ಸಿ.ಜಿ. ಕೃಷ್ಣಸ್ವಾಮಿಯವರು ಸಿ.ಜಿ.ಕೆ. ಎಂದೇ ಖ್ಯಾತರಾಗಿದ್ದಾರೆ. ಕನ್ನಡ ರಂಗಭೂಮಿಯ ಕಳೆದ ಮೂರು ದಶಕಗಳಿಂದ ರಂಗಕರ್ಮಿಯಾಗಿ, ಸಂಘಟಕರಾಗಿ ಮುಖ್ಯವಾಗಿ ರಂಗಭೂಮಿ ನಿರ್ದೇಶಕರಾಗಿ ಪ್ರಖ್ಯಾತರಾಗಿದ್ದಾರೆ. ಕನ್ನಡ ರಂಗಭೂಮಿಯ ಅವರ ಸಮಕಾಲೀನ ನಿರ್ದೇಶಕರಿಗಿಂತಲೂ ಭಿನ್ನವಾದ ಆಲೋಚನೆ, ಪ್ರಯೋಗಗಳಿಂದ ವಿಶಿಷ್ಟ ನಿರ್ದೇಶಕರಾಗಿದ್ದಾರೆ. ನಾಟಕಗಳ ಆಯ್ಕೆಯಿಂದಲೇ ತಮ್ಮ ಆಸಕ್ತಿ ಕುತೂಹಲ ಮತ್ತು ಆಶಯಗಳನ್ನು ಪ್ರಕಟಪಡಿಸಿದವರು. ಇವರ ವಿಶೇಷತೆಯೆಂದರೆ ರಂಗಭೂಮಿಯಲ್ಲಿ ಬೆಳಕು ತಜ್ಞರಾಗಿ ಬಂದು ಯಶಸ್ವೀ ನಿರ್ದೇಶಕರೆಂದು ಹೆಸರು ಪಡೆದದ್ದು. ಬಾಲ್ಯದಿಂದಲೇ ಸಾಹಸಿ ಪ್ರವೃತ್ತಿಯನ್ನು ಮೈಗೂಡಿಸಿಕೊಂಡು ಜೀವನವನ್ನು ಛಲವೆಂದು ಸ್ವೀಕರಿಸಿ ನಡೆಸುತ್ತಿರುವವರು. ಬೆಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕ ಹುದ್ದೆಯಲ್ಲಿದ್ದುಕೊಂಡು ಕನ್ನಡ ರಂಗಭೂಮಿಯ ಅವಿನಾಭಾವ ವ್ಯಕ್ತಿತ್ವವಾಗಿ ರೂಪುಗೊಂಡಿದ್ದಾರೆ. ಸಿ.ಜಿ.ಕೆ.ಯನ್ನು ಹೊರತುಪಡಿಸಿ ಕನ್ನಡ ರಂಗಭೂಮಿಯ ಕಳೆದ ಮೂರು ದಶಕಗಳ ಚರಿತ್ರೆಯನ್ನು ಬರೆಯಲಾಗದು. ಸಿ.ಜಿ.ಕೆ. ಕನ್ನಡ ರಂಗಭೂಮಿಯನ್ನು ಕಟ್ಟಿದ ವ್ಯಕ್ತಿಗಳಲ್ಲಿ ಮುಖ್ಯರಾದವರಾಗಿದ್ದಾರೆ.

೧. ಬಾಲ್ಯ, ವಿದ್ಯಾಭ್ಯಾಸ

ಸಿ.ಜಿ.ಕೆ. ೨೭ ಜೂನ್ ೧೯೫೦ರಂದು ಮಂಡ್ಯ ನಗರದಲ್ಲಿ ಸಿ.ಎಸ್. ಗೋವಿಂದನಾಯ್ಕ್ ಮತ್ತು ತಿಮ್ಮಾಜಮ್ಮ ದಂಪತಿಗಳಿಗೆ ಐದು ಜನ ಅಕ್ಕಂದಿರ ಕೊನೇ ತಮ್ಮನಾಗಿ ಹುಟ್ಟಿದರು. ಮೈಶುಗರ್ ಕಂಪೆನಿಯಲ್ಲಿ ಸಹಾಯಕರಾಗಿದ್ದ ತಂದೆ ಸಿ.ಎಸ್. ಗೋವಿಂದನಾಯ್ಕ್ ಮಂಡ್ಯ ಜಿಲ್ಲೆಗೆ ಕಬ್ಬಿನ ಬೆಳೆಯನ್ನು ಪರಿಚಯಿಸಿದವರೆಂದರೆ ಆಶ್ಚರ್ಯವಾಗುತ್ತದೆ. ಗೋವಿಂದನಾಯ್ಕ್ ಅವರು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಕಲಿತಿದ್ದ ತೋಟಗಾರಿಕೆ ಮತ್ತು ಕೃಷಿ ಪಾಠಗಳಿಂದ ಕಬ್ಬಿನ ಬೆಳೆಯ ಬಗ್ಗೆ ವಿಶೇಷ ಆಸಕ್ತಿ ತಳೆದಿದ್ದವರು. ಮೈಶುಗರ್ ಕಂಪನಿಯ ಉದ್ಯೋಗಿಯಾಗಿ ಮಂಡ್ಯದಲ್ಲಿ ನೆಲೆಸಿದ್ದ ಕಾರಣ ಸ್ವಂತ ಸ್ಥಳವಾದ ಚಿತ್ರದುರ್ಗದ ಚಳ್ಳಕೆರೆಗಿಂತಲೂ ಮಂಡ್ಯದ ಜೊತೆಗೆ ತಮ್ಮ ಅವಿನಾಭಾವ ಸಂಬಂಧವನ್ನು ಗುರುತಿಸಿಕೊಂಡವರು. ಬಾಲ್ಯದಿಂದಲೇ ಪೋಲಿಯೋ ಖಾಯಿಲೆಗೆ ತುತ್ತಾದ ಮಗುವನ್ನು ಲಭ್ಯವಿದ್ದ ಎಲ್ಲ ಆಸ್ಪತ್ರೆಗಳಲ್ಲಿ ಸುತ್ತಾಡಿಸಲಾಯಿತು. ಆಗ ಕೆ.ಜಿ.ಎಫ್.ನಲ್ಲಿದ್ದ ದೊಡ್ಡಾಸ್ಪತ್ರೆಯಿಂದ ಮೈಸೂರಿನ ಮಿಷನ್ ಆಸ್ಪತ್ರೆಯವರೆಗೆ ಪೋಲಿಯೋದಿಂದ ಪಾರುಮಾಡಲು ತಂದೆತಾಯಿಗಳ ಪರದಾಟ. ಮೈಸೂರಿನ ಮಿಷನ್ ಆಸ್ಪತ್ರೆಯ ಡಾ. ಟೋವಿ ದಂಪತಿಗಳವರ ಸೇವಾಮನೋಭಾವ ನನ್ನ ಜೀವನದ ಮೇಲೆ ತೀವ್ರ ಪ್ರಭಾವ ಬೀರಿತೆಂದು ಸಿಜಿಕೆ ಜ್ಞಾಪಿಸಿಕೊಳ್ಳುತ್ತಾರೆ. ವರ್ಷಗಳ ಕಾಲ ಆಸ್ಪತ್ರೆಯಲ್ಲೇ ಇರಬೇಕಾದ್ದರಿಂದ ಡಾ. ಟೋವಿ ದಂಪತಿಗಳು ಹಳ್ಳಿಗಾಡಿನ ಜನರನ್ನು ಪ್ರೀತಿ-ವಿಶ್ವಾಸಗಳಿಂದ ನೋಡಿಕೊಳ್ಳುತ್ತಿದ್ದುದೇ ನನ್ನಂಥವರ ಮನಸ್ಸಿನ ಮೇಲೆ ಪ್ರಭಾವ ಬೀರಲು ಕಾರಣವೆಂದು ಸಿಜಿಕೆ ನಂಬಿದ್ದಾರೆ. ಎರಡು ಕಾಲುಗಳ ಶಸ್ತ್ರಕ್ರಿಯೆಗೆ ಒಳಗಾಗಿ ಪೂರ್ಣವಾಗಿ ನಡೆಯಲು ಸಾಧ್ಯವಾಗದಿದ್ದ ಪರಿಸ್ಥಿತಿಯಿಂದ ಪಾರಾಗಿ, ಸ್ವಲ್ಪ ಮಟ್ಟಿಗೆ ಸುಧಾರಿಸಿದರು. ಈ ಸ್ಥಿತಿಯಲ್ಲೇ ವಿದ್ಯಾಭ್ಯಾಸವನ್ನು ಮಂಡ್ಯದ ಸೆಂಟ್ ಜೋಸೆಫ್ ಕಾನ್ವೆಂಟಿನಲ್ಲಿ ಪ್ರಾರಂಭಿಸಿದರು. ಮುಂದೆ ಮಂಡ್ಯದ ನೂತನ ಪ್ರಾಥಮಿಕ ಶಾಲೆಯಲ್ಲೇ ಓದನ್ನು ಮುಂದುವರಿಸಿದ ಸಿಜಿಕೆಯವರು, ತಮ್ಮ ಬಾಲ್ಯದ ವಿದ್ಯಾಭ್ಯಾಸದ ಅವಧಿಯಲ್ಲಿ ಮುಖ್ಯೋಪಾಧ್ಯಾಯರಾದ ಸಿದ್ಲಿಂಗಪ್ಪ ಅವರನ್ನು ಇಂದಿಗೂ ನೆನೆಯುತ್ತಾರೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿದ್ದ ಇಂಗ್ಲಿಷ್ ಭಾಷೆಯನ್ನು ಸುಲಲಿತವಾಗಿ, ಆಪ್ತವಾದ ಧಾಟಿಯಲ್ಲಿ ಹೇಳಿಕೊಡುತ್ತಿದ್ದರು. ರೆನ್‌ ಅಂಡ್ ಮಾರ್ಟಿನ್ ಇಂಗ್ಲಿಷ್ ವ್ಯಾಕರಣ ಪಠ್ಯವನ್ನು ಪುಸ್ತಕ ನೋಡದೆಯೇ ಪಾಠ ಮಾಡುತ್ತಿದ್ದ ಶೈಲಿಯಿಂದಲೇ ನಮಗೆ ಇಂಗ್ಲಿಷ್ ಭಾಷೆಯನ್ನು ಸುಲಭವಾಗಿ ಕಲಿಯಲು ನೆರವಾಯಿತೆಂದು ನೆನಪಿಸಿಕೊಳ್ಳುತ್ತಾರೆ. ಮಂಡ್ಯದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಪಂಡಿತರಾಗಿದ್ದ ವೆಂಕಟಸುಬ್ಬಯ್ಯನವರೂ ಕೂಡ ಸಿಜಿಕೆಯ ಅಚ್ಚುಮೆಚ್ಚಿನ ಅಧ್ಯಾಪಕರು. ಮಹಾಭಾರತದ ಪಠ್ಯವಾಗಿದ್ದ ಭಾಗಗಳನ್ನು ಹೇಳಿಕೊಡುವಾಗ ತನ್ಮಯರಾಗಿ ವಿಶೇಷ ಕರ್ಣಾಭಿಮಾನದಿಂದ ಪಾಠ ಹೇಳುತ್ತಿದ್ದುದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆಯೆಂದು ಜ್ಞಾಪಿಸಿಕೊಳ್ಳುತ್ತಾರೆ. ಎಸ್.ಎಸ್.ಎಲ್.ಸಿ. ಓದುತ್ತಿದ್ದಾಗ ದಕ್ಷಿಣ ಭಾರತದಲ್ಲಿ ಚಾಲ್ತಿಯಲ್ಲಿದ್ದ ಹಿಂದಿ ವಿರೋಧಿ ಚಳುವಳಿಯಲ್ಲಿ ಬಾಗವಹಿಸಿದ ಸಿಜಿಕೆ ಪೊಲೀಸರ ಲಾಠಿ ಏಟಿನ ರುಚಿಯನ್ನು ಬಾಲ್ಯದಲ್ಲೇ ಅನುಭವಿಸಿದರು. ಪೊಲೀಸರ ಏಟಿನಿಂದಾಗಿ ಪರೀಕ್ಷೆಯನ್ನು ಬರೆಯಲಾಗದೆ ಮನೆಯಲ್ಲೇ ಉಳಿಯಬೇಕಾಯಿತು. ಒಂದು ವರ್ಷದ ನಂತರ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಮುಗಿಸಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸಕ್ಕೆ ಸೇರಿಕೊಂಡರು. ಸಿಜಿಕೆ ಕಾಲೇಜು ವಿದ್ಯಾಭ್ಯಾಸ ಪ್ರಾರಂಭಿಸುವ ದಿನಗಳಲ್ಲೇ ಸಮಾಜವನ್ನು ಅರ್ಥಮಾಡಿಕೊಳ್ಳುವ ಹೊಸ ಸಿದ್ಧಾಂತಗಳ ಪರಿಚಯವಾಗ ತೊಡಗಿತು. ನ್ಯಾಷನಲ್ ಕಾಲೇಜಿನ ಅಧ್ಯಾಪಕರಾದ ವೈ.ಎನ್. ರಮೇಶ್ ಮತ್ತು ಡಾ. ಜಿ. ರಾಮಕೃಷ್ಣ ಅವರುಗಳು ನಡೆಸುತ್ತಿದ್ದ ಭಾನುವಾರದ ಪಠ್ಯೇತರ ತರಗತಿಗಳೇ ನನಗೆ ಹೆಚ್ಚು ಪ್ರಿಯವಾಗುತ್ತಿದ್ದವು ಎನ್ನುತ್ತಾರೆ. ಪಠ್ಯೇತರ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ತಳೆದಿದ್ದ ನನಗೆ ಭಾನುವಾರದ ತರಗತಿಗಳು ಸಮಾಜವಾದ, ಕಮ್ಯುನಿಸ್ಟ್ ಚಿಂತನೆಗಳ ಕಡೆಗೆ ದಾರಿ ತೋರಿದ್ದು ನನ್ನ ಜೀವನದ ತಿರುವು ಎಂದು ಸಿಜಿಕೆ ಭಾವಿಸಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಚಟುವಟಿಕೆಯಿಂದಿದ್ದ ಸಿಜಿಕೆ ರಾಜಕೀಯವಾಗಿ ಕೂಡ ಆಸಕ್ತಿ ಬೆಳೆಸಿಕೊಂಡಿದ್ದರು. ‘ಬೆಂಗಳೂರು ಯೂತ್’ ಎಂಬ ಪತ್ರಿಕೆಯೊಂದನ್ನು ಎನ್.ವಿ. ಕೇಶವ ರೆಡ್ಡಿಯವರೊಡನೆ ಸೇರಿ ಪ್ರಕಟಿಸುತ್ತಿದ್ದರು. ವಿದ್ಯಾಭ್ಯಾಸಕ್ಕಿಂತಲೂ ಹೆಚ್ಚಾಗಿ ರಾಜಕೀಯ ಚಟುವಟಿಕೆಗಳಿಗೇ ಪ್ರಾಮುಖ್ಯ ನೀಡುತ್ತಿದ್ದ ಸಿಜಿಕೆಯವರಿಗೆ ಹೋರಾಟದ ಬಿಸಿ ತಟ್ಟಿದ್ದು; ಪ್ರೊ. ಗೋಪಾಲಕೃಷ್ಣ ಅಡಿಗರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಚುನಾವಣೆಗೆ ಜನಸಂಘದಿಂದ ಸ್ಪರ್ಧಿಸಿದ್ದಾಗ ಎಂದು ನೆನಪಿಸಿಕೊಳ್ಳುತ್ತಾರೆ. ಆಗ ಪ್ರೊ. ಕ.ವೆಂ. ರಾಜಗೋಪಾಲ್ ಅವರಿಂದ ಲೇಖನವನ್ನು ಬರೆಸಿ ಬೆಂಗಳೂರು ಯೂತ್ ಪತ್ರಿಕೆಯಲ್ಲಿ ಮುದ್ರಿಸಲಾಯಿತು. “ಕವಿತೆಯನ್ನು ಸ್ವೀಕರಿಸಿ, ಕವಿಯನ್ನು ನಿರಾಕರಿಸಿ ಜರತಾರಿ ಜಗದ್ಗುರು ಅಡಿಗರನ್ನು ದಿಕ್ಕರಿಸಿ” ಎಂಬ ಆಕರ್ಷಕ ಶೀರ್ಷಿಕೆಯಿಂದ ಮುದ್ರಿಸಲಾದ ಲೇಖನಕ್ಕೆ ಸಿಜಿಕೆ ತಮ್ಮ ಪ್ರಾಣವನ್ನು ಪಣ ಇಡಬೇಕಾಯಿತು. ಬೆಂಗಳರಿನ ಮಲ್ಲೇಶ್ವರ ಮೈದಾನದಲ್ಲಿ ವಾಜಪೇಯಿಯವರು ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದಾಗ ತಮ್ಮ ಪತ್ರಿಕೆಯನ್ನು ಹಂಚಲು ಹೋದ ಸಿಜಿಕೆಯವರನ್ನು ಥಳಿಸಲಾಯಿತು. ಸುಮಾರು ಹದಿನೈದು ದಿನಗಳ ಕಾಲ ಆಸ್ಪತ್ರೆಯಲ್ಲಿರಬೇಕಾಯಿತು. ಈ ಘಟನೆಯ ನಂತರ ಸಿಜಿಕೆಯವರಿಗೆ ಯಾವುದಾದರೂ ಪಕ್ಷ ಅಥವಾ ಸಂಘಟನೆಯ ಜೊತೆ ಗುರುತಿಸಿಕೊಳ್ಳುವ ಅನಿವಾರ್ಯತೆ ಉಂಟಾಯಿತು. ಬೆಂಗಳೂರಿನ ಕ್ರಾಂತಿಕಾರಿ ಬುದ್ಧಿಜೀವಿಗಳ ಸಹವಾಸ ಪ್ರಾಪ್ತವಾಯಿತು. ಸ್ನೇಹಿತರ ಒಡನಾಟದಿಂದ ಆಗ ಆಡಳಿತದಲ್ಲಿದ್ದ ಕಾಂಗ್ರೆಸ್ ಪಕ್ಷದ ಸಂಪರ್ಕ ಬೆಳೆಯಿತು. ಚಟುವಟಿಕೆಯಿಂದಿದ್ದ ಸಿಜಿಕೆ ಯವರನ್ನು ಕೆ.ಎಸ್. ಚಂದ್ರಶೇಖರ್‌ರವರು, ಎನ್.ಎಸ್.ಯು.ಐ.ನ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದರು. ಹೀಗೆ ವಿದ್ಯಾರ್ಥಿಯಾಗಿದ್ದಾಗಲೇ ಸಕ್ರಿಯ ರಾಜಕೀಯ ಕಾರ್ಯಕರ್ತರಾಗಿದ್ದ ಸಿಜಿಕೆಯವರಿಗೆ ರಾಷ್ಟ್ರೀಯ ನಾಯಕರ ನೇರ ಸಂಪರ್ಕವುಂಟಾಯಿತು. ಕೆ.ವಿ. ರಘುನಾಥರೆಡ್ಡಿ, ನಂದಿನಿ ಸತ್ಪಥಿ ಮುಂತಾದ ನಾಯಕರುಗಳ ಸಂಪರ್ಕವು ಸಿಜಿಕೆಯವರನ್ನು ಯುವ ಕಾಂಗ್ರೆಸ್ ನಾಯಕನನ್ನಾಗಿ ಮಾಡಿತು. ಬೆಂಗಳೂರಿನಲ್ಲಿ ಫ್ಯಾಸಿಸ್ಟ್ ವಿರೋಧಿ ಸಮಾವೇಶವನ್ನು ಸಂಘಟಿಸುತ್ತಿದ್ದಾಗ ಕಾಂಗ್ರೆಸ್‌ನಲ್ಲಿದ್ದ ಸಿಜಿಕೆಯವರಿಗೆ ವಿವಿಧ ರಾಜಕೀಯ ಪಕ್ಷಗಳ ಸಂಪರ್ಕ ದೊರೆಯಿತು. ಅದರಲ್ಲಿ ಬಹಳ ಮುಖ್ಯವಾದವರೆಂದರೆ ಆಗ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮ್ಯಾರ್ಕ್ಸಿಸ್ಟ್) ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿದ್ದ ಎಂ.ಕೆ.ಭಟ್ ಅವರು. ಅನೇಕ ಯುವಕರಿಗೆ ಸ್ಫೂರ್ತಿಯ ಸೆಲೆಯಾಗಿದ್ದರು. ಎಂ.ಕೆ.ಭಟ್‌ ಅವರು ಸಿಜಿಕೆಯವರ ಮೇಲೆ ತಮ್ಮ ವಿಚಾರಗಳಿಂದ ಪ್ರಭಾವ ಬೀರಿದ್ದರಿಂದ ಸಿಜಿಕೆ ಕಾಂಗ್ರೆಸ್ ಪಕ್ಷದಿಂದ ಕಮ್ಯುನಿಸ್ಟ್ ಸಿದ್ಧಾಂತದ ಕಡೆಗೆ ಒಲವು ತೋರುವಂತಾಯಿತು. ಆಗ ಸಿಜಿಕೆ ಎನ್.ಎಸ್.ಯು.ಐ.ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದರು. ಈ ವೇಳೆಗೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರೊ. ಕೆ. ವೆಂಕಟಗಿರಿಗೌಡರ ಆಪ್ತಬಳಗದ ಶಿಷ್ಯರಲ್ಲಿ ಒಬ್ಬರಾದರು. ಬಡತನದಲ್ಲೇ ಹುಟ್ಟಿ ಎಂ ಎ ಪದವಿ ಪಡೆದು ತನ್ನ ತಾಯಿ ಪೂಜಿಸುತ್ತಿದ್ದ ಆದಿಶಕ್ತಿ ದೇವತೆಯ ಬಗೆಗೂ ಕುತೂಹಲ ಉಳಿಸಿಕೊಂಡು ಬೆಳೆದವರು. ತನ್ನ ತಾಯಿ ಕಟ್ಟಿಸಿದ ಆದಿಶಕ್ತಿ ದೇವಸ್ಥಾನಕ್ಕೆ ಪರಿಶಿಷ್ಠ ಜಾತಿಯ ಜವರಯ್ಯನನ್ನು ಪೂಜಾರಿಯಾಗಿ ನೇಮಕ ಮಾಡಿದ್ದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಆತನ ಸಂಸ್ಕೃತ ಪಾಂಡಿತ್ಯ ಮತ್ತು ಬ್ಲಾಕ್ ಮ್ಯಾಜಿಕ್ ವಿದ್ಯೆಗಳನ್ನು ಆಸಕ್ತಿಯಿಂದ ಗಮನಿಸುತ್ತಿದ್ದವರು.

೨. ಸಿಜಿಕೆಗೆ ರಂಗಭೂಮಿ ನಂಟು

ಕರ್ನಾಟಕದ ಸಾಮಾಜಿಕ ವಾತಾವರಣ ಕ್ರಿಯಾಶೀಲವಾಗುತ್ತಿದ್ದ ಕಾಲದಲ್ಲಿ ಮಾರ್ಕಿಸ್ಟ್ ಕಮ್ಯುನಿಸ್ಟ್ ಪಕ್ಷದ ಸಾಂಸ್ಕೃತಿಕ ಗುಂಪಾಗಿದ್ದ ಸಮುದಾಯ ಸಂಘಟನೆ ವಿಚಾರವಂತ, ಬದ್ಧತೆಯುಳ್ಳ ನಟರ, ಚಿಂತಕರ ವೇದಿಕೆಯಾಗಿತ್ತು. ಎಂ.ಕೆ.ಭಟ್ ಅವರ ಪ್ರಭಾವದಿಂದ ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಒಲವು ತೋರಿದ ಸಿಜಿಕೆ ಅವರು ಸಮುದಾಯದ ಸಕ್ರಿಯ ಸದಸ್ಯರಾದರು. ನಂತರ ಪೂರ್ಣಾವಧಿ ಕಾರ್ಯಕರ್ತರಾದರು. ವಿಚಾರಕ್ಕೆ ಹಚ್ಚುವ, ಬೌದ್ಧಿಕತೆಗೆ ಹೆಸರಾದ ನಾಟಕಗಳನ್ನು ಪ್ರದರ್ಶನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಸಮುದಾಯ ಸಂಘಟನೆಯನ್ನು ಸಂಘಟಿಸುವ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಲಾರಂಬಿಸಿದರು. ಇದರ ಫಲವಾಗಿ ಸಮುದಾಯ ಸಾಂಸ್ಕೃತಿಕ ಜಾಥಾ ಸಂಘಟಿಸಲಾಯಿತು. ಬೀದರ್‌ನಿಂದ ಧಾರವಾಡಕ್ಕೆ ಒಂದು ತಂಡ ಜಾಥಾ ಮೂಲಕ ಬಂದರೆ, ಕೆಜಿಎಫ್‌ನಿಂದ ಧಾರವಾಡಕ್ಕೆ ಮತ್ತೊಂದು ತಂಡ ಬಂದಿತು. ಬೀದರ್‌ನಿಂದ ಹೊರಟ ತಂಡಕ್ಕೆ ಸಿಜಿಕೆ ನೇತೃತ್ವ ವಹಿಸಿದರೆ ಕೆಜಿಎಫ್‌ನಿಂದ ಪ್ರಾರಂಭವಾದ ತಂಡವನ್ನು ಪ್ರಸನ್ನ ಮುನ್ನಡೆಸಿದರು. ಇಂತಹ ಸಾಂಸ್ಕೃತಿಕ ಜಾಥಾದ ಸಂಘಟನೆಗಾಗಿ ಆರ್ಥಿಕ ಸಂಪನ್ಮೂಲಗಳನ್ನು ರೂಪಿಸಿಕೊಳ್ಳಲು ಸಿಜಿಕೆ ಹೊಸ ಯೋಜನೆಯೊಂದನ್ನು ರೂಪಿಸಿ ಶುಭಾಶಯ ಪತ್ರಗಳ ಮೂಲಕ ಹಣ ಸಂಗ್ರಹಿಸಿದರು. ಭಾರತದ ಸಾಂಸ್ಕೃತಿಕ ಜಾಥಾಗಳಲ್ಲಿ ಇದೊಂದು ಪ್ರಮುಖ ಜಾಥಾ ಎಂದು ದೇಶದ ಎಲ್ಲ ಸಾಂಸ್ಕೃತಿಕ ತಜ್ಞರು ಗುರುತಿಸುತ್ತಾರೆ. ಈ ಜಾಥಾ ಕರ್ನಾಟಕದ ಹಲವು ಹತ್ತು ಕ್ರಿಯಾಶಾಲಿಗಳನ್ನು ಸಾಹಿತ್ಯ, ಸಂಸ್ಕೃತಿ, ರಾಜಕೀಯ ಕ್ಷೇತ್ರಕ್ಕೆ ತಂದಿತು ಎನ್ನಬಹುದು. ಇಂದಿಗೂ ಸಿಜಿಕೆಯ ಅಪಾರವಾದ ರಂಗ ಅನುಭವಕ್ಕೆ ಈ ಜಾಥಾ ಒದಗಿಸಿದ ಅನುಭವವೇ ಕಾರಣ ಎನ್ನುತ್ತಾರೆ. ಅವರ ರಂಗಜೀವನ ಪ್ರಾರಂಭವಾದದ್ದೇ ಸಮುದಾಯದ ಮೂಲಕ. ಸಾಂಪ್ರದಾಯಕ ಥಿಯೇಟರ್‌ನಿಂದ ನಾವು ಜನಸಮೂಹವನ್ನು ತಲುಪಬಹುದೆ? ಕಲಾಮಾಧ್ಯಮದ ಮೂಲಕ ಜನಸಾಮಾನ್ಯರ ಹೃದಯಮುಟ್ಟಿ ಹೊಸ ಚಿಂತನೆಗೆ ಅವರನ್ನು ಹಚ್ಚುವುದು ಸಾಧ್ಯವೇ? ಎಂದು ಸಿಜಿಕೆ ಯೋಚಿಸತೊಡಗಿದರು. ಕಲಾಕ್ಷೇತ್ರದ ನಾಟಕ ಪ್ರದರ್ಶನದಿಂದ ಪ್ರಯೋಜನವಾಗುವುದಿಲ್ಲ. ಮಧ್ಯಮ ವರ್ಗದ ಪ್ರೇಕ್ಷಕರು ನಮ್ಮ ಉದ್ದೇಶಗಳಿಗೆ ಸ್ಪಂದಿಸಲಾರರು ಎಂದು ತೀರ್ಮಾನಿಸಿ ಬೀದಿನಾಟಕದ ಕಡೆಗೆ ತಮ್ಮ ಚಿಂತನೆಯನ್ನು ಹರಿಯಬಿಟ್ಟರು. ಬೆಂಗಳೂರು ನಗರದ ಕೊಳಗೇರಿಗಳಲ್ಲಿ ಈ ನಾಟಕಗಳ ಪ್ರದರ್ಶನ ಮಾಡುವ ಮೂಲಕ ನಮ್ಮ ಚಿಂತನೆಗಳನ್ನು ಕೆಳವರ್ಗದ ಜನರ ನಾಡಿಗಳಲ್ಲಿ ಬಿತ್ತಬೇಕೆಂದು ತೀರ್ಮಾನಿಸಿದರು. ಇದಕ್ಕಾಗಿ ‘ಸಮುದಾಯ’ ಸಂಘಟನೆಯನ್ನೇ ತೊಡಗಿಸಿ, ಸಮುದಾಯದಲ್ಲಿ ಮೊದಲ ಬಾರಿಗೆ ಕೆಳವರ್ಗ, ಕೆಳಜಾತಿಗಳ ನಟರೂ ಪಾಲ್ಗೊಳ್ಳುವಂತೆ ಮಾಡಿದರು. ಬೀದಿನಾಟಕದ ವಸ್ತು ಸಮಕಾಲೀನ ಸಮಸ್ಯೆಗಳೇ ಆಗಿರುತ್ತಿದ್ದವು. ಬಿಹಾರ ರಾಜ್ಯದ ಬೆಲ್ಚಿ ಗ್ರಾಮದಲ್ಲಿ ಕೂಲಿಕಾರರನ್ನು ಜಮೀನ್ದಾರರು ಜೀವಂತ ಸುಟ್ಟು ಹಾಕಿದ್ದ ವಸ್ತುವನ್ನೇ ನಾಟಕ ಮಾಡಿದರು. ಆರ್‌.ವಿ. ಟೀಚರ್ಸ್ ಕಾಲೇಜಿನಲ್ಲಿ ತಾಲೀಮು ನಡೆಸಲು ಅವಕಾಶ ದೊರೆತು ಸುತ್ತಮುತ್ತಲಿನ ಕೊಳಗೇರಿ ಬಾಲಕರನ್ನು ನಟರನ್ನಾಗಿ ತಯಾರು ಮಾಡಿದರು. ಹನ್ನೆರಡು ಜನ ನಟರಲ್ಲಿ ಎಂಟು ಜನ ನಟರು ಕೊಳೆಗೇರಿಗಳಿಂದ ಬಂದವರಾಗಿದ್ದರು. ಬೆಂಗಳೂರಿನ ಅನೇಕ ಕೊಳೆಗೇರಿಗಳಲ್ಲಿ ಪ್ರದರ್ಶನ ನಡೆಯಿತು. ಈ ನಾಟಕ ದೇಶದ ಮೂಲೆ ಮೂಲೆಗಳಲ್ಲಿ ಅಭಿನಯಿಸಲ್ಪಟ್ಟು ಬೀದಿ ನಾಟಕದ ಹೊಸ ಆವಿಷ್ಕಾರಕ್ಕೆ ಮುನ್ನಡೆ ಇಟ್ಟಿತು. ಈ ನಾಟಕ ಅಚ್ಚಾಗದೆ ಅಂದು ಭಾರತದ ಎಲ್ಲ ಭಾಷೆಗಳಲ್ಲೂ ಅಭಿನಯಿಸಲ್ಪಟ್ಟಿತು ಎಂಬುದೇ ಈ ನಾಟಕದ ಹೆಗ್ಗಳಿಕೆ. ಮದರಾಸಿನ ಮೇರಿನಾ ಬೀಚಿನಿಂದ ಕಲ್ಕತ್ತಾದ ಇಡನ್ ಗಾರ್ಡನ್ ತನಕ ಪ್ರದರ್ಶನಕೊಟ್ಟು ದೇಶದ ಬೀದಿ ರಂಗಭೂಮಿಯಲ್ಲಿ ಸಿಜಿಕೆ ಹೆಸರು ಶಾಶ್ವತವಾಯಿತು. ಸಿಜಿಕೆಯವರ ಪ್ರಯತ್ನದಿಂದಾಗಿ ಕವಿ ಸಿದ್ಧಲಿಂಗಯ್ಯ ಬರೆದ ‘ಪಂಚಮ’ ನಾಟಕವು ಸುಮಾರು ಒಂದು ಸಾವಿರ ಪ್ರದರ್ಶನ ಕಂಡಿದೆ. ಈ ಯಶಸ್ಸಿನಿಂದ ಸಮುದಾಯ ಸಂಘಟನೆಯು ಹೊಸ ಚಿಂತನೆಗೆ ಅರ್ಪಿಸಿಕೊಳ್ಳುವಂತೆ ಮಾಡಿದ ಕೀರ್ತಿ ಸಿಜಿಕೆಯವರದು.

ಸಿಜಿಕೆಯವರೇ ಹೇಳುವಂತೆ ಕನ್ನಡ ರಂಗಭೂಮಿಯಲ್ಲಿ ಯಾವ Theme ಇಲ್ಲವಾಗಿದೆಯೋ ಅದನ್ನು ಹುಡುಕುವುದೇ ನನ್ನ ಆಸೆಯಾಗಿದೆ ಎನ್ನುತ್ತಾರೆ. ಕೆಲವು ವರ್ಷಗಳ ನಂತರ ಸಿಜಿಕೆ ಸಮುದಾಯವನ್ನು ತ್ಯಜಿಸಿ ರಂಗಸಂಪದ ಎಂಬ ರಂಗತಂಡವನ್ನು ಸೇರಿ ನಿರ್ದೇಶನವನ್ನು ಮಂದುವರಿಸಿದರು. ಸಮುದಾಯವನ್ನು ಬಿಡಲು ಕೆಲವು ವೈಯಕ್ತಿಕ ಕಾರಣಗಳಾದರೆ, ಸೈದ್ಧಾಂತಿಕವಾಗಿಯೂ ಭಿನ್ನದಾರಿಯಲ್ಲಿ ಆಲೋಚಿಸಲು ತೊಡಗಿದೆ ಎನ್ನುತ್ತಾರೆ. ಅಂದರೆ ನಮ್ಮ ನೆಲ ಮೂಲ ಸಂಸ್ಕೃತಿಯಿಂದ ಹುಟ್ಟಿದ ಪರಿಕಲ್ಪನೆ ನಾವು ಯೋಚಿಸಲಿಲ್ಲವೇಕೆ ಎಂಬುದು ಅವರ ಚಿಂತನೆ ಆಗಿದೆ. ಉದಾಹರಣೆಗೆ ಕನಕನ ಪರಿಕಲ್ಪನೆ, ನಮ್ಮವರೇ ಆದ ಸಂಸ ಮುಂತಾದವರನ್ನು ಕುರಿತು ನಾಟಕ ಮಾಡುವುದು ನನ್ನ ಆಶಯಗಳಲ್ಲಿ ಒಂದಾಯಿತು. ರಂಗಸಂಪದದ ಮೂಲಕ ಬಿ.ವಿ. ವೈಕುಂಠರಾಜು ಅವರ ‘ಸನ್ನಿವೇಶ’ವನ್ನು ಇಬ್ಬರೂ ಕೂಡಿ ನಿರ್ದೇಶಿಸಿದರು. ವೇಶ್ಯೆಯ ಸಮಸ್ಯೆಯನ್ನು ರಂಗದ ಮೇಲೆ ತಂದು ಹೊಸರೀತಿಯ ನಾಟಕವೆಂದು ಹೆಸರು ಮಾಡಿದ ‘ಸನ್ನಿವೇಶ’ ನಾಟಕವು ರಂಗಭೂಮಿಯಲ್ಲೊಂದು ಮೈಲಿಗಲ್ಲು. ಪ್ರೊಸೀನಿಯಂ ರಂಗಭೂಮಿಯಲ್ಲಿ ಮುಖ್ಯ ಘಟ್ಟವಾಗಿ ನಿಲ್ಲುವ ಈ ನಾಟಕದಿಂದ ಹೊಸರೀತಿಯ ಚರ್ಚೆ ಆರಂಭವಾಯಿತು. ಕನ್ನಡ ರಂಗಭೂಮಿ ಆ ಸಂದರ್ಭಗಳಲ್ಲಿ ಎರವಲು ನಾಟಕಗಳಿಗೆ ಸೀಮಿತವಾಗಿದ್ದ ಕಾಲದಲ್ಲಿ ನಮ್ಮ ನೋವಿನ ನೆಲೆಗಳನ್ನು ರಂಗಭೂಮಿಯ ಮೇಲೆ ಪ್ರದರ್ಶಿಸಬೇಕೆಂದು ಹಂಬಲಿಸಿದರು. ಇದರ ಫಲವಾಗಿ ಸಿಜಿಕೆಯನ್ನು ಕಾಡಿದ್ದು ದೇವನೂರು ಮಹಾದೇವ ಅವರ ‘ಒಡಲಾಳ’ ಕಾದಂಬರಿ. ‘ಒಡಲಾಳ’ ಕಾದಂಬರಿಯನ್ನು ನಾಟಕವನ್ನಾಗಿ ಮಾಡುವುದು ಸಾಧ್ಯವೇ ಇಲ್ಲವೆಂದು ಪ್ರಸಿದ್ಧ ವಿಮರ್ಶಕರು, ಸಾಹಿತಿಗಳು ಹೇಳಿದಾಗ ಸಿಜಿಕೆ ಅದನ್ನು ಸವಾಲಾಗಿ ಸ್ವೀಕರಿಸಿದರು. ಕಾದಂಬರಿಯನ್ನು ತಾವೇ ರಂಗರೂಪಕ್ಕೆ ತಂದರು. ಕನ್ನಡ ರಂಗಭೂಮಿ ಈವರೆಗೆ ಕಾಣದ ಯಶಸ್ಸು ಒಡಲಾಳ ನಾಟಕದ್ದಾಯಿತು. ಕನ್ನಡ ನಾಟಕಕ್ಕೆ ಬರೆಯಲಾಗದಷ್ಟು ವಿಮರ್ಶೆ, ಗುಣಾತ್ಮಕವಾಗಿ ಮತ್ತು ಪ್ರಮಾಣಾತ್ಮಕವಾಗಿ ಒಡಲಾಳ ನಾಟಕಕ್ಕೆ ಬಂದಿತ್ತು. ಇಂದಿಗೂ ಈ ದಾಖಲೆಯನ್ನು ಯಾವ ನಾಟಕವೂ ಕೂಡ ಸರಿಗಟ್ಟಲಿಲ್ಲ ಎಂಬುದನ್ನು ಗಮನಿಸಲೇಬೇಕು. ಒಡಲಾಳದ ಕೇಂದ್ರ ಪಾತ್ರವಾದ ಸಾಕವ್ವನಾಗಿ ನಟಿಸಿದ ರಂಗನಟಿ ಉಮಾಶ್ರೀ ಕನ್ನಡ ರಂಗ ಭೂಮಿಯಲ್ಲೇ ದೈತ್ಯ ಪ್ರತಿಭೆಯಾಗಿ ಕಾಣಿಸಿಕೊಂಡರು. ಅಲ್ಲಿಂದ ಚಿತ್ರನಟಿಯಾಗಿ ಚಿತ್ರರಂಗಕ್ಕೆ ಪ್ರವೇಶ ಪಡೆದರು. ಒಡಲಾಳ ನಾಟಕದ ಯಶಸ್ಸಿನ ನಂತರ ಸಿಜಿಕೆ ಆಯ್ಕೆ ಮಾಡಿಕೊಂಡ ಒಂದೊಂದು ನಾಟಕದ ಹಿಂದೆ ವಿಶಿಷ್ಟ ಉದ್ದೇಶವಿದೆ. ಖ್ಯಾತ ಲೇಖಕರು ರಂಗಭೂಮಿಗೆ ಬಂದು, ನಾಟಕಕಾರರಾದರು.

ಮೌಖಿಕ ಪರಂಪರೆಗೆ ಹೆಸರಾದ ಪ್ರೊ. ಕೀರಂ ನಾಗರಾಜ ಅವರು ಸಿಜಿಕೆಯವರಿಗೆ ವಿಶೇಷವಾಗಿ ಎರಡು ನಾಟಕಗಳನ್ನು ಬರೆದುಕೊಟ್ಟಿದ್ದು ಸಾಧನೆಯೇ ಸರಿ. ಇವರ ‘ನೀಗಿಕೊಂಡ ಸಂಸ’, ನಾಟಕ ಎಂಥಹ ನಿರ್ದೇಶಕನಿಗಾದರೂ ಅಪ್ರತಿಮ ಸವಾಲೇ. ಕ್ಷಣ ಮಾತ್ರದಲ್ಲಿ ಸಂಸ ಕವಿಯಾಗಿ, ಕ್ಷಣ ಮಾತ್ರದಲ್ಲಿ ವಿಕ್ರಮರಾಯನಾಗಿ ರಂಗದ ಮೇಲೆ ತಂದ ಸಿಜಿಕೆಯ ರಂಗತಂತ್ರ, ಇಂದಿಗೂ ಸಿದ್ದ ರಂಗತಂತ್ರಜ್ಞರಿಗೆ ಸವಾಲೇ ಆಗಿದೆ. ಇನ್ನು ‘ಕಾಲಜ್ಞಾನಿ ಕನಕ’ ನಾಟಕ ನಮ್ಮ ಕಾಲಕ್ಕೆ ಪ್ರಸ್ತುತವಾಗಿ ರೂಪುಗೊಂಡಿರುವ ನಾಟಕ. ಯುದ್ಧ ಅಹಿಂಸೆ ತ್ಯಜಿಸಿ ಹರಿಭಕ್ತ ಪರಂಪರೆಗೆ ಸೇರಿದ ಕನಕನ ನಾಟಕ ನಮ್ಮ ಇಂದಿನ ಕ್ರಿಯಾಶೀಲ ಲೇಖಕರಿಗೆ ಹೇಗೆ ಭೂತವನ್ನು ವರ್ತಮಾನವನ್ನಾಗಿಸಬಹುದು ಎಂಬುದಕ್ಕೆ ಸ್ಪಷ್ಟ ಸಾಕ್ಷಿ. ವಾದಿರಾಜರು ಮತ್ತು ಪುರಂದರರ ಅಂತಹ ಶೋಧ ಕೂಡ ಕನಕನ ನಾಟಕದ ಮೂಲಕ ಪ್ರತಿಬಿಂಬಿತವಾಗಿದೆ. ಹೀಗೆ ನಮ್ಮ ಪರಂಪರೆಯನ್ನು ಸಮಕಾಲೀನ ಸಂದರ್ಭದಲ್ಲಿ ನಿಂತು ಎದುರು ನೋಡುವ ಹೊಸ ಕುತೂಹಲ ಈ ನಾಟಕದಲ್ಲಿದೆ. ಈ ರೀತಿಯ ಅನ್ವೇಷಣೆಯಲ್ಲೇ ಸಿಜಿಕೆ ತಮ್ಮ ರಂಗಜೀವನವನ್ನು ನಿರ್ದೇಶಕರಾಗಿ ಮುಂದುವರಿಸಿದರು. ವಚನ ಚಳುವಳಿಯನ್ನು ಭಿನ್ನ ದೃಷ್ಟಿಕೋನದಿಂದ ನೋಡಿದ ನಾಟಕ ‘ಮಹಾಚೈತ್ರ’ ಕವಿ ಎಚ್.ಎಸ್. ಶಿವಪ್ರಕಾಶ್ ಸಿಜಿಕೆ ಯವರಿಂದಲೇ ಈ ನಾಟಕ ಬರೆದರು. ಮಡಿವಾಳ ಮಾಚಿದೇವ, ಹಡಪದ ಅಪ್ಪಣ್ಣ ಮುಂತಾದ ವಚನಕಾರರ ಮೂಲಕ ಬಸವ ಚಳುವಳಿಯ ವಿಮರ್ಶಾತ್ಮಕ ದೃಷ್ಟಿಯಿಂದ ನೋಡುವ ಪ್ರಯತ್ನವೇ ‘ಮಹಾಚೈತ್ರ’. ಸುಮಾರು ಎಪ್ಪತ್ತೈದು ನಟರ ಜೊತೆ ಅದ್ದೂರಿ ರಂಗಪ್ರಯೋಗವಾಗಿ ಮೂಡಿಬಂದ ‘ಮಹಾಚೈತ್ರ’ ನಾಟಕ ಕನ್ನಡ ನಾಟಕಗಳಲ್ಲಿ ವಿಶಿಷ್ಟವಾದದ್ದು. ಇದೇ ವಸ್ತುವನ್ನು ಒಳಗೊಂಡ ಲಂಕೇಶರ ‘ಸಂಕ್ರಾಂತಿ’, ಗಿರೀಶ್ ಕಾರ್ನಾಡರ ‘ತಲೆದಂಡ’ ನಾಟಕಗಳಿಗಿಂತ ಭಿನ್ನದೃಷ್ಟಿಯಿಂದ ನೋಡುವ ಪ್ರಯತ್ನ ಇಲ್ಲಿ ನಡೆದಿದೆ. ಆದ್ದರಿಂದಲೇ ಸಿಜಿಕೆಯವರ ನಾಟಕಗಳ ಆಯ್ಕೆಯೇ ಅವರ ಮೂಲಭೂತ ಕಾಳಜಿಗಳನ್ನು ತಿಳಿಸುತ್ತದೆ.

ಶಿವಪ್ರಕಾಶ್ ಬರೆದ ‘ಸುಲ್ತಾನ್ ಟಿಪ್ಪು’ ನಾಟಕ ಕೂಡ ಐತಿಹಾಸಿಕವಾಗಿ ಮಹತ್ವ ಪಡೆದಿದೆ. ಮೈಸೂರನ್ನು ಆಳಿದ ಟಿಪ್ಪು ಅನೇಕ ರೀತಿಯಲ್ಲಿ ಕುತೂಹಲಕರ ವ್ಯಕ್ತಿತ್ವವುಳ್ಳವನು. ಅಲ್ಪ ಸಂಖ್ಯಾತನೆಂಬ ಸಾಂಪ್ರದಾಯಿಕ ನಂಬಿಕೆಯಿಂದ ಟಿಪ್ಪುವನ್ನು ನಾವು ಅಧ್ಯಯನ ಮಾಡುವ ಪ್ರಯತ್ನ ಮಾಡಲಿಲ್ಲ. ಅಂತಹ ಶೋಧಗಳ ಮೂಲಕ ಹೊಸ ದರ್ಶನವನ್ನು ಕಾಣಬೇಕಾಗಿದೆ ಎಂದು ನಂಬಿದ ಸಿಜಿಕೆ ‘ಸುಲ್ತಾನ್ ಟಿಪ್ಪು’ ನಾಟಕ ನಿರ್ದೇಶಿಸಿ ಅನೇಕ ಪ್ರಯೋಗಗಳನ್ನು ಮಾಡಿದರು. ಕನ್ನಡ ರಂಗಭೂಮಿಯಲ್ಲಿ ಈ ರೀತಿಯ ಶೋಧಗಳನ್ನು ಏಕೆ ಈವರೆಗೆ ಮಾಡಲಾಗಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಕಷ್ಟಕರವಾದದ್ದು. ಆದರೂ ನಾವೀಗ ಉತ್ತರ ಕಂಡುಕೊಳ್ಳಬೇಕಾದ ಅನಿವಾರ್ಯ ಸಂದರ್ಭದಲ್ಲಿದ್ದೇವೆ. ಆದ್ದರಿಂದಲೇ ಸಿಜಿಕೆ ನಮ್ಮ ನಡುವಿನ ಸಾಂಸ್ಕೃತಿಕವಾಗಿ ಮಹತ್ವ ಪಡೆದ ರಂಗ ನಿರ್ದೇಶಕರಾಗಿದ್ದಾರೆ.

ಸಂಸ ನಾಟಕವು ಅತ್ಯುತ್ತಮ ತಾಂತ್ರಿಕತೆಯಿಂದ ಕೂಡಿದ ನಾಟಕವೆಂದು ಪ್ರಸಿದ್ಧವಾಗಿದೆ. ಇಂಡಿಯಾದ ರಂಗನಿರ್ದೇಶಕರಿಗೆ ಸವಾಲಾಗುವಂತಹ ನಾಟಕವೆಂದೇ ಖ್ಯಾತಿ ಪಡೆದಿದೆ. ಕನ್ನಡ ರಂಗಭೂಮಿ ಸಿಜಿಕೆಯವರ ನಿರ್ದೇಶನದಿಂದಲೇ ಪ್ರತ್ಯೇಕ ದಾರಿಯೊಂದರಲ್ಲಿ ಹೆಜ್ಜೆ ಹಾಕಿದೆ. ಸಾಕವ್ವ, ಸಂಸ, ಕನಕ, ಟಿಪ್ಪು, ವಚನಕಾರರು ಮುಂತಾದವರನ್ನು ನೋಡಿದರೆ ವಿಶೇಷತೆ ಕಾಣುತ್ತದೆ. ಸಾಕವ್ವನೆಂಬ ದಲಿತ ಲೋಕದ ಪ್ರತಿಮೆಯನ್ನು ರಂಗದ ಮೇಲೆ ತಂದದ್ದನ್ನು ನೋಡಿದರೆ ಪ್ರತಿಭಾವಂತ ನಿರ್ದೇಶಕ ಮಾತ್ರ ಇಂತಹ ಕೆಲಸ ಮಾಡಲು ಸಾಧ್ಯ ಅನ್ನಿಸುತ್ತದೆ. ತನ್ನ ಮಕ್ಕಳನ್ನೇ ಅಡವಿಟ್ಟ ದೇಶಪ್ರೇಮಿ ಟಿಪ್ಪು, ಮುಸ್ಲಿಂ ಎಂಬ ಕಾರಣಕ್ಕಾಗಿಯೇ ನಾವು ಕಡೆಗಣಿಸಿದ್ದೇವೆ. ಶರೀಫ, ಸರ್ವಜ್ಞರಂತಹ ಲೋಕಚಿಂತಕರ ಬಗ್ಗೆ ನಮ್ಮಲ್ಲಿ ನಾಟಕಗಳಿಲ್ಲ. ಅಂತಹ ಶೋಧನಾ ಮಾರ್ಗದಲ್ಲಿ ನಡೆದ ರಂಗನಿರ್ದೇಶಕರಾದ್ದರಿಂದ ಸಿಜಿಕೆ ಮುಖ್ಯರಾಗುತ್ತಾರೆ. ಯಾರು ಬೇಕಾದರೂ ರಂಗನಿರ್ದೇಶಕರಾಗಬಹುದು. ಆದರೆ ಸಿಜಿಕೆಯ ಯಶಸ್ಸಿನ ಗುಟ್ಟೇನೆಂದರೆ ಬಸವನಿಲ್ಲದ ಕಲ್ಯಾಣದ ಬಗ್ಗೆ ಯೋಚಿಸುವುದು, ದೇಶಕ್ಕಾಗಿ ಮಕ್ಕಳನ್ನು ಅಡವಿಟ್ಟು ರಾಜನ ಬಗ್ಗೆ ಯೋಚಿಸುವುದು, ಎಲ್ಲವನ್ನು ತ್ಯಜಿಸುವ ಸತ್ವಶಾಲಿ ಶಕ್ತಿಯನ್ನು ಹುಡುಕಾಡುವುದು. ಹೀಗಾಗಿ ಇವರ ಹುಡುಕಾಟ ಅನೇಕ ಮೂಲ ಸಂಸ್ಕೃತಿಯನ್ನೇ ಪರಿಚಯಿಸಿದ ಕೀರ್ತಿ ಇವರದು. ಕವಿ ಎಸ್.ಜಿ. ಸಿದ್ಧರಾಮಯ್ಯ ಹಾಗೂ ನನ್ನಂಥ ಕವಿಯನ್ನು ಸಕಾರಾತ್ಮಕವಾಗಿ ರಂಗಭೂಮಿಗೆ ಎಳೆತಂದಿದ್ದು, ಕವಿ ಹಾಗೂ ರಂಗಭೂಮಿಗೂ ಇರುವ ಪುರಾತನ ನಂಟನ್ನು ನವೀಕರಿಸಲು ಹೊರಟ ಪ್ರಯತ್ನವೇ ಎಂದು ಹೇಳಬಹುದು. ಇವರು ರೂಪಸಿದ ಅಂಬೇಡ್ಕರ್ ನಾಟಕ (ನಾನು ಬರೆದದ್ದು) ದಿನ ದಿನಕ್ಕೂ ಪಡೆಯುತ್ತಿದ್ದ ಹೊಸ ರೂಪವನ್ನು ನೋಡಿ ನಾನು ಅವಕ್ಕಾಗಿದ್ದೇನೆ. ರಂಗ ಚಿಂತನೆ, ರಂಗ ಚಾಲನೆಗೆ ದಿನ ಪಡೆದುಕೊಳ್ಳುವ ರೂಪ ಆಕೃತಿಗಳು ಎಂಥಹ ಪ್ರಸಿದ್ದ ಲೇಖಕನನ್ನು ಕ್ಷಣ ಕ್ಷಣಕ್ಕೂ ಹುರಿದುಂಬಿಸಿ ಮತ್ತೊಂದು ರೂಪ ಕೊಡಲು ಮುನ್ನುಗ್ಗುವಂತೆ ಮಾಡುತ್ತದೆ.

೩. ಲೇಖಕ / ಕಲಾವಿದರು ಕಂಡಂತೆ

ಸಿಜಿಕೆಯನ್ನು ಹತ್ತಿರದಿಂದ ಬಲ್ಲ ನಾಟಕಕಾರರು, ಕವಿಕಲಾವಿದರು ತಾವು ಕಂಡಂತೆ ಚಿತ್ರಸಿದ್ದಾರೆ. ಈ ಚಿತ್ರಗಳೆಲ್ಲವೂ ಸತ್ಯ. ಆದರೆ ಒಂದನ್ನೊಂದು ಹೋಲುವುದಿಲ್ಲ. ವಿವಿಧ ಮುಖಗಳನ್ನು ಕಂಡವರು ತಾವು ಕಂಡ ಮುಖವೇ ಸತ್ಯವೆಂದು ಭಾವಿಸಿದ್ದರೆ ಅದೂ ಕೂಡ ತಪ್ಪಲ್ಲ. ಸಿಜಿಕೆಯವರ ಪ್ರೋತ್ಸಾಹದಿಂದ ಪುಟಿದು ನಾಟಕಕಾರರಾದ ಎಲ್ಲರ ಅಭಿಪ್ರಾಯ ಒಂದೇ. ಸಿಜಿಕೆಯಲ್ಲಿ ಅದೃಶ್ಯ ಮುಖವೊಂದಿದೆ. ಅದರ ಪರಿಚಯ ರಂಗದ ಮೇಲೆ ಮಾತ್ರವೇ ಎಂದು ಹೇಳುತ್ತಾರೆ. ಅವರ ಅಭಿಪ್ರಾಯಗಳ ಸಿಜಿಕೆಯವರನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಸಹಾಯವಾಗುತ್ತದೆಂಬ ಕಾರಣದಿಂದ ಇಲ್ಲಿ ವಿವರಿಸಲಾಗಿದೆ.

“ಅವನು ಯಾವ ರಂಗ ತರಬೇತಿಯನ್ನೂ ನಾಟಕ ಸಂಸ್ಥೆಗಳಲ್ಲಿ ಪಡೆದವನಲ್ಲ. ಅಕಾಡೆಮಿಕ್ ಆದ ಶಿಸ್ತೆಂದರೆ ನಕ್ಕುಬಿಡುತ್ತಾನೆ. ಅವನ ಹತ್ತಿರ ಸಿದ್ಧವಾದ ಸಿದ್ಧಾಂತಗಳಿಲ್ಲ. ನಾಟಕ ಕೈಗೆತ್ತಿಕೊಂಡಾಗ ಏನು ಮಾಡಬೇಕೋ ಅವನಿಗೆ ಗೊತ್ತಿರುವುದಿಲ್ಲ. ಪೂರ್ವಗ್ರಹಿಕೆಯಿಂದ ಅಕಾಡೆಮಿಕ್ ಶಿಸ್ತಿನಿಂದ ಹೊರಡುವವರು ತಪ್ಪು ಮಾಡುವುದಿಲ್ಲ. ಆದರೆ ಅವರು ಜೀವ ತುಡಿಯುವ ಏನನ್ನೂ ಕೊಡಲಾರರು. ಕೃಷ್ಣಸ್ವಾಮಿ ಪೂರ್ತಿ ತನ್ನ Animal Instimet ನಿಂದಲೇ ಕೆಲಸಮಾಡುವುದರಿಂದ ಒಡ್ಡೊಡ್ಡಾದ ರೀತಿಯಲ್ಲೇ ಜೀವಂತ ಪವಾಡ ತರುತ್ತಾನೆ.”

ಇವನನ್ನು ಕಂಡಾಗ ನನಗೆ ಪುಸ್ತಕದ ಬದನೆಕಾಯಿಯಾಗಿದ್ದ ಅನೇಕ ವಿಚಾರಗಳು ಜೀವಂತವಾಗುತ್ತವೆ. ಜಾನ್ ಮತ್ತು ಜನ್ ಕಲಾವಿದರ ಬಗ್ಗೆ ಓದಿದ್ದೆ. ಅವರಿಗೂ ವ್ಯವಸ್ಥಿತವಾದ ಶಿಸ್ತಿನಲ್ಲಿ ನಂಬಿಕೆಯಿರಲಿಲ್ಲವಂತೆ. ಇಂಥ ಒಬ್ಬ ಚಕ್ರವರ್ತಿಗಾಗಿ ಹುಲಿಯ ಚಿತ್ರ ಬಿಡಿಸಿದ ಕಲಾವಿದ. ಚಿತ್ರ ಕಂಡ ಕೂಡಲೇ ಚಕ್ರವರ್ತಿ ಮೂರ್ಛೆ ಹೋದ. ಎಚ್ಚರವಾದ ಮೇಲೆ, ನಾನು ಕೇಳಿದ್ದು ಹುಲಿಯನ್ನಲ್ಲ, ಅದರ ಚಿತ್ರವನ್ನು ಎಂದ. ಕಲಾವಿದ ಹೇಳಿದ. ಅದು ಹುಲಿಯಲ್ಲ, ಚಿತ್ರ. ಇದನ್ನು ಹೇಗೆ ರಚಿಸಿದೆ? ಚಕ್ರವರ್ತಿಯ ಪ್ರಶ್ನೆ. ಅದಕ್ಕೆ ಕಲಾವಿದನ ಉತ್ತರ, ‘ನಾನು ಹುಲಿಯನ್ನು ಕಂಡು ಎಷ್ಟೋ ವರ್ಷಗಳಾಗಿವೆ. ನಾನು ಚಿತ್ರ ಬರೆಯಲು ಕೂತಾಗ ನನ್ನನ್ನು ಖಾಲಿ ಮಾಡಿಕೊಳ್ಳುತ್ತೇನೆ. ಚಿತ್ರ ತನ್ನನ್ನು ಬರೆಸಿಕೊಳ್ಳುತ್ತದೆ.”

-ಬಹುಶಃ ಕೃಷ್ಣಸ್ವಾಮಿ ಆ ಚೀನಾದ ಕಲಾವಿದನ ಪುನರಾವತಾರವಿರಬಹುದು. ತಾನು ಕಾಣದ, ಜಗತ್ತು ಕಾಣದ ಅನುಭವ ಅರಸುವಿಕೆಯಲ್ಲಿ ಅವನಿದ್ದಾನೆ.

ಹೀಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವವರು ನಾಟಕಕಾರ ಎಚ್. ಎಸ್. ಶಿವಪ್ರಕಾಶ್. ‘ಮಹಾಚೈತ್ರ’ ನಾಟಕವನ್ನು ನನ್ನಿಂದ ಬರೆಸಿದ್ದು ಸಿಜಿಕೆ, ವಚನಕಾರರು ನನ್ನಂತರಂಗದಲ್ಲಿ ತಾರಾಡುತ್ತಿದ್ದಾಗ ಅವರನ್ನು ರಂಗದ ಮೇಲೆ ತಂದು ಬಸವಣ್ಣನ ನಂತರದ ವಚನ ಕ್ರಾಂತಿಯ ಪರಿಣಾಮಗಳನ್ನು ಪರಿಣಾಮಕಾರಿಯಾಗಿ ರಂಗದ ಮೇಲೆ ತಂದ ಸಿಜಿಕೆ ಪ್ರತಿಭೆಯನ್ನು ಚೀಣಾದ ಕಲಾವಿದನಿಗೆ ಹೋಲಿಸಿ, ಇದರಲ್ಲಿ ಯಾವುದೇ ಉತ್ಪೇಕ್ಷೆಯಿಲ್ಲವೆಂದು ತಿಳಿಸಿದ್ದಾರೆ. ಕನ್ನಡದ ಗಂಭೀರ ವಿಮರ್ಶಕರಲ್ಲಿ ಒಬ್ಬರಾದ ಜಿ ರಾಜಶೇಖರ್ ಸಮುದಾಯ ಸಂಘಟನೆ ಕಟ್ಟುವಾಗ ಸಿಜಿಕೆಯ ಜೊತೆಯಲ್ಲಿ ಕೆಲಸ ಮಾಡಿದವರು. ಸೈದ್ಧಾಂತಿಕವಾಗಿ ನಾಟಕದ ನಿರ್ದೇಶಕನೊಬ್ಬ ಕಟ್ಟುನಿಟ್ಟಾಗಿರಬೇಕಿಲ್ಲ. ಆದರೆ ಸಿಜಿಕೆಯಂತಹ ಕಲಾವಿದರು ಸಿದ್ಧಾಂತವನ್ನೂ ಅರ್ಥೈಸಿಕೊಂಡಿರುವ ಬಗೆ ಹೇಗೆಂದು ರಾಜಶೇಖರ್ ಅವರು ತಮ್ಮದೇ ಮಾತುಗಳಲ್ಲಿ ಹೀಗೆ ಹೇಳಿದ್ದಾರೆ:

“ಸಿಜಿಕೆ ಸಮಾಜವಾದದ ಸಿದ್ಧಾಂತ ಎಷ್ಟು ಓದಿಕೊಂಡಿದ್ದಾರೋ ನನಗೆ ಗೊತ್ತಿಲ್ಲ. ನಾವು ಯಾವತ್ತೂ ಆ ಬಗ್ಗೆ ಮಾತಾಡಿದವರೇ ಅಲ್ಲ! ವಾದ, ಸಿದ್ಧಾಂತ ಎಲ್ಲ ಅವರಿಗೆ ಮಹಾಬೋರು ಎಂದು ನನ್ನ ಗುಮಾನಿ. ಅವರದ್ದು ಒಂದು ನಮೂನೆಯ ಹುಂಬ ಸಮಾಜವಾದ ‘ಎಲ್ಲರಿಗೂ ನ್ಯಾಯ ಸಿಗಬೇಕು; ಬಡವರ ಕಷ್ಟ ನೀಗಬೇಕು. ಈ ಬಗೆಯದ್ದು”. ನಮ್ಮ ಎಡ ರಾಜಕೀಯದ ಉತ್ಸಾಹದ ಆ ದಿನಗಳಲ್ಲಿಯೇ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿದ್ದ ಎಂ.ಕೆ. ಭಟ್ ಅವರನ್ನು ಪಕ್ಷದ ಸದಸ್ಯತ್ವದಿಂದಲೇ ಕಿತ್ತು ಹಾಕಿದ್ದರು. ಭಟ್ಟರು ನಮಗೆ ಇಬ್ಬರಿಗೂ ಆತ್ಮೀಯರು. ಸಿಜಿಕೆ ಒಮ್ಮೆ ಆ ಘಟನೆಯನ್ನು ಪ್ರಸ್ತಾಪಿಸುತ್ತಾ ‘ನಿನ್ನೆಯವರೆಗೆ ಕಾಮ್ರೆಡ್, ಇವತ್ತು ಎನಿಮಿ ಎಂದರೆ ಅದನ್ನು ಹ್ಯಾಗೆ ಸಾರ್ ಒಪ್ಪಿಕೊಳ್ಳುವುದು? ಎಂದು ನನ್ನನ್ನು ಪ್ರಶ್ನೆ ಮಾಡಿದರು. ಪ್ರಶ್ನೆ ಎಂದರೆ ಬರೇ ಪ್ರಶ್ನೆ. ಅದರಲ್ಲಿ ವ್ಯಂಗ್ಯ, ಟೀಕೆ ಏನೂ ಇರಲಿಲ್ಲ. ಸಿಜಿಕೆಯಂತಹ ಹುಂಬರಿಗೆ ಮಾತ್ರ ಇಂತಹ ಪ್ರಶ್ನೆಗಳು ತಲೆದೋರುವುದು ಎಂದು ನನಗೆ ಅನ್ನಿಸಿತು. ಪಕ್ಷದ ಸದಸ್ಯರು ಯಾರೂ ಇಂತಹ ಪ್ರ|ಶ್ನೆಗಳನ್ನು ಕೇಳುವ ಅಶಿಸ್ತು ತೋರುವುದಿಲ್ಲ.

ಆಮೇಲೆ ಒಮ್ಮೆ ಸಿಜಿಕೆ ಮತ್ತು ನಾನು ಬೆಂಗಳೂರಿನಲ್ಲಿ ನಿರಂಜನರ ಮನೆಗೆ ಹೋಗಿದ್ದೆವು. ನಿರಂಜನರ ಆರೋಗ್ಯ ಆಗ ತುಂಬ ಕೆಟ್ಟಿತ್ತು. ಅವರ ಕೈ ಬೆರಳುಗಳು ಕೂಡ ಅವರ ಸ್ವಾಧೀನದಲ್ಲಿ ಇರಲಿಲ್ಲ. ನಿರಂಜನ ನಮ್ಮನ್ನು ತುಂಬ ಆತ್ಮೀಯತೆಯಿಂದ ಸ್ವಾಗತಿಸಿದರು. ಚಹಾ ಮಾಡಿಸಿಕೊಟ್ಟರು. ನಾವು ಚಹಾ ಕುಡಿಯುತ್ತಿದ್ದಂತೆ. ನಿರಂಜನ, ತಮ್ಮ ನಡುಗುವ ಕೈಗಳಿಂದ ಸ್ವಲ್ಪ ಚಹ ಮೈಮೇಲೆ ಚೆಲ್ಲಿಕೊಂಡರು. ಅದರಿಂದ ಅವರಿಗೆ ಕಿರಿಕಿರಿಯಾಯಿತು. ಅವರೊಬ್ಬರೇ ಇದ್ದಾಗ ಹಾಗೆ ಆಗಿದ್ದರೆ ಅವರು ಅದನ್ನು ಅಷ್ಟು ಹಚ್ಚಿ ಕೊಳ್ಳುತ್ತಿರಲಿಲ್ಲ ಎಂದು ಅನ್ನಿಸಿ ನನಗೆ ಬೇಸರವಾಯಿತು. ಯಾಕೆ ಇದನ್ನು ಹೇಳುತ್ತಿದ್ದೇನೆಂದರೆ, ಆ ಭೇಟಿಯಲ್ಲಿ ನನಗೆ ಈಗ ನೆನಪಿರುವುದು ಇಷ್ಟು ಮಾತ್ರ. ನಾನು ಮತ್ತು ಸಿಜಿಕೆ ನಿರಂಜನರ ಜೊತೆ ಅವತ್ತು ತುಂಬ ಹೊತ್ತು ಸಮಾಜವಾದ, ಪ್ರಗತಿಶೀಲ ಸಾಹಿತ್ಯ, ರಷ್ಯಾ ಇತ್ಯಾದಿಗಳ ಬಗ್ಗೆ ಮಾತಾಡಿದೆವು… ಅದೆಲ್ಲದರ ಬಗ್ಗೆ ಈಗ ಬರೆಯುವುದೆಂದರೆ ಸುಮ್ಮನೆ ಮಾತಿನ ಗಾಣ ಸುತ್ತುವುದು. ಇದು ಪೊಳ್ಳಾಗಿಯೇ ಕಾಣುತ್ತದೆ. ಆದರೆ ಆ ಸಂದರ್ಭದಲ್ಲಿ ನನಗೆ ದೊರೆತ ಸಿಜಿಕೆಯ ಗೆಳೆತನ ಮಾತ್ರ ನನಗೆ ದಕ್ಕಿದ ದೊಡ್ಡ ಲಾಭವೆಂದು ನಾನು ತಿಳಿದಿದ್ದೇನೆ.

ರಾಜಶೇಖರ್ ಅವರು ನೀಡಿದ ಎರಡು ನಿದರ್ಶನಗಳಲ್ಲಿ ಸಿಜಿಕೆ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರಾಗಿಯೂ, ಹೃದಯವಂತಿಕೆಯನ್ನು ಪಕ್ಷಕ್ಕಿಂತ ಮೊದಲು ಎಂದು ತಿಳಿದವರೆಂಬುದು ಕಾಣುತ್ತದೆ. ಇಲ್ಲಿ ಕೂಡ ಸಿಜಿಕೆಯವರ ಕೆಲವು ಮುಖಗಳು ಹೇಗೆ ಭಿನ್ನವಾದುವು ಎಂಬ ಬಗೆಗೆ ಮಾಹಿತಿಯನ್ನು ಕಾಣಬಹುದು.

ನಾಡಿನ ಹಿರಿಯ  ಕವಿಗಳಾದ ತುಮಕೂರಿನ ವೀ. ಚಿಕ್ಕವೀರಯ್ಯನವರ ಮನೆಗೆ ಒಮ್ಮೆ ಸಿಜಿಕೆ ಹೋದಾಗ, ಬೆಂಗಳೂರಿಗೆ ಹುಡುಕಿಕೊಂಡು ಹೋದರೂ ಸಿಗದಿರುವ ಈ ನಿರ್ದೇಶಕ ನಮ್ಮ ಮನೆಗೇ ಬಂದಿದ್ದಾರೆ ಎಂದು ಸಂತೋಷದಲ್ಲಿ ಮುಳುಗಿದ ವೀಚಿಯವರು ತಮ್ಮ ಮಾತುಕತೆಗಳಲ್ಲಿ ಕೇಳಿದ ಕೆಲವು ಪ್ರಶ್ನೆಗಳು ಇಲ್ಲಿ ಉಲ್ಲೇಖನಾರ್ಹ, ವೀಚಿಯವರು ಕೇಳಿದ ಪ್ರಶ್ನೆ.

* “ನೀವು ಸಮುದಾಯದ ಕಾರ್ಯದರ್ಶಿಗಳಾಗಿದ್ದಿರಿ. ಎಂಟು ವರ್ಷ ಅದರಲ್ಲಿ ದುಡಿದು ಸಾಂಸ್ಕೃತಿಕ ಜಾಥಾ, ಮೂಡನಂಬಿಕೆಗಳ ವಿರುದ್ಧ ಕಾರ್ಯಕ್ರಮ, ವೈಜ್ಞಾನಿಕ ಸಂಗತಿಗಳ ಪ್ರಚಾರ, ನಾಟಕ ಕಲೆಗಳ ಬಗ್ಗೆ ಪ್ರದರ್ಶನ ನಾಡಿನ ತುಂಬ ನಡೆಸಿ ಬಹಳ ಉಪಯುಕ್ತ ಕೆಲಸ ಮಾಡಿದ್ದೀರಿ. ಅದನ್ನು ಬಿಟ್ಟಿದ್ದೇಕೆ, ಹೇಳುವಿರಾ”?

“ಓ ಅದೆಲ್ಲ…. ಹೆಂಡತಿಗೂ ಗೊತ್ತಾಗದಂತೆ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದೆ. ಆಗ ಇದ್ದ ಒಂದೇ ಮಗುವಿಗೆ ಹೋಗಿ ಬರೋ ಜೀವವಾಗಿ ನರ್ಸಿಂಗ್ ಹೋಂ ಸೇರಿಸಿದ್ದೆ ಜೇಬು ಖಾಲಿ. ಸಂಸ್ಥೆ ಹೇಳಿತು ಯಾವ ಫಲಾಪೇಕ್ಷೆಯೂ ಇಲ್ಲದೆ ದುಡಿಯಬೇಕು ಕಷ್ಟ ಕಾಲದಲ್ಲಿ ಮಾನವೀಯ ಸ್ಪಂದನವೂ ಇಲ್ಲದೆ ಹೋದರೆ ಬದುಕುವುದೆಂತು? ಹೀಗಾಗಿ ಹೊರಬಂದೆ. ಆದರೆ ಸಮುದಾಯ, ಜಾಥಾ ಕಾರ್ಯಕ್ರಮ, ದಲಿತ ಸಂಘರ್ಷ ಸಮಿತಿಯ ಜೊತೆಗಿನ ಒಡನಾಟ ಇವೆಲ್ಲ ಸೇರಿ ಎಷ್ಟು ಕೋಟಿ ಕೊಟ್ಟರೂ ದೊರಕದ ಅನುಭವ ಶ್ರೀಮಂತಿಕೆಯನ್ನು ನನ್ನಲ್ಲಿ ತುಂಬಿದವು. ಅದಕ್ಕಾಗಿ ಈ ಸಂಘಟನೆಗಳನ್ನು ನಾನೆಂದಿಗೂ ಮರೆಯುವಂತಿಲ್ಲ”.

* “ಒಡಲಾಳವನ್ನು ಏತಕ್ಕಾಗಿ ನೀವು ರಂಗದ ಮೇಲೆ ತಂದಿರಿ”?

ಅದು ನನ್ನ ಮನೆತನದ ಕತೆಯೇ ಆಗಿ ನನಗೆ ಕಂಡಿತು. ಅನ್ಯರ ಕತೆಯಾಗಿ ತೋರಲೇ ಇಲ. ಸಾಕವ್ವ ಬಂದು ನನ್ನ ಕಣ್ಣರೆಪ್ಪೆಗಳ ಮೇಲೆ ಕೂತು ಸವಾರಿ ಮಾಡತೊಡಗಿದ್ದರ ಪರಿಣಾಮವಾಗಿ ಅದಕ್ಕೆ ನಾನೇ ಸಂಭಾಷಣೆ ಬರೆದು ನಟರನ್ನು ಕಲೆಹಾಕಿ ಸ್ಟೇಜ್ ಮೇಲೆ ತಂದೆ. ದೇವಾನುದೇವತೆಗಳ ಹರಕೆಯ ಗಂಟು, ಹಾಲು ಮೊಸರಿನ ಮಡಕೆಯನ್ನು ಹೊತ್ತ ನೆಲುವು ಪುಟ್ಟಗೌರಿಯ ಗೋಡೆಯ ಮೇಲೆ ಬಿಡಿಸಿದ ನವಿಲಿನ ಚಿತ್ರ, ಬಡವರ ಬದುಕು ಮತ್ತು ಕಲಾವಂತಿಕೆಯ ಸಂಕೇತಗಳಾಗಿ ಕಾಡಿದವು. ನಾಟಕ ಯಶಸ್ವಿಯಾಯಿತು”.

ಮಹಾಚೈತ್ರ ಸ್ಟೇಜ್ ಮಾಡಿಸಿದ್ದೂ ಇಂಥದೇ ಕಾರಣಕ್ಕಾಗಿ. ಬಸವಣ್ಣನವರನ್ನು ಸ್ಟೇಜ್ ಮೇಲೆ ತರದೆ ಅವರ ಅನುಯಾಯಿಗಳಾಗಿದ್ದ ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ ಹಡಪದ ಅಪ್ಪಣ್ಣಗಳೇ ಮುಖಂಡತ್ವ ವಹಿಸುವ ಹನ್ನೆರಡನೇ ಶತಮಾನದ ಕತೆಯನ್ನು ಇಂದಿಗೂ ಪ್ರಸ್ತುತವಾಗುವಂತೆ ಬರೆದ ನಾಟಕವೊಂದು ನನಗೆ ಬೇಕಾಗಿತ್ತು. ಶಿವಪ್ರಕಾಶ್ ಈ ಬಯಕೆ ಈಡೇರಿಸಿದರು. ನಾನೇ ಮಹಾಚೈತ್ರ ಹೆಸರಿಡಲು ಸೂಚಿಸಿದ. ಕಡೆಗೆ ಅವರು ಒಪ್ಪಿದರು. ನಾಟಕ ಯಶಸ್ವಿಯಾಯಿತು. ದುಡಿಯುವ ವರ್ಗದ ಪರವಾದ ನಾಟಕ ಇದು. ಶ್ರಮಜೀವಿಗಳೇ ಆ ನಾಟಕದ ನಾಯಕರು. ಕಾಲಜ್ಞಾನಿ ಕನಕನೇ ಆಗಲಿ ಸುಲ್ತಾನ್ ಟಿಪ್ಪುವೇ ಆಗಲಿ ಇವರೆಲ್ಲ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗದಿಂದ ಬಂದ ಮಹಾನ್ ನಾಯಕರು. ಸಾವಿರ ವರ್ಷ ಕಳೆದರೂ ಅವರು ಹೀರೋಗಳಾಗಿಯೇ ಜನಜೀವನದ ನಡುವೆ ಉಳಿಯುತ್ತಾರೆ. ಅದಕ್ಕಾಗಿ ಆ ನಾಟಕಗಳನ್ನು ನಿರ್ದೇಶಿಸಿದೆ.

ವೀಚಿಯವರು ತುಂಬ ಅಗತ್ಯವಾದ ಪ್ರಶ್ನೆಗಳನ್ನು ಕೇಳಿ ಅದಕ್ಕೆ ಉತ್ತರಗಳನ್ನು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ, ಸಿಜಿಕೆ ತಾವು ಆಯ್ದುಕೊಂಡ ನಾಟಕದ ಹಿಂದಿನ ತಾತ್ವಿಕತೆಯನ್ನು ಅತ್ಯಂತ ಸರಳವಾಗಿ ಮತ್ತು ನಿಖರವಾಗಿ ಹೇಳಿದ್ದಾರೆ. ಈ ಸೈದ್ಧಾಂತಿಕತೆಯನ್ನು ತಿಳಿಯಲು ಯಾವುದೇ ವಾದ ಬೇಕಾಗಿಲ್ಲ. ಆದ್ದರಿಂದಲೇ ಅವರ ತಾತ್ವಿಕತೆಯ ಹಿಂದೆ ಮಾನವೀಯತೆಯೇ ಪ್ರಮುಖ ಪಾತ್ರ ವಹಿಸುತ್ತದೆ, ಕಮ್ಯುನಿಸ್ಟ್ ಪಕ್ಷದ ಸದಸ್ಯನಿರಲಿ, ಸ್ವತಂತ್ರ ನಿರ್ದೇಶಕನಾಗಿರಲಿ ಅವರ ನಂಬಿಕೆಗಳು ಉದಾರ ಮಾನವತಾವಾದದಿಂದ ರೂಪುಗೊಂಡ ಸತ್ಯಗಳೇ ಆಗಿರುವುದರಿಂದ ಅದು ನಾಟಕ ನಿರ್ದೇಶನದ ಹಿಂದೆ ಸದಾ ಕೆಲಸ ಮಾಡುತ್ತದೆ.