ಬೆಂಗಳೂರು ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಚೌಡಸಂದ್ರ ಗ್ರಾಮದಲ್ಲಿ ೧೯೧೬ರಲ್ಲಿ ಹೊನ್ನಪ್ಪ ಭಾಗವತರು ಬಹು ಬಡತನದ ಕುಟುಂಬದಲ್ಲಿ ಜನ್ಮ ತಾಳಿದರು. ಬಾಲ್ಯದಲ್ಲೇ ಪಿತೃವಿಯೋಗ ಹೊಂದಿ ತಮ್ಮ ಕಲಾಸಕ್ತಿಗಳಿಗೆ ಪೋಷಣೆ ನೀಡುವವರಿಲ್ಲದೇ ಪರಿತಪಿಸುತ್ತಿದ್ದ ಬಾಲಕ ಹೊನ್ನಪ್ಪನಿಗೆ ಭಜನ ಮಂದಿರ ಮತ್ತೆ ಅಲ್ಲಿನ ಗೋಷ್ಠಿ ಸಂಗೀತಗಳು ದಿಕ್ಸೂಚಿಯಾದುವು. ಕಂಚಿನ ಕಂಠದ ಈ ಬಾಲಕನ ಹಾಡಿಕೆಗೆ ಮೆಚ್ಚಿ ಶ್ರೀ ಸಂಬಂಧಮೂರ್ತಿ ಭಾಗವತರು ತಮ್ಮೊಡನೆ ಇರಿಸಿಕೊಂಡು ಅವರಿಗೆ ಕಥಾ ಕಾಲಕ್ಷೇಪವನ್ನು ಕಲಿಸಿ ನಂತರ ಶಾಸ್ತ್ರೀಯ ಸಂಗೀತವನ್ನು ಕಲಿಸಿದರು. ಮುಂದೆ ಹಾರ್ಮೋನಿಯಂ ಅರುಣಾಚಲಪ್ಪನವರಿಂದ ಅವರ ಕಲಾ ಕುಸುಮ ಅರಳಿತು.

ಸಂಗೀತ ನಾಟಕ ಚಲನಚಿತ್ರ ಹಾಗೂ ಹರಿಕಥಾ ಪಟುವಾಗಿ ಕೀರ್ತಿ ಪಡೆದ ಏಕಮೇವ ಕಲಾವಿದರೆಂದು  ಭಾಗವತರನ್ನು ಹೇಳಬಹುದು. ಯಕ್ಷಗಾನದಲ್ಲಿ ಹಾಡುತ್ತ, ಅಭಿನಯಿಸುತ್ತಿದ್ದ ಭಾಗವತರು ಗುಬ್ಬಿ ವೀರಣ್ಣನವರ ನಾಟಕಗಳಲ್ಲಿ ಪಾತ್ರ ಮಾಡುತ್ತ ಮುಂದೆ ತಮ್ಮದೇ ಒಂದು ನಾಟಕ ಕಂಪೆನಿ ಸ್ಥಾಪಿಸಿ ಹಲವಾರು ಉತ್ತಮ ನಾಟಕಗಳನ್ನು ಪ್ರದರ್ಶಿಸಿದರು. ಸುಮಾರು ಹದಿನೈದು  ತಮಿಳು ಚಿತ್ರಗಳಲ್ಲೂ, ಐದಾರು ಕನ್ನಡ ಚಿತ್ರಗಳಲ್ಲೂ ನಟಿಸಿದ್ದಲ್ಲದೇ ನಿರ್ಮಾಪಕರಾಗಿ ಬಿ.ಸರೋಜಾದೇವಿ, ಕು.ರಾ.ಸೀತಾರಾಮಶಾಸ್ತ್ರಿ, ಪಂಡರಿಬಾಯಿಯಂತಹವರನ್ನು ಚಲನಚಿತ್ರ ರಂಗಕ್ಕೆ ಪ್ರವೇಶ ಮಾಡಿಸಿದರು.

೧೯೬೪ರಲ್ಲಿ ‘ನಾದ ಬ್ರಹ್ಮ ಸಂಗೀತ ವಿದ್ಯಾಲಯ’ವನ್ನು ಸ್ಥಾಪಿಸಿ ತನ್ಮೂಲಕ ಅನೇಕ ಶಿಷ್ಯರಿಗೆ ತರಬೇತಿ ನೀಡಿದರು. ಸಂಸ್ಕೃತ, ತೆಲುಗು, ಕನ್ನಡ ಭಾಷೆಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಅತ್ಯುತ್ತಮ ನಟನಾಗಿ ಕೇಂದ್ರ ಸರ್ಕಾರದ ಪುರಸ್ಕಾರಗಳನ್ನೂ, ಆಂಧ್ರಪ್ರದೇಶದ ಶ್ರೀಶೈಲ ಮಠದಿಂದ ‘ನಟಚಾರ್ಯ’ ಬಿರುದನ್ನು, ಮಲ್ಲಾಡಿಹಳ್ಳಿಯ ಅನಂತ ಸೇವಾಶ್ರಮದಿಂದ ‘ಗಾನಾಭಿನಯ ಚಂದ್ರ’ ಪ್ರಶಸ್ತಿಯನ್ನೂ ಗಳಿಸಿರುವುದರ ಜೊತೆಗೆ ಗಾಯಕರಾಗಿ ‘ಗಾಯಕ ಶಿಖಾಮಣಿ’, ಗಾನ ಕಲಾಭೂಷಣ’, ‘ಗಾನಕಲಾ ಗಂಧರ್ವ’, ರಾಜ್ಯ ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿಗಳ ಪುರಸ್ಕಾರಗಳನ್ನು ಪಡೆದ ಭಾಗವತರ ಶ್ರೀಮಂತ ಧೀಮಂತ ಆತ್ಮಜ್ಯೋತಿ ೧೯೯೭ರಲ್ಲಿ ಅನಂತದಲ್ಲಿ ವಿಲೀನವಾಯಿತು.