ಸುಕೌಶಳಸ್ವಾಮಿಯ ಕಥೆಯಂ ಪೇೞ್ವೆಂ :

ಗಾಹೆ || ಮೊಗ್ಗಳಗಿರಿಮ್ಹಿಯ ಸುಕೌಸಳೋ ವಿ ಸಿದ್ಧತ್ಥ ದಯಿದಗೋ ಭಗಮಂ
ವಗ್ನೀಯೆ ಖಯಿದಂ ಪದಿದೋ ಪಡಿವಣ್ಣೋ ಉತ್ತಮಂ ಅಟ್ಠಂ

*ಮೊಗ್ಗಳ ಗಿರಿಮ್ಹಿಯ – ಮೊಗ್ಗಳಮೆಂಬ ಪರ್ವತದೊಳ್, ಸುಕೌಸಳೋಪಿ – ಸುಕೌಸಳ ಸ್ವಾಮಿಯುಂ, ಸಿದ್ದತ್ಥದಯಿಗೋ – ಸಿದ್ಧಾರ್ಥನೆಂಬ ಷರದನ ಕಾದಲಿಸೆ ಪಡುವ ಮಗಂ, ಭಗವಂ – ಪೆರ್ಮೆಯನೊಡೆಯೊಂ, ವಗ್ಘೀಯೆ ಖಯಿದಂ ಪದಿದೋ – ಮುನ್ನಿನ ಭವದ ತಾಯಪ್ಪ ಪೆಣ್ಬುಲಿಯಿಂದಂ ತಿನೆ ಬರ್ದಿದೊನಾಗಿಯಂ, ಪಡಿವಣ್ಣೋ – ಪೊರ್ದಿದೊಂ, ಉತ್ತಮಂ ಅಟ್ಠಂ – ಮಿಕ್ಕ ಜ್ಞಾನ ಚಾರಿತ್ರಾರಾಧನೆಯಂ*

ಅದೆಂತೆಂದೊಡೆ :

ಈ ಜಂಬೂದ್ವೀಪದ ದಕ್ಷಿಣ ಭರತಕ್ಷೇತ್ರದೊಳಂಗಮೆಂಬುದು ನಾಡಲ್ಲಿ ಚಂಪಾನಗರಮೆಂಬುದು ಪೊೞಲದನಾಳ್ವೊಂ ಗಂಧಭಾಜನನೆಂಬರಸನಿಂದ್ರನೊಳೋರಂತಪ್ಪ ಭೋಗೆಶ್ವರ್ಯ ವಿಭಮಮನೊಡೆಯೊಂ ನ್ಯಾಯದಿಂದಿಂ ಪ್ರಜೆಗಳಂ ಪ್ರತಿಪಾಳಿಸುವೊನಗಮ ಸಮ್ಯಕ್ದೃಷ್ಟಿಯಪ್ಪ ನೇೞುಗುಣಂಗಳಿಂದಂ ಕೂಡಿದೊನಾಯೇೞುಂ ಗುಣಂಗಳೆಂಬುವಾವುವೆಚಿದೊಡೆ

ಗಾಹೆ || ಸಮ್ಮದ್ದಸ್ಸಣಸುದ್ದೋ ಕದವಧ ಕಮ್ಮೋ ಸುಸೀಲಗುಣಣಿಳಯೊ
ಉಜುಗತ್ತೋ ಗುರಭತ್ತೋ ಪವಯಣ ಕುಸಳೋ ಮದಿಪ್ಪಬ್ಭೋಯ

ಎಂದೇೞುಂ ಗುಣಂಗಳಿಂದಂ ಕೂಡಿದೊನಂತಪ್ಪರಸಂ ಶರತ್ಕಾಲದ ಮುಗಿಲೊಳೋರಂತಪ್ಪು ದನಾದಮಾನುಂ ವಿಚಿತ್ರಮಪ್ಪುದಂ
ಸಹಸ್ರಕೂಟಮೆಂಬ ಜಿನಾಲಯಮಂ ಮಾಡಿಸಿ ಅದರ್ಕ್ಕನ

ಸುಕೌಶಳ ಸ್ವಾಮಿಯ ಕಥೆಯನ್ನು ಹೇಳುವೆನು :(ಸಿದ್ಧಾರ್ಥನೆಂಬ ವರ್ತಕನ ಪ್ರೀತಿಯ ಮಗ ಸುಕೌಶಳಸ್ವಾಮಿ ; ಹಿರಿಮೆಯನ್ನುಳ್ಳವನು. ಆತನು ಮೊಗ್ಗಳವೆಂಬ ಬೆಟ್ಟದಲ್ಲಿ ಇದ್ದಾಗ ಅವನನ್ನು ಹಿಂದಿನ ಜನ್ಮದ ತಾಯಿಯಾಗಿದ್ದೊಂದು ಹೆಣ್ಣು ಹುಲಿ ತಿನ್ನಲು ಸತ್ತವನಾಗಿ ಶ್ರೇಷ್ಠವಾದ ಜ್ಙಾನ – ಚಾರಿತ್ರ – ಆರಾಧನೆಯನ್ನು ಪಡೆದನು.) ಅದು ಹೇಗೆಂದರೆ : ಈ ಜಂಬೂದ್ವೀಪದಲ್ಲಿ ದಕ್ಷಿಣಕ್ಕಿರುವ ಭರತಕ್ಷೇತ್ರದಲ್ಲಿ ಅಂಗರಾಜ್ಯವಿದೆ. ಅಲ್ಲಿ ಚಂಪಾನಗರವೆಂಬ ಪಟ್ಟಣವನ್ನು ಗಂಧಭಾಜನನೆಂಬ ರಾಜನು ಆಳುತ್ತಿದ್ದನು. ಅವನು ಇಂದ್ರನಿಗೆ ಸಮಾನವಾದ ಸುಖ – ಐಶ್ವರ್ಯ – ಸಂಪತ್ತುಗಳುಳ್ಳವನಾಗಿ ಪ್ರಜೆಗಳನ್ನು ನ್ಯಾಯದಿಂದ ಆಳುತ್ತಿದ್ದನು. ಸಂಪಾದಿಸಿದ ಜ್ಞಾನವುಳ್ಳವನಾಗಿ ಏಳು ಗುಣಗಳಿಂದ ಕೂಡಿದವನಾಗಿದ್ದನು. ಆ ಏಳು ಗುಣಗಳು ಯಾವುವೆಂದರೆ – ಸಮ್ಯಗ್ದರ್ಶನ ಶುದ್ದನಾಗಿರುವವನು, ಉತ್ತಮವಾದ ಕರ್ಮವುಳ್ಳವನು, ಒಳ್ಳೆಯ ಶೀಲಕ್ಕೂ ಗುಣಕ್ಕೂ ಮನೆಯಾಗಿರುವವನು, ಪ್ರಯತ್ನದಲ್ಲಿ ಆಸಕ್ತಿವುಳ್ಳವನು, ಗುರುಭಕ್ತನು, ಪ್ರವಚನದಲ್ಲಿ ಕುಶಲನು, ಪಾಂಡಿತ್ಯವುಳ್ಳವನು. ಈ ವಿಧವಾದ ಏಳು ಗುಣಗಳಿಂದ ಕೂಡಿದ ಗಂಧಭಾಜನರಾಜನು ಶರತ್ಕಾಲದ ಮೋಡದಂತೆ ಬೆಳ್ಳಗಿರುವ ಮತ್ತು ಅತ್ಯಂತ ರಮ್ಯವಾಗಿರುವ ‘ಸಹಸ್ರಕೂಟ’ ಎಂಬ ಜಿನಮಂದಿರವನ್ನು

ವರತಂ ಮಹಾಪೂಜೆಯುಮಂ ಮಹಿಮೆಯುಮಭಿಷೇಕಂಗಳುಮಂ ಸಲಿಸುತಿರ್ಪೊಂ ಮತ್ತಾಪೊೞಲೊಳೊರ್ವಂ ಸಾಗರದತ್ತನೆಂಬೊಂ ಸೆಟ್ಟಿಯಾತನ ಭಾರ್ಯೆ ಸುಭದ್ರೆಯೆಂಬೊಳಾಯಿರ್ವರ್ಗಂ ಮಗಳ್ ಸುರೂಪೆಯೆಂಬೊಳ್ ಮತ್ತಾ ಪೊೞಲೊಳ್ ಪೆಱನೊರ್ವಂ ಸೆಟ್ಟಿ ನಾಗದತ್ತನೆಂಬೊನಾತಂಗೆ ಸುರೂಪೆಯಂ ಕೊಟ್ಟೊಡಾಯಿರ್ವರ್ಗಂ ಸುಕೇಶಿನಿಯೆಂಬ ಮಗಳಾದಳಾಕೆ ಬಳೆದತ್ಯಂತ ರೂಪಲಾವಣ್ಯ ಸೌಭಾಗ್ಯ ಕಾಂತಿ ಹಾವಭಾವವಿಲಾಸ ವಿಭ್ರಮಂಗಳನೊಡೆಯೊಳ್ ಪಲವುಂ ತೆಱದ ಶುಭಲಕ್ಷಣಂಗಳಿಂದಂ ಕೂಡಿದ ಮೆಯ್ಯನೊಡೆಯೊಳ್ ನವಯೌವನೆ ದೇವಗಣಿಕೆಯನೆ ಪೋಲ್ವಳೊಂದು ದಿವಸಂ ಅಷ್ಟಮಿಯಂ ನೋಂತು ದೇವರನರ್ಚಿಸಲೆಂದು ಸಹಸ್ರಕೂಟಚೈತಾನ್ಯಲಯಕ್ಕರ್ಚನೆಯಂ ಕೊಂಡು ಪೋದಳನ್ನೆಗಮರನುಮಾಗಳೆ ದೇವರಂ ಬಂದಿಸಲ್ ಬಂದೊಡರಸಂಗೆ ನಾಣ್ಚಿ ಬಸದಿಯೊಳಗಣ ಕಂಬದ ಮಱೆಯೊಳ್ ಕೇರಂ ಸಾರ್ದು ಪೊನ್ನ ಬೆಳಗುವ ಗಳಂತಿಗೆಯನಾದಮಾನುಪ್ಪುತ್ತಿರ್ದುದಂ ಪಿಡಿದು ನಿಂದಿರ್ದೊಳನರಸಂ ಕಂಡಿಲ್ಲಿಯ ಚಿತ್ರದ ಲೆಪ್ಪದ ಕಾಷ್ಟಕರ್ಮದ ರೂಪುಗಳೊಳೆಲ್ಲಮೀ ಸ್ತ್ರೀಯ ಜೀವವಿದ್ಧಮಿಂತುಟತಿಶಯ ಮೆಂದರಸನಾಕೆಯ ರೂಪಿಂಗಚ್ಚರಿವಟ್ಟು ಪೊಗೞೆ ಕೆಲದೊಳಿರ್ದ ಕಶ್ಚಿದೇವದತ್ತನೀಕೆ ಕನೆಯಿರ್ದೊಳೆಂದು ಪೇೞ್ದೊಡಾರ ಮಗಳೆಂದು ಬೆಸಗೊಂಡೊಡೀ ಪೊೞಲ್ಗೆ ಪ್ರಧಾನಂ ನಾಗದತ್ತಸೆಟ್ಟಿಯ ಮಗಳೆಂದು

ಮಾಡಿಸಿದನು. ಆ ಜಿನಮಂದಿರಕ್ಕೆ ಯಾವಾಗಲೂ ಮಹಾಪೂಜೆಯನ್ನೂ ಮಹಿಮೆಯನ್ನೂ (ವಿಶೇಷವಾದ ಉತ್ಸವಗಳನ್ನು) ಅಭಿಷೇಕಗಳನ್ನೂ ಸಲ್ಲಿಸುತ್ತಿದ್ದನು. ಆ ಪಟ್ಟಣದಲ್ಲಿ ಸಾಗರದತ್ತನೆಂಬ ಒಬ್ಬ ಸೆಟ್ಟಿಯಿದ್ದನು. ಅವನ ಹೆಂಡತಿ ಸುಭದ್ರೆಯೆಂಬುವಳು. ಅವರಿಬ್ಬರಿಗೆ ಸುರೂಪೆಯೆಂಬುವಳು ಮಗಳು. ಮತ್ತು, ಅದೇ ಪಟ್ಟಣದಲ್ಲಿ ನಾಗದತ್ತನೆಂಬ ಇನ್ನೊಬ್ಬ ಸೆಟ್ಟಿಯಿದ್ದನು. ಅವನಿಗೆ ಸುರೂಪೆಯನ್ನು ಕೊಡಲು, ಆ ಇಬ್ಬರಿಗೆ ಸುಕೇಶಿನಿ ಎಂಬ ಮಗಳಾದಳು. ಆಕೆ ದೊಡ್ಡವಳಾಗಿ ಹೆಚ್ಚಾದ ರೂಪ, ಲಾವಣ್ಯ, ಸಾಭಾಗ್ಯ, ಕಾಂತಿ, ಹಾವ, ಭಾವ, ವಿಲಾಸ, ವಿಭ್ರಮಗಳುಳ್ಳ ನವಯುವತಿಯಾಗಿ ದೇವವಾರಾಂಗನೆಯನ್ನೂ ಹೋಲುತ್ತಿದ್ದಳು. ಆವಳು ಒಂದು ದಿವಸ ಅಷ್ಷಮಿಯ ವ್ರತವನ್ನು ಆಚರಿಸಿ ಜಿನೇಂದ್ರನನ್ನು ಪೂಜಿಸುವುದಕ್ಕಾಗಿ ಸಹಸ್ರಕೂಟ ಜಿನಮಂದಿರಕ್ಕೆ ಪೂಜಾದ್ರವ್ಯಗಳನ್ನು ತೆಗೆದುಕೊಂಡು ಹೋದಳು. ಅಷ್ಟರಲ್ಲಿ ಅದೇ ವೇಳೆಗೆ ಗಂಧಭಾಜನರಾಜನು ಜಿನೇಶ್ವರನನ್ನು ವಂದಿಸುವುದಕ್ಕಾಗಿ ಬಂದನು. ಸುಕೇಶಿನಿ ರಾಜನನ್ನು ಕಂಡು ನಾಚಿಕೆಪಟ್ಟು ಬಸದಿಯೊಳಗಿನ ಕಂಬದ ಮನೆಯಲ್ಲಿ ಗೋಡೆಯ ಬಳಿಗೆ ಹೋಗಿ ಚೆನ್ನಾಗಿ ಶೋಭಿಸುವ ಚಿನ್ನದ ಗಡಿಗೆಯನ್ನು ಹಿಡಿದು ನಿಂತುಕೊಂಡಿದ್ದಳು. ಅವಳನ್ನು ರಾಜನು ಕಂಡು “ಇಲ್ಲಿ ಚಿತ್ರಿಸಿಯೂ ಲೇಪ್ಯವಸ್ತುಗಳಿಂದಲೂ ಮರಗೆಲಸದಿಂದಲೂ ಮಾಡಿರುವ ರೂಪಗಳಲ್ಲೆಲ್ಲ ಈ ಹೆಂಗುಸಿನ ಸಜೀವವೆನಿಸುವ ಶಿಲ್ಪದ ಪ್ರತಿಮೆ ಬಹಳ ಶ್ರೇಷ್ಠವಾದುದು* ಎಂದು ಆಕೆಯ ರೂಪಕ್ಕೆ ಆಶ್ಚರ್ಯಪಟ್ಟು ಹೊಗಳಿದನು. ಆಗ ಅವನ ಪಕ್ಕದಲ್ಲಿದ್ದ ದೇವದತ್ತನೆಂಬ ಯಾವನೋ ಒಬ್ಬನು “ಈಕೆ ಅವಿವಾಹಿತೆಯಾದ ಓರ್ವ ಬಾಲಿಕೆ* ಎಂದು ಹೇಳಿದನು. ರಾಜನು ಅವಳನ್ನು ಯಾರ ಮಗಳೆಂದು ಕೇಳಿದಾಗ, ಅವನು – “ಈಕೆ ಈ ಪಟ್ಟಣದಲ್ಲಿ ಶ್ರೇಷ್ಠನಾದ ನಾಗದತ್ತ ಸೆಟ್ಟಿಯ ಮಗಳು* ಎಂದು ಹೇಳಿದನು. ರಾಜನು ಇದನ್ನು ಕೇಳಿ ಸುಮ್ಮಗಿದ್ದು,

ಪೇೞ್ದೊಡರಸಂ ಕೇಳ್ದು ಕೆಮ್ಮಗಿರ್ದು ದೇವರ್ಗೆ ನಮಸ್ಕಾರಂಗೆಯ್ದು ಋಷಿಯರಂ ಬಂದಿಸಿ ತನ್ನ ಮನೆಗೆವೋದನ್ ಇತ್ತ ಸುಕೇಶಿನಿಯುಂ ದೇವರನರ್ಚಿಸಿ ಬಂದಿಸಿ ಗುರುಪರಿವಿಡಿಯಿಂದಂ ರಿಸಿಯರಂ ಬಂದಿಸಿ ವ್ರತಂಗಳನೇಱಸಿಕೊಂಡು ಸಿದ್ದಸೇಸೆಯಂ ತಾಯ್ಗಂ ತಂದೆಗಂ ಪೋಗಿ ಕೊಟ್ಟೊಡವರ್ಗಳುಂ ತಲೆಯೊಳಿಟ್ಟುಕೊಂಡು ಯೌವನಂ ನೆಱೆದ ಕೂಸಿನ ರೂಪಂ ನೋಡುತ್ತಿರ್ದಾರ್ಗೆ ಕುಡುವಮೆಂದು ತಮ್ಮೊಳ್ ನುಡಿಯತ್ತಿರ್ಪಿನಮರಸಂ ಕನ್ನೆಯ ರೂಪಂ ಕಂಡಾಟಸಿ ಕೂಸಿನ ತಾಯಪ್ಪ ಸುರೂಪೆಗೆ ಬೞಯನಟ್ಟಿ ಬರಿಸಿ ಕೂಸನಾರ್ಗೆ ಕೊಟ್ಟಪಿರೆಂದು ಬೆಸಗೊಂಡೊಡೆನ್ನ ತಮ್ಮಂ ವರಾಂಗನೆಂಬೊನಾತನ ಮಗಂ ಜಿತರಂಗನೆಂಬೊನೆನ್ನ ಸೋದರಳಿಯನಾತಂಗ ಕೊಟ್ಟಪೆನೆಂದು ಪೇೞ್ದೊಡರಸಂ ಮಧುಸೇನಂ ಮಧುಸೂದನರೆಂಬಿರ್ವರ್ ಪ್ರಧಾನವೆರ್ಗಡೆಗಳಂ ನಾಗದತ್ತಸೆಟ್ಟಿಯಲ್ಲಿಗೆ ಕೂಸಂ ಬೇಡಿಯಟ್ಟಿಯುತ್ತವಳನಾಗಿಯವರ ಬೞಯನೆ ತಾನುಂ ನಾಗದತ್ತನ ಮನೆಗೆ ಪೋಗಿ ಕೂಸಂ ಬೇಡಿ ಪೆತ್ತಂ ನಾಗದತ್ತನುಮಷ್ಪಾಹ್ನಿಕ ಮಹಾಮಹಿಮೆಯನೆಂಟು ದಿವಸಂ ಮಾಡಿ ಪ್ರಶಸ್ತ ದಿನ ವಾರ ನಕ್ಷತ್ರ ಮುಹೂರ್ತ ಹೋರಾಲಗ್ನದೊಳ್ ಕೂಸಿನನುಕೂಲದೊಳ್ ಪಾಣಿಗ್ರಹಣಪುರಸ್ಸರಂ ಸುಕೇಶಿನಿಯಂ ಗಂಧಭಾಜನೆಂರಸಂಗೆ ಕೊಟ್ಟನಿಂತು ಮಹಾವಿಭೂತಿಯಿಂದಂ ಮದುವೆನಿಂದು ಗಂಧಭಾಜನನೃಪತಿಯುಂ ಸುಕೇಶಿನಿಯೊಳಿಷ್ಟವಿಷಯಕಾಮಭೋಗಂಗಳಂ ಪಲಕಾಲಮನುಭವಿಸುತ್ತರೆ

ದೇವರಿಗೆ ನಮಸ್ಕಾರ ಮಾಡಿ, ಋಷಿಗಳಿಗೆ ವಂದಿಸಿ, ತನ್ನ ಮನೆಗೆ ತೆರಳಿದಳು. ಇತ್ತ ಸುಕೇಶಿನಿ ದೇವರನ್ನು ಪೂಜಿಸಿ, ವಂದಿಸಿದಳು. ಗುರುಪರಂಪರೆಯ ಕ್ರಮದಿಂದ ಋಷಿಗಳನ್ನು ವಂದಿಸಿ, ವ್ರತಗಳನ್ನು ಧಾರಣೆ ಮಾಡಿಕೊಂಡು ಸಿದ್ದರನ್ನು ಅರ್ಚಿಸಿದ ಮಂತ್ರಾಕ್ಷತೆಯನ್ನು ತೆಗೆದುಕೊಂಡು ಹೊಗಿ ತನ್ನ ತಾಯಿತಂದೆಗಳಿಗೆ ಕೊಟ್ಟಳು. ಅವರು ಅದನ್ನು ತಮ್ಮ ತಲೆಯಲ್ಲಿ ಇಟ್ಟುಕೊಂಡರು. ತಾರುಣ್ಯದಿಂದ ಕೂಡಿದ ಮಗಳ ರೂಪವನ್ನು ನೋಡುತ್ತ, ‘ಈಕೆಯನ್ನು ಯಾರಿಗೆ ಮದುವೆ ಮಾಡಿ ಕೊಡಲಿ’ ಎಂದು ತಮ್ಮೊಳಗೆ ಮಾತಾಡಿಕೊಳ್ಳುತ್ತಿದ್ದರು. ಅಷ್ಟರಲ್ಲಿ ರಾಜನು ಆ ಕನ್ನಿಕೆಯ ಸೌಂದರ್ಯವನ್ನು ಕಂಡು ಆಸೆಪಟ್ಟು ಆಕೆಯ ತಾಯಿಯಾದ ಸುರೂಪೆಯ ಬಳಿಗೆ ದೂತರನ್ನು ಕಳುಹಿಸಿ ಬರಮಾಡಿಸಿದನು. ಈ ಕನ್ಯೆಯನ್ನು ಯಾರಿಗೆ ಕೊಡುತ್ತೀರಿ ? – ಎಂದು ಕೇಳಿದನು. ಅದಕ್ಕೆ ಆಕೆ – “ನನಗೆ ವರಾಂಗನೆಂಬ ತಮ್ಮನಿದ್ದಾನೆ, ಅವನ ಮಗ ಜಿತರಂಗನೆಂಬುವನು, ನನಗೆ ಸೋದರಳಿಯನು. ಅವನಿಗೆ ಕೊಡುತ್ತೇವೆ* ಎಂದಳು. ರಾಜನು ಮಧುಸೇನ ಮಧುಸೂದನ ಎಂಬಿಬ್ಬರು ಪ್ರಮುಖರಾದ ಹೆಗ್ಗಡೆಗಳನ್ನು ನಾಗದತ್ತಸೆಟ್ಟಿಯಲ್ಲಿಗೆ ಆತನ ಮಗಳನ್ನು ತನಗೆ ಕೇಳುವುದಕ್ಕಾಗಿ ಕಳುಹಿಸಿದನು. ತನ್ನ ಉತ್ಕಂಠತೆಯಿಂದ ಅವರ ಬಳಿಯಲ್ಲೇ ತಾನೂ ನಾಗದತ್ತನ ಮನೆಗೆ ಹೋಗಿ ಆ ಕನ್ಯೆಯನ್ನು ತನಗೆ ಕೊಡುವಂತೆ ಕೇಳಿ ಅವನ ಸಮ್ಮತಿ ಪಡೆದುಕೊಂಡನು. ನಾಗದತ್ತನು ಎಂಟು ದಿವಸಗಳ ಅಷ್ಟಾಹ್ನಿಕಮಹೋತ್ಸವಗಳನ್ನು ಮಾಡಿ, ಶುಭಕರವಾದ ದಿನ, ವಾರ, ನಕ್ಷತ್ರ, ಮೂಹೂರ್ತ, ಹೋರೆ, ಲಗ್ನಗಳು ತನ್ನ ಮಗಳಿಗೂ ಅನುಕೂಲವಾಗಿ ಇರುವಂದು ಪಾಣಿಗ್ರಹಣ ಪೂರ್ವಕವಾಗಿ ಸುಕೇಶಿಯನ್ನು ಗಂಧಭಾಜನನೆಂಬ ರಾಜನಿಗೆ ಕೊಟ್ಟನು. ಹೀಗೆ ಮಹಾವೈಭವದಿಂದ ಮದುವೆಯಾದ ನಂತರ ಗಂಧಭಾಜನರಾಜನು ಸುಕೇಶಿನಿಯೊಂದಿಗೆ ಇಷ್ಟವಿಷಯಗಳ ಕಾಮಸುಖಗಳನ್ನು ಹಲವು ಕಾಲ ಅನುಭವಿಸುತ್ತಿದ್ದನು. ಹೀಗಿರಲು

ಮತ್ತೊಂದು ದಿವಸಂ ಕೌಸಲಾಪತಿಯಪ್ಪತಿಬಳನೆಂಬರಸಂಗಂ ಕಳಿಂಗಾಪತಿಯಪ್ಪ ಕಳಿಂಗನೆಂಬರಸಂಗಂ ತಮ್ಮೊಳ್ ವಿಗ್ರಹಮಾದೊಡೆ ಗಂಧಭಾಜನನೃಪತಿ ತನ್ನ ಮತಿಶ್ರುತನೆಂಬ ಮಂತ್ತಿಯನಟ್ಟಿ ಇರ್ವರ್ಗಂ ಸಂಮಾಡಿದೊಡೆ ಕಳಿಂಗನೆಂಬರಸಂ ಮಧುಸೂದನನೆಂಬ ಪೆರ್ಗಡೆಯ ಕೆಯ್ಯೊಳ್ ಮದಾಂಧಗಂಧಹಸ್ತಿಯ ಗಂಧಭಾಜನನೃಪತಿಗೆ ಪಾಗುಡಮಟ್ಟಿದೊಡದಂ ಸೊರ್ಕಿನಿಂದಂ ಮಸಗಿದುದಂ ಗಂಧಹಸ್ತಿಯಂ ಸುಕೇಶಿನಿ ಕಂಡು ಜಾತಿಸ್ಮರೆಯಾಗಿ ಮೂರ್ಛೆವೋಗಿರ್ದಳಂ ದಾದಿ ಮೊದಲಾಗಿ ಕೆಲದೊಳಿರ್ದೊರೆಲ್ಲಂ ಚಂದನದ ನೀರ್ಗಳಂ ತಳಿದು ಬೀಸೆ ನೀಡೞಂದೆೞ್ಚತ್ತಳನ್ನೆಗಮರಸನುತ್ತವಳನಾಗಿ ಪರಿತಂದಿದೇನೀಕೆಗೇಕಿಂತಾಯ್ತೆಂದು ಬೆಸಗೊಳೆ ದಾದಿಯಿಂದಳ್ ಸೊರ್ಕಾನೆಯಂ ಕಂಡು ಮೂರ್ಛೆವೋದಳೆಂದು ಪೇೞೊಡಾ ಮಾತನರಸಂ ಕೇಳ್ದು ಮಱುಸೂೞನಾನೆಯಂ ಕಂಡಂಜದಂತಿರೆ ಸುಕೇಶಿನಿಯ ಮಾಡದ ಕೇರ್ಗ್ಗಳೆಲ್ಲಾಯೆಡೆಗಳೊಳಂ ವ್ಯಾಳಂಗಳಪ್ಪಾನೆಗಳಂ ತನ್ನ ಚಿತ್ತಾರಿಗರಿಂದಂ ಬರೆಯಿಸಿದಂ ಮತ್ತೆ ಸುಕೇಶಿನಿಯುಂ ತನ್ನ ಮುನ್ನಿನ ಜನ್ನದೊಳ್ ನೆಗೞ್ದುದೆಲ್ಲಮಂ ಪಟದೊಳ್ ತಾನೆ ಬರೆದಾರುಮಱಯದಂತಿರೇಕಾಂತದೊಳ್ ನೋಡುತ್ತಿರ್ಕುಮಿಂತು ಕಾಲಂ ಸಲೆ ಮತ್ತೊಂದು ದಿವಸಂ ಮುನ್ನಿನ ಗಂಧಹಸ್ತಿಯೊಡನೆ ಬಾದಿಯೊಳ್ ಮೂವತ್ತೆರಡು ಗಜಕ್ರೀಡೆಗಳಿಂದಂ ನೀಡುಂ ಬೇಗಂ ಕ್ರೀಡಿಸಿಯಾನೆಯಂ ಸೇದೆಗೆಡಿಸಿ ತನ್ನ ಬಸಕ್ಕೆ, ಮಾಡಿಯೇಱಯಂಕುಸಮಂ

ಮತ್ತೊಂದು ದಿನ ಕೌಶಲದೇಶಕ್ಕೆ ಒಡೆಯನಾದ ಅತಿಬಳನೆಂಬ ರಾಜನಿಗೂ ಕಳಿಂಗ ದೇಶದ ಒಡೆಯನಾದ ಕಳಿಂಗನೆಂಬ ಅರಸನಿಗೂ ತಮ್ಮೊಳಗೆ ಯುದ್ದವಾಯಿತು. ಆ ಸಂದರ್ಭದಲ್ಲಿ ಗಂಧಭಾಜರಾಜನು ಮತಿಶ್ರುತನೆಂಬ ತನ್ನ ಮಂತ್ರಯನ್ನು ಕಳುಹಿಸಿ ಇಬ್ಬರಿಗೂ ಸಂಯನ್ನು ಮಾಡಿದನು. ಕಳಿಂಗರಾಜನು ಮಧುಸೂದನನೆಂಬ ಅಕಾರಿಯ ಕೈಯಲ್ಲಿ ಸೊಕ್ಕಿ ಕಂಗೆಟ್ಟ ಗಂಧವಾರ ಣವನ್ನು ಗಂಧಭಾಜನರಾಜನಿಗೆ ಕಾಣಿಕೆಯಾಗಿ ಕಳುಹಿಸಿಕೊಟ್ಟನು. ಗರ್ವೋದ್ರೇಕದಿಂದ ಕೂಡಿದ ಆ ಮದ್ದಾನೆಯನ್ನು ಸುಕೇಶಿನಿಯು ಕಂಡು ಪೂರ್ವಜನ್ನದ ಸ್ಮರಣೆ ಬಂದವಳಾಗಿ ಮುರ್ಛಿತಳಾದಳು. ಆಗ ಬಳಿಯಲ್ಲಿದ್ದ ದಾದಿಯರು ಮುಂತಾದವರು ಶ್ರೀಗಂಧದ ನೀರನ್ನು ಸೇಚಿಸಿ ಗಾಳಿ ಹಾಕಲು ಬಹಳ ಹೊತ್ತಿನ ನಂತರ ಎಚ್ಚೆತ್ತಳು. ಅಷ್ಟರಲ್ಲಿ ರಾಜನು ಉತ್ಕಂಠತನಾಗಿ ಬಂದು ‘ಇವರಿಗೆ ಹೀಗೆ ಆಗಲು ಕಾರಣವೇನು ?’ ಎಂದು ಕೇಳಿದನು. ಆಗ ದಾದಿಯು “ಈಕೆ ಮದ್ದಾನೆಯನ್ನು ಕಂಡು ಮೂರ್ಛೆಹೋದಳು* ಎಂದು ಹೇಳಿದಳು. ಆ ಮಾತನ್ನು ರಾಜನು ಕೇಳಿ ಆಕೆ ಮತ್ತೊಂದು ಬಾರಿ ಆನೆಯನ್ನು ಕಂಡಾಗ ಹೆದರದಂತೆ ಮಾಡುವುದಕ್ಕಾಗಿ ಸುಕೇಶಿನಿಯ ಮನೆಯ ಗೋಡೆಗಳ ಎಲ್ಲಾ ಕಡೆಗಳಲ್ಲಿಯೂ ತುಂಟಾಟ ಮಾಡತಕ್ಕ ಆನೆಗಳನ್ನು ತನ್ನ ಚಿತ್ರಕಾರರಿಂದ ಬರೆಯಿಸಿದನು. ಆಮೇಲೆ ಸುಕೇಶಿನಿ ತನ್ನ ಹಿಂದಿನ ಜನ್ಮದಲ್ಲಿ ನಡೆದುದೆಲ್ಲವನ್ನೂ ಪಟದಲ್ಲಿ ತಾನೇ ಬರೆದು ಯಾರೂ ತಿಳಿಯದ ಹಾಗೆ ಒಬ್ಬಳೇ ಇದ್ದು ಹೀಗೆಯೇ ಕಾಲಕಳೆಯಿತು. ಮತ್ತೊಂದು ದಿವಸ ಗಂಧಭಾಜನನು ಹಿಂದಿನ ಮದ್ದಾನೆಯೊಡನೆ ಖೆಡ್ಡಾದಲ್ಲಿ ಮೂವತ್ತೆರಡು ಸಾರಿ ಗಜಕ್ರೀಡೆಗಳನ್ನು ಬಹಳ ಹೊತ್ತಿನವರೆಗೆ ನಡೆಸಿ ಆನೆಯನ್ನು ಬಳಲಿಸಿ ತನ್ನ ವಶಕ್ಕೆ ತಂದನು. ಅದರ ಮೇಲೆರಿ ಅಂಕುಶವನ್ನು ಹೊಳೆಯಿಸುತ್ತ, ರಾಣಿಯ ಬಳಿಗೆ ಬಂದು ನಿಂತನು. “ನಾನು ಹೀಗೆ ಮಾಡಿದ್ದು ಆಗಬಹುದೇ ? ಮೆಚ್ಚಿದೆಯಾ ? ಎಂದು ತನ್ನ ಸಾಹಸವನ್ನು ಹೇಳಿ ಮೆರೆದುಕೊಂಡನು. ಆಗ ಸುಕೇಶಿನಿ ಹೀಗೆಂದಳು – –

ಪೊಳೆಯಿಸುತ್ತಮರಸಿಯಲ್ಲಿಗೆ ವಂದು ನಿಂದಿತಂಕ್ಕುಮೆ ಮಚ್ಚಿದಾ ಎಂದು ತನ್ನ ಸಾಹಸಮಂ ಪೇೞ್ದು ಮೆಱೆಯೆ ಸುಕೇಶಿನಿಯೆಂದೊಳಿದೇನೆಂಬಾನೆ ತಗರೊಳೋರಂತಪ್ಪುದು ಚಂದನಮಲಯಮೆಂಬ ಪಿರಿಯ ಪರ್ವತದೊಳ್ ಇಂದ್ರನೀಲಮಾಣಿಕದೊಳೋರಂತಪ್ಪ ಬಣ್ಣಮನೊಡೆಯದು ಮಲಯಸುಂದರನೆಂಬಾನೆಯುಂಟು ಹಸ್ತಿಯೂಥಕ್ಕೆಱೆಯನಪ್ಪುದು ಎಲ್ಲಾ ಕಾಲಮುಂ ಮದದಿಂದಂ ಪೆರ್ಚುತ್ತಿರ್ದುದು ಕೆಂದಾವರೆಯ ವಣ್ಣದೊಳೋರಂತಪ್ಪ ಬಣ್ಣಮನೊಡೆಯ ಪದ್ಮಾವತಿಯೆಂಬ ಪಿಡಿಯೊಡನೆ ಕ್ರೀಡಿಸುತ್ತಿರ್ಪಾನೆಯಂ ನಿನ್ನ ವಸಕ್ಕೆ ಮಾಡಿ ಪಿಡಿದೇೞಕೊಂಡು ವಂದೊಡೆ ನಿನ್ನ ಗಜಪ್ರಿಯತೆಯುಮೇೞಯಾಡಲ್ ಬಲ್ಮೆಯುಂ ಕಲಿತನಮುಂ ಸಾಹಸಮುಂ ಗಂಡಗುಣಮುಮ ನಱಯಲಕ್ಕುಮಾಯಾನೆಯುಂ ತಂದಂದು ಗಂಡರ್ ನಿನ್ನನ್ನರೀ ಭುವನದೊಳಾರುಮಿಲ್ಲೆಂದೊಸೆದು ಮಚ್ಚಿ ಪೊಗೞ್ವೆನೆಂದೊಡರಸನಿಂತೆಂದಂ ನೀನಪ್ಪೊಡಿಲ್ಲಿ ಪುಟ್ಟಿದ ಆಯಾನೆಯುಮನೆಲ್ಲಿ ಕಂಡೆಯೆಂತಱವೆಂಯೆಂದು ಬೆಸಗೊಳೆ ಸುಕೇಶಿನಿಯಿಂತೆದಳ್ ಆಂ ಮುನ್ನಿನ ಜನ್ಮದೊಳ್ ಮನೋವೇಗೆಯೆನೆಂಬ ವಿದ್ಯಾಧರಿ ಎನ್ನಂದಿನ ಭರ್ತಾರಂ ಮಣಿಚೂಳನೆಂಬೊಂ ವಿದ್ಯಾಧರನಾತನೊಡನೆ ಭೌಮವಿಹಾರಾರ್ಥಂ ತೊೞಲ್ವಲ್ಲಿ ಚಂದನಮಲಯಮೆಂಬ ಪರ್ವತದೊಳ್ ಕರಿಣೀವೃಂದಂಬೆರಸಾಡುವ ಕರಿಪತಿಯನೈರಾವಣಸನ್ನಿಭಮಂ ಕಂಡೆನೆಂದುರ್ಕೆವದಿಂದಂ ಪೇೞ್ದೊಡಾ ಮಾತನರಸಂ ಕೇಳು ಪೂರ್ವಜನ್ಮಾಂತರದೊಳ್ ಕಟ್ಟೆಪಟ್ಟ ಮುಳಿಸನೊಡೆಯೊಂ ತನ್ನುಳ್ಳ ಸಮಸ್ತಬಲಂಬೆರಸು ಪೋಗಿ

“ಇದೇನು ಮಹಾ ! ಕ್ಷುಲ್ಲಕವಾದ ಆನೆ. ಇದು ಟಗರಿನಂತಿರುವುದು. ಚಂದನಮಲಯವೆಂಬ ದೊಡ್ಡ ಪರ್ವತದಲ್ಲಿ ಇಂದ್ರನೀಲಮಾಣಿಕ್ಯದ ಹಾಗಿರುವ ಬಣ್ಣವನ್ನುಳ್ಳ ಮಲಯಸುಂದರನೆಂಬ ಆನೆಯಿದೆ. ಅದು ಆನೆಗಳ ಹಿಂಡಿಗೆ ಒಡೆಯನಾಗಿರುವುದು. ಎಲ್ಲಾ ಕಾಲದಲ್ಲಿಯೂ ಸೊಕ್ಕೇರಿಕೊಂಡಿರುವುದು. ಕೆಂಪು ತಾವರೆಯ ಬಣ್ಣದ ಹಾಗಿರುವ ಬಣ್ಣವುಳ್ಳ ಪದ್ಮಾವತಿಯೆಂಬ ಹೆಣ್ಣಾನೆಯೊಡನೆ ಆಡುತ್ತಿರುವ ಆ ಆನೆಯನ್ನು ನೀನು ವಶಮಾಡಿ ಹಿಡಿದು ಅದನ್ನೇರಿಕೊಂಡು ಬಂದರೆ ಆನೆಸವಾರಿಯಲ್ಲಿ ನಿನಗಿರುವ ಪ್ರೀತಿಯನ್ನೂ ಪ್ರಾಢಿಮೆಯನ್ನೂ ಪೌರುಷವನ್ನೂ ತಿಳಿಯಬಹುದು. ಆ ಆನೆಯನ್ನೂ ನೀನು ತಂದೆಯಾದರೆ, ನಿನ್ನಂತಹ ಗಂಡುಗಲಿಗಳು ಈ ಲೋಕದಲ್ಲಿ ಯಾರೂ ಇಲ್ಲ – ಎಂದು ಪ್ರೀತಿಪಟ್ಟು ಮೆಚ್ಚಿ ನಿನ್ನನ್ನು ಹೊಗಳುವೆನು – * ಎಂದಳು. ಆಗ ರಾಜನು ಹೀಗೆಂದನು – “ನೀನಾದರೆ ಹುಟ್ಟಿದ್ದು ಇಲ್ಲಿ. ಆ ಆನೆಯನ್ನು ಎಲ್ಲಿ ಕಂಡೆ ಮತ್ತು ಅದು ನಿನಗೆ ಹೇಗೆ ಗೊತ್ತು ? * ಎಂದು ಕೇಳಲು ಸುಕೇಶಿನಿ ಹೀಗೆಂದಳು – “ನಾನು ಹಿಂದಿನ ಜನ್ಮದಲ್ಲಿ ಮನೋವೇಗೆ ಎಂಬ ವಿದ್ಯಾಧರಿಯಾಗಿದ್ದೆನು. ಆಗಿನ ನನ್ನ ಗಂಡನು ಮಣಿಚೂಳನೆಂಬ ವಿದ್ಯಾಧರನು. ನಾನು ಆತನೊಡನೆ ಭೂಮಿಯ ಮೇಲೆ ಸಂಚಾರ ಮಾಡುವ ವಿನೊದಕ್ಕಾಗಿ ಸುತ್ತುಡಾತ್ತಿದ್ದಾಗ ಚಂದನಮಲಯವೆಂಬ ಬೆಟ್ಟದಲ್ಲಿ ಹೆಣ್ಣಾನೆಗಳ ಹಿಂಡನ್ನು ಕೂಡಿಕೊಂಡು ಕ್ರೀಡಿಸತಕ್ಕ ಆನೆಗಳೊಡೆಯನನ್ನು ಕಂಡೆನು. ಅದು ಇಂದ್ರನ ಐರಾವತದಂತೆ ಕಾಣುತ್ತಿತ್ತು – * ಎಂದು ಕಪಟದಿಂದ ಹೇಳಿದನು. ಆ ಮಾತನ್ನು ರಾಜನು ಕೇಳಿ ಹಿಂದಿನ ಯಾವುದೋ ಜನ್ಮದಲ್ಲಿ ಕಟ್ಟಲ್ಪಟ್ಟ ಕೋಪವುಳ್ಳವನಾಗಿ ತನ್ನಲ್ಲಿದ್ದ ಎಲ್ಲಾ ಸೈನ್ಯವನ್ನೂ ಕೂಡಿಕೊಂಡು ಹೊಗಿ ಮಲುಪರ್ವತವೆಲ್ಲವನ್ನೂ ಆವರಿಸಿ ಸುತ್ತಲೂ ಮುತ್ತಗೆ ಹಾಕಿದನು. ಆಗ ಮೋಡದ ಶಬ್ದದಂತೆ ಮೃದು ಮತ್ತು ಗಂಭೀರವಾದ

ಮಲಯಪರ್ವತಮೆಲ್ಲಮಂ ಬಳಸಿ ಸುತ್ತಿಮುತ್ತಿದಾಗಳಿಂದ್ರನೀಲಮಾಣಿಕದ ತೇಪದೊಳೋರಂತಪ್ಪ ಮೆಯ್ಯನೊಡೆಯ ಗಜಪತಿಯುಂ ಮುಗಿಲಧ್ವನಿಯ ಮೆಲ್ಗಂಭೀರಮಪ್ಪ ಗರ್ಜನೆನೊಡೆಯದುಂ ಬಂದು ಪಡೆಯೆಲ್ಲಮಂ ಹತವಿತತಕೋಳಾಹಳಮೆೞೆದು ಕೊಲ್ವುದನಾದಮಾನುಂ ಕಲಿಯಪ್ಪುದನರಸಂ ಕಂಡು ಪಿಡಿಯಲಾಱದಾನೆಯಂ ಕೊಂದೆರಡುಂ ನಿಡಿಯ ತೋರಮಪ್ಪ ಕೊಂಬುಗಳುಮಂ ಕುಂಭಸ್ಥಳದ ಮುತ್ತುಗಳುಮಂ ಕೊಂಡೊಸಗೆಯಿಂದಂ ಬೇಗಂ ಚಂಪಾಪುರಕ್ಕೆ ವಂದರಮನೆಯಂ ಪೊಕ್ಕರಸಿಯಂ ಕಂಡು ನಿನ್ನ ನಚ್ಚುವ ಮಲಯ ಕೊಂಬುಗಳುಮಂ ಮುತ್ತುಗಳುಮಂ ಕೊಳ್ಳೆಂದವಂ ಸುಕೇಶಿನಿಯ ಮುಂದೆ ತಂದಿಟ್ಟೊಡೆ ಸುಕೇಶಿನಿಮಯುಂ ಹಾ ಮಲಯಸುಂದರಾ ಹಾ ಎನ್ನ ನಲ್ಲನೆ ಹಾ ಎನ್ನ ಮಲಯಸುಂದರನಪ್ಪ ಸ್ವಾಮಿಯೆಂದು ಪ್ರಳಾಪಂಗೆಯ್ದು ಎರಡು ಕೊಂಬುಗಳುಮಂ ತೞ್ಕೈಸಿಯಾದ ಮಾನುಂ ಬಿಗಿದಪ್ಪಿಕೊಂಡು ಸತ್ತಳ್ ಸುಕೇಶಿನಿ ಸತ್ತುದರ್ಕ್ಕರಸಂ ಮೊದಲಾಗಿ ಪರಿವಾರಮೆಲ್ಲಮುಂ ಬೆಱಗಾಗಿ ವಿಸ್ಮಯಂಬಟ್ಟು ದುಃಖಂಗೆಯ್ದರ್ ಕೆಲವು ದಿವಸದಿಂ ಯಶೋಧರರೆಂಬ ಕೇವಲಜ್ಞಾನಿಗಳ್ ವಿಹಾರಿಸುತ್ತಮಾ ಚಂಪಾನಗರಕ್ಕೆ ವಂದು ಪ್ರಮದೋದ್ಯಾನವನದೊಳಿರ್ದರೆಂಬ ಮಾತನರಸಂ ರಿಸಿನಿವೇದಕನಿಂದಱದು ಸಪರಿವಾರಂಬೆರಸು ಬಂದರ್ಚಿಸಿ ಯಥೋಚಿತಸ್ಥಾನದೊಳಿರ್ದಂ ಮತ್ತಂ ನಾಗದತ್ತಸೆಟ್ಟಿಯುಂ ಸುರೂಪೆಯುಂ ವರಾಂಗನುಂ ಪ್ರ್ರಿಯಂಗುವುಂ ಮೊದಲಾಗೊಡೆಯ ಶ್ರಾವಕಜನಂಗಳ್ ಬಂದರ್ಚಿಸಿ ತಂತಮ್ಮೆಡೆಯೊಳಿರ್ದು ಧರ್ಮಮಂ ಕೇಳ್ದು ತದನಂತರಮೆ ವೈರಾಗ್ಯಮಾಗಿ ಸುಕೇಶಿನಿಯ ದುಃಖಮಂ ಸೈರಿಸಲಾಱದೆ ಸುಕೇಶಿನಿಯ ತಂದೆಯಪ್ಪ ನಾಗದತ್ತಸೆಟ್ಟಿಯುಂ ತಾಯ್

ಗರ್ಜನೆಯನ್ನುಳ್ಳ, ಇಂದ್ರನೀಲ ಮಾಣಿಕ್ಯದ ಕಾಂತಿಯನ್ನು ಹೋಲುವ ದೇಹವುಳ್ಳ ಆನೆಗಳ ರಾಜನು ಬಂದು ರಾಜನ ಸೈನ್ಯನೆಲ್ಲಾ ಚಲ್ಲಾಪಿಲ್ಲಿಯಾಗುವಂತೆ ಹೊಡೆದು ಎಳೆದು ಕೊಲ್ಲಲು ತೊಡಗಿತು. ಈ ಆನೆ ಅತ್ಯಂತ ಶೌರ್ಯವುಳ್ಳದೆಂಬುದನ್ನು ರಾಜನು ಕಂಡು, ಅದನ್ನು ಹಿಡಿಯಲಾರದೆ ಆ ಆನೆಯನ್ನು ಕೊಂದು ಅದರ ಉದ್ದವಾದ ಮತ್ತು ದಪ್ಪವಾದ ಎರಡು ದಾಡೆಗಳನ್ನೂ ಅದರ ತಲೆಯ ಮುತ್ತುಗಳನ್ನು ತೆಗೆದುಕೊಂಡು, ಸಂತೋಷವಾರ್ತೆಯೊಂದಿಗೆ ಬೇಗನೆ ಚಂಪಾಪುರಕ್ಕೆ ಬಂದನು. ಅರಮನೆಯನ್ನು ಪ್ರವೇಶಿಸಿ ಅರಸಿಯನ್ನು ಕಂಡು “ನಿನ್ನ ಪ್ರೀತಿಯ ಮಲಯಸುಂದರನ ದಾಡೆಗಳನ್ನೂ ಮುತ್ತುಗಳನ್ನೂ, ಇದೋ, ತೆಗೆದುಕೋ” ಎಂದು ಅವನ್ನು ಸುಕೇಶಿನಿ ಎದುರಿಗೆ ತಂದಿಟ್ಟನು. ಆಗ ಅವಳು ಹಾ ಮಲಯಸುಂದರಾ, ಹಾ ನನ್ನ ಪ್ರಿಯನೇ ನನ್ನ ಮಲಯಸುಂದರನಾದ ಒಡೆಯನೇ ! ’ ಎಂದು ಅತ್ತು ಎರಡು ದಾಡೆಗಳನ್ನೂ ಗಾಢವಾಗಿ ಅಪ್ಪಿಕೊಂಡು ಪ್ರಾಣಬಿಟ್ಟಳು. ಸುಕೇಶಿನಿ ಸತ್ತುದಕ್ಕಾಗಿ ರಾಜನೂ ಪರಿವಾರವೆಲ್ಲವೂ ಆಶ್ವರ್ಯಪಟ್ಟು ದುಃಖಿಸಿದರು. ಕೆಲವು ದಿವಸಗಳ ನಂತರ ಯಶೋಧರರೆಂಬ ಕೇವಲಜ್ಞಾನವುಳ್ಳ ಋಷಿಗಳು ಸಂಚಾರ ಮಾಡುತ್ತ ಆ ಚಂಪಾನಗರಕ್ಕೆ ಬಂದು ಪ್ರಮದೋದ್ಯಾನದಲ್ಲಿ ಇದ್ದಾರೆ – ಎಂಬ ಸಂಗತಿಯನ್ನು ರಾಜನು ಋಷಿನಿವೇದಕನ ಮಾತಿನಿಂದ ತಿಳಿದು ಪರಿವಾರಸಮೇತನಾಗಿ ಬಂದು ಅವರನ್ನು ಪೂಜಿಸಿ ಯಥೋಚಿತವಾದ ಸ್ಥಾನದಲ್ಲಿ ಇದ್ದನು. ಆ ಮೇಲೆ ನಾಗದತ್ತ ಸೆಟ್ಟಿ, ಸುರೂಪೆ, ವರಾಂಗ, ಪ್ರಿಯಂಗು – ಮುಂತಾಗಿರುವ ಶ್ರಾವಕಜನರು ಬಂದು ಪೂಜಿಸಿ ತಮ್ಮ ತಮ್ಮ ಸ್ಥಾನಗಳಲ್ಲಿ ಇದ್ದು ಧರ್ಮಬೋದನೆಯನ್ನು ಕೇಳಿದರು. ಅನಂತರ ವೈರಾಗ್ಯವುಂಟಾಗಿ, ಸುಕೇಶಿನಿಯ ಶೋಕವನ್ನು ಸಹಿಸಲಾರದೆ, ಅವಳ ತಂದೆ ನಾಗದತ್ತ ಸೆಟ್ಟಿ, ತಾಯಿಯಾದ ಸುರೂಪೆ,

ಸುರೂಪೆಯುಂ ಮಾವನಪ್ಪ ವರಾಂಗನುಂ ವರಾಂಗನ ಭಾರ್ಯೆಯಪ್ಪ ಪ್ರಿಯಂಗುವುಮಂತು ನಾಲ್ವರುಮೆೞ್ದಭಿಮುಖರಾಗಿ ದೀಕ್ಷಾಪ್ರಸಾದಂಗೆಯ್ಯಿಂ ಭಟಾರಾ ಎಂದು ಬೇಡಿ ತಪಂಬಟ್ಟರ್ ಮತ್ತಂ ಸುಕೇಶಿನಿಯಾ ಮಲಯಸುಂದರನೆಂಬಾನೆಯ ಕೊಂಬುಗಳನಪ್ಪಿ ಸತ್ತಳೆಂಬ ಮಾತಂ ವರಾಂಗನುಂ ಕೇಳ್ದು ಜನ್ಮಾನುಬಂಯಪ್ಪ ಸ್ನೇಹಂ ಕಾರಣಮಾಗಿ ದುಃಖಮಂ ಸೈರಿಸಲಾಱದೆ ತಪಂಬಟ್ಟು ನಿದಾನಸಹಿತಂ ತಪಂಗೆಯ್ದನಿತ್ತ ಗಂಧಭಾಜನನೃಪತಿ ಯಶೋಧರಕೇವಲಿಗಳನಿತೆಂದು ಬೆಸಗೊಂಡಂ ಭಟಾರಾ ಸುಕೇಶಿನಿ ಮಲಯಸುಂದರನೆಂಬಾನೆಯ ಕೊಂಬುಗಳನಪ್ಪಿಕೊಂಡು ಸತ್ತುದರ್ಕೆ ಕಾರಣಮೇನೆಂದು ಬೆಸಗೊಂಡೊಡೆ ಕೇವಲಜ್ಞಾನಿಗಳಿಂತೆಂದು ಪೇೞ್ದರ್ ದಕ್ಷಿಣಾಪಥದೊಳ್ ದ್ರವಿಳವಿಷಯದೊಳ್ ದಕ್ಷಿಣಮಧುರೆಯೆಂಬುದು ಪೊೞಲದನಾ ಳ್ವೊಂ ಸುಂದರ ಪಾಂಡ್ಯನೆಂಬೊನರಸನಾತನರಸಿಯಮೃತಮಹಾದೇವಿಯೆಂಬೊಳಂತವರ್ಗ್ಗಳಿಷ್ಟವಿಷಯ

ಕಾಮಭೋಗಂಗಳನನುಭವಿಸುತ್ತಿದ್ದರೆ ಮತ್ತಮಾ ಪೊೞಲೊಳಾರ್ಯನಂದಿಯೆಂಬೊಂ ಸೆಟ್ಟಿಯಾತನ ಪರದಿಯವಿಯೆಂಬೊಳಾ ಇರ್ವ್ವರ್ಗ್ಗಂ ಸುಕೀರ್ತಿಯೆಂಬೊಳ್ ಮಗಳಾದಳ್ ಮತ್ತೊರ್ವನಾ ಪೊೞಲೊಳ್ ಸುದರ್ಶನನೆಂಬೊಂ ಪರದನಾತನ ಪರದಿ ವೀರಶ್ರೀಯೆಂಬೊಳಾಯಿರ್ವ್ವರ್ಗ್ಗಂ ಮಗಂ ಪ್ರಿಯದರ್ಶನನೆಂಬೊನಾತಂಗಾ ಸುಕೀರ್ತಿಯಂ ಕೊಟ್ಟರ್ ಸುಕೀರ್ತಿಯ ಕೆಳದಿ ಮಾಲೆಗಾರ್ತಿ ಪ್ರಿಯಸೇನೆಯೆಂಬೊಳಂತವರ್ಗ್ಗಳಿಷ್ಟ – ವಿಷಯಕಾಮಭೋಗಂಗಳನನುಭವಿಸುತ್ತಿರೆ ಮತ್ತೊಂದು ದಿವಸಂ

ಮಾವನಾದ ವರಾಂಗ, ವರಾಂಗನ ಹೆಂಡತಿಯಾದ ಪ್ರಿಯಂಗು – ಅಂತು ನಾಲ್ಕು ಮಂದಿಯೂ ಎದ್ದು ಮುನಿಗಳಿಗೆ ಎದುರಾಗಿ “ಸ್ವಾಮೀ, ದೀಕ್ಷೆಯನ್ನು ಅನುಗ್ರಹಿಸಿರಿ* ಎಂದು ಪ್ರಾರ್ಥಿಸಿ ದೀಕ್ಷೆ ಪಡೆದು ತಪಸ್ಸು ಮಾಡಿದರು. ಆ ಮೇಲೆ ಸುಕೇಶಿನಿ ಆ ಮಲಯಸುಂದರನೆಂಬ ಆನೆಯ ಕೋಡುಗಳನ್ನು ಅಪ್ಪಿಕೊಂಡು ಸತ್ತಳೆಂಬ ಸುದ್ದಿಯನ್ನು ವರಾಂಗನು ಕೇಳಿ, ಜನ್ಮಾಂತರದಿಂದ ಬಂದಿದ್ದ ಪ್ರೀತಿಯೇ ಕಾರಣವಾಗಿ ವ್ಯಸನವನ್ನು ಸಹಿಸಲಾರದೆ ತಪಸ್ಸನ್ನು ಸ್ವೀಕರಿಸಿ ಸಂಕಲ್ಪದೊಡನೆ ತಪಸ್ಸನ್ನು ಮಾಡಿದನು. ಇತ್ತ ಗಂದಭಾಜನರಾಜನು ಯಶೋಧರಮುನಿಗಳನ್ನು ಕುರಿತು “ಸ್ವಾಮೀ, ಸುಕೇಶಿನಿಯು ಮಲಯಸುಂದರನೆಂಬ ಆನೆಯ ದಾಡೆಗಳನ್ನು ಅಪ್ಪಿಕೊಂಡು ಸತ್ತುದಕ್ಕೆ ಕಾರಣವೇನು? – ಎಂದು ಕೇಳಿದನು. ಅದಕ್ಕೆ ಕೇವಲಜ್ಞಾನಿಗಳಾದ ಯಶೋಧರಮುನಿಗಳು ಹೀಗೆಂದರು – ದಕ್ಷಿಣಾಪಥದಲ್ಲಿರುವ ದ್ರಾವಿಡ ದೇಶದಲ್ಲಿ ದಕ್ಷಿಣಮಧುರೆ ಎಂಬ ಪಟ್ಟಣವಿದೆ. ಅದನ್ನು ಆಳುವವನು ಸುಂದರಪಾಂಡ್ಯನೆಂಬ ರಾಜನು. ಅವನ ಪತ್ನಿ ಮಹಾದೇವಿಯೆಂಬುವಳು. ಅಂತು ಅವರು ತಮಗೆ ಪ್ರಿಯವಾದ ಸುಖಗಳನ್ನು ಅನುಭವಿಸುತ್ತ ಇದ್ದರು. ಮತ್ತು, ಆ ಪಟ್ಟಣದಲ್ಲಿ ಆರ್ಯನಂದಿಯೆಂಬ ಸೆಟ್ಟಿಯಿದ್ದನು. ಅವನ ಪತ್ನಿ ಅವಿ ಎಂಬವಳು. ಆ ಇಬ್ಬರಿಗೆ ಸುಕೀರ್ತಿ ಎಂಬ ಮಗಳಾದಳು. ಆ ಪಟ್ಟಣದಲ್ಲಿ ಸುದರ್ಶನನೆಂಬ ಮತ್ತೊಬ್ಬ ವರ್ತಕನಿದ್ದನು. ಅವನ ಹೆಂಡತಿ ವೀರಶ್ರೀಯೆಂಬಾಕೆ. ಆ ಇಬ್ಬರಿಗೂ ಪ್ರಿಯದರ್ಶನನೆಂಬುವನು ಮಗನು. ಅವನಿಗೆ ಸುಕೀರ್ತಿಯನ್ನು ಕೊಟ್ಟರು. ಸುಕೀರ್ತಿಯ ಗೆಳತಿ, ಮಾಲೆಗಾರ್ತಿಯಾದ ಪ್ರಿಯಸೇನೆ ಎಂಬುವಳು. ಅಂತು ಅವರು ಇಷ್ಟವಿಷಯದ ಕಾಮಸುಖಗಳನ್ನು ಅನುಭವಿಸುತ್ತ ಇದ್ದರು. ಹೀಗಿರಲು ಮತ್ತೊಂದು ದಿನ ಸುಕೀರ್ತಿ

ಸುಕೀರ್ತಿ ತನ್ನ ಭರ್ತಾರನನಿಂತೆಂದಳಡವಿಯೊಳಂ ಪರ್ವತಂಗಳೊಳಂ ಪುಳಿನ ಸ್ಥಳಂಗಳೊಳಮೆನಗೆ ಕ್ರೀಡಿಸಲೞಯಾದುದೆನೆ ನಿನ್ನೞಯಂ ನೆಱಪಲಕ್ಕುಮೆಂದು ಪ್ರಿಯದರ್ಶನನುಂ ಸುಕೀರ್ತಿಯುಂ ಪ್ರಿಯಸೇನೆಯುಮಂತು ಮೂವರಂ ಪರಿವಾರಸಹಿತಮಡವಿಗೆ ಪೋಗಿಯಲ್ಲಿ ಕಾನನವನಸರಿತ್ಸರೋವರ ಪ್ರದೇಶಂಗಳೊಳ್ ಪರಿಜನಂಬೆರಸು ತದೀಪ್ಸಿತಪ್ರದೇಶಂಗಳೊಳ್ ವಿಹಾರಿಸಿ ರಮ್ಯಮಪ್ಪ ಗಿರಿನದಿಯ ಪುಷ್ಪಪಲ್ಲವಲತಾಕೀರ್ಣಮಪ್ಪ ಪುಳಿನಸ್ಥಳಂಗಳೊಳ್ ಕ್ರೀಡಿಸುತ್ತಿರ್ಪನ್ನೆಗಂ ಹಸ್ತಿಯೂಥಂ ಬರ್ಪುದಂ ಕಂಡಾಗಳೊಂದು ಮದಾಂಧ ಗಂಧಸಿಂಧುರಂ ಕರಿಣೀವೃಂದಂಗಳಿಂ ಪರಿವೇಷ್ಟಿತನಾಗಿ ಕರಿಣೀಗಣಂಗಳಾ ಕಾಶಪುಷ್ಪಂಗಳಿಂ ಚಾಮರಮಿಕ್ಕೆ ಮೃದುಪಲ್ಲವಂಗಳಂ ಕಬಳಂಗೊಳುತ್ತುಂ ಲೀಲೆಯಿಂ ಬಂದು ಸ್ವಚ್ಚವಿಚ್ಚಳಾಕಾರಮಪ್ಪ ಮಡುವಂ ಪೊಕ್ಕು ಮನೋಹರಿಗಳಪ್ಪ ಕರಿಣೀಗಣದೊಡನೆ ಕ್ರೀಡಿಸುವುದಂ ಮೂವರಂ ಕಂಡು ಹಸ್ತಿಭೋಗಂಗಳೊಳಪ್ಪ ಕಾಂಕ್ಷೆಯಿಂದಂ ನಿದಾನಂಗೆಯ್ದು ತಿರ್ಯಗಾಯುಷ್ಯಮಂ ಕಟ್ಟಿದರಿಂತು ಕಾಲಂ ಸಲೆ ಮತ್ತೊಂದು ದಿವಸಂ ಬಱಸಿಡಿಲ್ ಪೊಡೆದು ಪ್ರಿಯಸೇನೆ ಸತ್ತಳ್ ಪ್ರಿಯದರ್ಶನನೊಂದು ದಿವಸಂ ತನ್ನ ಭಾರ್ಯೆವೆರಸು ಕದಳೀವನದೊಳ್ ಮಱಲುಂದಿದಲ್ಲಿಗೆ ಕಾಳಿಂಗನಾಗು ಬಂದೊಡದಱ ಮೇಗೆಕಾಲಂ ನೀಡಿದೊಡೆ ಕರ್ಚಿತ್ತಾತನುಮಾಗಳೆ ಪರವಶನಾಗಿ ಪ್ರಾಣಪರಿತ್ಯಾಗಂಗೆಯ್ದನಂ ಕಂಡು ಸುಕೀರ್ತಿಯುಂ ಕಾದಲನ ವಿಯೋಗಂ ಕಾರಣಮಾಗೆ ಪ್ರಾಣವಲ್ಲಭನ ಸುರಿಗೆಯಂ ಕೊಂಡು

ತನ್ನ ಗಂಡನೊಡನೆ ಹೀಗೆಂದಳು ಕಾಡು, ಗುಡ್ಡ, ಮರಳು. ಜಾಗಗಳಲ್ಲಿ ಕ್ರೀಡಿಸಬೇಕೆಂದು ನನಗೆ ಬಯಕೆಯಾಗಿದೆ. ಹೀಗೆನ್ನಲು “ನಿನ್ನ ಬಯಕೆಯನ್ನೂ ಈಡೇರಿಸಬಹುದು* ಎಂದು ಪ್ರಿಯದರ್ಶನನು ಒಪ್ಪಿಗೆ ಕೊಟ್ಟನು. ಅದರಂತೆ ಪ್ರಿಯದರ್ಶನ, ಸುಕೀರ್ತಿ, ಪ್ರಿಯಸೇನ – ಅಂತು ಮೂವರೂ ಪರಿವಾರದೊಂದಿಗೆ ಕಾಡಿಗೆ ಹೋದರು. ಅಲ್ಲಿ ಕಾಡು, ಉದ್ಯಾನ, ನದಿ, ಸರೋವರ ಪ್ರದೇಶಗಳಲ್ಲಿ ಸೇವಕಜನರೊಂದಿಗೆ ಅವರಿಗೆ ಇಷ್ಟವಾದ ಸ್ಥಳಗಳಲ್ಲಿ ಸಂಚರಿಸಿ ಮನೋಹರವಾದ ಬೆಟ್ಟದ ಹೊಳೆಯ ಹೂ, ಚಿಗುರು, ಬಳ್ಳಿಗಳಿಂದ ಕೂಡಿದ ಮರಳಿನ ಸ್ಥಳಗಳಲ್ಲಿ ಕ್ರೀಡಿಸುತ್ತಿದ್ದರು. ಅಷ್ಟರಲ್ಲಿ ಒಂದು ಆನೆ ಹಿಂಡು ಬರುವುದನ್ನು ಕಂಡರು. ಆ ಹಿಂಡಿನಲ್ಲಿ ಒಂದು ಸೊಕ್ಕೇರಿ ಕಂಗಾಣದ ಆನೆ ಹೆಣ್ಣಾನೆಗಳ ಹಿಂಡಿನಿಂದ ಆವರಿಸಿದ್ದಿತು. ಹೆಣ್ಣಾನೆ ಹಿಂಡುಗಳು ನಾಣಿಲು ಹೂಗಳಿಂದ ಚಾಮರ ಬೀಸುತ್ತಿರಲು, ಮೆತ್ತಗಿನ ಚಿಗುರುಗಳನ್ನು ಮೆಲ್ಲುತ್ತ ವಿನೋದದಿಂದ ಬಂದು ಅದು ಸ್ವಚ್ಚವಾಗಿ ಹೊಳೆಯುವ ಸ್ವರೂಪವುಳ್ಳ ಮಡುವನ್ನು ಹೊಕ್ಕು ತನ್ನ ಮನಸ್ಸನ್ನು ಸೆಳೆಯತಕ್ಕ ಹೆಣ್ಣಾನೆಗಳ ಹಿಂಡಿನೊಡೆ ಕ್ರೀಡಿಸುತ್ತಿತ್ತು. ಅದನ್ನು ಮೂವರೂ ಕಂಡು, ಆನೆಗಳಾಗಿ ಸುಖವನ್ನು ಅನುಭವಿಸಬೇಕೆಂಬ ಬಯಕೆಯಿಂದ ಸಂಕಲ್ಪ ಮಾಡಿಕೊಂಡು ಪ್ರಾಣಿ ಜೀವನದ ಆಯುಷ್ಯವನ್ನು ಕಟ್ಟಿಕೊಂಡರು. ಹೀಗೆಯೇ ಕಾಲ ಕಳೆಯಲು ಮತ್ತೊಂದು ದಿನ ಬರಸಿಡಿಲು ಬಡಿದು ಪ್ರಿಯಸೇನೆ ಸತ್ತಹೋದಳು. ಪ್ರಿಯದರ್ಶನನು ಒಂದು ದಿವಸ ತನ್ನ ಪತ್ನಿಯೊಂದಿಗೆ ಬಾಳೆತೋಟದಲ್ಲಿ ನಿದ್ರಿಸುತ್ತಿದ್ದನು. ಅಲ್ಲಿಗೆ ಒಂದು ಕಾಳಿಂಗಸರ್ಪ ಬಂತು. ಇವನು ಅದರ ಮೇಲೆ ತನ್ನ ಕಾಲನ್ನು ಚಾಚಿದಾಗ, ಅದು ಕಚ್ಚಿತು. ಅವನು ಆಗಲೇ ಮೂರ್ಛೆ ಹೋಗಿ ಪ್ರಾಣಬಿಟ್ಟನು. ಅವನನ್ನು ನೋಡಿ ಸುಕೀರ್ತಿ ತನ್ನ ಪ್ರಿಯನ ಅಗಲಿಕೆಯೇ ಕಾರಣವಾಗಿ ತನ್ನ ಗಂಡನ ಕತ್ತಿಯನ್ನು ತೆಗೆದು ತನ್ನನ್ನು ತಿವಿದುಕೊಂಡು ಸತ್ತುಹೋದಳು. ಅಂತು ಆ ಮೂವರು

ತನ್ನಂ ತಾನಿಱದು ಸತ್ತಳ್ ಅಂತಾ ಮೂವರುಂ ಸತ್ತು ತೆಂಕಣ ಪಡುವಣ ಸಮುದ್ರದ ತಡಿಯೊಳ್ ಚಂದನಮಲಯಮೆಂಬಾದಮಾನುಂ ರಮ್ಯಮಪ್ಪ ಪರ್ವತದೊಳ್ ಪ್ರಿಯದರ್ಶನನಿಂದ್ರನೀಲ ಮಾಣಿಕದೊಳೋರಂತಪ್ಪ ಮೆಯ್ಯನೊಡೆಯದಾಗಿ ಸುಭದ್ರಜಾತಿಯಪ್ಪಾನೆಗೆ ಮಲಯ ಸುಂದರನೆಂಬಾನೆಯಾಗಿ ಪುಟ್ಟಿದೊಂ ಸುಕೀರ್ತಿಯುಂ ಧವಳವರ್ಣಮಪ್ಪ ಮಲಯಾವತಿಯೆಂಬ ಪಿಡಿಯಾಗಿ ಪುಟ್ಟಿದಳ್ ಪ್ರಿಯಸೇನೆಯುಂ ಕೆಂದಾವರೆಯ ವಣ್ಣದೊಳೋರಂತಪ್ಪ ಮೆಯ್ಯನೊಡೆದು ಪದ್ಮಾವತಿಯೆಂಬ ಪಿಡಿಯಾಗಿ ಪುಟ್ಟಿದಳಾಯೆರಡುಂ ಪಿಡಿಗಳುಂ ಸುಭದ್ರ ಜಾತಿಯಪ್ಪಾನೆಗೆ ಪುಟ್ಟಿದವಂತಾ ಮೂಱರ್ಕಮಾರಣ್ಯನಿವಾಸಿಗಳಪ್ಪ ಜನಂಗಳುಂ ತಾಪಸಾದಿಗಳುಮವಂ ಕಂಡೊರ್ಗ್ಗಳೆಲ್ಲಮೊಸೆದು ಮೆಚ್ಚಿ ತದ್ದೇಹಾನುಸಾರಿಗಳಪ್ಪ ಪೆಸರನಿಟ್ಟುದರಿಂದಾ ನಾಡೊಳ್ ಪ್ರಸಿದ್ದಿಗೆ ಸಂದುವಂತವರ್ಕೆ ಕಾಲಂ ಸಲೆ ಮತ್ತಮಲ್ಲಿ ಯೂಥಾಪತಿ ಭದ್ರಜಾತಿಯಪ್ಪ ಸುಂದರನೆಂಬಾನೆ ಚಾರಣರಿಸಿಯರ್ಕ್ಕಳ ಪಾದಯುಗಳಂಗಳಂ ವಿದ್ಯಾಧರನರ್ಚಿಸಿ ಪೊಡೆವಟ್ಟು ಪೋಪುದಂ ಕಂಡು ತಾನುಂ ನಿಚ್ಚಮಾ ಸ್ಥಿತಿಯೊಳೆ ತಾಮರೆಯ ಪೂಗಳಂ ತಂದರ್ಚಿಸಿ ಪೂಜಿಸಿ ಪೊಡೆವಟ್ಟು ಪೋಕುಮಿಂತು ಪುಣ್ಯಮಂ ನೆರೆಪುತ್ತಂ ಕಾಲಂ ಸಲೆ ಮತ್ತೊಂದು ದಿವಸಂ ಪ್ರಭಂಕರಿಯೆಂಬ ಸರೋವರದೊಳ್ ಮಲಯಸುಂದರಂ ಪೂರ್ವಭವದ ಪ್ರಾಣವಲ್ಲಭೆಯರ್ಕಳಂ ಕಂಡತಿ ಸ್ನೇಹದಿಂದಂ ಪೊರ್ದುಲಾಟಿಸುವುದಂ ಕಂಡು

ಸತ್ತು ನೈಋತ್ಯಸಮುದ್ರದ ತೀರದಲ್ಲಿರುವ ಚಂದನಮಲಯವೆಂಬ ಅತ್ಯಂತ ಮನೋಹರವಾದ ಪರ್ವತದಲ್ಲಿ ಪ್ರಿಯದರ್ಶನನು ಇಂದ್ರನೀಲ ಮಾಣಿಕ್ಯವನ್ನು ಹೋಲುವ ಮೈಬಣ್ಣವುಳ್ಳ ಸುಭದ್ರಜಾತಿಯ ಒಂದು ಆನೆಗೆ ಮಲಯಸುಂದರನೆಂಬ ಆನೆಯಾಗಿ ಹುಟ್ಟಿದನು. ಸುಕೀರ್ತಿಯು ಬಿಳಿಯ ಬಣ್ಣವುಳ್ಳ ಮಲಯಾವತಿಯೆಂಬ ಹೆಣ್ಣಾನೆಯಾಗಿ ಹುಟ್ಟಿದಳು. ಪ್ರಿಯಸೇನೆಯು ಬಣ್ಣವುಳ್ಳ ಮಲಯಾವತಿಯೆಂಬ ಹೆಣ್ಣಾನೆಯಾಗಿ ಹುಟ್ಟಿದಳು. ಪ್ರಿಯಸೇನೆಯು ಕೆಂಪುತಾವರೆಯ ಬಣ್ಣವನ್ನು ಹೋಲುವ ಶರೀರವುಳ್ಳ ಪದ್ಮಾವತಿಯೆಂಬ ಹೆಣ್ಣಾನೆಯಾಗಿ ಹುಟ್ಟಿದಳು. ಆ ಎರಡೂ ಹೆಣ್ಣಾನೆಗಳೂ ಆನೆಗಳಲ್ಲಿ ಉತೃಷ್ಟ ಜಾತಿಯದಾದ ಸುಭದ್ರಜಾತಿಯ ಆನೆಗೆ ಹುಟ್ಟಿದವು. ಅಂತು ಆ ಮೂರು ಆನೆಗಳಿಗೂ ಕಾಡಿನಲ್ಲಿ ವಾಸಮಾಡತಕ್ಕ ಜನರೂ ಋಷಿಗಳು ಮುಂತಾದವರೂ ಅವನ್ನು ಕಂಡವರೆಲ್ಲರೂ ಪ್ರೀತಿಪಟ್ಟು ಮೆಚ್ಚಿ ಅವುಗಳ ದೇಹಗಳಿಗೆ ಅನುಸಾರವಾದ ಹೆಸರುಗಳನ್ನು ಇಟ್ಟುದರಿಂದ ಆ ನಾಡಿನಲ್ಲಿ ಪ್ರಖ್ಯಾತವಾದವು. ಆಂತು ಅವುಗಳು ಹೀಗೆ ಕಾಲ ಕಳೆಯುತ್ತಿರಲು, ಅಲ್ಲಿ ಆನೆಗಳ ಹಿಂಡಿನೊಡೆಯನಾದ ಭದ್ರಜಾತಿಯದಾಗಿರುವ ಸುಂದರನೆಂಬ ಆನೆ ಚಾರಣ ಮುನಿಗಳ ಎರಡೂ ಪಾದಗಳನ್ನು ವಿದ್ಯಾಧರನೋರ್ವನು ಪೂಜಿಸಿ, ಸಾಷ್ಟಾಂಗ ವಂದಿಸಿ ಹೋಗುವುದನ್ನು ಕಂಡಿತು. ತಾನು ಕೂಡ, ನಿತ್ತವೂ ಆದೇ ರೀತಿಯಲ್ಲಿ ತಾವರೆಯ ಹೂಗಳನ್ನು ತಂದು ಪೂಜಿಸಿ, ವಂದಿಸಿ ಹೋಗುತ್ತಿತ್ತು. ಹೀಗೆ ಪುಣ್ಯವನ್ನು ಕೂಡಿಸಿಕೊಳ್ಳುತ್ತ ಕಾಲ ಕಳೆಯಲು, ಮತ್ತೊಂದು ದಿನ ಮಲಯಸುಂದರನು ತನ್ನ ಹಿಂದಿನ ಜನ್ಮದ ಮಡದಿಯನ್ನು ಕಂಡು ಅತಿಶಯವಾದ ಪ್ರೀತಿಯಿಂದ ಸೇರಲು ಇಷ್ಟಪಟ್ಟಿತು. ಅದನ್ನು ಸುಂದರನೆಂಬ ಆನೆ ಕಂಡು, ಹತ್ತಿರ ಹೋಗಲಿಕ್ಕೇ ಬಿಡಲಿಲ್ಲ. ಆದುದರಿಂದ ಮಲಯಸುಂದರನು ಆ ಹೆಣ್ಣಾನೆಗಳ ವರಜಹದಿಂದ ಪರಿತಾಪಗೊಂಡ ಮನಸ್ಸುಳ್ಳುದಾಗಿತ್ತು

ಸುಂದರನೆಂಬಾನೆ ಸಾರಲೀಯದುದಱಂ ತದ್ವಿರಹಪರಿತಪ್ತಮನದಿಂದಂ ಸಲ್ವುದಂ ನವಯೌವನಮನೆಯ್ದಿ ಆತ್ಮಬಲಮನದಱ ಬಲದೊಳ್ ವೃಕ್ಷಭಂಜನ ಸಾಮರ್ಥ್ಯದಿಂ ಪರೀಕ್ಷಿಸಿ ಮಱಯಾನೆಗಳಿಂ ಪರಿಭವಮನದರ್ಕೆ ಕಂಡು ವೃದ್ದನಪ್ಪಾ ಸುಂದರನೊಳ್ ಯುದ್ದಂಗೆಯ್ದು ಕೊಂದಾ ಯೂಥಕ್ಕೆಲ್ಲಮಪತಿಯಾಗಿ ಮಲಯಾವತಿಯುಂ ಪದ್ಮಾವತಿಯುಮನೊಡಗೊಂಡಿಷ್ಟ ವಿಷಯ ಕಾಮಭೋಗಂಗಳನನುಭವಿಸುತ್ತ ಮಾಯೆರಡುಂ ಪಿಡಿಗಳ್ ತಮ್ಮೊಳನ್ಯೋನ್ಯ ಸ್ನೇಹದೊಳ್ ಕೂಡಿದುವು ಮಲಯ ಸುಂದರನ್ ಬಲದ ದೆಸೆಯೊಳ್ ಮಲಯಾವತಿಗೆ ಪೋಪ ದಾಯಮನೆಡದ ದೆಸೆಯೊಳ್ ಪದ್ಮಾವತಿಗೆ ಪೋಪ ದಾಯಮನಿತ್ತಂತು ಪ್ರಭಂಕರಿಯೆಂಬ ಸರೋವರದೊಳ್ ಸ್ವೇಚ್ಚೆಯಿಂ ಕ್ರೀಡಿಸಿ ಪೊಱಮಡುವಾಗಳ್ ಮಲಯಾವತಿಯ ಮಸ್ತಕದೊಳ್ ವಿಕಸಿತ ಸಹಸ್ರಪತ್ರಕುಸುಮವನಿಡುವ ದಾಯಮಂ ಕೊಟ್ಟು ಸಲಿಸುತ್ತಂ ಉೞದ ಪಿಡಿಗಳೆಲ್ಲಮಂ ತೊಱೆದಾಯೆರಡಱೊಳಮಾಸಕ್ತನಾಗಿ ಕಾಮಭೋಗಂಗಳನನುಭವಿಸುತ್ತಮಿಂತು ಸುಖದೊಳಿರ್ಪ್ಪ ಕಾಲದೊಳ್ ಮತ್ತೊಂದು ದಿವಸಂ ಪ್ರಭಂಕರಿಯೆಂಬ ಕೊಳದೊಳ್ ಸ್ವೆಚ್ಚೆಯಿಂ ನೀಡುಂ ಕ್ರೀಡಿಸುತ್ತಂ ತಡಂಬಂದು ಮನಃಪೂರ್ವಕಮಲ್ಲದೆ ಪೊಱಮಡುವಾಗಳ್ ಪದ್ಮಾವತಿ ಬಲದ ದೆಸೆಯೊಳಾಗಿ ಮಲಯಾವತಿ ಯೆಡದ ದೆಸೆಯೊಳಾಗಿ

ಅದು ಹೊಸ ಜವ್ವನವನ್ನು ಪಡೆದು, ತನ್ನ ಶಕ್ತಿಯಿಂದ ಮರಗಳನ್ನು ಮುರಿದು ತನ್ನ ಶಕ್ತಿಯನ್ನು ಪರೀಕ್ಷಿಸಿಕೊಂಡಿತು. ಮುದಿಯಾಗಿರುವ ಸುಂದರನು ಮರಿಯಾನೆಗಳೊಂದಿಗೆ ಕಾದಾಡಿದಾಗಲೇ ಸೋತುಹೋಗುವುದನ್ನೂ ಕಂಡಿತು. ಮಲಯಸುಂದರನು ಈಗ ಸುಂದರನೆಂಬ ಆ ಮುದಿಯಾನೆಯೊಡನೆ ಯುದ್ದಮಾಡಿ, ಅದನ್ನು ಕೊಂದು ಆ ಆನೆಗಳ ಹಿಂಡಿಗೆಲ್ಲ ಒಡೆಯನಾಯಿತು. ಮಲಯಾವತಿಯನ್ನೂ ಪದ್ಮಾವತಿಯನ್ನೂ ಕೂಡಿಕೊಂಡು ತನ್ನ ಪ್ರೀತಿಯ ವಿಷಯಗಳಾದ ಕಾಮಸುಖಗಳನ್ನೂ ಅನುಭವಿಸುತ್ತಿತ್ತು. ಆ ಎರಡೂ ಹೆಣ್ಣಾನೆಗಳು ತಮ್ಮೊಳಗೆ ಪರಸ್ಪರ ಪ್ರೀತಿಯಿಂದ ಕೂಡಿಕೊಂಡವು. ಮಲಯಸುಂದರನು ತನ್ನ ಬಲಗಡೆಯಲ್ಲಿ ಹೋಗುವ ಅವಕಾಶವನ್ನು ಮಲಯಾವತಿಗೂ ಎಡಗಡೆಯಲ್ಲಿ ಹೋಗುವ ಅವಕಾಶವನ್ನು ಪದ್ಮಾವತಿಗೂ ಕೊಟ್ಟು, ಅಂತು ಪ್ರಭಂಕರಿಸರೋವರದಲ್ಲಿ ತನ್ನ ಇಚ್ಚೆಯ ಪ್ರಕಾರ ಆಡಿ ಹೊರಟು ಬರುವಾಗ ಮಲಯಾವತಿಯ ತಲೆಯಲ್ಲಿ ಅರಳಿದ ಸಾವಿರದಳದ ಹೂವನ್ನು ಇಡುವ ಮರ್ಯಾದೆಯ ಅವಕಾಶಕೊಟ್ಟು, ಈ ಗೌರವವನ್ನು ನಿತ್ಯವೂ ಸಲ್ಲಿಸುತ್ತಿತ್ತು. ಉಳಿದ ಹೆಣ್ಣಾನೆಗಳೆಲ್ಲವನ್ನೂ ಬಿಟ್ಟು ಆ ಎರಡರಲ್ಲಿ ಮಾತ್ರ ಪ್ರೀತಿಯುಳ್ಳದಾಗಿ ಕಾಮಸುಖಗಳನ್ನು ಅದು ಅನುಭವಿಸುತ್ತಿತ್ತು. ಹೀಗೆ ಸುಖದಿಂದ ಇರುವ ಕಾಲದಲ್ಲಿ, ಆ ಮೇಲೆ ಒಂದು ದಿನ ಪ್ರಭಂಕರಿಯೆಂಬ ಸರೋವರದಲ್ಲಿ ತನ್ನ ಇಚ್ಚೆಯ ಪ್ರಕಾರ ಹೆಚ್ಚು ಕಾಲ ಅಡಿ ತಡಮಾಡಿ, ಗೊಡವೆಯೇ ಇಲ್ಲದೆ ಹೊರಡುವಾಗ ಪದ್ಮಾವತಿ ಅದರ ಬಲಗಡೆಯಾಗಿಯೂ ಮಲಯಾವತಿ ಎಡಗಡೆಯೂ ಹೊರಟು ಬಂದುವು. ಮದದಿಂದ ಸೊಕ್ಕೇರಿದ ಆ ಮಲಯಸುಂದರನು ಮತ್ತಿನಿಂದ ಮೈಮೇಲಿನ ಎಚ್ಚರವಿಲ್ಲದೆ, ಬಲಗಡೆಯಲ್ಲಿದ್ದ ಪದ್ಮಾವತಿಯನ್ನು ಮಲಯಾವತಿಯೆಂದು ಭ್ರಮಿಸಿ, ಆ ಪದ್ಮಾವತಿಯ ತಲೆಯಲ್ಲಿ ಅರಳಿದ ಸಾವಿರದೆಸಳಿನ ಹೂವನ್ನು ಇಟ್ಟಿತು. ಮಲಯಾವತಿ ಇದನ್ನು ನೋಡಿತು. ಮಲಯಸುಂದರನು ತನ್ನನ್ನು ತಿರಸ್ಕಾರಮಾಡಿದನೆಂದು ಭಾವಿಸಿತು.

ಪೊಱಮಟ್ಟು ಬರೆ ಮದಾಂಧಗಂಧಸಿಂಧುರಂ ಮದದಿಂ ಮೆಯ್ಯಱಯದೆ ಬಲದ ದೆಸೆಯೊಳಿರ್ದ ಪದ್ಮಾವತಿಯಂ ಮಲಯಾವತಿಗೆತ್ತು ಪದ್ಮಾವತಿಯ ಮಸ್ತಕಗೊಳ್ ವಿಕಸಿತ ಸಹಸ್ರಪತ್ರ ಕುಸುಮಮನಿಟ್ಟೊಡೆ ಮಲಯಾವತಿ ನೋಡಿ ತನ್ನಂ ಪರಿಭವಿಸಿದನೆಂದು ಪದ್ಮಾವತಿಯೊಳಪ್ಪ ಪುರುಡುಂ ಕಾರಣಮಾಗಿ ಮುಳಿಸಿನಿಂದಂ ಚಂದನಮಲಯಪರ್ವತದ ತುತ್ತ ತುದಿಯಂ ಬೇಗಂ ಪರಿದಡರ್ದಂತಲ್ಲಿಂದಂ ತನ್ನನಿಕ್ಕಿ ಮಲಯಾವತಿ ಶತಖಂಡಮಾಗಿ ಬಿೞ್ದು ಸತ್ತತ್ತದಱ ಸತ್ತುದಂ ಮಲಯಸುಂದರಂ ಕಂಡು ಮಲಯಾವತಿಯ ವಿಯೋಗದೊಳಾದಮಾನುಂ ದುಃಖಂಗೈದು ಪದ್ಮಾವತಿಯನೊಡಗೊಂಡು ಪೋಯ್ತು ಮತ್ತಾ ಮಲಯಾವತಿಯೆಂಬ ಪಿಡಿ ಸತ್ತು ಸುಕೇಶಿನಿಯೆಂಬೊಳಾದಳಾ ಪದ್ಮಾವತಿಯೆಂಬ ಪಿಡಿಯುಮಾಯುಷ್ಯಾಂತದೊಳ್ ಸತ್ತು ಸುಕೇಶಿನಿಯ ತಾಯ್ ಸುರೂಪೆಯ ಸೋದರ ತಮ್ಮಂ ವರಾಂಗನಾದೊಂ ಮತ್ತಾ ಮಲುಸುಂದರನಿಂದಂ ಕೊಲೆ ಸತ್ತ ಸುಂದರನೆಂಬಾನೆ ಸುವೇಗನೆಂಬ ವಿದ್ಯಾಧರನಿಂದಂ ಪೂಜಿಸೆಪಟ್ಟ ಚಾರಣರಿಷಿಯರ ಪಾದಪದ್ಮಯುಗಳಂಗಳುಮಂ ನೋಡಿಯುಮಶಮಕ್ಕೆ ಸಂದು ತಾನುಂ ತಾಮರೆಯ ಪೂಗಳಂ ತಂದು ಪ್ರತಿದಿನಮರ್ಚಿಸಿ ಪೂಜಿಸಿ ಪೊಡೆಮಟ್ಟು ಪೋಕುಮಾ ಚಾರಣರಿಷಯರಡಿವೊಣರನರ್ಚಿಸಿದ ಪುಣ್ಯದಿಂದಂ ಸತ್ತಿಲ್ಲಿ ನೀಂ ಚಂಪಾಪುರಕ್ಕಧಪತಿಯಯ್ ಗಂಧಭಾಜನನೆಂಬರಸನಾದಯ್ ಸುಕೇಶಿನಿಯುಂ ಜಾತಿಸ್ಮರೆಯಾಗಿ ತನ್ನ ಮುನ್ನಿನ ಭವದ ಭರ್ತಾರನಪ್ಪ ಮಲಯಸುಂದರನಂ ನೆನೆದು ನಿನ್ನಿಂದಂ ಕೊಲೆ ಸತ್ತುದಱ ಕೋೞ್ಕಳನಾದಮಾನುಂ ಬಿಗಿದಪ್ಪಿಕೊಂಡು ಸತ್ತುದರ್ಕಿದು ಕಾರಣಂ ಮತ್ತೆ ನೀಂ

ಪದ್ಮಾವತಿಯ ಮೇಲೆ ಉಂಟಾದ ಹೊಟ್ಟೆಕಿಚ್ಚು ಕಾರಣವಾಗಿ ಕೋಪಗೊಂಡು ಬೇಗನೆ ಹೋಗಿ ಚಂದನ ಮಲಯಪರ್ವತದ ತುತ್ತತುದಿಯನ್ನೇರಿ, ಅಲ್ಲಿಂದ ಕೆಳಕ್ಕೆ ಬಿದ್ದು, ಮಲಯಾವತಿಯು ನೂರಾರು ತುಂಡಾಗಿ ಸತ್ತುಹೋಯಿತು. ಅದು ಸತ್ತುದನ್ನು ಮಲಯಸುಂದರನು ಕಂಡು, ಮಲಯಾವತಿಯ ಅಗಲಿಕೆಯಿಂದ ಅತ್ಯಂತ ದುಃಖಿಸಿ, ಪದ್ಮಾವತಿಯನ್ನು ಕೂಡಿಕೊಂಡು ಹೋಯಿತು. ಅನಂತರ, ಆ ಮಲಯಾವತಿಯೆಂಬ ಹೆಣ್ಣಾನೆ ಸತ್ತು ಸುಕೇಶಿನಿ ಎಂಬವಳಾದಳು. ಆ ಪದ್ಮಾವತಿಯೆಂಬ ಹೆಣ್ಣಾನೆಯೂ ಆಯುಷ್ಯ ಕೊನೆಗೊಳ್ಳಲು ಸತ್ತು ಸುಕೇಶಿನಿಯ ತಾಯಿಯಾದ ಸುರೂಪೆಯ ಸೋದರ ತಮ್ಮನಾದ ವರಾಂಗನೆಬವನಾದನು. ಅಲ್ಲದೆ, ಆ ಮಲಯಸುಂದರನು ಕೊಂದುದರಿಂದ ಸತ್ತ ಸುಂದರನೆಂಬ ಆನೆ ತಾನು ಸಾಯುವುದಕ್ಕೆ ಮೊದಲು ಸುವೇಗನೆಂಬ ವಿದ್ಯಾಧರನಿಂದ ಪೂಜಿತನಾದ ಚಾರಣ ಋಷಿಗಳ ಎರಡು ಪಾದಕಮಲಗಳನ್ನು ನೋಡಿ, ಶಾಂತತೆಯನ್ನು (ಸಮತ್ವಭಾವವನ್ನು) ಹೊಂದಿ ತಾನು ಕೂಡ, ತಾವರೆಯ *ಹೂಗಳನ್ನು ತಂದು ಪ್ರತಿದಿನವೂ ಅರ್ಚನೆ ಮಾಡಿ ಪೂಜಿಸಿ ವಂದಿಸಿ ಹೋಗುತ್ತಿತ್ತು. ಆ ಚಾರಣ ಋಷಿಗಳ ಪಾದಯುಗ್ಮವನ್ನು ಅರ್ಚಿಸಿದ ಪುಣ್ಯದಿಂದಾಗಿ ಸತ್ತ ಮೇಲೆ, ಇಲ್ಲಿ ನೀನು ಈಗ ಚಂಪಾಪುರಕ್ಕೆ ಒಡೆಯನದ ಗಂಧಭಾಜನೆಂಬ ರಾಜನಾಗಿರುವೆ. ಸುಕೇಶಿನಿ ಪೂರ್ವಜನ್ಮದ ನೆನಪನ್ನು ಪಡೆದು. ತನ್ನ ಹಿಂದಿನ ಜನ್ಮದ ಗಂಡನಾದ ಮಲಯಸುಂದರನನ್ನು ಸ್ಮರಿಸಿ, ನೀನು ಕೊಂದುದರಿಂದ ಸತ್ತ ಮಲಯಸುಂದರನು ಕೊಂಬುಗಳನ್ನು ಅತಿಶಯವಾಗಿ ಬಿಗಿದಪ್ಪಿಕೊಂಡು ಸಾಯಲು ಇದು ಕಾರಣವಾಗಿದೆ. ಆಮೇಲೆ, ನೀನು ಪೂರ್ವಜನ್ಮದಲ್ಲಿ ಸುಂದರನೆಂಬ ಆನೆಯಾಗಿದ್ದು