ತರಗೆಲೆ ಕಸಕಡ್ಡಿಯನೊಗ್ಗೂಡಿಸಿ
ಧೂಳಿನ ಗೋಪುರವೆತ್ತಿ
ಸರ್ರನೆ ಗಿರ್ರನೆ ತಿರುಗುತ
ಕಾಳಿಂಗನವೊಲು ಹೆಡೆಯೆತ್ತಿ
ಮುಗಿಲನೆ ಮುತ್ತಿ
ಆಡುವ ಬಿರುಗಾಳಿಯ ನೋಡು !
ತಕಥೈ ದಿತ್ಥೈ
ತಕಥೋಂ ದಿಕಥೋಂ
ಬಯಲಾಟದ ರಾವಣನಂತೆ
ಕುಣಿಕುಣಿಯುತ ತಿರುಗುವ ಈ
ಚೋದ್ಯವ ನೋಡು !
ಮೈಯಿಲ್ಲದ, ರೂಹಿಲ್ಲದ ಗಾಳಿ,
ಭಾವವು ಮೈತಳೆದಂದದಿ
ಆಕಾರವ ತಾಳಿತು ಇಲ್ಲಿ
ಯಾವುದೊ ಛಂದೋಬಂಧದಲಿ !
ಎಲ್ಲೋ ಹೇಗೋ ಬಿದ್ದಿದ್ದುವು ಈ
ತರಗೆಲೆ ಕಸಕಡ್ಡಿಯ ಚೂರು !
ಗಾಂಧೀಜಿಯ ವ್ಯಕ್ತಿತೆಯಲಿ ಮೇಲೆದ್ದಾ ಜನತೆಯೊಲು,
ಮೇಲೆದ್ದುವು ಮರುಳಿನ ತೆರ ಕುಣಿದವು
ಬಿದ್ದುವು ಮತ್ತೆಲ್ಲೋ !
ಬಟ್ಟನೆ ಬಯಲೊಳಗೊಂದರೆಚಣ
ಹೇಗೋ ಬಂದಿತು ಹೇಗೋ ಹೋಯಿತು
ಬಿರುಗಾಳಿಯ ನೋಟ
ಯಾರೋ ಮಾಡಿದವೊಲು ಮಾಟ !
Leave A Comment