನಿಂದ ಚಡಪಡಿಸುತ್ತಿದ್ದರು.ಮಕ್ಕಳ ಹಸಿವಿನ ಕೂಗನ್ನು ಕೇಳಲು ಸಾಧ್ಯವಿರಲಿಲ್ಲ. ಅನೇಕರು ಆತ್ಮಹತ್ಯೆಯ ಪ್ರಯತ್ನವನ್ನೂ ನಡೆಸಿದರು. ಭಾರತಕ್ಕೆ ಹಿಂದಿರುಗೋಣವೆಂದರೆ ಈ ಕೆಲಸಗಾರರಿಗೆ ಹಿಂದಿರುಗಲು ಅವಕಾಶ ಕೊಡಲಿಲ್ಲ. ಇದೆಲ್ಲವನ್ನೂ ಕಂಡ ಆಂಡ್ರೂಸರ ಮನಸ್ಸಿನಲ್ಲಿ ಜ್ವಾಲಾಮುಖಿ ಹುದುಗಿತ್ತು.

ಫಿಜಿಯ ಮೂಲೆಮೂಲೆಯನ್ನೂ ಹಗಲು ರಾತ್ರಿ ಎನ್ನದೇ ಅಲೆದಾಡಿ ಪ್ರತ್ಯಕ್ಷವಾಗಿ ಭಾರತೀಯರ ಕಷ್ಟಸುಖಗಳನ್ನು ಕಂಡರು. ಕೂಡಲೇ ಮೂರು ನಿಯಮಗಳನ್ನು ರೂಪಿಸಿದರು. ವಲಸೆ ಬಂದ ಕೆಲಸಗಾರರ ಸಂಬಳವನ್ನು ಕೂಡಲೇ ಹೆಚ್ಚಿಸಬೇಕು. ಗಂಡನ ಕೆಲಸದ ಅವಧಿಯು ಹೆಂಡತಿಯ ಕೆಲಸದ ಅವಧಿಗಿಂತ ಮೊದಲೇ ಮುಗಿದರೆ, ಗಂಡನ ಅವಧಿ ಮುಗಿದಾಗ ತಾನೇತಾನಾಗಿ ಹೆಂಡತಿಯ ಕೆಲಸದ ಅವಧಿ ಮುಕ್ತಾಯವಾಗಬೇಕು. ಮೂರನೆಯ ನಿಯಮ- ಅತಿ ಮುಖ್ಯವಾದುದು- ೧೯೨೦ರ ಜನವರಿ ವೇಳೆಗೆ ಉಳಿದಿರುವ ಎಲ್ಲ ಕೆಲಸಗಾರರ ಬಿಡುಗಡೆಯಾಗಬೇಕು.

ಆಂಡ್ರೂಸರ ಪ್ರಯತ್ನದಿಂದ ೧೯೨೦ರ ಜನವರಿ ಒಂದರ ವೇಳೆಗೆ ಎಲ್ಲ ಕೆಲಸಗಾರರ ಬಿಡುಗಡೆಯಾಯಿತು.

ದೀನಬಂಧು

ಇತರರಿಗಾಗಿ ಹೀಗೆ ತನ್ನನ್ನೇ ತೇಯ್ದುಕೊಂಡ ಮನುಷ್ಯನಿಗೆ ಆಕ್ಷೇಪಣೆಗಳ ಮಾಲೆಯೇ ಕಾದಿತ್ತು. ’ಆಂಡ್ರೂಸರ ಧ್ಯೇಯ ಬ್ರಿಟಿಷ್ ಚಕ್ರಾಧಿಪತ್ಯವನ್ನು ಕೆಳಗುರುಳಿಸುವುದು’ ಎಂದು ಕಂಪೆನಿಯ ವರದಿಯೊಂದು ಪ್ರಕಟಿಸಿತು. ಕೆಲವರು ಧರ್ಮ ಪ್ರಸಾರಕರು, ’ಆಂಡ್ರೂಸರದು ಇಬ್ಬಗೆಯ ನೀತಿ’ ಎಂದರು.

ದೇಹಕ್ಕೂ ಆರೋಗ್ಯವಿಲ್ಲ, ಮನಸ್ಸಿಗೂ ಸಮಾಧಾನವಿಲ್ಲ. ಆದರೂ ಆಂಡ್ರೂಸ್ ತಮ್ಮ ಹೋರಾಟವನ್ನು ಮುಂದುವರೆಸಿದರು. ತಮ್ಮನ್ನು ನಿಂದಿಸಿದವರ ವಿಷಯದಲ್ಲಿ ಕೋಪ ಮಾಡಿಕೊಳ್ಳಲಿಲ್ಲ, ನಿಂದಿಸಿದವರಿಗೆ ತಿಳಿವಳಿಕೆ ಸಾಲದು ಎಂದು.

ಫಿಜಿಯಲ್ಲಿನ ಭಾರತೀಯರು ಮಾತ್ರ ಅವರನ್ನು ದೀನಬಂಧು- ಬಡವರ ಸ್ನೇಹಿತ ಎಂದರು.

ಫಿಜಿಯಿಂದ ಹೊರಟಾಗ ಅವರ ಮನಸ್ಸಿನಲ್ಲಿ ಅಚ್ಚೊತ್ತಿದ್ದ ಚಿತ್ರ : ’ನಮಗಾಗಿ ಹಡಗನ್ನು ಕಳುಹಿಸಿ, ನಾವು ಎಂದು ಭಾರತಕ್ಕೆ ಹಿಂದಿರುಗುವುದು ?’ ಎಂದು ಕೂಗುತ್ತಿದ್ದ ಬಡ ಕೂಲಿಕಾರನ ಚಿತ್ರ.

ಒಬ್ಬ ವ್ಯಕ್ತಿ ಒಂಟಿಯಾಗಿಯೇ ಸರ್ಕಾರಗಳೊಡನೆ ಹೋರಾಡಿ, ವಲಸೆ ಪದ್ಧತಿಯನ್ನು ಕೊನೆಗಾಣಿಸಿದರು.

ಫಿಜಿಯಲ್ಲಿ ಕೆಲಸ ಮುಗಿಯಿತು. ಆದರೆ ವಿದೇಶಗಳಲ್ಲಿನ ಭಾರತೀಯರಿಗೆ ಆಂಡ್ರೂಸರ ಸೇವೆ ಮುಗಿದಿರಲಿಲ್ಲ. ಮಲಯಾ ಮತ್ತು ಸಿಂಹಳ (ಈಗಿನ ಶ್ರೀಲಂಕಾ)ಗಳ ಕೆಲಸಗಾರರ ಕಷ್ಟ, ನೋವುಗಳಿಗೆ ಗಮನ ಕೊಡಬೇಕಾಯಿತು.

ಫಿಜಿಯ ಕೆಲಸಗಾರರು

ಯಾವ ಸ್ಥಳಕ್ಕೆ ಹೋದರೂ ಆಂಡ್ರೂಸರಿಗೆ ಕೆಲಸಗಾರರ ಸಮಸ್ಯೆಯೇ ಕಣ್ಣಿಗೆ ಕಟ್ಟಿದ್ದಿತು. ಫಿಜಿಯ ಕೆಲಸಗಾರರು ಭಾರತದಲ್ಲಿರುವ ತಮ್ಮ ಹಳ್ಳಿಗಳಿಗೆ ಹಿಂತಿರುಗಿದ್ದರು. ಹಳ್ಳಿಯ ಜನ ಅವರಿಗೆ ಅಪಮಾನ ಮಾಡಿದರು. ಈ ಕೆಲಸಗಾರರ ಭವಿಷ್ಯದ ಬಗ್ಗೆ ಚಿಂತೆ ಆಂಡ್ರೂಸರನ್ನು ಸದಾ ಕಾಡುತ್ತಿತ್ತು. ತಮ್ಮವರನ್ನೇ ಭಾರತೀಯರು ಬೇರೆಯವರನ್ನಾಗಿ ಕಂಡರು. ಇಂತಹ ಸ್ಥಿತಿಯಲ್ಲಿ ಈ ಜನರು ಫಿಜಿಗೆ ಹಿಂದಿರುಗಲು ಯೋಚಿಸಿದುದರಲ್ಲಿ ಆಶ್ಚರ್ಯವಿಲ್ಲ. ಭಾರತದಲ್ಲಿ ಅವರಿಗೆ ತಿಳಿದಿದ್ದ ಒಬ್ಬರೇ ಸ್ನೇಹಿತರಾದ ಆಂಡ್ರೂಸರ ಮೊರೆಹೊಕ್ಕರು.

ಭಾರತದಿಂದ ಫಿಜಿಗೆ ಹಿಂದಿರುಗಿದ ಭಾರತೀಯರಿಗೆ ಕೆಲಸವೇನೋ ದೊರೆಯಿತು. ಫಿಜಿಯ ಕಬ್ಬನ್ನು ಸಂಸ್ಕರಿಸುವ ಕಂಪೆನಿಗೆ ಬೇಕಾದಷ್ಟು ಲಾಭ ಬಂದಿತ್ತು. ಆದರೂ ಇವರ ಸಂಬಳವನ್ನು ಮೂರನೇ ಒಂದು ಭಾಗದಷ್ಟು ಕಡಿಮೆ ಮಾಡಿದರು. ಜೀವನ ನಡೆಸುವುದೇ ಕಷ್ಟವಾದಾಗ ಫಿಜಿಗೆ ಹೋದ ಕೆಲಸಗಾರರು ಮತ್ತೆ ಕಲ್ಕತ್ತಕ್ಕೆ ತಂಡೋಪತಂಡವಾಗಿ ಬಂದರು.

ಕೂಲಿ ಹಡಗುಗಳಲ್ಲಿ ಬಂದಿಳಿದ ಈ ಕೆಲಸಗಾರರನ್ನು ಅಪಮಾನಿತರಾಗದಂತೆ ನೋಡಿಕೊಂಡವರು ಆಂಡ್ರೂಸ್. ಕಳ್ಳಕಾಕರಿಂದ ರಕ್ಷಿಸಿದರು. ಕೆಲವರಿಗೆ ಗೃಹಸೌಲಭ್ಯಗಳನ್ನು ಒದಗಿಸಿದರು. ತಮ್ಮ ಬಳಿ ಇದ್ದುದನ್ನೆಲ್ಲಾ ಕೊಟ್ಟು ಕಲ್ಕತ್ತಕ್ಕೆ ಹಿಂದಿರುಗುವ ಟಿಕೇಟುಗಳನ್ನು ಕೊಂಡುಕೊಟ್ಟರು.

ಮತ್ತೆ ದಕ್ಷಿಣ ಆಫ್ರಿಕ

ಮತ್ತೆ ಆಂಡ್ರೂಸರ ದೃಷ್ಟಿ ದಕ್ಷಿಣ ಆಫ್ರಿಕದ ಕೀನ್ಯದ ಭಾರತೀಯರತ್ತ ತಿರುಗಿತು. ಕೀನ್ಯದಲ್ಲಿ ಎತ್ತರಪ್ರದೇಶ ಮತ್ತು ತಗ್ಗುಪ್ರದೇಶಗಳೆಂದು ಕರೆಯುವ ಪ್ರದೇಶಗಳಿದ್ದವು. ಎತ್ತರವಾದ ಪ್ರದೇಶಗಳು ಫಲವತ್ತಾದ ಭೂಮಿಗಳಾಗಿದ್ದವು. ಇದನ್ನು ಭಾರತೀಯರಿಂದ ಕಿತ್ತುಕೊಂಡರು. ಭಾರತ ಸರ್ಕಾರ ನಿಜಾಂಶವನ್ನು ತಿಳಿಯಲು ಒಂದು ಸಮಿತಿಯನ್ನು ದಕ್ಷಿಣ ಆಫ್ರಿಕಕ್ಕೆ ಕಳುಹಿಸಿತು.

ಕೀನ್ಯಕ್ಕೆ ಹೋಗಿ ಆಫ್ರಿಕನ್ನರ ಜನಸಂಖ್ಯೆ, ಆಫ್ರಿಕನ್ನರ ಮತ್ತು ಭಾರತೀಯರ ನಡುವಣ ಸಂಬಂಧವನ್ನು ಕುರಿತು ಆಂಡ್ರೂಸ್ ಹೆಚ್ಚು ವಿವರಗಳನ್ನು ಸಂಗ್ರಹಿಸಿದರು. ಇಂಗ್ಲೆಂಡ್‌ನಿಂದ ಬಂದವರು ಭಾರತೀಯರಿಂದಲೇ ಕೆಲಸ ಕಲಿಯುತ್ತಿದ್ದರು, ಅವರಿಗಿಂತ ಮೇಲೇರುತ್ತಿದ್ದರು. ಆದರೆ ಭಾರತೀಯರು ಎಷ್ಟೇ ತೀಕ್ಷ್ಣಬುದ್ಧಿಯವರಾಗಲಿ ಅವರು ಉನ್ನತ ಹುದ್ದೆಯನ್ನು ಪಡೆಯುವಂತಿರಲಿಲ್ಲ. ಬಿಳಿಯರಿಗಿಂತ ಹೆಚ್ಚು ಸಂಬಳವನ್ನು ಪಡೆಯುವಂತಿರಲಿಲ್ಲ.

ಬಿಳಿಯರ ಆಕ್ರೋಶ

ಬಿಳಿಯರಾಗಿದ್ದು ಆಂಡ್ರೂಸರು ಭಾರತೀಯರಿಗಾಗಿ ಕೀನ್ಯಕ್ಕೆ ಬಂದು ಅವರಿಗೆ ಸಹಾಯಮಾಡುವುದು, ಭಾರತೀಯರೊಂದಿಗೆ ಬೆರೆಯುವುದು ಬಿಳಿಯರಿಗೆ ಇಷ್ಟವಾಗುತ್ತಿರಲಿಲ್ಲ. ಕ್ರಿಶ್ಚಿಯನ್ ತತ್ವಕ್ಕೆ ವಿರುದ್ಧವಾಗಿ ಅವರು ನಡೆಯುತ್ತಿದ್ದಾರೆಂದು ಅವರು ಆಪಾದಿಸಿದರು. ಹಿಂದೂ ಮತ್ತು ಮುಸ್ಲಿಮರ ಸ್ನೇಹಕ್ಕೆ ಅವರು ಕೈಚಾಚಿದುದು ಅವರ ದೊಡ್ಡ ತಪ್ಪಾಗಿತ್ತು. ಒಮ್ಮೆ ಉಗಾಂಡಕ್ಕೆ ಅವರು ಹೊರಟಿದ್ದರು. ಅವರಿದ್ದ ರೈಲು ನೈರೋಬಿಯಲ್ಲಿ ಮಧ್ಯರಾತ್ರಿಯಲ್ಲಿ ನಿಂತಿತು. ಅಲ್ಲಿನ ಬಿಳಿಯ ಪ್ರಯಾಣಿಕರು ಆಂಡ್ರೂಸರಿದ್ದ ಗಾಡಿಗೆ ನುಗ್ಗಿದರು. ಅವರನ್ನು ಗಾಡಿಯಿಂದ ಹೊರಗೆ ಎಳೆದು ಚೆನ್ನಾಗಿ ಥಳಿಸಿದರು. ಆದರೂ ತಮಗೆ ಈ ರೀತಿ ಅವಮಾನ ಮಾಡಿದವರಾರೆಂದು ಆಂಡ್ರೂಸ್ ವೈಸರಾಯರಿಗೂ ತಿಳಿಸಲಿಲ್ಲ.

ತಾವು ಅವರನ್ನು ಹಿಂಸಿಸಿದರೆ ಹೆದರಿ ಆಂಡ್ರೂಸರು ತಮ್ಮ ಚಟುವಟಿಕೆಗಳನ್ನು ನಿಲ್ಲಿಸುತ್ತಾರೆ ಎಂದು ಬಿಳಿಯರು ಭಾವಿಸಿದ್ದರು. ಆದರೆ ಆಂಡ್ರೂಸರು ತಮ್ಮ ಯಾವ ಕೆಲಸವನ್ನೂ ನಿಲ್ಲಿಸಲಿಲ್ಲ. ಒಮ್ಮೆ ಒಬ್ಬ ಸಿಖ್ ದಂಪತಿಗಳೊಡನೆ ಮಾತನಾಡುತ್ತಾ ಆಂಡ್ರೂಸರು ಅವರ ಮಗುವಿನೊಂದಿಗೆ ಆಟವಾಡುತ್ತಿದ್ದರು. ಕೂಡಲೆ ಒಬ್ಬ ಬಿಳಿಯರವನು ಅಲ್ಲಿಗೆ ನುಗ್ಗಿ, “ನಿನ್ನನ್ನು ನೋಡಿದ ತಕ್ಷಣ ನಿನ್ನನ್ನು ಕೊಲೆ ಮಾಡಬೇಕೆನಿಸುತ್ತದೆ, ಆ ಕಪ್ಪು ಮನುಷ್ಯನ ಮಗುವನ್ನು ನಿನ್ನ ತೋಳಿನಲ್ಲಿ ನೋಡಿದಾಗ ನಿನ್ನನ್ನು ಸಪ್ತಸಮುದ್ರದ ಆಳಕ್ಕೆ ಹೂತುಬಿಡಬೇಕೆನಿಸುತ್ತದೆ.” ಎಂದು ಕೂಗಿದನು. ಇಷ್ಟು ದ್ವೇಷವಿತ್ತು ಬಿಳಿಯರಿಗೆ ಆಂಡ್ರೂಸರೆಂದರೆ.

ಹೋರಾಟ ಮುಂದುವರಿಯಿತು. ೧೯೨೬ ರ ಡಿಸೆಂಬರ್‌ನಲ್ಲಿ ದುಂಡುಮೇಜಿನ ಸಮ್ಮೇಳನ ನಡೆಸುವ ತೀರ್ಮಾನವಾಯಿತು. ಈ ಸಮ್ಮೇಳನಕ್ಕೆ ಆಂಡ್ರೂಸರೇ ಭಾರತದ ಪ್ರತಿನಿಧಿಯಾದರು.

ಕೇಪ್‌ಟೌನ್‌ನಲ್ಲಿ ದುಂಡುಮೇಜಿನ ಸಮ್ಮೇಳನ ಆರಂಭವಾಯಿತು. ಕೇವಲ ಹದಿನೈದು ದಿನಗಳಲ್ಲಿ ಇಡೀ ವಾತಾವರಣವೇ ಬದಲಾಯಿತು. ತಾನು ಮಾಡಿದ್ದ ಶಾಸನವನ್ನು ಸರ್ಕಾರ ಹಿಂದಕ್ಕೆ ತೆಗೆದುಕೊಂಡಿತು. ದಕ್ಷಿಣ ಆಫ್ರಿಕದಲ್ಲಿಯೇ ನೆಲೆಸಿದ್ದ ಭಾರತೀಯರು ಈಗ ತಮ್ಮ ಹೆಂಡತಿ ಮಕ್ಕಳನ್ನೂ ಕರೆತರಬಹುದಾಗಿತ್ತು. ಭಾರತ ಸರ್ಕಾರ ಒಬ್ಬ ಪ್ರತಿನಿಧಿಯನ್ನು ದಕ್ಷಿಣ ಆಫ್ರಿಕದಲ್ಲಿಡಲು ಅನುಮತಿ ದೊರೆಯಿತು.

ಭಾರತದಲ್ಲಿ ಕೆಲಸಗಾರರು

೧೯೨೧ರಲ್ಲಿ ಭಾರತದಲ್ಲಿ ರೈಲ್ವೆ ಕೆಲಸಗಾರರ ಮುಷ್ಕರ ಪ್ರಾರಂಭವಾಯಿತು. ಯುದ್ಧದ ದೆಸೆಯಿಂದ ಬೆಲೆಗಳು ಏರಿದವು. ತಮ್ಮ ಸಂಬಳವನ್ನು ಹೆಚ್ಚಿಸಲು ಈ ಕೆಲಸಗಾರರು ಮನವಿ ಮಾಡಿದ್ದರು. ಬಹು ಹಿಂದೆಯೇ ಲಾಭ ಬಂದಿದ್ದರೂ ಕೆಲಸಗಾರರ ಸಂಬಳವನ್ನು ಹೆಚ್ಚಿಸಲಿಲ್ಲ.

ಶೀಘ್ರವಾಗಿ, ಗೌರವಯುತವಾಗಿ ಈ ಸಮಸ್ಯೆಗಳನ್ನು ಬಗೆಹರಿಸುವುದೇ ಆಂಡ್ರೂಸರ ಧ್ಯೇಯವಾಯಿತು. ಮುಷ್ಕರದ ಕಾರಣಗಳೇನು, ಅದನ್ನು ಹೇಗೆ ಪರಿಹರಿಸುವುದು ಮುಂತಾದ ವಿಷಯಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಒಂದು ಸೊಗಸಾದ ವಿವರಣೆಯನ್ನು ಸಿದ್ಧಮಾಡಿದರು. ಕೆಲಸಗಾರರ ನ್ಯಾಯವಾದ ಬೇಡಿಕೆಗಳನ್ನು ಅವರು ಅದರಲ್ಲಿ ತಿಳಿಸಿದ್ದರು. ಕೆಲಸಗಾರರಿಗೂ ಅಧಿಕಾರಿಗಳಿಗೂ ನಡುವೆ ನೇರ ಸಂಪರ್ಕ, ಸ್ನೇಹಭಾವನೆ ಇರುವುದು ಅಗತ್ಯ ಎಂದರು. ಕೆಲಸಗಾರರಿಗೆ ಗೌರವ ಕೊಟ್ಟು, ಅವರಿಗೆ ವಸತಿ ಸೌಕರ್ಯ ಕಲ್ಪಿಸಬೇಕು, ಎಲ್ಲಕ್ಕೂ ಹೆಚ್ಚಾಗಿ ಬಿಳಿಯರು ಮತ್ತು ಭಾರತೀಯರು ಎಂಬ ಭೇದಭಾವವನ್ನು ತೊರೆಯಬೇಕು ಎಂದರು.

ಭಾರತದಲ್ಲಿ ಅವರು ಮಾಡಿದ ಮತ್ತೊಂದು ಕೆಲಸವೆಂದರೆ ಅಸ್ಸಾಂ ಟೀ ತೋಟದ ಕೆಲಸಗಾರರ ಸಮಸ್ಯೆಗಳತ್ತ ದೃಷ್ಟಿ ಹರಿಸಿದುದು.

ಅಸ್ಸಾಂ ಟೀ ತೋಟಗಳಿಗೆ ಕೆಲಸಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿ ಅಲ್ಲಿಯೂ ಕೆಲಸದ ಅಭಾವ ಉಂಟಾಯಿತು. ಹಸಿವಿನಿಂದ ಕಂಗೆಟ್ಟ ಈ ಜನರು ಟೀ ತೋಟಗಳನ್ನು ಬಿಟ್ಟು ತಮ್ಮತಮ್ಮ ಊರಿನತ್ತ ಹೊರಟರು. ಚಾಂದಪುರಕ್ಕೆ ಈ ನಿರಾಶ್ರಿತರು ತಂಡತಂಡವಾಗಿ ಬರಲಾರಂಭಿಸಿದರು. ಕೆಲಸಗಾರರು ಕೈತಪ್ಪಿ ಹೋಗದಂತೆ ಟೀ ತೋಟಗಳ ಮಾಲಿಕರು ಅವರನ್ನು ತಡೆಯಲು ಪ್ರಯತ್ನಿಸಿದರು.

ಇದರ ಪರಿಣಾಮ ಚಾಂದಪುರದಿಂದ- ಮುಂದೆ ಹೋಗಲು ಈ ನಿರಾಶ್ರಿತರಿಗೆ ಟಿಕೆಟ್ ಸಿಕ್ಕಲಿಲ್ಲ. ಟೀ ತೋಟದ ಮಾಲಿಕರು ಕೆಲಸಗಾರರನ್ನು ಹಿಂಬಾಲಿಸಿ ಅವರನ್ನು ಅಮಾನುಷವಾಗಿ ನಡೆಸಿಕೊಂಡರು. ಈ ಬಡಜನರಿಗೆ ಅವರನ್ನು ತಡೆಯುವ ಶಕ್ತಿಯಿರಲಿಲ್ಲ. ಆಂಡ್ರೂಸರಿಗೆ ಈ ಸುದ್ದಿ ತಿಳಿಯಿತು. ಅವರು ಕೂಡಲೇ ಚಾಂದಪುರಕ್ಕೆ ಧಾವಿಸಿದರು. ಅಲ್ಲಿನ ಅಧಿಕಾರಿಗಳನ್ನು ಕಂಡು ಒಂದೇ ದಿನದಲ್ಲಿ ಬಂಗಾಳ ಸರ್ಕಾರದಿಂದ ಐದು ಸಾವಿರ ರೂಪಾಯಿಗಳನ್ನು ಪರಿಹಾರಧನವಾಗಿ ಕೊಡಿಸಿದರು. ಸರ್ಕಾರದ ಹಣಕ್ಕಾಗಿ ಮತ್ತೆ ಕಾಯದೇ ತಾವೇ ಹಣ ಸಂಗ್ರಹಿಸತೊಡಗಿದರು. ಈ ಮಧ್ಯೆ ಕಾಲರಾ ಹಬ್ಬಿತು. ರೋಗಿಗಳ ಮಧ್ಯೆ ದುಡಿದರು. ಅವರಿಗೆ ಆರೈಕೆ ಮಾಡಿದರು ಆಂಡ್ರೂಸರು. ಫಿಜಿಯಿಂದ ಬಂದವರಿಗೆ ಆದಂತೆ ಇಲ್ಲಿಯೂ ಆಗಬಾರದೆಂದು ಆಂಡ್ರೂಸರು ಹಳ್ಳಿ ತಿರುಗಿ, “ನಿಮ್ಮ ಸೋದರರು ನಿರಾಶ್ರಿತರಾಗಿ ಬರುತ್ತಿದ್ದಾರೆ, ಅವರೊಡನೆ ಸಹಕರಿಸಿ, ಅವರು ಬಾಳಲು ಅವಕಾಶ ಮಾಡಿಕೊಡಿ” ಎಂದು ಪ್ರಾರ್ಥಿಸಿದರು.  ಅವರ ಪ್ರಾರ್ಥನೆ ವ್ಯರ್ಥವಾಗಲಿಲ್ಲ.

ಅಫೀಮಿನ ಸಮಸ್ಯೆ

ಆಂಡ್ರೂಸರ ಗಮನ ಸೆಳೆದ ಮತ್ತೊಂದು ವಿಷಯವೆಂದರೆ ಅಫೀಮಿನ ಕಳ್ಳಸಾಗಾಣಿಕೆ.

ಭಾರತದಲ್ಲಿ ಆಫೀಮನ್ನು ಹೇರಳವಾಗಿ ಬೆಳೆಯುತ್ತಿದ್ದರು. ಇದನ್ನು ಸ್ವದೇಶಿ ಮತ್ತು ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಅಧಿಕಾರ ಭಾರತದಲ್ಲಿ ಇಂಗ್ಲಿಷ್ ಸರ್ಕಾರಕ್ಕಿತ್ತು. ಆದರೆ ಆಫೀಮನ್ನು ಚೀನಾಕ್ಕೆ ರಫ್ತು ಮಾಡುವುದು ಕಾನೂನಿಗೆ ವಿರುದ್ಧವಾಗಿತ್ತು. ಆದರೂ ಭಾರತದಲ್ಲಿ ಔಷಧಿಗಳಿಗೆ ಅಗತ್ಯವಾದಷ್ಟು ಆಫೀಮನ್ನು ಉಳಿಸಿಕೊಳ್ಳದೆ ಭಾರೀ ಪ್ರಮಾಣದಲ್ಲಿ ಆಫೀಮು ಹೇಗೋ ಸಾಗಾಣಿಕೆಯಾಗುತ್ತಿತ್ತು. ಇದರಿಂದ ಬಂದರುಗಳಲ್ಲಿದ್ದ ಅಧಿಕಾರಿಗಳಿಗೆ ಹಣವು ಬೇಕಾದಷ್ಟು ಸಿಕ್ಕುತ್ತಿತ್ತು. ಈ ವಿಷಯದ ಬಗ್ಗೆ ದೊರೆತ ಎಲ್ಲ ಬರವಣಿಗೆಗಳನ್ನು ಆಂಡ್ರೂಸರು ಓದಿದರು. ಅಸ್ಸಾಂನಲ್ಲಿ ಪ್ರವಾಸ ಮಾಡಿದರು. ಅಂಕಿ ಅಂಶಗಳನ್ನು ಶೇಖರಿಸಿದರು. ಹಾಂಗ್‌ಕಾಂಗ್, ಮಲಯ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ತಮ್ಮ ತಿಳಿವಳಿಕೆಯನ್ನು ಹೆಚ್ಚಿಸಿಕೊಂಡರು. ಅಂಕಿ ಅಂಶಗಳನ್ನು ಶಾಸನ ಸಭೆಗಳ ಸದಸ್ಯರಿಗೆ ಒದಗಿಸಿಕೊಟ್ಟರು. ಶಾಸನ ಸಭೆಯಲ್ಲಿ ಭಾರತ ಸರ್ಕಾರಕ್ಕೆ ಸೋಲಾಯಿತು.

ಬಂಗಾಳದಲ್ಲಿ ಕ್ಷಾಮವು ತಲೆದೋರಿದಾಗ, ಒರಿಸ್ಸಾ ಪ್ರಾಂತದಲ್ಲಿ ಮಹಾನದಿಯ ಪ್ರವಾಹ ಬಂದಾಗ, ಬಿಹಾರದಲ್ಲಿ ಭೂಕಂಪವಾದಾಗ ಆಂಡ್ರೂಸರು ಆ ಸ್ಥಳಗಳಿಗೆ ಧಾವಿಸಿ ದೀನರ ಸೇವೆಯನ್ನು ಮಾಡಿದರು.

ಆಂಡ್ರೂಸರು ಭಾರತದಲ್ಲಿ ನೆಲೆಸಿ ೩೩ ವರ್ಷಗಳಾಗಿದ್ದವು. ಫಿಜಿಯಲ್ಲಿ ಕಳೆದ ಕೆಲವು ದಿನಗಳು, ದಕ್ಷಿಣ ಆಫ್ರಿಕದಲ್ಲಿ ಕಳೆದ ಕೆಲವು ದಿನಗಳನ್ನು ಬಿಟ್ಟರೆ ಉಳಿದ ಸಮಯವನ್ನೆಲ್ಲ ಅವರು ಭಾರತದಲ್ಲೇ ಕಳೆದಿದ್ದರು.

ಗಾಂಧೀಜಿಯ ಗೆಳೆಯ

ಗಾಂಧೀಜಿಯವರು ಭಾರತದ ಭವಿಷ್ಯವನ್ನು ರೂಪಿಸಲು ಪಂಚಸೂತ್ರವನ್ನು ರೂಪಿಸಿದ್ದರು. ಅಸ್ಪೃಶರ ಉದ್ಧಾರ, ಹಿಂದು ಮುಸ್ಲಿಂ ಸಹೋದರತ್ವ, ಸ್ತ್ರೀಯರಿಗೆ ಗೌರವ, ಮದ್ಯ ಮತ್ತು ಮಾದಕ ಪದಾರ್ಥಗಳನ್ನು ದೂರವಿಡುವುದು ಮತ್ತು ಸ್ವದೇಶಿವ್ರತದ ಆಚರಣೆ- ಇವೇ ಪಂಚಸೂತ್ರಗಳು. ಈ ಸೂತ್ರಗಳನ್ನು ಆಂಡ್ರೂಸರು ಬಹುವಾಗಿ ಮೆಚ್ಚಿಕೊಂಡಿದ್ದರು. ಆಂಡ್ರೂಸರು ಹೇಳುತ್ತಿದ್ದರು : “ಹರಿಜನರು ಅಸ್ಪೃಶ್ಯರೆಂದು ದೂರದಲ್ಲಿಟ್ಟರೆ ಭಾರತಕ್ಕೆ ಸ್ವಾತಂತ್ರ್ಯವು ಖಂಡಿತ ದೊರಕುವುದಿಲ್ಲ. ಹಿಂದುಳಿದ ಜನರಿಗೆ ಸ್ವಾತಂತ್ರ್ಯ ಕೊಡದಿದ್ದರೆ ಭಾರತ, ನನ್ನ ಪ್ರೀತಿಯ ಭಾರತವಾಗಲು ಸಾಧ್ಯವಿಲ್ಲ.”

ಗಾಂಧೀಜಿ ಎಂದರೆ ಆಂಡ್ರೂಸರಿಗೆ ಅಪಾರ ಗೌರವ. ಆದರೆ ಅವರು ತಮ್ಮ ಸ್ವತಂತ್ರ ವಿಚಾರ ರೀತಿಯನ್ನು ಬಿಡುತ್ತಿರಲಿಲ್ಲ. ಗಾಂಧೀಜಿಯ ಅಭಿಪ್ರಾಯ ಅಥವಾ ಹೆಜ್ಜೆ ಸರಿಯಲ್ಲ ಎಂದು ಕಂಡರೆ ಹಾಗೇ ಹೇಳುತ್ತಿದ್ದರು.

ಗಾಂಧೀಜಿ ಸ್ವದೇಶಿ ಆಚರಣೆಯ ಮಂತ್ರ ಹೇಳುತ್ತ ವಿದೇಶಿ ವಸ್ತ್ರಗಳನ್ನು ಸುಡಿಸಿದಾಗ ಆಂಡ್ರೂಸರು ನೊಂದು ಬರೆದರು. ಬೇರೆ ದೇಶಗಳ ಬಟ್ಟೆಗಳನ್ನು ಸುಡುವುದರಿಂದ ಜನಕ್ಕೆ ಭಾರತವೂ ಪ್ರಪಂಚದ ಒಂದು ಭಾಗ ಎನ್ನುವುದು ಮರೆತುಹೋಗಬಹುದು ಎಂಬ ಅನುಮಾನವನ್ನು ತಿಳಿಸಿದರು.

ಆಂಡ್ರೂಸರ ದೇಹಪ್ರಕೃತಿ ಮೊದಲಿನಿಂದಲೂ ಬಹು ಸೂಕ್ಷ್ಮ. ಆಗಾಗ ಕಾಯಿಲೆ ಬೀಳುತ್ತಿದ್ದರು. ೧೯೪೦ರ ಏಪ್ರಿಲ್ ೫ ರಂದು, ತಮ್ಮ ಎಪ್ಪತ್ತನೆಯ ವಯಸ್ಸಿನಲ್ಲಿ ದೀನಬಂಧು ಇನ್ನಿಲ್ಲವಾದರು.

ಎಲ್ಲ ಇತರರಿಗೆ

ಆಂಡ್ರೂಸರು ಇಂಗ್ಲೆಂಡಿನಿಂದ ಬಂದು ಭಾರತೀಯರಿಗಾಗಿ ಮಾಡಿದ ಸೇವೆ ಅಪಾರ. ಬಡವರಾಗಿಯೇ ಬಾಳಿದರು. ಭಾರತೀಯರಿಗೆ ಎಲ್ಲಿ ಕಷ್ಟ ಬಂದರೆ ಅಲ್ಲಿ ಆಂಡ್ರೂಸರು ಸಿದ್ಧ. ಆಂಡ್ರೂಸರು ಪ್ರಪಂಚವನ್ನೆಲ್ಲ ಸುತ್ತಿದವರು. ಇದೆಲ್ಲದರ ವೆಚ್ಚವನ್ನು ಅವರು ಹೇಗೆ ತಡೆದುಕೊಂಡರು ಎನ್ನುವುದು ಯಾರಿಗೂ ತಿಳಿಯದ ವಿಷಯ. ಆಂಡ್ರೂಸರ ಬಳಿ ಯಾವಾಗಲೂ ಹಣವಿರುತ್ತಿರಲಿಲ್ಲ.

ಆಂಡ್ರೂಸರಿಗೆ ಉಡುಗೊರೆಗಳು ರಾಶಿರಾಶಿಯಾಗಿ ಬರುತ್ತಿದ್ದವು. ಆದರೆ ಅವುಅಷ್ಟೇ ಬೇಗ ದೀನರ ಸೇವೆಗೆ ಮೀಸಲಾಗುತ್ತಿದ್ದವು. ಕೆಲವೊಮ್ಮೆ ಅವರ ಸಹಾಯವನ್ನು ದುರುಪಯೋಗಪಡಿಸಿಕೊಂಡವರೂ ಉಂಟು. ಒಮ್ಮೆ ಭಿಕ್ಷುಕನೊಬ್ಬ ಮದ್ರಾಸಿಗೆ ಹೋಗಲು ಹಣಕ್ಕಾಗಿ ಆಡ್ರೂಸರನ್ನು ಬೇಡಿದ. ಸಹಾಯ ಪಡೆದ ಭಿಕ್ಷುಕ ಕೆಲವು ದಿನಗಳ ಬಳಿಕ ಕಲ್ಕತ್ತೆಯ ಬೀದಿಗಳಲ್ಲೇ ತಿರುಗುತ್ತಿದ್ದ. ಇನ್ನೊಮ್ಮೆ ಕಾಗದ ಪತ್ರಗಳನ್ನು ನಕಲು ತೆಗೆಯಲು ವಿದ್ಯಾರ್ಥಿಯೊಬ್ಬನಿಗೆ ಹಣ ಕೊಟ್ಟರು. ಹಣದೊಡನೆ ವಿದ್ಯಾರ್ಥಿಯೂ ಮಾಯ.

ಆಂಡ್ರೂಸರ ಬಳಿ ಯಾವ ವಸ್ತುವೂ ಬಹಳ ದಿನ ಇರುತ್ತಿರಲಿಲ್ಲ. ಒಮ್ಮೆ ಆಂಡ್ರೂಸರಿಗೆ ಅವರ ಮಾರ್ವಾಡಿ ಸ್ನೇಹಿತನೊಬ್ಬ ಚಿನ್ನದ ಗುಂಡಿಗಳನ್ನು ಕೊಟ್ಟಿದ್ದ. ಮತ್ತೆ ಅವರಿಬ್ಬರ ಭೇಟಿಯಾದಾಗ ಚಿನ್ನದ ಗುಂಡಿ ಇನ್ನಾರಿಗೋ ದಾನವಾಗಿ ಹೊರಟುಹೋಗಿತ್ತು. ಹಾಗೆಯೇ ಆಂಡ್ರೂಸರ ಓವರ್‌ಕೋಟ್ ಸಿಮ್ಲಾದ ಬೀದಿಯಲ್ಲಿ ನಡುಗುತ್ತಾ ಕುಳಿತಿರುತ್ತಿದ್ದ ಮುದುಕನ ಪಾಲಾಯಿತು. ತಾವು ಮಳೆಯಲ್ಲಿ ನೆನೆದು, ನಡುಗುತ್ತಾ ಮನೆಗೆ ವಾಪಸಾಗುತ್ತಿದ್ದರು.

ಒಮ್ಮೆ ಸುಶೀಲರುದ್ರರು ಆಂಡ್ರೂಸರಿಗೆ ಸೊಗಸಾದ ಥರ್ಮಾಸ್ ಫ್ಲಾಸ್ಕನ್ನು ಉಡುಗೊರೆಯಾಗಿತ್ತರು. ಅದನ್ನು ರುದ್ರರ ಮಗ ಸುಧೀರನು ವಿದೇಶದಿಂದ ತಂದೆಗೆಂದು ತಂದುಕೊಟ್ಟದ್ದು. ಒಮ್ಮೆ ಹೆಂಗಸೊಬ್ಬಳು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಳಂತೆ. ಅವಳ ಮಗುವಿಗೆ ಥರ್ಮಾಸ್ ಫ್ಲಾಸ್ಕ್‌ನ ಅವಶ್ಯಕತೆಯಿತ್ತು. ಸರಿ, ಆಂಡ್ರೂಸರು ಥರ್ಮಾಸ್ ಫ್ಲಾಸ್ಕ್ ಅವಳಿಗೆ ಉಡುಗೊರೆಯಾಯಿತು.

ಚಳಿಯ ದಿನಗಳು ಅವು. ಆಂಡ್ರೂಸರು ಒಂದು ಬೆಳಿಗ್ಗೆ ರೈಲಿನಲ್ಲಿ ಹೋಗುತ್ತಿದ್ದರು. ಅವರಿದ್ದ ರೈಲು ಒಂದು ನಿಲ್ದಾಣದಲ್ಲಿ ನಿಂತಿತು. ಉಣ್ಣೆಯ ಶಾಲುಗಳನ್ನು ಹೊದ್ದು ಆಂಡ್ರೂಸ್ ಮತ್ತು ಅವರ ಗೆಳೆಯರು ನಿಲ್ದಾಣದಿಂದ ಹೊರಕ್ಕೆ ಹೊರಟರು. ಅಷ್ಟರಲ್ಲಿ ಸ್ಟೇಶನ್ ಮಾಸ್ಟರನ ಕೊಠಡಿ ಮುಂದೆ ದೊಡ್ಡ ಗುಂಪು ಕಂಡಿತು. ಗುಂಪಿನ ಮಧ್ಯೆ ಸ್ಟೇಶನ್‌ಮಾಸ್ಟರನು ನಿಂತು ಒಬ್ಬ ಹೆಂಗಸನ್ನು ವಾಚಾಮಗೋಚರವಾಗಿ ನಿಂದಿಸುತ್ತಿದ್ದನು. ಚಳಿಗೆ ನಡಗುತ್ತಾ, ಆದ ಅಪಮಾನಕ್ಕೆ ತಲೆತಗ್ಗಿಸಿ ಆಕೆ ನಿಂತಿದ್ದಳು. ಸ್ಟೇಶನ್ ಮಾಸ್ಟರನ ಕೊಠಡಿಯಲ್ಲಿದ್ದ ಅಗ್ಗಿಷ್ಟಿಕೆಯಲ್ಲಿ ಅವಳು ಮೈಕಾಯಿಸಿಕೊಂಡದ್ದೇ ಅವಳ ದೊಡ್ಡ ತಪ್ಪಾಗಿತ್ತು. ಆಂಡ್ರೂಸರು ಇದನ್ನೆಲ್ಲಾ ಕೇಳಿ ಸ್ಟೇಶನ್ ಮಾಸ್ಟರನತ್ತ ತಿರುಗಿ, “ನೀನು ಮಾಡಿದ ಕೆಲಸದಿಂದ ನನಗೆ ನಾಚಿಕೆಯಾಗುತ್ತಿದೆ ! ನೀನು ಕ್ರೈಸ್ತನಾಗಿ ಹೀಗೆ ಮಾಡಬಾರದಿತ್ತು, ಸ್ವಲ್ಪವಾದರೂ ಕರುಣೆ ತೋರಿಸಬೇಕಾಗಿತ್ತು” ಎಂದರು.

ತಾವು ಹೊದ್ದಿದ್ದ ಉಣ್ಣೆಯ ಶಾಲನ್ನು ಆಕೆಯ ಕತ್ತಿನ ಸುತ್ತ ಹೊದೆಸಿ ನಡೆದುಬಿಟ್ಟರು.

ನಡೆಯುವುದು ಏಕೆ ?

ಆಂಡ್ರೂಸರು ತಮ್ಮ ಸುತ್ತಮುತ್ತ ನಡೆಯುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಕಲ್ಕತ್ತದಲ್ಲಿ ಸಾಧ್ಯವಾದಷ್ಟೂ ನಡೆದೇ ಹೋಗುತ್ತಿದ್ದರು.

ಅವರ ಸ್ನೇಹಿತರು, “ನೀವು ಏಕೆ ನಡೆದು ಹೋಗುತ್ತೀರಿ ? ಬಸ್ಸನ್ನು ಹಿಡಿದೇಕೆ ಹೋಗಬಾರದು” ಎಂದು ಒಮ್ಮೆ ಕೇಳಿದರು.

ಇದೇ ಸ್ನೇಹಿತರು ಕೆಲವು ದಿನಗಳ ನಂತರ ಒಂದು ಕುತೂಹಲಕಾರಿಯಾದ ಸಂಗತಿಯನ್ನು ಪತ್ರಿಕೆಗಳಲ್ಲಿ ಓದಿದರು.

’ಹತ್ತು ವರ್ಷ ವಯಸ್ಸಿನ ಬಾಲಕರನ್ನು ನಗರವನ್ನು ಶುಚಿಮಾಡಲು ನೆಲಚರಂಡಿಗಳ ಗುಂಡಿಗಳಲ್ಲಿ ಇಳಿಸುತ್ತಿರುವುದನ್ನು ನಾನು ಕಂಡೆ. ಇದನ್ನು ಕಲ್ಕತ್ತೆಯ ಜನ ಹೇಗೆ ಸಹಿಸುತ್ತಾರೋ ! ನಾನು ನಡೆದು ಬರದೆ ಇದ್ದರೆ ಇಂತಹ ವಿಷಯಗಳು ತಿಳಿಯುತ್ತಲೇ ಇರಲಿಲ್ಲ’ ಎಂದಿತ್ತು.

ಅವರ ಸ್ನೇಹಿತರು ತಮಗೆ ಇಂತಹುವನ್ನು ಕಾಣಲು ಕಣ್ಣುಗಳಿರಲಿಲ್ಲವಲ್ಲ ಎಂದುಕೊಂಡರು.

ಮತ್ತೊಮ್ಮೆ ಆಂಡ್ರೂಸರು ಪತ್ರಿಕೆ ಮಾರುವ ಹುಡುಗನೊಬ್ಬನಿಂದ ವೃತ್ತಪತ್ರಿಕೆ ಕೊಂಡರು. ಹಣಕ್ಕಾಗಿ ಜೇಬಿಗೆ ಕೈಹಾಕಿದರೆ ಅಲ್ಲೇನಿದೆ ? ಆಗಲೇ ಅವರ ಬಳಿ ಇದ್ದ ಹಣ ಭಿಕ್ಷುಕರ ಪಾಲಾಗಿತ್ತು. ಹುಡುಗನು ಅವರ ಮುಖವನ್ನು ಒಮ್ಮೆ ದೃಷ್ಟಿಸಿ, “ನೀವು ಆಂಡ್ರೂಸ್ ಸಾಹೇಬರಲ್ಲವೇ? ನಾನು ನಿಮ್ಮಿಂದ ಹಣ ತೆಗೆದುಕೊಳ್ಳಲಾರೆ” ಎಂದು ಹೇಳಿ ತಕ್ಷಣ ಗುಂಪಿನಲ್ಲಿ ಮಾಯವಾದ.

ನನ್ನನ್ನು ಕ್ಷಮಿಸು

ಸಾಮಾನ್ಯ ಜನಕ್ಕೂ ಆಂಡ್ರೂಸರಲ್ಲಿ ಇಂತಹ ಭಕ್ತಿ ಇದ್ದುದು ಆಶ್ಚರ್ಯವಲ್ಲ. ಅವರ ಘನತೆಯನ್ನು ಸಾರುವ ಘಟನೆಗಳು ಲೆಖ್ಖವಿಲ್ಲದಷ್ಟು. ಉದಾಹರಣೆಗೆ-

ಒಂದು ಹಳ್ಳಿ. ಅಲ್ಲಿ ಟೆಲಿಗ್ರಾಫ್ ತಂತಿಗಳನ್ನು ಯಾರೋ ಕತ್ತರಿಸಿದ್ದರು. ಹಳ್ಳಿಯ ಸಿಪಾಯಿಯೊಬ್ಬ ತನ್ನ ಶೌರ್ಯದಿಂದ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದ. ಅವನೇ ತಂತಿ ಕತ್ತರಿಸಿದ ಎಂಬ ಸಂಶಯದ ಮೇಲೆ ಅವನನ್ನುಹಿಡಿದರು. ಬಹಿರಂಗವಾಗಿ ಅವನಿಗೆ ಚಾಟಿಯೇಟುಗಳನ್ನು ಬಿಗಿದರು. ಸಿಪಾಯಿಯು ನಿಜವಾಗಿಯೂ ಏನನ್ನೂ ಅರಿಯದ ನಿರಪರಾಧಿಯಾಗಿದ್ದ. ಆಂಡ್ರೂಸರನ್ನು ಅವನು ಕಂಡಾಗ, ’ಇಲ್ಲಿಂದ ಹೊರಟುಹೋಗು. ನಾನು ಏನನ್ನೂ ಹೇಳಲಾರೆ. ನನಗೆ ಇಂಗ್ಲಿಷರ ಸಹವಾಸ ಸಾಕಾಗಿದೆ’ ನೊಂದ ಸಿಪಾಯಿ ಕೂಗಿದ.

ಆಂಡ್ರೂಸರ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ಮುದಿ ಸಿಪಾಯಿಯನ್ನು ಬಾಚಿ ತಬ್ಬಿಕೊಂಡರು. ’ನನ್ನಿಂದ ಏನು ಸಹಾಯವಾಗಬಹುದು ಹೇಳಿ’, ಆಂಡ್ರೂಸರು ಬೇಡಿದರು.

ಸಿಪಾಯಿಗೆ ಆಶ್ಚರ್ಯ. ಮೆತ್ತಗಾದ ಸಿಪಾಯಿ ತನ್ನ ಷರಟನ್ನು ಬಿಚ್ಚಿದ.

ಅಲ್ಲಿ ಕಂಡದ್ದೇನು? ಆಂಡ್ರೂಸರಿಗೆ ಮಾತನಾಡ ಲಾಗಲಿಲ್ಲ. ನಂಬಲಸಾಧ್ಯವಾದುದು ನಡೆದಿತ್ತು. ಸಿಪಾಯಿಯ ಮೈಮೇಲೆ ಬಾಸುಂಡೆಗಳೆದ್ದಿದ್ದವು.

ಆಂಡ್ರೂಸರು ಬಗ್ಗಿ ಸಿಪಾಯಿಯ ಕಾಲು ಹಿಡಿದರು, “ನನ್ನನ್ನು ಕ್ಷಮಿಸು. ಈ ಪಾಪವು ನನ್ನದು. ಏಕೆಂದರೆ ಇದು ನನ್ನ ದೇಶದವರು ಮಾಡಿದ ಕೆಲಸ.”

“ಕೂಡದು ಸಾಹೇಬರೇ, ನೀವು ಹೀಗೆ ಮಾಡಬಾರದು’ ಕಂಬನಿದುಂಬಿದ ಸಿಪಾಯಿ. “ಕಳೆದ ಆರು ತಿಂಗಳಲ್ಲಿ ನಾನು ಕೇಳಿರುವ ಸಮಾಧಾನದ ನುಡಿ ಇದೊಂದೇ. ನನಗೆ ಇನ್ನೇನೂ ಬೇಡ. ಈಗ ಸಂತೋಷವಾಗಿದ್ದೇನೆ” ಸಿಪಾಯಿಯು ಹೇಳಿದ.

ಆಂಡ್ರೂಸರು ಜನರ ಸೇವೆ ಮಾಡಿದರೂ ಅವರನ್ನು ನಿಂದಿಸುವವರು ಇದ್ದೇ ಇದ್ದರು.

ಒಮ್ಮೆ ಕಾಂಜರಪುರದಲ್ಲಿ ಸ್ವಾಮೀಜಿಯೊಬ್ಬರು ಆಂಡ್ರೂಸರನ್ನು ಟೀಕಿಸಿದರಂತೆ- “ನೀನು ಇಂಗ್ಲಿಷ್ ಸಾಹೇಬರಲ್ಲಿ ಒಬ್ಬ. ಭಾರತದ ಬಡಜನರ ಬವಣೆಗಳ ನಡುವೆ, ಭೋಗ ಜೀವನವನ್ನು ನಡೆಸುತ್ತಾ ನಿಮ್ಮ ಹೊಟ್ಟೆ ಹೊರೆದುಕೊಳ್ಳುತ್ತಿದ್ದೀರಿ ನೀವು ಇಂಗ್ಲಿಷರು !”

ಆಂಡ್ರೂಸರು, ’ಇದು ನನ್ನ ತಮಾಷೆಯಾದ ಚಿತ್ರವಲ್ಲವೆ ?’ ಎನ್ನುತ್ತಿದ್ದರು.

ಎಷ್ಟು ಜನ ತಮ್ಮನ್ನು ತಾವೇ ಹೀಗೆ ಕಾಣಬಲ್ಲರು !

ನಿಷ್ಕಾಮಕರ್ಮ

ಎಷ್ಟೋ ಸಲ ಭಾರತದಲ್ಲಿನ ಚರ್ಚುಗಳಲ್ಲಿ ಅವರಿಗೆ ನೋವಾಗುವ ಪ್ರಸಂಗಗಳು ನಡೆಯುತ್ತಿದ್ದವು. ಬಿಷಪ್ ವೆಸ್ಟ್‌ಕಾಟರು ಕಲ್ಕತ್ತದ ಚರ್ಚಿನ ಸದಸ್ಯನೊಬ್ಬನಿಗೆ ಒಮ್ಮೆ ಆಂಡ್ರೂಸರ ಪರಿಚಯ ಮಾಡಿಕೊಡಲು ಹೋದರು. ಆ ಮನುಷ್ಯ ಕೂಡಲೇ ಕೈ ಹಿಂತೆಗೆದುಕೊಂಡು, ’ನಾನು ಆ ಮನುಷ್ಯನ ಕೈ ಮುಟ್ಟಲಾರೆ, ಅವನು ದೇಶದ್ರೋಹಿ’ ಎಂದನಂತೆ.

ಬಿಷಪ್ ವೆಸ್ಟ್‌ಕಾಟರಿಗೂ ನೋವಾಯಿತು. ಅವರು ಆಂಡ್ರೂಸರತ್ತ ತಿರುಗಿ, “ನಾನು ನಿನ್ನನ್ನು ಇಲ್ಲಿಗೆ ಸಂತೋಷದಿಂದ ಸ್ವಾಗತಿಸುತ್ತೇನೆ, ಚಾರ್ಲಿ. ಆದರೆ ಭಾನುವಾರಗಳಲ್ಲಿ ನೀನು ಬಂದರೆ ಈ ಸದಸ್ಯರು ನಿನ್ನನ್ನು ನೋಯಿಸುವ ಮಾತನಾಡುತ್ತಾರೆ. ಬೇರೆ ದಿನಗಳಲ್ಲಿ ನಿನಗೆ ಬೇಕೆನಿಸಿದಾಗ ಬಾ” ಎಂದರು.

ತಮ್ಮನ್ನು ಜನರು ನಿಂದಿಸಿದಾಗಲೂ ಆಂಡ್ರೂಸರು ಪ್ರತಿ ಮಾತನಾಡಲಿಲ್ಲ. ಆಂಡ್ರೂಸರು ತಮ್ಮ ಗೆಳೆಯರಿಗೆ ಬರೆದ ಪತ್ರದಲ್ಲಿ, “ಶಾಂತಿದೂತನಾಗಿ ಕೆಲಸ ಮಾಡುವುದು ನಿಜವಾಗಿಯೂ ಕಷ್ಟ. ನನ್ನ ಮೇಲೆ ಬಂದ ಆಪಾದನೆಗಳ ಬಗ್ಗೆ ನಾನು ಏನನ್ನೂ ಹೇಳಬಯಸುವುದಿಲ್ಲ. ಅವನ್ನು ಮರೆಯಲು ಪ್ರಯತ್ನಿಸುತ್ತೇನೆ. ಹಿಂದೆ ಬಂದ ಆಪಾದನೆಗಳನ್ನು ಸಹಿಸಲು ಸಾಧ್ಯವಾಗಲಿಲ್ಲ. ಈಗ ನಾನು ಹೆಚ್ಚು ಶಾಂತವಾಗಿದ್ದೇನೆ. ಗೀತೆಯಲ್ಲಿ ಉಪದೇಶಿಸಿರುವ ನಿಷ್ಕಾಮಕರ್ಮದ ವಿಷಯವನ್ನು ಹೆಚ್ಚು ಅರಿತುಕೊಳ್ಳುತ್ತಿದ್ದೇನೆ” ಎಂದರು.

ಯಾವ ಸಮಸ್ಯೆ ಎದುರಾದರೂ ಕೂಲಂಕಷವಾಗಿ ಪರಿಶೀಲಿಸದೇ ಆಂಡ್ರೂಸರು ಕ್ರಮ ಕೈಗೊಳ್ಳುತ್ತಿರಲಿಲ್ಲ. ನಿದ್ರೆಯಿಲ್ಲದೇ ಯಾವಾಗಲೂ ಕೆಲಸ ಮಾಡುತ್ತಿದ್ದರು. ಒಮ್ಮೆ ಗಾಂಧೀಜಿ ಬರೆದರು- “ನೀನು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಬಹಳ ಶ್ರಮ ತೆಗೆದುಕೊಳ್ಳುತ್ತಿ. ಆದರೆ ಪ್ರತಿಯೊಂದು ಸಮಸ್ಯೆಯನ್ನು ಅಷ್ಟು ವಿವರವಾಗಿ ಅಭ್ಯಸಿಸಲು ನಿನಗೆ ಸಮಯದ ಅಭಾವವಿದೆ. ಸ್ವಲ್ಪ ದಿನ ವಿಶ್ರಾಂತಿ ತೆಗೆದುಕೊಳ್ಳಬಾರದೆ ? ಕೆಲಸವೇ ದೇವರು, ಆದರೆ ಅದೇ ಹುಚ್ಚುತನವಾಗಬಾರದಲ್ಲ ?”

ನನ್ನ ಪ್ರಭು ಯೇಸುವಿಗೇ-’

೧೯೩೩ರಲ್ಲಿ ಭಾರತದ ಸ್ನೇಹಿತರೊಬ್ಬರು ಆಂಡ್ರೂಸರಿಗೆ ಕ್ರಿಸ್ತನ ಜೀವನವನ್ನು ಕುರಿತು ಪುಸ್ತಕ ಬರೆಯಲು ಕೇಳಿದರು. ಪುಸ್ತಕವನ್ನು ಬರೆಯುವ ಯೋಜನೆಯನ್ನೇನೋ ಆಂಡ್ರೂಸರು ಹಾಕಿದ್ದರು. ಆದರೆ ಅವರ ಸಮಯದ ಬಹುಭಾಗ ಬಡಜನರ ಸೇವೆಗೆ ಮೀಸಲು. ಕೊನೆಗೂ ಅವರು ಪುಸ್ತಕವನ್ನು ಬರೆಯಲು ಆಗಲಿಲ್ಲ. ಆದರೆ ಕ್ರಿಸ್ತನಂತೆ ಬಾಳಿದರು ಅವರು.

ಒಮ್ಮೆ ಬ್ರಿಟಿಷ್‌ಗಯಾನದ ಗೌರ್ನರ್ ಸರ್ ಗೋರ್ಡನ್ ಗೆಗಿಸ್‌ಬರ್ಗ್ ಆಂಡ್ರೂಸರನ್ನು ನಿರೀಕ್ಷಿಸುತ್ತಾ ಕ್ಲಬ್ ಒಂದರಲ್ಲಿ ಕುಳಿತಿದ್ದರು. ಆಗ ಒಬ್ಬ ಕಾವಲುಗಾರ ಬಂದು ಹೇಳಿದ : “ನಿಮ್ಮನ್ನು ನೋಡಲು ಒಬ್ಬ ಮನುಷ್ಯ ಬಂದಿದ್ದಾನೆ. ನೀವು ಬಂದು ನೋಡಿ, ಅಲ್ಲಿಯವರೆಗೂ ನಾನು ಅವನನ್ನು ಒಳಕ್ಕೆ ಬಿಡಲಾರೆ. ಗೌರ್ನರರು ಕೂಡಲೇ ಬಾಗಿಲಿಗೆ ಧಾವಿಸಿದರು. ಅವರು ಊಹಿಸಿದಂತೆ ಆ ವ್ಯಕ್ತಿ ಆಂಡ್ರೂಸರೇ ! ಹಳೆಯ ಕ್ಯಾನ್‌ವಾಸ್ ಶೂ, ಆಕಾರವೇ ಇಲ್ಲದ ಹಳೆಯ ಫ್ಲಾನಲ್ ಷರಾಯಿ, ದಾರವೆಲ್ಲಾ ಎಳೆಎಳೆಯಾಗಿ ಕಿತ್ತುಬಂದಿರುವ ಷರಟು- ಇವು ಆಂಡ್ರೂಸರ ಅಂದಿನ ಉಡುಪು. ಆಂಡ್ರೂಸರು ಎಂದೂ ಉಡುಪಿಗೆ ಗಮನ ಕೊಟ್ಟವರಲ್ಲ. ಅಂದು ಇನ್ನೂ ಕೇಡು. ಅಲ್ಲಿಗೆ ಬಂದಿದ್ದ ಪ್ರತಿಷ್ಠಿತ ವ್ಯಕ್ತಿಗಳಿಗೆ ಆಂಡ್ರೂಸರನ್ನು ಪರಿಚಯ ಮಾಡಿಕೊಟ್ಟರು. ಊಟ ಮುಗಿದನಂತರ ಆಂಡ್ರೂಸರನ್ನು ಬಾಗಿಲವರೆಗೂ ಬೀಳ್ಕೊಟ್ಟರು. ದೂರ ಮರೆಯಾಗುತ್ತಿದ್ದ ಆಂಡ್ರೂಸರನ್ನೆ ದಿಟ್ಟಿಸುತ್ತ, ತಮ್ಮ ಜೊತೆಯಲ್ಲಿದ್ದವರಿಗೆ ಗೌರ್ನರರು ಹೇಳಿದರು : “ನನ್ನ ಪ್ರಭು ಯೇಸುವಿಗೇ ಭೋಜನ ಮಾಡಿಸುವ ಭಾಗ್ಯ ದೊರೆಯಿತು ಎನ್ನಿಸುತ್ತಿದೆ ನನಗೆ.”