ಭಾರತ ಕ್ರಿಕೆಟ್ ರಂಗದ ಧೀರ ಗಂಭೀರ ನಾಯಕ ಕೊಟ್ಟಾರಿ ಕನಕಯ್ಯ ನಾಯುಡು.

ಎತ್ತರದ ನಿಲುವು, ದೃಢಕಾಯ, ಗಂಭಿರ ನಡೆನುಡಿ, ಕಿರಿಯರನ್ನು ಕಂಡರೆ ಆತ್ಮೀಯತೆ, ಅಗತ್ಯ ಬಿದ್ದಾಗ ಮಾರ್ಗದರ್ಶನ, ತನ್ನ ಕಲಾಪ್ರಪೂರ್ಣತೆಯಿಂದ ಉಳಿದವರಿಗೆ ಸ್ಫೂರ್ತಿ, ಎದುರಾಳಿಯ ಅಳುಕುಗಳನ್ನು ಶರವೇಗದಲ್ಲಿ ಪತ್ತೆ ಹಚ್ಚುವ ಕುಶಾಗ್ರಮತಿ, ತನ್ನ ಸುಗಮ ಸಿಕ್ಸರ್‌ಗಳ ಮೂಲಕ ಕ್ರಿಕೆಟ್ ಪ್ರೇಕ್ಷಕರ ಮನ ತಣಿಸಿದ ಧೀಮಂತ- ದಿವಂಗತ ಕರ್ನಲ್ ಸಿ. ಕೆ. ನಾಯುಡು.

ನೀಳಕಾಯ. ಎತ್ತರಕ್ಕೆ ತಕ್ಕಂತೆ ವಿಶಾಲ ಎದೆ. ಮೊದಲ ನೋಟಕ್ಕೆ ಒರಟು ಸ್ವಭಾವದವರಂತೆ ಕಂಡು ಬಂದರೂ ಸ್ವಲ್ಪ ಪರಿಚಿತರಾಗುತ್ತಲೇ ಸರಳತೆಯ ಸೌಮ್ಯ ಮೂರ್ತಿ-ಸಿ.ಕೆ.ನಾಯುಡು.

ಉತ್ತಮ ನಾಯಕತ್ವ, ಬಿರುಸಿನ ಸಿಕ್ಸರ್‌ಗಳನ್ನು ಲೀಲಾಜಾಲವಾಗಿ ಬಾರಿಸಬಲ್ಲ ಚಾತುರ್ಯ, ಫೀಲ್ಡಿಂಗ್ನಲ್ಲಿ ಓಡುತ್ತಲೇ ಚೆಂಡು ಹಿಡಿದು ವಿಕೆಟ್‌ನತ್ತ ನೇರವಾಗಿ ಎಸೆವ ಜಾಣ್ಮೆ, ಬುದ್ಧಿವಂತಿಕೆಯ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳ ವಿಕೆಟ್‌ ಉದುರಿಸುವ ಸಾಮರ್ಥ್ಯ-ಇವೆಲ್ಲ ಕೂಡಿದ ನಾಯುಡು ಭಾರತದ, ವಿಶ್ವದ ಕ್ರೀಡಾಭಿಮಾನಿಗಳ ಮನ ತಣಿಸಿದ ಕ್ರೀಡಾಪಟು.

ಉತ್ತಮ ಕ್ರೀಡಾಪಟು ಹೇಗಿರಬೇಕು ಎಂದರೆ ಸಿ.ಕೆ. ನಾಯುಡು ಅವರನ್ನು ನೋಡು ಎನ್ನಬಹುದಿತ್ತು. ಅವರ ನಡೆ, ನುಡಿ, ಸರಳತೆ, ಸೌಜನ್ಯ, ಸೋಲಿನಲ್ಲಿ ಕುಗ್ಗದೆ, ಗೆಲುವಿನಲ್ಲಿ ಹಿಗ್ಗದೆ ಇರುವ ಸಮಾನಚಿತ್ತ, ಕಿರಿಯರ ಮುನ್ನಡೆಯಲ್ಲೆ ಮನಸ್ಸಿಟ್ಟು ಅವರಿಗೆ ಆಡುತ್ತಿದ್ದ ಪ್ರೋತ್ಸಾಹದ ಮಾತು, ಕೊಡುತ್ತಿದ್ದ ಉತ್ತಮ ಸೂಚನೆಗಳು ಎಲ್ಲರಿಗೂ ಅನುಕರಣೀಯ. ವೈಯಕ್ತಿಕ ಪ್ರತಿಭೆಗಿಂತ ತಂಡದ ಮೇಲ್ಮೆ ಹೆಚ್ಚು ಎಂಬುದನ್ನು ಆಡಿ ತೋರಿಸಿ ಉಳಿದವರಿಗೆ ಮಾರ್ಗದರ್ಶಕರಾಗಿದ್ದವರು ಅವರು.

ಮಾಂತ್ರಿಕ ಆಟಗಾರ

ಎಲ್ಲಕ್ಕಿಂತ ಮಿಗಿಲಾಗಿ ಕ್ರಿಕೆಟ್ ಪ್ರೇಮಿಗಳಲ್ಲಿ ನಾಯುಡು ಬಗ್ಗೆ ಅಭಿಮಾನ ಮೂಡಿಸಿದುದು ಅವರು ಶ್ರಮಪಡದೆ ಬಾರಿಸುತ್ತಿದ್ದ ಸಿಕ್ಸರ್‌ಗಳು. ಯಾವ ಬೌಲರೇ ಆದರೂ ಚೆಂಡನ್ನು ಬೌಂಡರಿಯಾಚೆಗೆ ಬಾರಿಸುವ ಕಲೆ ಅವರಿಗೆ ಕರತಲಾಮಲಕ.

ನಾಯುಡು ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದರೆಂದರೆ ವಾತಾವರಣವೇ ಬದಲಾಗುತ್ತಿತ್ತು. ಅಷ್ಟೇನೂ ಆಸಕ್ತಿ ಇಲ್ಲದವರೂ ಕಣ್ಣುಜ್ಜಿಕೊಂಡು ಆಸನದ ತುದಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಅನಂತರ ಕಣ್ಣಿಗೊಂದು ಹಬ್ಬ. ಈ ನೀಳಕಾಯ ಮೈದಾನದ ಮಧ್ಯದಲ್ಲಿ ಇರುವವರೆಗೂ ಪ್ರೇಕ್ಷಕರಿಗೆ ಬೌಲರ್‌ಗಳ, ಫೀಲ್ಡರುಗಳ ಬಗ್ಗೆ ಆಸಕ್ತಿ ಮಾಯವಾಗುತ್ತಿತ್ತು. ಆಸಕ್ತಿ ಮಾಯವಾಗುತ್ತಿತ್ತು. ಆಸಕ್ತಿ ಇರುತ್ತಿದ್ದುದೆಲ್ಲ ಒಬ್ಬರಲ್ಲಿಯೇ – ಅವರು ನಾಯುಡು. ಈ ಹಿರಿಯ ಆಟಗಾರನಿಂದ ನಿರರ್ಗಳವಾಗಿ ರನ್ನುಗಳು ಬರುವುದನ್ನು ಕಂಡು ಅಭಿಮಾನಿಗಳು ಮಂತ್ರಮುಗ್ಧರಾಗುತ್ತಿದ್ದರು. ಅವರಿಗೆ ಸಂತೋಷವೋ ಸಂತೋಷ. ನಾಯುಡು ಕೇವಲ ಮಣಿಕಟ್ಟು ತಿರುವುದರಿಂದ ಚೆಂಡು ಆಕಾಶದಲ್ಲಿ ಹಾರುತ್ತ ಮೈದಾನದ ಹೊರಗೆಲ್ಲೋ ಇಳಿಯುತ್ತಿದ್ದುದನ್ನು ನೋಡಿ ಪ್ರೇಕ್ಷಕರು ಆನಂದ ಮತ್ತು ತೃಪ್ತಿಯಿಂದ ಉಬ್ಬುವುದನ್ನು ಕಾಣಬಹುದಿತ್ತು. ಈ ಅಸಾಮಾನ್ಯ ಕ್ರೀಡಾಪಟು ಆಡುತ್ತಿರುವವರೆಗೆ ಎಂತಹ ಪ್ರಬಲ ಬೌಲರ್ ಕೂಡಾ ನಿಶ್ಯಕ್ತನಾಗುತ್ತಿದ್ದ.

ಕೊಟ್ಟಾರಿ ಕನಕಯ್ಯ ನಾಯುಡು ಭಾರತದ ಕ್ರಿಕೆಟ್ ರಂಗದಲ್ಲಿ ನಲವತ್ತಕ್ಕೂ ಹೆಚ್ಚು ವರ್ಷ ಅದ್ವಿತೀಯರಾಗಿ ಮೆರೆದರು. ಅಂದರೆ ಈ ದೀರ್ಘ ಅವಧಿಯಲ್ಲಿ ಬೇರೆ ಉತ್ತಮ ಆಟಗಾರರು ಇರಲಿಲ್ಲವೆಂದೇನಲ್ಲ. ಆದರೆ ಈತನ ಪ್ರತಿಭೆಯ ಮುಂದೆ ಅವರು ಶೋಭಿಸದಾದರು, ಅಷ್ಟೆ..

ಬಾಲ್ಯ

ನಾಯುಡು ೧೮೯೫ ರ ಅಕ್ಟೋಬರ್ ೩೧ ರಂದು ನಾಗಪುರದಲ್ಲಿ ಹುಟ್ಟಿದರು. ಇವರ ಹಿಂದಿನವರು ಮದ್ರಾಸಿನಿಂದ ನಾಗಪುರಕ್ಕೆ ಬಂದು ನೆಲಸಿದ್ದರು. ತಂದೆ ಮತ್ತು ಚಿಕ್ಕಪ್ಪ ಇಂಗ್ಲೆಂಡಿನ ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮಾಡಿದವರು. ತಂದೆಯೂ ಉತ್ತಮ ಕ್ರೀಡಾಭಿಮಾನಿ. ಪ್ರಸಿದ್ಧ ಕ್ರಿಕೆಟ್ ಆಟಗಾರ ರಣಜಿಯ ಸ್ನೇಹಿತರು. ಹೀಗಿದ್ದುದರಿಂದ ಕೇವಲ ಏಳು ವರ್ಷದ ಬಾಲಕನಾಗಿ ನಾಗಪುರದ ಹಿಸ್ಲಾಪ್ ಹೈಸ್ಕೂಲಿನ ವಿದ್ಯಾರ್ಥಿ ಯಾಗಿ ಕನಕಯ್ಯ ಕ್ರಿಕೆಟ್ ಆಡತೊಡಗಿದ. (ತಮ್ಮ ಐವತ್ತೆಂಟನೆಯ ವರ್ಷದವರೆಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಭಾಗವಹಿಸುತ್ತಿದ್ದರು ನಾಯುಡು) ಆ ಕಿರಿಯ ವಯಸ್ಸಿನಲ್ಲೇ ಭವ್ಯ ಭವಿಷ್ಯದ ಕುರುಹು ಕಾಣಲಾರಂಭಿಸಿತು. ಆತನ ಚುರುಕು ಮತ್ತು ವೇಗ ಉತ್ತಮ ಆಟಕ್ಕೆ ಅವಕಾಶ ಮಾಡಿದುವು. ನಾಗಪುರದಲ್ಲಿ ನಡೆದ ಬೀಡನ್ ಷೀಲ್ಡ್‌ಅಂತರ ಶಾಲಾ ಕ್ರಿಕೆಟ್ ಟೂರ್ನಿಯಲ್ಲಿ ಹಿಸ್ಲಾಪ್ ಹೈಸ್ಕೂಲ್ ಪರ ಆಡಿದ ಕನಕಯ್ಯ ಶಾಲಾ ತಂಡದ ನಾಯಕನಾಗಿದ್ದು ತನ್ನ ಶಾಲೆ ಹಲವು ಬಾರಿ ಈ ಷೀಲ್ಡ್‌ ಗೆಲ್ಲಲು ನೆರವಾಗಿದ್ದ. ಹನ್ನೊಂದು ವರ್ಷ ವಯಸ್ಸಾಗುವಷ್ಟರಲ್ಲಿ ಈ ವಿದ್ಯಾರ್ಥಿ ಏಳು ಸೆಂಚುರಿಗಳನ್ನು ಹೊಡೆದಿದ್ದ.

’ಬಂದ ಚೆಂಡನ್ನು ಬಾರಿಸು’

ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ನಾಯುಡು ಅವರು ಲೀಗ್ ಛಾಂಪಿಯನ್‌ಷಿಪ್‌ನಲ್ಲಿ ಮೋದಿ ಕ್ರಿಕೆಟ್‌ಕ್ಲಬ್ ಪರ ಆಡುತ್ತಿದ್ದರು. ಭಾರತಕ್ಕೆ ಬಂದಿದ್ದ ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯದ ಅಥೆಂಟಿಕ್ಸ್‌ತಂಡದ ವಿರುದ್ಧ ಆಡಿದ್ದ ಉತ್ತಮ ಆಟಗಾರ ಆರ್. ರಂಗಣ್ಣ ಅವರು ಈ ಅವಧಿಯಲ್ಲಿ ಸಿ.ಕೆ. ನಾಯುಡು ಅವರಿಗೆ ಇತ್ತ ತರಬೇತಿ ಅವರ ಮುಂದಿನ ಆಟದ ವಿಧಾನವನ್ನು ನಿರ್ಧರಿಸಿತು.

ನಾಯುಡು ಅವರಿಗೆ ತಂದೆ ಸ್ವತಃ ಪ್ರೋತ್ಸಾಹ ನೀಡಿದುದೇ ಅಲ್ಲದೆ ಉಪಯುಕ್ತ ಹಿತೋಕ್ತಿಗಳನ್ನೂ ಆಡುತ್ತಿದ್ದರು.

“ಮಳೆ ಬರಲಿ, ಬಿಸಿಲಿರಲಿ, ಧಾರ್ಷ್ಟ್ಯದಿಂದ ಆಡು. ಎಂತಹುದೇ ವಿಕೆಟ್‌ಆಗಿರಲಿ, ಬಂದ ಚೆಂಡನ್ನು ಬಾರಿಸು. ಬಿರುಸಿನಿಂದ ಬಂದ ಚೆಂಡನ್ನು ಆಡಲು ಹಿಂಜರಿಯಬೇಡ. ಅದನ್ನು ಬಂದಷ್ಟೇ ವೇಗವಾಗಿ ಹೊಡಿ. ಆಕ್ರೋಶದಿಂದ ಚೆಂಡು ಬಾರಿಸು. ಆಕ್ರಮಣವೇ ನಿನ್ನ ವಿಧಾನವಾಗಲಿ” ಎಂದು ತಂದೆ ಮಗನಿಗೆ ಉಪದೇಶ ಮಾಡಿದ್ದರು.

ಈ ಉಪದೇಶವನ್ನು ನಾಯುಡು ತಮ್ಮ ಜೀವನ ಪರ್ಯಂತ ಆಚರಣೆಗೆ ತಂದರು. ಎಂತಹ ಬೌಲರ್ ಆದರೂ ಇವರಿಗೆ ಬೌಲ್ ಮಾಡಲು ಹಿಂಜರಿಯುತ್ತಿದ್ದರು. ಹೇಗೆ ಬೌಲ್ ಮಾಡಿದರೆ ಇವರು ಎಲ್ಲಿಗೆ ಚೆಂಡನ್ನು ಬಾರಿಸುತ್ತಾರೋ ಎಂದು ಹೆದರಿಕೊಂಡೇ ಅವರು ಬೌಲ್ ಮಾಡುತ್ತಿದ್ದರು.

‘ಆಕ್ರಮಣವೇ ನಿನ್ನ ವಿಧಾನವಾಗಲಿ’

ನಾಯುಡು ಅವರ ವಿದ್ಯಾಭ್ಯಾಸ ಬಹುತೇಕ ನಾಗಪುರದಲ್ಲೇ ನಡೆಯಿತು. ಅಲ್ಲಿಯ ರಾವ ಬಹುದ್ದೂರ್ ಸಿ.ಎನ್. ನಾಯುಡು ಅವರ ಶಾಲೆ, ಸೇಂಟ್ ಫ್ರಾನ್ಸಿ‌ಸ್ ಡಿ ಸೇಟ್ಸ್ ಹೈಸ್ಕೂಲುಗಳಲ್ಲಿ ಓದಿದ ಅವರು ಹಿಸ್ಲಾಪ್ ಕೊಲಿಜಿಯೇಟ್ ಹೈಸ್ಕೂಲಿನಲ್ಲಿ ೧೯೧೪ರಲ್ಲಿ ಮೆಟ್ರುಕ್ಯುಲೇಷನ್ ಪರೀಕ್ಷೆ ಮುಗಿಸಿ ಹಿಸ್ಲಾಪ್ ಕಾಲೇಜು ಸೇರಿದರು. ಇಂಟರ್ ಮೀಡಿಯಟ್ ಪರೀಕ್ಷೆಯ ನಂತರ ನಾಯುಡು ತಮ್ಮ ತಂದೆ ಹಾಗೂ ಚಿಕ್ಕಪ್ಪ ಓದಿದ ವಿದ್ಯಾಭ್ಯಾಸಕ್ಕಾಗಿ ಹೋಗಲು ಸಿದ್ಧರಾಗುತ್ತಿದ್ದರು. ಆದರೆ ಆಗ ಮೊದಲ ಮಹಾಯುದ್ಧ ಆರಂಭವಾಗಿ ಅವರ ಉನ್ನತ ವ್ಯಾಸಂಗದ ಆಸೆ ಫಲಿಸದಂತಾಯಿತು.

ಹೋಳ್ಕರರ ಆಶ್ರಯ

ನಾಯುಡು ತಮ್ಮ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದರು. ಅವರು ಹುಟ್ಟಿದುದೇನೊ ಶ್ರೀಮಂತ ಮನೆತನ ದಲ್ಲಿ. ತಂದೆ ವೃತ್ತಿಯಿಂದ ವಕೀಲರು. ಆದರೆ ತಂದೆ ತೀರಿಕೊಂಡ ನಂತರ ನಾಯುಡು ತುಂಬ ಕಷ್ಟಕ್ಕೆ ಸಿಕ್ಕಿಕೊಂಡರು. ಆಸ್ತಿ ಎಲ್ಲ ಕೈಬಿಟ್ಟು ಹೋಗುವ ಪರಿಸ್ಥಿತಿ. ಆಗಿನ ಇಂದೂರಿನ ಮಹಾರಾಜರಾಗಿದ್ದ ಯಶವಂತರಾವ್ ಹೋಳ್ಕರ್ ಅವರಿಗೆ ಕ್ರೀಡೆಗಳಲ್ಲಿ ಬಹಳ ಆಸಕ್ತಿ. ಒಳ್ಳೆಯ ಆಟಗಾರರಿಗೆ ವಿಶೇಷ ಪ್ರೋತ್ಸಾಹ ಕೊಡುತ್ತಿದ್ದರು. ಅವರು ಸಿ.ಕೆ.ನಾಯುಡು ಅವರಿಗೆ ತಮ್ಮ ಸೈನ್ಯದಲ್ಲಿ ’ಕರ್ನಲ್’ ಹುದ್ದೆಯನ್ನು ಕೊಟ್ಟರು. ಅವರು ಕ್ರಿಕೆಟ್‌ಆಟ ಆಡಲು ಎಲ್ಲ ಅವಕಾಶಗಳನ್ನೂ ಕಲ್ಪಿಸಿ ಕೊಟ್ಟರು. ಸುಮಾರು ಮೂವತ್ತು ವರ್ಷಗಳ ಕಾಲ ನಾಯುಡು ಈ ರಾಜರ ಸೈನ್ಯದಲ್ಲಿ ಕೆಲಸ ಮಾಡಿದರು. ಭಾರತವು ಸ್ವತಂತ್ರವಾಗಿ, ಇಂದೂರು ಪ್ರತ್ಯೇಕ ಅಸ್ತಿತ್ವವನ್ನು ಕಳೆದುಕೊಂಡಿತು. ಆಗ ನಾಯುಡುವಿಗೆ ಮಹಾರಾಜರ ಆಶ್ರಯ ತಪ್ಪಿತು. ಆದರೂ ಮಹಾರಾಜರು ಇವರಿಗೆ ಒಂದು ಮನೆಯನ್ನೇ ತೆಗೆದುಕೊಟ್ಟು ನೆರವಾದರು.

ಕುಟುಂಬ

ಸಿ.ಕೆ. ನಾಯುಡು ಅವರು ತಮ್ಮ ೨೨ನೇ ವಯಸ್ಸಿನಲ್ಲಿ ಚಂದ್ರಾವತಿ ಎಂಬುವರನ್ನು ಮದುವೆಯಾದರು. ಏಳು ವರ್ಷಗಳ ನಂತರ, ಅಂದರೆ ೧೯೨೪ರಲ್ಲಿ ಶ್ರೀಮತಿ ಚಂದ್ರಾವತಿ ನಿಧನರಾದರು. ನಾಯುಡು ಮತ್ತು ಚಂದ್ರಾವತಿ ಅವರಿಗೆ ಮೂವರು ಹೆಣ್ಣುಮಕ್ಕಳು. ಮೂವರೂ ಮದುವೆಯಾಗಿದ್ದಾರೆ.

ಮೊದಲ ಪತ್ನಿ ತೀರಿಕೊಂಡ ನಾಲ್ಕು ವರ್ಷಗಳ ನಂತರ ಗುಣವತಿ ಎಂಬುವರೊಡನೆ ನಾಯುಡು ಅವರ ವಿವಾಹವಾಯಿತು. ಈ ದಾಂಪತ್ಯದಲ್ಲಿ ನಾಲ್ಕು ಮಂದಿ ಹೆಣ್ಣು ಮಕ್ಕಳು ಹಾಗೂ ಇಬ್ಬರು ಪುತ್ರರು ಜನಿಸಿದರು.

ಮೊದಲ ಮಗ ಇಂದೂರಿನ ವ್ಯಾಪಾರಿ ಸಂಸ್ಥೆ ಯೊಂದರಲ್ಲಿ ಇದ್ದಾರೆ. ಕಿರಿಯ ಮಗ ಮಧ್ಯಪ್ರದೇಶದ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ.

ಪ್ರಾರಂಭವೇ ಮಿಂಚಿನ ಆಟ

೧೯೧೬ರ ಹೊತ್ತಿಗಾಗಲೇ ೨೧ ವರ್ಷದ ಸಿ.ಕೆ.ನಾಯುಡು ಖ್ಯಾತಿವಂತರೊಂದಿಗೆ ಪಂದ್ಯಗಳನ್ನಾಡಿದ್ದರು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮೈದಾನಗಳಲ್ಲಿ ಆಡಿ ತಮ್ಮ ಅಸಾಧಾರಣ ಮಟ್ಟದ ಆಲ್ ರೌಂಡರ್ ಪ್ರದರ್ಶನದಿಂದ ಪ್ರೇಕ್ಷಕರ ಒಲವು ಸಂಪಾದಿಸಿದರು.

ಪ್ರಥಮ ದರ್ಜೆ ಪಂದ್ಯಗಳಲ್ಲಿ ನಾಯುಡು ಮೊದಲು ಆಡಿದುದು ೧೯೧೬ರಲ್ಲಿ. ಆಗ ದೇಶದಾದ್ಯಂತ ಖ್ಯಾತವಾಗಿದ್ದ ಬಾಂಬೆ ಕ್ವಾಡ್ರಾಂಗ್ಯುಲರ್ ಕ್ರಿಕೆಟ್ ಟೂರ್ನಮೆಂಟಿನಲ್ಲಿ ಇವರು ಹಿಂದೂ ತಂಡದ ಪರ ಯುರೋಪಿಯನ್ಸ್ ವಿರುದ್ಧ ಆಡಿದರು. ಕ್ವಾಡ್ರಾಂಗ್ಯುಲರ್ ಮತ್ತು ಪೆಂಟಾಂಗ್ಯುಲರ್ ಟೂರ್ನಮೆಂಟುಗಳಲ್ಲಿ ೧೯೪೪ ರವರೆಗೂ ಆಡಿದ ಈ ನೀಳಕಾಯ ಅಸಾಧಾರಣ ಕ್ರೀಡಾಪಟು. ೧೯೩೫ರ ನಂತರ ಈ ಟೂರ್ನಮೆಂಟುಗಳಲ್ಲಿ ಹಿಂದೂ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಒಮ್ಮೆ ಕ್ವಾಡ್ರಾಂಗ್ಯುಲರ್ ಪಂದ್ಯದಲ್ಲಿ ಇಪ್ಪತ್ತೆಂಟು ನಿಮಿಷಗಳಲ್ಲಿ ನೂರು ರನ್‌ಗಳನ್ನು ಗಿಟ್ಟಿಸಿದರು.

ಈ ಟೂರ್ನಮೆಂಟಿನಲ್ಲಿ ಇವರಷ್ಟು ಸ್ಕೋರ್ ಮಾಡಿದ ಬೇರೆ ಆಟಗಾರರೇ ಇಲ್ಲ. ಸುಮಾರು ೨೩ ವರ್ಷಗಳ ಅವಧಿಯಲ್ಲಿ ಇವರು ಆಡಿದ ಪಂದ್ಯಗಳ ಸಂಖ್ಯೆ ೫೨. ಪೇರಿಸಿದ ಮೊತ್ತ ೨೧೫೬ರನ್ನುಗಳು. ಪಡೆದ ವಿಕೆಟ್‌ಗಳ ಸಂಖ್ಯೆ ೩೮. ಬಾರಿಸಿದ ಸೆಂಚುರಿಗಳು ೫. ೧೯೨೯ರಲ್ಲಿ ಮುಸ್ಲಿಮ್ಸ್‌ವಿರುದ್ಧ ಹೊಡೆದ ೧೫೫ ಇವರ ಅತಿ ಹೆಚ್ಚು ವೈಯಕ್ತಿಕ ಸ್ಕೋರ್.

ವಿದೇಶೀ ತಂಡಗಳು

ಇದೇ ಅವಧಿಯಲ್ಲಿ ಇವರು ಭಾರತಕ್ಕೆ ಬಂದಿದ್ದ ವಿದೇಶೀ ತಂಡಗಳ ವಿರುದ್ಧ ೪ ಅನಧಿಕೃತ ಟೆಸ್ಟ್‌ಪಂದ್ಯಗಳಲ್ಲಿ ತಮ್ಮ ಕ್ರೀಡಾಕೌಶಲದ ಪ್ರದರ್ಶನ ನೀಡಿದ್ದರು. ೧೯೨೬-೨೭ರಲ್ಲಿ ಭಾರತಕ್ಕೆ ಬಂದಿದ್ದ ಎಂ.ಸಿ.ಸಿ. ತಂಡದ ಮೇಲೆ ಹಾಗೂ ೧೯೩೫-೩೬ರಲ್ಲಿ ಜಾಕ್‌ರೈಡರರ ಆಸ್ಟ್ರೇಲಿಯಾ ತಂಡದ ವಿರುದ್ಧ ಇವರು ಅನಧಿಕೃತ ಟೆಸ್ಟ್‌ಗಳಲ್ಲಿ ಆಡಿದ್ದರು. ೧೯೨೬ರಲ್ಲಿ ಬಂದ ಎಂ.ಸಿ. ಸಿ. ತಂಡ ಮುಂಬಯಿಯಲ್ಲಿ ಒಂದು ಪಂದ್ಯವನ್ನು ಆಡಿತು. ಆ ತಂಡದ ಜಿ. ಎಫ್. ಅರ್ಲ್‌ಅದ್ಭುತವಾಗಿ ಆಡಿ, ತನ್ನ ೧೨೦ರನ್‌ಗಳಲ್ಲಿ ಎಂಟು ಸಿಕ್ಷರ್‌ಗಳನ್ನೂ ಹನ್ನೊಂದು ಬೌಂಸರಿಗಳನ್ನೂ ಬಾರಿಸಿದ. ಇವುಗಳಿಂದಲೇ ಆತ ೯೨ರನ್‌ಗಳಿಸಿದ. ಅವನ ಆಟವನ್ನು ನೋಡಿ ಜನ ಬೆಕ್ಕಸಬೆರಗಾದರು. ಮರುದಿನ, ಹಿಂದೂ ತಂಡದ ನಾಯಕ ಸಿ.ಕೆ. ನಾಯುಡು ಒಂದು ನೂರು ನಿಮಿಷಗಳಲ್ಲಿ ೧೫೩ ರನ್‌ಗಳನ್ನು ಗಿಟ್ಟಿಸಿದರು; ಅವುಗಳಲ್ಲಿ ಹನ್ನೊಂದು ಸಿಕ್ಸರ್‌ಗಳೂ ಹದಿಮೂರು ಬೌಂಡರಿಗಳೂ ಇದ್ದವು. ಸಿಕ್ಸರ್ ಮತ್ತು ಬೌಂಡರಿಗಳಿಂದಲೇ ನಾಯುಡು ೧೧೮ ರನ್ ಗಳಿಸಿದರು.!

೧೯೩೨ ರಲ್ಲಿ ಮೊದಲ ಬಾರಿಗೆ ಭಾರತದ ಕ್ರಿಕೆಟ್ ತಂಡವೊಂದು ಇಂಗ್ಲೆಂಡಿಗೆ ಅಧಿಕೃತ ಭೇಟಿ ನೀಡಿತು. ಆಗ ತಮ್ಮ ಅತ್ಯುತ್ತಮ ಮಟ್ಟದಲ್ಲಿದ್ದ ನಾಯುಡು ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದರೆಂದರೆ ತಪ್ಪಾಗದು. ತಂಡದ ಅಧಿಕೃತ ಕ್ಯಾಪ್ಟನ್ ಆಗಿ ಪೋರ ಬಂದರದ ಮಹಾರಾಜರೂ, ವೈಸ್-ಕ್ಯಾಪ್ಟನ್ ಆಗಿ ಲಿಂಬ್ಡಿಯ ಘನಶ್ಯಾಮಸಿಂಗಜೀ ಅವರೂ ಇದ್ದರೂ, ನಡೆದ ಒಂದೇ ಟೆಸ್ಟ್‌ಪಂದ್ಯದಲ್ಲೂ ಇತರ ಹಲವು ಪಂದ್ಯಗಳಲ್ಲೂ ತಂಡದ ನಾಯಕತ್ವದ ಹೊಣೆ ನಾಯುಡು ಅವರ ಪಾಲೇ ಆಗಿತ್ತು. ಎಲ್ಲ ದೃಷ್ಟಿಗಳಲ್ಲೂ ಭಾರತ ತಂಡಕ್ಕಿಂತಲೂ ಶಕ್ತವೆನಿಸಿದ್ದ ಇಂಗ್ಲೆಂಡ್‌ತಂಡ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲು ಅತಿ ಪ್ರಯಾಸ ಪಡುವಂತೆ ಮಾಡಿದ ಹಿರಿಮೆ ನಾಯುಡು ಅವರದು. ಅವರ ಆಟದ ವಿಧಾನ, ನಾಯಕತ್ವದಲ್ಲಿ ತೋರಿದ ಚಾಕಚಕ್ಯತೆ, ಗಂಭೀರ ನಡೆ ನುಡಿ ಇಂಗ್ಲೆಂಡಿನ ಸಹಸ್ರಾರು ಅಭಿಮಾನಿಗಳನ್ನು ಮಾರು ಹೋಗಿಸಿದವು.

ಈ ಪ್ರಥಮ ಅಧಿಕೃತ ಪ್ರವಾಸದಲ್ಲಿ ನಾಯುಡು ಒಟ್ಟು ೧೯೧೮ ರನ್ ಹೊಡೆದರು. ೬೫ ವಿಕೆಟ್ ತೆಗೆದುಕೊಂಡರು.

ಈ ಪ್ರವಾಸದಲ್ಲಿ ನಾಯುಡು ಏನಿಲ್ಲವೆಂದರೂ ೨೬ ಭರ್ಜರಿ ಸಿಕ್ಸುರುಗಳನ್ನು ಬಾರಿಸಿದರು. ಲಾರ್ಡ್ಸ್‌ಮೈದಾನದಲ್ಲಿ ಮೊತ್ತಮೊದಲ ಬಾರಿಗೆ ಆಡಿದಾಗಲೇ ಎಂ.ಸಿ. ಸಿ. ವಿರುದ್ಧ ಸೆಂಚುರಿ ಗಳಿಸಿದರು. ಒಟ್ಟು ಆರು ಸೆಂಚುರಿ ಗಳಿಸಿದರು. ಒಟ್ಟು ಆರು ಸೆಂಚುರಿಗಳನ್ನು ಹೊಡೆದ ಸಿ.ಕೆ.ನಾಯುಡು ಅವರ ೧೯೩೨ರ ಇಂಗ್ಲೆಂಡ್ ಪ್ರವಾಸದ ಅತಿ ಹೆಚ್ಚು ವೈಯಕ್ತಿಕ ಸ್ಕೋರು ೧೬೨. ವಾರ್ವಿಕ್ ಷೈರ್ ವಿರುದ್ಧ ಆಡಿದ ಪಂದ್ಯದಲ್ಲಿ ನಾಯುಡು ಈ ಮೊತ್ತ ಕೂಡಿಹಾಕಿದರು. ಇವರ ಆಟದ ವೈಖರಿ ಕ್ರಿಕೆಟ್ ವರದಿಗಾರರ ಮೆಚ್ಚುಗೆ ಗಳಿಸಿಕೊಂಡಿತು. ಈ ಮೊದಲೇ ಸಂಪಾದಿಸಿದ್ದ ಖ್ಯಾತಿಯನ್ನು ನೂರ್ಮಡಿ ಹೆಚ್ಚಿಸಿಕೊಂಡ ಈ ದೃಢಕಾಯ ಆಟಗಾರ ಪ್ರಥಮ ಅಧಿಕೃತ ಪ್ರವಾಸದ ನಂತರ ಭಾರತಕ್ಕೆ ಹಿಂದಿರುಗಿದರು.

ಇಂಗ್ಲೆಂಡಿನಲ್ಲಿ ‘’ವಿಸ್ಡೆನ್’’ ಎನ್ನುವ ಪತ್ರಿಕೆ ಪ್ರತಿ ವರ್ಷ ಐವರು ಶ್ರೇಷ್ಠ ಕ್ರಿಕೆಟ್ ಆಟಗಾರರು ಯಾರು ಎಂದು ನಿರ್ಧರಿಸಿ ಪ್ರಕಟಿಸುತ್ತದೆ. ಈ ಪಟ್ಟಿಯಲ್ಲಿ ಸೇರುವುದು ಬಹು ದೊಡ್ಡ ಗೌರವ. ಈ ಗೌರವನ್ನು ಮೊತ್ತಮೊದಲು ಪಡೆದ ಭಾರತೀಯ ಕ್ರಿಕೆಟ್ ಆಟಗಾರ ಸಿ.ಕೆ. ನಾಯುಡು.

ಮರುವರ್ಷ, ಅಂದರೆ ೧೯೩೩ ರಲ್ಲಿ, ಖ್ಯಾತ ಜಾರ್ಡಿನ್ ನಾಯಕತ್ವದಲ್ಲಿ ಶಕ್ತ ಆಟಗಾರರಿದ್ದ ಎಂ.ಸಿ.ಸಿ ತಂಡ ಭಾರತಕ್ಕೆ ಬಂದಿತು. ಸಹಜವಾಗಿಯೇ ಭಾರತ ತಂಡದ ನಾಯಕ ಪಟ್ಟ ಈ ಹಿರಿಯ ಕಟ್ಟಾಳಿನ ಪಾಲಾಯಿತು. ಒಟ್ಟಿನಲ್ಲಿ ಭಾರತದ ತಂಡ ಎದುರಾಳಿ ತಂಡಕ್ಕಿಂತ ಆಟದ ಎಲ್ಲ ವಿಭಾಗಗಳಲ್ಲೂ ಕಡಿಮೆ ಮಟ್ಟದ್ದಾಗಿದ್ದುದರಿಂದ ನಮ್ಮ ತಂಡದ ಗೆಲುವನ್ನು ಯಾರೂ ನಿರೀಕ್ಷಿಸಿರಲಿಲ್ಲ, ಅದು ಬರಲೂ ಇಲ್ಲ. ಆದರೆ ಈ ಧೀರ ಆಟಗಾರ ತನ್ನ ಹಾಗೂ ಭಾರತದ ಘನತೆಯನ್ನು ತನ್ನ ಅಸಾಧಾರಣ ಆಟದಿಂದ ಹೆಚ್ಚಿಸಿದ.

ಮುಂಬಯಿಯಲ್ಲಿ ನಡೆದ ಮೊದಲ ಟೆಸ್ಟ್‌ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಸಿ.ಕೆ.ನಾಯುಡು ಉತ್ತಮವಾಗಿ ಬ್ಯಾಟ್ ಮಾಡಿ ೬೭ರನ್ ಹೊಡೆದುದೇ ಅಲ್ಲದೆ ಸೆಂಚುರಿ ಬಾರಿಸಿದ ಲಾಲಾ ಅಮರನಾಥ್ (೧೧೮) ಅವರ ಜೊತೆಗೆ ಅತಿ ಉಪಯುಕ್ತ ೧೮೬ ರನ್‌ಸೇರಿಸಿ ಅಭಿಮಾನಿಗಳ ದೀರ್ಘ ಕರತಾಡನ ಸಂಪಾದಿಸಿಕೊಂಡರು.

೧೯೩೬ರಲ್ಲಿ ಇಂಗ್ಲೆಂಡಿಗೆ ಭೇಟಿ ನೀಡಿದ ಭಾರತದ ಕ್ರಿಕೆಟ್ ತಂಡದಲ್ಲೂ ಕೊಟ್ಟಾರಿ ಕನಕಯ್ಯ ನಾಯುಡು ಆಟಗಾರರಾಗಿದ್ದರು. ಈ ವೇಳೆಗೆ ವಿಜಯ್ ಮರ್ಚೆಂಟ್ ಅವರು ಭಾರತದ ಅಗ್ರಮಾನ್ಯ ಬ್ಯಾಟ್ಸ್‌ಮನ್ ಎಂದು ಮನ್ನಣೆ ಸಂಪಾದಿಸಿಕೊಂಡರು ಈ ತಂಡದಲ್ಲಿ ಒಬ್ಬ ಮುಖ್ಯ ಆಟಗಾರರಾಗಿದ್ದರು. ಭಾರತದ ಕ್ರಿಕೆಟ್ ದೃಷ್ಟಿಯಿಂದ ಇದೊಂದು ಅತಿ ನಿರಾಶಾದಾಯಕ ಪ್ರವಾಸ.

ಪ್ರವಾಸ ಕಾಲದಲ್ಲಿ ತಮ್ಮ ಖ್ಯಾತಿ ಹೆಚ್ಚಿಸಿಕೊಂಡ ಕೆಲವೇ ಆಟಗಾರರಲ್ಲಿ ಸಿ.ಕೆ.ನಾಯುಡು ಅವರೂ ಒಬ್ಬರು. ಒಂದು ಸೆಂಚುರಿಯನ್ನೂ ಅವರು ಹೊಡೆಯದೇ ಹೋದರೂ ಒಟ್ಟು ೧೧೦೨ ರನ್ ಮಾಡಿದರು; ಸರಾಸರಿ ೨೬.೨೩. ಅಲ್ಲದೆ, ೩೧.೨೮ ರನ್ ಅವರ ಅತಿಹೆಚ್ಚು ವೈಯಕ್ತಿಕ ಸ್ಕೋರು. ಓವಲ್ ಮೈದಾನದಲ್ಲಿ ನಡೆದ ತೃತೀಯ ಟೆಸ್ಟ್‌ನಲ್ಲಿ ನಾಯುಡು ತಮ್ಮ ನಿಜವಾದ ಮಟ್ಟ ತೋರಿದರು. ಅವರ ಇನ್ನಿಂಗ್ಸ್‌ನ ಆರಂಭದಲ್ಲೇ ಅಲೆನ್ ಅವರ ಬೌಲಿಂಗ್‌ನಲ್ಲಿ ಚೆಂಡು ಬಲವಾಗಿ ನಾಯುಡು ಅವರ ಹೊಟ್ಟೆಗೆ ಹೊಡೆಯಿತು. ಪೆಟ್ಟು ಬಲವಾಗಿದ್ದರೂ ನಾಯುಡು ನಿವೃತ್ತರಾಗಲಿಲ್ಲ. ೮೧ ಭರ್ಜರಿ ರನ್‌ಗಳನ್ನು ಹೊಡೆದರು. ಅವರು ಔಟಾಗುವ ವೇಳೆಗೆ ಭಾರತದ ಸ್ಕೋರು ೨೯೫ ರನ್ ತಲುಪಿದ್ದು ಭಾರತ ಇನ್ನಿಂಗ್ಸ್‌ಅಪಜಯ ತಪ್ಪಿಸಿಕೊಂಡಿತ್ತು.

ರನ್‌ಗಳ ಸುರಿಮಳೆ-ಒಳ್ಳೆಯ ಬೌಲರ್ ಸಹ

ಮುಂದಿನ ಅವರ ಕ್ರಿಕೆಟ್ ಜೀವನ ಒಂದು ರೀತಿಯಲ್ಲಿ ರಣಜಿ ಟ್ರೋಫಿ ಕ್ರಿಕೆಟ್ ಛಾಂಪಿಯನ್‌ಷಿಪ್ ನ ಆರಂಭದ ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಇತಿಹಾಸ ಎನ್ನಬಹುದು.

೧೯೩೪ರಲ್ಲಿ ನಾಗಪುರದಲ್ಲಿ ಸಿ.ಪಿ. ಮತ್ತು ಬಿರಾರ್ ವಿರುದ್ಧ ತಮ್ಮ ಮೊದಲ ರಣಜಿ ಪಂದ್ಯದಲ್ಲಿ ಕೇಂದ್ರ ಭಾರತ ತಂಡದ ಪರ ಆಡಿದ ಸಿ.ಕೆ. ನಾಯುಡು ಅವರು ಮುಂದೆ ಹೋಳ್ಕರ್, ಆಂಧ್ರ ಹಾಗೂ ಉತ್ತರ ಪ್ರದೇಶದ ಪರ ಆಡಿದರು.

ಅವರು ಆಡಿದ ಅಂತಿಮ ಪಂದ್ಯ ೧೯೫೭ರ ಮಾರ್ಚ್‌೩,೪ ಹಾಗೂ ೫ರಲ್ಲಿ ನಡೆಯಿತು. ಮುಂಬಯಿ ವಿರುದ್ಧ ಉತ್ತರ ಪ್ರದೇಶದ ಪರ (ವಾರಣಾಸಿಯಲ್ಲಿ) ಆಡಿದ ನಾಯುಡು ಅವರು ೨೨ ಮತ್ತು ೫೨ ರನ್‌ಗಳನ್ನು ಹೊಡೆದುದೇ ಅಲ್ಲದೆ ೯೧ರನ್ ಇತ್ತು ಮೂರು ವಿಕೆಟ್ ಪಡೆದರು. ಈ ಪಂದ್ಯ ಆಡಿದಾಗ ನಾಯುಡು ಅವರ ವಯಸ್ಸು ೬೨ ವರ್ಷ! ಮೊದಲ ಮೂರು ರಣಜಿ ಪಂದ್ಯಗಳನ್ನು ಅವರು ಅಲೀಪುರದ ಮಹಾರಾಜಕುಮಾರ್ ಅವರ ನಾಯಕತ್ವದಲ್ಲಿ ಆಡಿದಾಗ ಮೊದಲ ಪಂದ್ಯದಲ್ಲಿ ೭೯ ರನ್ ಹೊಡೆದುದೇ ಅಲ್ಲದೆ ೯೫ ರನ್ ಗಳಿಗೆ ೮ ವಿಕೆಟ್‌ತೆಗೆದುಕೊಂಡರು.

೧೯೩೪ ರಿಂದ ೧೯೩೭ರ ವರೆಗೆ ಕೇಂದ್ರ ಭಾರತ ತಂಡದ ಪರ ಆಡಿದ ನಾಯುಡು ಅವರು ೧೯೪೧ ರಿಂದ ೧೯೫೨ರ ವರೆಗೆ ಹೋಳ್ಕರ್ ಪರವಾಗಿಯೂ, ೧೯೫೩ರಲ್ಲಿ ಉತ್ತರ ಪ್ರದೇಶದ ಪರವಾಗಿಯೂ ಆಡಿದರು. ಅವರು ಅತಿ ದೀರ್ಘಕಾಲ, ೧೧ ವರ್ಷ, ಆಡಿದುದು ಹೋಳ್ಕರ್ ಪರ. ಅವರು ರಣಜಿ ಟ್ರೋಫಿ ಛಾಂಪಿಯನ್ ಷಿಪ್‌ನಲ್ಲಿ ೪೬ ಪಂದ್ಯಗಳಲ್ಲಿ, ತಾವು ಆಡಿದ ತಂಡದ ನಾಯಕರಾಗಿದ್ದು, ೩೪ ರಲ್ಲಿ ತಮ್ಮ ತಂಡದ ಗೆಲುವಿಗೆ ನೆರವಾದರು. ಉಳಿದ ೧೨ ಪಂದ್ಯಗಳಲ್ಲಿ ಇವರ ನಾಯಕತ್ವದ ತಂಡ ಅಪಜಯ ಅನುಭವಿಸಿತು. ಈ ಧೀಮಂತ ಆಟಗಾರನ ನಾಯಕತ್ವದಲ್ಲಿ ಹೋಳ್ಕರ್ ತಂಡ ೧೯೪೫-೪೬, ೧೯೪೭-೪೮, ೧೯೫೦-೫೧ ಹಾಗೂ ೧೯೫೧-೫೨ರಲ್ಲಿ ಹೋಳ್ಕರ್ ರನ್ನರ‍್ಸ್ -ಅಪ್ ಸ್ಥಾನ ಸಂಪಾದಿಸಿತ್ತು.

ಭರ್ಜರಿ ಬ್ಯಾಟಿಂಗ್

೧೯೪೮-೪೯ರಲ್ಲಿ ಭಾರತಕ್ಕೆ ಬಂದಿದ್ದ ವೆಸ್ಟ್ ಇಂಡೀಸ್ ತಂಡದ ಮೇಲೂ, ಅನಂತರ ಭಾರತ ಪ್ರವಾಸ ಮಾಡಿದ ಕಾಮನೆಲ್ತ್‌ತಂಡಗಳ ವಿರುದ್ಧವೂ ಇವರು ಆಡಿದರು. ೧೯೪೮-೪೯ರಲ್ಲಿ ಮುಂಬಯಿಯಲ್ಲಿ ನಡೆದ ಮಹಾತ್ಮ ಗಾಂಧಿ ಸ್ಮಾರಕ ಕ್ರಿಕೆಟ್ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಸಿ.ಕೆ. ನಾಯುಡು ಅವರು ಕೇವಲ ೯೦ ನಿಮಿಷಗಳಲ್ಲಿ ಮಿಂಚಿನೇಟುಗಳ ೧೦೯ರನ್ ಬಾರಿಸಿದರು.

ರಣಜಿ ಟ್ರೋಫಿ ಕ್ರಿಕೆಟ್ ಛಾಂಪಿಯನ್‌ಷಿಪ್‌ನಲ್ಲಿ ಈ ಶ್ರೇಷ್ಠ ಆಟಗಾರ ೩೬.೬೭ ರನ್ ಸರಾಸರಿಯಲ್ಲಿ ೨೫೬೭ರನ್ನು ಹೊಡೆದರು. ಅಲ್ಲದೆ ವಿಕೆಟ್‌ಗೆ ೨೫.೭೦ ರನ್ ಸರಾಸರಿಯಲ್ಲಿ ೧೦೯ ವಿಕೆಟ್ ಪಡೆದುಕೊಂಡರು. ಇಂದೂರಿನಲ್ಲಿ ಹೋಳ್ಕರ್ ತಂಡದ ಪರ ಆಡುತ್ತ ೧೯೪೫-೪೬ ರಲ್ಲಿ ಬರೋಡದ ವಿರುದ್ಧ ಹೊಡೆದ ೨೦೦ ರನ್, ರಣಜಿ ಟ್ರೋಫಿಯಲ್ಲಿ ಅವರ ಅತಿ ಹೆಚ್ಚು ವೈಯಕ್ತಿಕ ಸ್ಕೋರು. ಇಂದೂರಿನಲ್ಲಿ ಆಡಿದ ರಣಜಿ ಪಂದ್ಯಗಳಲ್ಲಿ ಅವರು ಐದು ಸೆಂಚುರಿಗಳನ್ನು ಬಾರಿಸಿದ್ದಾರೆ. ೧೯೪೫-೪೬ರಲ್ಲಿ ಅವರು ಹೋಳ್ಕರ್ ಪರ ೮೦.೨೦ರನ್ ಸರಾಸರಿಯಲ್ಲಿ ಒಟ್ಟು ೪೦೭ರನ್ ಕೂಡಿಹಾಕಿದರು. ೧೯೩೫-೩೬ರಲ್ಲಿ ಆಡಿದ ಎರಡು ರಣಜಿ ಟ್ರೋಫಿ ಪಂದ್ಯಗಳಿಂದ ನಾಯುಡು ಅವರು ೧೮೧ ರನ್ ಇತ್ತು ೧೫ ವಿಕೆಟ್ ಬುಟ್ಟಿಗೆ ಹಾಕಿಕೊಂಡರು.

ನಾಯುಡು ಅವರ ಕ್ರಿಕೆಟ್ ಪ್ರಾವೀಣ್ಯವನ್ನು ಮೆಚ್ಚಿಕೊಂಡ ಕೇಂದ್ರ ಸರಕಾರ, ಕ್ರೀಡಾ ಪ್ರಪಂಚಕ್ಕೆ ತಮ್ಮ ವೈಯಕ್ತಿಕ ಪ್ರತಿಭೆ, ಅಸಾಧಾರಣ ನಾಯಕತ್ವದ ಮೂಲಕ ಅವರ ಸಲ್ಲಿಸಿದ ಸೇವೆಯ ಕುರುಹಾಗಿ ೧೯೫೫ರಲ್ಲಿ ಅವರಿಗೆ ’ಪದ್ಮಭೂಷಣ’ ಪ್ರಶಸ್ತಿ ನೀಡಿತು.

ಸಿ.ಕೆ. ನಾಯುಡು ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಲಿಯ ಆಯ್ಕೆ ಸಮಿತಿಯ ಅಧ್ಯಕ್ಷರಾಗಿಯೂ ಇದ್ದರು.

ಕ್ರಿಕೆಟ್ ಆಟದ ಇತಿಹಾಸದಲ್ಲಿ ಎಲ್ಲ ಕಾಲಕ್ಕೂ ಶ್ರೇಷ್ಠ ಆಲ್ ರೌಂಡರ್‌ಗಳಲ್ಲಿ ನಾಯುಡು ಒಬ್ಬರು. ಉಳಿದವರೊಡನೆ ಹೋಲಿಸಿದಾಗ ಈತನೊಬ್ಬ ಬೃಹತ್ ಕಾರ್ಯ; ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್ ಹಾಗೂ ನಾಯಕತ್ವ ಇವು ನಾಲ್ಕನ್ನೂ ಒಟ್ಟುಗೂಡಿಸಿ ಅಳೆದಲ್ಲಿ ಇವರೊಂದಿಗೆ ಹೋಲಿಸಬಲ್ಲ ಬೇರೊಬ್ಬ ವ್ಯಕ್ತಿ ಕ್ರಿಕೆಟ್ ರಂಗದಲ್ಲಿ ಹುಟ್ಟಲಿಲ್ಲ. ಇವರ ಕ್ರಿಕೆಟ್ ಜೀವನ ಭಾರತದ ಕ್ರಿಕೆಟ್ ಇತಿಹಾಸದ ಸ್ವರ್ಣ ಅಧ್ಯಾಯ. ಕ್ರಿಕೆಟ್ ಮೈದಾನದಲ್ಲಿ ಇವರಷ್ಟು ಕಾಲ ಮೆರೆದ ಆಟಗಾರರು ವಿರಳ. ಅಭಿಮಾನಿಗಳ ಮನಸೆಳೆಯುವುದರಲ್ಲಿ ಇವರಷ್ಟು ಯಶಪಡೆದವರು ಬೇರೊಬ್ಬರಿಲ್ಲ. ಕ್ರಿಕೆಟ್ ರಂಗದ ಅತಿ ಗೌರವಾನ್ವಿತ ವ್ಯಕ್ತಿಯಾಗಿ ಈತ ಬಾಳಿನುದ್ದಕ್ಕೂ ಬೆಳಗಿದ.

ಪ್ರಪಂಚದಲ್ಲೆ ಖ್ಯಾತಿ

ಇವರು ಅಮರರೇನೋ ಎನ್ನುವಷ್ಟು ಮಟ್ಟಿಗೆ ಜನತೆ ಇವರನ್ನು ಕೊಂಡಾಡಿದರು. ಗೌರವದಿಂದ ಕಂಡರು. ಕ್ರಿಕೆಟ್ ಆಟಗಾರರಲ್ಲಿ ಆತ ಅದ್ವಿತೀಯ; ಕ್ರೀಡಾಪಟುಗಳಲ್ಲಿ ಆತ ಮಾದರಿಯ ಕ್ರೀಡಾಪಟು. ಕ್ರಿಕೆಟ್‌ಫೀಲ್ಡಿನಲ್ಲೂ, ಹೊರಗಡೆಯೂ ಬಹುದೊಡ್ಡ ರೀತಿಯಲ್ಲಿ ನಡೆಯುವ ವ್ಯಕ್ತಿ ಎಂದು ಹೆಸರು ಗಳಿಸಿದರು. ಭಾರತದ ಸ್ವಾತಂತ್ರ‍್ಯ ಪೂರ್ವದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಯಾವ ಮೂಲೆಗೆ ಹೋದರೂ ಭಾರತದ ನಾಲ್ಕು ಹೆಸರುಗಳನ್ನು ಹೇಳಿದ ತಕ್ಷಣ ಅಲ್ಲಿಯ ಜನ ಮೆಚ್ಚಿ ನುಡಿಯುತ್ತಿದ್ದರು. ಮಹಾತ್ಮ ಗಾಂಧಿ, ಸಿ.ಕೆ.ನಾಯುಡು, ರಣಜಿ ಹಾಗೂ ಹಾಕಿ ಮಾಂತ್ರಿಕ ಧ್ಯಾನ್ ಚಂದ್-ಈ ಹೆಸರುಗಳು ಬ್ರಿಟಿಷ್ ಸಾಮ್ರಾಜ್ಯದಾದ್ಯಂತ ಮನೆಮಾತಾಗಿದ್ದುವು.

ಹಿರಿಯ ಖ್ಯಾತ ಇಂಗ್ಲೆಂಡ್ ಆಟಗಾರ ದಿವಂಗತ ಜಾಕ್ ಹಾಬ್ಸ್ ಅವರು ಒಮ್ಮೆ ನಾಯುಡು ಅವರ ಬಗ್ಗೆ ಮಾತನಾಡುತ್ತ “ಅವರು ಚೆಂಡು ಹಿಡಿದು ಮಿಂಚಿನ ವೇಗದಲ್ಲಿ ಎಸೆಯುವುದನ್ನು ನೋಡಿದಾಗಲೇ ಈತನೊಬ್ಬ ಹುಟ್ಟು ಕ್ರಿಕೆಟರ್ ಎಂಬುದು ಮನದಟ್ಟಾಗುತ್ತದೆ. ಚೆಂಡು ಬರುವ ಬಗ್ಗೆ ಅವರ ನಿರೀಕ್ಷೆ ಅಸಾಧಾರಣ ಮಟ್ಟದ್ದಾಗಿತ್ತು. ಇದರಿಂದ ಇವರು ಕ್ರಿಕೆಟ್ ಮೈದಾನದಲ್ಲಿ ಅಸಾಧ್ಯವಾದುದನ್ನು ಸಾಧಿಸಲು ಸಾಧ್ಯವಾಯಿತು” ಎಂದು ನುಡಿದರು.

ಒಮ್ಮೆ ಕಲ್ಕತ್ತೆಯಲ್ಲಿ ಗಿಲಿಗನ್ ಅವರ ವಿರುದ್ಧ ಪೂರ್ವ ವಲಯ ತಂಡದ ಪರ ಆಡುತ್ತ ನಾಯುಡು ಒಂದೇ ಕ್ಷಣದಲ್ಲಿ ಚೆಂಡು ಹಿಡಿದು ಮಿಂಚಿನ ವೇಗದಲ್ಲಿ ಎಸೆ ಆಂಡಿ ಸ್ಯಾಂಡ್‌ಹ್ಯಾಮ್ ಅವರು ಓಟದ ಗೆರೆಯಿಂದ ಕೆಲವೇ ಅಂಗುಲಗಳ ಹಿಂದಿದ್ದಾಗ ರನ್‌ಔಟ್ ಆಗುವಂತೆ ಮಾಡಿದರು. ಅದ್ಭುತವಾಗಿ ಕ್ಯಾಚ್ ಹಿಡಿಯಬಲ್ಲವರಾಗಿದ್ದ ನಾಯುಡು ಅವರ ಮೈದಾನದ ಯಾವುದೇ ಸ್ಥಾನದಲ್ಲೂ ಅಸಾಮಾನ್ಯ ಫೀಲ್ಡರ್ ಆಗಿದ್ದರು. ತರುಣ ಕ್ರಿಕೆಟ್ ಆಟಗಾರರಿಗೆ ಇವರಿಗಿಂತ ಉತ್ತಮ ಮಾದರಿ ಆಟಗಾರ ಸಿಗಲಾರ.

ಅವರ ಆಟದ ವಿಧಾನವು ವೈಶಿಷ್ಟ್ಯಪೂರ್ಣವೇ ಆಗಿತ್ತು. ಒಬ್ಬ ಖ್ಯಾತ ಕ್ರಿಕೆಟ್ ವರದಿಗಾರ ಇವರ ಬಗ್ಗೆ ಬರೆಯುತ್ತ, “ನಾಯುಡು ಅವರು ಯಾವ ವಿಧಾನವನ್ನೂ ಅನುಸರಿಸಲೇ ಇಲ್ಲ; ಅವರದೇ ಒಂದು ವೈಶಿಷ್ಟ್ಯ ಪೂರ್ಣ ವಿಧಾನವಾಗಿತ್ತು” ಎಂದಿದ್ದರು.

ಸಿ.ಕೆ. ನಾಯುಡು ಕ್ರಿಕೆಟ್‌ನಲ್ಲಿ ಹುಟ್ಟುನಾಯಕ. ತಂಡದ ನಾಯಕರಾಗಿ ಅವರು ಉಳಿದವರು ಶ್ರಮವಹಿಸುವಂತೆ ಮಾಡುತ್ತಿದ್ದರು. ಯಾವ ಕೆಲಸವನ್ನೂ ಪೂರ್ಣಗೊಳಿಸುವ ಗುಣ ಅವರದು. ಉಳಿದವರೂ ತಮ್ಮ ಹಾಗೆಯೇ ಇರಬೇಕೆಂದು ಅವರ ನಿರೀಕ್ಷೆ. ಅವರ ಹಿರಿಮೆಯನ್ನು ಕುಗ್ಗಿಸಬಲ್ಲ ಯಾವ ಅಂಶವೂ ಅವರಲ್ಲಿರಲಿಲ್ಲ. ಅವರ ದೃಷ್ಟಿಯಲ್ಲಿ ದೇಹದಾರ್ಢ್ಯ ಯಾವುದೇ ರೀತಿಯ ಕ್ರೀಡಾಪಟುವಿಗೆ ಪ್ರಥಮ ಅಗತ್ಯವಾಗಿತ್ತು. ಯಾವುದೇ ಆಟಗಾರನು ಆಲಸ್ಯ ನಡೆಯನ್ನು ಅವರು ಸಹಿಸುತ್ತಿರಲಿಲ್ಲ. ಆಟದ ಮೈದಾನದಿಂದ ಹೊರಗೆ ಬಂದಾಗ ಅವರೊಬ್ಬ ಶಾಂತ, ಮೃದು ವ್ಯಕ್ತಿಯಾಗಿದ್ದರು. ತಮ್ಮ ಸಾಧನೆಗಳ ಬಗ್ಗೆ ಅವರು ಎಂದೂ ಹೊಗಳಿ ಮಾತನಾಡಿದುದಿಲ್ಲ.

ಗೌರವಗಳು

ಇವರ ಆಟದ ವೈಖರಿ ಕಂಡು ಮಾರುಹೋಗಿದ್ದ ಹಲವರು ಹತ್ತು ಹಲವು ವಿಧದಲ್ಲಿ ಇವರನ್ನು ಮೆಚ್ಚಿ ಬರೆದರು. ಸಿ.ಬಿ. ಫ್ರೈ ಅವರು, “ಇಂದಿನ ಅತಿಶ್ರೇಷ್ಠ ಆಟಗಾರರಲ್ಲಿ ಇವರೊಬ್ಬರು. ಒಳ್ಳೆಯ ಅಥ್ಲೆಟ್, ಹಿರಿಯ ಕಲಾನಿಪುಣ, ಮನರಂಜಿಸುವ ಆಟದಲ್ಲಿ ಚತುರ” ಎಂದರು. ಜೆ.ಡಬ್ಲ್ಯೂ. ವೆಗಲ್ ಅವರು, “ನಾಯುಡು ಅವರು ಕ್ಯಾಂಟರ್‌ಬರಿಯಲ್ಲಿ, ಸರ್ ವೂಲ್ಲಿ ಒಬ್ಬರೇ ಸಿಕ್ಸರ್ ಬಾರಿಸಬಲ್ಲ ಆಟಗಾರರಲ್ಲ ಎಂಬುದನ್ನು ಆಡಿತೋರಿಸಿದರು. ಅವರದು ಉತ್ಕೃಷ್ಟ ಕ್ರಿಕೆಟ್ ಎಂಬುವರು, “ನಾಯುಡು ಅವರು ಬ್ಯಾಟಿಂಗ್ ಮಾಡುತ್ತಿದ್ದಾಗ ಮಾತ್ರ ಬೋವ್ಸ್ ಅವರ ವೇಗದ ಬೌಲಿಂಗ್ ತನ್ನ ಶಕ್ತಿ ಕಳೆದುಕೊಂಡಿತು; (ಆಗ ಜಗತ್ ಪ್ರಸಿದ್ಧ ಬೌಲರ್ ಆಗಿದ್ದ) ವೆರಿಟಿ ಅವರ ಸ್ಪಿನ್ ಬೌಲಿಂಗ್ ಕಳಾಹೀನವಾಯಿತು. ಈ ಬೌಲಿಂಗ್ ಪ್ರವೀಣರ ಹೆಸರುಗಳನ್ನು ಆ ನಿಮಿಷ ನಾವು ಮರೆತೇಬಿಟ್ಟಿದ್ದೆವು.’ ಎಂದಿದ್ದಾರೆ. ಸಿಂಹಳದ ’ಅಬ್ಸರ‍್ವರ್’ ಪತ್ರಿಕೆಗೆ ಬರೆಯುತ್ತಾ ಪೀಟರ್ ಫರ್ನಾಂಡಿಸ್, “ಸಿ.ಕೆ. ನಾಯುಡು ನನ್ನ ಅತಿ ಮೆಚ್ಚುಗೆಯ ಕ್ರಿಕೆಟರ್. ಮನ ಮೆಚ್ಚುವಂತೆ ವೇಗವಾಗಿ ಸ್ಕೋರು ಮಾಡಬಲ್ಲ ಆತ, ಕೇವಲ ಬಿರುಸಿನ ಹೊಡೆತದ ಆಟಗಾರನಲ್ಲ. ಚಾರ್ಳಿ ಮೆಕಾರ್ಟ್‌‌ನಿ, ವ್ಯಾಲಿ ಹ್ಯಾಮಂಡ್ ಅವರೊಂದಿಗೆ ಹೋಲಿಸಬಹುದಾದ ಆಟಗಾರನಾತ” ಎಂದರು. ಶ್ರೇಷ್ಠ ಕ್ರಿಕೆಟ್ ನಾಯಕ ಜಾರ್ಡಿನ್, “ಆಟದ ಸಮಯದಲ್ಲಿ ನಾಯುಡು ಅವರನ್ನು ಬಲಗೈಯಿಂದ ಆಡುವ ಫ್ರಾಂಕ್‌ವೂಲ್ಲಿ ಎನ್ನಬಹುದು. ಕ್ರಿಕೆಟ್‌ ಆಟದಲ್ಲಿರುವ ಪ್ರತಿ ಹೊಡೆತವೂ ಇವರಿಬ್ಬರಿಗೆ ಕರತಲಾಮಲಕವಾಗಿತ್ತು.” ಎಂದು ಹೊಗಳಿದ್ದಾರೆ.

ಸಿ.ಕೆ. ನಾಯುಡು-ಮುಷ್ತಾಕ್ ಅಲಿ ೧೯೫೦-೫೧ರಲ್ಲಿ ರಣಜಿ ಪ್ರಶಸ್ತಿ ವಿಜೇತ ಹೋಳ್ಕರ್ ತಂಡದಲ್ಲಿ

ಕ್ರಿಕೆಟ್ ಆಟದಿಂದ ನಿವೃತ್ತರಾದ ಮೇಲೆ ನಾಯುಡು ಸುಮ್ಮನೆ ಕೂಡಲಿಲ್ಲ. ಬಿಡುವಿನ ಸಮಯದಲ್ಲಿ ಶಾಲಾ ಕಾಲೇಜುಗಳ ಆಸಕ್ತ ಬಾಲಕರಿಗೆ ಕ್ರಿಕೆಟ್ ತರಬೇತಿ ನೀಡಿದರು. ಪ್ರತಿ ಆಟಗಾರನ ವೈಯಕ್ತಿಕ ವಿಧಾನ ಅರಿತು ಅದನ್ನು ಪೋಷಿಸಿ ಆತ ಹಿರಿಯ ಮಟ್ಟ ತಲುಪಲು ನೆರವಾಗುತ್ತಿದ್ದರು. ಅವರ ವಿಧಾನ ಶುದ್ಧ ಹಾಗೂ ತಿಳಿ. ತಮಗೆ ತಿಳಿದಿದ್ದ ಯಾವೊಂದು ಅಂಶವನ್ನೂ ಮುಚ್ಚಿಡುತ್ತಿರಲಿಲ್ಲ. ಅಲ್ಲದೆ ಅವರಿಗೆ ತಿಳಿಯಹೇಳುವುದರಲ್ಲಿ ಅಸಾಧಾರಣ ಸಾಮರ್ಥ್ಯವಿತ್ತು. ಕ್ರಿಕೆಟ್‌ಪಂದ್ಯಗಳಿಗೆ  ಭಾರತದ ಆಟಗಾರರನ್ನು ಆರಿಸುವವರಲ್ಲಿ ಅವರು ಒಬ್ಬರಾಗಿದ್ದರು. ಭಾರತದ ಕ್ರಿಕೆಟ್ ಬೋರ್ಡ್‌‌ನ ಉಪಾಧ್ಯಕ್ಷರಾಗಿದ್ದರು.

ಅವರ ಐವತ್ತನೇ ಹುಟ್ಟು ಹಬ್ಬವನ್ನು ೧೯೪೪-೪೫ರಲ್ಲಿ ಮುಂಬಯಿ ಹಾಗೂ ಕಲ್ಕತ್ತಗಳಲ್ಲಿ ವೈಭವದಿಂದ ಆಚರಿಸಲಾಯಿತು. ಮುಂಬಯಿ ಜನತೆ ಅವರಿಗೆ ಒಪ್ಪುವ ’ನಿಧಿ’ ಇತ್ತರು.

೧೯೫೫ರಲ್ಲಿ ಇವರ ಷಷ್ಟ್ಯಬ್ದ ಪೂರ್ತಿಯನ್ನು ಆಗ ಭಾರತದ ಉಪರಾಷ್ಟ್ರಪತಿಯಾಗಿದ್ದ ಡಾ|| ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಭಾರತದ ಕ್ರಿಕೆಟ್‌ಗೆ ಈ ಶ್ರೇಷ್ಠ ಕ್ರೀಡಾಪಟು ಸಲ್ಲಿಸಿದ ಸೇವೆಯ ಕುರುಹಾಗಿ ಭಾರತ ಸರ್ಕಾರ ಇವರಿಗೆ ’ಪದ್ಮಭೂಷಣ’ ಪ್ರಶಸ್ತಿ ನೀಡಿತು.

ಹೀಗೆ ಬೆಳೆಯಬೇಕು ಕ್ರಿಕೆಟ್

ರಾಷ್ಟ್ರದ ಕ್ರೀಡಾಪ್ರಗತಿ ವಿಧಾನದಲ್ಲಿ ನಾಯುಡು ಅವರಿಗೆ ನಿಶ್ಚಿತ ಅಭಿಪ್ರಾಯವಿತ್ತು. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾಗಳಿಗೆ ನಮ್ಮ ಶಾಲಾ ತಂಡಗಳನ್ನು ಕಳುಹಿಸಬೇಕೆಂದೂ ಅಲ್ಲಿಯ ಶಾಲಾ ಬಾಲಕರ ತಂಡಗಳನ್ನು ಭಾರತಕ್ಕೆ ಆಹ್ವಾಣಿಸಬೇಕೆಂದೂ ಅವರ ಅಭಿಪ್ರಾಯ. ಕಿರಿಯ ವಯಸ್ಸಿನಲ್ಲೇ ಉತ್ತಮ ಆಟಗಾರರನ್ನು ಕಂಡುಹಿಡಿಯಬೇಕು, ಅವರಿಗೆ ಸರಿಯಾಗಿ ಶಿಕ್ಷಣ ಕೊಡಬೇಕು ಎಂದು ಅವರು ಹೇಳುತ್ತಿದ್ದರು.

ಭಾರತದಲ್ಲಿ ಎಲ್ಲ ಪ್ರಾತಿನಿಧಿಕ ಪಂದ್ಯಗಳನ್ನು ಉತ್ತಮ ಪಿಚ್‌ಗಳಲ್ಲಿ ಆಡಿಸಬೇಕೆಂಬುದು ನಾಯುಡು ಅವರ ವಾದ. ವೇಗದ ಬೌಲರ್‌ಗಳನ್ನು ಪತ್ತೆ ಹಚ್ಚಬೇಕಾದರೆ ಇದೊಂದೇ ವಿಧಾನ ಎಂಬುದು ಅವರ ಖಚಿತ ಅಭಿಪ್ರಾಯ. ಅವರ ಅಭಿಪ್ರಾಯದಂತೆ ಕ್ರಿಕೆಟ್ ಆಟದಲ್ಲಿ ಪ್ರಗತಿಯಾಗ ಬೇಕಾದಲ್ಲಿ ಈ ಕೆಲ ತತ್ವಗಳ ಅನುಸರಣೆ ಅತ್ಯಗತ್ಯ: ಅತ್ಯುತ್ತಮ ಮಟ್ಟಕ್ಕೆ ಸತತ ಅಭ್ಯಾಸವೊಂದೇ ಮಾರ್ಗ; ದಾಳಿಯೇ ಅತಿಶ್ರೇಷ್ಠ ರಕ್ಷಣಾ ವಿಧಾನ; ಸ್ಪರ್ಧಾಪೂರ್ಣ ಪಂದ್ಯಗಳಿಂದ ಮಾತ್ರ ಪ್ರಗತಿ ಸಾಧ್ಯ; ಆಟದ ಮೈದಾನದಲ್ಲಿ ವೈಯಕ್ತಿಕ ಪ್ರತಿಭೆಯ ಪ್ರದರ್ಶನಕ್ಕೆ, ಹೊಟ್ಟೆ ಕಿಚ್ಚಿಗೆ ಎಡೆ ಇಲ್ಲ; ಸೋಲಲಿ, ಗೆಲ್ಲಲಿ, ಯಾವೊಬ್ಬ ಕ್ರೀಡಾಪಟುವೂ ಸದಾಕಾಲವೂ, ಎಲ್ಲ ಸಂದರ್ಭಗಳಲ್ಲೂ ಕ್ರೀಡಾಪಟುವಾಗಿ ವರ್ತಿಸಬೇಕು.

ಕ್ರಿಕೆಟ್‌ನಲ್ಲಿ ಕಿರಿಯ ಆಟಗಾರರಿಗೆ ಅವರಿತ್ತ ಸಂದೇಶ: “ಭಾರತದ ಕ್ರಿಕೆಟ್ ಭವಿಷ್ಯದ ಹೊಣೆ ನಿಮ್ಮದು. ಆಟದ ಬಗ್ಗೆ ಪ್ರೀತಿ ಇರಲಿ. ಆಟಕ್ಕೆ ಒಪ್ಪುವಂತೆ, ನಿಮ್ಮ ಆತ್ಮಕ್ಕೆ ಒಪ್ಪುವಂತೆ ನಡೆಯಿರಿ.” ಅವರ ಆಕರ್ಷಣ ಶಕ್ತಿ, ಅವರ ನಾಯಕತ್ವ ಹಾಗೂ ಹಿರಿಮೆ ಇತರರಿಗೆ ಲಭ್ಯವಾಗುವುದು ಕಷ್ಟ. ಕ್ರಿಕೆಟ್ ಆಟಗಾರ ಹೇಗಿರಬೇಕು ಅಂದರೆ ಸಿ.ಕೆ. ನಾಯುಡು ಅವರನ್ನು ನೋಡು ಅನ್ನಬಹುದಿತ್ತು. ಸೋಲಿನಲ್ಲಿ ಕುಗ್ಗದೆ, ಜಯದಲ್ಲಿ ಹಿಗ್ಗದೆ, ಬೇರೆಯವರ ಸಾಧನೆಗಳ ಬಗ್ಗೆ ಶ್ಲಾಘನೆಯ ಮಾತುಗಳನ್ನಾಡುತ್ತಿದ್ದ ಹಿರಿಯ ಸಾಧಕರಾಗಿದ್ದರವರು.

ರಾಷ್ಟ್ರ ಮತ್ತು ಅಭಿಮಾನಿಗಳು ಕೊಡಬಹುದಾದ ಎಲ್ಲ ಗೌರವಗಳೂ ಅವರಿಗೆ ಸಂದಿದ್ದವು. ಎಲ್ಲಕ್ಕಿಂತ ಮಿಗಿಲಾಗಿ ಅವರು ಕ್ರಿಕೆಟ್ ಆಟಗಾರರ ಹೃದಯದಲ್ಲಿ ಚಿರಸ್ಥಾನ ಸಂಪಾದಿಸಿಕೊಂಡಿದ್ದರು.

ಹಲವು ಆಸಕ್ತಿಗಳು, ಶ್ರೀಮಂತ ವ್ಯಕ್ತಿತ್ವ

ಕ್ರಿಕೆಟ್‌ನಲ್ಲಿ ಪ್ರಪಂಚದಲ್ಲೇ ಖ್ಯಾತಿ ಪಡೆದಿದ್ದ ನಾಯುಡು ಇನ್ನೂ ಹಲವು ಆಟಗಳಲ್ಲಿ ಆಸಕ್ತಿ ಹೊಂದಿದ್ದರು. ಹಾಕಿ ಮತ್ತು ಫುಟ್‌ಬಾಲ್‌ಗಳಲ್ಲಿ ಅವರು ಒಳ್ಳೆಯ ಆಟಗಾರರು. ಹಾಕಿಯಲ್ಲಿ ಮುನ್ನಡೆ ಆಟಗಾರರಾಗಿ, ಫುಟ್‌ಬಾಲ್‌ನಲ್ಲಿ ಹಾಫ್‌ಬ್ಯಾಕ್ ಆಗಿ ಆಡುತ್ತಿದ್ದರು. ತಮ್ಮ ಐವತ್ತೈದನೆಯ ವರ್ಷದಲ್ಲೂ ಟೆನಿಸ್ ಆಡುತ್ತಿದ್ದರು. ಟೆನ್ನಿಸ್‌ನಲ್ಲಿ ಅವರು ಹಲವು ಪ್ರಶಸ್ತಿಗಳನ್ನು ಗಳಿಸಿದರು. ಟೇಬಲ್ ಟೆನ್ನಿಸ್ ಆಡುತ್ತಿದ್ದರು. ಹೋಳ್ಕರರ ಪೋಲೋ ಟೀಮಿನಲ್ಲಿ ಇವರೊಬ್ಬ ಪ್ರಮುಖ ಆಟಗಾರರು. ಅಥ್ಲೆಟಿಕ್ಸ್‌ನಲ್ಲಿ ಹಿರಿಯ ಮಟ್ಟ ಗಳಿಸಿದ್ದರು. ಒಮ್ಮೆ ಒಂದು ನೂರು ಗಜಗಳನ್ನು ೧೦.೫ ಸೆಕೆಂಡುಗಳಲ್ಲಿ ಓಡಿ ಮುಗಿಸಿದರು. ಸಮರ್ಥ ಕುದುರೆ ಸವಾರರು. ಕಾಲೇಜಿನ ಅಥ್ಲೆಟಿಕ್ ಕೂಟದಲ್ಲಿ ಇವರು ಹೈಜಂಪ್ ಸ್ಪರ್ಧೆಯಲ್ಲಿ ಹೊಸ ’ರಿಕಾರ್ಡ್‌’ ಸ್ಥಾಪಿಸಿದರು.

ಗಾಲ್ಫ್‌ ಆಟದಲ್ಲೂ ಉತ್ತಮ ಆಟಗಾರ ಎನಿಸಿಕೊಂಡಿದ್ದರು ನಾಯುಡು. ಅವರು ಇಂದೂರಿನ ಯಶವಂತ್ ಕ್ಲಬ್ ಆಶ್ರಯದ ಬಿಲಿಯರ್ಡ್ಸ್ ಟೂರ್ನಿ ಪ್ರಶಸ್ತಿಯನ್ನು ಒಮ್ಮೆಯೂ ಬೇರೆ ಆಟಗಾರರು ಗೆಲ್ಲಲು ಅವಕಾಶ ಕೊಡಲಿಲ್ಲ. ಅವರ ಮಗ ಬಾಬ್‌ಜೀ ಅವರೂ ಬಿಲಿಯರ್ಡ್ಸ್‌‌ನಲ್ಲಿ ಹಿರಿಯ ಮಟ್ಟ ಪಡೆದಿದ್ದಾರೆ.

ಉತ್ತಮ ಈಜುಗಾರರಾಗಿದ್ದ ನಾಯುಡು ಅವರು ವಿದ್ಯಾರ್ಥಿಯಾಗಿದ್ದಾಗ ಬಾಕ್ಸಿಂಗ್ ಹಾಗೂ ಕುಸ್ತಿ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದರು. ಈ ಹಿರಿಯ ಕ್ರೀಡಾಪಟುವಿಗೆ ಎಲ್ಲ ಆಟಗಳಲ್ಲೂ ಅಪಾರ ಆಸಕ್ತಿ ಇತ್ತು.

ಇವರ ಮಕ್ಕಳಲ್ಲಿ ಪ್ರಕಾಶ್ ಅವರು ರಣಜಿ ಟ್ರೋಫಿಯಲ್ಲಿ ವಿದರ್ಭದ ಪರ ಆಡಿದ್ದಾರೆ. ಇವರ ಮಗಳು ಶ್ರೀಮತಿ ಚಂದ್ರಾ ಅವರು ಅಖಿಲ ಭಾರತ ಮಹಿಳಾ ಕ್ರಿಕೆಟ್ ಮಂಡಲಿಯಲ್ಲಿ ಉನ್ನತಾಧಿಕಾರಿಯಾಗಿದ್ದಾರೆ. ಇವರ ತಮ್ಮ ಸಿ.ಎಸ್. ನಾಯುಡು ಸಮರ್ಥ ಬೌಲರ್ ಆಗಿ ನೇಮಕ ಬಾರಿ ಭಾರತದ ಪರವಾಗಿ ಆಡಿದರು.

ನಾಯುಡು ಅವರಿಗೆ ಸಂಗೀತದಲ್ಲಿ ವಿಶೇಷ ಆಸಕ್ತಿ. ಹಿಂದುಸ್ತಾನಿ ಗಾಯನಕ್ಕೆ ಅವರು ಮಾರುಹೋಗಿದ್ದರು. ಕೆ.ಎಲ್. ಸೈಗಾಲ್ ಮತ್ತು ಶ್ರೀಮತಿ ಕಣ್ಣನ್ ದೇವಿ ಇವರ ಸಂಗೀತ ಎಂದರೆ ಅವರಿಗೆ ಬಹು ಸಂತೋಷ.

ನಾಯುಡು ಒಳ್ಳೆಯ ಬರಹಗಾರರು, ಭಾಷಣಕಾರರು. ಆಕಾಶವಾಣಿಯಲ್ಲಿ ಕ್ರಿಕೆಟ್ ಆಟದ ವಿವರಣೆ ನೀಡುವಾಗ ಅವರ ನಿರೂಪಣೆಯನ್ನು ಕೇಳುವುದೇ ಒಂದು ಸಂತೋಷವಾಗಿತ್ತು. ಎಪ್ಪತ್ತನೆಯ ವಯಸ್ಸಿನಲ್ಲೂ ಅವರ ಬರಹ ಸ್ಫುಟವಾಗಿತ್ತು. ಬಹು ವಿನಯವಂತರು. ದೈವಭಕ್ತರು.

ಇಂತಹ ಗುರು!

ಸಿ.ಕೆ. ನಾಯುಡು ಅವರ ಸ್ಫೂರ್ತಿ ಭಾರತಕ್ಕೆ ಹಲವು ಪ್ರಥಮ ದರ್ಜೆ ಕ್ರಿಕೆಟ್‌ಆಟಗಾರರನ್ನು ರೂಪಿಸಿಕೊಟ್ಟಿತು. ಅಂತಹವರಲ್ಲಿ ಭಾರತದ ಟೆಸ್ಟ್‌ಟೀಮಿನ ನಾಯಕರಾಗಿದ್ದ, ಕೆಚ್ಚಿನ ಆಟಕ್ಕೆ, ನಾಯಕತ್ವಕ್ಕೆ ಹೆಸರಾಗಿದ್ದ ಲಾಲಾ ಅಮರನಾಥ್ ಹಾಗೂ ಮಿಂಚಿನ ಹೊಡೆತಗಳ ಜನಪ್ರಿಯ ಆರಂಭ ಆಟಗಾರ ಸೈಯದ್ ಮುಷ್ತಾಕ್ ಅಲಿ ಮುಖ್ಯರು.

ಸಿ.ಕೆ. ನಾಯುಡು ಅವರ ಬಗ್ಗೆ ಮಾತನಾಡುತ್ತ ಲಾಲಾ ಅಮರನಾಥ್, ೧೯೩೩-೩೪ರಲ್ಲಿ ಡಗ್ಲಾಸ್ ಜಾರ್ಡಿನ್ ಅವರ ನಾಯಕತ್ವದಲ್ಲಿ ಭಾರತಕ್ಕೆ ಬಂದಿದ್ದ ಎಂ.ಸಿ.ಸಿ ತಂಡದ ವಿರುದ್ಧ ಲಾಹೋರಿನಲ್ಲಿ ನಡೆದ ಪಂದ್ಯದಲ್ಲಿ ನಾಯುಡು ಬಾರಿಸಿದ ಸೆಂಚುರಿ ನೆನಪಿಗೆ ತಂದುಕೊಂಡಿದ್ದಾರೆ. “ಆ ಪಂದ್ಯದಲ್ಲಿ, ಆ ವೇಳೆಗಾಗಲೇ ತಮ್ಮ ಭರ್ಜರಿ ಹೊಡೆತಗಳ ಆಟದ ಮೂಲಕ ಸಾಕಷ್ಟು ಖ್ಯಾತಿ ಸಂಪಾದಿಸಿದ್ದ ಸಿ.ಕೆ. ನಾಯುಡು ಅದ್ಭುತ ಸೆಂಚುರಿಯೊಂದನ್ನು ಬಾರಿಸಿದರು. ಅವರ ಸೆಂಚುರಿಯಲ್ಲಿ ಹಲವಾರು ಸಿಕ್ಸರ್‌ಗಳಿದ್ದವು. ಈ ಆಟ ನನಗೆ ಸ್ಫೂರ್ತಿ ತುಂಬಿತು. ಅಂದು ಸಿ.ಕೆ. ನನ್ನ ಆದರ್ಶ ಕ್ರಿಕೆಟರ್ ಆದರು” ಎಂದಿದ್ದಾರೆ ಲಾಲಾ ಅಮರನಾಥ್.

“ಸಿ.ಕೆ. ಅವರಲ್ಲಿ ಉತ್ತಮ ಬ್ಯಾಟ್ಸ್‌ಮನ್‌ಗೆ ಅಗತ್ಯವಾದ ಗುಣಗಳೆಲ್ಲ ಇದ್ದವು. ಎಂತಹುದೇ ಬೌಲಿಂಗ್ ಅನ್ನು ನಿರಾಯಾಸವಾಗಿ ಎದುರಿಸುವ ಶಕ್ತಿ, ಸಾಮರ್ಥ್ಯ ಅವರಲ್ಲಿತ್ತು” ಎಂದು ಲಾಲಾ ಒಂದು ಪಂದ್ಯ ಕುರಿತು ವಿವರಿಸಿದ್ದಾರೆ. ಹಿಂದುಗಳು ಮತ್ತು ಮುಸ್ಲಿಮರ ನಡುವಣ ಕ್ವಾಡ್ರಾಂಗ್ಯುಲರ್ ಪಂದ್ಯ ಅದು. ಭಾರತದ ಎಲ್ಲ ಕಾಲಕ್ಕೂ ಅತಿ ವೇಗದ ಬೌಲರ್ ಮಹ್ಮದ್ ನಿಸ್ಸಾರ್ ಆಗ ಮುಸ್ಲಿಮ್ಸ್‌ಪರ ಆಡುತ್ತಿದ್ದರು. ನಿಸ್ಸಾರ್ ಅಂದು ತಮ್ಮ ಅತ್ಯುತ್ತಮ ಮಟ್ಟದ ಪ್ರದರ್ಶನ ನೀಡುತ್ತಿದ್ದರು. ಅವರು ಬೌಲ್ ಮಾಡಿದ ಚೆಂಡೊಂದು ಮೇಲೆದ್ದು ಬಂದು ಸಿ.ಕೆ. ಅವರ ಹಣೆಗೆ ಬಡಿಯಿತು. ಆದರೆ ನಾಯುಡು ಅಳುಕಲಿಲ್ಲ. ಅಂಜಲಿಲ್ಲ. ಧೈರ್ಯದ ಬ್ಯಾಟಿಂಗ್ ಪ್ರದರ್ಶನ ನೀಡಿದ ಅವರು ೯೬ ರನ್ ಬಾರಿಸಿದರು.

“ಸಿ.ಕೆ. ಕ್ರಿಕೆಟ್‌ನಲ್ಲಿ ಸಾಮಾನ್ಯವಾಗಿ ಕಂಡು ಬರುವ ಎಲ್ಲ ರೀತಿಯ ಹೊಡೆತಗಳನ್ನು ಬಾರಿಸುತ್ತಿದ್ದುದೇ ಅಲ್ಲದೆ ತಮ್ಮದೇ ಆದ ವೈಶಿಷ್ಟ್ಯಪೂರ್ಣ ಹೊಡೆತಗಳನ್ನೂ ಹೊಡೆಯುತ್ತಿದ್ದರು. ಅವರ ಆಟ ಮನೋಹರವಾಗಿರುತ್ತಿತ್ತು. ಅಭಿಮಾನಿಗಳ ಮನ ಸೂರೆಗೊಳ್ಳುವ ಚೈತನ್ಯ ಅವರಲ್ಲಿತ್ತು. ಸ್ಪಿನ್ ಬೌಲಿಂಗ್ ಎದುರಿಸಿ ಸಿಕ್ಸರ್ ಬಾರಿಸಬಲ್ಲ ಕೆಲವೇ ಆಟಗಾರರಲ್ಲಿ ಅವರೊಬ್ಬರು. ಆಫ್-ಸ್ಟಂಪ್‌ನತ್ತ ಬಂದ ಚೆಂಡನ್ನು ಸಿಕ್ಸರ್ ಬಾರಿಸುವ ಬೇರೊಬ್ಬ ಆಟಗಾರರನ್ನು ನಾನು ನೋಡಿಲ್ಲ” ಎಂದಿರುವ ಲಾಲಾ ಅಮರನಾಥ್, “ಸಿ.ಕೆ. ನಾಯುಡು ಅವರು ಉತ್ತಮ ಆಫ್-ಸ್ಪಿನ್ ಬೌಲರ್ ಕೂಡ ಆಗಿದ್ದರು. ಸಮಯಕ್ಕೆ ಒಪ್ಪುವಂತಹ ನಾಯಕತ್ವ ಅವರ ವೈಶಿಷ್ಟ್ಯವಾಗಿತ್ತು. ಅವರೊಬ್ಬ ಅಸಾಧಾರಣ ಕ್ರಿಕೆಟರ್” ಎಂದಿದ್ದಾರೆ.

“ಸಿ.ಕೆ. ನಾಯುಡು ಅವರು ನನ್ನ ದೃಷ್ಟಿಯಲ್ಲಿ ಕೇವಲ ಕೆಟ್ ಆಟಗಾರ ಮಾತ್ರ ಆಗಿರಲಿಲ್ಲ. ಅವರೊಬ್ಬ ಸಾರ್ವಭೌಮ. ನೆಪೋಲಿಯನ್‌ನಂತೆ ಅವರು ಕ್ರಾಂತಿಯ ಶಿಶುವೇ ಅಲ್ಲದೆ ಕ್ರಾಂತಿ ತಂದವರೂ ಆಗಿದ್ದರು” ಎಂದು ಖ್ಯಾತ ಟೆಸ್ಟ್ ಆರಂಭ ಆಟಗಾರ ಸೈಯದ್ ಮುಷ್ತಾಕ್ ಅಲಿ ಹೇಳಿದ್ದಾರೆ.

“ಕೇವಲ ೧೪ ವರ್ಷ ವಯಸ್ಸಿನ ಬಾಲಕನಾಗಿ ನಾನು ಸಿ.ಕೆ. ಯವರ ಬಳಿ ಸೇರಿದೆ. ಅಂದಿನಿಂದ ಅವರು ನನಗೆ ಮಿತ್ರ, ಸಲಹೆಗಾರ, ಮಾರ್ಗದರ್ಶಿಯಾಗಿದ್ದರು. ನಾಯುಡು ಆಡಿದ ಕ್ರಿಕೆಟ್ ವಿಧಾನವನ್ನು ಇಂದಿನ ಪೀಳಿಗೆಯವರು ಕಲ್ಪನೆ ಮಾಡಿಕೊಳ್ಳುವುದೂ ಅಸಾಧ್ಯ. ಅದೊಂದು ಶ್ರೇಷ್ಠ ಆಟಗಾರರ ಯುರ. ಆ ಶ್ರೇಷ್ಠ ಆಟಗಾರರಲ್ಲೂ ಉನ್ನತ ಶ್ರೇಣಿಯ ಆಟಗಾರ ಆತ” ಎಂದ ಮುಷ್ತಾಕ್, “ಬ್ಯಾಟಿಂಗ್‌ಗೆ ನೆರವಾಗುವ ಪಿಚ್‌ಗಳಲ್ಲಿ ಮಾತ್ರವಲ್ಲ, ಬೌಲರುಗಳಿಗೆ ಸಹಾಯಕವಾಗುವ ಪಿಚ್‌ಗಳಲ್ಲೂ ಅವರು ಭರ್ಜರಿ ಹೊಡೆತ ಬಾರಿಸುತ್ತಿದ್ದರು. ನಿಸ್ಸಾರ್, ಅಮರ್‌ಸಿಂಗ್, ಲಿಯರಿ ಕಾನ್ಸ್ಟಾಂಟೈನ್ ಅಂತಹ ವೇಗದ ಬೌಲರುಗಳನ್ನೂ ಮ್ಯಾಟಿಂಗ್ ಪಿಚ್‌ನಲ್ಲಿ ಯಶಸ್ವಿಯಾಗಿ ಎದುರಿಸುವ ಸಾಹಸಿಗಳು ಅವರು” ಎಂದಿದ್ದಾರೆ.

“ಆಡುವಾಗ ಸಿ.ಕೆ. ಯಾವ ಬೌಲರೂ ತಮ್ಮ ಮೇಲೆ ಅಧಿಕಾರ ಪಡೆಯಲು ಬಿಡುತ್ತಿರಲಿಲ್ಲ. ಮನ ಮೋಹಕ ಬ್ಯಾಟಿಂಗ್ ಮಾತ್ರ ಅವರ ಅಸ್ತ್ರವಾಗಿರಲಿಲ್ಲ, ಬದಲಿ ಬೌಲರ್ ಆಗಿಯೂ ಅವರು ಹೆಸರುಗಳಿಸಿದ್ದರು. ಉತ್ತಮವಾಗಿ ಆಡುತ್ತಿದ್ದ ಎದುರಾಳಿ ಆಟಗಾರನ ಚಿತ್ತಸ್ಥೈರ್ಯ ಕಳೆವ ಶಕ್ತಿ ಅವರಲಿತ್ತು. ಅವರು ಅಗ್ರ ಮಟ್ಟದ ಫೀಲ್ಡರ್ ಆಗಿದ್ದರು. ಬ್ಯಾಟ್ಸ್‌‌ಮನ್ ಹತ್ತಿರ ನಿಂತು ಫೀಲ್ಡ್‌ಮಾಡುವುದರಲ್ಲಿ ಅವರು ಖ್ಯಾತನಾಮರಾಗಿದ್ದರು” ಎಂದು ಹೇಳಿದ್ದಾರೆ ಮುಷ್ತಾಕ್.

“ಅವರೊಬ್ಬ ಶಿಸ್ತಿನ ಸಿಪಾಯಿ, ಬೇರೆಯವರಲ್ಲೂ ಅವರು ಶಿಸ್ತು ನಿರೀಕ್ಷಿಸುತ್ತಿದ್ದರು. ಅಸಾಮರ್ಥ್ಯ ಕಂಡರೆ ಅವರಿಗೆ ಆಗುತ್ತಿರಲಿಲ್ಲ. ಉತ್ತಮ ಭವಿಷ್ಯವುಳ್ಳ ಆಟಗಾರರನ್ನು ಪತ್ತೆ ಹಚ್ಚುವ ಬುದ್ಧಿಸಾಮರ್ಥ್ಯ ಅವರಲ್ಲಿತ್ತು. ಅವರು ಶ್ರೇಷ್ಠ ಕ್ರಿಕೆಟ್ ಆಟಗಾರರೇ ಅಲ್ಲದೇ ಅಸಾಧಾರಣ ಮಾನವರೂ ಆಗಿದ್ದರು” ಎಂದೂ ಮುಷ್ತಾಕ್ ಅಲಿ ಅವರು ತಮ್ಮ ಗುರುವಿನ ಬಗ್ಗೆ ಮೆಚ್ಚಿ ನುಡಿದಿದ್ದಾರೆ.

ಉತ್ತಮ ರೇಡಿಯೋ ವರದಿಗಾರ, ಸ್ವತಃ ಆಕರ್ಷಕ ಕ್ರಿಕೆಟರ್ ಆಗಿದ್ದ ದೇವರಾಜ ಪೂರಿ ಅವರು, “ಸಾಮಾನ್ಯವಾಗಿ ನನ್ನನ್ನು ಹನ್ನೊಂದನೆಯ ಆಟಗಾರನಾಗಿ ಬ್ಯಾಟ್ ಮಾಡಲು ಕಳುಹಿಸಲಾಗುತ್ತಿತ್ತು. ಒಮ್ಮೆ ನಾನು ಸಿ.ಕೆ. ಅವರು ಸಿಕ್ಸರನ್ನು ಬಾರಿಸುವುದನ್ನು ಕಂಡೆ. ನಾನೂ ಸಿಕ್ಸರ್‌ಗಳನ್ನು ಬಾರಿಸಿ ಆಡತೊಡಗಿದೆ. ಈ ವಿಷಯವನ್ನು, ನಾನು ಹೇಗೆ ಲಾರ್ಡ್ಸ್‌ಮೈದಾನದಲ್ಲಿ ಚೆಂಡನ್ನು ಮೈದಾನದ ಆಚೆಗೆ ಬಾರಿಸಿದೆ ಎಂಬುದನ್ನು, ಸಿ.ಕೆ. ಅವರಿಗೆ ಹೇಳಿದಾಗ ಅವರು ತುಂಬಾ ಸಂತೋಷಗೊಂಡರು. ಅದೇ ಪಂದ್ಯದಲ್ಲಿ ನಾನು ಆರು ಬಾಲ್‌ಗಳ ಒಂದು ಓವರ್ ನಲ್ಲಿ ೬ ಸಿಕ್ಸರ್ ಬಾರಿಸಿದ್ದೆ. ಅನಂತರ ನಾನು ಹೆಚ್ಚು ಸ್ಕೋರು ಮಾಡಿದಾಗಲೆಲ್ಲ ನನ್ನ ಸ್ಕೋರಿನಲ್ಲಿ ಬೌಂಡರಿಗಳಿಗಿಂತ ಸಿಕ್ಸರ್‌ಗಳೇ ಹೆಚ್ಚಾಗಿ ಇರುತ್ತಿದ್ದವು” ಎಂದು ಬರೆದಿದ್ದಾರೆ.

“ಸಿ.ಕೆ. ಅವರ ಬ್ಯಾಟಿಂಗ್ ವೀಕ್ಷಣೆ ಒಂದು ಸುಂದರ ಕವಿತೆಯಂತೆ ಮನೋಲ್ಲಾಸಕಾರಿ. ಅವರೊಬ್ಬ ಹಿರಿಯ ಆಟಗಾರ, ಉತ್ತಮ ನಾಯಕ, ಎಲ್ಲಕ್ಕಿಂತ ಮಿಗಿಲಾಗಿ ಉದಾತ್ತ ಮಾನವ” ಎಂದಿದ್ದಾರೆ ಪೂರಿ.

ಆಸ್ಟ್ರೇಲಿಯದ ಖ್ಯಾತ ಆಟಗಾರ ನೀಲ್ ಹಾರ್ವೆ ಅವರು ಸಿ.ಕೆ. ಅವರನ್ನು ತಮ್ಮ ಗುರು ಎಂದು ಹೇಳಿದ ಸಂದರ್ಭವನ್ನು ಪೂರಿ ಅವರು ವಿವರಿಸಿದ್ದಾರೆ.

ರಾಷ್ಟ್ರಪತಿಯಾಗಿದ್ದ ವಿ.ವಿ. ಗಿರಿ ಅವರು ಉತ್ತರ ಪ್ರದೇಶದ ರಾಜ್ಯಪಾಲರಾಗಿದ್ದ ಕಾಲ. ೧೯೫೯-೬೦ರ ಐತಿಹಾಸಿಕ ಕಾನ್ಪುರ್ ಟೆಸ್ಟ್‌ಕಾಲದಲ್ಲಿ ರಾಜ್ಯಪಾಲರು ಆಸ್ಟ್ರೇಲಿಯ ಹಾಗೂ ಭಾರತ ತಂಡಗಳ ಗೌರವಾರ್ಥ ಔತಣಕೂಟ ಏರ್ಪಡಿಸಿದ್ದರು. ಆ ಕೂಟದಲ್ಲಿ ಸಿ.ಕೆ. ಅವರ ಬಳಿಗೆ ಬಂದ ಹಾರ್ವೆಯವರು, “ನಮ್ಮ ಗವರ್ನರ್- ಜನರಲ್ (ಚಾರ್ಲಿ ಮೆಕಾರ್ಟ್‌‌ನಿ) ಅವರು ನಿಮ್ಮ ಬಗ್ಗೆ ಸಾಕಷ್ಟು ಅಭಿಮಾನದಿಂದ ಮೆಚ್ಚುಗೆಯ ನುಡಿ ಆಡಿದ್ದಾರೆ” ಎಂದು ಹೇಳಿದರು. ಒಂದು ವಿಶಿಷ್ಟ ರೀತಿಯಲ್ಲಿ ಬೌಲ್ ಮಾಡಲ್ಪಟ್ಟ ಚೆಂಡನ್ನು ಹೇಗೆ ಆಡುವುದೆಂದು ಹಾರ್ವೆ ಸಿ.ಕೆ. ಅವರನ್ನು ಕೇಳಿದರು. ಸಿ.ಕೆ. ಅವರು ತಮ್ಮ ಸಹಜ ರೀತಿಯಲ್ಲಿ ವಿವರಿಸಿದರು. ಮರುದಿನ ಹಾರ್ವೆ ಅವರು ಸಿ.ಕೆ. ಹೇಳಿದ್ದ ರೀತಿಯಲ್ಲೇ ಆಡಿದರು. ಆಡಿ ಬಂದಮೇಲೆ ಹಾರ್ವೆ ಸಿ.ಕೆ. ಅವರನ್ನು ಕುರಿತು, “ನಾನು ಆಡಿದುದು ಸರಿಯಾಗಿತ್ತು ತಾನೇ?” ಎಂದರು. ಹೌದೆಂದು ತಲೆ ಅಲ್ಲಾಡಿಸಿದ ಸಿ.ಕೆ. ನಾಯುಡು ಅವರ ಕಣ್ಣಿನಲ್ಲಿ ತೃಪ್ತಿಯ ಮಿಂಚು ಹೊಳೆಯಿತು.

ಇದ್ದಾಗಶಕ್ತಿ-ಕಣ್ಮರೆಯಗಿ ಸ್ಫೂರ್ತಿ

ನಲವತ್ತು ವರ್ಷಗಳ ಕಾಲ ಪ್ರತಿಭಾವಂತ ಕ್ರಿಕೆಟ್ ಆಟಗಾರರಾಗಿದ್ದು ಭಾರತದ ಕ್ರಿಕೆಟ್‌ನಲ್ಲಿ ಒಂದು ಅದ್ವಿತೀಯ ಶಕ್ತಿಯಾಗಿದ್ದ ಸಿ.ಕೆ. ನಾಯುಡು ೧೯೬೭ ನವೆಂಬರ್ ೧೪ ರಂದು ನಾಗಪುರದಲ್ಲಿ ತೀರಿಕೊಂಡರು. ಆಗ ಅವರಿಗೆ ೭೩ವರ್ಷ ವಯಸ್ಸು. ನಾಯುಡು ಸಮೃದ್ಧವಾಗಿ ರನ್‌ಗಳನ್ನು ಗಳಿಸಿದರು. ಆದರೆ, ರನ್‌ಗಳಿಸುವುದಷ್ಟೆ ಕ್ರಿಕೆಟ್‌ನಲ್ಲಿ ಮುಖ್ಯವಲ್ಲ, ಪ್ರೇಕ್ಷಕರಿಗೆ ಸಂತೋಷವಾಗಬೇಕು ಎನ್ನುವುದನ್ನು ಕ್ರಿಕೆಟ್ ಆಟಗಾರರಿಗೆ ಮನದಟ್ಟು ಮಾಡಿಕೊಟ್ಟರು. ಕ್ರಿಕೆಟ್ ಆಟವನ್ನು ಸಾಹಸ ಪ್ರವೃತ್ತಿಯಿಂದ ಆಡಿದರು. ಸನ್ನಿವೇಶದ ಸವಾಲನ್ನು ಸಂತೋಷದಿಂದ ಸ್ವೀಕರಿಸಿದರು. ಸಿ.ಎಸ್. ನಾಯುಡು, ಮುಷ್ತಾಕ್ ಅಲಿ, ಅಮರನಾಥ್ ಮೊದಲಾದ ಹಲವಾರು ಮಂದಿ ಕ್ರಿಕೆಟ್ ಆಟಗಾರರಿಗೆ ಗುರುವಾದರು. ಈ ರೀತಿಯಲ್ಲಿಯೂ ಭಾರತದ ಕ್ರಿಕೆಟ್ ರಂಗವನ್ನು ಸಮೃದ್ಧಗೊಳಿಸಿದರು. ಅವರಿಂದ, ಕ್ರಿಕೆಟ್‌ದೇಶಗಳನ್ನು ಹತ್ತಿರ ತರುವ ಸೇತುವೆಯಾಯಿತು. ಅವರ ನೆನಪು ಭಾರತದ ಕ್ರಿಕೆಟ್ ಆಟಗಾರರಿಗೆ ಒಂದು ಸ್ಫೂರ್ತಿ.