ಇಂದು ಸುಗಮಸಂಗೀತ ನೆಲೆ ನಿಂತಿರುವುದಕ್ಕೆ ಅದರ ಜನಪ್ರಿಯತೆ ಮತ್ತು ಅದರ ಜನಪರತೆಯೇ ಕಾರಣವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ನಿಜವಾದ ಕವಿತೆ ಜನಜೀವನದ ಪ್ರತಿಬಿಂಬವೂ ಗತಿಬಿಂಬವೂ ಆಗುತ್ತಾ ಗೀತದ ನೆರವಿನಿಂದ ಸಹಜ ಸುಂದರವೂ ಆಗಿರುವುದರಿಂದ ಜನಸಾಮಾನ್ಯರ ಬಾಯಲ್ಲಿ ಉಳಿದು ಮನಸ್ಸಿನೊಳಗೆ ಇಳಿದಿದೆ. ಕಿವಿಯಿಂದ ಕಿವಿಗೆ ಕೇಳುತ್ತಾ, ಕಾಲದ ಅಲೆಯಲ್ಲಿ ಉರುಳುತ್ತಾ, ಅರಳುತ್ತಾ, ಬಂದಿದೆ. ದೈನಂದಿನ ಭಾಷೆಯ ಆಡುಮಾತಿನ ಮೋಡಿಯಿಂದ ಆಕರ್ಷಿಸುತ್ತಿದೆ. “ಪುಸ್ತಕದೊಳಗಿನ ಭಾವಗೀತೆ ಅರಿಬಿರಿದ ಮೊಗ್ಗು. ಅದು ಸಮರ್ಥ ಪುಷ್ಟವಾಗುತ್ತದೆ’ – ಎಂದ ಲಕ್ಷ್ಮೀನಾರಾಯಣಭಟ್ಟರ ಮಾತು ಸುಗಮಸಂಗೀತಕ್ಕೆ ಹಿಡಿದ ಕನ್ನಡಿಯಾಗಿದೆ. ಕವಿತೆಯ ಸಂಗೀತ ನಿರ್ದೇಶಕ ಮತ್ತು ಹಾಡುವ ಗಾಯಕ-ಇಬ್ಬರ ಹೊಣೆಗಾರಿಕೆಯೂ ಇದರಿಂದ ಮನದಟ್ಟಾಗುತ್ತದೆ. ಸುಗಮಸಂಗೀತದ ಸಂಯೋಜನೆಯಲ್ಲಿ ರಾಗ, ಸರಳೀಕೃತವಾಗಿ ಕವಿತೆಯೊಂದಿಗೆ ನೆರಳಾಗಿ ಹರಿಯಬೇಕಲ್ಲದೆ, ಪಾಂಡಿತ್ಯದ ಆಡಂಬರದ ಯಾವ ಪ್ರದರ್ಶನವನ್ನು ಮಾಡಬಾರದು. ರಾಗ ಅಥವಾ ತಾಳದ ಲೆಕ್ಕಾಚಾರ ಮುಖ್ಯವಲ್ಲ. ರಾಗದ ಭಾವಮೋಡಿಯಲ್ಲಿ ಕವಿತೆಯನ್ನು ಹೊಸ ರಾಗಾನುಭವದಲ್ಲಿ ಅನಾವರಣಗೊಳಿಸಿ ಕಟ್ಟಿ ಕೊಡುವುದೇ ಸಂಗೀತ ಸಂಯೋಜಕನ ಜವಾಬ್ದಾರಿಯಾಗಿದೆ. ಕವಿತೆಯ ಅನುಭವ ಮೊದಲು ಸಂಯೋಜಕನಿಗೆ, ನಂತರ ಗಾಯಕನಿಗೆ ಆಗಬೇಕು. ಆಗ ಮಾತ್ರ ಕವಿತೆಗೆ ಯುಕ್ತವಾದ ರಾಗಸಂಯೊಜನೆಯಾಗುತ್ತದೆ. ಸುಗಮಸಂಗೀತದಲ್ಲಿ ಕವಿತೆ ಮತ್ತು ಸಂಗೀತ, ಈ ಎರಡರ ಅನ್ಯೋನ್ಯ ದಾಂಪತ್ಯವಿದ್ದಾಗ ಮಾತ್ರ ಒಂದರಿಂದ ಮತ್ತೊಂದಕ್ಕೆ ಚೆಲುವು ಶಾಸ್ತ್ರೀಯ ವಾಗ್ಗೇಯ ಕೃತಿಯಲ್ಲಿ ಮಾತು ಧಾತುವಿಗೆ ಕರ್ತೃ ಒಬ್ಬನೇ. ಎರಡೂ ಮಾಧ್ಯಮದ ಹಿಡತ ಅವನದ್ದೇ. ಆದರೆ ಅವನ ಮೂಲ ಉದ್ದೇಶವೇ ಅವನ ಸಂಗೀತ ಗಾಯನ ಸಾಮರ್ಥ್ಯದ ಪ್ರತಿಪಾದನೆ ಮತ್ತು ಪಾಂಡಿತ್ಯ ನಿರೂಪಣೆ. ಶಾಸ್ತ್ರಿಯ ಸಂಗೀತದ ಗಾಯಕ ತನ್ನ ಸಂಗೀತ ನಿರೂಪಣೆಗೆ ಸಾಹಿತ್ಯವನ್ನು ನೆಪಮಾತ್ರಕ್ಕೆ ಬಳಸಿಕೊಳ್ಳುತ್ತಾನೆ. ಅವನ ಚಮತ್ಕಾರವೆಲ್ಲಾ ಸಂಗೀತಾಂಗಗಳಲ್ಲಿಯೇ ಹೊರತು ಸಾಹಿತ್ಯದಲ್ಲಿ ಇಲ್ಲ. ಆದರೆ ಇಲ್ಲಿ ಕವಿ ಬೇರೆ, ಸಂಯೋಜಕ ಬೇರೆ. ಗಾಯಕನ ಧ್ವನಿ, ಹಾಡುಗಾರಿಕೆಯ ಔನ್ನತ್ಯದಿಂದ ಇದು ಪರಿಣಾಮಕಾರಿಯಾಗಬೇಕಾಗುತ್ತದೆ. ಆತ ಶಾಸ್ತ್ರೀಯ ಸಂಗೀತ ವಿದ್ವಾಂಸನಾಗಬೇಕಾದ ಅವಶ್ಯಕತೆ ಇಲ್ಲವಾದರೂ ಶಾಸ್ತ್ರವನ್ನು ತಿಳಿದ ಸಂಗೀತ ಸಾಧಕನಾಗಿರಬೇಕಾಗುತ್ತದೆ. ಅಂದರೆ ಶಾಸ್ತ್ರೀಯ ರಾಗದ ಅಲಾಪ, ಸ್ವರ, ತಾಳ ಚಮತ್ಕಾರವಾಗಲಿ, ಮನೋಧರ್ಮ ಸಂಗೀತವಾಗಲಿ ಯಾವುದೂ ಇರದೆ, ಸಾಹಿತ್ಯದ ಶುದ್ಧವಾದ ನಿರೂಪಣೆಯೇ ಮುಖ್ಯವಾಗಿದೆ. ಕೇಳುಗರಿಗೆ ಸುಲಭವಾಗಿ ಸಾಹಿತ್ಯ ತಲಪಿಸುವುದೇ ಸುಗಮಸಂಗೀತಗಾರನ ಗುರಿಯಾಗಿದೆ. ಸುಗಮಸಂಗೀತದಲ್ಲಿ ಬಳಸುವಂತಹ ಭಾವಶ್ರೀಮಂತವಾದ ಸಾಹಿತ್ಯ ಇತರ ಯಾವುದೇ ಸಂಗೀತ ಪದ್ಧತಿಯಲ್ಲಿ ಇಲ್ಲ. ಇಲ್ಲಿ ಸಾಹಿತ್ಯಕ್ಕೆ ಪ್ರಥಮ ಸ್ಥಾನ. ಸಂಗೀತಕ್ಕೆ ದ್ವಿತೀಯ ಸ್ಥಾನ.

ಸುಗಮಸಂಗೀತದಲ್ಲಿ ಸಂಯೋಜಕನಿಗೆ ರಾಗದ ತಿಳುವಳಿಕೆಯ ಜೊತೆಗೆ ಕವಿತೆಗೆ ಬೇಕಾದ ಭಾವಸ್ವರಸಂಯೋಜನೆ ತಿಳಿದಿರಬೇಕು. ಅದು ಒಂದೇ ರಾಗದಲ್ಲಿ ಸಿಗಬಹುದು, ಅಥವಾ ರಾಗಕ್ಕೆ ಅನ್ಯಸ್ವರಗಳು ಬಂದಾಗಲೂ ದೊರೆಯಬಹುದು. ಅಲ್ಲಿ ಮುಖ್ಯವಾದದ್ದು ಕವಿತೆಯನ್ನು ಸ್ವರಾಭಿನಯದ ಮೂಲಕ ಪ್ರಸ್ತುತಪಡಿಸುವ ಕ್ರಮ. ಕವಿತೆಯ ಅಂತರಂಗವನ್ನು ತೆರೆದಿಡಲು ಸಹಾಯಕವಾಗುವ ದನಿಯ ಯಾವುದೇ ಬಗೆಯ ಏರಿಳಿತಗಳನ್ನು ಸ್ವರದಲ್ಲಿ ಮೂಡಿಸುವುದೇ ಸಂಯೋಜಕನ ಕಾಯಕ. ಕವಿತೆಯನ್ನು ಓದುವಾಗ ಯತಿಯ ನಿಲುಗಡೆ, ಸಾಲಿನ ಕೊನೆಯನ್ನು ಹೇಳುವಾಗ ವಿರಾಮ ಅಥವಾ ಪ್ರಶ್ನಾರ್ಥ, ಇತ್ಯಾದಿ ಚಿನ್ಹೆಗಳನ್ನು ಗಮನಿಸುತ್ತೇವೋ ಹಾಗೆಯೇ ಹಾಡುವಾಗಲು ಈ ಭಾವನೆಗಳು ಕವಿತೆಯಲ್ಲಿರುವಂತೆಯೇ ನೋಡಿಕೊಳ್ಳಬೇಕು. ಕವಿತೆಯ ಲಯ ಹಾಡಾದಾಗ ಅರ್ಥ ಭಾವಕ್ಕೆ ಪುಷ್ಟಿಕೊಡುವಂತೆ ಇರಬೇಕು.

ನವೋದಯ ಪ್ರಾರಂಭದಲ್ಲಿನ ಗೀತೆಗಳೆಲ್ಲವೂ ರಾಗಾಧಾರಿತವಾಗಿರುವುದು ಕಂಡಬರುತ್ತದೆ. ಮಾಸ್ತಿಯವರ ‘ಬಿನ್ನಹ’ ಸಂಕಲನದಲ್ಲಿ ಗೀತೆಗಳಿಗೆ ನಿರ್ದಿಷ್ಟ ರಾಗ, ತಾಳಗಳನ್ನು ಹೆಸರಿಸಿರುವುದನ್ನು ನೋಡಬಹುದು. ಡಿ.ವಿ.ಜಿ. ಅವರ ಅಂತಃಪುರ ಗೀತೆಗಳೂ ಇದಕ್ಕೆ ಹೊರತಲ್ಲ. ಕಾಲದಿಂದ ಕಾಲಕ್ಕೆ ಕಾವ್ಯ ಪದವಿಟ್ಟು ಮುಂದೆ ಮುಂದೆ ಹೊರಳಿ ಹೊರಳಿ ತೇಜಸ್ಸನ್ನು ಪಡೆದು, ಹೊಳಪನ್ನೂ, ಸರಳತೆಯನ್ನೂ ಪಡೆದುಕೊಂಡಹಾಗೆ, ಸಂಗೀತವೂ ಅದರ ಬೆನ್ನ ಹಿಂದೆ ಹಿಂಬಾಲಿಸಿ ಬರುತ್ತಾ, ಪಲುಕಿ ಪಲುಕಿ ಹೊಸ ಮಾರ್ಗವನ್ನು ಕಂಡುಕೊಂಡು ಕವಿತೆಯ ಹಿಂದೆ ಸಾಗುತ್ತಾ ಬಂದಿದೆ.

ಸುಗಮಸಂಗೀತ ಆರಂಭದ ದಿನಗಳಲ್ಲಿ ಸಂಗೀತ ಸಂಯೋಜನೆ ಅಥವಾ ರಾಗಸಂಯೋಜನೆ ಎಂದು ಕರೆಯುತ್ತಿದ್ದು, ಇತ್ತೀಚೆಗೆ ‘ಸ್ವರ ಸಂಯೋಜನೆ’ ಎಂದು ಕರೆಯಲ್ಪಡುತ್ತಿದೆ. ಸುಗಮಸಂಗೀತಕ್ಕೆ ಸ್ವರವೇ ಭಾಷೆಯಾಗಿದೆ. ಸಾಹಿತ್ಯದ ಎದೆಮಿಡಿತವನ್ನು, ಭಾವದೆತ್ತರ ಬಿತ್ತರಗಳನ್ನು, ಅರ್ಥತರಂಗಗಳನ್ನು, ಸ್ವರಗಳ ಕಲಾಪೂರ್ಣ ವಿನ್ಯಾಸದಿಂದ ಅದು ಮೂಡಿಸಿಕೊಡುತ್ತಿದೆಯಾದ್ದರಿಂದ ಕವಿತೆಗೆ ‘ರಾಗಸಂಯೋಜನೆ’ ಎಂಬ ಶೀರ್ಷಿಕೆಗಿಂತ ‘ಸ್ವರಸಂಯೋಜನೆ’ ಎಂದು ಹೆಸರೇ ಸೂಕ್ತವಾದದ್ದು ಎಂದು ಪ್ರಸಿದ್ಧ ಸುಗಮಸಂಗೀತ ಗಾಯಕರಾದ ಸಿ. ಅಶ್ವಥ್ ಅವರು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಸಂಯೋಜನೆಗಳನ್ನು ‘ಸ್ವರಸಂಯೋಜನೆ’ ಗಳೆಂದೇ ಕರೆದುಕೊಂಡಿದ್ದಾರೆ. “ಒಂದು ಕವಿತೆಗೆ ಸಿದ್ಧವಾಗಿರುವ ಒಂದು ರಾಗವನ್ನು ಅನ್ವಯಿಸುವ ಪದ್ಧತಿಯನ್ನು ಅನೇಕರು ಅನುಸರಿಸುತ್ತಾರೆ. ಆದರೆ ಹೀಗೆ ಸಿದ್ಧರಾಗವೊಂದನ್ನು ಕವಿತೆಯೊಂದಕ್ಕೆ ಆರೋಪಿಸುವುದರಿಂದ ಕವಿತೆಗೆ ಸಿಗಬೇಕಾದ ನ್ಯಾಯ ಸಾಮಾನ್ಯವಾಗಿ ಸಿಗುವುದಿಲ್ಲವೆಂದೇ ನನ್ನ ಭಾವನೆ. ಒಂದು ಕವಿತೆಯಲ್ಲಿ ಸಾಲಿಂದ ಸಾಲಿಗೆ, ಪದಗಳಿಂದ ಪದಗಳಿಗೆ ಬೆಳೆಯುತ್ತಾ ಅದರ ಅರ್ಥ ಸರಣಿಯನ್ನು ಸಂಗೀತದ ಮೂಲಕ ಅನ್ವೇಷಿಸುತ್ತಾ ಹೋಗುವಾಗ ಸಿದ್ಧವಾದ ರಾಗ ಅಷ್ಟಾಗಿ ಉಪಯೋಗಕ್ಕೆ ಬರುವುದಿಲ್ಲ. ಕವಿತೆಯ ಅರ್ಥಸ್ಫುರಣಕ್ಕೆ ಭಾವದೀಪ್ತಿಗೆ ಸಹಜವಾಗಿ ಒದಗುವಂಥ ಸ್ವರಸ್ಥಾನಗಳನ್ನು ಹಿಡಿದು ಅವುಗಳನ್ನು ಉದ್ದೀಪಿಸುವುದರಿಂದ ಮಾತ್ರ ಕವಿತೆಗೆ ಸಂಪೂರ್ಣ ನ್ಯಾಯ ದೊರಕುತ್ತದೆ. ಇಡಿಯಾದ ರಾಗವನ್ನು ಕವಿತೆಗೆ ಅನ್ವಯಿಸುವ ನಿರ್ದೇಶಕ ಕವಿತೆಯ ವಿಶ್ಲೇಷಣೆಗೆ ತೊಡಗಿರುವುದಿಲ್ಲ. ಕೇವಲ ರಾಗದ ಮಾಧುರ್ಯಕ್ಕೆ ಮಾರುಹೋಗಿರುತ್ತಾನೆ.” ಎಂದಿದ್ದಾರೆ.

ಕವಿತೆಯ ವಸ್ತು ಶೈಲಿ ರೂಪ ಬಂಧಗಳಿಂದ ಅಶ್ವಥಾ ಅವರಿಗಿಂತ ಮೊದಲು ಸಂಯೋಜಕರಾಗಿದ್ದವರ ಕಾಲದ ಕವಿತೆಗಳು ಭಿನ್ನವಾಗಿದ್ದವು. ಒಂದೇ ಭಾವನೆ ಎಳೆಯನ್ನು ಹಿಡಿದುಕೊಂಡ ಕವಿತೆಗಳಾಗಿದ್ದವು. ಏಕಮುಖಿಯಾಗಿ ಆಗಿದ್ದವೇನೋ? -ಹಾಗಾಗಿ ಅವು ರಾಗಾಧಾರಿತವಾಗಿರಬಹುದು. ಸುಗಮಸಂಗೀತ ಆಗಿನ್ನೂ ತನ್ನ ಸ್ವಂತ ಕಾಲ ಮೇಲೆ ನಿಲ್ಲುವ ಧೈರ್ಯ-ಭರವಸೆಗಳನ್ನು ತೋರಿಯೂ ಇರಲಿಲ್ಲವೆನ್ನಬಹುದು. ಅಶ್ವತ್ಥ್‌ರ ಕಾಲದ ಹೊತ್ತಿಗೆ ಅದು ಪರಿಪೂರ್ಣವಾದ, ಆತ್ಮವಿಶ್ವಾಸವನ್ನು ತೋರುತ್ತಾ, ಬೆಳೆಯುವ ಹಾದಿಯಲ್ಲಿತ್ತು ಎನ್ನಬಹುದು. ಬಾಳಪ್ಪ ಹುಕ್ಕೇರಿ – ಪಾಂಡೇಶ್ವರದ ಕಾಳಿಂಗರಾವ್ ಪದ್ಮಚರಣ್ ಮತ್ತು ಮೈಸೂರು ಅನಂತಸ್ವಾಮಿ ಅವರುಗಳು ಅದಾಗಲೇ ಒಂದು ಖಚಿತವಾದ ವೇದಿಕೆಯಲ್ಲಿ ಸುಗಮಸಂಗೀತವನ್ನು ಪ್ರತಿಷ್ಠಾಪಿಸಿದ್ದರು. ಕಾಳಿಂಗರಾವ್ ಮತ್ತು ಅನಂತಸ್ವಾಮಿ ಇಬ್ಬರೂ ಏಕ ರಾಗಾಧಾರಿತವಾದ ಹಾಗೂ ಸಂಕೀರ್ಣ ರಾಗಾಧಾರಿತವಾದ ಅನೇಕ ಗೀತೆಗಳನ್ನು ನೀಡಿದ್ದರು. ಸಾಹಿತ್ಯಕ್ಕೆ ಹೊಂದುವಂತಹ, ಜನಪ್ರಿಯ, ಧಾಟಿಗಳನ್ನು ಸಂಯೋಜಿಸಿ ಸುಗಮಸಂಗೀತಕ್ಕೆ ಒಂದು ನಿಖರವಾದ ಚೌಕಟ್ಟನ್ನೂ, ಆಕರ್ಷಣೆಯನ್ನೂ ತಂದುಕೊಟ್ಟಿದ್ದರು. ಅಶ್ವಥ್ ಅವರು ಸ್ವರಗಳ ಮೂಲಕ ಸಂಯೋಜನೆ ಮಾಡುತ್ತೇನೆಂದು ಹೇಳಿದರೂ, ಅದು ‘ರಾಗ ಸಂಯೋಜನೆ’ಯೇ ಆಗಿರುತ್ತದೆ. ಏಕೆಂದರೆ ಮೂರಕ್ಕಿಂತ ಹೆಚ್ಚು ಸ್ವರಗಳು ಗುಂಪಾಗಿ ಸೇರಿದರೆ ಅದೇ ‘ರಾಗ’ ಎಂದು ಕರ್ನಾಟಕ ಸಂಗೀತದ ಲಾಕ್ಷಣಿಕರು ಹಿಂದಿನಿಂದಲೂ ಅಭಿಪ್ರಾಯಪಟ್ಟಿದ್ದಾರೆ. ‘ಕೇಳುವವರ ಚಿತ್ತವನ್ನು ಆಕರ್ಷಿಸಿ ಆನಂದವನ್ನುಂಟುಮಾಡುವ, ಸುಖವನ್ನು ಕೊಡುವ ಸ್ವರವರ್ಣಗಳ ಸೇರುವಿಕೆಯೇ ರಾಗ ಸ್ವರವರ್ಣಗಳು ಕುಡಿ ಸಜ್ಜನರ ಚಿತ್ತಕ್ಕೆ ಆಹ್ಲಾದವನ್ನುಂಟು ಮಾಡುವ ಧ್ವನಿ ವಿಶೇಷವೇ ರಾಗ. ‘ರಂಜಯತಿ ಇತಿರಾಗಃ”- ರಾಗವು ಕೇಳುಗನ ಭಾವಸ್ಥಿತಿಯ ಮೇಲೆ ಪ್ರಭಾವಬೀರುತ್ತದೆ. ಮನಸ್ಸಿನ ರಂಗವನ್ನು ಪಲ್ಲಟಿಸುತ್ತದೆ. ಪ್ರಭಾವಿಸುತ್ತದೆ, ಸೃಜಿಸುತ್ತದೆ, ಬಣ್ಣಗೊಳಿಸುತ್ತದೆ.” ಎಂದು ಹೀಗೆಲ್ಲಾ ರಾಗವನ್ನು ನಮ್ಮ ಸಂಗೀತ ಲಾಕ್ಷಣಿಕರು ವರ್ಣಿಸಿದ್ದಾರೆ. ಶಾಸ್ತ್ರದ ದೃಷ್ಟಿಯಿಂದ ಮೂರೂ ಸ್ವರಗಳಿಗಿಂತಲೂ ಹೆಚ್ಚು ಸ್ವರ ಸೇರಿದಾಗ ‘ಸ್ವರಸಂಯೋಜನೆ’ ಎಂದು ಕರೆದರೂ ಅದು ಯಾವುದೋ ಒಂದು ರಾಗವೇ ಆಗಿರುತ್ತದೆ. ಅದು ಸಿದ್ಧವಾದ ಗುರುತಿಸಿಕೊಂಡ ರಾಗವಾಗಿರದಿದ್ದರೂ, ಹೊಸ ಭಾವಾವರಣವನ್ನು ಸಿದ್ಧಪಡಿಸುವ ಯಾವುದೋ ಒಂದು ರಾಗವಾಗುವುದಂತೂ ನಿಜ. ಕವಿತೆ ಅಪೇಕ್ಷೆಪಡುವ ಸ್ವರಸಂಯೋಜನೆಗಳಿಂದ ಹೆಣೆಯಲ್ಪಟ್ಟ ಅಪೂರ್ವ ರಾಗವೇ ಆಗಿರುತ್ತದೆ. ಕವಿತೆಗೆ ಇದರಿಂದ ರಂಗೇರುತ್ತದೆ. ಕೇಳುವವರಿಗೆ ರಂಜನೆ, ಆಹ್ಲಾದ ಎರಡೂ ದೊರೆಯುತ್ತದೆ. ಹಾಗಾಗಿ ‘ರಾಗ’ ಎನ್ನುವ ಹೆಸರು ಇಲ್ಲಿ ಅತ್ಯಂತ ಸಮಂಜಸವಾಗುತ್ತದೆ. ಕವಿತೆಗೆ ಅನ್ವರ್ಥವೂ ಆಗುತ್ತದೆ. ಇಂತಹುದೇ ರಾಗ ಎಂದು ಹೆಸರಿಸಿಕೊಳ್ಳದಿದ್ದರೂ, ಗುರುತಿಸಲಾಗದಿದ್ದರೂ, ಸ್ವರಸಂಯೋಜನೆಯಿಂದ ಕೂಡಿದ್ದರೂ, ಅದನ್ನು ‘ರಾಗಸಂಯೋಜನೆ’ ಎಂದೇ ಕರೆಯಬೇಕಾಗುತ್ತದೆ. ಸಂಯೋಜಕನ ಹೊಸ ಅನ್ವೇಷಣೆಯ ಹೊಸರಾಗ ಅದರಲ್ಲಿ ಹುಟ್ಟಿಕೊಂಡೇ ಇರುತ್ತದೆ.

ಒಂದು ಗೀತೆಗೆ ಕೇವಲ ಮೂರು ಸ್ವರದಿಂದ ಸಂಗೀತ ಸಂಯೋಜಿಸಲು ಸಾಧ್ಯವಿಲ್ಲ. ಕವಿತೆಯ ಆವರಣದ ಭಿನ್ನ ಭಿನ್ನ ಮಜಲುಗಳನ್ನು, ಭಾವದೀಪ್ತಿಯನ್ನು ಇದರಿಂದ ಪ್ರಕಾಶಪಡಿಸಲು ಸಾಧ್ಯವಿಲ್ಲ. ವೇದಗಳ ಪಠಣದಲ್ಲಿ ಇಂತಹ ಮೂರು ಸ್ವರಗಳ ಸಂಯೋಜನೆಯನ್ನು ಗಮನಿಸಬಹುದು. ಕೆಲವು ಜಾನಪದ ಗೀತೆಗಳಲ್ಲೂ ಇಂತಹ ಸ್ವರಸಂಯೋಜನೆಗಳು ಕಾಣಬಹುದು. ಸುಗಮಸಂಗೀತದ ಸಂಯೋಜನೆಯಲ್ಲಿ ಕವಿತೆಯ ವಾಗರ್ಥಗಳ ಬೆನ್ನುಹತ್ತಿ ಸ್ವರಗಳನ್ನು ಸಂಯೋಜಿಸಿದರೂ ಅದು ಮೂರು ಸ್ಥಾಯಿಗಳಲ್ಲಿ ತನ್ನ ಭಾವ ಪ್ರಚುರತೆಯನ್ನು ತೋರಬೇಕಾಗುವದರಿಂದ ಅದನ್ನು ‘ರಾಗಸಂಯೋಜನೆ’ ಎಂದೇ ಕರೆಯಬೇಕು. ಸ್ವರವರ್ಣಗಳ ಮೂಲಕ ಹೊಸ ರಾಗವನ್ನು ಅನಾವರಣಗೊಳಿಸುವ ‘ರಾಗಸಂಯೋಜನೆ’ – ಎನ್ನಬಹುದು. ಅಶ್ವಥ್ ಅವರ ಸಂಯೋಜನೆಗಳಲ್ಲಿ ನಾನು ಕಾಣುವುದು ಇಂತಹ ‘ರಾಗಸಂಯೋಜನೆ’ಗಳನ್ನು, ಕವಿತೆಗಳ ಮೂಲಕ ಹರಿದಾಡುವ ಅಪೂರ್ವ ಸ್ವರಸಂಚಾರಗಳ ಸಂಯೊಜನೆಗಳನ್ನು ರಾಗಾಧಾರಿತ ಅವರು ಹೇಳಿಕೊಳ್ಳದಿದ್ದರೂ, ಅದು ಕವಿತೆಗೆ ಹೊಂದುವ, ಕವಿತೆಯಲ್ಲಿ ಅಂತರ್ಗತವಾಗಿರುವ, ಅವ್ಯಕ್ತವಾದ, ಯಾವುದೋ ರಾಗವಾಗಿಯೇ ಇರುತ್ತದೆ. ಆದ್ದರಿಂದ ಕವಿತೆಗೆ ‘ಸ್ವರಸಂಯೋಜನೆ’ ಎನ್ನುವುದು ಶೀರ್ಷಿಕೆಯಾದರೂ ಅದು ರಾಗಸಂಯೋಜನೆಯೇ ಆಗಿರುತ್ತದೆ. ಆದ್ದರಿಂದ ‘ರಾಗಸಂಯೋಜನೆ’ ಎನ್ನುವ ಬಲಕೆಯೇ, ಶೀರ್ಷಿಕೆಯೇ, ಅತ್ಯಂತ ಸಮಂಜಸವಾದದ್ದು ಮತ್ತು ಶಾಸ್ತ್ರಬದ್ಧವಾದದ್ದು.

ತಾಂತ್ರಿಕವಾಗಿ ನೋಡಿದಾಗ ಸ್ವರಗಳಿಗೆ ಅವು ಬಿಡಿಯಾಗಿದ್ದಾಗ ಯಾವ ವ್ಯಕ್ತಿತ್ವವೂ ಇಲ್ಲ. ಅವು ರಾಗದೊಳಗಿದ್ದಾಗಲೇ ಅವುಗಳಿಗೆ ಇಡಿಯಾದ ಒಂದು ಭಾವನೆ, ವ್ಯಕ್ತಿತ್ವೂ ಸೃಷ್ಠಿಯಾಗುವುದು. ಒಂದು ಸ್ವರ ಇನ್ನೊಂದರ ಜೊತೆ ಸೇರಿದಾಗಲೇ ಅದೂ ಕನಿಷ್ಠ ಐದು ಸ್ವರವಾದರೂ ಸೇರಿದಾಗ ಒಂದು ಭಾವವನ್ನು ವ್ಯಕ್ತಪಡಿಸಲು ಸಾಧ್ಯ. ಹೀಗೆ ಗುಂಪಾಗಿ ಸೇರಿದ ಸ್ವರಗಳೇ ಭಾವವಾಹಕಗಳಾಗಿ ‘ರಾಗ’ ವಾಗುತ್ತದೆ. ರಾಗ ಎಂದ ಕೂಡಲೇ ಒಂದು ಶಿಸ್ತು, ಕಟ್ಟುಪಾಡು ಇರುತ್ತದೆ. ಸಹಜ ಸ್ವರಗಳು ಅದರಲ್ಲಿ ಬರುವ ಹಾಗೆ, ಅನ್ಯ ಸ್ವರಗಳು ಬರುವ ಹಾಗೆ ಇಲ್ಲ. ಹಾಗೆ ಬಂದಾಗ ನಿಯಮದ ಉಲ್ಲಂಘನೆ ಆಗುತ್ತದೆ. ರಾಗ ಸಂಯೋಜನೆಯಲ್ಲಿ ದಾರಿ ತಪ್ಪಿದ ಅಪವಾದ ಬರುತ್ತದೆ, ಎಂಬ ಕಾರಣದಿಂದ ‘ಸ್ವರಸಂಯೋಜನೆ’ ಎಂಬ ಹೆಸರು ಸೂಕ್ತವಾಗಿರಬಹುದು. ಅಥವಾ ಶಾಸ್ತ್ರೀಯ ಶಿಸ್ತಿನ ಗೆರೆಯಿಂದ ಆಚೆ ಬರುವ ಕಾರಣಕ್ಕಾಗಿ ‘ಸ್ವರ ಸಂಯೋಜನೆ’ ಎಂದಿಟ್ಟುಕೊಳ್ಳಬಹುದು. ಕವಿತೆಯನ್ನು ರಾಗದ ಆಧಾರದಲ್ಲಿ ಪ್ರಾರಂಭಿಸಿ ನಂತರ ಅರ್ಥಕ್ಕನುಗುಣವಾಗಿ ಅದನ್ನು ಹಂತ ಹಂತವಾಗಿ ವಿಸ್ತರಿಸಿಕೊಳ್ಳುವ ಸಂಯೋಜನೆಗಳಲ್ಲಿ ಕಾಣುತ್ತೇವೆ. ಇದನ್ನೇ ಕವಿತೆಯೂ ತನ್ನ ರಚನಾ ಕ್ರಮದಲ್ಲಿ ಹೊತ್ತುಕೊಂಡಿರುವುದು. ಕವಿತೆ ಹುಟ್ಟುವಾಗ ಭಾವವೊಂದರಿಂದ ಪ್ರಾರಂಭಿಸಿ ಹಂತ ಹಂತವಾಗಿ ಅರ್ಥಗಳ ಪದರ ಪದರಗಳನ್ನು ಬಿಚ್ಚಿಡುತ್ತಾ ಅಪೂರ್ವ ಅನುಭವವನ್ನು ಸಾಂದ್ರೀಕರಿಸಿದಂತೆ, ಸಂಕೀರ್ಣತೆಯನ್ನು ತೋರಿದಂತೆ, ಅದಕ್ಕೆ ಸೂಕ್ತವಾದ ಸಂಗೀತ ಸಂಯೋಜನೆ ಮಾಡುವಾಗ, ರಾಗವೊಂದನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ನಂತರ ಭಾವಕ್ಕೆ ಹೊಂದುವಂತಹ ಸ್ವರಗಳನ್ನು ಅದರ ಸುತ್ತಲೂ ಅರ್ಥಕ್ಕೆ ಹೊಂದುವಂತೆ, ವಿವಿಧ ಮಜಲುಗಳ ಮೂಲಕ ಕಟ್ಟಿಕೊಡುವುದೇ ಸುಗಮಸಂಗೀತದ ಸಂಯೋಜನೆಯ ಶೈಲಿಯಾಗಿದೆ. ಆದ್ದರಿಂದ ಸುಗಮಸಂಗೀತಕ್ಕೆ ಸಂಗೀತ ಸಂಯೋಜನೆ ಮಾಡುವುದನ್ನು ‘ಸ್ವರಸಂಯೋಜನೆ’ ಅನ್ನುವುದಕ್ಕಿಂತ ‘ರಾಗಸಂಯೋಜನೆ’ ಎನ್ನುವುದು ಹೆಚ್ಚು ಅರ್ಥಪೂರ್ಣವಾಗಿದೆ. ಮತ್ತು ಧ್ವನಿಪೂರ್ಣವಾಗಿದೆ. ‘ರಾಗ’ ಎನ್ನುವ ಹೆಸರೇ-ಕವಿತೆಯ ಸಂಗೀತ ಸಂಯೋಜನೆಗೆ ಪೂರಕವಾಗಿದೆ. ‘ರಾಗ’ ಎಂದರೆ ‘ಬಣ್ಣ’ ‘ಪ್ರೀತಿ’, ‘ರಂಜನೆ’ ಇತ್ಯಾದಿ ಅರ್ಥಗಳು ಕವಿತೆಯ ವ್ಯಕ್ತಿತ್ವವನ್ನು, ಭಾವಾರ್ಥವನ್ನು ಬಿಂಬಿಸುವಲ್ಲಿ ಯಶಸ್ವಿಯಾಗುತ್ತದೆ. ರಾಗದಿಂದ ರಂಗೇರುತ್ತಾ ಕವಿತೆಯ ಅಂತರಂಗವನ್ನು ಬಿಂಬಿಸುವ ಸುಗಮಸಂಗೀತ ಇಂದು ಅತ್ಯಂತ ಜನಪ್ರಿಯ ಗಾಯನ ಪ್ರಕಾರವಾಗಿದೆ.

ಸಂಯೋಜಕರು ಮತ್ತು ಶೈಲಿ

‘ಸುಗಮಸಂಗೀತ’ ಹಿಂದೆಯೇ ಹೇಳಿರುವಂತೆ ನವೋದಯ ಕಾಲದಿಂದ ಹುಟ್ಟಿಕೊಂಡ ಗೀತಗಾಯನ ಪ್ರಕಾರ. ಕವಿತೆ ಹೇಗೆಲ್ಲಾ ಸಂದರ್ಭಕ್ಕೆ, ಜನರ ಅಭಿರುಚಿಗೆ, ಸಾಮಾಜಿಕ ಸ್ಪಂದನಕ್ಕೆ ತನ್ನನ್ನು ತೆತ್ತುಕೊಂಡಿತೋ, ಹಾಗೆಯೇ, ಗೀತವೂ ಅದನ್ನು ಅನುಸರಿಸಿಕೊಂಡೇ ಬಂದಿದೆ. ಕವಿತೆ ದೇಶಭಕ್ತಿಯ ಭಾವದಲ್ಲಿದ್ದಾಗ, ಸ್ವಾತಂತ್ರ್ಯದ ಹಂಬಲದಲ್ಲಿದ್ದಾಗ, ನಾಡಪ್ರೇಮದ ಅಭಿವ್ಯಕತಿಯಲ್ಲಿದ್ದಾಗ, ಅಭಿವ್ಯಕ್ತವಾಗುತ್ತಿದ್ದ ಭಾವಗಳಿಗೆ ಪೂರಕವಾಗಿ ರಾಗಸಂಯೋಜನೆಗೊಳ್ಳುತ್ತಿದ್ದು ಸ್ವಾತಂತ್ರ್ಯದ ಅನಂತರ ಬಿಡುಗಡೆಯ ಹರ್ಷ, ಮುಕ್ತಮನಸ್ಸಿನ ನೆಮ್ಮದಿ, ನಾಡಭಕ್ತಿ ಮುಂತಾದ ಭಾವಗೀತೆಗಳು ಹುಟ್ಟಿಕೊಳ್ಳುತ್ತಿದ್ದವು. ಸಾಮಾಜಿಕ ಬದಲಾವಣೆಗಳು ಕಾವ್ಯದ ಮೇಲೆ ಬದಲಾವಣೆ ತಂದಂತೆ, ಗೀತೆಗಳೊಳಗೂ ತಂದವು. ಇದು ಅನಿವಾರ್ಯವೂ ಆಯಿತು. ಸ್ವಾತಂತ್ರ್ಯ ಪೂರ್ವಗೀತೆಗಳು ದುಃಖದ ಛಾಯೆಯನ್ನು ಕೆಲವೆಡೆ ವ್ಯಕ್ತಪಡಿಸಿರುವುದೂ ಕಂಡುಬರುತ್ತದೆ. ಸ್ವಾತಂತ್ರ್ಯೋತ್ತರದ ಗೀತೆಗಳು ಆತ್ಮವಿಶ್ವಾಸದ, ಉಲ್ಲಾಸದ ಗೀತೆಗಳಾಗಿ ಅಭಿವ್ಯಕ್ತವಾಗಿವೆ.ಕವಿತೆಗಳಲ್ಲಿ ರಾಗ ಸಂಯೋಜನೆ, ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಬಂದಿರುವುದೇ ಸುಗಮಸಂಗೀತದ ಇಂದಿನ ಬೆಳವಣಿಗೆಗೆ ಕಾರಕವೂ, ಪೂರಕವೂ ಆಗಿದೆ. ಎಂಬುದು ಗಮನಾರ್ಹ. ಕವಿತೆ ಸಂಯೋಜಕರ, ಸಂಯೋಜನೆಯ ಶೈಲಿಯಿಂದ ಭಿನ್ನ, ಭಿನ್ನ ಮಾದರಿಯಲ್ಲಿ ಮೂಡುತ್ತಾ ಬರುತ್ತಿದೆ. ಇದಕ್ಕೆ ಕಾರಣ ಸಂಯೋಜಕನ ರಾಗ ಕಲ್ಪನೆ, ಕವಿತೆಯನ್ನು ಅವನು ಅರ್ಥೈಸಿರುವ ಬಗ್ಗೆ ಅವನ ಗ್ರಹಿಕೆ, ಒಬ್ಬನಿಗಿಂತಾ ಮತ್ತೊಬ್ಬನಲ್ಲಿ ಬೇರೆಯೇ ಆಗಿರುತ್ತದೆ. ಕವಿತೆಯಲ್ಲಿ ಕವಿಯ ವ್ಯಕ್ತಿತ್ವವಿರುವಂತೆ, ಗೀತೆಯಲ್ಲಿ ರಾಗ ಸಂಯೋಜಕನ ವ್ಯಕ್ತಿತ್ವವಿರುತ್ತದೆ. ಬಾಳಪ್ಪ ಹುಕ್ಕೇರಿಯವರ ಕಲ್ಪನೆಗಿಂತ, ಕಾಳಿಂಗರಾವ್ ಅವರ ಕಲ್ಪನೆ ಬೇರೆಯೇ ಆಗಿರುತ್ತದೆ. ಅವರ ಬದುಕಿನ ಅನುಭವ, ಅವರ ಯೋಚನಾಲಹರಿ, ಅವರ ಪಾಂಡಿತ್ಯ, ತಿಳುವಳಿಕೆ, ಜೀವನ, ಸ್ವಭಾವ ಎಲ್ಲವೂ ಬೇರೆ, ಬೇರೆ. ಹಾಗಾಗಿ ಸುಗಮಸಂಗೀತದಲ್ಲಿ ರಾಗ ಸಂಯೋಜನೆ ಕವಿತೆಯಿಂದ ಕವಿತೆಗೆ ಭಿನ್ನ ಭಿನ್ನ ಶೈಲಿಯಲ್ಲಿ ಹರಿದುಕೊಂಡು ಬಂದಿದೆ. ಸಂಯೋಜಕ ಹಾಡುಗಾರ, ಇಬ್ಬರೂ ಒಬ್ಬರೇ ಆದಾಗ ಇದು ವಿಶಿಷ್ಟವಾಗುತ್ತದೆ. ಸಂಯೋಜಕ ಮತ್ತು ಹಾಡುಗಾರರು ಬೇರೆ ಬೇರೆ ಆದಾಗ ಪರಿಣಾಮ ಒಳ್ಳೆಯದೂ ಆಗಬಹುದು ಅಥವಾ ಅರ್ಥಹೀನವೂ ಆಗಬಹುದು.

ಸುಗಮಸಂಗೀತ ಸಂಯೋಜಕರು

ನಮ್ಮ ಕರ್ನಾಟಕದಲ್ಲಿ ಸುಗಮಸಂಗೀತ ಸಂಯೋಜಕರಲ್ಲಿ ಪ್ರಥಮರೆಂದರೆ ಹುಕ್ಕೇರಿಯ ಬಾಳಪ್ಪನವರು. ನಂತರ ಪಾಂಡೇಶ್ವರದ ಕಾಳಿಂಗರಾಯರು, ಪದ್ಮಚರಣ, ಧಾರವಾಡದ ಪಿ.ಆರ್. ಭಾಗವತ್ ಬೆಂಗಳೂರಿನ ಹೆಚ್.ಕೆ. ನಾರಾಯಣ, ಮೈಸೂರು ಅನಂತಸ್ವಾಮಿ, ವಸಂತ ಕನಕಾಪುರ್ ಸಿ. ಅಶ್ವಥ್ ಮುಂತಾದವರು ಇವರೆಲ್ಲಾ ಸುಗಮಸಂಗೀತಕ್ಕೆ ಶ್ರೀಮಂತಿಕೆಯನ್ನು ತಂದ ಸಂಗೀತ ಸಂಯೋಜಕರು. ಕುವೆಂಪು, ಬೇಂದ್ರೇ, ಪು.ತಿ.ನ., ರಾಜರತ್ನಂ, ಕೆ.ಎಸ್.ನರಸಿಂಹಸ್ವಾಮಿ ಮುಂತಾದ ಕವಿಗಳು ತಮ್ಮ ಸ್ವಂತಿಕೆಯಿಂದ, ವಿಭಿನ್ನವಾಗಿ ನಿಂತ ಹಾಗೆ, ಮೇಲಿನ ಸುಗಮಸಂಗೀತ ಸಂಯೋಜಕರು ತಮ್ಮ ಸ್ವೋಪಜ್ಞತೆಯಿಂದ ‘ಸುಗಮಸಂಗೀತ’ ಪ್ರಕಾರದಲ್ಲಿ ವಿಶಿಷ್ಟ ವ್ಯಕ್ತಿಗಳಾಗಿ ತಮ್ಮ ಹೆಸರು ಮೂಡಿಸಿದ್ದಾರೆ. ಸುಗಮಸಂಗೀತ ಶಾಸ್ತ್ರೀಯ ಸಂಗೀತದ ಮಡಿಲಿನಲ್ಲಿಯೇ ಸುಗಮಸಂಗೀತ ಎದ್ದು ಬಂದಿತು’- ಎಂಬುದನ್ನು ಗಮನಿಸಿದ್ದೇವೆ. ಶಾಸ್ತ್ರೀಯ ಸಂಗೀತಗಾರರೇ ಇದಕ್ಕೆ ನಾಂದಿಹಾಡಿದ್ದನ್ನೂ, ರಾಗ ಸಂಯೋಜಿಸಿ ಆಕಾಶವಾಣಿಯಲ್ಲಿ ಹಾಡಿದ್ದನ್ನು ಇತಿಹಾಸದ ಪುಟಗಳಲ್ಲಿ ಮನಗಂಡಿದ್ದೇವೆ. ಹಾಗೆಯೇ ಸುಗಮಸಂಗೀತಕ್ಕೆ ರಾಗ ಸಂಯೋಜಿಸಿ, ಅದನ್ನು ಬಣ್ಣಗೊಳಿಸಿದವರೂ ನಮ್ಮ ಶಾಸ್ತ್ರೀಯ ಸಂಗೀತಗಾರರೇ ಆಗಿದ್ದಾರೆ. ಇವರ ನಂತರ ಸುಗಮಸಂಗೀತಕ್ಕೆ ರಾಗ ಸಂಯೊಜಿಸಿದವರು ನಾಟಕರಂಗದಲ್ಲಿ ಅದ್ವಿತೀಯ ಪಾಂಡಿತ್ಯವನ್ನು ಗಳಿಸಿದ್ದವರು ಆಗಿದ್ದಾರೆ. ಅಂದರೆ ನನಗೆ ‘ಸುಗಮಸಂಗೀತ’ದಲ್ಲಿ ಎರಡು ರೀತಿಯ ಪ್ರಸಿದ್ಧ ಶೈಲಿಗಳು ತೋರುತ್ತಿವೆ. ಮೊದಲನೇಯದು ಶಾಸ್ತ್ರೀಯ ಸಂಗೀತಗಾರರು ರೂಪಿಸಿದ ಒಂದು ಶೈಲಿಯಾದರೆ, ಮತ್ತೊಂದು ನಾಟಕರಂಗದಿಂದ ಅನುಭವಪಡೆದುಕೊಂಡವರು ರೂಪಿಸಿದ ಶೈಲಿ-ಮೊದಲನೆಯ ಶಾಸ್ತ್ರೀಯ ಸಂಗೀತಗಾರರ ಶೈಲಿಗೆ ಪದ್ಮಚರಣ್, ವಸಂತ್ ಕನಕಾಪುರ-ಎಚ್.ಕೆ.ನಾರಾಯಣ್-ವಿ.ಆರ್.ಭಾಗವತ್, ಸೇರಿದರೆ, ಎರಡನೇಯ ಶೈಲಿಗೆ ಕಾಳಿಂಗರಾವ್, ಬಾಳಪ್ಪ ಹುಕ್ಕೇರಿ, ಮೈಸೂರು ಅನಂತಸ್ವಾಮಿ ಮತ್ತು ಸಿ. ಅಶ್ವಥ್ ಇವರು ಸೇರುತ್ತಾರೆ. ಮೊದಲನೆಯ ಶೈಲಿಯಲ್ಲಿ ಶಾಸ್ತ್ರಿಯ ರಾಗಗಳ ಶಿಸ್ತು, ಕಟ್ಟುಪಾಡುಗಳು ಕಂಡುಬಂದರೆ, ಎರಡನೆಯ ಶೈಲಿಯಲ್ಲಿ, ಸ್ವತಂತ್ರವೂ, ಸರಳವೂ ಆದ ರಾಗಾಭಿನಯವಿರುತ್ತದೆ. ಕವಿತಾ ವಾಚನಕ್ಕೆ ಅತ್ಯಂತ ಹತ್ತಿರವಾಗಿದ್ದ ಈ ಶೈಲಿಯಲ್ಲಿ ಸಂಯೋಜಿಸಲ್ಪಟ್ಟ ನೂರಾರು ಗೀತೆಗಳು ಜನಪ್ರಿಯವಾದವು. ಸುಗಮಸಂಗೀತದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದವು. ಸುಗಮವಾಗಿ ಸರಳವಾಗಿ ಸಹೃದಯರ ಹೃದಯದೊಳಗೆ ಇಳಿದವು.

ಶಾಸ್ತ್ರೀಯ ಶೈಲಿ

ಪದ್ಮಚರಣ್ (.ವಿ.ಕೃಷ್ಣಮಾಚಾರ್) (೨೧೧೯೨೦೨೨೨೦೦೨) : ಉತ್ತರ ಕರ್ನಾಟಕದಲ್ಲಿ ಜನರನ್ನು ರಂಜಿಸುವುದರ ಜೊತೆಗೆ, ಹಳ್ಳಿಯ ಜೀವನವನ್ನು ತಿದ್ದಲು, ಮೂಢನಂಬಿಕೆಗಳ ವಿರುದ್ಧ ಹೋರಾಡಲು, ಶಿಕ್ಷಣ, ಕುಟುಂಬ ಯೋಜನೆಗಳನ್ನು ಪ್ರಚಾರ ಮಾಡಲು ಬಾಳಪ್ಪ ಹುಕ್ಕೇರಿಯವರು ಹೇಗೆ ತಮ್ಮ ಗಂಡುದನಿಯನ್ನು ಒತ್ತೆಯಾಗಿಟ್ಟರೋ ಹಾಗೆಯೇ ಮೈಸೂರು ಮತ್ತು ದಕ್ಷಿಣ ಕನ್ನಡ ಪ್ರಾಂತ್ಯದಲ್ಲಿ ಕಾಳಿಂಗರಾಯರು ಅದರ ಇನ್ನೊಂದು ಶಾಖೆಯಾದರು. ಇವರಿಬ್ಬರೂ ಉತ್ಸವ ಮೂರ್ತಿಗಳಂತೆ ಊರೂರು ಅಲೆದು ತಾವು ಕಲಿತು ಬೇರೆಯವರಿಗೂ ತಾವು ಕಲಿತದ್ದನ್ನು ಕಲಿಸಿದರು. ಕರ್ನಾಟಕದ ಎರಡೂ ಮೂಲೆಗಳ ವಿಭಿನ್ನ ಮುಖವಾಗಿ ಬಾಳಪ್ಪ ಮತ್ತು ಕಾಳಿಂಗರಾಯರು ಸುಗಮಸಂಗೀತವನ್ನು ಪಸರಿಸುತ್ತಿರುವಾಗಲೇ ಮೈಸೂರಿನಲ್ಲಿ ನೆಲೆಸಿದ್ದ (ಆಂಧ್ರದಿಂದ ಬಂದು) ಪದ್ಮಚರಣ್ ಎಂಬ ಶಾಸ್ತ್ರೀಯ ಸಂಗೀತ ವಿದ್ವಾಮಸರು (ಪಿಟೀಲುವಾದಕರು) ಮೈಸೂರು ಆಕಾಶವಾಣಿಯಲ್ಲಿ ೧೯೪೯ರ ಆಗಸ್ಟ್ ತಿಂಗಳಿನಲ್ಲಿ ನಿಲಯದ ಕಲಾವಿದನಾಗಿ ಸೇರಿಕೊಂಡರು. ೧೯೪೭ರಿಂದಲೇ ಭಾವಗೀತೆಗೆ ಮಟ್ಟು ಕೂಡಿಸುತ್ತಿದ್ದ ಎ.ವಿ.ಕೃಷ್ಣಮಾಚಾರ್ಯರು ಪದ್ಮಚರಣ್ ಆದದ್ದು ಭಾವಗೀತೆಯ ಸಂಯೋಜಕರಾಗಿ ಬಹಳ ದಿನಗಳಾದ ಮೇಲೆ. ಅವರ ಪ್ರಥಮ ಸಂಯೋಜನೆ ‘ಪುಣ್ಯಭೂಮಿ ಭಾರತಿ ಜನ್ಮಭೂಮಿ ಭಾರತಿ’ ಎಂಬ ಗೀತೆ. ೧೯೫೦ರಲ್ಲಿ ಸಂಯೋಜಿಸಿದ್ದು.

ಸ್ವಭಾವತಃ ಶಿಸ್ತಿನವರಾಗಿದ್ದ ‘ಪದ್ಮಚರಣ್’ ಅವರ ಸಂಯೋಜನೆಗಳೂ, ಶಾಸ್ತ್ರೀಯ ಸಂಗೀತದ ಉಸಿರಿನೊಂದಿಗೆ ಹೊಸ ಶರೀರವನ್ನು ಪಡೆದು ಹೊಸ ಪಾಕವೇ ಆಗಿತ್ತು. ೧೯೫೦ ‘ಪದ್ಮಚರಣ್’ ಸಂಯೋಜಿಸಿದ್ದ ಕುವೆಂಪು ಅವರ ‘ಶೂನ್ಯತೆ ಏನಿದು’ (ಸಿಂಧು ಭೈರವಿ)-ಗೋಪಾಲಕೃಷ್ಣ ಅಡಿಗರ ಆರದಿರು ಆರದಿರು ಓ ನನ್ನ ಬೆಳಕೆ (ರಾಗಮಾಲಿಕೆ) ಕವಿತೆಗಳು ಪದ್ಮಚರಣರ ಸಾಮಥ್ಯಕ್ಕೆ ಹಿಡಿದ ಕನ್ನಡಿಯಾಗಿದ್ದವು. ಯಾವುದೇ ಸಂಘ ಸಂಸ್ಥೆಯಲ್ಲಿ ಈ ಭಾವಗೀತೆಗಳೇ ಪ್ರಾರ್ಥನಾ ಗೀತೆಗಳಾಗಿದ್ದವು. ಮೈಸೂರಿನ ಅರಸರಾಗಿದ್ದ ಶ್ರೀ ಜಯಚಾಮರಾಜ ಒಡೆಯರುಈ ಎರಡು ಹಾಡುಗಳನ್ನು ಅಪೇಕ್ಷಪಟ್ಟು ಹಾಡಿಸುತ್ತಿದ್ದರು. ಕವಿ ಪು.ತಿ.ನರಸಿಂಹಾಚಾರ್ಯರ ‘ನಿಲ್ಲಿಸದಿರುವನಮಾಲಿ’ (ಶಿವರಂಜನಿರಾಗ) ಡಿ.ವಿ.ಜಿ.ಯವರ ವನಸುಮದೊಳೆನ್ನ ಜೀವನವು (ಮೋಹನ, ಬಾಗೇಶ್ರೀ-ಹಿಂದೋಳ-ರಾಗಮಾಲಿಕೆ) ಕುವೆಂಪು ಅವರ ನಿನ್ನೆಡೆಗ ಬರುವಾಗ, (ತಿಲಾಂಗ್) ರಾಗಗಳ ೧೯೫೦ರ ದಶಕದ ಜನಪ್ರಿಯ ಗೀತೆಗಳಾಗಿದ್ದವು. ೧೯೫೦ರ ದಶಕದ ಸಾಹಿತ್ಯ ಸಂವೇದನೆಯೇ ಹೀಗೆ. ಸಂಗೀತದ ಮೂಲಕ ಸಂವಹನಗೊಂಡಿತ್ತು ಎನ್ನುವುದು ಗಮನಾರ್ಹ.

ಭಾವಗೀತೆಯ ಮೋಹ ಹೆಚ್ಚಿಸುವಲ್ಲಿ ‘ನಿಲ್ಲಿಸದಿರು ವನಮಾಲಿ’ ಗೀತೆಯ ಪಾತ್ರ ದೊಡ್ಡದಾಗಿತ್ತು. ಶಾಸ್ತ್ರೀಯ ಸಂಗೀತಗಾರರಿಗೂ ಹುಚ್ಚು ಹಿಡಿಸಿದ್ದು ಕೀರ್ತನೆ ಅಲ್ಲದ, ದಾಸರಪದವಲ್ಲದ ಹೊಸಬಗೆಯ ಹಗುರವಾದ ಪದಗಳುಳ್ಳ ಆತ್ಮೀಯ ಸಾಹಿತ್ಯ. ಆಡುಮಾತಿನ ನಿವೇದನೆ ಎದಯಾಂತರಾಳದ ತುಮುಲ, ದುಗುಡ, ಭಾವತೀವ್ರತೆಗಳಿಂದ ತುಂಬಿದ ಗೀತೆ. ಮಡಿವಂತ ಹಾಡುಗಾರರಿಂದ ಹಿಡಿದು ಸಾಮಾನ್ಯ ಹಾಡುಗಾರರವರೆಗೆ ಎಲ್ಲರೂ ಮೆಚ್ಚಿ ಕಲಿತು ಹಾಡುತ್ತಿದ್ದ ಹಾಡಬಹುದಾಗಿದ್ದ ಆ ಗೀತೆ. ಜೊತೆಗೆ ಶಿವರಂಜನಿ ರಾಗ ಅಂದಿಗೆ ಹೊಚ್ಚ ಹೊಸ ಆಕರ್ಷಣೆಯೂ ಆಗಿದ್ದುದು.

ಗೋಪಾಲಕೃಷ್ಣ ಅಡಿಗರ ‘ನನ್ನ ನಿನ್ನ ಬಳುವಳಿ’ – ವೀ.ಸೀ. ‘ವರುಷ ಹೋಯಿತು ವರುಷ ಬಂದಿತು’ ಮುಂತಾದ ಹಾಡುಗಳ ಸಂಗೀತದ ಭಾರ ಸ್ವಲ್ಪ ಹೆಚ್ಚೇ ಎನ್ನಬಹುದು. ಅವರ ಪ್ರಪ್ರಥಮ ಸಂಯೋಜನೆಗಳಲ್ಲಿ ದುಃಖದ ಛಾಯೆಯೇ ತುಂಬಿತ್ತು. ನಂತರದಲ್ಲಿ ಹಂತಹಂತವಾಗಿ ವಿಭಿನ್ನರೂಪ ಪಡೆದುಕೊಂಡವು. ಕುವೆಂಪು ಅವರ ‘ಯಾವ ಜನ್ಮದ ಮೈತ್ರಿ’ (ರಾಗಮಾಲಿಕೆ) ಅಡಿಗರ ‘ಇಂದುಕೆಂದಾವರೆ’, ರಾಘವೇಂದ್ರ ಇಟಗಿಯವರ ‘ನುಡಿಸು ವೀಣೆಯ ವೈಣಿಕ,’, ವೀಸೀ ಅವರ ‘ನಡೆಹಯವೆ ನಡೆ ಮುಂದಕ್ಕೀಗ’ ಗೀತೆಗಳು ಪದ್ಮಚರಣರ ಸಂಯೊಜನೆಯ ವಿಕಾಸ ಗೀತೆಗಳೆನ್ನಬಹುದು. ಕುವೆಂಪು ಅವರ ‘ಕಳಚಿ ಬೀಳುವೆನಯ್ಯಾ ನಿನ್ನ ಸಿರಿಯಡಿಗೆ’-ಎಂಬ ಕವಿತೆಯ ರಾಗ ಸಂಯೋಜನೆ ಕವಿ ಕುವೆಂಪು ಅವರಿಗೆ ಪ್ರಿಯವಾಗಿತ್ತು. ಕುವೆಂಪು ಅವರ ಮತ್ತೊಂದು ಗೀತೆ ‘ಹಗಲೆಲ್ಲಾ ಧೂಳಿನಲ್ಲಿ ಗೊಂಬೆಯಾಟವನಾಡಿ’ ಎಂಬ ಕವಿತೆಯಲ್ಲಿ ಸಹಜತೆ ಮಾರ್ದನಿಗೊಂಡಿತ್ತು. ‘ಅಲ್ಲಿ ಇಲ್ಲಿ ನಾ ನೋಡಿದಲ್ಲಿ ನೀ’-ಎಂಬ ಕರ್ಕಿಯವರ ಕವಿತೆ, ‘ನೆನ್ನೆಗಳನು ನೆಲಕೆ ಮೆಟ್ಟಿ’-ಎಂಬ ಆನಂದಕಂದರ ಕವಿತೆ, ‘ಒಲವವೆಂಬ ಹೊತ್ತಿಗೆಯ ಓದ ಬಯಸುತ’, ‘ನನ್ನ ಹರಣ ನಿನಗೆ ಶರಣ’ ಎಂಬ ಕವಿತೆಗಳು ಪದ್ಮಚರಣರ ಸಂಯೋಜನೆಯ ಬೆಳವಣಿಗೆಯ ಹಂತಗಳಾದವು.

ಐವತ್ತರ ದಶಕದಲ್ಲಿ ಪ್ರಣಯದ ಭಾವ ಚಿಲುಮೆಯನ್ನು ಉಕ್ಕಿಸಿದ ಕುವೆಂಪು ಅವರ ‘ಹೃದಯ ಕಮಲದಿ ಮಧುರ ಪ್ರೇಮ ಮಕರಂದವಿದೆ’, ‘ನಾ ನಿನಗೆ ನೀನೆನಗೆ ಜೇನಾಗುವೆ’ ಎಂಬ ಕವಿತೆಗಳಲ್ಲಿ ಪ್ರೇಮದ ತೀವ್ರತೆ, ಅರ್ಪಣಾಭಾವ, ಕೋಮಲ ಮತ್ತು ತೀವ್ರ ಮಧ್ಯಮ (ಮ೧+ಮ೨) ಗಳೆರಡರ ಬಳಕೆಯಿರುವ ಹಮೀರ್ ಕಲ್ಯಾಣಿ ರಾಗದಲ್ಲಿ ಸುವ್ಯಕ್ತವಾದವು. ಕುವೆಂಪು ಅವರ ‘ಚಂದಿರ ಬಾರೋ ಕುಣಿಯುವಂತೆ ಮತ್ತಶಿಖಿ’-ಪರಮೇಶ್ವರ ಭಟ್ಟರ ‘ದೀಪ ಹಚ್ಚು’ ಶ್ರೀ ಅವರ ‘ಏನು ಸುಖಿಯೋ ತಾನು’- ಅಡಿಗರ ‘ಯಾವ ಮೋಹನ ಮುರಲಿ’ ಎನ್.ಕೆ.ಕುಲಕರ್ಣಿ ಅವರ ‘ಸೀಕರಿಸುವೆಯೋ ದೇವಾ’ -ಮುಂತಾದವು ತಮ್ಮ ವಸ್ತು, ರೀತಿ. ಭಾವ, ಶೈಲಿ, ರೂಪಗಳಲ್ಲಿ ಒಂದೊಂದೂ ವಿಭಿನ್ನವಾದ ವ್ಯಕ್ತಿತ್ವವನ್ನು ವ್ಯಕ್ತಪಡಿಸಿದವು. ಪದ್ಮಚರಣರು ಕವಿತೆಯನ್ನು ಆಯ್ಕೆ ಮಾಡಿರುವುದರಲ್ಲೇ ಅವರ ವ್ಯಕ್ತಿತ್ವದ ಪರಿಚಯವಾಗುತ್ತದೆ. ಕವಿತೆಯಲ್ಲಿ ಕವಿಯ ಆತ್ಮ ಹುದುಗಿರುವಂತೆ, ಸಂಯೋಜಕನ ಸಂಯೋಜನೆಗಳಲ್ಲಿ ಆ ಸಂಗೀತಗಾರನ ಹೃದಯವಿರುತ್ತದೆ.

ಕುವೆಂಪು ಅವರ ಹೆಚ್ಚು ಕವನಗಳು, ಸಾಹಿತ್ಯಭಾರದಿಂದ ಇರುವ ಕವಿತೆಗಳೆಲ್ಲಾ ಪದ್ಮಚರಣ್ ತೊಡಿಸಿದ ನಾದದುಡಿಗೆಯಲ್ಲಿ ಮತ್ತಷ್ಟು ಚಂದವಾದವು. ಇವುಗಳಲ್ಲಿ ‘ಅಂತರತಮ ಹೇ ಗುರು’ (ದರ್ಬಾರಿ ಕಾನಡ) ‘ಓ ನನ್ನ ಚೇತನಾ’, ‘ನಿನ್ನ ಪದಕಮಲದಲ್ಲಿ ಮನೆ ಮಾಡಿರುವ ನನಗೆ’ ಗೀತೆಗಳು ಪದ್ಮಚರಣರನ್ನು ಎತ್ತರಕ್ಕೆ ಬೆಳೆಸಿದ ಗೀತೆಗಳು. ಇದೇ ದಶಕದಲ್ಲಿ ಪದ್ಮಚರಣರು ಸಂಯೋಜಿಸಿದ ಬೇಂದ್ರೆಯವರ ‘ಅವತರಿಸು ಬಾ ನಾರಾಯಣ’, ‘ಏಳು ಚಿನ್ನ ಬೆಳಗಾಯ್ತು ಅಣ್ಣ’ ಮೊದಲಾದವು ಗಮನಾರ್ಹವಾದವು.

೧೯೬೦ರ ದಶಕದಲ್ಲಿ ಇಂಡಿಯಾ, ಚೈನಾ ಯುದ್ಧದ ಸಂದರ್ಭದಲ್ಲಿ ಆಕಾಶವಾಣಿ ಅನೇಕ ದೇಶಭಕ್ತಿ ಗೀತೆಗಳನ್ನು ಬಿತ್ತರಿಸಿದಾಗ ಅವುಗಳಲ್ಲಿ ಬಹುಪಾಲು ಗೀತೆಗಳನ್ನು ಪದ್ಮಚರಣರು ಸಂಯೋಜಿಸಿದರು.

ಪದ್ಮಚರಣರು ೫೦ರ ದಶಕದಲ್ಲೇ ಸಂಯೋಜಿಸಿದ್ದ ಅತ್ಯಂತ ಜನಪ್ರಿಯ ಗೀತೆಗಳೆಂದರೆ ಜಿ.ಎಸ್.ಶಿವರುದ್ಪ್ಪನವರ ‘ಉಡುಗಣವೇಷ್ಟಿತ’ (ಯಮನ್) ಮತ್ತು ‘ಹೌದೇನೇ ಉಮಾ’ (ಮಾಂಡ್) ರಾಗದ ಎರಡು ಗೀತಗಳು. ಪದ್ಮಚರಣರು ಸಂಯೋಜಿಸಿದ್ದು ಸುಮಾರು ಸಾವಿರಾರು ಹಾಡುಗಳು. ಇವರ ನಂತರದಲ್ಲಿ ಬಂದವರು ಇರು ರಾಗಸಂಯೋಜಿಸಿದ್ದ ಅನೇಕ ಕವಿತೆಗಳಿಗೆ ಬೇರೆ ಬೇರೆ ರಾಗಸಂಯೋಜನೆಗಳನ್ನು ಮಾಡಿದರೂ, ಈ ಮೇಲಿನ ಎರಡು ಗೀತಗಳು ಮಾತ್ರ ಅವರದಾಗಿಯೇ ಉಳಿಯಿತು. ಕವಿತೆಯ ಗಾಂಭೀರ್ಯವನ್ನು ನಾಟಕೀಯತೆಯನ್ನು ಪ್ರತಿಬಿಂಬಿಸಿ, ಈ ಎರಡು ಹಾಡುಗಳ ಮೂಲಕ ಜಿ.ಎಸ್.ಶಿವರುದ್ರಪ್ಪನವರನ್ನು ಹಳ್ಳಿ ಹಳ್ಳಿಗೂ ಹೊತ್ತುಕೊಂಡು ಹೋಯಿತು. ಪದ್ಮಚರಣರ ಕೀರ್ತಿಯನ್ನು ಉತ್ತುಂಗಕ್ಕೇರಿಸಿದವೆಂದರೆ ಈ ಎರಡು ಗೀತಗಳು. ಇವು ಸಾರ್ವಕಾಲಿಕವಾದವೆಂಬುದೇ ಇದರ ಸಂಗೀತ ಸಂಯೋಜನೆಯ ಹೆಗ್ಗಳಿಕೆ.

ಐವತ್ತರ ದಶಕದಲ್ಲಿ ಪದ್ಮಚರಣರ ಸಂಯೋಜನೆಯಲ್ಲಿ ಕಾಣುತ್ತಿದ್ದ ಶಾಸ್ತ್ರೀಯ ಸಂಗೀತದ ಬಿಗಿ ಬಂಧ, ಗತ್ತುಗಾರಿಕೆಗಳು ಅರವತ್ತರ ದಶಕದ ಅವರ ಸಂಯೋಜನೆಗಳಲ್ಲಿ ಸ್ವಲ್ಪವೇ ಸಡಿಲಾಗಿ, ನವಿರಾಗಿ, ನಾಜೂಕಾಗುತ್ತಾ ಬಂದವು. ಕಾರನ ಅವರಿಗೆ ನಾಟ್ಯ ಸಂಗೀತದ ಸಂಪರ್ಕ ಬಂದಿದ್ದರಿಂದ ಎನ್ನಬಹುದು. ಸಾವಿರಾರು ಕವಿತೆಗಳಿಗೆ ರಾಗಸಂಯೋಜನೆ ಮಾಡಿದ ಪದ್ಮಚರಣ್ ಸಂಗೀತಜ್ಞತೆಯ ಜೊತೆಗೆ ಕವಿ ಹೃದಯವನ್ನೂ ಮೈಗೂಡಿಸಿಕೊಂಡವರು ನೂರಾರು ಕವಿತೆ. ಹಲವಾರು ಗೀತರೂಪಕಗಳನ್ನು ಆಕಾಶವಾಣಿಯ ಮತ್ತು ವೈಯುಕ್ತಿಕ ಒತ್ತಡಗಳಿಗಾಗಿ ಬರೆದರು. ೧೯೪೭ರಿಂದ ೧೯೯೪ರವರೆವಿಗೂ ರಾಗಸಂಯೋಜನೆ ಮಾಡುತ್ತಿದ್ದರು.

ಪದ್ಮಚರಣರ ರಾಗ ಸಂಯೋಜನೆಯ ಪ್ರಮುಖ ಲಕ್ಷಣವೆಂದರೆ ಸ್ವರಸ್ಥಾನ ಖಚಿತತೆ, ರಾಗದ ನಿಖರ ರೂಪ ಪ್ರಕಾಶದ ಸಾಂದ್ರತೆ. ಸಂಗೀತದಲ್ಲಿ ಯಾವ ಚಮತ್ಕಾರ, ಕಸರತ್ತುಗಳಿಲ್ಲದೆ, ರಾಗ, ಸ್ವರಗಳಲ್ಲಿ ವೈವಿಧ್ಯತೆ, ವಿಸ್ತರದ ಹರಹು ಎದ್ದು ಕಾಣುತ್ತದೆ. ಆದರೆ ಇವೆಲ್ಲಾ ಇವರ ಶಾಸ್ತ್ರೀಯ ಸಂಗೀತಕ್ಕೆ ಶಿಸ್ತಿನ ಸಿಪಾಯಿಗಳಂತೆ ವಿಧೇಯವಾಗಿರುತ್ತದೆ. ಎಲ್ಲಿಯೂ ಅನಿಶ್ಚಿತ ಉಲಿತವಾಗಲಿ, ಅನವಶ್ಯಕ ಗಮಕಗಳಾಗಲಿ ಕಾಣಲು ಸಾಧ್ಯವೇ ಇಲ್ಲ. ಶಾಸ್ತ್ರಿಯ ಸಂಗೀತದ ಮಣ್ಣಿನಲ್ಲಿ ಅರಳುವ ಅವರ ಸಂಯೋಜನೆಗಳು ಕೆಲವು ಬಾರಿ ಒಮ್ಮೆ ಕೇಳಿದ ಹಾಡಿನ ಧಾಟಿಯೇ ಮತ್ತೆ ಮತ್ತೆ ಕೇಳುತ್ತದೆ ಎನ್ನುವ ಭ್ರಮೆ ತರುತ್ತದೆ. ಕರ್ನಾಟಕ ಸಂಗೀತದ ಪದ್ಧತಿಯ ಕಟ್ಟುಪಾಡು ಅವರನ್ನು ಬಂಧಿಸಿರಬಹುದೆಂದು ಭಾಸವಾಗುತ್ತದೆ. ಆದರೆ ಪರಂಪರೆಯ ಹಾದಿಯನ್ನು ಬಿಟ್ಟು ಅಡ್ಡದಾರಿಯಲ್ಲಿ ನುಗ್ಗಿ ಬರುವುದೇ ಹೊಸತನವಲ್ಲ ಎಂದು ಭಾವಿಸುವ ಪದ್ಮಚರಣ್ ಸುಗಮಸಂಗೀತಕ್ಕೆ ಭದ್ರವಾದ ಬುನಾದಿಯನ್ನು ಹಾಕಿಕೊಟ್ಟ ಇತಿಹಾಸಕಾರೆಂಬುದು ಸುಸ್ಪಷ್ಟ. ಅವರು ಪಿಟೀಲು ವಾದಕರಾಗಿದ್ದರಿಂದ ಆ ವಾದ್ಯದಲ್ಲಿ ಪ್ರಕಟವಾಗುವ ಆದ್ರತೆ, ಮಾಧುರ್ಯ, ನಿವೇದನಾಭಾವ, ಅಂತರಂಗವನ್ನು ಅಲ್ಲಾಡಿಸುವ ನೋವಿನ ಮಿಡಿತಗಳ ಜೊತೆಗೆ, ಪ್ರಚಂಡವೇಗ, ಉತ್ಸಾಹ, ಪ್ರೀತಿಯನ್ನು ವ್ಯಕ್ತ ಮಾಡುವ ಲವಲವಿಕೆ ಇವಿಷ್ಟೂ ಅವರ ಸಂಗೀತ ಸಂಯೋಜನೆಗೆ ಪೂರಕವಾಗಿ ಬೆರೆತುಹೋದವು.

ಪದ್ಮಚರಣರ ಸಂಗೀತ ಸಂಯೋಜನೆಗಳಲ್ಲಿ ಪ್ರತಿ ಮಧ್ಯಮದ ಬಳಕೆ ಅತಿಹೆಚ್ಚು. ಅವರ ಮೋಹವೆಲ್ಲಾ ಶುದ್ಧ ಮಧ್ಯಮಕ್ಕಿಂತ (ಮ೧) ಪ್ರತಿ ಮಧ್ಯಮ (ಮ೨) ಬಳಸಿದ ಸ್ವರಸಂಯೋಜನೆಗಳಲ್ಲಿ ಎದ್ದು ಕಾಣುತ್ತದೆ. ಈ ಮಧ್ಯಮ (ಮ೨) ಸ್ವರದ ಗುಣವಾದರೂ ಭಾಷೆಯ ಭಾವ ಬಳುಕುಗಳನ್ನು ಮತ್ತಷ್ಟು ಸುಪ್ರಕಾಶಗೊಳಿಸುವಂತಹದ್ದು. ಇದು ಬದುಕಿನ ಭಾವನಾತ್ಮಕ ಸಂಬಂಧಗಳನ್ನು ಸೂಕ್ಷ್ಮವಾಗಿ ಮೂರ್ತಿಕರಿಸುತ್ತದೆ.

ಪದ್ಮಚರಣರನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದ ಅನೇಕ ಮಹನೀಯರು ಅವರು ಪ್ರತಿ ಮಧ್ಯಮವನ್ನು ಬಳಸಿದ ರಾಗಸಂಯೋಜನೆ ಮಾಡಿದ ಎಲ್ಲಾ ಹಾಡುಗಳನ್ನೂ ಕಲ್ಯಾಣಿ ರಾಗವೆಂದು ಗುರುತಿಸಿ ಆರೋಪಿಸಿದ್ದಾರೆ. ಕಲ್ಯಾಣಿ ರಾಗದಲ್ಲಿ ಅವರೇ ರಾಗ ಸಂಯೋಜಿಸಿರುವ ಅಪೂರ್ವವಾದ ಹತ್ತಾರು ಹಾಡುಗಳಿವೆ. ಅವು ಸುಗಮಸಂಗೀತಕ್ಕೂ ಶಾಸ್ತ್ರೀಯ ಸಂಗೀತಕ್ಕೂ ಕಟ್ಟಿರುವ ಸೇತುವೆಗಳಾಗಿವೆ. ಎರಡೂ ಪ್ರಕಾರದಲ್ಲೂ ಸಲ್ಲುವಂತಹದ್ದು. ಉದಾ: ‘ಶೃಂಗಪುರಾಧೀಶ್ವರೀ’ ಮುಂತಾದವು. ಸಾಹಿತ್ಯ-ಸಂಗೀತ ಎರಡೂ ಅವರದ್ದೇ ಆಗಿವೆ.

ಪದ್ಮಚರಣರ ಸಂಯೋಜನೆಗಳ ಮೂರು ಅಂಶಗಳನ್ನು ನಾವು ಗಮನಿಸಬಹುದು. ೧) ಶಾಸ್ತ್ರೀಯ ತೆಯ ಸೊಗಡು ೨) ಪರಂಪರೆಯ ಪ್ರಶಾಂತತೆ ೩) ಸಂಯಮದ ನಿರೂಪಣೆ-ಇವು ಮೂರು ಪದ್ಮಚರಣ್ ಅವರ ಸಂಯೋಜನೆಯ ಪ್ರಮುಖ ಲಕ್ಷಣಗಳು. ಇವರ ಸಂಗೀತ ಸಂಯೋಜನೆ ಜುಳು ಜುಳು ಹರಿಯುವ ಶುದ್ಧ ತಿಳಿನೀರಿನಂತೆ. ಅದರಲ್ಲಿ ಅಡೆತಡೆಗಳಾಗಲೀ ಹುಚ್ಚು ಮೊರೆತ ಅಬ್ಬರದ ಅಲೆಗಳಾಗಲೀ ಕಾಣುವುದಿಲ್ಲ.

ವಿ.ಆರ್. ಭಾಗವತ್

ಉತ್ತರ ಕರ್ನಾಟಕದ ಮತ್ತೊಬ್ಬ ಹೆಸರಾಂತ ಸಂಗೀತ ಸಂಯೋಜಕರೆಂದರೆ ವಿ.ಆರ್. ಭಾಗವತರ್ ಅವರು. ಶಾಸ್ತ್ರಿಯ ಸಂಗೀತ ಶೈಲಿಗೆ ಸೇರುವ ಸಂಯೋಜಕರಾದ ಭಾಗವತ ಅವರ ಹಿಂದೂಸ್ತಾನೀ ಸಂಗೀತವನ್ನು ಕಲಿತಿದ್ದು ಉತ್ತರ ಕರ್ನಾಟಕದಲ್ಲಿ ‘ಸುಮಗಸಂಗೀತ’ವನ್ನು ಹಳ್ಳಿ ಹಳ್ಳಿಯಿಂದ ಗಡಿನಾಡುಗಳವರೆಗೆ ತೆಗೆದುಕೊಂಡು ಹೋದರು. ಕೊಂಕಣಿ, ಮರಾಠಿ, ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳ ಜ್ಞಾನ ಹೊಂದಿದ್ದ ಭಾಗವತರು ೧೯೩೬ರಿಂದ ದ.ರಾ. ಬೇಂದ್ರೆಯವರ ಪ್ರಭಾವಕ್ಕೆ ಒಳಗಾದರು. ಬೇಂದ್ರೆ, ಕುವೆಂಪು. ಬೆಟಗೇರಿ ಕೃಷ್ಣ ಶರ್ಮ ಮುಂತಾದವರ ಭಾವಗೀತೆಗಳನ್ನು ಹಾಡುತ್ತಿದ್ದ ಅವರು ಕನ್ನಡ ಭಾವಗೀತೆಗಳನ್ನು ಮರಾಠಿ ಭಾಷೆಗೆ ಅನುವಾದಿಸಿದ್ದೇ ಅಲ್ಲದೆ, ಮರಾಠಿ ಗೀತೆಗಳನ್ನು ಕನ್ನಡಕ್ಕೆ ಅನುವಾದಿಸಿ ಅವುಗಳನ್ನು ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಜಿಲ್ಲೆಗಳಲ್ಲಿ ಹಾಡಿ ಭಾಷಾಸೌಹಾರ್ದತೆಯನ್ನು ಮೂಡಿಸಿದರು. ಮರಾಠಿ ಗೋಡಗೀತೆಗಳು ಕನ್ನಡ ಗೀತೆಗಳ ಹೂತೋಟದಲ್ಲಿ ಅರಳುವಂತೆ ಮಡುವಲ್ಲಿ ಎನ್ಕೆ ಕುಲಕರ್ಣಿಯವರು ಕಾರಣರಾದ ಹಾಗೆ, ಭಾಗವತರೂ ಕಾರಣರಾದರು. ಎರಡು ಭಾಷೆಗಳ ಕೊಳು ಕೊಡುಗೆಯಿಂದ ಭಾಷಾಬಾಂಧವ್ಯ ಮತ್ತಷ್ಟು ಬಿಗಿಯಾದವು. ಹಿಂದೂಸ್ತಾನೀ ಶಾಸ್ತ್ರೀಯಸಂಗೀತದ ಮಾಧುರ್ಯತೆಯನ್ನು ಸದುಪಯೋಗಿಸಿಕೊಂಡ ಭಾಗವತರು ಸುಗಮಸಂಗೀತಕ್ಕೆ ಮತ್ತೊಂದು ಆವರಣವನ್ನು ಸೃಷ್ಟಿ ಮಾಡಿಕೊಟ್ಟರು. ಸುಗಮಸಂಗೀತವನ್ನು ಕನ್ನಡ ಗೀತರೂಪಕ, ಗೀತನಾಟಕಗಳಲ್ಲಿ ಪ್ರಯೋಗಿಸಿ ಅದರ ಪರಿಧಿಯನ್ನು ವಿಸ್ತರಿಸಿದರು. ಇದು ಉತ್ತರ ಕರ್ನಾಟಕದ ಶ್ರೋತೃಗಳು ‘ಸುಗಮಸಂಗೀತ’ದತ್ತ ಆಕರ್ಷಿತರಾಗಲು ಬಹುಮಟ್ಟಿಗೆ ಕಾರಣವಾಯಿತು. ಏಕೆಂದರೆ ಆಯಾಕಾಲದ ಬೇಡಿಕೆ, ಅಭಿರುಚಿಗೆ ಒದಗಿಕೊಳ್ಳುತ್ತಾ, ಮಿಡಿಯುತ್ತಾ ಬಂದ ರಂಈತೆಗಳೇ ಉತ್ತರ ಕರ್ನಾಟಕದಲ್ಲಿ ಆಗ ಪ್ರಮುಖ ಪಾತ್ರ ವಹಿಸಿದ್ದವು. ಕಾಲಾಂತರದಲ್ಲಿ ‘ಗೆಳೆಯರ ಬಳಗ’ದ ಕವಿಗಳಿಂದ ಶಾಸ್ತ್ರೀಯ ನಾಟಕರಂಗದಲ್ಲಿ ಪರಿಣತಿಗಳಿಸಿದ ಕಲಾವಿದರಿಂದ ‘ಕವಿತಾ ಗಾಯನ’ ತನ್ನ ಅಂಗಳದೊಳಗೆ ಪಲ್ಲವಿಸಿ ಮೆಲ್ಲಮೆಲ್ಲನೆ ಅಡಿಯಿಟ್ಟಿತು. ಜಾನಪದ ಸೊಗಡನ್ನು ಶಾಸ್ತ್ರೀಯ -ರಂಗ ಸಂಗೀತ ಶೈಲಿಯನ್ನು ತನ್ನೊಳಗೆ ಹುದುಗಿಸಿಕೊಂಡಿತು. ಸುಮಾರು ಆರು ದಶಕಗಳ ಕಾಲ ತಮ್ಮ ಸುಗಮಸಂಗೀತದಿಂದ ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗಿದ್ದ ಭಾಗವತರು ‘ಕುಣಿಯೋಣ ಬಾರಾ’ ‘ಭೃಂಗದ ಬೆನ್ನೇರಿ ಬಂತು’ ‘ಅನ್ನಾವತಾರ’ ‘ಟೊಂಕದ ಮ್ಯಾಲೆ ಕೈ ಇಟಕೊಂಡು’- ‘ಮೂರು ದಿನಗಳು ಜಾರಿದವು’ ‘ಚೆಲುವು ಹಿರಿಯದೋ’- ಮುಂತಾದ ಗೀತೆಗಳಿಂದ ತಮ್ಮ ಛಾಪು ಮೂಡಿಸಿದರು.

ಎಚ್.ಕೆ.ನಾರಾಯಣ: ೧೯೫೪ರಿಂದ ಆಕಾಶವಾಣಿಯ ನಿಲಯದ ಕಲಾವಿದರಾಗಿ, ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅದ್ವಿತೀಯ ಪಾಂಡಿತ್ಯಗಳಿಸಿ ‘ಸುಗಮಸಂಗೀತ’ದಲ್ಲಿ ಅತಿ ಮಧುರವಾಗಿ ರಾಗ ಸಂಯೋಜನೆ ಮಾಡಿದ ಹಿರಿಮೆ ಎಚ್.ಕೆ. ನಾರಾಯಣ ಅವರದು. ‘ಸುಗಮಸಂಗೀತ’ದಲ್ಲಿ ಕವಿಯ ಹಾಗೂ ಸಂಗೀತ ಸಂಯೊಜಕನ ವ್ಯಕ್ತಿತ್ವದ ಅಭಿವ್ಯಕ್ತಿ ಇರುವುದು ಅತ್ಯಂತ ಸಹಜವಾದದ್ದು ಎಂಬುದನ್ನು ಈಗಾಗಲೇ ವಿವರಿಸಲಾಗಿದೆ. ಎಚ್.ಕೆ. ನಾರಾಯಣರ ಸಂಯೋಜನೆಗಳು ಅವರ ವ್ಯಕ್ತಿತ್ವವನ್ನು ಹೊತ್ತು ತರುತ್ತವೆ. ಕವಿತೆಯನ್ನು ಅವರು ಆರಿಸಿಕೊಳ್ಳುವ ಬಗೆ, ಅದಕ್ಕೆ ಶಾಸ್ತ್ರೀಯ ಸಂಗೀತದ ಸುಗಂಧವನ್ನು ಸೂಸುವುದು, ಎಲ್ಲ ಅವರ ಮೃದುಮಾತು, ನಡೆಯಂತೆ ಸರಳ ಸುಭಗ. ಎಲ್ಲಿಯೂ ಆವೇಶವಾಗಲಿ, ದ್ವಂದತೆಯಾಗಲಿ, ಅಪಕ್ವ ಸ್ವರಸಂಯೋಜನೆಗಳಾಗಲಿ ಅವರ ಸಂಗೀತ ಸಂಯೋಜನೆಗಳಲ್ಲಿ ಕಂಡುಬರುವುದಿಲ್ಲ. ಸಂದಿಗ್ಧ ಸ್ಥರಸ್ಥಾನಗಳಂತೂ ಇಲ್ಲವೇ ಇಲ್ಲ. ಕೆಲವೊಮ್ಮೆ ಶಾಸ್ತ್ರೀಯ ಕಟ್ಟುಪಾಡುಗಳಿಗೆ ಸಿಕ್ಕಿಕೊಳ್ಳದಿದ್ದರೂ ಆ ಶಾಸ್ತ್ರೀಯವೆನಿಸದೆ, ಸಾಹಿತ್ಯ ಪ್ರಸಾರ ಕಾರ್ಯದಲ್ಲಿ ಪ್ರಮುಖವಾಗಿಸಿಕೊಳ್ಳುವ ಸೌಲಭ್ಯ ಗುಣಗಳು ಇವರ ರಾಗ ಸಂಯೊಜನೆಯಲ್ಲಿ ಕಂಡುಬರುತ್ತವೆ.

ಎಚ್.ಕೆ.ನಾರಾಯಣ್ ಅವರ ಸಂಯೋಜನೆಯಲ್ಲಿ ಅವರದೇ ಆದ ವೈಶಿಷ್ಟ್ಯತೆ ಛಾಪಿದೆ. ಶಾಸ್ತ್ರೀಯ ಸಂಗೀತ ವಿದ್ವಾಂಸರಾದರೂ, ತಮ್ಮ ವಿದ್ವತ್ತಿನ ಭಾರವನ್ನು ಕವಿತೆಗಳ ಮೇಲೆ ಬೀಳದಂತೆ ನಾರಾಯಣ್ ಅವರು ಕವಿತೆಗಳಿಗೆ ರಾಗದ ತೊಡಿಗೆ ತೊಡಿಸಿದ್ದಾರೆ.

ಕರ್ನಾಟಕ ಶಾಸ್ತ್ರೀಯ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಈ ಎರಡೂ ಪ್ರಕಾರಗಳಲ್ಲಿ ಪರಿಣತಿ, ಪಾಂಡಿತ್ಯ ಪಡೆದ ನಾರಾಯಣರು, ಈ ಎರಡೂ ಪ್ರಕಾರದ ಸಂಗೀತ ಶೈಲಿಯ ಉತ್ತಮಾಂಶಗಳನ್ನು ಗ್ರಹಿಸಿ ತಮ್ಮ ಸಂಯೋಜನೆಗಳಲ್ಲಿ ಹಿಡಿದಿಟ್ಟುಕೊಂಡವರು. ಕಣವಿಯವರ ವಿಶ್ವವಿನೂತನ, ಲಕ್ಷ್ಮೀನಾರಾಯಣಭಟ್ಟರ-‘ಈ ನಮ್ಮ ತಾಯಿ ನಾಡು’ ‘ಬಾರೋ ವಸಂತ’ – ‘ಏಕೆ ಕಾಡುತಿದೆ’- ‘ತೊರೆದು ಹೋಗದಿರುಜೋಗಿ’-ಪು.ತಿ.ನ. ಅವರ ‘ಓ ಭಾರತಿ’ – ಬೇಂದ್ರೆಯವರ ‘ನನ್ನ ಪುಟ್ಟಪುರಂದರ’ ‘ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ’ ‘ದಣಿದ ಜೀವಕ್ಕೆ’ ಮುಂತಾದ ಗೀತೆಗಳು ಶಾಸ್ತ್ರೀಯ ಗಿಡದಲ್ಲಿ ಬಿಡಿಸಿಟ್ಟ ಸುಗಮಸಂಗೀತದ ಹೂಗಳಾಗಿ ಅರಳಿ ಪರಿಮಳ ಬೀರುತ್ತಿವೆ.

ವಸಂತ ಕನಕಾಪುರ: ೧೯೭೫ರಿಂದ ಧಾರವಾಡ ಆಕಾಶವಾಣಿಯಲ್ಲಿ ನಿಲಯದ ಕಲಾವಿದರಾಗಿ ಬೆಳಕಿಗೆ ಬಂದ ವಸಂತ್ ಅವರು ಹಾರ್ಮೋನಿಯಂ ವಾದ್ಯ ವಾದನದಲ್ಲಿ ಮಾಂತ್ರಿಕನೆಂದೇ ಖ್ಯಾತಿ ಪಡೆದವರು. ಬೆಂಗಳೂರಿನ ಬಳಿ ಇರುವ ‘ಕನಕಪುರದವರು. ಪುಣೆಯಲ್ಲಿ ಹಾರ್ಮೋನಿಯಂ ನುಡಿಸುತ್ತಿದ್ದು’ ಅತ್ಯಂತ ಪ್ರತಿಭಾವಂತರಾಗಿದ್ದರೂ ತಮ್ಮನ್ನು ಸಹಕಲಾವಿದರು ಗಮನಿಸದೇ ಇದ್ದ ಕಾರಣ, ಕನಕಪುರವನ್ನು ಹಿಂದೀ ಭಾಷೆಯ ಉಚ್ಛಾರಣೆಯಂತೆ ಕನಕಾಪೂರ್-ಎಂದು ಮಾಡಿ ‘ವಸಂತ್’ ಎನ್ನುವ ಹೆಸರನ್ನು ಸೇರಿಸಿಕೊಂಡ ಮೇಲೆ ಅವರಿಗೆ ಶುಕ್ರದೆಸೆ ಪ್ರಾರಂಭವಾಯಿತು. ಅವರ ನಿಜವಾದ ಹೆಸರು ‘ವಾಸುದೇವಮೂರ್ತಿ’ ಎಂದು. ಹಿಂದೂಸ್ತಾನಿ ಸಂಗೀತದ ಎಲ್ಲಾ ದೊಡ್ಡ ದೊಡ್ಡ ವಿದ್ವಾಮಸರುಗಳಿಗೆ ಸಾಥಿ ನೀಡಿದ ವಸಂತ್ ಅವರು ಆಕಾಶವಾಣಿಯ ಸಂಗೀತ ಸಂಯೋಜಕರಾದ ನಂತರ ಅನೇಕ ಗೀತೆಗಳಿಂದ ತಮ್ಮ ಸ್ವಂತ ಛಾಪು ಮೂಡಿಸಿದರು. ಕೆ.ಎಸ್.ನ ಅವರ ‘ರಸ ಸಾಗರದಲಿ’ ನಗೆಯೆ ಪ್ರೀತಿಯೆಂದು – ಕುವೆಂಪು ಅವರ ‘ಜ್ಯೋತ್ಸೆ ತುಂಬಿ’ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಬಾರೆ ತಾಯಿ, ಬುದ್ಧಣ ಹಿಂಗಮಿರೆಯವರ ‘ನಿನ್ನ ಗುಡಿಯ ಬಾಗಿಲಲಿ ಬೇಂದ್ರೆಯವರ ‘ಸಂಜೆ ಗೆಂಪು’ ಮುಂತಾದ ಗೀತೆಗಳಿಂದ ಪ್ರಖ್ಯಾತರಾಗಿದ್ದಾರೆ.

ಗೀತಾಭಿನಯದ ಶೈಲಿ
ಬಾಳಪ್ಪ ಹುಕ್ಕೇರಿ

ನಮ್ಮ ಸುಗಮಸಂಗೀತಗಾರದಲ್ಲಿ ಹಿರಿಯ ಕಲಾವಿದರಾಗಿ ಉತ್ತರ ಕರ್ನಾಟಕದಲ್ಲಿ ‘ಸುಗಮಸಂಗೀತ’ವನ್ನು ಹಳ್ಳಿಹಳ್ಳಿಗೂ, ಮೂಲೆ ಮೂಲೆಗೂ ಕೊಂಡೊಯ್ದವರ ಬಾಳಪ್ಪಹುಕ್ಕೇರಿಯವರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಡಿಪಾಯದಲ್ಲಿಯೇ ‘ರಂಗಗೀತೆ’ಗಳ ರುಚಿ ಹತ್ತಿಸಿಕೊಂಡ ಬಾಲಪ್ಪನವರು ‘ಮಹಾತ್ಮಾ ಸೇವಾ ಸಂಗೀತ ನಾಟಕ ಮಂಡಳಿ’ ಎಂಬ ನಾಟಕ ಕಂಪನಿಯನ್ನು ೧೯೩೨ರಿಂದ೧೯೪೦ರ ವರೆವಿಗೆ ಸುಮಾರು ಎಂಟು ವರುಷಗಳ ಕಾಲ ನಡೆಸಿದವರು. ಸ್ವಾತಂತ್ರ್ಯ ಪೂರ್ವದಲ್ಲಿದ್ದ ದೇಶಭಕ್ತಿಯ ಆವೇಶ, ಪ್ರೇಮದ ತುಡಿತವನ್ನು ತಮ್ಮ ತನುಮನದಲ್ಲಿ ತುಂಬಿಕೊಂಡಿದ್ದ ಬಾಳಪ್ಪನವರು ಗಾಯನದ ಶೈಲಿಗಿಂತ, ಗಾಯನದ ವಸ್ತುವಿಗೆ ಹೆಚ್ಚು ಬೆಲೆ ಕೊಟ್ಟಿದುದು ಅವರ ಸಂಯೋಜನೆಯಲ್ಲಿ ಎದ್ದು ಕಾಣುವ ಅಂಶವಾಗಿದೆ. ನಾಟಕ ಮಂಡಳಿಯ ಪ್ರಭಾವದಿಂದ ಸುಗಮಸಂಗೀತವನ್ನು ಅವರು ಹಾಡುತ್ತಿದ್ದ ವೈಖರಿ ಅಂದಿನ ನಾಟ್ಯಗೀತೆಯನ್ನೇ ಕಣ್ಣಮುಂದೆ ತರುತ್ತದೆ. ಮಹಾತ್ಮ ಗಾಂಧಿಯವರ ಆದರ್ಶಕ್ಕೆ ತನ್ನನ್ನು ಅರ್ಪಿಸಿಕೊಂಡಿದ್ದ ಬಾಳಪ್ಪನವರು ತಮ್ಮ ಗೀತೆಗಳ ಮೂಲಕ ಆಗಿನ ಕಾಲದ ಜನರಿಗೆ ಸ್ವಾತಂತ್ರ್ಯ ಚಳುವಳಿಯ ಅರಿವನ್ನು ಮೂಡಿಸಿದ್ದರು. ಸುಗಮಸಂಗೀತದ ಪ್ರಾರಂಭ ಕಾಲವಾಗಿದ್ದರಿಂದ ಅಂದಿನ ಸಾಮಾಜಿಕ ತುರ್ತಿಗೆ ಬೇಕಾದ ಗೀತೆಗಳನ್ನುಹಾಡುವುದು ಅನಿವಾರ್ಯವೂ ಆಗಿತ್ತು. ಸ್ವಾತಂತ್ರ್ಯ ಸಿಗುವವರೆವಿಗೆ ಅವರುಹಾಡಿದ ಗೀತೆಗಳೆಲ್ಲಾ ವೀರಾವೇಶದಿಂದಿರುವ ಗಂಡುಗಲಿಗಳ ಹಾಡಿನಂತೆಯೇ ಇದ್ದವು. ರಂಗಗೀತೆಗಳ ಆವೇಶವೂ ಅದನ್ನು ಅನುಸರಿಸಿತ್ತು. ಆದರೆ ಸ್ವಾತಂತ್ರ್ಯ ಬಂದ ನಂತರ, ಜಾನಪದ ಗೀತೆಗಳು, ಸೋಬಾನೆ ಹಾಡುಗಳು, ಪ್ರಖ್ಯಾತ ಕವಿಗಳಾದ ಕುವೆಂಪು, ಬೇಂದ್ರೆ, ಕಣವಿ, ನರಸಿಂಹಸ್ವಾಮಿ, ಕಾವ್ಯಾನಂದ, ಆನಂದಕಂದ, ಶಿಶುನಾಳ ಷರೀಫ, ಕಡಕೋಳ ಮಡಿವಾಳಪ್ಪ ಮುಂತಾದವರ ಗೀತೆಗಳಿಗೆ ರಾಗಸಂಯೋಜನೆ ಮಾಡಿ ಹಾಡತೊಡಗಿದರು. ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’-ಕಾವ್ಯಾನಂದರ’ ಮೊದಲು ಮಾನವನಾಗು, ಬೇಂದ್ರೆಯವರ ‘ಯಾತಕವ್ವಾ ಹುಬ್ಬಳ್ಳಿ ಧಾರವಾಡ, ಕ್ರಾಂತಿಕಾರಕ ಗೀತೆಗಳಾಗಿ, ಸಾಂದರ್ಭಿಕ ಪರಿಣಾಮವನ್ನುಂಟು ಮಾಡಿದವು.

ಬಾಳಪ್ಪನವರು ಶಾಸ್ತ್ರೀಯ ಸಂಗೀತದಲ್ಲಿ ತಮಗೆ ಪ್ರಭುತ್ವವಿದ್ದರೂ ಅದರ ಕಟ್ಟುಪಾಡುಗಳಿಂದಾಚೆ ಬಂದು ಹಾಡಿದರು. ಕವಿತ್ವಕ್ಕೆ ಹಾಡಿನ ಅಂತರಾರ್ಥಕ್ಕೆ ಅಥವಾ ಅದರ ಪಾಕಕ್ಕೆ ತಮ್ಮ ಹಾಡಿನಲ್ಲಿ ಮೊದಲ ಸ್ಥಾನ ನೀಡಿದರು. ‘ಇನ್ನೂ ಯಾಕ ಬರಲಿಲ್ಲವ್ವಾ’ ಎಂಬ ಬೇಂದ್ರೆಯವರ ಗೀತೆಯ ಸಂಯೋಜನೆಯಲ್ಲಿ ಜಾನಪದ ಮಟ್ಟಿನ ದೇಸಿಯಂತೆ ಕಂಡರೆ-‘ಬಾರಿಸು ಕನ್ನಡ ಡಿಂಡಿಮವ’ ಎಂಬಲ್ಲಿ ಸಾವಿರ ಜನರನ್ನು ಎತ್ತಿ ಒಯ್ಯುವ ಸಾರೋಟು ಧೀರನ ಕೆಚ್ಚು, ನಂಬಿಕೆಗಳು ತುಂಬಿ ತುಳುಕುತ್ತಿವೆ. ‘ನಾ ಸಂತೆಗೆ ಹೋಗಿವ್ನಿ’-‘ನಾನು ಬಡವಿ ಆತ ಬಡವ’-‘ಹಿಂದೂಸ್ಥಾನಕ ಎಂಥವ ಬೇಕ’-ಮುಂತಾದ ಹಾಡುಗಳು ವಿಶಿಷ್ಟ ಶೈಲಿಯಲ್ಲಿವೆ. ಅಂದಂದಿನ ತುರ್ತಿಗೆ ಅಂದಂದಿನ ಪ್ರೇಕ್ಷಕ ವರ್ಗಕ್ಕೆ ಹೊಂದುವ ಭಕ್ತಿಗೀತೆ, ತತ್ವಪದ, ಜಾಪದ, ಶಿಷ್ಟ ಕವಿತೆ, ಯಾವುದು ಬೇಕೋ? ಅದನ್ನು ಹಾಡುವ ಕಲೆಗಾರಿಕೆ ಇದ್ದ ಬಾಳಪ್ಪನವರ ವಿಶೇಷತೆ ಏನೆಂದರೆ, ಅವರ ಗಾಯನ ಶೈಲಿಯಲ್ಲಿ ಎದ್ದು ಕಾಣುತ್ತಿದ್ದ ಅಪ್ಪಟ ಪ್ರಾದೇಶಿಕ, ಸಂಸ್ಕೃತಿ.ನಮ್ಮ ಜನರ ಆಚಾರ ವಿಚಾರ, ಕಟ್ಟುಕಟ್ಟಲೆಗಳಿಗೆ, ಇವರ ಹಾಡು, ದನಿಯಾಗಿತ್ತು. ‘ಸುಗಮಸಂಗೀತ’ ಜನ ಸಾಮಾನ್ಯರ ಆಶೋತ್ತರಗಳನ್ನು ಈಡೇರಿಸಬಲ್ಲದು ಎಂಬ ನಿಲುವಿಗೆ ಬಾಳಪ್ಪನವರನ್ನು ಉದಾಹರಿಸಬಹುದು. ಗಾಯನ ಪ್ರಸ್ತುತಿಯಲ್ಲಿ ಸರಳತೆಯೊಂದಿಗೆ ಮುಗ್ಧತೆಯನ್ನು, ಮುಕ್ತವಾದ ನಿರ್ಮಲ ಮನಸ್ಸನ್ನು ತೋರಿಸಿದವರು ಬಾಳಪ್ಪ ಹುಕ್ಕೇರಿಯವರು. “ಹಾಡನ್ನು ಹರವೋಣ ಮತ್ಸರ ಮರೆಯೋಣ” ಎಂಬ ಮಂತ್ರವನ್ನು ಕೇಳುಗರಿಗೆ ಕೊಟ್ಟ ಬಾಳಪ್ಪನವರು ಹಾಡಿನಿಂದ ಏನೆಲ್ಲಾ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟರು. ಒಂದು ಈತೆ ಭಾವೈಕ್ಯತೆಯನ್ನು ಮೂಡಿಸಬಲ್ಲದು, ಮತ್ಸರ, ಸೇಡು, ದ್ವೇಷಗಳನ್ನು ನೀಗಿಸಬಲ್ಲದು ಎಂಬ ಕಲ್ಪನೆಯೇ ಧ್ವನಿ ಪೂರ್ಣವಾಗಿರುವಾಗ, ಅದರ ದೀಕ್ಷೆ ಇನ್ನು ಹೇಗಿರಬಹುದು? ಸುಗಮಸಂಗೀತದ ಮೂಲಕ ಆ ಸೂತ್ರಕ್ಕೆ ಭಾಷ್ಯವನ್ನೇ ಬರೆದಿಟ್ಟು ಹೋದವರು ‘ಸಾವಿರ ಹಾಡಿನ ಸರದಾರ’ರಾದ ಬಾಳಪ್ಪ. ಮನುಷ್ಯನ ಜೀವನದಲ್ಲಿ ಸಾಹಿತ್ಯ ಎಂತಹ ಪರಿಣಾಮವನ್ನು ಬೀರಬೇಕು ಎನ್ನುವುದನ್ನು ತಮ್ಮ ಹಾಡುಗಳ ಮೂಲಕ ಕಲಿಸಿದ ಬಾಳಪ್ಪ ಕೇವಲ ‘ಸುಗಮಸಂಗೀತ’ಗಾರರಾಗದೆ ಬದುಕಿಗೆ ದಾರಿ ತಓರುವ ದಾರ್ಶನಿಕರಾದದ್ದು ವಿಶೇಷವಾದದ್ದು. ‘ಹಾಡನ್ನು ಹರವೋಣ ಮತ್ಸರವ ಮರೆಯೋಣ’ ಎಂಬ ಮಾತಿನಲ್ಲಿ ಮಾನವನ ಮೂಲ ದೌರ್ಬಲ್ಯವನ್ನೂ, ಅದನ್ನು ಕಳೆದುಕೊಂಡು ಪಾರಾಗುವ ಅರಿವನ್ನೂ ಹೇಳುತ್ತಾ, ಸಾಮಾಜಿಕ ಕಳಕಳಿಯನ್ನು ಮೆರೆದ ಬಾಳಪ್ಪನವರು ದ.ರಾ. ಬೇಂದ್ರೆಯವರ ಬಾಯಲ್ಲಿ ‘ವ್ಹಾ ಬಾಳಪ್ಪ ನೀ ನೂರು ವರ್ಷ ಬಾಳಪ್ಪ’ ಎನಿಸಿಕೊಂಡರು.

ರಂಗಗೀತೆಗಳ ಗುಂಗಿಗೆ ಜಾನಪದ ಲಯ ಧಾಟಿಗಳನ್ನು ತುಂಬಿಸಿ ಕವಿತೆಗಳಿಗೆ ರಾಗ ಸಂಯೋಜನೆ ಮಾಡಿದ ಬಾಳಪ್ಪನವರು ಹಾಡಿನ ಮಧ್ಯೆ ಮಾತಾಡುತ್ತಾ, ಮಾತಿನ ಮಧ್ಯೆ ಹಾಡುತ್ತಾ ಕಾರ್ಯಕ್ರಮಗಳನ್ನು ನೀಡುತ್ತಿದ್ದ ಶೈಲಿಯನ್ನು ಮತ್ತೆ ಯಾರೂ ಅನುಸರಿಸಲೇ ಇಲ್ಲ. ಬಾಳಪ್ಪನವರ ಅಂದಿನ ಹಾಡುಗಾರಿಕೆಗೆ ಸ್ಫೂರ್ತಿಯಾಗಿದ್ದುದು ಅಂದಿನ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿ. ನವೋದಯ ಕವಿಗಳ ಕವಿತೆಯಲ್ಲಿ ಕಂಡ ಸಾಮಾಜಿಕ ಕಳಕಳಿಯೇ ಅಂದಿನ ಸುಗಮಸಂಗೀತವಾಗಿತ್ತು. ಬಾಳಪ್ಪ ಹುಕ್ಕೇರಿಯವರ ಆಗಮನದ ಮುನ್ನ ಮತ್ತು ಅವರಿದ್ದ ಪರಿಸರದಲ್ಲಿ ಸುಗಮಸಂಗೀತವೆಂದರೆ ಇವೇ ಎಂದಾಗಿತ್ತು. ನಂತರ ಬಂದ ಕಾಳಿಂಗರಾಯರು ಅದಕ್ಕೊಂದು ಹೊಸರೂಪ ಕೊಟ್ಟರು.

ಕಾಳಿಂಗರಾಯರು (೩೧೧೯೧೪ ೨೧೧೯೮೧)

ಸ್ವಾತಂತ್ರ್ಯ ಪೂರ್ವದಲ್ಲಿ ದೇಶಭಕ್ತಿಗೀತೆ, ಕನ್ನಡಗೀತೆಗಳಿಂದ ತುಂಬಿದ ಕವಿತಾ ಗಾಯನದ ಮಸುಕಿನ ಹಾದಿಗೆ ಬೆಳದಿಂಗಳ ಬೆಳಕನ್ನು ಚೆಲ್ಲಿದವರು ನಮ್ಮ ಕಾಳಿಂಗರಾಯರು. ದುರ್ಗಮವಾಗಿದ್ದ ಕವಿತಾಗಾಯನವನ್ನು ಸುಗಮ ಸುಂದರ ಮಾಡಿದ ಹಿರಿಮೆಯೂ ಅವರಿಗೆ ಸಲ್ಲುತ್ತದೆ. ನವಿರಾದ ಮಧುರಕಂಠದಿಂದ ಅವರು ಹಾಡಲು ತೊಡಗಿದರೆಂದರೆ ಸ್ವರಕನ್ಯೆಯರು ನಾದನರ್ತನದಲ್ಲಿ ಅವರ ಕಂಠದಿಂದ ತೊನೆಯುತ್ತಿದ್ದರು. ಕವಿತಾ ಪ್ರಸ್ತುತಿಯಲ್ಲಿ ಅವರಿಗಿದ್ದ ಸಂಯಮ ಅದ್ಧುತವಾದದ್ದು.

ಕವಿತೆಯ ಮೊದಲ ಅಕ್ಷರದಿಂದ ಕಡೆಯ ಅಕ್ಷರದವರೆವಿಗೆ ರಾಗಸಂಯೋಜನೆ ಮಾಡಿದ್ದ ರೀತಿ, ಪದ, ಪದಗಳ ಅರ್ಥವನ್ನು ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ನಡೆಸಿಕೊಂಡು ಎಲ್ಲಿ ಯತಿ ಬೇಕೋ, ಅಲ್ಲಿ ನಿಂತು, ಎಲ್ಲಿ ರಾಗದ ಪಲುಕುಬೇಕೋ, ಅಲ್ಲಿ ಪಲುಕಿ, ಮೇಲೆ ಮೇಲೆ, ಹತ್ತಿ, ಹತ್ತುತ್ತಾ ಕವಿತಾ ಸ್ಪರ್ಶವನ್ನು ಮಾಡಿಸುತ್ತಲೇ, ತಾನು ಕಂಡ ಕಾವ್ಯದ ಬೆಡಗು ಬಿನ್ನಾಣವನ್ನು ಆನಂದಿಸಿ, ಅನಂತರ ಕೇಳುಗರಿಗೆ ಪ್ರಸ್ತುತ ಪಡಿಸುತ್ತಿದ್ದ ಕಾಳಿಂಗರಾಯರ ಶೈಲಿ ಅಪೂರ್ವವಾದದ್ದು.

‘ಸುಗಮಸಂಗೀತ’ ತನ್ನ ಹೆಸರಿನಿಂದಲೇ ತಿಳಿಸುವಂತೆ ಅದು ಸಂಗೀತದ ಶೈಲಿಯಾದರೂ ಎಲ್ಲವೂ ಅಲ್ಲಿ ಸುಗಮವಲ್ಲ. ಕಾವ್ಯದ ಅರ್ಥವನ್ನು ತನ್ನ ತಲೆಯ ಮೇಲೆ ಎತ್ತಿಕೊಂಡು, ಹೊತ್ತುಕೊಂಡು ಬರುವ ಸಂಗೀತ ಅದು. ಕೇಳುಗರಿಗೆ ಕಾವ್ಯ, ಶಾಸ್ತ್ರ, ಯಾವುದರ ವಿಶೇಷ ಜ್ಞಾನದ ಅರಿವು ಬೇಕಾಗಿಲ್ಲ. ಸಹೃದಯತೆಗೆ, ಸುಮಧುರತೆಗೆ ಕಿವಿ ತೆರೆದು ಕುಳಿತವರಿಗೆ ಅದು ಸುಗಮಸಂಗೀತ. ಕಾಳಿಂಗರಾಯರು ಕವಿತಾ ಗಾಯನವನ್ನು ಸಾಮಾನ್ಯನ ಕಿವಿಗೆಟುಕುವಂತೆ ಸರಳಿಕರಿಸದೆ ಹೋಗಿದ್ದಿದ್ದರೆ, ಇಂದು ಸುಗಮಸಂಗೀತ ಬಹುಶಃ ಇಷ್ಟು ಜನಪ್ರಿಯತೆಯನ್ನು ಗಳಿಸುತ್ತಿರಲಿಲ್ಲ ಎನ್ನಬಹುದು. ಸುಗಮಸಂಗೀತ ಇಂದು ಮನೆ ಮನೆಗೂ ಹರಡಿ ಕಿವಿಕಿವಿಗಳನ್ನು ತುಂಬಲು ಕಾಳಿಂಗರಾಯರೇ ಬಹುಮಟ್ಟಿಗೆ ಕಆರಣ. ಸುಗಮಸಂಗೀತವೆಂದರೆ ಕೇವಲ ಕವಿತಾ ಗಾಯನವಲ್ಲ. ಕವಿತೆಗೆ ರಾಗ ಜೋಡಿಸಿ ಮಧುರವಾಗಿ ಹಾಡಿದ ಮಾತ್ರಕ್ಕೆ ಅದು ಸಂಗೀತವಾಗುತ್ತದೆಯೇ ವಿನಃ ಸುಗಮಸಂಗೀತವಾಗುವುದಿಲ್ಲ. ಕವಿತೆ ಅಂತರಾಳದಲ್ಲಿರುವ ನೂರು ಭಾವನೆಗಳು, ನಿವೇದನೆಗಳು, ಧನ್ಯಾರ್ಥಗಳು, ಒಳಮಿಡಿತಗಳು ಎಲ್ಲವೂ ಹಾಡಾಗಿ ಹರಿಯಬೇಕು. ಕವಿತೆಯ ಆಳಕ್ಕಿಳಿದು ಮೇಲೆ ಹತ್ತಿ ಬಂದವರು ಮಾತ್ರ, ಆ ಕವಿತೆಯನ್ನು ಅರ್ಥಮಾಡಿಕೊಳ್ಳಬಲ್ಲರು. ಕವಿತೆಯ ಒಳತೋಟಿಯನ್ನು ಸಮಾನ ಹೃದಯಿಗಳಾಗಿ ಅರಿತು ಅದನ್ನು ಆ ಕವಿತೆಯ ದನಿಯಲ್ಲಿ, ಎಂದರೆ ಕವಿತೆಯ ಭಾವದಲ್ಲಿ ಮೂಡಿಸಬಲ್ಲವರು ಮಾತ್ರ ಸುಗಮಸಂಗೀತಗಾರರಾಗುತ್ತಾರೆ. ಇದನ್ನು ಪು.ತಿ.ನರವರು ಹೇಳಿದ ‘ಭವನಿಮಜ್ಜನಚಾತುರ್ಯಾ ಲಘಿಮಾಂ ಕೌಶಲಾಂ’- ತತ್ತ್ವಕ್ಕೆ ಅನ್ವಯಿಸಬಹುದು. ಕಾವ್ಯದೊಳಗೆ ಇಳಿದು ಚಾತುರ್ಯದಿಂದ ಮಿಂದು, ಕುಶಲದಿಂದ ಮೇಲೆದ್ದು ಬರುವುದೇ ಇಲ್ಲಿ ಹೆಗ್ಗಳಿಕೆ. ಕಾವ್ಯದ ಅನುಭವವನ್ನು ಸುಗಮಸಂಗೀತಗಾರ ಅನುಭವಿಸಿ ಮೇಲೆದ್ದು ಅದರಲ್ಲಿ ತಾನು ಪಡೆದ ಸುಖಾನುಭವವನ್ನು, ಪ್ರಸ್ತುತಪಡಿಸಬೇಕು. ಪ್ರಸ್ತುತಿಯಲ್ಲಿಯೂ ಸಂಯಮ, ಶಿಸ್ತು, ಪ್ರಾಮಾಣಿಕತೆಯನ್ನು ಮುನ್ನಡೆಸಿಕೊಂಡು, ಕವಿಯ ಕಾವ್ಯದ ಪರಿಧಿಯನ್ನು ದಾಟಿದೆ, ಅತಿಯಾದ ಸ್ವಾತಂತ್ರ್ಯ ತೆಗೆದುಕೊಳ್ಳದೆ ವಿನಯಶೀಲನಾಗಿ, ಕವಿತೆಯನ್ನು ಹಾಡಿನ ಮೂಲಕ ಹನಿಹನಿಯಾಗಿ ತೆರೆದು ಕವಿತೆಯ ವಿರಾಟ್ ದರ್ಶನವನ್ನು ಮಾಡಿಸಬೇಕು. ಇದು ನಿಜವಾದ ಸುಗಮಸಂಈತ ‘ಸುಗಮ’ ಎನ್ನುವ ಶಬ್ದದ ಅರ್ಥವೇ ಇದು. ಕಾಳಿಂಗರಾಯರಿಗೆ ಈ ಶಕ್ತಿ ಸಿದ್ಧಿಸಿದ್ದೇ ಅವರು ಜನಸಾಮಾನ್ಯರ ಹೃದಯ ಸಿಂಹಾಸನವನ್ನೇರಲು ಮೊದಲ ಹಂತವಾಯಿತು. ಅವರು ಹಾಡಿದ ‘ಉದಯವಾಗಲಿ ನಮ್ಮ ಕನ್ನಡ ನಾಡು’, ‘ಬಾರಯ್ಯ ಬೆಳದಿಂಗಳೇ’, ‘ಅನಂತದಿಂದಿಗಂತದಿಂ’, ‘ಎಲ್ಲಾದರೂ ಇರು’, ‘ಬ್ರಹ್ಮ ನಿಂಗೆ ಜೋಡಿಸ್ತೀನಿ’, ‘ಮುಗಿಲಮಾರಿಗೆ’, ‘ಅಳುವ ಕಡಲೊಳು’, ‘ಬಾಗಿಲೊಳು ಕೈ ಮುಗಿದು’, ‘ರತ್ನನ ಪದಗಳು’, ‘ಮೂಡಲ್ ಕುಣಗಲ್ ಕೆರೆ’ ಮುಂತಾದ ಗೀತೆಗಳು ತಮ್ಮ ವೈವಿಧ್ಯತೆಯಿಂದ ಜನಮನ ಸೂರೆಗೊಂಡವು. ಇಲ್ಲಿ ನಮಗೆ ಪ್ರಮುಖವಾಗಿ ಕಾಣುವುದು ‘ವೈವಿಧ್ಯತೆ’ ಎನ್ನಬಹುದು. ಸುಗಮಸಂಗೀತಕ್ಕೆ ಬೇಕಾದ ಪ್ರಮುಖ ಗುಣವೇ ವೈವಿಧ್ಯತೆ. ನೋವು, ನಲಿವು, ವಿರಹ, ಹರುಷ, ಏಕಾಂತ, ಚಿಂತೆ, ಹೀಗೆ ಮಾನವನ ಭಿನ್ನ ಭಿನ್ನ ಮನೋಭಾವಗಳಿಗೆ ತಕ್ಕಂತೆ ಮೂಡಿದಂತಹ ವಿಭಿನ್ನ ಭಾವಗಳೇ ಸುಗಮಸಂಗೀತದ ವಸ್ತುವಾಗಿದ್ದರಿಂದ ಗಾಯನಕ್ರಮಗಳಲ್ಲಿ ಏಕತಾನತೆ ತಪ್ಪಿಹೋದವು. ಹಾಡುಗಳು ವಸ್ತು ವೈವಿಧ್ಯತೆಯಿಂದ, ಛಂದಸ್ಸು, ಲಯಗತಿಗಳ ವೈವಿಧ್ಯತೆಯಿಂದ ಚೆಂದವಾದವು. ಕಾಳಿಂಗರಾಯರು ಹಾಡಿರುವ ‘ಅಳವಕಡಲೊಳು’ ಹಾಡು ಮತ್ತು ‘ಬ್ರಹ್ಮ ನಿಂಗೆ ಜೋಡಿಸ್ತೀನಿ’- ಎನ್ನುವ ಹಾಡಿಗೂ ನಡೆ, ಲಯ, ಛಂದಸ್ಸು, ಭಾವ, ರೀತಿ, ಶೈಲಿ, ಎಲ್ಲಾ ರೀತಿಯಲ್ಲಿಯೂ ಅಜಗಜಾಂತರ ವ್ಯತ್ಯಾಸಗಳಿವೆ. ರಾಗ ಸಂಯೋಜನೆ, ಸಾಹಿತ್ಯ ಸಂವೇದನೆ, ಗಾಯನ ನಿವೇಧನೆ, ಎಲ್ಲವೂ ಭಿನ್ನ ಭಿನ್ನವಾಗಿದೆ. ನಮ್ಮ ಸುಗಮಸಂಗೀತಕ್ಕೆ ಈ ಚೆಲುವನ್ನು ತಂದುಕೊಟ್ಟವರು ಕನ್ನಡದ ಕೋಗಿಲೆಯೆಂದೇ ಹೆಸರಾದ ಪಾಂಡೇಶ್ವರದ ಕಾಳಿಂಗರಾವ್ ಅವರು. ನಮೋದಯ ಕಾವ್ಯದ ಆರಂಭದಲ್ಲಿ ಪ್ರೇಮ, ವಿರಹ, ದುಃಖ ಗೀತೆಗಳು, ದೇಶ ಭಕ್ತಿಗೀತೆಗಳು, ಶಾಸ್ತ್ರೀಯ ಸಂಗೀತದಂತೆಯೇ ರಾಗಸಂಯೋಜಿಸಿ ಹಾಡಲಾಗುತ್ತಿದ್ದವು. ಕವಿತೆಗಳಿಗೆ ತಮ್ಮ ಮಾಂತ್ರಿಕ ಶೈಲಿಯಿಂದ ನವಿರು ಸ್ಪರ್ಶವನ್ನು ಕೊಟ್ಟವರು ಕಾಳಿಂಗರಾಯರು. ಅದಕ್ಕೆ ಕಾರಣ ಅವರಿಗಿದ್ದ ಭಿನ್ನ ಭಿನ್ನ ಕಲಾ ಪ್ರಕಾರಗಳ ಪ್ರಾವೀಣ್ಯತೆಯೂ ಹೌದು. ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನಾಟ್ಯ ಗೀತೆ, ರಂಗಗೀತೆ, ಜಾನಪದ ಗೀತೆ, ಚಲನಚಿತ್ರ ಗೀತೆ, ಪಾಶ್ಚಾತ್ಯ ಸಂಗೀತ-ಈ ಎಲ್ಲಾ ಪ್ರಕಾರಗಳಲ್ಲಿಯೂ ರಾಯರು ಕೈಯಾಡಿ ಸೈ ಎನಿಸಿಕೊಂಡಿದ್ದರು. ಮರಾಠೀ ನಾಟ್ಯಗೀತೆಗಳನ್ನೂ ತಾವು ನಾಟಕ ಕಂಪನಿಯಲ್ಲಿದ್ದಾಗಲೇ ಕರಗತಮಾಡಿಕೊಂಡಿದ್ದರು. ವೃತ್ತಿರಂಗಭೂಮಿಯಿಂದಲೇ ವೃತ್ತಿಯನ್ನು ಆರಂಭಿಸಿದ ರಾಯರಿಗೆ ರಂಗಗೀತೆಗಳೆಂದರೆ ಪಂಚಪ್ರಾಣ. ಅಭಿನಯವೇ ಕಲಿತ ಮೊದಲವಿದ್ಯೆ. ಪಾತ್ರ ಮಾಡುವಾಗ ಮೈಮರೆಯುತ್ತಾ ತಮ್ಮನ್ನೇ ಮರೆಯುತ್ತಿದ್ದ ಕಾಳಿಂಗರಾಯರಿಗೆ, ಕವಿತೆಯೊಳಗಿನ ಮಾತ್ರಧಾರಿಯಾಗುವುದು ಸುಲಭವೇ ಆಯಿತೇನೋ. ಅವರು ಹಾಡುತ್ತಿದ್ದ ಕವಿತೆಗಳು ಅವರವೇ ಆಗಿದ್ದವು. ‘ಅಳುವ ಕಡಲೊಳು ತೇಲಿ ಬರುತಿದೆ ನಗೆಯ ಹಾಯಿ ದೋಣಿ’-ಈ ಕವಿತೆಯನ್ನು ಅವರು ಹಾಡುವಾಗ ‘ನಗೆಯ ಹಾಯಿ ದೋಣಿ’ ಎನ್ನುವಲ್ಲಿನ ಪಲುಕು ಮೆಲುಕು ಹಾಕುವಂತಹುದು. ‘ಹಾಯಿ’ ಎನ್ನುವಲ್ಲಿನ ಸ್ವರಗಳ ಬಳುಕು, ಕೊಂಕು, ಪಂಚೇಂದ್ರಿಯಗಳಿಗೂ ಅನುಭವವಾಗುತ್ತದೆ. ಸುಗಮಸಂಗೀತಕ್ಕೆ ಬೇಕಾದದ್ದು ಅಭಿನಯವೇ. ಅಂದರೆ ಒಂದು ರೀತಿಯ ವಾಚಿಕಾಭಿನಯ. ಧ್ವನಿಯ ಬೆಡಗಿನಲ್ಲಿ ಇದು ಬೆರೆತಿರುತ್ತದೆ. ತಂಬೂರಿಯಲ್ಲಿ ಶ್ರುತಿ ಮಾಡಿದ ನಂತರ ಕೂಡಿಸುವ ಜೀವಾಳದಂತೆ, ಸನ್ನ ದಾರದಲ್ಲಿ ನಾದ ಝೇಂಕರಿಸುವಂತೆ, ಸ್ವರದ ಕೊಂಕಿನಲ್ಲಿ ಕಾಕುವಿನ ಏರಿಳಿತಗಳಲ್ಲಿ ಇದು ಅಭಿವ್ಯಕ್ತವಾಗುತ್ತದೆ. ಭಾವಗೀತಾ ಗಾಯನ ಗೆಲ್ಲುವುದೇ ಇಲ್ಲಿ. ಕಾಳಿಂಗರಾಯರಿಗೆ ಈ ಸೂಕ್ಷ್ಮತೆ ಗೊತ್ತಿದ್ದರಿಂದಲೇ, ಉತ್ತಮ ಧ್ವನಿ ಕಾವ್ಯಗಳನ್ನು, ಅಭಿನಯ ಗೀತೆಗಳನ್ನು, ನಿವೇದನ ಕವಿತೆಗಳನ್ನು ಆರಿಸಿಕೊಂಡರು.

ಒಂದೊಂದು ಭಾಷೆಗೂ, ಒಂದೊಂದು ಅಪರೂಪದ ವ್ಯಕ್ತಿತ್ವವಿರುತ್ತದೆ. ಬೇರೆಯಾದ ಉಲುಹು, ಹೊಳಹು, ನಡೆ, ಲಾವಣ್ಯ, ಬೆಡಗು, ದನಿಯ ಚಿತ್ತಾರಗಳು ವಿಶೇಷವಾಗಿರುತ್ತವೆ. ಬಹುಭಾಷಾ ಪರಿಣತರ ಕೃತಿಗಳಲ್ಲಿ ಈ ಹೊಸತನಗಳು ಹೊಕ್ಕು ವೈಶಿಷ್ಟ್ಯಗಳನ್ನು ಬಿಂಬಿಸುತ್ತವೆ. ಕಾಳಿಂಗರಾಯರ ಗಾಯನ ಶೈಲಿಗೂ ಈ ಅನುಭವವಿತ್ತೆಂದು ನನ್ನ ಅನಿಸಿಕೆ. ಯಾವ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆಯದಿದ್ದರೂ, ರಾಯರು ಕನ್ನಡ, ಸಂಸ್ಕೃತ, ಹಿಂದಿ, ತುಳು, ಕೊಂಕಣಿ, ಮರಾಠೀ, ಇಂಗ್ಲಿಷ್ ಭಾಷೆಗಳಲ್ಲಿ ಪರಿಣತರಾಗಿದ್ದರು. ಈ ಎಲ್ಲಾ ಭಾಷೆಗಳ ವಿಶಿಷ್ಟ ಸಂಯೋಜನೆಗಳನ್ನು ಹಾಡುತ್ತಿದ್ದರು. ಅವರ ಸಂಯೋಜನೆಗಳಲ್ಲಿ ಯಾವುದೇ ಒಂದೇ ಶೈಲಿಗೆ ಅಂಟಿಕೊಂಡ ಗಾಯನವಿಲ್ಲ. ಏಕತಾನತೆಯಿಲ್ಲ ಹಾಗೆಯೇ ಬರಿಯ ಪ್ರಯೋಗಗಳೂ ಇಲ್ಲ. ಜಾನಪದ ಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಭಾವಗೀತೆಗಳಾಗಲಿ, ದಾಸರಪದಗಳಾಗಲಿ, ಎಲ್ಲಮಾ ಒಂದು ಹದವಾದ ಪಾಕದಲ್ಲಿ ಸಂಯೋಜಿಸಲ್ಪಟ್ಟವು.

ಜಾನಪದ ಸಂಗೀತದಲ್ಲಿ ವಿಶೇಷ ಪ್ರೀತಿಯಿದ್ದ ರಾಯರು ಆರಿಸಿಕೊಂಡಿದ್ದು ಹೆಚ್ಚು ಹೆಚ್ಚು ಜನಪದ ಗೀತೆಗಳನ್ನು ಒಂದು ಕಾಲಕ್ಕಂತೂ ‘ಸುವ್ವೀ ಸುವ್ವಮ್ಮ ಲಾಲಿ’, ‘ಘಲ್ಲು ಘಲ್ಲೆನುತಾ’, ‘ಬೆಟ್ಟ ಬಿಟ್ ಇಳಿಯುತ್ತಾ ಬಂದಾಳೆ’, ‘ಅದು ಬೆಟ್ಟ ಇದು ಬೆಟ್ಟವೋಮೋ ನಂಜುಂಡ’, ‘ಅಮ್ಮಕಝಮ್ಮಕದಿಂದ’ ಮುಂತಾದ ಹಾಡುಗಳು ಕನ್ನಡ ನಾಡಿನ ಕೈತೋಟದಲ್ಲಿ ಬೆಳೆದ ಮಲ್ಲಿಗೆ ಮೊಗ್ಗುಗಳಾಗಿ ಬಿರಿಯತೊಡಗಿದ್ದವು. ರಾಯರು ಜನಪದ ಸಂಗೀತದ ನಾಡಿ ಮಿಡಿತವನ್ನು ಕರಗತ ಮಾಡಿಕೊಂಡಿದ್ದಕ್ಕೋ ಏನೋ, ಅವರು ಹಾಡಿದ ಜನಪದ ಗೀತೆಗಳು ಶಾಸ್ತ್ರೀಯ ಸಂಗೀತದ ಛಾಯೆಯನ್ನು ಸ್ವಲ್ಪ ಮಟ್ಟಿಗೂ ತೋರದೆ, ನಮ್ಮ ನೆಲದಲ್ಲಿ ಬೆಳೆದ ಹೂವುಗಳಾದವು. ಜನಪದ ಕಾವ್ಯ ಹೀಗೆ ಶಿಷ್ಟಕವಿಗಳಿಗೂ ‘ಗರಿ’ ಮೂಡಿಸುತ್ತದೆ ಎನ್ನುವುದಕ್ಕೆ ನಮ್ಮ ಬೇಂದ್ರೆಯವರ ಸಾವಿರಾರು ಗೀತೆಗಳೇ ಸಾಕ್ಷಿ. ನಮ್ಮ ಸುಗಮಸಂಗೀತಕ್ಕೆ ಜನಪದ ರೆಕ್ಕೆಯನ್ನು ಹಚ್ಚಿ ಸೊಬಗು ತೋರಿದವರು ಕಾಳಿಂಗರಾಯರು.

ಅವರು ರಾಗಸಂಯೋಜಿಸಿ ಹಾಡಿದ ‘ನಗೆಯು ಬರುತಿದೆ’, ‘ಓ ನನ್ನ ನೀಲಿ ಸೀರೆಯ ಕನ್ಯೆ’, ‘ಅಂದು ನೀ ನುಡಿದ ಪಿಸುಮಾತು’, ‘ಓಲೇಲಿಲೇಸಾ’ ಬೆಳದಿಂಗಳ ರಾತ್ರೀಲಿ ನೆಪಾಯ್ತದೆ’, ‘ಸಿಂಹನೊಡನಾಡುತ್ತ’ ಹೇಳುತ್ತಾ ಹೋದರೆ ಸುಮಾರು ನೂರು, ನೂರು ಹಾಡುಗಳು ಕಾಳಿಂಗರಾಯರನ್ನು ಅನಾವರಣಗೊಳಿಸುತ್ತವೆ. ಅವರ ಗಾಯನ ಶೈಲಿಯನ್ನು, ಸಂಯೋಜನೆಯಲ್ಲಿನ ಸಂಯಮಭರಿತ ಆಲೋಚನೆಯನ್ನು ಮುಂದೆ ತಂದು ನಿಲ್ಲಿಸುತ್ತದೆ. ‘ನನ್ನ ಸಂಗೀತ ಗಗನ ಕುಸುಮವಾದರೆ ಏನು ಪ್ರಯೋಜನ? ನೆಲದ ಮಟ್ಟಾಮುಟ್ಟಿ ಮಣ್ಣಿನಮಗ ಕುಣಿವಂತಾಗಬೇಕು’-ಎನ್ನುತ್ತಿದ್ದ ರಾಯರು ಊರು ಊರು, ಹಳ್ಳಿಹಳ್ಳಿ, ಬೀದಿಬೀದಿ, ತಿರುಗಿ, ಕನ್ನಡನಾಡ ಗೀತೆಗಳನ್ನು, ಭಾವಗೀತೆಗಳನ್ನು ದಾಸರಪದ, ಜನಪದ ಗೀತೆಗಳನ್ನು ಹಾಡಿದರು. ಕನ್ನಡ ಏಕೀಕರಣ ಚಳುವಳಿಯಲ್ಲಿ (೧೮೪೫) ಪಾಲ್ಕೊಂಡರಾಯರು, ಘೋಷಣೆ ಕುಗದೆ, ಭಾಷಣ ಮಾಡದೆ, ಕೇವಲ ತಮ್ಮ ಮೋಹಕಗಾಯನದಿಂದ ಚಳುವಳಿಗಾರರಿಗೆ ಸ್ಫೂರ್ತಿ ನೀಡಿದ್ದರು. ಕ್ಲಾರಿಯೋನೆಟ್, ಮ್ಯಾಂಡೋಲಿನ್, ಹವಾಯಿ ಗಿಟಾರ್, ಗಿಟಾರ್, ಮುಂತಾದ ವಾದ್ಯಗಳ ಒಳಮಿಡಿತವನ್ನು ಸರಿಯಾಗಿ ತಿಳಿದುಕೊಂಡು ಅವುಗಳನ್ನು ಸೂಕ್ತವಾಗಿ ತಮ್ಮ ಕಾರ್ಯಕ್ರಮಗಳಲ್ಲಿ ಬಳಸಿಕೊಂಡರು. ರಂಗಗೀತೆ, ಚಿತ್ರಗೀತೆಗಳಿಗಿಂತ ಭಿನ್ನವಾಗಿದ್ದ ಭಾವಗೀತಾಯನವನ್ನು ಪ್ರತ್ಯೇಕವಾಗಿ ತಆವೇ ಅನುಭವಿಸಿ, ಅವುಗಳಿಗಿದ್ದ ದೂರವನ್ನು ಕಾಯ್ದುಕೊಂಡರು. ಆ ದೂರವನ್ನು ಅವರು ಕಾಯ್ದುಕೊಂಡಿದ್ದರಿಂದಲೇ ಸುಗಮಸಂಗೀತಕ್ಕೆ ಪ್ರತ್ಯೇಕ ವ್ಯಕ್ತಿತ್ವ ಬಂದು ಅದು ಒಂದು ವಿಶಿಷ್ಟ ಗಾಯನ ಪ್ರಕಾರವಾಗಿ ರೂಪುಗೊಂಡಿತು. ಒಂದು ಗೀತೆಯನ್ನು ಕೇಳಿದರೆ ಕೇಳುಗರ ಪಂಚೇಂದ್ರಿಯಗಳಿಗೆ ಅದು ವೇದ್ಯವಾಗಬೇಕು. ಅದರ ದನಿ, ಬಣ್ಣ, ವಾಸನೆ, ಸ್ಪರ್ಶ, ರುಚಿ, ಎಲ್ಲವೂ ಒಮ್ಮೆಲೆ ಅನುಭವವಾಗಬೇಕು. ಈ ದರ್ಶನವನ್ನು ನಮ್ಮ ಸುಗಮಸಂಗೀತದಲ್ಲಿ ಮೊದಲು ತೋರಿದರು. ಕಾಳಿಂಗರಾಯರು.

ಮೈಸೂರು ಅನಂತಸ್ವಾಮಿ (೨೫೧೦೧೯೩೬ ೧೯೯೫)

ಸುಗಮ ಸಂಗೀತ ಹಾಡುಗಾರಿಕೆ ಮತ್ತು ಸಂಯೋಜನೆಯಲ್ಲಿ ಕಾಳಿಂಗರಾಯರಿಂದ ಪ್ರೇರಿತರಾಗಿ, ರಾಯರ ಶೈಲಿಯನ್ನು ವಿಸ್ತರಿಸಿದರು ಎಂದೇ ಹೇಳಬಹುದಾದವರು ಶ್ರೀ ಮೈಸೂರು ಅನಂತಸ್ವಾಮಿ. ‘ಸುಗಮಸಂಗೀತ’ ಇಂದು ಒಂದು ಗಟ್ಟಿ ನೆಲೆಯನ್ನು ಕಂಡುಕೊಳ್ಳುವಲ್ಲಿ ಮೈಸೂರು ಅನಂತಸ್ವಾಮಿಯವರ ಪಾತ್ರ ದೊಡ್ಡದು. ‘ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ’ ಕುವೆಂಪು ಕವಿತೆ ಇವರ ಪ್ರಥಮ ರಾಗಸಂಯೋಜನೆ ಎಂದರೆ ಆಶ್ಚರ್ಯವಾಗುತ್ತದೆ. ಸುನಾದ ವಿನೋದಿನಿ ರಾಗದಲ್ಲಿ ಅವರು ತೆರೆದಿರುವ ಸ್ವರಲೋಕ ಅದ್ಭುತ ಚಿತ್ರ ಬರೆಯುತ್ತದೆ. ಚರಣದಿಂದ ಚರಣಕ್ಕೆ ಭಾವದ ಪ್ರತಿಮೆಗಳು ಹರಿಯುತ್ತಲೇ ರಾಗಗಳು ಬದಲಾಗುತ್ತವೆ. ಚರಣದ ಪ್ರಾರಂಭದಲ್ಲಿ ಪೂರಿಯಾಧನಾಶ್ರೀ ಇದ್ದು ಕಡೆಯ ಸಾಲುಗಳೆರಡು ದರ್ಬಾರಿ ಕಾನಡದಲ್ಲಿ ಬರುತ್ತವೆ. ಇವು ರಾಗಸಂಯೊಜನೆಗಳಾದರೂ ಶಾಸ್ತ್ರೀಯ ಆವೃತ್ತಿಯಲ್ಲಂತೂ ಅಲ್ಲ. ಸ್ವರ ಸಂಯೋಜನೆಯಲ್ಲಿ ರಾಗವನ್ನು ಅನಾವರಣಗೊಳಿಸುವುದೇ ಅನಂತಸ್ವಾಮಿಯವರ ಅನನ್ಯತೆ. ಅವರಿಗಿದ್ದ ಪಾಂಡಿತ್ಯ ಅಸಾಧಾರಣವಾದುದು.

ಅನಂತಸ್ವಾಮಿ ಒಬ್ಬ ಅಪೂರ್ವ ಕಲಾವಿದ ಅವರು ರಾಗಸಂಯೋಜನೆ ಮಾಡಿರುವ ಗೀತೆಗಳು ನೂರಾರು. ಅವುಗಳಲ್ಲಿ ಕೆಲವು ರತ್ನಪ್ರಾಯವಾದವು. ಅವರ ಗಾಯನವೆಂದರೆ ಅದೊಂದು ರೀತಿಯಲ್ಲಿ ವ್ಯಕ್ತಿತ್ವದ ಅಭಿವ್ಯಕ್ತಿ. ಅನಂತಸ್ವಾಮಿಯವರ ‘ಇಳಿದು ಬಾ ತಾಯಿ’ (ಬೇಂದ್ರೆ) ದಾಖಲೆಗಳನ್ನು ಮುರಿದ ಸಂಯೋಜನೆ, ‘ಜಯಭಾರತ ಜನನಿಯ ತನುಜಾತೆ’ (ಕುವೆಂಪು) ‘ನಾಕುತಂತಿ’, ‘ಕುರಿಗಳು ಸಾರ್ ಕುರಿಗಳು’ (ನಿಸಾರ್) ‘ಯಾವ ಮೋಹನ ಮುರಲಿ’ ‘ನಿತ್ಯೋತ್ಸವ’, ‘ಬೆಣ್ಣೆಕದ್ದ’ ಮತ್ತದೇ ಬೇಸರ ಒಂದೊಂದೂ ವೈವಿಧ್ಯತೆಗಳನ್ನು ತೋರಿಸುವಂತಹದ್ದು. ಒಂದೊಂದು ಹಾಡಿನಲ್ಲಿಯೂ, ಅನನ್ಯತೆ, ಸ್ವಂತಿಕೆಯ ಹೊಳಪು, ಛಾಪು. ಅವರ ಒಂದೊಂದು ಸ್ವರಸಂಯೋಜನೆಯಲ್ಲೂ, ಹಾಡಿನ ಸಣ್ಣಸಣ್ಣ ಹೊರಳುಗಳಲ್ಲಿಯೂ ಅಪೂರ್ವ ಮೋಹಕತೆ ಎದ್ದು ಕಾಣುತ್ತದೆ. ಕವಿತಾ ಪ್ರಸ್ತುತಿಯಲ್ಲಿಯೂ, ಅರೇ ಹಾಡುವಾಗಲಂತೂ, ಕವಿತೆ ತನ್ನ ಸಮಸ್ತ ವೈಭವದೊಡನೆ ಪ್ರತ್ಯಕ್ಷವಾಗಿ ಸಾಕ್ಷಾತ್ಕಾರಗೊಳ್ಳುತ್ತದೆ. ಕೇಳುಗರ ಎದೆ ಕರಗಿಸುವ ಮಾಧುರ್ಯ ಹರಿಯುತ್ತಿದೆ, ಕವಿತೆ ಬೆಳಗುತ್ತದೆ.

ಕಾಳಿಂಗರಾಯರು ಸುಗಮಸಂಗೀತಕ್ಕೆ ತಳಪಾಯ ಹಾಕಿದರು. ಆದರೆ ಅನಂತಸ್ವಾಮಿ ಅದರ ಕಂಭ, ಚಾವಣಿ, ಗೋಡೆಗಳನ್ನೆಲ್ಲಾ ಮುಂದಾಳಾಗಿ ನಿಂತು ಕಟ್ಟಿ ತಾವೇ ಅದರ ಸುವರ್ಣ ಶಿಖರವಾಗಿ ಹೋದರು. ಸ್ವರಸಂಯೋಜನೆ ಮತ್ತು ಗಾಯನ ಎರಡು ಶಕ್ತಿಗಳನ್ನೂ ಬಹಳ ಘನವಾದ ನೆಲೆಯಲ್ಲಿ ರೂಢಿಸಿಕೊಂಡಿದ್ದ ಅನಂತಸ್ವಾಮಿ ಸರಿಸಾಟಿಯಿಲ್ಲದ ಸುಗಮಸಂಗೀತಗಾರ. ಶ್ರೇಷ್ಠ ಭಾವಗೀತೆಗಳ ಅಂತರಂಗವನ್ನು ಅವರಂತೆ ತಮ್ಮ ಮಾಧುರ್ಯ ಪ್ರಧಾನವಾದ ಗಾಯನದಲ್ಲಿ ತೆರೆದು ತೋರಿಸಿದವರು ಇನ್ನೊಬ್ಬರಿಲ್ಲ.

ಅನಂತಸ್ವಾಮಿಯವರು ಸಂಗೀತ ಸಂಯೋಜನೆ ಮಾಡಿದ್ದು ಸುಮಾರು ಒಂದು ಸಾವಿರಕ್ಕೂ ಮಿಕ್ಕ ಹಾಡುಗಳನ್ನು ಅವುಗಳ ವೈವಿದ್ಯತೆ ಕಂಡರೆ ಬೆರಗು ಮೂಡುತ್ತದೆ. ರಾಗಪ್ರಧಾನವಾದ ಸಂಯೋಜನೆಗಳು, ಸ್ವರಸಂಯೋಜನೆ ಮಾಡಿದ ಸಂಯೋಜನೆಗಳು, ಪಾಶ್ಚಾತ್ಯ ಸಂಗೀತದ ಕಾರ್ಡ್‌ಗಳ ಆಧಾರದಿಂದ ಸಂಯೋಜಿಸಿದ, ರತ್ನನ ಪದಗಳು, ಕೈಲಾಸಂ ಪದಗಳು, ಮಾಧುರ್ಯವನ್ನೇ ಪ್ರಧಾನವಾಗಿಟ್ಟು ಉಣಿಸಿದ ಗೀತಪ್ರಧಾನವಾದ ಸಂಯೋಜನೆಗಳು, ಪದಗಳ ಶಬ್ದಗಳ ಅನುಕರಣೆಯಂತೆ ಉಲಿಯುವ (ಉದಾ:ಹೂಹೂಹೂ) ಗೀತಸಂಯೋಜನೆಗಳು ಹೇಳುತ್ತಾ ಹೋದರೆ ಅದೇ ಒಂದು ಮಹಾಗ್ರಂಥವಾಗುವಷ್ಟು ವಿಸ್ತಾರವುಳ್ಳದ್ದು.

ನಿತ್ಯೋತ್ಸವ ಧ್ವನಿ ಸುರುಳಿ, ರತ್ನನ್ ಪದ, ‘ಭಾವಸಂಗಮ’ ಧ್ವನಿಸುರುಳಿಯ (ಎಲ್ಲಾ ಹಾಡುಗಳೂ) ಎಲ್ಲೆ ಜಾರಿತೋ ‘ನಿತ್ಯೋತ್ಸವ’, ‘ನಾನು ಬಡವಿ ಆತ ಬಡವ’, ‘ಮಧುರೆಗೆ ಹೋದನೋ’, ‘ರಾಯರು ಬಂದರು’, ‘ಕೋಳಿಕೆ ರಂಗ’, ‘ಮಡಿಕೇರಿ ಮೇಲ್ಮಂಜು’, ‘ನೀನ್ ನನ್ ಅಟ್ಟಿಲ್’, ‘ಲೋಕದ ಕಣ್ಣಿಗೆ’, ‘ಈ ಬಾನು ಈ ಚುಕ್ಕಿ’, ‘ಎದೆ ತುಂಬಿ ಹಾಡಿದೆನು’ ಹೀಗೆ ನೂರಾರು ಹಾಡುಗಳು ಪಟ್ಟಿ ಇದೆ.

ಬಿ.ಎಂ. ಶ್ರೀಯವರ ‘ಕರುಣಾಳು ಬಾಬೆಳಕೆ’-‘ಮೊದಲು ತಾಯಿ ಹಾಲು ಕುಡಿದು’, ಡಿವಿಜಿಯವರ ಮಂಕುತಿಮ್ಮನ ಕಗ್ಗ-ಕುವೆಂಪು ಅವರ ‘ಓ ನನ್ನ ಚೇತನ’ ಅಂತರತಮನೀಗುರು, ನಿನ್ನೆಡೆಗೆ ಬರುವಾಗ ದೂರ ಬಲು ದೂರ-ಜಿ.ಎಸ್‌ಎಸ್ ಅವರ ‘ಎದೆ ತುಂಬಿ ಹಾಡಿದೆನು’- ಲಕ್ಷ್ಮೀನಾರಾಯಣ ಭಟ್ಟರ ‘ಎಲ್ಲೆ ಜಾರಿತೋ’ ‘ಬಾ ಒಲವೇ’- ಪುತಿನ ಅವರ ‘ನನ್ನೊಳುನಾ’- ಕೆ.ಎನ್.ಎಸ್. ಅವರ ‘ಮೈಸೂರು ಮಲ್ಲಿಗೆ’, ಹೆಚ್.ಎನ್. ವೆಂಕಟೇಶ್‌ಮೂರ್ತಿಯವರ ‘ನನ್ನ ಹಳೆಯ ಹಾಡುಗಳೇ’, ‘ಲೋಕದ ಕಣ್ಣಿಗೆ’ ‘ಅಮ್ಮಾ ನಾನು ದೇವರಾಣೆ’ ಮುಂತಾದ ಗೀತೆಗಳು ಅನಂತ ಸ್ವಾಮಿಯವರ ಧ್ವನಿಯಲ್ಲಿ ಪ್ರತಿಬಾರಿ ಕೇಳಿದಾಗಲೂ ಹೊಚ್ಚ ಹೊಸತಾಗಿ ಹುಟ್ಟಿಬರುತ್ತವೆ. ಪ್ರತಿ ಬಾರಿ ಹಾಡಿದಾಗಲೂ ಕವಿತೆಯ ಬಣ್ಣಕ್ಕೆ ಮತ್ತಷ್ಟು ಸೊಗಸಿನ ಬೆಳಕು ಹರಿಯುತ್ತದೆ. ಆ ಬೆಳಕಿನಲ್ಲಿ ಕವಿತಾ ಸುಂದರಿ ಮತ್ತಷ್ಟು ಚೆಲುವೆಯಾಗಿ ಕಂಡು ಬರುತ್ತಾಳೆ.

ಸುಗಮಸಂಗೀತ ಶ್ರುತಶಕ್ತಿ ಮತ್ತು ಅರ್ಥಶಕ್ತಿ ಎರಡರ ಬೆನ್ನೂ ಹತ್ತ ಬೇಕಾಗುತ್ತದೆ. ಶಬ್ದನಾದ ಮತ್ತು ಅರ್ಥ ಎರಡನ್ನೂ ಬಳಸಿಕೊಂಡು ಗೀತದ ಭಾವಪ್ರತಿಮೆಯನ್ನು ನಿರ್ಮಿಸಬೇಕಾಗುತ್ತದೆ. ಅನಂತಸ್ವಾಮಿಯವರಿಗೆ ಕಾವ್ಯದ ಸ್ಪಷ್ಟ ಪರಿಚಯ ಇದ್ದುದರಿಂದ, ಕವಿಗಳ ಒಡನಾಟ ಇದ್ದಿದ್ದರಿಂದ ಕವಿತೆಯ ಎದೆಮಿಡಿತವನ್ನು ರಾಗಗಳ ಮೂಲಕ ಹೆಣೆದು ನಾದದ ಸುಂದರ ಉಡಿಗೆಯನ್ನು ತೊಡಿಸಿದರು. ನಿರಂತರ ವೈವಿಧ್ಯತೆಗಳ ಮೂಲಕ ಪ್ರಯೋಗಶೀಲತೆಯನ್ನೇ ತೋರಿಸಿದರು. ಶಾಸ್ತ್ರಿಯ-ಜಾನಪದ-ಪಾಶ್ಚಾತ್ಯ-ಲಘು ಎಲ್ಲವು ಮಿಳಿತವಾಗಿ, ಎಲ್ಲಿ ಬೇಕೋ ಅಲ್ಲಿ ಪಲುಕಿ,ಎಲ್ಲಿ ಬೇಕೋ ಉರುಳಿ ನಿಂತು, ಸುಗಮಸಂಗೀತವಾಗುವಂತೆ, ಕವಿತೆಗಳ ಚಿತ್ರವನ್ನು, ಸುಗಮಸಂಗೀತದ ಚೌಕಟ್ಟಿನಲ್ಲಿ ನಯವಾಗಿ ಹಿಡಿದು ಕಟ್ಟಿದರು. ಅನಂತ ಸ್ವಾಮಿಯವರು ಸಂಗೀತ ನಿರ್ದೇಶನ ಮಾಡಿದ-ಗೀತರೂಪಕಗಳಾದ ಸಿಂಡ್ರೆಲಾ (ಪಾಶ್ಚಾತ್ಯ), ಪುಣ್ಯಕೋಟಿ, ಕಿಂದರಜೋಗಿ-ಧರ್ಮಭೂಮಿ, ವಿಜಯೋತ್ಸವ-ಕರ್ನಾಟಕ ವೈಭವ-ಮುಂತಾದವು ಒಂದಕ್ಕಿಂತಾ ಒಂದು ಭಿನ್ನವಾಗಿ ವೈವಿಧ್ಯತೆಯಲ್ಲಿ ನಿಪುಣತೆಯನ್ನು ಸಾಧಿಸಿದವು. ಅನಂತಸ್ವಾಮಿಯವರು ೧೯೭೪ರಲ್ಲಿ ‘ನಮ್ಮೂರ ವೈಭವ ಏನ ಹೇಳ್ಳಣ್ಣ- ಗಾಂಧಿ ಹೇಳಿಕೊಟ್ಟ ಪಾಠ’ ಗೀತೆಗಳನ್ನು ಬರೆದು ಹಾಡಿ ರಂಜಿಸಿದರು. ಅನಂತಸ್ವಾಮಿಯಂತಹ ಕಲಾವಿದ ಅನಂತವಾಗಿ ಉಳಿಯುವುದು ಅವನ ಕಲಾಕೃತಿಗಳಿಂದ ಮಾತ್ರವಲ್ಲದೇ ಅವನ ವ್ಯಕ್ತಿತ್ವದಿಂದಲು ಕೂಡ ಎಂಬುದಕ್ಕೆ ಅವರೇ ಸಾಕ್ಷಿ. ಅನಂತಸ್ವಾಮಿಯವರ ಗೀತಸಂಯೋಜನೆಗಳು ಯಾರೊಂದಿಗೂ ಗುದ್ದಾಡುವಂತಹುದಲ್ಲ. ಯಾರೊಂದಿಗೂ ಪೈಪೋಟಿಗೆ ಇಳಿಯುವಂತಹದು ಅಲ್ಲ. ಅವುಗಳಿಗೆ ಅದರದೇ ಆದ ಸೌಜನ್ಯತೆಯಿದೆ. ಸಮಾಧಾನ ಚಿತ್ತವಿದೆ. ಸಮತೋಲನ ಭಾವವಿದೆ. ಇವೆಲ್ಲವನ್ನೂ ಮೀರಿದ ಪ್ರಾಮಾಣಿಕತೆಯಿದೆ. ಇವೆಲ್ಲ ಅನಂತಸ್ವಾಮಿಯವರ ವ್ಯಕ್ತಿತ್ವದ ಗುಣ.ಈ ಗುಣಗಳೆಲ್ಲಾ ಇವರ ಸಂಯೋಜನೆಗಳ ಮೇಲೆ ಪರಿಣಾಮ ಬೀರಿವೆ. ಅನಂತಸ್ವಾಮಿಯವರು ಎಂದೂ ಮುಂದೆ ನುಗ್ಗಿ ನಿಂತವರಲ್ಲ ಎದೆ ತಟ್ಟಿಕೊಂಡು ಹಾಡಿದವರೂ ಅಲ್ಲ. ಹಾರಿ ಹಾರಿ ಮುಂದೆ ಮುಂದೆ ದಾಟಿದವರೂ ಅಲ್ಲ. ಏರಿ ಏರಿ ಕೊರಳೆತ್ತಿ ಕೂಗಿದವರೂ ಅಲ್ಲ. ಶಾಂತವಾಗಿ ಹರಿಯುವ ನದಿಯ ಕಲರವದಂತೆ ಅವರಶೈಲಿ. ಅವರ ಗೀತೆಗಳು ಸಾವಿನ ನೋವಿಂದ, ಅಗಲಿಕೆಯ ಭಯದಿಂದ ಅಂತ್ಯದ ಆತಂಕದಿಂದ ಮುಕ್ತವಾದುವು.

ಹೀಗೆ ಸತತ ಅನಂತಸ್ವಾಮಿ ಪ್ರಯೋಗಶೀಲರಾಗಿದ್ದರು. ಬೇರೆಯವರಿಗೆ ಅವರ ಸಂಯೋಜನೆಗಳು ರೂಢಿಯ ಜಾಡಿಗಿಂತ ಭಿನ್ನವಾದುದನ್ನು ಸೃಷಿಸ ಬಯಸುತ್ತಿದ್ದ ಅನಂತಸ್ವಾಮಿಯವರು ತಮ್ಮ ಸಂಯೋಜನೆಗಳಲ್ಲಿ ಮಾಧುರ್ಯ ಮತ್ತು ಬೆಳಕನ್ನು ಹದವಾಗಿ ಬೆರೆಸಿದ್ದರು. ಅವರು ಒಮ್ಮೆ ಸಂಗೀತ ಸಂಯೋಜನೆ ಮಾಡಿದ ಕವಿತೆಗೆ ಬೇರೊಬ್ಬರು ಮತ್ತೆ ಸಂಯೋಜನೆ ಮಾಡಲು ಸಾಧ್ಯವಾಗದಂತಹ ಸಂಯೋಜನೆ ಅವರದು ಭಾರತೀಯ ಭಾಷೆಯ ಭಾವಗೀತೆಯ ಪ್ರಪ್ರಥಮ ಧ್ವನಿ ಸುರುಳಿಯ ಸಂಗೀತ ಅನಂತಸ್ವಾಮಿಯವರದು ಎಂಬುದು ಅವರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. ಕೆಎಸ್‌ನ ಬೇಂದ್ರೆಯವರ ಕವನಗಳಿಗೆ ಅವರು ಸಂಗೀತ ಸಂಯೋಜಿಸಿದ ಶೈಲಿ ನಮ್ಮನ್ನು ಭಾವದಲ್ಲಿ ತೇಲಿಸಿದರೆ, ನಾಟಕ ಶಕ್ತಿಯಿಂದ ರಾಜರತ್ನಂ ಪದಗಳು ನಮ್ಮನ್ನು ಕುಣಿಸುತ್ತವೆ. ಧಾಟಿ ಲಯಗಳಿಂದಲೇ ನಿಸಾರ್ ಮುಂತಾದವರ ಕವನಗಳು ನಮ್ಮನ್ನು ಬೆರಗಾಗಿಸುತ್ತವೆ.

ಅನಂತಸ್ವಾಮಿಯವರು ತೋರಿದ ವೈವಿಧ್ಯತೆಗೆ ಕಾರಣ, ಅವರಿಗಿದ್ದ ನಾನಾ ವಾದ್ಯಗಳ ವಾದನಾನುಭವ. ಅವರು ಮ್ಯಾಮಡಲಿನ್, ಕೊಳಲು, ಹಾರ್ಮೋನಿಯಂ, ಮುಂತಾದ ವಾದ್ಯಗಳನ್ನು ಪ್ರಾವೀಣ್ಯತೆಯಿಂದ ನುಡಿಸುತ್ತಿದ್ದರು. ಅವರಂತೆ ಮ್ಯಾಂಡಲಿನ್ ನುಡಿಸುವ ಮತ್ತೊಬ್ಬ ಕಲಾವಿದರಿಲ್ಲ ಎನ್ನುವುದು ವಾಸ್ತವದ ವಿಷಯ.

ರಾಜರತ್ನಂ ಹಾಡುಗಳಿಗೆ ಕಾರ್ಡ್ಸ್ ಮೂಲಕ ಸ್ವರ ಸಂಯೋಜನೆ ಮಾಡಿದ ನಂತರ, ರಾಜರತ್ನಂ ಕವಿತೆಗಳಿಗೆ ಸ್ವರಸಂಯೋಜನೆ ಮಾಡಲು ಹೊರಟ ಸುಗಮಸಂಗೀತಗಾರರು ಅನುಸರಿಸಿ, ಅನುಕರಣೆ ಮಾಡಿದ್ದು ಅನಂತಸ್ವಾಮಿಯವರ ಶೈಲಿಯನ್ನೆ. ಅನಂತಸ್ವಾಮಿಯವರದೇ ಒಂದು ಶಾಲೆಯಾಯಿತು. ಹತ್ತಾರು ಮಂದಿ ಅವರ ಶಿಷ್ಯರಾದರು. ರಾಜು ಅನಂತಸ್ವಾಮಿ, ಎಂ.ಕೆ.ಜಯಶ್ರೀ, ಗಾಯಿತ್ರಿ, ಪುಷ್ಪ, ಜಗದೀಶ್, ಅನಂತ್‌ಕುಮಾರ್, ದಿ|| ನಾಗಾರಾಜ್, ಶ್ರೀನಿವಾಸ ಉಡುಪ, ಕಸ್ತೂರಿ ಶಂಕರ್, ರತ್ನಮಾಲಾ ಪ್ರಕಾಶ್, ಶ್ರೀಲಕ್ಷ್ಮಿ-ಪದ್ಮಾವತಿ ಮುಂತಾದವರು ಅನಂತಸ್ವಾಮಿಯ ಶೈಲಿಯನ್ನೇ ಅನುಸರಿಸಿದರು.

ಸುಗಮಸಂಗೀತಕ್ಕೆ ಒಂದು ನಿರ್ದಿಷ್ಟ ಆಕಾರವನ್ನು ಕೊಟ್ಟವರು ಅನಂತಸ್ವಾಮಿಯವರು. ಅದಕ್ಕೊಂದು ಸಿದ್ಧಾಂತ ತಂದವರೂ ಅವರೇ. ಪ್ರಭಾತ್ ಕಲಾವಿದರ ಗೀತನೃತ್ಯರೂಪಗಳಿಗೆಲ್ಲ (ಶಾಸ್ತ್ರೀಯ ಸಂಗೀತ ರೂಪಕಗಳನ್ನು ಹೊರತುಪಡಿಸಿ) ಸಂಗೀತ ಸಂಯೋಜನೆ ಮಾಡಿದ ಅನಂತಸ್ವಾಮಿಯವರು, ತಮ್ಮ ಸಂಯೋಜನೆಗಳಲ್ಲಿ ಚಿತ್ರ ಸಂಗೀತವನ್ನೂ ನೃತ್ಯ ಸಂಗೀತವನ್ನೂ ಅಂತರ್ಯಾಮಿಯಾಗಿ ಬಳಸಿಕೊಂಡರು. ಇದು ಅನಂತಸ್ವಾಮಿಯವರ ಸಂಗೀತ ನಿರ್ದೇಶನದ ಸ್ವೋಪಜ್ಞತೆ ಎನ್ನಬಹುದು.

ಸಿ. ಅಶ್ವತ್ಥ್ (೨೯೧೨೧೯೩೯)

ಗೀತಾಭಿನಯ ಶೈಲಿಗೆ ಉತ್ತಮ ಉದಾಹರಣೆ ಅಶ್ವತ್ಥ್ ಅವರ ರಾಗ ಸಂಯೋಜನೆ. ಸುಗಮ ಸಂಗೀತ ಇತಿಹಾಸದಲ್ಲಿ ಅಶ್ವತ್ಥ್ ಅವರದು ದೊಡ್ಡ ಹೆಸರು. ಬಾಲ್ಯದಿಂದ ಹಿಂದೀ ಚಲನಚಿತ್ರಗೀತೆಗಳಿಂದ ಪ್ರಭಾವಿತರಾಗಿ ಕವಿತೆಗಳಿಗೆ ಮಟ್ಟು ಕೂಡಿಸಲು ಪ್ರಾರಂಭಿಸಿದರ. ೧೯೬೦ರಿಂದಲೇ ಇದು ಪ್ರವೃತ್ತಿಯಾಗಿ ಬೆಳೆಯಿತು. ರಂಗಭೂಮಿಯ ಅನುಭವವೇ ಅಶ್ವತ್ಥ್‌ರಿಗೆ ಸುಗಮ ಸಂಗೀತಕ್ಕೆ ಅಡಿಪಾಯವಾಯಿತು. ‘ಶಿಶುನಾಳ ಷರೀಫ್’ ಧ್ವನಿಸುರುಳಿಯಿಂದ ಪ್ರಾರಂಭವಾಗಿ ಹತ್ತಾರಾಗಿ ನೂರಾರಾಗಿ ಕಡೆಗೆ ಸುಮಾರು ಸಾವಿರ ಹಾಡುಗಳ ಹತ್ತಿರ ಹತ್ತಿರ ಗೀತೆಗಳಿಗೆ ಸ್ವರಸಂಯೋಜನೆ ಮಾಡಿದರು. ನಾಟಕ, ಚಲನಚಿತ್ರ, ಸುಗಮ ಸಂಗೀತ ಈ ಮೂರೂ ಪ್ರಕಾರಗಳಿಗೆ ಸಂಗೀತ ನಿರ್ದೇಶಿದ ಅಶ್ವತ್ಥ್ ಮೂರೂ ಗುಣಗಳನ್ನು ಅಂತರ್ಗತವಾಗಿಸಿಕೊಂಡರು.

ಅಶ್ವತ್ಥ್‌ರದು ಹಾಡಿನ ಅರ್ಥಕ್ಕೆ ಸ್ವರವನ್ನು ಶೋಧಿಸುವ ಸಂಯೋಜನ ಶೈಲಿ, ಕವಿತೆಯು ಚರಣದಿಂದ ಚರಣಕ್ಕೆ ಅರ್ಥ ಪರಂಪರೆಯನ್ನು ಹಿಗ್ಗಿಸುವಲ್ಲಿ ಸಂಗೀತ ಸಂಯೋಜಕನೂ ಸಾಹಿತ್ಯವನ್ನು ಹಿಂಬಾಲಿಸಬೇಕಾಗುತ್ತದೆ. ಕವಿತೆಯಲ್ಲಿ ಒಂದೊಂದು ಚರಣ ಬೇರೆ ಬೇರೆ ಅರ್ಥಕೊಡುವಂತೆ ಸಂಗೀತ ಸಂಯೋಜನೆಯಲ್ಲೂ ಈ ಅರ್ಥವನ್ನು ಹುಡುಕಿ ಪಡೆಯುವುದೇ ಉತ್ತಮ ಸಂಯೋಜನೆಯ ಶೈಲಿ, ಬಾರೆ ನನ್ನ ಶಾರದೆ (K.S.N.) ಮೊದಲ ರಾಗ ಸಂಯೋಜನೆ.

ಕವಿ ಲಕ್ಷ್ಮೀನಾರಾಯಣ ಭಟ್ಟರ ‘ಏಕೆ ಹೀಗೆ ನಮ್ಮ ನಡುವೆ’, ಕಯ್ಯಾರ ಕಿಙ್ಞಾಣ್ಣರೈ ಅವರ ‘ಕಾಣದಿಹ ದಾರಿಯಲಿ’ ಲಕ್ಷ್ಮಣರಾವ್ ಅವರ ‘ಕವಿದಂತೆ ಮಂಜು’ ಶಿವರುದ್ದಪ್ಪನವರ ‘ಎಲ್ಲೋ ಹುಡುಕಿದೆ’, ಕೆ.ಎಸ್.ಎನ್. ಅವರ ‘ಹೊಸಲಬಳಿ ಬಂದೊಡನೆ’ ‘ಮೊದಲದಿನ ಮೌನ’ ಷರೀಫರ ‘ತರವಲ್ಲ ತಗಿನಿನ್ನ’ ಮೊದಲಾದ ಸಂಯೋಜನೆಗಳು ಅಶ್ವತ್ಥ್‌ರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ನಾಟಕ, ಜನಪದ, ಚಲನಚಿತ್ರ, ಸುಗಮಸಂಗೀತ-ಈ ನಾಲ್ಕೂ ಪ್ರಕಾರದ ಅನುಭವಗಳೀಸಿರುವ ಅಶ್ವತ್ಥ್ ಸುಗಮ ಸಂಗೀತದ ಬಗೆಗೆ ಪುಸ್ತಕ ಸುಗಮ ಸಂಗೀತ’ದಲ್ಲಿ ತಿಳಿಸಿರುವ ವಿಚಾರಗಳು ಅಪೂರ್ವವಾಗಿವೆ. ಸುಗಮಸಂಗೀತದ ಬಗೆಗೆ ಆಲೋಚಿಸಿದ ಮೊಟ್ಟ ಮೊದಲಿಗರೂ ಅವರೇ ಆಗುತ್ತಾರೆ. ಅವರ ವಿಚಾರಧಾರೆಗಳು ಮುಂದಿನ ಪೀಳಿಗೆಗೆ ಅಡಿಪಾಯಗಳಾಗಿವೆ.

ಇವರ ಅತ್ಯುತ್ತಮ ಸಂಯೋಜನೆಗಳು ಕೆ.ಎಸ್.ಎನ್. ಅವರ ತೌರಸುಖದೊಳಗೆನ್ನ ನಿನ್ನೊಲುಮೆಯಿಂದಲೇ, ಮೊದಲದಿನ ಮೌನ, ಬಾರೆ ನನ್ನ ಶಾರದೆ, ಒಂದಿರುಳು ಕನಸಿನಲಿ, ಅಕ್ಕಿಯಾರಿಸುವಾಗ ಮುಂತಾದವು. ಇವುಗಳ ಅಭಿವ್ಯಕ್ತಿಯಲ್ಲಿ ಅಶ್ವತ್ಥ್‌ರವರ ಛಾಪು ಎದ್ದು ಕಾಣುತ್ತದೆ. ಅಡಿಗರ ‘ಅಮೃತವಾಹಿನಿಯೊಂದು ಹರಿಯುತಿದೆ’ ‘ಮೌನ ತಬ್ಬಿತು ನೆಲವ’ ‘ಎದೆಯು ಮರಳಿ ತೊಳಲುತಿದೆ’-ಗೀತೆಗಳಲ್ಲಿ ಅಡಿಗರ ವ್ಯಕ್ತಿತ್ವ ಮೂಡುತ್ತದೆ. ಅಶ್ವತ್ಥ್ ಸುಕವಿತೆಗೆ ಸ್ವರಸಂಯೋಜನೆ ಮಾಡುವುದೇ ನಿಜವಾದ ಸಂಯೋಜನೆ ಎಂದಿದ್ದಾರೆ. ಅವರ ಸಂಯೋಜನೆಗಳು ಸ್ವರಸಂಯೋಜನೆಯಲ್ಲಿಯೇ ಸಂಯೋಜಿಸಲ್ಪಟ್ಟಿವೆ. ನರಸಿಂಹಸ್ವಾಮಿಗಳ ‘ಮೊದಲದಿನ ಮೌನ’ ಎನ್ನುವ ಗೀತೆಯಲ್ಲಿ ‘ಮೌನ’ ಎಂಬ ಶಬ್ದ ‘ಅಡಿಗರ’ ಮೌನತಬ್ಬಿತು ನೆಲವ-ಎಂಬಲ್ಲಿನ ‘ಮೌನ’ ಪದ ಒಂದೇ ಆಗಿದ್ದರೂ ಈ ಎರಡೂ ಬೇರೆ ಬೇರೆ ಕವಿತೆಗಳ ಸಂದರ್ಭದಲ್ಲಿ ಬಂದು ಅರ್ಥದಿಂದ ಭಿನ್ನವಾದವು. ಅಶ್ವತ್ಥ್ ದೂರಗಳನ್ನು ಕಾಯ್ದುಕೊಂಡೇ ಸಂಯೋಜಿಸಿದ್ದಾರೆ.

ಕವಿತೆಯಲ್ಲಿರುವ ಮಾತು, ಮೌನ, ವಿರಾಮಚಿಹ್ನೆ, ಅರ್ಧವಿರಾಮ, ಆಶ್ಚರ್ಯ, ಪ್ರಶ್ನಾರ್ಥಕ (?) ಮೊದಲಾದ ಚಿಹ್ನೆಗಳಿರುತ್ತವೆ. ಕವಿ ಇವೆಲ್ಲವನ್ನೂ ಉದ್ದೇಶಪೂರ್ವಕವಾಗಿ ಬಳಸಿದ್ದಾನೆ, ಕವಿತೆಯ ಸ್ವರಸಂಯೋಜಕ ಇದನ್ನೆಲ್ಲಾ ತನ್ನ ಸ್ವರಸಂಯೋಜನೆಯಲ್ಲಿ ತಾರದಿದ್ದರೆ. ಕವಿತೆ ಸಾರ್ಥಕತೆ ಪಡೆಯುವುದಿಲ್ಲ. ಅಶ್ವತ್ಥ್‌ರ ಮಹತ್‌ಗುಣವೇ ಇಂತಹ ಸೂಕ್ಷ್ಮಗಳನ್ನು ಗಮನಿಸುವುದು. ‘ಮೊದಲ ದಿನ ಮೌನ, ಅಳುವೇ ತುಟಿಗೆ ಬಂದಂತೆ ನಂತರ ಚಿಂತೆ, ಎಂಬಲ್ಲಿನ ವಿರಾಮದಲ್ಲಿ ಚಿಂತೆಯನ್ನು ಸ್ವರದ ಮೂಲಕ (ಸಮಾಮಾ) ವ್ಯಕ್ತಪಡಿಸಿದ್ದಾರೆ.

ಜಿ.ಎನ್. ಶಿವರುದ್ರಪ್ಪನವರ ‘ಯಾವುದೀ ಪ್ರವಾಹವು’ ಎಂಬ ಕವಿತೆಯಲ್ಲಿ ಪ್ರಶ್ನಾರ್ಥಕ ಚಿಹ್ನೆಗೆ(?) ಅಶ್ವತ್ಥ್‌ಥೆಯೇ ಪ್ರಶ್ನಾರ್ಥಕ ಚಿಹ್ನೆ ಬಂದಮೇಲೆ ಅರೆಕ್ಷಣ ನಿಂತು ಹಾಡುತ್ತಾರೆ. (ರೀಸಸಾ | ””’ | ””’ | – ಎಂದು, ಪಲ್ಲವಿಯಲ್ಲಿ ಪ್ರಶ್ನಾರ್ಥಕ ಚಿನ್ಹೆ ನಿಲ್ಲುತ್ತದೆ.

ಅಶ್ವತ್ಥ್‌ರು ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ. ಅವುಗಳಲ್ಲಿ ವಚನಗಳನ್ನು ತಾಳಕ್ಕಳವಡಿಸಿ ನೃತ್ಯಕ್ಕೆ ಹೊಂದುವಂತಹ ಒಂದು ಪ್ರಯತ್ನ ‘ಕೂಡಲಸಂಗಮ’ ಧ್ವನಿಸುರುಳಿ-ಪ್ರಾರಂಭದಲ್ಲಿ ಪ್ರತಿಕ್ರಿಯೆ ನೀರಸವಾಗಿದ್ದು. ನಂತರ ಜನಪ್ರಿಯವಾಯಿತು.

ಅಶ್ವತ್ಥ್‌ರು ಮಕ್ಕಳಗೀತೆ ಮಾಡುವಾಗ ‘ಮಕ್ಕಳೇ ಹಾಡುವಂತೆ’ ಮಾಡಿದ್ದಾರೆ, ಇವರಂತೆ ಶಿಶುಗೀತೆಗಳಿಗೆ ಸ್ವರಸಂಯೋಜಿಸಿರುವುದು ಮತ್ತೊಬ್ಬರಿಲ್ಲ. ಇವರ ‘ಕಲಿಯೋಣ ಬಾ’ ‘ಬಣ್ಣದ ಹಕ್ಕಿ’ ‘ಗಿಲಿ ಗಿಲಿ ಗೆಜ್ಜೆ’-ಮುಂತಾದ ಧ್ವನಿ ಸುರುಳಿಗಳಲ್ಲಿ ಇದು ವ್ಯಕ್ತವಾಗುತ್ತದೆ.

‘ಗೀತಮಾಧುರಿ’ ಎಂಬ ದೂರದರ್ಶನ ಧಾರವಾಹಿಗೆ ಭಾವಗೀತೆಯನ್ನು ಅಳವಡಿಸಿ ಪ್ರಸಿದ್ಧ ಹಿರಿಯ ಕಿರಿಯ ಕವಿಗಳ ಕವಿತೆಗಳನ್ನು ದೃಶ್ಯ ಮಾಧ್ಯಮದಿಂದ ವರ್ಣರಂಜಿತ ಮಾಡಿದ ಕೀರ್ತಿ ಅಶ್ವತ್ಥ್‌ಗೆ ಸಲ್ಲುತ್ತದೆ.

ರಂಗಭೂಮಿಯ ಅನುಭವವನ್ನು ಹೆಕ್ಕಿಕೊಂಡು ಕವಿತೆಯಲ್ಲಿ ಕವಿಯ ವ್ಯಕ್ತಿತ್ವವನ್ನು ಹುಡುಕುತ್ತಾ, ಕವಿತೆಯಲ್ಲಿ ಭಾವದೀಪ್ತಿಯನ್ನು ಬೆಳಗಿಸುತ್ತಾ ಸ್ವರಸಂಯೋಜನೆ ಮಾಡುವರಲ್ಲಿ ಅಶ್ವತ್ಥ್‌ರ ಕಾಣಿಕೆ ಅನನ್ಯ.

ಸುಗಮ ಸಂಗೀತವನ್ನು ಅಧಿಕಾರಯುತವಾಗಿ ಮುನ್ನಡೆಸಿ ಅದಕ್ಕೊಂದು ಚೌಕಟ್ಟೆಂಬ ಸಿದ್ಧಾಂತವನ್ನು ಪುಸ್ತಕ ರೂಪದಲ್ಲಿ ಬರೆದದ್ದೇ ಅಲ್ಲದೆ ಸುಗಮ ಸಂಗೀತಗಾರರನ್ನು ಮುಂದಿನ ಹಾದಿಗೆ ಎಳೆದೊಯ್ಯುವ ಸಾರಥಿಯೇ ಸಿ. ಅಶ್ವತ್ಥ್ ಎನ್ನಬಹುದು.

ಅಶ್ವತ್ಥ್‌ರ ನಂತರ ಅವರಿಗೆ ಸಮಾನಂತರದಲ್ಲಿ ಅವರಷ್ಟೇ ಪ್ರಭಾವಶಾಲಿಯಾದ ಯಾವ ಸಂಯೋಜಕರೂ ಇಲ್ಲವೆಂದೇ ಹೇಳಬಹುದು.

ಸುಗಮಸಂಗೀತದ ಗಾಯಕಿಯರು

ಸುಗಮಸಂಗೀತ ಗಾಯನ ಹಾದಿಯ ಅವಲೋಕನದಲ್ಲಿ ಗಮನಿಸಿದಾಗ ಈ ಸಂಗೀತ ಪ್ರಕಾರಕ್ಕೆ ಅಪಾರವಾದ ಕಾಣಿಕೆ ಕೊಟ್ಟವರು ನಮ್ಮ ಮಹಿಳಾ ಗಾಯಕಿಯರೇ ಎಂಬ ಅಂಶ ಗೋಚರವಾಗುತ್ತದೆ. ಮೈಸೂರು ಆಕಾಶವಾಣಿಯ ಮೊದಲ ದನಿಯಾಗಿ ಡಾ|| ಶಮಂತಕಮಣಿಯವರು ಕಂಡು ಬಂದರೆ, ಮುಂಬಯಿ ಆಕಾಶವಾಣಿಯ ಮೊದಲ ದನಿಯಾಗ ‘ಸೀತಾಮುಲ್ಕಿ’ಯವರು ಹಾಡಿದರೆಂಬ ಅಂಶ ತಿಳಿಯುತ್ತದೆ.

ಉತ್ತರಕರ್ನಾಟಕದಲ್ಲಿ ಸೀತಾಮುಲ್ಕಿ, ಹೀರಾಬಾಯಿ, ವಿಜಯದೇಸಾಯಿ, ಸುಶೀಲಾ ಟೇಂಬೆ ಮುಂತಾದವರು ಕಾರಣರಾದಂತೆ ದಕ್ಷಿಣಕರ್ನಾಟಕದ ಮಂಗಳೂರಿನಲ್ಲಿ ಶ್ರೀಮತಿ ಜಯಂತಿದೇವಿ ಹಿರೇಬೆಟ್(೧೯೨೭) ಅವರು, ಸುಗಮಸಂಗೀತದ ಆರೋಹಣದ ಸ್ಥಿತಿಗೆ ಕಾರಣರಾದ ಪ್ರತಿಭಾವಂತ ಗಾಯಕಿ. ೧೯೪೪ರಲ್ಲಿಯೇ ಇವರು ಹಾಡಿದ ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಮತ್ತು ‘ಹೂವ ತರುವರ ಮನೆಗೆ ಹುಲ್ಲ ತರುವ’ ಎಂಬ ಪರುಂದರದಾಸರ ಪದಗಳ H.M.V. ಕಂಪನಿಯ ಮೂಲಕ ಮದರಾಸಿನಲ್ಲಿ ಧ್ವನಿಮುದ್ರಿತವಾಗಿತ್ತು. ೧೯೫೨ರಲ್ಲಿ ಮುಂಬಯಿಯಲ್ಲಿ ಮತ್ತೆ ಇದೇ ಕಂಪನಿಯವರು ಭಾವಗೀತೆಗಳನ್ನು ಧ್ವನಿಮುದ್ರಿಸಿದರು. ‘ವಾರಿ ನೋಟಿ ಹಾರತಿತ್ತ’ (ಬೇಂದ್ರೆ) ‘ಹತ್ತು ಬರುಷದ ಹಿಂದೆ’ (ಕೆ.ಎಸ್.ನರಸಿಂಹಸ್ವಾಮಿ) ಮುಂತಾದ ಹಾಡುಗಳ ಎಚ್.ಎಂ.ವಿ. ಕಂಪನಿಯಲ್ಲಿ ಮುದ್ರಿತವಾಗಿ ಅತ್ಯಂತ ಜನಪ್ರಿಯವಾದವು. ಕನ್ನಡ ವಚನಗಳನ್ನು ದಾಸರಪದಗಳನ್ನು ಸುಗಮಸಂಗೀತ ಶೈಲಿಗೆ ಅಳವಡಿಸಿದ ಮೊದಲಿಗರೆಂಬ ಕೀರ್ತಿ ಜಯಂತಿದೇವಿಯವರದಾಯಿತು. ‘ಮಹಾತ್ಮಗಾಂಧಿ’ ಅವರ ಮುಂದೆ ‘ವಂದೇಮಾತರಂ’ ಹಾಡಿ ಮೆಚ್ಚುಗೆ ಗಳಿಸಿದ ಜಯಂತಿ ಅವರು ಕನ್ನಡ, ಮರಾಠೀ, ಕೊಂಕಣಿ ಮುಂತಾದ ಭಾಷೆಗಳಲ್ಲಿ ಜನಪ್ರಿಯ ಗೀತೆಗಳನ್ನು ಜನಸಾಮಾನ್ಯರನ್ನು ಆಕರ್ಷಿಸಿದರು. ‘ಶಿಶುನಾಳ ಷರೀಫರ’ ಪ್ರಶಸ್ತಿಯನ್ನು ಪಡೆದವರಲ್ಲಿ ಮೊದಲಿಗರಾದರು.

ಸುಗಮಸಂಗೀತದ ಮೊದಲ ಹಾಡಿಗೆ ದನಿಯಾದವರು ಮತ್ತು ಈ ಸಂಗೀತ ಪ್ರಕಾರಕ್ಕೆ ಅಪಾರವಾದ ಕಾಣಿಕೆ ಕೊಟ್ಟವರು ನಮ್ಮ ಗಾಯಕಿಯರೇ ಎನ್ನುವುದು ಅಚ್ಚರಿಯ ಸಂಗತಿ. ೧೯೪೯ರಲ್ಲಿ ಮೈಸೂರಿನಲ್ಲಿ ಡಾ|| ಶಮಂತಕಮಣಿಯವರಿಂದ ಭಾವಗೀತಾಗಾಯನ ಆರಂಭವಾಯಿತು. ಡಾ|| ಶಮಂತಕಮಣಿಯವರು ಹಾಡಿದ ಕುವೆಂಪುರವರ ‘ಕರೆಯುತಿದೆ ಓ ದೂರ ದಾಹ್ವಾನವಾಣಿ’-‘ಶೂನ್ಯತೆ ಏನಿದು ಹೃದಯದಲಿ’-‘ನಾನಿನ್ನು ಮರೆಯೆ’. ‘ಕರೆಯೆಂದು ಬರುವುದೋ’ ಎಂಬ ನಾಲ್ಕು ಗೀತೆಗಳು ಪದ್ಮಚರಣರ ರಾಗಸಂಯೋಜನೆಯಲ್ಲಿ ಆಕಾಶವಾಣಿಯಿಂದ ಬಿತ್ತರಗೊಂಡವು. ವೃತ್ತಿಯಿಂದ ವೈದ್ಯರಾಗಿ ಪ್ರವೃತ್ತಿಯಿಂದ ಸಂಗೀತಕಾರರಾಗಿದ್ದ ಡಾ|| ಶಮಂತಕಮಣಿಯವರೇ ಪದ್ಮಚರಣರ ಪ್ರಥಮ ಶಿಷ್ಯೆ ಎನ್ನಬಹುದು. ಇವರ ನಂತರ ೧೯೫೦ರಲ್ಲಿ ಆಗಸ್ಟ್ ೧೪ರಂದು ಆಕಾಶವಾಣಿ ಕೃಷಿರಂಗ ಕಾರ್ಯಕ್ರಮದಲ್ಲಿ ‘ಗೌರಿ ತವರಿಗೆ ಹೋಗಿ ಬಂದದ್ದು’-ಎಂಬ ಜಾನಪದ ಹಾಡಿನ ಮೂಲಕ ಜನಪ್ರಿಯ ಗಾಯಕಿಯಾಗಿ ಮಹಾನ್ ತಾರೆಯಾಗಿ ಮೆರೆದವರು ಶ್ರೀಮತಿ ಹೆಚ್.ಆರ್. ಲೀಲಾವತಿ. ಪದ್ಮಚರಣ್‌ರ ಬಳಿ ಇಪ್ಪತ್ತನಾಲ್ಕು ವರ್ಷಗಳ ಕಾಲ ಸುಗಮಸಂಗೀತವನ್ನು ಕಲಿತು ಅವರ ಸಂಯೋಜನೆಗಳಿಗೆ ದನಿಯಾದವರು ಲೀಲಾವತಿ. ಕರ್ನಾಟಕದ ಅವರ ಸಂಯೋಜನೆಗಳಿಗೆ ದನಿಯಾದವರು ಲೀಲಾವತಿ. ಕರ್ನಾಟಕದ ಲತಾಮಂಗೇಶ್ಕರ್ ಎಂದೇ ಪ್ರಖ್ಯಾತಿ ಪಡೆದ ಲೀಲಾವತಿಯವರು ಗಾಯಕಿಯಾಗಿ, ಸಂಯೋಜಕಿಯಾಗಿ, ಲೇಖಕಿಯಾಗಿದ್ದುದೇ ಅಲ್ಲದೆ ಆಕಾಶವಾಣಿಯಲ್ಲಿ ಸಂಗೀತ ಸಂಯೋಜಕಿಯಾಗಿ ಹೆಸರು ಮಾಡಿದರು. ಐವತ್ತರ ದಶಕದಿಂದ ಸುಮಾರು ಮೂರು ದಶಕಗಳವರೆಗೆ ‘ಗಾನ ಸಾಮ್ರಾಜ್ಞಿ’ಯಾಗಿ ಮೆರೆದ ಅವರ ಗಾಯನದ ನಾದಸುಖ ಕೇಳಿದವರಿಗಷ್ಟೆ ಅನುಭವ. ಶಾಂತ, ಗಂಭೀರಶೈಲಿಯ ಮಾಧುರ್ಯದ ಮಹತ್ ಸ್ಪರ್ಶವೇ ಅವರ ಗಾಯನದ ಮುಖ್ಯ ಗುಣ. ಸುಗಮಸಂಗೀತದ ಮಹಿಳಾ ಸಂಯೋಜಕರಲ್ಲಿ ಲೀಲಾವತಿಯವರದು ಹಿರಿಯ ಸ್ಥಾನ. ಲೀಲಾವತಿಯವರ ಸಹಪಾಠಿಯಾಗಿದ್ದ ಎಂ.ವಿ. ಮಾಲತಿಯವರು ಶಾಸ್ತ್ರೀಯ ಸಂಗೀತದಲ್ಲಿ ಆರ್.ಕೆ. ಶ್ರೀಕಂಠನ್ ಅವರ ಶಿಷ್ಯೆಯಾಗಿದ್ದು, ಸುಗಮಸಂಗೀತದಲ್ಲಿ ಪದ್ಮಚರಣ ಶಿಷ್ಯೆಯಾಗಿದ್ದರು. ಅಡಿಗರ ‘ಇಂದು ಕೆಂದಾವರೆ’ ಬೇಂದ್ರೆಯವರ ‘ಎನ್ನ ಹರಣ ನಿನಗೆ ಶರಣ’-ಹಾಡುಗಳ ಮೂಲಕ ಮನೆ ಮನೆಯ ಮಾತಾಗಿದ್ದರು. ಜಯಚಾಮರಾಜ ಒಡೆಯರ್ ಎದುರಿನಲ್ಲಿ ‘ನನ್ನ ಹರಣ’ ಭಾವಗೀತೆ ಹಾಡಿ ಮೆಚ್ಚುಗೆ ಪಡೆದಿದ್ದರು. ಪದ್ಮಚರಣ್‌ರ ಶೀಷ್ಯೆಯರಾದ ರೇಖಾ ಮತ್ತು ಕೃಪಾ ಅವರು ಆಲ್ ಇಂಡಿಯಾ ರೇಡಿಯೋವಿನಲ್ಲಿ ಡೆಲ್ಲಿಯಲ್ಲಿ ನಡೆದ ಹದಿನಾಲ್ಕು ಭಾಷೆಗಳ ಗಾಯನ ಮೇಳದಲ್ಲಿ ನಿಸಾರರ ‘ಸದಾ ಉರಿಯುತಿರು ಹಾಗೆ ಸ್ವಾತಂತ್ರ‍್ಯದ ಹಣತೆ’ಯ ಮೂಲಕ ಹೆಸರು ಮಾಡಿದ್ದರು. ಹದಿನಾಲ್ಕು ಭಾಷೆಗಳ ಹದಿನಾಲ್ಕು ಗೀತೆಗಳಲ್ಲಿ ಪದ್ಮಚರಣ್‌ರ ಸಂಯೋಜನೆಯಾದ ಈಗೀತೆ ಅತ್ಯುತ್ತಮವೆಂದು ಮೆಚ್ಚುಗೆ ಗಳಿಸಿತ್ತು. ಪದ್ಮಚರಣ್‌ರ ಮತ್ತೊಬ್ಬ ಶಿಷ್ಯೆ ಡಾ|| ಮಾಧವಿರಾಜ, ಸಿ.ಕೆ.ತಾರಾ ಮತ್ತು ವೈ.ಎಸ್. ಇಂದ್ರಾ ಜೋಡಿಗಾಯನದಲ್ಲಿ ಅನೇಕ ಗೀತೆಗಳನ್ನು ಪ್ರಸಿದ್ಧಿಗೆ ತಂದರು. ನಿಸಾರರು ರಚಿಸಿದ ‘ಆತ್ಮಾರ್ಪಣೆ’ ಎನ್ನುವ ಬಾನುಲಿರೂಪಕದಲ್ಲಿ ಕಾಳಿಂಗರಾವ್‌ರವರೊಂದಿಗೆ ಎಂ.ಎನ್. ರತ್ನಹಾಡಿದ್ದರು. ಪದ್ಮಚರಣ್ ಅವರು ಸಂಯೋಜಿಸಿದ್ದ ವಿಸೀ ಅವರ ‘ಮಾನವನೆತ್ತರ ಆಗಸದೇರಿಗೆ’ ಎಂಬ ಕವಿತೆಯನ್ನು ಮದರಾಸಿನ ಪ್ರಸಿದ್ಧ ಹಿನ್ನೆಲೆ ಗಾಯಕಿ ಪಿ. ಲೀಲಾ ಅರು ಹಾಡಿದ್ದರು. ಮುಂಬಯಿಯಿಂದ ಕರ್ನಾಟಕಕ್ಕೆ ಬಂದಿದ್ದ ರಾಗ ಖ್ಯಾತ ಹಿಂದೂಸ್ತಾನೀ ಸಂಗೀತ ಗಾಯಕಿ ಶ್ರೀಮತಿ ಲಕ್ಷ್ಮಿಶಂಕರ್ ಅವರು ಪದ್ಮಚರಣ್ ಸಂಯೋಜಿಸಿದ್ದ ‘ಸ್ವಾಗತ ಸ್ವಾಗತ, ಸ್ವಾಗತವು ಕವಿವಾಣಿಗೆ’-ಎಂಬ ಗೀತೆಯನ್ನು ಹಾಡಿದ್ದರು. ಕರ್ನಾಟಕ ಸಂಗೀತದ ಪಿಟೀಲು ವಿದ್ಯಾಸಂಸ್ಥೆಯಾದ ಟಿ. ರುಕ್ಮಿಣಿ ಮತ್ತು ಕರ್ನಾಟಕ ಸಂಗೀತ ಸಾಮ್ರಾಟ ಡಾ|| ಎಂ. ಬಾಲಮುರುಳೀಕೃಷ್ಣ ಇಬ್ಬರೂ ಆಕಾಶವಾಣಿಯ ನವಸುಮ ಕಾರ್ಯಕ್ರಮಕ್ಕಾಗಿ ಮಾಸ್ತಿ ಅವರ ‘ಕೋಗಿಲೆ ಕೋಗಿಲೆ’ ಗೀತೆಯನ್ನು ಹಾಡಿದ್ದರು. ಪದ್ಮಚರಣ್ ಈ ಗೀತೆಗೆ ರಾಗಸಂಯೋಜಿಸಿದ್ದರು.

ಟಿ. ರುಕ್ಮಿಣಿ ಮತ್ತು ಬಾಲಮುರಳಿಯವರು ಬೇಂದ್ರೆಯವರ ‘ನೀ ಮಳ್ಳ ಜಾತಿಯ ಹೆಣ್ಣು’ ಗೀತೆಯ ಮೂಲಕ ಹೆಸರು ಮಾಡಿದ್ದರು. ಟಿ. ರುಕ್ಮಣಿಯವರು ಹಾಡಿದ್ದ ಕೆ. ಎಸ್.ನರಸಿಂಹಸ್ವಾಮಿಗಳ ‘ಮುಗಿಲೆ ಮುಗಿಲೆ’ ಮತ್ತು ‘ಶ್ರೀ ಕೃಷ್ಣನಂತಹ ಮುಗಿಲು’ ಮತ್ತು ಅಡಿಗರ ‘ಹಿಂದುಮುಂದಿನೆಣಿಕೆ ಏಕೆ? ಮುಂತಾದ ಗೀತೆಗಳು ಜನಪ್ರಿಯವಾಗಿದ್ದವು.

ಕಾಳಿಂಗರಾವ್ ಅವರೊಂದಿಗೆ ಮೂರು ದಶಕಗಳ ಕಾಲ ಹಾಡಿ ಅವರ ಎಲ್ಲ ಹಾಡುಗಾರಿಕೆಗೆ ಕಾರ್ಯಕ್ರಮಗಳಿಗೆ ಶರುತಿಯಂತೆ ಇದ್ದ ಸೋದರಿಯರಾದ ಮೋಹನ್‌ಕುಮಾರಿ ಮತ್ತು ಸೋಹನ್‌ಕುಮಾರಿಯವರೂ ಸುಗಮಸಂಗೀತ ಗಾಯಕಿಯರಲ್ಲಿ ಪ್ರಮುಖರು. ಹೆಚ್.ಎಂ.ವಿಯಲ್ಲಿ ಧ್ವನಿಮುದ್ರಿತವಾಗಿದ್ದ ‘ಜೋ ಜೋ ಬಾಲಕೃಷ್ಣ’ ಅಂದಿನ ಜನಪ್ರಿಯ ಹಾಡಾಗಿತ್ತು.

ಎಸ್.ಕೆ. ವಸುಮತಿ, ಸಿ.ಕೆ. ತಾರಾ, ಶ್ಯಾಮಲ ಜಾಗಿರ್‌ದಾರ್ ಮುಂತಾದವರು ಸುಗಮಸಂಗೀತದ ಹಾದಿಗೆ ಹೂವು ಚೆಲ್ಲಿದರು. ಬಾನುಲಿ ಗೀತರೂಪಕಗಳಲ್ಲಿ ಮಿಂಚಿ ಪು.ತಿ.ನ. ಅವರ ಗೀತರೂಪಕಗಳಿಗೆ ಬಹುಪಾಲು ದನಿ ನೀಡಿದವರು ಎಸ್.ಕೆ. ವಸುಮತಿ, ಪು.ತಿ.ನ ಅವರ ಗೋಕುಲ ನಿರ್ಗಮನ, ಹರಿಣಾಭಿಸರಣ, ದೀಪಲಕ್ಷ್ಮಿ ಮುಂತಾದ ರೂಪಕಗಳ ಜನಪ್ರಿಯತೆಗೆ ಈ ಬಾನುಲಿಯ ಕೋಗಿಲೆಗಳೇ ಕಾರಣ. ‘ಗೀತಗೋಪಾಲ’ ಸಂಗೀತ ರೂಪಕದಲ್ಲಿ ಸಿ.ಕೆ. ತಾರಾ ಹೆಸರು ಜನಪ್ರಿಯವಾಯಿತು. ತಾರಾ ಮತ್ತು ವಸುಮತಿಯವರು ತಯಾರು ಮಾಡಿದ ಅಸಂಖ್ಯಾತ ಶಿಷ್ಯರಿಂದ ಮೈಸೂರು, ಬೆಂಗಳೂರು ಪ್ರಾಂತ್ಯಗಳಲ್ಲಿ ಸುಗಮಸಂಗೀತದ ವೃಕ್ಷ ಟಿಸಿಲೊಡೆದುದು ಸಂತಸದ ಘಟ್ಟ ಎನ್ನಬಹುದು. ಶ್ಯಾಮಲಾ ಜಾಗಿರ್‌ದಾರ್ ೧೯೫೭ರಲ್ಲೇ ರಷ್ಯಾದ ಅಧ್ಯಕ್ಷ ಹಾಗೂ ಪ್ರಧಾನಿಗಳ ಮುಂದೆ ಮೊದಲ ಕಾರ್ಯಕ್ರಮವನ್ನು ನೀಡಿದ್ದರು. ವಚನ, ದಾಸರಪದ ಭಾವಗೀತೆಗಳ ಗಾಯನದ ಮೂಲಕ ಮನಸೆಳೆದರು. ತಮ್ಮ ಇಂಪಾದ ಗಾಯನಕ್ಕಾಗಿ ೧೯೫೬ರಲ್ಲಿ ‘ಸ್ವೀಟ್ ವಾಯ್ಸ್‌ಆಫ್ ಮೈಸೂರ್’ ೧೯೬೨ರಲ್ಲಿ ಸ್ವೀಟ್ ಮೆಲೋಡಿ ಆಫ್ ಕರ್ನಾಟಕ, ಕರ್ನಾಟಕ ಕೋಗಿಲೆ ಪ್ರಶಸ್ತಿಗಳನ್ನು ಬಾಚಿಕೊಂಸರು. ಹೆಚ್.ಎಂ.ವಿ.ಕಂಪನಿಯಲ್ಲಿ ಇವರ ಹತ್ತಾರು ಗೀತೆಗಳನ್ನು ಧ್ವನಿ ಮುದ್ರಿಸಕೊಂಡಿತು. ‘ರಂಗನಾಥನ ಪಾದವ ತೊಳೆಯೆ ಕಾವೇರಿ ಬಂದಳು’- ‘ಕಲ್ಲಿನಲಿ ಕೆತ್ತಿದನು’ ‘ಆನೆ ಬಂದಿತಮ್ಮಾ’ ‘ನಿನ್ನ ಬಾಂದವಳದಂತೆ’ ಮೈಸೂರು ಸುತ್ತ ಸಾಲು ತೆಂಗಿನಮರ, ಮುಂತಾದ ಹಾಡುಗಳು ಶ್ಯಾಮಲಾ ಜಾಗಿರ್‌ದಾರ್ ಅವರ ಜನಪ್ರಿಯ ಗೀತೆಗಳು.

ಶ್ಯಾಮಲಾ ಜಿ. ಭಾವೆ (೧೯೪೧) ಉಭಯಗಾನ ವಿದುಷಿ ಎಂಬ ಬಿರುದು ಪಡೆದು ಶಾಸ್ತ್ರೀಯ ಲಘು ಶಾಸ್ತ್ರೀಯ ಪ್ರಕಾರಗಳಲ್ಲಿ ಭಾವಗೀತಾ ಪ್ರಕಾರಗಳಲ್ಲಿ ಪ್ರಸಿದ್ಧಿ ಮಾಡಿದವರು. ಸುಗಮಸಂಗೀತದ ಎಲ್ಲ ಪ್ರಕಾರಗಳಲ್ಲೂಕೈಯಾಡಿಸಿರುವ ಶ್ಯಾಮಲಾ ಭಾವೆ ಹತ್ತಾರು ಧ್ವನಿಸುರುಳಿಗಳನ್ನು ತಂದರು. ‘ಸುವರ್ಣಬಾರತ’- ‘ಉತ್ತರ ದರ್ಶನ’ – ‘ಗೀತತರಂಗ’- ‘ಭಾವೈಕ್ಯ ಭಾರತಿ’- ‘ವಚನ ಸುಧಾ’- ಇವುಗಳು ಶ್ಯಾಮಲಾ ಭಾವೆಯವರ ಅತ್ಯುತ್ತಮ ಸಂಯೋಜನೆಯಿಂದ ಧ್ವನಿಸುರುಳಿಗಳು. ಶ್ಯಾಮಲಾ ಅತಿ ಸೂಕ್ಷ್ಮ ಭಾವನೆಯ ಗೀತ ಸಂಯೋಜಕರು. ತಾಯಿ ಲಕ್ಷ್ಮಿಭಾವೆ ತಂದೆ ಗೋವಿಂದ ವಿಠಲ ಭಾವೆಯವರು ಸ್ಥಾಪಿಸಿದ ಸರಸ್ವತಿ ಸಂಗೀತ ವಿದ್ಯಾಲಯ ಪ್ರಾಚಾರ್ಯಯಾಗಿ, ನಾಡಿನ ಎಲ್ಲ ಕವಿಗಳ ಎಲ್ಲ ರಚನೆಗಳನ್ನು ಹಾಡುತ್ತಾ ಬಂದವರು.

ಸುಗಮಸಂಗೀತಕ್ಕೆ ಪ್ರಮುಖ ಚಾಲನೆಕೊಟ್ಟವರು ಶ್ರೀ ಮೈಸೂರು ಅನಂತಸ್ವಾಮಿಗಳು, ಇವರ ಸಂಯೋಜನೆಯಾದ ‘ಯಾವ ಮೋಹನ ಮುರಳಿ ಕರೆಯಿತು’ ಗೀತೆಯಿಂದ ತಮ್ಮ ಮಧುರ ಕಂಠದ ಸಿರಿ ತೆರೆದ ರತ್ನಮಾಲಾ ಪ್ರಕಾಶ್‌ರವರು ‘ಸುಗಮಸಂಗೀತ’ವೆಂದರೆ ರತ್ನಮಾಲಾ, ರತ್ನಮಾಲಾ ಎಂದರೆ ಸುಗಮಸಂಗೀತ ಎನಿಸುವಷ್ಟು ಪ್ರಸಿದ್ಧರಾದರು. ‘ಬಾಗಿಲೊಳು ಕೈ ಮುಗಿದು’ ಎದೆ ತುಂಬಿ ಹಾಡಿದೆನು ‘ಯಾವ ಮೋಹನ ಮುರಲಿ’ ಉಡುಗಣ ವೇಷ್ಟಿತ ನಿಲ್ಲಿಸದಿರು ವನಮಾಲಿ, ಮೊದಲ ದಿನ ಮೌನ, ಏನೀ ಮಹಾನಂದವೇ, ‘ತೌರಸುಖದೊಳಗೆನ್ನ’ ಮುಂತಾದ ಭಾವಗೀತೆಗಳಿಂದ ಕೇಳುಗರ ಮನಸ್ಸನ್ನು ಸೂರೆ ಮಾಡಿದರು.

M.S.I.L ಮೂಲಕ ಬೆಳಕಿಗೆ ಬಂದ ಗಾಯಕಿ ಬಿ.ಕೆ. ಸುಮಿತ್ರ ಅವರು, (೧೯೪೬) ಕಲಿತಿದ್ದು ಅಪ್ಪಟ ಶಾಸ್ತ್ರೀಯ ಸಂಗೀತ. ಹೆಸರು ಮಾಡಿದ್ದು ‘ಜಾನಪದ’ ಗೀತೆಗಳಲ್ಲಿ ಮತ್ತು ಚಿತ್ರಗೀತೆಗಳಲ್ಲಿ, ಒಲವು ಮೂಡಿದ್ದು ಸುಗಮಸಂಗೀತದಲ್ಲಿ. ಸ್ಪಷ್ಟ ದನಿಯ ಸುಮಿತ್ರ ‘ಬೃಂದಾವನಕೆ’ (ಕುವೆಂಪು) ಬೆಣ್ಣೆಕದ್ದ (ನಿಸಾರ್) ಮುಂತಾದ ಜನಪ್ರಿಯ ಗೀತೆಗಳನ್ನು ಹಾಡಿ ಹೆಸರುಮಾಡಿದರು.

ಮೈಸೂರು ಅನಂತಸ್ವಾಮಿಯವರೊಡನೆ ಸುಮಾರು ಮೂವತ್ತೈದು ವರ್ಷ ಸತತವಾಗಿ, ಸುಗಮಸಂಗೀತ ಹಾಡಿ ಅವರ ಸಂಯೋಜನೆಗಳಿಗೆ ಮಾಧುರ್ಯತೆ ತಂದುಕೊಟ್ಟು ತಾವೂ ಪ್ರಬುದ್ಧ ಗಾಯಕಿಯಾಗಿ ಬೆಳೆದವರು ಶ್ರೀಮತಿ ಎಂ.ಕೆ. ಜಯಶ್ರೀ ಅವರು. ೧೪-೫-೧೯೫೫ರಂದು ಬೆಂಗಳೂರಿನಲ್ಲಿ ಹುಟ್ಟಿದ ಜಯಶ್ರೀಯವರ ಐದುವರುಷದ ಬಾಲಕಿಯಾಗಿರುವಾಗಲೇ ಹಾಡುತ್ತಾ ಹಾಡುತ್ತಾ ಬೆಳೆದರು. ಬಾಲ್ಯದಿಂದಲೇ ಶಾಸ್ತ್ರೀಯ ಸಂಗೀತವನ್ನು ಎಸ್.ಚಂದ್ರಶೇಖರ್, ಬೆಳಕವಾಡಿ ವರದರಾಜಯ್ಯಂಗಾರ್, ರತ್ನಗಿರಿ ಸುಬ್ಬಾಶಾಸ್ತ್ರಿ, ಆನೂರು ರಾಮಕೃಷ್ಣ ಮೊದಲಾದ ವಿದ್ವಾಂಸರುಗಳ ಬಳಿ ಹಂತಹಂತವಾಗಿ ಕಲಿತರು. ಸುಗಮಸಂಗೀತವನ್ನು ಮೈಸೂರು ಅನಂತಸ್ವಾಮಿಯವರ ಬಳಿ ಕಲಿತರು. ಸುಗಮಸಂಗೀತ ಪ್ರಪ್ರಥಮ ‘ಧ್ವನಿಸುರುಳಿ’ ‘ನಿತ್ಯೋತ್ಸವ’ದಲ್ಲಿ ಹಾಡಿ ಹೆಗ್ಗಳಿಕೆ ಗಳಿಸಿದರು. ಪ್ರಭಾತ್ ಕಲಾವಿದರ (೧೯೬೭-೬೮) ‘ಕಿಂದರಿಜೋಗಿ’ ಗೀತ ನಾಟಕದಿಂದ ಧ್ವನಿಮುದ್ರಣ ಕ್ಷೇತ್ರಕ್ಕೆ ಕಾಲಿಟ್ಟ ಜಯಶ್ರೀಯವರು ಹಿಂದೆ ತಿರುಗಿ ನೋಡಲಿಲ್ಲ. ಹತ್ತಾರು ಗೀತರೂಪಕಗಳಲ್ಲಿ ಹಾಡುತ್ತಾ ಬಂದರು. ಆಕಾಶವಾಣಿಯ ಒ.ಖ.ಋ.ಐ ಗೀತೆಗಳಲ್ಲಿಯೂ ಜನಪ್ರಿಯರಾದರು. ಬರ, ಚಿತ್ರಕೂಟ, ಪುಣ್ಯಕೋಟಿ, ‘ಸಂಗೀತ’- ಚಿತ್ರಗಳಿಗೆ ಹಿನ್ನೆಲೆಗಾಯಕಿಯಾಗಿಯೂ ಹಾಡಿದರು. ‘ಕವಿ ಕಂಡ ಕೃಷ್ಣ’ ‘ಶಿಲ್ಪ ವೈಭವ’ -ಮೋಹಿನಿಭಸ್ಮಾಸುರ-‘ವಂದೇಮಾತರಂ’- ಮುಂತಾದ ಗೀತನಾಟಕಗಳಿಗೆ ಸಂಗೀತ ನೀಡಿನಿರ್ಮಿಸಿದ್ದರು. ವಿವಧ ಭಾಷೆಗಳ ಸುಮಾರು ಇನ್ನೂರೈವತ್ತಕ್ಕೂ ಹೆಚ್ಚು ಜಾಹೀರಾತುಗಳಿಗೆ ಧ್ವನಿ ನೀಡಿದರು. ಆಕಾಶವಾಣಿಯ ಅಖಿಲಭಾರತ ಭಾವಗೀತಾ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದರು. ೧೯೯೯ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದರು. ನಿತ್ಯೋತ್ಸವ’, ಮತ್ತದೇ ಬೇಸರ ಹೂ ಹೂ ಹೂ- ನನ್ನ ನಲವಿನ ಬಳ್ಳಿ, ಎಲೆಕೆಂಚಿ ಬಾರೆ’ ಈ ಬಾನು ಈ ಹಕ್ಕಿ’ ಇಂದು ಕೆಂದಾವರೆ, ಬೆಣ್ಣೆಕದ್ದ, ನೀನುಡಿಯದಿರಲೇನು-ತುಂಬುತಿಂಗಳೀನ-ಬಾ ಸವಿತ-ನಾ ಕುಣಿಬೇಕ-ನೀ ಬರುವ ದಾರಿಯಲಿ-ಮುಂತಾದ ಗೀತೆಗಳು ಜಯಶ್ರೀಯವರ ಸಿರಿಕಂಠಕ್ಕೆ ಸಾಕ್ಷಿಯಾದವು. ಹೆಚ್.ಕೆ. ನಾರಾಯಣ್, ಜಿ.ಕೆ.ವೆಂಕಟೇಶ್‌, ಪದ್ಮಚರಣ್, ಸೀತರಾಮ ರಾಜು, ಈಶ್ವರ್ ರಾಜನ್ ನಾಗೇಂದ್ರ-ಚಂದ್ರಶೇಖರ ಕಂಬಾರ, ಗುಣಸಿಂಗ್ ಮುಂತಾದ ಪ್ರಸಿದ್ಧ ಸಂಗೀತ ಸಂಯೋಜಕರು ಇವರ ದನಿಯನ್ನು ಸಮರ್ಥವಾಗಿ ಬಳಿಸಿಕೊಂಡರು.

ಎಂ.ಎಸ್.ಐ.ಎಲ್‌ನಿಂದ ಬೆಳಕಿಗೆ ಬಂದ ಮತ್ತೊಬ್ಬ ಗಾಯಕಿ ಶ್ರೀಮತಿ ಕಸ್ತೂರಿಶಂಕರ್ ಅವರು-೧೯೫೦-೧೧-೧ರಂದು ಮೈಸೂರಿನಲ್ಲಿ ಹುಟ್ಟಿದ್ದರು. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದ್ವಾನ್ ಎ.ಸುಬ್ಬರಾವ್ ಅವರ ಬಳಿಯೂ, ಹಿಂದೂಸ್ತಾನಿ ಸಂಗೀತವನ್ನು ಪಂಡಿತ್ ಡಿ.ಬಿ. ಹರೀಂದ್ರ ಅವರಿಂದಲೂ ಕಲಿತರು. ಪದ್ಮಚರಣ್, ಹೆಚ್.ಕೆ.ನಾರಾಯಣ – ಮೈಸೂರು ಅನಂತಸ್ವಾಮಿ, ಸಿ. ಅಶ್ವಥ್ ಅವರ ಸಂಯೋಜನೆಗಳಿಗೆ ದನಿಯಾದರು-ನವೋದಯದ ಕಿರಣ ಲೀಲೆ, ಹಕ್ಕು ಹಾರುತಿದೆ ನೋಡಿದಿರಾ, ನಾನು ಬಡವಿ – ‘ಯಾರು ಜೀವವೇ’-ಮುಂತಾದ ಪ್ರಸಿದ್ಧ ಗೀತೆಗಳು ಇವರಿಗೆ ಹೆಸರು ತಂದುಕೊಟ್ಟಿತು.

ಎಂ.ಎಸ್.ಐ.ಎಲ್ ನಂತರ, ಕ್ಯಾಸೆಟ್ ಮೂಲಕ ಹಲವಾರು ಗಾಯಕಿಯರು ಬೆಳಕಿಗೆ ಬಂದರು. ಹಿರಿಯ ಗಾಯಕಿಯರಾದ ಎಸ್. ಜಾನಕಿ, ವಾಣಿ ಜಯರಾಂ, ಪಿ. ಸುಶೀಲಾ, ಎಂ.ಎಸ್. ಶೀಲಾ, ಸುಲೋಚನಾ ವೆಂಕಟೇಶ್ ಮತ್ತು ನಂತರದ ಕಿರಿಯ ಗಾಯಕಿಯರಾದ ಸಂಗೀತಾ ಕಟ್ಟಿ, ಚಂದ್ರಿಕಾ ಗುರುರಾಜ್, ಮಂಜುಳಾ ಗುರುರಾಜ್, ಇಂದು ವಿಶ್ವನಾಥ್, ಬಿ.ಆರ್. ಛಾಯಾ, ಅನಿತಾ ಅನಂತಸ್ವಾಮಿ, ಸವಿತಾ ಅನಂತಸ್ವಾಮಿ, ರೋಹಿಣಿ ಮೊಹನ್, ಕೆ.ಎಸ್. ಸುರೇಖಾ, ಹೆಚ್.ಎನ್. ಮೀರಾ, ವಾಸಂತಿ ಶೆಣೈ, ಪ್ರೇಮಲತಾ ದಿವಾಕರ್, ಅಖಿಲಾ ಮಧುಸೂದನ್, ಬಿ.ಆರ್. ಮಂಜುಳಾ, ಬಿ.ಆರ್.ಗೀತಾ, ರೇಣುಕಾ ನಾಕೋಡ್, ಎಸ್.ಪಿ. ಶೈಲಜಾ, ಚಿತ್ರ ಮುಂತಾದವರು ಸುಗಮಸಂಗೀತದ ಗಾಯಕಿಯರ ಪರಂಪರೆಯನ್ನು ಮುಂದುವರೆಸಿದರು. ಇಂದು ಯುವಗಾಯಕಿಯರ ಒಂದು ದೊಡ್ಡ ಹಿಂಡೇ ಸುಗಮಸಂಗೀತ ಗಾಯನವನ್ನು ಉತ್ಕೃಷ್ಟಗಾಯನ ಮಟ್ಟಕ್ಕೆ ಎತ್ತಿಕೊಂಡೊಯ್ಯುತ್ತಿದೆ. ಯುವ ಗಾಯಕಿಯರಾದ ನಂದಿತ, ಪಲ್ಲವಿ, ದಿವ್ಯಾರಾಘವನ್, ಶ್ರೀರಕ್ಷಾ ಅರವಿಂದ್ ಮಂಳಾ, ಅರ್ಚನಾ ಉಡುಪ, ಸುನೀತ, ಶಮಿತ ಮಲ್ನಾಡ್, ಕುಸುಮ, ಸುಪ್ರಿಯಾ ಆಚಾರ್, ನಾಗಚಂದ್ರಿಕಾ, ವೀಣಾ ಕುಲಕರ್ಣಿ, ಜಯಶ್ರೀ ಶ್ರೀಧರ್. ಅಮೃತಾ ಚಂದ್ರಶೇಖರ್ ರಶ್ಮಿ ಮಂಜುನಾಥ್, ರೂಪಾ ಅಶ್ವಿನ್, ಮಾಲಿನಿ ಪ್ರಸಾದ್, ಅನ್ನಪೂರ್ಣ, ಸಿಂಧು ನಾಗೇಶ್, ಅರ್ಚನಾ ರಾವ್, ಲತಾ ಪ್ರಶಾಂತ್, ಸಿ.ಕೆ. ಸೌಮ್ಯ, ಮುಂತಾದ ಗಾಯಕಿಯರು ಸುಗಮಸಂಗೀತಕ್ಕೆ ಹೊಸ ಆಕರ್ಷಣೆ ತಂದಿದ್ದಾರೆ.

ಸುಗಮಸಂಗೀತದ ಗಾಯಕರುಒಂದು ಪಕ್ಷಿನೋಟ

ಮೈಸೂರಿನ ಪ್ರಾಂತ್ಯದಲ್ಲಿ ಸುಗಮಸಂಗೀತವನ್ನು ಮೊದಲು ಹಾಡಿದ ಮಹನೀಯರ ಪೈಕಿ-ಗಮಕಿ ಕಳಲೆ ಸಂಪತ್ಕುಮಾರಾಚಾರ್ಯರೇ ಮೊದಲಿಗರು. ನಂತರ ಅವರನ್ನು ಗಮಕಿ ಗುಡಿಬಂಡೆ ರಾಮಾಚಾರ್ ಮುಂತಾದವರು ಹಿಂಬಾಳಿಸಿದುದನ್ನು ಗಮನಿಸಬಹುದು. ‘ವೀಸೀ ಅವರ ಎಮ್ಮಮನೆಯಂಗಳದಿ ‘ಗೀತೆಯಿಂದ ಸಂಪತ್ಕುಮಾರಾಚಾರ್ಯರು ಹೆಸರು ಮಾಡಿದಂತೆ, ಬೇಂದ್ರೆಯವರ ‘ಗಂಗಾವತರಣ’ ದಿಂದ ಜನಪ್ರಿಯರಾದವರು ಗುಡಿಬಂಡೆ ರಾಮಾಚಾರ್ ಅವರು. ಡಿ.ವಿ.ಜಿ. ಅವರ ‘ವನಸುಮದೊಳೆನ್ನ ಜೀವನವು’ ಕವಿತೆ (ಆಠಾಣ ರಾಗವನ್ನು ಸಂಯೋಜಿಸಿ) ಹಾಡುತ್ತಿದ್ದ ಬಾಪುರಾಮಣ್ಣನವರ (ಹೆಚ್.ಆರ್.ಲೀಲಾವತಿ ಅವರ ತಂದೆ) ಅಠಾಣ ರಾಮಣ್ಣ ಎಂದೇ ಪ್ರಸಿದ್ಧರಾಗಿದ್ದರು. ಕುವೆಂಪು ಅವರ ‘ದೂರಬಹುದೂರ’ ‘ದೋಣಿ ಸಾಗಲಿ ಮುಂದೆ ಹೋಗಲಿ’ ಗೀತೆಗಳಿಂದ ಪ್ರಖ್ಯಾತರಾದವರು ಬಿ.ಜೆ. ರಾಮನಾಥ್ ಅವರು. ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ‘ ಎಂದು ಕನ್ನಡದ ಕಹಳೆಯನ್ನು ಮೊಳಗಿಸಿದವರು ಹುಕ್ಕೇರಿಯ ಬಾಳಪ್ಪನವರು. ‘ಹಾಡನ್ನು ಹರವೋಣ ಮತ್ಸರವ ಮರೆಯೋಣ’ ಎಂಬ ಮಂತ್ರದಿಂದ ಸಾಮಾಜಿಕ ಕಳಕಳಿಯ ತೋರಿಸಿ ಜನಪರವಾಗಿ ಮೆರೆದ ಗಾಯಕರಾದರು. ಬೇಂದ್ರೆಯವರ ‘ಕುಣಿಯೋಣ ಬಾರಾ’ – ‘ಭೃಂಗದಬೆನ್ನೇರಿ ಬಂತು’ – ‘ಅನ್ನಾವತಾರ’ – ‘ಟೊಂಕದ ಮ್ಯಾಲೆ ಕೈ ಇಟಗೊಂಡು’-ಆನಂದ ಕಂದರ ‘ಚೆಲುವು ಹಿರಿಯದೋ ಹೃದಯದೊಲವು ಹಿರಿಯದೋ’ – ಮುಂತಾದ ಗೀತೆಗಳಿಂದ ಜನಪ್ರಿಯರಾದವರು, ವಿ.ಆರ್. ಭಾಗವತ್ ಅವರು. ಕೆ.ಎಸ್.‌ನ.ಅವರ ಮೈಸೂರು ಮಲ್ಲಿಗೆ ಹಾಡುಗಳಿಂದ – ಮಲೆನಾಡಿನಲ್ಲಿ ಮನೆಮಾತಾಗಿದ್ದವರು ದೇವಂಗಿ ಚಂದ್ರಶೇಖರ್ ಅವರು ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬ ಹುಯಿಲಗೋಳರ ಗೀತೆಯ ಮೂಲಕ ಪಾಂಡೇಶ್ವರ ಕಾಳಿಂಗರಾವ್ ಅವರು ಹೆಸರು ಮಾಡಿದ್ದರು. ಕರ್ನಾಟಕ ಏಕೀಕರಣದ ಸಮಯದಲ್ಲಿ ಹಾಡಿದ ಈ ಹಾಡು ಘೋಷಣೆಗಳನ್ನು ಕೂಗದೆ, ಭಾಷಣಗಳನ್ನು ಕೂಗದೆ, ಭಾಷಣಗಳನ್ನು ಮಾಡದೆ, ಪರಿಣಾಮಕಾರಿಯಾಗಿದ್ದ ಕ್ರಾಂತಿಗೀತೆಯಾಗಿತ್ತು. ಜನರಲ್ಲಿ ‘ನಾಡಪ್ರೇಮ, ಭಾಷಾ ಪ್ರೇಮ’ವನ್ನು ಉಕ್ಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಬೇಂದ್ರೆಯವರ ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕು’ ‘ನನ್ನ ಹರಣ ನಿನಗೆ ಶರಣ’- ‘ನಾನು ಬಡವಿ ಆತ ಬಡವ’ ಮುಂತಾದ ಗೀತೆಗಳಿಂದ ಭೀಮಸೇನ ಜೋಶಿಯವರು ಜನಪ್ರಿಯರಾಗಿದ್ದರು.

ಬೇಂದ್ರೆಯವರ ‘ಶುಭನುಡಿಯೆ ಶಕುನದ ಹಕ್ಕಿ’ ಗೀತೆಯಿಂದ ಜನಪ್ರಿಯರಾದವರು ಭಟ್ಕಳದ ಎಂ.ಪ್ರಭಾಕರ್ ಅವರು. ತಮ್ಮ ಗಾಯನ ಮತ್ತು ಸಂಗೀತ ಸಂಯೋಜನೆಗಳಿಂದ ಪ್ರಖ್ಯಾತರಾದವರು ಎಚ್.ಕೆ. ನಾರಾಯಣ ಅವರು. ಸುಗಮಸಂಗೀತಕ್ಕೆ ಆಕರ್ಷಕ ಶೈಲಿಯನ್ನು ತಂದುಕೊಟ್ಟು ಜನಪ್ರಿಯಗೊಳಿಸಿದ್ದೇ ಅಲ್ಲದೇ ನಿಸಾರರ ‘ನಿತ್ಯೋತ್ಸವ’ ಧ್ವನಿಸುರುಳಿಗೆ ಸಂಗೀತ ಸಂಯೋಜನೆ ಮಾಡಿ ಪ್ರಪ್ರಥಮ ಸುಸಂಗೀತ ಧ್ವನಿಸುರುಳಿಯ ಸಂಗೀತ ನಿದೇರ್ಶಕರೂ ಗಾಯಕರೂ ಆದವರು ಮೈಸೂರು ಅನಂತಸ್ವಾಮಿಗಳು. ಮಲೆನಾಡಹಕ್ಕಿ ಎಂದೆ ಹೆಸರು ಮಾಡಿದ ಗರ್ತಿಕೆರೆ ರಾಘಣ್ಣ ತಮ್ಮ ಮುಗ್ದ ಗಾಯನಕ್ಕೆ ಹೆಸರಾಗಿದ್ದರು. ಶಿಶುನಾಳ ಷರೀಫರ ಗೀತೆಗಳಿಂದ ಜನಪ್ರಿಯರಾಗಿದ್ದು, ತಮ್ಮ ಅದ್ಭುತವಾದ ರಾಗಸಂಯೋಜನೆಯಿಂದ ಜನಪ್ರಿಯ ಹೊಸ ಪರಂಪರೆಯನ್ನು ತಂದವರು ಸಿ. ಅಶ್ವಥ್. ‘ತರವಲ್ಲತಗಿ ನಿನ್ನ ತಂಬೂರಿ’ ಸೋರುತಿಹುದು ಮನೆಯ ಮಾಳಿಗೆ, ‘ಜಿ.ಎಸ್. ಶಿವರುದ್ರಪ್ಪನವರ’ ‘ಕಾಣದಕಡಲಲಿ’ ಮುಂತಾದ ಹಾಡುಗಳಿಂದ ಜನಪ್ರಿಯರಾದರು. ಸಂತ ಶಿಶುನಾಳ ಷರೀಫರ ‘ಕೋಡಗನ ಕೋಳಿ ನುಂಗಿತ್ತ’ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’ ಗೀತೆಗಳ ಮೂಲಕ ತಮ್ಮ ಕಂಚಿನ ಕಂಠದಿಂದ ಪ್ರಸಿದ್ಧಿಯಾದವರು ಶಿವಮೊಗ್ಗ ಸುಬ್ಬಣ್ಣ. ಸುಗಮಸಂಗೀತದಲ್ಲಿ ವೈವಿಧ್ಯತೆಯ ಗೀತೆಗಳನ್ನು ಹಾಡಿ ಅದರ ಪರಿಧಿಯನ್ನು ವಿಸ್ತರಿಸಿದವರಲ್ಲಿ ನರಸಿಂಹನಾಯಕ್, ಶಂಕರ್ ಶಾನಭಾಗ ರಾಜು ಅನಂತಸ್ವಾಮಿ ಇವರುಗಳು ಪ್ರಮುಖರಾದರು. ಗಾಯನದ ಶೈಲಿ, ಸಂಯೋಜನೆಯ ಶೈಲಿಯಲ್ಲಿ ಮೂವರೂ ಭಿನ್ನತೆಯನ್ನು ತಂದರು. ಜಾನಪದ ಗೀತೆಗಳನ್ನು ಹಾಡುತ್ತಲೇ, ಸುಗಮಸಂಗೀತದಲ್ಲಿ ಅದರ ಸೊಗಡನ್ನು ತುಂಬಿ ತಂದವರು ಶಿವಮೊಗ್ಗದ ಕೆ. ಯುವರಾಜ್ ಮತ್ತು ಧಾರವಾಡದ ಯಶವಂತ್ ಹಳಿಬಂಡಿ. ಶಾಸ್ತ್ರೀಯ ಸಂಗೀತದೊಂದಿಗೆ ಸುಗಮವನ್ನು ಹಾಡುತ್ತಾ ಬಂದವರು ಉಡುಪಿಯ ನಟರಾಜ ಶರ್ಮ ಮತ್ತು ಕಾಸರಗೊಡ ಶಶಿಧರ್ ಕೋಟೆಯವರಾದರೆ, ಚಲನಚಿತ್ರಗಳಲ್ಲಿ ಹಾಡುತ್ತಾ ಸುಗಮದಲ್ಲಿಯೂ ಹಾಡುತ್ತಾ ಪ್ರಶಂಸೆ, ಪ್ರಶಸ್ತಿ ಗಳಿಸಿದರು. ರಮೇಶಚ್ಚಂದ್ರ ಅವರು.

ಕರ್ನಾಟಕದ ಮಹಾತಾರೆಯರಾದ ನಟ ಸಾರ್ವಭೌಮ ಡಾ. ರಾಜ್‌ಕುಮಾರ್, ಡಾ> ಪಿ.ಬಿ.ಶ್ರೀನಿವಾಸ್, ಪದ್ಮಶ್ರೀಎಸ್‌ಪಿ. ಬಾಲಸುಬ್ರಹ್ಮಣ್ಯಂ, ಅವರು ಕೂಡಾ, ಸುಗಮಸಂಗೀತದ ಔನ್ನತ್ಯಕ್ಕೆ ಕಾರಣರಾದ ಗಾಯಕರಾಗಿದ್ದಾರೆ.

ಸುಗಮಸಂಗೀತದ ಗಾಯನದೊಂದಿಗೆ ‘ಸಂಯೋಜನೆ’ಯನ್ನು ಮಾಡಿದವರೆಂದರೆ ಜಿ.ವಿ.ಅತ್ರಿ. ಹಿಂದೂಸ್ತಾನೀ ಸಂಗೀತವನ್ನು ಅಭ್ಯಾಸ ಮಾಡಿ, ಕನ್ನಡ ಹಳೆಯ ಚಲನಚಿತ್ರ ಗೀತೆಗಳತ್ತ ಒಲವು ಮೂಡಿಸಿಕೊಂಡಿದ್ದ ಅತ್ರಿ ಕೆಲಸ ಮಾಡಿದ್ದು ಸುಗಮಸಂಗೀತ ಕ್ಷೇತ್ರದಲ್ಲಿ. ಸುಗಮಸಂಗೀತದ ಇತಿಹಾಸದಲ್ಲಿ ಇವರ ಹೆಸರು ಚಿರಸ್ಥಾಯಿಯಾದುದು. ಮೊಟ್ಟ ಮೊದಲಿಗೆ ಅನೇಕ ಸುಗಮಸಂಗೀತ ಸಮ್ಮೇಳನಗಳನ್ನು ಆಯೋಜಿಸುತ್ತಾ, ಸುಗಮಸಂಗೀತವನ್ನು ಕರ್ನಾಟಕದಾದ್ಯಂತ ಸಂಘಟಿಸಿದ ಹಿರಿಮೆ ಅತ್ರಿಗೆ ಸೇರುತ್ತದೆ. ‘ಜಿ.ಎಸ್.ಶಿವರುದ್ರಪ್ಪನವರ ‘ಪ್ರಕೃತಿಯಂತೆ’-ಚೆನ್ನವೀರ ಕಣವಿಯವರ ‘ಬಾ ಮಲ್ಲಿಗೆ’ ಮುಂತಾದ ಹತ್ತಾರು ಸುಮಧುರ ಗೀತೆಗಳಿಂದ ಅಮರರಾದವರು ಜಿ.ವಿ.ಅತ್ರಿ.

ಗಾಯನ ಸಂಘಟನೆಗಳಲ್ಲಿ ಹಿರಿಯ ಸ್ಥಾನವನ್ನು ಪಡೆದವರು ವೈ.ಕೆ. ಮುದ್ದುಕೃಷ್ಣ ಅವರು. ಭದ್ರಾವತಿಯ ಗಾಯಕ, ಎನ್.ವಿ. ಶಿವಲಿಂಗಪ್ಪ ಸರಳ ಸುಗಮ ಗೀತೆಗಳನ್ನು, ಬಂಡಾಯ ಗೀತೆಗಳನ್ನು ಹಾಡುತ್ತಾ ಜನಪರವಾದವರು. ಯುವ ಗಾಯಕ ಮೋಹನ್ ಹಲವಾರು ಗೀತೆಗಳಿಗೆ ಸಂಗೀತ ಸಂಯೋಜನೆ ಮಾಡುತ್ತಾ ಹಾಡುತ್ತಾ ಭರವಸೆಯ ದನಿ ಮೂಡಿಸಿದವರು. ರಾಯಚೂರು ಜಿಲ್ಲೆಯ ಮಾನವಿಯರಾದ, ‘ಅಂಬಯ್ಯನುಲಿ’ ತಮ್ಮ ಸುಮಧುರ ಸಿರಿ ಕಂಠದಿಂದ ಉತ್ತರ ಕರ್ನಾಟಕದಲ್ಲಿ ಮನೆ ಮಾತಾದವರು. ವಚನಗಳನ್ನು ದಾಸರ ಪದಗಳನ್ನು ಹಾಡುತ್ತಾ ಸುಗಮಸಂಗೀತದಲ್ಲಿ ವಿಶೇಷ ಒಲವು ಮೂಡಿಸಿಕೊಂಡ ಪ್ರತಿಭಾವಂತ ಸಹೃದಯೀ ಗಾಐಕರು. ರಾಜೇಶ್‌ಕೃಷ್ಣ, ಹೇಮಂತ್, ಬದರೀಪ್ರಸಾದ್ ಚಲನಚಿತ್ರ ಗೀತೆಗಳ ಗಾಯನದ ಜೊತೆಗೆ ಸುಗಮಸಂಗೀತವನ್ನು ಹಾಡುತ್ತಾ ಬಂದವರು. ಹಿಂದೂಸ್ತಾನಿ ಸಂಗೀತ ಗಾಯಕರಾದರೂ, ಸುಗಮಸಂಗೀತವನ್ನು ಹಾಡುತ್ತಾ, ತಮ್ಮ ಕಂಠಮಾಧುರ್ಯದಿಂದ ಹೆಸರಾದವರು ಅನಂತ ಭಾಗವತರ್, ರವೀಂದ್ರ ಸೋರಗಾಂವಿ, ದೇವೇಂದ್ರ ಕುಮಾರ್ ಮುದೋಳ ಮುಂತಾದರು. ಯುವ ಗಾಯಕರ ಪಟ್ಟಿಯಲ್ಲಿ ಕಿಕ್ಕೇರಿ ಕೃಷ್ಣಮೂರ್ತಿ-ಗಣೇಶ್‌ದೇಸಾಯಿ, ಪಂಚಂ ಹಳಿಬಂಡಿ, ಉದಯ್‌ಅಂಕೋಲ, ಮಲ್ಲಿಗೆ ಸುಧೀರ್, ಎನ್.ಆರ್.ರಾಘವೇಂದ್ರ, ನರಹರಿ ದೀಕ್ಷಿತ್, ಡಿ.ಜೆ. ಭರತ್, ನಿತಿನ್ ರಾಜಾರಾಮಶಾಸ್ತ್ರಿ, ವಿನಯಕುಮಾರ್, ರವಿಮೂರೂರು, ಸುಚೇತನ್, ಡೇವಿಡ್ ಮಂಡ್ಯ ಮುಂತಾದವರು ಗಮನಾರ್ಹರಾಗಿದ್ದಾರೆ. ಸುಗಮಸಂಗೀತದ ಶೈಲಿಯಲ್ಲಿಯೇ ಕನ್ನಡ ಗಜ಼ಲ್‌ಗಳನ್ನು ಹಾಡುತ್ತಾ, ಹೆಸರು ಮಾಡಿರುವವರು ರವೀಂದ್ರ ಹಂದಿಗನೂರು ಅವರು. ಭಕ್ತಿಗೀತೆಗಳೊಂದಿಗೆ ಭಾವಗೀತೆಗಳನ್ನು ಹಾಡಿದವರು ಮಂಗಳೂರಿನ ಎಂ.ಎಸ್. ಗಿರಿಧರ್, ಧಾರವಾಡದ ಎಂ.ಎಸ್. ಕಾಮತ್, ಜೋಸೆಫ್, ಬೆಂಗಳೂರಿನ ಶ್ರೀಧರ್ ಅಯ್ಯರ್, ಚೇತನ್ ಶಿವಮೊಗ್ಗ. ಅನೂಪ್, ಚಿಕ್ಕಮಗಳೂರಿನ ಎಮ್.ಎಸ್. ಸುಧೀರ್, ಮಹೇಶ್ ಮುಂತಾದವರು.

ಇಂತಹ ಅಮೂಲ್ಯ ಸಂಗೀತ ಸಂಯೋಜನೆಗಳನ್ನು ಕೊಟ್ಟ ಸಂಯೋಜಕರು-

ಸಂಗೀತ ಸಂಯೋಜಕರು:

೧. ಡಾ. ಜಯಶ್ರೀ ಅರವಿಂದ್

೨. ಬಿ.ವಿ. ಶ್ರೀನಿವಾಸ್‌

೩. ರಾಜು ಅನಂತಸ್ವಾಮಿ

೪. ಬಾಲಿ

೫. ಪ್ರಸಾದ್ – ಮುರಳಿ

೬. ಮೈಸೂರು ಮೋಹನ್

೭. ತಿರುಮಲೆ ಶ್ರೀನಿವಾಸ್

೮. ಶಾಂತ ಜಯತೀರ್ಥ

೯. ಶ್ರೀಪಾದ್ ಹೆಗಡೆ

೧೦. ಶ್ರೀಕಾಂತ್ ಕುಲಕರ್ಣಿ

೧೧. ಎ.ಆರ್. ಅಚ್ಯತ ಐ ವಸಂತ್

೧೨. ದಾಮೋದರ್

೧೩. ಪಾರ್ವತಿಸುತ

೧೪. ಉಪಾಸನ ಮೋಹನ್

೧೫. ಪಲ್ಗುಣ

೧೬. ಇಂದೂ ವಿಶ್ವನಾಥ್

೧೭. ಶಿವಮೊಗ್ಗ ವೇಣುಗೋಪಾಲ

೧೮. ಮೈಸೂರು ಉಪಾಧ್ಯಾಯ

೧೯. ಬಿ.ಕೆ. ಚಂದ್ರಶೇಖರ್

ಇಂದಿನ ಸುಗಮಸಂಗೀತ ಗೀತೆಗಳ ಕೆಲವು ಜನಪ್ರಿಯ ಸಂಯೋಜನೆಗಳ ಉಲ್ಲೇಖನಗಳು

೧. ಎದೆ ತುಂಬಿ ಹಾಡಿದೆನು – ಮೈಸೂರು ಅನಂತಸ್ವಾಮಿ

೨. ಉಡುಗಣವೇಷ್ಟಿತ – ಪದ್ಮಚರಣ್

೩. ಹಕ್ಕಿಹಾರುತಿದೆ ನೋಡಿದಿರಾ – ಮೈಸೂರು ಅನಂತಸ್ವಾಮಿ

೪. ಬೆಳದಿಂಗಲೇನೆ ಗೆಳತಿ – ಡಾ|| ಜಯಶ್ವೀ ಅರವಿಂದ್

೫. ನಿಲ್ಲಿಸದಿರು ವನಮಾಲಿ – ಡಾ|| ಜಯಶ್ರೀ ಅರವಿಂದ್

೬. ಕೇದಿಗೆಯ ಬನದಲಿ – ಡಾ||ಜಯಶ್ರೀ ಅರವಿಂದ್

೭. ತೊರೆದು ಹೋಗದಿರು ಜೋಗಿ – ಹೆಚ್.ಕೆ. ನಾರಾಯಣ್

೮. ತವರ ಸುಖದೊಳೆಗೆನ್ನ – ಸಿ. ಅಶ್ವಥ್

೯. ಕಾಣದಾ ಕಡಲಿಗೆ – ಸಿ. ಅಶ್ವಥ್

೧೦. ಶ್ರಾವಣ ಬಂತು – ಸಿ. ಅಶ್ವಥ್

೧೧. ಬರುವನೇನೆ ಸಖಿ ಚೆಲುವ – ಮೈಸೂರು ಅನಂತಸ್ವಾಮಿ

೧೨. ಲೋಕದ ಕಣ್ಣಿ ರಾಧೆಯ – ಮೈಸೂರು ಅನಂತಸ್ವಾಮಿ

೧೩. ಬಂಗಾರ ನೀರ ಕಡಲಾಚೆ – ಸಿ. ಅಶ್ವಥ್

೧೪. ನಾಕು ತಂತಿ – ಮೈಸೂರು ಅನಂತಸ್ವಾಮಿ

೧೫. ಕವಿತೆ ಕಣ್ಣೀಗೀಮರ – ಬಾಲೀ

೧೬. ಮಿಡಿವೆ ಏಕೆ ತಂತಿ ನೀನು – ಪ್ರಸಾದ್

೧೭. ಎಲ್ಲ ನಿನ್ನ ಲೀಲೆ ತಾಯೆ – ಬಿ.ವಿ.ಶ್ರೀನಿವಾಸ್‌

೧೮. ಶಂಕೆ ಎಂಬ ಬೆಂಕಿ ಸೋಂಕಿ – ಬಿ.ವಿ.ಶ್ರೀನಿವಾಸ್

೧೯. ನನ್ನ ಹಳೆಯ ಹಾಡುಗಳೇ – ಮೈಸೂರು ಅನಂತಸ್ವಾಮಿ

೨೦. ಹರಿಯಿತೇನು ಋಣ – ಮೈಸೂರು ಅನಂತಸ್ವಾಮಿ

೨೧. ರಸಸಾಗರದಲಿ – ವಸಂತ ಕನಕಾಪುರ್

೨೨. ಅಮ್ಮಾ ನಿನ್ನ ಎದೆಯಾಳದಲ್ಲಿ – ಸಿ. ಅಶ್ವಥ್‌

೨೩. ನಿನ್ನೊಲುಮೆಯಿಂದಲೇ – ಸಿ.ಅಶ್ವಥ್

೨೪. ಮೊದಲ ದಿನ ಮೌನ – ಸಿ. ಅಶ್ವಥ್

೨೫. ಇಷ್ಟು ಕಾಲ ಒಟ್ಟಿಗಿದ್ದು – ಬಿ.ಕೆ. ಚಂದ್ರಶೇಖರ್

೨೬. ಶಾಂತವಾಗಿದೆ ಕಡಲು – ಎಚ್.ಕೆ.ನಾರಾಯಣ್

೨೭. ನಲ್ಲ ನೀನೆ ಒಲಿದು ಬಂದರೆ – ರಾಜು ಅನಂತಸ್ವಾಮಿ

೨೮. ಕಬ್ಬನ್ ಪೇಟೆಯ ಕಾಮಾಕ್ಷಿ – ರಾಜು ಅನಂತಸ್ವಾಮಿ

೨೯. ಕಾಲದ ಕಡಲಲಿ ಉಸಿರಿನ ಹಡಗು – ರಾಜು ಅನಂತಸ್ವಾಮಿ

೩೦. ನನ್ನ ಕೈಯ್ಯ ಹಿಡಿದಾಕೆ – ರಾಜು ಅನಂತಸ್ವಾಮಿ

೩೧. ಮಾಧವ ನಿನ್ನ ಕೊರಳಿನ ಭಾವ – ರಾಜುಅನಂತಸ್ವಾಮಿ

೩೨. ಬ್ರಹ್ಮನಿಂಗೆ ಜೋಡಿಸ್ತೀನಿ – ಪಿ.ಕಾಳಿಂಗರಾವ್

೩೩. ಅಳುವ ಕಡಲಲಿ – ಪಿ.ಕಾಳಿಂಗರಾವ್

೩೪. ನಾನು ಬಡವಿ ಆತ ಬಡವ – ಮೈಸೂರು ಅನಂತಸ್ವಾಮಿ

೩೫. ಯಾವ ಮೋಹನ ಮುರುಳಿ – ಮೈಸೂರು ಅನಂತಸ್ವಾಮಿ

೩೬. ಎಲ್ಲ ಮರೆತಿರುವಾಗ – ಮೈಸೂರು ಅನಂತಸ್ವಾಮಿ

ಸುಗಮಸಂಗೀತ ಮತ್ತು ಗಾಯನ

‘ಸುಗಮಸಂಗೀತ’ ತನ್ನ ಹೆಸರಿನಿಂದ ಹೇಳುವಂತೆ ಇದೊಂದು ‘ಸಂಗೀತ ಶೈಲಿಯಾದರೂ’ ಅರ್ಥದಲ್ಲಿ ಕೇವಲ ಸಂಗೀತದ ಶೈಲಿಯಾಗಿರದೆ, ಉತ್ಕೃಷ್ಟವಾದ ಸಾಹಿತ್ಯದ ನಿರೂಪಣೆಯಾಗಿದೆ. ಕವಿ, ಸಂಯೋಜಕ, ಗಾಯಕ ಮತ್ತು ಕೇಳುಗರ ನಡುವಿನ ಬಾಂಧವ್ಯವಾಗಿದೆ. ಇದೊಂದು ಬಗೆಯ ವ್ಯಕ್ತಿತ್ವದ ಅಭಿವ್ಯಕ್ತಿಯಾಗಿದೆ. ನಾಲ್ಕು ಜನರ ಬಾಂಧವ್ಯದ ಮೂಲಕ ವಿಶಿಷ್ಟವಾದ ಭಾವಾವವರಣ ಸೃಷ್ಟಿಯಾಗುತ್ತದೆ. ಕವಿಯಿಂದ ಸಂಯೋಜಕನಿಗೆ, ಸಂಯೋಜಕನಿಂದ – ಗಾಯಕನಿಗೆ, ಗಾಯಕನಿಂದ – ಕೇಳುಗನಿಗೆ ಮುಟ್ಟುವ ಕವಿತೆಯ ಭಾವದರ್ಶನ, ವ್ಯಕ್ತಿಯಿಂದ ವ್ಯಕ್ತಿಗೆ ತಲುಪುವಾಗ ಮೂಲ ಗುಣದ ಜೊತೆ ಮತ್ತಷ್ ಪೂರಕ ಹೊಸ ಗುಣಗಳನ್ನು ಪಡೆದು ಚೆಲುವಾಗುತ್ತದೆ. ಯಾವುದು ವ್ಯಕ್ತಿಯಿಂದ ಮತ್ತೊಂದು ವ್ಯಕ್ತಿಯ ಕೈಗೆ ತಲುಪುವಾಗ ಮೂಲ ಗುಣವನ್ನು ಕಿಂಚಿತ್ತೂ ಕಳೆದುಕೊಳ್ಳದೆ, ಮತ್ತಷ್ಟು ಸ್ಪುಟವಾಗಿ, ಮತ್ತಷ್ಟು ತೇಜಸ್ಸಿನಿಂದ ದೈದೀಪ್ಯಮಾನವಾಗಿ ಬೆಳಗುವುದೋ ಅದೇ ಸುಗಮಸಂಗೀತದ ಸಂಗೀತ ಸಂಯೋಜನೆ ಮತ್ತು ಗಾಯನಗಳೆನ್ನಬಹುದು. ಕವಿತೆಯ ಅನುಭವವನ್ನು ಅದರ ಎಲ್ಲ ಸೂಕ್ಷ್ಮ ಮನಸ್ಸಿನ ಭಾವನೆಗಳನ್ನು ಸಂಗೀತ ಸಂಯೋಜಕ ತನ್ನ ರಾಗದ ಬಣ್ಣದಲ್ಲಿ ಅದ್ದಿ ತೆಗೆದು ಗಾಯಕನಿಗೆ ಮುಟ್ಟಿಸುತ್ತಾನೆ. (ಗಾಯಕನೂ ಸಂಯೋಜಕನೂ ಒಬ್ಬರೇ ಆಗಿರಲೂ ಬಹುದು.) ಗಾಯಕನ ಕೊರಳಿಂದ ಕವಿತೆಯ ದರ್ಶನದ ಜೊತೆಗೆ ಸಂಗೀತ ಸಂಯೋಜಕನ ಸಂಯೋಜನೆಯೂ ಸೇರಿಕೊಂಡು ಅವನ ಹೊಣೆಗಾರಿಕೆ ದುಪ್ಪಟ್ಟಾಗುತ್ತದೆ. ಗಾಯಕ ಇವೆರಡನ್ನೂ ಅರಿಗಿಸಿಕೊಂಡು ಅತ್ಯಂತ ಪರಿಣಾಮಕಾರಿಯಾದ ಧ್ವನಿಯಿಂದ ಕವಿ-ಸಂಯೋಜಕ ಇಬ್ಬರನ್ನೂ ಅನಾವರಣಗೊಳಿಸಬೇಕಾಗುತ್ತದೆ. ಅವನ ಗಾಯನದ ಹೆಚ್ಚುಗಾರಿಕೆಯಲ್ಲಿಯೇ ಸುಗಮಸಂಗೀತದ ಜವಾಬ್ದಾರಿ ಅಡಗಿರುತ್ತದೆ. ಗಾಯನ ನಿರೂಪಣಾ ಶಕ್ತಿಯೊಂದರಿಂದಲೇ ಸುಗಮಸಂಗೀತದ ಯಶಸ್ಸು ನಿರ್ಧಾರವಾಗುತ್ತದೆ, ಅಂದಾಗ ಸುಗಮಸಂಗೀತದಲ್ಲಿ ಗಾಯಕನಿಗೆ ಹೆಚ್ಚು ಜವಾಬ್ದಾರಿ. ಆತನ ನಿಪುಣತೆಯಿಂದ ಗೀತೆ ಅಪೂರ್ವ ಅನುಭವವನ್ನು ಕೊಡಬಹುದು. ಹಾಗೆಯೇ ಒಬ್ಬ ಕೆಟ್ಟ ಗಾಯಕನಿಂದ ಕವಿ, ಸಂಗೀತ ಸಂಯೋಜಕ ಇಬ್ಬರ ಸತ್ವಗಳು ಮಬ್ಬಾಗಬಹುದು. ಒಬ್ಬ ಬುದ್ಧಿವಂತ ಗಾಯಕನ ನೈಪುಣ್ಯತೆಯಿಂದ ಸರಳವಾದ ಹಾಡೂ ಅದ್ಭುತವಾಗಿ ಹೊರ ಹೊಮ್ಮಬಹುದು. ಒಳ್ಳೆಯ ಗಾಯನ ಪ್ರಸ್ತುತಿಯಿಂದ ಸಾಮಾನ್ಯವಾದ ಹಾಡೂ ಜನಪ್ರಿಯವಾಗಬಹುದು. ಆದ್ದರಿಂದ ಸುಗಮಸಂಗೀತದಲ್ಲಿ ಗಾಯಕನೇ ಸಾರ್ವಭೌಮ, ಕವಿಗಿರುವ ಕವಿತಾ ಸಾಮರ್ಥ್ಯ, ಸಂಗೀತ ಸಂಯೋಜಕನ ಕಲ್ಪನಾ ಶಕ್ತಿ ಎರಡನ್ನೂ ಅರಗಿಸಿಕೊಂಡು, ತನ್ನದಾಗಿಸಿಕೊಂಡು ನಿರೂಪಿಸುವ ಗಾಯಕನೇ ಸುಗಮಸಂಗೀತದ ಕೇಂದ್ರಬಿಂದು. ಇವನೇ ಒಂದು ಅರ್ಥದಲ್ಲಿ ಸೂತ್ರಧಾರಿಯೂ ಪಾತ್ರಧಾರಿಯೂ ಅದಂತಹ ಕಲೆಗಾರ. ಪ್ರತಿದಿನ ಪಾತ್ರ ಮಾಡುವಾಗಲೂ ಅಭಿನಯದ ಹೊಸ ಹೊಸ ಭಾವತರಂಗಗಳನ್ನು ತೆರೆದು ತೋರಿಸುವ ಕಲಾವಿದನೇ ಸುಗಮಸಂಗೀದ ಗಾಯಕ. ಪ್ರತಿ ಬಾರಿ ಅದೇ ಹಾಡನ್ನೇ ಹಾಡಿದರೂ ಅದು ಹೊಸದೆನಿಸುವಂತೆ ಮಾಡುವವನೇ ಗಾಯಕ. ಅದೇ ಅವನ ಕಾಯಕ. ಆಗ ಮಾತ್ರ ಅವನು ಸುಗಮಸಂಗೀತಕ್ಕೆ ಸಲ್ಲುತ್ತಾನೆ.

ಸುಗಮಸಂಗೀತದಲ್ಲಿ ವಾದ್ಯ ಸಂಯೋಜನೆ

ಸುಗಮಸಂಗೀತದಲ್ಲಿ ವಾದ್ಯ ಸಂಯೋಜನೆ ಬಹು ಮುಖ್ಯ ಪಾತ್ರವಹಿಸುತ್ತದೆ. ಇದು ಹೆಚ್ಚಾಗಿದ್ದರೆ ಗೀತೆಯ ಅರ್ಥಾಭಾಸವಾಗುತ್ತದೆ. ಕಮ್ಮಿ ಇದ್ದರೆ ಗೀತೆಯ ಪರಿಪೂರ್ಣತೆಗೆ ಧಕ್ಕೆ ಬರುತ್ತದೆ. ಅಂದರೆ ತೀರಾ ಹೆಚ್ಚೂ ಅಲ್ಲದ ತೀರಾ ಕಡಿಮೆಯೂ ಅಲ್ಲದ ವಾದ್ಯಗಳ ಆಯ್ಕೆ ಮತ್ತು ಸಂಯೋಜನೆ ಮುಖ್ಯವಾದ ಅಂಶವಾಗಿದೆ. ಸುಗಮಸಂಗೀತ ಒಂದು ಸಮಷ್ಠಿ ಸೃಷ್ಟಿ. ಗಾಯಕನೊಬ್ಬನೇ ವೇದಿಕೆಯಲ್ಲಿ ಪರಿಣಾಮಕಾರಿಯಾಗಿ ಹಾಡಿದ್ದರೂ ಅವನೊಂದಿಗೆ ಸಂಬಂಧಪಟ್ಟ ವಾದ್ಯಗಾರರಿಂದ್ದರೇ ಮಾತ್ರ ಗೀತೆ ಸಫಲತೆಯನ್ನು ಕಾಣುತ್ತದೆ. ಶ್ರುತಿ-ಲಯಗಳು ಸಂಗೀತಕ್ಕೆ ಮಾತಾಪಿತರಿದ್ದಂತೆ ಎಂಬುದನ್ನು ವೇದ ಶಾಸ್ತ್ರಗಳು ಮನದಟ್ಟು ಮಾಡಿಕೊಡುತ್ತಲೇ ಬಂದಿವೆ. ಇಲ್ಲಿ ಶ್ರುತಿಗಾಗಿ ಲಯಕ್ಕಾಗಿ, ನಾನಾ ತರದ ವಾದ್ಯಗಳನ್ನು ಉಪಯೋಗಿಸಬೇಕಾಗುತ್ತದೆ. ಒಂದು ಗೀತೆಯು ಸೃಷ್ಟಿಸುವ ಭಾವ ಪ್ರವೇಶವನ್ನ, ಭಾವಾವರಣವನ್ನು, ಭಾವದೀಪ್ತಿಯನ್ನು, ಭಾವತರಂಗಗಳನ್ನು, ಸ್ವರಲಯವಾದ್ಯಗಳ ಮೂಲಕ ಕಟ್ಟಿಕೊಡಬೇಕಾಗುತ್ತದೆ. ಕವಿತೆಯು ಸೃಷ್ಟಿಸುವ ವಾತಾವರಣವನ್ನು ಕೇವಲ ನಾದಸ್ವರಗಳ ಜೋಡಣೆಯ ಮೂಲಕ, ವಿವಿಧ ವಾದ್ಯಗಳಲ್ಲಿ ಅವುಗಳ ಮಿತಿಯಲ್ಲಿ ನೀಡಬೇಕಾಗುತ್ತದೆ. ಗೀತೆಯ ಮೊದಲು, ಪಲ್ಲವಿಯ ಅನಂತರ ಬರುವ ಪ್ರತಿ ಚರಣಗಳಲ್ಲಿ ಸಾಹಿತ್ಯದ ಭಾವ ಬದಲಾದಂತೆ ರಾಗ ಸಂಯೋಜನೆಯೂ ಬದಲಾಗಿರುತ್ತದೆ. ಆ ರಾಗದ ಬೆನ್ನೇರಿ, ಸಾಹಿತ್ಯಾರ್ಥಗಳ ತಂತುಗಳನ್ನು ಅರಿತು ವಾದ್ಯ ಸಂಯೋಜಿಸುವುದೇ ಸುಗಮಸಂಗೀತದ ವಿಶಿಷ್ಟತೆಯಾಗಿದೆ. ಇದನ್ನು Back ground Music ಎನ್ನುತ್ತೇವೆ. ಚಿಕ್ಕದಾಗಿ BGM ಎನ್ನುವ ಇವು ಗೀತೆಯ ಒಳಗಿದ್ದಾಗ ಭಾವ ತಂತುಗಳಾಗಿ ಕೆಲಸ ಮಾಡಿ ಅರ್ಥ ತುಂಬುತ್ತವೆ. ಅವರಿಗೆ ಗೀತದ ಹೊರಗೆ ಇವಕ್ಕೆ ಯಾವ ಅರ್ಥವೂ ಇಲ್ಲ, ಅಸ್ತಿತ್ವವೂ ಇಲ್ಲ. ಭಾವಗೀತೆಯ ಅರ್ಥಕ್ಕೆ ಪುಷ್ಠಿ ನೀಡಿ ಕವಿತೆಯ ಕಲ್ಪನೆಯನ್ನು ಮೂರ್ತಿಕರಿಸುತ್ತ ಚರಣದಿಂದ ಚರಣಕ್ಕೆ ಅರ್ಥ ಪರಂಪರೆಯನ್ನು ತೆರೆಯುತ್ತದೆ. ಲಯಕ್ಕಾಗಿ ತಬಲ, ಡಿಕ್ಕಿ, ಗೆಜ್ಜೆ-ತಾಳ, ಇತ್ಯಾದಿಗಳನ್ನು ಬಳಸುತ್ತೇವೆ. ರಿದಂ ಪ್ಯಾಡ್ ಎಂಬ ಎಲೆಕ್ಟ್ರಾನಿಕ್ ಲಯ ವಾದ್ಯವೊಂದರ ಸಹಾಯದಿಂದ ಘಟಸಿಂಗಾರ, ಘಟ, ತಬಲ, ತರಂಗ್, ಚಂಡೆ, ಡ್ರಮ್ಸ್, ಮೃದಂಗ, ಗೆಜ್ಜೆ, ತಾಳ ಎಲ್ಲಾ ಲಯವಾದ್ಯಗಳ ಧ್ವನಿಯನ್ನು ಪಡೆಯಬಹುದಾಗಿದೆ. ಶ್ರುತಿಗಾಗಿ ಕೀ ಬೋರ್ಡ್ ವಾದನವನ್ನು ಬಳಸಲಾಗುತ್ತಿದೆ. ಕೀಬೋರ್ಡ್ ಪಾಶ್ಚಾತ್ಯ ವಾದ್ಯವೆಂದು ಸುಗಮಸಂಗೀತಕ್ಕೆ ಅದು ಒಗ್ಗುವುದಿಲ್ಲವೆಂದು ಕೆಲವು ಮೂಗೆಳೆಯುವರೂ ಉಂಟು. ಆದರೆ ಕೀಬೋರ್ಡ್‌ವಾದನವನ್ನು ಬಲ್ಲವರು ಅದರ ಸಾಧ್ಯಾನುಸಾಧ್ಯತೆಗಳ ಬಗೆಗೆ ತಿಳಿದಿರುವುದರಿಂದ ಹಾಗೆ ಹೇಳಲಾರರರು. ಪಕ್ಕವಾದ್ಯಗಳನ್ನು ಎಲ್ಲಾ ಒಂದು ಆಧಾರ ಶ್ರುತಿಗೆ ಸಿದ್ಧಮಡಿಕೊಳ್ಳುವುದು ಗಾಯಕ ಹಾಡುಗಾರಿಕೆಗೆ ಮುನ್ನ ಮಾಡುವ ಪೂರ್ವ ಸಿದ್ಧತೆ. ಕೀ ಬೋರ್ಡ್ ವಾದ್ಯದ ಮೂಲಕ ಪಕ್ಕ ವಾದ್ಯಗಳನ್ನು ಒಂದು ಆಧಾರ ಶ್ರುತಿಗೆ ಟ್ಯೂನ್ ಮಾಡಿಕೊಳ್ಳಬೇಕು. ಸುಗಮಸಂಗೀತದಲ್ಲಿ ರಾಗ ಸಂಚಾರ ಸ್ಥಾಯಿಗನುಗುಣವಾಗಿ ಶ್ರುತಿಯನ್ನು ನಿರ್ಧಾರಮಾಡಲಾಗಿರುವುದರಿಂದ, ಅಲ್ಲದೆ ಗಾಯಕನ ಕಂಠದ ಇತಿಮಿತಿಗಳಲ್ಲಿ ಅದು ಕುಳಿತಿರುವುದರಿಂದ, ಕೀ ಬೋರ್ಡ್ ಮಲಕ ಶ್ರುತಿಯನ್ನು ರಾಗ ಸಂಚಾರದ ಮಿತಿಯನ್ನು ಗುರುತಿಸಿಕೊಳ್ಳಲು ಸಹಾಯವಾಗುತ್ತದೆ. ಒಂದೊಂದು ಗೀತೆ ಒಂದೊಂದು ಶ್ರುತಿಯಲ್ಲಿರುತ್ತದೆ. ಅಲ್ಲದೆ ಕೀಬೋರ್ಡ್‌ನಲ್ಲಿ ಕೊಳಲು, ಪಿಟೀಲು, ಸಿತಾರ್, ಓಬೋ, ಸಂತೂರ್, ತಂತಿ ವಾದ್ಯಗಳ ಧ್ವನಿಯನ್ನೆಲ್ಲಾ ತರಬಹುದಾಗಿದ್ದು ವಾದ್ಯ ಸಂಯೋಜನೆಗೆ ಬೇಕಾದ ನಾದೋತ್ಪತ್ತಿಯನ್ನೂ ಅದರಿಂದ ಮಾಡಬಹುದು. ಸುಗಮಸಂಗೀತದಲ್ಲಿ ಪ್ರತಿವಾದ್ಯಗಳೂ ಹಾಡಿನ ಅರ್ಥ ಪುಷ್ಟಿಗೆ ಪೂರಕವಾಗಿರುವುದಲ್ಲದೆ ಹಾಡಿನ ಒಂದು ಭಾಗವಾಗಿ ಮೈವೆತ್ತಿರುತ್ತದೆ. ಪ್ರತಿಯೊಂದು ವಾದ್ಯಕ್ಕೂ ತನ್ನದೇ ಆದ ಭಾಷೆ, ಅಭಿವ್ಯಕ್ತಿ ಇರುವುದರಿಂದ ಗೀತೆಯನ್ನು ಭಾವದ ಎತ್ತರದಲ್ಲಿ ಏರಿಸಲು ಅವು ಸಹಕಾರಿಯಾಗಿರುವುದಲ್ಲದೆ, ಅವುಗಳ ಪಾಂಡಿತ್ಯವಾಗಲಿ, ಪ್ರೌಢಿಮೆಯಾಗಲಿ, ವಾದ್ಯದ ಘನತೆಯಾಗಲಿ ಯಾವುದೂ ಅಲ್ಲಿ ಮುಖ್ಯವಾಗದೆ, ಗೀತೆಯ ಜೊತೆ ಕೈ ಕೈ ಹಿಡಿದು ಸಾಗುತ್ತದೆ. ಗೀತೆಯ ಸಾಹಿತ್ಯವೇ ರಾಗ ಸಂಯೋಜನೆ, ವಾದ್ಯ ಸಂಯೋಜನೆ, ಗಾಯಕನ ಪಾತ್ರ, ಎಲ್ಲವನ್ನೂ ನಿರ್ಧರಿಸಿ ಬಿಡುತ್ತದೆ. ಸುಗಮಸಂಗೀತದಲ್ಲಿ ಮೊದಲೇ ಹೇಳಿದಂತೆ, ಸಾಹಿತ್ಯದ್ದೇ ಸಾರ್ವಭೌಮತ್ವ. ಸಂಗೀತ ಅದರ ಅನುಯಾಯಿ. ವಿನಯಶೀಲತೆಯೇ ಅದರ ಸೌಂದರ್ಯ.

ಉತ್ತಮ ಕವಿತೆಗಳನ್ನು ಉತ್ತಮ ಕಲಾವಿದರು ಸೃಜನಶೀಲರಾಗಿ ಕವಿತೆಯ ಅಂತರಾರ್ಥವನ್ನು ತೆರೆಯುವಂತೆ ಹಾಡಿದಾಗ ಮಾತ್ರ ಅದು ಸುಗಮಸಂಗೀತ. ಇವನ್ನು ಹೊರತುಪಡಿಸಿ ಕಳಪೆ ದರ್ಜೆಯ ಕವಿತೆಗಳನ್ನು ಹಾಡುವುದರಿಂದ ಸಂಸ್ಕೃತಿ ಕೆಲ ಮಟ್ಟಕ್ಕಿಳಿಯುತ್ತದೆ. ಹಿರಿಯ ಸುಗಮಸಂಗೀತಗಾರರು ಕಟ್ಟಿ ಬೆಳೆಸಿದ ಸುಗಮಸಂಗೀತದ ವೃಕ್ಷವನ್ನು ಕಿರಿಯರು ಉಳಿಸಿ ಬೆಳೆಸಿಕೊಳ್ಳುವುದು ಇಂದು ಅತ್ಯವಶ್ಯಕವಾಗಿದೆ. ಸುಗಮಸಂಗೀತ ನಾಡಿನ ಸಂಸ್ಖೃತಿಯನ್ನು ಸಾರವತ್ತಾಗಿ ಸಮಾಜದತ್ತ ಕೊಂಡೊಯ್ಯುತ್ತಿದೆ. ಸಾಂಸ್ಕೃತಿಕ ಉತ್ಸವ, ದಸರಾ ಹಬ್ಬ, ಗಣೇಶ ಚತುರ್ಥಿ, ರಾಮೋತ್ಸವ, ರಾಜ್ಯೋತ್ಸವ, ನಾಡಹಬ್ಬ, ಇತ್ಯಾದಿ ಸಂದರ್ಭಗಳಲ್ಲಿ ಸುಗಮಸಂಗೀತ ವೇದಿಕೆಯನ್ನು ಅಲಂಕರಿಸಿದೆ. ಸಹೃದಯರ ಹೃದಯ ಸಿಂಹಾಸನವನ್ನೇರಿ ರಾರಾಜಿಸುತ್ತಿದೆ

ವಾದ್ಯ ಸಂಯೋಜಕರು

ಮಾರುತಿ, ಎನ್ ಎಸ್ ಪ್ರಸಾದ್, ಎನ್ ಎಸ್ ಮುರುಳಿ, ಬಿ.ಕೆ. ಚಂದ್ರಶೇಖರ್, ಶಬ್ಬೀರ್, ಸುಂದರಮೂರ್ತಿ, ಪ್ರವೀಣ್‌ದತ್ತ ಸ್ಟೀಫನ್, ದಾಮೋದರ್, ಬಿ.ವಿ. ಶ್ರೀನಿವಾಸ್, ಹೇಮಂತ್, ಮೋಹನ್‌ರಾಜ್, ರಾಜೇಶ್, ರಾಜು ಅನಂತಸ್ವಾಮಿ, ಡಿ.ಶ್ರೀನಿವಾಸ್, ಸಿತಾರ್ ಶ್ರೀನಿವಾಸ್, ವಿ.ಕೆ. ರಾಮನ್. ಸಂಗೀತ್ ಥಾಮಸ್, ಪ್ರವೀಣ ಗೋಡ್ಖಿಂಡಿ, ದೀಪಕ್ ಶಿವಮೊಗ್ಗ ಮೊದಲಾದವರು.

ಸುಗಮಸಂಗೀತದ ವಾದ್ಯಗಾರರು

ಸುಗಮಸಂಗೀತದ ಭಾವಾವರಣಕ್ಕೆ ಪೂರಕವಾಗಿ ಉಪಯೋಗಿಸುವ ವಾದ್ಯಗಳು ಮತ್ತು ವಾದ್ಯಗಾರರು ನೂರಾರು ಮಂದಿ. ಅಂತಹ ಕಲಾವಿದರ ಹೆಸರುಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸಲು ಪ್ರಯತ್ನಿಸಲಾಗಿದೆ.

ತಬಲ

ದೇವಂಬು, ನಾಗೇಶ್, ಪ್ರವೀಣ್ ಡಿ. ರಾವ್, ಬಾಲಿ, ವೇಣುಗೋಪಾಲರಾಜು, ಆನೂರ ಶಿವು, ಪ್ರದ್ಯುಮ್ನ, ಗೋಪಿನಾಥ್, ಲಕ್ಷ್ಮೀಪತಿ, ಮಧುಸೂದನ್, ಸತ್ಯಮೂರ್ತಿ, ಎಂ.ಸಿ. ಶ್ರೀನಿವಾಸ್, ಹನುಮಂತ್, ವಿಶ್ವನಾಥ್ ನಾಕೋಡ್, ರಾಜೇಂದ್ರ ನಾಕೋಡ್, ಶಿವಸತ್ಯ, ನಾಣಿ, ಸತ್ಯಮೂರ್ತಿ, ಲೋಕೇಶ್, ವೆಂಕಟೇಶ್, ದಿನೇಶ್, ಗುರುಮೂರ್ತಿ ವೈದ್ಯ, ಉದಯ್ ಕರ್‌ಪೂರ್‌ಕರ್, ರವಿ ಭದ್ರಾಚಾರ್, ಟಿಪ್ಪಿ, ಕುಲಕರ್ಣಿ, ಅಶ್ವಥ್‌ನಾರಾಯಣ್, ಸತ್ಯವಿಜಯ ಭಟ್, ದಾಮೋದರ್, ಅರವಿಂದ್ ನಾಜ಼ರೇ, ಗುರುರಾಜ್ ಧಾರವಾಡ, ಎಂ.ಎ. ಕೃಷ್ಣಮೂರ್ತಿ, ರವೀಂದ್ರ ಯಾವಗಲ್, ರಾಜು ಅನಂತಸ್ವಾಮಿ, ಜೆರಾಲ್ಡ್, ಪ್ರಮಥ್, ಜಗದೀಶ್, ತುಕಾರಂ ಶಿವಮೊಗ್ಗ ರಾಘವೇಂದ್ರ.

ಸಂತೂರು

ಸುಂದರ್, ಕುಮಾರ್ ಮದ್ರಾಸ್,

ಹವಾಯಿನ್ ಗಿಟಾರ್

ಪ್ರಕಾಶ್ ಸೊಂಟಕಿ, ಕುಮಾರ್ ಮದ್ರಾಸ್

ಕೀಬೋರ್ಡ್

ಶಬ್ಬೀರ್ ಅಹಮದ್, ಸಾಧುಕೋಕಿಲ, ಪ್ರವೀಣ್‌ದತ್ ಸ್ಟೀಫನ್, ನಾಗರಾಜ್, ಹರೀಶ್, ಶ್ರೀಧರ್, ಜಯಸಿಂಹ, ಮೋಹನ್‌ರಾಜು, ಜಯರಾಂ, ಸಂಗೀತ್, ಉಮೇಶ್, ಕೃಷ್ಣ ಉಡುಪ, ನಾಗಭೂಷಣ, ಉಡುಪ, ಗೋಪಿನಾಥ್, ಥಾಮಸ್ ನಾಕೋಡ್, ನವನೀತ್, ಪುರುಷೋತ್ತಮ್, ವಸಂತ್ ಕುಂಬ್ಳೆ, ರಾಜೀವ್ ಜೋಯಿಸ್, ದೀಪಕ್ ಶಿವಮೊಗ್ಗ, ಸಿದ್ದಪ್ಪ ಶಿವಮೊಗ್ಗ, ಮೈಸೂರು ಮೋಹನ್, ತುಮಕೂರು ಶ್ರೀನಿವಾಸ್, ಎಲ್. ಕುಮಾರ್, ರಾಜು ಅನಂತಸ್ವಾಮಿ, ಪ್ರಸಾದ್, ಗಣೇಶ್, ಉದಯ್‌ಕಿರಣ್, ವೆಂಕಟೇಶ್‌ಮೂರ್ತಿ, ಗೌತಮ್ ಮೋಹನ್, ಬಿ.ವಿ. ಶ್ರೀನಿವಾಸ್, ಪ್ರವೀಣ್ ಡಿ. ರಾವ್.

ಗಿಟಾರ್

ಬಿ. ಗೋಪಿ, ಕ್ಯಾಲಬ್, ಸುದರ್ಶನ್, ರಾಜು, ಮಾರುತಿ, ಹಮೀದ್, ಡಿ. ಶ್ರೀನಿವಾಸ್, ಪ್ರವೀಣ್‌ ದತ್ತ ಸ್ಟೀಫನ್, ಕುಮಾರ್ ಮದ್ರಾಸ್, ಗಿರಿಧರ್, ವಾಸು

ಮ್ಯಾಂಡಲೀನ್

ಎನ್.ಎಸ್. ಪ್ರಸಾದ್, ಮೈಸೂರು ಆನಂದ್, ಸುಮಾರಾಣಿ, ರಾಜೀವ್ ಜೋಯಿಸ್, ಸತೀಶ್ ಕುಮಾರ್, ಕುಮಾರ್ ಮದ್ರಾಸ್.

ಸಿತಾರ್

ಸುಮಾರಾಣಿ, ಜಯಂತ್ ಕುಮಾರದಾಸ್, ಗೋಪಿನಾಥ್, ಶ್ರೀನಿವಾಸ್, ಶ್ರುತಿ ಕಾಮತ್, ಶಂಶದ್‌ಅಲಿ.

ಕೊಳಲು

ಪ್ರಾಣೇಶ್, ಸುಂದರಮೂರ್ತಿ, ಭುಟ್ಟೋ, ಹೆಚ್.ಎಸ್. ವೇಣುಗೋಪಾಲ್, ಪ್ರವೀಣ್ ಗೋಡಖಿಂಡಿ, ಎನ್.ಎಸ್. ಮುರುಳಿ, ರಾಜೇಶ್, ರವಿಚಂದ್ರ, ವಿ.ಕೆ. ರಾಮನ್, ರಘುನಂದನ್, ವಸಂತ್‌ಕುಮಾರ್, ಸರ್ವೋತ್ತಮ, ಶಿವಲಿಂಗರಾಜಾಪೂರ, ಜಯರಾಂ, ರಮೇಶ್, ಮಹೇಶ್.

ಕ್ಲಾರಿಯೋನಟ್

ನಾಗೇಂದ್ರ ಬೆಂಗಳೂರು

ವೀಣೆ

ಪುಷ್ಪಾ ಕಾಶೀನಾಥ್, ವೀಣಾವಾರುಣೀ, ಎಂ.ಆರ್. ಮಂಜುಳ, ರಾಮು, ಹೆಚ್.ಆರ್.ಕೆ.ಪ್ರಸಾದ್,

ಬ್ಯಾಂಜೋ

ಎನ್.ಎಸ್. ಪ್ರಸಾದ್.

ವಯೋಲಿನ್

ಬಿ.ಕೆ.ಚಂದ್ರಶೇಖರ್, ಜಯರಾಮು, ನಾಗರಾಜ್, ಈಶ್ವರ್, ಜ್ಯೋತ್ಸಾ, ನಿಂಬರ್ಗಿ, ಹೇಮಂತ್, ಅಮರನಾಥ್, ಅಗಾಸ್ಟಿನ್, ಕ್ರಿಸ್ಟಿ, ನೆಲ್ಸನ್, ಮನೋಜ್, ಜೆಫ್ರಿ, ಜೆರಾಲ್ಡ್

ರಿದಂ ಪ್ಯಾಡ್

ಬಾಲಿ, ವಾದಿಕುಮಾರ್, ಪದ್ಮನಾಭಕಾಮತ್, ವರದ, ಅರುಣ್, ರಮೇಶ್, ಎಂ.ಸಿ. ಶ್ರೀನಿವಾಸ್, ರಘುಶಿವಮೊಗ್ಗ, ರಾಮು, ಪ್ರಸನ್ನ, ಪ್ರಮಥ್‌ಕಿರಣ್, ರವಿ ಬೆಂಗಳೂರು, ಜಗ್ಗಿ, ಲಯೇಂದ್ರ, ಪ್ರದ್ಯುಮ್ನ, ಗುರುರಾಜ್.

ವಿಶೇಷ ವಾದ್ಯಗಳು

ಮುನಿಸಿದ್ದಪ್ಪ, ಎನ್. ಶ್ರೀನಿವಾಸ್ ಪ್ರಸಾದ್, ಬೆನಡಿ, ರವಿ, ಚಂದ್ರು.

ಶಹನಾಯ್

ಬಾಲೇಶ್ ಮದ್ರಾಸ್

ಸಾರಂಗಿ

ಫಯಾಜ್ ಖಾನ್

ದಿಲುರುಬಾ (ತಾರ್ ಶಹನಾಯ್)

ವೀರೇಶ್ ಮದ್ರಿ

* * *