Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಸಿ. ಜಿ. ಶ್ರೀನಿವಾಸನ್

ತಳಸಮುದಾಯದ ಏಳ್ಗೆಗೆ ಶ್ರಮಿಸಿ ಉದ್ಯಮಶೀಲತೆಗೆ ನೆರವಾದ ವಿಶಿಷ್ಟ ಸಮಾಜಸೇವಕ, ಸಿ.ಜಿ.ಶ್ರೀನಿವಾಸನ್, ಬಹುಮುಖಿ ಚಿಂತಕ, ದಲಿತೋದ್ಧಾರದ ಕನಸುಗಾರ, ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಮುದಿಮಡಗು ಗ್ರಾಮದಲ್ಲಿ ಜನಿಸಿದ ಶ್ರೀನಿವಾಸನ್ ಅಕ್ಷರದಿಂದಲೇ ಅರಳಿದವರು. ಸ್ನಾತಕೋತ್ತರ ಪದವಿ, ಎಲ್‌ಎಲ್‌ಬಿ ಕಲಿತವರು. ವಿದ್ಯಾರ್ಥಿ ಜೀವನದಲ್ಲೇ ನಾಯಕರಾಗಿ ಸೇವೆ. ಹೊಟ್ಟೆಪಾಡಿಗೆ ಕೆಎಸ್‌ಎಸ್‌ಐಡಿಸಿಗೆ ಸೇರ್ಪಡೆಗೊಂಡು ಮುಖ್ಯ ವ್ಯವಸ್ಥಾಪಕ ಹುದ್ದೆಗೇರಿದರೂ ತುಳಿತಕ್ಕೊಳಗಾದ ದಲಿತೋದ್ಧಾರದ ಕನಸಿನ ಸಾಕಾರಕ್ಕಾಗಿ ಸ್ವಯಂನಿವೃತ್ತಿ, ದಲಿತರಲ್ಲಿ ಉದ್ಯಮಶೀಲತೆ ಹೆಚ್ಚಿಸಲು ಸತತ ಪರಿಶ್ರಮ, ಸರ್ಕಾರದ ಸೌಲಭ್ಯಗಳನ್ನು ಒದಗಿಸುವಲ್ಲಿ ಸಕ್ರಿಯ ಪಾತ್ರ, ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯದರ್ಶಿಯಾಗಿ ಅಹರ್ನಿಶಿ ಸೇವೆ. ದಲಿತ ಕೈಗಾರಿಕೋದ್ಯಮಿಗಳಿಗಾಗಿಯೇ ವಿಶೇಷ ಕೈಗಾರಿಕಾ ನೀತಿ ಜಾರಿಗೆ ಬರುವಲ್ಲಿ ಸಾಫಲ್ಯ ಕಂಡ ಹೋರಾಟ, ಸ್ವಯಂ ಕೈಗಾರಿಕೋದ್ಯಮಿ, ಸಮಾಜಸೇವಕ ಹಾಗೂ ವ್ಯವಸಾಯಗಾರರಾಗಿ ಬಹುಮುಖಿ ಕ್ರಿಯಾಶೀಲತೆ, ದಲಿತರ ಆರ್ಥಿಕ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ ಸಾರ್ಥಕತೆಯ ಸಿ.ಜಿ. ಶ್ರೀನಿವಾಸನ್ ಅವರು ಬಾಬಾಸಾಹೇಬ್ ಅಂಬೇಡ್ಕರ್ ಕಂಡ ಸಮಸಮಾಜ ನಿರ್ಮಾಣದ ಆಶಯಗಳ ಈಡೇರಿಕೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಸಮಾಜಮುಖಿ.