ಪೌಷ್ಟಿಕ ಸೊಪ್ಪು ತರಕಾರಿಗಳಲ್ಲಿ ಸ್ಪಿನಾಚ್ ಮುಖ್ಯವಾದುದು. ಇದಕ್ಕೆ ವಿದೇಶಿ ಪಾಲಕ್, ಸೀಮೆ ಬಸಳೆ ಮುಂತಾದ ಹೆಸರುಗಳಿವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಇದರ ಬೇಸಾಯ ಮತ್ತು ಬಳಕೆಗಳು ಹೆಚ್ಚು. ಇದನ್ನು ಹಸಿಯಾಗಿ ಪಚ್ಚಡಿ ರೂಪದಲ್ಲಿ ತಿನ್ನುವುದು ಹೆಚ್ಚು ಲಾಭದಾಯಕ. ಇದರಲ್ಲಿ ತಿನ್ನಲು ಉಪಯುಕ್ತವಿರುವ ಭಾಗವೆಂದರೆ ಗುಂಪಾಗಿ, ಒತ್ತಾಗಿ ಜೋಡಿಸಲ್ಪಟ್ಟ ಎಲೆಗಳು. ಇದರ ಬೇಸಾಯ ಸುಲಭ; ಬೇಗ ಕಟಾವಿಗೆ ಬರುತ್ತದೆ. ಇದರಿಂದ ವಾಣಿಜ್ಯ ಪತ್ರ ಹರಿತ್ತನ್ನು ತಯಾರಿಸುತ್ತಾರೆ.

ಪೌಷ್ಟಿಕ ಗುಣಗಳು : ಇದರಲ್ಲಿ ಗಣನೀಯ ಪ್ರಮಾಣದ ಶರ್ಕರಪಿಷ್ಟ, ಪ್ರೊಟೀನ್, ನಾರು, ಖನಿಜ ಪದಾರ್ಥ ಹಾಗೂ ಜೀವಸತ್ವಗಳಿರುತ್ತವೆ. ಸೊಪ್ಪನ್ನು ಬೇಯಿಸಿದರೆ ಅದರಲ್ಲಿನ ’ಸಿ’ ಜೀವಸತ್ವ ಹಾಳಾಗುತ್ತದೆ. ಸೊಪ್ಪನ್ನು ಸುಮಾರು ೧೫ ನಿಮಿಷಗಳ ಕಾಲ ನೀರಿನಲ್ಲಿ ಬೇಯಿಸಿದರೆ ಅದರಲ್ಲಿನ ಆಕ್ಸಲೇಟ್‌ಗಳು ನಶಿಸುತ್ತವೆ.

೧೦೦ ಗ್ರಾಂ ಸ್ಪಿನಾಚ್‌‌ನಲ್ಲಿರುವ ವಿವಿಧ ಪೋಷಕಾಂಶಗಳು

ತೇವಾಂಶ – ೯೧.೭ ಗ್ರಾಂ
’ಎ’ ಜೀವಸತ್ವ – ೯೩೦೦ ಐಯೂ
ಪೊಟ್ಯಾಷಿಯಂ – ೨.೬ ಗ್ರಾಂ
ಪ್ರೊಟೀನ್ – ೨.೦ ಗ್ರಾಂ
ಥಯಮಿನ್ – ೦.೦೫ ಮಿ.ಗ್ರಾಂ
ಮೆಗ್ನೀಷಿಯಂ – ೮೪ ಮಿ.ಗ್ರಾಂ
ನಾರು ಪದಾರ್ಥ – ೦.೬ ಗ್ರಾಂ
ನಿಕೋಟಿನಿಕ್ ಆಮ್ಲ – ೦.೦೫ ಮಿ. ಗ್ರಾಂ
ಅಯೋಡಿನ್ – ೨೦.೧ ಮಿ. ಗ್ರಾಂ
ಕ್ಯಾಲ್ಸಿಯಂ – ೭೩ ಮಿ.ಗ್ರಾಂ
ಶರ್ಕರಪಿಷ್ಟ – ೪.೦ ಗ್ರಾಂ
ರೈಬೋಫ್ಲೇವಿನ್ – ೦.೦೭ ಮಿ.ಗ್ರಾಂ
ಕಬ್ಬಿಣ – ೧೦.೯ ಮಿ.ಗ್ರಾಂ
ಕೊಬ್ಬು
’ಸಿ’ ಜೀವಸತ್ವ – ೨೮.೦ ಮಿ.ಗ್ರಾಂ
ಸೋಡಿಯಂ – ೫೮.೫ ಮಿ.ಗ್ರಾಂ
ರಂಜಕ – ೨೧ ಮಿ.ಗ್ರಾಂ
ಕ್ಯಾಲೊರಿಗಳು – ೩೨

ಔಷಧೀಯ ಗುಣಗಳು : ಸ್ಪಿನಾಚ್‌ನಲ್ಲಿ ಶರೀರಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳೂ ಇವೆ. ಇದರ ಸೇವನೆಯಿಂದ ಶುದ್ದರಕ್ತ ಹೆಚ್ಚುತ್ತದೆ. ರಕ್ತಹೀನತೆಯಿಂದ ನರಳುತ್ತಿರುವವರು, ಸುಣ್ಣಾಂಶ ಕೊರತೆ ಇರುವವರು, ಮಲಬದ್ದತೆಯಿರುವವರು ದಿನನಿತ್ಯ ಇದನ್ನು ಬಳಸಬೇಕು; ವಿವಿಧ ಜೀವಸತ್ವಗಳು ಸಾಕಷ್ಟು ಪ್ರಮಾಣದಲ್ಲಿರುವ ಕಾರಣ ರೋಗನಿರೋಧಕ ಸಾಮರ್ಥ್ಯವುಂಟಾಗುತ್ತದೆ. ಇದರ ಸೊಪ್ಪಿನಲ್ಲಿರುವ ಲಿಪಿಡ್‌ಗಳು ಅಣುಜೀವಿ ನಿರೋಧಕವಿರುತ್ತವೆ.

ಉಗಮ ಮತ್ತು ಹಂಚಿಕೆ : ಇದರ ತವರೂರು ನೈಋತ್ಯ ಏಷ್ಯಾ. ಈಗ ಜಗತ್ತಿನ ಹಲವಾರು ದೇಶಗಳಲ್ಲಿ ಇದರ ಬೇಸಾಯ ಮತ್ತು ಬಳಕೆಗಳು ಕಂಡುಬರುತ್ತವೆ.

ಸಸ್ಯ ವರ್ಣನೆ : ಸ್ಪಿನಾಚ್ ಚಿನೊಪೋಡಿಯೇಸೀ ಕುಟುಂಬಕ್ಕೆ ಸೇರಿದ ವಾರ್ಷಿಕ ಮೂಲಿಕೆ. ಕಾಂಡರಹಿತ ಆದರೆ ಎಲೆಗಳು ಒತ್ತಾಗಿದ್ದು, ರಸವತ್ತಾಗಿದ್ದು ಜೋಡಿಸಿದಂತಿರುತ್ತವೆ. ಸಸಿಗಳ ಎತ್ತರ ೫೦-೬೦ ಸೆಂ.ಮೀ., ಎಲೆಗಳು ತ್ರಿಕೋನಾಕಾರ, ಮೃದುವಾಗಿರುತ್ತವೆ. ಅವುಗಳ ಮೇಲ್ಮೈ ನುಣುಪಾಗಿ ಇಲ್ಲವೇ ಸುಕ್ಕುಗಟ್ಟಿದಂತೆ. ಎಲೆಗಳ ಬಣ್ಣ ಹಸುರು. ಎರಡನೆಯ ಋತುಮಾನದಲ್ಲಿ ಹೂತೆನೆಗಳು ಕಾಣಿಸಿಕೊಳ್ಳುತ್ತವೆ. ಹೂಗೊಂಚಲು ಎಲೆಗಳ ಕಂಕುಳಲ್ಲಿ ಮೂಡುತ್ತವೆ. ನೆಲಮಟ್ಟದಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಹೂವು ಏಕಲಿಂಗಿಗಳು, ದಳಗಳು ಇರುವುದಿಲ್ಲ. ಬಿಡಿ ಹೂವು ಗಾತ್ರದಲ್ಲಿ ಬಲು ಸಣ್ಣವು. ಹೂಗಳಲ್ಲಿ ನಾಲ್ಕು ಬಗೆ; ಗಂಡು ಹೂವು, ಹೆಣ್ಣು ಹೂವು, ನಿರ್ಲಿಂಗ ಗಂಡು ಹೂವು ಮತ್ತು ಒಂದೇ ಸಸಿಯಲ್ಲಿ ಬಿಡುವ ಗಂಡು ಮತ್ತು ಹೆಣ್ಣು ಹೂಗಳು. ಗಂಡು ಮತ್ತು ಹೆಣ್ಣು ಹೂಗಳಿಂದ ಕೂಡಿದ ಸಸಿ ಹೆಚ್ಚಾಗಿ ಗಂಡು ಇಲ್ಲವೇ ಹೆಣ್ಣು ಹೂಗಳಿಂದ ಕೂಡಿರಬಹುದು ಅಥವಾ ಗಂಡು ಮತ್ತು ಹೆಣ್ಣು ಹೂಗಳನ್ನು ಸಮ ಸಂಖ್ಯೆಯಲ್ಲಿ ಹೊಂದಿರಬಹುದು. ಗಾಳಿಯ ನೆರವಿನಿಂದ ಇದರ ಹೂವು ಪರಾಗಸ್ಪರ್ಶಗೊಳ್ಳುತ್ತವೆ. ಇದರಲ್ಲಿ ಕಾಯಿಗಳೇ ಬೀಜ. ಒಂದೊಂದರಲ್ಲಿ ಹತ್ತಾರು ಬೀಜವಿದ್ದು, ಗುಂಪು ಕೂಡಿದಂತೆ ಇರುತ್ತವೆ. ಇದರ ಬೀಜ ಸುಮಾರು ೩ ರಿಂದ ೫ ವರ್ಷಗಳವರೆಗೆ ಜೀವಂತವಿರುತ್ತವೆ.

ಹವಾಗುಣ : ಇದರ ಬೇಸಾಯಕ್ಕೆ ಶೈತ್ಯ ಹವಾಗುಣ ಹೆಚ್ಚು ಸೂಕ್ತ. ಚಳಿಗಾಲದ ಬೆಳೆಯಲ್ಲಿನ ಫಸಲು ಉತ್ತಮಗುಣಮಟ್ಟದಿಂದ ಕೂಡಿರುತ್ತದೆ. ಹೆಪ್ಪುಗಟ್ಟುವ ಚಳಿ ಇದ್ದರೂ ಇದು ಸಹಿಸಬಲ್ಲದು. ತಂಪು ಹವೆ ಇರುವ ಹಾಗೂ ಕಡಿಮೆ ಅವಧಿಯ ಬೆಳಕಿನಿಂದ ಕೂಡಿದ ಪ್ರದೇಶಗಳು ಬಹುವಾಗಿ ಒಪ್ಪುತ್ತವೆ. ತಂಪು ಹವೆಯ ಜೊತೆಗೆ ಹೆಚ್ಚಿನ ಆರ್ದ್ರತೆ ಇರುವುದು ಅಗತ್ಯ, ಬೆಳೆಯ ಅವಧಿಯಲ್ಲಿ ೧೦ ರಿಂದ ೧೫ ಸೆ. ಉಷ್ಣತೆ ಇದ್ದಾಗ ಸಸಿಗಳು ಸೊಂಪಾಗಿ ಬೆಳೆಯುತ್ತವೆ. ಬಿಸಿ ಏರಿದ ಹಾಗೆಲ್ಲಾ ಸೊಪ್ಪಿನ ಗುಣಮಟ್ಟ ಕುಸಿಯುತ್ತದೆಯಲ್ಲದೆ ಹೂತೆನೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ದೀರ್ಘ ಸಮಯ ಹಗಲುಗಳಿದ್ದಾಗಲೂ ಸಹ ಇದೇ ರೀತಿ ಹೂತೆನೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಇದನ್ನು ಸಮುದ್ರಮಟ್ಟದಿಂದ ೨೧೦೦ ಮೀಟರ್ ಎತ್ತರದವರೆಗೆ ಬೆಳೆಯಬಹುದು. ಬೀಜ ಬಿತ್ತಲು ಮೈದಾನ ಪ್ರದೇಶಗಳಲ್ಲಿ ಸೆಪ್ಟೆಂಬರ್-ನವೆಂಬರ್ ಮತ್ತು ಬೆಟ್ಟ ಪ್ರದೇಶಗಳಿಗೆ ಫೆಬ್ರುವರಿ – ಏಪ್ರಿಲ್ ಸೂಕ್ತ.

ಭೂಗುಣ : ಸ್ಪಿನಾಚ್ ಬೆಳೆಯ ಬೇಸಾಯಕ್ಕೆ ನೀರು ಬಸಿಯುವ ಮರಳು ಮಿಶ್ರಿತ ಗೋಡು ಹಾಗೂ ರೇವೆ ಮಣ್ಣಿನ ಭೂಮಿ ಹೆಚ್ಚು ಸೂಕ್ತ. ಮಣ್ಣು ಸಾರವತ್ತಾಗಿರಬೇಕು. ಮರೆಳು ಮಣ್ಣಿನ ಭೂಮಿಗೆ ಧಾರಾಳವಾಗಿ ಸೇಂದ್ರಿಯ ಪದಾರ್ಥವನ್ನು ಸೇರಿಸಬೇಕು. ಲವಣ ಭಾದಿತ ಮಣ್ಣಿದ್ದರೂ ಇದರ ಬೇಸಾಯಕ್ಕೆ ಅಡ್ಡಿಯಾಗುವುದಿಲ್ಲ. ಹುಳಿಮಣ್ಣಿನಲ್ಲಿ ಸಸಿಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಜೌಗು ಇರಬಾರದು. ಮಣ್ಣಿನ ರಸಸಾರ ೬ ರಿಂದ ೭ ರಷ್ಟಿದ್ದರೆ ಸೂಕ್ತ.

ತಳಿಗಳು : ಸ್ಪಿನಾಚ್‌ನಲ್ಲಿ ಹಲವಾರು ತಳಿಗಳಿವೆ. ಎಲೆಗಳು ಆಕಾರ ಮತ್ತು ಬೀಜದ ಮೇಲ್ಮೈಗಳ ಆಧಾರದ ಮೇಲೆ ವಿವಿಧ ತಳಿಗಳನ್ನು ಎರಡು ಗುಂಪುಗಳಾಗಿ ವರ್ಗೀಕರಿಸಬಹುದು. ಅವುಗಳೆಂದರೆ ಮುಮ್ಮೂಲೆಯ ಎಲೆ ಮತ್ತು ನುಣ್ಣಗಿರುವ ಬೀಜದ ಬಗೆಗಳು ಹಾಗೂ ಗುಂಡಗಿನ ಎಲೆ ಮತ್ತು ನುಣ್ಣಗಿರುವ ಬೀಜದ ಬಗೆಗಳು. ಮೊದಲನೆಯ ಬಗೆಯಲ್ಲಿ ಎಲೆಗಳು ಈಟಿಯ ಆಕಾರದಲ್ಲಿರುತ್ತವೆ. ಈ ಬಗೆಗಳು ಹೆಚ್ಚಾಗಿ ಉತ್ತರ ಭಾರತದಲ್ಲಿ ಕಂಡು ಬರುತ್ತವೆ. ಇವು ಸ್ವಲ್ಪ ಮಟ್ಟಿಗೆ ಗಡುತರವಿದ್ದು ಕಠಿಣ ಪರಿಸ್ಥಿತಿಗಳನ್ನು ಸಹಿಸಬಲ್ಲವು. ಈ ಬಗೆಗಳಲ್ಲಿ ಎಲೆಗಳನ್ನು ಮಾತ್ರವೇ ಬಿಡಿಸಿ ಬಳಸುತ್ತಾರೆ. ಎರಡನೇ ಬಗೆಯಲ್ಲಿ ಇಡೀ ಸಸ್ಯವನ್ನು ಕಿತ್ತು ಬಳಸುತ್ತಾರೆ. ಇದರ ಬೇಸಾಯ ಹೆಚ್ಚು. ಇವೆರಡರ ಜೊತೆಗೆ ಸವಾಯಿ ಎಂಬ ಮತ್ತೊಂದು ಬಗೆಯಿದೆ. ಇದು ಅಷ್ಟೊಂದು ಮುಖ್ಯವಾದುದಲ್ಲ. ಇದರ ಎಲೆಗಳು ಸುಕ್ಕುಗಟ್ಟಿದ್ದು, ನರಗಳ ನಡುವಣ ಭಾಗ ಉಬ್ಬಿ ನೋಡಲು ಆಕರ್ಷಕವಾಗಿರುತ್ತವೆ. ಹಾಗೆಯೇ ಕಡಿಮೆ ಅವಧಿಯ ಬೆಳನ್ನು ಬಯಸುವ ಮತ್ತು ದೀರ್ಘ ಅವಧಿಯ ಬೆಳಕನ್ನು ಬಯಸುವ ಬಗೆಗಳು ಹಾಗೂ ಸ್ವದೇಶಿ ಬಗೆಗಳು ಅಥವಾ ವಿದೇಶಿ ಬಗೆಗಳು ಸಹ ಲಭ್ಯವಿದೆ. ಬ್ಯಾನರ್ಜಿಸ್ ಜೈಂಟ್, ಬನಾರಸಿ ಮುಂತಾದುವು ಸ್ವದೇಶಿ ತಳಿಗಳಾದರೆ ವರ್ಜೀನಿಯಾ ಸವಾಯಿ, ಲಾಂಗ್‌ಸ್ಟ್ಯಾಂಡಿಂಗ್ ಬ್ಲೂಮ್ಸ್‌ಡೇಲ್ ಮುಂತಾದುವು ವಿದೇಶಿ ತಳಿಗಳಾಗಿವೆ.

ನಮ್ಮಲ್ಲಿ ಹೆಚ್ಚು ಬಳಕೆಯಲ್ಲಿರುವ ತಳಿಗಳೆಂದರೆ ಏರ್ಜೀನಿಯಾಸವಾಯ್, ಲಾಂಗ್‌ಸ್ಟ್ಯಾಂಡಿಂಗ್ ಬ್ಲೂಮ್ಸ್‌ಡೇಲ್, ಬ್ಯಾನರ್ಜಿಸ್ ಜಯಂಟ್, ಬನಾರಸಿ, ಆರ‍್ಲಿಸ್ಮೂಥ್‌ಲೀಫ್ ಮುಂತಾದುವು.

ಪ್ರಮುಖ ತಳಿಗಳು ಹಾಗೂ ಅವುಗಳ ಗುಣ ವಿಶೇಷಗಳು ಹೀಗಿವೆ:

. ವರ್ಜೀನಿಯಾಸವಾಯ್ : ಇದರ ಸಸಿಗಳು ಕಸುವಿನಿಂದ ಕೂಡಿದ್ದು ನೆಟ್ಟಗೆ ಬೆಳೆಯುತ್ತವೆ. ಎಲೆಗಳು ಮಂದ ರಸವತ್ತಾಗಿದ್ದು, ದಟ್ಟ ಹಸುರು ಬಣ್ಣವಿರುತ್ತವೆ. ಎಲೆಗಳ ತುದಿ ಗುಂಡಗಿದ್ದು, ಮೇಲೆಲ್ಲಾ ಬೊಬ್ಬೆಗಳಿರುತ್ತವೆ. ಫಸಲು ಸಮೃದ್ಧ

. ಲಾಂಗ್ಸ್ಟ್ಯಾಂಡಿಂಗ್ ಬ್ಲೂಮ್ಸ್ಡೇಲ್ : ಇದರ ಸಸಿಗಳು ಬಹುಬೇಗ ಬೆಳೆಯುತ್ತವೆ. ಎಲೆಗಳ ಬಣ್ಣ ಹೊಳಪು ಹಸುರು. ರುಚಿ ಮತ್ತು ಗುಣಮಟ್ಟಗಳು ಉತ್ತಮ. ಇದೂ ಸಹ ಗಡುತರವಿದ್ದು ಕಠಿಣ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಬಲ್ಲದು.

. ಬ್ಯಾನರ್ಜಿಸ್ಜಯಂಟ್ : ಇದರಲ್ಲಿ ರಸವತ್ತಾದ ದೊಡ್ಡ ಗಾತ್ರದ ಎಲೆಗಳಿರುತ್ತವೆ. ಸಸಿಗಳು ದೃಢವಾಗಿ ಬೆಳೆಯುತ್ತವೆ.

. ಅರ್ಲಿ ಸ್ಮೂಥ್ಲೀವ್ಡ್ : ಇದು ಬೇಗ ಕೊಯ್ಲಿಗೆ ಬರುವ ತಳಿ. ಇದರಲ್ಲಿ ಎಲೆಗಳು ತೆಳ್ಳಗೆ ಮೃದುವಾಗಿದ್ದು ಹಳದಿ ಹಸುರು ಬಣ್ಣದ್ದಿರುತ್ತವೆ. ಎಲೆಗಳ ತುದಿ ಭಾಗ ಚೂಪಾಗಿರುತ್ತದೆ. ಬೀಜಗಳ ಮೇಲೆಲ್ಲಾ ಮುಳ್ಳುಗಳಿರುತ್ತವೆ.

. ಬನಾರಸಿ : ಇದರ ಬೇಸಾಯ ಹೆಚ್ಚಾಗಿ ಉತ್ತರ ಭಾರತದಲ್ಲಿ ಕಂಡುಬರುತ್ತದೆ. ಸ್ಥಳೀಯರು ಹೆಚ್ಚಾಗಿ ಇದನ್ನೇ ಇಷ್ಟಪಡುತ್ತಾರೆ.

ಭೂಮಿ ಸಿದ್ಧತೆ ಮತ್ತು ಬಿತ್ತನೆ : ಪಾತಿಗಳನ್ನು ಸಿದ್ದಗೊಳಿಸಿ ಪೂರ್ಣಪ್ರಮಾಣ ತಿಪ್ಪೆಗೊಬ್ಬರ, ಅರ್ಧಭಾಗ ಸಾರಜನಕ ಹಾಗೂ ಪೂರ್ಣಪ್ರಮಾಣದ ರಂಜಕ ಮತ್ತು ಪೊಟ್ಯಾಷ್ ಸತ್ವಗಳನ್ನು ಸಮನಾಗಿ ಹರಡಿ ಮಣ್ಣಿನಲ್ಲಿ ಮಿಶ್ರಮಾಡಬೇಕು. ಕೈಯ್ಯಿಂದ ಚಿಲ್ಲಿ ಅಥವಾ ೨೨ ರಿಂದ ೩೦ ಸೆಂ.ಮೀ. ಅಂತರದ ಗೀರು ಸಾಲುಗಳಲ್ಲಿ ಬಿತ್ತುವುದು ಒಳ್ಳೆಯ ಕ್ರಮ. ಹೆಕ್ಟೇರಿಗೆ ಸುಮಾರು ೨೦-೪೦ ಕಿ.ಗ್ರಾಂ ಬೇಕಾಗುತ್ತವೆ. ಸುಮಾರು ೪-೫ ದಿನಗಳಲ್ಲಿ ಬೀಜ ಮೊಳೆಯುತ್ತವೆ. ಅವುಗಳಲ್ಲಿ ಎರಡು ಮೂರು ಎಲೆಗಳಿರುವಾಗ ಹೆಚ್ಚುವರಿ ಸಸಿಗಳನ್ನು ಕಿತ್ತುಹಾಕಿ ಸಸಿಗಳ ನಡುವೆ ಸುಮಾರು ೧೦ ಸೆಂ.ಮೀ. ಅಂತರ ಇರುವಂತೆ ಮಾಡಿದರೆ ಸಾಕು. ಬಿತ್ತನೆಗೆ ಯಾವಾಗಲೂ ಬೇರೆ ಕಡೆಯಿಂದ ತರಿಸಿಕೊಂಡ ಬೀಜವಾದಲ್ಲಿ ಉತ್ತಮ. ಇದನ್ನು ಕೋಸು, ಆಲೂಗೆಡ್ಡೆ ಮುಂತಾದುವುಗಳಲ್ಲಿ ಮಿಶ್ರಬೆಳೆಯಾಗಿ ಸಹ ಬೆಳೆಯುತ್ತಾರೆ.

ಗೊಬ್ಬರ : ಹೆಕ್ಟೇರಿಗೆ ೩೦-೪೫ ಟನ್ ತಿಪ್ಪೆಗೊಬ್ಬರ, ೮೪ ಕಿ.ಗ್ರಾಂ ಸಾರಜನಕ, ೫೬ ಕಿ.ಗ್ರಾಂ ರಂಜಕ ಮತ್ತು ೨೮ ಕಿ.ಗ್ರಾಂ. ಪೊಟ್ಯಾಷ್ ಸತ್ವಗಳನ್ನು ಶಿಫಾರಸು ಮಾಡಿದೆ.

ನೀರಾವರಿ : ಹದವರಿತು ನೀರು ಕೊಡಬೇಕು. ಮಳೆಗಾಲದ ಬೆಳೆಗೆ ಅಷ್ಟಾಗಿ ನೀರು ಕೊಡಬೇಕಾಗಿಲ್ಲ. ಹವಾ ಮತ್ತು ಭೂಗುಣಗಳನ್ನನುಸರಿಸಿ ವಾರಕ್ಕೊಮ್ಮೆ ನೀರುಕೊಟ್ಟರೆ ಸಾಕು.

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಸಸಿಗಳ ಬೇರು ಸಮೂಹ ಮಣ್ಣಿನಲ್ಲಿ ಬಹುಮೇಲೆಯೇ ಇರುವ ಕಾರಣ ಅಂತರ ಬೇಸಾಯ ಹಗುರವಾಗಿರಬೇಕು. ಬಿತ್ತನೆಯಾದ ೩ ವಾರಗಳ ನಂತರ ಉಳಿದ ಅರ್ಧಭಾಗ ಸಾರಜನಕವನ್ನು ಮೇಲುಗೊಬ್ಬರವಾಗಿ ಕೊಟ್ಟು ಸಾಲು ಎಳೆಯಬೇಕು. ಬೆಳೆ ಅವಧಿಯಲ್ಲಿ ಒಂದೆರಡು ಸಾರಿ ಕಳೆ ಕೀಳಬೇಕು.

ಕೊಯ್ಲು ಮತ್ತು ಇಳುವರಿ : ಬಿತ್ತನೆ ಮಾಡಿದ ಸುಮಾರು ನಾಲ್ಕು ವಾರಗಳಲ್ಲಿ ಮೊದಲು ಕೊಯ್ಲು ಪ್ರಾರಂಭಗೊಳ್ಳುತ್ತದೆ. ಸೊಪ್ಪು ಎಳಸಾಗಿದ್ದಷ್ಟೂ ರುಚಿ ಹೆಚ್ಚು. ಮೈದಾನ ಪ್ರದೇಶಗಳಲ್ಲಿ ಸುಮಾರು ಐದಾರು ಎಲೆಗಳಿರುವಾಗಲೇ ಕಿತ್ತು ಬಳಸಬಹುದು. ಬಿಡಿಸಿ ತೆಗೆಯುವುದಿದ್ದಲ್ಲಿ ದೊಡ್ಡ ಎಲೆಗಳನ್ನು ಮಾತ್ರವೇ ಕಿತ್ತು ತೆಗೆದು, ಒಪ್ಪವಾಗಿ ಜೋಡಿಸಿ ಕಂತೆಗಳಾಗಿ ಕಟ್ಟುವುದು ಸಾಮಾನ್ಯ. ಎರಡು ವಾರಗಳಿಗೊಮ್ಮೆ ಕೊಯ್ಲು ಮಾಡಿದರೆ ಸಾಕು. ತಂಪು ಹೊತ್ತಿನಲ್ಲಿ ಕೊಯ್ಲು ಮಾಡುವುದು ಒಳ್ಳೆಯದು. ಬೆಳೆ ಅವಧಿಯಲ್ಲಿ ಹಲವಾರು ಕೊಯ್ಲುಗಳಿರುತ್ತವೆ. ಹೆಕ್ಟೇರಿಗೆ ೮-೧೪ ಟನ್ನುಗಳಷ್ಟು ಸೊಪ್ಪು ಸಿಗುತ್ತದೆ. ಸೊಪ್ಪನ್ನು ೦ ಸೆ. ಉಷ್ಣತೆ ಮತ್ತು ಶೇಕಡಾ ೯೦-೯೫ ಸಾಪೇಕ್ಷ್ಯ ಆರ್ದ್ರತೆಗಳಲ್ಲಿ ಸಂಗ್ರಹಿಸಿಟ್ಟರೆ ಅದು ಸುಮಾರು ಎರಡು ವಾರಗಳವರೆಗೆ ಚೆನ್ನಾಗಿರಬಲ್ಲದು.

ಕೀಟ ಮತ್ತು ರೋಗಗಳು :

. ಸಸ್ಯಹೇನು : ಇವು ಎಲೆಗಳಲ್ಲಿ ಗುಂಪು ಗುಂಪಾಗಿದ್ದು, ಕಚ್ಚಿ ರಸ ಹೀರುತ್ತವೆ. ತೀವ್ರ ಹಾನಿ ಇದ್ದಾಗ ಸೊಪ್ಪು ವಿಕಾರವಾಗಿರುತ್ತದೆ. ಬಿಸಿಲು ಅಧಿಕವಿದ್ದಾಗ ಇವುಗಳ ಹಾವಳಿ ಜಾಸ್ತಿ. ಇವುಗಳ ಹತೋಟಿಗೆ ೧೦ ಲೀಟರ್ ನೀರಿಗೆ ೧೦ ಮಿ.ಲೀ. ಮ್ಯಾಲಾಥಿಯಾನ್ ಇಲ್ಲವೇ ಶೇಕಡಾ ೩ ರಿಂದ ೪ ರಷ್ಟು ನಿಕೋಟಿನ್ ಪುಡಿಯನ್ನು ಧೂಳೀಕರಿಸಬೇಕು.

. ಎಲೆ ತಿನ್ನು ಕಂಬಳಿಹುಳು : ಈ ಕೀಟಗಳು ಗಾತ್ರದಲ್ಲಿ ಸಣ್ಣವಿದ್ದು ಎಲೆಗಳಲ್ಲಿನ ಹಸಿರು ಭಾಗವನ್ನೆಲ್ಲಾ ತಿಂದು ಹಾಳುಮಾಡುತ್ತವೆ. ಅಂತಹ ಸೊಪ್ಪು ನೋಡಲು ವಿಕಾರವಾಗಿ ಸರಿಯಾದ ಬೆಲೆಗೆ ಮಾರಾಟವಾಗುವುದಿಲ್ಲ. ಇವುಗಳ ಹತೋಟಿಗೆ ೧೦ ಲೀಟರ್ ನೀರಿಗೆ ೪೦ ಗ್ರಾಂ ಕಾರ್ಬರಿಲ್ ಬೆರೆಸಿ ಸಿಂಪಡಿಸಬೇಕು.

. ತುಪ್ಪುಳಿನ ರೋಗ : ಇದು ಶಿಲೀಂಧ್ರಗಳಿಂದ ಉಂಟಾಗುವ ರೋಗ. ಈ ಶಿಲೀಂಧ್ರಗಳು ತೇವದಿಂದ ಕೂಡಿದ ರಾತಿಗಳಿದ್ದಲ್ಲಿ ಬಹುಬೇಗ ವೃದ್ಧಿ ಹೊಂದಿ ಹರಡುತ್ತವೆ. ಎಲೆಗಳ ಮೇಲೆ ದೊಡ್ಡ ಗಾತ್ರದ ಹಳದಿ ಮಚ್ಚೆಗಳು ಕಂಡುಬಂದು ಅವುಗಳ ತಳಭಾಗದಲ್ಲಿ ಬೆಳ್ಳನೆಯ ಬೂಜು ಕಾಣಿಸಿಕೊಳ್ಳುತ್ತದೆ. ಕ್ರಮೇಣ ಅವು ನೀಲಿ ಬಣ್ಣಕ್ಕೆ ಮಾರ್ಪಡುತ್ತವೆ. ಮುಳ್ಳುಬೀಜದ ಬಗೆಗಳು ಈ ರೋಗಕ್ಕೆ ಸ್ವಲ್ಪ ಮಟ್ಟಿಗೆ ನಿರೋಧಕವಿರುತ್ತವೆ. ರೋಗ ಪೀಡಿತ ಗಿಡಗಳನ್ನು ಕಿತ್ತು ತೆಗೆದು ಯಾವುದಾದರೂ ತಾಮ್ರಯುಕ್ತ ಶಿಲೀಂಧ್ರ ನಾಶಕದ ದ್ರಾವಣವನ್ನು ಬೆಳೆಯ ಮೇಲೆ ಸಿಂಪಡಿಸಬೇಕು. ಅದೇ ಸ್ಥಳದಲ್ಲಿ ಪದೇ ಪದೇ ಸ್ಪಿನಾಚ್ ಬೆಳೆ ಬೆಳೆಯಬಾರದು.

. ಎಲೆಚುಕ್ಕೆ ; ಎಲೆಗಳ ಮೇಲೆಲ್ಲಾ ಬಿಳಿಹಳದಿ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಕ್ರಮೇಣ ಅವು ಗಾತ್ರದಲ್ಲಿ ಹಿಗ್ಗಿ, ಒಂದರಲ್ಲೊಂದು ವಿಲೀನಗೊಳ್ಳುತ್ತವೆ. ತೀವ್ರ ಹಾನಿಯಿದ್ದಾಗ ಎಲೆಗಳು ಒಣಗಿ ಸಾಯುತ್ತವೆ. ಈ ಶಿಲೀಂಧ್ರ ರೋಗದ ಹತೋಟಿಗೆ ಶೇಕಡಾ ೧ರ ಬೋರ್ಡೊ ದ್ರಾವಣ ಅಥವಾ ಮತ್ತಾವುದಾದರೂ ತ್ರಾಮಯುಕ್ತ ಶಿಲೀಂಧ್ರ ನಾಶಕವನ್ನು ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು

. ಶೀತರೋಗ : ಇದಕ್ಕೆ ಮಣ್ಣೊಳಗಿನ ಶಿಲೀಂಧ್ರಗಳೇ ಕಾರಣ. ಎಳೆಯ ಸಸಿಗಳು ಇದ್ದಕ್ಕಿದ್ದಂತೆ ಕುತ್ತಿಗೆ ಭಾಗದಲ್ಲಿ ಮುರಿದು ಸಾಯುತ್ತವೆ. ಇದರ ಹತೋಟಿಗೆ ಬೀಜೋಪಚಾರದ ಜೊತೆಗೆ ಮಣ್ಣನ್ನೂ ಸಹ ಶಿಲೀಂಧ್ರನಾಶಕದ ದ್ರಾವಣದಿಂದ ಉಪಚರಿಸಬೇಕು. ಈ ಉದ್ದೇಶಕ್ಕೆ ತಾಮ್ರದ ಆಕ್ಸಿಕ್ಲೋರೈಡ್ ಸೂಕ್ತ. ೧೦ ಲೀಟರ್ ನೀರಿಗೆ ೧೦ ಗ್ರಾಂ ನಂತೆ ಬೆರೆಸಿ ಸಮನಾಗಿ ತೊಯ್ಯಿಸಬೇಕು. ಹೆಚ್ಚುವರಿ ನೀರು ಬಸಿದು ಹೋಗುವುದು ಬಹುಮುಖ್ಯ.

. ಚಿಬ್ಬುರೋಗ : ಈ ಶಿಲೀಂಧ್ರರೋಗ ತಗುಲಿದ ಸಸಿಗಳ ಎಲೆಗಳಲ್ಲಿ ಗುಂಡಗಿನ ಸಣ್ಣಗಾತ್ರದ ಹಳದಿ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ದಿನ ಕಳೆದಂತೆ ಈ ಚುಕ್ಕಿಗಳ ಕಂದುಬಣ್ಣದ ಅಂಚನ್ನು ಹೊಂದಿ, ಸ್ವಲ್ಪ ಕಾಲದಲ್ಲಿ ಉದುರಿಬೀಳುತ್ತವೆ. ಶೇಕಡಾ ೧ ಬೋರ್ಡೊ ದ್ರಾವಣ ಸಿಂಪಡಿಸಿದರೆ ಇದು ಹತೋಟಿಗೊಳ್ಳುತ್ತದೆ.

. ಬೇರು ಕೊಳೆಯುವ ರೋಗ: ಬುಡಭಾಗದಲ್ಲಿನ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ, ಸಾಯುತ್ತವೆ. ತೀವ್ರ ಹಾನಿ ಇದ್ದಾಗ ಇಡೀ ಸಸಿಯೇ ಕೊಳೆತು ಸಾಯುವುದುಂಟು. ಇದರ ಹತೋಟಿಗೆ ಶೇಕಡಾ ೧ ಕ್ಯಾಪ್ಟಾನ್ ಔಷಧಿಯ ದ್ರಾವಣ ಸುರಿದು ಮಣ್ಣನ್ನು ತೋಯಿಸಬೇಕು.

. ವರ್ಣವಿನ್ಯಾಸ : ಚಿಗುರೆಲೆಗಳಲ್ಲಿ ಹಲವಾರು ಬಣ್ಣಗಳಿಂದ ಕೂಡಿದ ಕಲೆಗಳು ಕಾಣಿಸಿಕೊಳ್ಳುತ್ತವೆ. ಎಲೆಗಳು ವಿಕಾರವಾಗಿ ಹಾನಿ ತೀವ್ರಗೊಂಡಾಗ ಹಳದಿ ಬಣ್ಣಕ್ಕೆ ತಿರುಗಿ ಸಾಯುತ್ತವೆ. ಈ ನಂಜುರೋಗಾಣುವನ್ನು ಹರಡುವ ಕೀಟಗಳನ್ನು ಹತೋಟಿ ಮಾಡುವುದು ಬಹುಮುಖ್ಯ. ಅದರ ಜೊತೆಗೆ ನಂಜು ನಿರೋಧಕ ತಳಿಗಳನ್ನು ಬಳಸುವುದು ಲಾಭದಾಯಕ.

ಬೀಜೋತ್ಪಾದನೆ : ಇದರಲ್ಲಿ ಗಂಡು ಸಸ್ಯಗಳು ಬೀಜ ಕಚ್ಚುವುದಿಲ್ಲ. ಅಗತ್ಯವಿದ್ದಷ್ಟು ಸಸಿಗಳನ್ನು ಉಳಿಸಿಕೊಂಡು ಮಿಕ್ಕ ಗಂಡು ಸಸಿಗಳನ್ನು ಕಿತ್ತುಹಾಕಬೇಕು. ಯಾಉದೇ ಎರಡು ತಳಿಗಳ ನಡುವೆ ಕಡೇ ಪಕ್ಷ ೧೬೦೦ ಮೀಟರ್ ಅಂತರ ಅಗತ್ಯ. ಬಿತ್ತನೆಯಾದ ಸುಮಾರು ಐದು ತಿಂಗಳಲ್ಲಿ ಬೀಜ ಕೊಯ್ಲಿಗೆ ಸಿದ್ದವಿರುತ್ತವೆ. ಬೆಟ್ಟ ಪ್ರದೇಶಗಳಲ್ಲಿ ಹೆಕ್ಟೇರಿಗೆ ಸುಮಾರು ೧೦೦ ಕಿ.ಗ್ರಾಂ. ಬೀಜ ಮತ್ತು ಮೈದಾನ ಪ್ರದೇಶಗಳಲ್ಲಿ ಹೆಕ್ಟೇರಿಗೆ ಸುಮಾರು ೭೫೦ ಕಿ.ಗ್ರಾಂ. ಬೀಜ ಸಾಧ್ಯ.

* * *