ಜೋಗುಗೊಂಡಿರ್ದೆಮೆತ್ತಲುಂ ಪೋಗಲಾಗದೆನೆ ಅಂತಪ್ಪೊಡೆ ಭಟಾರಾ ನಿಮ್ಮನೊಂದಂ ಬೇಡಿಕಪ್ಪೆಂ ನಾಲ್ಕುತಿಂಗಳುಮೇನುಮನೋದದೆ ಮೋನಂಗೊಂಡು ಬಸದಿಯಂಗಳದೊಳ್ ನಡಪಾಡ ದೊಳಗಣಡಂಗಿರ್ದು ಜೋಗು ನೆಱೆದಂದು ಬಿಜಯಂಗೆಯ್ಯಿಮೆಂದೊಡಂತೆಗೆಯ್ವೆಮೆಂದು ಭಟಾರರಿರ್ದರ್ ಮತ್ತಿತ್ತಲ್ ಸುಕುಮಾರಸ್ವಾಮಿಯುಂ ಸರ್ವತೋಭದ್ರಮೆಂಬುತ್ತುಂಗ ವಿಚಿತ್ರಮಾಗಿರ್ದ ಪ್ರಾಸಾದದ ಮೇಗೇೞನೆಯ ನೆಲೆಯೊಳೆ ಕಾರ್ತಿಕಮಾಸದ ಪುಣ್ಣಮಿಯಂದು ಸುಖದಿಂದೆ ಲುಂದಿರ್ದನನ್ನೆಗಮಿತ್ತ ದುಯಾಭದ್ರ ಭಟಾರರ್ಗ್ಗೆ ಜೋಗು ನೆಱೆದು ಯಶೋಭದ್ರೆಯ ಬೇಡಿದ ಮೋನದ ದಿವಸದ ಪ್ರಮಾಣಾವಸಾನದೊಳ್ ಬೈಗಿರುಳಿನ ಪಂಚಮಹಾಶಬ್ದದ ಪೊೞ್ತಱೊಳ್ ತ್ರಿಲೋಕಪ್ರಜ್ಞಪ್ರಿಯೆಂಬುದಂ ಮೃದು ಮಧುರ ಗಂಭೀರ ಸ್ವರದಿಂ ಭಟಾರರ್ ಪರಿವಿಡಿಗೆಯ್ದಾಗಳ್ ಆಧೋಲೋಕ ತಿರ್ಯಗ್ಲೋಕಂಗಳಿರ್ದ ಸ್ವರೂಪಮಂ ಪ್ರಮಾಣಮುಮನೋದಿ ಊರ್ಧ್ವಲೋಕವ್ಯಾವರ್ಣನೆಯಂ ಪೇೞ್ದೂಗಳಚ್ಯುತಕಲ್ಪದ ಪದ್ಮಗುಲ್ಮ ವಿಮಾನಮಂ ವ್ಯಾವರ್ಣಿಸುವುದಂ ಸುಕುಮಾರಸ್ವಾಮಿ ಕೇಳ್ದು ಜಾತಿಸ್ಮರನಾಗಿಯಾನಿಲ್ಲಿ ಪುಟ್ಟಿದ್ದೇನೆಂಬುದನಱದು ಅಹೋ ಸುರಲೋಕಮೆಂಬಮೃತಸಮುದ್ರದ ನೀರೆಲ್ಲಮಂ ಕುಡಿದು ತಣಿಯದನೀ ಮನುಷ್ಯಭವದ ಸುಖಮೆಂಬ

ಮಾಡಿಕೊಂಡು ಬಂದುದರಿಂದ ಬಹಳ ಬಳಲಿದ್ದೇವೆ. ಹೇಗಾದರೂ ಈ ಸ್ಥಳಕ್ಕೆ ಆಯಾಸಗೊಂಡು ಯೋಗಾಭ್ಯಾಸದ ಹೊತ್ತಿಗೆ ಬಂದು ತಲುಪಿ ಯೋಗಮಗ್ನರಾಗಿದ್ದೇವೆ. ಇಲ್ಲಿಂದ ಎಲ್ಲಿಗೂ ಹೋಗಲಾಗದು* ಎಂದು ಹೇಳಿದಳು. ಆಗ ಆಕೆ – “ಹಾಗಿದ್ದರೆ ಪೂಜ್ಯರೇ, ನಿಮ್ಮಲ್ಲಿ ಒಂದನ್ನು ನಾನು ಬೇಡಿಕೊಳ್ಳುತ್ತೇನೆ. ನೀವು ನಾಲ್ಕು ತಿಂಗಳು ಏನನ್ನೂ ಪಠಿಸದೆ, ಮೌನವ್ರತ ತಾಳಿ, ಜಿನಾಲಯದ ಅಂಗಳದಲ್ಲಿ ಅಡ್ಡಾಡದೆ ಒಳಗೆಯೇ ಅಡಗಿದ್ದು ತಪಸ್ಸು ಕೊನೆಗೊಂಡಾಗ ನಿಮ್ಮ ಪ್ರಯಾಣ ಬೆಳೆಸಿರಿ* ಎಂದಳು. “ಹಾಗೆಯೇ ಮಾಡುವೆವು* ಎಂದು ನುಡಿದು ಋಷಿಗಳಿದ್ದರು. ಆಮೇಲೆ ಇತ್ತ ಸುಕುಮಾರಸ್ವಾಮಿ ಸರ್ವತೋಭದ್ರವೆಂಬ ಅತ್ಯಂತ ಎತ್ತರವಾದ ಮತ್ತು ವಿಶೇಷ ಆಶ್ಚರ್ಯಕರವಾದ ಉಪ್ಪರಿಗೆಯ ಮನೆಯ ಮೇಲೆ ಏಳನೆಯ ಅಂತಸ್ತಿನಲ್ಲಿ ಕಾರ್ತಿಕಮಾಸದ ಹುಣ್ಣಿಮೆಯಂದು ಸುಖವಾಗಿ ಮಲಗಿದ್ದನು. ಅದೇ ಸಮಯಕ್ಕೆ ಈ ಕಡೆಯಲ್ಲಿ ದಯಾಭದ್ರಮುನಿಗಳ ತಪಸ್ಸು ಪೂರ್ಣವಾಯಿತು. ಯಶೋಭದ್ರೆ ಪ್ರಾರ್ಥಿಸಿಕೊಂಡ ಮೌನ ದಿವಸದ ಅವ ಕೊನೆಗೊಂಡಿತು. ಅಂದಿನ ರಾತ್ರಿಯೆ ಕೊನೆಯ ವೇಳೆ (ಮುಂಜಾವದಲ್ಲಿ) ಶೃಂಗ, ತಮಟೆ, ಶಂಖ, ಭೇರಿ, ಜಯಘಂಟೆ – ಎಂಬ ಐದು ಬಗೆಯ ವಾದ್ಯಗಳ ಬಾಜನೆಯ ಸಮಯದಲ್ಲಿ ಋಷಿಗಳು ಮೂರುಲೋಕಗಳ ಆಕಾರಾದಿಗಳನ್ನು ನಿರೂಪಿಸುವ ಶಾಸ್ತ್ರವನ್ನು ಮೆಲ್ಪು ಇಂಪು ಗುಣ್ಪುಳ್ಳ ಸ್ವರದಿಂದ ಅನುಕ್ರಮವಾಗಿ ಪಠನ ಮಾಡಿದರು. ಕೆಳಗಿನ ಲೋಕ, ಮೃಗಪಕ್ಷಿ(ತಿರ್ಯಕ್) ಲೋಕಗಳು ಇರುವ ಸ್ವರೂಪವನ್ನೂ ಅವುಗಳ ಪ್ರಮಾಣವನ್ನೂ ಪಠಸಿದರು. ಅನಂತರ ಮೇಲಿನ ಲೋಕದ ವರ್ಣನೆಯನ್ನು ಹೇಳಿ, ಮತ್ತೆ ಅಚ್ಯುತಕಲ್ಪದ ‘ಪದ್ಮ ಗುಲ್ಮ’ ಎಂಬ ಮಹಾಭವವನ್ನು ವರ್ಣನೆ ಮಾಡಿದರು. ಇದೆಲ್ಲವನ್ನೂ ಸುಕುಮಾರಸ್ವಾಮಿ ಕೇಳಿದನು. ಆಗ ಅವನಿಗೆ ಪೂರ್ವ ಜನ್ಮಸ್ಮರಣೆಯುಂಟಾಯಿತು. ತಾನೀಗ ಇಲ್ಲಿ ಹುಟ್ಟಿದ್ದೇನೆ – ಎಂಬುದನ್ನು ಅವನು ತಿಳಿದುಕೊಂಡನು. “ಆಹಾ, ನಾನು ದೇವಲೋಕವೆಂಬ ಸುಧಾಸಮುದ್ರದ ನೀರನ್ನೆಲ್ಲ ಕುಡಿದೂ ತೃಪ್ತಿಗೊಳ್ಳದೆ ಈ ಮನುಷ್ಯಜನ್ಮದ ಸುಖವೆಂಬ

ಪುಲ್ವನಿಯೊಳ್ ಸಿಲ್ಕಿ ಶಿವಸುಖಮನೆಯ್ದಿಸುವ ಸಚ್ಚಾರಿತ್ರದಿಂ ಬೞದೆನೆಂದು ತನ್ನಂ ತಾಂ ನಿಂದಿಸುತ್ತಂ ಮಂಚದಿಂದಿಳಿದು ಮಾಡದೊಳಗಿರ್ದ ವಸ್ತ್ರಂಗಳಂ ತೆಗೆದುಕೊಂಡು ಪ್ರಾಸಾದದ ಪೆಱಗಣ ಗವಾಕ್ಷಜಾಳದೊಳ್ ಕಟ್ಟಿಕೊಂಡೊಂದೊಂದಱ ತುದಿಯೊಳೊಂದೊಂದು ವಸ್ತ್ರಮಂ ತಗುೞ ಪಿಡಿದಿೞದು ಜಿನಾಲಯಮನೆಯ್ದಿ ದೇವರ್ಗೆ ನಮಸ್ಕಾರಂಗೆಯ್ದು ದಯಾಭದ್ರಭಟಾರರ್ಗೆಱಗಿ ಪೊಡೆವಟ್ಟು ದೀಕ್ಷೆಯಂ ಪ್ರಸಾದಂಗೆಯ್ದೆನ್ನಂ ಸಂಸಾರಾರ್ಣವದತ್ತಣಿಂದೆತ್ತಿಮೆಂದೊಂಗೆ ಭಟಾರರ್ ಮೂಱು ದಿವಸಂ ನಿನಗಾಯಷ್ಯಮೆಂದೊಡೀಗಳೀ ನಿಸ್ಸಾರಮಪ್ಪ ದೇಹದಿಂ ಸಾರಮಪ್ಪ ತಪಮಂ ಕೈಕೊಂಡು ಪಲಕಾಲಂ ನೆಗೞಲ್ ಪೆತ್ತೆನಿಲ್ಲ ನಿಸ್ಸಾರಮಪ್ಪ ಭೋಗದೊಳ್ ಸಿಲ್ಕಿ ಅಮೇಧ್ಯದೊಳ್ ಕ್ರೀಡಿಸುವ ಬಾಳಕಂಬೊಲ್ ಕಾಲಮಂ ಬಱದೆ ಕಳೆದೆನೆಂದು ತನ್ನನಾದಮಾನುಂ ನಿಂದಿಸಿ ತತ್ಪಾದಮೂಲದೊಳ್ ತಪ್ಪಂಬಟ್ಟು ಪಂಚಮಹಾಬ್ರತಂಗಳನೇಱೆಸಿಕೊಂಡು ಪಡಿದಮಣಂಗೇಳ್ದ ತದನಂತರಂ ನಿಶ್ಚಯ ಸಮ್ಯ್ವಕ್ರಮಂ ಕೈಕೊಂಡಿಂ ಬೞಕ್ಕೆ ಮಹಾಕಾಳಮೆಂಬ ಶ್ಮಶಾನಕ್ಕೆ ಪೋಗಿ ಯಾವಜ್ಜೀವಮಾಹಾರಕ್ಕೆ ನಿವೃತ್ತಿಗೆಯ್ದು ಪ್ರಾಯೋಪಗಮನ ವಿಧಾನದಿಂ ಪ್ರಚ್ಛನ್ನಮಪ್ಪೆಡೆಯೊಳ್ ಮೃತಕ ಸೆಜ್ಜೆಯೊಳಿರ್ದು ಸನ್ಯಸನಂಗೆಯ್ದು ಧರ್ಮಧ್ಯಾನ ಶುಕ್ಲಧ್ಯಾನಂಗಳಂ ಧ್ಯಾನಿಸುತ್ತಿರ್ಪನ್ನೆಗಂ ಇತ್ತ ವಾಯುಭೂತಿಯಪ್ಪ ಭವದಂದಿನತ್ತಿಗೆಯಪ್ಪ ಸೋಮದತ್ತೆಯೆಂಬೊಳ್ ನಿದಾನಂಗೆಯ್ದು ತನ್ನ ನಾಲ್ವರ್ ಮಕ್ಕಳುಂ ತಾನುಂ ಸಂಸಾರಸಮುದ್ರದೊಳ್

ಹುಲ್ಲಿನ ಹನಿಗೆ ಸಿಕ್ಕಿ ಮಂಗಳಕರಸುಖಗಳನ್ನು ಒದಗಿಸುವ ಒಳ್ನಡತೆಯಿಂದ ಕೆಳಕ್ಕೆ ಜಾರಿಹೋಗಿದ್ದೇನೆ* – ಎಂದು ತನ್ನನ್ನು ತಾನೇ ನಿಂದಿಸಿಕೊಂಡನು. ಮಂಚದಿಂದ ಇಳಿದು, ಮನೆಯಲ್ಲಿದ್ದ ಬಟ್ಟೆಗಳನ್ನೆಲ್ಲ ತೆಗೆದುಕೊಂಡು ಉಪ್ಪರಿಗೆ ಮನೆಯ ಹಿಂಗಡೆಯ ಕಿಟಕಿಗೆ ಕಟ್ಟಿಕೊಂಡು ಒಂದೊಂದರ ತುದಿಗೆ ಒಂದೊಂದು ಬಟ್ಟೆಯನ್ನು ಕಟ್ಟಿ, ಅದನ್ನು ಹಿಡಿದು ಕೆಳಗಿಳಿದು ಜಿನಾಲಯಕ್ಕೆ ಬಂದು ಜಿನೇಶನನ್ನು ವಂದಿಸಿದನು. ದಯಾಭದ್ರಮುನಿಗಳಿಗೆ ಸಾಷ್ಟಾಂಗ ವಂದಿಸಿ “ನನಗೆ ದೀಕ್ಷೆಯನ್ನು ಅನುಗ್ರಹಿಸಿ ನನ್ನನ್ನು ಸಂಸಾರಸಮುದ್ರದಿಂದ ಎತ್ತಿರಿ* ಎಂದು ಹೇಳಿದನು. ಆಗ ನಿನಗೆ ಮೂರು ದಿವಸದ ಆಯುಷ್ಯ ಮಾತ್ರವಿರುವುದು* ಎಂದರು. ಆಗ ಸುಕುಮಾರಸ್ವಾಮಿ – “ಈಗ ಈ ನಿಸ್ಸಾರವಾದ ಶರೀರದಿಂದ ಸಾರವತ್ತಾದ ತಪಸ್ಸನ್ನು ಕೈಕೊಂಡು ನಾನು ಬಹಳಕಾಲ ಆಚರಿಸಲಿಲ್ಲ. ನಿಸ್ಸಾರವಾದ ಸುಖಾನುಭವದಲ್ಲಿ ಸಿಕ್ಕಿಕೊಂಡು ಹೇಲಿನಲ್ಲಿ ಆಟವಾಡುವ ಬಾಲಕನ ಹಾಗೆ ವ್ಯರ್ಥವಾಗಿ ಕಾಲವನ್ನು ಕಳೆದೆನು* ಎಂದು ತನ್ನನ್ನು ಅತಿಶಯವಾಗಿ ಹಳಿದುಕೊಂಡನು. ಆ ಮುನಿಗಳ ಪಾದದ ಬುಡದಲ್ಲಿ ತಪಸ್ಸಿನ ಆಚರಣೆಯನ್ನು ಸ್ವೀಕರಿಸಿ, ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಎಂಬ ಐದು ಮಹಾವ್ರತಗಳನ್ನು ಕೈಕೊಂಡು ದೋಷಗಳಿಗೆ ಪ್ರಾಯಶ್ಚಿತ್ತಗಳನ್ನು (ಪಡಿಕಮಣ) ಕೇಳಿದ ನಂತರ ಜೈನತತ್ವವನ್ನು ಸ್ವೀಕರಿಸಿ ಮಹಾಕಾಳವೆಂಬ ಶ್ಮಶಾನಕ್ಕೆ ಹೋಗಿ ಜೀವವಿರುವವರೆಗೂ ಆಹಾರವನ್ನು ಸೇವಿಸದೆ, ಆಮರಣ ಉಪವಾಸ ವಿಧಾನದಿಂದ ಗುಪ್ತವಾದ ಸ್ಥಳದಲ್ಲಿ ಶವಾಸನದಲ್ಲಿದ್ದು, ಸಂನ್ಯಾಸವನ್ನು ಮಾಡುತ್ತ ಧರ್ಮಧ್ಯಾನ ಶುಕ್ಲಧ್ಯಾನ ಎಂಬ ಧ್ಯಾನಗಳಲ್ಲಿ ಮಗ್ನನಾಗಿದ್ದನು. ಆ ಕಡೆಯಲ್ಲಿ ವಾಯುಭೂತಿಯಾಗಿದ್ದ ಜನ್ಮದದಿಂನ ಅತ್ತಿಗೆಯಾಗಿದ್ದ ಸೋಮದತ್ತೆ ಎಂಬುವಳು (ಜನ್ಮಾಂತರದಲ್ಲಿ ನರಿಯಾಗಿ ಮಕ್ಕಳೊಂದಿಗೆ ನಿನ್ನ ಕಾಲುಗಳನ್ನು ತಿನ್ನುವವಳಾಗುವೆನೆಂದು) ಪ್ರತಿಜ್ಞೆಮಾಡಿ ತನ್ನ ನಾಲ್ಕು ಮಂದಿ ಮಕ್ಕಳೂ ತಾನೂ

ನೀಡುಂ ತಿಱ್ರನೆ ತಿರಿದು ಬಂದು ಪೆಣ್ಣರಿಯಾಗಿ ಪುಟ್ಟಿ ತನ್ನ ನಾಲ್ಕು ಮಱಗಳ್ವೆರಸಾಹಾರಮನಱಸಿ ತೊೞಲುತ್ತಂ ಬರ್ಪುದನ್ನೆಗಂ ಸುಕುಮಾರಸ್ವಾಮಿಯುಂ ಮಹಾಕಾಳಕ್ಕೆ ಪೋಪನೆಲ್ಲಾ ಕಾಲಮುಂ ಮಣಿಕುಟ್ಟಿಮಭೂಮಿಯೊಳ್ ಪಾಸಿದ ನೇತ್ರಪೞಯ ಮೇಗೆ ನಡೆದ ಮೃದು ಲಲಿತಮಪ್ಪ ಚರಣದ್ವಯದೊಳ್ ಮುನ್ನೆಂದಂ ನೆಲನಂ ಕಿಟ್ಟಿಯಱಯದೊಂ ಕಠಿನಭೂಮಿಯೊಳ್ ನಡೆದೊಡೆ ಕಿಱುಗಲ್ಗಳುಂ ಪೆಟ್ಟಿಗಳುಮಗುೞ್ದು ಪುಗೊಳೊಡೆದು ಪೊಱಮಟ್ಟು ಕರಗದ ದಾರೆವೊಲೆಡೆವಱಯದೆ ಮಹಾಕಾಳಶ್ಮಶಾನಂಬರಗಮೊಕ್ಕ ನೆತ್ತರ ದಾರೆಯ ಗಂದದಿಂದಂ ನರಿಗಳ್ ಬಂದು ಕಂಡು ರಾಗಿಸಿ ಮಱಗಳ್ವೆರಸಡಿಯಿಂದಂ ತೊಟ್ಟೆರಡುಂ ಕಾಲ್ಗಳಂ ಮೊೞಕಾಲ್ವರೆಗಮೊಂದುದಿವಸಂ ತಿಂದತ್ತೆರಡನೆಯ ದಿವಸಂ ಮೊೞಕಾಲಿಂ ತೊಟ್ಟು ಕಟಿವರೆಗಂ ತಿಂದತ್ತು ಮೂರನೆಯ ದಿವಸಂ ಬಸಿಱಂ ಪೋೞ್ದು ಕರುಳಂ ತೋಡಿ ತಿನೆ ಪೃಥಕ್ರ್ವವಿತರ್ಕವೀಚಾರಮೆಂಬ ಪ್ರಥಮ ಶುಕ್ಲಧ್ಯಾನದೊಳ್ ಕೂಡಿಯುಪಶಾಂತ ಗುಣಸ್ಥಾನದೊಳಿರ್ದು ರತ್ನತ್ರಯಮಂ ಸಾದಿಸಿ ಸಯಸತ್ತಮ ದೇವನಾಗಿ ಪುಟ್ಟಿದೊಂ ಮತ್ತಿತ್ತ ತಾಯುಂ ಪೆಂಡಿರುಂ ಪರಿವಾರಮುಮೆಲ್ಲಾ ದೆಸೆಗಳೊಳಂ ಪರಿವರಿದು ಪೋಗಿ ಸುಕುಮಾರಸ್ವಾಮಿಯನಹೊ ಸೂರಾ ಆಹೋ ಮಹಾಪುರುಷ ಅಹೊ ಧೈರ್ಯವಂತ ಅಹೊ

ಸಂಸಾರವೆಂಬ ಸಮುದ್ರದಲ್ಲಿ ವಿಶೇಷವಾಗಿ ತಿರ್ರನೆ ಸುತ್ತುತ್ತ ಬಂದು, ಹೆನ್ಣು ನರಿಯಾಗಿ ಹುಟ್ಟಿ ತನ್ನ ನಾಲ್ಕು ಮರಿಗಳೊಂದಿಗೆ ಅದು ಆಹಾರವನ್ನು ಹುಡುಕುತ್ತ ಸುತ್ತಾಡುತ್ತಾ ಬರುತ್ತಿತ್ತು. ಸುಕುಮಾರಸ್ವಾಮಿ ಮಹಾಕಾಳವೆಂಬ ಶ್ಮಶಾನದ ಕಡೆಗೆ ಹೋಗುತ್ತಿದ್ದವನು. ಅವನು ಯಾವ ಕಾಲದಲ್ಲಿ ನೋಡಿದರೂ ರತ್ನಮಯವಾದ ಜಗಲಿಯ ಮೇಲೆ ಹಾಸಿದ ರೇಷ್ಮೆ ವಸ್ತ್ರದ ಮೇಲೆ ನಡೆದ ತನ್ನ ಮೆತ್ತಗಾದ ಮತ್ತು ಚೆಲುವಾದ ಎರಡು ಪಾದಗಳಲ್ಲಿ ಹಿಂದೆ ಎಂದೂ ನೆಲವನ್ನು ಮುಟ್ಟಿಯೂ ಅರಿಯದವನು, ಅವನು ಈಗ ಕಠಿನವಾದ ನೆಲದಲ್ಲಿ ನಡೆಯಲು, ಹರಳುಕಲ್ಲುಗಳೂ ಹೆಂಟೆ (ಗಟ್ಟಿ)ಗಳೂ ನಾಟಿಕೊಂಡು ಗುಳ್ಳೆಯೆದ್ದು ಒಡೆದು ಅದರಿಂದ ಹೊರಟ ರಕ್ತವು ಕರಗದಿಂದ ಇಳಿಯುವ ನೀರಿನ ಧಾರೆಯಂತೆ ನಿರಂತರವಾಗಿ ಸುರಿದಿತ್ತು. ಮಹಾಕಾಳ ಶ್ಮಶಾನದವರೆಗೂ ಸುರಿದ ರಕ್ರದ ಧಾರೆಯ ವಾಸನೆಯಿಂದ ನರಿಗಳು ಬಂದು ನೋಡಿದವು. ಆ ಹೆಣ್ಣುನರಿ ಸಂತೊಷಗೊಂಡು ತನ್ನ ಮರಿಗಳ ಸಮೇತವಾಗಿ ಮೊದಲನೆಯ ದಿನ ಸುಕುಮಾರ ಸ್ವಾಮಿಯ ಎರಡು ಕಾಲುಗಳನ್ನು ಪಾದದಿಂದ ಪ್ರಾರಂಭಿಸಿ ಮೊಣಕಾಲುಗಳವರೆಗೆ ತಿಂದಿತು. ಎರಡನೆಯ ದಿವಸ ಮೊಣಕಾಲುಗಳಿಂದ ಪ್ರಾರಂಭಿಸಿ ಸೊಂಟದವರೆಗೆ ತಿಂದಿತು. . ಮೂರನೆಯ ದಿವಸ ಹೊಟ್ಟೆಯನ್ನು ಸೀಳಿ ಕರುಳನ್ನು ತೋಡಿ ತಿನ್ನುತ್ತಿತ್ತು. ಆಗ ಸುಕುಮಾಸ್ವಾಮಿಯು ಪೃಥಕ್ತ್ವ, ವಿತರ್ಕ, ವೀಚಾರ – ಎಂಬ ಮೊದಲನೆಯ ಶ್ಲೋಕಧ್ಯಾನದಲ್ಲಿ ಸೇರಿಕೊಂಡು ಉಪಶಾಂತಿ ಎಂಬ ಗುಣಸ್ಥಾನದಲ್ಲಿದ್ದು ಸಮ್ಯಗ್ದರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ಚಾರಿತ್ರ – ಎಂಬ ರತ್ನತ್ರಯವನ್ನು ಸಾಧನೆ ಮಾಡಿ ಅತ್ಯಂತ ಶ್ರೇಷ್ಠ ದೇವತೆಯಾಗಿ ಜನಿಸಿದನು. ಆ ಮೇಲೆ ಇತ್ತಲಾಗಿ ಸುಕುಮಾರಸ್ವಾಮಿಯ ತಾಯಿಯೂ ಹೆಂಡಿರೂ ಪರಿವಾರವೂ ಎಲ್ಲಾ ದಿಕ್ಕುಗಳಲ್ಲಿಯೂ ಸಂಚರಿಸಿಕೊಂಡು ಹೋಗಿ ಸುಕುಮಾರಸ್ವಾಮಿಯನ್ನು ಎರಡು ದಿವಸ ಇರುಳು ಹಗಲೂ ಹುಡುಕಿದರು. ಆದರೆ ಕಾಣಲಿಲ್ಲ ಮೂರನೆಯ ದಿವಸದಂದು ಸಂಜೆ ಹೊತ್ತಿನಲ್ಲಿ ದೇವತೆಗಳು ಬಂದು ಸುಕುಮಾರಸ್ವಾಮಿಯನ್ನು “ಆಹಾ ಶೂರನೇ, ಆಹಾ

ಸಂಸಾರಭೀರು ನಿನ್ನಂತುಪಸರ್ಗಮನಾರಪ್ಪೊಡು ಸೈರಿಸಿ ರತ್ನತ್ರಯಮಂ ಸಾಸಿದೊರಿಲ್ಲೆಂದು ದೇವತೆಗಳ್ ಪೊಗಳ್ವ ಕಳಕಳಧ್ವನಿಯುಮಂ ದೇವದುಂದುಭಿಯ ರವಮುಮಂ ಯಶೋಭದ್ರೆ ನೋಡಿ ದೆವಸಂಘಾತಮಂ ಕಂಡು ಮಗನ ಸಾವನಱದು ಬಯ್ಗಿರುಳಾದಾಗಳ್ ಮೂವತ್ತಿರ್ವರ್ ಸೊಸೆವಿರ್ಕಳ್ಗಂ ಪೇೞ್ದಟ್ಟಿ ಸುಕುಮಾರಸ್ವಾಮಿ ನಿಮಗೆಲ್ಲರ್ಗೆ ಮುಳಿದು ಪೋಗಿಯಡಂಗಿರ್ದೊನನಾನಱವೆಂ ನೀವೆಲ್ಲಂ ನೆಱೆಯೆ ತೊಟ್ಟುಟ್ಟು ಪಸದನಂಗೊಂಡು ಚೆಲ್ವೆಯರಾಗಿ ಬನ್ನಿಂ ಪೋಪಂ ತಿಳಿಪಿಕೊಂಡು ಬರ್ಪಂ ನಿಮ್ಮ ಸ್ವಾಮಿಯನೆಂದೊಡವರ್ಗಳನಿಬರುಂ ರಾಗಿಸಿ ಕೈಗೆಯ್ದತ್ತೆಯೊಡನೆ ಪರಿವಾರಸಹಿತಂ ಮಹಾಕಾಳಕ್ಕೆ ಪೋಗಿ ನೋೞ್ಪರನ್ನೆಗಂ ನಮೇರು ಮಂದಾರ ಸಂತಾನಕ ಪಾರಿಯಾತ್ರಮೆಂಬ ದೇವರ್ಕಳ್ ಸುರಿದ ಪುಷ್ಪವೃಷ್ಟಿಯಿಂದಂ ಮುಚ್ಚೆಪಟ್ಟನಾಗಿ ಕಂಪಿಮಗೆಱಗಿದ ತುಂಬಿಯ ಸಮೂಹಮಂ ಮೇಗೆ ಸುೞವುದಂ ಕಂಡಿಲ್ಲಿರ್ದ್ದನೆಂದು ಯಶೋಭದ್ರೆ ತೋಱದೊಡೆ ಪೋಗಿ ತೆಱೆದು ನೋೞ್ಪರನ್ನೆಗಂ ಮೃತಕಮಂ ಕಂಡನಿಬರುಂ ಮೂರ್ಛೆವೋಗಿ ನೀಡಱಂದೆೞ್ಚರ್ತು ತಮ್ಮ ಬಸಿಱುಮಂ ತಲೆಯುಮಂಬಡಿದುಕೊಂಡು ಸುಕುಮಾರಸ್ವಾಮಿಯ ರೂಪಮಂ ತೇಜಮುಮಂ ಯೌವನಮಂ ಲಾವಣ್ಯಮಂ ಸೌಭಾಗ್ಯಮಂ ಯಶಮಂ ಮೆಲ್ಪಂ ನುಡಿಯ ಬಲ್ಮೆಯಂ ಶುಚಿತ್ವಮಂ ಶೌಚಮಂ ಶ್ರೀಯಂ ಸಂಪತ್ತಂ ಸೊಬಗಂ ಒಲ್ಮೆಯಂ ಧೈರ್ಯಮಂ ಎಂದಿವು ಮೊದಲಾಗೊಡೆಯವಾತನೊಳ್ ನೆಲಸಿರ್ದ ಗುಣಂಗಳಂ

ಧೈರ್ಯಶಾಲಿಯೇ, ಆಹಾ ಸಂಸಾರಕ್ಕೆ ಹೆದರಿದವನೇ, ನಿನ್ನ ಹಾಗೆ ಉಪಸರ್ಗಗಳನ್ನು ಸಹಿಸಿಕೊಂಡು ರತ್ನತ್ರಯವನ್ನು ಸಾಸಿದವರು ಯಾರೂ ಇಲ್ಲ* ಎಂದು ಹೊಗಳುತ್ತಿದ್ದರು. ಹಾಗೆ ಹೊಗಳುವ ಗದ್ದಲದ ಧ್ವನಿಯನ್ನೂ ದೇವಲೋಕದ ದುಂದುಭಿವಾದ್ಯದ ಶಬ್ದವನ್ನೂ ಯಶೋಭದ್ರೆ ಕೇಳಿ, ದೇವತಾಸಮೂಹವನ್ನು ಕಂಡು ತನ್ನ ಮಗನು ಸತ್ತುದು ನಿಜವೆಂದು ತಿಳಿದುಕೊಂಡಳು. ಅಂದು ರಾತ್ರಿ ಮೂವತ್ತೆರಡು ಮಂದಿ ಸೊಸೆಯಂದಿರಿಗೂ ಅವಳು ಹೇಳಿಕಳುಹಿಸಿದಳು. ಅವರೊಡನೆ ಹೀಗೆಂದಳು – “ಸುಕುಮಾರಸ್ವಾಮಿ ನಿಮ್ಮೆಲ್ಲರ ಮೇಲೆಯೂ ಕೋಪಿಸಿಕೊಂಡು ಹೋಗಿ ಅಡಗಿರುತ್ತಾನೆ. ಅವನು ಎಲ್ಲಿರುವನೆಂದು ನಾನು ಬಲ್ಲೆ. ನೀವೆಲ್ಲರೂ ವಿಶೇಷವಾಗಿ ಉಡಿಗೆತೊಡಿಗೆಗಳನ್ನು ಧರಿಸಿ ಶೃಂಗಾರಮಾಡಿಕೊಂಡು ಚೆಲುವೆಯರಾಗಿ ಬನ್ನಿ, ಹೋಗೋಣ. ನಿಮ್ಮ ಒಡೆಯನಾದ ಸುಕುಮಾರನನ್ನು ಸಂತಯಿಸಿಕೊಂಡು ಬರೋಣ* ಹೀಗೆನ್ನಲು ಅವರೆಲ್ಲರೂ ಸಂತೋಷಗೊಂಡು ಸಿಂಗರಿಸಿಕೊಂಡು ಅತ್ತೆ (ಯಶೋಭದ್ರೆ)ಯೊಂದಿಗೆ ಮಹಾಕಾಳ ಶ್ಮಶಾನಕ್ಕೆ ಹೋಗಿ ನೋಡಿದರು. ಆಗ ಸುರಪುನ್ನಾಗ, ಮಂದಾರ, ಕಲ್ಪವೃಕ್ಷ, ಪಾರಿಯಾತ್ರಗಳ ಹೂಮಳೆಯನ್ನು ದೇವತೆಗಳು ಸುರಿಸಲು ಅದರಿಂದ ಮುಚ್ಚಲ್ಪಟ್ಟವನಾಗಿ, ಹೂಗಂಪಿಗೆ ಬಂದೆರಗಿದ ತುಂಬಿಗಳ ಹಿಂಡು ಮೇಲುಗಡೆ ಸುಳಿಯುವುದನ್ನು ಕಂಡು ಸುಕುಮಾರನು ಇಲ್ಲಿದ್ದಾನೆ ಎಂದು ಯಶೋಭದ್ರೆ ತೋರಿಸಿದಳು. ಆಗ ಇವರು ಹೋಗಿ, ಮುಚ್ಚಿದ್ದನ್ನು ತೆರೆದು ನೋಡಿದರು. ಹೆಣವನ್ನು ಕಂಡು ಅವರೆಲ್ಲರೂ ಮೂರ್ಛೆ ಹೋದರು. ಬಹಳ ಹೊತ್ತಾದನಂತರ ಎಚ್ಚರಗೊಂಡು ತಮ್ಮ ಹೊಟ್ಟೆಯನ್ನೂ ತಲೆಯನ್ನೂ ಬಡಿದುಕೊಂಡು ಸುಕುಮಾರಸ್ವಾಮಿಯ ರೂಪ, ಕಾಂತಿ, ಯಾವನ, ಲಾವಣ್ಯ, ಸೌಭಾಗ್ಯ, ಕೀರ್ತಿಗಳನ್ನೂ ಮೃದುಸ್ವಭಾವವನ್ನೂ ಮಾತಿನ ಪ್ರೌಢಿಮೆಯನ್ನೂ ಶುಚಿತ್ವವನ್ನೂ ಶುದ್ಧಗುಣವನ್ನೂ, ಶೋಭೆಯನ್ನೂ, ಸಂಪತ್ತನ್ನೂ, ಸೊಬಗನ್ನೂ, ಪ್ರೀತಿಯನ್ನೂ ಧೈರ್ಯ ಮುಂತಾಗಿರುವ

ನೆನೆನೆನೆದನಿಬರುಂ ಪ್ರಲಾಪಂಗೆಯ್ಯುತ್ತಂ ಸೈರಿಸಲಾಱದೆ ನಿರಂತರಂ ಮೂರ್ಛೆವೋಗುತ್ತಂ ನೀಡುಂ ಬೇಗಂ ದುಃಖಂಗೆಯ್ದಳ್ತು ನೀರಿೞದೆಣ್ಬರ್ ಬಸಿಱ ಪೆಂಡಿರುೞಯೆ ಇರ್ಪತ್ತು ನಾಲ್ವರ್ ಪೆಂಡಿರುಂ ಮತ್ತಂ ಪೆಱರ್ ನಂಟರ್ಕಳುಂ ಪರಿವಾರಮುಂ ಯಶೊಭದ್ರೆಯೊಡನೆ ದಯಾಭದ್ರರ್ ಗುರುಗಳಾಗೆ ಕಮಳಶ್ರೀ ಕಂತಿಯರ್ ಕಂತಿಯರಾಗೆ ತಪಂಬಟ್ಟುಗ್ರೋಗ್ರತಪಂಗೆಯ್ದನಿಬರುಂ ಸೌಧರ್ಮಕಲ್ಪಂ ಮೊದಲಾಗೊಡೆಯ ಕಲ್ಪಂಗಳೊಳ್ ಪುಟ್ಟಿದರ್ ಮುತ್ತಿಂತಪ್ಪುದಂ ಚಿಂತಿಸಲುಂ ಸೈರಿಸಲುಮಾಗದ ತಿರಿಕೋಪಸರ್ಗಮನವಂತಿ ಸುಕುಮಾರಸ್ವಾಮಿ ಮೂಱು ದಿವಸಮಿರುಳುಂ ಪಗಲುಂ ಸೈರಿಸಿ ರತ್ನತ್ರಯಮನೆಂತು ಸಾದಿಸಿದನಂತೆ ಸನ್ಯಸನಂಗೆಯ್ದಿರ್ದಾರಾಧಕರಪ್ಪ ಮಹಾಪುರುಷರುಮವಂತಿ ಸುಕುಮಾರಸ್ವಾಮಿಯ ಪರಮಸುಖಿಯಪ್ಪುಪಸರ್ಗಮಂ ವಿಜಯವಿಧಾನಮಂ ಮನದೊಳನವರತಂ ಚಿಂತಿಸುತ್ತಾಪ್ತಾಗಮ ಪದಾರ್ಥರ್ದಿಗಳೊಳತೀವಸ್ಥಿರರಾಗಿ ಪರಮ ಸಹಜ ನಿಜ ರತ್ನತ್ರಯದೊಳ್ ಕೂಡಿ ಆಭೇದವಾಗೆಯ್ದೆ ಕೂಡಿ ಶರೀರಂ ಮೊದಲಾಗೊಡೆಯ ಸಮಸ್ತ ಬಾಹ್ಯಾಭ್ಯಂತರ ಪರಿಗ್ರಹಂಗಳಂ ನೆಱೆ ತೊಱೆದು ಅಪೂರ್ವಪವರ್ಗಸುಖಂಗಳನೆಯ್ದುಗೆ ಮತ್ತುಜ್ಜೇನಿಯ ತೆಂಕಣ ದೆಸೆಯೊಳವಂತಿ ಸುಕುಮಾರಸ್ವಾಮಿಯ ಕಾಲಂಗೆಯ್ದೆಡೆ ಈಗಳುಂ ಪುಣ್ಯಮುಂ ಪವಿತ್ರಮುಮಾದುದು ಮತ್ತಂ

ಆತನಲ್ಲಿ ನೆಲಸಿಕೊಂಡಿದ್ದ ಗುಣಗಳನ್ನೂ ಮತ್ತು ಮತ್ತೂ ನೆನಸಿಕೊಳ್ಳುತ್ತ, ಅವರೆಲ್ಲರೂ ಗೋಳಾಡುತ್ತ ಸಹಿಸಲಾರದೆ ಎಡೆಬಿಡದೆ ಆಗಾಗ ಮೂರ್ಛೆಗೊಳ್ಳುತ್ತ, ಬಹಳ ಹೊತ್ತಿನ ತನಕ ದುಃಖಪಡುತ್ತ ಅತ್ತು, ಸ್ನಾನ ಮಾಡಿದರು. ಅವರಲ್ಲಿ ಎಂಟು ಮಂದಿ ಗರ್ಭಿಣಿ ಸ್ತ್ರೀಯರನ್ನು ಬಿಟ್ಟು ಉಳಿದ ಇಪ್ಪತ್ತನಾಲ್ಕು ಮಂದಿ ಹೆಂಡಿರೂ ಮತ್ತಿತರ ನೆಂಟರೂ ಪರಿವಾರದವರೂ ಯಶೋಭದ್ರೆಯೊಂದಿಗೆ ತಪಸ್ಸನ್ನು ಕೈಗೊಂಡರು. ಅವರಿಗೆ ದಯಾಭದ್ರರು ಗುರುಗಳಾದರು. ಕಮಲಶ್ರೀ ಕಂತಿಯರು ಮಾರ್ಗದರ್ಶಿಗಳಾದ ಸನ್ಯಾಸಿನಿಯರಾದರು, ಹೀಗೆ ಯಶೋಭದ್ರೆಯೊಂದಿಗೆ ಅತ್ತಂತ ಘೋರವಾದ ತಪಸ್ಸನ್ನು ಮಾಡಿ ಅವರೆಲ್ಲರೂ ಸೌಧರ್ಮಕಲ್ಪವೇ ಮೊದಲಾಗಿರುವ ಸ್ವರ್ಗಗಳಲ್ಲಿ ಹುಟ್ಟಿದರು. ಆಮೇಲೆ ಈರೀತಿಯಾಗಿರುವುದನ್ನು ಯೋಚಿಸಲೂ ಸಹಿಸಲೂ ಸಾಧ್ಯವಾಗದಂತಹ ಪ್ರಾಣ್ಯುಪದ್ರವ (ತಿರಿಕೋಪಸರ್ಗ)ವನ್ನು ಅವಂತಿ ಸುಕುಮಾರನು ಮೂರುದಿವಸ ಇರುಳೂ ಹಗಲೂ ಸಹಿಸಿಕೊಂಡು ರತ್ನತ್ರಯ (ಸಮ್ಯಗ್ದರ್ಶನ – ಜ್ಞಾನ – ಚಾರಿತ್ರ)ವನ್ನು ಹೇಗೆ ಸಾಸಿದನೋ ಹಾಗೆಯೇ ಸಂನ್ಯಾಸನ ಕೈಗೊಂಡು ಆರಾಧನೆ ಮಾಡತಕ್ಕ ಇದರ ಮಹಾಪುರುಷರೂ ಸುಕುಮಾರಸ್ವಾಮಿಗೆ ಪರಮ ಸುಖವನ್ನೊದಗಿಸಿದ ಉಪಸರ್ಗವನ್ನೂ ಅದನ್ನು ಗೆಲ್ಲುವ ಕ್ರಮವನ್ನೂ ಮನಸ್ಸಿನಲ್ಲಿ ಯಾವಾಗಲೂ ಯೋಚಿಸುತ್ತ ಆತ್ಮೀಯವಾದ ಆಗಮ (ಶಾಸ್ತ್ರ)ಗಳಲ್ಲಿಯೂ ನವಪದಾರ್ಥಗಳಲ್ಲಿಯೂ ಋದ್ಧಿ (ಸಿದ್ಧಿ)ಗಳಲ್ಲಿಯೂ ಅತ್ಯಂತ ಸ್ಥಿರರಾಗಿದ್ದುಕೊಂಡು ಸಹಜವಾದ ಮತ್ತು ನಿಜವಾದ ರತ್ನತ್ರಯದಲ್ಲಿ ಒಂದಾಗಿ, ಭೇದವಿಲ್ಲದಂತೆ ಕೂಡಿ ದೇಹವೇ ಮೊದಲಾದ ಎಲ್ಲಾ ಹೊರಗಿನ ಮತ್ತು ಒಳಗಿನ ಪರಿಗ್ರಹಗಳನ್ನು ವಿಶೇಷವಾಗಿ ಬಿಟ್ಟು ಅಪೂರ್ವವೆನಿಸುವ ಮುಕ್ತಿ ಸುಖಗಳನ್ನು ಪಡೆಯಲಿ! ಆಮೇಲೆ, ಉಜ್ಜಯಿನಿಯ ದಕ್ಷಿಣ ದಿಶಾಭಾಗದಲ್ಲಿ ಅವಂತಿ ಸುಕುಮಾರಸ್ವಾಮಿ ದೇಹತ್ಯಾಗ ಮಾಡಿದ ಸ್ಥಳ ಇಂದಿಗೂ ಪುಣ್ಯಕರವೂ ಪವಿತ್ರವೂ ಆಯಿತು. ಅದಲ್ಲದೆ, ಆ

ಮಹಾಪುರುಷನ ಶರೀರಮಂ ಚತುರ್ನಿಕಾಯಾಮರತತಿಗಳ್ ಭಕ್ತಿಯಿಂದಗರು ಕಾಲಾಗರು ಗೋಶೀರ್ಷ ಚಂದನಂ ಮೊದಲಗೊಡೆಯ ಅನೇಕ ಸುಗಂಧ ದ್ರವ್ಯಂಗಳಿಂದಂ ಪೂಜಿಸಿದ ವಸ್ತುಗಳ್ ಕಾಲಾಂತರದಿಂ ಕರಗಿ ಬಿೞ್ದುದಾ ಸ್ಥಾನಮೆಂಬುದು ಗಂಧವತಿಯೆಂಬ ತೊಱೆಯಾದುದು ದೇವರ್ಕಳ್ ಪೊಗೞ್ದ ಕಳಕಳಧ್ವನಿಯಿಂ ಪೆಂಡಿರ್ಕಳ ಪ್ರಳಾಪಂಗೆಯ್ದೞ್ತ ಕಳಕಳಧ್ವನಿಯಿಂದಂ ಕಳಕಳಾಯತಮೆಂದು ಸಿದ್ಧಾಯತಮಾದುದು.

ಮಹಾಪುರುಷನ ದೇಹವನ್ನು ಭವನಪತಿ, ವ್ಯಂತರಿಕ, ಜ್ಯೋತಿಷ್ಕ ಮತ್ತು ವಿಮಾನವಾಸಿಗಳೆಂಬ ನಾಲ್ಕು ಬಗೆಯ ದೇವತೆಗಳು ಭಕ್ತಿಯಿಂದ ಅಗರು, ಕಾಳಾಗರು, ಗೋರೋಚನ, ಗಂಧ, ಶ್ರೀಗಂಧ – ಮುಂತಾಗಿರುವ ಹಲವಾರು ಸುವಾಸನೆಯ ದ್ರವ್ಯಗಳಿಂದ ಪೂಜಿಸಿದ ವಸ್ತುಗಳು ಕೆಲವು ಕಾಲಾನಂತರ ಕರಗಿ ಬಿದ್ದುವು. ಹಾಗೆ ಬಿದ್ದ ಸ್ಥಳವು ‘ಗಂಧವತಿ’ ಎಂಬ ಹೆಸರಿನ ಹೊಳೆಯಾಗಿ ಪರಿಣಮಿಸಿತು. ದೇವತೆಗಳು ಕೊಂಡಾಡಿದ ಕಳಕಳ ಧ್ವನಿಯಿಂದಲೂ ಸುಕುಮಾರಸ್ವಾಮಿಯ ಹೆಂಡಿರು ದುಃಖಿಸಿ ಅತ್ತ ಕಳಕಳ ಶಬ್ದದಿಂದಲೂ ‘ಕಳಕಳಾಯತ’ ಎಂಬ ಹೆಸರುಳ್ಳ ಸಿದ್ಧಕ್ಷೇತ್ರವೂ ಆಯಿತು.