ಕುಡಿಯಲು ಕೈಗೆತ್ತಿಕೊಂಡೆ
ಒಂದು ಲೋಟ ಹಾಲನು ;
ಬೆಳ್ಳಗಿರುವ ಹಾಲಿನೊಳಗೆ
ತೇಲಾಡಿತು ವಿಸ್ತಾರದ
ಹುಲ್ಗಾವಲ ಬಯಲು !
ದನದ ಕೊರಳ ಗಂಟೆ ದನಿ
ಹಸುರ ತುಂಬ ಮಿರುಗುವ ಹನಿ
ಮರಗಿಡದಲಿ ಹಕ್ಕಿ ದನಿ
ಮೆಲುಗಾಳಿಯ ಮರ‍್ಮರ
ತುಟಿ ಬಟ್ಟಲ ನಟ್ಟನಡುವೆ
ಏನಪಾರ ವಿಸ್ತರ !

ಕಂಬಳಿಯನ್ನೆಳೆದುಕೊಂಡು
ಕಣ್ಣ ಮುಚ್ಚಿ ಮಲಗಿದೆ :
ಮೈಯ ಮೇಲೆ ಕುರಿಮಂದೆಯ
ಹಿಂಡು ಹಿಂಡೆ ನಡೆದಿದೆ !
ಮೈಚಾಚಿದ ಗುಡ್ಡವಾದೆ
ಮಲಗಿದಲ್ಲೆ ಅಲುಗದೆ,
ಗಿಡ ಮರಗಳು ಬಂಡೆಗುಂಡು
ಹುಲ್ಲು ಬೆಳೆದ ಪೊದೆಯಲಿ
ಕುರಿಮಂದೆಯ ಅರಚುವ ದನಿ
ಹೆಜ್ಜೆ ತುಳಿದ ಭರದಲಿ
ಬೆಚ್ಚಿ ಬಿದ್ದು ಎದ್ದು ಕುಳಿತೆ,
ಎಂಥ ಹುಚ್ಚು ಯೋಚನೆ !
ಬೇಕು ಯಾರಿಗಿನ್ನು ಇಂಥ
ಸುಖವಿಲ್ಲದ ಕಲ್ಪನೆ ?