ಸೀಮೆ ಬದನೆ ಅಥವಾ ಚೋಚೋಕಾಯಿ ವಿದೇಶಿ ಬೆಳೆಯಾದಾಗ್ಯೂ ಸಹ ಜನಪ್ರಿಯತೆ ಮತ್ತು ಉತ್ಪಾದನೆಗಳನ್ನು ನೋಡಿದರೆ ನಮ್ಮ ದೇಶದ್ದೇ ಎನಿಸುವಂತಿದೆ. ಇದರ ಬೇಸಾಯ ಸುಲಭ.

ಸೀಮೆ ಬದನೆ ಕಾಯಿಗಳ ಜೊತೆಗೆ ಚಿಗುರು ಕುಡಿಗಳು, ಬೇರುಗೆಡ್ಡೆಗಳು ಉಪಯುಕ್ತ ಭಾಗಗಳಾಗಿವೆ. ಬಿತ್ತನೆಯಾದ ಮೂರು-ನಾಲ್ಕು ವರ್ಷಗಳಲ್ಲಿ ಬೇರುಗಳಲ್ಲಿ ಶರ್ಕರಪಿಷ್ಟಗಳು ಸಂಗ್ರಹಗೊಂಡು ಉಬ್ಬುತ್ತವೆ. ಅವುಗಳನ್ನು ಹಸಿಯಾಗಿ ಇಲ್ಲವೆ ಬೇಯಿಸಿ ತಿನ್ನಬಹುದು. ಹಸಿಗೆಡ್ಡೆಗಳು ರುಚಿಯಲ್ಲಿ ನೀರಿನಲ್ಲಿ ನೆನೆಸಿಟ್ಟ ಅಕ್ಕಿಯಂತಿರುತ್ತವೆ. ಬೇಯಿಸಿದಾಗ ಅವುಗಳ ರುಚಿ ಹೆಚ್ಚುತ್ತದೆ. ಅದರ ಜೊತೆಗೆ ವಾಸನೆ ಸಹ ಉತ್ತಮಗೊಳ್ಳುವುದು.

ಪೌಷ್ಟಿಕ ಗುಣಗಳುಇದರ ಕಾಯಿ, ಗೆಡ್ಡೆ ಮತ್ತು ಚಿಗುರುಗಳಲ್ಲಿ ಶರೀರದ ಬೆಳವಣಿಗೆಗೆ ಅಗತ್ಯವಿರುವ ಶರ್ಕರಪಿಷ್ಟ, ಪ್ರೊಟೀನ್, ಕೊಬ್ಬು, ಖನಿಜ ಪದಾರ್ಥಗಳು ಹಾಗೂ ಜೀವಸತ್ವಗಳು ಗಣನೀಯ ಪ್ರಮಾಣದಲ್ಲಿರುತ್ತವೆ.

೧೦೦ ಗ್ರಾಂ ಕಾಯಿ, ಗೆಡ್ಡೆ ಮತ್ತು ಚಿಗುರುಗಳಲ್ಲಿನ ವಿವಿಧ ಪೋಷಕಾಂಶಗಳು

  ಕಾಯಿ ಗೆಡ್ಡೆ ಚಿಗುರು
ತೇವಾಂಶ ೮೯.೮ ಗ್ರಾಂ ೭೯.೦ ಗ್ರಾಂ ೯೨.೨ ಗ್ರಾಂ
ಶರ್ಕರಪಿಷ್ಟ ೭.೭ ಗ್ರಾಂ ೧೭.೮ ಗ್ರಾಂ
ಪ್ರೊಟೀನ್ ೦.೯ ಗ್ರಾಂ ೪.೦ ಗ್ರಾಂ
ಕೊಬ್ಬು ೦.೨ ಗ್ರಾಂ
ಒಟ್ಟು ಖನಿಜ ಪದಾರ್ಥ ೧.೦ ಗ್ರಾಂ
ನಾರು ಪದಾರ್ಥ ೦.೪ ಗ್ರಾಂ ೦.೩ ಗ್ರಾಂ
ಕ್ಯಾಲ್ಸಿಯಂ ೬೨ ಮಿ.ಗ್ರಾಂ
ಕಬ್ಬಿಣ ೧.೪ ಮಿ.ಗ್ರಾಂ
’ಎ’ ಜೀವಸತ್ವ ೬೫೦ ಮಿ.ಗ್ರಾಂ
’ಸಿ’ ಜೀವಸತ್ವ ೨೪ ಮಿ.ಗ್ರಾಂ

ಔಷಧೀಯ ಗುಣಗಳು : ಇದರ ಕಾಯಿಗಳನ್ನು ತರಕಾರಿಯಾಗಿ ಸಕ್ಕರೆ ಕಾಯಿಲೆ ಇರುವವರು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕು. ಸುಲಭವಾಗಿ ಜೀರ್ಣಗೊಳ್ಳುತ್ತದೆ. ಇದರ ಎಲೆಗಳ ರಸವನ್ನು ಕಣ್ಣು ನೋವಿಗೆ ನಿರ್ದೇಶಿಸುವುದುಂಟು.

ಉಗಮ ಮತ್ತು ಹಂಚಿಕೆ : ಇದರ ತವರೂರು ದಕ್ಷಿಣ ಮೆಕ್ಸಿಕೊ, ಮಧ್ಯ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್. ಇದು ಅಜ್ಟೆಕ್ ಜನರ ದಿನಬಳಕೆ ತರಕಾರಿಯಾಗಿತ್ತು. ಅಲ್ಲಿ ಇದನ್ನು ’ಚಯೋಟಿ’ ಎಂದು ಕರೆಯುತ್ತಿದ್ದರು. ಈಗ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಇದರ ಬೇಸಾಯ ಮತ್ತು ಬಳಕೆಗಳು ಇವೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಇದರ ಬೇಸಾಯ ಮತ್ತು ಬಳಕೆಗಳು ಬಲು ವ್ಯಾಪಕ. ಬೆಂಗಳೂರಿನಂತಹ ದೊಡ್ಡ ನಗರಗಳ ಸುತ್ತಮುತ್ತ ಇದು ವಾಣಿಜ್ಯ ತರಕಾರಿ ಬೆಳೆಯಾಗಿದೆ.

ಸಸ್ಯ ವರ್ಣನೆ : ಸೀಮೆ ಬದನೆ ಕುಕುರ್ಬಿಟೇಸೀ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ಬಳ್ಳಿ. ಇದು ಕಾಡುಬಗೆಯಾಗಿ ಎಲ್ಲೂ ಕಾಣಸಿಗುವುದಿಲ್ಲ. ಗ್ವಾಟೆಮಾಲದಲ್ಲಿ ಇದರ ೨೪ ಬಗೆಗಳಿರುವುದಾಗಿ ತಿಳಿದುಬಂದಿದೆ. ಇದರ ವರ್ಣತಂತುಗಳ ಸಂಖ್ಯೆ ೨n=24.

ಇದು ತೀವ್ರಗತಿಯಲ್ಲಿ ಬೆಳೆಯುವಂತಹ ಬಳ್ಳಿ. ಒಂದೇ ಬಳ್ಳಿಯಲ್ಲಿ ಗಂಡು ಮತ್ತು ಹೆಣ್ಣು ಹೂಗಳೆರಡೂ ಬಿಡುತ್ತವೆ. ಸಸ್ಯ ಭಾಗಗಳು ರಸವತ್ತಾಗಿದ್ದು ಆಸರೆ ಸಿಕ್ಕಿದರೆ ಮೇಲಕ್ಕೆ ಬೆಳೆಯುತ್ತವೆ. ಬಳ್ಳಿಯ ಹಂಬುಗಳು ಮೇಲಕ್ಕೇರಲು ನುಲಿಬಳ್ಳಿಗಳು ನೆರವಾಗುತ್ತವೆ. ಸೂಕ್ತ ಆರೈಕೆಯಿದ್ದಲ್ಲಿ ೧೨ ರಿಂದ ೧೮ ಮೀಟರ್‌ಉದ್ದಕ್ಕೆ ಬೆಳೆಯುತ್ತದೆ. ಒಂದು ವರ್ಷದ ಅವಧಿಯಲ್ಲಿ ಹಂಬು ೧೨ ರಿಂದ ೧೫ ಮೀಟರ್ ಉದ್ದಕ್ಕೆ ಸಾಗುತ್ತದೆ.

ಕಾಂಡ ಬಲಹೀನ. ಉದ್ದಕ್ಕೆ ಗೀರುಗಳಿದ್ದು ಸ್ವಲ್ಪ ಅದುಮಿದಂತೆ ಕಾಣುತ್ತದೆ. ಕೆಲವೊಮ್ಮೆ ಕವಲೊಡೆದು ದೊಡ್ಡ ನುಲಿ ಬಳ್ಳಿಗಳಿಂದ ಕೂಡಿರುವುದುಂಟು. ಕಾಂಡದ ಬಣ್ಣ ತೆಳುಹಸುರು. ನುಲಿಬಳ್ಳಿಗಳು ಎಲೆ ತೊಟ್ಟುಗಲ ಬುಡದಲ್ಲಿ ಒಳಸೇರಿದಂತೆ ಕಾಣುತ್ತವೆ. ಅವು ತೀವ್ರಗತಿಯಲ್ಲಿ ವೃದ್ಧಿ ಹೊಂದುತ್ತವೆ. ತುದಿಯತ್ತ ಎರಡರಿಂದ ಐದು ಕವಲುಗಳಿರುತ್ತವೆ. ಬಣ್ಣ ಬಿಳಿ ಹಸುರು, ೧೫ ರಿಂದ ೪೦ ಸೆಂ.ಮೀ. ಉದ್ದವಿದ್ದು, ನುಣುಪಾಗಿರುತ್ತದೆ.

ಎಲೆಗಳಿಗೆ ಉದ್ದನಾದ ತೊಟ್ಟು ಇರುತ್ತದೆ. ಎಲೆಯ ಬುಡಭಾಗ ಹೃದಯಾಕಾರವಿದ್ದು ಮೂಲೆಗಳಿಂದ ಕೂಡಿರುತ್ತದೆ. ತುದಿ ಮುಂದಕ್ಕೆ ಚಾಚಿ ಚೂಪಾಗಿರುತ್ತದೆ; ಅಂಚು ಕಚ್ಚುಗಳಿಂದ ಕೂಡಿರುತ್ತದೆ. ಎಲೆಯ ಮೇಲ್ಭಾಗ ದಟ್ಟ ಹಸುರು ಬಣ್ಣ, ತಳಭಾಗ ತೆಳು ಹಸುರು ಬಣ್ಣ. ನರಗಳು ಸ್ಪಷ್ಟ. ಎಲೆಯ ಎರಡೂ ಕಡೆ ಸೂಕ್ಷ್ಮ ಹಾಗೂ ಒರಟಾದ ತುಪ್ಪಳ ಇರುತ್ತದೆ. ನರಗಳ ಸಂಖ್ಯೆ ೫ ರಿಂದ ೭, ಕವಲು ನರಗಳು ಎಲೆಯ ಎಲ್ಲಾ ಭಾಗಗಳಲ್ಲಿ ಹರಡಿತುತವೆ. ಬಿಡಿ ಎಲೆಗಳು ಸುಮಾರು ೭ ರಿಂದ ೨೫ ಸೆಂ.ಮೀ. ಅಗಲ ಮತ್ತು ಅಷ್ಟೇ ಉದ್ದ ಇರುತ್ತವೆ. ಹೂವು ಗಾತ್ರದಲ್ಲಿ ಬಲು ಸಣ್ಣ, ಎಲೆ ತೊಟ್ಟಿನ ಕಂಕುಳಲ್ಲಿ ಬಿಡುತ್ತವೆ. ಗಂಡು ಹೂವು ಸಣ್ಣ ಗೊಂಚಲುಗಳಲ್ಲಿಯೂ ಮತ್ತು ಹೆಣ್ಣು ಹೂವು ಬಿಡಿಬಿಡಿಯಾಗಿಯೂ ಇರುತ್ತವೆ. ಹೂಗಳ ಬಣ್ಣ ಹಸುರು ಇಲ್ಲವೇ ಕೆನೆ ಬಿಳುಪು. ಸುಮಾರು ೧.೨೫ ಸೆಂ.ಮೀ. ಅಗಲ ಇರುತ್ತವೆ. ಪುಷ್ಪ ಪಾತ್ರೆಯಲ್ಲಿ ಐದು ಎಸಳುಗಳಿದ್ದು ಆಳವಾಗಿ ಸೀಳಿದ್ದು ಈಟಿಯಾಕಾರವಿರುತ್ತವೆ. ಹೂದಳಗಳು ಸಹ ಐದು ಸೀಳುಗಳಿರುತ್ತವೆ. ಸ್ವಲ್ಪ ಸಮಯದ ನಂತರ ಉದುರಿ ಬೀಳುತ್ತವೆ. ಕೇಸರಗಳ ಸಂಖ್ಯೆ ಐದು. ಪರಾಗ ಕೋಶಗಳು ಎರಡು ಹೂಗಳಿಂದ ಕೂಡಿರುತ್ತವೆ. ಅಂಡಾಶಯ ಅಧೋಸ್ಥಿತಿ, ಆಕಾರ ಪೇರುಹಣ್ಣನಂತೆ. ಅಂಡಾಶಯದ ಮೇಲೆ ಉಬ್ಬಿದ ಐದು ಗೀರುಗಳಿರುತ್ತವೆ. ಮೇಲೆಲ್ಲಾ ನವಿರಾದ ತುಪ್ಪಳವಿರುತ್ತದೆ. ಶಲಾಕೆ ಒಂದೇ, ಶಲಾಕಾಗ್ರ ಮಾತ್ರ ಎರಡು -ಮೂರು ಹೋಳುಗಳಂತಿದ್ದು ದಪ್ಪನಾಗಿ ಬಾಗಿರುತ್ತದೆ.

ಕಾಯಿ ಬಲಿತು ದೊಡ್ಡವಾದಂತೆಲ್ಲಾ ಭಾರದಿಂದಾಗಿ ಇಳಿ ಬಿದ್ದಿರುತ್ತವೆ. ತುದಿಯಲ್ಲಿ ಆಳವಾದ ಸೀಳುಗಳಿದ್ದು ಬೆಳ್ಳಗೆ, ಹಸುರು ಅಥವಾ ಹಳದಿ ಹಸುರು ಬಣ್ಣವಿರುತ್ತವೆ. ಸಿಪ್ಪೆ ಹೊಳಪು, ಮೇಲೆ ಅಲ್ಲಲ್ಲಿ ವಿರಳವಾದ ಮೃದುವಾದ ಕೂಳೆ ಅಥವಾ ಮುಳ್ಳುಗಳಿರುತ್ತವೆ. ಬಲಿತಾಗ ಕಾಯಿ ೧೦ ರಿಂದ ೨೦ ಸೆಂ.ಮೀ. ಉದ್ದವಿರುತ್ತವೆ. ತಿರುಳಿನ ಬಣ್ಣ ಬಿಳುಪು. ಒಂದು ಕಾಯಿಗೆ ಒಂದೇ ಬೀಜ. ಕಾಯಿ ಪೂರ್ಣ ಬಲಿತರೂ ಗಟ್ಟಿಯಾಗಿಯೇ ಇರುತ್ತವೆ. ಬಲಿತ ಕಾಯಿಗಳು ಬಳ್ಳಿಯಿಂದ ಕಳಚಿ ಬೀಳುವ ಮೊದಲೇ ಬೀಜ ಮೊಳೆತಿರುತ್ತದೆ.

ಬೀಜ ಗಾತ್ರದಲ್ಲಿ ದೊಡ್ಡದು. ೧೦ ರಿಂದ ೧೫ ಸೆಂ.ಮೀ. ಉದ್ದ, ೫ ರಿಂದ ೮ ಸೆಂ.ಮೀ. ಅಗಲ ಮತ್ತು ೧ ರಿಂದ ೧.೫ ಸೆಂ.ಮೀ. ದಪ್ಪ ಇರುತ್ತದೆ. ಬಣ್ಣದಲ್ಲಿ ಹಾಲುಬಿಳುಪು, ಅಂಡಾಕಾರ ಇಲ್ಲವೇ ಸ್ವಲ್ಪ ಓರೆಯಾಗಿ, ಅದುಮಿದಂತೆ ಇದ್ದು ಕಾಯಿಯ ತುದಿಗೆ ಅಂಟಿಕೊಂಡು ನಾಲಿಗೆಯಂತೆ ಕಾಣುವುದು. ಬೀಜದಲ್ಲಿ ಎರಡು ಬೇಳೆಗಳಿದ್ದು ಸ್ವಲ್ಪ ಹಿಂಭಾಗದಲ್ಲಿ ಒಂದಕ್ಕೊಂದು ಅಂಟಿಕೊಂಡಿರುತ್ತವೆ. ಈ ಎರಡೂ ಬೇಳೆಗಳ ನಡುವೆ ಇರುವುದೇ ಚಿಗುರು ಮೊಗ್ಗು.

ಬೆಳೆಯುತ್ತಿರುವ ಭ್ರೂಣ ಕಾಯಿಯನ್ನು ಸೀಳಿಕೊಂಡು ಚಿಗುರುಮೊಗ್ಗನ್ನು ಹೊರತಳ್ಳುತ್ತದೆ. ಇದರಲ್ಲಿ ತಾಯಿ ಬೇರು ವೃದ್ಧಿಹೊಂದುವುದಿಲ್ಲ. ಪಾರ್ಶ್ವಬೇರುಗಳು ಬಹುಬೇಗ ಬೆಳೆದು ಬೇಳೆಗಳ ಭಾಗವನ್ನು ಪಕ್ಕಕ್ಕೆ ಸರಿಸಿ ಹೊರಬರುತ್ತವೆ. ಹೀಗೆ ಕಾಯಿಯ ಒಳಗೇ ಬೀಜ ಮೊಳೆಯಲು ಅದರ ಹೊರಸಿಪ್ಪೆ ಮರಗಟ್ಟಿ ಗಡುಸಾಗಿರುವುದೇ ಕಾರಣವೆನ್ನಲಾಗಿದೆ.

ಬೇರುಗಳು ಗುಂಪುಗುಂಪಾಗಿದ್ದು ರಸವತ್ತಾಗಿ ತಿನ್ನಲು ಯೋಗ್ಯವಿರುತ್ತವೆ. ಅವುಗಳ ಬಹುಭಾಗ ಪಿಷ್ಟವಾಗಿರುತ್ತದೆ.

ಹವಾಗುಣ : ಇದು ಉಷ್ಣ ಹಾಗೂ ಸಮಶೀತೋಷ್ಣವಲಯಗಳ ತರಕಾರಿ ಬೆಳೆ. ತಂಪಾದ ಹಾಗೂ ಸಾಧಾರಣ ಸೌಮ್ಯ ಹವಾಗುಣ ಇರುವ ಪ್ರದೇಶಗಳು ಹೆಚ್ಚು ಸೂಕ್ತ. ಎತ್ತರದ ಪ್ರದೇಶಗಳಲ್ಲಿ ಚೆನ್ನಾಗಿ ಫಲಿಸುತ್ತವೆ. ಸಾಧಾರಣ ಬಿಸಿಲು ಮತ್ತು ಮಳೆ ಹಾಗೂ ಸಮನಾದ ಹಗಲು ಮತ್ತು ರಾತ್ರಿಗಳಿದ್ದಲ್ಲಿ ಅನುಕೂಲ. ಸಮುದ್ರ ಮಟ್ಟದಿಂದ ೨೧೦೦ ಮೀಟರ್ ಎತ್ತರದವರೆಗೆ ಬೆಳೆಯಬಹುದು. ಹೆಪ್ಪುಗಟ್ಟುವ ಉಷ್ಣತೆ ಇದ್ದಲ್ಲಿ ಬಳ್ಳಿಗಳು ಸತ್ತುಹೋಗುತ್ತವೆ. ಬೆಚ್ಚಗಿನ ಹವಾಗುಣವಿದ್ದಲ್ಲಿ ದೊಡ್ಡ ಗಾತ್ರದ ಗೆಡ್ಡೆಗಳು ಸಾಧ್ಯ.

ಕಾಯಿಗಳ ಬಣ್ಣ ಆಯಾ ಪ್ರದೇಶದ ಎತ್ತರ, ಹವಾಗುಣ ಮುಂತಾದವುಗಳನ್ನನುಸರಿಸಿ ವ್ಯತ್ಯಾಸಗೊಳ್ಳುತ್ತದೆ. ಉದಾಹರಣೆಗೆ ಬೆಟ್ಟ ಪ್ರದೇಶಗಳ್ಲಲಿ ಬೆಳೆದಾಗ ಅವುಗಳ ಬಣ್ಣ ದಟ್ಟ ಹಸುರು ಮತ್ತು ಮೈದಾನ ಹಾಗೂ ಬಿಸಿಲಿನಿಂದ ಕೂಡಿದ ಪ್ರದೇಶಗಳಲ್ಲಿ ಬಿಳಿ ಹಸುರು ಇಲ್ಲವೇ ಬಿಳಿ ಹಳದಿ. ಹೂ ಬಿಡುವ ಮುಂಚೆ ದಿನದಲ್ಲಿ ೧೨ ಗಂಟೆಗಳಷ್ಟು ಬೆಳಕು ಇರುವುದು ಅಗತ್ಯ.

ಭೂಗುಣ : ಸೀಮೆ ಬದನೆ ಬೇಸಾಯಕ್ಕೆ ನೀರು ಬಸಿಯುವ ಫಲವತ್ತಾದ ಗೋಡು ಮಣ್ಣಿನ ಭೂಮಿ ಯೋಗ್ಯವಿರುತ್ತದೆ. ಸ್ವಲ್ಪ ಹುಳಿ ಮಣ್ಣಾದಲ್ಲಿ ಉತ್ತಮ ದರ್ಜೆಯ ಫಸಲು ಸಾಧ್ಯ. ಮಣ್ಣು ಯಾವಾಗಲೂ ಹಸಿಯಾಗಿರಬೇಕು.

ತಳಿಗಳು : ಸೀಮೆ ಬದನೆಯಲ್ಲಿ ನಿರ್ದಿಷ್ಟ ತಳಿಗಳಂತೇನೂ ಇಲ್ಲ. ಕಾಯಿಗಳ ಬಣ್ಣ, ಆಕಾರ, ಸಿಪ್ಪೆಯ ಮೈಭಾಗದಲ್ಲಿನ ಮುಳ್ಳುಗಳು ಅಥವಾ ಕೊಳೆಭಾಗಗಳು, ತುದಿಭಾಗ ಮುಂತಾದ ಅಂಶಗಳ ಮೇಲೆ ಅವುಗಳನ್ನು ವಿವಿಧ ಬಗೆಗಳಾಗಿ ವಿಂಗಡಿಸಬಹುದು. ೧. ಬಿಳಿ ಅಥವಾ ಹಸುರು ಕಾಯಿಗಳ ಬಗೆ, ೨. ಪೇರು ಆಕಾರದ, ದುಂಡಗಿನ ಅಥವಾ ಓರೆಯಾದ ಕಾಯಿಗಳ ಬಗೆ, ೩. ಚೂಪು ಇಲ್ಲವೇ ಮೊಂಡು ತುದಿಯ ಕಾಯಿಗಳ ಬಗೆ, ೪. ಸಿಪ್ಪೆ ನಯವಾಗಿ ಇಲ್ಲವೇ ಮುಳ್ಳುಗಳಿಂದ ಕೂಡಿರುವ ಬಗೆ ಇತ್ಯಾದಿ.

ಈಗ ಲಭ್ಯವಿರುವ ಕಾಯಿಗಳಲ್ಲಿ ಗಾತ್ರ, ಆಕಾರ, ಬಣ್ಣಗಳಲ್ಲಿ ಬಹಳಷ್ಟು ಭಿನ್ನತೆ ಕಂಡುಬರುತ್ತದೆ.

ಸಸ್ಯಾಭಿವೃದ್ಧಿ : ವಾಣಿಜ್ಯವಾಗಿ ಇದನ್ನು ಮೊಳಕೆಯೊಡೆದ ಕಾಯಿ ಬಿತ್ತಿ ಬೆಳೆಸುವುದು ಸಾಮಾನ್ಯ. ಈ ಉದ್ದೇಶಕ್ಕೆ ಕಾಯಿಗಳನ್ನು ಯಥೇಚ್ಛ ಫಸಲು ಬಿಡುವ ಹಾಗೂ ಆರೋಗ್ಯಕರ ಬಳ್ಳಿಗಳಿಂದ ಆರಿಸಿಕೊಳ್ಳಬೇಕು. ಅಂತಹ ಕಾಯಿಗಳು ಗಾತ್ರದಲ್ಲಿ ದೊಡ್ಡವಿದ್ದು, ಪೂರ್ಣ ಬಲಿತಿರಬೇಕು. ಅವು ಮೊಳಕೆಯೊಡೆದಿರಬೇಕು. ಒಂದು ವೇಳೆ ಬಿತ್ತನೆ ವಿಳಂಬವುಂಟಾದರೆ ಕಾಯಿಗಳನ್ನು ತೇವದಿಂದ ಕೂಡಿದ ಮರಳಿನಲ್ಲಿ ಹೂತಿಟ್ಟು ಅನಂತರ ಬಳಸಬಹುದು. ಪ್ರಾರಂಭದಲ್ಲಿ ಬಿಟ್ಟಂತಹ ಕಾಯಿಗಳನ್ನು ಬಿತ್ತನೆಗೆ ಬಳಸುವುದು ಲಾಭದಾಯಕ. ಹೂವು ಬಿಟ್ಟ ಸುಮಾರು ಒಂದು ತಿಂಗಳಲ್ಲಿ ಬೀಜವು ಶಲಾಕಾಗ್ರದ ಕಡೆಯಿಂದ ಚಿಗುರನ್ನು ತಳ್ಳುತ್ತದೆ.

ಕಾಯಿಗಳಿಂದ ಬೇರ್ಪಡಿಸಿದ ಬೀಜ ಅಥವಾ ಒಣಗಿದ ಕಾಯಿಗಳು ಬಿತ್ತನೆಗೆ ಯೋಗ್ಯವಿರುವುದಿಲ್ಲ. ಸೀಮೆ ಬದನೆಯನ್ನು ಮೃದುಕಾಂಡದ ತುಂಡುಗಳ ಮೂಲಕ ಸಹ ವೃದ್ಧಿ ಮಾಡಬಹುದು.

ಭೂಮಿ ಸಿದ್ಧತೆ ಮತ್ತು ಬಿತ್ತನೆ೨.೪ ರಿಂದ  ೩ ಮೀಟರ್ ಅಂತರದಲ್ಲಿ ೬೦ ಸೆ.ಮೀ. ಗಾತ್ರದ ಗುಂಡಿಗಳನ್ನು ತೆಗೆದು ಸಮಪ್ರಮಾಣದ ತಿಪ್ಪೆಗೊಬ್ಬರ ಹಾಗೂ ಮೇಲ್ಮಣ್ಣುಗಳ ಮಿಶ್ರಣದಿಂದ ತುಂಬಬೇಕು. ಒಂದೆರಡು ಮಳೆಗಳಾದ ನಂತರ ಆ ಮಿಶ್ರಣ ಚೆನ್ನಾಗಿ ಕುಳಿತುಕೊಳ್ಳುತ್ತದೆ. ಪ್ರತಿಗುಂಡಿಯ ಮಧ್ಯೆ ಒಂದರಂತೆ ಮೊಳಕೆಯೊಡೆದ ಕಾಯಿಗಳನ್ನು ನೆಲಮಟ್ಟಕ್ಕೆ ಸಮತಲವಾಗಿ ಇಲ್ಲವೇ ಸ್ವಲ್ಪ ಓರೆಯಾಗಿರುವಂತೆ ಊರಬೇಕು. ಕಾಯಿಗಳ ಮೇಲೆ ತೆಳ್ಳಗೆ ಮರಳು ಇಲ್ಲವೇ ಪುಡಿಗೊಬ್ಬರ ಉದುರಿಸಬೇಕು. ಬಿತ್ತುವ ಕಾಲಕ್ಕೆ ಮಣ್ಣು ಹಸಿಯಾಗಿರುವುದು ಮುಖ್ಯ.

ಮತ್ತೊಂದು ವಿಧದಲ್ಲಿ ಸಹ ಕಾಯಿಗಳನ್ನು ಬಿತ್ತುವುದುಂಟು. ಅದೆಂದರೆ ಮೊಳಕೆಯೊಡೆದ ಕಾಯಿಗಳನ್ನು ತೇವದಿಂದ ಕೂಡಿದ ಮರಳಿನಲ್ಲಿ ೧೦ ರಿಂದ ೧೨.೫ ಸೆಂ.ಮೀ. ಆಳದಲ್ಲಿ ಹೂತಿಟ್ಟು ಅವು ಸಾಕಷ್ಟು ಚಿಗುರು ಬಂದನಂತರ, ಗುಂಡಿಗಳಿಂದ ವರ್ಗಾಯಿಸುವುದು. ಬಿತ್ತನೆಗೆ ಏಪ್ರಿಲ್-ಮೇ ತಿಂಗಳು ಸೂಕ್ತ ಕಾಲ.

ಗೊಬ್ಬರ : ಈ ಬೆಳೆಗೆ ಅಧಿಕ ಪ್ರಮಾಣದ ಗೊಬ್ಬರಗಳನ್ನು ಕೊಡಬೇಕಾಗುತ್ತದೆ. ಪ್ರತಿ ವರ್ಷ ಹೆಕ್ಟೇರ್‌ಗೆ ೨೫ ಟನ್ ತಿಪ್ಪೆಗೊಬ್ಬರ ಮತ್ತು ತಲಾ ೪೨೫ ಗ್ರಾಂ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಸತ್ವಗಳನ್ನು ನಾಲ್ಕು ಸಮಕಂತುಗಳಲ್ಲಿ ಅಂದರೆ ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳಲ್ಲಿ ಕೊಡಲು ಸೂಚಿಸಿದೆ.

ನೀರಾವರಿ : ಈ ಬೆಳೆಗೆ ನೀರಾವರಿಯ ಅಗತ್ಯ ಬಹಳ. ಮಳೆ ಇಲ್ಲದ ದಿನಗಳಲ್ಲಿ ವಾರಕ್ಕೊಮ್ಮೆಯಾದರೂ ನೀರು ಕೊಡಬೇಕು. ನೀರಾವರಿ ಇಲ್ಲದೆ ತೋಟಗಳಲ್ಲಿ ಫಸಲು ಕಡಿಮೆ.

ಆಸರೆ ಮತ್ತು ಹಬ್ಬಿಸುವುದು : ನೆಲಮಟ್ಟದಿಂದ ಸುಮಾರು ೨ ಮೀಟರ್‌ಎತ್ತರದಲ್ಲಿ ತಂತಿ

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಪ್ರಾರಂಭದಲ್ಲಿ ಬಳ್ಳಿಗಳು ಚಪ್ಪರವನ್ನು ಆಕ್ರಮಿಸಿಕೊಳ್ಳುವ ತನಕ ಆಗಾಗ್ಗೆ ಪಾತಿಗಳ ಮಣ್ಣನ್ನು ಹಗುರವಾಗಿ ಸಡಿಲಿಸಿ, ಕಳೆಗಳನ್ನು ಕಿತ್ತುಹಾಕಬೇಕು. ಪಾತಿಗಳಲ್ಲಿ ಸುಮಾರು ೧೦  ಸೆಂ.ಮೀ. ಮಂದ ಇರುವಮತೆ ಕಸಕಡ್ಡಿ, ತರಗಲೆ, ಒಣಹುಲ್ಲು ಮುಂತಾದವುಗಳನ್ನು ಹರಡಿ ಹೊದಿಕೆಕೊಟ್ಟರೆ ತೇವ ಬಹುಕಾಲ ಉಳಿದು ಕಳೆಗಳ ಬಾಧೆ ಇರುವುದಿಲ್ಲ.

ಕೆಲವೊಮ್ಮೆ ಸೀಮೆ ಬದನೆಯನ್ನು ನುಗ್ಗೆ, ಕರಿಬೇವು, ಅಗಸೆ ಮುಂತಾದವುಗಳೊಂದಿಗೆ ಬೆಳೆಯುವುದುಂಟು. ಹೀಗೆ ಮಿಶ್ರ ಬೆಳೆಯಾಗಿ ಬೆಳೆದಾಗ ಎರಡೂ ಬೆಳೆಗಳ ಫಸಲು ಕೈಗೆ ಸಿಗುತ್ತದೆ.

ಕೊಯ್ಲು ಮತ್ತು ಇಳುವರಿ : ಒಮ್ಮೆ ಬಳ್ಳಿಗಳು ಚಪ್ಪರದ ಮೇಲೆ ಹರಡಿ ಬೆಳೆದವೆಂದರೆ ಹೂವು ಬಿಡುವ ಸಮಯ ಬಂದಂತೆಯೇ. ಹೆಣ್ಣು ಹೂಗಳು ಪರಾಗಸ್ಪರ್ಶಗೊಂಡು ಕಾಯಿಗಳು ಕೊಯ್ಲಿಗೆ ಸಿದ್ಧಗೊಳಲ್ಲು ಒಂದು ತಿಂಗಳ ಅವಧಿ ಹಿಡಿಸುತ್ತದೆ. ಬಿತ್ತನೆ ಮಾಡಿದ ಐದಾರು ತಿಂಗಳಲ್ಲಿ ಕಾಯಿ ಸಿಗಲು ಪ್ರಾರಂಭ. ಮಹಾರಾಷ್ಟ್ರದ ಪುಣೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸೆಪ್ಟೆಂಬರ್ – ಡಿಸೆಂಬರ್ ಹೆಚ್ಚಿನ ಕೊಯ್ಲು ಗಾಲ. ತಮಿಳುನಾಡಿನಲ್ಲಿ ಎರಡು ಪ್ರಧಾನ ಕೊಯ್ಲು ಗಾಲಗಳಿರುತ್ತವೆ. ಅಕ್ಟೋಬರ್ – ಡಿಸೆಂಬರ್ ಮತ್ತು ಮೇ-ಜೂನ್. ಅಲ್ಲಿ ಫೆಬ್ರುವರಿ-ಮಾರ್ಚ್ ಸಮಯದಲ್ಲಿ ಮಾತ್ರ ತೀರಾ ವಿರಳವಾಗಿ ಸೀಮೆ ಬದನೆ ಮಾರಾಟಕ್ಕೆ ಬರುತ್ತವೆ.

ಬೆಂಗಳೂರು ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಜುಲೈನಿಂದ ಡಿಸೆಂಬರ್‌ವರೆಗೆ ಬಹಳಷ್ಟು ಫಸಲು ಮಾರಾಟಕ್ಕೆ ಬರುತ್ತಿರುತ್ತದೆ. ಕೊಯ್ಲು ಗಾಲ ೨-೩ ತಿಂಗಳಿಗೂ ಮೇಲ್ಪಟ್ಟು ಇರುತ್ತದೆ. ಕೊಯ್ಲು ಮಾಡುವ ಸಮಯಕ್ಕೆ ಬಿಡಿ ಕಾಯಿಗಳು ೨೦೦ ರಿಂದ ೪೦೦ ಗ್ರಾಂ.ಗಳಷ್ಟಾದರೂ ತೂಕವಿರಬೇಕು. ಪ್ರತಿ ಬಳ್ಳಿಗೆ ೫೦-೧೦೦ ಕಾಯಿ ಸಿಗುತ್ತವೆ. ಹಾಗಾಗಿ ಹೆಕ್ಟೇರಿಗೆ ೫೦ ಟನ್ನುಗಳಷ್ಟು ಇಳುವರಿ ಖಂಡಿತ.

ಕೊಯ್ಲಿನ ನಂತರ ಸವರುವುದು : ಪ್ರತಿವರ್ಷ ಬಳ್ಳಿಗಳನ್ನು ನೆಲ ಮಟ್ಟಕ್ಕೆ ಸವರಬೇಕು. ಕೊಯ್ಲಿನ ನಂತರ ಅಂದರೆ ಜನವರಿ ಇದಕ್ಕೆ ಹೆಚ್ಚು ಸೂಕ್ತ. ತಮಿಳುನಾಡಿನಲ್ಲಿ ನೆಲದಲ್ಲಿನ ಬೇರುಗಡ್ಡೆಗಳು ದಪ್ಪಗೊಂಡು ಸಿಹಿಗೆಣಸಿನಂತಾಗುತ್ತದೆ. ಬೇಯಿಸಿ ತಿಂದರೆ ಹೆಚ್ಚು ರುಚಿಯಾಗಿರುತ್ತವೆ. ಅವುಗಳಿಂದ ಚಿಪ್ಸ್ ತಯಾರಿಸಿ ಜೋಪಾನ ಮಾಡಬಹುದು.

ಕೀಟ ಮತ್ತು ರೋಗಗಳು :

. ಕೆಂಪುದುಂಬಿ : ಈ ದುಂಬಿಗಳು ತಂಪು ಹೊತ್ತಿನಲ್ಲಿ ಎಲೆಗಳ ಮೇಲೆಲ್ಲಾ ಹಾರಾಡುತ್ತಿರುತ್ತವೆ. ಬುಡದ ಮಣ್ಣಿನಲ್ಲಿ ಮೊಟ್ಟೆಗಳು ಹಾಗೂ ಮರಿಗಳು ಕಂಡುಬರುತ್ತವೆ. ಎಳೆಯ ಕೀಟಗಳು ಬೇರುಗಳನ್ನು ಕಚ್ಚಿ ಹಾಳು ಮಾಡುತ್ತವೆ. ಪ್ರಾಯದ ದುಂಬಿಗಳು ಎಲೆಗಳನ್ನು ತಿಂಗಳು ಹಾಳು ಮಾಡುತ್ತವೆ. ಎಲೆಗಳಲ್ಲಿ ತೂತುಗಳಿದ್ದರೆ ಈ ಕೀಟಗಳು ಇವೆಯೆಂದು ಅರ್ಥ. ಈ ಕೀಟದ ಹತೋಟಿಗೆ ೧೦ ಲೀಟರ್ ನೀರಿಗೆ ೪೦ ಗ್ರಾಂ ಕಾರ್ಬರಿಲ್ ಬೆರೆಸಿ ಸಿಂಪಡಿಸಬೇಕು.

. ಸಸ್ಯಹೇನು : ಇವು ಕಪ್ಪುಬಣ್ಣದ ಕೀಟಗಳು. ಸಸ್ಯಭಾಗಗಳಿಂದ ರಸ ಹೀರುತ್ತವೆ. ಚಿಗುರೆಲೆಗಳ ತಳಭಾಗದಲ್ಲಿ ಗುಂಪು ಗುಂಪಾಗಿರುವುದು ಸಾಮಾನ್ಯ. ಹಾನಿಗೀಡಾದ ಸಸ್ಯಭಾಗಗಳು ಸುರುಟಿಗೊಂಡು ಮತ್ತೆ ಬೆಳೆಯದೆ ಹಾಗೆಯೇ ಉಳಿಯುತ್ತವೆ. ಇವುಗಳ ಹತೋಟಿ ಕೆಂಪು ದುಂಬಿಯಲ್ಲಿದ್ದಂತೆ.

. ಬೂಷ್ಟು ತಗಣೆ : ಈ ಕೀಟಗಳು ಬಳ್ಳಿಯ ಬುಡಭಾಗ, ಎಲೆ ಮತ್ತು ಚಿಗುರುಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಸಸ್ಯಭಾಗಗಳನ್ನು ಕಚ್ಚಿ ರಸ ಹೀರುವ ಕಾರಣ ಅಂತಹ ಭಾಗಗಳು ಬಲಕುಗ್ಗಿ ಸಾಯುತ್ತವೆ. ಅವುಗಳ ಹತೋಟಿಗೆ ೧೦ ಲೀಟರ್ ನೀರಿಗೆ ೧೬ ಮಿ.ಲೀ. ಡೈಮಿಥೊಯೇಟ್ ಕೀಟನಾಶಕ ಬೆರೆಸಿ ಬೆಳೆಯ ಮೇಲೆ ಸಿಂಪಡಿಸಬೇಕು.

. ಹಣ್ಣಿನ ನೊಣ : ಪ್ರಾಯದ ಹೆಣ್ಣು ನೊಣಗಳು ಕಾಯಿಗಳು ಸಿಪ್ಪೆಯಲ್ಲಿ  ಚುಚ್ಚಿ ಮೊಟ್ಟೆಯಿಡುತ್ತವೆ. ಮೊಟ್ಟೆಯೊಡೆದು ಹೊರಬಂದ ಮರಿಗಳು ತಿರುಳನ್ನು ತಿಂದು ಕೊಳೆಯುವಂತೆ ಮಾಡುತ್ತವೆ. ಅಂತಹ ಕಾಯಿಗಳು ಉದುರಿಬೀಳುತ್ತವೆ. ಹೂವು ಬಿಡುವ ಕಾಲದಲ್ಲಿ ೧೦ ಲೀಟರ್ ನೀರಿಗೆ ೧೦ ಮಿ.ಲೀ. ಪ್ಯಾರಾಥಯಾನ್ ಹಾಗೂ ೧೦೦ ಗ್ರಾಂ ಬೆಲ್ಲ ಅಥವಾ ಸಕ್ಕರೆಗಳನ್ನು ಬೆರೆಸಿ ತೋಟದಲ್ಲಿ ಅಲ್ಲಲ್ಲಿ ಇಟ್ಟರೆ ಅವು ಅದನ್ನು ಕುಡಿದು ಸಾಯುತ್ತವೆ.

. ನುಶಿ : ಇವು ಸೂಕ್ಷ್ಮ ಗಾತ್ರದ ಕೀಟಗಳು. ಸಸ್ಯಭಾಗಗಳನ್ನು ಕಚ್ಚಿ ರಸ ಹೀರುತ್ತವೆ. ಇವುಗಳ ಹತೋಟಿ ಕೆಂಪು ದುಂಬಿಯಲ್ಲಿದ್ದಂತೆ.

. ಕಾಂಡ ಕೊರೆಯುವ ಹುಳು : ಈ ಕೀಟಗಳು ಕಾಂಡಭಾಗಗಳಲ್ಲಿ ರಂಧ್ರಗಳನ್ನುಂಟು ಮಾಡುತ್ತವೆ. ಇವುಗಳ ಹತೋಟಿ ಕೆಂಪು ದುಂಬಿಯಲ್ಲಿದ್ದಂತೆ.

. ಶಲ್ಕ ಕೀಟ : ತೆಳು ಶರೀರದ ಈ ಕೀಟಗಳು ಸಸ್ಯಭಾಗಗಳಿಗೆ ಬಲವಾಗಿ ಆತುಕೊಂಡಿರುತ್ತವೆ. ಅವು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾಗ ಗಣನೀಯ ನಷ್ಟ ಸಂಭವಿಸುತ್ತದೆ. ಕೂಡಲೇ ಅವುಗಳನ್ನು ಹತೋಟಿ ಮಾಡಬೇಕು. ಹತೋಟಿ ಕೆಂಪು ದುಂಬಿಯಲ್ಲಿದ್ದಂತೆ.

. ತುಪ್ಪುಳಿನ ರೋಗ : ಈ ರೋಗ ಕಾಣಿಸಿಕೊಂಡಾಗ ಎಲೆಗಳ ತಳಭಾಗದಲ್ಲಿ ಬಣ್ಣಗೆಟ್ಟ ಮಚ್ಚೆಗಳು ಕಂಡುಬರುತ್ತವೆ. ಹಾನಿಗೀಡಾದ ಎಲೆಗಳು ಉದುರಿಬೀಳುತ್ತವೆ. ಇದರ ಹತೋಟಿಗೆ ೧೦ ಲೀಟರ್ ನೀರಿಗೆ ೫೦ ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಬೆರೆಸಿ ಸಿಂಪಡಿಸಬೇಕು.

. ಬೂದಿ ರೋಗ : ಎಲೆಗಳ ಎರಡೂ ಕಡೆ ಬೂದಿಬಣ್ಣದ ಮಚ್ಚೆಗಳು ಕಂಡುಬರುತ್ತವೆ. ಅಂತಹ ಎಲೆಗಳು ಬೇಗ ಉದುರಿಬೀಳುತ್ತವೆ. ಇದರ ಹತೋಟಿಗೆ ೧೦ ಲೀಟರ್ ನೀರಿಗೆ ೧೫ ಗ್ರಾಂ ದಿನಕಾಪ್ ಅನ್ನು ಬೆರೆಸಿ ಸಿಂಪಡಿಸಬೇಕು.

೧೦. ವರ್ಣ ವಿನ್ಯಾಸ : ಇದು ಎಲೆಗಳಲ್ಲಿ ಕಂಡುಬರುವ ನಂಜು ರೋಗ. ಸಸ್ಯ ಹೇನುಗಳು ಈ ನಂಜು ರೋಗಾಣುವನ್ನು ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹರಡುತ್ತವೆ. ಸೂಕ್ತ ಕೀಟನಾಶಕ ಬಳಸಿ, ಕೀಟಗಳನ್ನು ಹತೋಟಿ ಮಾಡಬೇಕು ಹಾಗೂ ರೋಗಪೀಡಿತ ಗಿಡಗಳನ್ನು ಬೇರು ಸಹಿತ ಕಿತ್ತು ನಾಶಗೊಳಿಸಬೇಕು.

* * *