ಸುಮಾರು ಮೂರು ದಶಕಗಳಿಂದಲೂ ನೃತ್ಯ ಕ್ಷೇತ್ರದಲ್ಲಿ ಮೃದಂಗ ಕಲಾವಿದರಾಗಿ ದುಡಿಯತ್ತಾ ಬಂದಿದ್ದಾರೆ ಶ್ರೀ ಸಿ. ಮಹದೇವಣ್ಣ, ಶ್ರೀಯುತರು ಜನಿಸಿದ್ದು ಬೆಳಕವಾಡಿಯಲ್ಲಿ ತಂದೆಯವರಿಂದ ಮೃದಂಗದಲ್ಲಿ ಮೊದಲ ಪಾಠವಾಯಿತು. ನಂತರ ನಮ್ಮ ನಾಡಿನ ಶ್ರೇಷ್ಠ ಮೃದಂಗ ವಿದ್ವಾಂಸರಾದ ಶ್ರೀ ರಂಗಸ್ವಾಮಿಯವರಲ್ಲಿ ಹೆಚ್ಚಿನ ಶಿಕ್ಷಣ ಪಡೆದು, ನೃತ್ಯಕ್ಕೆ ಮೃದಂಗ ನುಡಿಸುವ ವಿಶೇಷ ತಂತ್ರವನ್ನು ಕರಗತ ಮಾಡಿಕೊಂಡರು. ಜೊತೆಗೆ ಮೃದಂಗ ಮತ್ತು ತಬಲಾ ತಯಾರಿಕೆಯಲ್ಲೂ ಮಹದೇವಣ್ಣ ಪರಿಣತಿಯನ್ನು ಸಾಧಿಸಿಕೊಂಡರು.

ನಮ್ಮ ನಾಡಿನ ಹಿರಿಯ ನೃತ್ಯ ದಂಪತಿಗಳಾದ ಪ್ರೊ. ಯು.ಎಸ್.ಕೃಷ್ಣರಾವ್-ಚಂದ್ರಭಾಗ್ಯದೇವಿಯವರ ನೃತ್ಯ ಕಾರ್ಯಕ್ರಮಗಳಿಗೆ ಮೃದಂಗ ನುಡಿಸುವುದರ ಮೂಲಕ ನೃತ್ಯ ಕ್ಷೇತ್ರ ಪ್ರವೇಶಿಸಿದ ಮಹದೇವಣ್ಣ, ನಂತರದ ದಿನಗಳಲ್ಲಿ ಪಂದನಲ್ಲೂರು ಮುತ್ತಯ್ಯ ಪಿಳ್ಳೆ, ತಂಜಾವೂರು ಕಿಟ್ಟಪ್ಪ ಪಿಳ್ಳೈ, ಶ್ರೀಮತಿ ಲೀಲಾ ರಾಮನಾಥನ್ ಶ್ರೀಮತಿ ರಾಧಾ ಶ್ರೀಧರ್, ಶ್ರೀಮತಿ ನರ್ಮದಾ, ಶ್ರೀಮತಿ ಬಿ. ಭಾನುಮತಿ, ಶ್ರೀಮತಿ ಪದ್ಮಿನೀ ರಾಮಚಂದ್ರ ಮುಂತಾದ ಹಿರಿಯ ಸಾಲಿನ ಗುರುಗಳೂ ಸೇರಿದಂತೆ ಎಲ್ಲ ತಲೆಮಾರಿನ ನೃತ್ಯ ಕಲಾವಿದರ ಕಾರ್ಯಕ್ರಮಗಳಿಗೆ ಮೃದಂಗ ನುಡಿಸಿ ಜನಾನುರಾಗ ಗಳಿಸಿದ್ದಾರೆ.

ಜೊತೆಗೆ ಮಹದೇವಣ್ಣನವರು ಕರ್ನಾಟಕ ಶಾಸ್ತ್ರೀಯ ಸಂಗೀತದ ಗಾಯನ ಮತ್ತು ವಾದ್ಯವಾದನ ಕಾರ್ಯಕ್ರಮಗಳಿಗೂ ಮೃದಂಗ ಪಕ್ಕವಾದ್ಯ ಸಹಕಾರವನ್ನು ನೀಡುತ್ತಾ ಅಲ್ಲೂ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿದ್ದಾರೆ.

ಸಂಗೀತ ಕ್ಷೇತ್ರದ ತಮ್ಮ ಸೇವೆಗಾಗಿ ಅನೇಕ ಸಂಘ ಸಂಸ್ಥೆಗಳಿಂದ ಪುರಸ್ಕೃತರಾಗಿರುವ ಶ್ರೀ ಸಿ. ಮಹದೇವಣ್ಣ ಅವರಿಗೆ ೨೦೦೬-೦೭ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನಿತ್ತು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಗೌರವಿಸಿದೆ.