ಬ್ರಾಹ್ಮಣ ಅರಣ ಸೂತ್ರಂ ಮೊದಲಾಗೊಡೆಯವನೋದಿ ಋಗ್ಯಜುಸ್ಸಾಮಾಥರ್ವಣ ವೇದಂಗಳಂ ಸ್ವರವರ್ಣಭೇದದಿಂದಂ ಮಂತ್ರಸಹಿತ ಪಾಳಿ ಪದಕ್ರಮ ಜಟೆ ಭೇದದಿಂದಂ ಶತಸೂತ್ರಂ ಮೊದಲಾಗೆಲ್ಲಮಂ ಯಥಾಕ್ರಮದಿಂದುಚ್ಚರಿಸಿ ಪದಿನೆಂಟು ಪುರಾಣಂಗಳುಂ ಪದಿನೆಂಟು ಧರ್ಮಸಂಹತಿಗಳುಂ ಮೀಮಾಂಸಾ ನ್ಯಾಯಸೂತ್ರಮಿವೆಲ್ಲಮನೋದಿ ಕ್ರಿಯಾಕಾರಕ ಸಂಬಂಧದಿಂದೆಲ್ಲಮಂ ವಕ್ಖಾನಿಸಿ ತೋಱದೊಡರಸಂ ಮೊದಲಾಗಿ ನೆರೆದ ನೆರವಿಯುಂ ಪಂಡಿತರ್ಕ್ಕಳೆಲ್ಲಂ ವಿಸ್ಮಯಂಬಟ್ಟು ಪೊಗೞ್ದು ಮತ್ತಮರಸನಿಂತೆಂದನೀ ಕೂಸಿನಿತು ಶಾಸ್ತ್ರಂಗಳನೆಂತು ಕಲ್ತಳೆಂತು ಭಟಾರಾ ಇದನಱಯೆ ಬೆಸಸಿಮೆನೆ ಸೂರ್ಯಮಿತ್ರ ಭಟ್ಟಾರರಿಂತೆಂದರ್ ಈಯಿರ್ದ್ದ ರಿಸಿಯರ ಸಹೋದರಂ ವಾಯುಭೂತಿಯೆಂಬೊ – ನಾನಾಮೋದಿಸಿದೆಮೆಮ್ಮೊಳಪ್ಪ ಮಾನಕಷಾಯಂ ಕಾರಣಮಾಗಿ ಸತ್ತು ಬೆಳ್ಗತ್ತೆಯುಂ ಪೇಪಂದಿಯುಂ ನಾಯುಂ ಪೊಲೆಯರ ಕೂಸುಮಾಗಿ ರಿಸಿಯರ ಪ್ರಬೋಧನೆಯಿಂದಂ ಬ್ರತಂಗಳಂ ಕೈಕೊಂಡೀಗಳ್ ನಾಗಶ್ರೀಯಾದಳೆಂದು ಮುನ್ನಿನ ಭವದ ಸಂಬಂಧಮೆಲ್ಲಮಂ ಸವಿಸ್ತರಂ ಪೇೞ್ದು ಮತ್ತಮಿಂತೆಂದರ್ ಮಿಥ್ಯಾತ್ವ ಸಂಯಮ ಕಷಾಯ ಯೋಗಂ ಕಾರಣಮಾಗಿ ಜೀವಂಗಳ್ ಸಂಸಾರಸಮುದ್ರದೊಳ್ ತೊೞಲ್ಗುಮೆಂದು ಸವಿಸ್ತರಂ ಧರ್ಮಮಂ ಪೇೞೆ ಕೇಳ್ದು ಚಂದ್ರವಾಹನನೆಂಬರಸಂಗೆ ವೈರಾಗ್ಯಂ ಪುಟ್ಟಿ ಮಗಂಗರಸುಗೊಟ್ಟು ಪಲಂಬರರಸು ಮಕ್ಕಳ್ವೆರಸುಭಟ್ಟಾರರ ಪಕ್ಕದೆ ತಪಂಬಟ್ಟಂ ಕೆಲರ್ ಶ್ರಾವಕವ್ರತಂಗಳಂ ಕೆಲಂಬರ್ ಸಮ್ಯಕ್ಷಮಂ ಕೈಕೊಂಡರಾಗಳಾ

ಸೂತ್ರ ಮುಂತಾಗಿರುವವನ್ನೂ ಹೇಳಿದಳು, ಋಗ್ವೇದ ಯಜುರ್ವೇದ ಸಾಮವೇದ ಅಥರ್ವವೇದಗಳನ್ನೂ ಸ್ವರಗಳ ಮತ್ತು ವರ್ಣಗಳ ಭೇದದಿಂದ ಮಂತ್ರ ಸಮೇತವಾಗಿ ಪಾಳಿ – ಪದಕ್ರಮ – ಜಟೆ ಮುಂತಾದ ವೇದಪಠನದ ರೀತಿಯಲ್ಲಿ ಶತಸೂತ್ರ ಮುಂತಾಗಿ ಎಲ್ಲವನ್ನೂ ಸರಿಯಾದ ಕ್ರಮದಿಂದ ಉಚ್ಚಾರಣೆ ಮಾಡಿದಳು. ಹದಿನೆಂಟು ಪುರಾಣಗಳು, ಹದಿನೆಂಟು ಧರ್ಮಶಾಸ್ತ್ರಸಂಗ್ರಹಗಳು, ಮೀಮಾಂಸೆ, ನ್ಯಾಯಸೂತ್ರ ಇವೆಲ್ಲವನ್ನೂ ಹೇಳಿ, ಕ್ರಿಯಾಪದ ಕಾರಕಪದಗಳ ಸಂಬಂಧ ಸರಿಯಾಗಿರುವಂತೆ ಎಲ್ಲವನ್ನೂ ವ್ಯಾಖ್ಯಾನಮಾಡಿ ತೋರಿಸಿದಳು. ಆಗ ರಾಜನೂ, ನೆರೆದ ಜನರೂ, ವಿದ್ವಾಂಸರೂ ಎಲ್ಲರೂ ಆಶ್ಚರ್ಯಪಟ್ಟು ಹೊಗಳಿದರು. ಆ ಮೇಲೆ ರಾಜನು ಹೀಗೆಂದನು. “ಈ ಕನ್ಯೆ ಇಷ್ಟೊಂದು ಶಾಸ್ತ್ರಗಳನ್ನು ಹೇಗೆ ಕಲಿತುಕೊಂಡಳು? ಋಷಿಗಳೇ, ಇದನ್ನು ನನಗೆ ತಿಳಿಯುವಂತೆ ಅಪ್ಪಣೆಮಾಡಿ* ಎನ್ನಲು, ಸೂರ್ಯಮಿತ್ರ ಋಷಿಗಳು ಹೀಗೆಂದರು “ಇದೇ ಇಲ್ಲಿರುವ ಅಗ್ನಿಭೂತಿ ಋಷಿಗಳ ಸಹೋದರ ವಾಯುಭೂತಿಯೆಂಬವನಿಗೆ ನಾವಿ ವಿದ್ಯೆ ಕಲಿಸಿದ್ದೆವು. ನಮ್ಮ ಮೇಲೆ ಅವನು ತಾಳಿದ ಗರ್ವ ಕೋಪಗಳ ಕಾರಣದಿಂದ ಸತ್ತು ಬಿಳಿಕತ್ತೆ, ಹೇಲುಹಂದಿ, ನಾಯಿ, ಹೊಲೆಯರ ಕನ್ಯೆಯಾಗಿ ಹುಟ್ಟಿಬಂದು, ಋಷಿಗಳ ಉಪದೇಶದಿಂದ ವ್ರತಗಳನ್ನು ಸ್ವೀಕರಿಸಿ, ಈಗ ನಾಗಶ್ರೀಯಾದಳು* ಹೀಗೆ ಹಿಂದಿನ ಜನ್ಮದ ಸಂಬಂಧವೆಲ್ಲವನ್ನೂ ವಿಸ್ತಾರವಾಗಿ ತಿಳಿಸಿ ಮತ್ತೆ ಹೀಗೆಂದನು “ಜೀವಗಳು ಮಿಥ್ಯಾತ್ವ, ಸಂಯಮವಿಲ್ಲದಿರುವುದು, ಗರ್ವಕೋಪಾದಿಗಳ ಕಾರಣದಿಂದ ಸಂಸಾರವೆಂಬ ಸಮುದ್ರದಲ್ಲಿ ಸುತ್ತಾಡುವವು. * ಹೀಗೆಂದು ವಿಸ್ತಾರವಾಗಿ ಧರ್ಮದ ರಹಸ್ಯವನ್ನು ಹೇಳಲು ಕೇಳಿದ ಚಂದ್ರವಾಹನ ರಾಜನಿಗೆ ವೈರಾಗ್ಯವುಂಟಾಯಿತು. ಅವನು ತನ್ನ ಮಗನಿಗೆ ಅರಸುತನವನ್ನು ಕೊಟ್ಟು ಹಲವು ಮಂದಿ ರಾಜಕುಮಾರರೊಂದಿಗೆ ಋಷಿಗಳ ಸಮೀಪದಲ್ಲಿದ್ದು ತಪವನ್ನೆಸಗಿದನು. ಕೆಲವರು ಶ್ರಾವಕವ್ರತಗಳನ್ನೂ ಕೆಲವರು ಸಮ್ಯಗ್ದರ್ಶನ ಸಮ್ಯಗ್ಜ್ಞಾನ ಸಮ್ಯಕ್ಚಾರಿತ್ರಗಳನ್ನು

ಸೋಮಶರ್ಮಭಟ್ಟಂ ರಿಸಿಯರೊಳಾದ ಮಾನಗರ್ವದ ದೋಷದಿಂದೆಯ್ದಿದ ದುಃಖಂಗಳಂ ಕೇಳ್ದಱದಾ ಭಟ್ಟಾರರ ಪಕ್ಕದೆ ತಪಂಬಟ್ಟಂ ನಾಗಶ್ರೀಯುಂ ನಾಗಶ್ರೀಯ ತಾಯ್ ತ್ರಿವೇದಿಯುಂ ಬ್ರಹ್ಮಿಲೆಯೆಂಬ ಕಂತಿಯರ ಪಕ್ಕದೆ ತಪಂಬಟ್ಟರ್ ಮತ್ತೆ ಸೂರ್ಯಮಿತ್ರ ಭಟ್ಟಾರರಗ್ನಿಭೂತಿ ಭಟ್ಟಾರರುಮಿರ್ವರುಂ ಪಲಕಾಲಂ ತಪಂಗೆಯ್ದು ಅಗ್ರಮಂದಿರವೆಂಬ ಪರ್ವತದೊಳ್ ಮೋಕ್ಷವನೆಯ್ದಿದರ್ ಮತ್ತಂ ಸೋಮಶರ್ಮರಿಸಿಯರುಮುಗ್ರೋಗ್ರ ತಪಶ್ಚರಣಂಗೆಯ್ದು ಸನ್ಯಸನವಿಯಿಂದಂ ಮುಡಿಪಿ ಅಚ್ಚುತಕಲ್ಪದೊಳಿರ್ಪ್ಪತ್ತೆರಡು ಸಾಗರೋಪಮಾಯುಷ್ಯಮನೊಡೆಯೊಂ ಸಾಮಾನಿಕದೇವನಾಗಿ ಪುಟ್ಟಿದೊಂ ಮತ್ತೆ ನಾಗಶ್ರೀಯುಂ ಭುಕ್ತ ಪ್ರತ್ಯಾಖ್ಯಾನವಿಯಂ ರತ್ನತ್ರಯಮಂ ಸಾಸಿ ಅಚ್ಯುತಕಲ್ಪದೊಳ್ ದೇವನಾಗಿ ಪುಟ್ಟಿದೊಳ್ ಮತ್ತಾ ಸ್ವರ್ಗದೊಳ್ ತ್ರಿವೇದಿಯಂ ನಾಗಶ್ರೀ ಎನಗೆ ಜನ್ಮಾಂತಕರದೊಳಪ್ಪೊಡಂ ಮಗನಕ್ಕೆಂದು ನಿದಾನಂಗೆಯ್ದು ಮುಡಿಪಿ ದೇವನಾದೊಳಿಂತಾ ಯಿರ್ವರುಂ ಇರ್ಪ್ಪತ್ತೆರಡು ಸಾಗರೋಪಮಾಯುಷ್ಯಮನೊಡೆಯೊರಾಗಿ ದೇವರಾಗಿ ಪುಟ್ಟಿದರ್ ಮತ್ತಂ ಸೋಮಶರ್ಮನಪ್ಪ ದೇವಂ ಪಲಕಾಲಂ ದೇವಲೋಕದ ಭೋಗಮನನುಭವಿಸಿ ಬಂದಿಲ್ಲ ಈ ಜಂಬೂದ್ವೀಪದ ದಕ್ಷಿಣ ಭರತದೊಳವಂತಿಯೆಂಬುದು ನಾಡುಜ್ಜೇಶನಿಯೆಂಬುದು ಪೊೞಲಲ್ಲಿ ಇಂದ್ರದತ್ತನೆಂಬೊಂ ಪರದನಾತನ ಭಾರ್ಯೆ ಗುಣಮತಿಯೆಂಬೊಳಾಯಿವರ್ಗ್ಗಂ ಸೂರದತ್ತನೆಂಬೊಂ ಮಗನಾಗಿ ಪುಟ್ಟಿದೊಂ ಮತ್ತಮಾ ಪೊೞಲೊಳ್ ಮೂವತ್ತೆರಡು ಕೋಟಿ ಕಸವರಮನೊಡೆಯೊಂ ಸುಭದ್ರನೆಂಬೊಂ ಸೆಟ್ಟಿಯಾತನ

ಪಡೆದುಕೊಂಡರು. ಆ ಸಂದರ್ಭದಲ್ಲಿ ಸೋಮಶರ್ಮಭಟ್ಟನು ಋಷಿಗಳ ಮೇಲೆ ಉಂಟಾದ ಗರ್ವಕ್ರೋಧಗಳ ತಪ್ಪಿನಿಂದ ಉಂಟಾಗತಕ್ಕ ದುಃಖಗಳನ್ನು ಕೇಳಿ ತಿಳಿದು ಆ ಋಷಿಗಳ ಪಕ್ಕದಲ್ಲಿ ತಪ್ಪಸ್ಸನ್ನು ಮಾಡಿದನು. ನಾಗಶ್ರೀಯೂ ಅವಳ ತಾಯಿಯಾದ ತ್ರಿವೇದಿಯೂ ಬ್ರಹ್ಮಿಲೆ ಎಂಬ ಜೈನ ಸಂನ್ಯಾಸಿನಿಯ ಬಳಿಯಲ್ಲಿ ತಪಸ್ಸನ್ನು ಮಾಡಿದರು. ಸೂರ್ಯಮಿತ್ರ ಋಷಿಗಳು ಅಗ್ನಿಭೂತಿ ಋಷಿಗಳು ಇವರಿಬ್ಬರೂ ಹಲವು ವರ್ಷಗಳ ಕಾಲ ತಪಸ್ಸನ್ನು ಮಾಡಿ ಅಗ್ರಮಂದಿರವೆಂಬ ಬೆಟ್ಟದಲ್ಲಿ ಮೋಕ್ಷಕ್ಕೆ ಹೋದರು. ಆ ಮೇಲೆ ಸೋಮಶರ್ಮ ಋಷಿಯು ಅತ್ಯಂತ ಘೋರವಾದ ತಪಸ್ಸನ್ನು ಆಚರಿಸಿ ಸನ್ಯಸನ ವಿಯಿಂದ ಸತ್ತು ಅಚ್ಯುತ ಎಂಬ ಹೆಸರಿನ ಸ್ವರ್ಗದಲ್ಲಿ ಇಪ್ಪತ್ತೆರಡು ಸಾಗರಕ್ಕೆ ಸಮಾನವಾದ ಆಯುಷ್ಯವನ್ನು ಉಳ್ಳ ಸಾಮಾನಿಕದೇವನಾಗಿ ಹುಟ್ಟಿದನು. ಮತ್ತೆ ನಾಗಶ್ರೀಯು ಕ್ರಮದಿಂದ ಆಹಾರ ಪಾನೀಯಗಳನ್ನು ತ್ಯಾಗಮಾಡುವ ‘ಭುಕ್ತ ಪ್ರತ್ಯಾಖ್ಯಾನ’ ಎಂಬ ವ್ರತನಿಯಮದಿಂದ ಸಮ್ಯಗ್ದರ್ಶನ ಚಾರಿತ್ರಗಳೆಂಬ ರತ್ನತ್ರಯವನ್ನು ಪಡೆದು, ಅಚ್ಚುತಕಲ್ಪದಲ್ಲಿ ದೇವತೆಯಾಗಿ ಹುಟ್ಟಿದಳು. ಮತ್ತು ಆ ಸ್ವರ್ಗದಲ್ಲಿ ತ್ರಿವೇದಿಯು ನನಗೆ ಬೇರೆ ಜನ್ಮದಲ್ಲಿಯಾದರೂ ನಾಗಶ್ರೀಯು ಮಗನಾಗಿ ಜನಿಸಲಿ ಎಂದು ಸಂಕಲ್ಪಿಸಿ ಸತ್ತು ದೇವಳಾದಳು. ಹೀಗೆ ಆ ಇಬ್ಬರೂ ಇಪ್ಪತ್ತೆರಡು ಸಾಗರಕ್ಕೆ ಸಮಾನವಾಗುವ ಆಯುಷ್ಯವುಳ್ಳವರಾಗಿ ದೇವರುಗಳಾಗಿ ಜನಿಸಿದರು. ಅನಂತರ ಸೋಮಶರ್ಮನಾಗಿದ್ದ ದೆವನು ಹಲವು ಕಾಲದವರೆಗೆ ದೇವಲೋಕದ ಸುಖವನ್ನು ಅನುಭವಿಸಿದ ನಂತರ ಭೂಲೋಕದಲ್ಲಿ ಜನಿಸಿದನು. ಈ ಜಂಬೂದ್ವೀಪದ ದಕ್ಷಿಣ ಭರತಭೂಮಿಯಲ್ಲಿ ಅವಂತಿಯೆಂಬ ನಾಡಿದೆ. ಅಲ್ಲಿ ಉಜ್ಜೇನಿಯೆಂಬ ಪಟ್ಟಣದಲ್ಲಿ ಇಂದ್ರದತ್ತನೆಂಬ ವರ್ತಕನಿದ್ದನು. ಅವನ ಹೆಂಡತಿ ಗುಣಮತಿ ಎಂಬುವಳು ಆ ಇಬ್ಬರಿಗೂ ಸೂರದತ್ತನೆಂಬ ಮಗನಾಗಿ (ಸೋಮಶರ್ಮನಾಗಿದ್ದ ದೇವನು) ಹುಟ್ಟಿದನು. ಅದಲ್ಲದೆ ಆ ಪಟ್ಟಣದಲ್ಲಿ ಮೂವತ್ತೆರಡು ಕೋಟಿ ಹೊನ್ನನ್ನುಳ್ಳ ಸುಭದ್ರನೆಂಬ

ಭಾರ್ಯೆ ಸರ್ವಯಶಿಯೆಂಬೊಳಾಯಿರ್ವರ್ಗ್ಗಂ ತ್ರಿವೇದಿಯಪ್ಪ ದೇವಂ ಬಂದು ಯಶೋಭದ್ರೆಯೆಂಬೊಳ್ ಮಗಳಾಗಿ ಪುಟ್ಟಿದೊಳಾ ತ್ರಿವೇದಿ ತಪಶ್ಚರಣದ ಫಲದಿಂದಂ ದೇವತ್ವಮನೆಯ್ದಿಯುಂ ನಿದಾನಂ ಕಾರಣಮಾಗಿ ಮಿಥ್ಯಾತ್ವಕ್ಕೆ ಸಂದು ಸ್ತ್ರೀತ್ವಮನೆಯ್ದಿದಳಾ ಯಶೋಭದ್ರೆಯಂ ಸೂರದತ್ತಂಗೆ ಕೊಟ್ಟೊರಾಯಿರ್ವರ್ಗ್ಗಂ ನಾಗಶ್ರೀಯಪ್ಪ ದೇವಂ ಬಂದು ಸುಕುಮಾರಸ್ವಾಮಿಯೆಂಬೊಂ ಮಗನಾಗಿ ಪುಟ್ಟಿದನಾತನ ಪುಟ್ಟಿದಂದೆ ವೈರಾಗ್ಯಂ ಕಾರಣಮಾಗಿ ಸೂರದತ್ತಸೆಟ್ಟಿ ಸುಕುಮಾರಸ್ವಾಮಿಗೆ ಸೆಟ್ಟಿವಟ್ಟಂಗಟ್ಟಿ ತಪಂಬಟ್ಟಂ ಸುಕುಮಾರಸ್ವಾಮಿಯುಂ ಯೌವನನಾಗಿ ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿಯಿಂದಂ ಕೂಡಿದೊನಾತಂಗೆ ಮೂವತ್ತೆರಡು ಬಳ್ಳಿಮಾಡಂಗಳತ್ಯಂತ ರೂಪಲಾವಣ್ಯ ಸೌಭಾಗ್ಯ ಕಾಂತಿ ಹಾವ ವಿಲಾಸ ವಿಭ್ರಮಂಗಳನೊಡೆಯ ದೇವಗಣಿಕೆಯರನೆ ಪೋಲ್ವ ಮೂವತ್ತಿರ್ವರ್ ದಿವ್ಯಸ್ತ್ರೀಯರ್ಕಳ್ ಮೂವತ್ತೆರಡು ನಾಟಕಂಗಳ್ ಮೂವತ್ತರಡು ಕೋಟಿ ಕಸವರಮುಂ ಪಂಚರತ್ನಂಗಳೆಂಬಿನಿತಱೊಳಂ ಕೂಡಿ ಭೋಗೋಪಭೋಗ ಸುಖಂಗಳನನುಭವಿಸುತ್ತುಮಿರೆ ಮತ್ತೊಂದು ದಿವಸಮೊರ್ವ ನೈಮಿತ್ತಿಕನಿಂತೆಂದಾದೇಶಂಗೆಯ್ದನೀ ಸುಕುಮಾರಸ್ವಾಮಿ ಆವುದೊಂದು ಕಾಲದೊಳ್ ರಿಸಿಯರ ರೂಪಂ ಕಾಣ್ಗುಮಂದೀತನುಂ ತಪಂಬಡುಗುಮೆಂದೊಡಾ ಮಾತಂ ತಾಯ್ ಕೇಳ್ದು ತನ್ನ ಮನೆಯಂ ರಿಸಿಯರಂ ಪುಗಲೀಯದಂತು ಬಾಗಿಲ ಕಾಪಿನ ಕಲ್ಪಿಸಿದೊಳಂತು ಕಾಲಂ ಸಲೆ ದಿವಸಂ ರತ್ನದ್ವೀಪದಿಂದೊರ್ವ

ಸೆಟ್ಟಯಿದ್ದನು. ಅವನ ಹೆಂಡತಿ ಸರ್ವಯಶಿಯೆಂಬವಳು. ಆ ಇಬ್ಬರಿಗೆ ತ್ರಿವೇದಿಯಾಗಿದ್ದ ದೇವನ ಜೀವದಿಂದ ಯಶೋಭದ್ರೆಯೆಂಬ ಮಗಳು ಜನಿಸಿದಳು. ಆ ತ್ರಿವೇದಿ ತನ್ನ ತಪಸ್ಸನ ಆಚರಣೆಯ ಫಲದಿಂದ ದೇವತ್ವವನ್ನು ಪಡೆದರೂ ತನ್ನ ಸಂಕಲ್ಪದ ಕಾರಣದಿಂದ ಮಿಥ್ಯಾತ್ವಕ್ಕೆ ಒಳಗಾಗಿ ಹೆಣ್ಣುತನವನ್ನು ಹೊಂದಿದ್ದಳು. ಆ ಯಶೋಭದ್ರೆಯನ್ನು ಸೂರದತ್ತನಿಗೆ ಕೊಟ್ಟರು. ಆ ಇಬ್ಬರಿಗೂ ನಾಗಶ್ರೀಯಾಗಿದ್ದ ದೇವನು ಬಂದು ಸುಕುಮಾರಸ್ವಾಮಿಯೆಂಬ ಮಗನಾಗಿ ಹುಟ್ಟಿದನು. ಅವನು ಹುಟ್ಟಿದ ದಿನವೇ ವೈರಾಗ್ಯವುಂಟಾಗಿ ಸೂರದತ್ತ ಸೆಟ್ಟಿಯು ಸುಕುಮಾರಸ್ವಾಮಿಗೆ ಸೆಟ್ಟಿ ಪಟ್ಟವನ್ನು ವಹಿಸಿಕೊಟ್ಟು ತಪಸ್ಸಿಗೆ ತೆರಳಿದನು. ಸುಕುಮಾರಸ್ವಾಮಿಯೆಂಬ ತಾರುಣ್ಯವನ್ನು ಪಡೆದು ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿಯಿಂದ ಕೂಡಿದವನಾದನು. ಅವನಿಗೆ ಮುವತ್ತೆರಡು ಲತಾಗೃಹಗಳೂ ಅತ್ಯಂತ ರೂಪ, ಲಾವಣ್ಯ, ಸೌಭಾಗ್ಯ, ಕಾಂತಿ, ಹಾವ, ಭಾವ, ವಿಲಾಸ, ವಿಭ್ರಮಗಳಿಂದ ಕೂಡಿ ದೇವತಾಸ್ತ್ರೀಯನ್ನು ಹೋಲುವ ಮೂವತ್ತೆರಡು ಮಂದಿ ದಿವ್ಯರಾದ ಸ್ತ್ರಿಯರೂ ಇದ್ದರು, ಮೂವತ್ತೆರಡು ಬಗೆಯ ನಾಟ್ಯಗಳು, ಮೂವತ್ತೆರಡು ಕೋಟಿ ಹೊನ್ನು, ಐದು ಬಗೆಯ ರತ್ನಗಳು ಎಂಬಿವೆಲ್ಲವುಗಳಿಂದ ಕೂಡಿ ಸುಕುಮಾರಸ್ವಾಮಿ ಎಲ್ಲಾ ರೀತಿಯ ಸುಖಗಳನ್ನು ಅನುಭವಿಸುತ್ತಿದ್ದನು. ಮತ್ತೊಂದು ದಿನ ಒಬ್ಬ ಜೋಯಿಸನು ಈ ರೀತಿಯಾಗಿ ಭವಿಷ್ಯವನ್ನು ಹೇಳಿದನು. ‘ಈ ಸುಕುಮಾರಸ್ವಾಮಿ ಯಾವಾಗ ಋಷಿಗಳ ರೂಪವನ್ನು ಕಾಣುವನೋ ಅಂದೇ ತಪಸ್ಸಿಗೆ ತೆರಳುವನು’ ಹೀಗೆಂದ ಮಾತನ್ನು ತಾಯಿ ಯಶೋಭದ್ರೆ ಕೇಳಿ ತನ್ನ ಮನೆಗೆ ಋಷಿಗಳನ್ನು ಪ್ರವೇಶಿಸಲು ಬಿಡದ ಹಾಗೆ ಬಾಗಿಲು ಕಾಯುವವರಿಗೆ ಅಜ್ಞೆ ಮಾಡಿದಳು. ಹಾಗೆಯೇ ಕಾಲ ಕಳೆಯಿತು. ಮತ್ತೊಂದು ದಿವಸ ರತ್ನದ್ವೀಪದಿಂದ ಒಬ್ಬ

ಪರದಂ ಸರ್ವರತ್ನಕಂಬಳಂಗಳಂ ಲಕ್ಷದೀನಾರಂಗಳ್ ಬೆಲೆಯಪ್ಪುವನುಜ್ಜೇನಿಗೆ ಮಾಱಲ್ ಕೊಂಡುಬಂದೊನಾ ಪೊೞಲನಾಳ್ವೊಂ ವೃಷಭಾಂಕನೆಂಬೊನರಸಂಗಂ ಜ್ಯೋತಿರ್ಮಾಲೆಯೆಂಬ ಮಹಾದೇವಿಗಮಿಂತಿರ್ವರ್ಗ್ಗಂ ತೋಱದೊಡೆ ಅವಱ ಬೆಲೆಯಂ ಬೆಸಗೊಂಡೊಡೆ ಲಕ್ಷ ದೀನಾಗಂಗಳ್ ಬೆಲೆಯೆಂದು ಪೇೞ್ದೊಡೆ ಕೊಳಲಾಱದರಸಂ ಪೋಗಲ್ವೇನಂತು ಪೊೞಲೊಳಗೆಲ್ಲಂ ತೋಱ ಯಾರುಂ ಕೊಳಲಾಱದಿರ್ದ್ದೊಡೆ ರತ್ನಕಂಬಳಂಗಳಂ ಕೊಂಡು ಪೋಗಿ ಯಶೋಭದ್ರೆಗೆ ತೋಱದೊಡೆ ಲಕ್ಷದೀನಾರಂಗಳಂ ಕೊಟ್ಟು ರತ್ನಕಂಬಳಂಗಳಂ ಕೊಂಡೊರೊಂದರಱೊಳಂ ನಾಲ್ಕು ಖಂಡಮಾಗೆ ಮೂವತ್ತೆರಡು ಖಂಡಂಗಳಂ ಮಾಡಿ ಮೂವತ್ತಿರ್ವರ್ ಸೊಸೆವಿರ್ಕಳ್ಗೆ ಪಚ್ಚುಗೊಟ್ಟೊಡವರುಂ ತಂತಮ್ಮ ಕೆರ್ಪುಗಳೊಳ್ ತಗುಳ್ಚಿದರೆಂಬ ಮಾತನರಸಂ ಕೇಳ್ದು ಚೋದ್ಯಂಬಟ್ಟವರ ವಿಭೂತಿಯಂ ನೋೞ್ಪೆನೆಂದು ಮನೆಗೆವರ್ಪುದಂ ಯಶೋಭದ್ರೆ ಕೇಳ್ದರಸರ್ ಬರ್ಪ ಬಟ್ಟೆಯೊಳೆಲ್ಲಂ ಪಂಚರತ್ನಂಗಳಂ ರಂಗವಲ್ಲಿಯನಿಕ್ಕಿ ನೇತ್ರವಟ್ಟು ದುಕೂಲ ಚೀನಾದಿ ದಿವ್ಯವಸ್ತ್ರಂಗಳಂ ಪಾಸಿ ಮಣಿಭದ್ರಮಪ್ಪ ಹೇಮ ಮುಕ್ತಾಹಾರಂಗಳಿಂ ತೋರಣಂಗಟ್ಟಿಸಿಯರಸರ ಬರವಂ ಪಾರುತ್ತಿರೆ ನೃಪತಿಯುಂ ಬಂದು ಸುರೇಂದ್ರಭವನೋಪಮಮಪ್ಪ ಪ್ರಾಸಾದಮಂ ಪೊಕ್ಕು ವಿಸ್ಮಯಚಿತ್ತನಾಗಿ ಸುರಲೋಕಂಬೊಕ್ಕ ಪುಣ್ಯವಂತಂಬೊಲಾಗಳ್ ಮಹಾವಿಭೂತಿಯಿಂ ಶಯ್ಯಾತಳದೊಳಿರ್ದು ಸುಕುಮಾರನೆಲ್ಲಿದನೆಂದು

ವರ್ತಕನು ಲಕ್ಷದೀನಾರ (ಚಿನ್ನದ ನಾಣ್ಯ)ಗಳ ಬೆಲೆ ಬಾಳತಕ್ಕ ಎಲ್ಲಾ ರತ್ನಗಳಿಂದ ಕೂಡಿದ ಕಂಬಳಿಗಳನ್ನು ಮಾರಲು ಉಜ್ಜಯಿನಿಗೆ ತೆಗೆದುಕೊಂಡು ಬಂದನು. ಆ ಪಟ್ಟಣವನ್ನಾಳುವ ವೃಷಭಾಂಕನೆಂಬ ರಾಜನಿಗೂ ಜ್ಯೋತಿರ್ಮಾಲೆಯೆಂಬ ಮಹಾರಾಣಿಗೂ ಹೀಗೆ ಇಬ್ಬರಿಗೂ ರತ್ನ ಕಂಬಳಿಗಳನ್ನು ತೋರಿಸಲು, ಅದರ ಬೆಲೆಯೇನೆಂದು ಕೇಳಿದಾಗ ಲಕ್ಷದೀನಾರಗಳೆಂದು ಹೇಳಿದನು. ರಾಜನು ಅವನ್ನು ಕ್ರಯಕ್ಕೆ ಕೊಳ್ಳಲಾರದೆ ಆ ವರ್ತಕನನ್ನು ಹೋಗಲು ಹೇಳಿದನು. ಅಂತೂ ಪಟ್ಟಣದಲ್ಲೆಲ್ಲಾ ತೋರಿಸಿದರೂ ಯಾರೂ ಕೊಂಡುಕೊಳ್ಳಲಾರದೆ ಇದ್ದಾಗ ಆ ರತ್ನಕಂಬಳಿಗಳನ್ನು ಕೊಂಡುಹೋಗಿ ಯಶೋಭದ್ರೆಗೆ ತೋರಿಸಿದಾಗ, ಆಕೆ ಲಕ್ಷದೀನಾರಗಳನ್ನು ಕೊಟ್ಟು ಅವನ್ನು ಕೊಂಡಳು. ಆಮೇಲೆ ಅವುಗಳಲ್ಲಿ ಪ್ರತಿಯೊಂದನ್ನೂ ನಾಲ್ಕು ತುಂಡುಗಳಾಗಿ ಮಾಡಿ ಒಟ್ಟು ಮೂವತ್ತೆರಡು ತುಂಡುಗಳನ್ನು ಮಾಡಿ ತನ್ನ ಮೂವತ್ತೆರಡು ಸೊಸೆಯಂದಿರಿಗೆ ಹಂಚಿಕೊಟ್ಟಳು. ಅವರು ಆ ತುಂಡುಗಳನ್ನು ತಮತಮ್ಮ ಪಾದುಕೆಗಳಿಗೆ ಸಿಕ್ಕಿಸಿದರು. ಈ ಸಂಗತಿಯನ್ನು ರಾಜನು ಕೇಳಿ ಆಶ್ಚರ್ಯಪಟ್ಟು ಅವರ ವೈಭವವನ್ನು ನೋಡುವೆನೆಂದು ಸುಕುಮಾರಸ್ವಾಮಿಯ ಮನೆಗೆ ಬರುತ್ತಿದ್ದನು. ರಾಜರು ಬರುವುದನ್ನು ಯಶೋಭದ್ರೆ ಕೇಳಿ, ರಾಜರು ಬರುವ ದಾರಿಯಲ್ಲೆಲ್ಲ ನೀಲ, ವಜ್ರ, ಪದ್ಮರಾಗ, ಮುತ್ತು, ಹವಳ – ಎಂಬ ಐದು ಬಗೆಯ ರತ್ನಗಳಿಂದ ರಂಗೋಲೆ ಹಾಕಿಸಿದಳು. ನೇತ್ರ, ಪಟ್ಟು, ದುಕೂಲ, ಚೀನ – ಎಂಬ ಬಗೆಬಗೆಯ ರೇಷ್ಮೆಯ ದಿವ್ವವಾದ ಬಟ್ಟೆಗಳನ್ನು ಹಾಸಿದಳು.ರತ್ನಗಳಿಂದ ಚೆಲುವಾದ ಚಿನ್ನದ ಮುತ್ತಿನ ಸರಗಳಿಂದತೋರಣ ಕಟ್ಟಿದಳು. ರಾಜನ ಆಗಮನವನ್ನು ಎದುರು ನೋಡುತ್ತಿರಲು ರಾಜನು ಬಂದು, ಇಂದ್ರನ ಅರಮನೆಯನ್ನು ಹೋಲುವ ಉಪ್ಪರಿಗೆ ಮನೆಯನ್ನು ಪ್ರವೇಶಿಸಿದನು. ಆಗ ರಾಜನು ಅಚ್ಚರಿಗೊಂಡವನಾಗಿ ದೇವಲೋಕವನ್ನು ಪ್ರವೇಶಿಸಿದ ಪುಣ್ಯಶಾಲಿಯಂತೆ ಮಹಾ ವೈಭವದಿಂದ ಹಾಸಿಗೆಯ ಮೇಲೆ ಕುಳಿತು, ‘ಸುಕುಮಾರನು ಎಲ್ಲಿದ್ದಾನೆ ? ’ ಎಂದು

ಬೆಸಗೊಂಡೊಡೆ ಸ್ವಾಮಿ ಆತಂ ಕರಂ ಸಾದು ನಿಮ್ಮ ಬರಮನಱಯಂ ಪ್ರಾಸಾದದ ಮೇಗಣ ನೆಲೆಯೊಳಿರ್ದನೆಂದೊಡರಸಂ ಬೞಯನಟ್ಟಿಮೆನೆ ತಾಯ್ ಪೋಗಿ ಮಗನೆ ಅರಸರ್ವಂದರ್ ಬಾ ಪೋಪಮೆನೆ ಅರಸರೆಂಬೊರಾರೆನೆ ತಾಯೆಂದಳ್ ನಮ್ಮನಾಳ್ರ್ವೆರೆಂದೊಡೆ ನಮ್ಮನಾಳ್ವರುಮೊಳರೆ ಎಂದು ವಿಸ್ಮಯಂಬಟ್ಟು ತಾಯ ವಚನಮಂ ಮಾರ್ಕೊಳಲಾಱದೆ ಬರ್ಪೊನಂ ನರೇಶ್ವರಂ ಕಂಡು ಕಣ್ಣೆತ್ತ ಫಲಮನಿಂದು ಪೆತ್ತೆನೆಂದು ಪ್ರತ್ಯಕ್ಷ ಕಾಮದೇವನನಪ್ಪಿಕೊಳ್ವಂತಪ್ಪಿಕೊಂಡು ದಿವ್ಯ ಶಯ್ಯಾತಳದ ಮೇಗೊಡನಿರಿಸಿದಾಗಳ್ ಸ್ವಜನ ಪರಿಜನಂಗಳ್ ಸಿದ್ಧಾರ್ಥಂಗಳಂ ಮಾಂಗಲ್ಯಮೆಂದಿರ್ವರ್ಗ್ಗಂ ಸೇಸೆಯನಿಕ್ಕಲಾಗಳಾ ಸಿದ್ದಾರ್ಥಂಗಳ್ ಸುಕುಮಾರಸ್ವಾಮಿಯಾಸನಮನೊತ್ತೆ ಕಟಿವಮನಲುಗಿಸುವುದುಮಂ ಸೊಡರಂ ನೋಡಿದಾಗಳ್ ಕಣ್ಣೀರ್ಗಳ್ ಸುರಿವುದುಮಂ ಕಂಡೀಗಳೀತಂಗೆ ಬ್ಯಾದಿಗಳೆಂದು ಬಗೆದಿರ್ಪ್ಪಿನಂ ಮಜ್ಜನಕ್ಕೆೞ್ತನ್ನಿಮೆಂದೊಡತೆಗೆಯ್ವೆಮೆಂದು ಮಜ್ಜನಂಗೊಂಡಮರಸನ್ನಿಭ ಮಣಿಕುಟ್ಟಿಮಮಪ್ಪ ಬಾವಿಯಂ ಪೊಕ್ಕು ಮಿಂದಲ್ಲಿಯನರ್ಘ್ಯಮಪ್ಪ ತನ್ನ ಬೆರಲ ಮಾಣಿಕದುಂಗುರಂ ಬಿೞ್ಪುದನಱಸಲ್ವೇಡಿ ಛಿದ್ರಕದ್ವಾರದ ತೂಂತನುರ್ಚಿ ನೀರಂ ಕಳೆದಾಗಳಿಂದ್ರನ ಭಂಡಾರಂ ತೆಱೆದಂತಪ್ಪ ಲೇಸಪ್ಪ ನಾನಾಮಣಿಯ ವಿಚಿತ್ರ ಭೂಷಣಂಗಳಂ ಪಲವುಮಂ ಕಂಡು ಮಹಾಶ್ಚರ್ಯಭೂತನಾಗಿ ನೋಡುತ್ತಿರ್ಪನ್ನೆಗಮಾರೋಗಿಸಲೆೞ್ತನ್ನಿ

ಕೇಳಿದನು. ಅದಕ್ಕೆ ಉತ್ತರವಾಗಿ “ಸ್ವಾಮಿ, ಅವನು ಬಹಳ ಸಾಧು, ನೀವು ಬಂದುದನ್ನು ಅವನು ತಿಳಿದಿಲ್ಲ. ಉಪ್ಪರಿಗೆಯ ಮೇಲೆ ಇದ್ದಾನೆ* ಎಂದು ಹೇಳಲು ದೂತರೊಡನೆ ಹೇಳಿ ಕಳುಹಿಸಿ ಅವನನ್ನು ಬರಮಾಡಿ ಎಂದನು. ಆಗ ತಾಯಿ ಯಶೋಭದ್ರೆ ಹೋಗಿ “ಮಗನೇ, ರಾಜರು ಬಂದಿದ್ದಾರೆ ಬಾ, ಹೋಗೋಣ* ಎಂದಳು. ಆಗ ಸುಕುಮಾರನು “ರಾಜರೆಂದರೆ ಯಾರು ? * ಎಂದು ಕೇಳಲು, ತಾಯಿಯು “ನಮ್ಮನ್ನು ಆಳುವವರು* ಎಂದಾಗ ಸುಕುಮಾರನು “ನಮ್ಮನ್ನು ಆಳುವವರೂ ಇರುವರೆ ? * ಎನ್ನುತ್ತ ಆಶ್ಚರ್ಯಪಟ್ಟನು. ತಾಯಿಯ ಮಾತನ್ನು ವಿರೋಸಲಾರದೆ ಬಂದನು. ಅವನನ್ನು ರಾಜನು ಕಂಡು “ಕಣ್ಣನ್ನು ಪಡೆದದ್ದು ಇಂದು ಸಫಲವಾಯಿತು* ಎಂದುಕೊಂಡುಪ್ರತ್ಯಕ್ಷವಾಗಿ ಮನ್ಮಥನನ್ನೇ ಅಪ್ಪಿಕೊಳ್ಳುವಂತೆ ಅವನನ್ನು ಅಪ್ಪಿಕೊಂಡು ಶ್ರೇಷ್ಠವಾದ ಆ ಹಾಸಿಗೆಯ ಮೇಲೆ ತನ್ನ ಜೊತೆಯಲ್ಲಿ ಕುಳ್ಳಿರಿಸಿದನು. ಆಗ ಸ್ವಜನರೂ ಸೇವಕರೂ ಬಿಳಿ ಸಾಸವೆಗಳನ್ನು ಮಂಗಳಕರವೆಂದು ಇಬ್ಬರಿಗೂ ಮಂತ್ರಾಕ್ಷತೆಯನ್ನು ಹಾಕಿದರು. ಆ ಬಿಳಿ ಸಾಸವೆಕಾಳುಗಳು ಸುಕುಮಾರಸ್ವಾಮಿಯ ಆಸನದಲ್ಲಿ ಒತ್ತಿದುದರಿಂದ ಸೊಂಟ ಅಲ್ಲಾಡಿಸಿದುದನ್ನೂ ದೀಪ ನೋಡಿದಾಗ ಕಣ್ನೀರು ಸುರಿವುದನ್ನೂ ಕಂಡು ಈತನಿಗೆ ರೋಗಗಳಿವೆಯಂದು ಭಾವಿಸಿಕೊಂಡಿದ್ದನು. ಅಷ್ಟರಲ್ಲಿ ‘ಸ್ನಾನಕ್ಕೆ ಏಳಿ, ಬನ್ನಿ’ ಎನ್ನಲು ‘ಹಾಗೆಯೇ ಮಾಡುವೆವು’ ಎಂದು ಸ್ನಾನ ಮಾಡಲು ಉದ್ಯುಕ್ತನಾಗಿ ದೇವಲೋಕದ್ದಕ್ಕೆ ಸಮಾನವಾದ ರತ್ನಮಯವಾದ ನೆಲಗಟ್ಟುಳ್ಳ ಕೆರೆಗೆ ಹೋಗಿ ಸ್ನಾನ ಮಾಡಿದನು. ಆಗ ತನ್ನ ಬೆರಳಿನಲ್ಲಿದ್ದ ಅಮೂಲ್ಯವಾದ ಉಂಗುರ ಬಿದ್ದು ಹೋಗಲು, ಅದನ್ನು ಹುಡುಕುವುದಕ್ಕಾಗಿ ಆ ಕೆರೆಯ ಎದುರಿನ ತೂಬನ್ನು ತೆಗೆದು ನೀರನ್ನು ಬಿಟ್ಟನು. ಆಗ ಅಲ್ಲಿ ದೇವೇಂದ್ರನ ಖಜಾನೆಯನ್ನೇ ತೆರೆದ ರೀತಿಯಲ್ಲಿ ಶ್ರೇಷ್ಟವಾದ ಬಗೆಬಗೆಯ ರತ್ನಗಳ ವಿಚಿತ್ರವಾದ ಹಲವು ಆಭರಣಗಳನ್ನು ಕಂಡು ಬಹಳ ಆಶ್ಚರ್ಯಪಟ್ಟವನಾಗಿ ನೋಡುತ್ತದ್ದನು. ಅಷ್ಷರಲ್ಲಿ ರಾಜನನ್ನು ಸುಕುಮಾರನನ್ನೂ ‘ಊಟಕ್ಕೆ

ಮೆಂದಾಗಳ್ ಪರಿಯಣದ ಮೊದಲೊಳ್ ಸುಕುಮಾರುಂ ಬರೆಸು ನಾನಾಪ್ರಕಾರದಿನಿಯವಪ್ಪುಣಿಸುಗಳನುಣುತ್ತಂ ಸುಕುಮಾರಸ್ವಾಮಿ ಆರ್ಧಾಹಾರಮಂ ನುಂಗುಗುಮರ್ಧಾಹಾರಮನುಗುೞ್ಗು ಮದಂ ನೋಡಿ ಇದುವುಮೊಂದು ಕುತ್ತಂ ಆಹಾರದ ಮೇಗರುಚಿಯೆಂದು ಬಗದುಣಿಸು ಸಮೆದ ಬೞಕ್ಕೆ ಗಂಧ ತಾಂಬೂಲ ಮಾಲ್ಯ ವಸ್ತ್ರಾಭರಣಂಗಳಂ ತಂದು ಕೊಟ್ಟಾಗವಂ ತೊಟ್ಟುಟ್ಟು ಪಸದನಂಗೊಂಡು ಸುಖಸಂಕಥಾವಿನೋದದಿಂದಿರ್ದೊಡೆ ಯಶೋಭದ್ರೆಯನರಸನಿಂತೆಂದು ಬೆಸಗೊಂಡನಬ್ಬಾ ಎಮ್ಮ ತಮ್ಮನ ಕಟಿಪ್ರದೇಶದ ರೋಗಕ್ಕಂ ಕಣ್ಣನೀರ್ ಬರ್ಪುದರ್ಕಂ ಅರುಚಿಗಮೇಕೆ ಮರ್ದಂ ಮಾಡಿಸಿದಿರಿಲ್ಲೆನೆ ದೇವಾ ಆತಂಗಿವು ಕುತ್ತಮಲ್ಲವು ಸೇಸೆಯಿಕ್ಕಿದ ಸರುಸಪಂಗಳೊತ್ತೆ ಸೈರಿಸಲಾಱಂ ಮತ್ತೆ ಅವ ಕಾಲಮುಂ ಮಾಣಿಕದ ಬೆಳಗಿನೊಳಿರ್ಪುದಱಂದು ಸೊಡರ ಬೆಳಗಿಂಗೆ ಸೈರಿಸದೆ ಕಣ್ಣ ನೀರ್ ಬರ್ಕುಂ ಮತ್ತಂ ಕಮಳ ನೀಳೋತ್ಪಳದೊಳ್ ವಾಸಿಸಿದಕ್ಕಿಯೊಳ್ ಕೂೞಂ ನುಂಗುಗುಮುೞದ ಕೂೞನುಗುೞ್ಗುಮದಱಂದೀತಂಗೀಯವಸ್ಥೆಗಳಾದುವೆನೆ ಕೇಳ್ದು ವಿಸ್ಮಯಂಬಟ್ಟು ಈತನ ಕ್ಷಣಮಾತ್ರದ ಭೋಗಕ್ಕಂ ಸುಖಕ್ಕಂ ಎಮ್ಮೆಲ್ಲಾ ಕಾಲಮರಸುತನಂ ಗೆಯ್ವಲ್ಲಿಯೊಳಪ್ಪ ಭೋಗೋಪಭೊಗಂಗಳ್

ಬನ್ನಿರಿ’ ಎಂದು ಕರೆಯಲು ರಾಜನು ಸುಕುಮಾರನೊಂದಿಗೆ ಊಟದ ತಟ್ಟೆಯ ಮುಂದೆ ಕುಳಿತುಕೊಂಡು ಹಲವು ವಿಧದ ಸವಿಯಾದ ಆಹಾರವನ್ನು ಉಣ್ಣುತ್ತ ಇರಲು, ಸುಕುಮಾರಸ್ವಾಮಿ ಆಹಾರದ ಅರ್ಧಾಂಶವನ್ನು ನುಂಗುತ್ತಿದ್ದನು, ಇನ್ನುಳಿದ ಅ ರ್ಧಾಂಶ ಆಹಾರವನ್ನು ಉಗುಳುತ್ತಿದ್ದನು. ಅದನ್ನು ಅರಸನು ನೋಡಿ “ಇದು ಒಂದು ಬಗೆಯ ರೋಗ, ಊಟದ ಮೇಲೆ ರುಚಿಯಿಲ್ಲದುದು* ಎಂದು ಭಾವಿಸಿಕೊಂಡನು. ಊಟವಾದ ನಂತರ ಗಂಧ, ತಾಂಬೂಲ, ಹೂಮಾಲೆ, ಉಡಿಗೆ, ತೊಡಿಗೆಗಳನ್ನು ತಂದು ಕೊಡಲು, ಅವನ್ನು ತೊಟ್ಟು ಉಟ್ಟು ಅಲಂಕಾರ ಮಾಡಿಕೊಂಡು ಸಂತೋಷದ ಮಾತುಗಳ ವಿನೋದದಿಂದ ಇದ್ದರು. ಆಗ ಅರಸನು ಯಶೋಭದ್ರೆಯನ್ನು ಕುರಿತು ಹೀಗೆ ಪ್ರಶ್ನಿಸಿದನು: “ಅಮ್ಮಾ ನನ್ನ ತಮ್ಮನಾದ ಸುಕುಮಾರನಿಗೆ ಸೊಂಟದ ರೋಗಕ್ಕೂ ಕಣ್ಣೀರು ಸುರಿಯುವುದಕ್ಕೂ ಊಟ ಸೇರದಿರುವುದಕ್ಕೂ ಏಕೆ ಔಷಧ ಮಾಡಿಸಿಲ್ಲ ? * ಎಂದು ಕೇಳಿದಾಗ ಆಕೆ “ಒಡೆಯರೆ, ಅವನಿಗೆ ಇವು ರೋಗಗಳಲ್ಲ. ಮಂತ್ರಾಕ್ಷತೆಯಾಗಿ ಹಾಕಿದ ಬಿಳಿ ಸಾಸವೆಗಳು ಒತ್ತಿದುದರಿಂದ ಸಹಿಸದಾದನು. ಅಲ್ಲದೆ ಯಾವಾಗಲೂ ಮಾಣಿಕ್ಯ ರತ್ನದ ಬೆಳಕಿನಲ್ಲಿ ಅವನು ಇರುವುದರಿಂದ ದೀಪದ ಬೆಳಕಿಗೆ ಸಹಿಸಲಾರದೆ ಅವನ ಕಣ್ಣಿನಲ್ಲಿ ನೀರು ಬರುತ್ತದೆ. ಅದೂ ಅಲ್ಲದೆ ನೀವು ಬಂದ ಸಂದರ್ಭದಲ್ಲಿ ತಾವರೆ ನೈದಿಲೆ ಹೂಗಳ ಸುವಾಸನೆಯಿಂದ ಕೂಡಿದ ಅಕ್ಕಿಯೊಂದಿಗೆ ಬೇರೆ ಅಕ್ಕಿಯನ್ನು ಮಿಶ್ರಮಾಡಿ ಬೇಯಿಸಿದ ಅನ್ನವನ್ನು ಬಡಿಸಿದ್ದರಿಂದ ಅವನು ಸುವಾಸನೆಯ ಅಕ್ಕಿಯ ಅನ್ನವನು ನುಂಗುತ್ತಿದ್ದನು. ಉಳಿದ ಅನ್ನವನ್ನು ಉಗುಳುತ್ತಿದ್ದನು. ಆದುದರಿಂದಲೇ ಇವನಿಗೆ ಈ ಅವಸ್ಥೆಗಳಾಗಿವೆ* ಎಂದು ಹೇಳಿದಳು. ಅರಸನು ಇದನ್ನು ಕೇಳಿ ಆಶ್ಚರ್ಯಪಟ್ಟನು. “ಈತನು ಒಂದು ಕ್ಷಣದ ಭೋಗಕ್ಕೂ ಸುಖಕ್ಕೂ ನನ್ನ ಎಲ್ಲಾ ಕಾಲವೂ ಅರಸುತನ ನಡೆಸಿದಾಗ ಉಂಟಾದ ಭೋಗ – ಉಪಭೋಗಗಳು ಸಮಾನವಾಗವು. ಆದುದರಿಂದ ಲೋಕದಲ್ಲಿ

ದೊರೆಯಲ್ಲವದಱಂದೀ ಲೋಕದೊಳೀತನೆ ಪರಮಾರ್ಥಂ ಸುಖಿಯೆಂದೊಸೆದರಸನವಂತಿ ಸುಕುಮಾರನೆಂದು ಪೆಸರನಿಟ್ಟಂ ಯಶೋಭದ್ರೆಯುಮರಸಮನನನೇಕ ವಸ್ತುವಾಹನಂಗಳಿಂದಂ ಪೂಜಿಸಿ ಕೞಪಿದೊಳಿಂತು ಸುಕುಮಾರಸ್ವಾಮಿಗೆ ಸುಖದಿಂದಂ ಕಾಲಂ ಸಲೆ ಮತ್ತೊಂದು ದಿವಸಂ ಯಶೋಭದ್ರೆಯ ಭ್ರಾತರರಪ್ಪ ದಯಾಭದ್ರರೆಂಬ ರಿಸಿಯರ್ ಮುನ್ನಮವರ ಪಕ್ಕದೆ ಸೂರದತ್ತಂ ಧರ್ಮಂ ಕೇಳ್ದು ವೈರಾಗ್ಯಮಾಗಿ ಪುತ್ರಮುಖಂಗಂಡು ತಪಂಬಟ್ಟೊನಾತನ ಮಗನುಂ ರಿಸಿಯರಂ ಕಂಡಾಗಳೆ ತಪಂಬಡುಗುಮೆಂಬುದಂ ಮುನ್ನೆ ನೈಮಿತ್ತಿಕರಾದೇಶಂಗೆಯ್ದಿರ್ದರ್ ಮತ್ತಂ ದಯಾಭದ್ರರೆಂಬ ರಿಸಿಯರ್ ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತಂ ಬರ್ಪ ದಿವ್ಯಜ್ಞಾನಿಗಳ್ ಸುಕುಮಾರಸ್ವಾಮಿಗೆ ನಾಲ್ಕುತಿಂಗಳುಮೈದುದಿವಸಮಾಯುಷ್ಯಪ್ರಮಾಣ ಮನಱದುಪಕಾರಾರ್ಥಮುಜ್ಜೇನಿಗೆ ವಂದು ಸುಕುಮಾರಸ್ವಾಮಿಯ ಮಾಡದ ಪೆಱಗಣ ನಂದನ ವನದೊಳಗಣ ಜಿನಾಲಯದೊಳಾಷಾಢ ಮಾಸದ ಚತುರ್ದಶಿಯ ದಿವಸದಂದು ಪಱವೊೞ್ತು ಬಂದು ಜೋಗುಗೊಂಡಿರ್ದರನ್ನೆಗಂ ವನಪಾಲಕರ್ ಪೋಗಿ ಯಶೋಭದ್ರೆಗೆ ರಿಸಿಯರ ಬರವಂ ಪೇೞ್ದೊಡಾಕೆಯುಂ ಬಂದು ದೇವರುಮಂ ರಿಸಿಯರುಮಂ ಬಂದಿಸಿ ಭಟ್ಟಾರಾ ನೀಮಿಲ್ಲಿಗೇಕೆ ಬಂದಿರಿಲ್ಲಿಂದಂ ಪೊಱವೊೞಲೊಳ್ ಪೆಱವುೞ ಬಸದಿಯಿಲ್ಲಾ ಎಂದೊಡೆ ಭಟ್ಟಾರರೆಂದರಬ್ಬಾ ನಿಡುವಯಣಂ ಬಂದು ಸೇದಗೆಟ್ಟೆಂತಾನುಮಿಲ್ಲಿಗೆಯಾಸತ್ತು ಜೋಗಿನ ಪೊೞ್ತಱೊಳೆಯ್ದಿ ಬಂದು

ನಿಜವಾಗಿಯೂ ಈತನೇ ಸುಖಿ* ಎಂದು ಪ್ರೀತಿಗೊಂಡವನಾಗಿ ಅರಸನು ಅವನಿಗೆ ‘ಅವಂತಿ ಸುಕುಮಾರ’ ಎಂದು ಹೆಸರನ್ನಿಟ್ಟನು. ಯಶೋಭದ್ರೆ ರಾಜನನ್ನು ಹಲವಾರು ವಿಧದ ವಸ್ತುಗಳಿಂದಲೂ ವಾಹನಗಳಿಂದಲೂ ಸತ್ಕರಿಸಿ ಕಳುಹಿಸಿದಳು. ಹೀಗೆ ಸುಕುಮಾರಸ್ವಾಮಿಗೆ ಕಾಲವು ಸುಖಮಯವಾಗಿ ಸಾಗುತ್ತಿತ್ತು. ಅನಂತರ ಒಂದು ದಿವಸ ಯಶೋಭದ್ರೆಯ ಸಹೋದರರಾದ ದಯಾಭದ್ರರೆಂಬ ಋಷಿಗಳು ಉಜ್ಜಯಿನಿಗೆ ಬಂದರು. ಹಿಂದೆ ಅವರ ಬಳಿಯಲ್ಲಿದ್ದು ಸೂರದತ್ತನು (ಸುಕುಮಾರನ ತಂದೆ) ಧರ್ಮಶ್ರವಣ ಮಾಡಿ, ವೈರಾಗ್ಯ ತಾಳಿ, ಮಗನು ಹುಟ್ಟಿದೊಡನೆ ತಪಸ್ಸಿಗೆ ತೆರಳಿದ್ದನು. ಆತನ ಮಗನಾದ ಸುಕುಮಾರನೂ ಋಷಿಗಳನ್ನು ಕಂಡ ಕೂಡಲೇ ತಪಸ್ಸಿಗೆ ತೆರಳುವನೆಂಬುದನ್ನು ಹಿಂದೆಯೇ, ಜ್ಯೋತಿಷ್ಯ ತಿಳಿದವರು ತಿಳಿಸಿದರು. ಆಮೇಲೆ ದಯಾಭದ್ರರೆಂಬ ಋಷಿಗಳು ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪತ್ತನ, ದ್ರೋಣಾಮುಖಗಳಲ್ಲಿ ಸಂಚಾರ ಮಾಡುತ್ತ, ದಿವ್ಯಜ್ಞಾನಿಗಳಾದ ಅವರು ಸುಕುಮಾರಸ್ವಾಮಿಗೆ ನಾಲ್ಕು ತಿಂಗಳು ಐದು ದಿವಸ ಮಾತ್ರ ಆಯುಷ್ಯವಿರುವುದನ್ನು ತಿಳಿದು ಉಪಕಾರ ಮಾಡುವುದಕ್ಕಾಗಿಯೇ ಉಜ್ಜಯಿನಿಗೆ ಬಂದರು. ಹಾಗೆ ಬಂದು ಸುಕುಮಾರಸ್ವಾಮಿಯ ಮನೆಯ ಹಿಂದಣ ಉದ್ಯಾನದೊಳಗಿರುವ ಜಿನಾಲಯದಲ್ಲಿ ಅಷಾಢಮಾಸದ ಚತುದರ್ಶಿಯ ದಿವಸ ಸಂಜೆ (ಹರೆ ಬಾರಿಸುವ ಹೊತ್ತು) ಬಂದು ಯೋಗಸ್ಥರಾಗಿದ್ದರು. ಅಷ್ಟರಲ್ಲಿ ಉದ್ಯಾನಪಾಲಕರು ಹೋಗಿ, ಋಷಿಗಳು ಬಂದ ಸಂಗತಿಯನ್ನು ಯಶೋಭದ್ರೆಗೆ ತಿಳಿಸಿದರು. ಆಕೆ ಬಂದು ಜಿನೇಂದ್ರರನ್ನೂ ಋಷಿಗಳನ್ನೂ ವಂದಿಸಿ ಋಷಿಗಳೊಡನೆ – “ಸ್ವಾಮೀ, ನೀವು ಈ ಸ್ಥಳಕ್ಕೆ ಯಾಕೆ ಬಂದಿರಿ? ಇಲ್ಲಿಗಿಂತ ಈ ಪಟ್ಟಣದ ಹೊರಗೆ ಬೇರೆ ಕಡೆ ಜಿನದೇವಾಲಯವಿರಲಿಲ್ಲವೆ? * ಎಂದು ಕೇಳಿದಳು. ಆಗ ಋಷಿಗಳು “ಅವ್ವಾ, ನಾವು ಬಹಳ ದೂರದಿಂದ ಪ್ರಯಾಣ