೧೯೦೩ ನೇ ವರ್ಷದಲ್ಲಿ ಒಂದು ದಿನ. ಮದ್ರಾಸಿನ ಪ್ರಸಿಡೆನ್ಸಿ ಕಾಲೇಜಿನಲ್ಲಿ ಇ.ಎಚ್. ಇಲಿಯಟ್ ಎಂಬ ಪ್ರಾಧ್ಯಾಪಕರು ಬಿ.ಎ.ಕ್ಲಾಸಿಗೆ ಬಂದರು. ವಿದ್ಯಾರ್ಥಿಗಳನ್ನೆಲ್ಲ ಒಮ್ಮೆ ನೋಡಿದರು. ಬಹು ಪುಟ್ಟ ಹುಡುಗನೊಬ್ಬ ಕಂಡ. ಈ ಪುಟಾಣಿ ತಪ್ಪಿ ಕ್ಲಾಸಿಗೆ ಬಂದಿರಬಹುದೆಂದು ಯೋಚಿಸಿ, “ನೀನು ಬಿ.ಎ. ವಿದ್ಯಾರ್ಥಿಯೆ?” ಎಂದು ಕೇಳಿದರು.

“ಹೌದು ಸರ್” – ಬಾಲಕ ಉತ್ತರಿಸಿದ.

“ಹೆಸರು?”

“ಸಿ.ವಿ.ರಾಮನ್.”

ಈ ಸಣ್ಣ ಘಟನೆಯಿಂದ ಹದಿನಾಲ್ಕು ವರ್ಷದ ಆ ಹುಡುಗ ಇಡೀ ಕಾಲೇಜಿನಲ್ಲಿ ಪರಿಚಿತನಾದ. ಅವನೇ ಮುಂದೆ ಜಗತ್ಪ್ರಸಿದ್ಧ ವಿಜ್ಞಾನಿಯಾದ.

ಎಳೆತನದ ಪ್ರತಿಭೆ

ಕಾವೇರಿ ನದಿಯ ದಡದಲ್ಲಿರುವ ಒಂದು ಪಟ್ಟಣ ತಿರುಚಿರಪಳ್ಳಿ. ಚಂದ್ರಶೇಖರ ಅಯ್ಯರ್ ಅಲ್ಲಿಯ ಒಂದು ಶಾಲೆಯಲ್ಲಿ ಅಧ್ಯಾಪಕರು. ಭೌತವಿಜ್ಞಾನ ಮತ್ತು ಗಣಿತದಲ್ಲಿ ಅವರಿಗೆ ಪಾಂಡಿತ್ಯವಿತ್ತು. ಸಂಗೀತದಲ್ಲಿ ವಿಶೇಷ ಪ್ರೀತಿಯಿತ್ತು. ಅವರ ಪತ್ನಿ ಪಾರ್ವತಿ ಅಮ್ಮಾಳ್. ಈ ಸದ್ಗುಣ ಸಂಪನ್ನ ದಂಪತಿಗಳಿಗೆ ೧೮೮೮ ರ ನವೆಂಬರ್ ೭ ರಂದು ಎರಡನೇಯ ಗಂಡು ಮಗುವಾಯಿತು. ಮಗುವಿಗೆ ವೆಂಕಟರಾಮನ್ ಎಂದು ಹೆಸರಿಟ್ಟರು. ತಂದೆಯ ಹೆಸರನ್ನೂ ಸೇರಿಸಿದಾಗ ಮಗುವಿನ ಪೂರ್ಣ ಹೆಸರು ಚಂದ್ರಶೇಖರ ವೆಂಕಟರಾವನ್ ಅಥವಾ ಸಿ.ವಿ.ರಾಮನ್ ಎಂದಾಯಿತು.

ಸಂಗೀತ, ಸಂಸ್ಕೃತ ಮತ್ತು ವಿಜ್ಞಾನಗಳ ಉತ್ತಮ ವಾತಾವರಣದಲ್ಲಿ ಬೆಳೆದರು. ತರಗತಿಗಳಲ್ಲೆಲ್ಲ ಮೊದಲಿಗನಾಗಿ ತೇರ್ಗಡೆಯಾದರು; ಮೇಧಾವಿ ಹುಡುಗನೆನಿಸಿಕೊಂಡರು. ಪ್ರಸಿಡೆನ್ಸಿ ಕಾಲೇಜಿನಲ್ಲಿ ಬಿ.ಎ. ತರಗತಿಗೆ ಸೇರಿದರು. ಆ ವರ್ಷ ಬಿ.ಎ. ಪ್ರಥಮ ದರ್ಜೆ ಬಂದದ್ದು ಒಬ್ಬನೇ ಹುಡುಗನಿಗೆ ಅವನೇ ಸಿ.ವಿ.ರಾಮನ್. ಚಿನ್ನದ ಪದಕವೂ ದೊರೆಯಿತು.

ಅನಂತರ ಅವರು ಪ್ರಸಿಡೆನ್ಸಿ ಕಾಲೇಜಿನಲ್ಲೇ ಎಂ.ಎ.ಗೆ ಸೇರಿ ಭೌತವಿಜ್ಞಾನವನ್ನು ಮುಖ್ಯವಾಗಿ ಕಲಿತರು. ವಿಜ್ಞಾನ ಪ್ರೇಮ, ಕೆಲಸ ಮಾಡುವ ಉತ್ಸಾಹ, ಹೊಸತನವನ್ನು ತಿಳಿಯುವ ತವಕ ಇವು ರಾಮನ್‌ರಲ್ಲಿ ಸಹಜವಾಗಿದ್ದವು. ಏಕಾಗ್ರತೆ, ಬುದ್ಧಿ ಶಕ್ತಿಗಳೆರಡೂ ಅವರ ದೈವದತ್ತ ಗುಣಗಳು. ಪ್ರಾಧ್ಯಾಪಕರು ಕಲಿಸುತ್ತಿದ್ದುದಕ್ಕಿಂತಲೂ ಹೆಚ್ಚು ವಿಚಾರಗಳನ್ನು ಓದುತ್ತಿದ್ದರು. ಪಠ್ಯಪುಸ್ತಕಗಳನ್ನು ಓದುತ್ತಿದ್ದಂತೆಯೇ “ಹೇಗೆ”? ಏಕೆ? ನಿಜವೇ? ಇತ್ಯಾದಿ ತನ್ನಲ್ಲಿ ಮೂಡಿದ ಪ್ರಶ್ನೆಗಳನ್ನು ಪುಸ್ತಕದ ಅಂಚಿನಲ್ಲಿ ಬರೆಯುತ್ತಿದ್ದರು. ಜರ್ಮನಿಯ ಹೆಲ್ಮ್ ಹೋಲ್ಟ್ (೧೮೨೧-೧೮೯೧) ಹಾಗೂ ಇಂಗ್ಲೆಂಡಿನ Lord Rally (೧೮೪೨-೧೯೧೯) ಎಂಬ ವಿಜ್ಞಾನಿಗಳು ಧ್ವನಿ ಸಂಬಂಧವಾಗಿ ಬರೆದ ಗ್ರಂಥಗಳು ರಾಮನ್‌‌ರ ಮೇಲೆ ಪ್ರಭಾವ ಬೀರಿದವು. ಧ್ವನಿಯ ಬಗ್ಗೆ ಹೊಸ ಹೊಸ ವಿಷಯ ಕಲಿಯಲು ಅವರಿಗೆ ತುಂಬ ಆಸಕ್ತಿ. ಹದಿನೆಂಟು ವರ್ಷ ಮಯಸ್ಸಿನ ವಿದ್ಯಾರ್ಥಿ ರಾಮನ್‌ರ ಸಂಶೋಧನ ಲೇಖನವೊಂದು ಇಂಗ್ಲೆಂಡಿನ “ಫಿಲಾಸಫಿಕಲ್ ಮ್ಯಾಗಜಿನ್”ನಲ್ಲಿ ಪ್ರಕಟವಾಯಿತು ಮುಂದೆ “ನೇಚರ್” ಪತ್ರಿಕೆಯಲ್ಲಿ ರಾಮನ್‌ರ ಸಂಶೋಧನ ಲೇಖನ ಬೆಳಕು ಕಂಡಿತು.

ಅಧಿಕಾರಿವಿಜ್ಞಾನಿ

ರಾಮನ್ ಸಹ ತಮ್ಮ ಅಣ್ಣ ಸಿ. ಎಸ್. ಅಯ್ಯರರಂತೆಯೇ “ಇಂಡಿಯನ್ ಆಡಿಟ್ ಅಂಡ್ ಅಕೌಂಟ್ಸ್ ಸರ್ವಿಸ್”ನಲ್ಲಿ ಆಯ್ಕೆಗೋಳ್ಳಲು ಪರೀಕ್ಷೆಗೆ ಕುಳಿತರು. ಈ ಪರೀಕ್ಷೆಗೆ ಕುಳಿತುಕೊಳ್ಳುವ ಹಿಂದಿನ ದಿನ ಎಂ.ಎ.ಪರೀಕ್ಷೆಯ ಫಲಿತಾಂಶ ಬಂತು. ಮೊದಲ ದರ್ಜೆಯಲ್ಲಿ ಮೊದಲಿಗರಷ್ಟೇ ಅಲ್ಲ, ಮದ್ರಾಸು ವಿಶ್ವವಿದ್ಯಾಲಯದಲ್ಲಿ ಅದುವರೆಗೆ ಯಾರು ಪಡೆಯದಷ್ಟು ಅಂಕಗಳನ್ನು ಗಳಿಸಿ ರಾವನ್‌ ದಾಖಲೆ ಸ್ಥಾಪಿಸಿದ್ದರು. ಮುಂದೆ “ಇಂಡಿಯನ್ ಆಡಿಟ್ ಅಂಡ್ ಅಕೌಂಟ್ಸ್ ಸರ್ವಿಸ್” ಪರೀಕ್ಷೆಯಲ್ಲಿ ಅವರು ಮೊದಲ ಸ್ಥಾನ ಪಡೆದರು.

೧೯೦೭ ರ ಮೇ ೬ ರಂದು ರಾಮನ್ ಅವರ ವಿವಾಹ ನಡೆಯಿತು. ಲೋಕಸುಂದರಿ ಅವರ ಪತ್ನಿಯಾದರು.

ಹತ್ತೊಂಬತ್ತು ವರ್ಷ ವಯಸ್ಸಿಗೆ ರಾಮನ್‌ರಿಗೆ ದೊಡ್ಡ ಹುದ್ದೆ. ಹಣಕಾಸಿನ ವಿಭಾಗದಲ್ಲಿ ಅಸಿಸ್ಟೆಂಟ್ ಅಕೌಂಟೆಂಟ್ ಜನರಲ್ ಆಗಿ ಕಲ್ಕತ್ತದಲ್ಲಿ ನೇಮಕಗೊಂಡರು. ಅದೇ ವರ್ಷ ಅವರ ಜೀವನಕ್ಕೆ ತಿರುವು ಕೊಡುವ ಘಟನೆಯೊಂದು ನಡೆಯಿತು.

ಒಂದು ಸಂಜೆ ಟ್ರಾಮ್‌ ಗಾಡಿಯಲ್ಲಿ ರಾಮನ್ ಕಛೇರಿಯಿಂದ ಹಿಂದಿರುಗುತ್ತಿದ್ದರು. ಬೋ ಬಜಾರ್ ಬೀದಿಯ ೨೧೦ನೇ ನಂಬರ್ ಕಟ್ಟಡದಲ್ಲಿ “ಇಂಡಿಯನ್ ಅಸೊಸಿಯೇಷನ್ ಫಾರ್ ದಿ ಕಲ್ಟಿವೇಷನ್ ಆಫ್ ಸೈನ್ಸ್” (ವಿಜ್ಞಾನ ಅಧ್ಯಾಯನದ ಭಾರತೀಯ ಸಂಸ್ಥೆ) ಎಂಬ ಬೋರ್ಡನ್ನು ಕಂಡರು. ಕೂಡಲೇ ಟ್ರಾಮಿನಿಂದ ಇಳಿದು ಅಲ್ಲಿಗೆ ಹೋದರು. ಡಾ|| ಅಮೃತಲಾಲ್ ಸರ್ಕಾರ್ ಎಂಬುವರು ಅದರ ಗೌರವ ಕಾರ್ಯದರ್ಶಿಯಾಗಿದ್ದರು. ಅಲ್ಲಿ ಕೆಲವು ವಿಶಾಲ ಕೋಣೆಗಳನ್ನೂ ಪ್ರದರ್ಶನ ಯೋಗ್ಯವಾದ ಹಳೆಯ ವೈಜ್ಞಾನಿಕ ಉಪಕರಣಗಳನ್ನೂ ರಾಮನ್ ಕಂಡರು.

“ಬಿಡುವಿನ ಸಮಯದಲ್ಲಿ ಇಲ್ಲಿ ಸಂಶೋಧನೆ ನಡೆಸಬಹುದೇ?” ಎಂದು ರಾಮನ್ ಕೇಳಿದಾಗ ಅಮೃತಲಾಲ್ ಸರ್ಕಾರರು ಸಂತೋಷದಿಂದ ಅದಕ್ಕೆ ಒಪ್ಪಿದರು. ಸಂಸ್ಥೆಯ ಕಟ್ಟಡದ ಪಕ್ಕದಲ್ಲೇ ರಾಮನ್ ಮನೆ ಮಾಡಿದರು. ಹಗಲಾಗಲೀ, ರಾತ್ರಿಯಾಗಲಿ ತಮಗೆ ಬೇಕೆನಿಸಿದಾಗ ಪ್ರಯೋಗ ನಡೆಸಲು ಅನುಕೂಲವಾಗುವಂತೆ ಮನೆ ಮತ್ತು ಪ್ರಯೋಗಶಾಲೆಯ ನಡುವೆ ಒಂದು ಬಾಗಿಲು ಇಡಿಸಿದರು. ಹಗಲು ಆಫೀಸು ಕೆಲಸ; ಮುಂಜಾನೆ ರಾತ್ರಿ ಆತ್ಮ ಸಂತೋಷ ನೀಡುವ ಸಂಶೋಧನೆ ಹೀಗೆ ರಾಮನ್‌ರು ತಮ್ಮ ಚಟುವಟಿಕೆಗಳನ್ನು ಮುಂದುವರಿಸಿದರು.

ಆಗ ಬರ್ಮಾ ಮತ್ತು ಭಾರತದಗಳೆರಡೂ ಒಂದೇ ಸರಕಾರದ ಆಡಳಿತದಲಿದ್ದುವು. ೧೯೦೯ರಲ್ಲಿ ರಾಮನ್‌ರು ಬರ್ಮಾದ ಮುಖ್ಯ ಪಟ್ಟಣ್ಣವಾದ ರಂಗೂನಿಗೆ ವರ್ಗಾಯಿಸಲ್ಪಟ್ಟರು. ೧೯೧೦ರಲ್ಲಿ ಚಂದ್ರಶೇಖರ ಅಯ್ಯರರು ತೀರಿಕೊಂಡಾಗ ಮದ್ರಾಸಿಗೆ ಬಂದರು. ತಂದೆಯ ಉತ್ತರಕ್ರಿಯೆಗಳು ಕಳೆದ ಬಳಿಕ ಉಳಿದ ರಜಾ ದಿನಗಳಲ್ಲಿ ಮದ್ರಾಸು ವಿಶ್ವವಿದ್ಯಾಲಯದ ಪ್ರಯೋಗ ಶಾಲೆಯಲ್ಲಿ ಸಂಶೋಧನೆ ನಡೆದಿದರು.

೧೯೧೫ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದ ವಿಜ್ಞಾನ ಕಾಲೇಜು ಪ್ರಾರಂಭವಾಯಿತು. ಭೌತವಿಜ್ಞಾನದ ಪ್ರಾಧ್ಯಾಪಕ ಪೀಠವನ್ನು ಅಲ್ಲಿ ಸ್ಥಾಪಿಸಲಾಯಿತು. ರಾಮನ್‌ರಿಗೆ ಸರ್ಕಾರದಲ್ಲಿದ್ದ ಕೆಲಸದಿಂದ ಅಧಿಕಾರ, ಹಣ ಎರಡೂ ಬೇಕಾದಷ್ಟು ದೊರೆತಿದ್ದವು. ಅದನ್ನು ಬಿಟ್ಟು ಭೌತವಿಜ್ಞಾನದ ಪ್ರಾಧ್ಯಾಪಕರಾಗಲು ಸಿದ್ಧರಾದರು.

ವಿಜ್ಞಾನ ಸಂಶೋಧಕರು ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವ ಉದ್ದೇಶ ಸಾಧನೆಗೆ “ಇಂಡಿಯನ್ ಸೈನ್ಸ್ ಕಾಂಗ್ರೆಸ್” ಸಂಸ್ಥೆಯು ೧೯೧೩ರಲ್ಲಿ ಸ್ಥಾಪಿಸಲ್ಪಟ್ಟಿತು. ೧೯೧೪ರಲ್ಲಿ ಅದರ ಪ್ರಥಮ ಅಧಿವೇಶನದ ಅಧ್ಯಕ್ಷರಾಗಿದ್ದರು; ರಾಮನ್‌ರು ಭೌತವಿಜ್ಞಾನ ವಿಭಾಗದ ಅಧ್ಯಕ್ಷರಾದರು. ಅನೇಕ ವರ್ಷಗಳ ಕಾಲ ಅವರು ಆ ಸಂಸ್ಥೆಯ ಕಾರ್ಯದರ್ಶಿಗಳಾಗಿ ಕೆಲಸ ಮಾಡಿದರು. ೧೯೨೯ ಮತ್ತು ೧೯೪೮ನೇ ವರ್ಷಗಳಲ್ಲಿ ರಾಮನ್‌ರು ವಾರ್ಷಿಕ ಅಧಿವೇಶನದ ಅಧ್ಯಕ್ಷರಾದರು.

ಪ್ರೊಫೆಸರ್ ರಾಮನ್

೧೯೧೭ರಲ್ಲಿ ೨೯ವರ್ಷ ವಯಸ್ಸಿನ ರಾಮನ್ ಪಾಲಿತ್ ಪೀಠದ ಪ್ರಾಧ್ಯಾಪಕರಾದರು. ಜೊತೆಯಲ್ಲಿಯೇ ಸಂಶೋಧನೆಗಳನ್ನು ಮುಂದುವರಿಸಿದರು.

ಸಂಗೀತಕ್ಕೆ ಹಲವು ವಾದ್ಯಗಳನ್ನು ಉಪಯೋಗಿಸುತ್ತಾರೆ ಅಲ್ಲವೇ? ಅವುಗಳಲ್ಲಿ ಬೇರೆ ಬೇರೆ ವಿಧ. ಕೆಲವಕ್ಕೆ ತಂತಿಗಳಿರುತ್ತವೆ ವೀಣೆ, ಪಿಟೀಲು ಮೊದಲಾದವು ಇಂತಹವು. ಮೃದಂಗ, ತಬಲ ಇಂತಹವು, ಇನ್ನೊಂದು ಬಗೆಯವು. ಇವುಗಳಿಂದ ಬರುವ ನಾದಗಳಲ್ಲಿ ರಾಮನ್‌ರಿಗೆ ಆಸಕ್ತಿಯುಂಟಾಯಿತು. ೧೯೧೮ ರ ವೇಳೆಗೆ, ತಂತಿ ವಾದ್ಯಗಳಿಂದ ಕಂಪನಗಳು ಹೇಗೆ ಉಂಟಾಗುತ್ತವೆ ಎಂಬುದನ್ನು ಕಂಡುಹಿಡಿದರು. ಮೃದಂಗ, ತಬಲ ಮೊದಲಾದವುಗಳಿಂದ ಹೊರಡುವ ಕೆಲುವು ವಿಶಿಷ್ಟ ಸ್ವರಗಳನ್ನು ಗುರುತಿಸಿದರು.

“ಇಂಡಿಯನ್ ಅಸೋಸಿಯೇಷನ್ ಫಾರ ದಿ ಕಲ್ಟಿವೇಷನ್ ಆಫ್ ಸೈನ್ಸ್” ಸಂಸ್ಥೆಯ ಅಭಿವೃದ್ಧಿಗಾಗಿ ಸದಾ ದುಡಿಯುತ್ತಿದ್ದ ಅಮೃತಲಾಲ್ ಸರ್ಕಾರ್ ೧೯೧೯ರಲ್ಲಿ ನಿಧನರಾದರು. ಅನಂತರ ಪ್ರೊಫೆಸರ್ ರಾಮನ್‌ರೇ ಅದರ ಗೌರವ ಕಾರ್ಯದರ್ಶಿಗಳಾದರು. ಕಾಲೇಜಿನ ಪ್ರಯೋಗಾಲಯ ಮತ್ತು ಸಂಸ್ಥೆಯ ಪ್ರಯೋಗಾಲಯ ಇವೆರಡರ ನಿರ್ವಹಣೆ ಅವರ ಸಂಶೋಧನಾ ಕಾರ್ಯಕ್ಕೆ ಪುಟಕೊಟ್ಟಿತು. ರಾಮನ್‌ರ ಅಪಾರ ಮಾನಸಿಕ ಮತ್ತು ದೈಹಿಕ ಶಕ್ತಿ, ಎರಡೂ ಕಡೆ ಜವಾಬ್ದಾರಿ ಹೊತ್ತು ಸಾಗಿತ್ತು. ದೇಶದ ನಾನಾ ಕಡೆಗಳಿಂದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನೆ ನಡೆಸುವುದಕ್ಕಾಗಿ ಅನೇಕ ವಿದ್ಯಾರ್ಥಿಗಳು ರಾಮನ್‌ರ ಬಳಿಗೆ ಬಂದರು. ೨೧೦, ಬೋ ಬಜಾರ್ ಬೀದಿ ಮತ್ತು ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜಿನ ಪ್ರಯೋಗಾಲಯ ಇವು ಭಾರತದ ಪ್ರಸಿದ್ಧ ಸಂಶೋಧನಾ ಕೇಂದ್ರಗಳಾದವು. ಮುಂದೆ ಪ್ರಸಿದ್ಧರಾದ ಮೇಘನಾದ ಸಹಾ, ಎಸ್.ಕೆ.ಮಿತ್ರ ಮೊದಲಾದ ಸಂಶೋಧಕರು ಅಲ್ಲಿಯ ಚಟುವಟಿಕೆಗಳಲ್ಲಿ ಪಾಲ್ಗೊಂಡರು.

ಪ್ರಯೋಗ, ಸಂಶೋಧನೆಗಳಲ್ಲೇ ರಾಮನ್‌ರ ಮೈ ಮನಗಳು ಕೆಲಸ ಮಾಡುತ್ತಿದ್ದ ಕಾಲ ಅದು. ಪಾಲಿತ್ ಪೀಠದ ನಿಯಮಗಳ ಪ್ರಕಾರ ಅವರು ಸಂಶೋಧನೆಗಷ್ಟೆ ತಮ್ಮ ಗಮನ ಹರಿಸಿದ್ದರೆ ಸಾಕಾಗಿತ್ತು; ಕಾಲೇಜಿನಲ್ಲಿ ಪಾಠ ಹೇಳಬೇಕಾಗಿರಲಿಲ್ಲ. ಆದರೆ ರಾಮನ್‌ರಿಗೆ ಪಾಠ ಹೇಳುವುದು ಎಂದರೆ ಸಂತೋಷ. ಅವರ ಪಾಠ ಎಂದರೆ ವಿದ್ಯಾರ್ಥಿಗಳಿಗೆ ಸ್ಫೂರ್ತಿ; ಅವರ ಉಪನ್ಯಾಸಗಳನ್ನು ಕೇಳಲು ವಿದ್ಯಾರ್ಥಿಗಳೆಲ್ಲ ಹಾತೊರೆಯುತ್ತಿದ್ದರು. ಪಾಠ ಹೇಳುವಾಗ ಅವರು ಯಾವುದೇ ಒಂದು ಪಠ್ಯಪುಸ್ತಕವನ್ನು ಅನುಸರಿಸುತ್ತಿರಲಿಲ್ಲ. ಉಪನ್ಯಾಸಗಳಲ್ಲೆಲ್ಲ ಹೊಚ್ಚ ಹೊಸ ಸಂಶೋಧನೆಗಳ ಗಂಧವಿತ್ತು; ಪ್ತಕೃತಿಯ ರಹಸ್ಯಗಳನ್ನು ತಿಳಿಯುವ ಕುತೂಹಲವಿತ್ತು. ಸಾಮಾನ್ಯವಾಗಿ ಕಾಲೇಜಿನ ಒಂದು ಉಪನ್ಯಾಸದ ಅವಧಿ ಒಂದು ಗಂಟೆ. ಆದರೆ ರಾಮನ್‌ರು ಕೆಲವೊಮ್ಮೆ ತಮ್ಮನ್ನೆ ಮರೆತುಬಿಟ್ಟು ಎರಡು ಮೂರು ಗಂಟೆಗಳ ತನಕ ಪಾಠ ಮುಂದುವರಿಸುತ್ತಿದ್ದರು. ವಿದ್ಯಾರ್ಥಿಯೊಬ್ಬ ಯಾವುದಾದರೊಂದು ಸಂಶಯ ವ್ಯಕ್ತ ಪಡಿಸಿದರೆ ಅಥವಾ ಪ್ರಶ್ನೆ ಕೇಳಿದರೆ ಸರಿ, ರಾಮನ್‌ರ ವಿಚಾರಧಾರೆ ಉಕ್ಕಿ ಹರಿಯುತ್ತಿತ್ತು.

ಸಂಸ್ಥೆಯಲ್ಲಿ ರಾತ್ರಿ ಹೊತ್ತು ಸಂಶೋಧನಾಮಗ್ನರಾದ ರಾಮನ್‌ ಕೆಲವೊಮ್ಮೆ ಊಟ, ನಿದ್ರೆಗಳನ್ನೂ ಮರೆಯುತ್ತಿದ್ದರು. ರಾತ್ರಿ ಬಹಳ ಹೊತ್ತು ಪ್ರಯೋಗ ನಡೆಸುತ್ತಾ ರಾಮನ್‌ ಅಲ್ಲೇ ಮೇಜಿನ ಮೇಲೆ ನಿದ್ರೆ ಹೋಗುತ್ತಿದ್ದುದ್ದೂ ಉಂಟು.

ಮುಂಜಾನೆಯಾದರೂ ಅಷ್ಟೆ- ರಾಮನ್‌ರ ಕೆಲಸ ಪ್ರಯೋಗಾಲಯದಲ್ಲಿ. ಹೆಚ್ಚಿನ ದಿನಗಳಲ್ಲಿ ಮನೆ ಉಡುಪಿನಲ್ಲೇ ಸಂಸ್ಥೆಗೆ ಹೋಗಿ ಪ್ರಯೋಗ ನಡೆಸುತ್ತಿದ್ದರು. ಒಂಬತ್ತೂವರೆ ಗಂಟೆಯಾಯಿತೆಂದರೆ ಸರಿ, ಮನೆಗೆ ಧಾವಿಸುತ್ತಿದ್ದರು. ಮುಖಕ್ಷೌರ ಮಾಡಿಕೊಂಡು ಸ್ನಾನ ಮಾಡಿ, ನಿತ್ಯದ ಉಡುಪನ್ನು ಧರಿಸುತ್ತಿದ್ದಂತೆಯೇ ಟ್ಯಾಕ್ಸಿಗೆ ಬರಹೇಳುತ್ತಿದ್ದರು. ಎರಡು ಮೂರು ನಿಮಿಷಗಳಲ್ಲಿ ಬೆಳಗಿನ ಆಹಾರ ಸೇವಿಸಿದವರೇ ಟ್ಯಾಕ್ಸಿಗೆ ಹತ್ತುತ್ತಿದ್ದರು. ನಾಲ್ಕು ಮೈಲು ದೂರದಲ್ಲಿದ್ದ ವಿಜ್ಞಾನ ಕಾಲೇಜನ್ನು ತಲುಪುವಾಗ ಉಪನ್ಯಾಸದ ಸಮಯಕ್ಕೆ ಸರಿಹೋಗುತ್ತಿತ್ತು. ಅವರು ಎಂದೂ ಕಾಲವನ್ನು ವ್ಯರ್ಥವಾಗಿ ಕಳೆದವರಲ್ಲ.

ಸಮುದ್ರದ ನೀಲ

೧೯೨೧ರಲ್ಲಿ ಲಂಡನ್ನಿನಲ್ಲಿ ಬ್ರಟಿಷ್ ಸಾಮ್ರಾಜ್ಯದ ವಿಶ್ವವಿದ್ಯಾಲಯಗಳ ಸಭೆ ಜರುಗಿತು. ರಾಮನ್‌ರು ಕಲ್ಕತ್ತ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಇಂಗ್ಲೆಂಡಿಗೆ ಹೋದರು. ಇದು ಅವರ ಮೊದಲ ವಿದೇಶಿಯಾತ್ರೆ.

ಲಂಡನಿನ “ಫಿಸಿಕಲ್ ಸೊಸೈಟಿ”ಯಲ್ಲಿ ರಾಮನ್ ಭಾಷಣ ಮಾಡಿದರು. ಅವರ ಭಾಷಣ ಕೇಳಲು ಬಹು ಸಂಖ್ಯೆಯಲ್ಲಿ ಜನ ಬಂದಿದ್ದರು. ಇಂಗ್ಲೆಂಡಿನಲ್ಲಿರುವಾಗ ಅಲ್ಲಿಯ ಹೆಸರಾಂತ ಭೌತ ವಿಜ್ಞಾನಿಗಳಾದ ಜೆ.ಜೆ.ಥಾಮ್ಸನ್ ಮತ್ತು ಅರ್ನೆಸ್ಟ್ ರುದರಫೋರ್ಡ್ ಇವರ ಪರಿಚಯವಾಯಿತು. ಲಂಡನಿನ ಸೇಂಟ್ ಪಾಲ್ ಚರ್ಚಿಗೆ ರಾಮನ್ ಭೇಟಿಕೊಟ್ಟರು. ಆ ಕಟ್ಟಡದ ಗೋಪುರದಲ್ಲಿ ಒಂದು ಕಡೆ ಪಿಸುಗುಟ್ಟಿದ ಮಾತು ಮತ್ತೊಂದೆಡೆ ಸ್ಪಷ್ಟವಾಗಿ ಕೇಳಿಸುತ್ತದೆ. ಧ್ವನಿಯ ಪ್ರತಿಫಲನದಿಂದ ಉಂಟಾಗುವ ಈ ವಿಶೇಷ ಪರಿಣಾಮ ರಾಮನ್‌ರ ಆಸಕ್ತಿಯನ್ನು ಕೆರಳಿಸಿತು.

ರಾಮನ್‌ರು ಇಂಗ್ಲೆಂಡಿಗೆ ಹೋದದ್ದೂ, ಅಲ್ಲಿಂದ ಮರಳಿದ್ದು ಸಮುದ್ರ ಮಾರ್ಗವಾಗಿ. ಬಿಡುವು ಸಿಕ್ಕಿದಾಗಲೆಲ್ಲ ಅವರು ಹಡಗಿನ ಮೇಲಟ್ಟದಲ್ಲಿ ಕುಳಿತುಕೊಂಡು ವಿಶಾಲ ಸಮುದ್ರದ ಸೌಂದರ್ಯವನ್ನು ಸವಿಯುತ್ತಿದ್ದರು. ಮೆಡಿಟರೇನಿಯನ್ ಸಮುದ್ರದ ಕಡುನೀಲ ಬಣ್ಣ ಅವರಲ್ಲಿ ಹೊಸ ವಿಚಾರ ತರಂಗಗಳನ್ನು ಎಬ್ಬಿಸಿತು. “ಆಕಾಶದ ನೀಲ ಬಣ್ಣವೇ ಪ್ರತಿಫಲನಗೊಂಡು ಇದು ಉಂಟಾಯಿತೆ? ಪ್ರತಿಫಲಿಸಿದ ಬೆಳಕಿಲ್ಲದಿದ್ದರೂ ನೀಲ ಬಣ್ಣ ಉಳಿಯುವುದೇಕೆ? ಸಮುದ್ರದಲ್ಲಿ ದೊಡ್ಡ ದೊಡ್ಡ ತೆರೆಗಳು ಎದ್ದಾಗಲೂ ನೀಲ ಬಣ್ಣವೇ ಕಾಣುವುದಲ್ಲ?” ಹೀಗೆ ಯೋಚಿಸುತ್ತಿದ್ದಂತೆ ನೀರಿನ ಅಣುಗಳು ಸೂರ್ಯನ ಬೆಳಕನ್ನು ಚೆದುರಿಸಿ ನೀಲ ಬಣ್ಣವನ್ನು ನೀಡಿರಬಹುದೆಂಬ ವಿಚಾರ ರಾಮನ್‌ರಿಗೆ ಹೊಳೆಯಿತು. ಅದನ್ನೇ ಮನಸ್ಸಿನಲ್ಲಿ ಮತ್ತೆ ಮತ್ತೆ ಮೆಲುಕು ಹಾಕಿದರು. ಕಲ್ಕತ್ತಕ್ಕೆ ಬಂದವರೇ ಪ್ರಯೋಗಮಗ್ನರಾದರು. ತಿಂಗಳೊಳಗಾಗಿ ಸಂಶೋಧನ ಲೇಖನವೊಂದನ್ನು ಬರೆದು ಲಂಡನಿನ “ರಾಯಲ್ ಸೊಸೈಟಿ”ಗೆ ಕಳುಹಿಸಿದರು. ಮರುವರ್ಷ ಅಣುಗಳಿಂದ ನಡೆಯುವ ಬೆಳಕಿನ ಚೆದುರಿಕೆಯ ಬಗ್ಗೆ ಒಂದು ದೀರ್ಘ ಲೇಖನವನ್ನು ಬರೆದು ಪ್ರಕಟಿಸಿದರು.

ವಿದೇಶಗಳಿಂದ ತರಿಸಿದ ನಾಜೂಕು ಉಪಕರಣಗಳಿದ್ದರೆ ಮಾತ್ರವೇ ಸಂಶೋಧನೆ ನಡೆಸಬಹುದೆಂಬ ಭ್ರಾಂತಿಗೆ ಅವರು ಎಂದೂ ಒಳಗಾಗಿರಲಿಲ್ಲ. ಕೆಲವು ಉಪಕರಣಗಳನ್ನು ಮಾತ್ರ ವಿದೇಶಗಳಿಂದ ತರಿಸಿದರು. ಆದರೆ ಹೆಚ್ಚಿನವುಗಳನ್ನು ವಿದ್ಯಾರ್ಥಿಗಳ ಸಹಾಯದಿಂದ ತಾವೇ ತಯಾರಿಸಿದರು.

ರಾಮನ್‌ರೂ ಅವರ ಸಹೋದ್ಯೋಗಿಗಳೂ ಪ್ರಕಟಿಸುತ್ತಿದ್ದ ಸಂಶೋಧನ ಲೇಖನಗಳನ್ನು ಹಲವು ದೇಶಗಳ ವಿಜ್ಞಾನಿಗಳು ಮೆಚ್ಚಿದರು. ೧೯೨೪ರಲ್ಲಿ ಇಂಗ್ಲೆಂಡಿನ ಅತಿ ಪ್ರಾಚೀನ ಹಾಗೂ ಪ್ರಮುಖ ವಿಜ್ಞಾನ ಸಂಸ್ಥೆಯಾದ “ರಾಯಲ್ ಸೋಸೈಟಿ”ಯು ರಾಮನ್‌ರನ್ನು ತನ್ನ “ಫೆಲೋ” ಅಥವಾ ಸದಸ್ಯನನ್ನಾಗಿ ಮಾಡಿ ಗೌರವಿಸಿತು.

ಅದೇ ವರ್ಷ ಬ್ರಿಟಿಷ್ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್‌ಮೆಂಟ್ ಆಫ್ ಸೈನ್ಸ್” ಎಂಬ ಸಂಸ್ಥೆಯ ವಾರ್ಷಿಕ ಅಧಿವೇಶನ ಕೆನಡಾದ ಟೋರಾಂಟೊ ನಗರದಲ್ಲಿ ಜರುಗಿತು. ಅಲ್ಲಿ ಬೆಳಕಿನ ಚೆದರಿಕೆಯ ಬಗ್ಗೆ ನಡೆದ ವಿಚಾರಗೋಷ್ಠಿಯನ್ನು ರಾಮನ್ ಉದ್ಘಾಟಿಸಿದರು. ಅಮೇರಿಕದ ಪ್ರಸಿದ್ಧ ವಿಜ್ಞಾನಿ ಆರ್.ಎ. ಮಿಲಿಕನ್ ಅಲ್ಲಿಗೆ ಬಂದಿದ್ದರು. ರಾಮನ್‌ರ ಬಗೆಗೆ ಅವರಿಗೆ ಉಂಟಾದ ಮೆಚ್ಚುಗೆ, ಮುಂದೆ ಗಾಢ ಸ್ನೇಹವಾಗಿ ಬೆಳೆಯಿತು.

ಕ್ಯಾಲಿಫೂರ್ನಿಯಾ ಸಂಸ್ಥಾನದ ಮೌಂಟ್ ವಿಲ್ಸನ್ ವೀಕ್ಷಣಾಲಯದಲ್ಲಿ ಒಂದು ನೂರು ಅಂಗುಲ ಅಗಲದ ದೂರದರ್ಶಕವನ್ನು ಸ್ಥಾಪಿಸಿದ್ದರು. ಖಗೋಲ ವೀಕ್ಷಣೆಯಿಂದ ವಿಶ್ವದ ಅನೇಕ ರಹಸ್ಯಗಳು ಹೊರಬೀಳುತ್ತಿದ್ದ ಕಾಲವದು. ರಾಮನ್‌ರು ಹೊಸ ವಿಷಯಗಳನ್ನು ತಿಳಿಸುವುದರಲ್ಲಿ ಎಂದೂ ಹಿಂದಾದವರಲ್ಲ. ರಾತ್ರಿಯಲ್ಲಿ ಬೆಳಕಿನ ಬುಗ್ಗೆಗಳಂತೆ ತೋರುವ ನೆಬ್ಯೂಲಗಳೆಂಬ ಆಕಾಶಕಾಯಗಳನ್ನು ಮೌಂಟ್ ವಿಲ್ಸನ್ ದೂರದರ್ಶಕದ ಮೂಲಕ ನೋಡಿ ಅವರು ಆನಂದಿಸಿದರು.

೧೯೨೫ರ ಸೆಪ್ಟೆಂಬರ್ ನಲ್ಲಿ “ರಷ್ಯನ್ ಅಕಾಡಮಿ ಆಫ್ ಸೈನ್ಸಸ್” ಸಂಸ್ಥೆಯ ಇನ್ನೂರನೇಯ ಹುಟ್ಟುಹಬ್ಬದ ಸಮಾರಂಭದಲ್ಲಿ ಭಾಗವಹಿಸಲು ರಷ್ಯಕ್ಕೆ ಹೋದರು.

ಕಲ್ಕತ್ತ ಪ್ರಯೋಗಾಲಯದಲ್ಲಿ ಧ್ವನಿ ಮತ್ತು ಬೆಳಕುಗಳ ರಹಸ್ಯವನ್ನು ತಿಳಿಯುವ ಕೆಲಸದಲ್ಲಿ ಭಾಗವಹಿಸಿದವರು ಅನೇಕ ಜನ. ಅವರಿಗೆಲ್ಲ ಗುರು, ನಾಯಕ ಪ್ರೋಫೆಸರ್ ರಾಮನ್. ಆಲ್ಪ್ಸ್ ಪರ್ವತ ಶ್ರೇಣಿಯಲ್ಲಿ ಆಳವಾದ ಹಿಮನದಿಗಳ ನೀಲ ಬಣ್ಣವನ್ನು ಅವರು ಕಂಡಿದ್ದರು. ಇದರಿಂದ ಉತ್ಸಾಹ ಪಡೆದು ಮಂಜು ಹಾಗು ಕ್ವಾರ್ಟ್ಸ್ ಮೊದಲಾದ ಸ್ಫಟಿಕಗಳಿಂದ ಬೆಳಕು ಚೆದರುವುದನ್ನು ಅವರ ಕೆಲವು ಅನುಯಾಯಿಗಳು ಅಧ್ಯಯನ ಮಾಡಿದರು. ಹಾಗೆಯೇ ಶುದ್ಧ ನೀರು, ಆಲ್ಕೋಹಾಲುಗಳಂಥ ದ್ರವಗಳಲ್ಲೂ ಬೆಳಕಿನ ಚೆದರಿಕೆಯ ಪ್ರಯೋಗಗಳು ನಡೆದುವು.

ಮನಸ್ಸಿಗೆ ಹೊಳೆದ ವಿದ್ಯಮಾನದ ಸಮಗ್ರ ಕಲ್ಪನೆ, ಅದರ ಮೇಲೆ ಪ್ರಯೋಗ, ಪ್ರಯೋಗಗಳ ಫಲಿತಾಂಶಗಳ ಆಧಾರದ ಮೇಲೆ ಸಂಶೋಧನ ಲೇಖನದ ತಯಾರಿ, ಅದರ ಕ್ಷಿಪ್ರ ಪ್ರಕಟಣೆಯ ವ್ಯವಸ್ಥೆ – ಇವೆಲ್ಲವನ್ನು ಒಂದರ ಅನಂತರ ಒಂದಾಗಿ, ರಾಮನ್ ನಡೆಸುತ್ತಿದ್ದರು. ಕೆಲವೊಮ್ಮೆ ಸಂಶೋಧನ ಲೇಖನದ ಅಂತಿವ ಪ್ರತಿಯನ್ನು ತಯಾರಿಸುವಾಗ ಹೊತ್ತಾಗುತ್ತಿತ್ತು. ಅದು ಆ ದಿನವೇ ಅಂಚೆಗೆ ಬೀಳುವಂತೆ ಮಾಡಲು ಟ್ಯಾಕ್ಸಿಯಲ್ಲಿ ಜನರಲ್ ಪೋಸ್ಟ್ ಆಫೀಸಿಗೆ ಧಾವಿಸುತ್ತಿದ್ದರು. ಅನಂತರ ಸಂತೋಷದಿಂದ ವಿದ್ಯಾರ್ಥಿಗಳನ್ನು ಕೂಡಿಸಿಕೊಂಡು ರಸಗುಲ್ಲ ತಿನ್ನುತ್ತಿದ್ದರು. ಸಂಶೋಧನ ಲೇಖನಗಳನ್ನು ವಿಳಂಬವಿಲ್ಲದೆ ಪ್ರಕಟಿಸುವುದಕ್ಕಾಗಿ ೧೯೨೬ರಲ್ಲಿ “ಇಂಡಿಯನ್ ಜರ್ನಲ್ ಆಫ್ ಫಿಸಿಕ್ಸ್” (ಭೌತ ವಿಜ್ಞಾನದ ಭಾರತೀಯ ಪತ್ರಿಕೆ) ಎಂಬ ನಿಯತಕಾಲಿಕವನ್ನು ಪ್ರಾರಂಭಿಸಿದರು.

ತಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಯುವ ವಿಜ್ಞಾನಿಗಳು ಸ್ವತಂತ್ರ ಹುದ್ದೆಗಳಿಗೆ ಸೇರಿ ಸೇವೆ ಸಲ್ಲಿಸಬೇಕೆಂದು ರಾಮನ್‌ರ ಆಸೆಯಾಗಿತ್ತು. ತಮ್ಮ ಪ್ರಯೋಗಾಲಯ ಯುವವಿಜ್ಞಾನಿಗಳಿಗೆ ತರಬೇತಿ ಕೊಡುವ ಕೇಂದ್ರವೇ ಹೊರತು ಅವರನ್ನೆಲ್ಲ ಶೇಖರಿಸಿಡುವ ಉಗ್ರಾಣವಲ್ಲ ಎಂದು ಅವರು ಹೇಳುತ್ತಿದ್ದರು.

ರಾಮನ್‌ರ ಧ್ವನಿ ಕುರಿತ ಸಂಶೋಧನೆಗಳು ವಿದೇಶಗಳಲ್ಲೂ ಪ್ರಸಿದ್ಧವಾಗಿದ್ದುವು. ೧೯೨೭ರಲ್ಲಿ “ಹ್ಯಾಂಡ್ ಬುಕ್ ಆಫ್ ಫಿಸಿಕ್ಸ್” ಎಂಬ ಭೌತವಿಜ್ಞಾನದ ಜರ್ಮನ ವಿಶ್ವಕೋಶ ಪ್ರಕಟಿಸಲ್ಪಟ್ಟಿತು. ಅದಕ್ಕೆ ಲೇಖನಗಳನ್ನು ಬರೆದವರೆಲ್ಲ ಜರ್ಮನಿಯವರೇ- ಒಬ್ಬರನ್ನು ಬಿಟ್ಟು. ಆ ಒಬ್ಬರೇ ವಿದೇಶಿ ಲೇಖಕ – ರಾಮನ್.

ರಾಮನ್ ಪರಿಣಾಮ

ಸಂಜೆಯ ಇಳಿಬಿಸಿಲಲ್ಲಿ ಒಮ್ಮೊಮ್ಮೆ ದಿಗಂತದಿಂದ ದಿಗಂತಕ್ಕೆ ಹಬ್ಬಿರುವ ಕಾಮನಬಿಲ್ಲು ಕಾಣಿಸುವುದುಂಟು. ಇದರಲ್ಲಿ ಕೆಂಪು, ಕಿತ್ತಳೆ, ಹಳದಿ, ಹಸಿರು, ನೀಲ, ನೀಲಿ, ನೇರಳೆ ಬಣ್ಣಗಳ ಪಟ್ಟಿಗಳಿರುತ್ತವೆ. ಇವೆಲ್ಲ ಸೂರ್ಯನ ಬೆಳಕಿನಲ್ಲಿ ಹುದುಗಿರುವ ಬಣ್ಣಗಳು. ಸೂರ್ಯನ ಬೆಳಕನ್ನು ಒಂದು ಗಾಜಿನ ಪಟ್ಟಕ (ಪ್ರಿಸಂ)ದ ಮೂಲಕ ಹಾಯಿಸಿದಾಗಲೂ ಈ ಬಣ್ಣಗಳನ್ನೊಳಗೊಂಡ ಪಟ್ಟಿ ಅಥವಾ ವರ್ಣಪಟಲದ ಪರಿಶೀಲನೆಗೆ ಸ್ಪೆಕ್ಟೋಮೀಟರ್ ಎಂಬ ಉಪಕರಣವನ್ನು ಬಳಸುತ್ತಾರೆ. ಪಟ್ಟಕದ ಮೂಲಕ ಹಾಯಿಸುವ ಬೇಳಕಿಗೆ ಅನುಗುಣವಾಗಿ ವರ್ಣರೇಖೆಗಳು ಇದರಲ್ಲಿ ಕಾಣುತ್ತವೆ. ಕೇವಲ ಒಂದೇ ವರ್ಣರೇಖೆಗೆ ಕಾರಣವಾದ ಬೆಳಕನ್ನು ಒಂದೇ ಬಣ್ಣದ ಬೆಳಕು ಅಥವಾ ಏಕವರ್ಣೀಯ ಬೆಳಕು ಎನ್ನುತ್ತಾರೆ.

ಏಕವರ್ಣೀಯ ಬೆಳಕನ್ನು ಪಾರದರ್ಶಕ (ಎಂದರೆ ಬೆಳಕಿನ ಕಿರಣ ಹಾಯ್ದುಹೋಗಲು ಸಾಧ್ಯವಿರುವಂತಹ) ವಸ್ತುವಿನ ಮೂಲಕ ಹಾಯಿಸಿದಾಗ ಸಿಗುವ ಚೆದುರಿದ ಬೆಳಕನ್ನು ರಾಮನ್‌ರು ಬಹಳ ಕಾಲ ಪರೀಶೀಲಿಸಿದರು. ೧೯೨೮ರ ಫೆಬ್ರವರಿ ೨೮ರಂದು ಹೀಗೆ ಹಾಯಿಸಿದ ಬೆಳಕಿನ ವರ್ಣರೇಖೆಗಳು ಕಂಡುಬಂದವು. ರಾಮನ್‌ರು ವರ್ಷಗಟ್ಟಲೆ ನಡೆಸಿದ ಪರಿಶ್ರಮ ಫಲ ಬಿಟ್ಟಿತ್ತು. ಚೆದುರಿಸಲ್ಪಡುವ ಬೆಳಕಿಗೆ ಒಂದೇ ಬಣ್ಣ, ಆದರೆ ಚೆದುರಿದ ಬೆಳಕು ಹಾಗಿಲ್ಲ. ರಾಮನ್‌ರ ಪ್ರೋಗದಿಂದ ನಿಸರ್ಗದ ರಹಸ್ಯ ಒಂದು ಹೊರಬಿದ್ದಿತ್ತು.

ಡಾ|| ರಾಮನ್ ಪ್ರಯೋಗಾಲಯದಲ್ಲಿ (ಸುತ್ತ ಅವರಿಗೆ ಬೇರೆ ಬೇರೆ ದೇಶಗಳು, ಸಂಸ್ಥೆಗಳು ಗೌರವದಿಂದ ನೀಡಿದ ಪದಕಗಳು)

೧೯೨೮ರ ಮಾರ್ಚ್ ೧೬ರಂದು ವಿಜ್ಞಾನ ಚರಿತ್ರೆಯಲ್ಲಿ ಸ್ಮರಣೀಯ ದಿನ. ಅಂದು ಬೆಂಗಳೂರಿನ “ಸೌತ್ ಇಂಡಿಯನ್ ಸೈನ್ಸ್ ಅಸೋಸಿಯೇಷನ್” ಮತ್ತು ಸೆಂಟ್ರಲ್ ಕಾಲೇಜಿನ ವಿಜ್ಞಾನ ಸಂಘ – ಇವುಗಳ ಆಶ್ರಯದಲ್ಲಿ ಒಂದು ಸಭೆ ನಡೆಯಿತು. ರಾಮನ್‌ರೇ ಮುಖ್ಯ ಅತಿಥಿ. ಅಂದು ಅವರು ತಾವು ಕಂಡುಕೊಂಡ ವಿದ್ಯಮಾನವನ್ನು ಲೋಕಕ್ಕೆ ತಿಳಿಸಿದರು. ಸಂಶೋಧನೆಯಲ್ಲಿ ನೆರವಾದ ಕೆ.ಎಸ್. ಕೃಷ್ಣ್‌ನ್ ಮತ್ತು ವೆಂಕಟೇಶ್ವರನ್ ಎಂಬ ತಮ್ಮ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ನೆನೆದರು.

ಜಗತ್ತಿಡೀ ವಿಜ್ಞಾನ ಸಂಶೋಧಕರ ಗಮನ ಸೆಳೆದ ಈ ವಿದ್ಯಮಾನವು “ರಾಮನ್ ಪರಿಣಾಮ” ವೆಂದು ಹೆಸರಾಯಿತು. ಚೆದುರಿದ ಬೆಳಕಿನ ಮರ್ಣರೇಖೆಗಳು “ರಾಮನ್ ರೇಖೆ”ಗಳೆಂದೇ ಪ್ರಸಿದ್ಧವಾದುವು.

ಬೆಳಕು, ತರಂಗ ರೂಪದ್ದೇ? (ಎಂದರೆ ಅಲೆಗಳಂತಹುದೇ?) ಕಣಗಳ ರೂಪದ್ದೇ? ಇದು ವಿಜ್ಞಾನ ಕ್ಷೇತ್ರದಲ್ಲಿ ಆಗಿಂದಾಗ ಚರ್ಚೆಗೀಡಾದ ವಿಷಯ. ಬೆಳಕು ಪ್ರೋಟಾನುಗಳೆಂಬ ಕಣಗಳ ರೂಪದಲ್ಲಿದೆ ಎಂಬುದನ್ನು “ರಾಮನ್ ಪರಿಣಾಮ”ವು ದೃಢಪಡಿಸಿತು. ಇದರಿಂದ ವಿವಿಧ ವಸ್ತುಗಳ ಅನುರಚನೆ ಮತ್ತು ಸ್ಫಟಿಕ ರಚನೆಗಳನ್ನು ತಳಿಯುವುದಕ್ಕೆ ಬಹಳ ಸಹಾಯವಾಯಿತು.

“ರಾಮನ್ ಪರಿಣಾಮ” ಜತ್ತಿನ ವಿಜ್ಞಾನಿಗಳ ಗಮನವನ್ನು ಸೆಳೆಯಿತು, ಹಲವು ದೇಶಗಳಲ್ಲಿ ಅದರ ವಿಷಯ ಅಧ್ಯಯನ ಪ್ರಾರಂಭವಾಯಿತು. ಅದು ಹೊರಬಿದ್ದ ನಂತರ ಹನ್ನೆರಡು ವರ್ಷಗಳಲ್ಲಿ ಅದರ ವಿಷಯ ೧,೮೦೦ ಲೇಖನಗಳು ಪ್ರಕಟವಾದುವು; ೨,೫೦೦ ಸಂಯುಕ್ತ (ಕಾಂಪೌಂಡ್)ಗಳ ರಾಸಾಯನಿಕ ಪರೀಕ್ಷೆಗೆ ಅದನ್ನು ಬಳಸಿದರು! “ರಾಮನ್ ಪರಿಣಾಮ”ವು ಈ ಶತಮಾನದ ಮೂರನೆಯ ದಶಕದ ಅತ್ಯುತ್ಕೃಷ್ಟ ಶೋಧನೆಗಳಲ್ಲಿ ಒಂದಾಯಿತು.

೧೮೬೦ರಿಂದೀಚೆಗೆ ಲೇಸರ್ ಎಂಬ ಉಪಕರಣದಿಂದ ಪ್ರಖರವಾದ ಏಕವರ್ಣೀಯ ಬೆಳಕನ್ನು ಪಡೆಯ ಬಹುದಾಗಿದೆ. ಆದ್ದರಿಂದ ಇಂದಿಗೂ “ರಾಮನ್ ಪರಿಣಾಮ”ದಲ್ಲಿ ಆಸಕ್ತಿ ಉಳಿದಿದೆ.

ರಾಮನ್‌ರ ವಿಜ್ಞಾನ ಸಾಧನೆಗೆ ಪ್ರಪಂಚದ ಹಲವು ಕಡೆಗಳಿಂದ ಮೆಚ್ಚುಗೆ, ಗೌರವಗಳು ಬಂದುವು. ೧೯೨೮ರಲ್ಲಿ ರೋಮಿನ ವಿಜ್ಞಾನ ಸಂಘ ನೈಟ್ ಪದವಿಯನ್ನು ನೀಡಿತು. ಪ್ರೋಫೆಸರ್ ರಾಮನ್‌ರು ಸರ್ ಸಿ.ವಿ. ರಾಮನ್ ಎಂದು ಹೆಸರಾದರು. ೧೯೩೦ರಲ್ಲಿ ಲಂಡನಿನ ರಾಯಲ್ ಸೊಸೈಟಿಯು ಹ್ಯೂಸ್ ಪದಕವನ್ನು ಅರ್ಪಿಸಿತು. ಫ್ರೀಬರ್ಗ್ (ಜರ್ಮನಿ), ಗ್ಲಾಸ್ಗೋ (ಇಂಗ್ಲೆಂಡ್), ಪ್ಯಾರಿಸ್ (ಫ್ರಾನ್ಸ್), ಮುಂಬಯಿ, ಕಾಶಿ, ಡಾಕ್ಕಾ, ಪಾಟ್ನಾ, ಮೈಸೂರು ಮೊದಲಾದ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಿದುವು.

ಪ್ರಪಂಚದಲ್ಲಿ ವಿಜ್ಞಾನಿ ಅಥವಾ ಸಾಹಿತಿಗೆ ಸಿಕ್ಕಬಹುದಾದ ಬಹು ದೊಡ್ಡ ಬಹುಮಾನ – ನೊಬೆಲ್ ಬಹುಮಾನ.

“ಸ್ವೀಡಿಷ್ ಅಕಾಡಮಿ ಆಫ್ ಸೈನ್ಸಸ್” ಸಂಸ್ಥೆಯು ೧೯೩೦ರಲ್ಲಿ ಭೌತ ವಿಜ್ಞಾನ ವಿಭಾಗದ ನೊಬೆಲ್ ಬಹುಮಾನವನ್ನು ರಾಮನ್‌ರಿಗೆ ನೀಡಿತು. ಅಲ್ಲಿಯವರೆಗೆ ಭಾರತದಲ್ಲಿ ಮಾತ್ರವಲ್ಲ, ಇಡೀ ಏಷ್ಯಾ ಖಂಡದಲ್ಲಿ ಯಾವ ವಿಜ್ಞಾನಿಗೂ ನೊಬೆಲ್ ಬಹುಮಾನ ಬಂದಿರಲಿಲ್ಲ.

ಪ್ರಯೋಗ ಫಲಿತಾಂಶಗಳು ಎಷ್ಟು ಸೂಕ್ಷ್ಮವಾದರೂ ರಾಮನ್‌ರ ಕಣ್ಣಿನಿಂದ ತಪ್ಪುತ್ತಿರಲಿಲ್ಲ. ಹಾಗೆ ಕಂಡು ಬಂದ ವಿಷಯದ ವಿವರವಾದ ಚಿತ್ರಣವೂ ಅವರ ಮನಸ್ಸಿನಲ್ಲೇ ಮೂಡುತ್ತಿತ್ತು. ರಾಮನ್ ಪರಿಣಾಮದ ಶೋಧನೆಯ ಅನಂತರ ಆಂಧ್ರ ವಿಶ್ವವಿದ್ಯಾಲಯದ ಕೇಂದ್ರವಾದ ಮಾಲ್ಟೇರಿನಲ್ಲಿ ವಿವಿಧ ವಸ್ತುಗಳಿಂದ ಕೊರೆತ ವರ್ಣಪಟಲಗಳ ವಿಶ್ಲೇಷಣೆ ನಡೆಯುತ್ತಿತ್ತು. ಒಮ್ಮೆ ಅವರು ಅಲ್ಲಿಗೆ ಹೋಗೆದ್ದಾಗ ಅಲ್ಲಯ ಕಾರ್ಯಕರ್ತರು ವರ್ಣ ಪಟಲದಲ್ಲಿ ನಿರೀಕ್ಷಿಸಿದ ವರ್ಣರೇಖೆಗಳನ್ನು ಕಾಣದೆ ಯೋಚನಾಕ್ರಾಂತರಾಗಿದ್ದರು. ರಾಮನ್ ಬಂದವರೇ ವಿಷಯವನ್ನು ತಿಳಿದು ವರ್ಣಪಟಲವಿರುವ ಫಲಕವನ್ನು ನೋಡಿದರು. ಒಂದೇ ಕ್ಷಣದಲ್ಲಿ “ಅಗೋ ಅಲ್ಲಿ ನೋಡಿ, ಕಾಣಿಸುವುದಿಲ್ಲವೆ?” ಎಂದು ಆನಂದೋತ್ಸಾಹಗಳಿಂದ ತೋರಿಸಿದರು. ಆ ಫಲಕವನ್ನು ಒಂದು ಪ್ರೊಜೆಕ್ಟರ್ನಲ್ಲಿ ಇರಿಸಿ ಸಾಮಾನ್ಯ ದೃಷ್ಟಿಗೆ ಕಾಣದಿದ್ದ ವರ್ಣರೇಖೆಗಳನ್ನು ಬಿಳಿ ತೆರೆಯ ಮೇಲೆ ಎಲ್ಲರಿಗೂ ಕಾಣುವಂತೆ ತೋರಿಸಿದರು.”

ಬೆಂಗಳೂರಿನಲ್ಲಿ

೧೯೩೩ರಲ್ಲಿ ಅವರು ಬೆಂಗಳೂರಿಗೆ ಟಾಟಾ ವಿಜ್ಞಾನ ಸಂಸ್ಥೆಯ ನಿರ್ದೇಶಕರಾಗಿ ಬಂದರು. ಅವರು ಸ್ಫಟಿಕಗಳ ಮೇಲೆ ನಡೆಸಿದ ಸಂಶೋಧನೆಯಿಂದ ಟಾಟಾ ವಿಜ್ಞಾನ ಮಂದಿರವು ಹೆಸರಾಯಿತು. ದ್ರವದಲ್ಲಿ ಶ್ರವಣಾತೀತ ಧ್ವನಿ (ಧ್ವನಿಯ ಕಂಪನ ಬಹು ಹೆಚ್ಚಾದರೆ ಮನುಷ್ಯನ ಕಿವಿಗೆ ಕೇಳಿಸುವುದಿಲ್ಲ. ಇದು ಶ್ರವಣಾತೀತ ಧ್ವನಿ) ಸಾಗುತ್ತಿರುವಾಗ ಬೆಳಕು ಬಾಗುವ ರೀತಿಯನ್ನು ರಾಮನ್ ಮತ್ತು ನಾಗೇಂದ್ರನಾಥ ಎಂಬುವರು ಜತೆಯಾಗಿ ವಿವರಿಸಿದರು. ಇದು “ರಾಮನ್-ನಾಥ ಸಿದ್ಧಾಂತ”ವೆಂದು ಪ್ರಚಲಿತವಾಯಿತು.

ರಾಮನ್ ನಸುಕಿನಲ್ಲೆ ಎದ್ದು ಸ್ವಲ್ಪ ಸುತ್ತಾಡಿ ಬರುತ್ತಿದ್ದರು. ಉಷಃಕಾಲದ ಆಗಸದ ಹಿನ್ನೆಲೆಯಲ್ಲಿ ಎತ್ತರಕ್ಕೆ ಬೆಳೆದ ಮರಗಳ ನೋಟದಿಂದ ಅವರಿಗೆ ತುಂಬ ಸಂತೋಷ. ಮುಂಜಾನೆ ಆರು ಗಂಟೆಗೆ ಅವರು ತಮ್ಮ ಕೆಲಸದ ಕೋಣೆಯಲ್ಲಿ ಹಾಜರಾಗುತ್ತಿದ್ದರು. ಪ್ರಯೋಗ ಮಗ್ನರಾದ ವಿದ್ಯಾರ್ಥಿಗಳೊಡನೆ ಚರ್ಚಿಸುತ್ತಲೋ, ವಿಜ್ಞಾನ ಲೇಖನಗಳನ್ನು ಪರಿಶೀಲಿಸುತ್ತಲೋ ೯ ಗಂಟೆಯ ತನಕ ಕಳೆಯುತ್ತಿದ್ದರು. ಕಛೇರಿ ಕೆಲಸಗಳನ್ನೆಲ್ಲ ಮುಗಿಸಿ ಪ್ರಯೋಗಾಲಯಕ್ಕೆ ಮರಳಿದವರು ರಾತ್ರಿ ಎಂಟೂವರೆ ಗಂಟೆಯ ತನಕವೂ ಸಂಶೋಧನೆಯಲ್ಲೇ ಮಗ್ನರಾಗುತ್ತಿದ್ದರು. ವಾರದಲ್ಲಿ ೨-೩ ಬಾರಿ ವಿಚಾರ ಗೋಷ್ಠಿಗಳನ್ನು ಏರ್ಪಡಿಸುತ್ತಿದ್ದರು. ಬೇರೆ ಬೇರೆ ಸಂಶೋಧನಾ ವಿಸಯಗಳನ್ನು ಒಟ್ಟಿಗೆ ಚರ್ಚಿಸಲು ಆಗ ಅವಕಾಶ ಸಿಗುತ್ತಿತ್ತು.

ವಿದ್ಯಾರ್ಥಿಗಳು ಹೊಸ ಫಲಿತಾಂಶಗಳನ್ನು ತೋರಿಸಿದರೆ ರಾಮನ್‌ರಿಗೆ ತುಂಬಾ ಸಂತೋಷವಾಗುತ್ತಿತ್ತು. ಅಗತ್ಯವೆನಿಸಿದ ಸೂಚನೆಗಳನ್ನು ನೀಡಿ, ಇನ್ನೂ ಸಂಶೋಧನೆಯನ್ನು ಮುಂದುವರೆಸುವಂತೆ ಹೇಳುತ್ತಿದ್ದರು. ಕೆಲಸ ಮಾಡುತ್ತಾ ಯಾರಾದರೂ ಉತ್ಸಾಹಹೀನರಾದರೆ ಸ್ಫೂರ್ತಿ ತುಂಬುತ್ತಿದ್ದರು.

ಒಮ್ಮೆ ವಿದ್ಯಾರ್ಥಿಯೊಬ್ಬನು ಒಂದು ಕಿಲೋವ್ಯಾಟ್ ಶಕ್ತಿಯ ಎಕ್ಸ್-ರೇ (ಕ್ಷ-ಕಿರಣ) ನಳಿಗೆಯನ್ನು ಉಪಯೋಗಿಸಿ ಪ್ರಯೋಗ ಮಾಡುತ್ತಿದ್ದನು. ಅದೇ ವಿಷಯದ ಮೇಲೆ ಇಂಗ್ಲೆಂಡಿನ ವಿಜ್ಞಾನಿಯೊಬ್ಬ ಐದು ಕಿಲೋವ್ಯಾಟ್ ಶಕ್ತಿಯ ಎಕ್ಸ್-ರೇ ನಳಿಗೆ ಉಪಯೋಗಿಸುವ ಸುದ್ದಿ ತಿಳಿದ ಆತ ಬೇಸರದಿಂದಿದ್ದ. ರಾಮನ್, “ಅಷ್ಟೇನೆ? ಅದಕ್ಕೋಂದು ಸುಲಭ ಪರಿಹಾರವಿದೆ. ಸಮಸ್ಯೆಯ ಮೇಲೆ ಹತ್ತು ಕಿಲೊವ್ಯಾಟಿನ ಮೆದುಳು ಉಪಯೋಗಿಸು” ಎಂದು ನಕ್ಕು ಪ್ರಯೋಗಾಲಯದಲ್ಲಿ ಮುಂದೆ ನಡೆದರು. ರಾಮನ್‌ರದು ಅಪ್ರತಿಮ ಆತ್ಮವಿಶ್ವಾಸ. ಅದನ್ನೇ ಅವರು ತಮ್ಮ ವಿದ್ಯಾರ್ಥಿಗಳಲ್ಲೂ ತುಂಬುತ್ತಿದ್ದರು.

ಜ್ಞಾನದ ಭಕ್ತನಿಗೆ ಸಲ್ಲಬಹುದಾದ ಅತಿ ಹೆಚ್ಚಿನ ಗೌರವ - ನೊಬೆಲ್ ಪದಕ

ತಮ್ಮ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ, ಕಾಲೇಜು, ಸರಕಾರಿ ಖಾತೆಗಳಲ್ಲಿ ಕೆಲಸಕ್ಕೆ ಸೇರಿದ ಮೇಲೂ ಅವರ ಯೋಗ ಕ್ಷೇಮವನ್ನು ವಿಚಾರಿಸುತ್ತಿದ್ದರು.ಅವರ ಚಟುವಟಿಕೆಗಳನ್ನು ತಿಳಿದು ತಮ್ಮಿಂದಾದ ಪ್ರೋತ್ಸಾಹವನ್ನು ಕೊಡುತ್ತಿದ್ದರು.

ವಿದ್ಯಾರ್ಥಿಗಳ ಯೋಗ್ಯತೆಯನ್ನು ಅಳೆಯುವ ರಾಮನ್‌ರ ಕ್ರಮ ವಿಶಿಷ್ಟವಾದದ್ದು. ಒಮ್ಮೆ ಅಲಹಾಬಾದ್ ವಿಶ್ವವಿದ್ಯಾಲಯದ ಸ್ನಾತಕೋತರ ವಿದ್ಯಾರ್ಥಿಗಳಿಗೆ ಅವರು ಪರೀಕ್ಷಕರಾಗಿದ್ದಾಗ ಮೃದಂಗಗಳ ಕಂಪನಗಳ ಬಗ್ಗೆ ಒಂದು ಪ್ರಶ್ನೆ ಕೇಳಿದರು. ಅದು ಪಠ್ಯ ಪುಸ್ತಕದಲ್ಲಿರುವ ವಿಷಯಗಳಲ್ಲಿ ಕೇಳುವ ಪ್ರಶ್ನೆಗಳಿಂದ ಭಿನ್ನವಾಗಿತ್ತು. ಒಬ್ಬ ವಿದ್ಯಾರ್ಥಿ ಮಾತ್ರ ಅದಕ್ಕೆ ಉತ್ತರ ಬರೆದಿದ್ದ. ಪರೀಕ್ಷಯ ಅವಧಿಯಿಡೀ ಅದೊಂದೇ ಪ್ರಶ್ನೆಗೆ ಅವನು ಉತ್ತರ ಬರೆದ. ಹಾಗಿದ್ದರೂ ಆ ವಿದ್ಯಾರ್ಥಿಯ ಪ್ರತಿಭೆಯನ್ನು ತಿಳಿದು ಪ್ರೀತರಾದ ರಾಮನ್‌ ವೈಯಕ್ತಿಕವಾಗಿ ಅವನನ್ನು ಅಭಿನಂದಿಸಿದರು.

ಸಂಶೋಧನೆ ನಡೆಸಲು ಅವಕಾಶ ನೀಡಬೇಕೆಂದು ಟಾಟಾ ವಿಜ್ಞಾನ ಮಂದಿರಕ್ಕೆ ಒಮ್ಮೆ ಒಬ್ಬ ಅಭ್ಯರ್ಥಿ ಬಂದಿದ್ದ. ಆತ ಮೊದಲನೆಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದ. “ಕೆಲಸ ಮಾಡಲು ಸಮಸ್ಯೆಗಳಿವೆಯೆ?” ಎಂಬ ಪ್ರಶ್ನೆಗೆ ತೃಪ್ತಿಕರ ಉತ್ತರ ಬರಲಿಲ್ಲ. ಆತ ಬಹು ತೆಳಗಿದ್ದ, ನಿಶ್ಯಕ್ತಿ ಎದ್ದು ಕಾಣುತ್ತಿತ್ತು. ರಾಮನ್‌ರು ಆತನಿಗೆ “ಸಂಶೋಧನೆ ಒಂದು ವಿಚಿತ್ರ ಕೆಲಸ. ಯಶಸ್ಸು ಸಿಕ್ಕಿದಾಗ ಅಪೂರ್ವ ಆನಂದ ಉಂಟಾಗುತ್ತದೆ. ಆನಂದ, ನಿರಾಶೆಗಳಲ್ಲಿ ಯಾವುದನ್ನು ಅನುಭವಿಸುವುದಕ್ಕಾದರೂ ಶಕ್ತಿ ಬೇಕು. ಮೊದಲು ಆಟ, ವ್ಯಾಯಾಮಗಳಿಂದ ದೇಹದಾರ್ಢ್ಯ ಬೆಳೆಸು” ಎಂದು ಹಿತವಚನ ನೀಡಿ ಕಳುಹಿಸಿದರು.

ಭಾರತದಲ್ಲಿ ವೈಜ್ಞಾನಿಕ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ “ಇಂಡಿಯನ್ ಅಕಾಡಮಿ ಆಫ್ ಸೈನ್ಸಸ್‌” ಎಂಬ ಸಂಸ್ಥೆಯನ್ನು ೧೯೩೧ರಲ್ಲಿ ರಾಮನ್‌ ಸ್ಥಾಪಿಸಿದರು. ಅಂದಿನಿಂದ ಪ್ರತಿ ತಿಂಗಳೂ “ದಿ ಪ್ರೊಸೀಡಿಂಗ್ಸ್ ಆಫ್ ದಿ ಅಕಾಡಮಿ” (ಅಕಾಡಮಿಯ ವೈಜ್ಞಾನಿಕ ಚಟುವಟಿಕೆಗಳ ವರದಿ) ಪ್ರಕಟವಾಗುತ್ತಿದೆ.

ಅಕಾಡಮಿಯ ಚಟುವಟಿಕೆಗಳನ್ನು ನಡೆಸಲು ಮೈಸೂರು ಸರಕಾರವು ಇಪ್ಪತ್ತನಾಲ್ಕು ಎಕರೆ ಜಾಗವನ್ನು ನೀಡಿತು. “ಪ್ರಾಚೀನವಾದ, ಹಿರಿದಾದ ನಮ್ಮ ದೇಶದ ಯೋಗ್ಯತೆಗೆ ತಕ್ಕ ವೈಜ್ಞಾನಿಕ ಸಂಶೋಧನ ಕೇಂದ್ರವನ್ನು ಸ್ಥಾಪಿಸಬೇಕು. ಅಲ್ಲಿ ನಾಡಿನ ಕುಶಾಗ್ರಮತಿಗಳು ವಿಶ್ವದ ರಹಸ್ಯಗಳನ್ನು ಭೇದಿಸಬೇಕು” ಎಂಬುದು ರಾಮನ್‌ರ ಆಕಾಂಕ್ಷೆಯಾಗಿತ್ತು. ಇದನ್ನು ಪೂರ್ಣಗೊಳಿಸಲು ಸಂಶೋಧನ ಮಂದಿರವೊಂದನ್ನು ಹೆಬ್ಬಾಳದಲ್ಲಿ ಸ್ಥಾಪಿಸಿದರು. ಅದಕ್ಕೆ ಸರಕಾರದ ಸಹಾಯವನ್ನು ಅವರು ಬೇಡಲಿಲ್ಲ. ತಮ್ಮ ಸ್ವಂತ ಆಸ್ತಿಯನ್ನೆಲ್ಲ ಈ ಸಂಶೋಧನ ಮಂದಿರಕ್ಕಾಗಿ ಧಾರೆಯೆರೆದರು. ಅಕಾಡಮಿಯ ಆಡಳಿತ ಸಮಿತಿಯು ಅದನ್ನು “ರಾಮನ್ ರಿಸರ್ಚ್‌ ಇನಸ್ಸ್‌ಟಿಟ್ಯೂಟ್” (ರಾಮನ್ ಸಂಶೋಧನ ಸಂಸ್ಥೆ) ಎಂದೇ ಹೆಸರಿಸಿತು.

ರಾಮನ್ ಸಂಶೋಧನ ಸಂಸ್ಥೆಯಲ್ಲಿ

೧೯೪೮ರಲ್ಲಿ ಈ ಶ್ರೇಷ್ಠ ವಿಜ್ಞಾನಿಯು “ರಾಮನ್ ಸಂಶೋಧನ ಸಂಸ್ಥೆ”ಯ ನಿರ್ದೇಶಕರಾಗಿ ಬದುಕಿನ ಇನ್ನೊಂದು ಹಂತವನ್ನು ಪ್ರಾರಂಭಿಸಿದರು. ಸಂಶೋಧನ ಸಂಸ್ಥೆಯು ಅವರ ಎಲ್ಲಾ ಚಟುವಟಿಕೆಗಲ ಕೇಂದ್ರವಾಯಿತು. ಸಂಶೋಧನ ಸಂಸ್ಥೆಯ ಸುತ್ತ ಬೆಳೆಸಿದ ಹೂದೋಟ, ನೀಲಗಿರಿ ಮರಗಳು ಇದ್ದವು. “ಹಿಂದೂವೂಬ್ಬ ವಾನಪ್ರಸ್ಥಕ್ಕಾಗಿ ಕಾಡಿಗೆ ಹೋಗುವುದು ಆಚಾರ. ಕಾಡಿಗೆ ಹೋಗುವ ಬದಲು ಕಾಡೇ ನನ್ನ ಸುತ್ತ ಇರುವಂತೆ ಆಗಿದೆ” ಎಂದು ಅವರು ಹೇಳುತ್ತಿದ್ದರು. ಅಲ್ಲಿ ತಮ್ಮ ಮನಸ್ಸನ್ನು ಆಕರ್ಷಿಸಿದ ವಿಷಯಗಳನ್ನು ಯಾರ ಹಂಗೂ ಇಲ್ಲದೆ ಏಕಾಕಿಯಾಗಿ ಅಧ್ಯಯನ ಮಾಡುತ್ತ ಸಂತೋಷದಿಂದಿದ್ದರು. “ಸಂದರ್ಶಕರಿಗೆ ಸಂಸ್ಥೆಯೊಳಗೆ ಪ್ರವೇಶವಿಲ್ಲ; ದಯವಿಟ್ಟು ತೊಂದರೆ ಕೊಡಬೇಡಿ” ಎನ್ನುವ ಆಗ್ರಹ ವಾಕ್ಯವನ್ನು ಸಂಸ್ಥೆಯ ದ್ವಾರದಲ್ಲಿ ಅವರು ಬರೆಸಿದ್ದರು.

ಧ್ವನಿ, ಬೆಳಕು, ಶಿಲೆ, ರತ್ನ, ಹಕ್ಕಿ, ಕೀಟ, ಚಿಟ್ಟೆ, ಚಿಪ್ಪು, ಮರ-ಹೂವು, ವಾತಾವರಣ-ಹವೆ, ದೃಷ್ಟಿ, ಕೇಳಿಸುವಿಕೆ: ಹೀಗೆ ಭೌತವಿಜ್ಞಾನ, ಭೂ ವಿಜ್ಞಾನ, ಜೀವವಿಜ್ಞಾನ, ಶರೀರವಿಜ್ಞಾನಗಳ ವಿವಿಧ ಕ್ಷೇತ್ರಗಳಲ್ಲಿ ಅವರು ಸಂಶೋಧನೆ ನಡೆಸುತ್ತಿದ್ದರು. ಇವುಗಳಲ್ಲೆಲ್ಲ ಅವರಿಗೆ ಅತಿ ಹೆಚ್ಚಿನ ಆಕರ್ಷಣೆ ಧ್ವನಿ ಮತ್ತು ಬಣ್ಣಗಳದ್ದೇ. ಅವುಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿಯುವುದೇ ಅವರ ಗೀಳು. ಅಧ್ಯಯನಕ್ಕಾಗಿ ವಿವಿಧ ವರ್ಣ ವಿನ್ಯಾಸಗಳ ಸೀರೆಗಳನ್ನು ಅವರು ಬಟ್ಟೆ ಅಂಗಡಿಗಳಿಗೆ ಹೋಗಿ ಸಂಗ್ರಹಿಸಿದ್ದುಂಟು!

ಕಲ್ಲು, ಶಿಲೆ, ಅನರ್ಘ್ಯ ರತ್ನಗಳನ್ನು ಅವರು ಸಂಗ್ರಹಿಸಿದರು. ಮಿಂಚಿನಿಂದ ಕರಗಿದ ಮರಳು; ಜ್ವಾಲಾಮುಖಿ ಉಂಟಾದಾಗ ಲಾವಾಹರಿವನ್ನು ಸೂಚಿಸುವ ಶಿಲೆ, ಕೆಂಪು, ಪಚ್ಚೆ, ವಜ್ರ – ರಾಮನ್‌ರ ಅಮೂಲ್ಯ ಸಂಗ್ರಹದಲ್ಲಿರುವ ವಸ್ತುಗಳು ನೂರಾರು. ಅತಿ ನೇರಳೆ ಬೇಳಕಿಣಲ್ಲಿ ಬಣ್ಣಬಣ್ಣದ ಬೆಳಕನ್ನು ಹೊಮ್ಮಿಸುವ ಖನಿಜಗಳನ್ನೆಲ್ಲ ಕತ್ತಲು ಕೋಣೆಯಲ್ಲಿಟ್ಟು ಫಳಫಳನೆ ಮಿನುಗುವ ಪುಟ್ಟಲೋಕವನ್ನೇ ಅವರು ಬೇಕೆನಿಸಿದಾಗ ಸೃಷ್ಟಿಸುತ್ತಿದ್ದರು. ನೇರವಾಗಿ ನೋಡಿದರೆ ಬಣ್ಣವಿಲ್ಲ; ಓರೆಯಾಗಿ ನೋಡಿದರೆ ನೀಲ, ಹಸಿರು, ಹಳದಿ ಬಣ್ಣಗಳ ನೋಟ. ಹೀಗೆ ಕಾಣುವ ಹರಳಿನ ತೆಳುಹಾಳೆಗಳನ್ನು ತಯಾರಿಸಿ ಅವುಗಳ ಒಳರಚನೆಯನ್ನು ತಿಳಿಯಲು ಅವರು ಪ್ರಯತ್ನಿಸುತ್ತಿದ್ದರು. ವಜ್ರಗಳ ಆಳವಾದ ಅಧ್ಯಯನದಿಂದ ಅವುಗಳ ವಿಶಿಷ್ಟ ಗುಣಗಳನ್ನು ವಿವರಿಸಿದರು.

ಒಮ್ಮೆ ವಜ್ರ ಮತ್ತು ಸ್ಫಟಿಕಗಳನ್ನು ಕೊಳ್ಳಲು ಪ್ಯಾರಿಸ್ ನಗರದಲ್ಲಿ ತಿರುಗಾಡುತ್ತಿದ್ದಾಗ ಒಂದೆಡೆ ಗಾಜಿನ ಸೀಸೆಯಲ್ಲಿಟ್ಟ ನೀಲ ರೆಕ್ಕೆಯ ಎರಡು ಸುಂದರ ಚಿಟ್ಟಗಳನ್ನು ನೋಡಿದರು. ಸೊಬಗಿಗೆ ಮರುಳಾಗಿ ಅವುಗಳನ್ನು ಕೊಂಡುಕೊಂಡರು. ಅವುಗಳ ಜೊತೆಗಿರಲೆಂದು ಮುಂದೆ ಸಾವಿರಾರು ಚಿಟ್ಟೆಗಳನ್ನು ಸಂಗ್ರಹಿಸಿದರು.

ಹೂವುಗಳ ಬಣ್ಣಕ್ಕೆ ಮನಸೋತ ರಾಮನ್‌ರು ಅವುಗಳನ್ನು ತುಂಬಾ ಪ್ರೀತಿಸುತ್ತಿದ್ದರು. ತಾವೇ ಅನೇಕ ಹೂಗಿಡಗಳನ್ನು ಬೆಳೆಸಿದರಲ್ಲದೆ ಪುಷ್ಪ ಪ್ರದರ್ಶನಗಳಿಗೆ ಹೋಗಿ ವಿಶೇಷವಾದ ಒಂದೊಂದು ಹೂವನ್ನೂ ಪರೀಕ್ಷಿಸುತ್ತಿದ್ದರು.

ಅಕಾಡಮಿಯ ವಾರ್ಷಿಕ ಅಧಿವೇಶನಗಳಲ್ಲಿ ರಾಮನ್ ಹೊಸ ವೈಜ್ಞಾನಿಕ ವಿಚಾರಗಳನ್ನು ಹೊರಗೆಡಹುತ್ತಿದ್ದರು. ವಿಚಾರಗೋಷ್ಠಿಗಳನ್ನು ಏರ್ಪಡಿಸುತ್ತಿದ್ದರು. ೧೯೬೭ರಲ್ಲಿ ನಡೆದ ಮದ್ರಾಸು ಆಧಿವೇಶನದಲ್ಲಿ “ವಾತಾವರಣದ ಮೇಲೆ ಭೂಮಿಯ ತಿರುಗುವಿಕೆಯ ಪರಿಣಾಮ”ವನ್ನು ಅವರು ಚರ್ಚಿಸಿದರು. ಮರುವರ್ಷ ಬಣ್ಣ ಅಥವಾ ಯಾವುದೇ ದೃಶ್ಯವನ್ನು ಕಣ್ಣು ಗ್ರಹಿಸುವ ಬಗ್ಗೆ ತಮ್ಮದೇ ಸಿದ್ಧಾಂತವನ್ನು ಮುಂದಿಟ್ಟರು.

ಗೌರವ, ಪದವಿಗಳು, ರಾಮನ್‌ರವರನ್ನು ಅರಸಿ ಬಂದುವು. ಅಮೇರಿಕದ ಆಪ್ಟಿಕಲ್‌ ಸೊಸೈಟಿಯ ಸದಸ್ಯತ್ವ (೧೯೪೧), ಫ್ರಾಂಕ್ಲಿನ್ ಇನ್ಸ್‌ಸ್ಟಿಟ್ಯೂಟಿನ ಫ್ರಾಂಕ್ಲಿನ್ ಪದಕ (೧೯೪೨), ಭಾರತದ ರಾಷ್ಟ್ರೀಯ ಪ್ರಾಧ್ಯಾಪಕತ್ವ (೧೯೪೮), ಸೋವಿಯತ್ ರಷ್ಯದ ಲೆನಿನ್ ಪ್ರಶಸ್ತಿ (೧೯೫೪), ಪೋಪರಿಂದ ನೀಡಲ್ಪಟ್ಟ “ಪಾಂಟಿಫಿಕಲ್ ಅಕಾಡಮಿ ಆಫ್ ಸೈನ್ಸ್”ನ ಸದಸ್ಯತ್ವ (೧೯೬೧). ಹೀಗೆ ವರ್ಷವರ್ಷವೂ ಗೌರವಗಳು ಸಂದುವು.

ಭಾರತದಲ್ಲಿ ಭಾರತೀಯನಿಗೆ ಸಲ್ಲಬಹುದಾದ ಬಹು ದೊಡ್ಡ ಗೌರವ “ಭಾರತ ರತ್ನ” ಪ್ರಶಸ್ತಿ. ೧೯೫೪ರಲ್ಲಿ ರಾಮನ್ “ಭಾರತ ರತ್ನ”ರಾದರು.

ಸಂಗೀತಪ್ರಯರಾದ ರಾಮನ್ “ನಾನು ಕೇಳಬೇಕೆಂದಿರುವ ಸಂಗೀತವನ್ನು ಕೇಳಿಲ್ಲ. ಅದಕ್ಕಾಗಿ ನಾನು ದೀರ್ಘಕಾಲ ಬದುಕುಬೇಕು” ಎಂದು ಹೇಳುತ್ತಿದ್ದರು. ಬೆಂಗಳೂರಿನ ಬಳೆಪೇಟೆಯಲ್ಲಿರುವ ಸಂಗೀತ ವಾದ್ಯಗಳ ಅಂಗಡಿಗೆ ಅವರು ಆಗಾಗ ಹೋಗುತ್ತಿದ್ದರು. ಮೃದಂಗ, ತಬಲ, ಪಿಟೀಲು, ನಾಗಸ್ವರ ಮೊದಲಾದ ವಾದ್ಯಗಳ ಸಂಗ್ರಹವನ್ನು ಅವರು ಮಾಡಿದರು. ಪಿಟೀಲು (ವಯಾಲಿನ್)ಗಳ ಅಧ್ಯಯನಕ್ಕೆ ಮೀಸಲಾದ ಅಮೇರಿಕದ “ಕ್ಯಾಟ್‌ಗಟ್‌ ಅಕೂಸ್ಟಿಕಲ್ ಸೊಸೈಟಿ”ಯು ರಾಮನ್‌ರನ್ನು ಗೌರವ ಸದಸ್ಯರನ್ನಾಗಿ ಆರಿಸಿ ಮನ್ನಣೆ ನೀಡಿತು.

ರಾಮನ್‌ರು ಸಂಶೋಧನಾ ಕ್ಷೇತ್ರಕ್ಕೆ ಕಾಲಿರಿಸಿದಾಗ ಆಧುನಿಕ ಭೌತವಿಜ್ಞಾನ ಆಗತಾನೇ ಚಿಗುರತೊಡಗಿತ್ತು. ಅವರು ತಮ್ಮದೇ ಆದ ವಿಜ್ಞಾನ  ಸಂಸ್ಥೆಯಲ್ಲಿ ಸಂಶೋಧನೆ ನಡೆಸುತ್ತಿದ್ದಾಗ, ಆಧುನಿಕ ಭೌತವಿಜ್ಞಾನ ಶಾಖೋಪಶಾಖೆಗಳಾಗಿ ಬೆಳೆದಿತ್ತು. ಆರು ದಶಕಗಳ ಹಿಂದೆ ಇಲ್ಲದ ಆಧುನಿಕ ಉಪಕರಣಗಳು, ವಿಧಾನಗಳು ಸಂಶೋಧಕನೊಬ್ಬನ ಪಾಲಿಗೆ ಸಿಗುತ್ತಿತ್ತು. ಸಂಶೋಧಕರು ಒಂದು ವಿಷಯವನ್ನು ಆರಿಸಿಕೊಳ್ಳುತ್ತಿದ್ದರು. ಅದರ ವಿವಿಧ ಅಂಶಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿಯುತ್ತಾ ಒಂದು ಸಣ್ಣ ಕ್ಷೇತ್ರದಲ್ಲಿ ಅಧಿಕ ಪರಿಣತಿ ಪಡೆಯುವುದರಲ್ಲಿ ಒಲವು ತೋರಿಸುತ್ತಿದ್ದರು. ಆದರೆ ರಾಮನ್ ತಮ್ಮ ಚಟುವಟಿಕೆ, ಅಸಕ್ತಿಗಳನ್ನು ಯಾವುದೇ ಒಂದು ಪುಟ್ಟ ಕ್ಷೇತ್ರಕ್ಕೆ ಸೀಮಿತಗೊಳಿಸಲಿಲ್ಲ.

ಸಾಮಾನ್ಯ ಕಾಯಿಲೆಗಳನ್ನು ಪರೀಕ್ಷಿಸಿ, ಔಷಧ ನೀಡಿ, ಗುಣಪಡಿಸುವ ಡಾಕ್ಟರರನ್ನು ಜನರಲ್‌ ಪ್ರಾಕ್ಟಿಷನರ್ ಎನ್ನುವುದು ವಾಡಿಕೆ. ಬೆಂಗಳೂರಿನಲ್ಲೊಮ್ಮೆ ಅವರು “ಜನರಲ್ ಪ್ರಾಕ್ಟಿಷನರ್ ಗಳ ಸಮ್ಮೇಳನ”ದಲ್ಲಿ ಭಾಗವಹಿಸುತ್ತಾ “ನಾನು ವಿಜ್ಞಾನದಲ್ಲಿ ಒಬ್ಬ ಜನರಲ್‌ ಪ್ರಾಕ್ಟಿಷನರ್” ಎಂದು ಲಘು ಹಾಸ್ಯದಿಂದ ಹೇಳಿದರು. ಸಣ್ಣದಿರಲಿ, ದೊಡ್ಡದಿರಲಿ, ವಿಜ್ಞಾನದ ಯಾವ ಸಮಸ್ಯೆಯಾದರೂ ಅವರಿಗೆ ಇಷ್ಟ. ಅದನ್ನು ಬಗೆಹರಿಸುವುದರಲ್ಲಿ ಅವರಿಗೆ ಆಸಕ್ತಿ ಮತ್ತು ತೃಪ್ತಿ.

ಸುಮಾರು ೩೦ ವರ್ಷಗಳ ಹಿಂದೆ ತಮ್ಮೊಡನೆ ವಿದ್ಯಾರ್ಥಿ ಸಂಶೋಧಕರಾಗಿ ದುಡಿಯುತ್ತಿದ್ದ ನಾಗೇಂದ್ರನಾಥರ ಮಗಳ ಮದುವೆ ಸಂಬಂಧದಲ್ಲಿ ಏರ್ಪಡಿಸಿದ ಸಂತೋಷಕೂಟಕ್ಕೆ ಪತ್ನಿಸಮೇತರಾಗಿ ರಾಮನ್ ಹೋಗಿದ್ದರು (೧೯೬೯). ಆ ಸಂದರ್ಭದಲ್ಲಿ ನಾಗೇಂದ್ರನಾಥರನ್ನು ಪಕ್ಕಕ್ಕೆ ಕರೆದು ಭೂಕಂಪನಗಳ ಬಗ್ಗೆ ಒಂದು ಸರಿಯಾದ ಸಿದ್ಧಾಂತವನ್ನು ರೂಪಿಸಬೇಕೆಂಬ ತಮ್ಮ ಹೊಸ ಸಮಸ್ಯೆಯನ್ನು ತಿಳಿಸಿದರು. ಭೂಮಿಯ ವಾಸ್ತವ ಆಕಾರವನ್ನೂ ಭೂಕಂಪನಗಳ ತರಂಗ ಸ್ವರೂಪವನ್ನೂ ಗಣನೆಗೆ ತೆಗೆದುಕೊಂಡು ಅವುಗಳನ್ನು ವಿವರಿಸಬೇಕೆಂಬುದು ಅವರ ವನಸ್ಸಿಗೆ ಬಂದಿತ್ತು. ರಾಮನ್ ತಮ್ಮ ಗತ ಸಾಧನೆಗಳ ಬಗ್ಗೆ ಯೋಚಿಸುತ್ತಾ ತೃಪ್ತಿಯಿಂದ ಇರಲಿಲ್ಲ. ಹೊಸ ಸಾಧನೆಗಳಿಗಾಗಿ ಅವರ ಚೇತನ ತುಡಿಯುತ್ತಿತ್ತು.

ರಾಮನ್‌ರು ಮಾತನಾಡುವಾಗ ತಿಳಿಹಾಸ್ಯ ಜುನುಗುತ್ತಿತ್ತು; ವಾಸ್ತವಸ್ಥಿತಿ ಸ್ಫುಟಗೊಳ್ಳುತ್ತಿತ್ತು. “ಸಮುದ್ರದಲ್ಲಿರುವ ಮೀನುಗಳಿಗಿಂತಲೂ ಅದರ ಬಣ್ಣವೇ ನನಗೆ ಪ್ರಿಯ” ಎಂದು ಹೇಳುತ್ತಿದ್ದ ರಾಮನ್, “ಸಾಗರ ಸಂಶೋಧನೆಗಳಿಗಾಗಿ ನಮ್ಮದೇ ಆದ ಹಡಗುಗಳಿರಬೇಕು. ಭಾರತವನ್ನು ಹಿಂದೆ ವಸಾಹತುಶಾಹಿಗಳು ಕಬಳಿಸುವಂತಾಗಲು ಸಾಗರಗಳಲ್ಲಿ ನಮಗೆ ಆಸಕ್ತಿ ಇಲ್ಲದ್ದೇ ಮುಖ್ಯ ಕಾರಣ” ಎಂದು ಸಾರ್ವಜನಿಕ ಸಭೆಯಲ್ಲಿ ಸಾರಿದ್ದುಂಟು.

ಅಹಮದಾಬಾದಿನಲ್ಲಿ ಅಭಿಮಾನಿಗಳೂ ಸ್ನೇಹಿತರೂ ರಾಮನ್‌ರ ಎಂಬತ್ತನೆಯ ಹುಟ್ಟು ಹಬ್ಬ ಸಮಾರಂಭವನ್ನು ಏರ್ಪಡಿಸಿದರು. ಅನೇಕ ಜನರು ಮಾತಾನಾಡಿ ತಮ್ಮ ಪ್ರೀತಿ, ಆದರ, ವಿಶ್ವಾಸಗಳನ್ನು ವ್ಯಕ್ತಪಡಿಸಿದರು. ಹುಟ್ಟುಹಬ್ಬಗಳನ್ನು ಆಚರಿಸುವುದರಲ್ಲಿ ರಾಮನ್‌ರಿಗೆ ಸ್ವತಃ ಆಸಕ್ತಿ ಎಂದಿಗೂ ಇರಲಿಲ್ಲ. ಅಂತೂ ಕೊನೆಗೆ ಎದ್ದು ಕೃತ್ಞನತೆಗಳನ್ನು ಅರ್ಪಿಸಿದರು. ತಮ್ಮದೇ ವಿಶಿಷ್ಟ ರೀತಿಯಲ್ಲಿ ಕಣ್ಣುಮಿಟುಕಿಸುತ್ತಾ “ನನಗೆ ಸಿಂಹ ಹೃದಯವಿದೆ ಎಂದು ಯಾರಾದರೂ ಇಲ್ಲಿ ಹೇಳುತ್ತಾರೆಂದು ಆಶಿಸಿದ್ದೆ” ಎಂದರು! ಎಲ್ಲರೂ ಅಂದು ಹೇಳಲು ಮರೆತಿದ್ದ ಧೈರ್ಯಗುಣವೇ ರಾಮನ್‌ರ ಸಂಪತ್ತಾಗಿತ್ತು.

ರಾಮನ್‌ ಯಾವಾಗಲೂ ಅಭ್ಯಾಸ ಮಾಡುತ್ತಿದ್ದರು. ಹೊಸ ಸಂಶೋಧನೆಗಳ ಬಗ್ಗೆ ಅವರು ದಿನವೂ ತಿಳಿಯುತ್ತಿದ್ದರು. ಜಗತ್ತಿನ ಅನೇಕ ವಿಜ್ಞಾನಿಗಳೊಡನೆ ವೈಯಕ್ತಿಕ ಸಂಪರ್ಕವನ್ನು ಇಟ್ಟುಕೊಂಡಿದ್ದರು. ಹೊಸತಾಗಿ ಪ್ರಕಟಗೊಂಡ ವಿಜ್ಞಾನ ಗ್ರಂಥಗಳನ್ನೂ ವಿವಿಧ ವಿಜ್ಞಾನ ಕೇಂದ್ರಗಳಿಂದ ಬರುತ್ತಿದ್ದ ಸಂಶೋಧನಾ ಲೇಖನಗಳನ್ನೂ ಓದುತ್ತಿದ್ದರು. “ಒಂದು ಗಂಟೆಯ ಉಪನ್ಯಾಸದಿಂದ ಎಷ್ಟು ಕಲಿಯಬಹುದು? ಗ್ರಂಥಾಲಯದಲ್ಲಿ ಹೆಚ್ಚು ಸಮಯ ಕಳೆಯಿರಿ” ಎಂದು ಅವರು ತಾವು ಕಲಿತ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿಗಳಿಗೆ ಒಮ್ಮೆ ಹಿರಯಣ್ಣನಂತೆ ಹಿತಮಾತುಗಳನ್ನಾಡಿದರು. ಅವರಂತೂ ಓದು, ಪ್ರಯೋಗಶೀಲತೆಗಳಲ್ಲಿ ಚಿರಂತನ ವಿದ್ಯಾರ್ಥಿಯಾಗಿಯೇ ಉಳಿದರು.

“ನನಗೆ ನೊಬೆಲ್‌ ಬಹುಮಾನ ತಂದುಕೊಟ್ಟ ಉಪಕರಣ ೩೦೦ ರೂಪಾಯಿಗಳಿಗಿಂತ ಹೆಚ್ಚು ಬೆಲೆ ಬಾಳುವಂತದಲ್ಲ. ನನ್ನ ಸಂಶೋಧನ ಉಪಕರಣಗಳೆಲ್ಲ ಮೇಜಿನ ಒಂದು ಡ್ರಾಯರಿನಲ್ಲಿ ಹಿಡಿಸುವಷ್ಟು ಸರಳವಾದುವು” ಎಂದು ಅವರು ಸಂತೋಷದಿಂದ ಹೇಳುತ್ತಿದ್ದರು. ಕೆಲಸ ಮಾಡುವವರಿಗೆ ಆಂತರಿಕ ಸ್ಫೂರ್ತಿಯಿಲ್ಲದಿದ್ದರೆ ಅಪಾರ ಹಣ ಖರ್ಚು ಮಾಡಿದರೂ ಸಂಶೋಧನೆ ಸಾಗದು ಎಂದು ಅವರ ನಂಬಿಕೆ.

ಸ್ವತಂತ್ರ ಭಾರತದ ವಿಜ್ಞಾನಿಗಳು ಜಗತ್ಪ್ರಸಿದ್ಧರಾಗುವಂತಹ ಸಂಶೋಧನೆಗಳನ್ನು ಮಾಡಬೇಕೆಂದು ರಾಮನ್ ಹಂಬಲಿಸುತ್ತಿದ್ದರು. “ಇಲ್ಲಿ ಅನುಕೂಲ ಸಂಧರ್ಭ, ಸನ್ನಿವೇಶಗಳಿಲ್ಲದಿದ್ದರೆ ನಮ್ಮ ತುರುಣ ವಿಜ್ಞಾನಿಗಳು ವಿದೇಶಗಳಿಗೆ ಹೋಗಿ ಭಾರತದ ಕೀರ್ತಿಯನ್ನು ಹರಡುವುದರಲ್ಲಿ ತಪ್ಪೇನಿದೆ? ಈಸ್ಟ್ ಇಂಡಿಯಾ ಕಂಪನಿಯವರು ಭಾರತಕ್ಕೆ ಬಂದು ನೆಲಸಲಿಲ್ಲವೆ?” ಎಂದು ಅವರು ಹೇಳುತ್ತಿದ್ದರು.

ಯಾವುದೇ ಸಾಂಪ್ರದಾಯಿಕ ಹಾದಿಯನ್ನು ತುಳಿಯದ ರಾಮನ್ ನಿರ್ಭೀತರಾಗಿ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದರು. ಹೊಗಳಿಕೆ, ತೆಗಳಿಕೆಗಳೆರಡನ್ನೂ ಅವರು ಕಡೆಗಣಿಸುತ್ತಿದ್ದರು. “ಭಾರತದ ಪ್ರಮುಖ ವಿಜ್ಞಾನಿ” ಎಂದು ಅವರನ್ನು ಕರೆದಾಗ “ನಾನೊಬ್ಬ ಬರಿಯ ವಿಜ್ಞಾನಿ” ಎಂದು ವಿನಯದಿಂದ ತಿದ್ದುತ್ತಿದ್ದರು. ವಿಜ್ಞಾನಿಗಳ ಬಗ್ಗೆ ಟೀಕೆ ಬಂದಾಗ, “ಅವರು ನಾಡಿನ ಸಾರ” ಎಂದು ಅಭಿಮಾನದಿಂದ ಉತ್ತರಿಸುತ್ತಿದ್ದರು.

ದೇವರು, ಧರ್ಮಗಳ ವಿಚಾರ ಅವರು ಹೆಚ್ಚು ಮಾತನಾಡುತ್ತಿರಲಿಲ್ಲ. ವಿಜ್ಞಾನ ಅವರಿಗೆ ದೇವರ ಸಮಾನವಾಗಿತ್ತು. ಕೆಲಸ ಮಾಡುವುದು ಅವರ ಧರ್ಮವಾಗಿತ್ತು. “ಹೊಸ ಸಂಶೋಧನೆಗಳು ದೇವರ ಅಸ್ತಿತ್ವವನ್ನು ಸಾರುತ್ತವೆ. ದೇವರಿದ್ದರೆ ಅವನನ್ನು ಈ ವಿಶ್ವದಲ್ಲಿ ಕಾಣಬೇಕು” ಎಂದು ಅವರು ನಂಬಿದ್ದರು.

ಒಮ್ಮೆ ಒಬ್ಬರು ಪತ್ರಕರ್ತರು “ವೈಜ್ಞಾನಿಕ ಕೆಲಸ ಮತ್ತು ಸಾಧನೆಗಳನ್ನೊಳಗೊಂಡ ನಿಮ್ಮ ದೀರ್ಘ ಜೀವನದ ಬಗ್ಗೆ ನಿಮಗೇನೆನಿಸುತ್ತದೆ?” ಎಂದು ರಾಮನ್‌ರನ್ನು ಕೇಳಿದರು. “ಅದನ್ನು ಹೇಳಲು ನನಗೆ ಸಮಯವೂ ಇಲ್ಲ, ಮನಸ್ಸೂ ಇಲ್ಲ. ವಿಜ್ಞಾನಿಯಾಗಿ ನಾನು ಜೀವನ ಕಳೆಯುತ್ತೇನೆ. ನಾನು ಮಾಡುವ ಕೆಲಸ ನನಗೆ ತೃಪ್ತಿ ನೀಡುತ್ತದೆ” ಎಂಬುದಷ್ಟೇ ರಾಮನ್ ಅದಕ್ಕೆ ಕೊಟ್ಟ ಉತ್ತರ.

ತಮ್ಮ ೮೨ನೇ ವಯಸ್ಸು ತುಂಬುತ್ತಿದ್ದಂತೆಯೇ, ೧೯೭೦ರ ಸೆಪ್ಟೆಂಬರನಲ್ಲಿ ಅಕಾಡಮಿಯ ಒಂದು ವಾರದ ಸಭೆಯನ್ನು ರಾಮನ್ ಜರುಗಿಸಿದರು. ಆಗ ತರುಣ ವಿಜ್ಞಾನಿಗಳನ್ನು ಬೇರೆ ಬೇರೆ ವಿಷಯಗಳ ಮೇಲೆ ಸಂಶೋಧನ ಲೇಖನಗಳನ್ನು ಓದಲು” ಕೇಳಿಕೊಂಡರು.

ಪ್ರತಿ ವರ್ಷವೂ ಗಾಂಧೀಜಿಯವರ ಜನ್ಮ ದಿನದಂದು ರಾಮನ್‌ರು ವಿಜ್ಞಾನ ವಿಷಯದಲ್ಲಿ ಜನಪ್ರಿಯ ಭಾಷಣ ಮಾಡುತ್ತಿದ್ದರು. ೧೯೭೦ರ ಅಕ್ಟೋಬರ್ ನಲ್ಲಿ ಅವರು ಕಿವಿ ತಮಟೆ ಮತ್ತು ಧ್ವನಿಗ್ರಹಣದ ತಮ್ಮ ಸಿದ್ಧಾಂತಗಳನ್ನು ವಿವರಿಸಿದರು. ಅದೇ ಅವರ ಕೊನೆಯ ಭಾಷಣ.

ಎಂಬತ್ತಮೂರನೇ ಹುಟ್ಟು ಹಬ್ಬಕ್ಕೆ (ನವೆಂಬರ್ ೭) ಕೆಲವು ದಿನಗಳಿವೆಯೆನ್ನುವಾಗ ರಾಮನ್‌ರಿಗೆ ಲಘು ಹೃದಯಾಘಾತಮಾಯಿತು ಆದರೆ ಅದರಿಂದ ಅವರು ಬೇಗನೆ ಚೇತರಿಸಿಕೊಂಡರು. ಕೆಲಸ ಮಾಡಲಾಗದ ಜೀವನವನ್ನು ಅವರು ಕನಸಿನಲ್ಲೂ ಬಯಸಿದವರಲ್ಲ. “ನೂರಕ್ಕೆ ನೂರು ಪಾಲು ವಾಸಿಯಾಗಿ ಉಪಯುಕ್ತ ಜೀವನ ನಡೆಸುವಂತಾದರೆ ಮಾತ್ರ ನನಗೆ ಬದುಕಲು ಇಷ್ಟ.” ಎಂದು ಅವರು ಡಾಕ್ಟರರೊಡನೆ ಹೇಳಿದ್ದರು.

ಜೀವನವಿಡೀ ಸತ್ಯಾನ್ವೇಷಕರಾಗಿದ್ದ ರಾಮನ್ ೧೯೭೦ರ ನವೆಂಬರ್ ೨೧ರಂದು ತೀರಿಹೋದರು.

ರಾಮನ್‌ರ ಅನಂತರ ಅವರ ಇಬ್ಬರು ಗಂಡು ಮಕ್ಕಳಲ್ಲಿ ಕಿರಿಯರಾದ ರಾಧಾಕೃಷ್ಣನ್ ರಾಮನ್ ಸಂಶೋಧನ ಸಂಸ್ಥೆಯ ಡೈರೆಕ್ಟರರಾದರು.

ಬಾಹ್ಯಪ್ರೇರಣೆ, ಪ್ರೊತ್ಸಾಹಗಳಿಲ್ಲದೆ ಬಾಲ್ಯದಲ್ಲೇ ರಾಮನ್ ವಿಜ್ಞಾನ ಕ್ಷೇತ್ರವನ್ನು ಪ್ರವೇಶಿಸಿದ್ದರು. ಬೆಳಕು, ಧ್ವನಿಗಳ ರಹಸ್ಯಗಳಿಂದ ವಿಶೇಷವಾಗಿ ಆಕರ್ಷಿತರಾಗಿ ವಿಜ್ಞಾನ ಪ್ರಪಂಚದಲ್ಲಿ ಮುನ್ನಡೆದರು. ವಿಜ್ಞಾನ ಕ್ಷೇತ್ರದಲ್ಲಿ ತಮ್ಮ ಸಾಧನೆ, ಸ್ವಾಭಿಮಾನಗಳಿಂದ ಭಾರತಕ್ಕೆ ಸ್ಥಾನ ಗಳಿಸಿದರು.

ವಿಜ್ಞಾನ ಸಂಸ್ಥೆಗಳನ್ನು ಕಟ್ಟಿ, ವಿಜ್ಞಾನ ಪತ್ರಿಕೆಗಳನ್ನು ಪ್ರಕಟಿಸಿ, ಯುವ ವಿಜ್ಞಾನಿಗಳನ್ನು ಪ್ರೋತ್ಸಾಹಿಸಿ ಭಾರತದಲ್ಲಿ ವಿಜ್ಞಾನ ಪರಂಪರೆಗೆ ತಳಹದಿ ಹಾಕಿದ ರಾಮನ್ “ಭಾರತೀಯ ವಿಜ್ಞಾನ ಪಿತಾಮಹ”ರಾದರು.

ವಿಷಯಗಳನ್ನು ತಿಳಿಯುವುದರಲ್ಲಿ ಎಳೆಯ ಬಾಲಕನ ಲವಲವಿಕೆ: ಪ್ರಕೃತಿಯ ರಹಸ್ಯಗಳನ್ನು ತಿಳಿಯುವುದರಲ್ಲಿ ತ್ರಕಾಲಜ್ಞಾನಿಯ ಪ್ರತಿಭೆ – ಇವೆರಡೂ ರಾಮನ್‌ರಲ್ಲಿದ್ದುವು. ಆದ್ದರಿಂದಲೇ ಆ ಮಹಾವಿಜ್ಞಾನಿಯದೊಂದು ಋಷಿ ಜೀವನ.