ಇಂದು ಸುಗಮಸಂಗೀತ ಕಣಜದಲ್ಲಿ ಅತ್ಯಮೂಲ್ಯವಾದ ಸಾವಿರಾರು ಸಂಯೋಜನೆಗಳಿರುವುದರಿಂದ ಅದೊಂದು ಪ್ರತ್ಯೇಕ ಪ್ರಕಾರವಾಗಿ ಬೆಳೆದು ನಿಂತಿದೆ. ಇದಕ್ಕೆ ನೂರಾರು ಕವಿಗಳೂ ನೂರಾರು ಕವಿಗಳೂ ನೂರಾರು ಕಲಾವಿದರೂ ನೀಡಿದ ಕಾಣಿಕೆಯೇ ಕಾರಣವಾಗಿದೆ. ಸಂಗೀತ ಮತ್ತು ಸಾಹಿತ್ಯಗಳೆರಡರ ಸುಮಧುರ ಬಾಂಧವ್ಯದಿಂದ ಹೊಸ ರುಚಿಯೊಂದು ಸೃಷ್ಟಿಯಾಗಿದೆ.ಪುಸ್ತಕದಲ್ಲಿ ಹಾಯಾಗಿ ಪವಡಿಸಿದ್ದ ಕವಿತಾ ಕನ್ನಿಕೆ ಸಂಗೀತದ ಅವಕುಂಠನ ಹೊದ್ದು, ವೇದಿಕೆಯಲ್ಲಿ ಜೀವಂತಿಕೆಯಿಂದ ಕಾರಂಜಿಯಾಗಿ ಪುಟಿಯುತ್ತಿದ್ದಾಳೆ. ಜನಪ್ರಿಯಳಾಗಿದ್ದಾಳೆ. ಹಿರಿಯರಿಂದ ಕಿರಿಯರವರೆಗೆ, ಜಾತಿಮತಗಳ, ಗೋಡೆಗಳನ್ನು ದಾಟಿ ಎಲ್ಲರನ್ನೂ ಬಾಚಿಕೊಂಡು ಅಲಂಗಿಸಿಕೊಂಡ ಸುಗಮಸಂಗೀತ ಒಂದೇ ಕುಟುಂಬದ ಎಲ್ಲಾ ವಯಸ್ಸಿನವರೂ ಒಟ್ಟಿಗೆ ಕುಳಿತು ಕೇಳಬಲ್ಲಂತಹ ಸಂಗೀತವಾಗಿರುವುದಕ್ಕೆ ಕಾರಣ, ಅದರಲ್ಲಿ ಹಾಸು ಹೊಕ್ಕಾಗಿರುವ ಪರಿಶುದ್ಧವಾದ ಉತ್ಕೃಷ್ಟ ಸಾಹಿತ್ಯ. ಇಂದು ರುಚಿಕೆಟ್ಟ ಚಲನಚಿತ್ರಗಳು ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಾ, ಅವರಲ್ಲಿರುವ ಸಾಹಿತ್ಯ ಸಂಗೀತಾಭಿರುಚಿಯನ್ನು ಹದಗೆಡಿಸುತ್ತಿರುವಾಗ, ಸುಗಮಸಂಗೀವೊಂದೇ ಅವರನ್ನು ಮುನ್ನಡೆಸುತ್ತಿದೆ. ಅವರಲ್ಲಿ ಸದಭಿರುಚಿಯನ್ನು ಹುಟ್ಟು ಹಾಕುತ್ತಿದೆ.

ಕವಿ ಮನಸ್ಸಿನ ಬೆಳಕಿನ ಹೆಜ್ಜೆಗಳ ಅರಿವು ಮುಡಿಸುತ್ತಿರುವ ಸುಗಮಸಂಗೀತ ಜನ ಜೀವನಕ್ಕೆ ನೆಮ್ಮದಿ ನೀಡುತ್ತಿದೆ. ಅವರನ್ನು ಬೆಳಕಿನತ್ತ ಕರೆದೊಯ್ಯುತ್ತಿದೆ. ಕಾರಣ ಅದರಲ್ಲಿರುವ ಕೆಲವು ವಿಶಿಷ್ಟತೆಗಳು ಎನ್ನಬಹುದು. ೧) ಮಾನವ ಬದುಕಿನ ಸಹಜ ಚಿತ್ರಣಗಳನ್ನೊಳಗೊಂಡ ಸುಗಮಸಂಗೀತದ ಸಾಹಿತ್ಯ, ಸರಳವಾಗಿರುವುದು ೨) ಸಂಕ್ಷಿಪ್ತವಾಗಿ ಕಡಿಮೆ ಕಾಲಾವಧಿಯಲ್ಲಿ ಮುಗಿಯುವುದು ೩) ಗೇಯತೆಯ ಸಾಹಚರ್ಯ ಮೂಲಕ ಆಕರ್ಷಕವಾಗಿರುವುದು ೪) ಧ್ವನಿಯಲ್ಲಿ ವಿಶೇಷ ಅರ್ಥನೀಡಿ ಸಂದೇಶವಿರುವುದು ೫) ತಾಳಕ್ಕೆ ಹೊಂದಿಕೊಂಡು ಲಯದ ಮೂಲಕ ಕವಿತೆಯ ಮುಖ್ಯ ಕೇಂದ್ರ ಭಾವ ಸ್ಪುರಣಗೊಳ್ಳುವುದು ೬) ಭಾವತೀವ್ರತೆಯ ಆತ್ಮನಿವೇದನೆಯ ಮೂಲಕ ವ್ಯಕ್ತಿತ್ವದ ಒಳತೋಟಿ ಇರುವುದು ೭) ಉತ್ಕೃಷ್ಟವಾದ ಸಾಹಿತ್ಯಾನುಭವಗಳ ಮೂಲಕ ಮನಸ್ಸನ್ನು ಶುಚಿಗೊಳಿಸಿ ಸಿಂಗರಿಸುವುದು ೮) ಮನಸ್ಸಿಗೆ ಉಲ್ಲಾಸ ನೀಡುವುದು ೯) ವಾಸ್ತವ ಜೀವನದ ಚಿತ್ರಣದಿಂದ ಕೇಳುಗರಿಗೆ ಆತ್ಮಿಯತೆಯನ್ನು ಮೂಡಿಸುವುದು, ಹಾಡು ಅವನದೇ ಅನ್ನಿಸುವುದು ೧೦) ಪ್ರಕ್ಷುಬ್ಧ ಮನಸ್ಸನ್ನು ತಣಿಸಿ, ಮಣಿಸಿ ನೆಮ್ಮದಿ ನೀಡುವುದು.

ಈ ಹತ್ತು ಅಂಶಗಳಿಂದ ಇಂದಿನ ಸುಗಮಸಂಗೀತ ಬೇರೆಯ ಸಂಗೀತ ಪ್ರಕಾರಗಳಿಂದ ಭಿನ್ನವಾಗಿ ಶುಚಿ-ರುಚಿಯಾಗಿ ಜನರನ್ನು ಆಕರ್ಷಿಸುತ್ತಿದೆ.

ಯಾವುದೇ ರಸಾನುಭವಕ್ಕೆ ಬೇಕಾದದ್ದು ಮನೋರಂಜನೆ, ಮನಸ್ಸನ್ನು ಮುದಗೊಳಿಸಿ ಸಿಂಗರಿಸುವುದು. ಇಂದಿನ ಯಾಂತ್ರಿಕ ಬದುಕಿಗೆ ಬೇಕಾದ ಮನರಂಜನೆಯ ಜೊತೆಗೆ ಸಂದೇಶವನ್ನೂ, ‘ಸುಗಮಸಂಗೀತ’ ನೀಡುತ್ತಿದೆ ಎನ್ನುವ ಕಾರಣದಿಂದ ಇದು ಜನಪರವೂ, ಜನಪ್ರಿಯವೂ ಆಗಿದೆ. ಕೇವಲ ಮನರಂಜನೆಯನ್ನಷ್ಟೇ ಅಲ್ಲದೆ, ಮನಸ್ಸಿಗೆ ಬೇಕಾದ ನೆಮ್ಮದಿ, ಸುಖಗಳನ್ನು ಕೊಡುತ್ತಿದೆ. ಮಸುಕಿನ ಮಬ್ಬಿನ ದಾರಿಗೆ ಕೈ ಹಿಡಿದು ನಡೆಸುತ್ತಲೂ ಇದೆ. ಮನೋ ಯಾತನೆಗಳಿಗೆ ಸಂಗೀತದ ಸಕ್ಕರೆ ಲೇಪನದಿಂದ ಮದ್ದನ್ನೂ ನೀಡುತ್ತಿದೆ. ಅತ್ಯಂತ ಕಡಿಮೆ ಕಾಲಾವಧಿಯಲ್ಲಿ ಪರಿಣಾಮಕಾರಿಯಾದ ಅನುಭವವನ್ನು ಕೊಡುತ್ತದೆ ಅನ್ನುವ ಕಾರಣದಿಂದ ಸುಗಮಸಂಗೀತ ಇಂದು ಜನಪ್ರಿಯವಾಗಿದೆ. ಹಾಡು ಕೇಳುವವನಿಗೆ, ಅದು ತನ್ನದೇ, ನಲಿವು, ನೋವು, ಎನ್ನುವ ಅನುಭವವನ್ನು ಕ್ಷಣ ಮಾತ್ರದಲ್ಲಿ ನೀಡುವುದಲ್ಲದೆ ಚಿತ್ತಕ್ಕೆ ಸಮಾಧಾನವನ್ನು ನೀಡುತ್ತಿದೆ.

ಸುಗಮಸಂಗೀತ ಸಂಯೋಜಕ ಕವಿತೆಗೆ ರಾಗ ಸಂಯೋಜನೆ ಮಾಡುವಾಗ ಆ ಕವಿತೆ ತನ್ನದೇ ಭಾವನೆಗಳ ಚಿತ್ರಣ ಎಂದು ತಿಳಿದೇ ಅದಕ್ಕೆ ತನ್ನ ರಾಗದ ತೊಡುಗೆಯನ್ನು ತೊಡಿಸುತ್ತಾನೆ. ತನ್ನದೇ ಗೀತೆ ಎಂದೇ ಭಾವಿಸಿ ಸಂಭ್ರಮ ಪಡುತ್ತಾನೆ. ಆ ಗೀತೆಯನ್ನು ಹಾಡುವ ಗಾಯಕ ಅದನ್ನು ಹಾಡುವಾಗ ಅದು ತನ್ನ ಕವಿತೆಯೇ, ತನ್ನ ಭಾವನೆಗಳ ಅಭಿವ್ಯಕ್ತಿಯೇ, ಎಂದು ಎದೆ ತುಂಬಿ ಹಾಡುತ್ತಾನೆ. ತನ್ನದೇ ಹಾಡು ಎಂದೇ ಬೀಗಿ ಹಾಡುತ್ತಿರುತ್ತಾನೆ. ಅದೇ ಹಾಡನ್ನು ಕೇಳಿದ ಕೇಳುಗ ಆ ಹಾಡಿಗೆ ಮನಸೋತು ಮತ್ತೆ ಮತ್ತೆ ಅದೇ ಹಾಡನ್ನೆ ಗುನುಗಿಸಿಕೊಳ್ಳುತ್ತಾ ಮತ್ತೆ ಮತ್ತೆ ಅದೇ ಹಾಡನ್ನು ಕೇಳಲು ತವಕಿಸುತ್ತಾನೆ. ಪ್ರತಿಬಾರಿ ಕೇಳುವಾಗಲೂ ಅದು ಅವನ ಹಾಡೇ ಆಗುತ್ತಾ ಆ ಗೀತೆ ಅವನಿಗೆ ಆತ್ಮೀಯವಾಗುತ್ತದೆ. ಪುನಃ ಪುನಃ ಆ ಹಾಡಿಗಾಗಿ ಆತ ಹಂಬಲಿಸಿ ಕೇಳುತ್ತಾಣೆ. ತನ್ನ ಹಾಡೆಂದು ಸಂತೋಷಪಡುತ್ತಾನೆ. ಇದು ಕವಿತೆ ಪುನರ್ಭವವಾಗುತ್ತಾ ಮತ್ತೆ ಮತ್ತೆ ಹುಟ್ಟಿ ಹೊಸದಾಗುತ್ತಾ ಹೋಗುವ ಕ್ರಿಯೆ. ಸುಗಮಸಂಗೀತದಲ್ಲಿ ಈ ಒಂದು ಮರು ಸೃಷ್ಟಿ, ಆಗುತ್ತಲೇ ಇರುವುದರಿಂದ ಇದು ಅನಂತವಾಗುತ್ತಾ ಹೋಗುತ್ತದೆ. ಅನೇಕ ವೇಳೆ ಏಕಾಂತದ ವ್ಯಕ್ತಿಗತವಾದ ನೋವು, ಬೇಸರಗಳಿಗೆ, ನಿನ್ನ ಜೊತೆ ನಾನಿದ್ದೇನೆ, ನನಗೂ ನಿನ್ನ ಹಾಗೆಯೇ ಬೇಸರವಾಗಿದೆ, ನಿನ್ನ ಅನುಭವ ನನಗೂ ಆಗಿದೆ ಇದು ಸಹಜ ಸ್ವಾಭಾವಿಕ ಅನ್ನುವ ಸ್ವಾಂತನವೂ ವ್ಯಕ್ತವಾಗುತ್ತದೆ. ಉದಾ. ಜಿ.ಎಸ್.ಶಿವರುದ್ರಪ್ಪನವರ ‘ಎದೆ ತುಂಬಿ ಹಾಡಿದೆನು’ ಗೀತೆಯನ್ನಾಗಲಿ ನಿಸಾರ್ ಅಹಮದ್ ಅವರ ‘ಮತ್ತದೇ ಬೇಸರ ಅದೇ ಏಕಾಂತ’ ಗೀತೆಯನ್ನಾಗಲಿ ‘ಎಲ್ಲ ಮರೆತಿರುವಾಗ ಇಲ್ಲ ಸಲ್ಲದನೆವವ ಹೂಡದಿರು’ ಗೀತೆಯನ್ನಾಗಲಿ-ಕೇಳಿದಾಗ ಪ್ರಿಬಾರಿಯೂ ಒಂದು ವಿಧವಾದ ನೆಮ್ಮದಿ, ಸ್ವಾಂತನಗಳ ಅನುಭವವಾಗುತ್ತದೆ. ಅದೇ ಕವಿತೆಯನ್ನು ಕವಿತೆಯಾಗಿ ಓದಿದ್ದಾಗ ದೊರೆತ ಸಂತೋಷ, ನೆಮ್ಮದಿ, ನಿಟ್ಟುಸಿರು, ಧೈರ್ಯ ಮುಂತಾದ ಭಾವನೆಗಳಿಗಿಂತ ಮಿಗಿಲಾದ ಭಾವನೆಗಳು ಗೀತೆಯ ರೂಪದಲ್ಲಿ ಕೇಳಿದಾಗ ಮೂಡುತ್ತವೆ. ಗೀತೆಯು ಕವಿತೆಯೊಳಗೆ ಪ್ರವೇಶಿಸಿ ಗಾಯಕನ ಕಂಠದಿಂದ ಹೊರಹೊಮ್ಮಿದಾಗ ಆದ ಮಿಂಚಿನ ಸಂಚಾರವನ್ನು ಶಬ್ದಗಳಲ್ಲಿ ತುಂಬಿಕೊಡುವುದು ಕಷ್ಟದ ಕೆಲಸ. ಮೈಸೂರು ಅನಂತಸ್ವಾಮಿಯವರ ಸಂಗೀತ ಸಂಯೋಜನೆ, ಗಾಯನ ಪ್ರಸ್ತುತಿಯಲ್ಲಿ ಈ ಗೀತೆಗಳನ್ನು ಉದಾಹರಿಸಿದ್ದೇನೆ. ಇದು ಒಂದು ತುಣುಕು. ಸುಗಮಸಂಗೀತ ಇಂತಹ ಸಾವಿರಾರು ಗೀತೆಗಳಿಂದ ವಿಜೃಂಭಿಸುತ್ತಿದೆ. ಮನಸ್ಸಿನ ಚಿಂತೆಯನ್ನು ನೀಗಿಸಿ ಉಲ್ಲಾಸವನ್ನು ಕೊಡುತ್ತಿದೆ. ಕೇಳುಗನ ‘ಶುಚಿರುಚಿ’ಯ ಭಾವನೆಗಳನ್ನು ಉದ್ದೀಪನಗೊಳಿಸುತ್ತಾ, ಬದುಕಿನ ಓರೆಕೋರೆಗಳನ್ನು ತೋರಿಸುತ್ತಾ, ತಿದ್ದುತ್ತಾ, ಕೆಳಗೆ ಬೀಳಬೇಡ ಎಂದು ಬುದ್ದಿ ಹೇಳುತ್ತಾ, ಬಿದ್ದಾಗ, ಎದ್ದು ನಿಲ್ಲು ಎಂದು ಹುರಿದುಂಬಿಸುತ್ತಾ ನಡೆದಿರುವ ಸುಗಮಸಂಗೀತ ವರ್ತಮಾನ ಕಾಲದ ಬಹುದೊಡ್ಡ ದಾರಿದೀವಿಗೆಯಾಗಿದೆ. ಬದುಕಿಗೆ ಕನ್ನಡಿ ಹಿಡಯುತ್ತಾ ಬದುಕನ್ನು ಹೇಗೆ ಕನ್ನಡಿಯಂತೆ ಒರೆಸಿ, ಸ್ವಚ್ಛವಾಗಿ ಪಾರದರ್ಶಕವಾಗಿ ಇಟ್ಟುಕೊಳ್ಳಬಹುದು ಎಂಬುದನ್ನು ತೋರಿಸಿಕೊಡುತ್ತಿದೆ. ಜೀವನದ ಮೌಲ್ಯಗಳನ್ನು ನಾನಾ ಕಾರಣಗಳಿಂದ ಕಳೆದುಕೊಳ್ಳುತ್ತಿರುವ ನಮ್ಮ ಸಮಾಜ ಇದನ್ನು ಗಮನಿಸಿ ಸ್ವಚ್ಛವೂ ಪಾರದರ್ಶಕವೂ ಆದ ಭಾವನೆಗಳನ್ನು, ಚಿಂತನೆಗಳನ್ನು, ಮುಕ್ತವಾದ ಪ್ರೀತಿ, ಆತ್ಮೀಯತೆಗಳನ್ನು ಬಾಳಿಗಿಳಿಸಿಕೊಳ್ಳಬೇಕಾಗಿದೆ. ಅವರ ಆಶೋತ್ತರಗಳನ್ನು ಸಕಾರಾತ್ಮಕವಾದ ಹಾದಿಯಲ್ಲಿ ನೆರವೇರಿಸಿಕೊಳ್ಳಬೇಕಾಗಿದೆ.

ಪು.ತಿ.ನ.ರವರು ಹೇಳುವಂತೆ ‘ಮನಸ್ಸನ್ನು ಕೆರಳಿಸುವ ಸಾಹಿತ್ಯ ಸಂಗೀತ’ಗಳಿಂದ ದೂರವಿದ್ದು, ಮನಸ್ಸನ್ನು ಅರಳಿಸುವ ಸಾಹಿತ್ಯ ಸಂಗೀತದ ಸುತ್ತ ನಾವು ಬದುಕಬೇಕಾಗಿದೆ. ಇಂದು ‘ಸುಗಮಸಂಗೀತ’ ತನ್ನ ಬದುಕಿಗೆ ಹತ್ತಿರವಾದ ಉತ್ಕೃಷ್ಟವಾದ ಸಾಹಿತ್ಯ, ಚಿಂತನಗಳಿಂದ, ಸಾಹಿತ್ಯಾರ್ಥವನ್ನು ತಲೆ ಮೇಲೆ ಹೊತ್ತು ಬರುವ ಸರಳ ಮಧುರ ಸಂಗೀತದಿಂದ, ಸಮಾಜ ಮುಖಯಾಗಿದೆ. ಬಹುಮುಖಿಯಾಗುತ್ತಲೂ ಇದೆ. ಬೇರೆ ಬೇರೆ ಮಾಧ್ಯಮಗಳ ಮೂಲಕವೂ ಹೊರಹೊಮ್ಮುತ್ತಿದೆ. ಚಿತ್ರ, ಅಭಿನಯ, ನೃತ್ಯಗಳ ಮೂಲಕವೂ ಸುಗಮಸಂಗೀದ ಮತ್ತೊಂದು ಮುಖ ತಲೆ ಎತ್ತಿ ಅವುಗಳಲ್ಲಿಯೂ ತನ್ನನ್ನು ತೋರಿಸಿಕೊಳ್ಳುತ್ತಿದೆ. ಕವಿತೆಯ ಹಲವು ಸಾಧ್ಯತೆಗಳು, ಸಂಗೀತದ ಹಲವು ಹೊಸ ಹೊಸ ಸಾಧ್ಯತೆಗಳ ಶೋಧನೆಯಾಗುತ್ತಿವೆ. ಸಂಗೀತದಲ್ಲಿ ಅಭಿರುಚಿ ಇರುವವರಿಗೆ ಸಾಹಿತ್ಯದ ಸವಿಯೂ ದೊರಕುತ್ತಿದೆ. ಸಾಹಿತ್ಯದಲ್ಲಿ ಅಭಿರುಚಿ ಇರುವವರಿಗೆ ಸಂಗೀತದ ರುಚಿ ಅನುಭವವಾಗುತ್ತಿದೆ. ಸಾಹಿತ್ಯದ ಗುಣಮಟ್ಟವನ್ನು ಅದನ್ನು ಆಸ್ವಾದಿಸುವ ಗುಣವನ್ನು ಸುಗಮಸಂಗೀತ ಕೊಟ್ಟು, ಭಾವನೆಗಳ ಸಂವೇನದಯನ್ನು ಸೂಕ್ಷ್ಮಗೊಳಿಸಿದೆ. ಕೇಳುಗರಲ್ಲಿ ಕಾವ್ಯಪ್ರೀತಿ, ಸದಭಿರುಚಿ ಮೂಡಿಸುವಲ್ಲಿ ಗಮನಾರ್ಹವಾಗಿದೆ.

೧೯೭೮ರಲ್ಲಿ ಪ್ರಾರಂಭವಾದ ‘ಧ್ವನಿಸುರುಳಿ ಸಂಸ್ಕೃತಿ’ ಯ ಹಾದಿ ಇಂದು ತುಸು ತುಸು ದುರ್ಗಮವಾಗುತ್ತಾ ಬಂದಿದೆ. ಸುಮಾರು ಇಪ್ಪತ್ತೈದು ವರುಷಗಳಲ್ಲಿ ಸಾವಿರ ಸಾವಿರ ಧ್ವನಿಸುರುಳಿಗಳು ಹೊರಬಂದು ಜನಪ್ರಿಯವಾಗಿ ಮೆರೆದದ್ದು ಇಂದು ಇತಿಹಾಸದಂತೆ ಕಂಡು ಬರುತ್ತಿದೆ.ಧ್ವನಿಸುರಳಿ ಅಲ್ಲೊಂದು ಇಲ್ಲೊಂದು ತಲೆ ಎತ್ತಿ ಹುಟ್ಟಿದರೂ, ಮಾರುಕಟ್ಟೆಯ ದವಡೆಯಲ್ಲಿ ಪಾರಾಗಿ ಈಚೆ ಬರುವುದು ಕಷ್ಟಕರವಾಗಿದೆ. ಹೊಸ ಹೊಸ ಭಾವಗೀತೆಗಳ ಮಾತಿರಲಿ; ಹಳೆಯ ಧ್ವನಿಸುರುಳಿಗಳಾದ ‘ಮೈಸೂರು ಮಲ್ಲಿಗೆ’, ‘ಭಾವಸಂಗಮ’, ‘ಶಿಶುನಾಳ ಶರೀಫರ ಹಾಡುಗಳು’ ಅನೇಕ ಜನಪ್ರಿಯ ಭಾವಗೀತೆಗಳೂ ತಮ್ಮ ಹಿಂದಿನ ತಾರಾ ವರ್ಚಸ್ಸನ್ನು ಕ್ರಮೇಣ ಕಳೆದುಕೊಳ್ಳುತ್ತಾ ನೇಪಥ್ಯಕ್ಕೆ ತೆರಳುವ ಸೂಚನೆಗಳನ್ನು ಕೊಡುತ್ತಿವೆ. ಇದಕ್ಕೆ ಕಾಲವೇ ಪರಿಹಾರವನ್ನು ನೀಡಬೇಕಾಗಿದೆ.

ಇಂದು ಸುಗಮಸಂಗೀತದ ವೇದಿಕೆ, ಶಿಬಿರಗಳು ಹತ್ತು ಹಲವಾಗಿ, ಹಲವು ನೂರಾಗಿ ಧಾಪುಕಾಲು ಇಡುತ್ತಿವೆ. ಸುಗಮಸಂಗೀತವನ್ನು ಕಲಿಸುವ ಶಾಲೆಗಳು ಅಲ್ಲಲ್ಲಿ ಹುಟ್ಟಿಕೊಳ್ಳುತ್ತಿವೆ. ಕಲಿಯುವ ಆಸಕ್ತರೂ ಅತ್ತಣಿಂದ ಇತ್ತ, ಇತ್ತಣಿಂದ ಅತ್ತ, ಆಸಕ್ತಿಯಿಂದ ಮುನ್ನುಗುತ್ತಿದ್ದಾರೆ. ತರಬೇತಿ ಶಿಬಿರಗಳು, ಸುಗಮಸಂಗೀತ ಗಾಯನದೊಂದಿಗೆ ಅಗತ್ಯವಾದ ವಾದ್ಯಗಳನ್ನು ಕಲಿಸುತ್ತಾ ಹೊರಟಿದೆ.

ಒಂದು ಕಾಲದಲ್ಲಿ ಸಂಗೀತ ವೇದಿಕೆಗಳಲ್ಲಿ ಸುಗಮಸಂಗೀತವನ್ನು ಹಾಡುವುದೇ ಅಪಮಾನವೆಂದು ತಿಳಿದಿದ್ದವರು, ಅದರಿಂದ ಒಂದು ಪೈಸೆಯನ್ನು ಸಂಪಾದಿಸಲಾಗದಿದ್ದವರು, ಇಂದು ಸುಗಮಸಂಗೀತವನ್ನೇ ವೃತ್ತಿಯಾಗಿಟ್ಟುಕೊಂಡು ಹಣಗಳಿಸಿ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಕರ್ನಾಟಕ ಸರ್ಕಾರ ‘ಸುಗಮಸಂಗೀತ’ ಗೌರವ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿಗಳನ್ನಷ್ಟೇ ಅಲ್ಲದೆ ಅತ್ಯುನ್ನತ ‘ಸಂತ ಶಿಶುನಾಳಶರೀಫರ’ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಸುಗಮಸಂಗೀತ ಗಾಯಕರು, ಸಂಯೋಜಕರು, ವಾದ್ಯಗಾರರು ನೂರಾರು ಸಂಖ್ಯೆಗಳಿಂದ ಸಾವಿರ ಸಾವಿರ ಸಂಖ್ಯೆಗೆ ಮುಟ್ಟುತ್ತಿದ್ದಾರೆ. ಕ್ಯಾಸೆಟ್ ಸಂಸ್ಕೃತಿಯಿಂದ ಸಾವಿರಾರು ಹಾಡುಗಳು ಜನ್ಮತಳೆದಿವೆ. ನೂರಾರು ಗಾಯಕರು ಬೆಳಕಿಗೆ ಬಂದಿದ್ದಾರೆ. ಸುಗಮಸಂಗೀತ ವ್ಯಕ್ತಿ ವಿಶಿಷ್ಟವಾದ ಸಂಗೀತವಾದ್ದರಿಂದ ಪ್ರತಿಯೊಬ್ಬ ಗಾಯಕನಲ್ಲೂ ಹೊಸ ಶೈಲಿ ರೂಪುಗೊಂಡಿದೆ. ಗಾಯನದ ಶೈಲಿಯ ಜೊತೆಗೆ ವಾದ್ಯಗಳ ಬಳಕೆಯಲ್ಲೂ ಹೊಸತನ ಬಂದಿದೆ. ಹಿಂದೆ ವಾದ್ಯ ಸಹಕಾರಕ್ಕೆ ಪಿಟೀಲು, ವೀಣೆ, ಕೊಳಲು, ತಬಲ ಗಳನ್ನು ಮಾತ್ರ ಉಪಯೋಗಿಸುತ್ತಿದ್ದರೆ, ಈಗ ವಿದ್ಯುನ್ಮಾನ ಸಾಧನಗಳೂ ಬಳಕೆಗೆ ಬಂದಿವೆ. ಕೀ ಬೋರ್ಡ್‌, ರಿದಂ ಪ್ಯಾಡ್ ಗಳ ಜೊತೆ ಹಿಂದೂಸ್ತಾನಿ ಮತ್ತು ಪಾಶ್ಚಾತ್ಯ ವಾದ್ಯಗಳಾದ ‘ಸಾರಂಗಿ’, ‘ಶಹನಾಯ್’, ‘ಸಿತಾರ್’, ‘ಮ್ಯಾಂಡಲಿನ್’, ‘ಬ್ಯಾಂಜೋ’, ‘ಗಿಟಾರ್’ ಮುಂತಾದ ವಾದ್ಯಗಳನ್ನು ಬಳಸಲಾಗುತ್ತಿದೆ. ಧ್ವನಿಮುದ್ರಣದಲ್ಲೂ ತಾಂತ್ರಿಕತೆ ಹೊಸತನವಾಗುತ್ತಲೇ ಇದೆ. ಸ್ಪೂಲ್ ರೆಕಾರ್ಡಿಂಗ್‌ನಿಂದ ಹಂತಹಂತವಾಗಿ ಬೆಳೆದು ಕಂಪ್ಯೂಟರ್ ರೆಕಾರ್ಡಿಂಗ್ ಹಂತಕ್ಕೆ ಬಂದು ನಿಂತಿದೆ. ಧ್ವನಿಯ ಸೂಕ್ಷ್ಮತೆಗಳನ್ನು ತರಂಗಗಳಲ್ಲಿ ತುಂಬಿ ಪರಿಣಾಮಕಾರಿಯನ್ನಾಗಿ ಮಾಡುವ ಹೊಸತನ, ದಿನ ದಿನಕ್ಕೂ ಹೊಸತು ಹೊಸತು ತರುತಿದೆ. ಹೊಸ ಹೊಸ ಉಪಕರಣಗಳು ನಾದದ ಅನುಕರಣನಕ್ರಿಯೆಗೆ ನಾದದ ತಾಂತ್ರಿಕತೆ ಸವಾಲೆಸೆಯುತ್ತಾ ಹುಟ್ಟಿಕೊಳ್ಳುತ್ತಿದೆ.

ಇಂದು ಸುಗಮಸಂಗೀತದ ವೈಶಿಷ್ಟ್ಯವೇನೆಂದರೆ ಗುಣ ಮತ್ತು ದೋಷಗಳು ಒಟ್ಟೊಟ್ಟಿಗೆ ಬೆಳೆಯುತ್ತಿರುವುದು. ಹೊಸ ಪ್ರಯೋಗಗಳಂತೆ ಹೊಸ ವಿಚಾರಗಳು, ಕೀರ್ತಿಯ ಆಮಿಷಗಳು ಸುಗಮಸಂಗೀತಕ್ಕೆ ಒಂದು ಸವಾಲಾಗವೆ. ಕನ್ನಡತನದ ಭಾವ ಸಂಸ್ಕೃತಿಯ ಆವರಣದಲ್ಲಿಯೇ ಇದರ ಸಫಲತೆಯನ್ನು ಕಾಣುವುದೇ ಇಂದಿನ ಸವಾಲಾಗಿದೆ. ಇಲ್ಲಿ ಬೆಳಕು ಇದ್ದಂತೆ ಥಳುಕೂ ಬಂದು ಸೇರಿಕೊಳ್ಳುವ ಅಪಾಯವಿದೆ. ಅಕ್ಕಿಯಲ್ಲಿ ಕಲ್ಲೂ ಕಲಸಿ ಬಿಡುವ ಆಪಾದನೆಯೂ ಇದೆ. ಬಂಗಾರವೂ ಹಿತ್ತಾಳೆಯೂ ಬೆರೆತು ಬಿಡುವ ಮೋಸವೂ ಇದೆ. ಬೇರೇ ಯಾವುದೇ ಆಕರ್ಷಕ ಗೀತ ಮಾಧ್ಯಮದ ಕಬಂಧಬಾಹುಗಳಿಂದ ಪಾರಾಗಿ ಸ್ವಂತಿಕೆಯೊಡನೆ ಮೂಡಿ ನಿಲ್ಲುತ್ತಾ, ಶ್ರೋತೃಗಳನ್ನು ಗಾಯನ, ಸಂಯೋಜನೆಗಳ ಮೂಲಕ ಹಿಡಿದಿಟ್ಟುಕೊಳ್ಳುವಂತಹ ಸುಗಮಸಂಗೀತ ಎಲ್ಲಿಯವರೆವಿಗೆ ಸಮಾಜಮುಖಯಾಗಿರುತ್ತದೋ ಅಲ್ಲಿಯವರೆವಿಗೆ ಅದು ಜೀವಂತವಾಗಿರುತ್ತದೆ.

ಇಂದಿನ ಸುಗಮ ಸಂಗೀತಗಾರರ ಜವಾಬ್ದಾರಿಗಳು

ಇಂದಿನ ಸುಗಮಸಂಗೀತಗಾರರಿಗೆ ಹೊಣೆಗಾರಿಕೆ ಬೃಹತ್ತಾಗಿದೆ. ಮೊದಲು ತಮ್ಮ ಮಾಧ್ಯಮದ ಘನತೆಯನ್ನು ಅವರು ಕಾಪಾಡಬೇಕಾಗಿದೆ. ತಮ್ಮ ಮಾಧ್ಯಮದ ಘನತೆಯನ್ನು, ಶ್ರೇಷ್ಠತೆಯನ್ನು ಯಾವಾಗಲೂ ಗರಿಷ್ಠ ಪ್ರಮಾಣದಲ್ಲಿ ಸಾಧಿಸುವುದಕ್ಕೆ ಪ್ರಯತ್ನಿಸಬೇಕಾಗಿದೆ. ಮೊದಲನೇಯದಾಗಿ ಉತ್ತಮವಾದ ಗೀತೆಗಳನ್ನು ಆರಿಸಿಕೊಂಡು ಹಾಡುವ ಜವಾಬ್ದಾರಿ. ಸುಗಮ ಸಂಗೀತದ ಮೂಲ ಸಾಮಗ್ರಿಯೇ ಶ್ರೇಷ್ಠಗೀತೆಗಳು. ಇಂತಹ ಶ್ರೇಷ್ಠಗೀತೆಗಳನ್ನು ಆರಿಸಿಕೊಳ್ಳುವ ಸಂಸ್ಕಾರ ಅವರಿಗಿರಬೇಕು. ಗೀತೆಗಳನ್ನು ಆರಿಸಿಕೊಂಡು ಅವುಗಳನ್ನು ಅಧ್ಯಯನಿಸಬೇಕು. ಅವುಗಳ ಭಾವವನ್ನು ಗ್ರಹಿಸಿ ಧ್ಯಾನಿಸಬೇಕು. ಆ ಭಾವಕ್ಕೆ ಪ್ರೇರಕವಾಗುವ, ಪೂರಕವಾಗುವ ಸಂಗೀತ ಸಂಯೋಜಿಸಬೇಕು. ಅಂದರೆ ಕವಿತೆಯ ಭಾವದ ಮೊಗ್ಗು ಸಂಗೀತ ಸಂಯೊಜನೆಯೆಂಬ ಬೆಳಕಿನ ಕಿರಣಗಳ ಮೂಲಕ ಅರಳಬೇಕು. ಸಂಗೀತ ತನ್ನ ಶಕ್ತಿಯನ್ನು ಭಾವಗೀತೆಗೆ ಧಾರೆ ಎರೆಯುತ್ತಲೇ ಪುಸ್ತಕದಲ್ಲಿದ್ದ ಕಾವ್ಯಕನ್ನಿಕೆ ಜೀವಂತವಾಗುತ್ತಾಳೆ. ಮಿಂಚಿನಂತೆ ತನ್ನ ಹಾವಭಾವ, ಬೆಡುಗು ಬಿನ್ನಾಣಗಳನ್ನು ತೋರುತ್ತಾ ಪ್ರಕಾಶದಿಂದ ಬೆಳಗುತ್ತಾಳೆ. ಸರ್ವರಿಗೂ ಪ್ರಿಯಳಾಗುತ್ತಾಳೆ. ಕವಿತೆಯನ್ನು ಓದುವುದಕ್ಕಿಂತಲೂ, ಶ್ರೇಷ್ಠ ಗಾಯಕನ ಕಂಠದಲ್ಲಿ ಕೇಳುವಾಗ ಅದರ ಸಫಲತೆ ಪರಿಣಾಮ ದುಪ್ಪಟ್ಟಾಗುತ್ತದೆ. ಸಂಗೀತದ ಮೂಲಕ ಸಾಹಿತ್ಯವೂ ಮನಸ್ಸಿನ ಒಳಗೆ ಪ್ರವೇಶಮಾಡುತ್ತದೆ. ನಿಧಾನವಾಗಿ ಸಾಹಿತ್ಯ ಜೀರ್ಣವಾಗುತ್ತಾ ಹೋಗುತ್ತದೆ. ಇದರಿಂದ ಕವಿತೆಯ ಸಂದೇಶ ಜೀವನಕ್ಕಿಳಿದು ಒಳ್ಳೆಯ ಪರಿಣಾಮ ಬೀರುತ್ತದೆ. ಅಂದರೆ ಎರಡನೆಯ ಹೊಣೆಗಾರಿಕೆ ಸಂಗೀತ ಸಂಯೋಜನೆ,ಆದರೆ ಸಂಗೀತ ಸಂಯೋಜನೆಯನ್ನು ಸಾರ್ವಜನಿಕರಿಗೆ ತಲುಪಿಸುವವನೇ ಗಾಯಕ. ಹಾಗಾಗಿ ಗಾಯಕನ ಆಯ್ಕೆಯೇ ಮೂರನೇಯ ಹೊಣೆಗಾರಿಕೆಯಾಗಿದೆ. ಉತ್ತಮವಾದ ಕವಿತೆಗೆ ಅನುರೂಪವಾದ ಸಂಗೀತ ಶ್ರುತಿ ಲಯ ಶುದ್ಧಿಯಿದ್ದು ಮಾಧುರ್ಯ ಪೂರ್ಣವಾದ ಕಂಠ ಸಂಪತ್ತನ್ನುಳ್ಳ ಸಂಯೋಜನೆಯಿದ್ದು ಉತ್ತಮವಾದ ಗಾಯಕ ನಿಲ್ಲದೆ ಹೋದಲ್ಲಿ ಎಲ್ಲವೂ ವ್ಯರ್ಥ ಪ್ರಯತ್ನವಾಗುತ್ತದೆ. ಭಾವಗೀತೆಯನ್ನೂ ಸಂಪೂರ್ಣ ಅರ್ಥಮಾಡಿಕೊಂಡು, ತಿಳಿದು, ಭಾವಿಸಿ, ಅನುಭವಿಸಿ, ಹಾಡಬಲ್ಲಂತಹ ಗಾಯಕ ನಿದ್ದಾಗ ಮಾತ್ರಗೀತೆ ಸಫಲತೆಯನ್ನು ಕಾಣುತ್ತದೆ. ಗಾಯಕ ಗೀತೆಗೆ ಪರಕಾಯ ಪ್ರವೇಶ ಮಾಡಬೇಕು. ಗೀತೆಯ ಪ್ರತಿಯೊಂದು ಪದವನ್ನು ಅನುಭವಿಸಿ ಹಾಡಬೇಕು. ಹಾಡುತ್ತಾ, ತನ್ನ ತಾನು ಮರೆಯುವಷ್ಟು ತಾದ್ಯಾತ್ಮತೆಯನ್ನು ಹೊಂದಬೇಕು. ಗೀತೆಗೆ ತನ್ನನ್ನೇ ಅರ್ಪಿಸಿಕೊಂಡಾಗ ಮಾತ್ರ ಸುಗಮ ಸಂಗೀತ ತನ್ನ ಸಾರ್ಥಕತೆಯನ್ನು ಪಡೆಯುತ್ತದೆ. ಇನ್ನೂ ವಾದ್ಯ ಸಂಯೋಜನೆ. ಕವಿತೆಯನ್ನು ಸಂಪೂರ್ಣವಾಗಿ ಓದಿ ಅರ್ಥಮಾಡಿಕೊಂಡ ಸಂಯೋಜಕನಿಗೆ ಕವಿತೆ ಏನನ್ನು ಕೇಳುತ್ತದೆ ಎಂಬ ಅರಿವು ಇದ್ದೇ ಇರುತ್ತದೆ. ಔಚಿತ್ಯವನ್ನು ತಿಳಿದು ಸಂಯೋಜಿಸಬೇಕಾದದ್ದು ಅತ್ಯಗತ್ಯ. ವಾದ್ಯಳ ವ್ಯಕ್ತಿತ್ವದ ಅರಿವಿದ್ದೇ ಇರಬೇಕು.

ಇಂದು ಯುವಕಲಾವಿದರು ಸುಗಮ ಸಂಗೀತದತ್ತ ಆಕರ್ಷಿತರಾಗಿ ವಾಲುತ್ತಿದ್ದಾರೆ. ಇದ್ದಕೆ ದೂರದರ್ಶನ, ಸಾರ್ವಜನಿಕ ಸಮಾರಂಭಗಳು, ಧ್ವನಿಸುರುಳಿಗಳು ಪ್ರೇರಕವಾಗಿರಲೂಬಹುದು. ದಿಢೀರನೆ ಸಿಗುವ ಜನಪ್ರಿಯತೆ, ಹಣಗಳಿಕೆ ಕಾರಣವಾಗಿರಲೂಬಹುದು. ಆದರೆ ಮಾನವನ ವ್ಯಕ್ತಿತ್ವ ವಿಕಸನವನ್ನು ಮಾಡುವಂತಹ, ಸಮುದಾಯವನ್ನು ಬೆಸೆಯುವಂತಹ ಶಕ್ತಿ ಸುಗಮಸಂಗೀತದಲ್ಲಿದೆ. ಒಂದು ಒಳ್ಳೆಯ ಕವಿತೆ, ಒಬ್ಬ ಸಹೃದಯ ಸಂಗೀತ ನಿರ್ದೇಶಕ ಒಬ್ಬ ಸಮರ್ಥ ಗಾಯಕನ ನಿರೂಪಣೆಯಿಂದ ಇದು ಸರ್ವಾಮಗ ಸುಂದರವಾಗಬಲ್ಲದು. ಅಂತಹ ಸುಗಮ ಸಂಗೀತ ಮನಸ್ಸಿನ ಕಶ್ಮಲಗಳನ್ನು ಕ್ಷಣ ಮಾತ್ರದಲ್ಲಿ ತೊಳೆಯಬಲ್ಲದು, ನಿಮಿಷಮಾತ್ರದಲ್ಲಿ ಮನದ ಉರಿಯನ್ನು ತಣಿಸಬಲ್ಲದು. ಸೇಡಿನ ಹೊಗೆಯಾಡುವ ಎದೆಗಳಲಿ ಪ್ರೀತಿಯ ತಂಪನು ಎರೆಯಬಲ್ಲದು. ಬತ್ತಿದ ನೆಲದಲ್ಲಿ ಒಲವಿನ ಹಸಿರನ್ನು ಚಿಗುರಿಸಬಲ್ಲದು. ವಿರಹದ ಬೇಗೆಯನ್ನು ನೀಗಿ ಮಿಲನದ ಹೂಮಳೆಯನ್ನು ಸುರಿಸಬಲ್ಲದು. ಇಂದು ಇಂತಹ ಸುಗಮ ಸಂಗೀತದಿಂದ ಹಿರಿಯರ ಕಿರಿಯರ ನಡುವಿನ ಪ್ರೇಮ ಸೇತುವೆ ನಿರ್ಮಾಣವಾಗಬೇಕಾಗಿದೆ. ಕಿರಿಯರ ತಪ್ಪನ್ನು ತಿದ್ದಿ ಅವರನ್ನು ಮುನ್ನಡೆಸುತ್ತಾ ಹಿರಿಯತನ ತೋರುವ ಹಿರಿಯ ಸುಗಮಸಂಗೀತಗಾರರು, ಮನಸ್ಸು ತೆರೆದು ಕಿರಿಯರನ್ನು ಬರಮಾಡಿಕೊಳ್ಳಬೇಕಾಗಿದೆ. ಹಾಗೆಯೇ ಹಿರಿಯ ಕಲಾವಿದರನ್ನು ವಿನಯ ಗೌರವಾದರಗಳಿಂದ ಕಾಣುತ್ತಾ, ಅವರಲ್ಲಿರುವ ಹಿರಿಯ ಗುಣಗಳನ್ನು ಗ್ರಹಿಸುತ್ತಾ, ಪ್ರಗತಿಪಥದತ್ತ ನಡೆಯುವ ಛಲ ಹೊತ್ತ ಕಿರಿಯ ಕಲಾವಿದರೂ ಸುಗಮ ಸಂಗೀತವೆಂಬ ಕಲಾದೇಗುಲದ ಬಾಗಿಲಿಗೆ ನಲಿವಿನ, ಅರಿವಿನ, ಹೊಸತೋರಣ ಕಟ್ಟಬೇಕಾಗಿದೆ.

ಹಿರಿಯರು ನೀಡಿದ ವಿವೇಕದ ಬೆಳಕಿನಲ್ಲಿ ಸ್ವಂತ ಸಾಧನೆಯ ಪರಿಶ್ರಮದಲ್ಲಿ ಸುಗಮ ಸಂಗೀತದ ಗಾನವಿಮಾನದಲಿ ಬಹು ಎತ್ತರಕ್ಕೆ ಹಾರಬೇಕಾಗಿದೆ. ಸುಗಮ ಸಂಗೀತದ ದಾರಿಯಲ್ಲಿ ಬಹುದೂರಕ್ಕೆ ಸಾಗಬೇಕಾಗಿದೆ. ಮುಂದಿನ ಪರಂಪರೆಗೆ ಬೆಳಕಾಗಿ ಒಯ್ಯಬೇಕಾಗಿದೆ. ಹಳೇಬೇರಿನೊಂದಿಗೆ ಹೊಸಚಿಗುರು ಮೂಡಬೇಕಾಗಿದೆ.

ಸಾಹಿತ್ಯ ಮತ್ತು ಸಂಗೀತವು ತನ್ನ ರಸತಂತ್ರದಿಂದ ಜೀವನವನ್ನು ಮೇಲಕ್ಕೆತ್ತಲು ಹವಣಿಸುತ್ತದೆ. ಒಂದನೊಂದು ತಿಂದು ಬದುಕುವುದು ಅಥವಾ ತಿಳಿದು ಬದುಕುವುದು, ಬದುಕೇ ಅಲ್ಲ. ಒಂದನೊಂದು ತಿಳಿದು ಬದುಕುವುದೇ ನಿಜವಾದ ಬಾಳು. ಜೀವಕ್ಕೆ ಜೀವ ಕೊಟ್ಟು ಬದುಕುವುದೇ ಕಲೆ ಮತ್ತು ಸಾಹಿತ್ಯದ ಧ್ವನಿಯಾಗಿದೆ.

* * *