‘ರಾಜರ್ಷಿ’ – ಋಷಿಯಂತೆ ಬದುಕುವ ರಾಜ. ಇಂತಹ ಒಳ್ಳೆಯ ಹೆಸರನ್ನು ಪಡೆದಿದ್ದ ವಿದೇಹ ರಾಜ ವಂಶದ ಜನಕರಾಜ ಮಿಥೆಲೆಯಲ್ಲಿ ಧರ್ಮದಿಂದ ರಾಜ್ಯವಾಳುತ್ತಾ ಪ್ರಜಾವತ್ಸಲನಾಗಿದ್ದ. ಅವನಿಗೆ ಮಕ್ಕಳಿರಲಿಲ್ಲ.

ಭೂಮಿಯಲ್ಲಿ ಮಂದಾಸನ

ಒಂದು ಸಲ ಜನಕನು ಒಂದು ಯಜ್ಞಕಾರ್ಯಕ್ಕಾಗಿ ಭೂಮಿಯನ್ನುಳುತ್ತಿರುವಾಗ ಆತನಿಗೆ ಒಂದು ಚಿನ್ನದ ಮಂದಾಸನವು ಸಿಕ್ಕಿತು. ರಾಜನಿಗೆ ಆಶ್ಚರ್ಯವಾಯಿತು. ಅದರಲ್ಲಿ ಬಹು ಮುದ್ದಾದ ನೇತ್ರಾನಂದವನ್ನುಂಟು ಮಾಡುವ ಒಂದು ಹೆಣ್ಣು ಮಗುವಿತ್ತು. ರಾಜನಿಗೆ ತುಂಬ ಸಂತೋಷವಾಯಿತು. ನೇಗಿಲಿನಿಂದ ಉತ್ತ ಭೂಮಿಗೆ ‘ಸೀತಾ’ ಎನ್ನುತ್ತಾರೆ. ಆದ್ದರಿಂದ ಜನಕನು ಮಗುವಿಗೆ ‘ಸೀತಾದೇವಿ’ ಎಂದು ಹೆಸರಿಟ್ಟನು.

ಈ ಮಗುವಿನ ಕಾರಣ ರಾಜನಿಗೆ ಉನ್ನತ ದೆಸೆಯುಂಟಾಯಿತು. ಅಷ್ಟೇ ಅಲ್ಲ. ಆತನ ರಾಣಿಗೂ ಒಂದು ಹೆಣ್ಣು ಮಗುವಾಯಿತು. ಆ ಮಗುವಿಗೆ ‘ಊರ್ಮಿಳಾ’ ಎಂದು ಹೆಸರಿಟ್ಟ. ಇಬ್ಬರು ಹೆಣ್ಣು ಮಕ್ಕಳನ್ನೂ ವಾತ್ಸಲ್ಯದಿಮದ ರಾಜದಂಪತಿಗಳು ಬೆಳೆಸಿದರು. ಇಬ್ಬರಿಗೂ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸಿದರು. ರೂಪಕ್ಕೆ ತಕ್ಕ ಗುಣದಿಂದ, ಗುಣವನ್ನು ಹೆಚ್ಚಿಸುವ ಜಾಣತನದಿಂದ, ಜಾಣತನ ಕಳೆಗಟ್ಟುವ ಸದ್ವಿದ್ಯೆಯಿಂದ, ವಿದ್ಯೆ ಸಾರ್ಥಕವಾಗುವ ವಿನಯ ವಿಧೇಯತೆಗಳಿಂದ ರಾಜಿಸುತ್ತ ಶೀಲ ಸಂಪನ್ನೆಯರಾಗಿದ್ದರು ರಾಜಪುತ್ರಿಯರು.

ವೈಷ್ಣವ ಧನುಸ್ಸೇ ಆಟದ ಕುದುರೆ!

ಒಂದು ದಿನ ಮಹರ್ಷಿ ಪರಶುರಾಮರು ಜನಕರಾಜನನ್ನು ನೋಡಲೆಂದು ಬಂದರು. ಅವರ ಕೈಯಲ್ಲಿ ಒಂದು ಧನುಸ್ಸಿತ್ತು. ಅದನ್ನು ರಾಜಸಭೆಯ ಮುಂಬಾಗಿಲಿಗೆ ಒರಗಿಸಿ ಮಹರ್ಷಿ ಒಳಕ್ಕೆ ಹೋದರು. ಬಾಲಕಿ ಸೀತಾ ಇದನ್ನು ನೋಡಿದಳು, ಓಡಿಬಂದಳು. ಆ ಧನುಸ್ಸನ್ನೇ ಎಳೆದುಕೊಂಡು ಕೋಲುಕುದುರೆ ಮಾಡಿಕೊಂಡು ಆಡುತ್ತಿದ್ದಳು. ಅದು ವೈಷ್ಣವ ಧನುಸ್ಸು. ಅದನ್ನೆತ್ತಲು ಮಹಾಬಲ, ಪರಾಕ್ರಮಗಳಿದ್ದವರಿಗೇ ಸಾಧ್ಯ. ಮಹರ್ಷಿಯು ಮಾತುಕತೆಗಳನ್ನು ಮುಗಿಸ ಹೊರಗೆ ಬಂದು ನೋಡಿದರು – ಧನುಸ್ಸಿಲ್ಲ!  ಈ ಧನುಸ್ಸನ್ನು ಅಲ್ಲಾಡಿಸುವುದೇ ಕಷ್ಟ, ಇದು ಎಲ್ಲಿ ಹೋಯಿತು. ಎಂದು ಸುತ್ತ ನೋಡಿದರೆ-ಹುಡುಗಿ ಸೀತೆಗೆ ಅದು ಕುದುರೆಯಾಗಿದೆ! ಮಹರ್ಷಿಗೂ ಬೀಳ್ಕೊಡಲು ಬಂದ ಜನಕರಾಜನಿಗೂ ತುಂಬ ಆಶ್ಚರ್ಯವಾಯಿತು.

ಮಹರ್ಷಿ ಬಾಲಕಿಯನ್ನು ಹರಸಿದರು. ಜನಕರಾಜನನ್ನು ಕುರಿತು , “ದೊರೆಯೇ ! ಇಂತಹ ಅಸಾಧಾರಣ ಶಕ್ತಿವಂತೆಯನ್ನು ಮದುವೆಯಾಗಲು ಮಹಾಪರಾಕ್ರಮಿಯೇ ಅರ್ಹನು. ಅದಕ್ಕಾಗಿ ನೀನು ಸ್ವಯಂವರನ್ನೇರ್ಪಡಿಸು. ಪರಾಕ್ರಮಿಯೇ ಈಕೆಯನ್ನು ವರಿಸಲಿ” ಎಂದು ಹೇಳಿದರು.

ಸೀತೆ, ಊರ್ಮಿಳೆಯರು ದೊಡ್ಡವರಾದರು.

ಶಿವ ಧನುಸ್ಸನ್ನು ಗೆದ್ದ ವೀರನೇ ಸೀತೆಯ ಪತಿ

ವೈಷ್ಣವ ಧನುಸ್ಸನ್ನು ಲೀಲಾಜಾಲವಾಗಿ ಆಟದ ಕುದುರೆಯನ್ನಾಗಿ ಮಾಡಿಕೊಂಡ ಹುಡುಗಿಗೆ ತಕ್ಕ ಪುರುಷ ಸಿಂಹನನ್ನು ಹುಡುಕುವುದು ಹೇಗೆ?

ಆ ರಾಜಮನೆತನಕ್ಕೆ ಪರಂಪರೆಯಾಗಿ ಬಂದ ಶಿವಧನಸ್ಸೊಂದು ಜನಕರಾಜನಲ್ಲಿತ್ತು. ಆತನು ಹೀಗೆ ನಿಶ್ಚಯ ಮಾಡಿದನು – ಶಿವ ಧನುಸ್ಸನ್ನು ಎತ್ತಿ ಬಾಣ ಹೂಡಬಲ್ಲ ವೀರನಿಗೇ ಸೀತಾದೇವಿಯನ್ನು ಕೊಡುವುದು. ಹೀಗೆಂದು ರಾಜನು ಸ್ವಯಂವರವನ್ನೇರ್ಪಡಿಸಿದನು.

ಸೀತೆ ಬಹು ಸುಂದರಿ. ಅವಳನ್ನು ಮದುವೆಯಾಗಲು ದೇಶವಿದೇಶಗಳಿಂದ ರಾಜರು ಬಂದರು. ಆದರೆ ಧನುಸ್ಸನ್ನು ನೋಡುತ್ತಲೇ ಗಾಬರಿಯಾಗಿ , “ಅಬ್ಬಾ, ಇದು ಮನುಷ್ಯರಿಗೆ ಸಾಧ್ಯವಲ್ಲ” ಅನ್ನುತ್ತಾ ಅದಕ್ಕೆ ಕೈಮುಗಿದು ಹಿಂದಕ್ಕೆ ಹೋದರು.

ವಿಶ್ವಾಮಿತ್ರ ಮಹರ್ಷಿಯು ತನ್ನ ಶಿಷ್ಯರಾದ ರಾಮ ಲಕ್ಷ್ಮಣರನ್ನು ಕರೆದುಕೊಂಡು ಮಿಥಿಲೆಗೆ ಬಂದರು. ಆ ಶಿಷ್ಯರು ರಾಜಪುತ್ರರು, ಅಯೋಧ್ಯಾ ದೇಶಾಧಿಪತಿಯಾದ ದಶರಥರಾಜನ ಮಕ್ಕಳು. ಅವರಿನ್ನೂ ತರುಣರು, ಆದರೆ ರಾಕ್ಷಸರನ್ನು ಗೆದ್ದಿದ್ದರು. ಮಹರ್ಷಿಯ ಮತತು ರಾಮಲಕಷ್ಮಣರ ಆಗಮನದಿಂದ ಜನಕರಾಜನಿಗೆ ಬಹಳ ಸಂತೋಷವಾಯಿತು. ಹಿರಿಯನಾದ ಶ್ರೀರಾಮನಿಗೆ ವಿಶ್ವಾಮಿತ್ರರು ಹೀಗೆ ಹೇಳಿದರು: ರಾಮಚಂದ್ರಾ! ಮಹಾಶಿವನನ್ನು ಧ್ಯಾನ ಮಾಡು. ಆಮೇಲೆ ಧನುಸ್ಸನ್ನು ಕೈಗೆ ತೆಗೆದುಕೊ.” ಶ್ರೀರಾಮನು ಮೊದಲು ಮಹಷಿಗೆ ನಮಸ್ಕರಿಸಿದನು. ಧನುಸ್ಸಿಗೆ ಬಳಿಗೆ ಬಂದು ಮೂರು ಸಲ ಪ್ರದಕ್ಷಿಣೆ ನಮಸ್ಕಾರಗಳನ್ನು ಮಾಡಿ ಶಿವಸ್ಮರಣೆ ಮಾಡಿ ಅದಕ್ಕೆ ಕೈ ಹಾಕಿದನು. ಅದನ್ನು ಲೀಲಾಜಾಲವಾಗಿ ಮೇಲೆತ್ತಿ ಬಾಣ ಹೂಡಿದನು; ಧನುಸ್ಸು ಮಹಾಧ್ವನಿಯನ್ನು ಮಾಡುತ್ತಾ ಮುರಿದು ಹೋಯಿತು. ಸೀತಾದೇವಿಯು ಬಂದು ಶ್ರೀರಾಮನ ಕೊರಳನ್ನು ಹಾರದಿಂದಲಂಕರಿಸಿದಳು. ದಶರಥನಿಗೆ ಶ್ರೀರಾಮನ ಸಾಹಸದ ಸುದ್ದಿ ಹೋಯಿತು. ರಾಜಪರಿವಾರದೊಂದಿಗೆ ಇಷ್ಟಮಿತ್ರರೊಂದಿಗೆ ದಶರಥ ರಾಜನು ಮಿಥಿಲೆಗೆ ಬಂದನು. ಅತ್ಯಂತ ವಿಜೃಂಭಣೆಯಿಂದ ಶ್ರೀರಾಮ-ಸೀತೆಯರ ವಿವಾಹ ನೆರವೇರಿತು.

ಸೀತಾರಾಮನಿಗೆ ಪಟ್ಟಾಭಿಷೇಕ

ದಶರಥರಾಜನು ಬಹು ಸುಖಸಂತೋಷಗಳಿಂದ ಹಲವು ವರ್ಷಗಳನ್ನು ಕಳೆದನು. ಆದರೆ ಅವನಿಗೆ ಮುಪ್ಪು ತಲೆ ಹಾಕಿತು. ರಾಜ್ಯಭಾರ ಸಾಕೆನಿಸಿತು. ತಾನು ನಿಶ್ಚಿಂತನಾಗಿ ಭಗವಮತನ ಧ್ಯಾನದಲ್ಲಿ ದಿನಗಳನ್ನು ಕಳೆಯಬೇಕು ಎಂದು ರಾಜನು ಆಲೋಚಿಸಿದನು. ನ್ಯಾಯವಾಗಿ ಪುತ್ರರಲ್ಲಿ ಜ್ಯೇಷ್ಠನಾದ ರಾಮನೇ ರಾಜನಾಗಬೇಕು. ದಶರಥನು ಮಂತ್ರಿ ಪುರೋಹಿತರೊಂದಿಗೆ ಸಮಾಲೋಚನೆ ನಡೆಸಿ ಶ್ರೀರಾಮನ ಪಟ್ಟಾಭಿಷೇಕವನ್ನು ನಿಶ್ಚಯ ಮಾಡಿದನು.

ಆ ಶುಭದಿನದಂದು ರಾಜನ ಆನಂದಕ್ಕೆ ಪಾರವಿಲ್ಲ. ಆತನ ಹಿರಿಯ ರಾಣಿ, ಶ್ರೀರಾಮನ ಮಾತೆ ಕೌಸಲ್ಯಾದೇವಿ ವ್ರತೋಪವಾಸಗಳನ್ನು ಮಾಡಿ ದೇವ ಬ್ರಾಹ್ಮಣರ ಸೇವೆಯಲ್ಲಿ ನಿರತಳಾಗಿದ್ದಾಳೆ. ಪ್ರಜೆಗಳೆಲ್ಲ ಶ್ರೀರಾಮನ ಪಟ್ಟಾಭಿಷೇಕಕ್ಕೆ ಸಂಭ್ರಮಿಸುತ್ತಿದ್ದಾರೆ.

ಪಟ್ಟಾಭಿಷೇಕವಲ್ಲ, ಕಾಡು

ದಶರಥನ ಮೂರನೆಯ ಹೆಂಡತಿ ಕೈಕಯಿ. ಅವಳಿಗೂ ಶ್ರೀರಾಮನಲ್ಲಿ ಬಹು ಪ್ರೀತಿ. ಆದರೆ ಮಂಥರೆ ಎಂಬ ಸಖಿಯ ಮಾತನ್ನು ಕೇಳಿ, ತನ್ನ ಮಗ ಭರತನಿಗೇ ರಾಜ್ಯವಾಗಬೆಕು ಎಂದು ಹಠ ಹಿಡಿದಳು. ಹಿಂದೆ ಒಮ್ಮೆ ದಶರಥನು ಅವಳು ಕೇಳಿದಾಗ ಎರಡು ವರಗಳನ್ನು ಕೊಡುವುದಾಗಿ ಮಾತು ಕೊಟ್ಟಿದ್ದ. ಮೊದಲನೆಯ ವರವಾಗಿ ಭರತನಿಗೆ ಪಟ್ಟಾಭಿಷೇಕ, ಎರಡನೆಯ ವರವಾಗಿ ರಾಮನು ಹದಿನಾಲ್ಕು ವರ್ಷ ಕಾಡಿಗೆ ಹೋಗಬೇಕು ಎಂದು ಕೇಳಿದಳು. ದಶರಥನಿಗೆ ದಿಗ್ಭ್ರಮೆಯಾಯಿತು. ಅವನು ಎಷ್ಟೇ ಬೇಡಿದರೂ ಕೈಕಯಿ ತನ್ನ ಹಠವನ್ನು ಬಿಡಲಿಲ್ಲ.

ಶ್ರೀರಾಮನಿಗೆ ವಿಷಯವು ತಿಳಿಯಿತು.

ಅವನು ತಂದೆಯನ್ನು ಸಂತೈಸಿ ಆತನ ಸತ್ಯವಚನವನ್ನು ಪಾಲಿಸುವುದಕ್ಕಾಗಿ ವನವಾಸಿಯಾಗಲು ನಿಶ್ಚಯಿಸಿದನು. ಪಟ್ಟಾಭೀಷೇಕಕ್ಕಾಗಿ ಅಲಂಕೃತನಾಗಿದ್ದವನು ರಾಜ ಯೋಗ್ಯವಾದ ಅಲಂಕಾರಗಳನ್ನೆಲ್ಲ ಕಳಚಿ ತಪಸ್ವಿಯಂತೆ ನಾರುಬಟ್ಟೆಯನ್ನುಟ್ಟು ಪ್ರಯಾಣಕ್ಕೆ ಸಿದ್ಧವಾದನು. ಕೌಸಲ್ಯೆಗೆ ತಡೆಯಲಾಗದ ದುಃಖ. ರಾಮನು ಬಹಳ ಹಿತವಾದ ಮಾತುಗಳಿಂದ ಆಕೆಯನ್ನು ಸಮಾಧಾನಪಡಿಸಿ ಕಾಡಿಗೆ ಹೋಗಲು ಅನುಮತಿ ಪಡೆದ.

ನೀನಿರುವ ಕಾಡೇ ನನಗೆ ಸಾಮ್ರಾಜ್ಯ

ತಾಯಿಯ ಮಂದಿರದಿಂದ ಶ್ರೀರಾಮನು ಸೀತೆಯ ಮಂದಿರಕ್ಕೆ ಹೋದನು. ಗಂಡನಿಗೆ ಪಟ್ಟಾಭೀಷೇಕವಾಗುತ್ತದೆ ಎಂದರೆ ಅವಳಿಗೆ ಎಷ್ಟು ಸಂತೋಷ, ಸಡಗರ! ಅವನಿಗೆ ಒಳ್ಳೆಯದಾಗಲಿ ಎಂದು ಪೂಜೆ ಮಾಡುತ್ತಾ ದಾನಗಳನ್ನು ಕೊಡುತ್ತಾ ಸಂಭ್ರಮದಿಂದಿದ್ದಳು.

ಹೆಂಡತಿಯ ಸಡಗರ, ಸಂಭ್ರಮಗಳನ್ನು ಕಂಡ ಶ್ರೀರಾಮನಿಗೆ ‘ಇಂದು ಪಟ್ಟಾಭಿಷೆಕವಿಲ್ಲ’ ನಾನು ಕಾಡಿಗೆ ಹೊರಟಿದ್ದೇನೆ ಎಂದು ಹೇಳುವುದು ಹೇಗೆ, ಇವಳ ಮೃದು ಮನಸ್ಸಿಗೆ ಎಷ್ಟು ಆಘಾತವಾಗುವುದೋ ಎಂದು ವ್ಯಸನವಾಯಿತು. ಪತಿಯ ಆಗಮನದಿಂದ ಸೀತೆಗೆ ಸಂತೋಷವಾಯಿತು. ಆದರೆ ಅವನ ಕೆಳಗುಂದಿದ ಮುಖವನ್ನು ಕಂಡು ಏನೋ ಪ್ರಮಾದವಾಗಿದೆ ಎಂದು ಆತಂಕಪಟ್ಟಳು.

“ಸ್ವಾಮಿ! ಇದೇನು? ಇಂತಹ ಮಹೋತ್ಸವ ಸಮಯದಲ್ಲಿ ಹೀಗೆ ಮುಖವೇಕೆ ಬಾಡಿತು? ಎಲ್ಲಿ ಯಾವ ಪ್ರಮಾದ ನಡೆಯಿತು?” ಎಂದು ತನ್ನ ಸೆರಗಿನಿಂದ ಪತಿಯ ಮುಖದ ಬೆವರುಹನಿಗಳನ್ನೊರೆಸುತ್ತ ಕೇಳಿದಳು.

ಶ್ರೀರಾಮನು ‘ಜಾನಕೀ’ ನಾನು ಹೇಳುವ ಸುದ್ದಿಯಿಂದ ವ್ಯಸನಪಡಬೇಡ. ಧೈರ್ಯ ತಂದುಕೋ. ನಾನೀಗ ರಾಜ್ಯದಿಂದ ಬಹು ದೂರ ಹೋಗಬೇಕಾಗಿದೆ. ನೀನು ಸಮಾಧಾನದಿಂದ ನನ್ನನ್ನು ಕಳುಹಿಸು ಎಂದು ಹೇಳಿದ. ತಂದೆಗೆ ಒದಗಿದ ಧರ್ಮಸಂಕಟವನ್ನು ವಿವರಿಸಿದ: “ನಾನು ಹದಿನಾಲ್ಕು ವರ್ಷಗಳ ಕಾಲ ಕಾಡಿಗೆ ಹೋಗಿ ಬರುತ್ತೇನೆ, ನೀನು ಕೋಪ, ಬೇಸರಗಳಿಲ್ಲದೆ ಸಮಾಧಾನದಿಂದ ಇರು. ನನ್ನ ತಂದೆ ತಾಯಿ ಮುದುಕರು. ಅವರ ಸೇವೆ ಮಾಡು. ಭರತನ ಮನಸ್ಸಿಗೂ ಹಿತವಾಗುವಂತೆ ನಡೆದುಕೊ. ನಾನೂ ಹೋಗಿ ಬರುತ್ತೇನೆ. ಒಪ್ಪಿಗೆ ಕೊಡು.”

ಸೀತೆಗೆ ತುಂಬಾ ದುಃಖವಾಯಿತು. ರಾಜ್ಯಾಭಿಷೇಕ ನಿಂತುಹೋದುದಕ್ಕೆ ಆಕೆಗೆ ದುಃಖವಾಗಲಿಲ್ಲ. ಭರತನು ರಾಜನಾಗುವೆನೆಂದು ಅಸೂಯೆಯೂ ಆಗಲಿಲ್ಲ. ಅರ್ಧಾಂಗಿಯಾದ ತನ್ನನ್ನು ಬಿಟ್ಟು ಒಬ್ಬನೇ ಹೊರಡಲು ಸಿದ್ಧನಾದ ಪತಿಯನ್ನು ನೋಡಿ ಕೋಪ ಬಂದಿತು. ಆತನು ಬೋಧಿಸಿದ ನೀತಿಯನ್ನು ಮಾತ್ರ ಸಹಿಸಲಾಗಲಿಲ್ಲ. “ಪ್ರಭೂ! ನೀನಿಲ್ಲದ ಸ್ಥಳದಲ್ಲಿ ಒಂದು ನಿಮಿಷವಾದರೂ ನಾನಿರಲಾರೆ. ನೀನಿಲ್ಲದ ಈ ಅಯೋಧ್ಯೆ ನನ್ನ ಪಾಲಿಗೆ ಕಾಡಿಗಿಂತ ಕಡೆ. ನೀನಿರುವ ಕಾಡೇ ನನಗೆ ಸಾಮ್ರಾಜ್ಯ. ಸದಾ ನಾನು ನಿನ್ನ ನೆರಳಿನಲ್ಲಿ ನಡೆಯುವವಳು. ನನ್ನನ್ನು ಬಿಟ್ಟು ಹೋಗುವುದು ನಿನಗೆ ಧರ್ಮವಲ್ಲ” ಎಂದಳು.

ಶ್ರೀರಾಮನು ಅವಳಿಗೆ ವನಜೀವನದ ದುಸ್ಸಾಧ್ಯವಾದ ಕಷ್ಟಗಳನ್ನು ವಿವರಿಸಿದ. “ಸೀತಾ! ವನವೆಂದರೆ ನೀನೇನೆಂದು ತಿಳಿದಿರುವೆ? ರಾಜೋದ್ಯಾನದಂತೆ ಸುರಕ್ಷಿತ ರಮ್ಯಪ್ರದೇಶವೆಂದು ತಿಳಿದೆಯಾ? ದುಷ್ಟ ಜಂತುಗಳಿಂದ ದುರುಳ ರಾಕ್ಷಸರಿಂದ ತುಂಬಿದ ಪ್ರದೇಶ. ಘೋರಾರಣ್ಯದಲ್ಲಿ ಕರ್ಕಶ ಧ್ವನಿಗಳೇ ಕೇಳಿಬರುವುವು.

ಕಂದ ಮೂಲಗಳಲ್ಲದೆ ತಿನ್ನಲು ಮತ್ತೇನೂ ದೊರೆಯಲಾರದು. ಸುಕುಮಾರಿಯಾದ ನೀನು ಆ ಕಷ್ಟಗಳನ್ನು ಸಹಿಸಲಾರೆ. ಹೆಜ್ಜೆಹೆಜ್ಜೆಗೆ ಅಪಾಯಗಳಿಗೆ ಅಂಜುತ್ತಾ ದಿನ ಕಳೆಯಬೇಕಾದೀತು. ಹದಿನಾಲ್ಕು ವರ್ಷ ಅಷ್ಟೇನೂ ಧೀರ್ಘವಲ್ಲ” ಎಂದು ಹೇಳಿದ. ಬಗೆಬಗೆಯಾಗಿ ಸೀತೆಯನ್ನು ಒಪ್ಪಿಸುವ ಪ್ರಯತ್ನ ಮಾಡಿದ.

ಸೀತಾದೇವಿಯು ‘ನೀನಿರುವ ಕಾಡೇ ನನಗೆ ಸಾಮ್ರಾಜ್ಯ’ ಎಂದು ಶ್ರೀರಾಮನಿಗೆ ಹೇಳಿದಳು.

ಸೀತಾದೇವಿ ಆ ಮಾತುಗಳಿಗೆ ಕಿವಿಗೊಡಲಿಲ್ಲ. “ಕಾಡಾಗಲಿ ಊರಾಗಲಿ, ನಿನ್ನ ಸಹವಾಸದಲ್ಲಿರಬೇಕಾದುದೇ ನನ್ನ ಧರ್ಮ. ಇಲ್ಲಿನ ಸುಖವಸತಿಯನ್ನು ನಾನು ಬಯಸುವುದಿಲ್ಲ. ಅಲ್ಲಿನ ಕಷ್ಟಗಳ ಅಂಜಿಕೆಯೂ ನನಗಿಲ್ಲ. ಪುರುಷಸಿಂಹನಾದ ನೀನು ಕಾಡಿನಲ್ಲಿ ನನ್ನನ್ನು ರಕ್ಷಿಸಲಾರದಷ್ಟು ಅಸಮರ್ಥನೇ?” ಎಂದು ನಿಷ್ಠುರವಾಗಿ ಮಾತನಾಡಿದಳು. ಶೋಕದಿಂದ ಕಣ್ಣೀರುಗರೆದಳು.

ಅವಳ ಮಾತುಗಳಿಗೆ ಶ್ರೀರಾಮನು ಒಪ್ಪಲೇಬೇಕಾಯಿತು. “ಸೀತಾ! ನೀನು ಜೊತೆಯಲ್ಲಿದ್ದರೆ ನನಗೆ ಅರಣ್ಯವೇ ಸ್ವರ್ಗವಾಗುವುದು. ನಿನ್ನಿಷ್ಟಕ್ಕೆ ನನ್ನ ವಿರೋಧವೇನೂ ಇಲ್ಲ. ಪ್ರಯಾಣಕ್ಕೆ ಸಿದ್ಧಳಾಗು” ಎಂದನು. ರಾಮನ ಮಾತನ್ನು ಕೇಳಿ ಸೀತೆಗೆ ತುಂಬ ಸಂತೋಷವಾಯಿತು. ಕಾಡಿಗೆ ಹೊರಡಲು ಸಿದ್ಧತೆಗಳನ್ನು ಪ್ರಾರಂಭಿಸಿದಳು.

ಶ್ರೀರಾಮನ ತಮ್ಮ ಲಕ್ಷ್ಮಣನು ತಾನೂ ಅಣ್ಣ-ಅತ್ತಿಗೆಯರೊಂದಿಗೆ ಕಾಡಿಗೆ ಹೊರಡುತ್ತೇನೆ ಎಂದು ಪಟ್ಟುಹಿಡಿದ. ರಾಮನು ಒಪ್ಪಲೇಬೇಕಾಯಿತು.

ರಾಮ ಸೀತೆ ಲಕ್ಷ್ಮಣರು ಚಿತ್ರಕೂಟ ಪರ್ವತದಲ್ಲಿ ನೆಲಸುವ ನಿಶ್ಚಯಮಾಡಿ ಅಲ್ಲಿಗೆ ಹೊರಟರು.

ಪಾದುಕೆ ಬೇಡಿದ ಭರತ

ಅದು ಮನೋಹರ ಪ್ರದೇಶ. ಅಲ್ಲಿ ತಪೋನಿಷ್ಠರನೇಕರು ಆಶ್ರಮಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದರು. ಅವರೆಲ್ಲ ಇವರನ್ನು ಆದರಿಸಿದರು. ಶ್ರೀರಾಮ, ಸೀತೆ, ಲಕ್ಷ್ಮಣರು ಒಂದು ಗುಡಿಸಲನ್ನು ಕಟ್ಟಿಕೊಂಡರು.

ಒಂದು ದಿನ ಕೈಕಯಿಯ ಪುತ್ರ ಭರತನು ದೊಡ್ಡ ಪರಿವಾರದೊಂದಿಗೆ ಇವರಿದ್ದಲ್ಲಿಗೆ ಬಂದನು. ಬೇಡಿ ಬಲಾತ್ಕರಿಸಿ ಶ್ರೀರಾಮನನ್ನೇ ಅಯೋಧ್ಯೆಗೆ ಕರೆದುಕೊಂಡು ಹೋಗಬೆಕು, ಅವನೇ ರಾಜನಾಗಲಿ ಎಂದು ಅವನ ಇಷ್ಟ.

ಭರತನು ಬಂದವನೇ ಅಣ್ಣನ ಪಾದಗಳನ್ನು ಮುಟ್ಟಿದ. ದಶರಥನು ಮರಣಹೊಂದಿದ ಎಂದು ದುಃಖದಿಂದ ತಿಳಿಸಿದ. ಅದನ್ನು ಕೇಳಿ ರಾಮ ಲಕ್ಷ್ಮಣ ಸೀತಾದೇವಿಯರಿಗೆ ದುಃಖವು ಉಕ್ಕಿ ಬಂದಿತು.

ಭರತನು ಎಷ್ಟೋ ರೀತಿಗಳಲ್ಲಿ ಶ್ರೀರಾಮನನ್ನು ಬೇಡಿಕೊಂಡನು – ನೀನೇ ಅಯೋಧ್ಯೆಗೆ ಬಂದು ರಾಜನಾಗು ಎಂದು. ಶ್ರೀರಾಮನು ಒಪ್ಪಲಿಲ್ಲ. ಕಡೆಗೆ ಬೇರೆ ಉಪಾಯ ಕಾಣದೆ ಭರತನು ಶ್ರೀರಾಮನ ಪಾದುಕೆಗಳನ್ನು ಬೇಡಿ ತೆಗೆದುಕೊಂಡ. ಅವನ್ನೇ ಸಿಂಹಾಸನದ ಮೇಲೆ ಪ್ರತಿಷ್ಠಿಸಿ ತಾನೂ ಅಣ್ಣನಂತೆಯೇ ವ್ರತಸ್ಥನಾಗಿ ನಂದೀಗ್ರಾಮದಲ್ಲಿ ನೆಲಸಿದನು.

ಚಿತ್ರಕೂಟದಿಂದ ಶ್ರೀರಾಮ ಸೀತೆ ಲಕ್ಷ್ಮಣರು ದಂಡಕಾರಣ್ಯಕ್ಕೆ ಹೋದರು.

ಶ್ರೀರಾಮಚಂದ್ರ, ಯೋಚಿಸು

ದಂಡಕಾರಣ್ಯದ ಮುನಿಜನರು ಇವರನ್ನು ಯಥೋಚಿತವಾಗಿ ಸತ್ಕರಿಸಿದರು. ಅವರೆಲ್ಲ ಸುತ್ತುಮುತ್ತಲಿನ ರಾಕ್ಷಸರಿಂದಲೂ, ದುಷ್ಟಮೃಗಗಳಿಂದಲೂ ತಮಗೆ ಉಂಟಾಗುತ್ತಿರುವ ಪ್ರಾಣಾಪಾಯಗಳಿಂದ ರಕ್ಷಿಸಬೇಕೆಂದು ಶ್ರೀರಾಮನಲ್ಲಿ ಮೊರೆ ಇಟ್ಟರು. ಶ್ರೀರಾಮನು ದಯಾಳು. ಅವನು ರಾಕ್ಷಸರನ್ನು ಶಿಕ್ಷಿಸಿ ಋಷಿಗಳ ತೊಂದರೆಯನ್ನು ನಿವಾರಿಸುವುದಾಗಿ ಮಾತು ಕೊಟ್ಟ.

ಇದನ್ನು ಕೇಳಿ ಸೀತಾದೇವಿಗೆ ಯೋಚನೆಯಾಯಿತು. ರಾಮನು ಮಾಡುವುದು ಸರಿಯೇ ಎನ್ನಿಸಿತು. ಸರಿಯಾದ ಸಮಯದಲ್ಲಿ ಪತಿಗೆ ಹೀಗೆ ಹೇಳಿದಳು:

“ಆರ್ಯಪುತ್ರಾ! ನನ್ನ ಮನಸ್ಸಿಗೆ ಬಂದ ಒಂದೆರಡು ವಿಚಾರಗಳನ್ನು ನಿನ್ನಲ್ಲಿ ಬಿನ್ನವಿಸಿಕೊಳ್ಳುತ್ತೇನೆ. ನಿನಗಿಂತ ಹೆಚ್ಚು ತಿಳಿದವಳೆಂದು ಭಾವಿಸಿ ನಾನೀ ಮಾತುಗಳನ್ನು ಹೇಳುವುದಿಲ್ಲ. ತಾಪಸಿಗಳು ತಮ್ಮ ಕಷ್ಟಗಳನ್ನು ಹೇಳಿಕೊಂಡರು. ನೀನು ರಾಕ್ಷಸರನ್ನೂ ದುಷ್ಟಮೃಗಗಳನ್ನೂ ಸಂಹಾರ ಮಾಡುವುದಾಗಿ ವಾಗ್ದಾನ ಮಾಡಿದೆ . ರಾಜ ಚಿಹ್ನೆಗಳನ್ನೆಲ್ಲಾ ತ್ಯಜಿಸಿ ಈ ವನವಾಸವನ್ನು ಕೈಗೊಂಡಿರುವೆಯಲ್ಲವೇ? ಈಗ ಋಷಿಗಳಂಥೆ ಇರಬೇಕು. ಆಯುಧಗಳನ್ನು ಧರಿಸುವುದೂ ಈಗಿನ ನಿಷ್ಠೆಗೆ ನಿಷೇದ. ಆದರೆ ಆತ್ಮರಕ್ಷಣೆಗಾಗಿ ಬಿಲ್ಲು ಬಾಣಗಳನ್ನು ನೀವು ಧರಿಸುವುದು ಅಗತ್ಯವಾಗಿದೆ. ಈಗ ಮಾಡಿರುವ ವಾಗ್ದಾನದಿಂದ ರಾಕ್ಷಸರು ನಿನ್ನ ಶತ್ರುಗಳಾಗುತ್ತಾರೆ. ಇದು ಭಯಕ್ಕೆ ಕಾರಣ. ಯಾವ ಸಮಯದಲ್ಲಿ ಎಂತಹ ಅಪಾಯ ಒದಗಬಹುದೋ! ಅಲ್ಲದೆ ನಮಗೆ ಯಾವ ತೊಂದರೆಯನ್ನೂ ಮಾಡದಿರುವ ಮೃಗಗಳನ್ನಾಗಲಿ ರಾಕ್ಷಸರನ್ನಾಗಲಿ ಕೊಲ್ಲುವುದು ನ್ಯಾಯವೇ? ಕಾರಣವಿಲ್ಲದೆ ದ್ವೇಷದಿಂದ ಆಪತ್ತುಗಳಿಗೆ ಅವಕಾಶವಾಗಬಹುದು. ಯೋಚಿಸಿ ನೋಡು.”

ಈ ಮಾತುಗಳನ್ನು ತಾಳ್ಮೆಯಿಂದ ಕೇಳಿ ಶ್ರೀರಾಮನು ಹೀಗೆಂದ:

“ದೇವೀ! ಕ್ಷತ್ರಿಯರಾದ ನಮಗೆ ದುಷ್ಟನಿಗ್ರಹ ಯಾವ ಸಮಯಕ್ಕೂ ವಿರೋಧವಲ್ಲ. ಯಾರ ತಂಟೆಗೂ ಹೋಗದೆ ತಮ್ಮ ಪಡಿಗೆ ತಾವು ಬದುಕುತ್ತಿರುವ ತಪಸ್ವಿಗಳನ್ನು ಕಂಡಕಂಡಲ್ಲಿ ರಾಕ್ಷಸರು ಕೊಂದು ತಿನ್ನಬಹುದೇ? ಆ ಕ್ರೂರಕರ್ಮಿಗಳನ್ನು ಶಿಕ್ಷಿಸುವುದು, ಸಾಧುಜನರನ್ನು ರಕ್ಷಿಸುವುದು ರಾಜಧರ್ಮ. ನೀನು ಹೇಳಿದ ಹಿತೋಕ್ತಿಗಳೂ ಯೋಚಿಸಬೇಕಾದಂತಹವು. ಬಹುದೂರ ವಿಚಾರ ಮಾಡಿದ್ವಿ. ನಾನಾದರೂ ಈ ವಿಚಾರದಲ್ಲಿ ಆದಷ್ಟು ಎಚ್ಚರಿಕೆಯಿಂದಲೇ ನಡೆಯುತ್ತೇನೆ. ನಿರಪರಾಧಿಗಳನ್ನು ದಂಡಿಸುವುದಿಲ್ಲ.”

ಪತಿಯ ಈ ಮಾತುಗಳಿಂದ ಸೀತಾದೇವಿಗೆ ತಕ್ಕಮಟ್ಟಿಗೆ ಸಮಾಧಾನವಾಯಿತು.

ಶ್ರೀರಾಮ ಸೀತೆ ಲಕ್ಷ್ಮಣರು ಪಂಚವಟಿ ಎಂಬ ಸ್ಥಳಕ್ಕೆ ಬರುತ್ತಿರುವಾಗ ದೊಡ್ಡದೊಂದು ಆಲದಮರ ಕಾಣಿಸಿತು. ಅದರ ಮೇಲೆ ಬೃಹದಾಕಾರದ ಮುದಿ ಹದ್ದೊಂದು ಕುಳಿತಿತ್ತು. ಅದು ರಾಕ್ಷಸನೇ ಇರಬಹುದೆಂದು ಇವರಿಗೆ ಸಂದೇಹ. ಅದನ್ನು ತಿಳಿದು ಆ ಹದ್ದು “ರಘುರಾಮಾ! ನಾನು ನಿಮ್ಮ ತಂದೆ ದಶರಥ ರಾಜನ ಮಿತ್ರ. ಜಟಾಯು ಎಂದು ನನ್ನ ಹೆಸರು. ನಿಮ್ಮ ಬಂಧುವಿನಂತೆ ನನ್ನನ್ನು ತಿಳಿಯಿರಿ. ನೀನೂ ಲಕ್ಷ್ಮಣನೂ ಹೊರಕ್ಕೆ ಹೋದಾಗ ಸೀತಾದೇವಿಗೆ ನಾನು ಬೆಂಗಾವಲಾಗಿರುತ್ತೇನೆ. ಇನ್ನೂ ನಿಮಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ” ಎಂದು ಹೇಳಿತು. ಇವರಿಗೆ ಅರಣ್ಯದಲ್ಲಿಯೂ ತಮಗೆ ಆಪ್ತಬಂಧುವೊಬ್ಬನು ಇದ್ದಾನಲ್ಲ ಎಂದು ಸಂತೋಷವಾಯಿತು.

ಶ್ರೀರಾಮ, ಸೀತೆ, ಲಕ್ಷ್ಕಣರು ಪರ್ಣಶಾಲೆಯೊಂದನ್ನು ಕಟ್ಟಿಕೊಂಡು ಕೆಲವು ಕಾಲ ಅಲ್ಲಿ ನೆಮ್ಮದಿಯಾಗಿ ಕಳೆದರು. ಹತ್ತಿರದಲ್ಲೇ ಗೋದಾವರಿ ನದಿ. ಅಲ್ಲಲ್ಲಿ ಗಿರಿಗಳು, ಯಥೇಚ್ಛವಾಗಿ ಫಲ ಪುಷ್ಪಗಳನ್ನು ಹೊತ್ತ ತರುಲತೆಗಳು, ಘನವಾದ ವೃಕ್ಷಗಳು, ಹಕ್ಕಿಗಳು, ಹರಿಣಗಳು – ನೋಡಿದರೆ ಕಣ್ಣಿಗೂ ಮನಸ್ಸಿಗೂ ತುಂಬ ಸಂತೋಷವಾಗುತ್ತಿತ್ತು.

ಬಂದಳು ಶೂರ್ಪಣಖಿ

ಒಂದು ದಿನ ಒಂದು ವಿಶೇಷ ಸಂಗತಿ ನಡೆಯಿತು.

ಶೂರ್ಪಣಖಿ ಎಂಬ ರಕ್ಕಸಿಯೊಬ್ಬಳು ಆಹಾರಕ್ಕಾಗಿ ಆ ಕಡೆಯಲ್ಲಿ ಸಂಚರಿಸುತ್ತಾ ಅಲ್ಲಿ ಮನುಷ್ಯರು ಇರುವ ಸುಳಿವನ್ನರಿತು ಇವರ ಆಶ್ರಮಕ್ಕೆ ಬಂದು ಬಾಗಿಲಿನಿಂದ ಬಗ್ಗಿ ನೋಡಿದಳು.

ರಾಮ ಲಕ್ಷ್ಮಣರು ನೋಡಲು ಬಹು ಸ್ಪುರದ್ರೂಪಿಗಳು. ಶೂರ್ಪಣಖಿಗೆ ಅವರಿಬ್ಬರಲ್ಲಿ ಒಬ್ಬನನ್ನು ಮದುವೆಯಾಗಬೇಕು ಎಂದು ಆಸೆಯಾಯಿತು.

ಮಾಯಾವಿಯಾದ ಆ ರಕ್ಕಸಿ ಸುಂದರ ತರುಣಿಯಂತೆ ರೂಪ ತಾಳಿದಳು.

“ನನ್ನನ್ನು ಮದುವೆಯಾಗು” ಎಂದು ಶ್ರೀರಾಮನನ್ನು ಕೇಳಿದಳು.

ಶ್ರೀರಾಮನು “ನನಗೆ ಪತ್ನಿ ಜೊತೆಯಲ್ಲೇ ಇದ್ದಾಳೆ. ಅವಳಿಗೆ ಸವತಿಯಾಗಿ ತೊಂದರೆಪಡುವುದು ಬೇಡ.  ನನ್ನ ತಮ್ಮ ಒಬ್ಬನೇ ಇದ್ದಾನೆ. ಅವನೂ ರೂಪವಂತ, ಬುದ್ಧಿವಂತ. ಅವನನ್ನು ವರಿಸು” ಎಂದನು.

ಶೂರ್ಪಣಖಿ ಲಕ್ಷ್ಮಣನ ಬಳಿಗೆ ಬಂದು, “ನನ್ನನ್ನು ಮದುವೆಯಾಗು” ಎಂದು ಕೇಳಿದಳು.

‘ನಾನು ಶ್ರೀರಾಮನ ಹೆಂಡತಿ. ಭಾಗ್ಯವೋ ಬಡತನವೋ ಅವನ ಜೊತೆಗೇ ನನಗಿರಲಿ.’

ಲಕ್ಷ್ಮಣನು “ನಾನು ರಾಮನ ಸೇವಕ. ನನ್ನ ಕೈ ಹಿಡಿದರೆ ನೀನೂ ಸೇವಕಿಯೇ. ಸೀತಾದೇವಿಯ ಸೇವೆಯನ್ನು  ಮಾಡಬೇಕಾದೀತು. ರಾಮನನ್ನೇ ಕೇಳಿಕೋ ಹೋಗು” ಎಂದು ರಾಮನ ಬಳಿಗೇ ಕಳುಹಿಸಿದನು.

ಅಣ್ಣತಮ್ಮಂದಿರಿಗೆ ಇದೊಂದು ಸರಸವಾಯಿತು. ಅಣ್ಣನು ತಮ್ಮನ ಕಡೆಗೆ ಕಳಿಸುವನು. ತಮ್ಮನ್ನು ಅಣ್ಣನಲ್ಲಿಗೆ ತೊಲಗಿಸುವನು. ಅವಳಿಗೆ ಸಾಕಾಗಿಹೋಯಿತು. “ಹೆಂಡತಿ ಇರುವುದರಿಂದಲ್ಲವೇ ರಾಮನು ಹೀಗಾಡುತ್ತಿರುವುದು? ನಾನಿವಳನ್ನು ತಿಂದುಬಿಡುತ್ತೇನೆ” ಅನ್ನುತ್ತಾ ಅವಳು ಸೀತಾದೇವಿಯ ಮೇಲೆ ಬೀಳಲು ಬಂದಳು.

ಆಗ ಶ್ರೀರಾಮನು “ದುಷ್ಟರೊಂದಿಗೆ ವಿನೋದ ಸಲ್ಲದು. ಇವಳಿಗೆ ತಕ್ಕ ಶಿಕ್ಷೆಯನ್ನು ಮಾಡಿ ಓಡಿಸು’ ’ ಎಂದು ತಮ್ಮನಿಗೆ ಹೇಳಿದನು. ಲಕ್ಷ್ಮಣು ಆ ರಕ್ಕಸಿಯ ಕಿವಿ ಮೂಗುಗಳನ್ನು ಕೊಯ್ದುಬಿಟ್ಟನು.

ಶೂರ್ಪಣಖಿಗೆ ನೋವು. ಅದಕ್ಕಿಂತ ಹೆಚ್ಚಾಗಿ ಅವಮಾನ. ಅವಳು ಅಬ್ಬರಿಸುತ್ತಾ ಓಡಿದಳು.

ಶೂರ್ಪಣಖಿ ಲಂಕಾಧಿಪತಿಯಾದ ರಾವಣಾಸುರನ ತಂಗಿ. ರಾವಣ ಬಹು ಬಲಶಾಲಿ. ಜನಸ್ಥಾನ  ಎಂಬ ಪ್ರದೇಶಕ್ಕೆ ಒಡೆಯನಾಗಿದ್ದ ಖರನೆಂಬ ರಾಕ್ಷಸನು ಅವನ ತಮ್ಮ. ಶೂರ್ಪಣಖಿ ಅವನಲ್ಲಿಗೆ ಹೋಗಿ ತನಗಾದ ಅಪಮಾನವನ್ನು ತಿಳಿಸಿ ಗೋಳಿಟ್ಟಳು. ಮಹಾರೋಷದಿಂದ ಖರನು ತನ್ನ ಸಕಲ ಸೈನ್ಯವನ್ನೂ ಕಟ್ಟಿಕೊಂಡು ರಾಮ ಲಕ್ಷ್ಮಣರ ಮೇಲೆ ದಂಡೆತ್ತಿ ಬಂದನು. ಅವನೂ ಅವನ ಸೈನ್ಯವೂ ರಾಮಬಾಣಕ್ಕೆ ಬಲಿಯಾದರು. ಮಹರ್ಷಿಗಳೆಲ್ಲ ಶ್ರೀರಾಮನನ್ನು ಕೊಂಡಾಡಿದರು. ಸೀತೆಗೂ ಸಂತೋಷವಾಯಿತು. ಆದರೂ ಯಾವುದೋ ಒಂದು ಅಳುಕು ಮನಸ್ಸನ್ನು ಹೊಕ್ಕು ಚಿಂತೆಗಡೆಮಾಡಿತು.

ರಾವಣನ ದುಷ್ಟ ಯೋಚನೆ

ಶೂರ್ಪಣಖಿ ಲಂಕೆಗೆ ಓಡಿದಳು. ಅಣ್ಣನ ಆಸ್ಥಾನದಲ್ಲಿ ಗೊಳೋ ಎಂದು ಅತ್ತಳು. ತನ್ನ ಅಪಮಾನದ ಕಥೆಯನ್ನೂ ಖರನೂ ಸೈನ್ಯವೂ ನಾಶವಾದ ಕಥೆಯನ್ನೂ ಹೇಳಿ ಸೀತೆಯ ಸೌಂದರ್ಯವನ್ನೂ ವರ್ಣಿಸಿದಳು.

ರಾವಣನಿಗೆ ದುಃಖ ತುಂಬಿ ಬಂದಿತು,  ಕೋಪ ಜ್ವಾಲಾಮುಖಿಯಂತೆ ಸ್ಫೋಟಿಸಿತು. ತನ್ನಂತಹ ಅಸಮಾನ ವೀರನ ತಂಗಿಗೆ – ತಮ್ಮನಿಗೆ ಇಂತಹ ಗತಿಯೇ ಎಂದು ಕೆರಳಿದ. ಜೊತೆಗೆ, ಶೂರ್ಪಣಖಿ ಸೀತೆಯ ಸೌಂದರ್ಯವನ್ನು ವರ್ಣಿಸಿದುದನ್ನು ಕೇಳಿ ಕೆಟ್ಟ ಯೋಚನೆಯೊಂದು ಮನಸ್ಸಿನಲ್ಲಿ ಹೊಳೆಯಿತು – ಆಕೆಯನ್ನು ಕದ್ದು ತರಬೇಕು!

ಇದು ಹೇಗೆ ಸಾಧ್ಯ?

ರಾವಣ ಹಲವು ಯೋಚನೆಗಳನ್ನು ಮಾಡಿದ. ಕಡೆಗೆ ಮಾರೀಚ ಎಂಬವನ ಸಹಾಯವನ್ನು ಬೇಡುವುದು ಎಂದು ತೀರ್ಮಾನಿಸಿದ. ಮಾರೀಚ ಅವನ ನೆಂಟ. ಶ್ರೀರಾಮನ ಹೆಸರನ್ನು ಕೇಳುತ್ತಲೇ ಮಾರೀಚನಿಗೆ ಮೈ ನಡುಗಿತು. ರಾಮಬಾಣದ ಮಹಿಮೆಯನ್ನು ಅವನು ರಾವಣನಿಗೆ ವಿವರಿಸಿದ. “ಸೀತೆಯನ್ನು ಕದ್ದು ತರುವುದು ಕೆಟ್ಟ ಯೋಚನೆ. ಇದನ್ನು ಬಿಟ್ಟುಬಿಡು” ಎಂದು ಬುದ್ಧಿ ಹೇಳಿದ.

ರಾವಣನು ಅವನ ಮಾತಿಗೆ ಕಿವಿಗೊಡಲಿಲ್ಲ. ಒಂದೇ ಹಟ ಹಿಡಿದ “ನೀನು ನನ್ನ ಮಾತಿನಂತೆ ನಡೆಯದಿದ್ದರೆ ನಿನ್ನ ಆಯುಷ್ಯ ಮುಗಿಯಿತು. ನಿನ್ನನ್ನು ಕೊಂದುಬಿಡುತ್ತೇನೆ” ಎಂದು ಬೆದರಿಸಿದ. ರಾವಣನಿಗೆ ಬುದ್ಧಿ ಹೇಳಿ ಪ್ರಯೋಜನವಿಲ್ಲ ಎಂದು ಮಾರೀಚನಿಗೆ ಅರ್ಥವಾಯಿತು.

ಸೀತೆಯನ್ನು ತಾನು ಕದಿಯಲು ಶ್ರೀರಾಮನೂ ಲಕ್ಷ್ಮಣನೂ ಆಶ್ರಮವನ್ನು ಬಿಟ್ಟುಹೋಗುವಂತೆ ಮಾಡಬೇಕು ಎಂದು ರಾವಣನ ಯೋಚನೆ. ಅದಕ್ಕಾಗಿ ಒಂದು ಉಪಾಯವನ್ನು ಯೋಚಿಸಿದ್ದ. ಮಾರೀಚನು ಅವನು ಹೇಳಿದಂತೆಯೇ ಮಾಡಿದ.

ಬಂಗಾರದ ಜಿಂಕೆ

ಮಾರೀಚನು ಸುಂದರ ಜಿಂಕೆಯಾದ. ಬಂಗಾರದಂತೆ ಥಳಥಳ ಹೊಳೆಯುವ ಮನೋಹರ ಜಿಂಕೆಯಾದ. ಸೀತೆಯ ಮುಂದೆ ಸುಳಿದಾಡಿದ.

ವನದಲ್ಲಿ ಕುಸುಮಗಳನ್ನು ಬಿಡಿಸುತ್ತಿದ್ದ ಸೀತಾದೇವಿ ಆ ಮೃಗವನ್ನು ಕಂಡಳು. ಆಶ್ಚರ್ಯದಿಂದ ಅದನ್ನು ನೋಡುತ್ತಾ, “ರಾಮಚಂದ್ರಾ! ನೋಡು ಬಾ ಇತ್ತ, ಎಂತಹ ರೂಪರಾಶಿ? ಇದನ್ನು ಹಿಡಿದು ಸಾಕಿದರೆ ನಮ್ಮ ಅಯೋಧ್ಯೆಗೆ ಅಲಂಕಾರವಾಗಿರುವುದಲ್ಲವೆ?” ಎಂದಳು.

ಲಕ್ಷ್ಮಣನು “ಅಣ್ಣ! ಇದು ನಿಜವಾದ ಜಿಂಕೆಯಲ್ಲ, ಮಾಯಾಮೃಗ. ರಾಕ್ಷಸಮಾಯೆಗೆ ಮರುಳಾಗಬಾರದು” ಎಂದು ಎಚ್ಚರಿಸಿದ.

ಆದರೆ, ಸೀತೆಯ ಆಸೆಯನ್ನು ಪೂರೈಸಬೇಕು ಎಂದು ಶ್ರೀರಾಮನಿಗೆ ಎನ್ನಿಸಿತು. ಜಿಂಕೆಯನ್ನು ಹಿಡಿದು ತರುವೆನೆಂದು ಅದರ ಹಿಂದೆಯೇ ಹೊರಟ.

ಮಾಯಾಮೃಗವು ಕೈಗೆ ಸಿಗದೆ ಬಹುದೂರಕ್ಕೆ ಶ್ರೀರಾಮನನ್ನು ಕೊಂಡೊಯ್ದಿತು. ಕಡೆಗೆ ಬೇಸರಗೊಂಡು ಶ್ರೀರಾಮನು ಅದರ ಮೇಲೆ ಬಾಣ ಪ್ರಯೋಗ ಮಾಡಿದ. ಶ್ರೀರಾಮನ ಬಾಣ ಮಾರೀಚನಿಗೆ ತಗುಲಿತು. ಅವನು ಪ್ರಾಣ ಬಿಡುವಾಗ “ಹಾ ಲಕ್ಷ್ಮಣಾ! ಹಾ ಸೀತಾ!” ಎಂದು ರಾಮನ ಕಂಠಧ್ವನಿಯನ್ನೇ ಹಿಡಿದು ಚೀತ್ಕಾರ ಮಾಡಿದ.

ಶ್ರೀರಾಮನು ಎಷ್ಟು ಹೊತ್ತಾದರೂ ಬರಲಿಲ್ಲ ಎಂದು ಸೀತಾದೇವಿ ಆತಂಕದಿಂದ ಕಾಯುತ್ತಿದ್ದಳು. ಅವಳ ಕಿವಿಗೆ ಕೇಳಿಸಿತು ಕೂಗು: “ಹಾ ಲಕ್ಷ್ಮಣ! ಹಾ ಸೀತಾ!”

ಇದನ್ನು ಕೇಳುತ್ತಲೇ ಸೀತಾದೇವಿ ಭಯಾಕ್ರಾಂತಳಾಗಿ “ಲಕ್ಷ್ಮಣಾ! ಶ್ರೀರಾಮನಿಗೇಕೋ ಅಪಾಯ ಸಂಭವಿಸಿದೆ. ಬೇಗ ಹೋಗಿ ರಕ್ಷಿಸು” ಅಂದಳು.

ಲಕ್ಷ್ಮಣನು “ತಾಯೇ! ಲೋಕರಕ್ಷಕನಾದ ನಮ್ಮಣ್ಣನಿಗೆ ಅಪಾಯವೆಂದರೇನು? ಇನ್ನೊಬ್ಬರು ರಕ್ಷಿಸುವುದೆಂದರೇನು?  ಅಂಜಬೇಡ. ಇದೆಲ್ಲಾ ರಾಕ್ಷಸರ ತಂತ್ರ” ಎಂದು ಸಮಾಧಾನ ಹೇಳಿದ. ಸೀತೆ ಲಕ್ಷ್ಮಣನ ಮಾತನ್ನು ನಂಬಲಿಲ್ಲ. ಲಕ್ಷ್ಮಣ ಎಷ್ಟೋ ರೀತಿಗಳಲ್ಲಿ ಅವಳಿಗೆ ಧೈರ್ಯ ಹೆಳಿದ. ಸೀತೆ ಕೇಳಲಿಲ್ಲ. ಕಡೆಗೆ ಅವಳಿಗೆ ಕೋಪವೇ ಬಂದಿತು. ಲಕ್ಷ್ಮಣನ ಮೇಲೆ ಅನ್ಯಾಯದ ಆಪಾದನೆಗಳನ್ನು ಹೊರಿಸಿ, “ದುರಾಸೆಯಿಂದ ನೀನು ನಮ್ಮನ್ನು ಅನುಸರಿಸಿ ಬಂದಿರುವೆ. ಅಣ್ಣನು ಮಹಾ ವಿಪತ್ತಿಗೆ ಸಿಕ್ಕಿರುವಾಗ ಜಾಗ್ರತನಾಗದೆ ವೃಥಕಾಲಹರಣ ಮಾಡುತ್ತಿರುವೆ. ನಿನ್ನ ದ್ರೋಹ ಚಿಂತನೆಗೆ ನಾನೆಂದಿಗೂ ಒಪ್ಪುವವಳಲ್ಲ” ಎಂದು ಕಠಿಣವಾಗಿ ನುಡಿದು ಅಳತೊಡಗಿದಳು. ಲಕ್ಷ್ಮಣನಿಗೆ ಆ ನಿಂದೆಯನ್ನು ಸಹಿಸಲಾಗಲಿಲ್ಲ. ಸೀತೆಯೊಬ್ಬಳನ್ನೆ ಬಿಟ್ಟು ಹೋದರೆ ಅವಳಿಗೆ ಏನು ಅಪಾಯವಾಗುವುದೊ ಎಂದು ಅವನಿಗೆ ಹೆದರಿಕೆ. ಸೀತೆಯನ್ನು ರಕ್ಷಿಸುವಂತೆ ವನದ ದೇವತೆಗಳನ್ನು ಕೈಮುಗಿದು ಬೇಡಿದ. ಅತ್ತಿಗೆ ಪಾದಗಳಿಗೆ ನಮಸ್ಕರಿಸಿ ಇಷ್ಟವಿಲ್ಲದೆ ಲಕ್ಷ್ಮಣನು ಆ ಸ್ಥಳವನ್ನು ಬಿಟ್ಟನು.

ಸೀತೆ ಒಬ್ಬಳೇ ಉಳಿದಳು. ಚಿಂತೆಯಲ್ಲಿ ಮುಳುಗಿದಳು.

ಯಾರು ಸಂನ್ಯಾಸಿ

ಸಂನ್ಯಾಸಿಯೊಬ್ಬ ಆಶ್ರಮದ ಬಾಗಿಲಿಗೆ ಬಂದ.

ತಲೆಯಲ್ಲಿ ಜಟೆ, ಕೈಯಲ್ಲಿ ದಂಡ ಕಮಂಡಲು, ಮೈಮೇಲೆ ಕಾವಿಯ ಬಟ್ಟೆ, ಬಾಯಿಯಲ್ಲಿ ವೇದದ ಮಂತ್ರಗಳು.

ಸೀತಾದೇವಿ ತಲೆ ಎತ್ತಿ ನೋಡಿದಳು.

ಸಂನ್ಯಾಸಿಯು “ಇಷ್ಟು ಸುಂದರಿಯಾದ ನೀನು ಕಾಡಿನಲ್ಲಿ ಒಬ್ಬಳೇ ಏಕೆ ದುಃಖಪಡುತ್ತಿದ್ದೀಯೆ?” ಎಂದು ಕೇಳಿದನು.

ಸೀತೆ ಪೂಜ್ಯನಾದ ಸಂನ್ಯಾಸಿ ಬಂದಿದ್ದಾನೆ ಎಂದು ಅವನಿಗೆ ಸತ್ಕಾರ ಮಾಡಿದಳು. ತನ್ನ ಕಥೆಯನ್ನೆಲ್ಲ ಹೇಳಿಕೊಂಡಳು.

ರಾವಣನೇ ಸಂನ್ಯಾಸಿಯ ವೇಷದಲ್ಲಿ ಬಂದಿದ್ದಾನೆ ಎಂದು, ಪಾಪ, ಸೀತಾದೇವಿಗೆ ತಿಳಿಯಲಿಲ್ಲ.

ಸಂನ್ಯಾಸಿ ಹೇಳಿದ: “ನಾನು ರಾವಣೇಶ್ವರ, ಮೂರು ಲೋಕಗಳೂ ನನ್ನ ಹೆಸರನ್ನು ಕೇಳಿದರೇ ನಡುಗುತ್ತವೆ. ನಿನ್ನಂತಹ ಸುಂದರಿಯನ್ನು ನಾನು ನೋಡಿಯೇ ಇಲ್ಲ ನೀನು ನನ್ನ ಪಟ್ಟದ ರಾಣಿಯಾಗು, ಸುಖ ಸಂತೋಷಗಳಿಂದ ಬಾಳು.”

ಸೀತಾದೇವಿ ಈ ಮಾತುಗಳನ್ನು ಕೇಳಿ ಕೆಂಡಕೆಂಡವಾದಳು. “ಅಯ್ಯೋ ಪಾಪಿ, ನಾನು ಪುರುಷಸಿಂಹನಾದ ಶ್ರೀರಾಮನ ಹೆಂಡತಿ. ನನ್ನನ್ನು ಮುಟ್ಟುವುದು ಉರಿಯುವ ಬೆಂಕಿಯನ್ನು ಬಟ್ಟೆಯಲ್ಲಿ ಕಟ್ಟಿದಂತೆ” ಎಂದು ಛೀಮಾರಿ ಹಾಕಿದಳು.

ಅವಳು ಎಷ್ಟು ಬೈದರೂ, ಅತ್ತರೂ ರಾವಣ ಬಿಡಲಿಲ್ಲ. ಆಕೆಯನ್ನು ಹಿಡಿದೆತ್ತಿ ತನ್ನ ರಥದಲ್ಲಿ ಹಾಕಿಕೊಂಡು ಹೊರಡಲನುವಾದ. ಸೀತಾದೇವಿ ಅವನನ್ನು ಬಗೆಬಗೆಯಾಗಿ ನಿಂದಿಸಿದಳು. ತನ್ನ ರಕ್ಷಣೆಗಾಗಿ ತರುಗಳನ್ನು, ಗಿರಿಗಳನ್ನು, ನದಿಗಳನ್ನು, ವನ್ಯಜೀವಿಗಳನ್ನೆಲ್ಲಾ ಅಂಗಲಾಚಿದಳು.

ಸೀತಾದೇವಿಯ ಆರ್ತಸ್ವರವನ್ನು ಕೇಳಿ ಮರದ ಮೇಲೆ ನಿದ್ರಿಸುತ್ತಿದ್ದ ಜಟಾಯುವಿಗೆ ಎಚ್ಚರವಾಯಿತು. ಅವನು ಥಟ್ಟನೆ ಹಾರಿಬಂದು ರಥವನ್ನು ಅಡ್ಡಗಟ್ಟಿದ. ರಥವನ್ನೂ ಸಾರಥಿಯನ್ನೂ ತನ್ನ ರೆಕ್ಕೆಗಳಿಂದ ಬಡಿದು ಕೊಕ್ಕಿನಿಂದ ತಿವಿದು ನಾಶಮಾಡಿದ. ರಾವಣಿಗೆ ಮಿತಿ ಮೀತಿ ಕೋಪ ಬಂದಿತು. ಆ ಪಕ್ಷಿರಾಜನೊಂದಿಗೆ ಹೋರಾಡುತ್ತಾ ಕಡೆಗೆ ಅವನ ರೆಕ್ಕೆಗಳನ್ನು ಕಡಿದು ಹಾಕಿದ. ನೆಲಕ್ಕೆ ಬಿದ್ದ ಜಟಾಯುವನ್ನು ಕಂಡು ಸೀತಾದೇವಿಯ ದುಃಖ ಹೆಚ್ಚಿತು. ರಾವಣನು ತಡಮಾಡದೆ ಆಕೆಯನ್ನೆತ್ತಿಕೊಂಡು ಗಗನಕ್ಕೆ ಹಾರಿದ.

ಸೀತೆ ಎಲ್ಲಿ?

ಮಾರೀಚನ ಆರ್ತಸ್ವರವನ್ನು ಕೇಳಿದಾಗಲೇ ಶ್ರೀರಾಮನಿಗೆ ಇದೇನೋ ವಿಪತ್ತು ಸಂಭವಿಸಿತೆಂದು ತೋರಿತು. ಬೇಗಬೇಗ ಹೆಜ್ಜೆ ಹಾಕುತ್ತ ಹಿಂದಕ್ಕೆ ಹೊರಟ. ಮಾರ್ಗಮಧ್ಯದಲ್ಲಿ ಲಕ್ಷ್ಮಣನು ಸಿಕ್ಕಿದ. ಶ್ರೀರಾಮನ ಸಂದೇಹ ಭಯಗಳಿನ್ನೂ ಹೆಚ್ಚಾದುವು, ಅಪಶಕುನಗಳಾದುವು. “ತಮ್ಮಾ! ಇದೇನು? ನೀನೇಕೆ ಬಂದೆ? ಸೀತೆಯ ಗತಿಯೇನು? ನಾವು ಹೋಗುವ ವೇಳೆಗೆ ಆಕೆಯು ಜೀವದಿಂದಿರುವಳೇ? ನಮಗೆ ಕಾಣಸಿಗುವಳೇ?” ಎಂದು ಹಂಬಲಿಡುತ್ತಾ ಆಶ್ರಮದ ಬಳಿಗೆ ಬಂದು ದೇವೀ! ಜಾನಕೀ!” ಎಂದು ದೀನವಾಣಿಯಲ್ಲಿ ಕೂಗಿದನು. ಉತ್ತರವಿಲ್ಲ, ಆಶ್ರಮವು ಬರಿದು. ಶ್ರೀರಾಮನು ಸೀತೆಯನ್ನು ಎಲ್ಲೆಡೆಗಳಲ್ಲಿಯೂ ಹುಡುಕಿದ. “ಎಲೆ ಮೃಗಗಳಿರಾ, ಪಕ್ಷಿಗಳಿರಾ! ಜಾನಕಿಯನ್ನು ಕಂಡಿರಾ! ಆಕೆ ಎಲ್ಲಿ ಹೋದಳೋ ತಿಳಿಸಿ” ಎಂದು ಮೊರೆಯಿಡುತ್ತಾ ಅಲೆದಾಡಿದ. ಹೀಗೆ ಅಲೆಯುವಾಗ ಸೀತೆ ಮುಡಿದಿದ್ದ ಕುಸುಮಗಳು ಬಿದ್ದಿದ್ದು  ಕಾಣಿಸಿದವು. ಜಟಾಯು ಗುಟುಕು ಜೀವದಿಂದ ಕೊರಗುತ್ತು ಬಿದ್ದಿದ್ದ. ಶ್ರೀರಾಮನಿಗೆ ಸೀತಾಪಹರಣ ವಾರ್ತೆಯನ್ನು ತಿಳಿಸುವುದಕ್ಕಾಗಿಯೇ ಪ್ರಾಣವನ್ನು ಬಿಗಿ ಹಿಡಿದಿದ್ದ ಆ ಪಕ್ಷಿರಾಜ, “ರಘುರಾಮಾ! ಲಂಕೇಶ್ವರನಾದ ರಾವಣನು ಸೀತಾದೇವಿಯನ್ನು ಅಪಹರಿಸಿಕೊಂಡು ಹೋದ. ಆಕೆಯ ರಕ್ಷಣೆಗಾಗಿ ಹೋರಾಡಿದೆ. ನನ್ನನ್ನು ಇಂತಹ ಅವಸ್ಥೆಗೆ ಗುರಿಮಾಡಿದವನು ಅವನೇ!” ಎನ್ನುತ್ತಾ ಪ್ರಾಣಬಿಟ್ಟ.

ರಾಮ ಲಕ್ಷ್ಮಣರಿಗೆ ಬಹು ದುಃಖವಾಯಿತು. ಶಾಸ್ತ್ರೀಯವಾಗಿ ಜಟಾಯುವನ್ನು ದಹನ ಮಾಡಿದರು.

ರಾವಣಾ, ನಿನಗೆ ಆಯಸ್ಸು ಮುಗಿದಿದೆ.

ರಾವಣನು ಸೀತೆಯನ್ನು ಎತ್ತಿಕೊಂಡು ಓಡಿ ಲಂಕೆಯನ್ನು ಸೇರಿದನು. ಅವಳಿಗೆ ತನ್ನ ಅರಮನೆಯನ್ನೂ ಐಶ್ವರ್ಯವನ್ನೂ ತೋರಿಸಿದನು. ತನ್ನ ರಾಕ್ಷಸರ ಸೈನ್ಯವನ್ನು ತೋರಿಸಿದನು. “ನೋಡು, ಇಲ್ಲಿಗೆ ರಾಮ ಬರಲಾರ. ಅವನನ್ನು ಮರೆತುಬ ಇಡು. ನನ್ನಂತಹ ಪರಾಕ್ರಮಶಾಲಿ, ಐಶ್ವರ್ಯವಂತ ಯಾರಿದ್ದಾರೆ? ನನ್ನ ರಾಣಿಯಾಗಿ ಸುಖವಾಗಿರು”  ಎಂದನು.

ಸೀತೆಗೆ ರಾವಣನ ಜೊತೆಗೆ ಮಾತನಾಡಲೂ ಇಷ್ಟವಿರಲಿಲ್ಲ. ಒಂದು ಹುಲ್ಲುಕಡ್ಡಿಯನ್ನು ಕೈಯಲ್ಲಿ ಹಿಡಿದು ಅದನ್ನು ನೋಡುತ್ತ ಹೇಳಿದಳು: “ರಾವಣಾಸುರ, ಶ್ರೀರಾಮನು ಇಲ್ಲದಿದ್ದಾಗ ಕಳ್ಳತನದಲ್ಲಿ ನನ್ನನ್ನು ಎತ್ತಿಕೊಂಡು ಬಂದೆ. ಅವನು ಇದಿರಿನಲ್ಲಿ ಇದ್ದಿದ್ದರೆ ನೀನು ಪುಡಿಪುಡಿಯಾಗುತ್ತಿದ್ದೆ. ನಿನಗೆ ಆಯ೮ಸ್ಸು ಮುಗಿದಿದೆ ಎಂದು ತೋರುತ್ತದೆ.”

ರಾವಣನು ಕೋಪದಿಂದ ಹಲ್ಲು ಕಡಿದನು. ಸೀತಾದೇವಿಯನ್ನ ಅಶೋಕವನದಲ್ಲಿಟ್ಟನು. ಅವಳ ಕಾವಲಿಗೆ ರಾಕ್ಷಸಿಯರನ್ನು ನೇಮಿಸಿದನು.

ಸುಗ್ರೀವನ ಸ್ನೇಹ

ಶ್ರೀರಾಮನೂ ಲಕ್ಷ್ಮಣನೂ ಸೀತೆಯನ್ನು ಹುಡುಕುತ್ತಾ ಅಲೆದಾಡಿದರು. ಹೀಗೆ ಅಲೆಯುವಾಗ ಋಷ್ಯಮೂಕ ಎಂಬ ಪರ್ವತದ ಬಳಿಗೆ ಬಂದರು. ಆ ಪರ್ವತದ ಮೇಲಿಂದ ಇವರನ್ನು ನೋಡಿ ಸುಗ್ರೀವ ಎಂಬ ಕಪಿರಾಜನು ತನ್ನ  ಆಪ್ತಮಂತ್ರಿಯಾದ ಆಂಜನೇಯನನ್ನು ಕಳಿಸಿ ಇವರನ್ನು ತನ್ನಲ್ಲಿಗೆ ಬರಮಾಡಿಕೊಂಡನು.

ತನ್ನ ಅಣ್ಣನಾದ ವಾಲಿಯಿಂದ ಸುಗ್ರೀವನು ರಾಜ್ಯ ಭ್ರಷ್ಟನಾಗಿದ್ದನು. ಅವನ ಹೆಂಡತಿಯನ್ನೂ ವಾಲಿಯು ತನ್ನವಳನ್ನಾಗಿ ಮಾಡಿಕೊಂಡಿದ್ದನು. ಈ ದುಃಖವನ್ನು ರಾಮನಲ್ಲಿ ತಿಳಿಸಿ ಅವನು ರಾಮನ ಸಹಾಯವನ್ನು ಬೇಡಿದನು. ಶ್ರೀರಾಮನೂ ತನ್ನ ದುಃಖವನ್ನು ಹೇಳಿಕೊಂಡು ಸುಗ್ರೀವನ ಸಹಾಯವನ್ನು ಕೇಳಿದನು. ಒಬ್ಬರಿಗೊಬ್ಬರು ಸಹಾಯ ಮಾಡಲು ಮಾತು ಕೊಟ್ಟರು. ಅಗ್ನಿಸಾಕ್ಷಿಯಾಗಿ ಇವರು ಸ್ನೇಹಿತರಾದರು.

ಶ್ರೀರಾಮನು ವಾಲಿಯನ್ನು ಕೊಂದು ಸುಗ್ರೀವನನ್ನು ರಾಜನನ್ನಾಗಿ ಮಾಡಿದನು. ಸುಗ್ರೀವನು ಸೀತಾದೇವಿಯನ್ನು ಹುಡುಕಲು ನಾಲ್ಕು ದಿಕ್ಕುಗಳಿಗೂ ತನ್ನ ಸೈನ್ಯವನ್ನು ಕಳುಹಿಸಿದನು. ಶ್ರೀರಾಮನು ಆಂಜನೇಯನನ್ನು ಹತ್ತಿರಕ್ಕೆ ಕರೆದು “ವಾಯು ಕುಮಾರಾ! ಈ ಸಂದರ್ಭದಲ್ಲಿ ನೀನು ಕೃತಕಾರ್ಯನಾಗಿ ಬರುವೆಯೆಂದು ನನಗೆ ನಂಬಿಕೆಯಿದೆ. ಲಂಕೆಗೆ ಹೋಗಲು ನೀನೊಬ್ಬನೇ ಸಮರ್ಥನು. ಅಲ್ಲಿ ಸೀತೆಯನ್ನು ನೋಡಿದಾಗ ನಮ್ಮ ಕುಶಲವನ್ನು ತಿಳಿಸು. ಗುರುತಿಗಾಗಿ ಈ ಮುದ್ರೆಯುಂಗುರವನ್ನು ಆಕೆಗೆ ಕೊಡು” ಎಂದು ಹರಸಿದನು. ತನ್ನ ಉಂಗುರವನ್ನು ಅವನಿಗೆ ಕೊಟ್ಟನು.

ವಾನರ ಸೈನ್ಯ ಸಮುದ್ರತೀರಕ್ಕೆ ಬಂದಿತು.

ಅಗಾಧವಾದ ಈ ಸಮುದ್ರವನ್ನು ದಾಟುವುದು ಹೇಗೆ? ಹಾರಬೇಕು. ಅಷ್ಟು ಸಾಮರ್ಥ್ಯ ನಮ್ಮಲ್ಲಿ ಯಾರಿಗುಂಟು? ಎಂದು ವಿಚಾರಮಾಡಿ ಎಲ್ಲರೂ ಒಮ್ಮತದಿಂದ ಆಂಜನೇಯನೊಬ್ಬನೇ ಇದಕ್ಕೆ ಸಮರ್ಥನೆಂದು ತೀರ್ಮಾನಿಸಿದರು. ಅವರೆಲ್ಲರ ಇಷ್ಟದಂತೆ ಆಂಜನೇಯನು ವಾಯುವೇಗದಿಂದ ನೂರು ಯೋಜನದ ಸಮುದ್ರವನ್ನು ಲಂಘಿಸಿ ಲಂಕೆಗೆ ಬಂದನು. ರಾವಣನ ಅಂತಃಪುರವನ್ನು ಹೊಕ್ಕು ಅಲ್ಲೆಲ್ಲ ಹುಡುಕಿದನು. ಕಡೆಗೆ ಸೀತೆಯನ್ನು ಅಶೋಕವನದಲ್ಲಿ ಕಂಡನು.

ಭಾಗ್ಯವೋ ಬಡತನವೋ ರಾಮನ ಜೊತೆಗೇ

ಒಂದು ಶಿಂಶುಪಾ ವೃಕ್ಷದ ಕೆಳಗೆ ಶ್ರೀರಾಮನ ಪ್ರಿಯಸತಿ ಕುಳಿತಿದ್ದಾಳೆ. ದುಃಖದಿಂದ ದೇಹ ಸಣ್ಣಗಾಗಿದೆ. ಮಾಸಿದ ಸೀರೆ. ಬರಿ ನೆಲದ ಮೇಲೆ ಕುಳಿತಿದ್ದಾಳೆ. ಎಡೆಬಿಡದೆ ಕಣ್ಣೀರುಗರೆಯುತ್ತಾ “ರಾಮಚಂದ್ರಾ” ಕೃಪಾನಿಧೇ! ನನ್ನೀ ದುರ್ಗತಿಯನ್ನು ನೀನು ತಿಳಿಯಲಾರೆಯಾ? ಈ ಹತಭಾಗಿನಿಗೆ ನಿನ್ನನ್ನು ನೋಡುವ ಭಾಗ್ಯವಿರುವುದೋ ಇಲ್ಲವೋ!” ಎಂದು ಹಲಬುತ್ತಿದ್ದಾಳೆ. ಆಕೆಯ ಸುತ್ತ ವಿಕಾರರೂಪದ ರಕ್ಕಸಿಯರು, “ರಾಮನನ್ನು ಮರೆತುಬಿಡು. ಮಹಾವೀರನೂ ಭಾಗ್ಯವಂತನೂ ಆದ ರಾವಣನನ್ನು ವರಿಸು. ಆತನ ಇಷ್ಟದಂತೆ ನಡೆದರೆ ಎಂತಹ ವೈಭವದಿಂದ ಬಾಳಬಹುದು! ತಿರಸ್ಕರಿಸಿದರೆ ನಿನ್ನ ಬಾಳು ಮುಗಿಯಿತು” ಎಂದು ಪೀಡಿಸುತ್ತಿದ್ದಾರೆ. ಸೀತೆ “ನಾನು ಕನಸಿನಲ್ಲೂ ಪರಪುರುಷನನ್ನು ಸ್ಮರಿಸುವುದಿಲ್ಲ. ಎಡಗಾಲಿನಿಂದಲೂ ಸ್ಪರ್ಶಿಸುವುದಿಲ್ಲ” ಎಂದು ಖಂಡಿತವಾಗಿ ಹೇಳುತ್ತಿದ್ದಾಳೆ.

ಆಂಜನೇಯನು ಗಿಡದ ಮೇಲೆ ಕುಳಿತು ಎಲ್ಲವನ್ನೂ ನೋಡುತ್ತಿದ್ದ, ಕೇಳುತ್ತಿದ್ದ.

ಬೆಳಗಾಗುತ್ತಲೇ ಅಲ್ಲಿಗೆ ರಾವಣನೂ ಬಂದ. ಪದ್ಧತಿಯಂತೆ ಅವನೊಂದಿಗೆ ಅಂತಃಪುರಸ್ತ್ರೀಯರೂ ಬಂದರು.

ರಾವಣನು “ಸೀತೆ, ಮಾಸಿದ ಸೀರೆಯುಟ್ಟು ಉಪವಾಸ ಮಾಡುತ್ತ ಹೀಗೇಕೆ ಕಷ್ಟಪಡುತ್ತಿ? ನಾನು ಮೂರು ಲೋಕದ ರಾಜ. ನನ್ನ ಅರಮನೆ, ಐಶ್ವರ್ಯ, ವೈಭವ ಎಲ್ಲ ನಿನ್ನದು, ಅರಮನೆಗೆ ಬಾ. ಕಾಡಿನಲ್ಲಿ ತಪಸ್ವಿಯಂತೆ ವಾಸಿಸುವ ರಾಮನು ಬದುಕಿರುವನೋ, ಸತ್ತೇಹೋದನೋ!  ಅವನನ್ನು ಮರೆತುಬಿಡು” ಎಂದ.

ಸೀತೆ ಒಂದು ಹುಲ್ಲುಕಡ್ಡಿಯನ್ನು ಮುಂದಿಟ್ಟುಕೊಂಡು ಹೇಳಿದಳು: “ಅಯ್ಯಾ, ನಾನು ಶ್ರೀರಾಮನ ಹೆಂಡತಿ. ಭಾಗ್ಯವೋ ಬಡತನವೋ ಅವನ ಜೊತೆಗೇ ನನಗಿರಲಿ. ನಾನು ನಿನ್ನ ಕಡೆ ನೋಡುವುದೂ ಇಲ್ಲ. ನನ್ನನ್ನು ಹೊತ್ತು ತಂದು ನೀನೂ ನಿನ್ನ ಕುಲವೂ ಹಾಳಾಗುವಂತೆ ಮಾಡಿಕೊಂಡೆ.”

ರಾವಣನು ಇನ್ನೂ ಅವಳನ್ನು ಮಾತನಾಡಿಸಲು ಹೋದ. ಮೂರು ಲೋಕಗಳೂ ರಾವಣನೆಂದರೆ ನಡುಗುತ್ತಿದ್ದವು. ಅಂತಹ ಪರಾಕ್ರಮಿ ಅವನು. ಆದರೆ ಅವಳು ಅವನನ್ನು ಹೇಡಿ, ಪಾಪಿ ಎಂದು ತಿರಸ್ಕರಿಸಿದಳು.

ರಾವಣನಿಗೆ ಕೋಪ ಬಂದಿತು. ಅವಳನ್ನು ಕೊಂದುಬಿಡುತ್ತೇನೆ ಎಂದು ನುಗ್ಗಿದ. ಧಾನ್ಯಮಾಲಿನಿ ಎಂಬ ಅವನ ಹೆಂಡತಿ ಅವನನ್ನು ತಡೆದಳು. ರಾವಣನು ಸೀತೆಗೆ ಎರಡು ತಿಂಗಳ ಅವಕಾಶ ಕೊಟ್ಟ. “ಅಷ್ಟರಲ್ಲಿ ನೀನು ಮನಸ್ಸು ಬದಲಾಯಿಸದೆ ಹೋದರೆ ನಿನ್ನನ್ನು ತಿಂದುಬಿಡುತ್ತೇನೆ” ಎಂದು ಗುಡುಗಿ ಹಿಂದಕ್ಕೆ ಹೋದ.

ರಾವಣನು ಹೋದನಂತರ ರಾಕ್ಷಸಿಯರು ಮನಬಂದಂತೆ ಮಾತನಾಡುತ್ತಾ ಸೀತೆಯನ್ನು ಪೀಡಿಸತೊಡಗಿದರು. ಸೀತಾದೇವಿಗೆ ಬಹು ದುಃಖವಾಯಿತು. ರಾಕ್ಷಸರು ಆಹಾರಕ್ಕಾಗಿ ತನ್ನ ದೇಹವನ್ನು ಕಿತ್ತು ಮೊದಲು ತಾನೇ ತನ್ನ ಜೀವನವನ್ನು ಮುಗಿಸುವುದು ಒಳ್ಳೆಯದು ಎಂದು ನಿಶ್ಚಯಿಸಿದಳು. ಆಗ ತ್ರಿಜಟೆಯೆಂಬ ಮುದಿ ರಕ್ಕಸಿಯೊಬ್ಬಳು ತನ್ನವರನ್ನು ಗದರಿಸಿದಳು. ತನಗಾದ ಒಂದು ಕೆಟ್ಟ ಸ್ವಪ್ನವನ್ನು ತಿಳಿಸಿ, “ಈ ಪತಿವ್ರತೆಯನ್ನು ಹೀಗೆ ಹಿಂಸೆ ಮಾಡಬೇಡಿ. ಲಂಕೆಗೆ ಮಹಾವಿಪತ್ತು ಸಂಭವಿಸಲಿದೆ. ಆಕೆಯ ಕ್ಷೆಮೆಬೇಡಿ” ಅಂದಳು. ಅವರೆಲ್ಲ ಸುಮ್ಮನಾಗಿ ಮಲಗಿದರು.

ಸಂತೋಷದ ಅರುಣೋದಯ

ಮರದ ಮೇಲಿಂದ ಹನುಮಂತನು ಇದನ್ನೆಲ್ಲ ಕಣ್ಣಾರೆ ನೋಡಿದ. ಶ್ರೀರಾಮನ ಗುಣಗಾನ ಮಾಡುತ್ತಾ ಮರದಿಂದಿಳಿದು ಸೀತಾದೇವಿಯ ಮುಂದೆ ನಿಂತ.

ಸೀತಾದೇವಿ ಬೆಚ್ಚಿದಳು. ಇದೂ ರಾವಣನ ತಂತ್ರ ಎಂದು ಹೆದರಿದಳು. ಆದರೆ ಆಂಜನೇಯನು ಪ್ರಮಾಣಮಾಡಿ ನಿಜರೂಪವನ್ನೂ ತೋರಿದ ಮೇಲೆ ಆಕೆಗೆ ನಂಬಿಕೆಯಾಯಿತು. ಆಂಜನೇಯನು ರಾಮ ಲಕ್ಷ್ಮಣರ ಕುಶಲವನ್ನು ತಿಳಿಸಿ ಮುದ್ರೆಯುಂಗುರವನ್ನು ಒಪ್ಪಿಸಿದ. ಸೀತಾದೇವಿಗೆ ತುಂಬಾ ಸಂತೋಷವಾಯಿತು. ಉಂಗುರವನ್ನು ಕಣ್ಣಿಗೊತ್ತಿಕೊಂಡಳು. ವಿವರವಾಗಿ ತನ್ನ ವಿಷಯವನ್ನೆಲ್ಲಾ ಆಂಜನೇಯನಿಗೆ ತಿಳಿಸಿದಳು. “ಎರಡು ತಿಂಗಳೊಳಗೆ ಶ್ರೀರಾಮನು ಬರದಿದ್ದರೆ ನನ್ನ ಆಯುಷ್ಯ ಮುಗಿದ ಹಾಗೆಯೇ. ಹೇಗಾದರೂ ಅಷ್ಟರೊಳಗೆ ನನ್ನನ್ನು ಬಿಡುಗಡೆ ಮಾಡಬೇಕು ಎಂದು ಶ್ರೀರಾಮನಿಗೆ ಹೇಳು” ಎಂದಳು.

ಹನುಮಂತನು “ತಾಯೇ! ಅದುವರೆಗೆ ಕಾಯುವುದೇಕೆ? ಈಗಲೇ ನಾನು ನನ್ನ ಹೆಗಲ ಮೇಲೆ ಕೂರಿಸಿಕೊಂಡು ವಾಯುವೇಗದಲ್ಲಿ ಶ್ರೀರಾಮನೆಡೆಗೆ ಕೊಂಡೊಯ್ಯುತ್ತೇನೆ” ಎಂದನು. ದೇವಿಯು ಅದನ್ನು ಒಪ್ಪಲಿಲ್ಲ. “ಆಂಜನೇಯ, ಅದು ಶ್ರೀರಾಮನ ಕರ್ತವ್ಯ, ಅದಕ್ಕೆ ಕೊರತೆಯುಂಟಾಗಬಾರದು. ಆತನು ಬರುವವರೆಗೆ ಹೇಗಾದರೂ ನಾನು ಕಷ್ಟವನ್ನು ಸಹಿಸುತ್ತೇನೆ. ಗುರುತಿಗಾಗಿ ಇದನ್ನು ನನ್ನ ಪತಿಗೆ ಕೊಡು” ಎಂದು ಚೂಡಾಮಣಿ ಎಂಬ ಒಡವೆಯನ್ನು ಕೊಟ್ಟು ಹನುಮಂತನನ್ನು ಆಶೀರ್ವಾದಿಸಿ ಕಳುಹಿಸಿದಳು.

ಸ್ವಲ್ಪವೂ ಕಾಲಹರಣ ಮಾಡದೆ ಶ್ರೀರಾಮನು ಕಪಿ ವೀರರೊಂದಿಗೆ ಲಂಕೆಗೆ ಹೊರಟನು. ಸಮುದ್ರವನ್ನು ದಾಟಲು ಸೇತುವೆ ನಿರ್ಮಾಣವಾಯಿತು.

ರಾಮನ ಸೈನ್ಯಕ್ಕೂ ರಾವಣನ ಸೈನ್ಯಕ್ಕೂ ಬಹು ಘೋರವಾದ ಯುದ್ಧ ನಡೆಯಿತು. ರಾವಣನೂ ಅಸಾಧಾರಣ ಪರಾಕ್ರಮಿ. ಆವನ ಮಗ ಇಂದ್ರಜಿತು, ತಮ್ಮ ಕುಂಬಕರ್ಣ, ಸೇನಾಪತಿ ಪ್ರಹಸ್ತ ಮೊದಲಾದವರೂ ಶೂರರು. ಅವರೆಲ್ಲ ದೃಢಮನಸ್ಸಿನಿಂದ ಹೋರಾಡಿದರು. ಆದರೆ ರಾವಣನ ಸೈನ್ಯಕ್ಕೆ ಸೋಲಿನ ಮೇಲೆ ಸೋಲಾಯಿತು. ಪ್ರಹಸ್ತ, ಇಂದ್ರಜಿತು, ಕುಂಭಕರ್ಣ ಎಲ್ಲ ಸತ್ತರು. ರಾವಣನು ಅಷ್ಟೆಲ್ಲಾ ಸರ್ವನಾಶವಾಗಿದ್ದರೂ ತನ್ನ ಹಟವನ್ನು ಬಿಡಲಿಲ್ಲ. ಕಡೆಗೆ ರಾಮನೊಂದಿಗೆ ಕಾದಾಡಿದ. ಅವನ ಯುದ್ಧ ಭಯಂಕರವಾಗಿತ್ತು. ಕಡೆಗೆ ರಾವಣ ಸತ್ತುಬಿದ್ದ. ಶ್ರೀರಾಮನು ರಾವಣನ ತಮ್ಮ ವಿಭೀಷಣನಿಗೆ ಲಂಕಾರಾಜ್ಯವನ್ನು ಕೊಟ್ಟ. ಇದೆಲ್ಲ ಮುಗಿದ ಮೇಲೆ ಶ್ರೀರಾಮನ ಮಾತಿನಂತೆ ವಿಭೀಷಣು ಸೀತಾದೇವಿಯನ್ನು ರಾಮನ ಬಳಿಗೆ ಕರೆತಂದ.

ಎಲ್ಲಿಯಾದರೂ ಹೋಗು

ಸೀತಾದೇವಿ  ರಾಮನ ಧ್ಯಾನದಲ್ಲಿಯೇ ಕಾಲ ಕಳೆದಿದ್ದಳು. ರಾವಣನ ಅಸಹ್ಯದ ಮಾತುಗಳು, ಬೆದರಿಕೆ, ರಾಕ್ಷಸಿಯರ ಗರ್ಜನೆ, ಮೂದಲಿಕೆ ಎಲ್ಲವನ್ನೂ ಸಹಿಸಿದ್ದಳು. ರಾಮನು ಬರುತ್ತಾನೆ, ರಾವಣನನ್ನು ಗೆದ್ದು ತನ್ನನ್ನು ಬಿಡಿಸಿಕೊಳ್ಳುತ್ತಾನೆ. ಮತ್ತೆ ತಾನು ಸಂತೋಷವನ್ನು ಕಾಣುತ್ತೇನೆ ಎಂದು ನೆಚ್ಚಿದ್ದಳು.

ರಾಮನು ಗೆದ್ದ, ರಾವಣನು ಸತ್ತ.

ಆದರೆ ಸೀತೆಗೆ ಸಂತೋಷ ಲಭ್ಯವಾಗಲಿಲ್ಲ.

ವಿಭೀಷನು ಸೀತೆಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿಕೊಂಡು ಬಂದನು.

ಸುಗ್ರೀವನ ಸೈನ್ಯ, ವಿಭೀಷಣನ ಸೈನ್ಯ ನಿಂತಿವೆ.

ಸೀತಾದೇವಿ ಪಲ್ಲಕ್ಕಿಯಿಂದ ಇಳಿದಳು. ಶ್ರೀರಾಮನ ಬಳಿಗೆ ಹೋದಳು. ‘ಆರ್ಯಪುತ್ರ!’ ಎಂದಷ್ಟೆ ನುಡಿದಳು. ಸಂತೋಷದಿಂದ ಗಂಟಲು ಕಟ್ಟಿತು.

ಶ್ರೀರಾಮನು ಆಕೆಗೆ ಹೇಳಿದ: “ಎಲೆ ಕಲ್ಯಾಣಿ! ನೀನು ನಿರ್ಬಂಧದಿಂದ ಮುಕ್ತಳಾಗಿರುವೆ. ರಾಜಧರ್ಮವನ್ನು ಹಿಡಿದು ನಾನು ನಿನ್ನನ್ನು ಬಿಡಿಸಲು ಬಂದೆ. ನಿನ್ನ ಮೇಲಿನ ಮೋಹದಿಂದಲ್ಲ. ರಾಕ್ಷಸನ ವಶದಲ್ಲಿ ವರ್ಷಕಾಲವಿದ್ದ ನಿನ್ನನ್ನು ಮೊದಲಿನಂತೆ ಹೆಂಡತಿ ಎಂದು ನಾನು ಕರೆದುಕೊಳ್ಳಲಾರೆ. ಈಗ ನೀನು ಸ್ವತಂತ್ರಳು. ಎಲ್ಲಿಯಾದರೂ ಹೋಗಿ ಬದುಕು.”

ಅಗ್ನಿಪ್ರವೇಶ

ಶ್ರೀರಾಮನಂತಹ ದಯಾಳು. ಇಂತಹ ಕಠೋರ ಮಾತುಗಳನ್ನಾಡುವನೇ? ಸೀತಾ ತನ್ನ ಕಿವಿಗಳನ್ನೇ ನಂಬಲಾರದೆ ಹೋದಳು.

“ಇದು ನನ್ನ ಸತ್ವಪರೀಕ್ಷೆ. ಆಗಲಿ. ಪತಿಗೆ ಬೇಡವಾದ ನಾನು ಇರುವುದೇ ಬೇಡ. ಈ ದೇಹವನ್ನು ಅಗ್ನಿದೇವನಿಗೆ ಅರ್ಪಿಸುತ್ತೇನೆ” ಎಂದು ನಿಶ್ಚಯ ಮಾಡಿದಳು.

ಲಕ್ಷ್ಮಣನತ್ತ ನೋಡಿ, “ವತ್ಸ ಲಕ್ಷ್ಮಣಾ! ಅಗ್ನಿಯನ್ನು ಹೊತ್ತಿಸು, ಈ ದೇಹವು ಅಗ್ನಿಗೆ ಅರ್ಪಿತವಾಗಲಿ” ಅಂದಳು.

ಲಕ್ಷ್ಮಣನು ಅಣ್ಣನನ್ನು ದುರುಗುಟ್ಟಿ ನೋಡಿದ ಸುಗ್ರೀವಾದಿ ವೀರರೆಲ್ಲಾ ನಡುಗಿಹೋದರು. ಶ್ರೀರಾಮನು ದಿಟ್ಟವಾಗಿ ಅಚಲ ಪರ್ವತದಂತೆ ನಿಂತಿದ್ದಾನೆ. ಕಣ್ಣೀರಿಡುತ್ತಾ ಲಕ್ಷ್ಮಣನು ಅಗ್ನಿಯನ್ನು ಸಿದ್ಧ ಮಾಡಿದ.

ಸೀತಾದೇವಿ ಪತಿಯ ಕಡೆ ನೋಡಿ ಕೈಮುಗಿದು “ಅಗ್ನಿದೇವಾ! ನಾನು ಸದಾ ಶ್ರೀರಾಮನೇ ನನ್ನ ಪತಿಯೆಂದು ಯೋಚಿಸುತ್ತ ಪರಿಶುದ್ಧೆಯಾಗಿದ್ದರೆ ನನ್ನನ್ನು ರಕ್ಷಿಸು” ಎಂದಳು. ಅಗ್ನಿಗೆ ಪ್ರದಕ್ಷಿಣೆ ಮಾಡಿದಳು. ಧಗಧಗನೆ ಉರಿಯುತ್ತಿದ್ದ ಬೆಂಕಿಯಲ್ಲಿ ಪ್ರವೇಶ ಮಾಡಿದಳು.

‘ಅಗ್ನಿದೇವಾ, ನಾನು ಪರಿಶುದ್ದೆಯಾಗಿದ್ದರೆ ನನ್ನನ್ನು ರಕ್ಷಿಸು.’

ನೋಡುತ್ತಿದ್ದವರಿಗೆ ಎದೆ ಝಲ್‌ ಎಂದಿತು. ವಾನರರೂ ರಾಕ್ಷಸರೂ ನಡುಗಿಹೋದರು. ಹೆಂಗಸರು ಹಾಹಾಕಾರ ಮಾಡಿದರು.

ಆದರೆ ಅಗ್ನಿ ಶಮನವಾಯಿತು. ಅಗ್ನಿಪುರುಷನು ಸೀತಾದೇವಿಯನ್ನೆತ್ತಿಕೊಂಡು ಮೇಲೆದ್ದು ಬಂದು “ರಾಮಚಂದ್ರಾ! ಈ ಸತಿ ದೋಷರಹಿತಳು! ಈಕೆಯಲ್ಲಿ ನೀನು ಸಂದೇಹಪಡುವುದೇ? ಇದೋ ಈ ಮಂಗಾಳಾಂಗಿಯನ್ನು ಸ್ವೀಕರಿಸು” ಎಂದು ಶ್ರೀರಾಮನಿಗೆ ಸೀತೆಯನ್ನು ಒಪ್ಪಿಸಿದನು. ಮೇಲಿನಿಂದ ಮಂಗಳವಾದ್ಯಗಳು ಮೊಳಗಿದುವು. ಹೂಮಳೆಗರೆಯಿತು. ಶ್ರೀರಾಮನು “ಸೀತೆಯು ಪರಿಶುದ್ಧೆಯೆಂದು ನಾನು ಬಲ್ಲೆ. ಆದರೂ ಜನರು ಕೆಟ್ಟಮಾತು ಆಡದೆ ಇರಲಿ ಎಂದು ನಾನು ಹೀಗೆ ಆಚರಿಸಿದೆ” ಎಂದು ಹೇಳುತ್ತಾ ಸೀತೆಯನ್ನು ಸಂತೋಷದಿಂದ ಸ್ವೀಕರಿಸಿದನು.

ಅಲ್ಲಿಗೆ ವನವಾಸದ ಅವಧಿ ಮುಗಿಯಿತು. ಶ್ರೀರಾಮನು ಪುಷ್ಪಕವಿಮಾನದಲ್ಲಿ ಅಯೋಧ್ಯೆಗೆ ಹೊರಟನು. ಮಹಾ ಸಂಭ್ರಮದಿಂದ ಭರತನೂ ಪ್ರಜೆಗಳೂ ಸ್ವಾಗತವಿತ್ತರು. ಎಲ್ಲರ ಮುಖಗಳಲ್ಲಿ ಭಾನುಪ್ರಕಾಶ, ಎಲ್ಲರ ಬಾಯಲ್ಲೂ ಸೀತಾವೃತ್ತಾಂತ. ಪಟ್ಟಾಭೀಷೇಕಕ್ಕೆ ಸರ್ವಸಿದ್ಧತೆಯಾಗಿತ್ತು. ಶ್ರೀರಾಮಚಂದ್ರನು ಪಟ್ಟಾಭಿಷಿಕ್ತನಾದನು.

ಜಗನ್ಮಾತಪಿತೃಗಳಾದ ಸೀತಾದೇವಿ ಶ್ರೀರಾಮರಿಗೆ ನಮ್ಮ ಭಕ್ತಿಯ ಅಂಜಲಿ ಅರ್ಪಿತವಾಗಲಿ.