ಸಂಗೀತ, ಸಾಹಿತ್ಯ, ನಾಟಕ, ಸಿನಿಮಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಕಲಾ ಛಾಪನ್ನು ಮೂಡಿಸಿ ಜನಮನ್ನಣೆ ಪಡೆದು ಖ್ಯಾತನಾಮರಾದವರು ವಿದ್ವಾನ್‌ ಸಿ. ಹೊನ್ನಪ್ಪ ಭಾಗವತರು. ಯಾವುದಾದರೊಂದು ಕಲೆಯನ್ನು ಆಳವಾಗಿ ಒಳಹೊಕ್ಕಲು ಒಂದು ಜನ್ಮ ಸಾಲದು ಎಂದೆನ್ನುವ ಕಲಾವಿದರ ಮಧ್ಯೆ ಅನೇಕ ಕಲೆಗಳನ್ನು ತಮ್ಮ ಸಾಧನಾ ಬಲದಿಂದ, ಮನಸ್ಥೈರ್ಯದಿಂದ ತಮ್ಮದಾಗಿಸಿಕೊಂಡು, ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಕಲಾ ಪ್ರೌಢಿಮೆಯಿಂದ ದಿಗ್ವಿಜಯ ಸಾಧಿಸಿದ ಕೀರ್ತಿ ಇವರದು.

ಬೆಂಗಳೂರಿನಿಂದ ಇಪ್ಪತ್ತೆರಡು ಮೈಲಿ ದೂರದಲ್ಲಿರುವ ನೆಲಮಂಗಲ ತಾಲ್ಲೂಕಿನ ಚೌಡಸಂದ್ರ ಗ್ರಾಮದಲ್ಲಿದ್ದ ಗಮಕಿ ಚಿಕ್ಕಲಿಂಗಪ್ಪ ಮತ್ತು ಕಲ್ಲಮ್ಮ ದಂಪತಿಗಳಿಗೆ ದಿನಾಂಕ ೧೪.೧.೧೯೧೫ರಂದು ಹೊನ್ನಪ್ಪನವರು ಜನಿಸಿದರು. ಗಮಕಿಯಾಗಿದ್ದ ಇವರ ತಂದೆಯ ಕಲಾ ಸಂಸ್ಕಾರದಿಂದಲೋ ಏನೋ ಸಣ್ಣ ಬಾಲಕ ಹೊನ್ನಪ್ಪನಿಗೆ ಸಂಗೀತ ಕಲೆಯಲ್ಲಿ ಅಪಾರವಾದ ಆಸಕ್ತಿ. ಇವರ ಕಲಾಸಕ್ತಿ ಮೊಳೆಯುತ್ತಿದ್ದ ವೇಳೆಗಾಗಲೇ ಅಂದರೆ, ಹೊನ್ನಪ್ಪನ ಐದನೆಯ ವಯಸ್ಸಿಗಾಗಲೇ ಇವರ ತಂದೆ ವಿಧಿವಶರಾದರು. ಸಂಸಾರದ ಜವಾಬ್ದಾರಿ ಇವರ ಮೇಲೆ ಬಿದ್ದು ಇವರ ಕಲಾಸಕ್ತಿಗೆ ಪೋಷಣೆ ನೀಡುವವರಿಲ್ಲದಂತಾಗಿ ನಿರಾಶರಾದರು. ಈ ಮಧ್ಯೆ ತಂದೆಯ ಊರಾದ ಚೌಡಸಂದ್ರದಿಂದ ಎರಡುಮೈಲಿ ದೂರದಲ್ಲಿದ್ದ ತಾಯಿಯ ತೌರೂರಾದ ಮೋಟಗಾನ ಹಳ್ಳಿಗೆ ಹೊನ್ನಪ್ಪ ಆಗಾಗ್ಗೆ ಹೋಗಿ ಬರುತ್ತಾ  ಇದ್ದರು.

ಕಲೆಯೊಂದಿಗೆ ಒಡನಾಟ: ಮೋಟಗಾನ ಹಳ್ಳಿಯು ಕಲಾ ಸಂಸ್ಕಾರವನ್ನು ಹೊಂದಿದ್ದ ಹಳ್ಳಿಯಾಗಿತ್ತು. ಅಲ್ಲಿ ಭಜನೆ, ಬಯಲಾಟ, ಯಕ್ಷಗಾನಗಳಂತಹ ಕಾರ್ಯಕ್ರಮಗಳು ನಡೆಯುತ್ತಲೇ ಇದ್ದವು. ಬಾಲಕ ಹೊನ್ನಪ್ಪನನ್ನು ಅಲ್ಲಿನ ಭಜನೆ ಮನೆಯ ಸಂಗೀತ ಬಹಳವಾಗಿ ಆಕರ್ಷಿಸಿತು. ಹಾಡುವುದನ್ನು ರೂಢಿಸಿಕೊಂಡು ಬಹು ಬೇಗ ಕಲಿತರು ಹಾಗೂ ತಾವೂ ಭಜನೆ ಹಾಡುಗಳನ್ನು ಹೇಳಿಕೊಡಲಾರಂಭಿಸಿದರು. ಭಜನೆ ಮನೆಯಲ್ಲಿ ಬಳಸಲಾಗುತ್ತಿದ್ದ ಹಾರ್ಮೋನಿಯಂ, ತಬಲಾ ವಾದ್ಯಗಳನ್ನು ನುಡಿಸುವ ಕಲಾವಿದರ ನುಡಿಸುವಿಕೆಯನ್ನು ಆಮೂಲಾಗ್ರವಾಗಿ ಗಮನಿಸಿ ಹಾಗೂ ಅವರ ನೆರವು ಪಡೆದು ತಾವೂ ಆ ವಾದ್ಯಗಳಲ್ಲಿ ಪರಿಣತಿ ಗಳಿಸಿದರು. ಈ ಮಧ್ಯೆ ತಮ್ಮ ಕಂಚಿನ ಕಂಠದಿಂದ ಹಾಡಲು ಆರಂಭಿಸಿದರು. ಬಯಲಾಟದಲ್ಲಿ ಬಾಲಕನ ಪಾತ್ರವನ್ನು ಮಾಡಿ ಜನರಿಂದ ಸೈ ಎನಿಸಿಕೊಂಡರು. ಹೀಗೆ ಹೊನ್ನಪ್ಪನವರು ಚಿಕ್ಕ ವಯಸ್ಸಿನಿಂದಲೇ ತಮ್ಮನ್ನು ಹಲವು ಕಲೆಗಳಿಗೆ ಒಗ್ಗಿಸಿಕೊಂಡು ಕಲಾ ಜೀವನಕ್ಕೆ ಪಾದಾರ್ಪಣೆ ಮಾಡಿ ಕಲೆಯೊಂದಿಗೆ ತಮ್ಮ ಒಡನಾಟವನ್ನು ಆರಂಭಿಸಿದರು.

ಕಥಾಕೀರ್ತನಕಾರರಾಗಿ ಹೊನ್ನಪ್ಪ ತಮ್ಮ ೧೫ನೆಯ ವಯಸ್ಸಿಗೆ ಬೆಂಗಳೂರಿಗೆ ಬಂದು ನೆಲೆಸಿದರು. ಒಮ್ಮೆ ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಹೊನ್ನಪ್ಪನು ಹಾಡಿದ ತ್ಯಾಗರಾಜ ಸ್ವಾಮಿಗಳ ಸುಜನ ಜೀವನ ಸುಗುಣಾವನ ಕೃತಿಯನ್ನು ಕೇಳಿ ಆತನ ಕಂಠಸಿರಿಗೆ ಮೆಚ್ಚಿದ ಅಂದಿನ ಕಥಾಕೀರ್ತನಕಾರರಾದ ಶ್ರೀ ಸಂಬಂಧ ಮೂರ್ತಿ ಭಾಗವತರು, ಹುಡುಗನಿಗೆ “ಕಥಾಕೀರ್ತನೆಯ ಪಾಠ ಹೇಳಿಕೊಡುತ್ತೇನೆ ಕಲಿತು ಕೊಳ್ಳುತ್ತೀಯಾ?” ಎಂದು ಕೇಳಿದರು. ಹೊನ್ನಪ್ಪನಿಗೆ ಸ್ವರ್ಗಕ್ಕೆ ಮೂರೇ ಗೇಣು ಎನಿಸಿತು. ಒದಗಿ ಬಂದ ಸುಕೃತಕ್ಕೆ ದೇವರಿಗೆ ವಂದಿಸಿ ಬರುವುದಾಗಿ ತಿಳಿಸಿದರು. ಶ್ರೀ ಸಂಬಂಧ ಮೂರ್ತಿ ಭಾಗವತರು ಅಂದಿನ ಪ್ರಸಿದ್ಧ ಕಥಾ ಕೀರ್ತನಕಾರರಾಗಿದ್ದ ಶ್ರೀ ಪಾರ್ಥಸಾರಥಿ ಭಾಗವತರ ಶಿಷ್ಯರು. ಉತ್ತಮ ಬೋಧಕರಾಗಿದ್ದ ಸಂಬಂಧಮೂರ್ತಿ ಭಾಗವತರು ಹೊನ್ನಪ್ಪನಿಗೆ ನಾಲ್ಕೈದು ವರ್ಷಗಳ ಕಾಲ ಕಥಾ ಕೀರ್ತನೆಯಲ್ಲಿನ ೫೦೦, ೬೦೦ ಬೆಯ ಪಿನ್‌ ಪಾಟ್ಟುಗಳನ್ನು ಕಥೆಯಮಟ್ಟುಗಳನ್ನು, ತಾಳದ ವೈವಿಧ್ಯತೆಗಳನ್ನು ಕಲಿಸಿಕೊಟ್ಟರು. ಕೆಲಕಾಲದ ನಂತರ ಪಾರ್ಥಸಾರಥಿ ಭಾಗವತರ ಕಥಾಕೀರ್ತನೆ ಕಾರ್ಯಕ್ರಮಗಳಲ್ಲಿ ಸಂಬಂಧ ಮೂರ್ತಿ ಭಾಗವತರೊಂದಿಗೆ ಹೊನ್ನಪ್ಪ ಭಾಗವತರೂ ಹಾಡಲಾರಂಭಿಸಿದರು. ಈ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಜನಪ್ರಿಯತೆಗಳಿಸತೊಡಗಿದವು. ಇದರೊಂದಿಗೆ ಹೊನ್ನಪ್ಪ ನವರು ಜನರಿಗೆ ಹೆಚ್ಚು ಪರಿಚಿತರಾಗತೊಡಗಿದರು.

ಕರ್ನಾಟಕ ಸಂಗೀತಾಭ್ಯಾಸ ಹಾಗೂ ಗುರು ಪರಂಪರೆ: ಹೊನ್ನಪ್ಪ ಭಾಗವತರಿಗೆ ಆಗ ಹತ್ತೊಂಭತ್ತು ವಯಸ್ಸು. ಶಾಸ್ತ್ರೀಯ ಸಂಗೀತವು ಸಂಗೀತ ಕಲೆಯ ತಾಯಿ ಬೇರು, ಅದನ್ನು ಕಲಿಯಲೇಬೇಕು ಎನ್ನುವ ಮಹದಭಿಲಾಷೆಯಿಂದ ಹೊನ್ನಪ್ಪನವರು ಒಂದು ದಿನ ಸಂಬಂಧ ಮೂರ್ತಿ ಭಾಗವತರನ್ನು ಸಂಗೀತ ಪಾಠ ಹೇಳಿಕೊಡುವಂತೆ ಪ್ರಾರ್ಥಿಸಿಕೊಂಡರು. ಅದಕ್ಕೆ ಸಂತೋಷದಿಂದ ಒಪ್ಪಿದ ಸಂಬಂಧಮೂರ್ತಿಗಳು ಮುಂದೆ ಒಂಧು ದಿನ ಸಪ್ತಸ್ವರಗಳ ಪಾಠವನ್ನು ಆರಂಭಿಸಿದರು. ಭಾಗವತರಾಗಿ ಕಥಾಕೀರ್ತನೆ ಕಾರ್ಯಕ್ರಮ ನೀಡುತ್ತಿದ್ದ ಹೊನ್ನಪ್ಪನವರು ಗುರು ಮನೆಯಲ್ಲಿ ಅಭ್ಯಾಸಗಾನ, ಗೀತೆ ಪಾಠ ಹೇಳಿಸಿಕೊಂಡು ಹಂತ ಹಂತವಾಗಿ ಮುಂದುವರೆದು ಆರೇಳು ವರ್ಷಗಳಲ್ಲಿ ಸಾಕಷ್ಟು ಪಾಠಗಳನ್ನು ಕಲಿತರು. ಸದಾಕಾಲ ಗುರುಮನೆಯಲ್ಲಿಯೇ ಮನೆಯ ಸದ್ಸಯನಾಗಿದ್ದುಕೊಂಡು ಮನೆಯ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತಾ ಸಂಗೀತದಲ್ಲಿ ಪರಿಣತಿ ಗಳಿಸಿದರು. ಇವರ ಗುರುಗಳಾದರೋ ಬೆಳಗಿನ ಜಾವ ನಾಲ್ಕು ಗಂಟೆಗೇ ಇವರನ್ನು ಎಬ್ಬಿಸಿ ಅಕಾರಸಾಧನೆ, ಆಗಿರುವ ಪಾಠಗಳೆಲ್ಲದರ ಅಭ್ಯಾಸ, ರಾಗ, ಸ್ವರ ಇವುಗಳ ಅಭ್ಯಾಸವನ್ನು ಕಟ್ಟುನಿಟ್ಟಾಗಿ ಮಾಡಿಸಿ ಸಂಗೀತ ಕ್ಷೇತ್ರದ ಒಬ್ಬ ಉತ್ತಮ ಗಾಯನಕ ಆಗಮನಕ್ಕೆ ತಳಪಾಯ ಹಾಕಿದರು. ಹುಡುಗನ ಸಂಗೀತ ಪ್ರಗತಿಯನ್ನು ಕಂಡು ಹಿರಿಹಿರಿ ಹಿಗ್ಗಿದರು . ಹೊನ್ನಪ್ಪನ ಸಂಗೀತ ಸಾಧನೆಯನ್ನು ಗಮನಿಸುತ್ತಿದ್ದ ಪಾರ್ಥಸಾರಥಿ ಭಾಗವತರು ಇವರ ಗಾಯನ ಕಚೇರಿಯನ್ನು ತಮಿಳುನಾಡಿನಲ್ಲಿ ಏರ್ಪಡಿಸಿದರು. ಅಂದಿನ ಪ್ರಸಿದ್ಧ ಕೊಳಲು ವಿದ್ವಾಂಸರಾಗಿದ್ದ ಟಿ.ಆರ್. ಮಹಾಲಿಂಗಂ ಅವರ ಕಚೇರಿಯ ನಂತರದ ದಿನವೇ ಇವರ ಗಾಯನ ತಮಿಳುನಾಡಿನ ಸಂಗೀತ ಪ್ರಿಯರು ಹೊನ್ನಪ್ಪ ಭಾಗವತರ ಸಂಗೀತವನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿ ಪ್ರೋತ್ಸಾಹಿಸಿದರು. ಹೊನ್ನಪ್ಪನವರಿಗೆ ಒಳ್ಳೆಯ ಹೆಸರು ಪ್ರಾಪ್ತವಾಗಿ ತಮಿಳುನಾಡಿನಲ್ಲಿ ಜನಪ್ರಿಯರಾದರು. ಆ ನಂತರ ಕಥಾಕೀರ್ತನೆಯಲ್ಲದೆ ಸಂಗೀತ ಕಚೇರಿಗಳನ್ನು ನೀಡಲಾರಂಭಿಸಿದರು. ಕೆಲಕಾಲದ ನಂತರ ಹೊನ್ನಪ್ಪನವರಿಗೆ ಒಳ್ಳೆಯ ಹೆಸರು ಪ್ರಾಪ್ತವಾಗಿ ತಮಿಳುನಾಡಿನಲ್ಲಿ ಜನಪ್ರಿಯರಾದರು. ಆ ನಂತರ ಕಥಾಕೀರ್ತನೆಯಲ್ಲದೆ ಸಂಗೀತ ಕಚೇರಿಗಳನ್ನು ನೀಡಲಾರಂಭಿಸಿದರು. ಕೆಲಕಾಲದ ನಂತರ ಹೊನ್ನಪ್ಪನವರಿಗೆ ಕುಟುಂಬದ ಸಮಸ್ಯೆಗಳು ಎದುರಾದವು. ಇದರಿಂದಾಗಿ ಬೆಂಗಳೂರು ಬಿಟ್ಟು ಮೈಸೂರಿನಲ್ಲಿ ನೆಲೆಸಬೇಕಾದ ಅನಿವಾರ್ಯತೆ ಬಂದೊದಗಿತು. ಈ ಸಂದರ್ಭದಲ್ಲಿ ಸ್ವಲ್ಪಕಾಲ ಸಂಗೀತವನ್ನೇ ಬಿಟ್ಟು ಬಿಡಬೇಕಾಯ್ತು. ಇವರ ಅಂದಿನ ಪರಿಸ್ಥಿತಿಯನ್ನು ಮನಗಂಡ ಮೈಸೂರಿನಲ್ಲಿ ನೆಲೆಸಿದ್ದ ಹಾರ್ಮೋನಿಯಂ ವಿದ್ವಾನ್‌ ಅರುಣಾಚಲಪ್ಪನವರು ಹೊನ್ನಪ್ಪನಿಗೆ ಮಾನಸಿಕ ಸ್ಥೈರ್ಯನೀಡಿ “ನಿನಗೆ ಒಳ್ಳೆಯ ಭವಿಷ್ಯವಿದೆ. ಏನೇ ಕಾರಣಕ್ಕೂ ಸಂಗೀತವನ್ನು ಬಿಡಬೇಡ” ಎಂದು ಪ್ರೋತ್ಸಾಹಿಸಿದರು. ಆದರೆ ಹೊನ್ನಪ್ಪನವರು. ನಾನು ಕಲಿಯಬೇಕಾದುದು ಸಾಕಷ್ಟಿದೆ, ನನ್ನ ಈ ಸ್ಥಿತಿಯಲ್ಲಿ ನನಗೆ ಯಾರು ಸಂಗೀತ ಹೇಳಿಕೊಡುತ್ತಾರೆ ನೀವೆಏ ಹೇಳಿ?”. ಎಂದು ಮರು ಪ್ರಶ್ನಿಸಿದರು. ಪರಿಸ್ಥಿತಿಯನ್ನು ಮನಗಂಡಿದ್ದ ಅರುಣಾಚಲಪ್ಪನವರು ತಾವೇ ಮುಂದಾಗಿ ಸಂಗೀತ ಪಾಠ ಮಾಡುವುದಾಗಿ ಮಾತು ಕೊಟ್ಟರು. ಅದರಂತೆಯೇ ಮೂರು-ನಾಲ್ಕು ವರ್ಷಗಳ ಕಾಲ ಸಂಗೀತ ಪಾಠ ಕಲಿಸಿ ಹೊನ್ನಪ್ಪ ಉತ್ತಮ ವಿದ್ವಾಂಸನಾಗುವಲ್ಲಿ ಎಲ್ಲ ಬಗೆಯ ಮಾರ್ಗದರ್ಶನ ನೀಡಿದರು. ಅನೇಕ ಮದುವೆ ಮನೆ ಕಚೇರಿಗಳನ್ನು ಏರ್ಪಡಿಸಿ ಪ್ರೋತ್ಸಾಹಿಸಿದರು ಹಾಗೂ ಇವರ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಶ್ರಮಿಸಿದರು. ಹೊನ್ನಪ್ಪನ ಕಥಾಕೀರ್ತನೆ, ಸಂಗೀತ ಕಚೇರಿಗಳಿಗೆ ಅರುಣಾಚಲಪ್ಪನವರ ಹಾರ್ಮೋನಿಯಂ ವಾದನ ಸಾಮಾನ್ಯವಾಗಿ ಇದ್ದೇ ಇರುತ್ತಿತ್ತು. ಹೊನ್ನಪ್ಪನ ಸಂಗೀತ ಜ್ಞಾನದ ಜೊತೆಗೆ ಕಂಚಿನಂತಹ ಕಂಠ, ವೇದಿಕೆಗೊಪ್ಪುವ ಸುಂದರ ಶರೀರ, ಇವರ ಕಚೇರಿಗಳು ಸಫಲವಾಗುವಲ್ಲಿ ಒತ್ತಾಸೆ ನೀಡುತ್ತಿದ್ದವು.

ಸಂಗೀತ ಕಚೇರಿ ಸಾಧನೆ: ಹೊನ್ನಪ್ಪನವರು ನಾಡಿನ, ಹೊರನಾಡಿನ ಸಂಗೀತ ಸಭೆ ಸಮಾರಂಭಗಳಲ್ಲಿ ಹಾಗೂ ಸರ್ಕಾರದ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಸಂಗೀತ ಸುಧೆ ಹರಿಸಿ ಖ್ಯಾತರಾದವರು. ೧೯೩೭ರಲ್ಲಿ ಸೇಲಂನಲ್ಲಿ ನಡೆದ ತ್ಯಾಗರಾಜರ ಉತ್ಸವ ಸಂದರ್ಭದಲ್ಲಿ ಹಾಡಿದುದೇ ಇವರ ಮೊಟ್ಟ ಮೊದಲ ಕಚೇರಿ. ಅಂದಿನ ಕಚೇರಿಯ ವಿಶೇಷವೆಂದರೆ ಇವರ ಗಾಯನಕ್ಕೆ ಎರಡು ಪಿಟೀಲು, ಎರಡು ಮೃದಂಗಗಳ ಪಕ್ಕವಾದ್ಯ . ಪಿಟೀಲು ತಾಯಪ್ಪ ಹಾಗೂ ಅವರ ಮಗ ರಾಜಪ್ಪ ಇವರುಗಳ ಪಿಟೀಲು, ಅಯ್ಯಾಮಣಿ ಐಯ್ಯರ್ ಹಾಗೂ ಪಳನಿ ಸಾಮಿ ಇವರುಗಳ ಮೃದಂಗ. ಅಂದಿನ ಕಚೇರಿ ತುಂಬಾ ಕಳೆಕಟ್ಟಿ ಹೊನ್ನಪ್ಪನವರಿಗೆ ಒಳ್ಳೆಯ ಹೆಸರು ಬಂದಿತು. ಅಂದಿನಿಂದ ಅವರು ಬೆಂಗಳೂರಿನ ಹೊನ್ನಪ್ಪಭಾಗವತರ್ ಎಂಬ ಹೆಸರಿನಿಂದ ಜನಪ್ರಿಯತೆ ಗಳಿಸಲಾರಂಭಿಸಿದರು.

೧೯೬೦ರ ದಶಕದಲ್ಲಿ ಭಾಗವತರ ಹಾಡುಗಾರಿಕೆ ಜೊತೆಗೆ ಪಿ. ಭುವನೇಶ್ವರಯ್ಯನವರ ಪಿಟೀಲು, ಎಂ.ಎಲ್‌. ವೀರಭದ್ರಯ್ಯನವರ ಮೃದಂಗ. ಈ ತ್ರಿಮೂರ್ತಿಗಳ ಕಚೇರಿ ಎಂದರೆ ಜನರು ಹಿಂಡುಹಿಂಡಾಗಿ ನುಗ್ಗಿ ಬರುತ್ತಿದ್ದರು. ಹೊನ್ನಪ್ಪ ಭಾಗವತರು ನೀಡಿರುವ ಕಚೇರಿಗಳ ಸಂಖ್ಯೆ ನೂರಾರು. ತಮಿಳುನಾಡಿನಲ್ಲಂತೂ ಇವರ ಸುಂದರ ಹಾಗೂ ಪ್ರೌಢ ಗಾಯನದಿಂದ ಅಲ್ಲಿಯ ಜನಮನ ಸೂರೆಗೊಂಡಿದ್ದರು. ಅವರ ಗಾನರಸ ಮೋಡಿಗೆ, ಪ್ರಸ್ತುತ ಪಡಿಸುತ್ತಿದ್ದ ಠೀವಿಗೆ ಶ್ರೋತೃಗಳು ಮಂತ್ರಮುಗ್ಧರಾಗುತ್ತಿದ್ದರು. ಇವೆಲ್ಲಕ್ಕೂ ಕಲಶವಿಟ್ಟಂತೆ ಭಾಗವತರದು ಮಾತೃ ಹೃದಯ, ವಿನಯ ಸ್ವಭಾವ. ದೊಡ್ಡವರು ಚಿಕ್ಕವರೆನ್ನದೆ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದರು. ಅವರ ಈ ಗುಣ ಸ್ವಭಾವಗಳೂ ಕೂಡ ಅವರನ್ನು ಅತ್ಯಂತ ಹಿರಿಯರೆನ್ನಲು ದಾರಿಮಾಡಿಕೊಟ್ಟವು.

ಭಾಗವತರ ಕಚೇರಿಗೆ ಅಂದಿನ ಎಲ್ಲ ಪ್ರಸಿದ್ಧ ಪಕ್ಕವಾದ್ಯಗಾರರೆಲ್ಲರೂ ನುಡಿಸಿದ್ದಾರೆ. ಪಿಟೀಲು ಚೌಡಯ್ಯನವರು ಇವರ ಕಚೇರಿಗೆ ಪಿಟೀಲು ನುಡಿಸಲು ಹಿಗ್ಗುತ್ತಿದ್ದರು. ಪಾಲ್‌ಘಾಟ್‌ ಮಣಿ ಐಯ್ಯರ್ ರಂತಹ ಹಿರಿಯ ವಿದ್ವಾಂಸರೆಲ್ಲರೂ ೪೦ರ ದಶಕದಲ್ಲಿಯೇ ಇವರ ಅನೇಕ ಕಚೇರಿಗಳಿಗೆ ಪಕ್ಕವಾದ್ಯ ಸಹಕಾರ ನೀಡಿದ್ದಾರೆ.

ನಾಟಕಕಾರರಾಗಿ: ಯಕ್ಷಗಾನದಲ್ಲಿ ಹಾಡುತ್ತಾ ಅಭಿನಯಿಸುತ್ತಿದ್ದ ಭಾಗವತರ ಕಲಾಪ್ರೌಢಿಮೆಯನ್ನು ವೇದಿಕೆಯಲ್ಲಿ ನೋಡಿ ಆನಂದಿಸಿದ ಅಂದಿನ ನಾಟಕ ಕಂಪನಿಯ ನೇತಾರ ಶ್ರೀ ಗುಬ್ಬಿ ವೀರಣ್ಣನವರು ತಮ್ಮ ಕಂಪನಿಯ ನಾಟಕಗಳಲ್ಲಿ ಪಾತ್ರವಹಿಸಲು ಇವರನ್ನು ಆಹ್ವಾನಿಸಿದರು. ಭಾಗವತರಲ್ಲಿದ್ದ ಸ್ಪಷ್ಟ ಉಚ್ಚಾರಣೆ, ಸುರ್ಶರಾವ್ಯ ಕಂಠಶ್ರೀ, ಎತ್ತರವಾದ ಸುಂದರ ಮೈಕಟ್ಟು, ಸ್ಫುರದ್ರೂಪ, ಕಲಾಕೌಶಲ, ಧೈರ್ಯ ಇವು ಜನತೆಯನ್ನು ಬಹಳವಾಗಿ ಸೆಳೆಯಿತು. ಪೌರಾಣಿಕ, ಸಾಮಾಜಿಕ, ಚಾರಿತ್ರಿಕ ನಾಟಕಗಳಲ್ಲಿ ನಾಯಕನಟರಾಗಿ ಮಿಂಚಿದರು . ಹೀಗೆ ನಾಟಕ ಕ್ಷೇತ್ರದಲ್ಲಿಯೂ ಭಾಗವತರು ಜಯಭೇರಿ ಗಳಿಸಿದರು. ಕೆಲಕಾಲದ ನಂತರ ಅಂದರೆ ೧೯೬೧ರಲ್ಲಿ ಇವರು ಸ್ವತಃ ಉಮಾಮಹೇಶ್ವರಿ ನಾಟಕ ಮಂಡಳಿ ಎಂಬ ನಾಟಕ ಕಂಪನಿಯೊಂದನ್ನು ಸ್ಥಾಪಿಸುವಂತಹ ದಿಟ್ಟ ಸಾಹಸಕ್ಕೆ ಕೈಹಾಕಿದರು. ಕೃಷ್ಣಲೀಲಾ, ಸಂಪೂರ್ಣ ರಾಮಾಯಣ, ಶ್ರೀನಿವಾಸ ಕಲ್ಯಾಣ, ಸುಭದ್ರಾ, ಸದಾರಮೆ, ಬ್ರೋಕರ್ ಭೀಷ್ಮಾಚಾರಿ ಮೊದಲಾದ ನಾಟಕಗಳನ್ನು ಕರ್ನಾಟಕ ರಾಜ್ಯದ ಅನೇಕ ಸ್ಥಳಗಳಲ್ಲಿ ಅಭಿನಯಿಸಿ ಕಲಾಪ್ರೇಮಿಗಳ ಅಪಾರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿ ಜನಪ್ರಿಯತೆ ಗಳಿಸಿದರು. ಈ ನಾಟಕ ಕಂಪನಿ ೧೯೬೪ರ ತನಕ ನಡೆಯಿತು. ಆರ್ಥಿಕ ಮುಗ್ಗಟ್ಟಿನಿಂದ ಮುಂದೆ ನಡೆದುಕೊಂಡುಬರಲು ಸಾಧ್ಯವಾಗಲಿಲ್ಲ.

ಚಲನಚಿತ್ರರಂಗ: ಭಾಗವತರದು ನಾನಾ ಕಲೆಗಳ ಒಡನಾಟ ಹೊಂದಿದ್ದ ರಂಗು ರಂಗಿನ ಬದುಕು. ಇವರು ಗಾಯಕರಾಗಿ ಪ್ರಸಿದ್ಧಿಪಡೆದ ಹಿನ್ನೆಲೆಯಲ್ಲಿಯೇ ಇವರ ಕಲಾಶ್ರೀಮಂತಿಕೆಯನ್ನು ಮೆಚ್ಚಿಕೊಂಡು ಅಂಬಿಕಾಪತಿ ಎಂಬ ನಿರ್ದೇಶಕರು ತಮ್ಮ ಶಂಕರ್ ಫಿಲ್ಸ್ಮ್ ಅಡಿಯಲ್ಲಿ ತಮಿಳು ಚಿತ್ರವೊಂದರಲ್ಲಿ ನಟಿಸುವಂತೆ ಆಹ್ವಾನಿಸಿದರು. ಸಿನಿಮಾಗಳಲ್ಲಿ ಮಾಡಲು ಹಿಂಜರಿಯುತ್ತಿದ್ದ ಭಾಗವತರನ್ನು ಅರುಣಾಚಲಪ್ಪನವರು “ಸಿನಿಮಾ ಕಲಾಜೀವನವೂ ಸಹ ಕಲಾವಿದನ ಕಲಾ ಕೌಶಲವನ್ನು ಹೊರಸೂಸುವ ಉತ್ತಮ ಮಾಧ್ಯಮ. ಅಲ್ಲದೆ ಸಿನಿಮಾ ಕಣ್ಣು ಕಿವಿಗಳೆರಡಕ್ಕೂ ರಂಜನೆ ನೀಡುವ ಕಲೆ. ನೀನು ಇದನ್ನು ಒಪ್ಪಿಕೊ” ಎಂದು ಬೆನ್ನುತಟ್ಟಿ ಪ್ರೋತ್ಸಾಹಿಸಿದರು. ಅಂತೆಯೇ ಭಾಗವತರು ಪಾತ್ರವಹಿಸಲು ಒಪ್ಪಿದರು. ಹಿಂದಿನ ಕಾಲದ ಸಿನಿಮಾಗಳಲ್ಲಿ ಪಾತ್ರಗಳು, ನಟನಾಗಿ ಹಾಗೆಯೇ ಗಾಯಕನಾಗಿಯೂ ಎರಡೂ ಕೆಲಸಗಳನ್ನು ನಿರ್ವಹಿಸಬೇಕಿತ್ತು. ಒಂದು ಚಿತ್ರದಲ್ಲಿ ಸುಮಾರು ೨೦ ರಿಂದ ೪೦ ಹಾಡುಗಳಿರುತ್ತಿದ್ದವು. ಇದನ್ನರಿತ ಭಾಗವತರಿಗೆ ಸಂತೋಷವೂ ಸಮಾಧಾನವೂ ಆಯಿತು. ಮುಂದೆ ನಿರ್ದೇಶಕ ಕೆ.ಸುಬ್ರಹ್ಮಣ್ಯ ಅವರ ನಿರ್ದೇಶನದ ಚಿತ್ರಗಳಲ್ಲೂ ನಟಿಸಿದರು. ಅನಂತರ ತಮಿಳು ಚಿತ್ರಗಳಾದ ಕೃಷ್ಣಕುಮಾರ, ಸತಿಸುಕನ್ಯ, ಭಕ್ತ ಕಲತಿ, ದೇವಕನ್ಯಾ, ಪ್ರಭಾವತಿ, ರಾಜರಾಜೇಶ್ವರಿ, ಕುಂಡಲಕೇಶಿ, ಅರುಂಧತಿ, ಬರ್ಮಾರಾಣಿ, ವಾಲ್ಮೀಕಿ, ಶ್ರೀಮುರುಗನ್‌, ಗೋಕುಲದಾಸಿ, ಭಕ್ತ ಜನಾಹಾರ, ದೇವಮನೋಹರಿ, ಗುಣಸಾಗರಿ, ಮುಂತಾದ ಚಿತ್ರಗಳಲ್ಲಿ ನಟಿಸಿ ಕೀರ್ತಿಗಳಿಸಿದರು. ಆಗ ತಮಿಳು ಚಿತ್ರರಂಗದ ಗಾಯಕ ನಟ ತ್ಯಾಗರಾಜ ಭಾಗವತರ್ ಉಚ್ಚ್ರಾಯಸ್ಥಿತಿಯಲ್ಲಿದ್ದ ಕಾಲ. ಅವರೊಂದಿಗೆ ಸರಿಸಮನಾಗಿ ಹಾಡಿದರು. ಈ ಭಾಗವತರ್ ದ್ವಯರ ಗಾಯನ ಕೇಳಲು ಜನ ಮುಗಿಬೀಳುತ್ತಿದ್ದರು.

೧೯೪೦ರಲ್ಲಿ ಭಾಗವತರು, ನಿರ್ಮಾಪಕ ಗುಬ್ಬಿವೀರಣ್ಣನವರ ಸುಭದ್ರಾ ಎಂಬ ಕನ್ನಡ ಚಿತ್ರದಲ್ಲಿ ನಾಟಯಕನಟರಾಗಿ ನಟಿಸಿದರು. ಈ ಚಿತ್ರ ಮೈಸೂರು ರಾಜ್ಯಾದ್ಯಂತ ನೂರಾರುದಿನಗಳು ಪ್ರದರ್ಶಿತಗೊಂಡಿತು. ಭಾಗವತರು ಕಲಾ ಲೋಕದ ಅತ್ಯುತ್ತಮ ನಟರಾಗಿ ವಿರಾಜಮಾನರಾದರು. ಮುಂದೆ ಕನ್ನಡ ಚಿತ್ರಗಳಾದ ಹೇಮರೆಡ್ಡಿ ಮಲ್ಲಮ್ಮ, ಗುಣಸಾಗರಿ, ಜಗಜ್ಜ್ಯೋತಿ ಬಸವೇಶ್ವರ, ಮಹಾಕವಿ ಕಾಳಿದಾಸ, ಪಂಚರತ್ನ ಚಿತ್ರಗಳಲ್ಲಿಯೂ ನಟಿಸಿದರು. ಮಹಾಕವಿ ಕಾಳಿದಾಸ ಮತ್ತು ಪಂಚರತ್ನ ಚಿತ್ರಗಳಿಗೆ ಸ್ವತಃ ಅವರೇ ನಿರ್ಮಾಪಕರೂ ಆಗಿದ್ದರು. ಭಕ್ತ ಕುಂಬಾರ, ಮಹಾಕವಿ ಕಾಳಿದಾಸ, ಪಂಚರತ್ನ ಚಿತ್ರಗಳಿಗೆ ಇವರೇ ಸಂಗೀತ ನಿರ್ದೇಶನ ಮಾಡಿದರು. ಇವರು ಹಾಡಿರುವ ಮಹಾಕವಿ ಕಾಳಿದಾಸ ಚಿತ್ರದ ಶೃಂಗಾರವಾಹಿನಿ ಮನ ಮೋಹಿನಿ, ಶ್ಯಾಮಲದಂಡಕ, ಜಗಜ್ಯೋತಿ ಬಸವೇಶ್ವರ ಚಿತ್ರದ ಬಸವೇಶ್ವರರ ವಚನಗಳು ಇವು ಇಂದಿಗೂ ಜನರ ಮನದಲ್ಲಿ ಅಚ್ಚಳಿಯದೇ ನಿಂತಿವೆ. ೧೯೪೭ರಲ್ಲಿ ಭಾಗವತರು ಭಕ್ತ ಕುಂಬಾರ ಚಿತ್ರದ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದರು.

ಇವರ ನಿರ್ಮಾಪಕತ್ವದಲ್ಲಿ ಹೊರ ಬಂದ ತಮಿಳುಚಿತ್ರ ಉಳುವುಕ್ಕಂ ತೊಳಿಲುಕ್ಕು ವಂದನೈ ಸೈವೊಂ ಚಿತ್ರವು ಹೆಚ್ಚು ನಷ್ಟವುಂಟುಮಾಡಿ ಆರ್ಥಿಕ ಮುಗ್ಗಟ್ಟನ್ನು ಅನುಭವಿಸಬೇಕಾಯ್ತು. ಭಾಗವತರು ತಮ್ಮ ಅವಧಿಯಲ್ಲಿಯೇ ಹೊಸ ಕಲಾವಿದರ ಪ್ರತಿಭೆಯನ್ನು ಗುರುತಿಸಿ ಬೆಳಕಿಗೆ ತಂಧರು. ಅವರಲ್ಲಿ ಪ್ರಮುಖರಾದವರೆಂದರೆ ಚಿತ್ರನಟಿಯರಾದ ಬಿ. ಸರೋಜದೇವಿ, ಎಂ. ಪಂಡರೀಬಾಯಿ. ಕನ್ನಡ ಚಿತ್ರಗೀತರಚನಾಕಾರರಾದ ಕು.ರಾ. ಸೀತಾರಾಮಶಾಸ್ತ್ರಿ, ಕ್ಯಾಮರಾಮ್ಯಾನ್‌ ಎ.ಎನ್‌. ಪರಮೇಶ್‌ ಮುಂತಾದವರು.

ವಾಗ್ಗೇಯಕಾರರು: ಹೊನ್ನಪ್ಪ ಭಾಗವತರ ಸುದೀರ್ಘ ಕಾಲ ತಪಸ್ಸಿನ ಅಪಾಋ ಅನುಭವಗಳ ಫಲವಾಗಿ ರಾಮದಾಸ ಎಂಬ ಅಂಕಿತದಲ್ಲಿ ಅವರ ಹೃದಯ ವೀಣೆಯಿಂದ ಮೂಡಿಬಂದಿರುವ ಕೀರ್ತನೆಗಳನ್ನು ಸ್ವರ ಸಹಿತವಾಗಿ ಕನ್ನಡ ಸಾಹಿತ್ಯ ಪರಿಷತ್ತು ೧೯೮೩ರಲ್ಲಿ ಕೀರ್ತನೆಗಳನ್ನು ಸ್ವರ ಸಹಿತವಾಗಿ ಕನ್ನಡ ಸಾಹಿತ್ಯ ಪರಿಷತ್ತು ೧೯೮೩ರಲ್ಲಿ ಓಂಕಾರ ನಾದ ಸುಧಾ ಎಂಬ ಶೀರ್ಷಿಕೆಯಲ್ಲಿ ಪುಸ್ತಕ ಪ್ರಕಟಿಸಿ ಸಂಗೀತಾಸಕ್ತರಿಗೆ ಮಹದುಪಕಾರ ಮಾಡಿದ್ದಾರೆ. ನೂರೊಂದು ರಚನೆಗಳಿರುವ ಸಂಕಲನವಿದು. ಅಪ್ರಚಲಿತ ರಾಗಗಳಾದ ಓಂಕಾರ, ಶಿವಪ್ರಿಯ, ಹಿತಪ್ರಿಯ, ಸ್ತೋತ್ರಪ್ರಿಯ, ಭಾರತಿ , ಕದರಮು, ಸ್ತುತಿಪ್ರಿಯ, ನೇಪಾಳಗೌಳ, ಗುರುಪ್ರಿಯ, ತಾಂಡವಂ ಹಾಗೂ ತಿಲಕ್‌ ಕಾಮೋದ್‌ ರಾಗಗಳಲ್ಲಿ ತಮ್ಮ ರಚನೆಗಳನ್ನು ಹೆಣೆದಿದ್ದಾರೆ. ಓಂಕಾರ ಎನ್ನುವ ರಾಗವು ಭಾಗವತರ ಸ್ವಯಂ ಸೃಷ್ಟರಾಗ. ಇವರ ರಚನೆಗಳನ್ನು ಪ್ರಸಿದ್ಧ ಸಂಗೀತ ದಿಗ್ಗಜರುಗಳನೇಕರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.

ಬಿರುದು, ಪ್ರಶಸ್ತಿ, ಪುರಸ್ಕಾರಗಳು: ಹೊನ್ನಪ್ಪಭಾಗವತರಿಗೆ ಲಭ್ಯವಾಗಿರುವ ಬಿರುದು, ಪ್ರಶಸ್ತಿ, ಪುರಸ್ಕಾರಗಳ ಸಂಖ್ಯೆ ಬಹಳ. ಇವುಗಳಲ್ಲಿ ಪ್ರಮುಖವಾದುವು ಹೀಗಿವೆ. :

೧೯೫೬ರಲ್ಲಿ ನಿರ್ಮಾಣಗೊಂಡ ಕನ್ನಡ ಚಲನಚಿತ್ರಗಳಲ್ಲಿ ಹೊನ್ನಪ್ಪ ಭಾಗವತರು ನಟಿಸಿರುವ ಚಿತ್ರವನ್ನು ಪರಿಗಣಿಸಿ ಅತ್ಯುತ್ತಮ ನಟ ಎಂದು ಮದ್ರಾಸ್‌ ಸಿನ ಪ್ಯಾನ್ಸ್ ಅಸೋಸಿಯೇಷನ್ಸ್ ಪ್ರಶಸ್ತಿ ನೀಡಿ ಗೌರವಿಸಿದೆ. ಭಾಗವತರು ನಟಿಸಿದ ಮಹಾಕವಿ ಕಾಳಿದಾಸ ಮತ್ತು ಜಗಜ್ಯೋತಿ ಬಸವೇಶ್ವರ ಚಿತ್ರಗಳ ನಟನೆಗಾಗಿ ಕೇಂದ್ರ ಸರ್ಕಾರವು ಕ್ರಮವಾಗಿ ೧೯೫೫ ಮತ್ತು ೧೯೫೯ರಲ್ಲಿ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಿದೆ. ೧೯೬೦ರಲ್ಲಿ ಆಂಧ್ರಪ್ರದೇಶದ ಶ್ರೀ ಶೈಲ ಮಠದ ಜಗದ್ಗುರು ವಾಗೀಶ ಪಂಡಿತಾರಾಧ್ಯ ಅವರು ನಟಾಚಾರ್ಯ ಎಂಬ ಬಿರುದು ನೀಡಿ ಗೌರವಿಸಿದ್ದಾರೆ. ೧೯೬೨ರಲ್ಲಿ ಚಿತ್ರದುರ್ಗ ಜಿಲ್ಲೆಯ ಮಲ್ಲಾಡಿಹಳ್ಳಿ ಅನಂತ ಸೇವಾ ಶ್ರಮದ ಶ್ರೀ ರಾಘವೇಂದ್ರ ಸ್ವಾಮೀಜಿಯವರು ಚಿನ್ನದ ಪದಕದೊಂದಿಗೆ ಗಾನಾಭಿನಯ ಚಂದ್ರ ಎಂಬ ಬಿರುದು ನೀಡಿ ಗೌರವಿಸಿದ್ದಾರೆ. ೧೯೭೬ರಲ್ಲಿ ಶೃಂಗೇರಿ ಮಠದ ಶ್ರೀ ಅಭಿನವ ವಿದ್ಯಾತೀರ್ಥ ಜಗದ್ಗುರುಗಳು ಚಿನ್ನದ ಪದಕದೊಂದಿಗೆ ಗಾಯಕ ಶಿಖಾಮಣಿ ಎಂಬ ಬಿರುದನ್ನಿತ್ತು ಪುರಸ್ಕರಿಸಿದ್ದಾರೆ. ೧೯೮೦ರಲ್ಲಿ ಭಾರತ ಸರ್ಕಾರವು ಸಂಗೀತದಲ್ಲಿ ವಿಶೇಷ ಅಧ್ಯಯನ ನಡೆಸಲು ಇವರಿಗೆ ಸೀನಿಯರ್ ಫೆಲೋಷಿಪ್‌ ನೀಡಿ ಸನ್ಮಾನಿಸಿದೆ. ೧೯೭೬ರಲ್ಲಿ ಕರ್ನಾಟಕ ಗಾನ ಕಲಾಪರಿಷತ್ತು ತನ್ನ ಆರನೇ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷರನ್ನಾಗಿ ಚುನಾಯಿಸಿ ಚಿನ್ನದ ಪದಕೊಂದಿಗೆ ಗಾನ ಕಲಾಭೂಷಣ ಎಂಬ ಬಿರುದನ್ನಿತ್ತು ಗೌರವಿಸಿದೆ. ೧೯೭೮ರಲ್ಲಿ ಮೈಸೂರು ಸಂಸ್ಥಾನದ ವಿದ್ವಾಂಸರು ಗಾನಕಲಾಗಂಧರ್ವ ಎಂಬ ಬಿರುದನ್ನು ಇವರಿಗೆ ನೀಡಿ ಗೌರವಿಸಿದ್ದಾರೆ. ೧೯೮೬ರಲ್ಲಿ ಕರ್ನಾಟಕ ಸರ್ಕಾರವು ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ, ೧೯೯೧ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಇವರ ಸಂಗೀತ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿದೆ. ಅದೇವರ್ಷವೇ ರಂಗ ಸಂಗೀತ ಕ್ಷೇತ್ರದ ಪ್ರಶಸ್ತಿಯೂ ಇವರಿಗೆ ಲಭಿಸಿದೆ.

ಸಂಗೀತ ವಿದ್ಯಾಲಯದ ಸ್ಥಾಪನೆ: ೧೯೬೦ರಲ್ಲಿ ಭಾಗವತರು ನಾದಬ್ರಹ್ಮ ಸಂಗೀತ ವಿದ್ಯಾಲಯ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಅನೇಕ ಶಿಷ್ಯರಿಗೆ ಸಂಗೀತ ಶಿಕ್ಷಣ ನೀಡಿದ್ದಾರೆ.

ಸಂಘ ಸಂಸ್ಥೆಗಳಲ್ಲಿ ಸೇವೆ: ವಿದ್ವಾಂಸರುಗಳೇ ಕಟ್ಟಿ ಬೆಳೆಸಿದ ಕರ್ನಾಟಕ ಗಾನ ಕಲಾ ಪರಿಷತ್ತಿನ ಸಂಸ್ಥಾಪಕರೊಲ್ಲೊಬ್ಬರಿವರು. ಪರಿಷತ್ತಿನ ಏಳಿಗೆಗಾಗಿ ದುಡಿದವರು. ಈ ಸಂಸ್ಥೆಯ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಇವರು ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಚಲನಚಿತ್ರ ಸಲಹಾಮಂಡಳಿಯ ಸದಸ್ಯರಾಗಿ, ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಮಂಡಳಿಯ ಸಂಗೀತ ಪರೀಕ್ಷೆಯ ಮುಖ್ಯಸ್ಥರಾಗಿ ಕೆಲಸಮಾಡಿದ್ದಾರೆ. ಇವರು ಆಕಾಶವಾಣಿಯ ‘ಎ’ ದರ್ಜೆ ಕಲಾವಿದರು. ಇವರ ಸಂಗೀತ ಕಾರ್ಯಕ್ರಮಗಳು ಆಕಾಶವಾಣಿ ದೂರದರ್ಶನಗಳಲ್ಲಿ ಬಿತ್ತರಗೊಂಡಿವೆ. ಇವರ ಸಂದರ್ಶನ ಹಾಗೂ ಸಂಗೀತ ಕಾರ್ಯಕ್ರಮವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ವಿಡಿಯೊ ಟೇಪ್‌ನಲ್ಲಿ ಧ್ವನಿಮುದ್ರಿಸಿದೆ. ಇವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆಸಲ್ಲಿಸಿದ್ದಾರೆ.

ಭಾಗವತರ ಕುಟುಂಬ: ಭಾಗವತರಿಗೆ ೧೯೩೮ರಲ್ಲಿ ಮದುವೆಯಾಯಿತು. ಇವರಿಗೆ ಇಬ್ಬರು ಗಂಡುಮಕ್ಕಳು ಐದು ಜನ ಹೆಣ್ಣುಮಕ್ಕಳು. ಮಗ ಶ್ರೀಎಚ್‌.ರಾಮ್‌ಕುಮಾರ್ ತಂದೆಯ ನಾಟಕ ಕಂಪನಿಯಲ್ಲಿ ಪಾತ್ರಗಳನ್ನು ಮಾಡಲು ಆರಂಭಿಸಿ ಈಗಲೂ ಸಿನಿಮಾ ನಾಟಕಗಳಲ್ಲಿ ಪಾತ್ರವಹಿಸಿ ಕಲಾ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ವಿದ್ವಾನ್‌ ಹೊನ್ನಪ್ಪ ಭಾಗವತರ್ ಟ್ರಸ್ಟಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಇನ್ನೊಬ್ಬ ಮಗ ಶ್ರೀ ಎಚ್‌.ಭರತ್‌ ಭಾಗವತರ್ ಕೂಡ ತಂದೆಯ ನಾಟಕ ಕಂಪನಿಯಲ್ಲಿ ನಟನಾಗಿ ಪಾತ್ರವಹಿಸಿ ಪ್ರಸ್ತುತ ಸಿನಿಮಾ, ಕಿರುತೆರೆಯ ನಟರಾಗಿ ಹೆಸರುಗಳಿಸಿದ್ದಾರೆ. ಐವರು ಪುತ್ರಿಯರಲ್ಲಿ ೩ ಪುತ್ರಿಯರು ಗಾಯಕಿಯಾಗಿದ್ದಾರೆ.

ಸಂಗೀತ, ನಾಟಕ, ಚಲನಚಿತ್ರನಟ, ನಿರ್ದೇಶಕ, ನಿರ್ಮಾಪಕ, ಗಾಯಕ ಹೀಗೆ ನಾನಾ ಕಲೆಗಳ ಬಹುಮುಖ ಪ್ರತಿಭೆಯಿಂದ ಎಲ್ಲ ರಂಗಗಳಲ್ಲೂ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿ ಏಕಮೇವಾದ್ವಿತೀಯರಾಗಿ ಕಂಗೊಳಿಸಿ ರಾಜ್ಯ ಹೊರರಾಜ್ಯದ ಜನತೆಯಿಂದ ಮೆಚ್ಚುಗೆ ಗಳಿಸಿ ಖ್ಯಾತರಾಗಿದ್ದ ವಿದ್ವಾನ್‌ ಹೊನ್ನಪ್ಪ ಭಾಗವತರು ೧.೧೦.೧೯೯೭ರಂದು ತಮ್ಮ ಭೌತಿಕ ಶರೀರವನ್ನು ತ್ಯಜಿಸಿ ಶ್ರೀರಾಮಚಂದ್ರನ ಪದತಲದಲ್ಲಿ ಸೇರಿಹೋದರು. ಕನ್ನಡ ಭಾಷೆ , ಕನ್ನಡ ಸಂಸ್ಕೃತಿಗಳ ಬಗೆಗೆ ಅಪಾಋ ಗೌರವನ್ನು ಹೊಂದಿದ್ದ., ಸಮಾಜದ ಉತ್ತಮ ಅಭಿರುಚಿಯ ಬೆಳವಣಿಗೆಗೆ ಪ್ರಾಮಾಣಿಕವಾಗಿ ಶ್ರಮಿಸಿದ ಕಲಾಪ್ರೇಮಿಗಳ ಅಪಾರ ಪ್ರೀತಿವಾತ್ಸಲ್ಯಗಳಿಗೆ ಪಾತ್ರರಾಗಿದ್ದ ಸ್ನೇಹಜೀವಿ, ವಿನಯದ ಸಾಕಾರಮೂರ್ತಿ ಎನಿಸಿದ್ದ ಸರಳ ಸ್ವಭಾವದ ವಿದ್ವಾನ್‌ ಹೊನ್ನಪ್ಪಭಾಗವತರು ಕಲಾವಿದರೆಲ್ಲರಿಗೂ ಮಾರ್ಗದರ್ಶಿಗಳೂ ಆದರ್ಶ ಪ್ರಾಯರೂ ಆಗಿದ್ದರು. ಅವರ ಕಲಾರಂಗದ ಸೇವೆ ಚಿರನೂತನ, ಅವಿಸ್ಮರಣೀಯ, ಅಜರಾಮರ. ನಮ್ಮ ನಿಮ್ಮೆಲ್ಲರಿಗೂ ದಾರಿದೀಪ.