ನಮಗೆ ಸುಖವೂ ಬೇಕು; ಸಂತೋಷವೂ ಬೇಕು. ಈ ಎರಡರಲ್ಲಿ ನಾವು ಯಾವುದಕ್ಕೆ ಹೆಚ್ಚು ಮಹತ್ವವನ್ನು ನಮ್ಮ ಬದುಕಿನಲ್ಲಿ ಕೊಡುತ್ತೇವೆ ಎನ್ನುವುದು ಪ್ರಶ್ನೆ. ಹಾಗಾದರೆ ಈ ಎರಡರ ವ್ಯತ್ಯಾಸವೇನು? ಈ ಎರಡಕ್ಕೂ ಇರುವ ಸಂಬಂಧವೇನು? ಇದು ವಿಚಾರ ಮಾಡಬೇಕಾದದ್ದು.

ಕೆಲವರಿದ್ದಾರೆ. ಯಾರಾದರೂ ಅವರಿಗೆ ಒಂದು ಮಾವಿನ ಹಣ್ಣನ್ನು ಕೊಟ್ಟರೆ, ಅವರು ಅದನ್ನು ಏಕಾಂತವಾದ ಸ್ಥಳಕ್ಕೆ ಒಯ್ದು, ಬಾಗಿಲು ಹಾಕಿಕೊಂಡು ತಿಂದು ಚೆನ್ನಾಗಿ ಬಾಯಿ ಒರೆಸಿಕೊಂಡು ತಾವು ತಿಂದದ್ದು ಯಾರಿಗೂ ಪತ್ತೆಯಾಗದಂತೆ ನಡೆದುಕೊಳ್ಳುತ್ತಾರೆ. ಮತ್ತೆ ಕೆಲವರಿದ್ದಾರೆ- ಅವರಿಗೆ ಒಂದು ಹಣ್ಣು ದೊರೆತರೆ ತಮಗೆ ಬೇಕಾದ ನಾಲ್ಕು ಜನರನ್ನು ಕರೆದು ಕೂಡಿಸಿ, ಅವರೆದುರಿಗೇ ಅದನ್ನು ಹೋಳು ಮಾಡಿ ಎಲ್ಲರಿಗೂ ಹಂಚಿ ತಾವು ಒಂದು ಚೂರನ್ನು ತಿಂದು ಸುಖಿಸುತ್ತಾರೆ. ಈ ಎರಡು ವರ್ತನೆಗಳಲ್ಲಿ ಮೊದಲನೆಯವನು ಪಟ್ಟದ್ದು ಸುಖ; ಎರಡನೆಯವನದು ಸಂತೋಷ. ಮೊದಲನೆಯವನದು ಸ್ವಪ್ರಯೋಜನವನ್ನು ಗುರಿಯಾಗಿಸಿಕೊಂಡದ್ದು;  ಎರಡನೆಯವನದು ತನ್ನ ಪ್ರಯೋಜನವನ್ನು ತನ್ನ ಸುಖವನ್ನು ಬಿಟ್ಟುಕೊಟ್ಟದ್ದು. ಎಂದರೆ ತನಗೆ ತನ್ನ ಇಂದ್ರಿಯಗಳಿಗೆ ಸಂತೃಪ್ತಿಯಾಗುವುದು ಮುಖ್ಯ ಎಂದು ಬಯಸುವುದು ಸುಖಾಪೇಕ್ಷೆ; ತನ್ನ ಸುಖವನ್ನು ಹತ್ತು ಜನರೊಂದಿಗೆ ಹಂಚಿಕೊಂಡು ಅಥವಾ ಇತರರಿಗಾಗಿ ಸಮಯ ಬಂದರೆ ಅದನ್ನು ಬಿಟ್ಟುಕೊಟ್ಟು ಸುಖಿಸುವವನದು ಸಂತೋಷ ಸಾಧನೆ.

ಎಂದರೆ ಸುಖ ಎನ್ನುವುದು ವೈಯಕ್ತಿಕ ಆಪೇಕ್ಷೆಗಳ ತಣಿವನ್ನು ಗುರಿಯಾಗಿಸಿ- ಕೊಂಡದ್ದು. ಸಿಕ್ಕಷ್ಟೂ ಇನ್ನೂ ಬೇಕು ಇನ್ನೂ ಬೇಕು ಎಂಬ ನೀರಡಿಕೆಯನ್ನು ಹುಟ್ಟಿಸತಕ್ಕದ್ದು; ತಾನು ತನ್ನದು ಎಂಬ ಮಿತಿಯಲ್ಲಿ ಬದುಕನ್ನು ಪರಿಮಿತಗೊಳಿಸತಕ್ಕದ್ದು. ಆದರೆ ಸಂತೋಷ ಎನ್ನುವುದು ಬಹಿರಂಗದ ಬಯಕೆಗಳ ತಣಿವಿನಿಂದ ಲಭಿಸತಕ್ಕದ್ದಲ್ಲ; ಅಂತರಂಗದ ಸಂತೃಪ್ತಿಯಿಂದ ಮೂಡತಕ್ಕದ್ದು.  ತನ್ನಿಂದಾಚೆಗೆ ವ್ಯಕ್ತಿತ್ವ ಹರಿದು ಸುತ್ತಣ ಬದುಕಿನೊಂದಿಗೆ ಬೆರೆಯುವುದರಿಂದ ದೊರೆಯತಕ್ಕದ್ದು.

ಶಾಕ್ಯ ರಾಜಕುಮಾರ ಸಿದ್ಧಾರ್ಥನಿಗೆ ಸುಖಕ್ಕೆ ಕೊರತೆಯಿರಲಿಲ್ಲ. ಹುಟ್ಟಿದ್ದು ಅರಮನೆಯಲ್ಲಿ, ಬೆಳೆದದ್ದು ಭೋಗ ವೈಭವಗಳಲ್ಲಿ, ಸುಂದರಿಯಾದ ಹೆಂಡತಿ; ಪ್ರೀತಿಯಿಂದ ಬೆಳೆಸಿದ ಪರಿಜನ. ಆದರೆ ನೋವಿನ ನೆರಳು ಸೋಂಕದ ಈ ಸುಖದ ಸುಪ್ಪತ್ತಿಗೆಯಲ್ಲಿ ಆತನಿಗೆ ಸಂತೋಷ ಕಾಣಿಸಲಿಲ್ಲ. ಈ ಸುಖದಿಂದ ಮತ್ತಷ್ಟು ಸುಖ ಬೇಕು ಎಂಬ ಆಸೆ; ಇರುವ ಸುಖಕ್ಕೆ ಇನ್ನೆಲ್ಲಿ ಧಕ್ಕೆ ಬಂದೀತೋ ಎಂಬ ಶಂಕೆ; ಇರುವ ಸುಖಕ್ಕೆ ಒದಗುವ ಆಘಾತದ ಪರಿಣಾಮದಿಂದ ಬರಬಹುದಾದ ದುಃಖದ ಕಲ್ಪನೆ.  ಆದ್ದರಿಂದ ತನ್ನೊಬ್ಬನ ಪಾಲಿಗೆ ಮಾತ್ರ ಇರುವ, ಸದಾ ತುಯ್ತದಲ್ಲಿ ನಿಲ್ಲಿಸುವ ಈ ಸುಖದಲ್ಲಿ ಅವನಿಗೆ ಮನಸ್ಸಿಗೆ ನೆಮ್ಮದಿಯನ್ನು ತರುವ ಸಂತೋಷ ಲಭಿಸಲಿಲ್ಲ. ತಾನೊಬ್ಬನು ಸುಖದ ನಡುವೆ ಇದ್ದರೇನಾಯಿತು; ಎಲ್ಲರೂ ಸುಖಪಡುವಂತಾದರೆ ಅಥವಾ ದುಃಖದಿಂದ ಪಾರಾಗುವುದಾದರೆ-ಅದು ಸಂತೋಷದ ವಿಷಯ ಎಂದು ತಿಳಿದು, ಪರಹಿತಾರ್ಥವಾದ ಸಂತೋಷದ ಅನ್ವೇಷಣೆಗಾಗಿ, ಇದ್ದ ಸುಖವನ್ನು ತ್ಯಾಗ ಮಾಡಿ ಹೊರಟ. ಅದಕ್ಕಾಗಿ ಸಾಧನೆ ಮಾಡಿದ; ಸುಖದ ಸೆಳೆತವನ್ನು ಗೆದ್ದ; ಬುದ್ಧನಾದ; ಸಂತೋಷದ ನೆಲೆಯನ್ನು ಕಂಡ; ತಾನು ಕಂಡ ಆ ಸಂತೋಷದ ಅನುಭವವನ್ನು ಲೋಕಕ್ಕೆ ತಿಳಿಸಿದ.

ನಮ್ಮ ದೇಶದ ಯಾವ ಮಹಾಕಾವ್ಯಗಳೂ ಸುಖ ಸಾಧನೆ ದೊಡ್ಡದೆಂದು  ಹೇಳಲಿಲ್ಲ. ಸುಖ ತ್ಯಾಗದಿಂದ ಬರುವ ಸಂತೋಷ ಸಾಧನೆಯನ್ನೆ ಒತ್ತಿ ಹೇಳಿವೆ. ರಾಮ-ಸೀತೆಯರಾಗಲಿ, ಹರಿಶ್ಚಂದ್ರ-ಚಂದ್ರಮತಿಯರಾಗಲಿ, ಪಾಂಡವರು- ದ್ರೌಪದಿಯಾಗಲಿ; ನಳದಮಯಂತಿಯರಾಗಲಿ-ಪಟ್ಟ ಸುಖ ಏನು? ಅರಮನೆಯ ಭೋಗ-ವೈಭವಗಳ ನೆರಳಿನಾಚೆಯ, ಬಿರು ಬಿಸಿಲಿನ ಕಾನನಗಳ ಕಂಟಕಿತ ಪಥಗಳಲ್ಲಿ. ಎಲೆ ಮನೆಗಳ  ಆಶ್ರಯದಲ್ಲಿ, ನಿಸರ್ಗದ ಸಾನ್ನಿಧ್ಯದಲ್ಲಿ ಅವರ ಬದುಕು ಸಾಗಿತು. ಆ ಅನುಭವದಿಂದ ಬಂದ ಯಾವುದೋ ಸಂತೋಷ ಅವರನ್ನು ದೊಡ್ಡವರನ್ನಾಗಿ ಮಾಡಿತು.

ಮನುಷ್ಯನಿಗೆ ಸುಖ ಪ್ರಿಯವೆಂದು ಒಪ್ಪಿದರೂ, ಕೇವಲ ಸುಖಸಾಧನೆಯಷ್ಟೇ ಮಹತ್ವದ್ದೆಂದು ಎಂದೂ ಪ್ರಶಂಸಿತವಾಗಿಲ್ಲ. ಸುಖ ಚರಿತ್ರೆಯ ವಿಷಯವಾದರೆ, ಸಂತೋಷ ಕಾವ್ಯ ಕಲೆಗಳ ವಸ್ತುವಾಗಿದೆ.

ಹಾಗೆಂದರೆ ಇರುವ ಸುಖವನ್ನು ಹಳಿದು, ಅದನ್ನು ತಿರಸ್ಕರಿಸುವುದರ ಮೂಲಕವೇ ಸಂತೋಷದ ಸಾಧನೆ ಸಾಧ್ಯವೆಂದು ಅರ್ಥವಲ್ಲ. ಆದರೆ ಸುಖಕ್ಕಿಂತ ದೊಡ್ಡದು, ಒಂದಿದೆ-ಅದು ಸಂತೋಷ, ಎನ್ನುವುದರ ಪ್ರಜ್ಞೆ ಅವಶ್ಯಕ ನಮ್ಮ ಬದುಕಿಗೆ ಎಂದು ಅರ್ಥ. ಪ್ರವಾದಿ ಮಹಮ್ಮದ್ ಪೈಗಂಬರ್ ಹೇಳಿದರು: ನಿನ್ನಲ್ಲಿ ಆರು ಕಾಸು ಇದ್ದರೆ ಮೂರು ಕಾಸಿಗೆ ರೊಟ್ಟಿ ತೆಗೆದುಕೊ; ಇನ್ನು ಮೂರು ಕಾಸಿಗೆ ಹೂವು ತೆಗೆದುಕೋ ಎಂದು. ರೊಟ್ಟಿ ಅತ್ಯಗತ್ಯವಾಗಿ ಬೇಕಾದದ್ದು; ಅದು ಸುಖದ ಸಾಮಗ್ರಿ. ಮನುಷ್ಯನಿಗೆ ಮೊದಲು ಹೊಟ್ಟೆ, ಬಟ್ಟೆ ನೆಟ್ಟಗಿರಬೇಕು. ಅದನ್ನು ಅವನು ಮೊದಲು ಸಂಪಾದಿಸಬೇಕು.  ಆದರೆ ಅದರ ಜೊತೆಗೆ ಮನಸ್ಸಿಗೆ ಸಂತೋಷವೂ ಬೇಕು. ಹೂವು ಸಂತೋಷದ ಸಾಮಗ್ರಿ. ಅದು ರೊಟ್ಟಿಯಂತೆ ಕೇವಲ ಪ್ರಯೋಜನಾತ್ಮಕವಾದ ಸುಖದ ವಸ್ತುವಲ್ಲ; ಪ್ರಯೋಜನವನ್ನು ಮೀರಿದ ಸಂತೋಷವನ್ನು ಕೊಡತಕ್ಕದ್ದು. ಕೆಲವರಿದ್ದಾರೆ, ಅವರು ಆರು ಕಾಸಿಗೂ ರೊಟ್ಟಿಯನ್ನು ಕೊಳ್ಳುವ ಸಂಭವ ಉಂಟು. ಆದರೆ ಹಾಗಾಗಬಾರದು. ಬದುಕಿಗೆ ಸುಖ ಎಷ್ಟು ಅಗತ್ಯವೋ, ಅದರ ಜೊತೆಗೆ ಸಂತೋಷವೂ ಅದಕ್ಕಿಂತ ಮುಖ್ಯವಾದದ್ದು ಎಂಬ ವಿವೇಕ ಮೂಡಬೇಕು.

ಚದುರಿದ ಚಿಂತನೆಗಳು : ೨೦೦೦