೧೯೫೪ ರಲ್ಲಿ ಜನಿಸಿದ ಶ್ರೀ ಸಿ. ನಟರಾಜನ್ ಪ್ರಾರಂಭದಲ್ಲಿ ಸುಮಾರು ೧೫ ವರ್ಷಗಳ ಕಾಲ ಪ್ರತಿಷ್ಠಿತ ಅರುಣಾ ಮ್ಯೂಸಿಕಲ್ಸ್ ಸಂಸ್ಥೆಯಲ್ಲಿ ಸಂಗೀತ ವಾದ್ಯಗಳ ತಯಾರಿಕೆ ಹಾಗೂ ದುರಸ್ತಿ ಮಾಡುತ್ತಾ ಅಪಾರ ಅನುಭವ ಪಡೆದುಕೊಂಡರು. ಅಲ್ಲಿ ಪಡೆದ ಅನುಭವವನ್ನು ಬಂಡವಾಳವಾಗಿರಿಸಿಕೊಂಡು, ೧೯೮೨ ರಲ್ಲಿ ತಮ್ಮದೇ ಸ್ವಂತ ಶಿವಾ ಮ್ಯೂಸಿಕಲ್ಸ್ ಸಂಸ್ಥೆ ಪ್ರಾರಂಭಿಸಿದರು.

ಇಂದು ಶಿವಾ ಮ್ಯೂಸಿಕಲ್ಸ್ ಹಾರ್ಮೋನಿಯಂ, ವೀಣೆ, ತಂಬೂರ, ಮೃದಂಗ, ಪಿಟೀಲು, ಸೀತಾರ್, ಗಿಟಾರ್ ಇತ್ಯಾದಿ ವಾದ್ಯಗಳನ್ನು ತಯಾರಿಸುತ್ತಾ ನಾಡಿನ ಸಂಗೀತ ಕಲಾವಿದರ ಅಭಿಮಾನದ ಸಂಸ್ಥೆಯಾಗಿ ಬೆಳೆದಿದೆ.

ಶಿವಾ ಮ್ಯೂಸಿಕಲ್ಸ್ ಸಂಸ್ಥೆಯ ಶ್ರೀ ಸಿ. ನಟರಾಜನ್ ಅವರಿಗೆ ಅನೇಕ ಸಂಗೀತ ಸಂಸ್ಥೆಗಳು, ವಾದ್ಯಗೋಷ್ಠಿ ಮತ್ತು ಸುಗಮ ಸಂಗೀತ ತಂಡಗಳು ಪ್ರೀತಿ ವಿಶ್ವಾಸದಿಂದ ಸನ್ಮಾನಿಸಿವೆ. ಜೊತೆಗೆ ’ಭಾರತ ಜ್ಯೋತಿ’ ಪ್ರಶಸ್ತಿ, ’ಇಂದಿರಾ ಗಾಂಧಿ’ ಪ್ರಶಸ್ತಿ, ’ದಕ್ಷಿಣೋತ್ತರ’ ಪ್ರಶಸ್ತಿ ಮತ್ತು ’ಆರ್. ಎಸ್. ಕೇಶವಮೂರ್ತಿ’ ಪ್ರಶಸ್ತಿಗಳು ನಟರಾಜನ್ ಅವರಿಗೆ ಸಂದಿವೆ.

ಶ್ರೀಯುತರು ತಮ್ಮ ಸೇವೆಯನ್ನು ಸಂಗೀತ ವಾದ್ಯಗಳ ತಯಾರಿಕೆ ಮತ್ತು ದುರಸ್ತಿಗೆ ಸೀಮಿತಗೊಳಿಸದೆ ಸಂಗೀತಾಭ್ಯಾಸಿಗಳಿಗೂ, ಬೋಧಕರಿಗೂ ಉಪಯುಕ್ತವಾಗುವಂತಹ ಪುಸ್ತಕಗಳನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮುದ್ರಿಸಿ ತಮ್ಮದೇ ಆದ ಶಿವಾ ಪಬ್ಲಿಕೇಷನ್ಸ್ ಹೆಸರಿನಿಂದ ಪ್ರಕಾಶನ ಮಾಡುತ್ತಿರುವುದು ಸಂಗೀತ ಪ್ರೇಮಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ೨೦೦೦-೦೧ರ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.