ಎಂದು ಭಾವಿಸಿಕೊಂಡನು. ಅನಂತರ ಒಳ್ಳೆಯ ದಿವಸ ವಾರ ನಕ್ಷತ್ರ ಮುಹೂರ್ತದಲ್ಲಿ ಭಟ್ಟಾರರು ಸಿದ್ದಾಂತವನ್ನು ಉಪದೇಶಿಸಲು ಪ್ರಾರಂಭ ಮಾಡಿದರು. ಸೂರ್ಯಮಿತ್ರನು ಸಿದ್ದಾಂತವನ್ನು ಕೇಳಿದಂತೆಲ್ಲ ಅಜ್ಞಾನವು (ಅಪನಂಬಿಕೆ) ಸ್ವಲ್ಪ ಸ್ವಲ್ಪವಾಗಿ ಹಿಂಗತೊಡಗಿತು. ಬಂಧವು ಬಂಧನಕ್ಕೆ ಕಾರಣವೆಂದೂ ಮೋಕ್ಷವು ಮೋಕ್ಷಕ್ಕೆ ಕಾರಣವೆಂತಲೂ ಆ ಎರಡರ ಪರಿಣಾಮವನ್ನೂ ಸಿದ್ಧಾಂತದಲ್ಲಿ ಹೇಳಿದ ವಿಚಾರವೆಲ್ಲವನ್ನೂ ಕೇಳಿಕೊಂಡನು. ಜೀವ, ಅಜೀವ, ಪುಣ್ಯ, ಪಾಪ, ಆಸ್ರವ, ಸುಂದರ, ನಿರ್ಜರ, ಬಂಧ, ಮೋಕ್ಷ ಎಂದು ಈ ರೀತಿಯಾದ ನವಪದಾರ್ಥಗಳು, ಪಂಚಾಸ್ತಿಕಾಯ ಷಡ್ದ್ರವ್ಯಗಳು – ಎಂಬವುಗಳಲ್ಲಿ ಹೆಚ್ಚಿನ ತಿಳುವಳಿಕೆಯೂ ಪ್ರಾವೀಣ್ಯವೂ ವಿಶ್ವಾಸವೂ ಅವನಲ್ಲಿ ಉಂಟಾದವು. ಜೈನ ತೀರ್ಥಂಕರರ ಸಿದ್ಧಸ್ವರೂಪವನ್ನೂ ಗುಣಗಳನ್ನೂ ತಿಳಿದುಕೊಂಡನು, ಸಂಶಯವೇ ತೀರ್ಥಂಕರರ ಸಿದ್ಧಸ್ವರೂಪವನ್ನೂ ಗುಣಗಳನ್ನೂ ತಿಳಿದುಕೊಂಡನು. ಸಂಶಯವೇ ಮೊದಲಾದ ಎಂಟು ಬಗೆಯ ಆನಾಯತನ ಸೇವೆಗಳು – ಎಂಬೀ ರೀತಿಯ ಇಪ್ಪತ್ತೈದು – ದೋಷಗಳಿಂದ ದೂರವಾದ ತತ್ತ್ವಜ್ಞಾನವುಳ್ಳವನಾದನು. ಸಂಸಾರಿಕ ಸುಖದಲ್ಲಿ ವೈರಾಗ್ಯವನ್ನು ತಾಳಿದನು, ‘ನನ್ನ ಕಪಟದ ತಪಸ್ಸಿನಿಂದ ಅಂತ್ಯವಿಲ್ಲದ ಸುಖಕ್ಕೆ ಕಾರಣವಾಗಿರುವ ಒಳ್ಳೆಯ ದಾರಿಯನ್ನು ಪಡೆದುಕೊಂಡೆನು’ – ಎಂದು ಅತ್ಯಂತ ಸಂತೋಷಮನಸ್ಕನಾದನು. ತಾನು ಕಪಟದಿಂದ ತಪಸ್ಸನ್ನು ಆಚರಿಸಿದ ಸಂಗತಿಯನ್ನು ಗುರುಗಳ ವಿಚಾರಕ್ಕೆ ತಂದು ಪ್ರಾಯಶ್ಚಿತ್ತ ಮಾಡಿಕೊಂಡು ಪಡಿಕಮಣ (ಪ್ರಾಯಶ್ಚಿತ್ತ) ವಿಯನ್ನು ನೆರವೇರಿಸಿ, ನಿಜವಾದ ಯತಿಗಾಗಿ ಹನ್ನೆರಡು ವರ್ಷಗಳವರೆಗೆ ಗುರುಗಳ ಒಟ್ಟಿಗಿದ್ದು ತಪ್ಪಸ್ಸನ್ನು ಮಾಡಿ ‘ಆಚಾರ್ಯರು’ ಎನಿಸಿದನು. ಅನಂತರ ಸೂರ್ಯಮಿತ್ರಾಚಾರ್ಯರು ಗುರುಗಳಿಂದ ಒಪ್ಪಿಗೆ ಪಡೆದು, ಏಕವಿಹಾರಿ (ಪರಿವ್ರಾಜಕ ಒಬ್ಬನೇ ಸಂಚರಿಸುವವ) ಆಗಿ, ಹಳ್ಳಿಯಲ್ಲಿ ಒಂದು ರಾತ್ರಿಯಿದ್ದರೆ, ನಗರದಲ್ಲಿ ಐದು

ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತುಂ ಕೌಶಂಬಿಗೆ ವಂದುದಯಾವತ ಪರ್ವತದೊಳ್ಸಿದ್ದಕ್ಷೇತ್ರಗಳೆಲ್ಲಮಂ ಬಂದಿಸಿ ತೀಥೋಪವಾಸಂಗೆಯ್ದು ಭೈಕ್ಷಕ್ಕೆಂದು ಕೌಶಂಬಿನಗರಮಂ ಪೊಕ್ಕು ಕಿಱುಮನೆ ಪೆರ್ಮನೆಯೆನ್ನದುಣಲ್ತಕ್ಕ ಮನೆಗಳಂ ಚರಿಗೆದೊೞಲುತ್ತಮಗ್ನಿಭೂತಿ ಬ್ರಾಹ್ಮಣನ ಮನೆಯಂ ಪೊಕ್ಕೊಡಾತನುಂ ಕಂಡಿದಿರಂ ಪರಿತಂದಾದಮಾನಂ ಭಕ್ತಿಯಿಂದಂ ನಿಱೆಸಿ ಕಾಲಂ ಕರ್ಚಿ ಪಡಿಹಹಮುಚ್ಚಂ ಠಾಣಮೆಂದೀಮೊಂಬತ್ತು ತೆಱದಿಂದಂ ಪುಣ್ಯಮಂ ಕೈಕೊಂಡು ಶ್ರದ್ಧೆ ಮೊದಲಾಗೊಡೆಯ ಏೞುಂ ಗುಣಂಗಳಿಂ ಕೂಡಿ ಪ್ರಾಸುಕಮಪ್ಪಾಹಾರಮನಾದಮಾನುಂ ಭಕ್ತಿಯಿಂದಂ ಬಡ್ಡಿಸೆಯುಂಡಿನ್ ಬೞೆಕ್ಕಕ್ಷಯ ದಾನಮೆಂದು ಪರಸಿ ಪೋಪಾಗಳ್ ಭಟ್ಟಾರಾ ನಿಮ್ಮ ಕಿಱೆಯ ಗುಡ್ಡನಂ ಪರಸಿ ಪೋಗಲ್ವೇೞ್ಕುಮೆಂದು ವಾಯುಭೂತಿಯ ಮನೆಗೊಡಗೊಂಡು ಪೋದುಡಾತನುಂ ಪಿರಿಯ ಲೋಹಾಸನಮೇಱೆ ಪಲಂಬರ ಪಾರ್ವರ್ಗ್ಗೆ ವಖ್ಖಾಣಿಸುತ್ತಿರ್ದ ಮಾನಗರ್ವದಿದಿರಂ ಬಂದು ಬಂದಿಸದಿರ್ದ್ದೊನಂ ಅಗ್ನಿಭೂತಿ ಪೋಗಿ ವಾಯುಯ ಕೈಯಂ ಪಿಡಿದೆನ್ಗುಂ ಭಟ್ಟಾರರ್ ನಮಗೆ ಸ್ವಾಮಿಗಳ್ ಭಟ್ಟಾರರ ಪ್ರಸಾದದಿಂದಂ

ರಾತ್ರಿ, ಕಾಡಿನಲ್ಲಿ ಹತ್ತು ರಾತ್ರಿ ಎಂಬೀ ರೀತಿಯಲ್ಲಿ ಸಂಚರಿಸುತ್ತ ಬಂದರು. ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪತ್ತನ, ದ್ರೋಣಾಮುಖಗಳಲ್ಲಿ* ಸುತಾಡುತ್ತ ಕೌಶಂಬಿಗೆ ಬಂದರು. ಉದಯಾವತ ಪರ್ವತದಲ್ಲಿರುವ ಸಿದ್ಧಕ್ಷೇತ್ರಗಳಿಗೆ ಹೋಗಿ ಅಲ್ಲಿ ನಮಸ್ಕರಿಸಿ, ತೀರ್ಥವನ್ನು ಮಾತ್ರ ಸೇವಿಸುವ ಉಪವಾಸ ಮಾಡಿ ಭಿಕ್ಷೆಗಾಗಿ ಕಾಶಂಬಿನಗರವನ್ನು ಹೊಕ್ಕರು. ಅಲ್ಲಿ ಚಿಕ್ಕ ಮನೆ ದೊಡ್ಡಮನೆ ಎಂಬ ತಾರತಮ್ಯವಿಲ್ಲದೆ ಉಣಲು ತಕ್ಕುದಾದ ಮನೆಗಳಲ್ಲಿ ಭಿಕ್ಷಕ್ಕಾಗಿ ಸುತಾಡುತ್ತ ಅಗ್ನಿಭೂತಿ ಬ್ರಾಹ್ಮಣನ ಮನೆಯನ್ನು ಪ್ರವೇಶಿಸಿದರು. ಆತನು ಕಂಡು ಎದುರಿಗೆ ಓಡಿಬಂದು ಅಂತ್ಯಂತ ಭಕ್ತಿಯಿಂದ ವ್ಯವಸ್ಥೆಮಾಡಿ, ಕಾಲನ್ನು ತೊಳೆದು ‘ಉನ್ನತ ಆಸನದಲ್ಲಿ ಕುಳ್ಳಿರಿ’ ಎಂದು ನುಡಿದನು. ಒಂಬತ್ತು ವಿಧದ ಸತ್ಕಾರಗಳಿಂದ ಪುಣ್ಯವನ್ನು ಪಡೆದನು, ಶ್ರದ್ಧೆ, ಭಕ್ತಿ ಮುಂತಾದ ಏಳು ಗುಣಗಳಿಂದ ಕೂಡಿದವನಾಗಿ ಪರಿಶುದ್ದವಾದ ಆಹಾರವನ್ನು ಅತ್ಯಂತ ಭಕ್ತಿಯಿಂದ ಬಡಿಸಿದನು. ಸೂರ್ಯಮಿತ್ರ ಆಚಾರ್ಯರು ಊಟ ಮಾಡಿ ‘ದಾನ ಅಕ್ಷಯವಾಗಲಿ’ ಎಂದು ಆಶೀರ್ವದಿಸಿದರು. ಅವರು ಹೋಗುವಾಗ ಅಗ್ನಿಭೂತಿ – “ಪೂಜ್ಯರೇ, ನಿಮ್ಮ ಕಿರಿಯ ಶಿಷ್ಯನನ್ನೂ ಹರಸಿ ಹೋಗಿರಿ* ಎಂದು ನುಡಿದು, ಅವರನ್ನು ವಾಯುಭೂತಿಯ ಮನೆಗೆ ಕರೆದುಕೊಂಡು ಹೋದನು. ಆಗ ವಾಯುಭೂತಿ ದೊಡ್ಡದಾದ ಒಂದು ಲೋಹಾಸನದಲ್ಲಿ ಕುಳಿತಿದ್ದನು. ಹಲವು ಮಂದಿ ಬ್ರಾಹ್ಮಣರಿಗೆ ವ್ಯಾಖ್ಯಾನ ಮಾಡುತ್ತಿದ್ದೇನೆಂಬ ಮಾನಗರ್ವದಿಂದ ಕೂಡಿದ್ದನು. ಅವನು ಸೂರ್ಯಮಿತ್ರಚಾರ್ಯರ ಎದುರಿಗೆ ಬಂದು ವಂದಿಸದೆ ಇದ್ದನು. ಅವನ ಬಳಿಗೆ ಅಗ್ನಿಭೂತಿ ಬಂದು ಅವನ ಕೈಯನ್ನು ಹಿಡಿದು ಹೀಗೆಂದನು – “ಈ ಯತಿಗಳು ನಮಗೆ ಸ್ವಾಮಿಗಳು. ಇವರ ಅನುಗ್ರಹದಿಂದ ನಮಗೆ

*ಗ್ರಾಮ – ನೂರಕ್ಕೆ ಕಡಮೆಯಿಲ್ಲದೆ ಐನೂರಕ್ಕೆ ಹೆಚ್ಚಾಗದೆ ಕೃಷಿಕ ಕುಟುಂಬಗಳು ನೆಲಸಿರುವ ಹಳ್ಳಿ, ನಗರ – ರಾಜಧಾನಿ, ಖೇಡ – ಎತ್ತರವಾದ ಕೋಟೆಯುಳ್ಳ ಊರು, ಖರ್ವಡ – ಚಿಕ್ಕ ಸುತ್ತುಗೋಡೆಯಿರುವ ಊರು, ಮಡಂಬ – ದೂರಸ್ಥಲ ಸೀಮಾಂತದ ಪುರ, ಪತ್ತನ – ಬಂಡಿ ಅಥವಾ ನಾವೆಗಳಲ್ಲಿ ಹೋಗಿ ಸೇರಬಹುದಾದ ಪುರ, ದ್ರೋಣಾಮುಖ – ಜಲಸ್ಥಲ ಮಾರ್ಗಗಳುಳ್ಳ ಪುರ.

ನಮಗಿನಿವಿರಿದು ಶ್ರೀಯುಂ ಸಂಪತ್ತುಂ ವಿಭವಮುಮಾದುದಱೆಂದಮೆೞ್ದು ಪೋಗಿ ಭಟ್ಟಾರರಂ ವಂದಿಸೆಂದೊಡವನಿಂತೆಂದಂ – ಇದೇನೊಳ್ಳಿದರ್ಗ್ಗೆನ್ನಂ ಪೊಡೆವಡಿಸಿದಪ್ಪೈ ಪೇೞೆಂದುಮಶುಚಿಗಳ್ ಮಲಗ್ರಸ್ತರೆಂದಪ್ಪೊಡಂ ಮಿಂದಱೆಯದವರಿವರ ಕಾಲ್ಗೆಱಗುವೆಂ ಗಡಮೆಂದು ಪಾರ್ವರ ಸಭೆಯ ನಡುವಿರ್ದ್ದು ಕನಿಷ್ಠ ನಿಷ್ಠುರವಚನಂಗಳಿಂ ನಾನಾ ಪ್ರಕಾರದಿಂ ನುಡಿದು ಪೊಲ್ಲದಂ ಪೇೞ್ದಟ್ಟಿ ಕಳೆಯೆ ಅಗ್ನಿಭೂತಿಯೆಂದಂ – ಕೊಯ್ತಲೆಯಧಮಾ ನೀಚಾ ಸ್ವಾಮಿಯನಿಂತೆಂಬಾ ಎಂದವನಂ ಬಯ್ದೊಡೆ ಭಟ್ಟಾರರೆನ್ಗುಂ –

ಗಾಹೆ || ಣಿಂದಂತಂ ಸಿಳಹಂತಂ ಸತ್ತುಂ ಮಿತ್ತುಂ ತಹೇವ ಸುಖ ದುಕ್ಖಂ |
ಜೋ ಸಮಭಾವ ಇ ಪೆಚ್ಚ ಇ ಸೋ ಸಮಣೋ ಸೋಯ ಪವ್ವಯಿಓ ||

ವೃತ್ತ ||         ಆಕೃಷ್ಟಏವ ವಚಸಾ ನತು ತಾಡಿತೋಸ್ವಿ
ಸಂತಾಪಿತೋಸ್ಮಿ ನ ತು ಮೇ ಹೃತಮುತ್ತಮಾಂಗಂ
ಪ್ರಾಣಾ ಹೃತಾಃ ಮಮ ಪರೈರ್ನ ತು ಮೇ ಸಮಾಃ
ಇತ್ಯಾತ್ಮಚಿಂತನ ಪರಂಪರಯಾ ಕ್ಷಮೇತ

ಎಂದಿಂತು ಕ್ಷಮೆಯಂ ಭಾವಿಸಿದರ್ ಅಗ್ನಿಭೂತಿಯಂ ಭಟ್ಟಾರರೊಡನುದಯಾವತ ಪರ್ವತಕ್ಕೆ ಪೋಗಿ ಇಂತೆಂದಂ – ಭಟ್ಟಾರಾ ನಿಮ್ಮಂ ಪಂಚಮಹಾಪಾತಕನ ಮನೆಗೊಡಗೊಂಡು ಪೋಗಿ ಬಯ್ಸಿದೆನದನಾತಂ ಬಯ್ದೊನಲ್ಲನಾಂ ಬಯ್ದೆನೀಯಪರಾಧಕ್ಕೆನಗೆ ಕ್ಷಮಿಯಿಸುವುದೀ ಬಯ್ಸಿದ

ಇಷ್ಟೋಂದು ಹಿರಿದಾದ ತೇಜಸ್ಸೂ ಐಶ್ವರ್ಯವೂ ವೈಭವವೂ ಉಂಟಾಗಿವೆ. ಆದುದರಿಂದ ಎದ್ದು ಹೋಗಿ ಪೂಜ್ಯರನ್ನು ನಮಸ್ಕರಿಸು* ಎಂದು ನುಡಿಯಲು, ವಾಯುಭೂತಿ ಹೀಗೆಂದನು – “ಇದೇನು ? ಒಳ್ಳೆಯವರಿಗೆ ನನ್ನಿಂದ ನಮಸ್ಕಾರ ಮಾಡಿಸುತ್ತಿದ್ದೀಯಪ್ಪಾ! ಹೇಳು. ಇವರು ಎಂದಿಗೂ *ಅಶುಚಿಯಾಗಿರುವವರು , ಮಲ ಹಿಡಿದವರು, ಎಂದಾದರೂ ಸ್ನಾನ ಮಾಡಿ ಅರಿಯದವರು ! ಇವರ ಕಾಲಿಗೆ ನಾನು ವಂದಿಸುವೆನು, ಅಲ್ಲವೆ? * ಎಂದು ಬ್ರಾಹ್ಮಣರ ಸಭೆಯ ನಡುವೆ ಇದ್ದುಕೊಂಡು ಅತ್ಯಂತ ಕೀಳಾದ ಕಠನವಾದ ಮಾತುಗಳಿಂದ ಹಲವು ರೀತಿಗಳಿಂದ ತುಚ್ಛೀಕರಿಸಿ ನುಡಿದು, *ಹೇಳಬಾರದ ಕೆಟ್ಟ ಮಾತುಗಳನ್ನಾಡಿ, ಅವರನ್ನು ತಿರಸ್ಕರಿಸಿದನು. ಆಗ ಅಗ್ನಿಭೂತಿ “ತಲೆಹೋಕನಾದ ಆಧಮನೇ ನೀಚನೇ, ಸ್ವಾಮಿಯನ್ನು ಹೀಗೆನ್ನುವೆಯಾ? * ಎಂದು ಅವನನ್ನು ಬೈದನು. ಆಗ ಭಟ್ಟಾರರು ಹೀಗೆಂದರು. – “ನಿಂದಿಸುವವನನ್ನೂ ಹೊಗಳುವವನ್ನೂ ಶತ್ರುವನ್ನೂ ಮಿತ್ರನನ್ನೂ ಹಾಗೆಯೇ ಸುಖ ದುಃಖವನ್ನೂ ಯಾವನು ಸಮಭಾವದಿಂದ ಭಾವಿಸುವನೋ ಮತ್ತು ನೋಡುವನೋ ಅವನು ಸವಣನು (ಜೈನಯತಿ) ಅವನೇ ಪರಿವ್ರಾಜಕನು. ವಾಯುಭೂತಿ ನನ್ನನ್ನು ಮಾತುಗಳಿಂದ ನಿಂದಿಸಿದ್ದಾನಲ್ಲದೆ ಹೊಡೆದಿಲ್ಲ. ದುಃಖಕ್ಕೆ ಈಡು ಮಾಡಿದ್ದಾನಲ್ಲದೆ ನನ್ನ ತಲೆಯನ್ನು ಕತ್ತರಿಸಿಕೊಂಡು ಹೋಗಿಲ್ಲ. ನನ್ನ ಪ್ರಾಣಗಳು ಇತರರಿಂದ ಅಪಹರಿಸ್ಪಟ್ಟಿವೆ, ಆದರೆ ನನ್ನ ಧ್ಯಾನಸ್ಥಿತಿ ಉಳಿದಿದೆ. ಈ ರೀತಿಯ ಆತ್ಮಚಿಂತನೆಗಳನ್ನು ಅನುಕ್ರಮವಾಗಿ ಮಾಡುತ್ತ, ಅವನನ್ನು ಕ್ಷಮಿಸಬೇಕು* ಎಂದುಸೂರ್ಯಮಿತ್ರಯತಿಗಳು ಅವನನ್ನು ಕ್ಷಮಿಸಿದರು. ಅಗ್ನಿಭೂತಿ ಅವರೊಡನೆ ಉದಯಾವತ ಎಂಬ ಪರ್ವತಕ್ಕೆ ತೆರಳಿದನು. ಅಲ್ಲಿ ಅವರೊಡನೆ ಹೀಗೆಂದನು “ಪೂಜ್ಯರೇ, ನಿಮ್ಮನ್ನು ನಾನು

ಆ ಪಾಪಮಿಂತಲ್ಲದೆ ಪಿಂಗದೆನಗೆ ದೀಕ್ಷೆಯಂ ದಯೆಗೆಯ್ದಿಮೆಂದು ಕೀಱೆ ಬೇಡಿದೊಡೆ ಭಟ್ಟಾರರೊಳ್ಳಿ ತಷ್ಟ ಮುಹೂರ್ತದೊಳ್ ದೀಕ್ಷೆಯಂ ಕೊಟ್ಟೊಡಾತನುಂ ತಪಂಬಟ್ಟು ಕ್ರಿಯೆಗಳೆಲ್ಲಮಂ ಕಲ್ತು ಆಗಮಂಗಳನೋದುತ್ತುಂ ತಮ್ಮ ಗುರುಗಳೊಡನೆ ವಿಹಾರಿಸುತ್ತಿರ್ದ್ದಂ ಇತ್ತಲಗ್ನಿಭೂತಿಯ ಪಾರ್ವಂತಿ ಸೋಮದತ್ತೆಯೆಂಬೊಳ್ ತನ್ನೊಂದು ಸಲ್ಗೆಯಿಂದಮೞಲಿಂದಂ ವಾಯುಭೂತಿಯನಿಂತೆಂದಳ್ – ಸೂರ್ಯಮಿತ್ರ ಭಟ್ಟಾರಕರ್ ಮುನ್ ಬ್ರಾಹ್ಮಣರ್ ನಿಮ್ಮ ಸೋದರಮಾವಂಗಳೀಗಳ್ ಮಹಾ ತಪೋಧನರ್ ಗುಣವಂತರಪ್ಪರ್ ನಿಮ್ಮ ಮನೆಗೆ ವಂದೊಡೆ ಮಣಿಯಿಂದೆರ್ದ್ದಿದಿರಂ ಪೋಗಿ ಪೊಡಿವಟ್ಟಿರಿಲ್ಲೀ ಬಾೞುಂ ಸಂಪತ್ತುಂ ಶ್ರೀಯುಮೆಂಬುದವರ ಪ್ರಸಾದಿಂದಮಾದುದಂತಪ್ಪ ಮಹಾಋಷಿಯರಂ ನಿಮಗೆ ಪೞೆಯಲುಂ ಬಯ್ಯಲು ತಿರಸ್ಕರಿಸಿ ನುಡಿಯಲುಮಕ್ಕುಮೆ ಅಧಮರ ಪೊಲ್ಲಮಾನಸರ ದುರ್ಜನರ ಜಾರಜಾತರ ವಿಜಾತಿಗಳ್ಗೆ ಯೋಗ್ಯಮಪ್ಪಯೋಗ್ಯಮಂ ಗೆಯ್ದಿ ರೆಂದು ಪಾರ್ವರ ಸಭೆಯ ನಡುವೆ ನುಡಿದೊಡೆ ವಾಯುಭೂತಿಯುಂ ಮುಳಿದು ಬಯ್ದು ಜಡಿದು ಕಾಲಿಂದಂ ತಲೆಯನೊದೆದು ಮನೆಯೊಳುಳ್ಳುದೆಲ್ಲಮಂ ಕವರ್ದುಕೊಂಡು ನಿಮ್ಮ ಸವಣನಾಗಿರ್ದ್ದಾಣ್ಯನ ಪೋದಲ್ಲಿಗೆ ಪೋಗೆಂದಟ್ಟಿ ಕಳೆದೊಡಾಕೆಯುಂ ಮುಳಿದು ಕ್ರೋಧಾಗ್ನಿ ಪೆರ್ಚೆ ದುರಾತ್ಮಾ ಎನ್ನನೊದೆದ

ಪಂಚಮಹಾಪಾತಕನಾದ ವಾಯುಭೂತಿಯ ಮನೆಗೆ ಕರೆದುಕೊಂಡು ಹೋಗಿ ಅವನಿಂದ ಬಯ್ಯಿಸಿದೆನು. ಆದ್ದರಿಂದ ಬೈದುದು ಅವನಲ್ಲ, ನಾನೇ ಬೈದೆನು. ನನ್ನ ಈ ತಪ್ಪನ್ನು ಕ್ಷಮಿಸಬೇಕು. ಈ ಬೈಸಿದ ಪಾಪಪರಿಹಾರಕ್ಕೆ ಬೇರೆ ಮಾರ್ಗವಿಲ್ಲ. ನನಗೆ ದೀಕ್ಷೆಯನ್ನು ದಯಾಪಾಲಿಸಿರಿ* ಎಂದುಕೂಗಿ ಬೇಡಿದನು. ಸೂರ್ಯಮಿತ್ರಭಟಾರರು ಒಳ್ಳೆಯ ಮೂಹೂರ್ತದಲ್ಲಿ ಅವನಿಗೆ ದೀಕ್ಷೆಯನ್ನಿತ್ತರು. ಅಗ್ನಿಭೂತಿ ತಪವನ್ನೆಸಗಿ ಯತಿಗಳ ಆಚರಣೆಗಳೆಲ್ಲವನ್ನೂ ಕಲಿತು ಶಾಸ್ತ್ರಗಳನ್ನೆಲ್ಲ ಕಲಿಯುತ್ತ ತನ್ನ ಗುರುಗಳೊಂದಿಗೆ ಸಂಚರಿಸಿದ್ದನು. ಇತ್ತ ಅಗ್ನಿಭೂತಿ ಬ್ರಾಹ್ಮಣನ ಹೆಂಡತಿಯಾದ ಸೋಮದತ್ತೆ ಎಂಬುವಳು ತನ್ನ ಒಂದು ಸಲುಗೆಯಿಂದಲೂ ಅಳಲಿನಿಂದಲೂ ವಾಯುಭೂತಿಯನ್ನು ಕುರಿತು ಹೀಗೆಂದಳು “ಸೂರ್ಯಮಿತ್ರಯತಿಗಳು ಮೊದಲೇ ಬ್ರಾಹಣರು, ನಿಮ್ಮ ಸೋದರಮಾವನವರು. ಈಗ ಅವರು ಮಹಾತಪಸ್ಸೇ ಐಶ್ಚರ್ಯವಾಗಿ ಉಳ್ಳವರು, ಒಳ್ಳೆಯ ಗುಣವಂತರೂ ಆಗಿದ್ದಾರೆ. ಅವರು ನಿಮ್ಮ ಮನೆಗೆ ಬಂದಾಗ ನೀವು ನಿಮ್ಮ ಪೀಠದಿಂದ ಎದ್ದು ಎದುರುಗೊಂಡು ಸಾಷ್ಠಾಂಗವಂದನೆ ಮಾಡಲಿಲ್ಲ. ಈ ಜೀವನೋಪಾಯವೂ ಐಶ್ಚರ್ಯವೂ ತೇಜಸ್ಸು ಅವರ ಅನುಗ್ರಹದಿಂದ ಆಗಿವೆ. ಅಂತಹ ಮರ್ಹಷಿಗಳನ್ನು ಹಳಿಯಲೂ ಬೈಯಲೂ ತುಚ್ಚೀಕರಿಸಿ ನುಡಿಯಲೂ ನಿಮಗೆ ಯುಕ್ತವೇ? ಅಧಮರೂ ಕೆಟ್ಟ ಮನುಷ್ಯರೂ ದುಷ್ಟರೂ ಹಾದರಕ್ಕೆ ಹುಟ್ಟಿದವರೂ ಕುಲಗೆಟ್ಟವರೂ ಆದ ವ್ಯಕ್ತಿಗಳಿಗೆ ಯೋಗ್ಯವೆನಿಸುವ ಅಯೋಗ್ಯ ವರ್ತನೆಯನ್ನು ಮಾಡಿದಿರಿ* – ಹೀಗೆ ಬ್ರಾಹಣರ ಸಭೆಯ ನಡುವೆ ಆಕೆ *ಹೇಳಿದಳು. ಆಗ ವಾಯುಭೂತಿ ಸಿಟ್ಟಾಗಿ, ಬೈದು, ಗದರಿಸಿ, ತನ್ನ ಕಾಲಿನಿಂದ ಅವಳ ತಲೆಯನ್ನು ಒದೆದನು. ಅವಳ ಮನೆಯಲ್ಲಿದ್ದುದೆಲ್ಲವನ್ನೂ ಸುಲಿದು, ‘ನಿನ್ನ ಜೈನಯತಿಯಾದ ಗಂಡನು ಹೋದಲ್ಲಿಗೆ ನಡೆ’ ಎಂದು ಹೊರಪಡಿಸಿದನು. ಆಗ ಸೋಮದತ್ತೆಯೂ ಕೋಪಗೊಂಡು, ಸಿಟ್ಟೆಂಬ ಬೆಂಕಿ ಹೆಚ್ಚಾಗಲೂ ಹೀಗೆಂದಳು – ಎಲೈ ದುಷ್ಠನೇ, ನನ್ನನ್ನು ಒದೆದ ನಿನ್ನನ್ನು ನಾನು ಮುಂದಿನ ಜನ್ಮದಲ್ಲಿಯಾದರೂ ನಾಯಿ

ನಿನ್ನ ಕಾಲ್ಗಳಂ ಜನ್ನಾಂತರದೊಳಂ ನಾಯುಂ ನರಿಯುಮಾಗಿಯಪೊಡಂ ಕೊಂದು ಮಕ್ಕಳ್ವೆರಸು ತಿಂಬೆನಕ್ಕೆಂದು ನಿದಾನಂಗೆಯ್ದ್ದು ಮನೆಯಿಂದಂ ಮಕ್ಕಳ್ವೆರಸು ಪೊಱಮಟ್ಟು ಪೋಗಿ ಕೆಲವು ಕಾಲದಿಂ ಬೞೆಕ್ಕೆ ಸತ್ತು ತಾನುಂ ಮಕ್ಕಳುಂ ಸಂಸಾರದೊಳ್ ತಿರಿಯು ತ್ತಿರ್ದ್ದರ್. ಇತ್ತ ವಾಯುಭೂತಿಯುಮತಿಮಾನ ಗರ್ವದಿಂದಂ ಋಷಿಯರಂ ಪರಿಭವಿಸಿ ಬಯ್ದು ನುಡಿದು ಜಿನಧರ್ಮಮಂ  ಪೞೆದ ಪಾಪದ ಫಲದಿಂದಮೇಱುಂ ದಿವಸದಿಂದೊಳಗೌದುಂಬರಕುಷ್ಠಮಾಗಿ ಪುೞೆತು ನಮೆದು ಸತ್ತು ಕೌಸಂಬಿಯೆಂಬ ಪೊೞಲೊಳ್ ಮಿಳಿದು ಬಿದಿರ ಮೇಗೇಱೆಯಾಕಾಶದೊಳಾಡುವ ವಿದ್ಯಾಧರ ಲಂಗಿಗರ ಮನೆಯೊಳ್ ಪೆಣ್ಗತ್ತೆಯಾಗಿ ಪುಟ್ಟಿ ಪಿರಿಯವಪ್ಪ ಪುಱೆಗಳಂ ಪೊತ್ತು ಪೋಗಿ ಬೆನ್ನೊಳ್ ನಾಳಿ ಬಿರ್ದ್ದು ಕಱಮೆಯಾಗಿ ಪುೞೆತು ನಮೆದು ಸತ್ತು ಮತ್ತಮಾ ಪೊೞಲೊಳ್ ಪೇಪಂದಿಯಾಗಿ ಪುಟ್ಟಿ ಸತ್ತು ಮತ್ತಾ ಮಗಧೆಯೆಂಬುದುಂಬುದು ನಾಡಲ್ಲಿ ಚಂಪಾನಗರಮೆಂಬುದು ಪೊೞಲಲ್ಲಿ ಪೆಣ್ಣಾಯಾಗಿ ಮಾದೆಗರ ಮನೆಯೊಳ್ ಪುಟ್ಟಿ ಸತ್ತು ಮಲ್ಲಮಾ ಪೊೞಲೊಳ್ ಮಾದೆಗರ್ಗೆ ಪ್ರಧಾನನಪ್ಪ ನೀಳನೆಂಬ ಮಾದೆಗಂಗಂ ಕೇಶಿಯೆಂಬ ಮಾದೆಗಿಗಂ ಮಗಳ್ ದುರೂಪೆ ದುರ್ವರ್ಣೆ ದುರ್ಗಂಧೆ ದುಸ್ಸ್ಯರೆ ಪುಟ್ಟುಂಗುರುಡಿ ಪೊಲತಿಯಾಗಿ ಪುಟ್ಟಿ ವ್ಯಾಪೀಡಿತೆ ಕ್ಷುಧಾಗ್ನಿಯಿಂ ಬೞ್ದೆದೊಳೊಂದು ದಿವಸಮುದ್ಯಾನವನಕ್ಕೆ ಪೋಗಿ ನೇಱೆಲ ಪಣ್ಗಳಂ ತಡವರಿಸಿಯಾಯ್ದಾಯ್ದು ತಿನ್ನುತ್ತಿರ್ಪಳ್

ಅಥವಾ ನರಿಯಾಗಿಯಾದರೂ ಹುಟ್ಟಿಬಂದೂ, ಕೊಂದು, ನನ್ನ ಮಕ್ಕಳೊಂದಿಗೆ ನಿನ್ನ ಕಾಲುಗಳನ್ನು ತಿನ್ನುವಂತೆ ಆಗಲಿ – ಎಂದು ಪ್ರತಿಜ್ಞೆ ಮಾಡಿದಳು. ಆಕೆ ಮನೆಯಿಂದ ಮಕ್ಕಳೊಡನೆ ಹೊರಟು ಹೋದಳು. ಕೆಲವು ಕಾಲಾನಂತರ ಸತ್ತು ತಾನೂ ಮಕ್ಕಳೂ ಸಂಸಾರದಲ್ಲಿ ಸುತ್ತುತ್ತಿದ್ದರು. ಇತ್ತ ವಾಯೂಭೂತಿ ಅತಿಯಾದ ಉದ್ಧಟತನದ ಗರ್ವದಿಂದ ಋಷಿಗಳನ್ನು ತಿರಸ್ಕರಿಸಿ ಬೈದು ಮಾತಾಡಿ, ಜೈನಧರ್ಮವನ್ನು ನಿಂದಿಸಿದ ಪಾಪದ ಪರಿಣಾಮವಾಗಿ ಏಳು ದಿವಸಗಳೊಳಗಾಗಿ ಔದುಂಬರಕುಷ್ಠರೋಗಕ್ಕೆ ತುತ್ತಾದನು. ಹುಳುಗಳು ಉಂಟಾಗಿ ಯಾತನೆಪಟ್ಟು ಸತ್ತು ಕೌಸಂಬಿ ಎಂಬ ಪಟ್ಟಣದಲ್ಲಿ ಹಗ್ಗ ಕಟ್ಟಿದ ಬಿದಿರ ಗಣೆಯ ಮೇಲೆ ಆಡುವ ವಿದ್ಯೆಯನ್ನು ತೋರಿಸುವ ಡೊಂಬರ ಮನೆಯಲ್ಲಿ ಹೆಣ್ಣು ಕತ್ತೆಯಾಗಿ ಹುಟ್ಟಿದನು. ಆ ಕತ್ತೆ ದೊಡ್ಡ ದೊಡ್ಡ ಹೊರೆಗಳನ್ನು ಹೊತ್ತುಕೊಂಡು ಹೋಗಿ, ಬೆನ್ನಿನಲ್ಲಿ ನಾಳಿಹುಣ್ಣು ಉಂಟಾಗಿ, ಆ ಹುಣ್ಣು ಬಲಿತು ಹುಳುವಾಗಿ ಯಾತನೆಗೊಂಡು ಸತ್ತಿತು. ಅದು ಮತ್ತೆ ಆ ಪಟ್ಟಣದಲ್ಲಿ ಹೇಲು ತಿನ್ನುವ ಹಂದಿಯಾಗಿ ಹುಟ್ಟಿ ಸತ್ತು ಹೋದನಂತರ ಮಗಧೆ ಎಂಬ ನಾಡಿನಲ್ಲಿರುವ ಚಂಪಾನಗರ ಎಂಬ ಪಟ್ಟಣದಲ್ಲಿ ಮಾದಿಗರ ಮನೆಯಲ್ಲಿ ಒಂದು ಹೆಣ್ಣು ನಾಯಿಯಾಗಿ ಹುಟ್ಟಿತ್ತು. ಆನಾಯಿ ಸತ್ತು ಅನಂತರದಲ್ಲಿ ಅದೇ ಪಟ್ಟಣದಲ್ಲಿ ಮಾದಿಗರಿಗೆಲ್ಲ ಮುಖ್ಯಸ್ಥನಾದ ನೀಳನೆಂಬ ಮಾದಿಗನಿಗೂ ಕೇಶಿಯೆಂಬ ಮಾದಿಗಿತಿಗೂ ಮಗಳಾಗಿ ಹುಟ್ಟಿತು. ಆಕೆ ಕುರೂಪೆಯೂ ಕೆಟ್ಟಬಣ್ಣದವಳೂ ದುರ್ವಾಸನೆಯುಳ್ಳವಳೂ ಕೆಟ್ಟಸ್ವರವುಳ್ಳವಳೂ ಹುಟ್ಟುಕುರುಡಿಯೂ ಹೊಲತಿಯೂ ಆಗಿ ಹುಟ್ಟಿ ರೋಗದಿಂದ ಪೀಡಿತೆಯಾಗಿ ಹೊಟ್ಟೆಗೆ ಗತಿಯಿಲ್ಲದೆ ಹಸಿವೆಂಬ ಬೆಂಕಿಯಿಂದ ಬಳಲುತ್ತ, ಬದುಕಿದ್ದಳು. ಆಕೆ ಒಂದು ದಿವಸ ಉದ್ಯಾನವನಕ್ಕೆ ಹೋಗಿ ಅಲ್ಲಿ ನೇರಳೆ ಹಣ್ಣುಗಳನ್ನು ಕೈಯಿಂದ ತಡವರಿಸಿ ಹೆಕ್ಕುತ್ತ ತಿನುತ್ನ್ತಿದ್ದಳು. ಆ ವೇಳೆಗೆ ಇತ್ತ

ಅನ್ನೆಗಮಿತ್ತ ಸೂರ್ಯಮಿತ್ರಾಚಾರ್ಯರುಮಗ್ನಿಭೂತಿಮುನಿಯುಂ ಗ್ರಾಮ ನಗರ ಖೇಡ ಖರ್ವಡ, ಮಡಂಬ, ಪತ್ತನ, ದ್ರೋಣಾಮುಖಂಗಳಂ ವಿಹಾರಿಸುತ್ತುಂ ಚಂಪಾನಗರಮನೆಯ್ದಿ ವಾಸುಪೂಜ್ಯಭಟ್ಟಾರರ ನಿಸಿದ್ದಿಗೆ ಸಂದ ತೀರ್ಥಸ್ಥಾನಮನಾದಮಾನುಂ ಶುದ್ದ ಪರಿಣಾಮದಿಂದಂ ವಂದಿಸುತ್ತಿರ್ದ್ದ ಸೂರ್ಯಮಿತ್ರಾಚಾರ್ಯರ್ಗ್ಗವಜ್ಞಾನಂ ಪುಟ್ಟಿತ್ತು ಮತ್ತೆ ಬಹಿರುದ್ದಾನದೊಳ್ ಸಂಬರನಾಗಠಾಣದೊಳ್ ಬಂದಿರ್ದ್ದರಂದಿನ ದಿವಸಂ ಸೂರ್ಯಮಿತ್ರಾಚಾರ್ಯರುಪವಾಸಂ ಗೆಯ್ದಿರ್ದ್ದರಗ್ನಿಭೂತಿಮುನಿಯುಂ ಭೈಕ್ಷಾನಿಮಿತ್ತಂ ಚೆರಿಗೆವೊಗುತ್ತವೆಡೆಯೊಳುದ್ಯಾನವನದೊಳ್ ನೇಱೆಲ ಮರದ ಕೆೞಗೆ ನೇಱೆಲ ಪಣ್ಗಳಂ ತಡವರಿಸಿ ಆಯ್ದಾಯ್ದು ತಿನ್ದ ಜಾತ್ಯಂಧೆಯಪ್ಪ ಪೊಲೆಯರ ಕೂಸಂ ಕಂಡತ್ಯಂತ ಸ್ನೇಹವಾಗಿ ಪರವಸದಿಂದಂ ಕಣ್ಣೀರ್ಗಳಂ ಸೂಸಿಯೆಯ್ತಂದು ಮನ್ಯುಮಿಕ್ಕು ಕರುಣದಿಂದೆ ಕುಂಚದ ಕೋಲೊಳ್ ಪರೆದಿರ್ದ ಪಣ್ಗಳಂ ಕೂಸಿನ ಮುಂದೆ ಸಾರ್ಚುತ್ತುಂ ನೀಡುಂ ಬೇಗಮಿರ್ದ್ದಿದೇಂ ಪಾಪದ ಫಲವೊ ಎಂದು ಸಂಸಾರ ನಿವೇಗಮಾಗೆಯಂದಿನ ದಿವಸಮಲಾಭಂ ಮಾಡಿ ತಮ್ಮಾವಾಸಕ್ಕೆ ಪೋದೊಡೆ ಭಟ್ಟಾರರೆಂದರ್ – ಏನು ಲಾಭಮಾದುದೆ ಎಂದು ಬೆಸಗೊಂಡೊಡೆ ಭಟ್ಟಾರರ್ಗ್ಗಿಂತೆಂದು ಪೇೞ್ದರ್ – ಚರಿಗೆವುಗುತ್ತವೊಂದೆಡೆಯೊಳುದ್ಯಾನದೊಳ್ ನೇರಲ ಮರದ ಕೆೞಗೆ ತಡವರಿಸಿ ನೇಱೆಲ ಪಣ್ಗಳಂ ತಿನ್ದ ಜಾತ್ಯಂಧೆಯಪ್ಪ ಪೊಲೆಯರ ಕೂಸಂ ಕಂಡಾದಮಾನುಂ ಸ್ನೇಹವಾಗಿ ಕರುಣದಿಂದಂ

ಸೂರ್ಯಮಿತ್ರಾಚಾರ್ಯರೂ ಅಗ್ನಿಭೂತಿ ಋಷಿಯೂ ಗ್ರಾಮ ನಗರ ಖೇಡ ಖರ್ವಡ, ಮಡಂಬ, ಪತ್ತನ, ದ್ರೋಣಾಮುಖಗಳನ್ನು ಸಂಚರಿಸುತ್ತ ಚಂಪಾನಗರಕ್ಕೆ ಬಂದರು. ಅಲ್ಲಿ ವಾಸುಪೂಜ್ಯ ಯತಿಗಳ ಸಮಾಗಾಗಿ ಸಂದ ತೀರ್ಥಕ್ಷೇತ್ರವನ್ನು ಅತ್ಯಂತ ಪರಿಶುದ್ದವಾದ ಭಕ್ತಿಯಿಂದ ವಂದಿಸುತ್ತಿದ್ದ ಸೂರ್ಯಮಿತ್ರಾಚಾರ್ಯರಿಗೆ ಅವಜ್ಞಾನವುಂಟಾಯಿತು. ಅನಂತರ ಅವರು ಪಟ್ಟಣದ ಹೊರಗಿನ ಉದ್ದಾನದಲ್ಲಿದ್ದ ಶಂಬರ ಎಂಬ ಹೆಸರಿನ ನಾಗಾಲಯದಲ್ಲಿ ಬಂದು ಸೇರಿದ್ದರು. ಆ ದಿವಸ ಅವರು ಉಪವಾಸ ಮಾಡಿದ್ದರು. ಅಗ್ನಿಭೂತಿಮುನಿ ಭಿಕ್ಷೆಗಾಗಿ ಸಂಚಾರ ಮಾಡುತ್ತ, ನಡುವೆ ಉದ್ಯಾನದಲ್ಲಿ ನೇರಳೆ ಮರದ ಕೆಳಗೆ ನೇರಳೆ ಹಣ್ಣುಗಳನ್ನು ಕೈಯಿಂದ ತಡವರಿಸಿ ಆಯ್ದುಕೊಳ್ಳುತ್ತ ತಿನ್ನುವ ಹುಟ್ಟುಕುರುಡಿಯಾದ ಹೊಲತಿ ಕೂಸನ್ನು ಕಂಡು ಅತ್ಯಂತ ಪ್ರೀತಿಯುಂಟಾಗಿ ಮೈಮರೆಯುತ್ತ, ಕಣ್ಣೀರನ್ನು ಸುರಿಸಿಕೊಂಡು ಬಳಿಗೆ ಬಂದರು. ಅವರಿಗೆ ದುಃಖ ಹೆಚ್ಚಾಯಿತು. ಕರುಣೆ ತಾಳಿ ಅವರು ಅಲ್ಲಿ ಹರಡಿ ಬಿದ್ದಿದ್ದ ಹಣ್ಣುಗಳನ್ನು ನವಿಲು ಗರಿಯ ಕಟ್ಟಿನ ಕೋಲಿನಿಂದ ಆಕೂಸಿನ ಮುಂದಕ್ಕೆ ತಳ್ಳುತ್ತ ಬಹಳ ಹೊತ್ತು ಅಲ್ಲೇ ಇದ್ದು ‘ಇದು ಯಾವ ಪಾಪದ ಫಲವೋ’ ಎಂದು  ಸಂಸಾರದಲ್ಲಿ ವಿರಕ್ತಿ ತಾಳಿದರು. ಆ ದಿನ ಭಿಕ್ಷವೇ ಇಲ್ಲದಂತೆ ಆಚರಿಸಿ ತನ್ನ ವಾಸಸ್ಥಳಕ್ಕೆ  ತೆರಳಿದರು. ಆಗ ಸೂರ್ಯಮಿತ್ರ ಯತಿಗಳು – “ಏನು, ಭಿಕ್ಷೆ ಇಲ್ಲದಾಯಿತೆ ?” ಎಂದು ಕೇಳಲು ಭಟಾರರಿಗೆ ಅಗ್ನಿಭೂತಿಯತಿಗಳು ಹೀಗೆಂದರು – “ನಾನು ಭಿಕ್ಷೆಗಾಗಿ ಸಂಚರಿಸುತ್ತ ಒಂದೆಡೆ ಉದ್ಯಾನವನದಲ್ಲಿ ನೇರಳೆ ಮರದ ಕೆಳಗೆ ಹರಡಿದ್ದ ನೇರಳೆ ಹಣ್ಣುಗಳನ್ನು ತಿನ್ನುತ್ತಿದ್ದ ಹುಟ್ಟುಗುರುಡಿಯಾಗಿದ್ದ ಹೊಲೆಯರ ಹೆಂಗಸೊಬ್ಬಳನ್ನು ಕಂಡೆನು. ಆಗ ಅತ್ಯಂತ ಪ್ರೀತಿಯುಂಟಾಗಿ ವ್ಯಸನದಿಂದ ಮರುಕ ಹೆಚ್ಚಾಗಿ ಬೇರೆಲ್ಲವನ್ನೂ ಮರೆತೆನು. ಕಣ್ಣೀರು

ಮನ್ಯು ಮಿಕ್ಕು ಪರವಸದಿಂದಂ ಕಣ್ಣೀರ್ಗಳ್ ಬಂದು ನೀಡುಂ ಬೇಗಮಿರ್ದ್ದು ನೋಡಿ ಅಹೋವಿಧಾತ್ರಾ ಸಂಸಾರಮೆಂದು ಮುಟ್ಟುಪಡಂ ಮಾಡಿ ಬಂದೆನೆನೆ ಭಟ್ಟಾರರೆಂದರ್ – ಆ ಕೂಸೆಂಬುದು ನಿಮ್ಮ ತಮ್ಮನಪ್ಪ ವಾಯ್ನುಭೂತಿಯ ಜೀವಮನೆ ಅದೆಂತು ಭಟ್ಟಾರಾ ಎಂದು ಬೆಸಗೊಂಡೊಡೆ ಭಟ್ಟಾರರಿಂತೆಂದು ಪೇೞ್ದರ್ – ವಾಯುಭೂತಿ ತನ್ನೊಂದು ಮಾನಗರ್ವದಿಂದೆಮ್ಮಂ ಪೞೆದು ನಮೆದು ಸತ್ತಾ ಪೊೞಲೊಳೆ ಲಂಗಿಗರ ಮನೆಯೊಳ್ ಪೆಣ್ಗತ್ತೆಯಾಗಿ ಪುಟ್ಟಿ ನಮೆದು ಸತ್ತು ಪೇಪಂದಿಯಾಗಿ ಪುಟ್ಟಿ ಸತ್ತು ಪೆಣ್ಣಾಯಾಗಿ ಪುಟ್ಟಿ ಸತ್ತೀಗಳ್ ಜಾತ್ಯಂಧೆ ಪೊಯರ ಮಗಳಾಗಿ ಪುಟ್ಟಿದಳದಱೆಂ ಮುನ್ನಿನ ಸ್ನೇಹಂ ಕಾರಣಮಾಗಿ ಕೂಸಿನ ಮೇಗೆ ನಿಮಗೆ ಕೂರ್ಮೆಯಾದುದೆನೆ – ಭಟ್ಟಾರಾಂ ಅದೇ ಭವ್ಯಜೀವನೋ ಅಭವ್ಯಜೀವನೋ ಎಂದು ಬೆಸಗೊಂಡೊಡೆ ಭವ್ಯಜೀವಂ ನಿಮ್ಮ ಪೇೞೆ ಬ್ರತಂಗಳಂ ಕೈಕೊಳ್ಗುಮೆಂದೊಡೆ ಭಟ್ಟಾರರನುಮತದಿಂದಗ್ನಿಭೂತಿ ಋಷಿಯರ್ ಪೋಗಿ ತಮ್ಮ ಮುನ್ನಿನ ಜನ್ಮಾಂತರ ಸಂಬಂಧಮುಮಂ ಋಷಿಯರಂ ಏಳಿದು ನುಡಿದ ಪಾಪದ ಫಲದಿಂದೆಯ್ದಿದ ಭವಂಗಳ ದುಃಖಂಗಳುಮನಾ ಕೂಸೊಂಗಱೆವಂತು ತಿಳಿಯೆ ಪೇೞ್ದು ಮತ್ತಮಿಂತೆಂದರ್ ಮುನ್ನೆ ನೀನೀ ಭವದಿಂ ತೊಟ್ಟಯ್ದನೆಯ ಭವದೊಳ್ ವಾಯುಭೂತಿಯಪ್ಪಂದು ಮಾನಗರ್ವದಿಂ ಋಷಿಯರಂ ಬಯ್ದ ಪಾಪದ ಫಲದಿಂದಿಂತಪ್ಪ ದುಃಖಂಗಳನೆಯ್ದಿದೆ ಇನ್ ಮತ್ತಂ ಮಧುಮದ್ಯಮಾಂಸಂಗಳಂ ಭಕ್ಷಿಸಿ ತಿರಿಕ ಮನುಷ್ಯ ಭವಂಗಳೊಳಪ್ಪ

ಸುರಿಯಿತು. ಬಯಳ ಹೊತ್ತು ಅಲ್ಲಿದ್ದು, ಅಯ್ಯೋ ವಿಯೇ, ಈ ಸಂಸಾರವೇ! ಎಂದು ಭಿಕ್ಷೆಯೆತ್ತುವುದನ್ನೇ ಬಿಟ್ಟು ಬಂದೆನು*. ಹೀಗೆನ್ನಲು ಸೂರ್ಯಮಿತ್ರಯತಿಗಳು “ಆ ಹೆಂಗಸು ನಿಮ್ಮ ತಮ್ಮನಾದ ವಾಯುಭೂತಿಯ ಜೀವ* ಎಂದರು. ‘ಪೂಜ್ಯರೇ, ಅದು ಹೇಗೆ? ’ ಎಂದು ಕೇಳಿದಾಗ ಯತಿಗಳು ಹೀಗೆ ಹೇಳಿದರು – “ವಾಯುಭೂತಿ ತನ್ನದೊಂದು ಔದ್ಧತ್ಯದ ಗರ್ವದಿಂದ ನಮ್ಮನ್ನು ಹಳಿದು ಬೈದು ನುಡಿದ ಪಾಪದ ಪರಿಣಾಮವಾಗಿ ಏಳುದಿವಸದೊಳಗೆ ಔದುಂಬರ ಕುಷ್ಠರೋಗಕ್ಕೆ ಗುರಿಯಾಗಿ ಹುಳುವಾಗಿ ಯಾತನೆಪಟ್ಟು ಸತ್ತನು. ಮತ್ತೆ ಹೇಲುಹಂದಿಯಾಗಿ ಹುಟ್ಟಿ ಸತ್ತು ಹೆಣ್ಣು ಕತ್ತೆಯಾಗಿ ಹುಟ್ಟಿ ಸತ್ತು ಈಗ ಹುಟ್ಟುಗುರುಡಿಯಾಗಿ ಹೊಲೆಯರ ಮಗಳಾಗಿ ಆಕೆ ಹುಟ್ಟಿದ್ದಾಳೆ. ಆದುದರಿಂದ ಹಿಂದಿನ ಪ್ರೀತಿಯೇ ಕಾರಣವಾಗಿ ನಿಮಗೆ ಆ ಕೂಸಿನ ಮೇಲೆ ಪ್ರೀತಿಯುಂಟಾಯಿತು*. ಆಗ ಅಗ್ನಿಭೂತಿ ಮುನಿಗಳು – ಪೂಜ್ಯರೆ, ಅದೇನು ಭವ್ಯ (ಮೋಕ್ಷಕ್ಕೆ ಅರ್ಹವಾದ) ಜೀವನೋ ? ಅಭವ್ಯ ಜೀವನೋ ? – ಎಂದು ಕೇಳಿದರು. “ಅದು ಭವ್ಯಜೀವನವಾಗಿದೆ. ನೀವು ಉಪದೇಶ ಮಾಡಿದರೆ ಆಕೆ ವ್ರತಗಳನ್ನು ಸ್ವೀಕರಿಸುವಳು* ಎಂದು ಸೂರ್ಯಮಿತ್ರಾಚಾರ್ಯರು ಹೇಳಿದರು. ಅವರ ಅನುಮತಿ ಪಡೆದು ಅಗ್ನಿಭೂತಿ ಋಷಿಗಳು ಹೋಗಿ ತಮ್ಮ ಹಿಂದಿನ ಜನ್ನಾಂತರದ ಸಂಬಂಧವನ್ನೂ ಸೂರ್ಯಮಿತ್ರಋಷಿಗಳನ್ನು ತಿರಸ್ಕಾರದಿಂದ ಕೆಟ್ಟ ಮಾತಾಡಿದ ಪಾಪದ ಪರಿಣಾಮವಾಗಿ ಉಂಟಾದ ಜನ್ಮಗಳ ದುಃಖಗಳನ್ನೂ ಆ ಹೆಂಗಸಿಗೆ ಗೊತ್ತಾಗುವಂತೆ ತಿಳಿಸಿ ಆಮೇಲೆ ಹೀಗೆಂದರು – ನೀನು ಈ ಜನ್ಮದಿಂದ ಹಿಂದಿನ ಐದನೆಯ ಜನ್ಮದಲ್ಲಿ ವಾಯುಭೂತಿಯಾಗಿದ್ದಾಗ ಔದ್ಧತ್ಯಗರ್ವದಿಂದ ಋಷಿಗಳನ್ನು ನಿಂದಿಸಿದ ಪಾಪದ ಫಲದಿಂದ ಇಂತಹ ದುಃಖಗಳನ್ನು ಹೊಂದಿರುವೆ. ಅಲ್ಲದೆ, ಜೇನು – ಹೆಂಡ – ಮಾಂಸಗಳನ್ನು ಸೇವಿಸಿ ತಿರ್ಯಕ್ಕು – ಮನುಷ್ಯ

ದುಃಖಂಗಳನಂತನಂತಕಾಲಮನುಭವಿಸಿ ನೀಡಱೆಂದೆತ್ತಾನುಮಲ್ಲದೆ ಮನುಷ್ಯಭವಮಂ ಪೆಱದು ಪೆತ್ತೊಡಮಿಂತಾಗಿ ಪುಟ್ಟುಗುಂ –

ವೃತ್ತ || ವೈರೂಷ್ಯಂ ದರ್ಭಗತ್ವಂ ಕುಮತಿ ಕುಜನತಾಂ ಕುತ್ಸಿತತ್ವಂ ಕುಜಾತಿಂ
ಕ್ಷುತ್ತ*ಷ್ಣಾಪೀಡಿತತ್ವಂ ವಿರಸ ವಿಕಳತಾಂ ವ್ಯಾತಾಂ ಚಾಬಲತ್ವಂ

ಹೀನತ್ವಂ ಪ್ರೇಷಣತ್ವಂ ಲಘುತರಮರಣಂ ಶೋಕ ಕಾಂಕ್ಷಾಲಯತ್ವಂ
ಮಾಂಸಾಶೀ ಪ್ರಾಣಘಾತೀಹ್ಯನುಭವತಿ ಚಿರಂ ಪ್ರಾಪ್ಯ ಮಾನುಷ್ಯ ಜನ್ಮಂ ||

ಆರ್ಯೆ||        ಪಾಪತ್ ಕಿಲ ಜಾಯಂತೇ
ವಾಮನ ಪಂಗ್ವಂಧ ಕುಬ್ಜ ಖಂಜ ಕರಾಲಾಃ
ಜಡ ಬರ ಮೂಕ ಕೃಶ ರೋ
ಮಶ ವಕ್ರ ನಿಬಿಡಾಳಿಸ್ತೆ (?) ||

ವಸಂತ ತಿಲಕಂ ||      ಉದ್ದಂತ ಕುಬ್ಜ ಕುಣಿಕುಂಡ ಕರಾಳ ಕಾಣಾ ಃ
ಸಂಸ್ಥೂಲ ದೀರ್ಘ ಕೃಶರೋಮಶ ರೂಕ್ಷರೂಪಾಃ
ಕುಷ್ಠರ್ದಿತಾಃ ಕೃಪಣ ವಾಮನ ಪಾಮನಾಶ್ಚ
ಪಾಪೇನ ಪೂರ್ವಚರಿತೇನ ನರಾ ಭವನ್ತಿ ||

ಜನಗಳಲ್ಲಿ ಒದಗುವ ದುಃಖಗಳನ್ನು ಹಾಗೆಯೇ ಕೊನೆಯಿಲ್ಲದಷ್ಟು ಕಾಲವೂ ಅನುಭವಿಸಿ, ದೀರ್ಘಕಾಲದ ನಂತರವೂ ಮನುಷ್ಯಜನ್ಮ ಪ್ರಾಪ್ತವಾಗದು. ಒಂದು ವೇಳೆ ಮನುಷ್ಯ ಜನ್ಮ ದೊರೆತರೂ ಹೀಗೆ (ಹುಟ್ಟುಗುರುಡಿ – ದುರ್ಗಂಧೆ – ದುಸ್ವರೆ ಇತ್ಯಾದಿಯಾಗಿ) ಹುಟ್ಟಬೇಕಾಗುವುದು. ಅಂತಹ ಜೀವವು ಮನುಷ್ಯ eನ್ಮವನ್ನು ಪಡೆದು ವಿಕಾರ ರೂಪ, ಭಾಗ್ಯಹೀನತೆ, ಕೆಟ್ಟಬುದ್ದಿ, ಕೇಡಿಗತನ, ನೀಚಸ್ವಭಾವ, ಕೆಟ್ಟಜಾತಿ, ಹಸಿವು, ಬಾಯಾರಿಕೆಗಳಿಂದ ಪೀಡಿತವಾಗಿರುವುದು, ರಸಹೀನವಾದ ಮನೋದುಃಖಗಳು, ರೋಗ, ಶಕ್ತಿಹೀನತೆ, ಕೊರತೆ, ಅನ್ಯರ ಆಳುತನ, ಬರೇ ಹಗುರವಾದ ಸಾವು, ದುಃಖ, ದುರಾಶೆಗಳಿಗೆ ಆಶ್ರಯವಾಗಿರುವುದು, ಮಾಂಸಸೇವನೆ, ಜೀವಹಿಂಸೆ – ಇವನ್ನೆಲ್ಲ ಗಳಸಿಕೊಂಡು ಬಹುಕಾಲ ಇವನ್ನು ಅನುಭವಿಸಿಕೊಂಡು ಇರಬೇಕಾಗುವುದಲ್ಲವೆ? ಪಾಪದಿಂದಲೇ ಕುಳ್ಳರಾಗಿ, ಕೈಕಾಲಿಲ್ಲದವರಾಗಿ, ಕುರುಡರಾಗಿ, ಗಿಡ್ಡರಾಗಿ, ಕುಂಟರಾಗಿ, ಭಯಂಕರರಾಗಿ,ದಡ್ಡರಾಗಿ, ಕಿವುಡರಾಗಿ, ಮೂಕರಾಗಿ, ಕ್ಷೀಣರಾಗಿ, ಮೈಮೇಲೆಲ್ಲ ಕೂದಲುಳ್ಳವರಾಗಿ, ಡೊಂಕುಳ್ಳವರಾಗಿ – ಹುಟ್ಟುತ್ತಾರಲ್ಲವೆ? ಮನುಷ್ಯರು ಹಿಂದೆ ಮಾಡಿದ ಪಾಪಕರ್ಮದಿಂದ ಉಬ್ಬುಹಲ್ಲುಳ್ಳವರು, ಕುಬ್ಜರು, ಮೋಟುಗೈಯವರು, ಹಾದರಕ್ಕೆ ಹುಟ್ಟಿದವರು, ಒಂದೇ ಕಣ್ಣಿನವರು, ತುಂಬಾದಪ್ಪವಾದವರು, ಉಗ್ರವಾಗಿರುವರು, ಕೃಶವಾಗಿರುವವರು ಕಾಡುಗೂದಲುಳ್ಳವರು, ಒರಟುರೂಪದವರು, ಕುಷ್ಠರೋಗಪೀಡಿತರು, ಜಿಪುಣರು, ಕುಳ್ಳರು, ಚರ್ಮರೋಗ ಪೀಡಿತರು ಆಗಿ ಹುಟ್ಟುತ್ತಾರೆ. ಅಹಿಂಸೆ ಮೊದಲಾದ ವ್ರತಗಳನ್ನು ಆಚರಿಸದವನು – ನೀಚಕುಲೋತ್ಪನ್ನನು ಗೌರವ ಕಡಮೆಯಾದವನು, ತಿರಸ್ಕಾರಕ್ಕೆ ಗುರಿಯಾದ ವೈಭವವುಳ್ಳವನು, ಕೇಡಿಗನು, ಪಾಪಕೃತ್ಯವೆಸಗಿದವನು, ಕೊಳಕನು, ಕೆಟ್ಟನಾತವುಳ್ಳ್ಳವನು, ಮಂದಬುದ್ದಿಯವನು, ಕಿವುಡನು, ಹೆಳವನು, ಮೂಕ, ನಾಚಿಕೆಯಿಲ್ಲದವ, ಜಾರ, ಹೇಡಿ, ಅತ್ಯಾಶೆಯುಳ್ಳವ, ಕೆಟ್ಟವ, ಕಪಟ ಮನದವ,

ವೃತ್ತ || ಕುಲಹೀನಂ ದೀನಮಾನಂ ಪರಿಭವವಿಭವಂ ದುಷ್ಕೃತಂ ಪಾಪಕರ್ಮಂ
ಮಲಿನಂ ದುರ್ಗಂಧಗಂಧಂ ಜಡಮತಿ ಕಿವುಡಂ ಪಂಗು ಮೂಕು … ತಂ ನಾ
ಣಿಲಿ ಪಾಣ್ದಂ ಪಂದೆ ಲೋಭಂ ಖಳನಳಿಕಮನಂ ವಂಚಕಂ ನಿತ್ಯರೋಗಾ
ಕುಲನೆಂಬೀ ನಾಮ ನಾಮಾವಳಿಗೆ ನಿಳಯನಕ್ಕುಂ ವ್ರತವ್ರಾತಹೀನಂ ||

ಇಂತು ಪೂರ್ವಕೃತ ಪಾಪದ ಫಲದಿಂದಂ ವ್ರತಂಗಳಂ ಕೈಕೊಂಡೞೆದುದೞೆಂದಂ ಮನುಷ್ಯಜನ್ಮದೊಳ್ ಪುಟ್ಟಿಯಂ ದುಃಖಗಳನೆಯು ಗುಂ ಜೀವಂ ಮತ್ತೆ ಧರ್ಮದ ಫಲದಿಂದಂ

ವೃತ || ಶ್ರೀವಕ್ಷಶ್ಚಾರುರೂಪಂ ಕುಲ ಬಲ ವಿನಯಂ ಖ್ಯಾ ತಿ ದೀರ್ಘಾಯುಷತ್ವಂ
ಪೂಜಾಂ ದೇವಾಸುರೇಂದ್ರೈಃ ಸುರನರವನಿತಾ ಪ್ರೀತಿಮಷ್ಟಾಂಗ ಭೋಗಂ
ಸ್ವರ್ಗೇ ಮರ್ತ್ಯೇ ಲಭಂತೇ ದ್ಯುತಿ ಮತಿ ಪಟುತಾಂ ರಾಜರಾಜಶ್ರೀಯಂಚ
ಸೌಭಾಗ್ಯಂ ಪೂಜ್ಯವಾಕ್ಯಂ ಜಗತಿ ಮಧು ಸುರಾ ಮಾಂಸ ಸೇವಾನಿವೃತ್ತಾಃ ||

ಆರ್ಯೆ || ಪುಣ್ಯಾದುತ್ಪಾದ್ಯಂತೆ ಜೀವಾ ವಿಖ್ಯಾತ ವಿಪುಲ ವಂಶೇಷ್ವೇಕೇ
ದ್ಯುತಿ ಮತಿ ಧೃತಿ ಕಾಂತಿ ಶ್ರೀ ಹ್ರೀ ರೂಪಾರೋಗ್ಯ ಸತ್ವಬಲ ಸಂಪನ್ನಾಃ
ಆಜ್ಞಾ ಯಶೋ ಧೃತಿ ಮತಿ ದ್ಯುತಿ ಕಾಂತಿ ಲಕ್ಷ್ಮೀ
ಶೌರ್ಯ ಪ್ರತಾಪ ಪರಿವಾರ ಧನೋಪಭೋಗಾಃ
ತೇ ಲೋಕವೇದ ಸಮಯೇಷು ಸುನಿಶ್ಚಯೇನ
ಪುಣೋದಯೇನ ಸುಲಭಾ ಇತಿ ವರ್ಣಯಂತಿ ||

ಮೋಸಗಾರ ಯಾವಾಗಲೂ ರೋಗಿ, – ಎಂಬೀ ನಾಮಾವಗಳಿಗೆ ಆಶ್ರಯಸ್ಥಾನವಾಗುತ್ತಾನೆ. ಈ ರೀತಿಯಾಗಿ ಹಿಂದೆ ಮಾಡಿದ ಪಾಪದ ಪರಿಣಾಮವಾಗಿ ವ್ರತಗಳನ್ನು ಸ್ವೀಕರಿಸಿ ಸತ್ತುದರಿಂದ ಮನುಷ್ಯ ಜನ್ಮದಲ್ಲಿ ಬಂದರೂ ಜೀವನು ದುಃಖಗಳನ್ನು ಹೊಂದುವನು. ಆಮೇಲೆ ಧರ್ಮಾಚರಣೆಯಿಂದ ಏನಾಗುವುದೆಂದರೆ – ಲೋಕದಲ್ಲಿ ಜೇನು, ಮದ್ಯ, ಮಾಂಸಗಳನ್ನು ತಿನ್ನದೆ ಬಿಟ್ಟವರು – ಸಂಪದ್ಯುಕ್ತವಾದ ಎದೆ, ಮನೋಹರವಾದ ರೂಪ, ಕುಲ – ಬಲ – ವಿನಯಗಳು, ಕೀರ್ತಿ, ದೀರ್ಘಾಯುಷ್ಯ, ಇಂದ್ರನಿಂದಲೂ ರಾಕ್ಷಸರಾಜರಿಂದಲೂ ಪೂಜೆ, ದೇವತಾಸ್ತ್ರೀಯರ ಪ್ರೇಮ, ಅನ್ನ – ನೀರು, ತಾಂಬೂಲ, ಪುಷ್ಪ, ಚಂದನ, ವಸ್ತ್ರ, ಶಯ್ಯೆ, ಅಲಂಕಾರ ಎಂಬ ಎಂಟು ಬಗೆಯ ಸುಖ, ಕಾಂತಿಯುಕ್ತವಾದ ಬುದ್ದಿಶಕ್ತಿ, ಕುಬೇರನ ಐಶ್ವರ್ಯ, ಸಂಪತ್ತು, ಗೌರವಯುಕ್ತವಾದ ಮಾತು – ಇವನ್ನು ಸ್ವರ್ಗ ಮರ್ತ್ಯಗಳೆರಡರಲ್ಲಿಯೂ ಪಡೆಯುವರು. ಮನುಷ್ಯರು ಪುಣ್ಯ ಸಂಪಾ ನೆಯಿಂದಲೇ ಪ್ರಸಿದ್ದವೂ ವಿಸ್ತಾರವೂ ಆಗಿರುವ ವಂಶಗಳಲ್ಲಿ ಒಂದರಲ್ಲಿ, ಪ್ರಕಾಶಯುಕ್ತವಾದ ಬುದ್ದಿಯಿಂದಲೂ ಸ್ಥಿರತೆಯಿಂದಲೂ ತೇಜಸ್ಸಿನಿಂದಲೂ ಐಶ್ವರ್ಯದಿಂದಲೂ ಲಜ್ಜಾಗುಣದಿಂದಲೂ ಆಕಾರ ಆರೋಗ್ಯ ಸತ್ವಗುಣ ಶಕ್ತಿಗಳಿಂದಲೂ ಕೂಡಿದವರಾಗಿ ಹುಟ್ಟುತ್ತಾರೆ. ಲಾಕಿಕ ವೈದಿಕ ಸಂಪ್ರದಾಯಗಳಲ್ಲಿ ಆಜ್ಞೆಮಾಡುವ ಅಕಾರವೂ ಕೀರ್ತಿಯೂ ಸ್ಥಿರಬುದ್ದಿಯೂ ಬುದ್ದಿಪ್ರಕಾಶವೂ ತೇಜಸ್ಸೂ ಐಶ್ವರ್ಯವೂ ಪರಾಕ್ರಮ ಪ್ರತಾಪಗಳೂ ಸೇವಕರು ಐಶ್ವರ್ಯ ಮುಂತಾದ ಸುಖಗಳೂ ಅತ್ಯಂತ ನಿಶ್ಚಯವಾದ ಪುಣ್ಯದ ಏಳಿಗೆಯಿಂದ ಸುಲಭವಾಗಿ ದೊರೆಯುವುವು ಎಂದು

ವರ ಯುವತಿ ಭವನ ವಾಹನ ನಾಟಕ ಧನಕನಕ ರಜತಮಣಿ ಸುರಥಾಃ
ಅತಿ ಲಲಿತ ತುರಗ ಮದ ದಳಿತ ನಾಗ ಭೃತ್ಯಾ ಭವಂತಿ ಧರ್ಮೇ ಣ ||

ಇಂತು ಧರ್ಮದ ಫಲದಿಂದ ದೇವಲೋಕದ ಮನುಷ್ಯಲೋಕದ ಸುಖಂಗಳನನುಭವಿಸಿ ಬೞೆಕ್ಕೆ ನಿರ್ವಾಣಸುಖಮನೆಯ್ದುಗುಂ ಜೀವಮಿನ್ನಾ ಧರ್ಮಮೆಂಬುದೆಂತೆಂದೊಡೆ –

ಗಾಹೆ || ಸೋ ಧಮ್ಮೋ ಜತ್ಥ ದಯಾ ಸೋವಿ ತೋ ವಿಸಯಣಿಗ್ಗಹೋ ಜತ್ಥ
ದಸ ಆಟ್ಠ ದೋಸರಹಿ ಓ ಸೋದೇವೋ ಣತ್ಥಿ ಸಂದೇಹೋ ||

ಎಂದಿಂತು ಪದಿನೆಂಟು ದೋಷಂಗಳನಿಲ್ಲದೊಂ ದೇವನಂತಪ್ಪ ದೇವನ ಪೇೞ್ದುದಾಗಮ ಮೆಂಬುದಕ್ಕುಮಾ ಆಗಮಂ ಪೇೞ್ದಂತು ಬಾಹ್ಯಾಭ್ಯಂತರ ಪರಿಗ್ರಹಂಗಳೆಲ್ಲಮಂ ತೊಱೆದು ದ್ವಾದಶವಿಧಮಪ್ಪ ತಪದೊಳ್ ನೆಗೞ್ದು ಆಯ್ದುಮಿಂದ್ರಿಯಂಗಳಂ ಗೆಲ್ದು ಪಸಿವುಂ ನೀರೞ್ಕೆ ಮೊದಲಾಗೊಡೆಯ ಇಪ್ಪತ್ತೆರಡು ಪರೀಷಹಂಗಳಂ ಸೈರಿಸಿ ಯಮ ನಿಯಮ ಸ್ವಾಧ್ಯಾಯ ಧ್ಯಾನಾನುಷ್ಠಾನ ನಿರತರಾಗಿ ತಪಂಗೆಯ್ದ ಋಷಿಯರ್ಕಳ್ ತಪೋಧನರು ಕೊಲ್ಲದುದೆ ಧರ್ಮಮೆಂದಿಂತು ನಂಬಿ ವ್ರತಂಗಳಂ ಕೈಕೊಂಡು ನೆಗೞ್ವುದು ಧರ್ಮಮೆಂಬುದಕ್ಕುಂ – ಎಂದಗ್ನಿಭೂತಿರಿಸಿಯರ್ ತಿಳಿಯೆ ಧರ್ಮಮಂ ಪೇೞ್ದೊಡೆರ್ದೆಯೊಳ್ ಮೆಲ್ಲಿದಳಾಗಿ ತನ್ನ ಭವಾಂತರಂಗಳಂ ಧರ್ಮಮುಮಂ ಕೇಳ್ದಱೆದು ಸಂಸಾರ ಶರೀರ ವೈರಾಗ್ಯಮಾದಮಾನುಂ ಪೆರ್ಚೆ ತನ್ನಂ ತಾನೆ ಪೞೆದು ನಿಂದಿಸಿ ಪಾಪಕ್ಕಂಜಿ ಅಣುವ್ರತಂ

ವರ್ಣಿಸುತ್ತಾರೆ. ಧರ್ಮದಿಂದ ಶ್ರೇಷ್ಠಳಾದ ಸ್ತ್ರಿ, ಮನೆ, ವಾಹನಗಳು, ನೃತ್ಯಗಳು, ಐಶ್ವರ್ಯ, ಚಿನ್ನ, ಬೆಳ್ಳಿ, ರತ್ನ, ಒಳ್ಳೆಯ ರಥಗಳು, ಬಹಳ ಸುಂದರವೂ ಎತ್ತರವೂ ಆಗಿ ಮದಜಲದಿಂದ ಬೀಗಿದ ಆನೆಗಳು, ಸೇವಕರು – ಈ ಎಲ್ಲವೂ ದೊರೆಯುತ್ತವೆ. ಹೀಗೆ ಧರ್ಮದ ಫಲದಿಂದ ಜೀವವು ಸ್ವರ್ಗ ಮರ್ತ್ಯಗಳ ಸುಖವನ್ನು ಅನುಭವಿಸಿದ ಮೇಲೆ ಮೋಕ್ಷದ ಸುಖವನ್ನು ಪಡೆಯುವುದು. ಇನ್ನು ಆ ಧರ್ಮವೆಂಬುದು ಹೇಗೆಂದರೆ – ಎಲ್ಲಿ ದಯೆ ಇದೆಯೋ ಅದು ಧರ್ಮವು ಮತ್ತು ಎಲ್ಲಿ ಇಂದ್ರಿಯನಿಗ್ರಹವಿದೆಯೋ ಅದು ಕೂಡ ಧರ್ಮವು. ಹದಿನೆಂಟು ದೋಷಗಳಿಲ್ಲದವನು ದೇವನು. ಇದರಲ್ಲಿ ಸಂಶಯವಿಲ್ಲ. ಈ ರೀತಿಯಾಗಿ ಹಸಿವು, ಬಾಯಾರಿಕೆ, ಹೆದರಿಕೆ, ಹಗೆತನ, ಪ್ರೀತಿ, ಮೋಹ, ಚಿಂತೆ, ಮುಪ್ಪು, ರೋಗ, ಮರಣ, ಬೆವರು, ಖೇದ, ಮದ, ರತಿ, ಆಶ್ಚರ್ಯ, ಜನನ, ನಿದ್ರೆ, ವಿಷಾದ ಎಂಬೀ ಹದಿನೆಂಟು ದೋಷಗಳಿಲ್ಲದವನು ದೇವನು. ಅಂತಹ ದೇವನು ಹೇಳಿದುದು ಶಾಸ್ತ್ರವೆನಿಸುವುದು. ಆ ಶಾಸ್ತ್ರ ಹೇಳಿದಂತೆ ಬಾಹ್ಯ ಮತ್ತು ಆಭ್ಯಂತರ ಎಂಬ ಪರಿಗ್ರಹಗಳೆಲ್ಲವನ್ನೂ ಬಿಟ್ಟು ಹನ್ನೆರೆಡು ತೆರನಾದ ತಪ್ಪಸ್ಸಿನಲ್ಲಿ ಪ್ರಖ್ಯಾತನಾಗಿ ಪಂಚೇಂದ್ರಿಯಗಳನ್ನು ಗೆದ್ದು ಹಸಿವು ಬಾಯಾರಿಕೆ ಮುಂತಾದ ಇಪ್ಪತ್ತೆರಡು ಪರೀಷಹಗಳನ್ನು ಸಹಿಸಿ, ಯಮ, ನಿಯಮ, ಸ್ವಾಧ್ಯಾಯ, ಧ್ಯಾನಗಳ ಆಚರಣೆಯಲ್ಲಿ ತತ್ಪರರಾಗಿ ತಪಸ್ಸನ್ನು ಮಾಡುವ ಋಷಿಗಳು ತಪಸ್ಸೇ ಐಶ್ವರ್ಯವಾಗಿರುವವರು. ಕೊಲ್ಲದಿರುವುದೇ ಧರ್ಮ – ಹೀಗೆ ನಂಬಿಕೊಂಡು ವ್ರತಗಳನ್ನು ಸ್ವೀಕರಿಸಿ ಆಚರಿಸುವುದು ಧರ್ಮವು. ಎಂದು ಅಗ್ನಿಭೂತಿಋಷಿ ಆಕೆ ತಿಳಿಯುವಂತೆ ಧರ್ಮವನ್ನು ತಿಳಿಸಿದನು. ಆಗ ಅವಳು ಹೃದಯದಲ್ಲಿ ಮೃದುತ್ವವನ್ನು ತಾಳಿ, ತನ್ನ ಜನ್ಮಾಂತರಗಳನ್ನೂ ಧರ್ಮವನ್ನೂ ಕೇಳಿ ತಿಳಿದುಕೊಂಡು, ಸಂಸಾರದಲ್ಲಿಯೂ ತನ್ನ ಶರೀರದಲ್ಲಿಯೂ ಅತ್ಯಂತ ವೈರಾಗ್ಯಭಾವವು ಹೆಚ್ಚಾಗಲು, ತನ್ನನ್ನು

ಮೊದಲಗೊಡೆಯ ಶ್ರಾವಕಬ್ರತಂಗಳಂ ಕೈಕೊಂಡಾಗಳ್ ಭಟ್ಟಾರರುಂ ದೃಢವ್ರತೆಯಾಗು ಕರ್ಮಕ್ಷಯಮಕ್ಕೆಂದು ಪರಸಿ ತಮ್ಮಾವಾಸಕ್ಕೆ ಪೋದರಿತ್ತ ಜಾತ್ಯಂಧೆಯಪ್ಪ ಕೂಸುಮಹಿಂಸಾದಿ ವ್ರತಗಳಂ ಮೇಲ್ಕೊಂಡು ತನ್ನ ಮನೆಗೆ ಪೋಪಾಗಳ್ ಆನ್ನೆಗಂ ಎಡೆಯೆಳರಸನ ಪುರೋಹಿತಂ ಸೋಮಶರ್ಮನೆಂಬೊಂ ತನ್ನ ಪರಿವಾರಂ ಬೆರಸು ಮಹಾವಿಭೂತಿ ವಿಸ್ತಾರದಿಂದಿಂ ಪಿರಿದು ಪೂಜೆಯಂ ಕೊಂಡು ಮಕ್ಕಳಂ ಬೇಡಿ ಸಂಬರನಾಗಠಾಣಕ್ಕೆ ಪರಕೆಗುಡಲ್ ಪೋಪುದಂ ತನ್ನೊಡವೋಪ ಪೊಲೆಯರ ಕೂಸುಗಳ್ ಕಂಡು ತನಗೆ ವ್ಯಾವರ್ಣಿಸಿ ಪೇೞೆ ಕೇಳ್ದದಱೊಳ್ ಮನಮಿಟ್ಟುಮವರ್ಗ್ಗೆ ಸತ್ತು ಪುಟ್ಟುವೆನಕ್ಕೆಂದು ಭೋಗಾಸಕ್ತೆಯಾಗಿ ನಿದಾನಂಗೆಯ್ದು ಮನೆಗೆವೋಗಿ ಇರ್ಪನ್ನೆಗಮಾಯಿರುಳೊಳೆ ಪಾವು ಕೊಳೆ ಸತ್ತು ಚಂಪಾನಗರಮನಾಳ್ವೊಂ ಚಂದ್ರವಾಹನನೆಂಬೊನರಸನಾತನ ಮಹಾದೇವಿ ಚಂದ್ರಮತಿಯೆಂಬೊಳವರ ಪುರೋಹಿತಂ ಸೋಮಶರ್ಮನೆಂಬೊಂ ಭಟ್ಟನಾತನ ಪಾರ್ವಂತಿ ತ್ರಿವೇದಿಯೆಂಬೊಳಾಯಿರ್ವರ್ಗ್ಗಂ ನಾಗಶ್ರೀಯೆಂಬೊಳ್ ಮಗಳಾಗಿ ಪುಟ್ಟಿದೊಳತ ಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿಯನೊಡೆಯಳ್ ಜನಂಗಳ್ಗೆಲ್ಲಮಾದಮಾನುಂ ಸೊಗಯಿಸುವಳ್ ನಾಗರ್ಗೆ ಪರಸಿ ಪೆತ್ತರಪ್ಪುದಱೆಂ ನಾಗಶ್ರೀಯೆಂದು ಪೆಸರನಿಟ್ಟರ್ ಮತ್ತಿತ್ತ ಸೂರ್ಯಮಿತ್ರಾಚಾರ್ಯರ್ ಅಗ್ನಿಭೂತಿ ಋಷಿಯರುಮಂತಿರ್ವರುಂ ಚಂಪಾನಗರಮಂ ಪೊಱಮಟ್ಟು ಗ್ರಾಮ ನಗರ ಖೇಡ ಖರ್ವಡ