ಮಗಂಬೆತ್ತಳೆಂದು ಪೇೞ್ದೊಡೆ ಪೇೞ್ದ ಭಟ್ಟಂಗೆ ಕಟಕ ಕಟಿಸೂತ್ರಂ ಮೊದಲಗೊಡೆಯ ಅಂಗಚಿತ್ತಮುಮಂ ಪಿರಿದು ಕಸವರಮುಮಂ ಕೊಟ್ಟು ಪಾರ್ವಂಗೆ ದಾರಿದ್ರ್ಯ ಮೋಕ್ಷಮಂ ಮಾಡಿ ಸಿದ್ದಾರ್ಥನೀ ಪಾರ್ವನ ಮಾತಂ ಕೇಳ್ದಾಗಳೆ ಪುತ್ರಮುಖಮಂ ನೋೞ್ಪೆನೆಂದು ಭೋಂಕನೆ ನೆಲಮನೆಯೊಳಗಂ ಪೊಕ್ಕು ನೋೞ್ಪನ್ನೆಗಂ ಜಯಾವತಿ ತನ್ನ ಸೋಂಕಿಲ ಮೇಗಿಟ್ಟಾಡಿಸುತ್ತಿರ್ಪ್ಪ ಕೂಸಂ ಎಳನೇಸಱ ತೇಜದೊಳೋರಂತಪ್ಪನಂ ಕಂಡು ಪಲವು ಕಾಲಂ ಬಾಳ್ವೆಯಾಗೆಂದು ಮಗನಂ ಪರಸಿ ಮತ್ತಮಿಂತೆಂನೆನ್ನ ಮೂವತ್ತೆರಡು ಕೋಟಿ ಕಸವರಕ್ಕಂ ರಾಜಶ್ರೇಷ್ಠಪದಕ್ಕಮೆನ್ನ ಸಂತತಿಗಮೆಲ್ಲವಿನ್ನಿಂದಿತ್ತ ನೀನೆ ಅರಸನೆಂದು ನುಡಿದು ಸಮಸ್ತಭಾರಮೆಲ್ಲಮಂ ಕೂಸಿಂಗೆ ಸಮರ್ಪಿಸಿ ಸೋಂಕಿಲೊಳಗಿರ್ದ ಕೂಸಿಂಗೆ ಸೆಟ್ಟವಟ್ಟಂಗಟ್ಟಿ ಪರಸಿ ಸೇಸೆಯನಿಕ್ಕಿ ಸೋಂಕಿಲೊಳಿರ್ದನಂ ಕಂಡನಪ್ಪುದಱಂ ಸುಕೌಶಲಸ್ವಾಮಿಯೆಂದು ಪೆಸರನಿಟ್ಟು ನೆಲೆಮನೆಯಂ ಪೊಱಮಟ್ಟು ಸ್ವಜನ ಪರಿಜನ ಬುಧುವರ್ಗಕ್ಕೆಲ್ಲಂ ನಿಶ್ಯಲ್ಯಂಗೆಯ್ದು ನೀಮಿನಿಬರುಂ ಸುಕೌಶಲಸ್ವಾಮಿಯಂ ಪಿಡಿದು ಬಾೞಮೆಂದು ಕಲ್ಪಿಸಿ ಸಂತಯಿಸಿ ವಿನಯಂಧರರೆಂಬಾಚಾರ್ಯರ ಪಕ್ಕದೆ ಪಲಂಬರುಂಬೆರಸು ತಪ್ಪಂ ಬಟ್ಟಂ ಮತ್ತೆ ಶ್ರೀಕಾಂತೆ ಮೊದಲಾಗೊಡೆಯ ಪಲಂಬರ್ ಪೆಂಡಿರ್ಕ್ಕಳ್ ವಿನಯಂಧರ ಭಟ್ಟಾರರ್ ಗುರುಗಳಾಗೆ ಗುಣಮತಿಕಂತಿಯರ್ ಕಂತಿಯರಾಗೆ ತಪಂಬಟ್ಟು ಪಲಕಾಲಮುಗ್ರೋಗ್ರತಪಶ್ಚರಣಂಗೆಯ್ದು ಸಮಾಮರಣದಿಂದಂ ಮುಡಿಪಿ ದೇವಲೋಕದೊಳನಿಬರುಂ ಪುಟ್ಟಿದರ್ ಮತ್ತಿತ್ತ ಸಿದ್ದಾರ್ಥ

ಚಿನ್ನದ ಬಳೆ, ಉಡಿದಾರ ಮುಂತಾಗಿರುವ ಮೈಮೇಲೆ ಧರಿಸುವ ಆಭರಣಗಳ ರೂಪದ ಬಹುಮಾನವನ್ನು ಕೊಟ್ಟು ಆ ಬಾ ಹ್ಮಣನನ್ನು ಬಡತನದಿಂದ ಬಿಡುಗಡೆ ಮಾಡಿದನು. ಅನಂತರ ಸಿದ್ದಾರ್ಥನು ಒಡನೆಯೆ ಮಗನ ಮುಖವನ್ನು ನೋಡುವೆನೆಂದು ಬೇಗನೆ ನೆಲಮನೆಯ ಒಳಗೆ ಹೊಕ್ಕನು. ಆ ವೇಳೆಗೆ ಜಯಾವತಿ ಬಾಲಸೂರ್ಯನ ತೇಜಸ್ಸಿಗೆ ಸಮಾನವಾದ ಮಗುವನ್ನು ತನ್ನ ಮಡಿಲಲ್ಲಿ ಆಡಿಸುತ್ತಿರುವುದನ್ನು ಕಂಡನು. “ಚಿರಂಜೀವಿಯಾಗು (‘ದೀರ್ಘಾಯುರ್ಭವ’) ಎಂದು ಆಶೀರ್ವಾದ ಮಾಡಿದನು. ಆಮೇಲೆ ಹೀಗೆಂದನು. – “ನನ್ನ ಮೂವತ್ತೆರಡು ಕೋಟಿ ಹೊನ್ನಿಗೂ ರಾಜಶ್ರೇಷ್ಠಿ ಪದವಿಗೂ ನನ್ನ ಸಂತತಿಯವರಿಗೂ ಎಲ್ಲಾ ಇವನಿತ್ತಿಂದ ಮುಂದೆ ನೀನೇ ಒಡೆಯನು. * ಹೀಗೆ ಹೇಳಿ, ತನ್ನ ಎಲ್ಲ ಭಾರವನ್ನು ಮಗುವಿಗೆ ಸಲ್ಲಿಸಿದನು. ಮಡಿಲಿನಲ್ಲಿದ್ದ ಮಗುವಿಗೆ ಸೆಟ್ಟಿ ಪಟ್ಟವನ್ನು ಕಟ್ಟಿ ಆಶೀರ್ವದಿಸಿ ಮಂತ್ರಾಕ್ಷತೆಯನ್ನು ಹಾಕಿದನು. ಮಡಿಲಲ್ಲಿ ಇದ್ದ ಮಗುವನ್ನು ಕಂಡ ಕಾರಣದಿಂದ ಸುಕೌಶಲಸ್ವಾಮಿ ಎಂದು ಹೆಸರನಿಟ್ಟನು. ಸಿದ್ದಾರ್ಥನು ಆಮೇಲೆ ನೆಲಮನೆಯಿಂದ ಹೊರಟು ಬಂದು ತನ್ನ ಜನರಿಗೂ ಸೇವಕರಿಗೂ ಬಂಧುವರ್ಗಕ್ಕೂ ತೊಂದರೆಗಳಿಲ್ಲದಂತೆ ಮಾಡಿ (ಸಂತೋಷವನ್ನುಂಟುಮಾಡಿ) ನೀವು ಈ ಎಲ್ಲರೂ ಸುಕೌಶಲ ಸ್ವಾಮಿಯನ್ನು ಕೂಡಿಕೊಂಡು ಬಾಳಿರಿ, ಎಂದು ಹೇಳಿಕೊಟ್ಟು ಸಮಾಧಾನಪಡಿಸಿದನು. ಆಮೇಲೆ ಅವನು ಹಲವರನ್ನು ಕೂಡಿಕೊಂಡು ವಿನಯಂಧರರೆಂಬ ಆಚಾರ್ಯರ ಬಳಿಯಲ್ಲಿ ತಪಸ್ಸಿನ ಆಚರಣೆಯನ್ನು ಪಡೆದನು. ಅನಂತರ ಶ್ರೀಕಾಂತೆ ಮುಂತಾಗಿರುವ ಹಲವಾರು ಹೆಂಡಿರು ವಿನಯಂಧರಸ್ವಾಮಿಗಳು ಗುರುಗಳಾಗಿರಲು ಗುಣವತಿ ಕಂತಿಯರು ಭಿಕ್ಷುಣಿ ಸನ್ಯಾಸಿಯರಾಗಿರಲು ತಪಸ್ಸಿಗೆ ಉಪದೇಶವನ್ನು ಪಡೆದು ಹಲವು ಕಾಲ ಅತ್ಯಂತ ಘೋರವಾದ ತಪಸ್ಸನ್ನು ಆಚರಿಸಿ, ಸಮಾಮರಣದಿಂದ ದೇಹತ್ಯಾಗ ಮಾಡಿದರು.

ರಿಸಿಯುಂ ಪನ್ನೆರಡು ವರುಷಂಬರಂ ಗುರುಗಳನಗಲದೆ ದ್ವಾದಶಾಂಗ ಚತುರ್ದಶ ಪೂರ್ವಮಪ್ಪಾಗಮಮೆಲ್ಲಮಂ ಕಲ್ತೇಕವಿಹಾರಿಯಪ್ಪೆಂ ಭಟಾರಾ ಎಂದು ಗುರುಗಳಂ ಬೆಸಗೊಂಡವರ ನುಮತದಿಂದದೇಕವಿಹಾರಿಯಾಗಿ ಗ್ರಾಮೇ ಏಕರಾತ್ರಂ ನಗರೇ ಪಂಚರಾತ್ರಂ ಆಟವ್ಯಾಂ ದಶರಾತ್ರಮೆಂಬೀ ನ್ಯಾಯದಿಂ ವಿಹಾರಿಸುತ್ತಂ ಛಟ್ಠಟ್ಠಮ ದಸಮ ದುವಾಳಸಾಷ್ಟೋಪವಾಸ ಪಕ್ಷೋಪವಾಸ ಮಾಸೋಪವಾಸಂಗಳಂ ಮಾಡುತ್ತಂ ಪಲಕಾಲಂ ತಪಂಗೆಯ್ಯುತ್ತಮಿರ್ದರ್, ಇತ್ತ ಜಯಾವತಿ ಮುಂ ಭಟ್ಟಾರರ್ ಪೇೞ್ದೂದೇಶಮಂ ನೆನೆದು ತನ್ನ ಮನೆಯಂ ರಿಸಿಯರಂ ಪುಗಲೀಯದಂತಿರೆ ಬಾಗಿಲ್ಗಾಪಿನವರಂ ಕಲ್ಪಿಸಿದೊಳ್ ಮತ್ತೆ ಸಿದ್ದಾರ್ಥರಿಸಿಯರ ಮೇಗೆ ಕ್ರೋಧಮಂ ಭಾವಿಸಿ ಬಾಲವದ್ದೆಯಂ ಕೂಸಂ ಸಿಸುವನವ್ಯಕ್ತನಂ ವಿಸುಟ್ಟೆಂತು ತಪಂಬಟ್ಟೆ ಪಾಪ ಕರ್ಮ ದಯೆಯಿಲ್ಲದೊಂ ನಿಷ್ಕರುಣಿ ಎಂದು ಬಯ್ದಳ್ ಮತ್ತೆ ಸುಕೌಶಳಸ್ವಾಮಿಯಂ ಮೊಲೆಯೂಡುವ ದಾದಿ ಸುಬ್ರತೆಯೆಂಬೊಳ್ ಸುಮತಿಯೆಂಬೊಳೂಡುವ ದಾದಿ ನಂದೆಯೆಂಬೊಳಾಡಿಸುವ ದಾದಿ ಸುಪ್ರಭೆಯೆಂಬೊಳ್ ಮಜ್ಜನಂಬುಗಿಸುವ ದಾದಿ ಮೆಘಮಾಲೆಯೆಂಬೊಳ್ ಪಸದನಂಗೊಳಿಸುವ ದಾದಿ ಇಂತಯ್ವರ್

ಅವರೆಲ್ಲರೂ ದೇವಲೋಕದಲ್ಲಿ ಹುಟ್ಟಿದರು. ಅಮೇಲೆ ಇತ್ತ ಸಿದ್ದಾರ್ಥ ಋಷಿ ಹನ್ನೆರಡು ವರ್ಷಗಳವರೆಗೆ ಗುರುಗಳ ಒಡನಾಟವನ್ನು ಬಿಡದೆ, “ಗುರುಗಳೇ, ಹನ್ನೆರಡು ಅಂಗಗಳೂ (ಆಚಾರಾಂಗ, ಸೂತ್ರಕೃತಾಂಗ….ಇತ್ಯಾದಿ) ಹದಿನಾಲ್ಕು ಪೂರ್ವಗಳೂ (ಉತ್ಪಾದಪೂರ್ವ, ಆಗ್ರಾಯಣೀ ಪೂರ್ವ ಇತ್ಯಾದಿ) ಇರತಕ್ಕ ಶಾಸ್ತ್ರಗಳೆಲ್ಲವನ್ನೂ ಕಲಿತು ಒಂಟಿ ಪರಿವಜ್ರಕನಾಗುವೆನು* ಎಂದು ಗುರುಗಳನ್ನು ಕೇಳಿ ಕೊಂಡನು. ಅವರ ಅಪ್ಪಣೆಯಂತೆ ಏಕವಿಹಾರಿ (ಒಂಟಿ ಪರಿವ್ರಾಜಕನೂ) ಆಗಿ, ‘ಗ್ರಾಮದಲ್ಲಿ ಒಂದು ರಾತ್ರಿ ನಗರದಲ್ಲಿ ಐದುರಾತ್ರಿ ಕಾಡಿನಲ್ಲಿ ಹತ್ತುರಾತಿ’ ಎಂಬ ನ್ಯಾಯದಂತೆ ಸಂಚರಿಸುತ್ತಾ ಅರು, ಎಂಟು, ಹತ್ತು, ಹನ್ನೆರಡು, ದಿನಗಳು ಮಾಡತಕ್ಕ ಅಷ್ಟೋಪವಾಸ, ಪಕ್ಷೋಪವಾಸ, ಮಾಸೋಪವಾಸಗಳನ್ನು ಮಾಡುತ್ತ ಹಲವು ಕಾಲದವರೆಗೆ ತಪಸ್ಸನ್ನು ಮಾಡುತ್ತಿದ್ದರು. ಇತ್ತಲಾಗಿ ಜಯಾವತಿ ಹಿಂದೆ ಸ್ವಾಮಿಗಳು ಹೇಳಿದ ಆಜ್ಞೆಯನ್ನು ಸ್ಮರಿಸಿಕೊಂಡು, ಋಷಿಗಳು ತನ್ನ ಮನೆಯನ್ನು ಪ್ರವೇಶಿಸಲಿಕ್ಕೆ ಬಿಡದ ಹಾಗೆ ದ್ವಾರರಕ್ಷಕರಿಗೆ ಹೇಳಿಕೊಟ್ಟಳು. ಆಮೇಲೆ ಸಿದ್ದಾರ್ಥ ಋಷಿಗಳ ಮೇಲೆ ಕೋಪಗೊಂಡವಳಾಗಿ ಎಲೈ ಪಾಪ ಕೃತ್ಯ ಮಾಡಿದವನೇ ದಯೆಯಿಲ್ಲದವನೇ, ಕರುಣಾಹೀನನೇ, ಬಾಣಂತಿಯಾಗಿರುವ ಹೆಂಡತಿಯನ್ನು ಬರೇ ಚಿಕ್ಕದಾಗಿದ್ದ ಶಿಶುವನ್ನು ತೊರೆದು ಹೇಗೆ ನೀನು ತಪಸ್ಸನ್ನು ಮಾಡಲು ಹೋದೆ ? – ಎಂದು ನಿಂದಿಸಿದಳು. ಆಮೇಲೆ, ಸುಕೌಶಳಸ್ವಾಮಿಗೆ ಸುವ್ರತೆ ಎಂಬ ದಾದಿಯು ಮೊಲೆಯೂಡುತ್ತಿದ್ದಳು ಸುಮತಿ ಎಂಬವಳು ಲೇಪನಾದಿಗಳನ್ನು ಸಿದ್ದಪಡಿಸಿ ಹಚ್ಚುವವಳಾಗಿದ್ದಳು. ನಂದೆ ಎಂಬುವಳು ಆಟವಾಡಿಸುವ ದಾದಿಯಾಗಿದ್ದಳು. ಸುಪ್ರಭೆ ಎಂಬವಳು ಸ್ವಾನಮಾಡಿಸುವಳು, ಮೇಘಮಾಲೆಯೆಂಬುವಳು ಅಲಂಕಾರ ಮಾಡತಕ್ಕವಳಾಗಿದ್ದಳು. ಈ ರೀತಿಯಾಗಿ ಐದು ಮಂದಿ ದಾದಿಗಳು (ಕ್ಷೀರ ಧಾತ್ರಿ, ಮಂಡನಧಾತ್ರಿ, ಮಜ್ಜನನಧಾತ್ರಿ, ಕಿಳವನ (ಕ್ರೀಡೆಯ)ಧಾತ್ರಿ, ಮತ್ತು ಅಂಕಧಾತ್ರಿ – ಎಂಬವರು) ಸಾಕುತ್ತಿರಲು ಸುಕೌಶಳಸ್ವಾಮಿ ಸುಖದಿಂದ ಬೆಳೆದನು. ಅವನು ಹದಿನಾರು

ದಾದಿಯರ್ಕ್ಕಳ್ ನಡುವೆ ಸುಖದಿಂದಂ ಬಳೆದು ಪದಿನಾಱುಂ ವರುಷಂಬೋಗಿ ಯೌವನವಾದೊಡೆ ಮೂವತ್ತಿರ್ವರರಸುಮಕ್ಕಳ ಕೂಸುಗಳನತ್ತಂತ ಲಾವಣ್ಯ ಸೌಭಾಗ್ಯ ಕಾಂತಿ ಹಾವ ಭಾವ ವಿಲಾಸ ವಿಭ್ರಮಂಗಳಿಂ ಕೂಡಿದೊರಂ ಬೇಡಿಯೊಂದೆ ಪಸೆಯೊಳ್ ಮದುವೆ ನಿೞಸಿದಳ್ ಮತ್ತೇಕಶಾಲ ದ್ವಿಶಾಲ ಚತುಶ್ಯಾಲ ಸ್ವಸ್ತಿಕ್ ನಂದ್ಯಾವರ್ತಂ ಮೊದಲಾಗೊಡೆಯ ಮಾಡಂಗಳುಂ ಮೂವತ್ತೆರೞ್ವಳ್ಳಿ ಮಾಡಂಗಳುಮಂ ಮಾಡಿಸಿ ತನ್ನ ಮನೆಯಂಗಣದೊಳ್ ಸೆಂಡಾಡುವ ತೞಯುಮಾನೆಯನೇಱುವ ವಿನೋದಂ ಮೊದಲಾಗೊಡೆಯ ವಿನೋದಸ್ಥಾನಂಗಳೆಲ್ಲಮಂ ಮಾಡಿಸಿ ಪೊಱಮಡಲೀಯದಂತು ಕಾಪಂ ಮಾಡಿ ಮಗನೈಶ್ವರ್ಯಮಂ ವಿನೋದಮುಮನೞಯಿಂದಂ ದಿವಸಕ್ಕಂ ನೋಡುತಿರ್ಕುಮಾ ಸುಕೌಶಳಸ್ವಾಮಿಯುಂ ಮೂವತ್ತಿರ್ವ್ವರ್ ಪೆಂಡಿರ್ಕಳೊಡನೆ ಇಷ್ಟವಿಷಯ ಕಾಮ ಭೋಗ ಸುಖಂಗಳಂ ಪಲಕಾಲಮನುಭವಿಸುತ್ತಿರೆ ಮತ್ತೊಂದು ದಿವಸಂ ಸುಕೌಶಳಸ್ವಾಮಿಯುಂ ಪೃಥ್ವೀಧರಮೆಂಬ ಪ್ರಾಸಾದದೇೞನೆಯ ನೆಲೆಯ ಮೇಗೆ ತಾನುಂ ತಾಯುಂ ಸುವ್ರತೆ ಮೊದಲಾಗೊಡೆಯ ಅಯ್ವರ್ ದಾದಿಯರುಂ ಸ್ವಯಂಪ್ರಭೆ ಮೊದಲಾಗೊಡೆಯ ಮೂದತ್ತಿರ್ವ್ವರ್ ಪೆಂಡಿರ್ಕ್ಕಳಿಂತಿನಿಬರಿಂದಂ ಪರಿವೇಷ್ಟಿತನಾಗಿ ಗವಾಕ್ಷ ಜಾಲಾಂತರದೊಳ್ ದಿಶಾವಳೋಕನಂಗೆಯ್ಯುತ್ತುಂ ಸುಖಸಂಕಥಾವಿನೋದಿಂದಿರ್ಪ್ಪನ್ನೆಗಮಿತ್ತ ಸಿದ್ದಾರ್ಥರಿಸಿಯರ್ ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತಯೋಧ್ಯಾನಗರಮಂ ಬಂದು ಮಾಸೋಪವಾಸದ

ವರ್ಷ ಪ್ರಾಯದವನಾಗಿ ಯುವಕನಾನು. ಅವನಿಗೆ ಮೂವತ್ತೆರಡು ಮಂದಿ ರಾಜಕುಮಾರಿಯರನ್ನು – ಅತಿಶಯವಾದ ಲಾವಣ್ಯ, ಸೌಭಾಗ್ಯ, ಕಾಂತಿ, ಹಾವ, ಭಾವ, ವಿಲಾಸ, ವಿಭ್ರಮಗಳಿಂದ ಕೂಡಿದವರನ್ನು, ಕೇಳಿ ತಂದು ಒಂದೇ ಹಸೆಯಲ್ಲಿ (ಏಕಕಾಲದಲ್ಲಿ) ಜಯಾವತಿ ಮದುವೆ ಮಾಡಿಸಿದಳು. ಆಮೇಲೆ – ಒಂದು, ಎರಡು, ಮೂರು, ನಾಲ್ಕು ಕೊಠಡಿಗಳುಳ್ಳ ಸ್ವಸ್ತಿಕ, ನಂದ್ಯಾವರ್ತ ಮುಂತಾಗಿರುವ ಮನೆಗಳನ್ನು ಮೂವತ್ತೆರಡು ಬಗೆಯ ಸಾಲು ಕಟ್ಟಡಗಳನ್ನು ಮಾಡಿಸಿದಳು. ತನ್ನ ಮನೆಯ ಅಂಗಳದಲ್ಲಿ ಚೆಂಡಾಡುವುದಕ್ಕೆ ತಕ್ಕುದಾದ ಜಗಲಿಗಳನ್ನೂ ಆನೆಯ ಮೇಳೆರಿ ಸವಾರಿ ಮಾಡುವ ವಿನೋದ ಮುಂತಾಗಿರುವ ವಿನೋದಸ್ಥಾನಗಳೆಲ್ಲವನ್ನೂ ಮಾಡಿ ಅಲ್ಲಿಂದ ಹೊರಟುಹೋಗದಂತೆ ರಕ್ಷಣೆಯ ಏರ್ಪಾಡನ್ನು ಮಾಡಿ, ಮಗನ ಸಂಪತ್ತನ್ನೂ ವಿನೋದವನ್ನೂ ಪ್ರತಿದಿನವೂ ಆಕೆ ತಪ್ಪದೆ ನೋಡುತ್ತಿದ್ದಳು. ಆ ಸುಕೌಶಳಸ್ವಾಮಿ, ಮೂವತ್ತೆರಡು ಮಂದಿ ಹೆಂಡಿರೊಡನೆ ತನಗೆ ಪ್ರೀತಿಯದೆನಿಸುವ ಕಾಮಸುಖಾನುಭವಗಳನ್ನು ಹಲವು ಕಾಲದವರೆಗೆ ಅನುಭವಿಸುತ್ತ ಇದ್ದನು. ಹೀಗಿರಲು ಆಮೇಲೆ ಒಂದು ದಿವಸ ಸುಕೌಶಲಸ್ವಾಮಿ ಪೃಥ್ವೀಧರ (ಪರ್ವತ) ಎಂಬ ಮನೆಯ ಏಳನೆಯ ಉಪ್ಪರಿಗೆಯ ಮೇಲೆ ತಾನೂ ತಾಯಿ ಜಯಾವತಿಯೂ ಸುವ್ರತೆ ಮುಂತಾಗಿ ಇರತಕ್ಕ ಐದು ಮಂದಿ ದಾದಿಯರೂ ಸ್ವಯಂಪ್ರಭೆ ಮೊದಲಾಗಿರುವ ಮೂವತ್ತೆರಡು ಮಂದಿ ಹೆಂಡಿರೂ ಹೀಗೆ ಇಷ್ಟು ಮಂದಿಯಿಂದ ಆವರಿಸಿಕೊಂಡು, ಗವಾಕ್ಷದ (ಗಾಳಿತೂತಿನ) ಬಲೆಯ ಎಡೆಯಲ್ಲಿ ದಿಕ್ಕುಗಳನ್ನೆಲ್ಲಾ ನೋಡುತ್ತ ಸುಖದ ಸಂಗತಿಯನ್ನೇ ಹೇಳುವ ವಿನೋದದಿಂದ ಇದ್ದನು. ಆ ವೇಳೆಗೆ ಇತ್ತಲಾಗಿ, ಸಿದ್ದಾರ್ಥ ಋಷಿಗಳು ಸಂಚಾರಮಾಡುತ್ತ – ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪತ್ತನ, ದ್ರೋಣಾಮುಖ ಎಂಬ ಭೂವಿಭಾಗಗಳಲ್ಲಿ ಸಂಚರಿಸುತ್ತ, ಅಯೋಧ್ಯಾನಗರಕ್ಕೆ ಬಂದರು.

ಪಾರಣೆಯಂದು ಚರಿಗೆವೊಕ್ಕು ಕಿಱುಮನೆ ಪೆರ್ಮನೆಯೆನ್ನದುಣಲ್ ತಕ್ಕ ಮನೆಗಳಂ ಯಥಾಕ್ರಮದಿಂದ ಪುಗುತ್ತಂ ಬರ್ಪರ್ ಸುಕೌಶಳಸ್ವಾಮಿಯ ಮನೆಯಂ ಪೊಕ್ಕು ಪೊಱಮಡುವರ್ ಗಿಡಿ ಗಿರಿ ಜಂತ್ರಂ ಮಿಳಿಮಿಳಿನೇತ್ರರಪ್ಪ ಮಾಸೋಪವಾಸಂಗೆಯ್ದು ರಿಸಿಯರ್ ಪೋಪುದಂ ಸುಕೌಶಳಸ್ವಾಮಿ ಕಂಡೀ ಪೋಪರೇನೆಂಬರಬ್ಬಾ ಅಪೂರ್ವರೂಪರಿನ್ನರನೆಂದುಂ ಕಂಡಱಯೆನೆಂದು ತಾಯಂ ಬೆಸಗೊಂಡೊಡೆ ತಾಯ್ ಇಂತೆಂದು ಪೇೞ್ದಳ್ ಮಗನೆ ಈತನಂಗಡಿಯಲವಡಂ ಪೆಱುಕಿ ತಿಂದು ಬಾೞ್ದೊಂ ಬೈಕಂಗುಳಿ ಬೇಡಿ ಪೊೞಲೆಲ್ಲಮಂ ತೊೞಲ್ದು ಬಸಿಱಂ ಪೊರೆವೊಂ ದೇಸಿಗನಾರುಮಿಲ್ಲದೊಂ ಕೋವಣಕ್ಕಪ್ಪೊಡಂ ಭಾಗಸಮಿಲ್ಲದೊನೆಂದು ಜಯಾವತಿ ಪೇೞ್ದೊಡೆ ಸುವ್ರತೆಯೆಂಬ ದಾದಿ ಮಾರ್ಕೊಂಡಿಂತೆಂದಳ್ ಹಾ ಪೊಲ್ಲದಂ ನಡಿದಯ್ ಸ್ವಾಮಿಯಂ ಪರಮೇಶ್ವರನಂ ನೀಂ ಮೊದಲಾಗೊಡೆಯ ಮೂವತ್ತಿರ್ವರುಮೊಳ್ವೆಂಡಿರ್ಕ್ಕಳುಮಂ ಮೂವತ್ತೆರೞ್ಕೋಟಿ ಕಸವರಮುಮಂ ಕೊಳದ ಪುಲ್ಲ ದರ್ಕ್ಕಂ ತೊಱೆವಂತನಿತುಮಂ ತೊಱೆದು ಕರ್ಮಕ್ಷಯಾರ್ಥಂ ತಪಂಬಟ್ಟಾತನನಿಳಿಸಿ ಪರಿಭವಿಸಿ ಮುಟ್ಟುಗಿಡಿಸಿ ನುಡಿಯಲ್ವೇಡೆಂದು ಬಾರಿಸಿದೊಳಂ ಜಯಾವತಿ ಕಣ್ಕೆತ್ತಿ ಬಾರಿಸಿದಡೆ ಕೆಮ್ಮಗಿರ್ದ್ದು ಪೆಱಪೆಱಮನೆ ನುಡಿಯಲ್ ತಗುಳ್ದೊಡೆ ಸುಕೌಶಳಸ್ವಾಮಿಯವರಿರ್ವರ ನುಡಿಗಳ್

ಒಂದು ತಿಂಗಳ ಉಪವಾಸದ ನಂತರ ಪಾರಣೆಯ ದಿನ ಭಿಕ್ಷೆಗೆ ಹೋದರು. ಚಿಕ್ಕ ಮನೆ ದೊಡ್ಡಮನೆ ಎನ್ನದೆ ಊಟಮಾಡಲು ತಕ್ಕುದಾದ ಮನೆಗಳನ್ನು ಯಥಾರೀತಿಯಾಗಿ ಪ್ರವೇಶಿಸುತ್ತ ಬರುತ್ತಿದ್ದವರು ಸುಕೌಶಳ ಸ್ವಾಮಿಯ ಮನೆಯನ್ನು ಹೊಕ್ಕು ಹೊರಟುಹೋಗುತ್ತಿದ್ದರು. ತಿಂಗಳುಗಟ್ಟಲೆ ಉಪವಾಸ ಮಾಡಿ ಕದಿರಕಡ್ಡಿಯಂತೆ ಕೃಶವಾದ ದೇಹವುಳ್ಳ ಮತ್ತು ಗುಳಿಬಿದ್ದ ಕಣ್ಣುಗಳಿಂದ ಮಿಳಮಿಳನೆ ನೋಡುತ್ತಿದ್ದ ಋಷಿಗಳು ಹೋಗುವುದನ್ನು ಸುಕೌಶಲ ಸ್ವಾಮಿ ಕಂಡು ತಾಯಿಯೊಡನೆ – “ಅಮ್ಮ ಈಗ ಹೋಗುತ್ತಿರುವವರು ಯಾರು ? ಅಪೂರ್ವವಾದ ರೂಪುಳ್ಳವರು ; ಇಂಥವರನ್ನು ನಾನು ಇಂದಿಗೂ ಕಂಡಿಲ್ಲ, ತಿಳಿದಿಲ್ಲ* ಎಂದು ಕೇಳಿದನು. ಆಗ ತಾಯಿ ಈ ರೀತಿಯಾಗಿ ಹೇಳಿದಳು – – ಇವನು ಆಂಗಡಿಯಲ್ಲಿ ಬಿಸಾಡಿದ ಅವಡೆ (ಅಲಸಂದೆ) ಬೀಜವನ್ನು ಹೆಕ್ಕಿತಿಂದು ಬದುಕುವವನು. ಭಿಕ್ಷೆ ಬೇಡುವುದೇ ಶೀಲವಾಗಿ ಇರುವವನು. ಬೇಡಿಕೊಂಡು ಪಟ್ಟಣವನ್ನೆಲ್ಲ ಸುತ್ತಾಡಿಕೊಂಡು ಹೊಟ್ಟೆ ಹೊರೆಯ ತಕ್ಕವನು. ಮನೆಮಾರು ಇಲ್ಲದವನು ಕೌಪೀನ ಕೊಂಡುಕೊಳ್ಳುವುಕ್ಕೂ ಹಣವಿಲ್ಲದವನು – – ಎಂದು ಜಯಾವತಿ ಹೇಳಿದಳು. ಆಗ ಸುವ್ರತೆಯೆಂಬ ದಾದಿ ಪ್ರತಿಭಟಿಸಿ ಹೀಗೆಂದಳು – “ಆಹಾ! ಕೆಟ್ಟ ಮಾತನ್ನಾಡಿದೆಯಲ್ಲವೆ ? ನೀನೇ ಮೊದಲಾಗುಳ್ಳ ಮೂವತ್ತೆರಡು ಮಂದಿ ಒಳ್ಳೆಯ ಹೆಂಡಿರನ್ನೂ ಮೂವತ್ತೆರಡು ಕೋಟಿ ಹೊನ್ನನ್ನೂ ಕೊಳದ ಹುಲ್ಲಿನ ಕೊಳೆಯನ್ನು ಬಿಟ್ಟು ಬಿಡುವ ಹಾಗೆ ಅಷ್ಟೆಲ್ಲವನ್ನೂ ತೊರೆದು ಕರ್ಮವನ್ನು ನಾಶಪಡಿಸುವುದಕ್ಕಾಗಿ ತಪಸ್ಸನ್ನು ಕೈಗೊಂಡ ಸ್ವಾಮಿಯೂ ಪರಮೇಶ್ವರನೂ ಆದವನನ್ನು ಹೀನಯಿಸಿ ಅವಮಾನಗೊಳಿಸಿ ಅಸ್ಪಶ್ಯನನ್ನಾಗಿ ಭಾವಿಸಿ ನುಡಿಯಬೇಡ! * – ಎಂದು ಆತಂಕಮಾಡಿದಳು. ಅವಳನ್ನು ಜಯಾವತಿ ಕಣ್ಣಲುಗಿಸಿ ತಡೆಯಲು ಸುಮ್ಮನಿದ್ದು ಬೇರೆಬೇರೆಯಾದ ಮಾತುಗಳನ್ನಾಡಲು ಪ್ರಾರಂಭಿಸಿದಳು. ಆಗ ಸುಕೌಶಳಸ್ವಾಮಿ ಅವರಿಬ್ಬರ ಮಾತುಗಳು ಗೂಢಾರ್ಥವುಳ್ಳ ಮಾತುಗಳೆಂದು ತನ್ನ

ಸಗರ್ಭವಚನಂಗಲೆಂದು ತನ್ನ ಮನದೊಳೆ ಬಗೆಯುತ್ತಿರ್ಪಿನಂ ಬಾಣಸಿಗಂ ಬಂದು ಬೋನಮೆತ್ತಿಯೋಗರಮಾಱದಪ್ಪುದೆಂದು ಪೇಳ್ದೊಡೆ ತಾಯುಂ ಸುವ್ರತೆ ಮೊದಲಾಗೊಡೆಯ ದಾದಿಯರಯ್ವರುಮಾತನ ಪೆಂಡಿರ್ಕ್ಕಳ್ ಸ್ವಯಂಪ್ರಭೆ ಶ್ರೀದತ್ತೆ ಬಂಧುಮತಿ ಭಾನುಮತಿ ಮಿತ್ರಸೇನೆ ಪ್ರಿಯಂಗು ಸುಂದರಿ ಶ್ಯಾಮಲತೆ ವಿದ್ಯುಲ್ಲತೆ ಆಚಲೆ ವಿಮಳಮತಿ ಶ್ರೀಕಾಂತೆ ಶಶಿಪ್ರಭೆ ಸೂರಸೇನೆ ಅನಂತಮತಿ ಸರಸ್ವತಿ ವಿಜಯೆ ವೈಜಯಂತೆ ಅಪರಾಜಿತೆ ಕನಕಮಾಳೆ ಧಾನ್ಯೆ ವಸುಂಧರೆಯೆಂದಿವರ್ ಮೊದಲಾಗೊಡೆಯರೆಲ್ಲರ್ ನೆರೆದಿಂತೆಂದರ್ ವೇಳಾತಿಕ್ರಮಾದಪುದಾರೊಗಿ ಸಲೇೞಮೆಂದು ನುಡಿದೊಡೆ ಸುಕೌಶಳಸ್ವಾಮಿಯಿಂತೆಂದನೀ ವೃತ್ತಾಂತಮೆಲ್ಲಮನಱದೊಡಲ್ಲದುಣ್ಬೆನಲ್ಲೆನ ದಱಂ ಪೇೞ್ ಸುವ್ರತೆ ಏನಂ ಕಂಡಿರಾರುಳ್ಳುದನುಳ್ಳಂತೆ ಪೇೞೆಯಪ್ಪೊಡೆ ನಿನಗೆನ್ನಾಣೆಯೆಂದು ತನ್ನ ಮೇಗೆ ಸೂರುಳಿಸಿ ಬೆಸಗೊಂಡೊಡೆ ಸುವ್ರತೆಯೆಂಬೊಳ್ ಮೊಲೆಯೂಡಿದ ದಾದಿಯಿಂ ತೆಂದು ಪೇೞ್ದರ್ ಕೇಳ್ ಮಗನೆ ಇವರ್ ನಿನ್ನ ತಂದೆವಿರ್ ಸಿದ್ದಾರ್ಥರೆಂಬೊರ್ ನೀನ್ ತೊಟ್ಟಿಲೊಳಿರ್ದಂತೆ ನಿನಗೆ ಸೆಟ್ಟಿವಟ್ಟಂಗಟ್ಟಿ ಸಂಸಾರಕ್ಕೆ ಪೇಸಿ ಕರ್ಮ ಕ್ಷಯಾರ್ಥಂ ತಪಂಬಟ್ಟೀ ಮೆಯ್ಯಂ ನಿಱಸಲ್ವೇಡಿ ಪೊೞಲೊಳಗೆ ಚರಿಗೆವೊಕ್ಕು ಬಾವರಿವುಗುತ್ತುಂ ಬಂದು ನಿನ್ನ ಮನೆಯಂ ಪೊಕ್ಕು ಪೊಱಮಟ್ಟು ಪೋದರೆಂದು ಪೇೞ್ದನ್ನಾರೋಗಿಸಲ್ವೇೞ್ಕುಂ ಏೞು ಮಗನೆ ಎಂದೊಡೆ

ಮನಸ್ಸಿನಲ್ಲಿ ಭಾವಿಸುತ್ತಿದ್ದನು. ಆ ವೇಳೆಗೆ ಅಡಿಗೆಯವನು ಬಂದು ಭೋಜನವನ್ನು ಬಡಿಸಿ, ‘ಅನ್ನ ತಣ್ಣಗಾಗುತ್ತಿದೆ’ ಎಂದು ಹೇಳಿದನು. ತಾಯಿಯೂ ಸುವ್ರತೆ ಮುಂತಾಗಿರುವ ಐದುಮಂದಿ ದಾದಿಯರೂ ಅವನ ಹೆಂಡಿರಾದ ಸ್ವಯಂಪ್ರಭೆ, ಶ್ರೀದತ್ತೆ, ಬಂಧುಮತಿ, ಭಾನುಮತಿ, ಮಿತ್ರಸೇನೆ, ಪ್ರಿಯಂಗು ಸುಂದರಿ, ಪ್ರಿಯದೆ, ಶ್ಯಾಮಲತೆ, ವಿದ್ಯುಲ್ಲತೆ, ಅಚಲೆ, ವಿಮಳಮತಿ, ಶ್ರೀಕಾಂತೆ ಶಶಿಪ್ರಭೆ ಸೂರಸೇನೆ, ಅನಂತಮತಿ, ಸರಸ್ವತಿ, ವಿಜಯೆ, ವೈಜಯಂತೆ, ಅಪರಾಜಿತೆ, ಕನಕಮಾಲೆ, ಧಾನ್ಯೆ, ಧನಶ್ರೀ, ವಸುಂಧರೆ – ಎಂದು ಇವರೇ ಮೊದಲಾಗಿ ಉಳ್ಳ ಎಲ್ಲರೂ ಕೂಡಿ ಹೀಗೆ ಹೇಳಿದರು. – “ಸಮಯ ಮೀರುತ್ತದೆ, ಊಟಮಾಡಲಿಕ್ಕೆ ಏಳಿರಿ” ಎಂದ ಹೇಳಲು ಸುಕೌಶಳಸ್ವಾಮಿ ಹೀಗೆಂದನು – “ಈ ಸಂಗತಿಯೆಲ್ಲವನ್ನೂ ತಿಳಿದ ಹೊರತು ಊಟಮಾಡೆನು. ಆದುದರಿಂದ ಎಲೈ ಸುವ್ರತೆ, ಹೇಳು. ಏನನ್ನು ಕಂಡಿದ್ದೀರಿ ? ಯಾರು ? ಇದ್ದುದನ್ನು ಇದ್ದಂತೆ ಹೇಳೆಯಾದರೆ ನಿನಗೆ ನನ್ನ ಆಣೆಯಾದೆ. * ಹೀಗೆ ತನ್ನ ಮೇಲೆ ಪ್ರತಿಜ್ಞೆಯನ್ನು ಮಾಡಿ ಕೇಳಿದನು. ಅದಕ್ಕೆ, ಮೊಲೆಕೊಟ್ಟ ದಾದಿಯಾದ ಸುವ್ರತೆಯೆಂಬವಳು ಹೀಗೆ ಹೇಳಿದಳು – “ಮಗನೇ, ಕೇಳು. ಇವರು ನಿನ್ನ ತಂದೆಯವರು, ಸಿದ್ದ್ಥಾರ್ಥ ಎಂಬ ಹೆಸರಿನವರು. ನೀನು ತೊಟ್ಟಿಲಲ್ಲಿ ಇದ್ದಹಾಗೆಯೇ ನಿನಗೆ ಸೆಟ್ಟಿಪಟ್ಟವನ್ನು ಕಟ್ಟಿ, ಸಂಸಾರಕ್ಕೆ ಜಿಗುಪ್ಸೆ ಪಟ್ಟು ಕರ್ಮವನ್ನು ಕುಗ್ಗಿಸುವುದಕ್ಕಾಗಿ ತಪಸ್ಸನ್ನು ಕೈಗೊಂಡರು. ಈ ದೇಹಧಾರಣಿಗೋಸ್ಕರವಾಗಿ ಭಿಕ್ಷೆ ಬೇಡುವುದಕ್ಕೆಂದು ಈ ಪಟ್ಟಣದ ಒಳಗೆ ಪ್ರವೇಶಿಸಿ, ದುಂಬಿ ಹೇಗೆ ಹೂವಿನಿಂದ ಹೂವಿಗೆ ಹೊಗುವುದೋ ಹಾಗೆಯೇ ಭಿಕ್ಷಾರ್ಥಿಯಾಗಿ ಮನೆಯಿಂದ ಮನೆಗೆ ಹೋಗುತ್ತ ಬಂದು, ನಿನ್ನ ಮನೆಯನ್ನು ಹೊಕ್ಕು ಹೊರಟುಹೊದರು* ಎಂದು ಹೇಳಿ, “ಇನ್ನು ಊಟಮಾಡಬೇಕು, ಮಗನೇ ಏಳು* – ಎಂದಳು. ಆಗ ಸುಕೌಶಳಸ್ವಾಮಿಯು – –

ಸುಕೌಶಳಸ್ವಾಮಿಯೆಂದನಂತಪ್ಪೊಡಾನುಮವರಂತಪ್ಪ ರೂಪಂ ಕೈಕೊಂಡಲ್ಲದುಣ್ಣೆನೆಂದು ಪ್ರತಿಜ್ಞೆಗೆಯ್ದಿರ್ದೊಡೆ ಸ್ವಜನ ಪರಿಜನ ಬಂಧುವರ್ಗಮೆಲ್ಲಂ ನೆರೆದಿಂತೆಂದರ್ ನೀನನ್ನುಂ ಕೂಸಯ್ ಕಾಮಭೋಗಂಗಳನನುಭವಿಸುವ ದಿವಸಂಗಳ್ ತಪಂಬಡುವ ದಿವಸಮಲ್ಲಂ ಪ್ರಾಯಂಬೋದಿಂ ಬೞಕ್ಕೆ ನಿನ್ನಮ್ಮನೆಂತು ನಿನಗೆ ಮಗನಾದೊಡೆ ಮಗಂಗೆ ಸೆಟ್ಟಿವಟ್ಟಂಗಟ್ಟಿ ಸಮಸ್ತ ಭಾರಮಂ ನಿರೂಪಿಸಿ ತಪಂಬಡುವುದೆಂದೆಲ್ಲರುಂ ನುಡಿದೊಡಿಂತೆಂದನನ್ನೆಗಮೇಂ ಸಾವರೊ ಬೞ್ವರೊ ಎಂತಱಯಲಕ್ಕುಂ ಮಾನಸವಾೞಂಬುದು ಪನಿ ಪುಲ್ಲ ಮುಗಿಲ ಸಂಜೆಯೊಳೋರಂತಪ್ಪುದೞಂದಾರ್ ಬಾರಿಸಿದೊಡಂ ನಿಲ್ವೆನಲ್ಲೆಂದು ಸ್ವಯ ಂಪ್ರಭೆಯೆಂಬೊಳ್ ಬಸಿಱ ಪೆಂಡತಿಯಾಕೆಯ ಬಸಿಱ ಕೂಸಿಂಗೆ ಸೆಟ್ಟಿವಟ್ಟಂಗಟ್ಟಿ ಮನೆಯಿಂದಂ ಪೊಱಮಟ್ಟು ರಿಸಿಯರಿರ್ದ್ದಡೆಯಂ ಬೆಸಗೊಳುತ್ತುಂ ಪೋಗಿ ಬಹಿರುದ್ಯಾನವನದೊಳ್ ಸ್ಪುಟಕಶಿಲಾತಲದ ಮೇಗಿರ್ದ ಸಿದ್ದಾರ್ಥ ಭಟ್ಟಾರರಂ ಕಂಡು ಸುಕೌಶಳಸ್ವಾಮಿ ಜಾತಿಸ್ಮರನಾಗಿ ದರ್ಶನವಿಶುದ್ಧಿಯೊಳ್ ಕೂಡಿದ ಶುಭಪರಿಣಾಮದಿಂದಂ ಬಂದಿಸಿದಾಗಳವಜ್ಞಾನ ಮುಮಾಗೆ ಅವರ ತನ್ನ ಮುನ್ನಿನ ಭವಾಂತರಗಳೆಲ್ಲಮಂ ಪ್ರತ್ಯಕ್ಷಮಾಗಱದು ಮನದೊಳಿಂತೆಂದು ಬಗೆದನಿವಂ ಮುನ್ನಿನ ಭವಾಂತರದೊಳ್ ಪ್ರಿಯದರ್ಶನನೆಂಬ ಸೆಟ್ಟಿ ಕಾಲಂಗೆಯ್ದು ಮಲಯ

“ಹಾಗಾದರೆ ನಾನೂ ಅವರಂತಹ ರೂಪವನ್ನು ಕೈಕೊಳ್ಳವೆನು. ಅಲ್ಲದೆ ಊಟಮಾಡೆನು* ಎಂದು ಪ್ರತಿಜ್ಞೆ ಮಾಡಿದನು. ಹೀಗಿರಲು, ಸ್ವಜನರು ಸೇವಕರು ಬಂಧುಗಳು ಎಲ್ಲಾ ಒಟ್ಟಾಗಿ ಹೀಗೆಂದರು “ನೀನಿನ್ನೂ ಮಗುವಾಗಿರುವೆ. ಕಾಮಸುಖಗಳನ್ನು ಅನುಭವಿಸುವ ದಿವಸಗಳು, ತಪಸ್ಸನ್ನಾಚರಿಸುವ ದಿವಸಗಳಲ್ಲ. ಪ್ರಾಯಹೋದ ನಂತರ (ಮುದುಕನಾದ ಮೇಲೆ) ನಿನ್ನ ತಂದೆ ಹೇಗೆ ನಿನಗೆ ಸೆಟ್ಟಿಪಟ್ಟವನ್ನು ಕಟ್ಟಿ ಎಲ್ಲಾ ಭಾರವನ್ನೂ ವಹಿಸಿಕೊಟ್ಟು ತಪಸ್ಸಿಗೆ ತೆರಳಿದನೋ ಹಾಗೆಯೇ ನೀನೂ ನಿನಗೆ ಮಗನಾದಾಗ ಅವನಿಗೆ ಸೆಟ್ಟಿ ಪಟ್ಟವನ್ನು ಕಟ್ಟಿ ಎಲ್ಲಾ ಭಾರವನ್ನು ಸೂಚಿಸಿ ತಪಸ್ಸನ್ನು ಆಚರಿಸಬಹುದು* – ಹೀಗೆ ಎಲ್ಲರೂ ಹೇಳಿದರು. ಆಗ ಸುಕೌಶಳನು ಹೀಗೆಂದನು – “ಅಷ್ಟರೊಳಗೆ ಏನು, ಸಾಯುತ್ತಾರೋ? ಬದುಕುತ್ತಾರೊ ? ತಿಳಿಯಲು ಹೇಗೆ ಸಾಧ್ಯ? ಮನುಷ್ಯನ ಜೀವನವೆಂಬುದು ಹುಲ್ಲುಮೇಲಿನ ಹನಿ, ಮೋಡ, ಸಂಜೆಗೆಂಪು – ಇವುಗಳಿಗೆ ಸಮಾನವಾದುದು. ಆದುದದರಿಂದ ಯಾರು ತಡೆದರೂ ನಾನು ನಿಲ್ಲುವವನಲ್ಲ. * ಹೀಗೆ ಹೆಳಿ, ಸ್ವಯಂಪ್ರಭೆ ಎಂಬ ಗರ್ಭಿಣಿಯಾದ ಪತ್ನಿಯ ಗರ್ಭದಲ್ಲಿದ್ದ ಶಿಶುವಿಗೆ ಸೆಟ್ಟಿ ಪಟ್ಟವನ್ನು ಕಟ್ಟಿ ಮನೆಯಿಂದ ಹೊರಟನು. ಋಷಿಗಳಿರುವ ಸ್ವಾನವನ್ನು ಕೇಳಿ ತಿಳಿದುಕೊಳ್ಳುತ್ತ ಹೋಗಿ, ಪಟ್ಟಣದ ಹೊರಗಿನ ಉದ್ಯಾನದಲ್ಲಿ ಚಂದ್ರಕಾಂತಶಿಲಾಸ್ಥಳದ ಮೇಲೆ ಇದ್ದ ಸಿದ್ದಾರ್ಥತಪಸ್ವಿಗಳನ್ನು ಕಂಡನು. ಆಗ ಸುಕೌಶಳಸ್ವಾಮಿ ತನ್ನ ಪೂರ್ವಜನ್ಮದ ಸ್ವರಣೆಯನ್ನು ಹೊಂದಿ, ಸಮ್ಯಗ್ದರ್ಶನದಲ್ಲಿ ಕೂಡಿದ ಮಂಗಳಕರ ಪರಿಣಾಮದಿಂದ ವಂದಿಸಿದ ಕೂಡಲೇ ಅವನಲ್ಲಿ ಅವಜ್ಞಾನವುಂಟಾಯಿತು. ಸಿದ್ದಾರ್ಥಮುನಿಯ ಮತ್ತು ತನ್ನ ಹಿಂದಿನ ಬೇರೆ ಬೇರೆ ಜನ್ಮಗಳ ವಿವರವೆಲ್ಲವನ್ನೂ ಪ್ರತ್ಯಕ್ಷವಾಗಿ ತಿಳಿದು ಮನಸ್ಸಿನಲ್ಲಿ ಹೀಗೆ ಭಾವಿಸಿದನು. – “ಇವನು(ಸಿದ್ದಾರ್ಥಭಟರರು) ಹಿಂದಿನ ಒಂದು ಜನ್ಮದಲ್ಲಿ ಪ್ರಿಯದರ್ಶನನೆಂಬ ಸೆಟ್ಟಿಯಾಗಿದನು. ಅವನು ಸತ್ತು ಮಲಯಸುಂದರನೆಂಬ ಆನೆಯಾಗಿ ಹುಟ್ಟಿದನು. ಆಮೇಲೆ

ಸುಂದರನೆಂಬಾನೆಯಾಗಿ ಪುಟ್ಟಿದನಲ್ಲಿಂ ಬೞಯಂ ಕುಬೇರಕಾಂತನೆಂಬೊನಾದನಲ್ಲಿಂ ಬೞಯಂ ವಿದ್ಯುನ್ಮಾಳಿಯೆಂಬ ವಿದ್ಯಾಧರನಾದನಲ್ಲಿಂ ಬೞಯಂ ಸಿದ್ದಾರ್ಥನೆಂಬೊನೀಗಳಾಗಿ ತಪಂಬಟ್ಟನಂತು ಸಿದ್ದಾರ್ಥಭಟ್ಟಾರರ ಭವಂಗಳೈದು ಮತ್ತಾಂ ಮುನ್ನಿನ ಭವದೊಳ್ ಪ್ರಿಯಸೇನೆಯೆಂಬ ಮಾಲೆಗಾರ್ತಿಯೆಂ ಕಾಲಂಗೆಯ್ದು ಪದ್ವಾವತಿಯೆಂಬ ಪಿಡಿಯಾಗಿ ಪುಟ್ಟಿದೆನಲ್ಲಿಂ ಬೞಯಂ ವರಾಂಗನಾದೆನಲ್ಲಿಂ ಬೞಯಂ ಶ್ರೀಧರನಾದೆನಲ್ಲಿಂ ಬೞಯಂ ಚಂಡವೇಗನೆಂಬ ವಿದ್ಯಾಧರನಾದೆನಲ್ಲಿಂ ಬೞಯಂ ಸಿದ್ದಾರ್ಥಂಗಂ ಜಯಾವತಿಗಂ ಮಗನೆನಾಂ ಸುಕೌಶಳಸ್ವಾಮಿಯಾಗಿ ಪುಟ್ಟದೆನಿಂತೆನ್ನ ಭವಾಂತರಮಾಱು ಮತ್ತಾಂ ಪ್ರಿಯಸೇನೆಯಪ್ಪಂದೆನ್ನ ಕೆಳದಿ ಸುಕೀರ್ತಿಯೆಂಬಳ್ ಪ್ರಿರ್ಯದರ್ಶನನ ಭಾರ್ಯೆ ಕಾಲಂಗೆಯ್ದು ಮಲಯಾವತಿಯೆಂಬ ಪಿಡಿಯಾಗಿ ಪುಟ್ಟಿದೊಳಲ್ಲಿಂ ಬೞಯಂ ಸುಕೇಶಿನಿಯಾದಳಲ್ಲಿಂ ಬೞಯಂ ಮನೋಹರಿಯಾದಳಲ್ಲಿಂ ಬೞಯಂ ವಿರಳವೇಗೆಯೆಂಬ ವಿದ್ಯಾಧರಿಯಾದಳಲ್ಲಿಂ ಬೞಯಂ ಶ್ರೀಕಾಂತೆಯಾದೊಳಾಕೆಯಂ ಸಿದ್ದಾರ್ಥಂಗೆ ಕೊಟ್ಟುದಂತು ಶ್ರೀಕಾಂತೆಯ ಭವಾಂತರಮಾಱಂತು ಮೂವರ ಭವಾಂತರಂಗಳನಱದು ಸಂಸಾರಕ್ಕೆ ವೈರಾಗ್ಯವಾಗಿ ಸಿದ್ದಾರ್ಥಭಟ್ಟಾರರ ಪಕ್ಕದೆ ಸುಕೌಶಳಸ್ವಾಮಿ ತಪಂಬಟ್ಟುಂ ಸುಭದ್ರೆಯುೞೆಯೆ ಉೞದ ಮೂವತ್ತಿರ್ವ್ವರ್ ಪೆಂಡಿರು ಸಿದ್ದಾರ್ಥಭಟಾರರ್ ಗುರುಗಳಾಗೆ ಗುರುಮತಿ ಕಂತಿಯರ್ ಕಂತಿಯರಾಗೆ ತಪಂಬಟ್ಟು ಪಲಕಾಲಮುಗ್ರೋಗ್ರತಪಶ್ಚರಣಂಗೆಯ್ದು

ಕುಬೇರಕಾಂತನೆಂವನಾದನು. ಅನಂತರದಲ್ಲಿ ವಿದ್ಯುನ್ಮಾಳಿಯೆಂಬ ವಿದ್ಯಾಧರನಾದನು. ಅಲ್ಲಿಂದ ನಂತರ ಈಗ ಸಿದ್ದಾರ್ಥನೆಂಬವನಾಗಿ ತಪಸ್ಸನ್ನು ಆಚರಿಸಿದನು. ಆಂತೂ ಸಿದ್ದಾರ್ಥಮುನಿಗಳಿಗೆ ಇದುವರೆಗೆ ಆದ ಜನ್ಮಗಳು ಐದು. ಆಮೇಲೆ, ನಾನು ಹಿಂದಿನ ಒಂದು ಜನ್ಮದಲ್ಲಿ ಪ್ರಿಯಸೇನೆಯೆಂಬ ಮಾಲೆಗಾರ್ತಿಯಾಗಿದ್ದೆನು. ಅನಂತರ ಸತ್ತು ಪದ್ಮಾವತಿ ಎಂಬ ಹೆಣ್ಣಾನೆಯಾಗಿ ಜನಿಸಿದೆನು. ಆಮೇಲೆ ವರಾಂಗನಾದೆನು. ಆದಾದ ಮೇಲೆ ಶ್ರೀಧರನಾದೆನು. ಅಲ್ಲಿಂದ ಬಳಿಕ ಚಂಡವೇಗನೆಂಬ ವಿದ್ಯಾಧರನಾದೆನು. ಆಮೇಲೆ ಸಿದ್ದಾರ್ಥನಿಗೂ ಜಯಾವತಿಗೂ ಮಗನಾದ ನಾನು ಸುಕೌಶಳಸ್ವಾಮಿಯಾಗಿ ಜನಿಸಿದೆನು. ಈ ರೀತಿಯಾಗಿ ನನ್ನ ಜನ್ಮಾಂತರಗಳು ಆರು ಆಮೇಲೆ, ನಾನು ಪ್ರಿಯಸೇನೆ ಎಂಬವಳಾಗಿದ್ದಾಗ ನನ್ನ ಗೆಳತಿಯಾದ ಸುಕೀರ್ತಿ ಎಂಬವಳು ಪ್ರಿಯದರ್ಶನನ ಪತ್ನಿಯಾಗಿದ್ದು ಸತ್ತಮೇಲೆ, ಮಲಯಾವತಿ ಎಂಬ ಹೆಣ್ಣಾನೆಯಾಗಿ ಹುಟ್ಟಿದಳು. ಆಮೇಲೆ ಸುಕೇಶಿನಿಯಾದಳು. ಅನಂತರ ಮನೋಹರಿ ಎಂಬವಳಾದಳು. ಆಮೇಲೆ ವಿರಳವೇಗೆಯೆಂಬ ವಿದ್ಯಾಧರಿಯಾದಳು. ಆ ಬಳಿಕ ಶ್ರೀಕಾಂತೆಯಾದಳು. ಅವಳನ್ನು ಸಿದ್ದಾರ್ಥನಿಗೆ ಕೊಟ್ಟು ಮದುವೆಮಾಡಲಾಗಿತ್ತು. ಆ ರೀತಿಯಲ್ಲಿ ಶ್ರೀಕಾಂತೆಯ ಜನ್ಮಾಂತರಗಳು ಆರು. ಆಂತೂ ಮೂವರ ಬೇರೆ ಬೇರೆ ಜನ್ಮಗಳ ವಿಚಾರವನ್ನು ತಿಳಿದು, ಸಂಸಾರ ವಿಷಯದಲ್ಲಿ ವೈರಾಗ್ಯವುಂಟಾಗಿ ಸುಕೌಶಳಸ್ವಾಮಿ ಸಿದ್ದಾರ್ಥಮುನಿಗಳ ಬಳಿಯಲ್ಲಿ ತಪಸ್ಸನ್ನು ಆಚರಿಸಿದರು. ಸುಭದ್ರೆ ಎಂಬವಳನ್ನು ಬಿಟ್ಟು ಉಳಿದ ಮೂವತ್ತೆರಡು ಮಂದಿ ಹೆಂಡಿರು, ಸಿದ್ದಾರ್ಥಮುನಿಗಳೇ ಗುರುಗಳಾಗಲು ಗುಣಮತಿ ಕಂತಿಯರು, ಮಾರ್ಗದರ್ಶಕ ಭಿಕ್ಷುಣಿಯಾರಾಗಲೂ ತಪಸ್ಸನ್ನು ಸ್ವೀಕರಿಸಿ ಹಲವುಕಾಲ ಬಹಳ ಘೋರವಾದ ತಪಸ್ಸನ್ನು ಮಾಡಿ ಸಮಾಮರಣದಿಂದ ಸತ್ತು ದೇವಲೋಕದಲ್ಲಿ ಹುಟ್ಟಿದರು. ಆಮೇಲೆ ಇತ್ತ*

ಸಮಾಮರಣದಿಂ ಮುಡಿಸಿ ದೇವಲೋಕದೊಳ್ ಪುಟ್ಟಿದರ್ ಮತ್ತಿತ್ತ ಜಯಾವತಿಯುಂ ತನ್ನಂ ಬಾರಿಸೆವಾರಿಸೆ ಸುಕೌಶಳಸ್ವಾಮಿ ತಪಂಬಟ್ಟನೆಂದು ಮುಳಿದು ಜಿನಧರ್ಮಮಂ ಪೞದು ಉನ್ಮಾರ್ಗೋಪದೇಶದಿಂದಾರ್ತಧ್ಯಾನದೊಳ್ ಕೂಡಿ ಸತ್ತು ಮೊಗ್ಗಳಗಿರಿಯೆಂಬ ಪರ್ವತದೊಳ್ ಪೆಣ್ಬುಲಿಯಾಗಿ ಪುಟ್ಟಿದಳ್ ಮತ್ತಿತ್ತ ಸುಕೌಶಳಸ್ವಾಮಿ ದ್ವಾದಶಾಂಗಚತುರ್ದಶಪೂರ್ವಮಪ್ಪಾಗಮಮೆಲ್ಲಮಂ ಕಲ್ತು ಗುರುಗಳೊಡನೆ ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತಂ ಪಲಕಾಲಂ ತಪಂಬಟ್ಟು ಮೊಗ್ಗಳಗಿರಿಯೆಂಬ ಪರ್ವತಕ್ಕೆ ವಂದು ಮೞಗಾಲದೊಳಿರ್ವರುವೊಂದೆ ಗುಹೆಯೊಳ್ ಜೋಗುಗೊಂಡು ನಾಲ್ಕು ತಿಂಗಳುಮಿರ್ವರುಮುಪ ವಾಸಂಗೆಯ್ದು ಜೋಗು ನೆಱೆದೊಡೆ ಚಾತುರ್ಮಾಸದ ಪಾರಣೆಯೆಂದು ಸುಕೌಶಲಸ್ವಾಮಿಯಪ್ಪ ರಿಸಿಯರ್ ಗುಹೆಯಿಂದಂ ಮುನ್ನ ಪೊಱಮಟ್ಟು ದೆಸೆಗಳಂ ನೋೞ್ಪನನ್ನೆಗಂ ತಾಯಪ್ಪ ಪೆಣ್ಬುಲಿ ಪಲವುದಿವಸಮಾಹಾರಮಂ ಪೆಱದೆ ಪಸಿದು ಮಲ್ಮಲ ಮಱುಗುತ್ತಿರ್ದ್ದು ರಿಸಿಯರಂ ಕಂಡು ಮುಳಿದು ಮಸಗಿ ಮೇಲ್ವಾಯಲ್ ಪರಿತಪ್ಪುದಂ ಕಂಡು ಸುಕೌಶಲಸ್ವಾಮಿ ಆಹಾರ ಶರೀರಕ್ಕೆ ಯಾವಜ್ಜೀವಂ ನಿವೃತ್ತಯೆಂದು ಕಾಯೋತ್ಸರ್ಗಂಗೆಯ್ದು

ಗಾಹೆ || ಖಮ್ಮಾಮಿ ಸವ್ವಜೀವಾಣಂ ಸವ್ವೇ ಜೀವಾ ಖಮಂತು ಮೇ
ಮೆತ್ತೀ ಮೇ ಸವ್ವಭೂದೇಸು ವೇರಂ ಮಜ್ಝಣ ಕೇಣ ಚಿ ||
ಮಜ್ಝಸಹಾವಂ ಣಾಣಂ ದಂಸಣ ಚರಣಂ ನ ಕಿಂಪಿ ಆವರಣಂ

ಜಯಾವತಿ ತಾನು ಎಷ್ಟೊಂದು ತಡೆದರೂ ಸುಕೌಶಳಸ್ವಾಮಿ ತಪಸ್ಸಿಗೆ ಹೋದನೆಂದು ಕೋಪಗೊಂಡಳು. ಜೈನಧರ್ಮವನ್ನು ನಿಂದಿಸಿದಳು. ಕುಟಿಲವಾದ ಉಪದೇಶದಿಂದ ಆರ್ತಧ್ಯಾನದಲ್ಲಿ ಸತ್ತು ಮೊಗ್ಗಳಗಿರಿ ಎಂಬ ಪರ್ವತದಲ್ಲಿ ಹೆಣ್ಣು ಹುಲಿಯಾಗಿ ಹುಟ್ಟಿದಳು. ಆಮೇಲೆ ಇತ್ತ ಸುಕೌಶಳಸ್ವಾಮಿ ಆಚಾರಾಂಗ, ಸೂತ್ರ ಕೃತಾಂಗ ಮುಂತಾದ ಹನ್ನೆರಡು ಅಂಗಗಳಿಗೂ ಉತ್ಪಾದಪೂರ್ವ ಮುಂತಾದ ಹದಿನಾಲ್ಕು ಬಗೆಯ ಪೂರ್ವಗಳಿಂದಲೂ ಕೂಡಿದ ಆಗಮಗಳೆಲ್ಲವೂ ಕಲಿತು ಗುರುಗಳೊಂದಿಗೆ ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳಲ್ಲಿ ಸಂಚರಿಸುತ್ತ ಹಲವು ಕಾಲ ತಪಸ್ಸನ್ನು ಮಾಡಿ, ಮೊಗ್ಗಳಗಿರಿಯೆಂಬ ಪರ್ವತಕ್ಕೆ ಬಂದು ಮಳೆಗಾಲದಲ್ಲಿ ಗುರುಶಿಷ್ಯರಿಬ್ಬರೂ ಒಂದೇ ಗುಹೆಯಲ್ಲಿ ಯೋಗಸ್ಥರಾದರು. ಇಬ್ಬರು ನಾಲ್ಕು ತಿಂಗಳ ಕಾಲ ಉಪವಾಸ ಮಾಡಿ ಯೋಗನಿರತರಾದರು. ಚಾತುರ್ಮಾಸದ ಪಾರಣೆಗಾಗಿ ಸುಕೌಶಳಸ್ವಾಮಿಯಾಗಿರುವ ಋಷಿಯು ಗುಹೆಯಿಂದ ಮೊದಲು ಹೊರಟು ದಿಕ್ಕುಗಳ ಕಡೆಗೆ ನೋಡುತ್ತಿದ್ದನು. ಆ ವೇಳೆಗೆ ಅವನ ತಾಯಿಯಾಗಿದ್ದ ಹೆಣ್ಣು ಹುಲಿಯು ಹಲವು ದಿಕ್ಕುಗಳ ಕಡೆಗೆ ನೋಡುತ್ತಿದ್ದನು. ಆ ವೇಳೆಗೆ ಅವನ ತಾಯಿಯಾಗಿದ್ದ ಹೆಣ್ಣು ಹುಲಿಯು ಹಲವು ದಿವಸಗಳಿಂದ ಆಹಾರವನ್ನು ಪಡೆಯದೆ ಹಸಿದು ಅತ್ಯಂತ ಸಂತಾಪ ಪಡುತ್ತಿತ್ತು. ಅದು ಋಷಿಗಳನ್ನು ಕಂಡಿತು. ಕೋಪದಿಂದ ಉದ್ರೇಕಗೊಂಡು, ಮೈಮೇಲೆ ಹಾರಲು ಬರುತ್ತಿರುವುದನ್ನು ಸುಕಾಶಳಸ್ವಾಮಿ ಕಂಡು, ಆಹಾರಕ್ಕೂ ಈ ಶರೀರಕ್ಕೂ ಜೀವವಿರುವ ಪರ್ಯಂತ ನಿವೃತ್ತಿಯಾಗಲೆಂದು ದೇಹತ್ಯಾಗ ಮಾಡಲು ನಿಶ್ಚಯಿಸಿದನು – *ಎಲ್ಲಾ ಜೀವಗಳನ್ನೂ ನಾನು ಕ್ಷಮಿಸುತ್ತೇನೆ. ಸಮಸ್ತ ಜೀವಗಳೂ ನನ್ನನ್ನು ಕ್ಷಮಿಸಲಿ. ಎಲ್ಲಾ ಜೀವಗಳನ್ನೂ ನಾನು ಕ್ಷಮಿಸಲಿ. ಎಲ್ಲಾ ಪ್ರಾಣಿಗಳಲ್ಲಿಯೂ ನನಗೆ ಸ್ನೇಹವಿದೆ. ಎಲ್ಲಿಯೂ ನನಗೆ ದ್ವೇಷವಿಲ್ಲ. ನನ್ನ ಸ್ವಭಾವವು ಸಮ್ಯಕ್ಜ್ಞಾನ, ಸಮ್ಯಗ್ದರ್ಶನ, ಸಮ್ಯಕ್

ಜೋ ಸಂವೇಯಣ ಗಾಹಿ ಸೋಹಂ ಣಾದಾ ಹವೇ ಆದಾ
ಛಿಜ್ಜಉ ಭಿಜ್ಜಉ ಖಉ ಜೋಇಯ ಏಹು ಸರೀರಂ
ಅಪ್ಪಾ ಭಾವಹಿಣಿಮ್ಮಲ ಉ ಜೇಂ ಪಾವಹಿ ಭವತೀರು||

ಎಂದಿಂತು ಕ್ಷಮೆಯಂ ಭಾವಿಸಿ ಧರ್ಮಧ್ಯಾನ ಶುಕ್ಲಧ್ಯಾನಂಗಳಂ ಧ್ಯಾನಿಸುತಮಿರೆ ಪುಲಿಬಂದು ಪಾಯ್ದು ಬಸಿಱಂ ಪೋೞ್ದು ನೆತ್ತರಂ ಕುಡಿದು ತೆಗಲೆಯಂ ಫೋಳ್ದು ತಿನ್ಬಾಗಳ್ ಸಿದ್ದಾರ್ಥರಿಸಿಯುಂ ಗುಹೆಯಿಂ ಪೊಱಮಟ್ಟು ಬಂದು ಕಂಡು ಹಾ ಪಂಚಮಹಾಪಾತಕಿ ಮಗನನೇಕೆ ಕೊಂದು ತಿಂದೆ ಮುನ್ನೆ ಕುಂಕುಮಪಂಕಿತಮಪ್ಪ ದಿಬ್ಯದೇಹದೊಳ್ ಬೆಮರ ಬಿಂದುಗಳಂ ಕಂಡು ನೆತ್ತರೆಂದು ಬಗೆದು ಮೂರ್ಛೆಗೆ ಸಲ್ವಾಕೆಯೇ ಈಗಳ್ ಮಗನಂ ಪೋೞ್ದು ತಿಂದಪ್ಪಯ್ ಅಹೋ ಕಷ್ಟಂ ಸಂಸಾರಮೆಂದು ಸಿದ್ದಾರ್ಥಭಟ್ಟಾರರ್ ನುಡಿವ ವಚನಮಂ ಈಗಳ್ ಮಗನಂ ಪೋೞ್ದು ತಿಂದಪ್ಪಯ್ ಅಹೋ ಕಷ್ಟಂ ಸಂಸಾರಮೆಂದು ಸಿದ್ದಾರ್ಥಭಟ್ಟಾರರ್ ನುಡಿವ ವಚನಮಂ ಕೇಳ್ದು ವಕ್ಷಸ್ಥಳದ ಶ್ರೀಲಾಂಛನಮಂ ಕಂಡು ಜಾತಿಸ್ಮರೆಯಾಗಿ ಮೂರ್ಛೆಗೆ ಸಂದು ನೀಡಱಂದೆೞ್ಚರ್ತ್ತು ಹಾ ಪಂಚಮಹಾಪಾತಕಿಯೆನೆನ್ನ ಮಗನಂ ಪೋಳ್ದು ತಿಂದನೆಂದು ತನ್ನಂ ತಾಂ ನಿಂದಿಸಿ ತಲೆಯಂ ಕಾಲ್ಗಳಂ ಪಾಷಾಣವೃಕ್ಷಂಗಳೊಳ್ ಶತಚೂರ್ಣಮಾಗೆ ಬಡಿದುಕೊಂಡು ಹಾ ಮಗನೆ ಪೊಲ್ಲದಂಗೆಯ್ದೆನೆಂದು ಪ್ರಳಾಪಂಗೆಯ್ದು ಮಹಾಶೋಕಂಗೆಯ್ಯುತ್ತಿರೆ ಭಟ್ಟಾರರದರ್ಕೆ

ಚಾರಿತ್ರ – ಎಂಬವು. ನನಗೆ ಯಾವ ಕರ್ಮಲೇಪವೂ ಇಲ್ಲ. ಯಾವನು ಸಂವೇದನೆಯುಳ್ಳವನೋ ಅವನೇ ನಾನು. ಆತ್ಮನು ಜ್ಞಾತೃ(ತಿಳಿಯುವವನು) ಆಗುತ್ತಾನೆ. ಈ ಶರೀರ ಕತ್ತರಿಸಲ್ಪಡಲಿ, ಭೇದಿಸಲ್ಪಡಲಿ, ಸೀಳಲ್ಪಡಲಿ, ನಾಶವಾಗಲಿ, ಎಲೈ ಯೋಗಿಯೇ, ಯಾವುದರಿಂದ ಸಂಸಾರದ ಆಚೆಯ ದಡವನ್ನು ಪಡೆಯುವೆಯೋ ಆ ನಿರ್ಮಲವಾದ ಆತ್ಮವನ್ನು ದ್ಯಾನಿಸು*. ಹೀಗೆನ್ನುತ್ತ ಕ್ಷಮೆಯನ್ನು ಭಾವಿಸಿಕೊಂಡು ಧರ್ಮಧ್ಯಾನ ಶುಕ್ಲಧ್ಯಾನಗಳನ್ನು ಧ್ಯಾನಿಸುತ್ತಿದ್ದನು. ಆಗ ಹುಲಿ ಬಂದು ಹಾರಿ ಹೊಟ್ಟೆಯನ್ನು ಸೀಳಿತು. ರಕ್ತವನ್ನು ಕುಡಿಯತೊಡಗಿತು. ಎದೆಯನ್ನು ಸೀಳಿ ತಿನ್ನುತ್ತಿರಲು ಸಿದ್ದಾರ್ಥಮುನಿ ಗುಹೆಯಿಂದ ಹೊರಗೆ ಬಂದು ನೋಡಿ “ಆಹಾ ಪಂಚಮಹಾಪಾಪ ಮಾಡಿದ ಜಂತುವೇ, ಮಗನನ್ನು ಯಾಕೆ ಕೊಂದು ತಿಂದೆ ? ಹಿಂದೆ ನೀನು ಕುಂಕುಮದ ಕೆಸರಿನಿಂದ ಕೂಡಿದ ದಿವ್ಯವಾದ ಶರೀರದಲ್ಲಿ ಬೆವರಿನ ಹನಿಗಳನ್ನು ಕಂಡಾಗ ರಕ್ತವೆಂದು ಭಾವಿಸಿ ಮೂರ್ಛೆ ಹೋಗುವವಳಾಗಿದ್ದೆ ! ಅಂತಹ ನೀನು ಈಗ ಮಗನನ್ನು ಸೀಳಿ ತಿನ್ನುತ್ತಿರುವೆ ! ಆಹಾ, ಸಂಸಾರವೇ ! ಕಷ್ಟ!* ಎಂದು ಸಿದ್ದಾರ್ಥಋಷಿಗಳು ಹೇಳುವ ಮಾತನ್ನು ಕೇಳಿ, ಎದೆಯ ಮೇಲಿರುವ ಶ್ರೀ ಲಾಂಛನವನ್ನು ಕಂಡು ಆ ಹೆಣ್ಣು ಹುಲಿಗೆ ಪೂರ್ವಜನ್ಮದ ಸ್ಮರಣೆಯುಂಟಾಯಿತು. ಅದು ಕೂಡಲೇ ಮೂರ್ಛೆ ಹೋಯಿತು. ಹೆಚ್ಚು ಹೊತ್ತಾದ ಮೇಲೆ ಎಚ್ಚೆತ್ತು “ಆಹಾ, ನಾನು ಪಂಚಮಹಾಪಾತಕಿಯಾಗಿರುತ್ತೇನೆ. ನನ್ನ ಮಗನನ್ನೇ ನಾನು ಸೀಳಿ ತಿಂದುಬಿಟ್ಟೆನು* ಎಂದು ತನ್ನನ್ನು ತಾನು ನಿಂದಿಸಿತು. ಆ ಮೇಲೆ ತನ್ನ ತಲೆಯನ್ನೂ ಕಾಲುಗಳನ್ನೂ ಕಲ್ಲುಗಳಿಗೂ ಮರಗಳಿಗೂ ಬಡಿದು ನೂರಾರು ಚೂರಾಗುವಂತೆ, ಮಾಡಿ, “ಹಾ ಮಗನೇ, ಕೆಟ್ಟದನ್ನು ಮಾಡಿದೆನು ಎಂದು ಅಳುತ್ತ, ಮಹಾದುಃಖವನ್ನು ತಾಳಿರಲು, ಸಿದ್ದಾರ್ಥಮುನಿಗಳು ಅದಕ್ಕೆ ಧರ್ಮವಿಚಾರವನ್ನು ತಿಳಿಸಿ, ಸಂಸಾರದ ಸ್ಥಿತಿಯನ್ನು

ಧರ್ಮಶ್ರವಣಂಗೆಯ್ದು ಸಂಸಾರಸ್ಥಿತಿಯನಱಯೆ ಪೇೞ್ದು ವ್ರತಂಗಳನೇಱಸಿದೊಡುಪಶಮಕ್ಕೆ ಸಂದಾಹಾರ ಶರೀರಕ್ಕೆ ಯಾವಜ್ಜೀವಂ ನಿವೃತ್ತಿಗೆಯ್ದು ಶುಭಪರಿಣಾಮದೊಳ್ ಕೂಡಿ ಮುಡಿಪಿ ಸೌಧರ್ಮಕಲ್ಪದೊಳ್ ಪುಟ್ಟಿತ್ತು ಸಿದ್ಧಾರ್ಥರಿಸಿಯರುಂ ಸಮ್ಯಗ್ದರ್ಶನಜ್ಞಾನಚಾರಿತ್ರಂಗಳಂ ಸಾಸಿ ಕರ್ಮಕ್ಷಯಂಗೆಯ್ದು ಮೋಕ್ಷವನೆಯ್ದಿದರ್ ಸುಕೌಶಲಸ್ವಾಮಿಯುಂ ತಿರಿಕೋಪಸರ್ಗಮಂ ಸೈರಿಸಿ ಸರ್ವಾರ್ಥಸಿದ್ದಿಯೊಳ್ ಸಯಸತ್ತಮದೇವನಾಗಿ ಪುಟ್ಟಿ ಮೂವತ್ತುಮೂಱು ಸಾಗರೋಪ ಮಾಯುಷ್ಯಮನೊಡೆಯನಪ್ಪ ಹಮಿಂದ್ರನಾದೊನ್ ಎಂಬಿದೆಲ್ಲಮಂ ಯಶೋಧರಕೇವಲಿಗಳ್ ಪೇೞೆ ಚಂಪಾಪುರಾಪತಿಯಪ್ಪ ಗಂಧಭಾಜನನೆಂಬರಸಂ ಕೇಳ್ದಾದಮಾನುಂ ಸಂತುಷ್ಟಚಿತ್ತನಾಗಿ ಭಟಾರರ್ಗೆಱಗಿ ಪೊಡೆಮಟ್ಟು ಸಂಸಾರಶರೀರಭೋಗನಿರ್ವೇಗಪರಾಯಣವಾಗಿ ಧಾತ್ರಿವಾಹನನೆಂಬ ತನ್ನ ಪಿರಿಯ ಮಗಂಗೆ ರಾಜ್ಯಪಟ್ಟಂಗಟ್ಟಿ ನೂರ್ವರರಸು ಮಕ್ಕಳ್ವೆರಸು ಯಶೋಧರಕೇವಲಿಗಳ ಪಕ್ಕದೆ ತಪಂಬಟ್ಟಂ ಮತ್ತಪ್ಸರಯರ್ಕಳೊಳೋರನ್ನರಪ್ಪರಸಿಯರ್ ನೂರ್ವರುಂ ಯಶೋಧರಕೇವಲಿಗಳ್ ಗುರುಗಳಾಗೆ ಪದ್ಮಾವತಿ ಕಂತಿಯರ್ ಕಂತಿಯರಾಗ ತಪಂಬಟ್ಟು ಸಮಾಮರಣದಿಂದಂ ಮುಡಿಪಿ ಸೌಧರ್ಮಂ ಮೊದಲಾಗೊಡೆಯ ದೇವಲೋಕದೊಳ್ ಪುಟ್ಟಿದರಿತ್ತ ಗಂಧಭಾಜನಮುನಿಯುಂ ದ್ವಾದಶಾಂಗ ಚತುರ್ದಶ ಪೂರ್ವಮಪ್ಪಾಗಮಮೆಲ್ಲಮಂ

ತಿಳಿಯುವ ಹಾಗೆ ಹೇಳಿ ವ್ರತಗಳನ್ನು ಧರಿಸುವಂತೆ ಮಾಡಿದರು. ಆ ಹೆಣ್ಣುಹುಲಿ ಮನೋನಿಗ್ರಹಕ್ಕೆ ಒಳಗಾಗಿ ಬದುಕಿರುವವರೆಗೂ ಆಹಾರವನ್ನು ನಿವೃತ್ತಿಗೊಳಿಸಿ ಶುಭಕರವಾದ ಪರಿಣಾಮದಲ್ಲಿ ಕೂಡಿ, ಸತ್ತು ಸೌಧರ್ಮವೆಂಬ ಕಲ್ಪದಲ್ಲಿ ಹುಟ್ಟಿತು. ಸಿದ್ದಾರ್ಥ ಋಷಿಗಳು ಸಮ್ಯಗ್ದರ್ಶನ ಸಮ್ಯಗ್ಞಾನ ಸಮ್ಯಕ್ಚಾರಿತ್ರ ಎಂಬ ರತ್ನತ್ರಯವನ್ನು ಸಾಸಿ ಘಾತಿ – ಆಘಾತಿ ಎಂಬ ಕರ್ಮಗಳನ್ನು ನಾಶಗೊಳಿಸಿ ಮೋಕ್ಷವನ್ನು ಹೊಂದಿದರು. ಸುಕೌಶಳಸ್ವಾಮಿ ತಿರ್ಯಕ್ಕುಗಳಿಂದ ಒದಗುವ ತಪೋವಿಘ್ನಗಳನ್ನು ಸಹಿಸಿಕೊಂಡು ‘ಸರ್ವಾರ್ಥಸಿದ್ದಿ’ ಎಂಬ ಎಲ್ಲಕ್ಕೂ ಮೇಲಿನದಾದ ಮತ್ತು ಅತ್ಯುತ್ತಮವಾದ ಸ್ಥಾನದಲ್ಲಿ ಸಯಸತ್ತಮನೆಂಬ ದೇವನಾಗಿ ಹುಟ್ಟಿ, ಮೂವತ್ತಮೂರು ಸಾಗರೋಪಮವಾದ ಆಯುಷ್ಯವನ್ನುಳ್ಳ ಅಹಮಿಂದ್ರನಾದನು. ಈ ರೀತಿಯ ಸಂಗತಿಯೆಲ್ಲವನ್ನೂ ಯಶೋಧರ ಕೇವಲಿಗಳು ಹೇಳಲು, ಚಂಪಾಪುರದ ರಾಜನಾದ ಗಂಧಭಾಜನನು ಕೇಳಿ ಅತ್ಯಂತ ಸಂತೋಷಪಟ್ಟ ಮನಸ್ಸುಳ್ಳವನಾಗಿ ಋಷಿಗಳಿಗೆ ಸಾಷ್ಟಾಂಗ ವಂದನೆ ಮಾಡಿದನು. ಸಂಸಾರ ಶರೀರದ ಸುಖದಲ್ಲಿ ವೈರಾಗ್ಯತತ್ಪರನಾದನು. ಧಾತ್ರಿವಾಹನನೆಂಬ ತನ್ನ ಹಿರಿಯ ಮಗನಿಗೆ ರಾಜ್ಯದ ಪಟ್ಟವನ್ನು ಕಟ್ಟಿ, ನೂರುಮಂದಿ ರಾಜಕುಮಾರರನ್ನೂ ಮಕ್ಕಳನ್ನೂ ಕೂಡಿಕೊಂಡು ಯಶೋಧರನೆಂಬ ತಪಸ್ವಿಗಳ ಬಳಿಯಲ್ಲಿ ತಪಸ್ಸನ್ನು ಕೈಗೊಂಡನು. ಆಮೇಲೆ, ದೇವಸ್ತ್ರಿಯರಿಗೆ ಸಮಾನರಾದ ನೂರು ಮಂದಿ ರಾಣಿಯರು ಯಶೋಧರಕೇವಲಿಗಳನ್ನು ಗುರುಗಳನ್ನಾಗಿ ಮಾಡಿಕೊಂಡು ಪದ್ಮಾವತಿ ಕಂತಿಯರು ಮಾರ್ಗದರ್ಶನ ಮಾಡುವ ಸನ್ಯಾಸಿನಿಯರಾಗಿರಲು ತಪಸ್ಸನ್ನು ಮಾಡಿ ಸಮಾಮರಣದಿಂದ ಸತ್ತು ಸೌಧರ್ಮ ಮುಂತಾಗಿ ಇರತಕ್ಕ ದೇವಲೋಕದಲ್ಲಿ ಹುಟ್ಟಿದರು. ಇತ್ತ ಗಂಧಭಾಜನ ಮುನಿ ಹನ್ನೆರಡು ಅಂಗಗಳು ಹದಿನಾಲ್ಕು ಪೂರ್ವಗಳು ಇರತಕ್ಕ ಶಾಸ್ತ್ರಗಳೆಲ್ಲವನ್ನೂ ಕಲಿತು ಹಲವು ಕಾಲ

ಕಲ್ತು ಪಲಕಾಲಮುಗ್ರೋಗ್ರ ತಪಶ್ಚರಣಂಗೆಯ್ದು ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತಂ ಪೋಗಿ ಪಾಂಡ್ಯವಿಷಯದೊಳ್ ಪಳಿಕುಂತಳೆಯೆಂಬ ಪರ್ವತದ ಮೇಗಿರ್ದು ಬಾಹ್ಯಾಭ್ಯಂತರ ಪರಿಗ್ರಹ ಪರಿತ್ಯಾಗಪೂರ್ವಕಂ ಕಾಯೋತ್ಸರ್ಗಂಗೆಯ್ದು ಧರ್ಮಧ್ಯಾನ ಶುಕ್ಲಧ್ಯಾನಂಗಳಂ ಜಾನಿಸಿ ಕರ್ಮಕ್ಷಯಂಗೆಯ್ದು ಸುರಸುರೇಂದ್ರರ್ಕ್ಕಳಿಂ ಪೂಜೆಯನೆಯ್ದಿ ಮೋಕ್ಷಕ್ಕೆವೋದರ್ ಮತ್ತಾರಾಧಕರಪ್ಪವರ್ಗಳ್ ಸುಕೌಶಲಸ್ವಾಮಿಯ ತಿರಿಕೋಪಸರ್ಗಮಂ ಮನದೆ ಬಗದು ಪಸಿವುಂ ನೀರೞ್ಕೆ ದಾಹ ವಾತಂ ಸೂಲೆಯೆಂದಿವು ಮೊದಲಾಗೊಡೆಯ ವೇದನೆಗಳಂ ಸೈರಿಸಿ ದರ್ಶನ ಜ್ಞಾನ ಚಾರಿತ್ರಮಗಳಂ ಸಾಸಿ ಸಮಾಮರಣದಿಂ ಮುಡಿಪಿಯಭ್ಯುದಯ ನಿಃಶ್ರೇಯಸ ಸುಖಂಗಳನೆಯ್ದುಗೆ.

ಅತ್ಯಂತ ಘೋರವಾದ ತಪಸ್ಸನ್ನು ಮಾಡಿ, ಗ್ರಾಮ, ನಗರ ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖ ಎಂಬ ಭೂಭಾಗಗಳಲ್ಲಿ ಸಂಚರಿಸುತ್ತ ಹೋಗಿ ಪಾಂಡ್ಯದೇಶದಲ್ಲಿ ಪಳಿಕುಂತಳೆ ಎಂಬ ಪರ್ವತದ ಮೇಲೆ ಇದ್ದು ಹೊರಗಿನ ಮತ್ತು ಒಳಗಿನ ಪರಿಗ್ರಹಗಳನ್ನು ತ್ಯಜಿಸಿ, ದೇಹತ್ಯಾಗ ಮಾಡಲು ನಿಶ್ಚಯಿಸಿ, ಧರ್ಮಧ್ಯಾನ ಶುಕ್ರಧ್ಯಾನಗಳನ್ನು ದ್ಯಾನಿಸುತ್ತ ಕರ್ಮಗಳನ್ನು ನಾಶಗೊಳಿಸಿ ದೇವತೆಗಳಿಂದಲೂ ದೇವತೆಗಳಲ್ಲದವರಿಂದಲೂ ಪೂಜಿತರಾಗಿ ಮೋಕ್ಷಕ್ಕೆ ತೆರಳಿದರು. ಮತ್ತೇನೆಂದರೆ, ಆರಾಧಕರಾಗಿರುವವರು ಸುಕೌಶಲಸ್ವಾಮಿ ಎಂತಹ ತಿರಿಕೋಪಸರ್ಗವನ್ನು ಸಹಿಸಿದನೆಂಬುದನ್ನು ಮನಸ್ಸಿನಲ್ಲಿ ಭಾವಿಸಿ ಹಸಿವು, ಬಾಯಾರಿಕೆ, ಸುಡುವಿಕೆ, ವಾತ, ಶೂಲೆ(ಸಿಡಿತ) – ಎಂದು ಇವೇ ಮೊದಲಾಗಿರುವ ನೋವುಗಳನ್ನು ಸಹಿಸಿ, ಸಮ್ಯಗ್ದರ್ಶನ – ಸಮ್ಯಗ್ಞಾನ – ಸಮ್ಯಕ್ಚಾರಿತ್ರ ಎಂಬ ರತ್ನತ್ರಯವನ್ನು ಸಾಸಿಕೊಂಡು ಸಮಾಮರಣದಿಂದ ಸತ್ತು, ಅಭ್ಯುದಯಸುಖ ಮತ್ತು ಮೋಕ್ಷ ಸುಖ – – ಎಂಬಿವೆರಡನ್ನೂ ಪಡೆಯಲಿ.