೨೪-೯-೧೯೪೨ ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ರಾಮದಾಸ್‌ ಅವರು ಹಾರ್ಮೋನಿಯಂ ಹಾಗೂ ವಯೋಲಿನ್‌ ವಾದನಗಳೆರಡರಲ್ಲೂ ಪರಿಣತಿ ಸಾಧಿಸಿರುವವರು. ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಸ್ವಲ್ಪ ಅಪರೂಪವೆನಿಸಿರುವ ಹಾರ್ಮೋನಿಯಂನಲ್ಲಿ ಶ್ರೀ ಮುನಿಸ್ವಾಮಪ್ಪನವರಿಂದಲೂ, ವಯೋಲಿನ್‌ ವಾದನದಲ್ಲಿ ಶ್ರೀ ವಿ. ರಾಮಯ್ಯನವರಿಂದಲೂ ಶಿಕ್ಷಣ ಪಡೆದು ಅವಿರತ ಸಾಧನೆ, ಶ್ರಮಗಳಿಂದ ಎರಡೂ ವಾದ್ಯಗಳ ವಾದನದಲ್ಲಿ ಉನ್ನತ ಮಟ್ಟ ಸಾಧಿಸಿದರು.

ಆಕಾಶವಾಣಿಯ ‘ಎ’ ಶ್ರೇಣಿಯ ಕಲಾವಿದರಾಗಿರುವ ಇವರ ಎರಡೂ ವಾದ್ಯಗಳಲ್ಲಿನ ವಾದನ ಕಾರ್ಯಕ್ರಮಗಳು ಆಕಾಶವಾಣಿ ಹಾಗೂ ದೂರದರ್ಶನ ಕೇಂದ್ರಗಳಿಂದ ಮೂಡಿ ಬರುತ್ತಿರುತ್ತವೆ. ನಾಲ್ಕು ದಶಕಗಳಿಂದಲೂ ಅನೇಕಾನೇಕ ವಿದ್ವಾಂಸರುಗಳ ಕಛೇರಿಗೆ ಹಾರ್ಮೋನಿಯಂ ಮತ್ತು ಪಿಟೀಲು ವಾದನದ ಮೂಲಕ ಸಹಕಾರ ನೀಡುತ್ತಿದ್ದಾರೆ. ಹಲವು ಹತ್ತು ಸಂಸ್ಥೆಗಳಲ್ಲಿ, ಸಭೆಗಳಲ್ಲಿ, ಉತ್ಸವಗಳಲ್ಲಿ, ಪಕ್ಕವಾದ್ಯಗಾರರಾಗಿಯೂ, ತನಿವಾದಕರಾಗಿಯೂ ಇವರು ಒಳ್ಳೆಯ ಕೀರ್ತಿ ಸಂಪಾದಿಸಿದ್ದಾರೆ.

ಪಂಚರತ್ನ ಕೃತಿಗಳು ಹಾಗೂ ಹಲವಾರು ವಿಭಿನ್ನ ವಾಗ್ಗೇಯಕಾರರ ಕೃತಿಗಳನ್ನು ಧ್ವನಿಸುರುಳಿಗಳಲ್ಲಿ ಪ್ರಸ್ತುತ ಪಡಿಸಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಹಲವಾರು ಸಂಘ-ಸಂಸ್ಥೆಗಳು ಇವರನ್ನು ಪುರಸ್ಕರಿಸಿವೆ. ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ವತಿಯಿಂದ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಪಡೆದಿರುವ ಇವರು ಈಗಲೂ ಕ್ಷೇತ್ರದಲ್ಲಿ ಕಾರ್ಯ ತತ್ಪರರಾಗಿದ್ದಾರೆ.