ಗಾಹೆ || ಭಲ್ಲುಕ್ಕಿಯೇಣ ಣಿಚ್ಚಂ ಖಜ್ಜಂತೋ ಘೋರ ವೇದಣಠ್ಠೋಪಿ
ಆರಾಧಣಂ ಪವಣ್ಣೋ ಝಾಣೇಣ ಅವಂತಿ ಸುಕುಮಾರೋ ||

*ಭಲ್ಲುಕ್ಕಿಯೇಣ – ಮುನ್ನಿನ ಜನ್ನಾಂತರದತ್ತಿಗೆಯಪ್ಪ, ಪೆಣ್ಣರಿಯಿಂದಂ, ಣಿಚ್ಚಂ ಖಜ್ಜಂತೋಮೂಱುದಿವಸಂ ನಿರಂತರಮಿರುಳುಂ ಪಗಲುಂ ತಿನೆಪಡುತಿರ್ದೊನಾಗಿಯುಂ, ಘೋರ ವೇದಣಠ್ಠೋಪಿ – ಕಡಿದಪ್ಪ ವೇದನೆಯಿಂದಂ ಬೞ*ದೊನಾಗಿಯೂ, ಆರಾಧಣಂ – ಸಮ್ಯಗ್ದರ್ಶನ ಜ್ಞಾನ ಚಾರಿತ್ರಾತ್ಮಕಮಪ್ಪಾರಾಧನೆಯಂ, ಝಾಣೇಣ – ಉತ್ತಮ ಧ್ಯಾನದಿಂದಂ, ಅವಂತಿ ಸುಕುಮಾರೋ – ಆವಂತಿಯೆಂಬ ಸುಕುಮಾರಸ್ವಾಮಿ, ಪವಣ್ಣೋ – ಪೊರ್ದಿದೊಂ* ಅದೆಂತೆಂದೊಡೆ

ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ವತ್ಸೆಯೆಂಬುದು ನಾಡಲ್ಲಿ ಕೌಸಂಬಿಯೆಂಬುದು ಪೊೞಲದನಾಳ್ವೊನತಿಬಳನೆಂಬರಸನಾತನ ಮಹಾದೇವಿ ಮನೋಹರಿಯೆಂಬೊಳ್ ಪೆಸರ್ಗೆ ತಕ್ಕಂತೆ ನೋಡಿದರೆಲ್ಲರ ಕಣ್ಣಾಲಿಗೆ ಸೊಗಯಿಸುವಳ್ ಸತ್ಯಶೌಚಾಚಾರಂಗಳಿಂ ಕೊಡಿದೊಳ್ ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿ ಹಾವ ಭಾವ ವಿಲಾಸ ವಿಭ್ರಮಂಗಳನೊಡಯಳಂತವರ್ಗಳಿಷ್ಟವಿಷಯ ಕಾಮಭೋಗಂಗಳನನುಭವಿಸುತ್ತಿರೆ ಮತ್ತಾ ಅರಸನ ಮಂತ್ರಿ ಸೋಮಶರ್ಮನೆಂಬೊನಾತನ ಭಾರ್ಯೆ ಕಾಶ್ಯಪಿಯೆಂಬೊಳ್ – ಇರ್ವರ್ಗಂ ಮಕ್ಕಳಗ್ನಿಭೂತಿ ವಾಯುಭೂತಿಯೆಂಬವರ್ಗಳ್ ತಾಯ್ ತಂದೆವಿರ ಕೇಳ್ಪಿಯಂ ಗೆಯ್ಯದಾ ವೇದಂ ಮೊದಲಾಗೊಡೆಯ ಶಾಸ್ತ್ರಂಗಳನೋದದೆ ತಂದೆ ಪಡೆದ ಕಸವರಮಂ ಬಿಯಂಗೆಯ್ಯುತ್ತುಂ ಸಪ್ತವ್ಯಸನಾಭಿಭೂತರಾಗಿ ನೆಗೞುತ್ತಿರೆಯಿರೆ ಪಲಕಾಲದಿಂ ತಂದೆ

* ಅವಂತಿ ಸುಕುಮಾರ ಎಂತಲೂ ಹೆಸರುಳ್ಳ ಸುಕುಮಾರಸ್ವಾಮಿಯನ್ನು ಹಿಂದಿನ ಜನ್ಮಾಂತರದಲ್ಲಿ ಅತ್ತಿಗೆಯಾಗಿದ್ದ ಹೆಣ್ಣುನರಿ ಎಡೆಬಿಡದೆ ಮೂರುದಿವಸ ಇರಳೂ ಹಗಲೂ ಕಚ್ಚಿ ತಿನ್ನುತ್ತಿತ್ತು. ಈ ಕಠಿಣವಾದ ನೋವಿನಿಂದ ಸತ್ತವನಾದರೂ ಶ್ರೇಷ್ಠವಾದ ಧ್ಯಾನದಿಂದ ಅವನು ಸಮ್ಯಗ್ದರ್ಶನ ಸಮ್ಯಗ್ eಜ್ಞಾನ ಸಮ್ಯಕ್ ಚಾರಿತ್ರ ಎಂಬ ರತ್ನತ್ರಯಗಳಿಂದ ಕೂಡಿದ ಆರಾಧನೆಯನ್ನು ನಡೆಸಿದನು.* ಅದು ಹೇಗೆಂದರೆ – ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ವತ್ಸೆ ಎಂಬ ನಾಡಿದ್ದಿತು. . ಆ ನಾಡಿನ ಪಟ್ಟಣ ಕೌಸಂಬಿ. ಅದನ್ನು ಅತಿಬಳನೆಂಬ ಅರಸನು ಆಳುತ್ತಿದ್ದನು. ಅವನ ಪಟ್ಟದ ರಾಣಿಯ ಹೆಸರು ಮನೋಹರಿ. ಆಕೆ ಹೆಸರಿಗೆ ತಕ್ಕಂತೆ ನೋಡಿದವರೆಲ್ಲರ ಕಣ್ಣಿಗೂ ಚೆಲುವೆಯಾಗಿದ್ದಳು. ಸತ್ಯ – ಶುಚಿತ್ವ – ಸದಾಚಾರಗಳಿಂದ ಕೂಡಿದ್ದಳು, ಅತ್ಯಂತ ರೂಪ – ಸೌಂದರ್ಯದಿಂದಲೂ ಸೌಭಾಗ್ಯ, ಕಾಂತಿ ಹಾವ, ಭಾವ, ವಿಲಾಸ, ವಿಭ್ರಮಗಳನ್ನು ಉಳ್ಳವಳಾಗಿದ್ದಳು. ಆಂತು ಅವರಿಬ್ಬರು ತಮ್ಮ ಪ್ರೀತಿಯ ವಿಷಯದ ಸುಖಗಳನ್ನು ಅನುಭವಿಸುತ್ತಾ ಇದ್ದರು. ಆ ಅರಸನ ಮಂತ್ರಿ ಸೋಮಶರ್ಮನು. ಆತನ ಹೆಂಡತಿ ಕಾಶ್ಯಪಿಯೆಂಬವಳು. ಈ ಇಬ್ಬರಿಗೆ ಅಗ್ನಿಭೂತಿ ವಾಯುಭೂತಿ ಎಂಬಿಬ್ಬರು ಮಕ್ಕಳು. ಇವರು ತಂದೆತಾಯಿಗಳ ಮಾತನ್ನೇ ಕೇಳುತ್ತಿರಲಿಲ್ಲ. ವೇದ ಮುಂತಾದ ಯಾವ ಶಾಸ್ತ್ರಗಳನ್ನೂ ಓದಲಿಲ್ಲ. ತಂದೆ ಸಂಪಾದಿಸಿದ ಸಂಪತ್ತನ್ನೆಲ್ಲ ವೆಚ್ಚಮಾಡುತ್ತ ಬೇಟೆ, ಜೂಜು, ಮಾಂಸಸೇವನೆ, ಮದ್ಯಪಾನ, ವೇಶ್ಯಾಗಮನ, ಕಳ್ಳತನ, ದುರ್ವಾಕ್ಯ – ಎಂಬ ಏಳು ಬಗೆಯ ಕೆಟ್ಟ ಚಟಗಳಿಗೆ ಬಲಿಯಾಗಿ ನಡೆಯುತ್ತಿದ್ದರು. ಹೀಗೆ ಹಲವು ಕಾಲ

ಕೞೆದೊಡೆ ಸೋಮಶರ್ಮಂಗೆ ಮಕ್ಕಳೊಳರಿಲ್ಲೆಂದರಸಂ ಬೆಸಗೊಂಡೊಡೊಳರೆಂದು ಪೇೞ್ದೊಡವರ್ಗೆ ಬೞೆಯಟ್ಟಿವರಿಸಿ ಮಜ್ಜನದೊಳ್ ಮಿಸಿಸಿ ಉಡಿಸಿ ತುಡಿಸಿಯೂಡಿ ತಂಬುಲಂಗೊಟ್ಟುಬ್ಬೆಗಂಬಡದಿರಿ ಮೆಂದು ನುಡಿದವರ್ಗ್ಗಳ ದು:ಖಮನಾಱ*ಸಿ ಬೀಡಿಂಗೆ ಪೋಗಲ್ವೇೞ್ದು ಕೆಲವು ದಿವಸದಿಂ ಬೞೆಯಟ್ಟಿ ವರಿಸಿ ನೀವಾ ವೋದುಗಳಂ ಬಲ್ಲಿರೆಂದಿರ್ವರುಮಂ ಬೆಸಗೊಂಡೊಡವರ್ಗ್ಗಳ್ ತಲೆಯಂ ಬಾಗಿ ಮೞುಮಾತುಗುಡದೆ ಕಣ್ಣ ನೀರಂ ತೀವಿ ನೆಲನಂ ಬರೆಯುತ್ತಿರೆ ಸಭೆಯೊಳಿರ್ದ್ದವರ್ಗ್ಗಳೆಲ್ಲಂ – ಇವರ್ ಮೂರ್ಖರೇನುಮೋದುಗಳನಱ*ಯರ್ ಸಪ್ತವ್ಯಸನಾಭಿಭೂತರೆಂದರಸಂಗೆ ಪೇೞ್ದೊಡರಸನವರ್ಗಳನಟ್ಟಿ ಕಳೆದವರ ದಾಯಿಗಂ ಶಾಸ್ತ್ರಂಗಳಂ ಬಲ್ಲೊಂಗಂ ಮಂತ್ರಿಪದವಿಯಂ ಬಾೞುಮಂ ಪ್ರತಿಪತ್ತಿಯುಮಂ ಕೊಟ್ಟುದಂ ಕೇಳ್ದಿರ್ವರುಮುಬ್ಬೆಗಂಬಟ್ಟು ವೈರಾಗ್ಯಪರಾಯಣರಾಗಿ ಕಪ್ಪಡಮುಟ್ಟು ಬೈಕಂದಿರಿದಿನ್ನಪ್ಪೊಡವೋದುವಮೆಂದು ತಾಯ್ಗೆ ನುಡಿದೊಡಂತಪ್ಪೊಡೆ ಮಕ್ಕಳಿರಾ ಮಗಧೆಯೆಂಬುದು ನಾಡಲ್ಲಿ ರಾಜಗೃಹಮೆಂಬುದು ಪೊೞಲದನಾಳ್ವೊಂ ಸುಬಲನೆಂಬರಸನಾತನ ಮಹಾದೇವಿ ಸುಪ್ರಭೆಯೆಂಬೊಳವರ್ಗ್ಗೆ ಮಂತ್ರಿಯೆಮ್ಮಣ್ಣಂ ಸೂರ್ಯಮಿತ್ರನೆಂಬೊಂ ಎಲ್ಲಾ ಓದುಗಳುಮಂ ಬಲ್ಲೊನಾತಂ ನಿಮ್ಮನೋದಿಸಿ ಯೋಗ್ಯರಂ ಮಾಡುವಂತಿರೆ ನಿರೂಪಿಸಿ ಕಲ್ಪಿಸಿಯೋಲೆಯಂ ಬರೆಯಿಸಿ

ಕಳೆಯಿತು. ತಂದೆ ಸೋಮಶರ್ಮನು ತೀರಿಹೋದನು. ಅತಿಬಳ ಮಹಾರಾಜನು ಸೋಮಶರ್ಮನಿಗೆ ಮಕ್ಕಳಿದ್ದಾರೋ ಇಲ್ಲವೋ ಎಂದು ವಿಚಾರಿಸಿದನು ; ಇದ್ದಾರೆಂದು ತಿಳಿದು, ಒಡನೆ ದೂತರನ್ನು ಕಳುಹಿಸಿ ಅವರಿಬ್ಬರನ್ನೂ ಬರಿಸಿದನು. ಅವರಿಗೆ ಪೂರ್ಣಸ್ನಾನ ಮಾಡಿಸಿ, ಬಟ್ಟೆಯುಡಿಸಿ, ತಕ್ಕ ಭೂಷಣಗಳನ್ನು ಕೊಡಿಸಿ, ಊಟಮಾಡಿಸಿದನು, ತಾಂಬೂಲ ಕೊಟ್ಟು ‘ನೀವು ದುಃಖ ಪಡದಿರಿ”’ ಎಂದು ಹೇಳಿ ಅವರ ವ್ಯಸನವನ್ನು ನಿವಾರಿಸಿ, ತಮ್ಮ ಮನೆಗೆ ಕಳುಹಿಸಿ ಕೊಟ್ಟನು. ಕೆಲವು ದಿನಗಳ ನಂತರ ರಾಜನು ಪುನಃ ದೂತರನ್ನು ಕಳುಹಿಸಿ ಅವರನ್ನು ಬರಮಾಡಿದನು. “ ನೀವು ಯಾವ ವಿದ್ಯೆಗಳನ್ನು ಬಲ್ಲರಿ?*’ ಎಂದು ಇಬ್ಬರನ್ನೂ ಕೇಳಿದನು. ಆಗ ಅವರು ತಲೆಬಗ್ಗಿಸಿದರು ; ಪ್ರತ್ಯುತ್ತರ ಕೊಡಲಿಲ್ಲ. ಕಣ್ಣೀರನ್ನು ತುಂಬಿ ನಾಚಿಕೆಯಿಂದ ನೆಲದ ಮೇಲೆ ಕಾಲ ಬೆರಳಿನಿಂದ ಗೀರತೊಡಗಿದರು. ಆಗ ಸಭೆಯಲ್ಲದ್ದವರೆಲ್ಲರೂ ರಾಜನಿಗೆ ಹೀಗೆಂದರು – “ಇವರು ತಿಳಿಗೇಡಿಗಳು. ವಿದ್ಯೆಗಳೇನನ್ನೂ ತಿಳಿಯರು. ಸಪ್ತವ್ಯಸನಗಳ ಬಾಧೆಗೆ ಒಳಗಾದವರು* ಆಗ ರಾಜನು ಅವರನ್ನು ಅಲ್ಲಿಂದ ಓಡಿಸಿಬಿಟ್ಟನು. ಅವರ ದಾಯಾದಿಯಾಗಿದ್ದು ಶಾಸ್ತ್ರಗಳನ್ನೆಲ್ಲಾ ತಿಳಿದವನಾದ ಒಬ್ಬನಿಗೆ ಮಂತ್ರಿ ಪದವಿಯನ್ನೂ ಜೀವಿಕೆಯನ್ನೂ ಗೌರವವನ್ನೂ ಕೊಟ್ಟನು. ಈ ಸಂಗತಿಯನ್ನು ಅಗ್ನಿಭೂತಿ ವಾಯುಭೂತಿ ಇಬ್ಬರೂ ಕೇಳಿ ವ್ಯಸನಪಟ್ಟರು. ಅವರು ವೈರಾಗ್ಯದಿಂದ ಹರಕು ಬಟ್ಟೆಯನ್ನುಟ್ಟು, ಭಿಕ್ಷೆ ಬೇಡಿಕೊಂಡಾದರೂ ಇನ್ನಾದರೂ ಓದೋಣ ಎಂದುಕೊಂಡು, ತಮ್ಮ ತಾಯಿಗೆ ಈ ಸಂಗತಿಯನ್ನು ತಿಳಿಸಿದರು. ಆಗ ಕಾಶ್ಯಪಿ ಅವರೊಡನೆ ಹೀಗೆ ಹೇಳಿದಳು – “ಮಕ್ಕಳೇ, ಮಗಧೆ ಎಂಬ ನಾಡಿನಲ್ಲಿ ರಾಜಗೃಹ ಎಂಬ ಪಟ್ಟಣವಿದೆ. ಅದನ್ನು ಸುಬಲನೆಂಬ ರಾಜನು ಆಳುತ್ತಿರುವನು. ಅವರ ರಾಣಿ ಸುಪ್ರಭೆ. ಅವರಿಗೆ ಮಂತ್ತಿಯಾಗಿರುವ ಸೂರ್ಯಮಿತ್ರ ನನ್ನಣ್ಣ. ಅವನು ಎಲ್ಲ ವಿದ್ಯೆಗಳನ್ನೂ ಬಲ್ಲವನು. ಆತನು ನಿಮ್ಮನ್ನು ಓದಿಸಿ ಯೋಗ್ಯರನ್ನಾಗಿ ಮಾಡಲು ಹೇಳಿ ತಿಳಿಸಿ ಪತ್ರ ಬರೆಯಿಸಿ ನಿಮ್ಮ ಕೈಯಲ್ಲಿ ಕಳುಹಿಸುತ್ತೇನೆ. ನೀವು ಹೋಗಿ ನಿಮ್ಮ ಮಾವನ ಬಳಿಯಿದ್ದು ವಿದ್ಯೆ ಕಲಿಯಿರಿ*.

ನಿಮ್ಮ ಕಯ್ಯೊಳಟ್ಟಿದಪೆಂ ನೀಮುಂ ಪೋಗಿ ನಿಮ್ಮ ಮಾವನ ಪಕ್ಕದೊಳೋದಿಮೆಂದೋಲೆಯಂ ಬರೆಯಿಸಿ ಕೊಟ್ಟೊಡವರ್ಗ್ಗಳುಂ ತಾಯಂ ಬೀೞ್ಕೊಂಡು ಕತಿಪಯ ದಿವಸಂಗಳಿಂ ರಾಜ ಗೃಹಮನೆಯ್ದಿ ಸೂರ್ಯಮಿತ್ರನ ಮನೆಯಂ ಬೆಸಗೊಂಡು ಪೋಗಿ ಕಂಡೋಲೆಯನಿಕ್ಕಿದೊಡೆ ಸೂರ್ಯಮಿತ್ರನೆಲ್ಲಿಂ ಬಂದಿರಾರೋಲೆಯೆಂದು ಬೆಸಗೊಂಡೊಡೆ – – ಕೌಸಂಬಿಯಿಂ ಬಂದೆವು ನಿಮ್ಮ ತಂಗೆಯಪ್ಪ ಕಾಸ್ಯಪಿಯಟ್ಟಿ ದೋಲೆಯೆಂದೊಡೋಲೆಯಂ ಬಾಜಿಸಿ ನೋಡಿ ಸೋಮಶರ್ಮಂ ಕೞೆದುದುಮಂ ಮಂತ್ರಿಪದವಿ ಪೆಱರ್ಗ್ಗಾದುದುಮಂ ಮಕ್ಕಳ್ ಸಪ್ತವ್ಯಸನಾಭಿಭೂತಾರಾಗಿ ಬಾೞ*ಂ ಕೆಟ್ಟುದುಮಂ ಶಾಸ್ತ್ರಜ್ಞರುಂ ಬುದ್ಧಿಯೊಡೆಯರುಂ ಯೋಗ್ಯರುಮಪ್ಪಂತು ಮಾಡಿಮೆಂದು ಮಕ್ಕಳಂ ತನಗೆ ನಿರೂಪಿಸಿಯಟ್ಟಿದುದುಮನಿಂತಿವೆಲ್ಲಂ ಬಾಜಿಸಿ ನೋಡಿ – ಇವಂದಿರ್ಗ್ಗೆ ಪಸರಂಗೊಟ್ಟೆನಪ್ಪೊಡೆ ಮುನ್ನಿನಂತುರ್ಕಿ ಕಿಡುವರೆಂದು ಮನದೆ ಬಗೆದಗ್ನಿಭೂತಿ ವಾಯುಭೂತಿಗಳ್ಗಿಂತೆಂದಂ – ಕಾಸ್ಯಪಿಯೆಂಬೊಳೆನಗೆ ತಂಗೆಯಿಲ್ಲ ಸೋಮಶರ್ಮನೆಂಬೊಂ ಮಯದುನನುಮಿಲ್ಲ ಸೂರ್ಯಮಿತ್ರನೆಂಬ ಪೆಸರನಗುಂಟು ನಿಮ್ಮ ಮಾವನಪ್ಪ ಸೂರ್ಯಮಿತ್ರನಲ್ಲೆನೆಂದವರ್ಗ್ಗೆ ನುಡಿದುಂ ಮತ್ತಮಿಂತೆಂದಂ ನೀಮಾರ್ಗ್ಗಾರಾದೊಡಮೇಂ ವಿದ್ಯಾರ್ಥಿಗಳಾಗಿಯೋದಂ ಕಲ್ವೆಮೆಂಬೞ್ತೆಯೊಳ್ ಬಂದಿರಪ್ಪೊಡೆ ಬೈಕಂದಿರಿದು ಕಪ್ಪಡಮುಟ್ಟಿರುಳುಂ ಪಗಲುಮಲಸದೆ ನಿರ್ಬಂಧದಿಂದೋದಲಾರ್ಪೊಡೆ ನಿಮ್ಮನೋದಿಸಲಕ್ಕುಮೆಂದೊಡವರ್ಗಳುಮಿಂ ದಯೆಗೆಯ್ಯಿಂ ಮಹಾಪ್ರಸಾದಮೆಂದು ಪೊಡೆಮಟ್ಟು

ಹೀಗೆಂದು ಆಕೆ ಪತ್ರ ಬರೆಸಿ ಕೊಟ್ಟಳು. ಅವರಿಬ್ಬರೂ ತಾಯಿಯನ್ನು ಬೀಳ್ಕೊಂಡರು. ಕೆಲವು ದಿವಸಗಳಲ್ಲಿ ರಾಜಗೃಹಕ್ಕೆ ಬಂದರು. ಅಲ್ಲಿ ಕೇಳಿಕೊಂಡು ಸೂರ್ಯಮಿತ್ರನ ಮನೆಗೆ ಹೋದರು. ಅವನನ್ನು ಕಂಡು ಪತ್ರವನ್ನು ಕೊಟ್ಟರು. ಆಗ ಸೂರ್ಯಮಿತ್ರನು “ನೀವು ಎಲ್ಲಿಂದ ಬಂದಿರಿ ? ಯಾರ ಪತ್ರವಿದು ? * ಎಂದು ಕೇಳಿದನು. ಅದಕ್ಕೆ ಇವರು “ನಾವು ಕೌಸಂಬಿಯಿಂದ ಬಂದೆವು. ಈ ಪತ್ರವನ್ನು ನಿಮ್ಮ ತಂಗಿ ಕಾಶ್ಯಪಿ ಕಳುಹಿಸಿದಳು* ಎಂದರು. ಸೂರ್ಯಮಿತ್ರನು ಆ ಪತ್ರವನ್ನು ಓದಿ ನೋಡಿದನು. ಸೋಮಶರ್ಮನು ತೀರಿಹೋದುದು, ಮಂತ್ರಿಪದವಿ ಬೇರೆಯವರಿಗೆ ಆದುದು, ಮಕ್ಕಳು ಕೆಟ್ಟ ಚಟಗಳಿಗೆ ಬಲಿಬಿದ್ದು ಜೀವನೋಪಾಯವನ್ನೇ ಕಳೆದುಕೊಂಡುದು, ಇವರನ್ನು ಶಾಸ್ತ್ರಜ್ಞರೂ ಬುದ್ದಿವಂತರೂ ಯೋಗ್ಯರೂ ಆಗುವಂತೆ ಮಾಡಬೇಕೆಂದು ಸೂಚಿಸಿ ಮಕ್ಕಳನ್ನು ತನ್ನ ಬಳಿಗೆ ಕಾಶ್ಯಪಿ ಕಳುಹಿಸಿದುದು ಹೀಗೆ ಇವೆಲ್ಲವನ್ನೂ ಓದಿ ನೋಡಿದನು. ನಾನು ಇವರಿಗೆ ಸಲುಗೆ ಕೊಟ್ಟೆನಾದರೆ ಇವರು ಹಿಂದಿನಂತೆ ಗರ್ವಿಷ್ಠರಾಗಿ ಹಾಳಾಗುವರು – ಎಂದು ಮನಸ್ಸಿನಲ್ಲಿ ಯೋಚಿಸಿದನು. ಅಗ್ನಿಭೂತಿ ವಾಯುಭೂತಿಗಳಿಗೆ ಮತ್ತೆ ಹೀಗೆದನು – “ನನಗೆ ಕಾಶ್ಯಪಿ ಎಂಬ ತಂಗಿಯಿಲ್ಲ. ಸೋಮಶರ್ಮ ಎಂಬ ಹೆಸರುಳ್ಳ ಭಾವಮೈದುನನೂ ಇಲ್ಲ. ನನಗೆ ಸೂರ್ಯಮಿತ್ತನೆಂಬ ಹೆಸರಿದೆ. ನಿಮ್ಮ ಮಾವನಾಗಿರುವ ಸೂರ್ಯಮಿತ್ರ ನಾನಲ್ಲ*. ಮತ್ತೆ ಹೀಗೆಂದನು – “ನೀವು ಯಾರ ಮಕ್ಕಳಾದರೇನು ? ಯಾರಾದರೇನು ? ವಿದ್ಯಾರ್ಥಿಗಳಾಗಿ ವಿದ್ಯೆ ಕಲಿವ ಪ್ರೀತಿಯಿಂದ ಬಂದಿದ್ದೀರಾದರೆ ಅಡ್ಡಿಯಿಲ್ಲ. ಭಿಕ್ಷಾಟನೆ ಮಾಡಿ ಹರಕುಬಟ್ಟೆಯುಟ್ಟು ಇರುಳೂ ಹಗಲೂ ಆಲಸ್ಯಗೊಳ್ಳದೆ ನಿಯಮಕ್ಕೆ ಅನುಸಾರವಾಗಿ ಕಲಿಯಲು ನೀವು ಸಾಧ್ಯತೆಯುಳ್ಳವರಾದರೆ ನಿಮಗೆ ವಿದ್ಯೆ ಕಲಿಸಬಹುದು*. ಆಗ ಅವರು “ಇನ್ನು ದಯೆಮಾಡಿ. ಅನುಗ್ರಹವಿದು* ಎಂದು ನುಡಿದು ಸಾಷ್ಟಾಂಗ ವಂದಿಸಿದರು.

ಹರ್ಷಚಿತ್ತರಾಗಿ ಒಳ್ಳಿತಪ್ಪ ದಿವಸ ವಾರ ವಿದ್ಯಾನಕ್ಷತ್ರದಂದು ತಮ್ಮನುಕೂಲದೊಳೋಜರ್ಗ್ಗೆಱಗಿ ಪೊಡೆವಟ್ಟು ವಿದ್ಯಾಪ್ರಾರಂಭಂಗೆಯ್ದರ್ ಸೂರ್ಯಮಿತ್ರನುಮವರನಿರುಳುಂ ಪಗಲುಂ ನಿರಂತರಂ ನಿರ್ಬಂಧದೊಂದೋದಿಸಿ ಏೞೆಂಟು ವರುಷದಿಂದೊಳಗೆ ನಾಲ್ಕು ವೇದಮುಮಾಱಂಗಮಂ ಪದಿನೆಂಟು ಧರ್ಮಶಾಸ್ತ್ರಂಗಳುಂ ಮೀಮಾಂಸಾ ನ್ಯಾಯವಿಸ್ತರಂ ವ್ಯಾಕರಣಂ ಪ್ರಮಾಣಂ ಛಂದಮಲಂಕಾರಂ ನಿಘಂಟು ಕಾವ್ಯನಾಟಕಂಗಳುಂ ಚಾಣಕ್ಯಂ ಸಾಮುದ್ರಿಕಂ ಶಾಲಿಹೋತ್ರಂ ಪಾಳಕಾವ್ಯಂ ಹಾನಿತಂ ಚರಕಮಶ್ಚಿನ್ಲೀಮತಂ ಬಾಹಲಂ ಸುಸ್ರುತಂ ಕ್ಷಾರಪಾನೀಯಂ ಮೊದಲಾಗೊಡೆಯೆ ನರವೈದ್ಯಂಗಳುಂ ಜ್ಯೋತಿಷಂ ಮಂತ್ರವಾದಂ ಮೊದಲಾಗೊಡೆಯ ಶಾಸ್ತ್ರಂಗಳೆಲ್ಲಮಂ ನೆಱೆಯೆ ಕಲ್ಲಿಸಿ ಯೋಗ್ಯರ್ ಮಾಡಿದೊಡವರ್ ನಿಮ್ಮ ಪ್ರಸಾದದಿಂದೆಲ್ಲಾ ಶಾಸ್ತ್ರಮಂ ಕಲ್ತು ಪಂಡಿತರೆಮಾದೆಮೆಂದಾದಮಾನು ಮೊಸೆದುಮಿನ್ನೆಮ್ಮ ನಾೞ್ಗೆ ಪೋದಪೆಮೆಂದೋಜರ್ಗೆಱಗಿ ಪೊಡೆವಟ್ಟು ಬೀೞ್ಕೊಂಡಾಗಳೋಜರೆಂದರ್ – ನೀಮೆಮ್ಮ ತಂಗೆಯ ಮಕ್ಕಳಿರ್ ಸೋದರಳಿಯಂದಿರಪ್ಪಿರ್ ನಿಮಗಾಂ ಪಸರಂಗೊಟ್ಟೆನಿಲ್ಲೇಕೆಂದೊಡೆ ಮುನ್ನಿನಂತೆ ತಂದೆಯಲ್ಲಿಯುರ್ಕ್ಕಿ ಕೆಟ್ಟಂತಿರಿಲ್ಲಿಯುಮೆತ್ತಾನುಮುರ್ಕ್ಕಿ ಕಿಡುವಿರೆಂದಾಂ ನಿಮ್ಮಂ ಯೋಗ್ಯರಂ

ಮನಸ್ಸಿನಲ್ಲಿ ಸಂತೋಷಪಟ್ಟರು. ಒಳ್ಳೆಯ ದಿನ ವಿದ್ಯಾರಂಭಕ್ಕೆ ಯೋಗ್ಯವಾದ ನಕ್ಷತ್ರದಂದು ತಮಗೆ ಅನುಕೂಲವೆನಿಸಿದಂದು ಉಪಾಧ್ಯಾಯರಿಗೆ ನಮಸ್ಕರಿಸಿ, ಸಾಷ್ಠಾಂಗ ವಂದಿಸಿ ಅವರು ವಿದ್ಯಾಭ್ಯಾಸವನ್ನು ಪ್ರಾರಂಭಿಸಿದರು. ಸೂರ್ಯಮಿತ್ರನು ಅವರನ್ನು ಇರುಳೂ ಹಗಲೂ ಎಡೆಬಿಡದೆ ಕಟ್ಟುನಿಟ್ಟಿನಿಂದ ಓದಿಸಿದನು. ಏಳೆಂಟು ವರ್ಷಗಳೊಳಗೆ ನಾಲ್ಕು ವೇದಗಳನ್ನೂ ವೇದದ ಆರು ಅಂಗಗಳಾದ ಶಿಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ, ಛಂದಸ್ಸು, ಜ್ಯೋತಿಷಗಳನ್ನೂ ಹದಿನೆಂಟು ಧರ್ಮಶಾಸಗಳನ್ನೂ ಕಲಿಸಿದನು. ಮೀಮಾಂಸೆ, ತರ್ಕಶಾಸ್ತ್ರ, ವ್ಯಾಕರಣ, ಪ್ರಮಾಣ, ಛಂದಸ್ಸು, ಅಲಂಕಾರ ಶಾಸ್ತ್ರ, ಶಬ್ದಕೋಶ, ಕಾವ್ಯ ನಾಟಕಗಳು, ಕೌಟಿಲ್ಯನ ಅರ್ಥಶಾಸ್ತ್ರ, ಸಾಮುದ್ರಿಕ ಶಾಸ್ತ್ರ, ಶಾಲಿಹೋತ್ರ ಋಷಿಯ ಅಶ್ವಶಾಸ್ತ್ರ, ಪಾಳಕಾಪ್ಯ ಋಷಿ ಪ್ರಣೀತವಾದ ಗಜಶಾಸ್ತ್ರ, ಹಾನಿತ ಎಂಬ ವೈದ್ಯಶಾಸ್ತ್ರ, ಚರಕ ಅಶ್ವಿನೀ ಮತ ಎಂಬ ವೈದ್ಯಗ್ರಂಥಗಳು, ವಾಗ್ಬಟನ ಅಷ್ಟಾಂಗ ಹೃದಯ, ಸುಶ್ರುತಗ್ರಂಥ, ಬಿಡುಲವಣ ಅಥವಾ ಕೃಷ್ಣಲವಣದ ಪಾನಕ್ಕೆ ಸಂಬಂಸಿದ ವೈದ್ಯ ಮುಂತಾದ ಮನುಷ್ಯ ವ್ಶೆದ್ಯಗಳನ್ನೂ ಕಲಿಸಿದನು. ಜ್ಯೋತಿಷ, ಮಂತ್ರವಾದ ಮುಂತಾದ ಎಲ್ಲ ಶಾಸ್ತ್ರಗಳನ್ನೂ ಪೂರ್ಣವಾಗಿ ಕಲಿಸಿ ಅವರನ್ನು ಯೋಗ್ಯರಾಗಿ ಮಾಡಿದನು. “ತಮ್ಮ ಅನುಗ್ರಹದಿಂದ ನಾವು ಎಲ್ಲಾ ಶಾಸ್ತ್ರ್ರಗಳನ್ನು ಕಲಿತು ವಿದ್ವಾಂಸರಾದೆವು. ಎಂದು ಅವರು ಹೇಳಿ ಅತ್ಯಂತ ಸಂತೋಷವನ್ನು ವ್ಯಕ್ತಪಡಿಸಿದರು. “ಇನ್ನು ನಾವು ನಮ್ಮ ನಾಡಿಗೆ ತೆರಳುವೆವು* ಎಂದು ಗುರುಗಳಿಗೆರಗಿ, ಸಾಷ್ಟಾಂಗ ವಂದಿಸಿ, ಹೋಗಲು ಹೊರಟರು. ಆಗ ಸೂರ್ಯಮಿತ್ರನು ಹೀಗೆಂದನು – “ನೀವು ನನ್ನ ತಂಗಿಯ ಮಕ್ಕಳು. ನನಗೆ ಸೋದರ ಅಳಿಯಂದಿರಾಗಿರುವಿರಿ. ನಿಮಗೆ ನಾನು ಸಲುಗೆಯನ್ನು ಕೊಡಲಿಲ್ಲ. ಏಕೆಂದರೆ, ನೀವು ಹಿಂದೆ ನಿಮ್ಮ ತಂದೆ ಕೊಟ್ಟ ಸಲುಗೆಯಿಂದ ಉನ್ಮತ್ತರಾಗಿ ಕೆಟ್ಟುಹೋದಿರಿ. ಇಲ್ಲಿ ಕೂಡ ಎಲ್ಲಿಯಾದರೂ ಸೊಕ್ಕಿ ಕೆಟ್ಟುಹೋಗುವಿರೆಂದು ಭಾವಿಸಿ, ನಾನು ನಿಮ್ಮನ್ನು ಯೋಗ್ಯರನ್ನಾಗಿ ಮಾಡುವ ಉದ್ದೇಶದ ಕಾರಣದಿಂದ ಸಲುಗೆ ಕೊಡಲಿಲ್ಲ. ಇದಕ್ಕೆ ನೀವು ಸಿಟ್ಟಾಗಬಾರದು. ನನ್ನ ತಪ್ಪನ್ನು ಕ್ಷಮಿಸಿರಿ*.

ಮಾಡುವ ಕಾರಣಮಾಗಿ ನಿಮಗೆ ಪಸರಂಗೊಟ್ಟೆನಿಲ್ಲಿದರ್ಕ್ಕೆ ಮುಳಿಯದಿರಿಂ ಕ್ಷಮಿಯಿಸಿಮೆಂದುಡಲುಂ ತುಡಲುಂ ಸಂಬಳಮುಮಂ ಕೊಟ್ಟು ಕೞೆಪಿದಾಗಳ್ – ಪಿರಿಯಾತನಗ್ನಿಭೂತಿಯೆಂಭೊಂ ಮಾವನೆಮಗೆ ಪಸರಂಗುಡದಿರ್ವರುಮಂ ಯೋಗ್ಯರು ಮಾಡಿದನೆಂದುಪಕಾರಮಂ ಮನದೆ ಬಗೆದಾದಮಾನುಂ ಸಂತೋಷಂಬಟ್ಟಂ ಕಿೞೆಯಾತಂ ವಾಯುಭೂತಿ ಸೂರ್ಯಮಿತ್ರಂ ಗೆಯ್ದುದೆಲ್ಲಮಪಕಾರಮೆಂದು ಬಗೆದೆಂದಪ್ಪೊಡಮೆಮ್ಮೆ ಮಾವಂ ಬೈಕಂದಿರಿದು ತಂದ ಕೂೞ್ಗೆ ನೆರಮೆಣ್ಣೆಯನಕ್ಕುಪ್ಪನಕ್ಕೆ ಕೞೆಯನಕ್ಕೆಂದಪ್ಪೊಡಮಿಕ್ಕಿಯುಮೆಱೆಯಿಸಿಯುಮಱೆಯಂ ಕೆಱೆಗೆವೋಗಿ ಮೀವಾಗಳ್ ತಲೆಯಂ ಪೂಸಲೆಣ್ಣೆಯನಪ್ಪೊಡಮೆಱೆಯಿಸಿಯಱೆಯಂ ತಾಂ ದಿವ್ಯಮಪ್ಪಾಹಾರಂಗಳಂ ದೆವಸದೆವಸಕ್ಕಂ ಪಲಂಬರ್ ನಟರ್ಕ್ಕಳುಂ ಆಳ್ಗಳುಂ ಬೆರಸುಣ್ಗುಂ ಪರ್ವದಿವಸದೊಳಪ್ಪೊಡಮೆಂದಾನುಮಿವರ್ಗ್ಗುಣಲಿಕ್ಕಿಮೆಂದಱೆಯಂ ಪಂಚಮಹಾಪಾತಕನೆಮ್ಮನೇೞೆಂಟು ವರುಷಂಬರಂ ಪಗೆವರಂ ಬಗೆವಂತೆ ದಂಡಿಸಿದನೆಂದು ಮನದೊಳ್ ಮುಳಿಸಂ ಪೊಱಮಟ್ಟು ಪೋದನ್ ಅಂತಿರ್ವರುಂ ಪೋಗಿ ಕತಿಪಯ ದಿವಸಗಳಿಂ ಕೌಶಂಬಿಯನೆಯ್ದಿ ತಮ್ಮ ಮನೆಯಂ ಪೊಕ್ಕು ತಾಯಂ ಕಂಡು ತುೞೆಲ್ಗೆಯ್ದು ಪಂಡಿತರಾಗಿ ಬಂದುದು ಪೇೞ್ದು ಮಿಂದುಂಡು ವಿಶ್ರಮಿಸಿಯೊಳ್ಳಿತಪ್ಪ ದಿವಸವಾರ ನಕ್ಷತ್ರದೊಳತಿಬಲ ಮಹಾರಾಜನಂ ಕಂಡಿರ್ವರುಂ ಬೇಱೆಬೇಱುಪಶ್ಲೋಕಿಸಿ ಕ್ರಿಯಾಸಂಬಂಧದಿಂದಂ ವಖ್ಖಾಣಿಸಿ ತಮ್ಮ

ಸೂರ್ಯಮಿತ್ರನು ಹೀಗೆ ಅವರಿಗೆ ವಸ್ತ್ರ ಆಭರಣಗಳನ್ನು ಕೊಟ್ಟನು. ಪ್ರಯಾಣಕ್ಕೆ ಬೇಕಾಗುವ ಬುತ್ತಿಯನ್ನು ಕೊಟ್ಟು ಕಳುಹಿಸುವ ಸಂದರ್ಭದಲ್ಲಿ ಹಿರಿಯನಾದ ಅಗ್ನಿಭೂತಿ ಎಂಬುವನು “ಮಾವನು ನಮಗೆ ಸಲುಗೆ ಕೊಡದೆ ಇಬ್ಬರನ್ನೂ ಯೋಗ್ಯರನ್ನಾಗಿ ಮಾಡಿದನು* – ಎಂದು ಉಪಕಾರವನ್ನು ಮನಸ್ಸಿನಲ್ಲಿ ಭಾವಿಸಿಕೊಂಡು ಅತ್ಯಂತ ಸಂತೋಷಪಟ್ಟನು. ಕಿರಿಯವನಾದ ವಾಯುಭೂತಿ ತಮಗೆ ಸೂರ್ಯಮಿತ್ರನು ಮಾಡಿದುದೆಲ್ಲವೂ ಅಪಕಾರವೆಂದೇ ಬಗೆದನು ‘ನಾವು ಭಿಕ್ಷೆ ಬೇಡಿ ಅಲೆದಾಡಿ ತಂದ ಅನ್ನಕ್ಕೆ ಸೇರಿಸಲು ಎಣ್ಣೆಯನ್ನಾಗಲೀ ಉಪ್ಪನ್ನಾಗಲೀ ಮಜ್ಜಿಗೆಯನ್ನಾಗಲೀ ನಮ್ಮ ಮಾವ ನಮಗೆ ಎಂದಿಗೂ ಕೊಡಲೂ ಇಲ್ಲ, ಕೊಡಿಸಲೂ ಇಲ್ಲ. ಕೆರೆಗೆ ಹೋಗಿ ಸ್ನಾನ ಮಾಡುವ ಸಂದರ್ಭದಲ್ಲಿ ತಲೆಗೆ ಹಚ್ಚಲು ಎಣ್ಣೆಯನ್ನಾದರೂ ಹೊಯಿಸಿದವನಲ್ಲ. ತಾನಾದರೋ ದಿವ್ಯವಾದ ಆಹಾರಗಳನ್ನು ಪ್ರತಿದಿನವೂ ಹಲವರು ನಂಟರನ್ನೂ ಆಳುಗಳನ್ನು ಕೂಡಿಕೊಂಡು ಉಣ್ಣುತ್ತಿದ್ದನು. ಹಬ್ಬದ ದಿವಸಲ್ಲಾದರೂ ’ಇವರಿಗೆ ಊಟ ಹಾಕಿ’ ಎಂದಾದರೂ  ಇವನು ಹೇಳಿದವನಲ್ಲ . ಇವನು ಪಂಚಮಹಾಪಾಪ ಮಾಡಿದವನು. ನಮ್ಮಿಬ್ಬರನ್ನೂ ಏಳೆಂಟು ವರ್ಷಗಳವರೆಗೆ ಶತ್ರುಗಳೆಂದು ಭಾವಿಸಿದಂತೆ ದಂಡಿಸಿದ್ದಾನೆ* – ಹೀಗೆ ವಾಯುಭೂತಿ ಮನಸ್ಸಿನಲ್ಲಿ ಕ್ರೋಧಭಾವವನ್ನಿಟ್ಟುಕೊಂಡು ಸಾಷ್ಠಾಂಗ ವಂದಿಸಿ ಹೊರಟುಹೋದನು. ಅಂತು ಅವರಿಬ್ಬರೂ ಹೋಗಿ ಕೆಲವು ದಿನಗಳಲ್ಲಿ ಕೌಸಂಬಿಗೆ ಬಂದರು. ತಮ್ಮ ಮನೆಗೆ ಹೊಕ್ಕು ತಾಯಿಯನ್ನು ಕಂಡು ವಂದಿಸಿದರು. ತಾವು ವಿದ್ವಾಂಸರಾಗಿ ಬಂದುದನ್ನು ತಿಳಿಸಿದರು. ಸ್ನಾನಮಾಡಿ, ಊಟಮಾಡಿ, ವಿಶ್ರಾಂತಿ ತೆಗೆದುಕೊಂಡರು. ಒಳ್ಳೆಯ ದಿನ ವಾರ ನಕ್ಷತ್ರ ಮುಹೂರ್ತದಲ್ಲಿ ಅತಿಬಲ ಮಹಾರಾಜನಲ್ಲಿಗೆ ಬಂದು ಅವನನ್ನು ಕಂಡು ಬೇರೆ ಬೇರೆಯಾಗಿ ಸ್ತುತಿ ರಚನೆ ಮಾಡಿದರು. ಅವನ್ನು ಕ್ರಿಯೆ – ಕಾರಕಗಳ ಸಂಬಂಧಪೂರ್ವಕ ವ್ಯಾಕರಣಶುದ್ಧವಾಗಿ ವ್ಯಾಖ್ಯಾನಮಾಡಿ, ತಮ್ಮ ಪಾಂಡಿತ್ಯವನ್ನು

ಪಂಡಿತಿಕ್ಕೆಯನಱೆಪಿದೊಡೆ ಸಭೆಯೊಳಿರ್ದ ಪಂಡಿತಜನಮೆಲ್ಲಂ ಮೆಚ್ಚಿ ಬಿಚ್ಚಳಿಸಿ ಪೊಗಱ್ದೊಡರಸಂ ಸಂತುಷ್ಟಚಿತ್ತನಾಗಿ ಒಸೆದು ನಿಮ್ಮ ತಂದೆಯ ಮಂತ್ರಿಪದಮಂ ಬಾೞುಮಂ ಕೈಕೊಳ್ಳಿಮೆಂದು ಕೊಟ್ಟೊಡೆ ಮಹಾಪ್ರಸಾದಮೆಂದೆಱಗಿ ಪೊಡೆವಟ್ಟು ಕೈಕೊಂಡು ಸುಖದೊಳ್ ಬಾೞುತ್ತಂ ಪಲಂಬರ್ ಪಂಡಿತರ್ಕ್ಕಳ್ಗೋದುಗಳಂ ವಖ್ಖಾಣಿಸುತ್ತಂ ಲೋಕದೊಳರಮನೆಯೊಳಂ ಪೂಜ್ಯರಾಗಿ ಸುಖಸಂಕಥಾ ವಿನೋದದಿಂ ಕಾಲಂ ಸಲೆ ಮತ್ತಿತ್ತ ರಾಜಗೃಹದೊಳ್ ಸೂರ್ಯಮಿತ್ರಂ ಸುಬಲ ಮಹಾರಾಜನ ತೊಟ್ಟನರ್ಘ್ಯಮಪ್ಪ ಮಾಣಿಕ್ಯದುಂಗುರಮಂ ಕಳೆದು ತನಗೆ ತುಡಲ್ಕೆಂದು ಕೊಟ್ಟೊಡೊಂದು ದಿವಸಂ ಸಂಜೆವಾರಿಸಲೆಂದು ಪೋದಲ್ಲಿ ಆದಿತ್ಯಂಗಿದಿರಂ ನೀರಂ ಸೂಸುವಾಗಳ್ ಬೆರಲಿಂದಮುರ್ಚಿ ನೀರ್ವೆರಸು ಸೂಸಿ ತಾವರೆಯೊಳುಂಗುರಂ ಬಿೞ್ದತ್ತು ತಾನುಂ ನೋಡದೆ ಬಗೆಯದೆ ಕೆಮ್ಮನೆ ಕಿಱೆದಂತರಮಂ ಪೋಗಿ ಕೈಯಂ ನೋಡಿ ಬೆರಲುಂಗುರಮಂ ಕಾಣದೆಲ್ಲಿ ಕೆಟ್ಟಿತ್ತೆಂದು ಪ್ರಮಾಣಮಱೆಯದೆ ಮಲ್ಮಲಂ ಮಱುಗುತ್ತಂಜಿ ದೆಸೆಗಳಂ ನೋೞ್ಪನ್ನೆಗಂ ದೂರಾಂತರದೊಳಿರ್ದ್ದ ಸುಧರ್ಮರೆಂಬಾಚಾರ್ಯರಂ ದಿವ್ಯಜ್ಞಾನಿಗಳಂ ಕಂಡಿವರೇನಾನುಮಂ ಬಲ್ಲೊರಪ್ಪೊಡೆ ಬೆಸಗೊಂಡು ನೋೞ್ಪೆನೆಂದು ಪೋಗಿ ಭಟ್ಟಾರರಂ ಕಂಡು ಪಕ್ಕದೊಳಿರ್ದ್ದಾಗಳ್ ಈತಂ ಭವ್ಯನೆಂದಱದು – ಏನಯ್ಯ ಅರಸರ ವಾರಕದ ಮಾಣಿಕದುಂಗುರಮಂ ಕಿಡಿಸಿ ಬಂದಿರೆ ಎಂದಾಗಳೆಱಗಿ ಪೊಡೆವಟ್ಟಂತಱೆವ ರೊಳರೆ ಎಂದು.

ಪ್ರಕಟಿಸಿದರು. ಆಗ ರಾಜಸಭೆಯಲ್ಲಿ ಪಂಡಿತರೆಲ್ಲರೂ ಮೆಚ್ಚಿ ಹಿರಿದಾಗಿ ಹೊಗಳಿದರು. ರಾಜನು ಮನಸ್ಸಿನಲ್ಲಿ ಸಂತೋಷಗೊಂಡು ಪ್ರೀತಿ ತಾಳಿದನು. “ನಿಮ್ಮ ತಂದೆಯ ಮಂತ್ರಿಸ್ಥಾನವನ್ನೂ ಜೀವಿಕೆಯನ್ನೂ ಸ್ವೀಕರಿಸಿ* – ಎಂದು ಅವರಿಗೆ ಕೊಟ್ಟನು. ‘ದೊಡ್ಡ ಅನುಗ್ರಹವಿದು’ – ಎಂದುಕೊಂಡು ಅವರು ನಮಸ್ಕರಿಸಿ, ರಾಜನಿತ್ತುದನ್ನು ಸ್ವೀಕರಿಸಿದರು. ಸುಖವಾಗಿ ಬಾಳುತ್ತ, ಅವರು ಹಲವಾರು ವಿದ್ವಾಂಸರಿಗೆ ವಿದ್ಯೆಗಳನ್ನು ವಿವರಣೆ ಮಾಡುತ್ತ ಲೋಕದಲ್ಲಿಯೂ ಅರಮನೆಯಲ್ಲಿಯೂ ಪೂಜ್ಯರಾದರು. ಸುಖಸಂಕಥಾ ವಿನೋದದಿಂದ ಹೀಗೆಯೇ ಕಾಲ ಕಳೆಯುತ್ತಿತ್ತು. ಇತ್ತ ರಾಜಗೃಹದಲ್ಲಿ ಸೂರ್ಯಮಿತ್ರನಿಗೆ ಸುಬಲ ಮಹಾರಾಜನು ತಾನು ತೊಟ್ಟ ಅಮೂಲ್ಯವಾದ ಮಾಣಿಕ್ಯದ ಉಂಗುರವನ್ನು ತೆಗೆದು, ಒಮ್ಮೆ ತೊಡಲು ಕೊಟ್ಟನು. ಸೂರ್ಯಮಿತ್ರನು ಒಂದು ದಿವಸ ಸೂರ್ಯನಿಗೆ ಸಂಧ್ಯಾಕಾಲದ ಅರ್ಘ್ಯಕೊಡಲು ಹೋದನು. ಸೂರ್ಯನಿಗೆ ಅಭಿಮುಖವಾಗಿ ಅರ್ಘ್ಯವನ್ನು ಕೊಡುವಾಗ ಆ ಉಂಗುರ ಅವನ ಬೆರಳಿನಿಂದ ಹೊರಗೆ ಬಂದು ಅರ್ಘ್ಯದ ನೀರಿನೊಂದಿಗೆ ತಾವರೆಯ ಕೆರೆಯಲ್ಲಿ ಬಿದ್ದಿತು. ಅವನು ಅದನ್ನು ನೋಡಲಿಲ್ಲ, ಭಾವಿಸಲಿಲ್ಲ, ಸುಮ್ಮನೆ ಸ್ವಲ್ಪ ದೂರ ಹೋದನು. ಕೈಯನ್ನು ನೋಡಿದಾಗ ಬೆರಳಿನ ಉಂಗುರವನ್ನು ಕಾಣದೆ, ಎಲ್ಲಿ ಬಿದ್ದು ಹೋಯಿತೋ ಎಂದುಕೊಂಡನು. ಅದು ಕಾಣೆಯಾಗಲು ಕಾರಣವನ್ನು ತಿಳಿಯದೆ ಬಹಳ ವ್ಯಥೆಪಟ್ಟನು. ಭಯಗೊಂಡವನಾಗಿ ದಿಕ್ಕುಗಳನ್ನು ನೋಡಿದನು. ಹಾಗೆ ನೋಡುವಾಗ ದೂರದ ಒಂದು ಸ್ಥಳದಲ್ಲಿ ಇದ್ದ ದಿವ್ಯಜ್ಞಾನಿಗಳಾದ ಸುಧರ್ಮರೆಂಬ ಆಚಾರ್ಯರನ್ನು ಕಂಡನು. ‘ಇವರು ಏನಾದರೂ ತಿಳಿದಿದ್ದರೆ, ಕೇಳಿ ನೋಡುವೆನು* ಎಂದು ಹೋಗಿ ಆ ಮುನಿಗಳ ಪಕ್ಕದಲ್ಲಿ ಇದ್ದನು. ಆಗ ಸುಧರ್ಮಾಚಾರ್ಯರು ಈತನು ಭವ್ಯ, ಧರ್ಮ ವಿಚಾರವನ್ನು ಕೇಳಲು ಅರ್ಹನೆಂದು ತಿಳಿದು ಏನಯ್ಯಾ ಅರಸರು ಇಟ್ಟುಕೊಳ್ಳಲು ಕೊಟ್ಟ ಮಾಣಿಕ್ಯದ ಉಂಗುರವನ್ನು ಕಳೆದುಕೊಂಡು ಬಂದಿರೇ ? – ಎಂದರು. ಆಗ

ಪೊಗೞ್ದೆರ್ದ್ದಿಂತು ಬೆಸಗೊಂಡಂ – ಭಟ್ಟಾರಾ ಬೆಸಸಿಮಾವುಂಗುರಮಂ ಕಾಣಲಕ್ಕುಮೆ ಎಂದಂಗೆ ಭಟಾರರ್ ಕಾಣಲಕ್ಕುಮೆಂದ ನಿನ್ನೆ ನೀನಾದಿತ್ಯಂಗೆ ನೀರಂ ಸೂಸಿ ಪೊಡೆಮಡುವಾಗಳಾ ನೀರ್ವೆರಸು ಸೂಸಿ ತಾಮರೆಗೆಱೆಯೊಳಗೆ ಮೞುಗಿರ್ದ್ದ ಮುಗುಳಮೇಗೆ ತಗುಳ್ದಿರ್ದುದು ನಾಳೆ ನೇಸಱು ಮೂಡುವಾಗಳ್ ನೀರಿಂದಂ ಮೇಗೆ ನೆಗೆದಿರ್ದ್ದುಂಗುರಮಂ ಕಾಣಲಕ್ಕುಮೆಂದೊಡೆ ಸಂತೋಷಂಬಟ್ಟು ಪೊಡೆಮಟ್ಟು ಪೋಗಿ ಕೊಳಕ್ಕೆ ಮಾನಸರಂ ಕಾಪಿಟ್ಟು ಮಱುದಿವಸಂ ಸಂಜೆಯೊಳ್ ಬಂದು ನೋೞ್ಟುನ್ನೆಗಂ ತಾವರೆಯ ಮುಗುಳ ಮೇಲೆ ತಗುಳ್ದಿರ್ದ್ದುಂಗುರಮಂ ಕಂಡು ಕೊಂಡರಸಂಗೊಪ್ಪಿಸಿ ತುರಿಪದಿಂದರಮನೆಯಂ ಪೊಱಮಟ್ಟು ಪೋಗಿ ಮನದೊಳಿಂತೆಂದು ಬಗೆದನೀ ಲೋಕದೊಳಿರ್ದ ಸೂಕ್ಷ್ಮಾಂತರಿತ ದೂರ ಪದಾರ್ಥ ವಸ್ತುಗಳೆಲ್ಲಮನಱೆವಂತಪ್ಟೀ ಸವಣನ ಜೋಯಿಸಮನೆಂತಪ್ಪೊಡಂ ಕ್ಷಪಣಕನಂ ಮಿಥ್ಯಾವಿನಯದಿಂದಿಳಿಸಿ ಕಲ್ವೆನೆಂಬುದೊಂದು ಬುದ್ದಿಯಿಂದಂ ಮನೆಗೆ ಬಂದು ಸುದೇವಿಯಿಂಬ ತನ್ನ ಪಾರ್ವಂತಿಗೆ ಸ್ವಾಭಿಪ್ರಾಯಮೆಲ್ಲಮಂ ಪೇೞ್ದು ಜ್ಯೋತಿಷನಿಮಿತ್ತಂ ಮನೆಯಂ ಪೊಱಮಟ್ಟು ಸುಧರ್ಮಾಚಾರ್ಯರಲ್ಲಿಗೆ ಪೋಗಿ ಪೊಡೆವಟ್ಟು ಭಟ್ಟಾರಾ ನಿಮ್ಮ ಪಕ್ಕದೆ ಜ್ಯೋತಿಷಮಂ ಕಲ್ವೆನೆಂಬುದೊಂದುೞ್ತೆಯಿಂ ಬಂದೆನೆನ್ನಂ ಜ್ಯೋತಿಷಮಂ ಕಲ್ಪಪ್ಪುದೆಂದೊಡೆ ಭಟಾರರೆಂದರ್ – ತಮ್ಮಾ ಎಮ್ಮ ಜೋಯಿಸಮೆಮ ಂತಪ್ಪ ರೂಪಿನ ಋಷಿಯರ್ಗಲ್ಲದೆ ಪೇೞಲುಂ ಕಲಲುಮಾಗದೆಂದೊಡೆ

ಸೂರ್ಯಮಿತ್ರನು ಅವರಿಗೆ ಸಾಷ್ಠಾಂಗವಂದಿಸಿ ಹೀಗೆ ತಿಳಿದವರು ಇರುವರೆ ? – ಎಂದು ಹೊಗಳಿ, ಹೀಗೆ ಕೇಳಿದನು – ಪೂಜ್ಯರೇ ಆ ಉಂಗುರವನ್ನು ಕಾಣಲು ಸಾಧ್ಯವೇ? ತಿಳಿಸಿರಿ’. ಅದಕ್ಕೆ ಯತಿಗಳು – ‘ಕಾಣಲು ಸಾಧ್ಯವಿದೆ’ ಎಂದರು. ‘ನಿನ್ನೆ ನೀನು ಸೂರ್ಯನಿಗೆ ಅರ್ಘ್ಯವನ್ನು ಕೊಟ್ಟು ಸಾಷ್ಠಾಂಗ ವಂದಿಸುವಾಗ ಆ ನೀರಿನೊಂದಿಗೆ ಉಂಗುರ ಕೆಳಗೆ ಬಿದ್ದು ತಾವರೆ ಕೆರೆಯೊಳಗೆ ಮುಳುಗಿದ್ದ ಮುಗುಳಿನ ಮೇಲೆ ಸಿಕ್ಕಿಕೊಂಡಿದೆ. ನಾಳೆ ಸೂರ್ಯೋದಯದ ವೇಳೆಗೆ ಆ ಉಂಗುರವು ನೀರಿನಿಂದ ಮೇಲಕ್ಕೆ ಎದ್ದುಕೊಂಡು ಕಾಣಿಸುವುದು’ ಎಂದರು. ಆಗ ಸೂರ್ಯಮಿತ್ರನು ಸಂತೋಷದಿಂದ ಪೊಡಮಟ್ಟು ತೆರಳಿದನು. ಸರೋವರಕ್ಕೆ ಆಳುಗಳನ್ನು ಕಾವಲಿರಿಸಿ, ಮರುದಿನ ಬೆಳಿಗ್ಗೆ ನೋಡಲು ಬಂದನು. ಆಗ ತಾವರೆಯ ಮುಗುಳಿನ ಮೇಲೆ ಸಿಕ್ಕಿಕೊಂಡಿದ್ದ ಉಂಗುರನ್ನು ಕಂಡನು. ಅದನ್ನು ತೆಗೆದುಕೊಂಡು ಸುಬಲ ಮಹಾರಾಜನಿಗೆ ಒಪ್ಪಿಸಿ ಬೇಗನೆ ಅರಮನೆಯಿಂದ ಹೊರಟಹೋದನು. ಅವನು ತನ್ನ ಮನಸ್ಸಿನಲ್ಲಿ ಹೀಗೆ ಯೋಚಿಸಿದನು. ಈ ಲೋಕದಲ್ಲಿರುವ ಚಿಕ್ಕದಾದ, ಗುಪ್ತವಾದ, ಹಾಗೂ ದೂರದಲ್ಲಿದ್ದ ಪದಾರ್ಥಗಳನ್ನು ಅಥವಾ ವಸ್ತುಗಳೆಲ್ಲವನ್ನೂ ತಿಳಿಯುವಂತಹ ಈ ಜೈನ ಸಂನ್ಯಾಸಿಯ ಜ್ಯೋತಿಷವಿದ್ಯೆಯನ್ನು ಹೇಗಾದರೂ ಕಲಿಯುವೆನು. ಈ ಸನ್ನಾಸಿಯನ್ನು ಕಪಟ ನಮ್ರತೆಯಿಂದ ಒಲಿಸಿ ಕಲಿಯುವೆನು – ಎಂಬ ಒಂದು ಬುದ್ದಿಯಿಂದ ಮನೆಗೆ ಬಂದನು. ಸುದೇವಿ ಎಂಬ ತನ್ನ ಹೆಂಡತಿಗೆ ತನ್ನ ಅಭಿಪ್ರಾಯವೆಲ್ಲವನ್ನೂ ತಿಳಿಸಿದನು. ಜ್ಯೋತಿಷ್ಯವನ್ನು ಕಲಿಯುವ ಕಾರಣದಿಂದ ಮನೆಯಿಂದ ಹೊರಟು ಸುಧರ್ಮಾಚಾರ್ಯರಲ್ಲಿಗೆ ಹೋದನು. ಅವರಿಗೆ ಸಾಷ್ಟಾಂಗವಂದನೆ ಮಾಡಿ – “ಪೂಜ್ಯರೇ, ನಿಮ್ಮ ಬಳಿಯಲ್ಲಿ ಜ್ಯೋತಿಷವನ್ನು ಕಲಿಯಬೇಕೆಂಬ ಒಂದು ಪ್ರೀತಿಯಿಂದ ನಾನು ಬಂದಿದ್ದೇನೆ. ನನಗೆ ಜ್ಯೋತಿಷವನ್ನು ಕಲಿಸುವುದು* ಎಂದು ಹೇಳಿದನು. ಆಗ ಭಟಾರರು ಹೀಗೆಂದರು – “ತಮ್ಮಾ ನಮ್ಮ

ಅಂತಪ್ಪ ದೀಕ್ಷೆಯಂ ದಯೆಗೆಯ್ಯಿಮೆಂದು ಬೇಡಿದೊಡೊಳ್ಳಿತಪ್ಪ ಮುಹೂರ್ತದೊಳ್ ದೀಕ್ಷೆಯಂ ಕೊಟ್ಟು ಪಂಚಮಹಾ ವತ್ರಂಗಳನೇಱೆಸಿ ಪಡಿಕಮಣಂ ಪೇೞ್ದ ತದನಂತರಮಿನ್ ಕಲ್ಪಿಸಿಮೆಂದೊಡೆ ನಮಸ್ಕಾರಂಗಳುಮಾಳೋಚನೆಗಳಂ ನಿಯಮಮುಮನೋದಿದೊಡಲ್ಲದೆ ಪೇೞಲಾಗದೆಂದೊಡೆಲ್ಲಮಂ ಬೇಗವೇಗಂ ಪಾಠಂಗೊಂಡು ಭಟ್ಟಾರಾ ಇನ್ ಪೇೞೆಮೆನೆ ಭಟ್ಟಾರರೆಂದರ್ ತ್ರಿಷಷ್ಠಿ ಶಲಾಕಾ ಪುರುಷರ್ಕಳ ಚರಿತಂಗಳುಮನಾಚಾರಮಾರಾಧನೆ ಮೊದಲಾಗೊಡೆಯ ಚರಣ ಗ್ರಂಥಂಗಳುಮಂ ಲೋಗಾಣಿ ಸಂಗಾಣಿ ಮೊದಲಾಗೊಡೆಯ ಕರಣಗ್ರಂಥಗಳುಮನಿವೆಲ್ಲಮಂ ಕಲ್ತೊಡಲ್ಲದೆ

ಪೇೞಲಾಗದೆಂದೊಡೆ ಸೂರ್ಯಮಿತ್ರಂ ಪಂಡಿತನಪ್ಪುದಱೆಂದವೆಲ್ಲಮಂ ಕಿಱೆದೆ ಕಾಲದಿಂದೋದಿ ಕಲ್ತು ಭಟ್ಟಾರಾ ನಿಮ್ಮ ಪೇೞ್ದೋದುಗಳೆಲ್ಲಮಂ ಗ್ರಂಥಾರ್ಥಸ್ವರೂಪದಿಂದೋದಿ ಕಲ್ತೆಂ ಇನ್ ಜ್ಯೋತಿಷಮಂ ವಖ್ಖಾಣಿಸಿಮೆಂದೊಂಗೆ ಭಟ್ಟಾರರೆಂದರ್ ಇನ್ನೋಂದಕಾರಮುಂಟು ದ್ರವ್ಯಾನುಯೋಗಮೆಂಬುದಂ ಕೇಳ್ದ ಬೞೆಕ್ಕೆ ಜ್ಯೋತಿಷಶಾಸ್ತ್ರಮಂ ವಖ್ಖಾಣಿಸುವೆನೆಂದೊಡೆ ಮನದೊಳಾದಮಾನುಮೊಸೆದೊಂದಕಾರಮೆಂಬುದೆನಗೇಮುಟ್ಟೀಗಳೆ ಕಲ್ವೆನೆಂದು ಬಗೆದು ಒಳ್ಳಿತಪ್ಪ

ಜ್ಯೋತಿಷ ವಿದ್ಯೆಯನ್ನು ನಮ್ಮ ಹಾಗೆಯೇ ಇರುವ ಋಷಿಗಳಿಗಲ್ಲದೆ ಹೇಳಬಾರದು, ಕಲಿಯಲೂ ಬಾರದು*. ಹೀಗೆನ್ನಲು ಸೂರ್ಯಮಿತ್ರನು “ಅಂತಹ ದೀಕ್ಷೆಯನ್ನು ದಯಪಾಲಿಸಿರಿ* ಎಂದು ಬೇಡಿದನು. ಆಚಾರ್ಯರು ಒಳ್ಳೆಯ ಮುಹೂರ್ತದಲ್ಲಿ ದೀಕ್ಷೆಯನ್ನು ಕೊಟ್ಟರು. ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹಗಳೆಂಬ ಐದು ಬಗೆಯ ಮಹಾವ್ರತಗಳನ್ನು ಅನುಷ್ಠಾನ ಮಾಡಿಸಿದರು. ದೋಷಗಳಿಗೆ ಪ್ರಾಯಶ್ಚಿತ್ತಗಳನ್ನು ಹೇಳಿಸಿದರು. ಅನಂತರ ಸೂರ್ಯಮಿತ್ರನು “ಇನ್ನು ಕಲಿಸಿರಿ ಎಂದನು. ಅದಕ್ಕೆ ಆಚಾರ್ಯರು “ಪಂಚನಮಸ್ಕಾರಗಳನ್ನೂ ಪ್ರಾಯಶ್ಚಿತ್ತಕ್ಕೆ ಮುಂದೆ ತನ್ನ ದೋಷಗಳನ್ನು ಗುರುವಿಗೆ ತಿಳಿಸುವ ಆಚರಣೆಯನ್ನೂ ಪ್ರತಿಜ್ಞೆಯನ್ನೂ ಆಚರಿಸಿದಲ್ಲದೆ, ಹೇಳಿ ಕೊಡಲಾಗುವುದಿಲ್ಲ* ಎಂದರು. ಸೂರ್ಯಮಿತ್ರನು ಬೇಗ ಬೇಗನೆ ಅವೆಲ್ಲವನ್ನೂ ಪಾಠ ಹೇಳಿಸಿಕೊಂಡ ಮೇಲೆ “ಪೂಜ್ಯರೇ, ಇನ್ನು ಹೇಳಿ* ಎಂದನು.ಆಗ ಆಚಾರ್ಯರು “ಅರುವತ್ತಮೂರು ಮಂದಿ ಶಲಾಕಾಪುರುಷರ ಚರಿತ್ರೆಗಳನ್ನು ಆಚಾರ ಆರಾಧನೆ ಮಾಡಲಾಗಿರುವ ಚರಣ ಗ್ರಂಥ (ಜೈನ ಶ್ರಾವಕರ ಮತ್ತು ಯತಿಗಳ ಆಚಾರಗಳನ್ನು ನಿರೂಪಿಸುವ ಗ್ರಂಥ) ಗಳನ್ನು ಲೋಗಾಣಿ (ಲೋಕಾಕಾರವನ್ನು ನಿರೂಪಿಸುವ ಗ್ರಂಥಗಳು) ಸಂಗಾಣಿ (ಸಪ್ತ ಪದಾರ್ಥಗಳ ಸ್ವರೂಪವನ್ನು ತಿಳಿಸುವ ಗ್ರಂಥಗಳು) ಮುಂತಾದ ಕರಣಗ್ರಂಥಗಳನ್ನು – ಇವೆಲ್ಲವನ್ನೂ ಕಲಿತಲ್ಲದೆ, ಹೇಳಿ ಕೊಡಲಿಕ್ಕಾಗದು* ಎಂದರು. ಸೂರ್ಯಮಿತ್ರನು ಪಂಡಿತನಾದುದರಿಂದ ಅವೆಲ್ಲವನ್ನೂ ಸ್ವಲ್ಪವೇ ಕಾಲದಲ್ಲಿ ಓದಿ ಕಲಿತನು. “ಪೂಜ್ಯರೇ, ನೀವು ಹೇಳಿಕೊಟ್ಟ ವಿದ್ಯೆಗಳೆಲ್ಲವನ್ನೂ ಗ್ರ್ರಂಥದ ಅರ್ಥಸ್ವರೂಪದಿಂದಲೇ ಓದಿ ಕಲಿತೆನು. ಇನ್ನೂ ಜ್ಯೋತಿಷವನ್ನು ವ್ಯಾಖ್ಯಾನಿಸಿರಿ* ಎಂದನು. ಆಗ ಅವನಿಗೆ ಆಚಾರ್ಯರು ಹೀಗೆಂದರು – “ಇನ್ನೊಂದು ಅರ್ಹತೆ ಉಳಿದಿದೆ. ಅದಕ್ಕೆ ದ್ರವ್ಯಾನುಯೋಗವೆಂದು ಹೆಸರು. ಅದನ್ನು ತಿಳಿದುಕೊಂಡ ನಂತರ ಜ್ಯೋತಿಷ ಶಾಸ್ತ್ರವನ್ನು ವ್ಯಾಖ್ಯಾನಿಸುವೆನು* – ಹೀಗೆನ್ನಲು, ಸೂರ್ಯಮಿತ್ರನು ಮನಸ್ಸಿನಲ್ಲಿ ಬಹಳ ಸಂತೋಷಪಟ್ಟನು – ಇನ್ನುಳಿದ ಒಂದು ಅರ್ಹತೆಯೆಂಬುದು ನನಗೆ ಏನು ಮಹಾ ! ಈಗಲೇ ಕಲಿಯುವೆನು –

ದಿವಸ ವಾರ ನಕ್ಷತ್ರ ಮುಹೂರ್ತದೊಳ್ ಸಿದ್ದಾಂತಮಂ ತೊಡಗಿಸೆ ಎಂತಂತೆ ಕೇಳ್ಗುಮಂತಂತೆ ಮಿಥ್ಯಾತ್ವಮಿನಿಸಿನಿಸು ಪಿಂಗೆ ಬಂಧಂ ಬಂಧಕಾರಣಂ ಮೋಕ್ಷಂ ಮೋಕ್ಷಕಾರಣಮಾ ಎರಡಱ ಫಲಮುಮೆಂದಿಂತು ಸಿದ್ದಾಂತದೊಳ್ ಪೇೞ್ದ ವಸ್ತುಗಳೆಲ್ಲಮಂ ಕೇಳ್ದು ಜೀವಾಜೀವ ಪುಣ್ಯಪಾಪಾಸ್ರವ ಸಂವರ ನಿರ್ಜರ ಬಂಧ ಮೋಕ್ಷಮೆಂದಿಂತು ನವಪದಾರ್ಥಂಗಳುಂ ಪಂಚಾಸ್ತಿಕಾಯ ಷಡ್ದ್ರವ್ಯಂಗಳುಮೆಂಬಿವಱೊಳಾದಮಾನುಮಱೆತಮುಂ ಕುಶಲಿಕೆಯುಂ ನಂಬುಗೆಯುಮಾಗಿ ಅರ್ಹದ್ಭಟ್ಟಾರಕರ ಸಿದ್ಧಸ್ವರೂಪಮಂ ಗುಣಂಗಳುಮೆನಱೆದು ಶಂಕಾದ್ಯಷ್ಪಮಲಂಗಳುಮೆಂಟು ಮದಂಗಳುಂ ಮೂಱುಮೂಢಮುಮಾಱನಾಯತನ ಸೇವೆಗಳುಮೆಂದಿಂತು ಇಪ್ಪತ್ತೈದು ದೋಷಂಗಳಿಂದಗಲ್ದ ಸಮ್ಯಕ್ಷಮನೊಡೆಯನಾಗಿ ಸಂಸಾರ ಭೋಗ ವೈರಾಗ್ಯ ವರಾಯಣನುಮಾಗಿ ಎಮ್ಮುಕ್ಕೆವ ತಪದಿಂದಮನಂತ ಸುಖಕ್ಕೆ ಕಾರಣಮಪ್ಪ ಸನ್ನಾರ್ಗಮಂ ಪೆತ್ತೆನೆಂದತ್ಯಂತ ಹರ್ಷಚಿತ್ತನಾಗಿ ಗುರುಗಳ್ಗೆ ತಮ್ಮುಕ್ಕೆವದಿಂ ತಪಂಬಟ್ಟುದನಾಳೋಚಿಸಿ ಪ್ರಾಯಶ್ಚಿತ್ತಂಗೊಂಡು ಪಡಿಕಮಣಂಗೆಯ್ದು ಪರಮಾರ್ಥಯತಿವರರಾಗಿ ಪನ್ನೆರಡು ವರ್ಷಂಬರಂ ಗುರುಗಳನಗಲದೆ ತಪಂಗೆಯ್ದಾಚಾರ್ಯರಾಗಿ ಗುರುಗಳನುಮತದಿಂದೇಕವಿಹಾರಿಯಾಗಿ – ಗ್ರಾಮೇ – ಕರಾತ್ರಂ ನಗರೇ ಪಂಚರಾತ್ರಮಟವ್ಯಾಂ ದಶರಾತ್ರಮೆಂಬೀ ತೆಱದಿಂದಂ ಗ್ರಾಮ

ಎಂದು ಭಾವಿಸಿಕೊಂಡನು. ಅನಂತರ ಒಳ್ಳೆಯ ದಿವಸ ವಾರ ನಕ್ಷತ್ರ ಮುಹೂರ್ತದಲ್ಲಿ ಭಟ್ಟಾರರು ಸಿದ್ದಾಂತವನ್ನು ಉಪದೇಶಿಸಲು ಪ್ರಾರಂಭ ಮಾಡಿದರು. ಸೂರ್ಯಮಿತ್ರನು ಸಿದ್ದಾಂತವನ್ನು ಕೇಳಿದಂತೆಲ್ಲ ಅಜ್ಞಾನವು (ಅಪನಂಬಿಕೆ) ಸ್ವಲ್ಪ ಸ್ವಲ್ಪವಾಗಿ ಹಿಂಗತೊಡಗಿತು. ಬಂಧವು ಬಂಧನಕ್ಕೆ ಕಾರಣವೆಂದೂ ಮೋಕ್ಷವು ಮೋಕ್ಷಕ್ಕೆ ಕಾರಣವೆಂತಲೂ ಆ ಎರಡರ ಪರಿಣಾಮವನ್ನೂ ಸಿದ್ಧಾಂತದಲ್ಲಿ ಹೇಳಿದ ವಿಚಾರವೆಲ್ಲವನ್ನೂ ಕೇಳಿಕೊಂಡನು. ಜೀವ, ಅಜೀವ, ಪುಣ್ಯ, ಪಾಪ, ಆಸ್ರವ, ಸುಂದರ, ನಿರ್ಜರ, ಬಂಧ, ಮೋಕ್ಷ ಎಂದು ಈ ರೀತಿಯಾದ ನವಪದಾರ್ಥಗಳು, ಪಂಚಾಸ್ತಿಕಾಯ ಷಡ್ದ್ರವ್ಯಗಳು – ಎಂಬವುಗಳಲ್ಲಿ ಹೆಚ್ಚಿನ ತಿಳುವಳಿಕೆಯೂ ಪ್ರಾವೀoವೂ ವಿ**ಸವೂ ಅವನಲ್ಲಿ ಉಂಟಾದವು. ಜೈನ ತೀರ್ಥಂಕರರ ಸಿದ್ಧಸ್ವರೂಪವನ್ನೂ ಗುಣಗಳನ್ನೂ ತಿಳಿದುಕೊಂಡನು, ಸಂಶಯವೇ ತೀರ್ಥಂಕರರ ಸಿದ್ಧಸ್ವರೂಪವನ್ನೂ ಗುಣಗಳನ್ನೂ ತಿಳಿದುಕೊಂಡನು. ಸಂಶಯವೇ ಮೊದಲಾದ ಎಂಟು ಬಗೆಯ ಆನಾಯತನ ಸೇವೆಗಳು – ಎಂಬೀ ರೀತಿಯ ಇಪ್ಪತ್ತೈದು – ದೋಷಗಳಿಂದ ದೂರವಾದ ತತ್ತ್ವಜ್ಞಾನವುಳ್ಳವನಾದನು. ಸಂಸಾರಿಕ ಸುಖದಲ್ಲಿ ವೈರಾಗ್ಯವನ್ನು ತಾಳಿದನು, ‘ನನ್ನ ಕಪಟದ ತಪಸ್ಸಿನಿಂದ ಅಂತ್ಯವಿಲ್ಲದ ಸುಖಕ್ಕೆ ಕಾರಣವಾಗಿರುವ ಒಳ್ಳೆಯ ದಾರಿಯನ್ನು ಪಡೆದುಕೊಂಡೆನು’ – ಎಂದು ಅತ್ಯಂತ ಸಂತೋಷಮನಸ್ಕನಾದನು. ತಾನು ಕಪಟದಿಂದ ತಪಸ್ಸನ್ನು ಆಚರಿಸಿದ ಸಂಗತಿಯನ್ನು ಗುರುಗಳ ವಿಚಾರಕ್ಕೆ ತಂದು ಪ್ರಾಯಶ್ಚಿತ್ತ ಮಾಡಿಕೊಂಡು ಪಡಿಕಮಣ (ಪ್ರಾಯಶ್ಚಿತ್ತ) ವಿಯನ್ನು ನೆರವೇರಿಸಿ, ನಿಜವಾದ ಯತಿಗಾಗಿ ಹನ್ನೆರಡು ವರ್ಷಗಳವರೆಗೆ ಗುರುಗಳ ಒಟ್ಟಿಗಿದ್ದು ತಪ್ಪಸ್ಸನ್ನು ಮಾಡಿ ‘ಆಚಾರ್ಯರು’ ಎನಿಸಿದನು. ಅನಂತರ ಸೂರ್ಯಮಿತ್ರಾಚಾರ್ಯರು ಗುರುಗಳಿಂದ ಒಪ್ಪಿಗೆ ಪಡೆದು, ಏಕವಿಹಾರಿ (ಪರಿವ್ರಾಜಕ ಒಬ್ಬನೇ ಸಂಚರಿಸುವವ) ಆಗಿ, ಹಳ್ಳಿಯಲ್ಲಿ ಒಂದು ರಾತ್ರಿಯಿದ್ದರೆ, ನಗರದಲ್ಲಿ ಐದು

ಎಂದು ಭಾವಿಸಿಕೊಂಡನು. ಅನಂತರ ಒಳ್ಳೆಯ ದಿವಸ ವಾರ ನಕ್ಷತ್ರ ಮುಹೂರ್ತದಲ್ಲಿ ಭಟ್ಟಾರರು ಸಿದ್ದಾಂತವನ್ನು ಉಪದೇಶಿಸಲು ಪ್ರಾರಂಭ ಮಾಡಿದರು. ಸೂರ್ಯಮಿತ್ರನು ಸಿದ್ದಾಂತವನ್ನು ಕೇಳಿದಂತೆಲ್ಲ ಅಜ್ಞಾನವು (ಅಪನಂಬಿಕೆ) ಸ್ವಲ್ಪ ಸ್ವಲ್ಪವಾಗಿ ಹಿಂಗತೊಡಗಿತು. ಬಂಧವು ಬಂಧನಕ್ಕೆ ಕಾರಣವೆಂದೂ ಮೋಕ್ಷವು ಮೋಕ್ಷಕ್ಕೆ ಕಾರಣವೆಂತಲೂ ಆ ಎರಡರ ಪರಿಣಾಮವನ್ನೂ ಸಿದ್ಧಾಂತದಲ್ಲಿ ಹೇಳಿದ ವಿಚಾರವೆಲ್ಲವನ್ನೂ ಕೇಳಿಕೊಂಡನು. ಜೀವ, ಅಜೀವ, ಪುಣ್ಯ, ಪಾಪ, ಆಸ್ರವ, ಸುಂದರ, ನಿರ್ಜರ, ಬಂಧ, ಮೋಕ್ಷ ಎಂದು ಈ ರೀತಿಯಾದ ನವಪದಾರ್ಥಗಳು, ಪಂಚಾಸ್ತಿಕಾಯ ಷಡ್ದ್ರವ್ಯಗಳು – ಎಂಬವುಗಳಲ್ಲಿ ಹೆಚ್ಚಿನ ತಿಳುವಳಿಕೆಯೂ ಪ್ರಾವೀಣ್ಯವೂ ವಿಶ್ವಾಸವೂ ಅವನಲ್ಲಿ ಉಂಟಾದವು. ಜೈನ ತೀರ್ಥಂಕರರ ಸಿದ್ಧಸ್ವರೂಪವನ್ನೂ ಗುಣಗಳನ್ನೂ ತಿಳಿದುಕೊಂಡನು, ಸಂಶಯವೇ ತೀರ್ಥಂಕರರ ಸಿದ್ಧಸ್ವರೂಪವನ್ನೂ ಗುಣಗಳನ್ನೂ ತಿಳಿದುಕೊಂಡನು. ಸಂಶಯವೇ ಮೊದಲಾದ ಎಂಟು ಬಗೆಯ ಆನಾಯತನ ಸೇವೆಗಳು – ಎಂಬೀ ರೀತಿಯ ಇಪ್ಪತ್ತೈದು – ದೋಷಗಳಿಂದ ದೂರವಾದ ತತ್ತ್ವಜ್ಞಾನವುಳ್ಳವನಾದನು. ಸಂಸಾರಿಕ ಸುಖದಲ್ಲಿ ವೈರಾಗ್ಯವನ್ನು ತಾಳಿದನು, ‘ನನ್ನ ಕಪಟದ ತಪಸ್ಸಿನಿಂದ ಅಂತ್ಯವಿಲ್ಲದ ಸುಖಕ್ಕೆ ಕಾರಣವಾಗಿರುವ ಒಳ್ಳೆಯ ದಾರಿಯನ್ನು ಪಡೆದುಕೊಂಡೆನು’ – ಎಂದು ಅತ್ಯಂತ ಸಂತೋಷಮನಸ್ಕನಾದನು. ತಾನು ಕಪಟದಿಂದ ತಪಸ್ಸನ್ನು ಆಚರಿಸಿದ ಸಂಗತಿಯನ್ನು ಗುರುಗಳ ವಿಚಾರಕ್ಕೆ ತಂದು ಪ್ರಾಯಶ್ಚಿತ್ತ ಮಾಡಿಕೊಂಡು ಪಡಿಕಮಣ (ಪ್ರಾಯಶ್ಚಿತ್ತ) ವಿಯನ್ನು ನೆರವೇರಿಸಿ, ನಿಜವಾದ ಯತಿಗಾಗಿ ಹನ್ನೆರಡು ವರ್ಷಗಳವರೆಗೆ ಗುರುಗಳ ಒಟ್ಟಿಗಿದ್ದು ತಪ್ಪಸ್ಸನ್ನು ಮಾಡಿ ‘ಆಚಾರ್ಯರು’ ಎನಿಸಿದನು. ಅನಂತರ ಸೂರ್ಯಮಿತ್ರಾಚಾರ್ಯರು ಗುರುಗಳಿಂದ ಒಪ್ಪಿಗೆ ಪಡೆದು, ಏಕವಿಹಾರಿ (ಪರಿವ್ರಾಜಕ ಒಬ್ಬನೇ ಸಂಚರಿಸುವವ) ಆಗಿ, ಹಳ್ಳಿಯಲ್ಲಿ ಒಂದು ರಾತ್ರಿಯಿದ್ದರೆ, ನಗರದಲ್ಲಿ ಐದು