೧೨-೬-೧೯೨೬ ರಂದು ತಿರುವನಂತಪುರದಲ್ಲಿ ಜನಿಸಿದ ಸೀತಾಲಕ್ಷ್ಮಿ ಅವರ ಸಂಗೀತ ಶಿಕ್ಷಣ ಪಾಲ್ಘಾಟ್‌ ವೈದ್ಯನಾಥ ಅಯ್ಯರ್ ಕೆ.ಎಸ್‌. ನಾರಾಯಣಸ್ವಾಮಿ ಅಯ್ಯರ್ ತಂಜಾವೂರು ವಿ. ಶಂಕರನ್‌, ಶೆಮ್ಮೆಂಗುಡಿ ಶ್ರೀನಿವಾಸ ಐಯ್ಯರ್ ರವರಂತಹ ವಿದ್ವನ್ಮಣಿಗಳಲ್ಲಿ ನಡೆಯಿತು. ಸ್ವಂತ ಸಾಧನೆಯೂ ಸೇರಿ ಸೀತಾಲಕ್ಷ್ಮಿಯವರು ಉತ್ತಮ ಗಾಯಕಿಯರ ಸಾಲಿಗೆ ಸೇರುವವರಾದರು.

ಆಕಾಶವಾಣಿಯ ‘ಎ’ ಶ್ರೇಣಿಯ ಕಲಾವಿದೆಯಾಗಿರುವ ಇವರ ಗಾಯನ ಕಾರ್ಯಕ್ರಮಗಳು ಆಕಾಶವಾಣಿ – ದೂರದರ್ಶನಗಳಿಂದ ಪ್ರಸಾರವಾಗುತ್ತಿರುತ್ತವೆ. ರಾಮರಾವ್‌. ವಿ. ನಾಯಕ ಅವರಲ್ಲಿ ಸ್ವಲ್ಪ ಕಾಲ ಹಿಂದೂಸ್ಥಾನಿ ಸಂಗೀತ ಪದ್ಧತಿಯನ್ನೂ ಅಭ್ಯಾಸಮಾಡಿರುವ ಸೀತಾಲಕ್ಷ್ಮಿಯವರು ಭಜನ್‌ಗಳನ್ನು ಹಾಡುವುದರಲ್ಲಿ ಪರಿಣತರು. ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿಯ ಸ್ವರ್ಣಪದಕ ಅತ್ಯುತ್ತಮ ಕಿರಿಯ ಕಲಾವಿದೆ ಪ್ರಶಸ್ತಿಗಳೂ ದೊರಕಿರುವ ಶ್ರೀಮತಿಯವರು ದಕ್ಷಿಣ ಭಾರತದ ಎಲ್ಲಾ ಪ್ರತಿಷ್ಥಿತ ಸಭೆ, ಸಂಸ್ಥೆಗಳಲ್ಲೂ ಹಾಡಿ ಜನರ ಮನ ಗೆದ್ದಿರುತ್ತಾರೆ. ಸದ್ಗುರು ‘ಸಂಗೀತ ಸಮಿತಿ’ಯನ್ನು ಸ್ಥಾಪಿಸಿ ತನ್ಮೂಲಕ ಅನೇಕ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.

ವಿವಾಹಾನಂತರ ಸುಮಾರು ಆರು ದರ್ಶಗಳಿಂದಲೂ ಬೆಂಗಳೂರು ನಿವಾಸಿಯಾಗಿರುವ ಸೀತಾಲಕ್ಷ್ಮಿಯವರಿಂದ ಶಿಕ್ಷಣ ಪಡೆದಿರುವ ಸಂಗೀತ ವಿದ್ಯಾರ್ಥಿಗಳು ಅನೇಕ. ಹಲವಾರು ಸಂಘ-ಸಂಸ್ಥೆಗಳು ಇವರ ಕಲಾ ಸೇವೆಯನ್ನು ಗುರುತಿಸಿ ಆದರಿಸಿದೆ. ತಿರುಮಲ ತಿರುಪತಿ ದೇವಾಲಯದಿಂದ ‘ಗಾನ ಸರಸ್ವತಿ’ ರಾಜ್ಯ ಸಂಗೀತ – ನೃತ್ಯ ಅಕಾಡೆಮಿಯಿಂದ “ಕರ್ನಾಟಕ ಕಲಾ ಶ್ರೀ” “ಪ್ರತಿಷ್ಠಿತ ಚೌಡಯ್ಯ ಸ್ಮಾರಕ ಪ್ರಶಸ್ತಿ”, “ಗಾನ ಕಲಾ ಪ್ರಪೂರ್ಣೇ”, “ಕಲಾ ಜ್ಯೋತಿ” ಮುಂತಾದ ಗೌರವಗಳು ಲಭಿಸಿವೆ. “ಸಂಗೀತ ಕಲಾ ರತ್ನ” ಪ್ರಶಸ್ತಿಯನ್ನು ಪಡೆದಿರುವ ಶ್ರೀಮತಿಯವರು ವೇದಿಕೆಯಿಂದ ನಿವೃತ್ತರಾಗಿ ಸಂಗೀತ ಶಿಕ್ಷಣ ಕಾರ್ಯದಲ್ಲಿ ತೊಡಗಿದ್ದು ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ.