ಹಿಂದೆ ರಾಜಾಶ್ರಯ ಮಠಾಶ್ರಯಗಳಿಂದ ವಿದ್ವಾಂಸರುಗಳು ತಮ್ಮ ವಿದ್ಯೆಯ ಸಾಧನೆಯ ಸಿದ್ಧಿಯಿಂದ ಅವರುಗಳ ಆಶ್ರಯ  ದಾತರಾಗಿರುತ್ತಿದ್ದರು. ಮೈಸೂರು ಅರಸರು ಇದಕ್ಕೆ ಹೊರತಲ್ಲ. ಮೈಸೂರು ಜನತೆಯ ಸೌಜನ್ಯತೆಗೆ ಮಾರುಹೋಗಿ ಅನೇಕ ವಿದ್ವಾಂಸರೂ ಇಲ್ಲಿ ಬಂದಿರುವುದುಂಟು. ಇಂತಹ ಅನೇಕ ವಿದ್ವಾಂಸರುಗಳಲ್ಲಿ ಸೋಮೇಶ್ವರ ಭಾಗವತರು, ಅವರ ತಮ್ಮ ಅರುಣಾಚಲ ಭಾಗವತರು (ವಿದ್ವಾನ್‌ ಟಿ.ಎ.ಎಸ್‌. ಮಣಿಯವರ ತಂದೆ), ಮೃದಂಗ ವಿದ್ವಾನ್‌ ಸಿ.ಕೆ. ಅಯ್ಯಾಮಣಿ ಅಯ್ಯರ್, ಸಿ.ಕೆ. ರಾಮ ಅಯ್ಯರ್ ಮುಂತಾದವರು ಮುಖ್ಯರು. ವಿದ್ವಾಂಸರಾದ ಸಿ.ಕೆ. ಅಯ್ಯಾಮಣಿ ಅಯ್ಯರ್ ರವರು ಬೆಂಗಳೂರಿಗೆ ಬರಲು ಪ್ರಮುಖ ಕಾರಣಕರ್ತರೇ ವಿ. ಸೋಮೇಶ್ವರ ಭಾಗವತರು ಹಾಗೂ ವಿ. ಅರುಣಾಚಲ ಭಾಗವತರು. ಈ ಎರಡು ಕುಟುಂಬಕ್ಕೂ ಇದ್ದ ನಿಕಟ ಬಾಂಧವ್ಯವೇ ಇದಕ್ಕೆ ಪ್ರೇರಣೆ. ಹೀಗಾಗಿ ೧೯೨೨ರಲ್ಲಿ ಅಯ್ಯಾಮಣಿ ಅಯ್ಯರ್ ರವರು ತಮ್ಮ ೧೪ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದು ಇಲ್ಲೇ ನೆಲಸಿದರು.

ಅಯ್ಯಾಮಣಿ ಅಯ್ಯರ್ ರವರು ೧೫.೫.೧೯೦೮ರಂದು ಪಾಲ್ಘಾಟ್‌ ಜಿಲ್ಲೆಗೆ ಸೇರಿದ ಚಂದ್ರಶೇಖರ ಪುರದಲ್ಲಿ ಜನಿಸಿದರು. ಅವರದು ಸಂಗೀತದ ಮನೆತನ. ಸಹಜವಾಗಿ ಸಂಗೀತದತ್ತ ಒಲವು ಹಾಗೂ ಗೀಳು ಬೆಳೆದರೂ ಪ್ರಮುಖ ಆಸಕ್ತಿ ತಾಳ ಲಯದ ಕಡೆಗೆ ಇತ್ತು. ಎಲ್ಲಿಯಾದರೂ ಮೃದಂಗವಾದನದ ಶಬ್ದ ಕೇಳಿದರೆ ಸಾಕು, ಅದನ್ನೇ ತದೇಕಚಿತ್ತದಿಂದ ಮೈಮರೆತು ಆಲಿಸುತ್ತಾ ಕುಳಿತು ಬಿಡುತ್ತಿದ್ದರು. ಇದನ್ನು ಗಮನಿಸಿದ ಇವರ ಹಿರಿಯರು ಹುಡುಗನನ್ನು ಅಂದಿನ ಖ್ಯಾತನಾಮರಾಗಿದ್ದಕ ಹಿರಿಯ ಮೃದಂಗ ವಿದ್ವಾಂಸ ಪಾಲ್ಘಾಟ್‌ ಸುಬ್ಬ ಅಯ್ಯರ್ ಅವರಲ್ಲಿ ಶಿಷ್ಯತ್ವಕ್ಕೆ ಬಿಟ್ಟರು. ಮಹಾವಿದ್ವಾಂಸರಾದ ಮೃದಂಗ ಮಾಂತ್ರಿಕ ಪಾಲ್‌ಘಾಟ್‌ ಮಣಿ ಅಯ್ಯರ್ ರವರೂ ಸುಬ್ಬಅಯ್ಯರ್ ರವರ ಬಳಿ ಶಿಷ್ಯತ್ವದಲ್ಲಿದ್ದರು. ಹೀಗಾಗಿ ಇವರಿಬ್ಬರಲ್ಲಿ ಅನ್ಯೋನ್ಯತೆ ಆತ್ಮೀಯತೆ ಮೂಡಿದ್ದು ಕೊನೆಯವರೆವಿಗೂ ಅಚ್ಚಳಿಯದೇ ಉಳಿದಿತ್ತು.

ಗುರುಗಳು ತಮಗೆ ತಿಳಿದಿದ್ದ ವಿದ್ಯೆಯನ್ನೆಲ್ಲಾ ತುಂಬು ಹೃದಯದಿಂದ ಇವರಿಬ್ಬರಿಗೂ ಧಾರೆ ಎರೆದರು. ಇಬ್ಬರನ್ನು ಎರಡು ಕಣ್ಣುಗಳಂತೆ ನೋಡಿಕೊಂಡರು. ಆದರೂ ಕೆಲವೊಮ್ಮೆ ಅದೃಷ್ಟಲಕ್ಷ್ಮಿ ಕೆಲವರಿಗೆ ಬೇಗ ಒಲಿಯುತ್ತಾಳೆ. ಅದೃಷ್ಟಶಾಲಿಗಳಾದ ಪಾಲ್‌ಘಾಟ್‌ಮಣಿ ಅಯ್ಯರ್ ರವರು ಕೀರ್ತಿ ಶಿಖರವನ್ನೇರಿದರು. ದುರದೃಷ್ಟಶಾಲಿಗಳಾದ ಅಯ್ಯಾಮಣಿ ಅಯ್ಯರ್ ರವರು ಸ್ವಲ್ಪಕಾಲ ನಿಂತಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಒದಗಿಬಂತು. ಆ ಹೊತ್ತಿಗಾಗಲೇ ಇವರು ಪಕ್ಕವಾದ್ಯ ನುಡಿಸುವ ಸಾಮರ್ಥ್ಯ ಗಳಿಸಿದ್ದನ್ನು ಕಂಡ ಸೋಮೇಶ್ವರ ಭಾಗವತರು ಅಯ್ಯರ್ ಅವರನ್ನು ಮುಂದಕ್ಕೆ ತರಲು ನಿಶ್ಚಯಿಸಿ ಅದರಂತೆ ತಾವು ಹಾಡುವ ಅನೇಕ ವೇದಿಕೆಗಳಲ್ಲಿ ಇವರಿಗೆ ಪಕ್ಕವಾದ್ಯ ನುಡಿಸುವ ಅವಕಾಶ ಕಲ್ಪಿಸಿದರು. ಅಯ್ಯಾಮಣಿ ಅಯ್ಯರ್ ರವರಿಗೆ ಸಹಜವಾಗಿಯೇ ಇವರಲ್ಲಿ ಗುರುಭಾವನೆ ಉಂಟಾಯಿತು. ಮುಂದೆ ಬೆಂಗಳೂರಿಗೆ ಬಂದು ನೆಲೆಸಿದ್ದ ಸೋಮೇಶ್ವರ ಭಾಗವತರು ಅಯ್ಯಾಮಣಿ ಅಯ್ಯರ್ ರವರನ್ನು ಬೆಂಗಳೂರಿಗೆ ಕರೆಸಿಕೊಂಡು ಇಲ್ಲಿಯೇ ಅವರು ನೆಲೆ ನಿಲ್ಲಲು ಸಹಾಯ ಮಾಡಿದರು. ವಿದ್ಯಾಪಕ್ಷಪಾತಿಗಳಾದ “ಸಂಗೀತ ಕಲಾನಿಧಿ” ಮೈಸೂರು ಟಿ. ಚೌಡಯ್ಯನವರಿಗೆ ಇವರನ್ನು ಪರಿಚಯಿಸಿದರು. ತಮ್ಮ ಎಲ್ಲಾ ಕಚೇರಿಗಳಲ್ಲಿಯೂ ಅಯ್ಯಾಮಣಿ ಅಯ್ಯರ್ ರವರಿಗೆ ಸೂಕ್ತವಾದ ವೇದಿಕೆ ಕಲ್ಪಿಸಿಕೊಟ್ಟು ಬಹುಬೇಗ ಮುಂದೆ ಬರಲು ಸಹಾಯಕರಾಗಿ ಮಾರ್ಗದರ್ಶಕರೂ ಆದರು ಚೌಡಯ್ಯನವರು.

ಮುಂದೆ ಇವರು ಆ ಹೊತ್ತಿಗೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಚಿಂತಲಪಲ್ಲಿ ರಾಮಚಂದ್ರರಾಯರು, ವೀಣಾ ದೊರೆಸ್ವಾಮಿ ಅಯ್ಯಂಗಾರ್, ಆರ್.ಕೆ. ಶ್ರೀಕಂಠನ್‌ ಮುಂತಾದ ದಿಗ್ಗಜರುಗಳಿಗೆ ಮೃದಂಗ ಪಕ್ಕವಾದ್ಯ ನುಡಿಸಿ ಅತಿ ಶೀಘ್ರದಲ್ಲೇ ಯಶಸ್ಸಿನ ಸೋಪಾನವನ್ನೇರುತ್ತಾ ಹೋದರು.

ಚಿಂತಲಪಲ್ಲಿ ರಾಮಚಂದ್ರರಾವ್‌-ಆರ್.ಆರ್. ಕೇಶವಮೂರ್ತಿ, ಸಿ.ಕೆ. ಅಯ್ಯಾಮಣಿ ಅಯ್ಯರ್ ತ್ರಯವೆಂದರೆ ನಾಡಿನ ಹೊರನಾಡಿನ ಎಲ್ಲ ಕಡೆಗಳಲ್ಲಿಯೂ ಜನಜನಿತವಾಗಿ ಕಚೇರಿಗಳಿಗೆ ಶ್ರೋತೃಗಳ ಸಮೂಹವೇ ನೆರೆಯುತ್ತಿತ್ತು. ಭಾಗವತ ಸಹೋದರರ ಜೋಡಿಯು ಸಹಾ ಇದಕ್ಕೆ ಇನ್ನೊಂದು ನಿದರ್ಶನ. ಇದಲ್ಲದೆ ಆರ್.ಆರ್. ಕೇಶವಮೂರ್ತಿಗಳವರ ಏಳುತಂತಿ ಪಿಟೀಲು ತನಿವಾದನ ಅಯ್ಯಾಮಣಿ ಅಯ್ಯರ್ ರವರ ಮೃದಂಗ ಸಾಕಷ್ಟು ಪ್ರಚಾರದಲ್ಲಿದ್ದು ಇಬ್ಬರೂ ಒಂದು ರೀತಿಯಲ್ಲಿ ಅಶ್ವಿನಿ ದೇವತೆಗಳಂತೆ ಮೆರೆದರು. ಇದೇರೀತಿ ಹಾರ್ಮೋನಿಯಂ ಸಾರ್ವಭೌಮ ಅರುಣಾಚಲಪ್ಪ ಮತ್ತು ಇವರ ಜೋಡಿ. ಕೇವಲ ನಮ್ಮ ನಾಡಿನ ವಿದ್ವಾಂಸರೇ ಅಲ್ಲದೇ ಹೊರನಾಡಿನ ವಿದ್ವಾಂಸರುಗಳೂ ಸಹಾ ಇವರನ್ನೇ ಪಕ್ಕವಾದ್ಯಕ್ಕೆ ಹಾಕಿಕೊಳ್ಳುತ್ತಿದ್ದರು. ಇದಕ್ಕೆ ಕಾರಣ ಇವರ ನಿಷ್ಕಾಪಟ್ಯ ಹಾಗೂ ಅನುಸರಣೆ. ಟಿ.ಎಂ. ಪುಟ್ಟಸ್ವಾಮಯ್ಯ(ಮೂಗಯ್ಯನವರು), ಹೆಚ್.ಪುಟ್ಟಾಚಾರ್ ಇವರ ಸಮಕಾಲೀನರು. ಚೌಡಯ್ಯನವರು ತಾವು ಯಾವುದೇ ಕಚೇರಿಗೆ ಹೋಗಲಿ ಜೊತೆಯಲ್ಲಿ ಅಯ್ಯಾಮಣಿ ಅವರನ್ನೇ ಕರೆದೊಯ್ಯುತ್ತಿದ್ದುದು ಅವರ ಪ್ರತಿಭೆ, ಪಾಂಡಿತ್ಯಕ್ಕೆ ಸಾಕ್ಷಿಯಾಗಿತ್ತು.

ಇವರ ಪಾಠಕ್ರಮವೂ ಅತ್ಯಂಥ ವಿಶಿಷ್ಟರೀತಿಯಿಂದ ಕೂಡಿತ್ತು. ಗುರುಕುಲ ಪದ್ಧತಿಯಲ್ಲಿ ತಮ್ಮ ಅಪಾರ ಶಿಷ್ಯಸಂಪತ್ತನ್ನು ಬೆಳೆಸಿಕೊಂಡಿದ್ದರು. ಹಿರಿಯ ಮೃದಂಗ ವಾದಕರುಗಳಾದ ವಿ.ವಿ. ರಂಗನಾಥನ್‌, ಕೆ.ಎನ್‌.ಕೃಷ್ಣಮೂರ್ತಿ, ಟಿ.ಎ.ಎಸ್‌.ಮಣಿ, ಗುಂಡಪ್ಪ, ಬಿ.ಕೆ. ಚಂದ್ರಮೌಳಿ, ಮುಂತಾದವರುಗಳು ಇವರ ಪ್ರಮುಖ ಶಿಷ್ಯರುಗಳು. ಬರೀ ಮರದ ಕಟ್ಟೆಯಲ್ಲಿಯೇ ಶಬ್ದಾಕ್ಷರಗಳನ್ನು ನುಡಿಸುವ ಪದ್ಧತಿಯಲ್ಲಿ ಶಿಕ್ಷಣ ಕ್ರಮ ಬೋಧಿಸುವ ಅಯ್ಯಾಮಣಿ ಅವರು ಇದರಿಂದ ಕೈಬೆರಳುಗಳು ಒಂದು ಹದಕ್ಕೆ ಬರುತ್ತವೆ ಎನ್ನುತ್ತಿದ್ದರು. ಶಿಷ್ಯರನ್ನು ತಮ್ಮ ಸ್ವಂತ ಮಕ್ಕಳಂತೆ ಬೆಳೆಸುತ್ತಾ ವಾತ್ಸಲ್ಯದಿಂದ ಪಾಠ ಹೇಳುತ್ತಿದ್ದರು. ಆದರೂ ಪಾಠ ಕ್ರಮ ಮಾತ್ರ ಅತ್ಯಂತ ಕಟ್ಟುನಿಟ್ಟು.

ಸ್ವಭಾವತಃ ಇವರು ತುಂಬಾ ಸಂಕೋಚ ಪ್ರವೃತ್ತಿಯವರು. ಮಿತ ಭಾಷಿ, ಸ್ವಾಭಿಮಾನಿ, ಪ್ರಚಾರ ಪ್ರಿಯರಲ್ಲ. ತಮ್ಮ ಘನತೆಗೆ ಸರಿಹೋಗುವಂತಹ ಕಚೇರಿಗಳಿಗೆ ಮಾತ್ರ ಪಕ್ಕವಾದ್ಯ ನುಡಿಸುತ್ತಿದ್ದರು. ಇವರು ಎಂದೂ ಮೃದಂಗ ಬಾರಿಸಿದವರಲ್ಲ, ನುಡಿಸುತ್ತಿದ್ದವರು. ಅವರ ಹಸ್ತದಲ್ಲಿ, ಬೆರಳುಗಳಲ್ಲೇ ನಾದ ಅಡಗಿತ್ತು. ಇಂತಹ ನಾದ ಶೇಕಡಾ ಮೂರರಿಂದ ಐದು ವಾದಕರಿಗೆ ಬರಲು ಸಾಧ್ಯ. ಇಂತಹ ಅದೃಷ್ಟ ಮಹಾವಿದ್ವಾಂಸರಾದ ಅಯ್ಯಾಮಣಿ ಅಯ್ಯರ್ ರವರಿಗೆ ಒಲಿದಿತ್ತು. ಈ ನಾದ ಸೌಖ್ಯವನ್ನೇ ತನ್ನ ಜೀವನದುದ್ದಕ್ಕೂ ರೂಢಿಸಿಕೊಂಡು ಅದರಲ್ಲೇ ತಲ್ಲೀನರಾಗಿದ್ದ ಅಯ್ಯಾಮಣಿ ಅವರು ದಿನಾಂಕ ೯.೪.೧೯೭೬ ರಂದು ಹರಿಪಾದ ಸೇರಿದರು. ಆದರೆ ಅವರ ವಿದ್ವತ್ತು, ನಾದ ಅಪಾರ ಶಿಷ್ಯಕೋಟಿಯ ಮೂಲಕ ಇಂದಿಗೂ ಸಂಗೀತ ಕ್ಷೇತ್ರದಲ್ಲಿ ತನ್ನ ಶಾಶ್ವತ ಸ್ಥಾನ ಗಳಿಸಿಕೊಂಡಿದೆ.