೪. ಸಂಘಟಕರಾಗಿ

ಸಂಘಟನಕಾರನಾಗಿ ಸಿಜಿಕೆಯನ್ನು ಡಾ. ವಿಜಯಾ ಅವರು ತಮ್ಮದೇ ದೃಷ್ಟಿಯಲ್ಲಿ ವಿಶ್ಲೇಷಿಸಿದ್ದಾರೆ.

“ಸಿಜಿಕೆ ಅವರದು ಒಂದು ವಿಚಿತ್ರ ಎನ್ನಬಹುದಾದಂತ ಅವಸ್ಥಾಂತರಗಳ ರಂಗಜೀವನ. ರಾಜಕೀಯವಾಗಿ ಅವರ ಆರಂಭದ ನಿಲುವು ಬೇರೆಯದೇ ಆಗಿತ್ತು. ಅನಂತರ ಅವರು ನಂಬಿದ, ಬದ್ಧರಾದ ಮತ್ತೊಂದು ರಾಜಕೀಯ ಸಿದ್ಧಾಂತದ ಹಿನ್ನೆಲೆಯಲ್ಲಿ ತತ್ಕಾಲೀನ ಸಂದರ್ಭಕ್ಕೆ ಅವರು ಸ್ಪಂದಿಸಿದ ಬಗೆ, ಜೀವದ ಹಂಗು ತೊರೆದು ಜನಸಾಮಾನ್ಯರಲ್ಲಿ ಅರಿವು-ಎಚ್ಚರ ಮೂಡಿಸಲು ಪಟ್ಟ ಶ್ರಮ ಅನನ್ಯವೆನಿಸುವಂಥದ್ದು. ಇಲ್ಲೆಲ್ಲ ತಾನು ಒಪ್ಪಿದ-ನಂಬಿದ ತತ್ವಕ್ಕಾಗಿ ಕೊಟ್ಟುಕೊಳ್ಳುವ ಗುಣವೊಂದೇ ಪ್ರಧಾನವಾಗಿತ್ತು. ಸಿಜಿಕೆಯ ಸಮುದಾಯ, ರಂಗಸಂಪದ, ರಂಗನಿರಂತರ ಇಂಥ ಅನೇಕ ಕಾರ್ಯಚಟುವಟಿಕೆಗಳ ಹಿಂದೆ ನಾನು ಗಮನಿಸಿದ್ದು ಈ ಜೀವ ಹೊಸ ರಂಗಚಟುವಟಿಕೆ ಎಂದಾಗ ಮೈಮುರಿದು ದುಡಿಯುತ್ತದೆ. ಪಕ್ಷ, ತಂಡ ಇತ್ಯಾದಿಗಳ ಒಲವಿಗಿಂತ ಕೆಲಸವೇ ಈತನಿಗೆ ಮುಖ್ಯ ಎಂಬುದನ್ನು. ಇವೆಲ್ಲವನ್ನು ಮೀರಿದ ಇನ್ನೊಂದು ಅಪರೂಪದ ಗುಣವೆಂದರೆ ಎಲ್ಲ ಸಂಘಟನೆಗಳಲ್ಲಿ ದೌರ್ಬಲ್ಯ ಇದೆ ಅನಿಸಿದರೂ ಅಲ್ಲಿ ಹಾಜರಾಗಿ ದಂಡು ಕಟ್ಟಿ ಸಂಘಶಕ್ತಿಯ ಅಗತ್ಯವನ್ನು ಗೊತ್ತುಪಡಿಸುವುದು. ಈ ದೃಷ್ಟಿಯಿಂದ ಕಲಾಕ್ಷೇತ್ರದ ಸಿಬ್ಬಂದಿಯ ಹಿತರಕ್ಷಣೆ, ಖಾಯಂ ನೌಕರಿ, ಅಗತ್ಯ ಸವಲತ್ತು ಗಳಿಗಾಗಿ ಸಿಜಿಕೆ ಒಡ್ಡಿಕೊಂಡದ್ದು ಸಣ್ಣ ಪ್ರಮಾಣದ ಮಾತಲ್ಲ. ಅಸಂಘಟಿಕರು ಸಂಘಟಿತರಾದಾಗ ಅಲ್ಲೂ ಅಜ್ಞಾನದಿಂದಾಗಿ ಏರ್ಪಡುವ ಅನೇಕ ಮುಜುಗರಗಳನ್ನು ಸಿಜಿಕೆ ಅವು ಬಂದ ಹಾಗೆ ನುಂಗಿಗರಳ ಕಂಠನಂತೆ ವರ್ತಿಸಿದ್ದನ್ನು ಪ್ರತ್ಯಕ್ಷ ಕಂಡಿದ್ದೇನೆ. ಪರಿಣಾಮಗಳು ಒಮ್ಮೊಮ್ಮೆ ಬೂಮ್‌ರಾಂಗ್ ಆಗಬಹುದು. ಆದರೆ ಫಲ ಒಂದಿಲ್ಲೊಂದು ದಿನ ದಕ್ಕುವುದಂತೂ ನಿಜ. ಅದು ಸಂಘಟನೆಯಿಂದ ಎಂಬ ತೀರ್ಮಾನ ಎಂದೂ ಹುಸಿ ಹೋಗಲಿಲ್ಲ….

– ತಲೆ ತುಂಬಾ ಸಾಲದ ಹೊರೆ, ಕಾಲೇಜಿಗೂ ಚಕ್ಕರ್ ಹಾಕಿ ಸಂಬಳಗಳೂ ಇಲ್ಲದೆ ಹೊರೆಯಷ್ಟು ಮೆಮೋಗಳನ್ನು ಹೊತ್ತು, ಮನೆವಾರ್ತೆ ನೋಡದೆ ಅಲೆಯುವ ಯಜಮಾನನೆಂದು ವ್ಯಥೆಗೊಳ್ಳುವ ಮನೆಯವರನ್ನು ಎದುರಿಸಲಾಗದೆ ಕಲಾಕ್ಷೇತ್ರದ ಮೆಟ್ಟಿಲ ಮೇಲೆ ಮತ್ತೆ ಗುಂಪು ಕಟ್ಟಿ ಕೂರುವ ಸಿಜಿಕೆ ಮತ್ತೆ ಚುರುಕಾಗುವುದು ಈ ಹರಟೆಯಲ್ಲಿ ಹೊರಡುವ ಹೊಸ ಯೋಜನೆಗಳಿಂದ ಮಾತ್ರ”.

ಇಷ್ಟೆಲ್ಲಾ ಕೆಲಸಗಳನ್ನು ಮಾಡುತ್ತಾ ಸಂಘಟಕರಾಗಿ ಉಳಿದು ಬಿಡಬೇಕಿದ್ದ ಸಿಜಿಕೆ ನಿರ್ದೇಶಕರಾದದ್ದೇ ಒಂದು ಸಾಧನೆಯೆಂದೇ ಹೇಳಬಹುದು. ಬೀದಿನಾಟಕಗಳು ಕನ್ನಡ ರಂಗಭೂಮಿಯಲ್ಲಿನ್ನೂ ಪ್ರಚಾರಕ್ಕೆ ಬರದೇ ಇದ್ದಾಗ ಸಿಜಿಕೆ ಅದನ್ನು ಪ್ರಾರಂಭಿಸಿದರು. ಕೊಳೆಗೇರಿಗೂ ನಾಟಕಗಳಿಗೂ ಸಂಬಂಧವಿಲ್ಲ ಎಂದು ತಿಳಿದಿದ್ದ ಕಾಲದಲ್ಲಿ ಕೊಳೆಗೇರಿಗಳಲ್ಲಿ ನಾಟಕ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದರು. ದಲಿತರ ಮೇಲಿನ ದೌರ್ಜನ್ಯದಂತಹ ಸಾಮಾನ್ಯ ಘಟನೆಗಳು ನಾಟಕಕ್ಕೆ ವಸ್ತು ಹೇಗೆ ಆಗಬಲ್ಲುದು ಎಂಬ ಆಲೋಚನೆಯಿದ್ದಾಗ ಬೆಲ್ಚಿಯಲ್ಲಿ ದಲಿತರನ್ನು ಸುಟ್ಟ ಪ್ರಸಂಗವನ್ನೇ ನಾಟಕವನ್ನಾಗಿ ಮಾಡಿದರು. ‘ಅಲ್ಲೇ ಇದ್ದೋರು’ ನಾಟಕ ಕೂಡ ಬೀದಿನಾಟಕಗಳಲ್ಲಿ ಒಂದು ಮೈಲಿಗಲ್ಲು. ಬೆಲ್ಚಿ, ಅಲ್ಲೇ ಇದ್ದೋರು ನಾಟಕಗಳು ಹೆಚ್ಚು ಚರ್ಚೆಗೊಳಗಾಗಲಿಲ್ಲ. ವಿಮರ್ಶಕರ ಗಮನಕ್ಕೆ ಬರಲಿಲ್ಲವೆಂಬ ಅಂಶವನ್ನು ವಿಜಯಾ ಅವರೂ ಗುರುತಿಸಿದ್ದಾರೆ.

“ಸಿಜಿಕೆ ಬರೆದು ಆಡಿಸಿದ ‘ಅಲ್ಲೇ ಇದ್ದೋರು’ ನನ್ನನ್ನು ಇವತ್ತೂ ಕಾಡುತ್ತಿದೆ. ನಾನು ತುಂಬ ಮೆಚ್ಚಿಕೊಂಡ ನಾಟಕ ಮತ್ತು ಪ್ರಯೋಗವಿದು. ಇಂಥ ನಾಟಕಗಳು ಹೆಚ್ಚು ಚರ್ಚೆಗೆ ಒಳಗಾಗುವುದಿಲ್ಲ. ನಮ್ಮ ವಿಮರ್ಶಾ ವಿಭಾಗಕ್ಕೆ ಕೆಲವರು ಬರೆದ ನಾಟಕಗಳು ಮಾತ್ರ ಮುಖ್ಯವಾಗುತ್ತವೆ. ಅರ್ಥಗಳು ಸಿಗುತ್ತವೆ. ಸಿಜಿಕೆ ಅಂಥವರಿಗೆ ಇವರು ನಿರೀಕ್ಷಿಸುವ ಆ ಅಕಾಡೆಮಿಕ್ ಶಿಸ್ತು ಇದ್ದಂತಿಲ್ಲ. ಅಕಾಡೆಮಿಕ್ ವಲಯದಲ್ಲೇ ಇರುವ ಈ ಅರ್ಥಶಾಸ್ತ್ರಜ್ಞನಿಗೆ ಕಲೆಯ ಕ್ಷೇತ್ರದಲ್ಲಿ ಆ ಅಕಾಡೆಮಿಕ್ ಶಿಸ್ತು ಇಲ್ಲ. ಅರ್ಥಶಾಸ್ತ್ರದ ಟೀಕೆಯ ಅಗತ್ಯವೂ ಕಾಣಲಿಲ್ಲ ಎಂಬುದು ಆಶ್ಚರ್ಯದ ಸಂಗತಿ”.

ಸಿಜಿಕೆ ಅವರನ್ನು ಪ್ರತಿಷ್ಠಿತ ವಿಮರ್ಶಾಕ್ಷೇತ್ರ ಅನೇಕ ವರ್ಷ ಕಡೆಗಾಣಿಸಿದ್ದನ್ನು ಮಾರ್ಮಿಕವಾಗಿ ವಿಜಯಾ ಅವರು ದಾಖಲಿಸಿದ್ದಾರೆ. ಇಂದು ಕನ್ನಡ ರಂಗಭೂಮಿಯಲ್ಲಿ ಪ್ರತಿಭಾವಂತ ಅನೇಕರು ಅವಜ್ಞೆಗೆ ಒಳಗಾದದ್ದು ಕಂಡುಬರುತ್ತದೆ. ಅವರಲ್ಲಿ ಸಿಜಿಕೆ ಕೂಡ ಒಬ್ಬರಾಗಿದ್ದರು. ಸಿಜಿಕೆ ಇಟ್ಟ ಹೆಜ್ಜೆಗಳು ಸಲೀಸು ದಾರಿಯಲ್ಲೇನು ಇರಲಿಲ್ಲ. ಕಲ್ಲುಮುಳ್ಳುಗಳ ಹಾದಿಯ ನಡಿಗೆಯೆಂಬುದು ಇದರಿಂದ ತಿಳಿಯುತ್ತದೆ. ಸಿಜಿಕೆ ಏನಾಗಬೇಕೋ ಅದು ಆಗಿಲ್ಲ. ಅವರು ಕೊಂಚ ಫೋಜು ಕೊಟ್ಟು ನಿಲ್ಲಲಿಲ್ಲ ಹೇಗ್ಗಳಿಕೆಗಳಿಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಇಂಪ್ರೆಸ್ ಮಾಡಲಿಲ್ಲ. ನನ್ನ ಜನರು ಸ್ಲಮ್‌ನಲ್ಲಿದ್ದಾರೆ. ಹಳ್ಳಿಗಳಲ್ಲಿದ್ದಾರೆ. ಕಲಾಕ್ಷೇತ್ರದ ಕಟ್ಟೆಗಳ ಮೇಲಿದ್ದಾರೆ ಎಂದು ಭಾವಿಸಿದ್ದರಿಂದ ನಿರೀಕ್ಷಿಸಿದ ಮಟ್ಟಕೆ ಏರಲಿಲ್ಲವೆಂಬ ಕೊರಗು ಅವರ ಸ್ನೇಹಿತರಲ್ಲಿದೆ. ಅವರನ್ನು ಹತ್ತಿರದಿಂದ ಬಲ್ಲವರಲ್ಲಿದೆ.

ಸಂಘಟನಾಕಾರರಾಗಿ ಸಿಜಿಕೆಯನ್ನು ಹತ್ತಿರದಿಂದ ಬಲ್ಲ ನಾಟಕಕಾರ ಲಿಂಗದೇವರು ಹಳೇಮನೆ ಗುರುತಿಸಿರುವುದು ಹೀಗಿದೆ :

“ಸಿಜಿಕೆಯ ಬಗ್ಗೆ ನನಗಿರುವ ವಿಸ್ಮಯ ಮತ್ತು ವಿನಮ್ರ ಗೌರವವೆಂದರೆ, ತನ್ನ ನಾಟಕ ಚಟುವಟಿಕೆಗೆ ಆತ ಹಣ ಕೂಡಿ ಹಾಕುವ ರೀತಿ. ಸಂಘಟನೆಯ ಸಮರ್ಥ ಅಂಶ ಇಂದೂ ಆತನಲ್ಲಿ ಮನೆ ಮಾಡಿಕೊಂಡಿದೆ. ಇಂದು ಒಂದೊಂದು ನಾಟಕವನ್ನೂ ಪ್ರದರ್ಶನಕ್ಕೆ ಸಿದ್ಧಪಡಿಸುವಾಗ ಸಾವಿರಾರು ರೂಪಾಯಿಗಳ ಲೆಕ್ಕಚಾರ ಹಾಕಬೇಕಾದ ಪರಿಸ್ಥಿತಿ ಇದೆ. ಅದರಲ್ಲೂ ತನ್ನ ನಾಟಕದ ಪ್ರದರ್ಶನದ ಯಾವುದೇ ವಿಭಾಗದಲ್ಲೂ ಕಾಂಪ್ರಮೈಸ್ ಮಾಡಲು ಒಪ್ಪದ ಒಬ್ಬ ನಿರ್ದೇಶಕನ ಒಟ್ಟಾರೆ ಮೊತ್ತ ಯಾವತ್ತೂ ಅಧಿಕವಾಗಿಯೇ ಇರುತ್ತದೆ. ಸಿಜಿಕೆ ಸಹ ಇದಕ್ಕೆ ಅಪವಾದವಲ್ಲ. ಆದರೆ ಆತನಿಗಿರುವ ನಾಟಕದ ಕಮಿಟ್‌ಮೆಂಟ್ ತನ್ನ ಇನ್ನಿತರ ಕಮಿಟ್‌ಮೆಂಟ್‌ಗಳ ಕಾಂಪ್ರಮೈಸ್‌ಗೆ ಅನುವು ಮಾಡಿಕೊಡುತ್ತದೆ. ಇಂದು ಸಿಜಿಕೆ ಆದರ್ಶದ ಮಾತಾಡುತ್ತಿಲ್ಲ. ಪ್ರಾಯೋಗಿಕತೆಯ ಬಗ್ಗೆ ಮಾತನಾಡುತ್ತಿದ್ದಾನೆ. ಕನಸುಗಳಿವೆ ಆದರೆ ಭ್ರಮೆಗಳಿಲ್ಲ. ರಂಗಭೂಮಿಯ ಉಳಿವಿಗಾಗಿ, ತನ್ನ ದರ್ಶನದ ರಂಗ ಪ್ರದರ್ಶನಕ್ಕಾಗಿ ಹಣದ ಮುಗ್ಗಟ್ಟನ್ನೂ ಲೆಕ್ಕಿಸದೆ ಮುನ್ನುಗ್ಗುವ ಛಾತಿ ಬಹುಶಃ ಇಂದು ಉಳಿದಿರುವುದು ಸಿಜಿಕೆ ಒಬ್ಬನಲ್ಲಿಯೇ ಎಂದು ನನಗನ್ನಿಸುತ್ತದೆ”[1]

ಇದೇ ರೀತಿಯ ಅಭಿಪ್ರಾಯವನ್ನು ಲೇಖಕರಾದ ಎಸ್.ಎಸ್. ಹಿರೇಮಠ್ ತಿಳಿಸಿದ್ದಾರೆ.

“ಒಳ್ಳೆ ಸಂಘಟಕನಲ್ಲಿರಬೇಕಾದ ಸಹನೆ, ಧೈರ್ಯ, ಮುನ್ನುಗ್ಗುವ ಸ್ವಭಾವ ಚುರುಕುತನ, ಬುದ್ಧಿವಂತಿಕೆ, ನಯತಂತ್ರಗಾರಿಕೆ, ಸತತಾಭ್ಯಾಸ, ಸತತ ಪ್ರಯತ್ನ ಮುಂತಾದೆಲ್ಲ ಗುಣ ಸಿಜಿಕೆಯವರಲ್ಲಿ ನನಗೆ ಕಂಡುಬರುತ್ತದೆ. ಅವರ ಜತೆ ಹಲವಾರು ಸಲ ಭೆಟ್ಟಿಯಾದ ಸಂದರ್ಭವಿದ್ದರೂ ನಮ್ಮ ನಮ್ಮ ವೈಯುಕ್ತಿಕ ಬದುಕಿನ ವಿವರಗಳನ್ನು ಕೇಳು-ಹೇಳುವಲ್ಲಿ ಯಾವುದೋ ಮುಜುಗರ ನನ್ನಲ್ಲಿ ಬೆಳೆದು ಬಂದಿದೆ.” ಹೀಗೆ ನಿರ್ದೇಶಕರಾಗುವ ಮೊದಲು ಸಿಜಿಕೆ ಸಂಘಟಕರು. ಲೋಕದ ನೋವುಗಳೆಲ್ಲ ನನ್ನ ಹೃದಯ ಮೇಲೆ ಇವೆಯೆಂದು ಭಾವಿಸುವವರು ಕಡಿಮೆ. ನಮ್ಮ ಹೆಸರಾಂತ ಲೇಖಕ, ಕಲಾವಿದರು, ನಿರ್ದೇಶಕರೆಲ್ಲರು ಸಂಘಟನೆ ಮಾಡಿ ಸಕ್ರಿಯರಾಗಿರುವ ಉದಾಹರಣೆಗಳು ಕೆಲವೇ ಇರಬಹುದು. ಸಿಜಿಕೆ ಇದಕ್ಕೊಂದು ಅಪವಾದ. ಇಂದಿಗೂ ಅವರ ಮೊದಲ ಆದ್ಯತೆ ಸಂಘಟನೆ. ಆ ಮೂಲಕ ನಾಟಕ, ವಿಚಾರ ಸಂಕಿರಣ, ಕಮ್ಮಟಗಳು ನಡೆಯುತ್ತವೆ. ಸಿಜಿಕೆ ವ್ಯಕ್ತಿಯಾಗಿ ನಿರ್ದೇಶಕ, ನಾಟಕಕಾರ ಮಾತ್ರವಲ್ಲ, ಸಂಘಟನಾ ಶಕ್ತಿಯಾಗಿ ಕೂಡ ರಂಗಭೂಮಿಯಲ್ಲಿ ಮುಖ್ಯರಾಗಿದ್ದಾರೆ.

ಸಿಜಿಕೆಯವರು ಬೀದಿ ನಾಟಕಗಳನ್ನು ಪ್ರಾರಂಭಿಸಿದ ಮೊದಲಿಗರು. ಸಮರ್ಥರು ಎಂದು ಹಿರಿಯ ನಾಟಕ ವಿಮರ್ಶಕರಾದ ಕ.ವೆಂ. ರಾಜಗೋಪಾಲ್ ಅಭಿಪ್ರಾಯ ಪಡುತ್ತಾರೆ.

“ಈ ಬೀದಿನಾಟಕ ಪ್ರಕಾರವು ತಾತ್ಕಾಲಿಕವಾಗಿ ಅತ್ಯವಶ್ಯವಾದ ರಾಜಕೀಯ ಎನ್ನುವುದಕ್ಕಿಂತ ಸಾಮಾಜಿಕವಾದ ಒತ್ತಡದಿಂದ ಬೇರಾಯಿತು. ಇದರ ರುಚಿಯನ್ನು ಬಾದಲ್ ಸರ್ಕಾರ್ ಇಲ್ಲಿಗೆ ಬಂದು ಸಮುದಾಯದ ತರಬೇತಿ ಶಿಬಿರವನ್ನು ನಡೆಸಿದುದರಿಂದ ಇದರ ಪ್ರಯೋಗಕ್ಕೆ ಹೆಚ್ಚು ಲಾಭವೂ ಆಯಿತೆನ್ನಬಹುದು. ಇದರ ಫಲವನ್ನು ಮುಖ್ಯವಾಗಿ ಬೆಲ್ಚಿಯಲ್ಲಿ ಕಾಣುತ್ತೇವೆ. ಇದು ಇಡೀ ಭಾರತದ ಪ್ರಜೆಗಳ ಪ್ರಜ್ಞೆಯನ್ನು ಎಚ್ಚರಿಸಲು ಉಪಯುಕ್ತವಾದ ಒಂದು ಘಟನೆಯೆಂಬುದನ್ನು ಪತ್ರಿಕೆಗಳು ಸಾರಿದ್ದವು. ತರುಣರು ಇಂತಹುದಕ್ಕಾಗಿ ಕಣ್ಣು ತೆರೆದಿದ್ದರು ಮತ್ತು ಇದರ ಫಲವಾಗಿ ರವೀಂದ್ರ ಕಲಾಕ್ಷೇತ್ರವನ್ನು ದಾಟಿ ನಾಟಕದ ಪ್ರಯೋಜನವನ್ನು ವೃತ್ತ ಪತ್ರಿಕೆಯಂತೆ ನೀಡಬಲ್ಲ ಸಾಧನವಾಗಿ ಬೀದಿ ನಾಟಕವು ಬಳಕೆಗೆ ಬಂದಿತು. ಬೆಲ್ಚಿಯ ಘಟನೆಯ ಒಂದು ಅದ್ಭುತ ರೂಪಕವಾಗಿ ಪ್ರಯೋಜನಕಾರಿಯಾದುದು ಈ ಕ್ಷಣಗಳಲ್ಲಿ, ಬೆಂಗಳೂರಿನ ಸ್ಲಮ್ ಒಂದರಲ್ಲಿ ಇದರ ನಿರ್ದೇಶಕ ಮತ್ತು ರಚನಾಕಾರ ಇಬ್ಬರೂ ಒಬ್ಬರೇ ಆದ ತರುಣ ಸಿ.ಜಿ. ಕೃಷ್ಣಸ್ವಾಮಿ. ಇಂದಿಗಂತೂ ಅದ್ವಿತೀಯ ತರುಣ ನಿಸ್ಸೀಮ-ಎಂದು ಹೇಳಬಹುದು.”[2] ಹೀಗೆ ಬೀದಿ ನಾಟಕಗಳ ಮೂಲಕ ನಮ್ಮ ರಂಗಭೂಮಿಗೆ ಹೊಸ ತಿರುವು ನೀಡಿದ ಸಿಜಿಕೆ ಮುಂದೆ ವಿಶೇಷ ನಿರ್ದೇಶನ ಸಾಮರ್ಥ್ಯ ಬೆಳೆಸಿಕೊಂಡದ್ದು ವಿಸ್ಮಯಕಾರಕವಾಗಿದೆ. ಎಷ್ಟರಮಟ್ಟಿಗೆ ಎಂದರೆ ಪ್ರತಿಯೊಂದು ನಾಟಕಗಳು, ಹಲವಾರು ಹೊಸ ಚಿಂತನೆಗೆ ತೆರೆದುಕೊಂಡವು. ಈ ವಿಮರ್ಶೆಯಿಂದ ಸಿಜಿಕೆಗೆ ಪ್ರಯೋಜನವಾಯಿತೋ ಇಲ್ಲವೋ ತಿಳಿಯದು. ಆದರೆ ರಂಗಭೂಮಿಯ ವಿವಿಧ ಸಾಧ್ಯತೆಗಳನ್ನು ಚರ್ಚಿಸುವಂತಾಯಿತು. ಕನ್ನಡ ರಂಗಭೂಮಿ ಇದರಿಂದ ಬೆಳವಣಿಗೆ ಕಾಣುವುದು ಸಾಧ್ಯವಾಯಿತು. ೧೯೯೦ರಲ್ಲಿ ‘ಗ್ರಾಮ ಸಮಾಜ’ ಎಂಬ ಹೊಸ ರೀತಿಯ ಕಾರ್ಯಕ್ರಮ ಸಿಜಿಕೆಯವರ ರಂಗನಿರಂತರದ ಮೂಲಕ ಸಿಜಿಕೆಯವರು ಮಾಡಿದ ಹೊಚ್ಚ ಹೊಸ ಪ್ರಯತ್ನ ಇದಾಗಿತ್ತು. ಸ್ವಾತಂತ್ರ‍್ಯಾನಂತರದ ಭಾರತದ ಚಿತ್ರವನ್ನು ಸೆರೆಹಿಡಿದವರು ಗ್ರಾಮೀಣ ಭಾರತವನ್ನೇ ಬಹುವಾಗಿ ಚಿತ್ರಿಸಿದ್ದಾರೆ. ಕನ್ನಡದ ಒಂಭತ್ತು ಮಂದಿ ಖ್ಯಾತ ಕಥೆಗಾರರ ಸಣ್ಣಕತೆಗಳ ರೂಪಾಂತರ ಮಾಡಿ ನಾಟಕಗಳ ಪ್ರದರ್ಶನ ಮಾಡಿದ ಕೀರ್ತಿ ಈ ಉತ್ಸವಕ್ಕೆ ಸಲ್ಲುತ್ತದೆ. ಇದರ ಕನಸುಗಾರರಾಗಿದ್ದ ಸಿಜಿಕೆಯವರು ಈ ಕಾರ್ಯಕ್ರಮದಿಂದ ರಂಗಭೂಮಿಗೆ ದೊರಕಿದ ಪ್ರಯೋಜನವನ್ನು ಗುರುತಿಸುವುದು ಹೀಗೆ; ಈವರೆಗೆ ರಂಗಭೂಮಿಯಲ್ಲಿ ರಂಗಸಜ್ಜಿಕೆ, ಬೆಳಕು, ಉಡುಗೆ-ತೊಡಿಗೆ ಮುಂತಾದ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದವರು ನಿರ್ದೇಶಕರಾಗುವ ಮೊದಲ ಹೆಜ್ಜೆಗಳನ್ನಿಟ್ಟರು. ಯುವರಂಗತಜ್ಞರು ಕೊಟ್ಟ ಕೊಡುಗೆಯಿಂದ ಇಲ್ಲಿನ ಪ್ರಯೋಗಗಳು ಯಶಸ್ವಿಯಾಗಿವೆ. ಗ್ರಾಮೀಣ ಭಾರತವನ್ನು ತನ್ನ ಹೂರಣದೊಂದಿಗೆ ಹೆಣೆದಿದ್ದ ಕಥೆಗಳನ್ನು ಆರಿಸಿ ನಾಟಕವನ್ನಾಗಿಸಿ ಬೆಂಗಳೂರಿನಲ್ಲಿ ಪ್ರದರ್ಶನ ನಡೆಸಲಾಯಿತು. ಕೇಶವರೆಡ್ಡಿ ಹಂದ್ರಾಳ ಅವರ ‘ದಮನ’ ಕಥೆಯನ್ನು ಸಿಜಿಕೆ ರೂಪಾಂತರ ಮಾಡಿ ಆ.ನ. ರಮೇಶ್ ನಿರ್ದೇಶಿಸಿದರು. ಮಂಗಳೂರಿನ ವಿದ್ಯಾರ್ಥಿ ಮಹಾಲಿಂಗ ಅವರು ಬರೆದ ‘ಕೊಂಬಿನವರು’ ನಾಟಕವನ್ನು ಡಾ.ನಾ. ದಾಮೋದರ ಶೆಟ್ಟಿ ನಿರ್ದೇಶಿಸಿ ಪ್ರದರ್ಶಿಸಿದರು. ಮೂರನೆಯ ನಾಟಕ, ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಪುಟ್ಟಕ್ಕನ ಮೆಡಿಕಲ್ ಕಾಲೇಜ್’ ಕತೆಯನ್ನು ಮೈನಾ ಚಂದ್ರಶೇಖರ್ ರಂಗರೂಪಕ್ಕೆ ತಂದು ಮಲ್ಲಿಕಾರ್ಜುನ್ ನಿರ್ದೇಶನ ಮಾಡಿದರು. ನಾಲ್ಕನೆಯ ನಾಟಕ ರಾಮಚಂದ್ರಶರ್ಮರ ‘ಸಂಗಮ’ ಕಥೆಯನ್ನು ಕಾಶಿ ಮತ್ತು ಪಾಲ್‌ ಸುದರ್ಶನ್‌ ರೂಪಾಂತರಿಸಿ ರಮೇಶ್ ಪಂಡಿತ್ ಅವರ ನಿರ್ದೇಶನಕ್ಕೆ ದಾರಿಯಾಯಿತು. ಐದನೆಯ ನಾಟಕ ಬಿ.ಸಿ. ದೇಸಾಯಿ ಅವರ ಕತೆ ‘ಸುರಂಗ’ವನ್ನು ಮೀನಾಕ್ಷಿಯವರು ರೂಪಾಂತರಿಸಿ ಸುದರ್ಶನ್ ರಂಗದ ಮೇಲೆ ತಂದರು. ಆರನೆಯ ನಾಟಕ ಶಾಂತರಸರ ‘ಬೇಸ್ತು’ ಕತೆಯನ್ನು ಶಿವಲಿಂಗೇಗೌಡರ ಜೊತೆಯಲ್ಲಿ ರೂಪಾಂತರಿಸಿದ ಮೈನಾ ಚಂದ್ರಶೇಖರ್ ತಾವೇ ರಂಗದ ಮೇಲೆ ತಂದರು. ದೇವನೂರ ಮಹಾದೇವ ಅವರ ‘ಡಾಂಬರು ಬಂದುದು’ ಕತೆಯನ್ನು ಕತ್ಲು ಸತ್ಯ ಅವರೇ ರೂಪಾಂತರಿಸಿ ನಿರ್ದೇಶನ ಮಾಡಿ ಯಶಸ್ವಿ ಪ್ರಯೋಗವನ್ನಾಗಿಸಿದರು. ಡಾ. ಬೆಸಗರಹಳ್ಳಿ ರಾಮಣ್ಣನವರ ‘ಕಪ್ಪೆ ಬಾವಿ ನಕ್ಷತ್ರ’ವೆಂಬ ಹೆಸರಿನಲ್ಲಿ ಅವರ ‘ಗಾಂಧಿಸಂತಾನ’ ಕತೆಯನ್ನು ಚಂದ್ರು ರೂಪಾಂತರಿಸಿ ಶ್ರೀಕಂಠಯ್ಯ ನಿರ್ದೇಶಿಸಿದರು. ಡಾ. ಯು.ಆರ್. ಅನಂತಮೂರ್ತಿಯವರ ‘ಮೌನಿ’ ಕತೆಯನ್ನು ಉಮಾಶಂಕರ್ ಮತ್ತು ಬಿ.ವಿ. ರಾಜರಾಂ ರೂಪಾಂತರಿಸಿದರೆ, ನಾಗರಾಜಮೂರ್ತಿ ನಿರ್ದೇಶನ ಮಾಡಿದರು. ಕೊನೆಯದಾಗಿ ಕುಂ. ವೀರಭದ್ರಪ್ಪನವರ ‘ದೇವರ ಹೆಣ’ ಕತೆಯನ್ನು ನಟರಾಜ್ ರೂಪಾಂತರಿಸಿ ಶಿವರುದ್ರಯ್ಯ ನಿರ್ದೇಶನ ಮಾಡಿ ಉತ್ತಮ ಪ್ರಯೋಗವೆನಿಸುವಂತೆ ಮಾಡಿದರು. ಒಟ್ಟಾರೆ ‘ಗ್ರಾಮ ಸಮಾಜ’ವೆಂಬ ಕಾರ್ಯಕ್ರಮದ ಕಲ್ಪನೆಯ ಹಿಂದೆ ಹೊಸ ಚಿಂತನೆಯಿದೆ. ರಂಗಭೂಮಿಗೆ ಚಲನೆ ಕೊಡುವ ಪ್ರಾಮಾಣಿಕ ಪ್ರಯತ್ನವಿದೆ. ಯುವಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದಾತ್ತ ಮನಸ್ಸಿದೆ. ಇಷ್ಟೊಂದು ದೀರ್ಘ, ಸಾರ್ಥಕ ಕಲ್ಪನೆಯ, ಕೆಲಸದ ಹಿಂದೆ ಇದ್ದವರು ಸಿಜಿಕೆ. ಆದ್ದರಿಂದಲೇ ಸಿಜಿಕೆಯವರು ಕನ್ನಡ ರಂಗಭೂಮಿಗೆ ಸಲ್ಲಿಸಿದ ಕೊಡುಗೆ ಅನನ್ಯವಾದದ್ದಾಗಿದೆ.

‘ರಂಗ ನಿರಂತರ’ ಹಮ್ಮಿಕೊಂಡ ೧೫೦ ದಿನಗಳ ರಂಗಪ್ರದರ್ಶನವು ರಂಗಭೂಮಿಯಲ್ಲೇ ವಿಶಿಷ್ಟ ಪ್ರಯೋಗ ಮತ್ತು ಸಾಧನೆಯೆಂದು ಹೆಸರಾಗಿದೆ. ಬೆಂಗಳೂರಿನ ರಂಗ ಚಟುವಟಿಕೆಗಳು ಸ್ಥಗಿತವಾಗಿವೆಯೆಂದು ಅನ್ನಿಸಿದಾಗ, ನಾಟಕಗಳ ಪ್ರೊಡಕ್ಷನ್ ಖರ್ಚು ಮಿತಿಮೀರಿದೆ ಎನ್ನಿಸಿದಾಗ, ಹೆಸರಾಂತ ತಂಡಗಳು ಹಳೆಯ ನಾಟಕಗಳನ್ನೇ ಆಡಿ ಬಳಲಿದಾಗ, ಹೊಸ ತಂಡಗಳು, ನಿರ್ದೇಶಕರು ಹುಟ್ಟದೇ ಹೋದಾಗ ಈ ಪ್ರಯತ್ನ ಸಾರ್ಥಕವೆನ್ನಿಸಿತು. ಸಿಜಿಕೆ ಯವರು ತಮ್ಮ ಸಮಕಾಲೀನ ನಿರ್ದೇಶಕರನ್ನು, ನಟರನ್ನು ಕೂಡಿಸಿಕೊಂಡು ವಿಭಿನ್ನ ನಾಟಕಗಳನ್ನು ಪ್ರದರ್ಶಿಸಿದರೆ, ನಿಂತಂತಿರುವ ರಂಗಕ್ರಿಯೆಯು ಹರಿಯುವ ನೀರಿನಂತಾಗಲೆಂದು ಆಶಿಸಿ ನಡೆಸಿದ ಈ ಕಾರ್ಯಕ್ರಮವು ಶ್ರಮದಾಯಕವಾದುದಾಗಿತ್ತು. ಒಂದು ಇಂಟಿಮೇಟ್ ಥಿಯೇಟರ್‌ನ ಹೊಸ ಕಲ್ಪನೆಯನ್ನು ಸೃಷ್ಟಿಸಿ ಪ್ರೇಕ್ಷಕ ಸಮುದಾಯವು ಬೇಸರಗೊಳ್ಳದೆ ಭಾಗವಹಿಸುವಂತಹ ಪ್ರಯೋಗಗಳನ್ನು ಮಾಡಿದ್ದು ಹೆಚ್ಚುಗಾರಿಕೆಯೆಂದೇ ಹೇಳಬೇಕು. ಬಿ. ಜಯಶ್ರೀ, ಟಿ.ಎನ್. ಸೀತಾರಾಂ, ನಾಗಾಭರಣ, ಟಿ.ಎನ್. ನರಸಿಂಹನ್ ಮುಂತಾದ ಖ್ಯಾತ ನಿರ್ದೇಶಕರನ್ನು ಕೂಡಿಸಿ ಅವರ ಜೊತೆಗೆ ಹೊಸಬರನ್ನು ಸೇರಿಸಿ ನಿರ್ವಹಿಸಿದ ಸಿಜಿಕೆಯವರ ರಂಗಚಳುವಳಿಯ ಕಮಿಟ್‌ಮೆಂಟ್‌ನ್ನು ಅನೇಕರು ಹಾಡಿ ಹೊಗಳಿದ್ದಾರೆ. ಸಂಘಟನಾಚಾರ್ತುರ್ಯಾ ಮತ್ತು ರಂಗಾಸಕ್ತಿಗೆ ಮತ್ತೊಂದು ಹೆಸರಾಗಿ ಈ ಸಂದರ್ಭಗಳಲ್ಲಿ ಸಿಜಿಕೆ ದುಡಿದಿರುವುದನ್ನು ರಂಗಭೂಮಿ ಇಂದಿಗೂ ಮೆಲುಕು ಹಾಕುತ್ತಿದೆ. ಇಂತಹ ಪ್ರಯತ್ನಗಳು ನಡೆಯದೇ ಹೋಗಿದ್ದರೆ ಹವ್ಯಾಸಿ ರಂಗಭೂಮಿ ತನ್ನ ಪ್ರೇಕ್ಷಕರನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಹೊಸ ಪ್ರೇಕ್ಷಕರನ್ನು ತಯಾರು ಮಾಡುವ ತುರ್ತಿನ ಸಂದರ್ಭ ಅದಾಗಿತ್ತು. ಐತಿಹಾಸಿಕವಾಗಿಯೂ ಸಿಜಿಕೆಯವರು ಮತ್ತು ಸಂಗಡಿಗರು ಮಾಡಿದ ಈ ಪ್ರಯತ್ನಗಳು, ಕನ್ನಡ ರಂಗಭೂಮಿಯ ಮುಖ್ಯವಾದ ಘಟ್ಟವಾಗಿದೆ. ‘ರಂಗನಿರಂತರ’ ಎಂಬ ಹೆಸರಿನ ಅನ್ವರ್ಥವಾಗಿಯೇ ಇಂತಹ ಅನೇಕ ಚಟುವಟಿಕೆಗಳು ಸಿಜಿಕೆಯನ್ನು ಕೇಂದ್ರವಾಗಿಟ್ಟು ನಡೆದುಕೊಂಡು ಬಂದಿವೆ.

೫. ಅನ್ವೇಷಕ – ನಿರ್ದೇಶಕ

ಸಿಜಿಕೆಯವರ ನಿರ್ದೇಶನದಲ್ಲಿ, ನಾಟಕವನ್ನು ಅರ್ಥೈಸುವಲ್ಲಿ ವೈರುಧ್ಯಗಳಿರುತ್ತವೆ. ಈ ವೈಪರೀತ್ಯಗಳನ್ನು ಗುರುತಿಸಿರುವ ವಿಮರ್ಶಕರು ವಿರಳ. ಅವರಲ್ಲಿ ಎಸ್.ಆರ್. ರಮೇಶ್ ಮುಖ್ಯರಾಗಿದ್ದಾರೆ. ಸಿಜಿಕೆಯವರ ನಾಟಕಗಳ ನಿರ್ದೇಶನದ ಹಿಂದಿನ ಸತ್ಯಗಳನ್ನು, ಸ್ಫೂರ್ತಿಗಳನ್ನು, ಕಾಳಜಿಗಳನ್ನು, ಅಂತಃಕರಣಗಳನ್ನು ರಮೇಶ್ ತಿಳಿದವರಾಗಿದ್ದಾರೆ. ಅವರು ಸಿಜಿಕೆಯವರನ್ನು ಅವರ ಸಮಕಾಲೀನ ನಿರ್ದೇಶಕರ ಜೊತೆಗೆ ಹೋಲಿಸಿ ಕೆಲವು ನಿದರ್ಶನಗಳನ್ನು ಓದುಗರ ಮುಂದಿಟ್ಟಿದ್ದಾರೆ.

“ಸಿಜಿಕೆ ನಾಟಕದಲ್ಲಿ ವೈರುಧ್ಯ ಚಿಂತನೆಯನ್ನು ಬಿಂಬಿಸುವ ಈ ವೈಭವೀಕರಣ ಪದೇ ಪದೇ ಕಾಣುವುದು ಕುತೂಹಲಕರ ಸಂಗತಿ. ಪಠ್ಯದ ಒಳನೋಟಗಳು ದೃಶ್ಯ ಬಾಹುಳ್ಯದಲ್ಲಿ ಪರಿವರ್ತನೆಗೊಳ್ಳುವ ರೀತಿ ವಿಚಿತ್ರ ರೀತಿಯದು. ಮದರ್‌ ಕರೇಜ್ ನಾಟಕವನ್ನು ನಿರ್ದೇಶಿಸಲು ಬಂದ ಸಿಜಿಕೆಯೊಂದಿಗೆ ನಾವು ಪದೇ ಪದೇ ಚರ್ಚಿಸಿದ್ದು ವೈಚಿತ್ರ‍್ಯಗಳ ಬಗ್ಗೆ, ಲಿಂಗದೇವರು ಹಳೇಮನೆ ಅನುವಾದಿಸಿದ ಬ್ರೆಕ್ಟ್‌ನ ‘ಮದರ್‌ ಕರೇಜ್’ ಸಿಜಿಕೆ ಯುರೋಪಿಯನ್ ಸಮುದಾಯದ ಯುದ್ಧದ ಭೀಕರತೆಯ ಬಗ್ಗೆಯಾಗಲಿ ಆರ್ಥಿಕ ಮಾದರಿಗಳ ಬಗ್ಗೆಯಾಗಲಿ ತಲೆಕೆಡಿಸಿಕೊಳ್ಳಲ್ಲಿಲ್ಲ. ಮುವತ್ತು ವರ್ಷ ಯುದ್ಧ ನಡೆದದ್ದು ೧೬೧೮ ರಿಂದ ೧೬೪೮ರವರೆಗೆ. ಈ ಯುದ್ಧ ಕ್ರೈಸ್ತ ಸಮುದಾಯದ ಯುರೋಪನ್ನು ಪ್ರೊಟೆಸ್ಟಂಟ್ ಮತ್ತು ಕ್ಯಾಥೋಲಿಕ್ ರಾಜ್ಯಗಳಾಗಿ ಒಡೆದು ಹಾಕಿತು. ಬ್ರೆಕ್ಟ್ ಮತನಿಷ್ಠೆಯನ್ನು ತನ್ನ ನಾಟಕದಲ್ಲಿ ನೆಪಮಾತ್ರಕ್ಕೆ ಬಳಸಿಕೊಳ್ಳುತ್ತಾನೆ. ಆದರೆ ಅವನು ನಿಜವಾಗಿಯೂ ಹೇಳಬೇಕೆಂದಿರುವುದು ಯುದ್ಧವನ್ನು ಹುಟ್ಟು ಹಾಕುವವನ ಉದ್ದೇಶ ಲಾಭಗಳಿಸುವುದೆಂಬುದನ್ನು, ಸಮುದಾಯ ಪ್ರಯೋಗಕ್ಕೆ ನಾಟಕವನ್ನು ಸಿದ್ಧಪಡಿಸುವಾಗ ಈ ಚಿಂತನೆಗಳನ್ನೆಲ್ಲಾ ಬದಿಗಿಟ್ಟು ಕೇವಲ ತಾಯಿ, ತನ್ನ ಸಂಸಾರ ನಿರ್ವಹಣೆಯಲ್ಲಿ ಹೆಣಗಾಡುವ ಪರಿಪರಿಯನ್ನು ಭಾವನಾತ್ಮಕವಾಗಿ ಹಿಡಿದಿಡುವುದು ಮುಖ್ಯವಾಯಿತು. ಸಿಜಿಕೆ ಮದರ್‌ ಕರೇಜ್‌ಳನ್ನು ಅರ್ಥಮಾಡಿಕೊಂಡದ್ದು ಒಡಲಾಳದ ಸಾಕವ್ವನ ಮೂಲಕ.

ಕ್ಯಾಪ್ಟನ್ ಲಾರಾಳ ಸಂಘರ್ಷಾತ್ಮಕ ಸಂಬಂಧದ ಎಳೆಗಳು, ಊರುಕೇರಿಯ ಸಮುದಾಯದ ಜಗಳಗಳಾಗಿ ಹೇಗೆ ಸ್ಥಿತ್ಯಂತರಗೊಳ್ಳುತ್ತವೆಯೋ ಹಾಗೆ ಅನ್ನ ಫರ್‌ಲಿನ್, ಸ್ವಿಸ್‌ಚೀಸ್, ಎಲಿಫ್‌ ಇವರ ಸಂಬಂಧಗಳು ಸಾಕವ್ವ, ಶಿವು, ಮಂಜು ಮುಂತಾದವರ ಕೌಟುಂಬಿಕ ಭಾವಸ್ತರದಲ್ಲಿ ವ್ಯಕ್ತಗೊಳ್ಳುತ್ತವೆ. ತನ್ನ ಬೇರುಗಳ ಬಗ್ಗೆ ಅತ್ಯಂತ ಕಾಳಜಿ ವಹಿಸುವ ಸಿಜಿಕೆ ಯಾವುದೇ ನಾಟಕದ ಪಾತ್ರ ಸಂಬಂಧಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಬಳಸಿಕೊಳ್ಳುವ ದೃಷ್ಟಿಕೋನ ತನ್ನ ಬದುಕಿನದಾಗಿರುತ್ತದೆ, ಓಥೆಲೋ, ಯಯಾತಿ ಅಥವಾ ಮಹಾಚೈತ್ರ, ಒಡಲಾಳ ಈ ನಾಟಕಗಳು ಪ್ರದರ್ಶಿಸಿದ ಭಾವಸ್ಥಿತಿ ಸಿಜಿಕೆ ಕಂಡ ಅವರದೆ ಆಪ್ಯಾಯಮಾನವಾದ ಭಾವಸ್ಥಿತಿಯಾಗಿರುತ್ತದೆ.[3]

“ಮದರ್ ಕರೇಜ್‌ನಲ್ಲಿ ಸ್ಪಿಸ್‌ಚೀಸ್‌ನ ಹೆಣವನ್ನು ಮದರ್‌ ಕರೇಜ್‌ಳ ಮುಂದೆಯೇ ಕರೆದೊಯ್ಯುತ್ತಾರೆ. ಆಕೆ ತನ್ನ ಮಗನನ್ನು ನೋಡಿದರೂ ಗುರುತಿಸುವುದಿಲ್ಲ. ಭಯದಿಂದಾಗಿ, ತನ್ನ ಶೋಕವನ್ನು ವ್ಯಕ್ತಪಡಿಸಲಾಗದೆ ಸುಮ್ಮನಿರಬೇಕಾಗುತ್ತದೆ. ಇಲ್ಲಿ ಮದರ್ ಕರೇಜ್ ಅಮಾನವೀಯವಾಗಬೇಕಾಗುತ್ತದೆ. ಕಾರಣ ತನ್ನ ಮತ್ತು ಕ್ಯಾಥರೀನ್‌ಳ ಅಸ್ತಿತ್ವದ ಸಮಸ್ಯೆ ಮುಖ್ಯವಾಗಿರುತ್ತದೆ. ಸಿಜಿಕೆ ಈ ದೃಶ್ಯವನ್ನು ಅತ್ಯಂತ ರೊಮ್ಯಾಂಟಿಕ್ ಆಗಿ ನೋಡುತ್ತಾರೆ. ಸ್ವಿಸ್‌ಚೀಸ್‌ನ ಹೆಣವನ್ನು ಹೊತ್ತುಕೊಂಡು ಹೋಗುವುದು, ಆ ಹೆಣದ ಹಿಂದೆ ತಾಯಿ ಭೋರಿಡುವುದು, ಮೂಕ ಸಾಕ್ಷಿಯಂತೆ ನಿಂತಿರುವ ಪಾದ್ರಿ ಕೈಯಲ್ಲಿದ್ದ ಮೇಣದ ಬತ್ತಿಯನ್ನು ನಂದಿಸುವುದು, ಹಿನ್ನೆಲೆಯಲ್ಲಿ ಸಂಗೀತದ ಗತಿತಾರಕ ಸ್ಥಿತಿಯನ್ನು ತಲುಪುವುದು ಹೀಗೆ. ಇದೇ ದೃಶ್ಯ ಸೆಂಟಿಮೆಂಟಲ್ ಆಗುತ್ತಾ ಭಾವ ಸಮಾಧಿಯನ್ನು ಸೃಷ್ಟಿಸುತ್ತದೆ. ಪ್ರದರ್ಶನಕ್ಕೆ ಮುನ್ನ ನನಗೆ ಈ ದೃಶ್ಯದ ನಿರೂಪಣೆಯ ಬಗ್ಗೆ ಸಂಶಯವಿತ್ತು. ಆದರೆ, ಪ್ರದರ್ಶನದ ನಂತರ, ಪ್ರೇಕ್ಷಕರು ಆಸಕ್ತಿಯಿಂದ ಈ ದೃಶ್ಯ ವಿವರಣೆಯಲ್ಲಿ ಪಾಲ್ಗೊಂಡಿದ್ದನ್ನು ಕಂಡು, ಸಿಜಿಕೆಯ ಈ ವಿಸ್ತರಣೆಯ ಬಗ್ಗೆ ಆಸಕ್ತಿ ಮೂಡತೊಡಗಿತ್ತು”.

ಸಿಜಿಕೆ ನಮಗೆ ಮುಖ್ಯವಾಗುವುದು ಈ ವೈಪರೀತ್ಯಗಳಲ್ಲಿ. ಇಂಗ್ಲೀಷ್ ನಾಟಕಗಳ ಸನ್ನಿವೇಶವನ್ನು ಕನ್ನಡದ ಸಂದರ್ಭಕ್ಕೆ ತಂದು ಸಾಕವ್ವನ ಮೂಲಕ, ಸಂಸನ ಕಣ್ಣಿನಲ್ಲಿ, ಕನಕನ ಅಧ್ಯಾತ್ಮದ ಮೂಲಕ ಲೋಕ ನೋಡುವ ದೃಷ್ಟಿ ಇದರಲ್ಲಿ ಮುಖ್ಯವಾಗುತ್ತದೆ. ಈ ವೈಪರೀತ್ಯಗಳ ಮೂಲಕ ಪಾತ್ರಗಳನ್ನು ನೋಡುವ, ಅರ್ಥಮಾಡಿಕೊಳ್ಳುವ ಸಿಜಿಕೆ ಬಳಸುವ ರಂಗಪರಿಕರಗಳು ಅತ್ಯಂತ ಶ್ರೀಮಂತವಾಗಿರುತ್ತವೆ ಎಂಬ ಟೀಕೆಗಳೂ ಇವೆ. ಇದಕ್ಕೆ ಕಾರಣಗಳಿವೆ. ರಂಗಪ್ರಯತ್ನಗಳು ಬೇಕಾಬಿಟ್ಟಿಯಾಗಿರಬಾರದು; ಬರಡಾಗಿ ಪ್ರೇಕ್ಷಕನ ಮುಂದೆ ಪ್ರದರ್ಶನಗೊಳ್ಳಬಾರದು; ಕಲೆಗೆ ಯಾವುದೇ ರಿಯಾಯಿತಿ/ಮೀಸಲಾತಿ ಇರಬಾರದೆಂಬ ಸಿಜಿಕೆಯವರ ಕಲ್ಪನೆಗಳೇ ಇದಕ್ಕೆ ಮುಖ್ಯ ಕಾರಣಗಳಾಗಿವೆ. ‘ಬೆಲ್ಚಿ’ಯಿಂದ ಇತ್ತೀಚಿನ ‘ದಂಡೆ’ಯವರೆಗೆ ಅದ್ದೂರಿ ಪ್ರಯೋಗಗಳಿಗೆ ಹೆಸರಾಗಿರುವ ಸಿಜಿಕೆ ವೈಪರೀತ್ಯಗಳಲ್ಲಿ ಅವರ ಒಳಗೊಳ್ಳುವಿಕೆ ಇದೆಯೆಂಬುದನ್ನು ಸಾಬೀತು ಮಾಡಿದ್ದಾರೆ. ರಮೇಶ್ ಅವರ ವಿಶ್ಲೇಷಣೆ ಸತ್ಯಕ್ಕೆ ಹತ್ತಿರವಾದದ್ದು ಎನಿಸುತ್ತದೆ. ಅಷ್ಟೇ ಅಲ್ಲ ದೇಶೀ ಚಿಂತನೆಯ ಹರಿಕಾರನೊಬ್ಬ ಪ್ರಪಂಚದ ಯಾವುದೇ ಪರಿಸರವನ್ನು ತನ್ನ ದೇಶೀ ಮೂಲಕ್ಕೆ ಹೊಂದಿಸಿಕೊಳ್ಳುವುದೇ ಅವನ ವೈಶಿಷ್ಟ್ಯವಾಗುತ್ತದೆ. ಭಾರತೀಯ ಪ್ರೇಕ್ಷಕರನ್ನು ಮುಟ್ಟುವ ಪ್ರಾಮಾಣಿಕ ದಾರಿಯಾಗಿರುತ್ತದೆ.

ಒಡಲಾಳದಿಂದ ಖ್ಯಾತಿಗಳಿಸಿದ ಸಿಜಿಕೆಯವರು ಪ್ರಖ್ಯಾತ ನಾಟಕಕಾರರನ್ನೇ ಹುಡುಕಿಕೊಂಡು ಹೋಗಲಿಲ್ಲ. ಇದಕ್ಕೆ ವಿರುದ್ಧವಾಗಿ ನಾಟಕಕಾರರನ್ನು ಸೃಷ್ಟಿಸುವ ಕಡೆಗೆ ಹೆಚ್ಚು ಗಮನಹರಿಸಿದರು. ಇತ್ತೀಚಿನ ದಿನಗಳವರೆಗೆ ಅಂದರೆ ೧೯೯೬-೯೭ರವರೆಗೆ ನಾಟಕ ಬರೆಯಬಲ್ಲ ಶಕ್ತಿಯಿದೆಯೆಂದು ಅನ್ನಿಸಿದ ಲೇಖಕ ಮಿತ್ರರನ್ನು ಕರೆಸಿ, ಅವರೊಂದಿಗೆ ಚರ್ಚಿಸಿ ನಾಟಕಗಳನ್ನು ಬರೆಯಲು ಪ್ರೇರೇಪಿಸಿದ್ದರು. ಕವಿ ಕೆ.ಎಂ. ಮುನಿಕೃಷ್ಣಪ್ಪನವರಿಂದ ‘ದೇಶಪ್ರೇಮಿ ಸುರಪುರನಾಯಕ’ ನಾಟಕವನ್ನು ಬರೆಸಿ ಅದ್ದೂರಿ ಪ್ರಯೋಗವಾಗುವಂತೆ ಮಾಡಿದರು. ತಮ್ಮ ತಂತ್ರ ಸಮೃದ್ಧಿಯನ್ನು ಇಡೀ ನಾಟಕಕ್ಕೆ ಧಾರೆಯೆರೆದು ಗಮನಾರ್ಹ ಪ್ರಯೋಗವಾಗುವಂತೆ ಮಾಡಿದ್ದಲ್ಲದೆ, ಹೊಸ ನಟರನ್ನು ಹುಡುಕಿ ತರಬೇತಿ ನೀಡಿ ರಂಗದ ಮೇಲೆ ತಂದದ್ದು ಕೂಡ ಪ್ರಶಂಸೆಗೆ ಪಾತ್ರವಾಗಿದೆ. ಕಥೆಗಾರ ಮಹಾಬಲಮೂರ್ತಿ ಕೂಡ್ಲೆಕೆರೆಯವರ ‘ವೈಶಂಪಾಯನತೀರ’ ಕಥೆಯನ್ನು ಎಲ್.ಎನ್. ಮುಕುಂದರಾಜ್ ಅವರಿಂದ ನಾಟಕ ರೂಪಕ್ಕೆ ರೂಪಾಂತರಿಸಿ ಬೆಂಗಳೂರಿನ ಬ್ಯಾಂಕ್ ಉದ್ಯೋಗಿಗಳ ‘ಹಂದರ’ ತಂಡಕ್ಕೆ ನಿರ್ದೇಶನ ಮಾಡಿದರು. ಯಕ್ಷಗಾನ ಮತ್ತು ಸಾಮಾಜಿಕ ನಾಟಕ ಮಾದರಿಗಳ ಮಿಶ್ರಣವಾಗಿ ಮೂಡಿ ಬಂದ ‘ವೈಶಂಪಾಯನ ತೀರ’ ನಾಟಕ ಕೂಡ ಹಲವಾರು ಪ್ರದರ್ಶನಗಳನ್ನು ಕಂಡಿದೆ. ಕರ್ನಾಟಕದ ಹೊರಗೆ ಕೂಡ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸಿಜಿಕೆಯವರ ಇಂತಹ ಪ್ರಯತ್ನಗಳು ಮುಂದುವರಿಯುತ್ತಲೇ ಇವೆ. ಹೊಸ ನಾಟಕಕಾರರ, ವಸ್ತುಗಳ ಅನ್ವೇಷಣೆ ನಿರಂತರವಾಗಿದೆ. ಸಿಜಿಕೆ ಜೀವಂತ ನಿರ್ದೇಶಕರಾಗಿರುವುದು ಈ ರೀತಿಯ ಗುಣಗಳಿಂದ. ರಂಗಭೂಮಿಯ ಜೊತೆ ಅವಿನಾಭಾವ ಸಂಬಂಧವಿಟ್ಟು ಕೊಂಡಿರುವುದರಿಂದಲೇ ಹೊಸ ಪೀಳಿಗೆಗೆ ಮಾರ್ಗದರ್ಶನ ಮಾಡುವ ಶಕ್ತಿ ಪಡೆದ ನಾಟಕಕಾರ ನಿರ್ದೇಶಕರಾಗಿದ್ದಾರೆ. ಸ್ವಭಾವತಃ ಸಿಜಿಕೆ ಖಂಡಿತವಾದಿ, ಸ್ನೇಹಿತರನ್ನು ವಾದ-ಸಿದ್ಧಾಂತಗಳಿಂದ ದೂರವಿಟ್ಟು ಅಪ್ಪಿಕೊಳ್ಳುವ ಸ್ವಭಾವ. ಅವರ ನಿಷ್ಠುರತೆಯಿಂದ ಅನೇಕರನ್ನು ಶತ್ರುಗಳನ್ನಾಗಿಸಿಕೊಂಡಿದ್ದಾರೆ: ಅರ್ಹ ಅವಕಾಶಗಳಿಂದ ವಂಚಿತರಾಗಿದ್ದಾರೆ. ಆದರೂ ಅವರನ್ನು ಅನೇಕ ಪ್ರಶಸ್ತಿ ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ. ೧೯೯೫-೯೬ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ೧೯೯೦ನೇ ಸಾಲಿನ ಕರ್ನಾಟಕ ನಾಟಕ ಆಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾದ ಗೌರವ ಸಂದಿದೆ. ಕರ್ನಾಟಕ ಸರ್ಕಾರ ಸ್ಥಾಪಿಸಿದ ಮೊಟ್ಟಮೊದಲ ದಾದಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಮತ್ತು ಕೆ.ವಿ. ಶಂಕರೇಗೌಡ ಪ್ರಶಸ್ತಿಗಳು ಕೂಡ ಇವರದಾಗಿದೆ. ೧೯೮೪ರಲ್ಲಿ ರಶಿಯಾದ ಲೆನಿನ್ ಗ್ರಾಡ್‌ನಲ್ಲಿ ನಡೆದ ಸ್ವಾನಿಸ್ಲೋವಸ್ಕೆ ಕುರಿತ ಅಂತರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾರತವನ್ನು ಪ್ರತಿನಿಧಿಸಿದ ಗೌರವಕ್ಕೆ ಪಾತ್ರರಾಗಿದ್ದಾರೆ. ದೃಶ್ಯ ಮಾದ್ಯಮದ ಬಗೆಗೆ ಅಷ್ಟೇನು ಆಸಕ್ತಿ ತೋರದ ಸಿಜಿಕೆ ಚಲನಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ಆಲನಹಳ್ಳಿಕೃಷ್ಣ ಅವರ ಪ್ರಸಿದ್ಧ ಕಾದಂಬರಿ ‘ಭುಜಂಗಯ್ಯನ ದಶಾವತಾರಗಳು’ ಕಾದಂಬರಿಯನ್ನು ಆಧರಿಸಿದ ಅದೇ ಹೆಸರಿನ ಚಲನಚಿತ್ರಕ್ಕೆ ಸಂಭಾಷಣೆ ಬರೆದದ್ದಲ್ಲದೆ ಸಹ ನಿರ್ದೇಶಕರಾಗಿಯೂ ದುಡಿದಿದ್ದಾರೆ. ‘ವೀರಪ್ಪನ್’ ಕನ್ನಡ ಚಲನಚಿತ್ರದ ಸಂಭಾಷಣೆಕಾರರಾಗಿ ಕೆಲಸ ಮಾಡಿದ್ದಾರೆ. ಈ ಎರಡೂ ಚಿತ್ರಗಳು ಪ್ರಶಸ್ತಿ ಪಡೆದಿವೆ. ಬೆಂಗಳೂರು ಸುಚಿತ್ರ ಫಿಲಂ ಸೊಸೈಟಿಯ ಪೀರ್‌ ರಂಗಮಂದಿರದ ವಿನ್ಯಾಸ ರೂಪಿಸಿದ್ದಾರೆ. ಮಂಡ್ಯದ ಕೆ.ವಿ. ಶಂಕರೇಗೌಡ ಸಭಾಂಗಣದ ವಿನ್ಯಾಸಕಾರರಾಗಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಗ್ರಂಥಾಲಯ ಕಟ್ಟಡದ ಬೆಳಕು ವಿನ್ಯಾಸ ಹಾಗೂ ಸಭಾಂಗಣಕ್ಕೆ ಬೆಳಕು ಮತ್ತು ಧ್ವನಿ ವ್ಯವಸ್ಥೆ ವಿನ್ಯಾಸಗೊಳಿಸುವ ಮೂಲಕ ಬಹುಮುಖ ಪ್ರತಿಭೆಯನ್ನು ತೋರಿದ್ದಾರೆ.

ಈ ಲೇಖನ ಮುಗಿಸಬೇಕು ಎನ್ನುವಷ್ಟರಲ್ಲೇ ಸಿಜಿಕೆ ಸಾಧನೆ ಕೂಡ ಮುಗಿಯುತ್ತಲೇ ಇಲ್ಲ. ಹೀಗಾಗಿ ಲೇಖನ ಕೊನೆ ಮಾಡಲೇಬೇಕೆಂದು ಕೂತಾಗ ಮತ್ತೊಂದು ಸಾಧನೆ ಕಣ್ಣ ಮುಂದೆ ಬಂದು ಬಿದ್ದಿತು. ‘ಶಿವಸಂಚಾರ’ ಎಂಬ ರೆಪರ್ಟರಿಯನ್ನು ಸಾಣೇಹಳ್ಳಿ ಎಂಬ ಕುಗ್ರಾಮದಲ್ಲಿ ಸ್ಥಾಪಿಸಿ, ದೇಶದ ರೆಪರ್ಟರಿಗಳಲ್ಲಿ ಗಮನ ಸೆಳೆಯುತ್ತಿದೆ. ಇಂದಿಗೂ ಕರ್ನಾಟಕದ ಪ್ರಬುದ್ಧ ಪ್ರೇಕ್ಷಕರನ್ನು ಸಾಣೇಹಳ್ಳಿಯಲ್ಲಿ ನೋಡಬಹುದು. ಒಂದು ಧಾರ್ಮಿಕ ಮಠ ಸಾಹಿತ್ಯ ಸಂಸ್ಕೃತಿಗೆ ಹೇಗೆ ಮುಂದಾಗಬಹುದೆಂಬುದಕ್ಕೆ ಸ್ಪಷ್ಟ ನಿದರ್ಶನ ರೂಪಿಸಿದ್ದಾರೆ. ರಂಗ ನಿರ್ದೇಶಕ ಸಿಜಿಕೆ ಈ ಶಿವಸಂಚಾರದ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಅದರ ಯಶಸ್ಸಿಗೆ ಮೂಲ ಕಾರಣ ತರಳಬಾಳು ಶಾಖಾಮಠದ ಶ್ರೀ ಶ್ರೀ ಪಂಡಿತಾರಾಧ್ಯ ಸ್ವಾಮೀಜಿಯವರೆನ್ನುತ್ತಾರೆ. ರಂಗಭೂಮಿಗೆ ಸಿಜಿಕೆಯವರ ಸಾಧನೆಯನ್ನು ಸೀಮಿತಗೊಳಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಕಾರಣ ಸಿಜಿಕೆ ಆಕ್ರಮಿಸಿಕೊಂಡಿದ್ದು ಹತ್ತು ಹಲವು ಚಳುವಳಿಗಳನ್ನು, ಬಂಡಾಯ ಸಾಹಿತ್ಯ ಚಳುವಳಿಯ ಸಂಸ್ಥಾಪಕ ಕಾರ್ಯದರ್ಶಿ, ಸಮುದಾಯದ ಸಂಸ್ಥಾಪಕ ಕಾರ್ಯದರ್ಶಿ, ದಲಿತ ಸಂಘರ್ಷ ಸಮಿತಿಯ ಪ್ರಮುಖ ರೂವಾರಿ. ಪೌರ ಕಾರ್ಮಿಕರ ಹೋರಾಟದಲ್ಲಿ ಮುಂದೆ ಸಾಹಿತ್ಯ ಪತ್ರಿಕೆಗಳಾದ ‘ಈ ಮಾಸ’ ನಾಟಕ, ‘ಅನ್ವೇಷಣೆ’ಯ ಬರಹಗಾರರು ಇತ್ಯಾದಿ. ಹೀಗೆ ಬೆಂಗಳೂರಿನ ಎಲ್ಲ ಸಾಹಿತ್ಯ ಸಂಸ್ಕೃತಿಯ ಚಳುವಳಿಗಳಲ್ಲಿ ಸಿಜಿಕೆ ಪಾತ್ರ ಇದ್ದೇ ಇರುತ್ತದೆ. ಹೀಗೆ ಸಿಜಿಕೆಯ ಬಗ್ಗೆ ಬರೆಯಲು ಹೋದಷ್ಟು ಸಿಕ್ಕುವ ಮಾಹಿತಿಯೇ ಹೆಚ್ಚು ಇದರ ಬಗ್ಗೆ ಸಿಜಿಕೆಯನ್ನು ಕೇಳಿದಾಗ ಕೊಡುವ ಉತ್ತರ ಇನ್ನೂ Interesting …

‘An Individual should be defeated by his works’ ಎನ್ನುತ್ತಾರೆ.

ಇದಕ್ಕೆ ಉದಾಹರಣೆ ಎನ್ನುವಂತೆ ತಾವೇ ಸಾಣೆಹಳ್ಳಿಯಲ್ಲಿ ನಿಂತು, ಬಯಲು ರಂಗ ಮಂದಿರದ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ. ದೇಶದ ಸುಸಜ್ಜಿತ ಬಯಲು ರಂಗ ಮಂದಿರವಿದು.

೬. ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ

ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಸಿಜಿಕೆ ರೂಪಿಸಿದ ಸಂಘಟನಾ ಶಕ್ತಿ ಇಂದು ಸರ್ಕಾರಿ ಸ್ವಾಯತ್ತತೆ ಸಂಸ್ಥೆಗಳಿಗೆ ಒಂದು ಮಾದರಿ ಎನ್ನಬಹುದು. ಸಿಜಿಕೆ ಅಧ್ಯಕ್ಷರಾಗಿದ್ದಾಗ ಸರ್ಕಾರ ನೀಡಿದ ಹಣ ಕೇವಲ ಆರು ಲಕ್ಷ ಮೂವತ್ತು ಸಾವಿರ. ಆದರೆ ಈ ಆರ್ಥಿಕ ಕಡಿತದಿಂದ ಸಿಜಿಕೆ ಹಿಮ್ಮೆಟ್ಟಲಿಲ್ಲ. ರಾಜ್ಯಾದ್ಯಂತ ಸಂಚರಿಸಿ ಸಂಗ್ರಹಿಸಿದ್ದು ಅಪಾರ ಸಂಪನ್ಮೂಲ. ಇವರ ಕಾಲದಲ್ಲಿ ತಂದ ಮೂವತ್ತು ವ್ಯಕ್ತಿಗಳ (ವೃತ್ತಿರಂಗ ಭೂಮಿ, ಹವ್ಯಾಸಿ ರಂಗಭೂಮಿ, ನಟರು, ಮಾಲೀಕರು, ತಂತ್ರಜ್ಞರು, ನಿರ್ದೇಶಕರು, ವಿಮರ್ಶಕರು ಇತ್ಯಾದಿ) ‘ಬದುಕು-ಸಾಧನೆ’ ಒಂದು ಅಪ್ರತಿಮ ಸಾಧನೆ. ಇದಕ್ಕಾಗಿ ಇವರು ಹಣ ಸಂಗ್ರಹಿಸಿದ್ದು ತನ್ನ ಅಕಾಡೆಮಿಯ ಸದಸ್ಯರಿಂದಲೇ. ಇಂದಿಗೂ ಈ ದಾಖಲೆಗಳು ಕರ್ನಾಟಕ ರಂಗಭೂಮಿಯ ವಿಶಿಷ್ಟ ದಾಖಲೆಗಳು. ಇವರು ಅಧ್ಯಕ್ಷರಾಗಿದ್ದಾಗ ಶ್ರಮಿಕ ರಂಗಕರ್ಮಿಗಳಿಗೆ ರೂಪಿಸಿದ ‘ಪದ್ದಣ್ಣ’ ರಂಗ ಪ್ರಶಸ್ತಿ ರಂಗ ಶ್ರಮಕ್ಕೆ ಸಿಜಿಕೆ ನೀಡಿದ ಶ್ರಮದ ಪ್ರತಿಫಲ ಎನ್ನಬಹುದು. ಹೀಗೆ ನಿರಂತರ ಸಾಹಿತ್ಯ ರಂಗಶ್ರಮ ಸಿಜಿಕೆಯನ್ನು ಈ ಲೇಖನಕ್ಕೆ ಆಧಾರವಾಗಿಸಿದೆ ಎಂದರೆ ತಪ್ಪಾಗಲಾರದು.

ಬೆಂಗಳೂರು ವಿಶ್ವವಿದ್ಯಾಲಯ ಇಷ್ಟೆಲ್ಲಾ ಸಾಹಸ ಮನೋವೃತ್ತಿ ಹೊಂದಿದ್ದ ಸಿಜಿಕೆ ಯವರನ್ನು ಗಾಂಧಿ ಭವನದ ನಿರ್ದೇಶಕರನ್ನಾಗಿ ಕೂಡ ನೇಮಿಸಿತು. ೧೯೬೨ರ ಸುಮಾರಿಗೆ ಜ್ಞಾನಭಾರತಿ ಆವರಣದಲ್ಲಿ ಗಾಂಧಿ ಭವನ ಅಸ್ತಿತ್ವಕ್ಕೆ ಬಂದಿತ್ತಾದರೂ ಕಾರ್ಯಕ್ರಮಗಳ ಕೊರತೆಯಿಂದ ಗಾಂಧಿ ಭವನ ಬೆಂಗಳೂರು ವಿಶ್ವವಿದ್ಯಾಲಯ ಅಷ್ಟೇನೂ ವ್ಯಾಪಕ ಪ್ರಚಾರಕ್ಕೆ ಬಂದಿರಲಿಲ್ಲ. ಸಿಜಿಕೆಯವರು ಇದರ ನಿರ್ದೇಶಕರಾದ ತಕ್ಷಣ ಹಮ್ಮಿಕೊಂಡಿದ್ದು ಹೊಸ ಕಾರ್ಯಯೋಜನೆಗಳನ್ನು ಗಾಂಧಿ ಭವನಕ್ಕಾಗಿ. ಈ ಯೋಜನೆಗಳನ್ನು ಕ್ರಿಯಾ ಯೋಜನೆಗಳೆಂದು ರೂಪಿಸಿ ಮಹಾತ್ಮ ಗಾಂಧೀಜಿ ಹಾಗೂ ಅವರ ತತ್ವ ಎಂದರೆ ಹಿರಿಯರಿಗೆ ಮಾತ್ರ ಸೀಮಿತವಲ್ಲ. ಅದರ ಅವಶ್ಯಕತೆ ಇಂದು ಯುವಕರಿಗೂ ಅತ್ಯಗತ್ಯ ಎಂದು ಚರ್ಚೆ ಕಮ್ಮಟಗಳನ್ನು ರೂಪಿಸತೊಡಗಿದರು. ಇದರಲ್ಲಿ ಮುಖ್ಯವಾದುದು ಮಹಾತ್ಮ ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್‌ರವರ ಜನಪರ ಕಾಳಜಿಗಳ ಬಗ್ಗೆ ನಡೆದ ಕಮ್ಮಟ. ಈ ಇಬ್ಬರ ಮಧ್ಯೆ ಅನೇಕ ತಾತ್ವಿಕ ಭಿನ್ನಾಭಿಪ್ರಾಯ ಇದ್ದಿದ್ದು ಅವರ ಮುಖಾಮುಖಿ ಸಾಧ್ಯವೇ ಇಲ್ಲ ಎಂಬ ಭಾವನೆ ನಮ್ಮಲ್ಲಿ ಅನೇಕರಲ್ಲಿತ್ತು. ಆದರೆ ಸಿಜಿಕೆಯವರು ಇವರಿಬ್ಬರ ನಡುವೆಯಿದ್ದ ಸಾಮರಸ್ಯಗಳನ್ನು ಒಂದೆಡೆ ತಂದು ಇವರಿಬ್ಬರ ಗುಣಾತ್ಮಕ ಜನಪರ ಕಾಳಜಿಗಳ ಬಗ್ಗೆ ಎಲ್ಲ ಚಿಂತಕರ ಗಮನ ಸೆಳೆದರು. ಹೀಗಾಗಿ ಅನೇಕ ವೈರುಧ್ಯಗಳ ನಡುವೆಯೂ ಸಾಮರಸ್ಯವನ್ನು ಹುಡುಕುವುದು ಸಿಜಿಕೆಯವರ ಹುಟ್ಟುಗುಣ ಎನ್ನಬಹುದು. ಇವರು ಕ್ರಿಯಾಶೀಲ ರಂಗ ನಿರ್ದೇಶಕರ ಜೊತೆಗೆ ರೂಢಿಸಿಕೊಂಡಿದ್ದು ಸಮಾಜದ ಎಲ್ಲ ಜನಧ್ವನಿಗಳ ಜೊತೆ. ಇವರು ಬರೆದ ಆತ್ಮಕಥನ ‘ಕತ್ತಾಲೆ ಬೆಳದಿಂಗಳು’ ಕಳೆದ ಮೂರು ನಾಲ್ಕು ದಶಕಗಳ ಒಂದು ಸಾಂಸ್ಕೃತಿಕ ದಾಖಲೆ. ಇಲ್ಲಿ ಇವರು ತಮ್ಮ ವೈಯುಕ್ತಿಕ ಜೀವನದ ಫಲಶೃತಿಗಳ ಜೊತೆಗೆ ಇವರೆಲ್ಲ ಸಹಪಾಠಿಗಳ ಚಳುವಳಿಯ ನೇತಾರರ ವಿಶಿಷ್ಟ ಅನುಭವವನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಈ ಕೃತಿಯ ಜನಪ್ರಿಯತೆ ಎಷ್ಟಿತ್ತೆಂದರೆ ಬಿಡುಗಡೆಯಾದ ದಿನವೇ ಸುಮಾರು ೮೦% ರಷ್ಟು ಕೃತಿಗಳು ಮಾರಾಟವಾಗಿ ಒಂದೂವರೆ ಲಕ್ಷಕ್ಕೂ ಹೆಚ್ಚಿನ ಹಣ ಸಂಪಾದಿಸಿತು. ವ್ಯಕ್ತಿಯೊಬ್ಬ ಕ್ರಿಯಾಶೀಲನಾಗಿದ್ದು ಅತ್ಯಂತ ಜನಪ್ರಿಯನೂ ಆಗಬಹುದು ಎನ್ನುವುದಕ್ಕೆ ಸಿಜಿಕೆ ಸಾಕ್ಷಿ ಎನ್ನಬಹುದು. ಈ ಲೇಖನವನ್ನು ಮುಗಿಸುವಷ್ಟರಲ್ಲಿಯೇ ಇವರ ಆತ್ಮಕಥೆಗೆ ನಾಡಿನ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಗಳು ಲಭಿಸಿವೆ. ಶಿವರಾಮ ಕಾರಂತರ ಪ್ರತಿಷ್ಠಾನ ಪ್ರಶಸ್ತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರೆತಿವೆ. ಐವತ್ತು ವಸಂತಗಳನ್ನು ಕಂಡಿರುವ ಸಿಜಿಕೆಯವರು ರಂಗಭೂಮಿಗೆ ಇನ್ನೂ ಮಿಗಿಲಾದ ಕಾಣಿಕೆಯನ್ನು ನೀಡಬೇಕು. ಆ ಮೂಲಕ ಅವರ ಬದುಕು ಸಾರ್ಥಕವಾಗುತ್ತದೆ.

 

[1]ರಂಗಭೂಮಿಯ ಅಂತರಂಗ ಸಿಜಿಕೆ ಪುಟ ೩೬, ೫೭

[2]ರಂಗಭೂಮಿಯ ಅಂತರಂಗ ಸಿಜಿಕೆ, ಪುಟ ೧೦೦

[3]ರಂಗಭೂಮಿಯ ಅಂತರಂಗ ಸಿಜಿಕೆ, ಪುಟ ೭೬