ಜನನ: ೧-೧೨-೧೯೩೩ ಚಿತ್ರದುರ್ಗದಲ್ಲಿ

ಮನೆತನ: ಕಲಾವಿದರ ಮನೆತನ.

ಗುರುಪರಂಪರೆ: ಮೊದಲಿಗೆ ಚಿಂತಲಪಲ್ಲಿ ಕೃಷ್ಣಮೂರ್ತಿ ಅವರಲ್ಲಿ ಸಂಗೀತ ಶಿಕ್ಷಣ ಪ್ರಾರಂಭಿಸಿ ಮುಂದೆ ಚಿಂತಲಪಲ್ಲಿ ವೆಂಕಟರಾವ್ ಹಾಗೂ ರಾಮಚಂದ್ರರಾವ್ ಅವರಿಂದ ಉನ್ನತ ಮಾರ್ಗದರ್ಶನ ಪಡೆದು ಸ್ವಸಾಧನೆಯಿಂದ ಸುಗಮ ಸಂಗೀತವನ್ನು ಹಾಡಲು ರೂಢಿಸಿಕೊಂಡವರು.

ಸಾಧನೆ: ೧೯೫೦ರಲ್ಲಿ ಮಲ್ಲೇಶ್ವರ ರಾಮ ಮಂದಿರದ ಸಭಾಂಗಣದಲ್ಲಿ ಹಾಡುವ ಮೂಲಕ ಪ್ರಥಮ ರಂಗ ಪ್ರವೇಶ. ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತಗಳೆರಡಲ್ಲೂ ಕಾರ್ಯಕ್ರಮ ನೀಡಲು ಪ್ರಾರಂಭಿಸಿ ಅಂದು ಪ್ರಚಲಿತದಲ್ಲಿದ್ದ ಅಡಿಗರ ಕವನಗಳು, ರಂ. ಶ್ರೀ ಮುಗಳಿ, ಎಸ್. ಅನಂತನಾರಾಯಣ ಅವರ ಕವನಗಳನ್ನು ಹೆಚ್ಚು ಜನಪ್ರಿಯಗೊಳಿಸಿದವರು. ಮತ್ತೊಬ್ಬ ಗಾಯಕಿ ವೈ. ಎಸ್. ಇಂದಿರ ಹಾಗೂ ತಾರಾ ಅವರ ಯುಗಳ ಗಾಯನ ಆ ಕಾಲಕ್ಕೆ ಅತ್ಯಂತ ಜನಪ್ರಿಯತೆ ಗಳಿಸಿತ್ತು. ೧೯೫೧ರಲ್ಲೇ ಆಕಾಶವಾಣಿ ಕಲಾವಿದೆಯಾಗಿ ಆಯ್ಕೆಯಾಗಿ ಕೇವಲ ಗಾಯನ ಮಾತ್ರವಲ್ಲದೆ ರಾಗ ಸಂಯೋಜನೆಯನ್ನೂ ಮಾಡಿ ನಿರ್ದೇಶನ ಸಹ ಮಾಡಿದ್ದಾರೆ. ರಾಜ್ಯ, ಹೊರ ರಾಜ್ಯಗಳಲ್ಲಿ ಸಂಚರಿಸಿ ಕಾರ್ಯಕ್ರಮಗಳನ್ನು ನೀಡಿ ಜನಪ್ರಿಯರಾದವರು. ಇಂದು ಸಹ ನಿತ್ಯೋತ್ಸಾಹಿಯಾಗಿ ಕಾರ್ಯಕ್ರಮ ನೀಡುವುದರ ಜೊತೆಗೆ ಸಂಗೀತ ಶಿಕ್ಷಣವನ್ನು ನೀಡುತ್ತಾ ಅನೇಕ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದಾರೆ.

ಪ್ರಶಸ್ತಿ-ಸನ್ಮಾನ: ೧೯೮೧-೮೨ರಲ್ಲಿ ಕರ್ನಾಟಕ ಸಂಗೀತನೃತ್ಯ ಅಕಾಡೆಮಿ ನೀಡುತ್ತಿದ್ದ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ ಅನಂತರ ೧೯೮೯ರಲ್ಲಿ ಕರ್ನಾಟಕ ಕಲಾತಿಲಕ ಪ್ರಶಸ್ತಿಗೆ ಭಾಜನರಾದರು. ೧೯೯೭ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದರೆ ೨೦೦೭ರಲ್ಲಿ ಪ್ರತಿಷ್ಠಿತ ಸಂತ ಶಿಶುನಾಳ ಶರೀಫ ಪ್ರಶಸ್ತಿ ಇವರಿಗೆ ದೊರೆತಿದೆ. ಶ್ರೀ ತ್ಯಾಗರಾಜ ಗಾನ ಸಭಾ, ನಾದಜ್ಯೋತಿ ಶ್ರೀ ತ್ಯಾಗರಾಜ ಭಜನ ಸಭಾ, ಮೈಸೂರಿನ ಗುರುಕೃಪಾ ಸಂಗೀತ ಕೇಂದ್ರದಿಂದ ಗೌರವಿಸಿ ಸನ್ಮಾನಿಸಲ್ಪಟ್ಟಿದ್ದಾರೆ. ೨೦೦೮ರಲ್ಲಿ ಬೆಂಗಳೂರು ಗಾಯನ ಸಮಾಜದ ಸಂಗೀತ ಸಮ್ಮೇಳನದಲ್ಲಿ ವರ್ಷದ ಕಲಾವಿದೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.