೭. ನಾಟಕಗಳ ವಿಮರ್ಶೆ

ರಂಗದ ಮೇಲೆ ‘ಒಡಲಾಳ’ದ ಅಂತರಂಗ

ಕನ್ನಡ ಕಾದಂಬರಿ ಕಥೆಗಳೆಷ್ಟೋ ರೂಪಾಂತರಗೊಂಡು ರಂಗದಲ್ಲಿ ರಾರಾಜಿಸಿ ಕೆಲವು ಮಾಯವಾಗಿದ್ದರೆ, ಮತ್ತೆ ಕೆಲವು ಗಟ್ಟಿಯಾಗಿ ಉಳಿದಿವೆ. ಇದಕ್ಕೆ ಹಲವು ಕಾರಣಗಳಿರಬಹುದು, ಸಮಕಾಲೀನತೆ, ರಾಜಕೀಯ, ಕೆಳವರ್ಗದವರ ಚಿತ್ರಣ ಹೀಗೆ ಒಂದೊಂದು ಬಾರಿ ಒಂದೊಂದು ವಸ್ತು ಕ್ಲಿಕ್ ಆಗುವುದುಂಟು.

ಎರಡು ತಿಂಗಳ ಹಿಂದೆ ಸಿ.ಜಿ. ಕೃಷ್ಣಸ್ವಾಮಿ ‘ರಂಗಸಂಪದ’ಕ್ಕೆ ದೇವನೂರು ಮಹಾದೇವರ ‘ಒಡಲಾಳ’ ರೂಪಾಂತರಿಸಿ, ನಿರ್ದೇಶಿಸುತ್ತಿದ್ದಾರೆ ಎಂದು ತಿಳಿದಾಗಲೂ ರೂಪಾಂತರಗಳ ಸಾಲಿಗೆ ಮತ್ತೊಂದು ನಾಟಕವೆನಿಸಿತು. ಆದರೆ ಕಥೆಯನ್ನು ಕನ್ನಡ ಸಾಹಿತ್ಯದಲ್ಲಿ ಗಂಭೀರವಾಗಿ ಪರಿಗಣಿಸಿದ್ದರಿಂದ, ಪಾತ್ರಗಳನ್ನು ನಮ್ಮ ಗ್ರಾಮೀಣ ಪರಿಸರದ ಪರಸ್ಪರ ಪಾತ್ರಗಳಾಗಿದ್ದರಿಂದ ನಾಟಕ ಹೇಗೆ ಬರುತ್ತದೆ ಎಂಬ ಕುತೂಹಲವಂತೂ ಇದ್ದೇ ಇದ್ದಿತು. ಅಲ್ಲದೆ ರಂಗಭೂಮಿಯ ಉತ್ತಮ ನಟಿ ಉಮಾಶ್ರೀ ಸಾಕವ್ವನಿಗೆ ಜೀವ ತುಂಬಲಿದ್ದಾಳೆ ಎಂದು ತಿಳಿದಿದ್ದರಿಂದ ಮುದುಕಿಯಂತೆ ಹೇಗೆ ನಟಿಸುತ್ತಾಳೆ ಎಂಬ ಮತ್ತೊಂದು ಕುತೂಹಲವು ಜೊತೆಗೂಡಿತ್ತು.

ಈ ಎಲ್ಲಾ ಹಿನ್ನೆಲೆಯೊಂದಿಗೆ ನಾಟಕ ನೋಡಲು ಹೋದಾಗ ಭ್ರಮ ನಿರಸನಗೊಳಿಸದೆ ನಾಟಕ ಮೊದಲ ದೃಶ್ಯದಲ್ಲೇ ಪ್ರೇಕ್ಷಕರನ್ನು ಮೋಡಿಗೊಳಿಸಿಬಿಟ್ಟಿತು. ಬಯಲು ಸೀಮೆಯ ಹಳ್ಳಿಯೊಂದರ ದಿಟ್ಟ ಚಿತ್ರಣ, ಅವರ ಬಡತನ, ಶ್ರೀಮಂತಿಕೆಯ ಕಿರುಕುಳ ಈ ಮಧ್ಯದಲ್ಲೇ ತನ್ನ ಅಸ್ತಿತ್ವ, ಆಸೆ, ಆಕಾಂಕ್ಷೆಗಳನ್ನು ಹುಡುಕುವ ವ್ಯಕ್ತಿಗಳ ತುಮುಲ ಒಂದೊಂದು ಹಂದರ ಸುಂದರವಾಗಿ ಬಿಚ್ಚಿಕೊಳ್ಳುತ್ತಿದ್ದರೆ ಪ್ರೇಕ್ಷಕನಿಗೆ ತನ್ನಿರುವನ್ನು ಮರೆಸುವಷ್ಟು ಸಹಜವಾಗಿ ಮೂಡಿತ್ತು ನಾಟಕದ ದೃಶ್ಯಗಳು.

ಕಥೆ ಓದುವಾಗಲೇ ಸಾಕವ್ವ ಕಣ್ಣ ಮುಂದೆ ಕಟ್ಟಿ ನಿಲ್ಲುತ್ತಾಳೆ. ಅವಳ ಎರಡೆಕೆರೆ ಜಮೀನು, ರಾಜಹುಂಜ, ಇರುವ ಮುರುಕು ಜೋಪಡಿಯಲ್ಲೇ ಪಾಲು ಕೇಳುವ ಮಗ, ಭ್ರಷ್ಟ ವ್ಯವಸ್ಥೆಗೆ ಸಿಲುಕಿ ಅಸಹಾಯಕ ಪರಿಸ್ಥಿತಿಯಲ್ಲಿ ತೊಳಲಾಡುವ ವ್ಯಕ್ತಿಗಳು ಈ ಎಲ್ಲದರ ನಡುವೆ ಹೋರಾಡುವ ಸಾಕವ್ವ ಎಲ್ಲಿಯೂ ಕಾಣುವಂತಹವಳು. ಇವುಗಳ ಮಧ್ಯೆ ಸಾಕವ್ವನ ಹುಂಜ ಮೋಜಿನ ಪಾರ್ಟಿಗೆ ಬಲಿಯಾದುದನ್ನು ತಿಳಿದ ಸಾಕವ್ವನ ದುಃಖ ಪರಾಕಾಷ್ಟೆ ತಲುಪಿ, ಸಾವಿನಲ್ಲಿ ಕಥೆ ದುರಂತವಾಗುತ್ತದೆ ಎಂದು ಭಾವಿಸಿದರೂ, ಅವಳು ಸಾಯದೆ ಧೃಡಳಾಗಿ ನಿಂತು ಅಸ್ತಿತ್ವಕ್ಕಾಗಿ ಹೋರಾಟ ನಡೆಸುವುದೇ ದೊಡ್ಡ ದುರಂತವಾಗಿಬಿಡುತ್ತದೆ.

ದೇವನೂರರ ಒಂದೊಂದು ಅಕ್ಷರವೂ ರಂಗದಲ್ಲಿ ಮೈತಳೆದು ನಿಲ್ಲುವಂತೆ ಶ್ರಮಿಸಿದ್ದಾರೆ. ಸಿ.ಜಿ.ಕೆ. ರಂಗಕ್ಕಳವಡಿಸಲು ಅಸಾಧ್ಯ ಎಂದು ಪರಿಗಣಿಸಿದ ಕೃತಿಯನ್ನು ಛಾಲೆಂಜಾಗಿ, ಗೆಳೆಯರ ಪ್ರೋತ್ಸಾಹದಿಂದ ‘ಒಡಲಾಳ’ದ ಅಂತರಂಗವನ್ನು ಕೆದಕಿರುವ ಸಿ.ಜಿ.ಕೆ. ತಮ್ಮ ಹಿಂದಿನ ಅನೇಕ ಯಶಸ್ವಿ ನಾಟಕಗಳಿಗಿಂತಲೂ ಈ ನಾಟಕವನ್ನು ಉತ್ತಮವಾಗಿ ನಿರ್ದೇಶಿಸಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ಮಾತ್ರವಲ್ಲದೆ, ಅವರ ಸಣ್ಣದೊಂದು ಚಲನವಲನವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದರಿಂದ ಗ್ರಾಮ್ಯ ಭಾಷೆಯ ಸೊಗಡಷ್ಟೆ ಅಲ್ಲದೆ ಅಲ್ಲಿಯ ಚಿತ್ರಣವೂ ಅಷ್ಟೇ ಗಟ್ಟಿಯಾಗಿ ನೈಜವಾಗಿ ಮೂಡಿದೆ.

“ಈ ನಾಟಕ ನನ್ನ ಭಂಡ ಧೈರ್ಯವಷ್ಟೇ ಆದರೆ ಇದರಿಂದ ನನ್ನಲ್ಲಿದ್ದ ಹಲವು ಸಂಶಯಗಳು ನಿವಾರಣೆಯಾದವು” ಎಂದು ನಾಟಕದ ಯಶಸ್ಸಿನ ಬಗ್ಗೆ ಕೇಳಿದಾಗ ಸಿಜಿಕೆ ತುಂಬು ಹೃದಯದಿಂದ ನುಡಿದರು.

“ಕಥೆ ಓದುವಾಗಲೆ ಇದು ನಾಟಕವಾದರೆ ಬಹಳ ಚೆನ್ನಾಗಿರುತ್ತೆ ಅಂತ ಅನ್ನಿಸ್ತಿತ್ತು. ಅಲ್ಲೇ ಕಥೆಯ ಪರಿಸರ ಸಾಕವ್ವ ಎಲ್ಲವೂ ನನಗೆ ಪರಿಚಿತವೆ, ಸಾಕವ್ವ ಬೇರೆ ಯಾರೂ ಅಲ್ಲ ನನ್ನ ತಾಯಿಯೇ. ಅವಳ ನಡೆ ನುಡಿ ಎಲ್ಲ ನನಗೆ ಪರಿಚಿತವಾದ್ದರಿಂದ ಊಹೆಗೆ ಇಲ್ಲಿ ಅವಕಾಶವೇ ಇಲ್ಲ, ಯಶಸ್ಸಿಗೆ ಇದು ಮುಖ್ಯ ಕಾರಣ ನನ್ನ ದೃಷ್ಟಿ, ಅನುಭವಕ್ಕೆ ಒಂದು ಸೃಷ್ಟಿ ರೂಪ ಈ ನಾಟಕ ದೊರಕಿಸಿಕೊಟ್ಟಿತು ಎಂದು ಯಶಸ್ಸಿನ ಬಗ್ಗೆ ಹಾಗೂ ಹಿನ್ನೆಲೆ ಕುರಿತು ನುಡಿದರು.

ಇಲ್ಲಿಯ ಕಲಾವಿದರು ಒಂದು ಕಗ್ಗಳ್ಳಿಯ ನಡೆ, ನುಡಿ, ಭಾಷೆಯನ್ನು ಸಹಜವಾಗಿ ಬಳಸಿರುವುದು ಒಂದು ಶ್ಲಾಘನೀಯ ವಿಷಯವೇ. “ಮೊದ ಮೊದಲು ಇವರಿಗೆ ಪ್ರತಿಯೊಂದು ಬಿಡಿಸಿ, ವಿವರಿಸಿ ಹೇಳಬೇಕಾಗಿತ್ತು. ಕಾಫಿ ಜೊತೆ ಕಳ್ಳೇಪುರಿ ಬೆರೆಸಿ ತಿನ್ತಾರಾ? ಕಡ್ಲೇಕಾಯಿ ತಿಂದು ಜೀವಿಸ್ತಾರಾ? ಅಂತ ಆಶ್ಚರ್ಯದಿಂದ ಕೇಳ್ತಿದ್ದರು. ಆದರೆ ರಿಹರ್ಸಲ್ ಮುಂದುವರೆದ ಹಾಗೆ ಅವರಿಗೆ ಪಾತ್ರ ಅರ್ಥವಾದ್ದರಿಂದ ಸಹಜವಾಗಿ ನಟಿಸಿದ್ದಾರೆ. ಅದರಲ್ಲೂ ಉಮಾ ಮತ್ತೆ ಮಾಲೂರಿನ ಹುಡುಗ ವಿಜಯಕುಮಾರ್” ಎಂದು ಕಲಾವಿದರ ಬಗ್ಗೆ ನುಡಿದರು.

ಉಮಾಳನ್ನು ಹಣ್ಣು ಮುದುಕಿಯನ್ನಾಗಿಸಲು ಕನಿಷ್ಟ ಒಂದೂವರೆ ಗಂಟೆ ಮೇಕಪ್ ನಾಣಿಯವರಿಗೆ ಹಿಡಿಸುತ್ತಿತ್ತಂತೆ, ಶಶಿಧರ ಅಡಪ ಹಾಗೂ ಅವನ ಗೆಳೆಯರು ಶ್ರಮ ಬಡಮುದುಕಿ ಹಟ್ಟಿಯಲ್ಲಿ ಎದ್ದು ಕಾಣುತ್ತಿತ್ತು. ನನಗೆ ಬೆಸ್ಟ್ ಟೆಕ್ನಿಷಿಯನ್ಸ್ ಸಿಕ್ಕಿದ್ದರಿಂದ ನನ್ನ ಅರ್ಧ ಕೆಲಸ ಹಗುರವಾಯ್ತು. ಅವರಿಗೆ ಹೀಗೆ ಅಂತ ವಿವರಿಸುವ ಅಗತ್ಯವಿಲ್ಲದ್ದರಿಂದ, ನಾಟಕದ ಯಶಸ್ಸಿಗೆ ನಾಣಿ, ಕಪ್ಪಣ್ಣ ಅಡಪ ಕೂಡ ಕಾರಣರಾಗಿದ್ದಾರೆ.

ನಾಟಕದುದ್ದಕ್ಕೂ ಪ್ರತಿ ಸಂಭಾಷಣೆಗೂ ಚಪ್ಪಾಳೆ ಪಡೆದುಕೊಂಡ ಉಮಾ ನಾನು ನಾಟಕದಲ್ಲಿ ನಟಿಸೇ ಇಲ್ಲ. ನಿರ್ದೇಶಕರು ಹೇಳಿದಂತೆ ನಟಿಸಿದ್ದೇನಷ್ಟೇ ಅಲ್ಲದೆ ಸಾಕವ್ವ ತರದೋರನ್ನ ಬಹಳ ಮಂದಿಯನ್ನು ಹತ್ತಿರದಿಂದ ನೋಡಿರುವುದರಿಂದ್ಲೇ ರವಿಕೆಯಿಲ್ದೇ, ಕೊಳಕಾಗಿ ನಟಿಸಲು ನಂಗೆ ಅಸಹ್ಯವೂ ಆಗ್ಲಿಲ್ಲ. ಬರೀ ಸಿನಿಮಾದಲ್ಲಿ ಮಾತ್ರವಲ್ಲ, ನಾಟಕದಲ್ಲೂ ಅವಶ್ಯವಾದ್ರೆ ಈ ರೀತಿ ನಟಿಸ್ತೀನೀ” ಎಂದು ಪಾತ್ರಕ್ಕೆ ಜೀವ ತುಂಬುವ ಛಲದ ನಟಿ ಉಮಾ ಹೇಳಿದಾಗ ಅಬ್ಬ! ಎನಿಸಿತು.

ನಾಟಕದ ಯಶಸ್ಸಿಗೆ ನಿರ್ದೇಶಕ, ನಟ ಎಷ್ಟು ಮುಖ್ಯವಾಗುತ್ತಾನೋ ಅಷ್ಟೇ ಮುಖ್ಯವಾಗುತ್ತದೆ ತಂಡ ಕೂಡ. ಯಯಾತಿ, ಮಹಾಪ್ರಸ್ಥಾನ, ಸಂಗ್ಯಾ ಬಾಳ್ಯಾ ಹೋಮ, ಸನ್ನಿವೇಶ, ಸಂದರ್ಭ ಮತ್ತಿತರ ಉತ್ತಮ ನಾಟಕಗಳನ್ನು ನೀಡಿರುವ ‘ರಂಗಸಂಪದ’ಕ್ಕೆ ಹತ್ತು ವರ್ಷಗಳು ದಾಟಿವೆ. ಮುಕ್ತ ಮನದಿಂದ ರಂಗಸಂಪದದ ಪ್ರೋತ್ಸಾಹವನ್ನು ಹೊಗಳಿದ ಸಿಜಿಕೆ “ಲೋಕೇಶ್ ಜೊತೆಯಲ್ಲಿಲ್ಲದಿದ್ದರೆ ಖಂಡಿತಾ ನಾನೇನೂ ಮಾಡುತ್ತಿರಲಿಲ್ಲ” ಎಂದು ಭಾವುಕರಾಗಿ ನುಡಿದರು.

“ನನ್ನ ಸಂಶಯಗಳಷ್ಟೇ ಈ ನಾಟಕದಿಂದ ದೂರವಾಯಿತು.” ಎಂದ ಸಿ.ಜಿ.ಕೆ. ಮುಂದಿನ ತಿಂಗಳಿಂದ ಬಾಲನ್‌ರ “ನೇಣುಗಂಬದ ನೆರಳಲ್ಲಿ” ಅನುಭವವನ್ನು ಗಾಡ ಪರಿಚಯವನ್ನು ರಂಗದ ಮೂಲಕ ಮಾಡಿಸಲಿದ್ದಾರೆ. “ಡ್ರೀಮ್ಸ್ ಆಫ್‌ ಟಿಪ್ಪು” ನಾಟಕಕ್ಕಾಗಿ ಹಲವು ಸಂಶೋಧನಾ ಕಾರ‍್ಯಗಳನ್ನು ಹಮ್ಮಿಕೊಂಡಿರುವ ಸಿ.ಜಿ.ಕೆಯ ಬಹು ದೊಡ್ಡ ಡ್ರೀಮ್‌.

ಮುಂಜಾನೆ

 

ಹೊಸ ‘ಸೃಷ್ಟಿ’ಗೆ ತುಡಿವ ಮಹಾಚೈತ್ರ

ರಂಗಸಂಪದ ೨೪ ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಯಿಸಿದ ಎಚ್.ಎಸ್. ಶಿವಪ್ರಕಾಶರ ಈ ನಾಟಕ ಗಹನ ವಸ್ತುವೊಂದರ ಪರಿಣಾಮಕಾರಿ ರಂಗಪ್ರಯೋಗ.

ನವ ಪಲ್ಲವದ ಆಶಯವನ್ನು ಹೊತ್ತ “ಮಹಾಚೈತ್ರ”ದ ವಸ್ತು ಬಸವಣ್ಣ ತೊರೆದ ನಂತರ ಕಲ್ಯಾಣದ ಬದುಕು, ಬಸವಣ್ಣ ನಾಟಕದಲ್ಲಿ ಬರುವುದಿಲ್ಲವಾದರೂ ಅವನ ಕಲ್ಪನೆಯ ಸಮಾಜ, ಅವನ ಆದರ್ಶ ವಿಚಾರಗಳು ನಾಟಕದುದ್ದಕ್ಕೂ ಪರವಿರೋಧಗಳಲ್ಲಿ ಹೆಣೆದುಕೊಂಡು ಒಂದು ಚಾಲಕಶಕ್ತಿಯಾಗಿ ಪರಿಣಮಿಸುತ್ತದೆ. ಬಸವಣ್ಣ ಆರಂಭಿಸಿದ ಸಾಮಾಜಿಕ ಚಳವಳಿಯನ್ನು ಮುಂದುವರಿಸಿ ಅವನ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಮಡಿವಾಳ ಮಾಚಿದೇವ, ಹಡಪದ ಅಪ್ಪಣ್ಣ, ಬಹುರೂಪಿ ಚೌಡಯ್ಯ ಮೊದಲಾದವರು ತೊಡಗುತ್ತಾರೆ. ಆಸ್ಥಾನದ ರಾವುಗಣ್ಣಿಗೆ ಗುರಿಯಾಗುತ್ತಾರೆ. ಬಿಜ್ಜಳನ ಕ್ರೌರ್ಯವನ್ನು ಹತ್ತಿಕ್ಕುವ ಕ್ರಿಯೆಯಲ್ಲಿ ನಾಟಕ ಅವನ ಕೊಲೆಯಲ್ಲಿ ಕ್ರಾಂತಿಯ ಶಿಖರ ಮುಟ್ಟಿ ಚೈತ್ರದ ಬೆಳಕಿನಲ್ಲಿ ಸೃಷ್ಟಿಯ ಮಾತನಾಡುತ್ತಾ ಮುಕ್ತಾಯಗೊಳ್ಳುತ್ತದೆ. ಇತಿಹಾಸದ ಶರೀರಕ್ಕೆ ದಕ್ಷಬ್ರಹ್ಮ ಯಜ್ಞದ ಪುರಾಣ ಪ್ರಸಂಗದ ಕಿರೀಟವಿಟ್ಟು ಬಿಜ್ಜಳದ ಕ್ರೂರ ವ್ಯವಸ್ಥೆಗೆ ಪರಿಸಮಾಪ್ತಿ ಹೇಳುವ ನಾಟಕಕಾರರು ನವ ಚೈತ್ರದ ಉದಯದಲ್ಲಿ ಸೃಷ್ಟಿಯ ಮಾತನಾಡುತ್ತಾ ಹೊಸ ಸಮಾಜ ಕಟ್ಟುವ ಕನಸನ್ನು ಧ್ವನಿಸುತ್ತಾರೆ.

ಸೃಜನಾತ್ಮಕ ನಿರ್ದೇಶಕನಿಗೆ ಸವಾಲಾಗುವಂಥ ಶಕ್ತಿಯುತವಾದ ವಸ್ತುವನ್ನು ಹೊಂದಿರುವ “ಮಹಾಚೈತ್ರ”ವನ್ನು ನಿರ್ದೇಶಕ ಸಿ.ಜಿ. ಕೃಷ್ಣಸ್ವಾಮಿ ಕೃತಿಯ ಆಶಯವನ್ನು ಜನಕ್ಕೆ ಕಣ್ಣಿಗೆ ಕಟ್ಟುವಂಥ ದೃಶ್ಯಗಳ ಮುಖೇನ ತಲುಪಿಸುವುದರಲ್ಲಿ ಯಶಸ್ವಿಯಾದರು. ಹಂತ ಹಂತವಾಗಿ ಸಂಘರ್ಷವನ್ನು ಆಲೋಚನೆ ಮತ್ತು ಕ್ರಿಯೆಗಳಲ್ಲಿ ಹುರಿಗಟ್ಟಿಸುವ ನಾಟಕದ ಪರಿಯಿಂದಾಗಿಯೋ ಏನೋ ಮೊದಲ ಅರ್ಧದಲ್ಲಿ ಸ್ವಲ್ಪ ಎಳೆಯಿತು. ಅಲ್ಲಲ್ಲಿ ನಿಂತಂತೆ ಭಾಸವಾಯಿತು. ನಾಟಕದ ಆಶಯದ ನಿರೂಪಣೆಗೆ ನಿರ್ದೇಶಕರು ಮೇಳದಂತೆ ನಿರ್ವಹಿಸಿದ ಆಟಗಾರರನ್ನು ಪಾತ್ರಗಳನ್ನಾಗಿ ನಿರೂಪಕರನ್ನಾಗಿ ಸಮರ್ಥವಾಗಿ ಬಳಸಿಕೊಂಡರು. ಕಲ್ಯಾಣ ತೊರೆದು ಸಂಗಮಕ್ಕೆ ಹೋದ ಬಸವಣ್ಣನ ಬಗ್ಗೆ ನೀಲಾಂಬಿಕೆಗೆ ಹೇಳುವಾಗ ಅವನ ಮನಸ್ಸಿನ ದ್ವಂದ್ವ ನಿರೂಪಿಸುವ ದೃಶ್ಯ ದಕ್ಷಬ್ರಹ್ಮ ಯಜ್ಞ ಹಾಳುಗೆಡಹುವ ವೀರಭದ್ರ ನೃತ್ಯ. ಮೇಲಿನ ಮಾತಿಗೆ ನಿದರ್ಶನ. ಬಿಜ್ಜಳನ ದುಃಸ್ವಪ್ನದ ಸನ್ನಿವೇಶದಲ್ಲಿ ಪಂಜುಗಳನ್ನು ಕಟ್ಟಿಕೊಂಡ ಪಾತ್ರಧಾರಿಗಳ ಬಳಕೆಯಿಂದ ಭ್ರಮಾತ್ಮಕ ವಾತಾವರಣ ಸೃಷ್ಟಿಸಿದ್ದು ನಿರ್ದೇಶಕರ ಕಲ್ಪನಾ ಸಾಮರ್ಥ್ಯಕ್ಕೆ ಮತ್ತೊಂದು ನಿದರ್ಶನ. ಬಸವಣ್ಣನವರ ದೇಹಾವಸಾನದ ನಿರೂಪಣೆಯಲ್ಲಿ ಪುನರಾವರ್ತನೆ (ಒಮ್ಮೆ ನೀಲಾಂಬಿಕೆಗೆ ಮತ್ತೊಂದು ಮಾಚಿ ದೇವರ ತಂಡಕ್ಕೆ) ತಪ್ಪಿಸಬಹುದಿತ್ತು. ಮಂತ್ರಿ ಪದವಿಯ ಮೇಲೆ ಕಣ್ಣಿಟ್ಟಿರುವ ಮುಕಂದಭಟ್ಟನ ಪಾತ್ರವನ್ನು ವಿದೂಷಕ ಬ್ರಾಹ್ಮಣನಂತೆ ಪರಿಭಾವಿಸಿದ್ದು ಹಾಗೂ ಬಿಜ್ಜಳನ ಆಸ್ಥಾನದ ದೃಶ್ಯವನ್ನು ನಗೆಚಾಟಿಕೆಯಂತೆ ನಡೆಸಿದ್ದು ಮನವರಿಕೆಯಾಗುವಂತಿರಲಿಲ್ಲ.

ಅಭಿನಯದಲ್ಲಿ ನಾಲ್ವರು ಆಟಗಾರರು (ವಿಶೇಷವಾಗಿ ರಾಮಮೂರ್ತಿ) ಬಿಜ್ಜಳನಾಗಿ ರಂಗಸ್ವಾಮಿ, ಮಡಿವಾಳ ಮಾಚಿದೇವನಾಗಿ ರುದ್ರಮೂರ್ತಿ, ಹಡಪದ ಅಪ್ಪಣ್ಣನಾಗಿ ರಮೇಶ್ ಚಂದಾ ಉಲ್ಲೇಖನಾರ್ಹರು. ರಾಜೀವ ತಾರಾನಾಥರ ಸಂಗೀತ ಮತ್ತು ಬೆಳಕು (ಕೃಷ್ಣಸ್ವಾಮಿ ಮತ್ತು ಲೋಕೇಶ್) ನಾಟಕದ ಅರ್ಥವಂತಿಕೆಗೆ ಪೂರಕವಾಗಿದ್ದವು.

ಪ್ರಜಾವಾಣಿ

 

ಹೊಸ ಅರ್ಥ ವಿವರಣೆಯ ಪ್ರಯತ್ನ

ರಂಗಸಂಪದ ಗುರುವಾರ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಯಿಸಿದ ಗಿರೀಶ್ ಕಾರ್ನಾಡರ “ಯಯಾತಿ” (ನಿರ್ದೇಶನ ಸಿ.ಜಿ. ಕೃಷ್ಣಸ್ವಾಮಿ) ಹಿಂದಿನ ಪ್ರಯೋಗಗಳಿಗಿಂತ ವಿಭಿನ್ನ ದೃಷ್ಟಿಕೋನದಲ್ಲಿ ನಿರೂಪಿಸುವ ಪ್ರಯತ್ನದಲ್ಲಿ ಹಾಗೂ ಉತ್ಕಟ ನಾಟಕೀಯತೆಯಲ್ಲಿ ಗಮನಾರ್ಹವೆನಿಸಿತು.

ಶುರುವಿಗೆ ದಾಸಿಯ ಮೂಲಕ ನಾಟಕದ ಪಾತ್ರಗಳನ್ನು ಪರಿಚಯಿಸುವುದರಲ್ಲಿ ಪುರಾಣ-ಇತಿಹಾಸಗಳನ್ನು ಬೇರೊಂದು ದೃಷ್ಟಿಕೋನದಿಂದ ನೋಡುವ ನಿರ್ದೇಶಕರ ಆಶಯ ಸ್ಪಷ್ಟವಾಯಿತು. ಪರಿಚಯದ ಹಂತ ದಾಟಿ ಪ್ರಯೋಗ ಮೂಲನಾಟಕಕ್ಕೆ ತೆರೆದುಕೊಂಡಾಗ ಹೊಸ ಅರ್ಥವಿವರಣೆ ಏನೂ ಸಾಧ್ಯವಾಗದೆ ಕೇವಲ ನಾವೀನ್ಯತೆಯಿಂದಾಗಿ ಇದು ಪ್ರಯೋಗದ ವೈಶಿಷ್ಟ್ಯವೆನಿಸಿತು. ಬೇರೊಂದು ದೃಷ್ಟಿಕೋನದಿಂದ ನೋಡುವ ಪ್ರಯತ್ನದಲ್ಲಿ ಹೊಸ ಅರ್ಥ ಹೊರಡಿಸಲು ನಿರ್ದೇಶಕರು ಅವುಟಗಳಿಗಿಳಿಯದೇ ಮೂಲದಾಕರ್ಷಣ ಕೇಂದ್ರದ ಗತಿಯಲ್ಲೇ ನಿರೂಪಿಸಿದ್ದು ಸಮಾಧಾನಕರ ಅಂಶ.

ಸರಳ ರಂಗಸಜ್ಜಿಕೆ (ರಂಗವಿನ್ಯಾಸ ಶಶಿಧರ್ ಅಡಪ ಮತ್ತು ಸಿಜಿಕೆ) ಯಲ್ಲಿ ಕಾಮನೆ ಮತ್ತು ಜೀವನ ಸೌಂದರ್ಯಗಳನ್ನು ಸಂಕೇತಿಸುವ ಸಿಂಬಿಸುತ್ತಿದ್ದ ಸರ್ಪ ಮತ್ತು ನವಿಲುಗಳನ್ನು ವಸ್ತು ಪ್ರತಿರೂಪವಾಗಿ ಬಳಸಿಕೊಂಡು ನಾಟಕದ ಅರ್ಥವಂತಿಕೆಯನ್ನು ದೃಶ್ಯ ಮುಖೇನ ಹೆಚ್ಚಿಸಿದ ಪ್ರಯೋಗ ಯಯಾತಿಯ ಅಮರತ್ವದ ಆಕಾಂಕ್ಷೆ ಶರ್ಮಿಷ್ಠೆಯ ಮನುಷ್ಯತ್ವದ ಹಂಬಲ ವಂಶ ಭಾರದಿಂದ ನರಳುತ್ತ ಹೊಸ ವ್ಯಕ್ತಿತ್ವಕ್ಕಾಗಿ ಚಡಪಡಿಸುವ ಪುರುವಿನ ಅಸಹಾಯಕತೆ ಇವೆಲ್ಲದರಲ್ಲಿ ಸನ್ನಿವೇಶದಿಂದ ಸನ್ನಿವೇಶಕ್ಕೆ ದುರಂತ ಉತ್ಕಟವಾಗಿ ಹುರಿಗಟ್ಟಿಕೊಳ್ಳುತ್ತಾ ಪ್ರೇಕ್ಷಕರನ್ನು ಹಿಡಿದಿರಿಸಿತು. ಕೊನೆಯಲ್ಲಿ, “ಇದೆಲ್ಲದರ ಅರ್ಥವೇನು, ದೇವರೆ, ಅರ್ಥವೇನು” ಎಂಬ ಮೂಲದ ಸಂಭಾಷಣೆಗೆ ಬದಲಾಗಿ ಬಂದ ಪುರುವಿನ “ಮುಂದೇನು” ಎಂಬ ಮಾತು ದುರಂತದ ಆರ್ತಧ್ವನಿಯಾಗಿ ಬರದೆ ಅಸಹಾಯಕತೆಯ ಕೊರಗಿನಂತೆ ಕೇಳಿಸಿತು. “ಮುಂದೇನು” ಎಂಬುದು ಮೂಲದ ಮಾತಿಗಿಂತ ಹೆಚ್ಚು ಪರಿಣಾಮಕಾರಿಯಾದ ಅಭಿವ್ಯಕ್ತಿ ಎಂದು ನಿರ್ದೇಶಕರು ಭಾವಿಸಿದ್ದರೆ ಅದು ಪ್ರಯೋಗದಲ್ಲಿ ಹಾಗೆ ಕೇಳಿಸಲಿಲ್ಲ.

ಪಾತ್ರಗಳ ಆಯ್ಕೆ ಮಾತು ಬಂದಾಗ ಪುರು ಪಾತ್ರದ ಆಯ್ಕೆಯಲ್ಲಿ ನಿರ್ದೇಶಕರು ಎಡವಿದ್ದಾರೆ ಎನ್ನಬೇಕು. ಸುರ-ಅಸುರರ ರಕ್ತ ಹಂಚಿಕೊಂಡು ಹುಟ್ಟಿದ, ತಂದೆಗೆ ತನ್ನ ಯೌವನ ಧಾರೆ ಎರೆದುಕೊಡುವ ಪುರ ನಿತ್ರಾಣಿಯಾಗಿ, ಕೆಲವೊಮ್ಮೆಯಂತೂ ಮಾತು-ಅಭಿನಯಗಳಲ್ಲಿ ವಿದೂಷಕನಂತೆ ಕಂಡು ಪ್ರೇಕ್ಷಕರು ನಗುವಂತಾದದ್ದು ರಸಪೋಷಣೆಗೆ ಭಂಗವಾಯಿತು. ಅಭಿನಯದಲ್ಲಿ ಶರ್ಮಿಷ್ಠೆಯಾಗಿ ಗಿರಿಜಾ ಲೋಕೇಶ್‌ಗೆ ಮೊದಲ ಪ್ರಶಂಸೆ ಸಲ್ಲಬೇಕು. ಯಯಾತಿಯಾಗಿ ನಾಗೇಶ್‌ಕಶ್ಯಪ್, ಚಿತ್ರಲೇಖೆಯಾಗಿ ವೈಜಯಂತಿ ವಿಜಯಕಾಶಿ ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದರು. ಬೆಳಕು (ಜೆ. ಲೋಕೇಶ್) ಮತ್ತು ಧ್ವನಿ (ಬಿ.ಎಸ್. ರಾಮಮೂರ್ತಿ ಮತ್ತು ನಾಗೇಶ್) ಪ್ರಯೋಗಕ್ಕೆ ಪೂರಕವಾಗಿದ್ದವು.

ಪ್ರಜಾವಾಣಿ

 

ನೀಗಿಕೊಂಡ ಸಂಸ

ಖ್ಯಾತ ಸಾಹಿತಿಗಳು, ಕವಿಗಳು, ನಾಟಕಕಾರರು, ನಟರುಗಳ ಜೀವನ ಚರಿತ್ರೆಗಳನ್ನಾಧರಿಸಿ, ರಚಿಸಿದ ನಾಟಕಗಳನ್ನಾಡುವುದು ಪಾಶ್ಚಿಮಾತ್ಯ ದೇಶಗಳಲ್ಲಿ ಬಹಳ ದಿನಗಳಿಂದಲೂ ಇದ್ದದ್ದೇ. ಚಾರ್ಲ್‌‌ಸ್ ಡಿಕನ್ಸ್. ಷಾ, ಅಸ್ಕರ್ ವೈಲ್ಡ್, ವಿಲಿಯಮ್ ಫಾಕ್ನರ್ ಮುಂತಾದವರ ಬಗ್ಗೆ ನಾಟಕಗಳು ಏಕಪಾತ್ರಾಭಿನಯಗಳನ್ನು, ವಾಚನಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಕನ್ನಡದಲ್ಲಿ ಇತ್ತೀಚೆಗೆ ಈ ಜಾಡು ಪ್ರಾರಂಭವಾಗಿದೆ. ಟಿಪಿಕಲ್ ಟಿ.ಪಿ. ಕೈಲಾಸಂನ ಯಶಸ್ಸಿನ ಹಿಂದೆಯೇ ಈ ನಿಟ್ಟಿನಲ್ಲಿ ಇತ್ತೀಚಿನ ಪ್ರಯೋಗ ಕಿ.ರಂ. ನಾಗರಾಜ ವಿರಚಿತ “ನೀಗಿಕೊಂಡ ಸಂಸ” ರಂಗಸಂಪದ ತಂಡಕ್ಕೆ. ಈ ನಾಟಕವನ್ನು ನಿರ್ದೇಶಿಸಿದವರು ಸಿ.ಜಿ. ಕೃಷ್ಣಸ್ವಾಮಿ.

ನಾಟಕಕಾರ ಹೇಳಿರುವಂತೆ ‘ಸಂಸ’ರ ನಿಗೂಢ ಮನೋಜೀವನ ಹಾಗೂ ಅವರ ನಾಟಕಗಳು ಒಳಸುಳಿಗಳ ಅಂತರ್ ಸಂಬಂಧವೇ “ನೀಗಿಕೊಂಡ ಸಂಸ” ನಾಟಕದ ವಸ್ತು. ಈ ಸಂಸರಿಗಿದ್ದ ಸಮಸ್ಯೆ Persecution Complex- ಅವರ ಸುತ್ತಮುತ್ತಲಿದ್ದ ಜನವೆಲ್ಲ ತಮ್ಮನ್ನು ತುಳಿಯಲು, ಹಿಂಸಿಸಲು ಮಾತ್ರ ಪಣ ತೊಟ್ಟಿದ್ದಾರೆಂಬ ದೃಢನಂಬಿಕೆ. ಅವರ “ಸ್ನೇಹಿತರು” ಪ್ರಕಾಶಕರು, ಮುಂತಾದವರೊಂದು ಕಡೆಯಾದರೆ ಮೈಸೂರನ್ನಾಳುತ್ತಿದ್ದ ಮಹಾರಾಜರು ಅವರ ಆಸ್ಥಾನ ವಿದ್ವಾಂಸರಿನ್ನೊಂದು ಕಡೆ. ದೇಶವನ್ನೇ ಆಳುತ್ತಿದ್ದ ಬ್ರಿಟಿಷರು ಮತ್ತೊಂದು ಕಡೆ. ಈ ಮೂರು ದಿಕ್ಕುಗಳಿಗೆ ಬೆನ್ನು ತಿರುಗಿಸಿ ಹೊರಟು ಹೋಗಬೇಕೆಂಬ ಸಂಸರ ದೇಶಾಟನೆಗಳಿಗೆ ಅಡ್ಡಬರುತ್ತಿದ್ದುದು. ಒಂದು ವಿಧದಲ್ಲಿ ನೋಡಿದರೆ ದಿನದಿನಕ್ಕೂ ಸಂಕುಚಿತವಾಗುತ್ತಿದ್ದ ಅವರ ಮನೋದಿಗಂತವೆಂದೇ ಕಾಣುತ್ತದೆ. ಹೀಗಾಗಿ ಎಲ್ಲಿ ಹೋದರೂ ಮತ್ತೆ ಮೈಸೂರಿಗೇ ವಾಪಸ್ ಮತ್ತೆ ತಮ್ಮ ರೂಢ ನಂಬಿಕೆಯ ಮಾಯಾಕೃತಿಗಳ ವಿರುದ್ಧ ಹೋರಾಟ. ಎ.ಆರ್. ಕೃಷ್ಣಶಾಸ್ತ್ರಿ, ಗೋವಿಂದ ಪೈ, ಪಂಜೆ ಮಂಗೇಶರಾವ್ ಮುಂತಾದವರೆಲ್ಲಾ ಪಿತೂರಿ ನಡೆಸಿದ್ದರ ಪರಿಣಾಮವಾಗಿ ಸಂಸರದ್ದು ಉಳಿದಿರುವುದು ಆರು ನಾಟಕಗಳು. ಅವರು ಬರೆದಿದ್ದು ಮೂವತ್ತಕ್ಕೂ ಹೆಚ್ಚಂತೆ, ಯಾರನ್ನೂ ನಂಬದಿರುವ ಸ್ಥಿತಿಯಲ್ಲೇ ಬಹಳ ದಿನ ನರಳಿದ ಈ ವ್ಯಕ್ತಿ ಒಂದು ಸಲ ಫಾರೆಸ್ಟ್ ಗಾರ್ಡ್ ಆಗಿದ್ದ ತಮ್ಮ ಸ್ನೇಹಿತನೊಬ್ಬ ಮನೆಗೆ ಬಂದಾಗ ಕಿಟಕಿಯಿಂದ ನೋಡಿ ಈತ ಪೋಲೀಸನಿರಬೇಕೆಂದೂ, ತಮಗೆ ತೊಂದರೆ ಕೊಡಲು ಬಂದಿರ ಬೇಕೆಂದುಕೊಂಡು ಅಂದಿನಿಂದ ಆತನನ್ನು ತಮ್ಮ ಮನೆಗೇ ಸೇರಿಸಲ್ಲಿಲ್ಲವಂತೆ. ಈ ಮಾದರಿಯ ಕೇಸ್‌ಗಳಲ್ಲನೇಕ ಸಲ ಆಗುವಂತೆ ಪರದೆ ಬೀಳುವುದು ವ್ಯಕ್ತಿಯ ಆತ್ಮಹತ್ಯೆಯಲ್ಲಿ, ಸಂಸರದ್ದು ನಾಟಕ ಹಾಗೆಯೇ ಮುಗಿಯುತ್ತೆ.

ಈ ಮಾದರಿಯ ನಾಟಕಗಳ ಯಶಸ್ಸು ಈ ದಿವಂಗತ ವ್ಯಕ್ತಿಗಳು ಎಷ್ಟು ವರ್ಣರಂಜಿತರಾಗಿದ್ದರು ಎಂಬುದರ ಮೇಲೆ ಆಧಾರಿತವಾಗಿರುತ್ತದೆ. ಕೆಲವರು ಒಳ್ಳೆ ಕೃತಿಗಳನ್ನು ಸೃಷ್ಟಿಸಿದರೂ ವೈಯುಕ್ತಿಕ ಜೀವನದಲ್ಲಿ ಅಷ್ಟೇ ಸಪ್ಪೆಯಾಗಿರುವುದು, ಕೆಟ್ಟ ಅಥವಾ ಸಾಧಾರಣ ಬರಹಗಾರರು ಬಹಳ ಕಲರ್‌ ಪುಲ್ ಪರ್ಸನಾಲಿಟಿಗಳಾಗಿರುವುದೂ ಸಾಮಾನ್ಯ, ನಾಟಕ ನೋಡಿದ ಮೇಲೆ ಸಂಸ ಯಾವ ತರದವರು ಎಂದು ಬಗೆಹರಿಯಲಿಲ್ಲ.

ಕನ್ನಡದ ಈ ಹೊಸ ನಾಟಕ ಮಾತುಗಳು ಕೊಂಚ ಜಾಸ್ತಿಯೆನಿಸಿದರೂ, ಸಂಸರ ವಿವಿಧ ಗೊಂದಲಗಳನ್ನು ಹೆಣೆದಿರುವುದರ ರೀತಿ ಕೊಂಚ ಗಲಿಬಿಲಿಯಿಂದ ಕೂಡಿದಂತಿದ್ದರೂ ಚೆನ್ನಾಗಿತ್ತು. ಸಿಜಿಕೆ ನೀಟಾಗಿ ನಾಟಕ ಮಾಡಿಸಿದ್ದರು. ನಾಗಾಭರಣ ಸಂಸರೊಂದಿಗೆ ಧೀರೋದಾತ್ತವಾಗಿ ಹೋರಾಡಿದರು. ವೈಯುಕ್ತಿಕವಾಗಿ ನನಗೆ ಅನ್ನಿಸಿದ ಇನ್ನೊಂದು ಅಂಶವೆಂದರೆ, ರಂಗದ ವಿಸ್ತಾರವನ್ನು ಇನ್ನೂ ಹೆಚ್ಚಿಗೆ ಉಪಯೋಗಿಸಬಹುದಿತ್ತು. ಆಗ ನಾಟಕದ ನಾಯಕನ ಮನಸ್ಸಿಗೂ, ಅವನ ಹೊರಗಿನ ವಿಶಾಲ, ಉದಾಸೀನ ಪ್ರಪಂಚಕ್ಕೂ ಇದ್ದ ಹಂದರವನ್ನು ಇನ್ನೂ ಪರಿಣಾಮಕಾರಿಯಾಗಿ ತೋರಿಸಬಹುದಿತ್ತು. ಇಡೀ ಸೆಟ್ ಅಲ್ಲಾಡುವಂತಹ ನಾಟಕಗಳನ್ನಾಡಿಸಿ ನಟನಟಿಯರಿಗೆ ತೊಂದರೆ ಕೊಟ್ಟಿರುವ ನನ್ನಂತಹವರಿಗೂ ಈ ನಾಟಕದ ರಂಗವಿನ್ಯಾಸ, ರಂಗ ಸಜ್ಜಿಕೆಯನ್ನು ಇನ್ನೂ ಬೇರೆ ತರಹ ಮಾಡಬಹುದಿತ್ತೇನೋ ಅನ್ನಿಸಿತು.

ಲಂಕೇಶ ಪತ್ರಿಕೆ

 

ವೈಶಂಪಾಯನ ತೀರ : ಸೀಮಿತಗೊಳ್ಳುವ ಅರ್ಥಗಳು

ಮೊದಲ ದೃಶ್ಯದಲ್ಲೇ ಜಕ್ಕಣಿಯ ಮುಖವಾಡ ತೊಟ್ಟ ಕಲ್ಯಾಣಿ ತನ್ನ ದುರಂತಕ್ಕೆ ನಿಮಿತ್ತವಾದ ಯಕ್ಷಗಾನ ಕುರಿತ ತನ್ನ ಆಕ್ರೋಶವನ್ನು ಕಾರಿಕೊಳ್ಳುತ್ತಾ ‘ವೈಶಾಂಪಾಯನ ತೀರ’ ನಾಟಕದ (ಕತೆ: ಮಹಾಬಲಮೂರ್ತಿ ಕೊಡ್ಲಕೆರೆ, ರೂಪಾಂತರ: ಎಲ್.ಎನ್. ಮುಕುಂದರಾಜ್, ನಿರ್ದೇಶನ: ಸಿಜಿಕೆ, ಅಭಿನಯ: ಹಂದರ) ಕೇಂದ್ರ ವಸ್ತುವನ್ನೂ ಸೂಚಿಸುತ್ತಾಳೆ. ಕಲಾವಿದರ ‘ರಂಗಭೂಮಿ ವ್ಯಕ್ತಿತ್ವ’ ಹಾಗೂ ಖಾಸಗಿ ವ್ಯಕ್ತಿತ್ವಗಳ ಸಂಘರ್ಷ ಕುರಿತ ಈ ನಾಟಕ, ನಾಟಕಕಾರ-ನಿರ್ದೇಶಕರಿಬ್ಬರೂ ತಂತಮ್ಮ ಕ್ಷೇತ್ರಗಳನ್ನು ಹೆಚ್ಚು ಸೂಕ್ಷ್ಮವಾಗಿ ನಿರ್ವಹಿಸಿದ್ದರೆ ಆಕರ್ಷಕ ಪ್ರಯೋಗವಾಗಬಹುದಿತ್ತು.

ರಂಗದ ಮೇಲೆ ಸಾಮಾನ್ಯವಾಗಿ ಪರಸ್ಪರ ವಿರೋಧಿ ಪೌರಾಣಿಕ ಪಾತ್ರಗಳನ್ನು ನಿರ್ವಹಿಸುವ ಕೃಷ್ಣಭಟ್ಟ ಹಾಗೂ ವೆಂಕಪ್ಪ ಹೆಗಡೆ ರಂಗದಾಚೆಯ ವಾಸ್ತವದಲ್ಲೂ ಮುಖಾಮುಖಿಯಾಗುವುದು ಕೃಷ್ಣಭಟ್ಟನ ಹೆಂಡತಿ ಕಲ್ಯಾಣಿಯನ್ನು ವೆಂಕಪ್ಪ ಒಲಿಸಿಕೊಂಡಾಗ ಮುಕುಂದರಾಜರ ನಾಟಕ ಗ್ರಹಿಸಿರುವ ಒಂದು ಕುತೂಹಲಕರ ಅಂಶವೆಂದರೆ, ಭಾನುಮತಿಯ ಜೊತೆ ನೆತ್ತವನಾಡಿದ ಪ್ರಸಂಗದಲ್ಲಿ ಕರ್ಣನಾಗಿ ದುರ್ಯೋಧನನ ಉದಾತ್ತತೆಯಿಂದ ಏನನ್ನೂ ಕಲಿಯದ ವೆಂಕಪ್ಪ, ರಾವಣನಿಂದ ಹೆಚ್ಚು ಕಲಿತಿರುವುದು! ಆಘಾತದಿಂದ ಊರು ಬಿಡುವ ಕೃಷ್ಣಭಟ್ಟ ಮರಳಿ ಬಂದಾಗ, ನಾಟಕದ ಅಂಬೆಯಂತೆ ಭೀಷ್ಮ ಹಾಗೂ ಸಾಲ್ವರಿಬ್ಬರಿಂದಲೂ ತ್ಯಜಿಸಲ್ಪಟ್ಟ ಕಲ್ಯಾಣಿ ಹುಚ್ಚಿಯಾಗಿದ್ದಾಳೆ. ಅವಳ ಒತ್ತಾಸೆಯಿಂದ ಮತ್ತೆ ಗೆಜ್ಜೆ ಕಟ್ಟುವ ಕೃಷ್ಣಭಟ್ಟ ದುರ್ಯೋಧನನ ಪಾತ್ರಧಾರಿ ವೆಂಕಪ್ಪನನ್ನು ‘ಗದಾಯುದ್ಧ’ ಪ್ರಸಂಗದಲ್ಲಿ ಕೊಂದೇಬಿಡುತ್ತಾನೆ. ಆದರೆ, ಈರ್ಷ್ಯೆ ತಂದ ದುರಂತವಿದು ಎಂದು ಘೋಷಿಸುವ ಮೇಳದಿಂದಾಗಿ ಈ ಸನ್ನಿವೇಶದ ಅರ್ಥಗಳೇ ಸೀಮಿತವಾಗುತ್ತವೆ.

ಯಕ್ಷಗಾನದ ಪ್ರಸಂಗಗಳನ್ನೇನೋ ಸಿಜಿಕೆ ಕಳೆಗಟ್ಟುವಂತೆ ನೋಡಿಕೊಳ್ಳುತ್ತಾರೆ. ಆದರೆ ಈ ಪ್ರಸಂಗಗಳ ಅರ್ಥಗಳನ್ನು ಪ್ರತಿಧ್ವನಿಸುವ ಸಮಾನಾಂತರ ದೃಶ್ಯಗಳತ್ತ ನಿರ್ದೇಶಕ ನಾಟಕಕಾರರಿಬ್ಬರಿಗೂ ಹೆಚ್ಚು ಗಮನವಿದ್ದಂತಿಲ್ಲ. ಭಾನುಮತಿ ಪ್ರಸಂಗದಲ್ಲಿ ಮಾತ್ರ ಅಂಥ ಪ್ರಯತ್ನವಿದೆ. ವಾಚಾಳಿತನ ಹಾಗೂ ದ್ವಂದ್ವಾರ್ಥಗಳಿಂದಾಗಿ ಹೋಟಲ್ ದೃಶ್ಯಗಳು ಕಾಲೇಜು ನಾಟಕದ ಮಟ್ಟಕ್ಕಿಳಿಯುತ್ತವೆ. ಆಡುಮಾತಂತೂ ಹವ್ಯಕ ಕನ್ನಡ ಹಾಗೂ ಮೈಸೂರು ಕನ್ನಡದ ವಿಚಿತ್ರ ಮಿಶ್ರಣವಾಗಿದೆ. ಆರಂಭದಲ್ಲಿ ಹಾಗೂ ವಿಚಾರಣೆಯ ದೃಶ್ಯದಲ್ಲಿ ಕೊಂಚ ಮಿನುಗುವ ಮುಕುಂದರಾಜರ ಕಾವ್ಯಕ್ಕೆ ಹೆಚ್ಚಿನ ಧ್ವನಿಶಕ್ತಿಯಿಲ್ಲ. ಮಂದ ಬೆಳಕಲ್ಲಿ ಹರಡಿಕೊಳ್ಳುವ ಕೆಂಪು ಸೀರೆಯ ಆಚೀಚೆ ನಿಂತ ಪ್ರಣಯಿಗಳ ದೃಶ್ಯ ಹಾಗೂ ಕಲ್ಯಾಣಿ ಮರಳಿ ಗಂಡನಿಗೆ ಗೆಜ್ಜೆ ತೊಡಿಸುವ ಭಾಗಗಳಲ್ಲಿ ಮಾತ್ರ ಸಿಜಿಕೆ ವೈಶಿಷ್ಟ್ಯವಿದೆ. ನಟನೆಯಲ್ಲಿ ಮಂಜುನಾಥ್ ಕುಂದಾಪುರ್, ಸದಾನಂದ್ ಭಟ್, ಗೀತಾ ಸುರತ್ಕಲ್ ಗಮನ ಸೆಳೆದರು. ಮೇಳನಾಯಕನಿಗಿಂತ, ಚಂಡೆಯ ಗುಂಡ್ಮಿ ರಘುರಾಂ ಹಾಡಿದ ಯಕ್ಷಗಾನದ ಮಟ್ಟುಗಳು ಹೆಚ್ಚು ಶಾಸ್ತ್ರೀಯವಾಗಿದ್ದವು. ಜಿ.ವಿ. ಆತ್ರಿ ಸಂಗೀತದಲ್ಲಿ ಶಿವರಂಜನಿಯ ಅಬ್ಬರದ ಜೊತೆಗೆ, ಪಂಪನ ‘ನೆತ್ತಮನಾಡಿ ಭಾನುಮತಿ ಸೊಲ್ತೊಡೆ’ ಪದ್ಯದ ಮೊದಲ ಸಾಲು ರವಿಚಂದ್ರನ್ ಸಿನಿಮಾದ ‘ಮೋಸಗಾರನ…. ಹೃದಯಶೂನ್ಯನ’ ….ಎಂಬ ಹಾಡಿನ ಟ್ಯೂನ್‌ನ್ನು ನೆನಪಿಗೆ ತರುತ್ತಿತ್ತು.

ಲಂಕೇಶ್‌ ಪತ್ರಿಕೆ

 

ತಂತ್ರ ಸಮೃದ್ಧಿಯ ‘ಸುರಪುರ ನಾಯಕ’

ಸ್ವಾತಂತ್ರ‍್ಯ ಗಂಗೆಯನ್ನು ಸಮೃದ್ಧಗೊಳಿಸಿದ ಸಾವಿರಾರು ತೊರೆಗಳಲ್ಲಿ ‘ಸುರಪುರದಿಂದ ಹರಿದುಬಂದ ತೊರೆಯೂ ಒಂದು. ಈ ತೊರೆಯನ್ನು ಸ್ವಾತಂತ್ರ‍್ಯ ಗಂಗೆಯತ್ತ ಕೊಂಡೊಯ್ದ ಭಗೀರಥ ಕೇವಲ ಇಪ್ಪತ್ನಾಲ್ಕು (೧೮೩೪-೫೮) ವರ್ಷ ಬದುಕಿದ್ದ ಸುರಪುರದ ವೀರ ವೆಂಕಟಪ್ಪ ನಾಯಕ.

ಬ್ರಿಟಿಷರ ಭಾಷೆ, ತಂತ್ರಗಳನ್ನು ಅವರಿಂದಲೇ (ಬ್ರಿಟಿಷ್ ಅಧಿಕಾರಿ ಮೆಡೋಸ್ ಟೇಲರ್) ಕಲಿತು ಅವರಿಗೇ ತಿರುಮಂತ್ರವನ್ನು ಹೇಳಿ, ಹೋರಾಡಿ ಮಡಿದ ಧೀರ ಸಾಮಂತ ವೆಂಕಟಪ್ಪ ನಾಯಕನ ಸಾಹಸ ಗಾಥೆಯನ್ನು ಚಿತ್ರಿಸುವ ‘ದೇಶಪ್ರೇಮಿ ಸುರುಪುರ ನಾಯಕ’ ನಾಟಕ ‘ರಂಗ ನಿರಂತರ’ ತಂಡದಿಂದ ಜ. ೨೮ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿತವಾಯಿತು.

ಇತಿಹಾಸವನ್ನು ಉತ್ತಮ ನಾಟಕವನ್ನಾಗಿ ಕಟ್ಟುವಾಗ ಎದುರಾಗುವ ತೊಡಕುಗಳನ್ನು ವಹಿಸಬೇಕಾದ ಎಚ್ಚರವನ್ನು ಕವಿ ಕೆ.ಎಂ. ಮುನಿಕೃಷ್ಣಪ್ಪ ತಮ್ಮ ಈ ಮೊದಲ ಪ್ರಯತ್ನದಲ್ಲಿ ತಕ್ಕ ಮಟ್ಟಿಗೆ ಚೊಕ್ಕಟವಾಗಿಯೇ ನಿರ್ವಹಿಸಿದ್ದಾರೆ. ಕಾಲಜ್ಞಾನಿ ಹಾಗೂ ಸುಡುಗಾಡು ಸಿದ್ಧರ ಭವಿಷ್ಯವಾಣಿ ತಂತ್ರದಲ್ಲೇ ನಾಟಕದ ನಿರೂಪಣೆ ಮಾಡಿದ್ದು ಸಮರ್ಪಕವೆನಿಸುತ್ತದೆಯಾದರೂ ಈ ಅಳವಡಿಕೆಯಲ್ಲಿ ಹಿತಮಿತ ಇಲ್ಲದಾಗಿದೆ. ಮೊದಲ (ಲಂಬಿತ) ದೃಶ್ಯದಲ್ಲೇ ಸಾಕಷ್ಟು ಪುನರಾವರ್ತನೆಯಿದೆ. ಮುಂದಿನ ಒಂದೆರಡು ದೃಶ್ಯಂತರಗಳಲ್ಲಿ ಬರುವ ಇವರ ಪ್ರವೇಶವೂ ಕಿರಿಕಿರಿಯೇ ಎನಿಸುತ್ತದೆ. ದಕ್ಷಿಣದ ರಾಜರು-ಸಾಮಂತರುಗಳನ್ನು ಬ್ರಿಟಿಷ್‌ರ ವಿರುದ್ಧ ಸಿಡಿದೇಳಲು ವೆಂಕಟಪ್ಪ ನಾಯಕ ಪ್ರೇರೇಪಿಸಿದ ನಂತರದ ಘಟನೆಯನ್ನು (ಸ್ಥಿತಿ-ಗತಿಯನ್ನು) ಕಂಸಾಳೆಯ ಮೂಲಕ ಈ ನಿರೂಪಕರೂ ವಿವರಿಸುವ ದೃಶ್ಯ ಮಾತ್ರ ಸಂದರ್ಭೋಚಿತವಾಗಿ ಕಳೆ ಕಟ್ಟುವ ಮೂಲಕ ಸಾರ್ಥಕವೆನಿಸಿಕೊಳ್ಳುತ್ತದೆ. ಹೀಗಾಗಿ ಈ ನಿರೂಪಕರ ಬಳಕೆಯಲ್ಲಿ ಅರ್ಥಪೂರ್ಣ ನಿಯಂತ್ರಣ ನಾಟಕೀಯ ಘಟನೆಗಳನ್ನು ದೃಶ್ಯಗಳನ್ನಾಗಿಸುವ ಜಾಣ್ಮೆ ವೆಂಕಟಪ್ಪ ನಾಯಕನ ಉದ್ದುದದ ಭಾಷಣ ರೂಪದ ಸಂಭಾಷಣೆಗೆ ಕಡಿವಾಣ-ಈ ಅಂಶಗಳತ್ತ ನಾಟಕಕಾರರು ಹೆಚ್ಚಿನ ಗಮನ ಕೊಟ್ಟಿದ್ದರೆ ಇದೊಂದು ಇತಿಹಾಸ ನಿರೂಪಣೆಯ ಕಥನ ಮಾತ್ರವಾಗದೇ ನಾಟಕೀಯ ಸತ್ವದಿಂದಲೂ ಇನ್ನೂ ಹೆಚ್ಚಿನ ಮಹತ್ವ ಪಡೆಯುತ್ತಿತ್ತು. ಫ್ಲಾಷ್ ಬ್ಯಾಕ್ ತಂತ್ರದ ಮೂಲಕ ಪ್ರಯತ್ನ ಮಾಡಲಾಗಿದೆಯಾದರೂ ಇವು ಕೃತಿಯ ಒಡಲಿಂದ ಬಂದಷ್ಟು ಗಾಢವಾಗಿಲ್ಲ. ಭಾಷೆಯ ಬಳಕೆಯಲ್ಲೂ ಕಾಲಜ್ಞಾನಿಯ ಮಾತುಗಳಿಗೆ ದೊರಕಿರುವ ತೂಕ ನಾಟಕದ ಮಿಕ್ಕ ಪಾತ್ರಗಳಿಗೂ ದೊರಕಿದ್ದರೆ ಕೃತಿಯ ಸತ್ವ ಇನ್ನೂ ಹೆಚ್ಚುತ್ತಿತ್ತು.

‘ರಂಗ ನಿರಂತರ’ದ ಮೂಲಕ ರಂಗ ನಟನಾ ತರಬೇತಿ ಶಿಬಿರವೊಂದನ್ನು ಆಯೋಜಿಸಿ, ಈ ಶಿಬಿರಾರ್ಥಿಗಳಿಗಾಗಿಯೇ ಪ್ರಸ್ತುತ ಪ್ರಯೋಗವನ್ನು ನಿರ್ದೇಶಿಸಿರುವ (ಸಿದ್ಧಗೊಳಿಸಿರುವ) ಸಿ.ಜಿ.ಕೆ. ತಮ್ಮ ಎಂದಿನ ತಾಂತ್ರಿಕ ಸಮೃದ್ಧಿ ಮೆರಗಿನ ಛಾಪನ್ನು ಮುಂದುವರಿಸಿಕೊಂಡ ಬಂದಿದ್ದಾರೆ. ಹತ್ತು ವರ್ಷಗಳ ನಂತರ ರಂಗಕ್ಕೆ ಮರಳಿರುವ ಶಶಿಧರ್ ಅಡಪ (ಜಯದೇವ್‌ರೊಂದಿಗೆ) ಅವರ ರಂಗ ವಿನ್ಯಾಸದಲ್ಲಿ (ಅರಮನೆ, ಆಂಜನೇಯನ ಪ್ರತಿಮೆ, ವೀರಗಲ್ಲು) ವಿಶಿಷ್ಟ ಮೋಹಕ ಮೆರಗಿದೆ. ಅಂತೆಯೇ ರಮೇಶ್-ವಿಶ್ವನಾಥ್‌ರ ಬೆಳಕಿನ ಸಂಯೋಜನೆಯೂ ಪ್ರಭಾವಿ.

ಅಭಿನಯ ವಿಭಾಗದಲ್ಲೂ ‘ತರಬೇತಿ ಶಿಬಿರಾರ್ಥಿಗಳಿವರು’ ಎಂಬ ಔದಾರ್ಯವನ್ನೇನೂ ಪಾತ್ರಧಾರಿಗಳು ಬೇಡುವುದಿಲ್ಲ. ಮೆಡೋಸ್ ಟೇಲರ್ (ಕೃಷ್ಣೇಗೌಡ, ವಿಜಯ್) ಆಕರ್ಷಕ ನಿಲುವು. ಉತ್ತಮ ಮಾತುಗಾರಿಕೆಯಿಂದ ಛಕ್ಕನೇ ಗಮನ ಸೆಳೆಯುತ್ತಾರೆ. ಕಾಲಜ್ಞಾನಿ (ಮುರಡಯ್ಯ) ಸುಡುಗಾಡು ಸಿದ್ಧ (ತಲೆಗೆ ಬಟ್ಟೆ ಕಟ್ಟುವುದಕ್ಕಿಂತ ಪೇಟ ಇಡುವುದು ಸೂಕ್ತ) ಪಾತ್ರದ ಶಿವಕುಮಾರ್ ಉತ್ತಮ ಶಾರೀರ ಸ್ಪಷ್ಟ ಮಾತುಗಳಿಂದ ನಿರೂಪಣೆಯ ಹೊಣೆಯನ್ನು ಲೀಲಾಜಾಲವಾಗಿ ನಿರ್ವಹಿಸಿದರು. ಮುಖ್ಯ ಪಾತ್ರಧಾರಿ ವೆಂಕಟಪ್ಪ ನಾಯಕ (ಮಂಜುನಾಥ್) ಅಬ್ಬರ, ಅರಚಾಟ, ಸಿಡುಕುತನಗಳನ್ನು ಕಡಿಮೆ ಮಾಡಿಕೊಳ್ಳುವುದು ಸೂಕ್ತ. ದಿವಾನ (ವಿನಾಯಕ ಜೋಷಿ) ಪಾತ್ರ ಮಾತ್ರ ವಿದೂಷಕನಂತೆ ಮೂಡಿಬಂದಿದೆ.

ಬಿಚ್ಚುಗತ್ತಿಯ (ಚಾಕು ಬಳಸಲಾಗಿತ್ತು) ಮೇಲೆ ಮಗು-ವೆಂಕಟಪ್ಪನನ್ನು ಮಲಗಿಸುವ ದೃಶ್ಯ : ದೊರೆ ವೆಂಕಟಪ್ಪನಿಗೆ ಬ್ರಿಟಿಷರ ವಿರುದ್ಧ ಹೋರಾಡಲು ಹಣದ ಅಡಚಣೆಯಾದಾಗ ಮುಕುಟವನ್ನು ಒತ್ತೆ ಇಡುವ ದೃಶ್ಯ, ರಣಾಂಗಣದಲ್ಲಿ ವೆಂಕಟಪ್ಪ-ಟೇಲರ್‌ರ (ಹಿನ್ನೆಲೆಯಲ್ಲಿ ಬಳಸಲಾದ ಸ್ಲೈಡ್‌-ಎಫೆಕ್ಟ್ ಭವ್ಯವಾಗಿತ್ತು) ಮುಖಾಮುಖಿ ಸೆಣಸಾಟದ ದೃಶ್ಯಗಳು ಈ ಪ್ರಯೋಗದ ಸ್ಮರಣೀಯ ದೃಶ್ಯಗಳಾಗಿ ಮೂಡಿಬಂದವು. ಹಾಗೆಯೇ ಮೆಡೋಸ್ ಟೇಲರ್ ಹಾಗೂ ಕನಕಜ್ಜರಿಗೆ ಮಾಡಲಾದ ಪ್ರಸಾಧನ(ಗ್ರೀನ್‌ ರೂಂ ನಾಣಿ)ವೂ ಉಲ್ಲೇಖನೀಯ.

ಪ್ರಜಾವಾಣಿ