ಭಾವಾಭಿವ್ಯಕ್ತಿಯ ಪರಮ ಸಾಧನವಾದ ಸಂಗೀತವು ಭರತಖಂಡದಲ್ಲಿ ಆದಿಕಾಲದಿಂದಲೂ ಅಸ್ತಿತ್ವದಲ್ಲಿದೆ. ಇದರ ಉತ್ಪತ್ತಿ ವೇದಗಳಿಗೂ ಮೊದಲಿನದೆಂದು ಅನೇಕ ಸಂಗೀತ ಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಿಸರ್ಗದ ಕೊಡುಗೆಯಾಗಿ ಸಂಗೀತ ಮಾನವನಿಗೆ ದೊರಕಿದೆ. ನಿಸರ್ಗದಲ್ಲಿ ತೋರಿ ಬರುವ ಶಬ್ದ ವೈವಿಧ್ಯ ಮಾನವನ ಮನಸ್ಸಿನಲ್ಲಿ ವಿವಿಧ ಭಾವನೆಗಳನ್ನು ಮೂಡಿಸಿತು. ಆ ಭಾವನೆಗಳೇ, ಹರ್ಷ, ದುಃಖ, ಕುಣಿತ, ಲಯಗಳ ರೂಪದಲ್ಲಿ ಹೊರಹೊಮ್ಮಿತು. ಹಾಡಾಗಿ ಮಾರ್ಪಟ್ಟಿತು. ಯಾವುದೊಂದು ದೇಶದ, ಅಥವಾ ಇತಿಹಾಸದ ಕಾಲಮಾನದ ಅಭಿವೃದ್ಧಿ, ಸುಖ ಸಂತೋಷ, ಉತ್ಸಾಹ, ನಯಗಾರಿಕೆ, ಜನಜೀವನದ ಶೈಲಿ ಇವುಗಳನ್ನು ಅಳೆಯಲು ಆ ದೇಶದ ಅಥವಾ ಆಯಾಕಾಲದ ಜನರ ಕಲೆಗಳು ಎನ್ನಬಹುದು. ಪ್ರಭಾವಶಾಲಿಯಾದ ಕಲೆಗಳ ನಿರ್ಮಾನಕ್ಕೆ ಸಮಾಜದ ಅಂದಿನ ಪರಿಸ್ಥಿತಿಯೇ ಕನ್ನಡಿಯಾಗಿರುತ್ತದೆ. ಸಮಾಜವನ್ನು ಕಟ್ಟುವಲ್ಲಿ ಕಲೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಮನುಷ್ಯ ಸಂಸ್ಕೃತಿಯೊಡನೆ ನಿಕಟವಾದ ಸಂಬಂಧ ಹೊಂದಿರುತ್ತವೆ. ಅವು, ನೃತ್ಯ, ಶಿಲ್ಪ, ಚಿತ್ರ ಮತ್ತು ಸಂಗೀತ ಮತ್ತು ಸಾಹಿತ್ಯ ಮೊದಲಾದ ಕಲೆಗಳು. ಇವು ಆಯಾಕಾಲದ ಜನರ ಮನಸ್ಸನ್ನು ಬಿಂಬಿಸುತ್ತವೆ. ಅವರ ಜೀವನ ಸಂಸ್ಕೃತಿಯನ್ನು ಕಾಯ್ದಿರಿಸಿಕೊಂಡು ಬರುತ್ತವೆ. ಕಾಲದ ಪಯಣದಲ್ಲಿ ಇವು ಸಾಕ್ಷೀಭೂತಗಳಾಗಿ ನಿಲ್ಲುತ್ತವೆ. ಕಲೆ ಎಂಬುದು ಕಲಾವಿದನ ಅನುಭವಗಳ ಮೂಸೆಯಿಂದ ಪುಟಿದು ಬಂದು ರೂಪುಗೊಳ್ಳುವ ಕೃತಿಯಾಗಿರುತ್ತದೆ. ಅದು ಕಹಿ ಅಥವಾ ಸಿಹಿಯಾಗಿರಬಹುದು. ಅದು ಯಾವುದೂ ಮುಖ್ಯವಾಗಿರದೆ, ಅವನ ಜೀವನದ ಅನುಭವದ ವೈಶಾಲ್ಯವನ್ನಷ್ಟೇ ಅದು ತಂದುಕೊಡುತ್ತದೆ ಎಂಬುದನ್ನು ಗಮನಿಸಬೇಕಾಗುತ್ತದೆ. ಮಾನವ ಜೀವನದ ಸುಖ, ದುಃಖ, ನ್ಯಾಯ, ಅನ್ಯಾಯ, ಈರ್ಷ್ಯೆ, ಅಜ್ಞಾನ, ತಿಳಿವುಗಳ ಸಂಘರ್ಷ, ಕಾಮ, ಶೃಂಗಾರ, ಒಲುಮೆ, ವಿಕಾರ ಔದಾರ್ಯ, ಸಂತೋಷ ಮುಂತಾದ ಭಾವನೆಗಳ ವಿನಿಮಯ ಮತ್ತು ವಿಕಾಸಗಳಿಗೆ ಲಲಿತಕಲೆಗಳಲ್ಲಿ ಉತ್ತಮವಾದ ಕಲೆಯಾದ ಸಂಗೀತವು ಅತ್ಯಂತ ಸಹಾಯಕವಾಗಿದೆ. ಅದು ವಿಶ್ವದ ಭಾವನೆಗಳ ಭಾಷೆ ಎಂಬ ಹಿರಿಮೆ ಗಳಿಸಿದೆ. ಹೃದಯವನ್ನು ನೇರವಾಗಿ ಮುಟ್ಟುವ ಕಲೆಯಾದ ಸಂಗೀತಕ್ಕೆ ‘ಗಾಂಧರ್ವ ವೇದ’ ವೆಂಬ ಹೆಸರಿದೆ. ಇದು ನಾದಾನುಭವವನ್ನು ನೀಡಿ ಬ್ರಹ್ಮಾನಂದವನ್ನು ಸಪ್ತಸ್ವರಗಳಲ್ಲಿ ತಂದುಕೊಡುತ್ತದೆ.

ಸಂಗೀತವೆಂದರೆ ಚೆನ್ನಾಗಿ ಹಾಡುವುದು ಎಂಬುದು ಸಾಮಾನ್ಯ ಅರ್ಥವಾದರೂ, ಉಪನಿಷತ್ತು. ಭಗವದ್ಗೀತೆ ಮುಂತಾದವುಗಳಲ್ಲಿ ವಿಶೇಷ ಸ್ಥಾನ ಪಡೆದ ಕಲೆಯಾಗಿದೆ. ಇದು ಮನೋರಂಜನೆಯನ್ನು ನೀಡಿ ನಿತ್ಯ ಜೀವನದ ಬೇಸರವನ್ನು ಹೋಗಲಾಡಿಸುತ್ತದೆ. ಭಾರತದೇಶವೇ ಪ್ರಪ್ರಥಮವಾಗಿ ಸೊಲ್ಫಾ ಪದ್ಧತಿಯಲ್ಲಿ ಸಪ್ತಸ್ವರಗಳ ಪದ್ಧತಿಯನ್ನು ಆಚರಣೆಗೆ ತಂದು ‘ಸರಿಗಮ ಪಧನಿ’ ಎಂದು ಹೆಸರಿಸಿದೆ. ಈ ಏಳು ಅಕ್ಷರಗಳನ್ನು ಸೇರಿಸಿ ಒಂದು ಪದವಾಗಿ ಮಾಡಿದರೆ ‘ಸರಿಗಮಪದನಿ’ ಎಂದಾಗುತ್ತದೆ. ಇದು ‘ಸರಿ’ ಎಂದರೆ ಸಂಸ್ಕೃತದಲ್ಲಿ ‘ದೋಣಿ’ ಎಂದರ್ಥ. ‘ಗಮ’ ಎಂದರೆ ಹೊಂದಿಸುವುದು. ‘ಪದ’ ಎಂದರೆ ಸ್ಥಾನ. ‘ನಿ’ ಎಂದರೆ ಕೊಡುವುದು. ಅಂದರೆ ಒಟ್ಟಿನಲ್ಲಿ ‘ಸಂಸಾರ ಸಮುದ್ರವನ್ನು ದಾಟುವುದಕ್ಕೆ ದೋಣಿಯಾದ ಪರಮಾತ್ಮನನ್ನು ಹೊಂದಿಸುವ ಮಾರ್ಗ ಎಂದರ್ಥವಾಗುತ್ತದೆ. ಸಮಸ್ತ ಜೀವಿಗಳಿಗೂ, ಪಶುಪಕ್ಷಿ ಪ್ರಾಣಿಗಳಿಗೂ, ಹೃದಯ ಮಿಡಿಸುವ ಕಲೆಯಾದ ಸಂಗೀತ, ಇಂದ್ರಿಯಗಳ ಚಂಚಲತೆಯಿಂದಾಗಿ ಹರಿದಾಡುವ ಮನಸ್ಸನ್ನು ಕಡಿವಾಣ ಹಾಕಿ ನಿಲ್ಲಿಸಬಲ್ಲದು. ಮನಸ್ಸನ್ನು ಶುಚಿಮಾಡಿ ಶೃಂಗರಿಸಬಲ್ಲದು. ರೋಗಗಳನ್ನು ನಿವಾರಿಸಬಲ್ಲದು. ದೇಹಕ್ಕೆ ಶಕ್ತಿಯನ್ನೂ ಕಾಂತಿಯನ್ನೂ ತುಂಬಿಕೊಡುತ್ತಾ, ಮನಸ್ಸಿಗೆ ಚೈತನ್ಯವನ್ನೂ, ಸುಖವನ್ನೂ ತಂದುಕೊಡಬಲ್ಲದು. ಈ ಸಂಗೀತ ವಿದ್ಯೆಯ ಉದ್ದೇಶ ಪರಮಾತ್ಮನನ್ನು ಆರಾಧಿಸಿ ಮುಕ್ತಿಯನ್ನು ಪಡೆಯುವುದು. ಲೌಕಿಕದಿಂದ ಅಲೌಕಿಕದತ್ತ ನಡೆಸುವ ಒಂದು ಗಾನಯಾನದಲ್ಲಿ ಪರಮಾತ್ಮನ ಉಪಾಸನೆಯ ಮೂಲಕ ಆತ್ಮೋದ್ಧಾರವಾಗುತ್ತದೆ. ಶಬ್ಧಸ್ವರೂಪವಾದ ಕಾವ್ಯ ಮತ್ತು ಸಂಗೀತವು ಭಗವಂತನ ಸ್ವರೂಪವೆಂದು ಭಾವಿಸಲಾಗಿದೆ. ಇದು ಮಾನವನನ್ನು ಭವಸಾಗರದಿಂದ ಶಾಂತಿಯ ಕಡೆ ದಾಟಿಸುವ ದೋಣಿಯಾಗಿ ಕೆಲಸ ಮಾಡುತ್ತದೆ.

ಸಂಗೀತ ಸಾಹಿತ್ಯಗಳ ಪರಂಪರಾನುಗತ ಸಂಬಂಧ

ಸಂಗೀತವು ಕೇವಲ ಒಂದು ದೇಶಕ್ಕೆ ಅಥವಾ ಒಂದು ಜಾತಿಗೆ ಅಥವಾ ಒಂದು ಭಾಷೆಗೆ ಸೇರಿದ್ದಲ್ಲ. ಅದು ಇಡೀ ವಿಶ್ವಕ್ಕೆ ಸೇರಿದ್ದು. ಪ್ರಪಂಚದ ಇತಿಹಾಸದಲ್ಲೇ ಮೊದಲನೆಯ ವಾಙ್ಮಯವಾದ ವೇದವು ಗಾನರೂಪವಾದುದು. ಭಗವಂತ ಸಾಮಗಾನಪ್ರಿಯ. ಶ್ರೀಕೃಷ್ಣನ ಕೈಯ್ಯಲ್ಲಿ ಕೊಳಲು, ಪರಮೇಶ್ವರನ ಕೈಯ್ಯಲ್ಲಿ ಡಮರುಗ, ಸರಸ್ವತಿಯ ಕೈಯ್ಯಲ್ಲಿ ವೀಣೆ, ದಕ್ಷಿಣಾಮೂರ್ತಿಯ ಹಸ್ತದಲ್ಲಿ ವೀಣೆ ಇರುವುದರಿಂದ, ಈ ಎಲ್ಲ ದೇವತೆಗಳು ಗಾನಲೋಲರೆಂದು ತಿಳಿಯುತ್ತದೆ. ಹೀಗೆ ಬಹಳ ಹಿಂದಿನಿಂದಲೇ ಸಂಗೀತವು ಭಾರತೀಯರಿಗೆ ಪೂಜ್ಯವಸ್ತವೆಂದು ಸ್ವೀಕೃತವಾಗಿದೆ. ಭಗವಂತನನ್ನು ಪಾಸಿಸುವ, ಆರಾಧಿಸುವ ಶ್ರೇಷ್ಠಮಾರ್ಗವೆಂದು ಕಂಡುಕೊಂಡ ಹಲವು ಸಾಧನೆಗಳಲ್ಲಿ ಸಂಗೀತ ಕಲೆ ಪ್ರಮುಖವಾಗಿದೆ. ‘ಸಂಸಾರ ದುಃಖದಿಂದ ಬೆಂದ ಉತ್ತಮ’ರನ್ನು ಅನುಗ್ರಹಿಸುವುದಕ್ಕೋಸ್ಕರ ಪ್ರಭುವಾದ ಶಂಕರನಿಂದ ಸಂಗೀತ ವಿದ್ಯೆ ಪ್ರಕಾಶಿಸಲ್ಪಟ್ಟಿತು ಎಂದು ವಿದ್ಯಾರಣ್ಯಸ್ವಾಮಿಗಳು ಸಂಗೀತದ ‘ಗುರಿ’ ಮತ್ತು ಹಿರಿಮೆಯನ್ನು ಕುರಿತು ಹೇಳಿದ್ದಾರೆ.

ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಸಂಗೀತದ ಮಿಡಿತ

ಕನ್ನಡದ ಜನರು, ಕನ್ನಡದ ಕವಿಗಳು ಕುರಿತೋದದೆಯಂ ಕಾವ್ಯ ಪರಿಣತಮತಿಗಳಾಗಿದ್ದಂತೆ ಕುರಿತೋದದೆ ಗೇಯಪರಿಣತಮತಿಗಳೂ ಆಗಿದ್ದರು. ಮಹಾಕಾವ್ಯ ನಿರ್ಮಿತಿಗೆ ಅಷ್ಟಾದಶ ವರ್ಣನೆಗಳು ಹೇಗೆ ಅನಿವಾರ್ಯವೋ ಕನ್ನಡ ಕಾವ್ಯರಚನೆಗೆ ಸಂಗೀತ ವರ್ಣನೆಯೂ ಹಾಗೆಯೇ, ಅನಿವಾರ್ಯ ಎಂಬಂತೆ ಕನ್ನಡದ ಕವಿಗಳು ಪಾಲಿಸಿಕೊಂಡು ಬಂದಿರುವುದು ಕಂಡುಬರುತ್ತದೆ. ಕಾವ್ಯಗಳ ಮಾತು ಹಾಗಿರಲಿ, ಕೇವಲ ಲೋಕ ನೀತಿ, ಸಮಾಜ ಸುಧಾರಣೆಗಳನ್ನೇ ಗುರಿಯಾಗಿ ಇಟ್ಟುಕೊಂಡಿದ್ದ ಬಸವಣ್ಣನಂತಹ ವಚನಕಾರರೂ, ಸರ್ವಜ್ಞನಂತಹ ತ್ರಿಪದಿಕಾರರೂ, ನಿಜಗುಣ, ಸರ್ಪಭೂಷಣರಂತಹ ಹಾಡುಗಬ್ಬಿಗರೂ, ಪುರಂದರದಾಸರಂತಹ ಕೃತಿಕಾರರೂ, ಸಂಗೀತ ವರ್ಣನೆಯ ಸವಿಯಿಂದ ಬಾಯಿ ಚಪ್ಪರಿಸುತ್ತಲೇ ಬಂದಿದ್ದಾರೆ. ಕೇವಲ ಶಾಸ್ತ್ರಗ್ರಂಥಗಳನ್ನೇ ಬರೆಯಲು ಹೊರಟ ನೃಪತುಂಗ ನಾಗವರ್ಮರೂ ಕೂಡ ಸಂಗೀತದ ಬಗೆಗೆ ವಿಶೇಷ ಅಕ್ಕರೆ, ಮೆಚ್ಚುಗೆಯನ್ನು ವ್ಯಕತಪಡಿಸಿದ್ದಾರೆ. ಇಡೀ ಪ್ರಾಚೀನ ಕನ್ನಡಕಾವ್ಯಕೋಶದಲ್ಲಿ ಸಂಗೀತವನ್ನು ಸ್ವಲ್ಪವಾದರೂ ಪ್ರಸ್ತಾಪಿಸದ ಕವಿಗಳೇ ಇಲ್ಲ ಎನ್ನಬಹುದು. ಜಿನಭಕ್ತಿ-ಹರಭಕ್ತಿ-ಹರಿಭಕ್ತಿಗಳ ಅಮೃತ ಸಿಂಚನವು ಕನ್ನಡ ಸಾಹಿತ್ಯ ತೋಟದಲ್ಲಿ ತರತರದ ಸವಿಸೋನೆಯನ್ನು ತಂದಿವೆ. ಹೂಮಳೆಗರೆದಿವೆ.

ಜೈನಕವಿಗಳಿಗಂತೂ ಜಿನತೀರ್ಥಂಕರನ ಜನ್ಮಾಭಿಷೇಕ, ಪಟ್ಟಾಭಿಷೇಕ ಮತ್ತು ಮಹಾನಿರ್ವಾಣ ಕಾಲಗಳಲ್ಲಿ, ಇಂದ್ರನು ದಿವ್ಯದಿಂದ ಪರಿವಾರ ಸಮೇತನಾಗಿ ಇಳಿದು ಬಂದು ಓಲೈಸುವುದೂ, ಗೀತನರ್ತನಾದಿಗಳಿಂದ ಸೇವಿಸುವುದೂ ಅನುಲ್ಲಂಘನೀಯ ಕಾವ್ಯನಿಯಮವೇ ಆಗಿಹೋಗಿತ್ತು. ಹರಿಯಾಗಲಿ ಹರನಾಗಲಿ ಪರಮಜಿನನಿಗೆ ಸಂಗೀತ ಪ್ರೇಮದಲ್ಲಿ ಎಳ್ಳಷ್ಟೂ ಕಡಿಮೆಯಲ್ಲವೆಂಬುದನ್ನು ಬ್ರಾಹ್ಮಣ ಮತ್ತು ವೀರಶೈವ ಕವಿಗಳು ತೋರಿಸಿಕೊಟ್ಟಿದ್ದಾರೆ. ಕನ್ನಡ ಕವಿಗಳು ಸಂಗೀತ ಶಾಸ್ತ್ರದಲ್ಲಿ ಪಡೆದಿದ್ದ ಪಾಂಡಿತ್ಯವೂ, ವಿವರಜ್ಞಾನವೂ ಅಚ್ಚರಿಯನ್ನುಂಟುವಂತಹದು. ಕೆಲವರಂತೂ ಪ್ರಸಿದ್ಧ ಶಾಸ್ತ್ರಗ್ರಂಥಗಳಿಂದ ಸಂಸ್ಕೃತಶ್ಲೋಕಗಳನ್ನೇ ಉದ್ಧರಿಸಿಕೊಂಡಿದ್ದಾರೆ. ಅವರ ಸಂಗೀತೋಕ್ತಿಗಳ ಉಲ್ಲೇಖ ಮಾತ್ರದಿಂದಲೇ ಕನ್ನಡನಾಡಿನಲ್ಲಿ ಸಂಗೀತದ ಇತಿಹಾಸವನ್ನು, ಸಂಗೀತದ ಸಾಧನೆ, ಅದು ಸಾಧಿಸಿದ ಮಹತ್ತು, ಬೃಹತ್ತುಗಳನ್ನು ಗುರುತಿಸಬಹುದು.

ಕನ್ನಡನಾಡಿನಲ್ಲಿ ಸಂಗೀತ ವೃತ್ತಿಯಾಗಿ ಮತ್ತು ಪ್ರವೃತ್ತಿಯಾಗಿ

ಕನ್ನಡನಾಡಿನಲ್ಲಿ ಸಂಗೀತವನ್ನು ವೃತ್ತಿಯಾಗಿಯೂ, ಕಲಾವಿಲಾಸಕ್ಕಾಗಿಯೂ ಅಭ್ಯಾಸಮಾಡಲಾಗುತ್ತಿತ್ತು. ವೃತ್ತಿವಂತ ಅವನದ್ಧಾದಿ ವಾದ್ಯಕಾರರಿಗೆ ವಿದ್ಯಾವಂತರೆಂಬ ವೃತ್ತಿನಾಮವು ಕನ್ನಡದೇಶದಲ್ಲಿ ಬಳಕೆಯಲ್ಲಿತ್ತೆಂದು ಸಾರಂಗದೇವನೂ ಅವನ ಭಾಷ್ಯಕಾರನಾದ ಕನ್ನಡಿಗ ಕಲ್ಲಿನಾಥನೂ ಹೇಳುತ್ತಾರೆ. ಪುರಂದರದಾಸರೂ ಇದೇ ಅರ್ಥದಲ್ಲಿ ಶ್ರೀಕೃಷ್ಣನ ಆಸ್ಥಾನದ ವಾದಕ ಎಂಬರ್ಥದಲ್ಲಿ ‘ಬಿಜಾವಂತರಾವು’ ಎಂದು ಸೂಳಾದಿಯೊಂದರಲ್ಲಿ ಹೇಳಿಕೊಂಡಿದ್ದಾರೆ. ಸಂಗೀತಗಾರರನಿಗೆ ‘ವಿದ್ವಾಂಸ’ ಎಂದು ದಕ್ಷಿಣ ದೇಶದಲ್ಲೆಲ್ಲ ಪ್ರಚಾರವಾಗಿರುವ ವೃತ್ತಿಬಿರುದು, ಕನ್ನಡನಾಡಿನಲ್ಲಿ ಹದಿನೇಳನೆಯ ಶತಮಾನಕ್ಕಿಂತ ಮೊದಲೇ ಹುಟ್ಟಿದಾಗಿ ಕಂಡು ಬರುತ್ತದೆ. ‘ವಿದ್ವಾಮಸ’ ಎಂಬ ಪದವನ್ನು ಗೋವಿಂದ ವೈದ್ಯನು (ಕ್ರಿ.ಶ.೧೬೫೦) ಮೊಟ್ಟಮೊದಲಬಾರಿಗೆ ಉಪಯೋಗಿಸಿದ್ದಾನೆ.

ಸ್ತ್ರೀಪುರುಷರಿಬ್ಬರೂ ಸಂಗೀತವನ್ನು ಹವ್ಯಾಸವಾಗಿಯೂ ವೃತ್ತಿಯಾಗಿಯೂ ಆಶ್ರಯಿಸುತ್ತಿದ್ದ ಹೆಂಗಸರ ಸಂಖ್ಯೆಯೇ ಇದರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸಂಗೀತಗಾರರಿಗಾಗಿಯೇ ನಿರ್ದಿಷ್ಟ ಬೀದಿಗಳೂ, ಬಡಾವಣೆಗಳು ಕನ್ನಡನಾಡಿನ ನಗರಗಳಲ್ಲಿ ಇರುತ್ತಿದ್ದವೆಂದು ಪೊನ್ನ, ನೇಮಿಚಂದ್ರ, ಅಗ್ಗಳ, ಗೋವಿಂದ ವೈದ್ಯ ಮೊದಲಾದವರು ಹೇಳಿದ್ದಾರೆ.

ಸಂಗೀತ ಕಚೇರಿಗಳಿಗಾಗಿ ಪ್ರತ್ಯೇಕವಾಗಿ ಸಂಗೀತ ಶಾಲೆಗಳೇ ನಿರ್ಮಿತವಾಗಿದ್ದವೆಂದು, ರನ್ನ, ಅಗ್ಗಳ, ಕಮಲಭವ, ಸೋಮರಾಜದೇವ ಮತ್ತು ರತ್ನಾಕರವರ್ಣಿಗಳಿಂದ ತಿಳಿದುಬರುತ್ತದೆ. ಕರ್ನಾಟಕದಲ್ಲಿ ಬಹುಹಿಂದಿನ ಕಾಲದಿಂದಲೂ ಸಂಗೀತ ಕಚೇರಿಗಳಿಗೆ ‘ಕೇಳಿಕೆ’ ಎಂಬ ಹೆಸರೇ ರೂಢಿಯಲ್ಲಿತ್ತೆಂದು ‘ಕಮಲಭವನೇ’ ಮೊದಲಾದ ಕವಿಗಳ ಉಕ್ತಿಯಿಂದ ಕಂಡುಬರುತ್ತದೆ.

ಹಾಡುಗಾರಿಕೆಯಲ್ಲಿ ಒಬ್ಬರೇ ಹಾಡಿರುವ ಹಾಡು ‘ಏಕಲ’ವೆಂದೂ, ಇಬ್ಬರೂ ಕೂಡಿ ಹಾಡುವ ಹಾಡು ‘ಯಮಲ’ವೆಂದೂ, ಅನೇಕರು ಗುಂಪಾಗಿ ಸೇರಿ ಹಾಡುವುದು ‘ವೃಂದ’ ಎಂಬ ಮೂರು ಗಾನಪದ್ಧತಿಗಳನ್ನು ನಮ್ಮ ಕನ್ನಡದ ಕವಿಗಳಾದ ನಾಗಚಂದ್ರ, ಪಂಪ, ಪೊನ್ನ, ಅಗ್ಗಳ, ಜನ್ನ ಮುಂತಾದವರು ಉಲ್ಲೇಖಿಸಿದ್ದಾರೆ. ಹಾಡುಗಾರಿಕೆಗೆ ‘ದಂಡಿಗೆ’ಯೆಂಬ ವೀಣಾವಾದ್ಯ ಪ್ರಭೇದ ಅಥವಾ ಕೊಳಲಿನ ಪಕ್ಕವಾದ ಕಂಡುಬರುತ್ತದೆ. ತಂತಿವಾದ್ಯ, ಗಾಳಿವಾದ್ಯ, ಚರ್ಮವಾದ್ಯ ಮುಂತಾದ ವಾದ್ಯ ಮೇಳಗಳು ಕನ್ನಡಕಾವ್ಯಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತವೆ.

‘ಮೇಳ’ವೆಂಬ ಹೆಸರು ಪಂಪನಕಾಲದಿಂದಲೇ ಕಂಡುಬರುತ್ತದೆ. ವಾದ್ಯವೃಂದಗಳ ವ್ಯವಸ್ಥೆಗೆ ‘ಕುತಪ’ವೆಂಬ ಹೆಸರು. ಮೇಳದ ನಾಯಕನಿಗೆ ‘ನಯಕಾರ’ನೆಂದೂ, ಸಂಗೀತಕೃತಿಗಳ ಧಾತು-ಮಾತುಗಳನ್ನು ರಚಿಸುವ ವಾಗ್ಗೇಯಕಾರನಿಗೆ ‘ಬಯಕಾರ’ನೆಂದೂ ಹೆಸರಿದ್ದುದು ‘ರತ್ನಾಕರ ವರ್ಣಿಯಿಂದ ತಿಳಿದುಬರುತ್ತದೆ. ವಾದ್ಯ ಸಮೂಹಕ್ಕೆ ‘ಗೋಷ್ಠಿ’ ಎಂದೂ ಹಾಡುಗಾರಿಕೆಗೆ ಆಧಾರಶ್ರುತಿಯಾಗಿ ‘ಕೊಳಲ’ ವಾದ್ಯವನ್ನು ಉಪಯೋಗಿಸುತ್ತಿದ್ದರೆಂದೂ ನಮ್ಮ ಕನ್ನಡದ ಕವಿಗಳಾದ ಪಂಪ, ಜನ್ನ, ನಾಗಚಂದ್ರ ಮುಂತಾದವರು ತಮ್ಮ ಕಾವ್ಯದಲ್ಲಿ ವರ್ಣಿಸಿದ್ದಾರೆ.

ತಂಬೂರಿಯ ಉಪಯೋಗವು ಶ್ರುತಿಗಾಗಿ ನಮ್ಮ ಸಂಗೀತದಲ್ಲಿ ತಲೆದೋರಿದ್ದು ಸುಮಾರು ೧೫-೧೬ನೆಯ ಶತಮಾನಗಳಿಂದೀಚೆಗೆ ಮಾತ್ರ. ಇದಕ್ಕೆ ಮುಂಚೆ ಷಡ್ವ-ಪಂಚಮಿ ಭಾವಗಳನ್ನು ಮಾತ್ರ ಸ್ಫುರಿಸುವ ತಂಬೂರಿಯನ್ನು ಆಧಾರಶ್ರುತಿಗಾಗಿ ಬಳಸಲು ತಆತ್ವಿಕ ಹಾಗೂ ತಾಂತ್ರಿಕ ತೊಡರುಗಳಿದ್ದರಿಂದ ಆಧಾರ ಶ್ರುತಿಗಾಗಿ ಉಚ್ಚ ಮತ್ತು ತೀಕ್ಷ್ಣ ಸ್ವರವಿರುವ ಕೊಳಲನ್ನೇ ಆಧಾರಶ್ರುತಿಯನ್ನಾಗಿ ಬಳಸಲಾಗುತ್ತಿತು. ಹೀಗೆಯೇ ಆಧಾರಶ್ರುತಿಯಾಗಿ ತುಂಬುರುವೀಣೆಯನ್ನು ಉಪಯೋಗಿಸಲಾಗುತ್ತಿತ್ತೆಂದು ಪಾಲ್ಕುರಿಕೆ ಸೋಮ ಮತ್ತು ರತ್ನಾಕರವರ್ಣೆ ತಿಳಿಸಿದ್ದರೆ, ‘ತಂಬೂರಿ’ ಆಧಾರಶ್ರುತಿಯಾಗಿತ್ತೆಂದು ಗೋವಿಂದ ವೈದ್ಯ, ಶ್ರೀಪಾದರಾಯ ಮತ್ತು ಪುರಂದರದಾಸಾದಿಗಳು ಉಲ್ಲೇಖಿಸಿದ್ದಾರೆ.

ಕನ್ನಡಕಾವ್ಯಗಳಿಂದ ತಿಳಿಯಬಹುದಾದ ಬಹುಮುಖ್ಯವಾದ ಮತ್ತೊಂದು ಸಂಗತಿ ಎಂದರೆ ಆಧಾರಶ್ರುತಿಗಾಗಿ ಬಳಸುತ್ತಿದ್ದ ಸ್ವರ. ಪಂಚಮವೇ ಎಲ್ಲ ಸಂಗೀತ ಸಂದರ್ಭಗಳಲ್ಲಿಯೂ ಆಧಾರಶ್ರುತಿಯಾಗಿ ಬಳಕೆಯಾಗುತ್ತಿತ್ತು. ಏಕಲಾದಿ ಗಾಯನ ಸಂದರ್ಭಗಳಲ್ಲಿಯೂ, ಮೇಳ, ಸಂಪ್ರದಾಯಗಳಲ್ಲಿಯೂ ಪಂಚಮವು ಆಧಾರಸ್ವರವಾಗಿತ್ತೆಂದು ಅಗ್ಗಳ, ಸೋಮರಾಜಾದಿ ಕವಿಗಳು ವರ್ಣಿಸಿದ್ದಾರೆ. ಇದು ನಮ್ಮ ಸಂಗೀತ ಶಾಸ್ತ್ರ ಚರಿತ್ರೆಯ ಮೇಲೆ ಸ್ವಾರಸ್ಯವಾದ ಬೆಳಕು ಬೀರುತ್ತದೆ. ಕನ್ನಡ ಸಾಹಿತ್ಯದಲ್ಲಿ ಹೀಗೆ ಸಂಗೀತದ ಉಲ್ಲೇಖವು ಪಂಪನ ಆದಿಪುರಾಣದಿಂದ ಹಿಡಿದು ಬಹುತೇಕ ಎಲ್ಲ ಮುಖ್ಯ ಕಾವ್ಯಗಳಲ್ಲೂ ಬಂದಿದೆ. ಇವುಗಳ ಅಧ್ಯಯನದಿಂದ ‘ಸಂಗೀತ ಕಲೆಯು ನಡೆದು ಬಂದ ದಾರಿ, ವಾದ್ಯಗಳ ಬೆಳವಣಿಗೆ ಅವುಗಳ ವಾದನ ಶೈಲಿ, ರಾಗಗಳ ಚರಿತ್ರೆ ಮುಂತಾದ ಇತಿಹಾಸದ ಮೈಲಿಗಲ್ಲುಗಳನ್ನು ಗುರುತಿಸಲು ತುಂಬಾ ಸಹಾಯವಾಗುತ್ತದೆ.

ಕೆಲವು ಕವಿಗಳು ಪ್ರಾಸಂಗಿಕವಾಗಿ ಸಂಗೀತ ಹಾಗೂ ವಾದ್ಯಗಳ ವರ್ಣನೆ ಮಾಡಿದ್ದರೆ, ಮತ್ತೆ ಕೆಲವರು ಸಂಗೀತದ ವರ್ಣನೆಗೆಂದೇ ಸಂಧಿಗಳನ್ನು ಮೀಸಲಾಗಿಟ್ಟಿದ್ದಾರೆ. ಅಲ್ಲಿಯ ವಿಸ್ತಾರವಾದ ವರ್ಣನೆಯಿಂದ ವಾದ್ಯಗಳನ್ನು ಅವರು ಹಿಡಿಯುತ್ತದ್ದ ರೀತಿ, ನುಡಿಸುತ್ತಿದ್ದ ವೈಖರಿ ಕಣ್ಣಿಗೆ ಕಟ್ಟುತ್ತದೆ. ವಾದ್ಯಗಳ ನಾದ ಕವಿ ತುಂಬುತ್ತದೆ. ಹಾಡುಗಾರಿಕೆ ಇಂಪಾಗಿ ಕಿವಿಮುಟ್ಟುತ್ತದೆ. ನಮ್ಮ ಕನ್ನಡದ ಕವಿಗಳಿಗಿದ್ದ ಸಂಗೀತ ಜ್ಞಾನ ಅಚ್ಚರಿ ಹುಟ್ಟಿಸುತ್ತದೆ.

* * *