ತಾನೇ ಹಳಿದುಕೊಂಡಳು. ಪಾಪಕ್ಕೆ ಹೆದರಿ ಅಣುವ್ರತವೇ ಮೊದಲಾದ ಶ್ರಾವಕ ವ್ರತಗಳನ್ನು ಕೈಕೊಂಡಳು. ಆಗ ಅಗ್ನಿಭೂತಿ ಋಷಿಗಳು “ನೀನು ದೃಢವಾದ ವ್ರತವುಳ್ಳವಳಾಗು, ನಿನ್ನ ಕರ್ಮ ನಾಶವಾಗಲಿ* ಎಂದು ಆಶೀರ್ವದಿಸಿ ತಮ್ಮ ವಾಸಸ್ಥಾನಕ್ಕೆ ತೆರಳಿದರು. ಇತ್ತ ಹುಟ್ಟುಗುರುಡಿಯಾದ ಆ ಹೆಂಗಸು ಅಹಿಂಸೆ ಮೊದಲಾದ ವ್ರತಗಳನ್ನು ಸ್ವೀಕರಿಸಿ ತನ್ನ ಮನೆಗೆ ತೆರಳುತ್ತಿದ್ದಳು. ಆಗ ಅಷ್ಟರಲ್ಲಿ ರಾಜಪುರೋಹಿತನಾದ ಸೋಮಶರ್ಮನೆಂಬವನು ತನ್ನ ಪರಿವಾರದೊಂದಿಗೆ ಮಹಾವೈಭವದಿಂದ ಹೆಚ್ಚಾದ ಪೂಜಾದ್ರವ್ಯಗಳನ್ನು ತೆಗೆದುಕೊಂಡು ತನಗೆ ಮಕ್ಕಳನ್ನು ಕೊಡಬೇಕೆಂದು ಪ್ರಾರ್ಥಿಸುತ್ತ ಶಂಬರ ನಾಗಸ್ಥಾನಕ್ಕೆ ಹರಕೆಯನ್ನೊಪ್ಪಿಸಲು ಹೋಗುತ್ತಿದ್ದನು. ಅದನ್ನು ತನ್ನೊಡನೆ ಬರುತ್ತದ್ದ ಹೊಲೆಯರ ಹೆಂಗಸರು ಕಂಡು ತನಗೆ ವಿವರಿಸಿ ಹೇಳಲು ಆ ಕುರುಡಿಯು ಕೇಳಿ ಅದರಲ್ಲೇ ಮನಸ್ಸಿಟ್ಟು ತಾನು ಸತ್ತು ಅವರಿಗೆ ಹುಟ್ಟುವಂತಾಗಲಿ ಎಂದ ಮನದಲ್ಲಿ ಅಭಿಲಾಷೆಗೊಂಡು ಸಂಕಲ್ಪಿಸಿಕೊಂಡು ಮನೆಗೆ ಹೋದಳು. ಮನೆಯಲ್ಲಿ ಆಕೆ ಇರುತ್ತ ಅಂದಿನ ರಾತ್ರಿಯೆ ಹಾವು ಕಚ್ಚಿ ಸತ್ತಳು. ಚಂಪಾನಗರವನ್ನು ಆಳುವ ಚಂದ್ರವಾಹನನೆಂಬ ರಾಜನಿಗೆ ಚಂದ್ರಮತಿ ಎಂಬುವಳು ಪಟ್ಟದ ರಾಣಿ. ಅವರ ಪುರೋಹಿತನು ಸೋಮಶರ್ಮನೆಂಬ ಭಟ್ಟನು. ಅವನ ಹೆಂಡತಿ ತ್ರಿವೇದಿಯೆಂಬಾಕೆ. ಆ ಇರ್ವರಿಗೆ ಇವಳು ನಾಗಶ್ರೀ ಎಂಬ ಹೆಸರಿನ ಮಗಳಾಗಿ ಹುಟ್ಟಿದಳು. ಇವಳು ಅತಿಶಯವಾದ ರೂಪ – ಲಾವಣ್ಯ ಸೌಭಾಗ್ಯ ಕಾಂತಿಯಿಂದ ಕೂಡಿದವಳಾಗಿ ಜನರಿಗೆಲ್ಲ ಅತ್ಯಂತ ಸುಂದರಿಯಾಗಿ ಕಾಣಿಸುತ್ತಿದ್ದಳು. ನಾಗದೇವತೆಗಳಿಗೆ ಹರಕೆ ಸಲ್ಲಿಸಿ, ಆಕೆಯನ್ನು ಪಡೆದುದರಿಂದ ಅವಳಿಗೆ ನಾಗಶ್ರೀ ಎಂದು ಹೆಸರನ್ನಿಟ್ಟರು. ಆಮೇಲೆ ಇತ್ತ ಸೂರ್ಯಮಿತ್ರಾಚಾರ್ಯರೂ ಅಗ್ನಿಭೂತಿ ಋಷಿಗಳೂ ಚಂಪಾನಗರದಿಂದ ಹೊರಟರು. ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪತ್ತನ, ದ್ರೋಣಾಮುಖಗಳನ್ನು

ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತಂ ಏೞೆಂಟು ವರ್ಷದಿಂ ಮಗುೞ್ದು ಚಂಪಾನಗರಕ್ಕೆ ವಂದು ಪೊಱವೊೞಲೊಳುದ್ಯಾನವನದೊಳ್ ಕಂಬಳನಾಗಂ ಶಂಬರನಾಗಂ ಪಾಂಡುಕನಾಗಮೆಂದೀ ನಾಗರ ಪೆಸರನೊಡೆಯ ಮುನ್ನಿರ್ದ್ದ ನಾಗಠಾಣದೊಳ್ ಬಂದಿರ್ದ್ದರ್ ಅನ್ನೆಗಂ ನಾಗಶ್ರೀಯುಂ ಪಂಚಮಿಯಂದು ಮಂತ್ರಿಯರ್ಕ್ಕಳ ಪೆರ್ಗಡೆಗಳ ರಾಜಶ್ರೇಷ್ಠಿಯರ ಪ್ರಧಾನರಪ್ಪ ನಿಯೋಗಿಗಳ ಪಲಂಬರುಂ ಪೆಣ್ಗೂಸುಗಳ್ವೆರಸು ಪರಿದುಮರ್ಚನೆಯಂ ಕೊಂಡು ನಾಗಠಾಣಕ್ಕ ಪೋಗಿ ನಾಗರನರ್ಚಿಸಿ ಪೊಡೆವಟ್ಟು ಸೂರ್ಯಮಿತ್ರಾಚಾರ್ಯರುಮನಗ್ನಿಭೂತಿ ರುಷಿಯರುಮಂ ಕಂಡು ಜಾತಿಸ್ಮರೆಯಾಗಿ ತನ್ನ ಮುನ್ನಿನ ಪೊಲತಿಯಾಗಿ ಪುಟ್ಟಿದ ಭವಮನಱೆದು ಭಟ್ಟಾರರ ಕಾಲ್ಗೆಱಗಿ ಪೊಡೆವಟ್ಟು ಕುಳ್ಳಿರ್ದಾಗಳಾ ಕೂಸಂ ಕಂಡು ಅಗ್ನಿಭೂತಿರುಷಿಯರ್ಗತಿ ಸ್ನೇಹವಾಗಿ ತಮ್ಮ ಗುರುಗಳು ಸೂರ್ಯಮಿತ್ರಾಚಾರ್ಯರನಿಂತೆಂದು ಬೆಸಗೊಂಡರ್ ಭಟ್ಟಾರಾ ಈ ಕೂಸಿನ ಮೇಗೆಮಾಗಾದಮಾನುಂ ಮೋಹಮಾದುದರ್ಕೆ ಕಾರಣಮೇನೆಂದು ಬೆಸಗೊಂಡೊಡೆ ಭಟ್ಟಾರರವeನಮಂ ಪ್ರಯೋಗಿಸಿ ಇಂತೆಂದು ಪೇೞರ್ – ಈ ಕೂಸೆಂಬುದು ನಿಮ್ಮ ತಮ್ಮನಪ್ಪ ವಾಯೂಭೂತಿಯ ಜೀವಂ ಅಭಿಮಾನಂ ಕಾರಣಮಾಗೆಮ್ಮನುಱದೆ ಪರಿಭವಿಸಿ ಬಾಯ್ಗೆವಂದುದನೆ ಪೊಲ್ಲಮೆಯ ಬಯ್ಗುಳಂ ಬಯ್ದುಮಾ ಪಾಪದ ಫಲದಿಂದಮೇೞುದಿವಸದಿಂದೊಳ ಗೌದುಂಬರಕುಷ್ಠಮಾಗಿ ಪುೞೆತು ಸತ್ತು ಕೌಸಂಬಿಯೊಳೆ ಲಂಗಿಗರ ಮನೆಯೊಳ್ ಪೆಣ್ಗತ್ತೆಯಾಗಿ

ಸಂಚರಿಸುತ್ತಾ ಏಳೆಂಟು ವರ್ಷಗಳು ಕಳೆಯಲು ಮರಳಿ ಚಂಪಾನಗರಕ್ಕೆ ಬಂದರು. ಆ ಪಟ್ಟಣದ ಹೊರಗಿನ ಉದ್ಯಾನದಲ್ಲಿ ಕಂಬಳನಾಗ, ಶಂಬರನಾಗ, ಪಾಂಡುಕನಾಗ – ಎಂಬುದಾಗಿ ನಾಗರ ಹೆಸರನ್ನುಳ್ಳ ಮತ್ತು ಅವರು ಹಿಂದೆ ಇದ್ದ ನಾಗಸ್ಥಾನದಲ್ಲಿ ಅವರು ಬಂದು ಇದ್ದರು. ಆ ವೇಳೆಗೆ ಸರಿಯಾಗಿ ನಾಗಶ್ರೀಯು ನಾಗರ ಪಂಚಮಿಯಂದು ಮಂತ್ರಿಗಳ ಹೆಗ್ಗಡೆಗಳ ರಾಜರಂತಿರುವ ಶೆಟ್ಟಿಯರ ಹಾಗೂ ಮುಖ್ಯಸ್ಥರಾದ ಅಕಾರಿಗಳ ಹಲವು ಮಂದಿ ಹೆಣ್ಣುಮಕ್ಕಳನ್ನು ಕೂಡಿಕೊಂಡು ಹೆಚ್ಚಾದ ಪೂಜಾವಸ್ತುಗಳನ್ನು ತೆಗೆದುಕೊಂಡು ನಾಗಸ್ಥಾನಕ್ಕೆ ಹೋದಳು. ನಾಗರನ್ನು ಪೂಜಿಸಿದಳು. ಸಾಷ್ಟಾಂಗ ವಂದನೆ ಮಾಡಿದಳು. ಸೂ ರ್ಯಮಿತ್ರಾಚಾರ್ಯರನ್ನೂ ಅಗ್ನಿಭೂತಿಋಷಿಗಳನ್ನೂ ಕಂಡು ತನ್ನ ಪೂರ್ವಜನ್ಮದ ಸ್ಮರಣೆಯನ್ನು ತಾಳಿದಳು. ಅವಳು ಹಿಂದಿನ ಜನ್ಮದಲ್ಲಿ ಹೊಲತಿಯಾಗಿ ಹುಟ್ಟಿದುದನ್ನು ತಿಳಿದು, ಆಚಾರ್ಯರ ಪಾದಕ್ಕೆ ಸಾಷ್ಟಾಂಗ ವಂದಿಸಿ ಕುಳಿತುಕೊಂಡಳು. ಆಗ ಆ ಹೆಂಗಸನ್ನು ನೋಡಿ ಅಗ್ನಿಭೂತಿಋಷಿಗಳಿಗೆ ಬಹಳ ಪ್ರೀತಿಯುಂಟಾಗಿ ತಮ್ಮ ಗುರುಗಳಾದ ಸೂರ್ಯಮಿತ್ರಾರ್ಚಾರೊಡನೆ ಹೀಗೆ ಕೇಳಿದರು – “ಸ್ವಾಮಿಗಳೇ, ಈ ಹೆಂಗಸಿನ ಮೇಲೆ ನನಗೆ ಅತ್ಯಂತ ಪ್ರೀತಿಯುಂಟಾಗಲು ಕಾರಣವೇನು? *ಹೀಗೆ ಕೇಳಿದಾಗ ಸೂರ್ಯಮಿತ್ರಾಚಾರ್ಯರು ತಮಗಿದ್ದ ಅವeನ (ತ್ರಿಕಾಲeನ)ವನ್ನು ಉಪಯೋಗಿಸಿ ಸಂಗತಿಯನ್ನು ತಿಳಿದು ಹೀಗೆ ಹೇಳಿದರು. “ಈ ಹೆಂಗಸೆಂಬುದು ನಿಮ್ಮ ತಮ್ಮನಾದ ವಾಯುಭೂತಿಯ ಜೀವವು. ತನ್ನ ಗರ್ವದ ಕಾರಣದಿಂದ ನಮ್ಮನ್ನು ಅಲಕ್ಷ್ಯಮಾಡಿ ಅವಮಾನಿಸಿ ಬಾಯಿಗೆ ಬಂದ ಹೊಲಸಿನ ಬೈಗುಳನ್ನು ಬಯ್ದಿದ್ದನು. ಹಾಗೆ ಬೈದ ಆ ಪಾಪದ ಪರಿಣಾಮವಾಗಿ ಏಳು ದಿವಸದೊಳಗೆ ಔದುಂಬುರ ಕುಷ್ಠರೋಗಕ್ಕೆ ಗುರಿಯಾಗಿ ಹುಳುವಾಗಿ ಸತ್ತನು. ಈ ಜೀವವು ಮತ್ತೆ ಕೌಶಂಬಿ ಪಟ್ಟಣದಲ್ಲಿ ಡೊಂಬರ ಮನೆಯಲ್ಲಿ ಹೆಣ್ಣು ಕತ್ತೆಯಾಗಿ ಹುಟ್ಟಿ ಹೊರೆಗಳನ್ನು ಹೊತ್ತುಕೊಂಡು ಹೋಗಿ ಬೆನ್ನಿನಲ್ಲಿ

ಪಿರಿಯ ಪೊಱೆಗಳಂ ಪೊತ್ತು ಪೋಗಿ ಬೆನ್ನೊಳ್ ಕಱುಮೆಯಾಗಿ ನಾಳಿಬಿರ್ದು ಪುೞೆತು ನಮೆದು ಸತ್ತು ಪೇಪಂದಿಯಾಗಿ ಪುಟ್ಟಿ ಸತ್ತು ಪೆಣ್ಣಾಯಾಗಿ ಪುಟ್ಟಿ ಸತ್ತು ಮತ್ತೀ ಚಂಪಾನಗರದೊಳ್ ಮಾದೆಗರ್ಗೆ ಪ್ರಧಾನನಪ್ಪ ನೀಳನೆಂಬ ಮಾದೆಗಂಗಂ ಕೇಶಿಯೆಂಬ ಮಾದೆಗಿಗಂ ಧುರೂಪೆ ದುರ್ಗಂಧೆ ದುಸ್ವರ ಜಾತ್ಯಂಧೆ ಪೊಲೆಯರ್ಗ್ಗೆ ಮಗಳಾಗಿ ಪುಟ್ಟಿ ನೀವು ಪ್ರತಿಬೋಸೆ ವ್ರತಂಗಳಂ ಕೈಕೊಂಡು ನಿದಾನಂಗೆಯ್ದು ಪಾವು ಕೊಳೆ ಸತ್ತು ಪುರೋಹಿತಂ ಸೋಮಶರ್ಮಂಗಂ ತ್ರಿವೇದಿಗಂ ಪುಟ್ಟಿದ ನಾಗಶ್ರೀಯೆಂಬೊಳ್ ಮಗಳಾದಳದಱಂ ನಿಮಗೀ ಕೂಸಿನ ಮೇಗತಿಸ್ನೇಹಮಾದುದೆಂದು ಪೇೞ್ದುದೆಲ್ಲಮಂ ನಾಗಶ್ರೀ ಕೇಳ್ದು ಕಱದಯ್ದುಭವಂಗಳುಂ ತನಗೆ ಪ್ರತ್ಯಕ್ಷಮಾದಂತಱದು ಭಟಾರರ ಕಾಲ್ಗೆಱಗಿ ಪೊಡೆವಟ್ಟು ಧರ್ಮಮಂ ಬೆಸಗೊಂಡು ಕೇಳ್ದಣುವ್ರತಂ ಮೊದಲಾಗೊಡೆಯ ಶ್ರಾವಕವ್ರತಂಗಳಂ ಸಮ್ಯಕ್ತ್ವಪೂರ್ವಕಂ ಕೈಕೊಂಡು ವಂದಿಸಿ ಮನೆಗೆ ಪೋಪಾಗಳ್ ಭಟ್ಟಾರರ್ ಮಗಳೆ ಎಮ್ಮ ಕೊಟ್ಟ ಬ್ರತಂಗಳಂ ನಿಮ್ಮಮ್ಮಂ ಬಿಸುಡಲ್ಲೇೞ್ದನಪ್ಪೊಡೆ ಪೆಱವುಱವಿಸುಡದಿರೆಮ್ಮಲ್ಲಿಗೆ ವಂದೆಮ್ಮ ಕೊಟ್ಟ ಬ್ರತಮಗಳನೆಮಗೊಪ್ಪಿಸುವುದೆನೆ ಕೇಳ್ದಂತೆಗೆಯ್ವೆನೆಂದು ಮನೆಗೆ ವೋದೊಡೊಡನೆಯ ಕೂಸುಗಳ್ ಸೋಮಶರ್ಮಭಟ್ಟಂಗೆ – ನಿಮ್ಮ ಮಗಳ್ ರಿಸಿಯರ ಪಕ್ಕದೆ ಶ್ರಾವಕಬ್ರತಂಗಳಂ ಕೈಕೊಂಡು ಬಂದಳೆನೆ ಭಟ್ಟಂ ಕೇಳ್ದು ಮಗಳೆ ನಾಗಶ್ರೀ ನಾಮುಂ ಪಾರ್ವರೆಮುಂ ಲೋಕಕ್ಕೆಲ್ಲಮಗ್ಗಳಂ ಲೋಕದಿಂದಂ

ಹೆಚ್ಚಾದ ಒಡಕು ಬಿದ್ದು ಹುಳುವಾಗಿ, ಯಾತನೆ ಪಟ್ಟು ಸತ್ತಿತು. ಮುಂದಿನ ಜನ್ನದಲ್ಲಿ ಹೇಲು ಹಂದಿಯಾಗಿ ಹುಟ್ಟಿ ಸತ್ತು ಮತ್ತೆ ಹೆಣ್ಣುನಾಯಾಗಿ ಹುಟ್ಟಿ ಸತ್ತು ಆಮೇಲೆ ಈ ಚಂಪಾನಗರದಲ್ಲಿ ಮಾದಿಗಂಗೆ ಮುಖ್ಯನಾದ ನೀಳನೆಂಬ ಮಾದಿಗನಿಗೂ ಕೇಶಿಯೆಂಬ ಮಾದಿಗಿತಿಗೂ ಹುಟ್ಟುಕುರುಡಿ ಹೊಲತಿಯಾಗಿ ಹುಟ್ಟಿತು. ಆಕೆ ಕೆಟ್ಟ ರೂಪಿನವಳೂ ದುರ್ಗಂಧವುಳ್ಳವಳೂ ಕೆಟ್ಟ ಸ್ವರವುಳ್ಳವಳೂ ಆಗಿದ್ದಳು. ನೀವು ಉಪದೇಶಿಸಿದ ವ್ರತಗಳನ್ನು ಸ್ವೀಕರಿಸಿ, ಮುಂದಿನ ಜನ್ಮದಲ್ಲಿ ಸೋಮಶರ್ಮನ ಮಗಳಾಗಬೇಕೆಂದು ನಿಶಯಿಸಿದ್ದು ಹಾವು ಕಚ್ಚಿ ಸತ್ತು ಪುರೋಹಿತ ಸೋಮಶರ್ಮನಿಗೂ ಅವನ ಮಡದಿ ತ್ರಿವೇದಿಗೂ ನಾಗಶ್ರೀ ಎಂಬ ಹೆಸರಿನ ಮಗಳಾದಳು. ಆದುದರಿಂದ ನಿಮಗೆ ಈ ಕನ್ನೆಯ ಮೇಲೆ ಹೆಚ್ಚಿನ ಪ್ರೀತಿಯುಂಟಾಯಿತು*. ಹೀಗೆ ಸೂರ್ಯಮಿತ್ರಾಚಾರ್ಯರು ಹೇಳಿದ್ದೆಲ್ಲವನ್ನೂ ನಾಗಶ್ರೀ ಕೇಳಿ, ಹಿಂದಿನ ಐದು ಜನ್ಮಗಳೂ ತನಗೆ ಕಣ್ಣಿದುರಿನಲ್ಲಿ ಕಂಡಂತೆ ತಿಳಿದು ಆಚಾರ್ಯರ ಪಾದಕ್ಕೆ ಸಾಷ್ಟಾಂಗ ವಂದಿಸಿ ಧರ್ಮವನ್ನು ಉಪದೇಸಶಿಸಬೇಕೆಂದು ಪ್ರಾರ್ಥಿಸಿ ಕೇಳಿ ತಿಳಿದು, ಅಣುವ್ರತ ಮೊದಲಾಗುಳ್ಳ ಶ್ರಾವಕ ವ್ರತಗಳನ್ನು ಧರ್ಮದ ಕುರಿತು ಸರಿಯಾದ ತಿಳಿವಳಿಕೆಯೊಂದಿಗೆ ಕೈಕೊಂಡು, ವಂದಿಸಿ, ತನ್ನ ಮನೆಗೆ ಹೊರಟಳು. ಆಗ ಸೂರ್ಯಮಿತ್ರಾಚಾರ್ಯರು – “ಮಗಳೇ, ನಾವು ನಿನಗೆ ಉಪದೇಶಿಸಿ ಕೊಟ್ಟ ವ್ರತಗಳನ್ನು ನಿನ್ನ ತಂದೆ ಬಿಟ್ಟುಬಿಡೆಂದು ಹೇಳಿದವನಾದರೆ ಅವನ್ನು ಬೇರೆ ಕಡೆ ಬಿಟ್ಟು ಬಿಡದಿರು. ನಮ್ಮ ಬಳಿಗೆ ಬಂದು, ನಾವು ಕೊಟ್ಟ ವ್ರತಗಳನ್ನು ನಮಗೇ ಒಪ್ಪಿಸಬೇಕು* ಎಂದು ಹೇಳಲು ‘ಹಾಗೆಯೇ ಮಾಡುವೆನು’ ಎಂದು ಆಕೆ ಮನೆಗೆ ತೆರಳಿದಳು. ಆಕೆಯ ಜೊತೆಯಲ್ಲಿದ್ದ ಹುಡುಗಿಯರು ಸೋಮಶರ್ಮಭಟ್ಟನಿಗೆ “ನಿಮ್ಮ ಮಗಳು ಋಷಿಗಳ ಬಳಿಯಲ್ಲಿ ಶ್ರಾವಕ ವ್ರತಗಳನ್ನು ಸ್ವೀಕರಿಸಿಕೊಂಡು ಬಂದಿದ್ದಾಳೆ* ಎಂದರು. ಆಗ ಭಟ್ಟನು ಕೇಳಿ “ಮಗಳೆ ನಾಗಶ್ರೀ, ನಾವು ಬ್ರಾಹ್ಮಣರಾಗಿದ್ದೇವೆ ; ಲೋಕಕ್ಕೆಲ್ಲ ಶ್ರೇಷ್ಠರು. ಲೋಕದ

ಪೂಜಿತರೆಮುಮೆಮ್ಮಿಂದಗ್ಗಳಂ ಪೆಱರಿಲ್ಲದಱಂದಂ ಸವಣರ ಧರ್ಮಮಂ ನಮಗೆ ಕೊಳಲಾಗ ಬಿಸುಡು ಎನೆ ನಾಗಶ್ರೀಯೆಂದಳ್ – ಅಮ್ಮಾ ವ್ರತಂಗಳಂ ಕೊಟ್ಟ ರಿಸಿಯರ್ಗ್ಗೆ ಪೋಗಿಯೊಪ್ಪಿಸಿ ಬಿಸುೞ್ಪೆನೆನೆಯಂತೆಗೆಯ್ಯೆಂದು ಮಗಳ ಕೈಯಂ ಪಿಡಿದಿರ್ವರುಂ ರಿಸಿಯರಲ್ಲಿಗೆ ವ್ರತಂಗಳನೊಪ್ಪಿಸಲ್ಕೆಂದು ಪೋಪನ್ನೆಗಾವಡೆಯೊಳ್ ಬಟ್ಟೆಯೊಳೊರ್ವನಂ ಪೆಡಂಗೆಯ್ಯುಡಿಯೆ ಕಟ್ಟಿಯೊಂದೆವಱೆಗುಟ್ಟಿ ಪೊೞಲ ಜನಂಗಳ್ ಮುಸುಱಕೊಂಡು ನೋಡುತ್ತಮೊಡವರೆ ನೊಂಕುತ್ತುಂ ಕೊಲಲುಯ್ವ ಪುರುಷನಂ ಯವ್ವನನಂ ತೇಪಸ್ವಿಯಂ ಕಂಡು ನಾಗಶ್ರೀ ತಮ್ಮಮ್ಮನಂ ಬೆಸಗೊಳ್ಳುಮೀತನನೇಕೆ ಕೊಲಲುಯ್ದಪ್ಪೊರಮ್ಮಾ ಬೆಸಗೊಳ್ಳಿಮೆನೆ ಸೋಮಶರ್ಮಂ ಕೊಲಲುಯ್ವ ತಳಾಱನಂ ಬೆಸೆಗೊಂಡು ತದ್ವೃತ್ತಾಂತಮೆಲ್ಲಮನಱೆದು ನಾಗಶ್ರೀಗಿಂತೆಂದು ಪೇೞ್ಗುಂ ಈ ಪೊೞಲ ಪ್ರಧಾನನಪ್ಪ ಶ್ರೇಷ್ಠಿ ಇಂದ್ರದತ್ತನೆಂಬೊಂ ಪದಿನಾಱುಂ ಕೋಟಿ ಕಸವರಮನೊಡೆಯೊನಾತನ ಮಗನೀತಂ ವರಸೇನನೆಂಬೊಂ ಜೂದಾಡಿಯಕ್ಷಧೂರ್ತನೆಂಬೊಂಗೆ ಸಾಸಿರ ದೀನಾರಮಂ ಸೋಲ್ತು ಸೋಲಮಂ ಕುಡಲಾಱದೆ ಅರಸನಾಣೆಯಂ ಮಿಕ್ಕು ಪೋಪನ್ ಮುಂದಡ್ಡಮಾಗಿರ್ದ್ದೊನನನಪರಾಯನಕ್ಷಧೂರ್ತನಂ ಕೊಂದನದಱಂದರಸನೀತನಂ ಕೊಲಲ್ವೇೞ್ದನದಱಂ ಕೊಲಲುಯ್ದಪರ್ ಮಗಳೆ ಎಂದು ಪೇಱ್ದೊಡೆ ನಾಗಶ್ರೀಯೆಂದಳ್ – ಅಂತಪ್ಪೊಡಮಾನುಂ ರಿಸಿಯರ ಪಕ್ಕದೆ ಬ್ರತಮಂ ಸಾವಿಂಗಂಜಿ ಜೀವಂಗಳಂ ಕೊಲ್ಲೆನೆಂಬ ಬ್ರತಮಂ ಕೊಂಡೆನಾ

ಜನರಿಂದ ಪೂಜಿಸಲ್ಪಡುವವರಾಗಿದ್ದೇವೆ. ನಮಗಿಂತ ಶ್ರೇಷ್ಠೆರು ಯಾರೂ ಇಲ್ಲ. ಆದುದರಿಂದ ಜೈನ ಸಂನ್ಯಾಸಿಗಳ ಧರ್ಮವನ್ನು ನಾವು ಸ್ವೀಕರಿಸಲಾಗದು, ಅದನ್ನು ಬಿಟ್ಟುಬಿಡು* ಎಂದನು. ಆಗ ನಾಗಶ್ರೀ ಹೀಗೆಂದಳು – “ಅಪ್ಪಾ, ವ್ರತಗಳನ್ನು ನನಗೆ ಕೊಟ್ಟಿರುವ ಋಷಿಗಳಿಗೇ ಅವನ್ನು ಒಪ್ಪಿಸಿ ಬಿಟ್ಟು ಬರುವೆನು* – ಎನ್ನಲು“ಹಾಗೆಯೇ ಮಾಡು* ಎಂದುಹೇಳಿ ಅವನು ಮಗಳ ಒಪ್ಪಿಸಿ ಕೈಯನ್ನು ಹಿಡಿದುಕೊಂಡು ಇಬ್ಬರೂ ಋಷಿಗಳಲ್ಲಿಗೆ ವ್ರತಗಳನ್ನು ಹಿಂದಿರುಗಿಸುವುದಕ್ಕಾಗಿ ಹೋಗುತ್ತಿದ್ದರು. ಆಗ ಅ ಕಡೆಯಲ್ಲಿಯೇ ದಾರಿಯಲ್ಲಿ ಒಬ್ಬ ತೇಜೋವಂತನಾದ ಯುವಕನ್ನು ಕೈಮುರಿವಂತೆ ಹಿಂದಕ್ಕೆ ಬಿಗಿದು ಕಟ್ಟಿ, ತಮಟೆಯೊಂದನ್ನು ಬಾರಿಸುತ್ತ, ತಳ್ಳುತ್ತ ಕೊಲ್ಲಲು ಒಯ್ಯುತ್ತಿದ್ದರು. ಆ ಪಟ್ಟಣದ ಜನರು ಮುತ್ತಿಕೊಂಡು ನೋಡುತ್ತ ಒಟ್ಟಿಗೆ ಬರುತ್ತಿದ್ದರು. ಇದನ್ನು ನಾಗಶ್ರೀ ಕಂಡು ತನ್ನ ತಂದೆಯೊಡನೆ ಹೀಗೆ ಕೇಳಿದಳು – “ಅಪ್ಪಾ, ಈತನನ್ನು ಯಾಕೆ ಕೊಲ್ಲಲು ಕೊಂಡೊಯುತ್ತಿದ್ದಾರೆ, ಕೇಳಿ* ಆಗ ಸೋಮಶರ್ಮನು ಕೊಲ್ಲುವುದಕ್ಕೆ ಒಯ್ಯುತ್ತಿದ್ದ ತಳಾರನನ್ನು ಕೇಳಿ ಆ ಸಂಗತಿಯೆಲ್ಲವನ್ನೂ ತಿಳಿದು. ನಾಗಶ್ರೀಗೆ ಹೀಗೆಂದನು – ಈ ಪಟ್ಟಣದಲ್ಲಿ ಇಂದ್ರದತ್ತನೆಂಬ ಶ್ರೇಷ್ಠನಾದ ಸೆಟ್ಟಿ ಹದಿನಾರು ಕೋಟಿ ಹೊನ್ನುಳ್ಳವನು. ಆತನ ಮಗನಾದ ವರಸೇನನೆಂಬವನಿವನು. ಇವನು ಅಕ್ಷಧೂರ್ತನೆಂಬವನೊಡನೆ ಜೂಜಾಡಿ ಸಾವಿರ ದೀನಾರ (ದೀನಾರ ಎಂಬ ನಾಣ್ಯ)ಗಳನ್ನು ಸೋತು, ಈ ಸೋಲವನ್ನು ಕೊಡಲಾರದೆ ರಾಜಾಜ್ಞೆಯನ್ನು ಮೀರಿ ಹೋಗುತ್ತಿದ್ದನು. ತನಗೆ ತಡೆಯಾಗಿ ಇದ್ದಂತಹ ನಿರಪರಾಯಾದ ಅಕ್ಷಧೂರ್ತನನ್ನು ಕೊಂದನು. ಆದುದರಿಂದ ರಾಜನು ಇವನಿಗೆ ಮರಣದಂಡನೆಯನ್ನು ವಿಸಿದನು. ಆದುದರಿಂದ ಇವನನ್ನು ಕೊಲ್ಲಲು ಕೊಂಡು ಹೋಗುತ್ತಿದ್ದಾರೆ ಮಗಳೇ! * ಎಂದು ಹೇಳಿದನು. ಆಗ ನಾಗಶ್ರೀ ಹೇಳಿದಳು – “ಹಾಗಾದರೆ ನಾನೂ ಋಷಿಗಳ ಬಳಿಯಲ್ಲಿ ವ್ರತವನ್ನು ಕೈಗೊಂಡಿದ್ದೇನೆ – ಸಾವಿಗೆ ಹೆದರಿ ಜೀವಿಗಳನ್ನು

ಬ್ರತಮನವರ್ಗೊಪ್ಪೆಸಿದೊಡಾನುಮಮೋಘಂ ಜೀವಂಗಳಂ ಕೊಲಲ್ವೇೞ್ಕುಮಾ ಜೀವಂಗಳಂ ಕೊಂದೊಡೆನ್ನುಮ ನೀತನಂತೆ ಪೆಡಂಗಯ್ಯುಡಿಯೆ ಕಟ್ಟಿಯೊಂದೆವಱೆಗುಟ್ಟಿ ನೀಮೆಲ್ಲ ನಂಟರ್ ನೋಡೆ ಶ್ಮಶಾನಕ್ಕುಯ್ದು ಸೂಲದೊಳಿಕ್ಕಿ ಕೊಲ್ವರೆನೆ ಅಂತಪ್ಪೊಡೆ ಈಯೊಂದು ಕೊಲ್ಲದ ವ್ರತಂ ನಿನಗಿರ್ಕೆ ಮಗಳೆ ಉೞದ ಬ್ರತಂಗಳೆಲ್ಲಮಂ ಪೋಗಿಯಾ ಕ್ಷಪಣಕಂಗೊಪ್ಪಿಸುವಮೆಂದು ಕಿಱದಂತರಮಂ ಪೋಪನ್ನೆಗಂ ಮತ್ತೊರ್ವನಂ ಮುನ್ನಿನಂತೆ ಕೊಲಲ್ಕೊಂಡು ಪೋಪ ಪುರುಷನಂ ಕಂಡು ನಾಗಶ್ರೀ ತಮ್ಮಮ್ಮನಂ ಬೆಸಗೊಳಲ್ವೇೞ್ದೊಡಾತನುಂ ಬೆಸಗೊಂಡೆಲ್ಲಮನಱದು ಮಗಳ್ಗಿಂತೆಂದು ಪೇೞ್ಗುಂ ಕೇಳ್ ಮಗಳೆ ವೈನಯಿಕನೆಂಬೊನೊರ್ವ ಪುರುಷಂ ಕನ್ನೆಯ ಬಂಟನ ವೃದ್ದಸ್ತ್ರೀಯ ಮೂವರ ಚಿತ್ರಕಥೆಗಳಂ ಪಟದೊಳ್ ತೋಱ ಪೇಳ್ದು ಲೋಗರಂ ಡಂಬಿಸಿ ಮಾಱುಗೊಳ್ವ ಬತ್ತಮಂ ಕಳ್ವೊನಾ ಮೂಱುಂ ಕಥೆಗಳೊಳಗೆ ಕನ್ನೆಯ ಕಥೆಯಂ ಪೇೞ್ವೆನದೆಂತೆಂದೊಡೆ – ಕೌಸಂಬಿಯೆಂಬ ಪೊೞಲೊಳ್ ಸುಮಿತ್ರನೆಂಬೊಂ ಶ್ರೇಷ್ಠಿ ಕೋಟಿ ಕಸವರಮನೊಡೆಯೊನಾತನ ಮಗಂ ವಸುಮಿತ್ರನೆಂ ಬೊಂಗೆ ಸರ್ಪದಷ್ಟಮಾದೊಡೆ ಸತ್ತನೆಂದು ಶ್ಮಶಾನಕ್ಕೆ ಕೊಂಡು ಪೋಗಿ ಇೞಪಿದೊಡಲ್ಲಿ ಗರುಡನಾಭಿಯೆಂಬ ಮಂತ್ರವಾದಿ ಪೋಗಿ ನೋಡಿ ಈತನನಾಂ ನಾಳೆಯಭಿಮಂತ್ರಿಸಿ ಬಾೞೆಸುವೆನಂಜದಿರಿಮಿಲ್ಲಿಯೆ ಇರುಳೀ ದಾಷ್ಟಿಕಂಗೆ ಜಾವಮಿರಿಮೆಂದು ಪೇಳ್ದುಪೋದಂ

ಕೊಲ್ಲುವುದಿಲ್ಲವೆಂಬ ಅಹಿಂಸಾವ್ರತವನ್ನು ಸ್ವೀಕರಿಸಿದ್ದೇನೆ. ಆ ವ್ರತವನ್ನು ಅವರಗೇ ಒಪ್ಪಿಸಿದೆನಾದರೆ, ನಾನೂ ಬಿಡದೆಯೆ ಜೀವಿಗಳನ್ನು ಕೊಲ್ಲಬೇಕಾಗುತ್ತದೆ. ಆ ಜೀವಿಗಳನ್ನು ಕೊಂದರೆ ನನ್ನನ್ನೂ ಇವನಂತೆಯೆ ಕೈಗಳನ್ನು ಹೆಡಮುರಿ ಕಟ್ಟಿ ತಮಟೆಯನ್ನು ಹೊಡೆಯುತ್ತನಂಟರಾದ ನೀವೆಲ್ಲ ನೋಡುತ್ತಿರುವಂತೆಯೇ ಮಸಣಕ್ಕೆ ಕೊಡುಹೋಗಿ ಶೂಲಕ್ಕೆ ಹಾಕಿ ಕೊಂದಾರು*. ಹೀಗೆ ನಾಗಶ್ರೀ ಹೇಳಿದಾಗ ಅವಳ ತಂದೆ “ಮಗಳೆ, ಹಾಗಾದರೆ ಈಯೊಂದು ಅಹಿಂಸಾವ್ರತ ನಿನಗಿರಲಿ. ಉಳಿದ ವ್ರತಗಳೆಲ್ಲವನ್ನೂ ನಾವು ಹೋಗಿ ಆ ಜೈನಸಂನ್ಯಾಸಿಗೆ ಕೊಟ್ಟುಬಿಡೋಣ* ಎಂದು ನುಡಿದು, ಅವರು ಸ್ವಲ್ಪ ದೂರ ಹೊಗುವಷ್ಠರಲ್ಲಿ ಮತ್ತೊಬ್ಬ ಗಂಡಸನ್ನು ಹಿಂದಿನಂತೆಯೇ ಕೊಲ್ಲಲು ಕೊಂಡು ಹೋಗುವುದನ್ನು ನಾಗಶ್ರೀ ಕಂಡಳು. ಕಾರಣವನ್ನು ತಿಳಿಯುವಂತೆ ಅವಳು ತಂದೆಗೆ ಹೇಳಲು, ಅವನು ಕೇಳಿ ಎಲ್ಲವನ್ನೂ ತಿಳಿದು ಮಗಳಿಗೆ ಹೀಗೆಂದನು – “ಮಗಳೇ ಕೇಳು. ವೈನಯಿಕನೆಂಬ ಒಬ್ಬ ಮನುಷ್ಯನು ಒಂದು ವಸ್ತ್ರದಲ್ಲಿ ಓರ್ವ ಕನ್ಯೆಯ, ಓರ್ವ ಸೇವಕನ ಓರ್ವ ಮುದುಕಿಯ ಹೀಗೆ ಮೂವರ ಚಿತ್ರಕಥೆಗಳನ್ನು ತೋರಿಸಿ, ಹೇಳಿ ಜನರನ್ನು ಮೋಸಮಾಡಿ ಬೆಲೆಗೆ ಕೊಳ್ಳವ ಬತ್ತವನ್ನು ಕದಿಯುವನು. ಆ ಮೂರು ಕಥೆಗಳಲ್ಲಿ ಕನ್ಯೆಯ ಕಥೆಯನ್ನು ಹೇಳುವೆನು. ಅದು ಹೇಗೆಂದರೆ – ಕೌಶಂಬಿ ಎಂಬ ಪಟ್ಟಣದಲ್ಲಿ ಕೋಟಿ ಹೊನ್ನುಳ್ಳವನಾದ ಸುಮಿತ್ರನೆಂಬ ಸೆಟ್ಟಿಯಿದ್ದನು. ಅವನ ಮಗನಾದ ವಸುಮಿತ್ರನಿಗೆ ಹಾವು ಕಚ್ಚಿತು. ಅವನು ಸತ್ತನೆಂದು ಮಸಣಕ್ಕೆ ಒಯ್ದು ಇಳಿಸಿದಾಗ, ಅಲ್ಲಿಗೆ ಗರುಡನಾಭಿ ಎಂಬ ಮಂತ್ರವಾದಿ ಬಂದು ನೋಡಿ “ನಾನು ಇವನಿಗೆ ನಾಳೆ ಮಂತ್ರಪ್ರಯೋಗ ಮಾಡಿ ಬದುಕಿಸುವೆನು. ನೀವು ಹೆದರಬೇಡಿ. ಕಚ್ಚಿಸಿಕೊಂಡವನಿಗೆ ನೀವು ಇಲ್ಲಿಯೇ ರಾತ್ರಿ ಕಾವಲಾಗಿ ಇರಿ* ಎಂದು ಹೇಳಿ ಹೋದನು. ಸುಮಿತ್ರ ಸೆಟ್ಟಿ ನಾಲ್ಕು ಮಂದಿ ಒಳ್ಳೆಯವರಾದ

ಸುಮಿತ್ರಸೆಟ್ಟಿಯುಂ ನಾಲ್ವರೊಳ್ಳಿದರಪ್ಪ ಸುಭಟರಂ ಜಾವಮಿರಿಸಿ ಪೋದನಾ ನಾಲ್ವರುಂ ಜಾವಮಿರ್ದ ಭಟರೊಳಗೊರ್ವನಿರುಳ್ ಕುಱಯಂ ಕಳ್ದುತರಲ್ ಪೋದಂ ಮತ್ತೊರ್ವಂ ಪುಳ್ಳಿಯಂ ತರಲ್ಪೋದಂ ಮತ್ತೊರ್ವಂ ಕಿಚ್ಚಂ ತರಲ್ಪೋದಂ ಮತ್ತೊರ್ವಂ ದಾಷ್ಟಿಕನಾ ಪಕ್ಕದೆ ಕಾಪಿರ್ದನಂತಾ ನಾಲ್ವರುಂ ಕುಱೆಯಂ ಕೊಂದು ಸುಟ್ಟು ತಿಂದರೆಂಬ ಕಥೆಯುಮಂ ಪೊೞ್ತಱನೆ ನೇಸರ್ಮೂಡೆ ಗರುಡನಾಭಿಯೆಂಬ ಮಂತ್ರವಾದಿ ಬಂದು ಪಱೆಗುಟ್ಟಿ ಮಂತ್ರಿಸಿ ದಾಷ್ಟಿಕನನೆತ್ತಿದಂ ಸುಮಿತ್ರಸೆಟ್ಟಿಯುಮಿರುಳ್ ಜಾವಮಿರ್ದು ನಾಲ್ವರ್ ಸುಭಟರ್ಗೋರೊರ್ವರ್ಗೆ ಸಾಸಿರ ದೀನಾರದ ಪೊಟ್ಟಳಿಗೆಗಳಂ ಪ್ರಾಸಾದದ ಮೇಗಿರ್ದು ಜನಸಂಕೀರ್ಣದ ನಡುವೆ ನಾಲ್ಕು ಪೊಟ್ಟಳಿಗೆಯನೀಡಾಡಿದೊಡಾ ಪೊಟ್ಟಳಿಗೆಯಂ ಕೊಂಡು ಕೊಳ್ಳೆನೆಂದು ಪುಸಿದೊಡಾ ಶ್ರೇಷ್ಠಿಯುಮರಸರ್ಗೆ ಪೋಗಿ ಬಿನ್ನಪಂಗೆಯ್ದನ್ ಎನ್ನ ಸಾಸಿರ ದೀನಾರದ ಪೊಟ್ಟಳಿಗೆ ಕೆಟ್ಟುದದಂ ದೇವರಾರೈವುದೆಂದು ಪೇೞ್ದೊಡೆ ತಳಾಱನಂ ಕರೆದು ಬೇಗಂ ಕಳ್ಳನನಾರಯ್ಯಲ್ಲದಾಗಳ್ ಕಳ್ಳಂಗೆ ತಕ್ಕ ನಿಗ್ರಹಮಂ ನಿನಗೆ ಮಾೞ್ಪೆನೆಂದರಸನಾತನಂ ಬಗ್ಗಿಸಿ ನುಡಿದೊಡಾತನುಮಱಸಿ ಕಳ್ಳನನಾರಯ್ಯಲಾಱದೆ ನಾಲ್ವರ್ ಸುಭಟರುಮಂಮನೆಗೊಡಗೊಂಡು ಬಂದು ಭೀತನಾಗಿ ಬಿನ್ನನೆ ಮೊಗಂ ಬಾಡಿ ಚಿಂತಿಸುತಿರ್ದೊಡಾತನ ಮಗಳ್ ಸುಮತಿಯೆಂಬಳಿಂತೇಕೆ ಬಿನ್ನವಾಗಿ ಚಿಂತಿ ಸುತ್ತಿರ್ದ್ದೆಯಮ್ಮಾ ಎಂದು ತಂದೆಯಂ ಬೆಸಗೊಂಡೊಡಾತನುಂ ತದ್ವೃ ತ್ತಾಂತಮನೆಲ್ಲಮಂ

ಯೋಧರನ್ನು ಕಾವಲಿರಿಸಿ ಹೋದನು. ಕಾವಲಾಗಿದ್ದ ಆ ನಾಲ್ಕುಮಂದಿ ವೀರರಲ್ಲಿ ಒಬ್ಬನು ರಾತ್ರಿಯಲ್ಲಿ ಕುರಿಯನ್ನು ಕದ್ದು ತರಲು ಹೋದನು. ಮತ್ತೊಬ್ಬನು ಕಟ್ಟಿಗೆ ತರಲು ಹೋದನು. ಮತ್ತೊಬ್ಬನು ಬೆಂಕಿ ತರಲು ಹೋದನು, ಇನ್ನೊಬ್ಬನು ಹಾವು ಕಚ್ಚಿದವನ ಬಳಿಯಲ್ಲಿ ಕಾವಲಾಗಿದ್ದನು. ಅಂತು ಆ ನಾಲ್ಕು ಮಂದಿ ಆ ಕುರಿಯನ್ನು ಸುಟ್ಟು ತಿಂದರು. ಹೊತ್ತಾರೆ ವೇಳೆಗೆ ಸೂರ್ಯೋದಯವಾದಾಗ ಗರುಡನಾಭಿಯೆಂಬ ಮಂತ್ರವಾದಿ ಬಂದು ಡೋಲು ಹೊಡೆದು, ಮಂತ್ರಪ್ರಯೋಗ ಮಾಡಿ ವಿಷವೇರಿದವನನ್ನು ಎಬ್ಬಿಸಿದನು. ಸುಮಿತ್ರ ಸೆಟ್ಟಿ ರಾತ್ರಿ ಕಾವಲಾಗಿದ್ದ ನಾಲ್ಕು ಮಂದಿ ಯೋಧರಿಗೆ ಒಬ್ಬೊಬ್ಬರಿಗೆ ಸಾವಿರ ದೀನಾರ ನಾಣ್ಯಗಳ ಪೊಟ್ಟಣಗಳನ್ನು ಕೊಡಲು ನಿರ್ಣಯಿಸಿದನು. ತಾನು ಉಪ್ಪರಿಗೆಯ ಮೇಲೆ ಇದ್ದುಕೊಂಡು ಜನಸಂದಣಿಯ ನಡುವೆ ಅವನ್ನು ಬಿಸಾಡಿದನು. ಆ ಕಟ್ಟಾಳುಗಳಲ್ಲಿ ಒಬ್ಬನು ಪೊಟ್ಟಣವನ್ನು ತೆಗೆದುಕೊಂಡಿದ್ದರೂ ತನಗೆ ಸಿಕ್ಕಿಲ್ಲವೆಂದು ಸುಳ್ಳಾಡಿದನು. ಆಗ ಸುಮಿತ್ರ ಸೆಟ್ಟಿ ರಾಜನಿಗೆ ವಿಜ್ಞಾಪನೆ ಮಾಡಿದನು – “ನನ್ನ ಸಾವಿರ ದೀನಾರಗಳ ಕಟ್ಟು ಕಳೆದುಹೋಗಿದೆ. ಅದನ್ನು ಪ್ರಭುಗಳು ವಿಚಾರಣೆ ಮಾಡಬೇಕು* ಎಂದನು. ಆಗ ರಾಜನು ತಳಾರ (ಪಟ್ಟಣದ ಕಾವಲುಗಾರ)ನನ್ನು ಕರೆದು – “ಬೇಗನೆ ಕಳ್ಳನನ್ನು ಪತ್ತೆ ಹಚ್ಚು, ನಿನ್ನಿಂದ ಆಗದಿದ್ದರೆ ಕಳ್ಳನಿಗೆ ಮಾಡುವ ಶಿಕ್ಷೆಯನ್ನು ನಿನಗೆ ಮಾಡುವೆನು* ಎಂದು ಗದರಿಸಿ ಆಜ್ಞಾಪಿಸಿದನು. ತಳಾರನು ಕಳ್ಳನನ್ನು ಹುಡುಕಿ ಹಿಡಿಯಲಾರದೆ ಆ ನಾಲ್ಕು ಮಂದಿ ಸುಭಟರನ್ನೂ ಮನೆಗೆ ಕರೆದುಕೊಂಡು ಬಂದನು. ಬೆದರಿದವನಾಗಿ ಶೂನ್ಯವಾದ ಮೋರೆಯುಳ್ಳವನಾಗಿ, ಬಾಡಿಹೋಗಿ, ಚಿಂತಿಸುತ್ತಿದ್ದನು. ಆಗ ಅವನ ಮಗಳು ಸುಮತಿ ಎಂಬವಳು – “ಅಪ್ಪಾ, ನೀನು ಹೀಗೇಕೆ ದಿಕ್ಕುತೋಚದೆ ಚಿಂತಿಸುತ್ತಿರುವೆ? * ಎಂದು ತಂದೆಯೊಡನೆ ಕೇಳಿದಳು. ಆಗ ಸುಮಿತ್ರನು ಆ ಸಂಗತಿಯೆಲ್ಲವನ್ನೂ ಮಗಳಿಗೆ ತಿಳಿಯುವ ಹಾಗೆ ಹೇಳಿದನು. ಆದಕ್ಕೆ ಆಕೆ “ಹೆದರಬೇಡಿ, ನಾನು ಇದೆಲ್ಲವನ್ನೂ ವಿಚಾರಿಸಿ ಕಳ್ಳನನ್ನೂ

ಮಗಳ್ಗಱಯೆ ಪೇೞ್ದೊಡಂಜಲ್ವೇಡಿದನೆಲ್ಲಮನಾನಾರಯ್ದು ಕಳ್ಳನುಮಂ ಕಸವರಮುಮಂ ನಾಳೆ ನಿಮಗೆಗೊಪ್ಪಿಸುವೆಂ ನೀಮುಂ ನಿಶ್ಚಿಂತಮಿರಿಮೆಂದು ತಂದೆಯನೇಕಾಂತದೊಳ್ ನುಡಿದು ತಂದೆಯಂ ಸಂತವಿಸಿದಾಗಳ್ ಸುಮತಿಯುಮಿರುಳ್ ಕಳ್ಳರಂ ಪರೀಕ್ಷಿಸಲ್ವೇಡಿಯಾ ನಾಲ್ವರುಂ ಸುಭಟರ ಪಕ್ಕದಿರ್ದೇನೆಂದವರ್ಗೆ ಕಥೆಯಂ ಪೇೞ್ಗುಂ – ಪಾಟಳೀಪುತ್ರಮೆಂಬ ಪುರಮಲ್ಲಿ ಶ್ರೇಷ್ಠಿ ಸುದತ್ತನೆಂಬೊನಾತನ ಮಗಳ್ ಸುದಾಮೆಯೆಂಬ ಕನ್ನೆಯೊಂದು ದಿವಸಂ ಗಂಗೆಯಂ ಮೀಯಲ್ಪೋಗಿ ಮೀವಲ್ಲಿ ನೆಗೞ್ ಪಿಡಿದೊಡಾದಮಾನುಮಂಜಿ ತಡಿಯೊಳಿರ್ದ ಧನದತ್ತನೆಂಬೊಂ ಸೋದರಮಯ್ದುನನಂ ಕಂಡೆನ್ನಂ ಬೇಗಂ ಬಿಡಿಸೆಂದೊಡಾತನಿಂತೆಂದನೆನ್ನ ಬೇಡಿದುದನೀವೊಡೆ ನಿನ್ನಂ ಮದುವೆಯಂದು ಪ್ರಥಮ ದಿವಸದ ಪಸದನಮನೆನಗೆ ವಂದು ತೋಱಲ್ವೀೞ್ಕುಮೆಂದು ಬೇಡಿದೊಡಾಕೆಯುಮಂತೆಗೆಯ್ವೆನೆಂದು ಪೂಣ್ದಳಿಂತುಕಾಲಂ ಸಲೆ ಮತ್ತಾ ಕನ್ನೆಗೆ ಯೌವನಂ ನಱೆದಂದು ಮದುವೆಯಾದೊಡೆ ತನ್ನ ಪೂಣ್ಕೆಯಂ ನೆನೆದು ಸರ್ವಾಲಂಕಾರಭೂಷಿತೆಯಾಗಿಯಾದಮಾನುಂ ಕೈಗೆಯ್ದು ಚೆಲ್ವಿಯಾಗಿ ನಟ್ಟನಡುವಿರುಳ್ ಮನೆಯಿಂದಂ ಪೊಱಮಟ್ಟು ಮೈದುನನಿರ್ದಾಪಣಕ್ಕೆ ಪೋಪನ್ನೆಗವೆಡೆಯೊಳ್ ಕಳ್ಳನೊರ್ವಂ ಕಂಡು ನಿನ್ನ ತೊಟ್ಟಾಭರಣಮೆಲ್ಲಮಂ ಕೊಟ್ಟು ಪೋಗಲ್ಲದಾಂ ಪೋಗಲೀಯೆನೆಂದೊಡೀಗಳೆ ಪೋಗಿ ಬಂದು ನಿನಗೆನ್ನೆ ತುಡುಗೆಯಿಲ್ಲಮಂ ಕುಡುವೆನನ್ನೆಗಮಿಲ್ಲಿ

ಹಣವನ್ನೂ ನಾಳೆ ನಿಮಗೆ ಒಪ್ಪಿಸುವೆನು, ನೀವು ಚಿಂತೆಯನ್ನು ಬಿಟ್ಟುಬಿಡಿ* ಎಂದು ತಂದೆಗೆ ರಹಸ್ಯವಾಗಿ ತಿಳಿಸಿ, ತಂದೆಯನ್ನು ಸಮಾಧಾನಪಡಿಸಿದಳು. ಸುಮತಿ ರಾತ್ರಿಯಲ್ಲಿ ಕಳ್ಳನು ಯಾರೆಂದು ಪರೀಕ್ಷಿಸುವುದಕ್ಕಾಗಿ ಆ ನಾಲ್ಕು ಮಂದಿ ಸುಗೆಟರ ಬಳಿಯಲ್ಲಿದ್ದು ಅವರಿಗೆ ಏನೆಂದು ಕತೆ ಹೇಳಿದಳೆಂದರೆ – ಪಾಟಳೀಪುತ್ರವೆಂಬ ಪಟ್ಟಣ ಅಲ್ಲಿ ಸುದತ್ತನೆಂಬ ಸೆಟ್ಟಿಯಿದ್ದನು. ಅವನ ಮಗಳು ಸುದಾಮೆ – ಇನ್ನೂ ಮದುವೆಯಾಗದವಳು. ಆಕೆ ಒಂದು ದಿವಸ ಗಂಗಾನದಿಯಲ್ಲಿ ಸ್ನಾನ ಮಾಡಲು ಹೋಗಿ, ಸ್ನಾನ ಮಾಡುತ್ತಿದ್ದಾಗ ಮೊಸಳೆ ಹಿಡಿಯಿತು. ಬಹಳ ಭಯಪಟ್ಟು ಆಕೆ ದಡದಲ್ಲಿದ್ದ ಸೋದರ ಮೈದುನನಾದ ಧನದತ್ತನೆಂಬುವವನನ್ನು ಕಂಡು “ನನ್ನನ್ನು ಬೇಗ ಬಿಡಿಸು* ಎಂದಳು. ಆಗ ಆತನು – “ನಾನು ಕೇಳಿದುದನ್ನು ನೀನು ಕೊಡುವೆಯಾದರೆ ನಿನ್ನನ್ನು ರಕ್ಷಿಸುವೆನು ಎಂದನು. ಆಕೆ ಆಗಲಿ. ಕೊಡುವೆನು ಎಂತ ಶಪಥಮಾಡಲು ಧನದತ್ತನು ಕೂಡಲೆ ನೀರಿಗಿಳಿದು ಮೊಸಳೆಯಿಂದ ಅವಳನ್ನು ಬಿಡಿಸಿದನಂತರ ಆ ಕನ್ನಿಕೆ – “ಹೇಳು. ನೀನು ಏನನ್ನು ಬಯಸುತ್ತೀ? ನೀನು ಕೇಳಿದುದೆಲ್ಲವನ್ನೂ ಸಲ್ಲಿಸುವೆನು* ಎಂದು ನುಡಿದಳು, ಆಗ ಧನದತ್ತನು – “ನೀನು ಮದುವೆಯಾದಾಗ ಮೊದಲನೆಯ ದಿವಸದ ಅಲಂಕಾರವನ್ನು ನನಗೆ ಬಂದು ತೋರಿಸಬೇಕು* ಎಂದು ತಿಳಿಸಿದನು, ‘ಹಾಗೆಯೇ ಮಾಡುವೆನು’ ಎಂದು ಆಕೆ ಪ್ರತಿಜ್ಞೆಯನ್ನು ನೆನಪಿಟ್ಟುಕೊಂಡು ಎಲ್ಲಾ ಆಭರಣಗಳಿಂದ ಅಲಂಕೃತೆಯಾಗಿ ಅತ್ಯಂತವಾಗಿ ಶೃಂಗಾರ ಮಾಡಿಕೊಂಡು ಸೊಬಗುಗಾರ್ತಿಯಾಗಿ ಮಧ್ಯರಾತ್ರಿ ವೇಳೆಯಲ್ಲಿ ಮನೆಯಿಂದ ಹೊರಟಳು. ತನ್ನ ಮೈದುನನಿದ್ದ ಅಂಗಡಿ ಕಡೆಗೆ ಆಕೆ ಹೋಗುವಾಗ ನಡುವೆ ಒಬ್ಬ ಕಳ್ಳನು ಕಂಡು – “ನೀನು ತೊಟ್ಟುಕೊಂಡಿರುವ

ಎನ್ನ ಬರ್ಪನ್ನೆಗಮೆತ್ತಂ ಪೋಗದಿರೆಂದು ನಂಬೆ ನುಡಿದು ಸಂತೈಸಿ ಕಿಱದಂತರಮಂ ಪೋದೊಡೆ ತಳಾಱಂ ಕಂಡೀ ಪೊೞ್ತೆತ್ತ ಪೋದಪ್ಪಯ್ ಪೊಲ್ಲಮಾನಸಿಯೆ ಎಂದಾತಂ ಪಿಡಿದು ಕಾಡೆ ಪರಿದೊಂದು ಮನೆವಾೞ್ತೆಯುಂಟೆನ್ನಂ ಕಾಡದೆ ಪೋಗಲೀಯಾ ನೀಗಳೆ ಪೋಗಿ ನಿನ್ನಲ್ಲಿಗೆ ಬಂದಪ್ಪೆಂ ಬಂದೊಡೆ ನಿನ್ನ ಮೆಚ್ಚುಗೆಯ್ದೆನೆಂದು ನಂಬೆ ನುಡಿದು ನನ್ನಿಗೊಟ್ಟು ಕಿಱದಂತರಮಂ ಪೋಪನ್ನೆಗಮೆಡೆಯೊಳ್ ಬ್ರಹ್ಮರಾಕ್ಷಸಂ ಕಂಡು ತನ್ನಂ ತಿನ್ನಲ್ ಬಗೆದೊಡೆ ಬ್ರಹ್ಮರಾಕ್ಷಸಂಗೆಂದಳ್ ಪಿರಿಯದೊಂದು ಮನೆ ವಾೞ್ತ್ತೆಯುಂಟೀಗಲೆ ಪೋಗಿ ಬಂದಪ್ಪೆಂ ಬಂದ ಬೞೆಕ್ಕೆನ್ನಂ ಮೆಚ್ಚಿದಂತೆ ಮಾಡೆಂದು ನನ್ನಿಗೊಟ್ಟು ನಂಬಿಸಿ ಪೋದೊಡಾ ಕಳ್ಳನುಂ ತಳಾಱನುಂ ಬ್ರಹ್ಮರಾಕ್ಷಸನುಮಂತುಮೀಕೆಯೀ ಪೊೞ್ತು ತುರಿಪದಿಂದೞ್ಕೞಂದೆತ್ತ ಪೋದಪ್ಪಳೆಂದು ಬೞವೞಯನೆ ನೋಡುತ್ತಂ ಪೋಪರ್ದನ್ನೆಗಂ ಮಯ್ದುನಂ ಪಟ್ಟಿರ್ದ್ದಾಪಣಕ್ಕೆ ಪೋಗಿ ಬಾಗಿಲಂ ತೆಱೆದಾಪಣದೊಳಗಂ ಪೊಕ್ಕಳನೀ ಪೊೞ್ತೇಕೆ ಬಂದೆಯೆಂದು ಬೆಸಗೊಂಡೂಡೆ ನೀನಲ್ತೆ ಎನ್ನ ನನ್ನಿಗೊಂಡಯ್ ಎನ್ನ ಮದುವೆಯಂದು ಪ್ರಥಮ ದಿವಸದ

ಆಭರಣಗಳೆಲ್ಲವನ್ನೂ ಕೊಟ್ಟುಹೋಗು. ಅದಲ್ಲದೆ ಹೋಗಲು ಬಿಡೆನು* ಎಂದನು. ಆಗ ಅವಳು ನಾನು ಈಗಲೇ ಹೋಗಿ ಬಂದು ನಿನಗೆ ಆಭರಣಗಳೆಲ್ಲವನ್ನೂ ಕೊಡುವೆನು. ಅದುವರೆಗೆ – ನಾನಿಲ್ಲಿಗೆ ಬರುವವರೆಗೆ ಎಲ್ಲಿಗೂ ಹೋಗದಿರು* ಎಂದು ನಂಬುವಂತೆ ನುಡಿದು ಸಮಾಧಾನಪಡಿಸಿ ಸ್ವಲ್ಪ ದೂರ ಮುಂದುವರಿದಳು. ಆಗ ತಳಾರನು (ಪಟ್ಟಣದ ಕಾವಲುಗಾರನು) ಕಂಡು – “ಎಲೈ ಕೆಟ್ಟ ಮನುಷ್ಯಳೇ, ಈ ಹೊತ್ತಿಗೆ ಯಾವ ಕಡೆ ಹೋಗುತ್ತಿರುವೆ? * ಎಂದು ಆಕೆಯನ್ನು ತಡೆದು ತೊಂದರೆಪಡಿಸಿದನು. ಅದಕ್ಕೆ ಅವಳು “ನನಗೆ ಹಿರಿದಾದ ಒಂದು ಮನೆಗೆಲಸವಿದೆ. – “ನನಗೆ ಈಗಲೇ ಹೋಗಿ ನಿನ್ನ ಬಳಿಗೆ ಬರುವೆನು. ಬಂದಾಗ ನಿನಗೆ ಮೆಚ್ಚಿಕೆಯಾದುದನ್ನು ಮಾಡುವೆನು* ಎಂದು ನಂಬಿಕೆಯಾಗುವಂತೆ ಹೇಳಿ ಭಾಷೆ ಕೊಟ್ಟು ಸ್ವಲ್ಪ ದೂರ ಮುನ್ನಡೆದಳು. ಆ ಸಂದರ್ಭದಲ್ಲಿ ಒಬ್ಬ ಬ್ರಹ್ಮರಾಕ್ಷಸನು ಕಂಡು ಅವಳನ್ನು ತಿನ್ನಲು ಬಗೆದನು. ಆಗ ಅವಳು ಬ್ರಹ್ಮರಾಕ್ಷಸನಿಗೆ ಹೇಳಿದಳು – ಈಗಲೇ ಹೋಗಿ ಬರುತ್ತೇನೆ. ಬಂದ ಮೇಲೆ ನನ್ನನ್ನು ನಿನ್ನ ಇಷದಂತೆ ಮಾಡು* ಎಂದು ಆಕೆಯನ್ನು ತಡೆದು ಸುದಾಮೆ ಭಾಷೆ ಕೊಟ್ಟು ನಂಬಿಸಿ ಹೋದಳು. ಆ ಕಳ್ಳನೂ ತಳಾರನೂ ಬ್ರಹ್ಮರಾಕ್ಷಸನು “ ಅಂತೂ ಈಕೆ ಈ ಹೊತ್ತಿಗೆ ತ್ವರೆಯಿಂದಲೂ ಪ್ರೀತಿಯಿಂದಲೂ ಯಾವ ಕಡೆ ಹೋಗುತ್ತಿದ್ದಾಳೆ ? * ಎಂದುಕೊಂಡು ಅವಳ ದಾರಿ ದಾರಿಯನ್ನೇ ನೋಡುತ್ತ ಅನುಸರಿಸಿ ಹೋದರು. ಅಷ್ಟರಲ್ಲಿ ಅವಳು ಮೈದುನನಾದ ಧನದತ್ತನು ಮಲಗಿದ್ದ ಅಂಗಡಿಗೆ ಹೋಗಿ ‘ ಬಾಗಿಲು ತೆಗೆಯಿರಿ’ ಎಂದಾಗ ‘ಬಾಗಿಲು ತೆರೆಯಿರಿ ಎಂಬವರು ಯಾರು? ’ ಎಂದು ಕೇಳಲು, ‘ನಾನು ಸುದಾಮೆಯಲ್ಲವೆ ? * ಎಂದಳು. ಬಾಗಿಲು ತೆರೆದೊಡನೆ ಅವಳು ಅಂಗಡಿಯ ಒಳಹೊಕ್ಕಳು. ಆಗ ಧನದತ್ತನು ‘ಈ ಹೊತ್ತಿಗೆ ಯಾಕೆ ಬಂದೆ ? ಎಂದು ಕೇಳಿದನು. ಅದಕ್ಕೆ ಅವಳು ‘ನೀನಲ್ಲವೆ ನನ್ನಿಂದ ಭಾಷೆ ತೆಗೆದುಕೊಂಡದ್ದು ? ನನ್ನ ಮದುವೆಯಂದು ಮೊದಲನೆಯ ದಿವಸದ

ಪಸದನಮನೆನಗೆ ತೋಱಲ್ವೇೞ್ಕುಮೆಂದು ಬೇಡಿದೊಡಾಂ ಪ್ರತಿಜ್ಞೆಯಂ ನೆಱಪಲ್ ಬಂದೆನೆಂದು ತನ್ನಂ ತೋಱದೊಡಾತನುಮಾಕೆಯ ರೂಪಂ ನೋಡಿ ಮೆಚ್ಚಿ ವಿದ್ಯಾಧರಿಯ ದೇವಗಣಿಕೆಯ ರೂಪನೆ ಪೋಲ್ವೆ ಎಂದು ಪೊಗೞ್ದು ಮತ್ತಮಿಂತೆಂದಂ ಪ್ರತಿಜ್ಞೆಯಂ ನೆಱಪಿದೆ ಒಳ್ಳಿತಾಯ್ತೀ ಪೊೞ್ತು ಪೊಲ್ಲದುವಂದೆ ನಟ್ಟನಡುವಿರುಳ್ ಕಳ್ಳರುಂ ತಳಾಱರುಂ ಕಾಡುವರ್ ಬೇಗಂ ಪೋಗೆಂದು ನುಡಿದು ಪೋಗಲ್ವೇೞ್ದೊಡದೆಲ್ಲಮನಾ ಮೂವರಂ ಪೊಱಗೆ ಕೇಳ್ದು ಮತ್ತಂ ಬೇಗವೇಗಂ ಪೋಗಿ ತಮ್ಮಿರ್ದೆಡೆಗಳೊಳಿರ್ದರನ್ನೆಗಮಾ ಮದೆವಳ್ ರಕ್ಕಸನಲ್ಲಿಗೆ ಬಂದೇನೆನ್ನಂ ನೀಂ ಮೆಚ್ಚಿದಂತಂ ಮಾಡೆಂದು ತನ್ನಂ ತೋಱದೊಡಾ ಬ್ರಹ್ಮರಾಕ್ಷಸನಿಂತೆಂದಂ ನೀ ಸತ್ಯಾವಾದಿಯಯ್ ಆದಮಾನುಂ ರೂಪು ಲಾವಣ್ಯಂ ಸೌಭಾಗ್ಯ ಕಾಂತಿ ಹಾವ ವಿಲಾಸ ವಿಭ್ರಮಂಗಳನೊಡೆಯಯ್ ನಿನ್ನಂ ತಿಂದಾನಾವ ಗತಿಗೆ ಪೋಪೆಂ ನಿನ್ನ ರೂಪನಱಯಲಾಱನದಱನಂಜದೆ ಪೋಗೆಂದು ಪೋಗಲ್ವೇೞ್ದೊಡೆ ಬರ್ಪಳನ್ನೆಗಂ ತಳಾಱನಂ ಕಂಡಿನ್ನೆನ್ನಂ ನೀಂ ಮೆಚ್ಚುಗೆಯ್ಯೆಂದು ನುಡಿದೊಡಾತನಿಂತೆಂದಂ ನೀಂ ಪೊಲ್ಲಮಾನಸಿಯೆ ಎಂದು ಮನದೊಳೆ ಬಗೆದೆಂ ನಿನ್ನಂತೊಳ್ಳಿದರಾರುಮಿಲ್ಲ ನುಡಿದ ನನ್ನಿಯಂ ತಪ್ಪದೆ ಬಂದೆ ಸತ್ಯವಾದಿಯಯ್ ಪೋಗಬ್ದಾ ಎಂದು ಪೋಗಲ್ವೇೞ್ದೊಡೆ ಬರ್ಪಳನ್ನೆಗಂ ಕಳ್ಳನಂ ಕಂಡು ತನ್ನ ತೊಟ್ಟಾಭರಣಮನೆಲ್ಲಮಂ ಕಳೆದೊಪ್ಪಿಸೆಯಾತನಿಂತೆಂದನೆನಗೇನೊಂದೆ ಭವಮೆ ನಿನ್ನ ಕೈಯದಂ

ಅಲಂಕಾರವನ್ನು ತೋರಿಸಬೇಕೆಂದು ನೀನು ಕೇದಿದ್ದಿ. ನಾನು ಆ ಪ್ರತಿಜ್ಞೆಯನ್ನು ಈಗ ಈಡೇರಿಸಲಿಕ್ಕಾಗಿ ಬಂದಿದ್ದೇನೆ’ ಎಂದು ತನ್ನನ್ನು ತೋರಿಸಿದಳು. ಆಗ ಧನದತ್ತನು ಆಕೆಯ ರೂಪವನ್ನು ನೋಡಿ ಮೆಚ್ಚಿ – “ನೀನು ವಿದ್ಯಾಧರಿಯ ಅಥವಾ ದೇವತಾ ಸ್ತ್ರೀಯ ರೂಪವನ್ನು ಹೋಲುತ್ತಿರುವೆ* ಎಂದು ಹೊಗಳಿ ಮತ್ತೆ ಹೀಗೆಂದನು – “ನೀನು ಪ್ರತಿಜ್ಞೆಯನ್ನು ನಡೆಸಿದೆ, ಒಳ್ಳೆದಾಯಿತು. ಈ ಹೊತ್ತಿಗೆ ನೀನು ಬಂದುದು ಒಳ್ಳೆಯದಲ್ಲ. ಮಧ್ಯರಾತ್ತಿಯಲ್ಲಿ ಕಳ್ಳರೂ ತಳವಾರರೂ ತೊಂದರೆ ಕೊಡುವರು. ಬೇಗ ಹೋಗು* ಎಂದು ನುಡಿದ ಹೋಗಲು ಹೇಳಿದನು. ಈ ಮಾತೆಲ್ಲವನ್ನೂ ಆ ಮೂವರೂ ಹೊರಗಿನಿಂದ ಕೇಳಿ ಮತ್ತೆ ಬೇಗ ಬೇಗನೆ ಹೋಗಿ ತಾವು ಮೊದಲಿದ್ದ ಸ್ಥಳಗಳಲ್ಲಿಯೇ ಇದ್ದರು. ಅಷ್ಟರಲ್ಲಿ ಆ ಮದುಮಗಳು ಸುದಾಮೆ ರಾಕ್ಷಸನಲ್ಲಿಗೆ ಬಂದು ‘ನೀನು ನನ್ನನ್ನು ಇಷ್ಟಬಂದಂತೆ ಮಾಡು’ ಎಂದು ತನ್ನನ್ನು ತೋರಿಸಿದಳು. ಆಗ ಬ್ರಹ್ಮರಾಕ್ಷಸನು ಹೀಗೆಂದನು – *ನೀನು ಸತ್ಯವಾದಿಯಾಗಿರುವೆ.ಅತ್ಯಂತ ರೂಪ – ಲಾವಣ್ಯ – ಸೌಭಾಗ್ಯ – ಕಾಂತಿ ಹಾವ – ಭಾವ – ವಿಲಾಸ ವಿಭ್ರಮಗಳುಳ್ಳವಳು. ನಿನ್ನನ್ನು ತಿಂದು ಯಾವ ದುರ್ಗತಿಗೆ ಹೋಗುವೆನು! ನಿನ್ನ ರೂಪವನ್ನು ಕೆಡಿಸಲಾರೆನು. ಆದುದರಿಂದ ಹೆದರದೆ ಹೋಗು* – ಎಂದು ಹೋಗಲು ಹೇಳಿದನು. ಅವಳು ಮುಂದೆ ಬರುತ್ತ ತಳಾರನನ್ನು ಕಂಡು “ಇನ್ನು ನೀನು ನನ್ನನ್ನು ಇಷ್ಟಬಂದಂತೆ ಮಾಡು* ಎಂದು ಹೇಳಿದಳು. ಅದಕ್ಕೆ ಅವನು ಹೀಗೆಂದನು – “ನೀನು ಕೆಟ್ಟ ಹೆಂಗಸೆಂದು ನಾನು ಮನಸ್ಸಿನಲ್ಲಿ ಭಾವಿಸಿದ್ದೆನು. ನಿನ್ನ ಹಾಗೆ ಒಳ್ಳೆಯವರು ಯಾರೂ ಇಲ್ಲ. ಕೊಟ್ಟ ಭಾಷೆಗೆ ತಪ್ಪದೆ ಬಂದಿರುವೆ. ಸತ್ಯವಾದಿಯಾಗಿದ್ದಿ. ಹೋಗು ತಾಯೇ* ಎಂದು ಹೋಗಲು ಹೇಳಿದನು. ಸುದಾಮೆ ಮುಂದೆ ಬರುವಷ್ಟರಲ್ಲಿ ಕಳ್ಳನನ್ನು ಕಂಡು, ತಾನು ಧರಿಸಿದ್ದ ತೊಡಿಗೆಗಳೆಲ್ಲವನ್ನೂ ಕಳಚಿ ಅವನಿಗೆ ಒಪ್ಪಿಸಿದಳು. ಆಗ ಅವನು ಹೀಗೆಂದನು – “ನನಗೇನು ಇದು ಒಂದೇ ಜನ್ಮವೇ ? ನಿನ್ನ ಕೈಯ ಆಭರಣಗಳನ್ನು

ಕೊಂಡಾನೇನಾಚಂದ್ರಾರ್ಕತಾರಂಬರಂ ಬರ್ದಪ್ಪೆನೆ ಎಣಿಕೊಂಡ ಕಸವರಂ ತವನಿಯಂತೆ ತವರ್ದಪ್ಪುದೆ ನಿನ್ನ ಕೈಯಿಂದಾಂ ಕೊಳ್ಳೆ ಪೋಗಬ್ದಾ ಎಂದು ಪೋಗಲ್ವೇೞ್ದನಂತಾ ಮೂವರಂ ಮದೆವಳಂ ಪೋಗಲ್ವೇೞ್ದು ಪೂಜಿಸಿ ಕೞಪಿದೊಡಾಕೆಯುಂ ತನ್ನ ಮನೆಗೆ ಪೋದಳಿಂತವರೊಳ ಗೊಳ್ಳಿದರಾರಣ್ಣಂಗಳಿರಾ ಪೇೞೆಯಂ ಕೊಂದವಂ ಬೊಮ್ಮರಾಕ್ಷಸನಾಕೆಯಂ ತಿನ್ನದೆ ಕೞಪಿದೊಡಾತನೊಳ್ಳಿದನೆಂದಂ ಸರ್ಪದಷ್ಟನಂ ಕಾದಿರ್ದಾತಂ ತಳಾಱಂ ಕಾಡದೆ ಕೞಪಿದನಾತನೊಳ್ಳಿದನೆಂದಂ ಕಿಚ್ಚಂ ತರಲ್ ಪೋದಾತನಿಂತೆಂದಂ ಮದೆವಳಂ ಸೋದರ ಮಯ್ದುನನತ್ಯಂತ ರೂಪಲಾವಣ್ಯ ಕಾಂತಿ ಹಾವ ಭಾವ ವಿಲಾಸ ವಿಭ್ರಮಂಗಳನೊಡೆಯೊಳಂ ಸೋದರಮಾವನ ಮಗಳಂ ತನ್ನಲ್ಲ್ಲಿಗೆ ವಂದೊಳನೇಕಾಂತಂ ಸಮನಿಸಿದೊಡಾಕೆಗಳಿಪದೆ ಪೋಗಲ್ವೇೞ್ದ ಧನದತ್ತನೊಳ್ಳಿದನೆಂದಂ ಪುಳ್ಳಿಯಂ ತರಲ್ ಪೋದಾತಂ ಸಾಸಿರದೀನಾರದ ಪೊಟ್ಟಳಿಗೆಯಂ ಕಳ್ದಾತನಿಂತೆಂದಂ ಮದೆವಳ್ ತೊಟ್ಟಾಭರಣಮೆಲ್ಲಮಂ ಕೊಳ್ಳದೆ ಕೞಪಿದ ಕಳ್ಳನೊಳ್ಳಿದನೆಂದೊಡಾತನ್ ಕಳ್ಳನಪ್ಪುದನಱೆದು ಕಿರಿದು ಬೇಗಮಿರ್ದ್ದಾ ನುಡಿಗಳೆಲ್ಲಮಂ ಮಱೆಯಿಸಿ ಎಲ್ಲರುಮಂ ಮಱಲುಂದಿಸಿದ ಬೞಕ್ಕಮಾ ಕಳ್ಳನ

ತೆಗೆದುಕೊಡು ನಾನೇನು ಚಂದ್ರಸೂರ್ಯ ನಕ್ಷತ್ರಗಳಿರುವ ತನಕ (ಶಾಶ್ವತವಾಗಿ) ಬದುಕಿರುವೆನೆ ? ಎಣಿಕೆಮಾಡಿ ತೆಗೆದುಕೊಂಡ ಚಿನ್ನವು ಅಕ್ಷಯ ಸಂಪತ್ತಿನಂತೆ ನಾಶವಾಗದೆಯೇ ಇದ್ದೀತೆ ? ನಿನ್ನ ಕೈಯಿಂದ ತೆಗೆದುಕೊಳ್ಳೆನು ಹೋಗು ತಾಯೇ* ಎಂದು ಹೋಗಲು ಹೇಳಿದನು. ಆಕೆ ತನ್ನ ಮನೆಗೆ ಹೋದಳು. ಏಲೈ ಅಣ್ಣಂದಿರೇ, ಹೀಗೆ ಅವರಲ್ಲಿ ಒಳ್ಳೆಯವರು ಯಾರು ? ಹೇಳಿ – ಎಂದು ಆ ಸುಮತಿ ಎಂಬ ಕನ್ಯೆ ಸುಭಟರೊಡನೆ ಕೇಳಿದಳು. ಆಗ ಅವರಲ್ಲಿ ಒಬ್ಬನು – ಕುರಿಯನ್ನು ರಾತ್ರಿಯಲ್ಲಿ ಕೊಂದವನು ‘ಬ್ರಹ್ಮರಾಕ್ಷಸನು ಸುದಾಮೆಯನ್ನು ತಿನ್ನದೆ ಕಳುಸಿಸಿದುದರಿಂದ ಅವನು ಒಳ್ಳೆಯವನು’ ಎಂದನು. ಬೆಂಕಿ ತರಲು ಹೋದವನು ಹೀಗೆಂದನು – “ಧನದತ್ತನು ಒಳ್ಳೆಯವನು’ ಯಾಕೆಂದರೆ ಅವನು ಸೋದರ ಮೈದುನನಾಗಿದ್ದರೂ ತನ್ನ ಬಳಿಗೆ ಬಂದಂತು ಸೋದರಮಾವನ ಮಗಳನ್ನು ಮದುಮಗಳನ್ನು ಅತ್ಯಂತ ರೂಪ – ಲಾವಣ್ಯ – ಸೌಭಾಗ್ಯ – ಕಾಂತಿ – ಹಾವ – ಭಾವ – ವಿಲಾಸ – ವಿಭ್ರಮಗಳುಳ್ಳವಳನ್ನು ಏಕಾಂತದಲ್ಲಿ ಪ್ರಾಪ್ತವಾದವಳಾದರೂ ಆಕೆಯಲ್ಲಿ ಮೋಹಗೊಳ್ಳದೆ ಅವಳನ್ನು ಹೋಗಲು ಹೇಳಿದನು. ಆದುದರಿಂದ ಅವನು ಒಳ್ಳೆಯವನು* ಎಂದು ಹೇಳಿದನು. ಕಟ್ಟಿಗೆ ತರಲು ಹೋದವನು, ಸಾವಿರ ದೀನಾರದ ಪೊಟ್ಟಣವನ್ನು ಕದ್ದವನಾಗಿದ್ದು ಹೀಗೆಂದನು – “ಮದುಮಗಳು ಧರಿಸಿದ ತೊಡಿಗೆಗಳೆಲ್ಲವನ್ನೂ ತೆಗೆದುಕೊಳ್ಳದೆ ಕಳುಹಿಸಿದ ಕಳ್ಳನು ಒಳ್ಳೆಯವನು* ಎಂದನು. ಆಗ ಆತನು ಕಳ್ಳನಾಗಿರುವುದನ್ನು ತಿಳಿದು ಆಕೆ ಸ್ವಲ್ಪ ಹೊತ್ತು ಇದ್ದು, ಆ ಮಾತುಗಳೆಲ್ಲವನ್ನೂ ಮರೆತಂತೆ ವರ್ತಿಸಿ ಎಲ್ಲರನ್ನೂ ಮೈ ಮರೆತು ನಿದ್ದೆ ಮಾಡಿಸಿದ ನಂತರ ಆ ಕಳ್ಳನನ್ನು ಎಬ್ಬಿಸಿ ರಹಸ್ಯದಲ್ಲಿ ಹೀಗೆಂದಳು – “ನಿನ್ನನ್ನು ನಾನು ಪ್ರೀತಿಸಿದ್ದೇನೆ, ನನಗೆ ಬೇಕಾದಷ್ಟು ಆಭರಣವನ್ನು ಮಾಡಿಸಲು ತಕ್ಕ ಐಶ್ವರ್ಯ ನಿನ್ನಲ್ಲಿದ್ದರೆ, ನಾನು ನಿನ್ನ ಹೆಂಡತಿಯಾ

ನೆೞ ಏಕಾಂತದೊಳಿಂತೆಂದು ನುಡಿಗುಂ ನಿನಗಾನಾಟಿಸಿದೆನೆನಗೆ ನೆಱೆಯೆ ತುಡುಗೆಯಂ ಮಾಡಿಸಲ್ ಭಾಗಸಮುಳ್ಳೊಡೆ ನಿನಗಾಂ ಪೆಂಡತಿಯೆನಾಗಿ ನಿನ್ನೊಡವರ್ಪೆನೆಂವನನುರ್ಕೆವದಿಂದಂ ಮನಂಗೊಳೆ ನಂಬೆ ನುಡಿದೊಡಾತನುಂ ಮೆಯ್ಯಱಯದೆ ದೀನಾರದ ಸಹಸ್ರದ ಪೊಟ್ಟಳಿಗೆಯಂ ತೆಗೆದು ಕೊಟ್ಟಾನಿದಱೊಳಗೆ ನಿನಗೆ ತುಡುಗೆಯಂ ಮಾಡಿಸುವೆ. ಬಾ ಪೋಪಮಿರ್ವರುಮೆಂದೊ ಡಂತೆಗೆಯ್ವೆನೆಂದು ಪೊಟ್ಟಳಿಗೆಯಂ ತಂದೆಯ ಮಱಲುಂದಿದಲ್ಲಿಗೆ ಪೋಗಿ ಬರುಂತಿ ಎೞ ಪೊಟ್ಟಳಿಗೆಯಂ ತಂದೆಗೆ ಕೊಟ್ಟಳ್ ಕೊಟ್ವೊಡಾತನುಂ ಕಳ್ಳನುಮಂ ದೀನಾರದ ಸಹಸ್ರದ ಪೊಟ್ಟಳಿಗೆಯುಮಂ ಕೊಂಡು ಪೋಗಿಯರಸಂಗೊಪ್ಪಿಸಿದನೆಂಬೀ ಚಿತ್ರಕಥೆಗಳುಮಂ ಜನಂಗಳ್ಗೆ ಪೇೞ್ದು ಬತ್ತಮಂ ಕಳ್ದೊಂ ವ್ಯೆನಯಿಕನೆಂಬೊಂ ಕಳ್ಳನಿನ್ನುಮಾತನ ಪೇೞ್ದ ಕಥೆಗಳುಮಂ ಪೇೞ್ವೆಂ ಕೇಳ್ ಮಗಳೆ ಎಂದು ಸೋಮಶರ್ಮಭಟ್ಟಂ ನಾಗಶ್ರೀಗಿಂತೆಂದು ಪೇೞ್ಗುಂ ಧರ್ಮಪುರಮೆಂಬುದು ಪೊೞಲಲ್ಲಿ ನಾಗದತ್ತನೆಂಬೊಂ ಶ್ರೇಷ್ಠಿಯಾತನ ಬಂಟಂ ವೈನಾಕನೆಂಬೊನಾತನೊಂದು ದಿವಸಂ ಕರ್ಬ್ಬಿನ ಕೆಯ್ಯನುೞ್ವೊಂ ನಿದಾನಮಂ ಕಂಡದಂ ಮಱಸಲ್ವೇಡಿ ತನ್ನ ಪೆಂಡತಿಯ ಮನಮಂ ಪರೀಕ್ಷಿಸಲ್ವೇಡಿ ಕೃತಕಗರ್ಭಮಂ ತಾಳ್ದಿರೆ ಪೆಂಡತಿ ಕಂಡಿದೇನ್ ಬಸಿಱೊಳಿರ್ದುದೆಂದೊಡಾತನಾ ಮಾತಿನೊಳೇನೊ ಕೆಮ್ಮಗಿರೆಂದೊಡಾಕೆ ನಿರ್ಬಂಧದಿಂ ಕೀಱ ಬೆಸಗೊಳೆಯಾರ್ಗಂ ಪೇೞೆಯಪ್ಪೊಡೆ ನಿನಗೆ ಪೇೞ್ವೆನೆಂದಿಂತೆಂದಂ ಪುರುಷರ್ಕ್ಕಳ್ಗಾಗದುದೆನಗಾದುದೆಂದು ಪೇೞ್ದೊಡದಂ ಕೇಳ್ದು ಸೈರಿಸಲಾಱದೆ