(ಕ್ರಿ. ಶ. ೧೮೮೮-೧೯೭೦) (ರಾಮನ್ ಪರಿಣಾಮ)

ಶಬ್ದ ಮತ್ತು ಬೆಳಕಿನ ಬಗ್ಗೆ ವಿಶೇಷ ಸಂಶೋಧನೆ ಮಾಡಿ ವಿಶ್ವವಿಖ್ಯಾತರಾದವರು ಸರ್ ಸಿ. ವಿ. ರಾಮನ್ (ಚಂದ್ರಶೇಖರ್ ವೆಂಕಟರಾಮನ್.) ಅವರು ನವೆಂಬರ್ ೭, ೧೮೮ರಂದು ತಿರುವನೈಕಾವಲ್ ಎಂಬಲ್ಲಿ ಜನಿಸಿದರು. ತಂದಯ ಹೆಸರು ಚಂದ್ರಶೇಖರ್ ತಾಯಿ ಪಾರ್ವತಿ ಅಮ್ಮಾಳ್.

ರಾಮನ್ ರ ತಂದೆ ಅಧ್ಯಾಪಕರಾಗಿದ್ದರು. ಆದರೆ ಕುಟುಂಬ ದೊಡ್ಡದಾಗಿದ್ದರಿಂದ ಬಡತನದ ಸ್ಥಿತಿಯಲ್ಲಿದ್ದರು. ರಾಮನ್ ಗೆ ಸಾಕಷ್ಟು ಶೈಕ್ಷಣಿಕ ಸೌಕರ್ಯಗಳನ್ನು ಒದಗಿಸುವ ಅನುಕೂಲ್ಯ ಅವರಿಗಿರಲಿಲ್ಲ. ಆದರೆ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ರಾಮನ್ ಹದಿನಾರನೇ ವಯಸ್ಸಿನಲ್ಲೇ ಬಿ.ಎ. ಮುಗಿಸಿಕೊಂಡರು. ತರುವಾಯ ಎಂ.ಎ. ಪರೀಕ್ಷೆಯಲ್ಲೂ ಪಾಸಾಗಿ ಅರ್ಥಶಾಖೆಯ ಅಧಿಕಾರಿಯಾಗಿ ಸೇವೆಯಲ್ಲಿ ತೊಡಗಿದರು. ವಿದ್ಯಾರ್ಥಿಯಾಗಿದ್ದಾಗ ವೈಜ್ಞಾನಿಕ ಪ್ರಯೋಗಗಳಲ್ಲಿ ತೋರುತ್ತಿದ್ದ ಆಸಕ್ತಿಯನ್ನು ಅವರು ವೃತ್ತಿನಿರತರಾಗಿದ್ದಾಗಲೂ ಮುಂದುವರಿಸಿದರು.

“ರಾಮನ್ ಪರಿಣಾಮ ” (ರಾಮನ್ ಇಫೆಕ್ಟ್ ) ಎಂಬ ತತ್ತ್ವವು ವಿಜ್ಞಾನಕ್ಕೆ ಸರ್ ಸಿ. ವಿ. ರಾಮನ್ ರ ಒಂದು ದೊಡ್ಡ ಕೊಡುಗೆಯಾಗಿದೆ. “ಆಕಾಶವೇಕೆ ನೀಲಿ?” ಎಂಬ ಪ್ರಶ್ನೆ ರಾಮನ್ ರನ್ನು ಮೊದಲಿನಿಂದಲೂ ಕಾಡುತ್ತಿತ್ತು. ಅದಕ್ಕೆ ಉತ್ತರ ಕಂಡು ಹಿಡಿಯಲು ಪ್ರಯೋಗ ಮಾಡುತ್ತ ಅವರು ಕಳೆದ ದಿನಗಳೆಷ್ಟೊ! ವಿದೇಶ ಪ್ರಯಾಣದಲ್ಲಿದ್ದಾಗ ಸಮುದ್ರದ ನೀಲಿ ಬಣ್ಣದ ಕಾರಣವನ್ನು ಅರಿಯಲು ಪ್ರಯೋಗ ಮಾಡುತ್ತ ಹಡಗಿನಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದರಂತೆ!

ವಾತಾವರಣದಲ್ಲಿಯ ಕಣಗಳು ಬೆಳಕನ್ನು ಭಾಗಶಃ ಚದುರಿಸುವವು. ಹೀಗೆ ಬೆಳಕು ಚದುರಿದಾಗ ಅದರ ಎಲ್ಲ ಬಣ್ಣಗಳೂ ಚದುರುವುವು. ಹೆಚ್ಚು ಚದುರದ ಕೆಂಪು ಬೆಳಕು ದಿಗಂತದ ಸಮೀಪ ಸೂರ್ಯಕಾಣುವ ಪ್ರದೇಶದಲ್ಲಿ ಕಂಗೊಳಿಸುವುದು. ಉಳಿದದ್ದು ಆಕಾಶಕ್ಕೆ ನೀಲಿ ಬಣ್ಣವನ್ನು ನೀಡುವುದು. ಬೆಳಕು ಚದುರುವಾಗ ಶಕ್ತಿಯ ಸ್ವೀಕಾರ ಅಥವಾ ದಾನ ಬೆಳಕಿನ ತರಂಗಾಂತರವನ್ನು ನಿರ್ದಿಷ್ಟವಾಗಿ ಬದಲಾಯಿಸುವ ಸಾಧ್ಯತೆ ಲಕ್ಷ್ಯದಲ್ಲೊಂದು ಮಾತ್ರ. ಎಂದರೆ ಒಂದು ಲಕ್ಷ ಬೆಳಕಿನ ಕಣಗಳು ಚದುರಿದಾಗ ಒಂದು ಮಾತ್ರ ರಾಮನ್ ಪರಿಣಾಮಕ್ಕೆ ಒಳಗಾಗುವುದು. ಇದನ್ನೇ “ರಾಮನ್ ಪರಿಣಾಮ ” ಎಂದು ಕರೆಯಲಾಗುತ್ತದೆ. ಇದು ಅನ್ವಯಿಕ ಉಪಯುಕ್ತತೆಯುಳ್ಳ ತತ್ತ್ವ.

ಆಕಾಶದ ನೀಲಿ ಬಣ್ಣ ರಾಮನ್ ರ ಕುತೂಹಲ ಕೆರಳಿಸಿ ಪ್ರಯೋಗಕ್ಕೆ ತೊಡಗಿಸಿತಷ್ಟೆ. ಹಾಗೇ ನಾನಾತರದ ಹೂಗಳ ಬಣ್ಣದಿಂದಲೂ ಅವರು ಚಕಿತರಾಗುತ್ತಿದ್ದರು. ಸಿ. ವಿ. ರಾಮನ್ ಬೆಂಗಳೂರನ್ನು ತಮ್ಮ ಕಾರ್ಯಕ್ಷೇತ್ರವಾಗಿ ಮಾಡಿಕೊಂಡಿದ್ದರು. “ರಾಮನ್ ರೀಸರ್ಚ್ ಇನ್ ಸ್ಟಿಟ್ಯೂಟ್ ” ವಿಶೇಷವಾಗಿ ಭೌತಶಾಸ್ತ್ರದ ಅತ್ಯಂತ ಪ್ರಮುಖ ಸಂಶೋಧನ ಸಂಸ್ಥೆಯಾಗಿದೆ. ಇದು ಅವರು ಭಾವಿ ಸಂಶೋಧಕರಿಗೆ ಬಿಟ್ಟುಹೋಗಿರುವ ಕೊಡುಗೆ.

“ಭಾರತರತ್ನ” ಪ್ರಶಸ್ತಿ ಮತ್ತು ನೊಬೆಲ್ ಪಾರಿತೋಷಕ ಪಡೆದ ಸರ್ ಸಿ. ವಿ. ರಾಮನ್ ನವೆಂಬರ್ ೨೧, ೧೯೭೦ರಂದು ನಿಧನರಾದರು.