ನಮ್ಮ ನಾಡಿನ ಪ್ರತಿಷ್ಠಿತ ಕಲಾ ಪ್ರಕಾರಗಳಲ್ಲೊಂದಾದ ಭರತನಾಟ್ಯವನ್ನು ಉಳಿಸಿ, ಬೆಳೆಸಿದ ಕೀರ್ತಿಗೆ ಹಲವಾರು ಮನೆತನಗಳು ಕಾರಣಯಗಿವೆ. ಮುಸೂರಿನ ಕಡೆ ಮೂಗೂರು, ಜಟ್ಟಿತಾಯಮ್ಮರಂತಹ ಮನೆತನಗಳನ್ನು ಹೆಸರಿಸಬಹುದಾದರೆ, ಬೆಂಗಳೂರಿನಲ್ಲಿ ಅಂತಹ ಖ್ಯಾತಿಗೆ ಅರ್ಹರು ಕೋಲಾರದ ಯಜಮಾನ್ ಕಿಟ್ಟಣ್ಣನವರು. ಆ ಕಾಲದಲ್ಲಿ ಬೆಂಗಳೂರಿನಲ್ಲಿ ನೃತ್ಯ ಶಿಕ್ಷಣವನ್ನೊದಗಿಸುತ್ತಿದ್ದ ಪುಟ್ಟಪ್ಪನವರ ಸಮಕಾಲೀನರಾದ ಕಿಟ್ಟಣ್ಣನವರ ಶಿಷ್ಯರಲ್ಲಿ ಸಿ. ರಾಧಾಕೃಷ್ಣ ಪ್ರಮುಖರು. ಅದೇ ತಲೆಮಾರಿಗೆ ಸೇರಿದ ನೆಲಮಂಗಲದ ಗುಂಡಪ್ಪನವರ ಸಂಬಂಧಿಯವರಾದ ರಾಧಾಕೃಷ್ಣ ಕಿಟ್ಟಣ್ಣನವರ ಶಿಷ್ಯರಲ್ಲದೇ ಅವರ ಮೊಮ್ಮಗಳಾದ ಮೀನಾಕ್ಷಿಯವರನ್ನು ವಿವಾಹವಾಗಿ ಕಿಟ್ಟಣ್ಣನವರ ಕುಟುಂಬಕ್ಕೆ ಸೇರಿದವರೂ ಆಗಿದ್ದರು.

ರಾಧಾಕೃಷ್ಣ ಜನಿಸಿದ್ದು ೧೯೨೮ ರಲ್ಲಿ ಸಣ್ಣ ವಯಸ್ಸಿನಿಂದಲೇ ಕುಲಕಸುಬಾದ ನಾಟ್ಯಾಂಗದಲ್ಲಿ ಪಳಗಿ, ನಂತರ ಕಿಟ್ಟಣನವರ ಶಿಷ್ಯರಾಗಿ ಆ ಕಲೆಯಲ್ಲಿ ನಿಷ್ಟಾಂತರಾದರು. ತಮ್ಮ ಪತ್ನಿ ಮೀನಾಕ್ಷಿಯವರೊಡಗೂಡಿ ಸ್ಥಾಪಿಸಿದ ಚಿತ್ತರಂಜನಿ ಕಲಾ ಕ್ಷೇತ್ರದ ಮೂಲಕ ಹಲವಾರು ಶಿಷ್ಯರಿಗೆ ಮಾರ್ಗದರ್ಶನ ನೀಡುತ್ತಾ, ನೃತ್ಯ ಶಿಕ್ಷಕರಾಗಿ, ನೃತ್ಯ ಸಾಯೋಗಕರಾಗಿ ಮುಖ್ಯವಾಗಿ ನಟುವನಾರ್‌ರಾಗಿ, ಇಂದಿಗೂ ತಮ್ಮ ೮೦ರ ಹರೆಯದಲ್ಲೂ ಕಾರ್ಯತತ್ಸರರಾಗಿದ್ದಾರೆ ರಾಧಾಕೃಷ್ಣ.

ತಮ್ಮ ಶಾಲೆಯ ಮೂಲಕ ಪತ್ನಿ ಮೀನಾಕ್ಷಿಯಲ್ಲದೆ ಇತರ ಅನೇಕ ಶಿಷ್ಯರಿಂದ ನೃತ್ಯ ಪ್ರದರ್ಶನಗಳನ್ನೇರ್ಪಡಿಸಿ, ಅವರುಗಳಿಗೆ ಪ್ರೋತ್ಸಾಹವನ್ನು ನೀಡಿದ್ದಾರೆ. ಇಂತಹ ಪ್ರದರ್ಶನಗಳು ನಗರದಲ್ಲದೇ, ದೆಹಲಿ, ಚೆನ್ನೈ ಮುಂತಾದ ಪ್ರಮುಖ ಕೇಂದ್ರಗಳಲ್ಲೂ ಪ್ರಸ್ತುತಗೊಂಡಿವೆ. ಶಾಸ್ತ್ರೀಯ ನೃತ್ಯ ಪ್ರಕಾರದಲ್ಲದೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ (ದೆಹಲಿ) ರಾಜ್ಯದ ಜಾನಪದ ತಂಡದ ನಿರ್ದೇಶಕರಾಗಿ ನಿರ್ವಹಿಸಿದ ಶ್ರೀಯುತರ ಪಾತ್ರ ಶ್ಲಾಘನೀಯ. ಇದಲ್ಲದೆ “ಶಾಂತಲಾ”, “ಶಕುಂತಲ” “ದಿಷಕನ್ಯೇ” “ಪದ್ಮಾವತಿ ಪರಿಣಯ” ಮುಂತಾದ ನೃತ್ಯ ರೂಪಕಗಳನ್ನು ಸಂಯೋಜಿಸಿದ್ದಾರೆ. ಇವುಗಳು ನಾಡಿನ ಹಲವು ಕೇಂದ್ರಗಳಲ್ಲಿ ಪ್ರದರ್ಶಿತರಾಗಿ ಪ್ರಶಂಸೆಗೆ ಪಾತ್ರವಾಗಿದೆ.

ರಾಧಾಕೃಷ್ಣರ ಕಾರ್ಯಕ್ಷೇತ್ರ ಚಲನಚಿತ್ರ ಪ್ರಪಂಚಕ್ಕೂ ಹರಡಿದ್ದು ಉಲ್ಲೇಖಾರ್ಹ ಪ್ರಶಸ್ತಿ ವಿಜೇತ ಚಿತ್ರಗಳಾದ “ಹಂಸಗೀತೆ”, “ಕಾವೇರಿ” ಮತ್ತು “ಪವಿತ್ರ ಗಂಗಾ” ಗಳಿಗೆ ಶ್ರೀಯುತರು ಒದಗಿಸಿರುವ ನೃತ್ಯ ಸಂಯೋಜನೆ ಹೆಸರಿಸುವಂತಹುದು.

ತಮ್ಮದೇ ಆದ ಚಿತ್ತರಂಜೀನಿ ಕಲಾಕ್ಷೇತ್ರದಲ್ಲದೇ, ನಗರದ ತಮಿಳು ಸಂಘ ಮತ್ತು ಭಾರತೀಯ ವಿದ್ಯಾಭವನದ “ಕಲಾಭಾರತಿ” ಯಲ್ಲೂ ನೃತ್ಯ ಶಿಕ್ಷಣವನ್ನೊದಗಿಸಿರುವ ರಾಧಾಕೃಷ್ಣರನ್ನುನ್ನರಸಿ ಬಂದ ಪ್ರಶ್ತಿ ಪುರಸ್ಕಾರಗಳ ಅನೇಕ ಅವುಗಳಲ್ಲಿ ಚೆನ್ನೈನ “ಭರತ ಕಲಾವಾಣಿ”, ತಮಿಳು ಸಂಘದ “ನಾಟ್ಯಕಲಾಮಣಿ” ಬಿರುದುಗಳು, ರಾಜ್ಯದ ಪ್ರತಿಷ್ಕೃತ ರಾಜ್ಯೋತ್ಸವ ಮತ್ತು ಸಂಗೀತ -ನೃತ್ಯ ಅಕಾಡೆಮಿಗಳ ಪ್ರಶಸ್ತಿಗಳು ಗಮನಾರ್ಹ. ಅಲ್ಲದೇ ರಾಜ್ಯ ಸರಕಾರದ ನೃತ್ಯ ಪರೀಕ್ಷಗಳ ಬೋರ್ಡಿನ ಅಧ್ಯಕ್ಷರಾಗಿ ಮೂರು ಬಾರಿ ಇವರ ಸೇವೆ ಸಂದಿದೆ!