ವಿಜಾಪುರದಲ್ಲಿ ಜನಿಸಿ, ಮಹಾರಾಷ್ಟ್ರದಲ್ಲಿ ಸಂಗೀತ ಶಿಕ್ಷಣ ಪಡೆದು ದೇಶದ ತುಂಬೆಲ್ಲ ಹೆಸರು ಗಳಿಸಿ ಬೆಂಗಳೂರಿನಲ್ಲಿ ನೆಲೆಸಿರುವ ಶ್ರೀಮತಿ ಸೀತಾ ಎ. ಕಾಗಲ್‌ ಅವರು ಕರ್ನಾಟಕದ ಹಿರಿಯ ತಲೆ ಮಾರಿನ ಮಹಿಳಾ ಕಲಾವಿದರೆಯಲ್ಲಿ ಒಬ್ಬರಾಗಿದ್ದಾರೆ. ೧೯೨೧ರಲ್ಲಿ ಬಿಜಾಪುರದಲ್ಲಿ ಜನಿಸಿದ ಶ್ರೀಮತಿ ಸೀತಾ ಎ. ಕಾಗಲ್‌ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಮಾಧ್ಯಮದಲ್ಲಿ ಪ್ರತಿಭಾನ್ವಿತ ಹೆಸರು.

ಕಿರಾಣಾ ಘರಾಣದ ವೈವಿಧ್ಯತೆಗೆ ಹೆಸರಾದ ಶ್ರೀಮತಿ ಸೀತಾರ ಗುರು ಪರಂಪರೆ ಬಹಳ ದೀರ್ಘವಾದುದು. ಪುಣೆಯ ಗಂಧರ್ವ ವಿದ್ಯಾಲಯದಲ್ಲಿ ಶ್ರೀ ವಿನಾಯಕರಾವ್‌ ಪಟವರ್ಧನ್‌, ದಶರಥ ಮುಲೇ ಮತ್ತು ಸವಾಯಿ ಗಂಧರ್ವರ ಶಿಸ್ತಿನ ಶಿಕ್ಷಣದಲ್ಲಿ ಪಳಗಿದವರು ಶ್ರೀಮತಿ ಸೀತಾ.

ತಮ್ಮ ಹದಿನಾಲ್ಕನೇ ವಯಸ್ಸಿನಲ್ಲೇ ಪ್ರಯಾಗದಲ್ಲಿ ನಡೆದ ಸಂಗೀತ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ಪಡೆದ ಶ್ರೀಮತಿ ಸೀತಾರ ಸಂಗೀತ ಪಯಣ ಬಹಳ ಸುದೀರ್ಘವಾದುದು. ಅಲಹಾಬಾದ್‌, ಕಾನ್‌ಪುರ, ಬನಾರಸ್‌ ಮುಂತಾದ ಕಡೆ ಅನೇಕ ಉತ್ಸವಗಳಲ್ಲಿ ಸೀತಾ ಅವರ ಕಾರ್ಯಕ್ರಮಗಳು ನಡೆದಿವೆ. ಶ್ರೀಮತಿ ಹೀರಾಬಾಯಿ ಬಡೋಡೆಕರ್ ಅವರ ಆಹ್ವಾನದ ಮೇರೆಗೆ ನಿಜಾಮರ ಹೈದ್ರಾಬಾದ್‌ ಬಾನುಲಿ ಮತ್ತು ಔರಂಗಾಬಾದ್‌ ಬಾನುಲಿಯಲ್ಲಿ ನೇರ ಪ್ರಸಾರ ನೀಡಿದ ಹೆಗ್ಗಳಿಕೆ ಸೀತಾ ಅವರದು. ಆಕಾಶವಾಣಿಯ ಬೆಂಗಳೂರು, ಮುಂಬೈ, ಧಾರವಾಡ, ಪುಣೆ, ಅಲಹಾಬಾದ್‌ ಕೇಂದ್ರಗಳು ಸೀತಾ ಅವರ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿವೆ.

ಪಂಡಿತ್‌ ಸರ್ ತೇಜ್‌ ಬಹದ್ದೂರ್ ಸಪುರವರಿಂದ ‘ಮಹಾರಾಷ್ಟ್ರದ ಹಿಂದೂಸ್ಥಾನಿ ಸಂಗೀತದ ತಾರೆ’, ‘ನೈಟಿಂಗೇಲ್‌ ಆಫ್‌ ಮಹಾರಾಷ್ಟ್ರ’ ಮುಂತಾದ ಬಿರುದುಗಳಿಗೆ ಪಾತ್ರರಾದ ಸೀತಾ ಅವರಿಗೆ ಕರ್ನಾಟಕ ಸರ್ಕಾರ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನಿತ್ತು ಗೌರವಿಸಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೯-೨೦೦೦ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.