ಸಂಗೀತ ಮತ್ತು ಸಾಹಿತ್ಯದ ಅನುಪಮ ದಾಂಪತ್ಯ ಜೋಡಿಯಾದ ಈ ಗಾಯನ ಪ್ರಕಾರ ಕನ್ನಡನಾಡಿನಲ್ಲಿ ಯಾವ ದಿನ ಭಾವಗೀತೆ ತನ್ನ ಸಂಪೂರ್ಣತೆಯಿಂದ ಅನಾವರಣಗೊಂಡಿತೋ ಅಂದೇ, ಆ ಹೊತ್ತಿನಲ್ಲೇ, ಆ ಅಮೃತಗಳಿಗೆಯಲ್ಲೇ ಕಾವ್ಯದ ದನಿಯಾಗಿ ಹುಟ್ಟಿಕೊಂಡಿತು. ಕವಿಯ ಎದೆಮಿಡಿತವನ್ನು ನಾದದ ಮೂಲಕ ಪ್ರಕಾಶಪಡಿಸಲು ದನಿ ತೆರೆಯಿತು. ಕವಿ ತನ್ನ ಎದೆಯಾಳದಲ್ಲಿ ತಾನೇ ಹಾಡಿಕೊಂಡು ಸಂವೇನೆಯೇ ಭಾವಗೀತೆಯಾಯಿತು. ಶಾಸ್ತ್ರೀಯ ಸಂಗೀತ ಶಿಷ್ಟ ಸಂಗೀತವನ್ನು ಹೊತ್ತು ತಂದರೆ, ಸುಗಮಸಂಗೀತ ಸಾಹಿತ್ಯವನ್ನು ತಲೆಯ ಮೇಲಿಟ್ಟು ಮೆರೆಸಿಕೊಂಡು ಬಂದಿತು. ಕವಿತೆಯ ಅರ್ಥವನ್ನು ತನ್ನ ನಿರೂಪಣೆಯಿಂದ ವ್ಯಾಖ್ಯಾನಿಸಿ ಅದರ ಅರ್ಥವನ್ನು ವಿಸ್ತರಿಸುತ್ತಾ ಬಂದಿತು. ಕವಿತಾ ಸಂಗೀತವೇ ‘ಸುಗಮಸಂಗೀತ’ವೆಂಬ ಅರ್ಥಪೂರ್ಣ ಹೆಸರನ್ನು ಪಡೆಯಿತು. ಸಂಗೀತದ ಸ್ವರಗಳ ಬಣ್ಣಗಳಲ್ಲಿ ಕಾವ್ಯದ ಚಿತ್ರವನ್ನು ಯಥಾವತ್ತಾಗಿ, ಸುಂದರವಾಗಿ, ಅರ್ಥಪೂರ್ಣವಾಗಿ ಬಿಡಿಸುವುದನ್ನೇ ಸಂಕಲ್ಪಿಸಿಕೊಂಡು ಬಂದು ಕಾವ್ಯವನ್ನು ಬಳಸಿತು ಮತ್ತುಬೆಳೆಸಿತು. ಸಂಗೀತದ ಮೂಲಕ ಸಾಹಿತ್ಯದ ಎದೆಮಿಡಿತವನ್ನು ಹಿಡಿದು ತೋರಿಸುವ ಈ ಗಾಯನ ಪ್ರಕಾರದಲ್ಲಿ ಸಂಗೀತಕ್ಕಾಗಿ ಸಾಹಿತ್ಯ ಸೃಷ್ಟಿಯಾಗದೆ, ಸಾಹಿತ್ಯಕ್ಕಾಗಿ ಸಂಗೀತ ಸಂಯೋಜನೆಯಾಯಿತು.

ಸುಗಮಸಂಗೀತ ಕವಿಯ ಕವನವನ್ನು ತನ್ನ ಸ್ವರಸಾಮರ್ಥ್ಯದಿಂದ ಪುನರ್‌ಸೃಷ್ಟಿಮಾಡಿ ಕವಿ ಮನೋಭೂಮಿಕೆಯಲ್ಲಿ ಹುಟ್ಟಿಕೊಂಡ ಭಾವನೆಗಳನ್ನು, ವಿಚಾರಗಳನ್ನು ಜನಸಾಮಾನ್ಯರಿಗೆ ಸುಗಮವಾಗಿ, ಸುಲಭವಾಗಿ ತಲಪಿಸುವ ಮಾಧ್ಯಮವಾಯಿತು. ಅರಿಸ್ಟಾಟಲ್ ಹೇಳಿದಂತೆ ಭಾಷೆ ತಾನು ನೀಡಲಾಗದ ಅನುಭವಗಳನ್ನು ಅದು ಸಂಗೀತದ ಸಾಹಚರ್ಯ ಪಡೆದುಕೊಂಡಾಗ, ಪರಿಣಾಮಕಾರಿಯಾಗಿ ಹೇಳಿತು. ಏಕೆಂದರೆ ಎಲ್ಲಾ ಕಾಲದಲ್ಲೂ ಎಲ್ಲ ದೇಶದಲ್ಲೂ ಅಕ್ಷರಸ್ಥರ ಸಂಖ್ಯೆ ಕಡಿಮೆಯಿರುತ್ತದೆ. ಅಕ್ಷರಸ್ಥರಾದವರಲ್ಲೂ ಸಾಹಿತ್ಯಕೃತಿಯನ್ನು ಅಧ್ಯಯನ ಮಾಡಬಲ್ಲ, ಅರ್ಥಮಾಡಿಕೊಳ್ಳಬಲ್ಲ, ಸಾಮರ್ಥ್ಯ ಇರುವ ಜನರ ಸಂಖ್ಯೆ ಇನ್ನೂ ಕಡಿಮೆಯಿರುತ್ತದೆ. ಜೊತೆಗೆ ಸಂಗೀತ ಕಲೆ ಮನಸ್ಸನ್ನು ಆಕರ್ಷಿಸುವಷ್ಟು ಸುಲಭವಾಗಿ ಮತ್ತಾವ ಕಲೆಯೂ ಆಕರ್ಷಿಸಲಾರದು. ಮಾತು ಅಥವಾ ಸಾಹಿತ್ಯವಲ್ಲದ ಅನ್ಯಕಲಾಮಾಧ್ಯಮಗಳು ‘ಭಾವ’ಗಳನ್ನು ಮಾತಿಗಿಂತಲೂ ಚೆನ್ನಾಗಿ ಅಥವಾ ತೀಕ್ಷ್ಣವಾಗಿ ತೋರಿಸಿಕೊಡಬಲ್ಲವಾದರೂ ಭಾವಕ್ಕೆ ಕಾರಣವಾದ ಮಾನಸಿಕ ವಿಚಾರ ಸರಣಿಯನ್ನು ಅವು ತೋರಿಸಿಕೊಡಲಾರವು. ಮಾತಿಲ್ಲದ ಗೀತವಾದ್ಯಗಳು, ವೀಣೆ, ಪಿಟೀಲು, ಕೊಳಲು, ಮೃದಂಗ ಇತ್ಯಾದಿಗಳು ಕಂಪು ಹೊರಡಿಸಬಲ್ಲ ನಾದತರಂಗಗಳಿಂದ ನಮ್ಮಲ್ಲಿ ದುಃಖ, ಹಿಗ್ಗು, ಕುಗ್ಗು, ಉಕ್ಕು, ಸೊಕ್ಕು ಮೊದಲಾದ ಭಾವಗಳನ್ನು ಇತರರಲ್ಲಿ ಚೆನ್ನಾಗಿ ಪ್ರೇರೇಪಿಸಬಲ್ಲವು. ಹಾಗೆಯೇ ತಾವೂ ಪ್ರಕಟಿಸಬಲ್ಲವು. ಆದರೆ ಅವು ಏತರಿಂದಾದವು; ಯಾವ ಕಾರಣದಿಂದ ಆ ದುಃಖವೋ, ಸುಖವೋ ಉಂಟಾಯಿತು, ಅದರಿಂದ ಮನಸ್ಸಿಗೆ ಏನೆಲ್ಲ ತೋಚುತ್ತದೆ ಎಂಬ ವಿವರಗಳನ್ನೆಲ್ಲಾ ತಿಳಿಸಬೇಕಾದ ಸಮಯದಲ್ಲಿ ಅವುಗಳ ಪಾತ್ರ ಸಲ್ಲದು. ಭಾವಗಳಿಗೆ ಸೂಕ್ಷ್ಮತೆ, ವಿಸ್ತಾರ, ತೀವ್ರತೆ, ಮಂದತೆ ಮೊದಲಾದ ಗುಣಗಳನ್ನು ಅವು ಒದಗಿಸಬಲ್ಲುವಾದರೂ ಭಾಷೆ ಮಾಡಬಲ್ಲ ಕಾರಣ ನಿವೇದನೆಯ ಶಕ್ತಿ, ಅವಕ್ಕಿಲ್ಲ. ಅಂದರೆ ನಮ್ಮ ಮನಸ್ಸಿನಲ್ಲಿ ನಡೆಯುತ್ತಿರುವ ವಿಚಾರ ಕಲ್ಪನೆಗಳನ್ನು ಇನ್ನೊಬ್ಬರಿಗೆ ಹೆಚ್ಚು ಕಡಿಮೆ ಅದೇ ರೀತಿಯಲ್ಲಿ ವಿವರಿಸುವ ಕೆಲಸ ಭಾಷೆಯಿಂದ ಮಾತ್ರ ಸಾಧ್ಯ. ಆದರೆ ಸಂಗೀತ, ನೃತ್ಯಾದಿ ಕಲೆಗಳು ನಮ್ಮಲ್ಲಿ ಉಂಟುಮಾಡುವ ಪ್ರೇರಣೆಗಳು ಭಾವಗಳಿಗೆ ಸಂಬಂಧಿಸಿದವು. ಗೀತ, ನೃತ್ಯಗಳಂತಹ ಮಾಧ್ಯಮಗಳ ಪರಿಣಾಮ, ಭಾಷೆಗಿಂತಲೂ ಹೆಚ್ಚಿನ ಪ್ರಚೋದನೆಗೆ ಕಾರಣವಾಗಬಲ್ಲದು ಸಾಹಿತ್ಯಕ್ಕೆ ಸಂಗೀತ ಪ್ರವೇಶ ಮಾಡಿದ್ದು ಈ ಕಾರಣಕ್ಕೆ ಇರಬಹುದು. ಉತ್ಕೃಷ್ಟವಾದ ಸಾಹಿತ್ಯ, ವಾದ್ಯ ಸಂಗೀತದೊಂದಿಗೆ ಕೂಡಿದ ಹಾಡುಗಾರಿಕೆ, ಹಾಡುವವರ ಹಾಗೂ ಕೇಳಿದವರ ಮನಃಸ್ಥಿತಿಯನ್ನು ಸಮಸ್ಥಿತಿಗೆ ತರುತ್ತವೆ. ಇದೇ ಕಾರಣಗಳಿಂದ ಸಾಮಾನ್ಯವಾಗಿ ಎಲ್ಲ ದೇಶಗಳಲ್ಲೂ ಕಾವ್ಯವನ್ನು ಹಾಡುವ ಪದ್ಧತಿ ರೂಢಿಗೆ ಬಂತು ಗಾಯಕರು ಕವಿಯ ಮನೋಭೂಮಿಕೆಯಲ್ಲಿ ಸಿದ್ಧವಾದ ಭಾವಗಳನ್ನು ಅದರೊಂದಿನ ವಿಚಾರಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಸಾಂಸ್ಕೃತಿಕ ರಾಯಭಾರಿಗಳಾದರು. ಸಂಗೀತದಲ್ಲಿ ಅಭಿರುಚಿಯಿರುವವರಿಗೆ ಸಾಹಿತ್ಯದಲ್ಲಿಯೂ ಅಭಿರುಚಿಯುಂಟಾಯಿತು. ಸಾಹಿತ್ಯಾಭಿರುಚಿಯಿಂದ, ಜ್ಞಾನದ, ತಿಳುವಳಿಕೆಯ ಗುಣಮಟ್ಟವೂ ಔನ್ನತ್ಯಕ್ಕೇರಿತು. ಕವಿತಾಸಂಗೀತ ಸುಗಮವಾಗಿ ಸಹೃದಯರ ಹೃದಯವನ್ನು ಪ್ರವೇಶ ಮಾಡುತ್ತ, ಹೊಸ ದಿಗಂತವನ್ನು ತೆರಯಿತು.

ಸುಗಮಸಂಗೀತ, ಕವಿಯ ಸೃಷ್ಟಿಗೂ, ಸಹೃದಯರ ರಸಾನುಭವಕ್ಕೂ ನಡುವೆ ಸೇತುವೆಯಂತೆ, ಕಾಲುವೆಯಂತೆ ಶಕ್ತಿವಾಹ ತಂತಿಯಂತೆ ಪ್ರಾರಂಭವಾಯಿತು. ಸಂಗೀತದ ರೆಕ್ಕೆಯನ್ನೇರಿ ಹಾರುವ ಭಾವಗೀತೆ ಸಹೃದಯರಿಗೆ ನೇರವಾದ ರಸಾನುಭವವನ್ನು ನೀಡಲು ಸಮರ್ಥವಾಯಿತು. ಅಲ್ಲದೆ ಅವರ ರಸಗ್ರಹಣ ಶಕ್ತಿಯನ್ನು ಉನ್ನತಸ್ತರಕ್ಕೇರಿಸಿತು. ಭಾಷೆಯ ಮರ್ಯಾದೆಯನ್ನು ಕಾಯುವ ಹೊಣೆಗಾರಿಕೆ ಹೊತ್ತುಕೊಂಡಂತೆ ಸಂಗೀತದ ಗೌರವವನ್ನು ಉಳಿಸುವ ಜವಾಬ್ದಾರಿಯನ್ನೂ ಪಡೆದುಕೊಂಡಿತು. ಸಂಗೀತದ ಶಾಸ್ತ್ರೀಯತೆಗೆ ಪ್ರಾಮುಖ್ಯತೆ ನೀಡದೆ, ಅದರ ಮಾಧುರ್ಯ ಸೌಂದರ್ಯವನ್ನು ಉಳಿಸಿಕೊಂಡು, ಅದರ ಅನಿಯಂತ್ರಿತ ಗೀತಗುಣದ ಅಭಿವ್ಯಕ್ತಿಯಲ್ಲಿ, ಕಾವ್ಯದ ಜೀವಸತ್ವವನ್ನು ಪದ, ಲಯ, ಯತಿ, ವಿನ್ಯಾಸವನ್ನು ಎತ್ತಿಹಿಡಿಯಿತು. ನಾದದಿಂದ ಕಾವ್ಯೋದ್ದಿಪನಗೊಳಿಸುತ್ತಾ ಮಿಂಚಿನವೇಗದಲ್ಲಿ ಸಹೃದಯನನ್ನು ಭಾವಪರವಶನನ್ನಾಗಿ ಮಾಡಿತು.

ಸಂಗೀತದ ಬಗೆಗೆ ಹಿಂದು ಮುಂದು ತಿಳಿಯದ, ಆ ಶಾಸ್ತ್ರದ ಪರಿಚಯವೂ, ಜ್ಞಾನವೂ ಇರದ ಸಾಮಾನ್ಯ ಕೇಳುಗನಲ್ಲೂ ನಾದದ ರಿಂಗಣವನ್ನುಂಟುಮಾಡಿ ಬಾಯಿ ಚಪ್ಪರಿಸುವಂತೆ, ಗೀತೆಗೆ ಆತ್ಮಿಯನಾಗುವಂತೆ, ತನ್ಮಯನಾಗಿ ತನ್ನ ತಾನು ಮರೆಯುವಂತೆ ಮಾಡಿತು. ಭಾವಗೀತೆ ಹೇಗೆ ಕ್ಷಣವೊಂದರ ಸ್ಮಾರಕವಾಗಿ ಹುಟ್ಟಿತೋ ಹಾಗೆಯೇ ಅದು ಸುಗಮಸಂಗೀತದಲ್ಲಿ ಅಮೂರ್ತವಾಗಿ ಅನಾವರಣಗೊಂಡಿತು. ಹಾಗೆ ಅನಾವರಣಗೊಳ್ಳುವಾಗ ಭಾವಗೀತೆಯಲ್ಲಿ ನಾದದ ಜೀವಸಂಚಾರ ಮೂಡಿಸಿ ಚಿರಂತನವಾದ ಸಂದೇಶವನ್ನೂ ಮತ್ತು ಮಾಧುರ್ಯವನ್ನೂ ಕೇಳುಗನಿಗೆ ತಿಳಿಸಿ ಉಳಿಸಿಹೋಯಿತು. ಪುಸ್ತಕದೊಳಗಿನ ಭಾವಗೀತೆ ಪರಿಮಳವಿಲ್ಲದ ಅರೆಬಿರಿದ ಮೊಗ್ಗಾದರೆ, ಸುಗಮಸಂಗೀತ ತನ್ನ ಗಂಧರ್ವ ಸ್ಪರ್ಶದಿಂದ ಅದನ್ನು ಪೂರ್ಣವಾಗಿ ಅರಳಿದ ಪರಿಮಳ ಕುಸುಮವನ್ನಾಗಿ ಮಾಡಿತು. ನಮ್ಮ ಸುಗಮಸಂಗೀತಕಾರರು ಘಮಘಮಿಸುವ ಹೂಗಳನ್ನು ಮನೆಮನೆಗೆ ಕೊಂಡೊಯ್ದು ಹಂಚುವ ಹೂವಾಡಗಿತ್ತಿಯರಂತೆ ಹೆಸರಾಂತ ಕವಿಗಳ ಕವಿತೆಗಳನ್ನು ಜನಮನಕ್ಕೆ ತಲಪಿಸಿದರು.

ಜನರ ಮನೆಮನದ ಅಂಗಳದಾಟಿ, ಕೋಣೆಯಲ್ಲಿ ಕುಳಿತ. ಸುಗಮಸಂಗೀತ ಶಬ್ದಗಳಿಗೆ ಹೊಸ ಅರ್ಥವನ್ನು ನೀಡುತ್ತಾ, ಕಾವ್ಯಾರ್ಥವನ್ನು ವಿಸ್ತರಿಸಿತು. ಭಾಷೆಯನ್ನೂ ವಿಸ್ತರಿಸಿತು. ಬದುಕಿನ ಅನುಭವಗಳೂ ವಿಸ್ತಾರವಾದವು. ಅಭಿರುಚಿಗಳು ಮತ್ತಷ್ಟು ಹಿಗ್ಗಿದವು. ಕವಿತಾಶರೀರಿಯಾದ ಸುಗಮಸಂಗೀತ ಅರ್ಥದ ಅಕ್ಷಯಪಾತ್ರೆಯಾಯ್ತು. ಗೋಚರಕ್ಕಿಂತ ಹೆಚ್ಚು ಅಗೋಚರವಾಗಿ ಕೇಳುತ್ತಾ ಹೋದಷ್ಟೂ ನವೀನವಾಯ್ತು. ಎಷ್ಟು ಹೇಳಿದರೂ, ಇನ್ನಷ್ಟು ಚಿಮ್ಮುವ ಅರ್ಥ-ಭಾವ ಕಾರಂಜಿಗಳ ಸಮ್ಮಿಶ್ರಣವಾಯ್ತು. ಕೇಳುಗರ ಬದುಕು, ನಂಬಿಕೆ, ಅನುಭವಗಳಿಗನುಸಾರವಾಗಿ ಅವರೊಳಗೆ ಇರುವ ಅಮೂರ್ತ ಭಾವ ಭಾವನೆಗಳಿಗ ಅದು ಆಕೃತಿಗಳನ್ನು ನೀಡುತ್ತಾ, ಅವರ ಮನಸ್ಸಿನ ಭಾವ – ನಾದ – ಅನುಭವಗಳಿಗನುಸಾರವಾಗಿ ಅರ್ಥವಾಗತೊಡಗಿತ್ತು.

‘ಸುಗಮಸಂಗೀತ’ವೆಂಬ ಗಾಯನಪ್ರಕಾರ ತನ್ನ ಹೆಸರಿನ ಅನ್ವಯಾರ್ಥದಂತೆ ಸುಗಮವೂ ಅಲ್ಲದ, ಸುಲಭವೂ ಅಲ್ಲದ ಗಾಯನ ಪ್ರಕಾರವಾಯಿತು. ಕೇವಲ ಸಂಗೀತದ ದೃಷ್ಟಿಯಿಂದ ನೋಡಿದಾಗ ಅದು ಶಾಸ್ತ್ರವೂ ಕಲೆಯೂ ಎರಡೂ ಬೆರೆತ ವಿಶಿಷ್ಟ ಪ್ರಕಾರವಾಯಿತು. ಶಾಸ್ತ್ರದ ನಿಯಮ ನಿಷ್ಠುರತೆ ಮತ್ತು ಕಲೆಯ ಸ್ವಾತಂತ್ರ್ಯ ಎರಡನ್ನೂ ಒಳಗೊಂಡಿತು. ಶಬ್ದಕ್ಕಿರುವ ಅರ್ಥ ಮತ್ತು ನಾದ ಶಕ್ತಿಗಳನ್ನು ಬಳಸಿಕೊಂಡು ‘ಗೀತದ ಭಾವಪ್ರತಿಮೆ’ಯನ್ನು ಮೂಡಿಸುವ ಸುಗಮಸಂಗೀತ ನಾದದ ಲಯಬದ್ಧವಾದ ಸ್ವರಗಳನ್ನು ಮಾಧ್ಯಮವನ್ನಾಗಿ ಬಳಸಿಕೊಂಡಿತು. ಕವಿತೆಯಲ್ಲಿ ಅರ್ಥ ಮುಖ್ಯವಾದಂತೆ, ಹಾಡಿನಲ್ಲಿ ಭಾವಮುಖ್ಯ ಎಂಬುದನ್ನು ನಿರೂಪಿಸಿತು.

ಸುಗಮಸಂಗೀತದಲ್ಲಿ ಶಿಷ್ಟ ಸಂಗೀತದ ಶಾಸ್ತ್ರದ ಸಿದ್ಧಾಂತಕ್ಕಿಂತ ಅದರ ಕಲಾನೈಪುಣ್ಯತೆಯೇ, ಅದರ ನಿರೂಪಣೆಯೇ ಜೀವಾಳವಾಗಿ ಜನಪ್ರಿಯವಾಯಿತು. ಭಾವಭಾಷೆಗಳ ಸುಂದರ ಸಂಲಗ್ನ ಭಾವಗೀತದಲ್ಲಿ ಮೂಡಿದಂತೆ, ಸಾಹಿತ್ಯ ಸಂಗೀತಗಳ ಸಹಜ ಮೈತ್ರಿ ಸುಗಮಸಂಗೀತದಲ್ಲಿ ಮೂಡಿತು. ಭಾವಗೀತೆಯ ಭಾವದ ಕಾವು-ನಾದದ ಮೋದ ಇವುಗಳ ಹದವಾದ ಅಳತೆವರಿತ ಸಮ್ಮಶ್ರಣದಿಂದ ಸುಗಮಸಂಗೀತಪಕ್ವವಾಗಿ ರೂಪುಗೊಂಡಿತು. ಸಂಗೀತದ ಮಾಧುರ್ಯವನ್ನು ಸಾಹಿತ್ಯವೂ, ಸಾಹಿತ್ಯದ ಸ್ಥಾಯಿತ್ವವನ್ನು ಸಂಗೀತವೂ ಹೊತ್ತುಕೊಂಡು ಅವಿನಾ ಸಂಬಂಧಿಗಳಾದವು.

ಸಾಮಾನ್ಯ ಕೇಳುಗರನ್ನೂ ಆಕರ್ಷಿಸುತ್ತ, ಸಮುದಾಯಗಳನ್ನು ಒಗ್ಗೂಡಿಸಿದ ಸುಗಮಸಂಗೀತ ‘ಜಾತಿ, ಧರ್ಮ, ರಾಜಕೀಯ, ಬೇಧಭಿತ್ತಿಗಳನ್ನು ದಾಟಿ ನೇರವಾಗಿ ಮನವನ್ನು ಮುಟ್ಟಿತು. ಜನರನ್ನು ತಟ್ಟಿ ಎಚ್ಚರಿಸಿತು. ಆತ್ಮೀಯವಾಯಿತು.

ಸುಗಮಸಂಗೀತ ಮಾಡಿದ ದೊಡ್ಡ ಕೆಲಸವೆಂದರೆ ಪುಸ್ತಕಗಳಲ್ಲಿ ಬೆಚ್ಚಗೆ ಪವಡಿಸಿದ್ದ ಕಾವ್ಯವನ್ನು ಕರ್ನಾಟಕದ ಉದ್ದಗಲ ಗಾಳಿಯಲ್ಲಿ ತೇಲಿಬಿಟ್ಟು ರಸಿಕರ ಹೃದಯವನ್ನು ತಟ್ಟಿದ್ದು. ಇದರಿಂದ ಕವಿ-ಗಾಯಕ-ಶ್ರೋತೃಗಳ ನಡುವೆ ಮಧುರವಾದ ತ್ರಿವಳಿ ಬಾಂಧವ್ಯ ಬೆಸುಗೆಗೊಂಡಿತು. ಇದು ಇಪ್ಪತ್ತನೆಯ ಶತಮಾನದ ಕೊನೆಯ ದೊಡ್ಡ ಸಾಧನೆಯಾಯ್ತು.

ಸುಗಮಸಂಗೀತದ ಮೂಲ

ಸುಗಮಸಂಗೀತವೆಂಬ ಗಾಯನ ಶೈಲಿಗೆ ಅದರ ಹೆಸರು ಮಾತ್ರ ಹೊಸದು. ಆದರೆ ಅದರ ಅಂತರಾತ್ಮ ಸಾವಿರಾರು ವರ್ಷಗಳಷ್ಟು ಹಿಂದಿನದ್ದು. ಈ ಗಾಯನ ಪದ್ಧತಿಗೆ ಹಲವಾರು ಮೂಲ ಆಕರಗಳು ನಮಗೆ ದೊರೆಯುತ್ತವೆ. ಸುಗಮಸಂಗೀತದ ಮೂಲಕ ಆಕರಗಳನ್ನು ಹೀಗೆ ಸ್ಥೂಲವಾಗಿ ಹೆಸರಿಸಬಹುದು.

೧. ಶಾಸ್ತ್ರೀಯ ಸಂಗೀತ
೨. ಜನಪದ ಗೀತೆಗಳು
೩. ಕಾವ್ಯಗಾಯನ ಕಲೆ
೪. ವಚನ ಮತ್ತು ದಾಸರ ಪದಗಳು
೫. ಹೊಸಗನ್ನಡದ ಭಾಷೆ
೬. ಪಾಶ್ಚಾತ್ಯ ಚಿಂತನೆಯ ವಸ್ತು ವಿಚಾರ
೭. ರಂಗಗೀತೆಗಳು
೮. ಮರಾಠಿ ಗೋಡಗಾಣ ಗೀತೆಗಳು

-ಇವೆಲ್ಲವುಗಳಿಂದ ಬೇರೆಯೇ ಆದ ಸುಗಮಸಂಗೀತ ತನ್ನದೇ ಆದ ಒಂದು ವಿಶಿಷ್ಟ ಹದದಲ್ಲಿ, ವಿನೂತನವಾದ ರುಚಿಯಲ್ಲಿ ಇವೆಲ್ಲವನ್ನೂ ಮೈಗೂಡಿಸಿಕೊಂಡ ಸ್ವತಂತ್ರವಾದ ಹಾಡುಗಾರಿಕೆಯಾಗಿದೆ.

ಶಾಸ್ತ್ರೀಯ ಸಂಗೀತ ಮತ್ತು ಸುಗಮಸಂಗೀತ

ಸುಗಮಸಂಗೀತ ಕವಿಯ ಕವನವನ್ನು ತನ್ನ ಸ್ವರ ಸಾಮರ್ಥ್ಯದಿಂದ ಪುನರ್ ಸೃಷ್ಟಿಮಾಡಿ, ಕವಿಯ ಮನೋಭೂಮಿಕೆಯಲ್ಲಿ ಹುಟ್ಟಿಕೊಂಡ ಭಾವನೆಗಳನ್ನು, ವಿಚಾರಗಳನ್ನು ಜನಸಾಮಾನ್ಯರಿಗೆ ಸುಗಮವಾಗಿ, ಸುಲಭವಾಗಿ ತಲುಪಿಸುವ ಮಾಧ್ಯಮವಾಗಿದೆ. ಕವಿತೆಯ ಶಬ್ದಗಳಿಗೆ ಹೊಸ ಅರ್ಥವನ್ನು ನೀಡುತ್ತಾ, ಕಾವ್ಯಾರ್ಥವನ್ನು ವಿಸ್ತರವಾಗಿ ಹಿಗ್ಗಿಸುವುದೇ, ಅದರ ವೈಶಿಷ್ಟ್ಯವಾಗಿದೆ. ಇದು ಒಂದು ರೀತಿಯ ಕವಿತಾ ಸಂಗೀತವಾಗಿದೆ. ಇದು ಹುಟ್ಟುವುದೇ ಕವಿತೆಯ ದರ್ಶನದಿಂದ. ಈ ಪ್ರಕಾರದ ಸಂಗೀತದ ಸುಗಮತ್ವು ಎರಡು ಬಗೆಯಲ್ಲಿ ದಒರಕುತ್ತದೆ. ಮೊದಲನೆಯದು ರಸಿಕರು ಇದನ್ನು ಸುಗಮವಾಗಿ ಆಸ್ವಾದಿಸಬಹುದು ಎಂದು ಎರಡನೇಯದು ಕಲಿಯುವ ಅಭ್ಯಾಸಿಗಳಿಗೆ ಇದು ಶಾಸ್ತ್ರೀಯ ಸಂಗೀತಕ್ಕಿಂತ ಸುಲಭ ಮಾರ್ಗ ಎಂದು. ಸುಲಭವೆಂದು ತೋರುವುದುದಾದರೂ ‘ಸುಗಮಸಂಗೀತ’ ಸುಲಭವಾಗಿ ಕೈಗೆ ಎಟುಕುವ ಗಾಯನ ಪ್ರಕಾರವಂತೂ ಅಲ್ಲ. ಶಾಸ್ತ್ರೀಯ ಸಂಗೀತದ ಆರಂಭಿಕ ಹಂತಗಳ ಕಠಿಣ ಪಾಠವಿಲ್ಲದಿದ್ದರೂ ಶಾಸ್ತ್ರೀಯವನ್ನು ಬಿಟ್ಟು ಸುಗಮಸಂಗೀತ ಅರಮನೆ ಬೆರಗು ಮೂಡಿಸುತ್ತ ನಿಂತಿದೆ. ಒಂದೊಂದು ಸಲದ ಗಾಯನದಲ್ಲೂ, ಅದು ಬಣ್ಣಬಣ್ಣದ ಮೆರುಗನ್ನು ತರಬಲ್ಲದು. ತರತರದ ಚಿತ್ತಾರವನ್ನು ಮೂಡಿಸಬಲ್ಲದು. ಕೋಗಿಲೆಯ ಇನಿಗಾನದಲ್ಲೂ ಹೊಸರುಚಿಯನ್ನು ಹುಟ್ಟು ಹಾಕಬಲ್ಲದು. ಬಿಳಿಯ ಬಣ್ಣದಿಂದ ಏಳು ಬಣ್ಣಗಳು ಹುಟ್ಟಿದಂತೆ, ಏಳು ಸ್ವರದಿಂದ ಸಂಗೀತ ಹುಟ್ಟಿದಂತೆ, ಶಾಸ್ತ್ರೀಯ ಸಂಗೀತದ ಸ್ವರಗಳಲ್ಲಿ ವಿನೂತನವಾದ ರಾಗ ತರಂಗಗಳನ್ನು ಸೃಷ್ಟಿಮಾಡುವ ಸುಗಮಸಂಗೀತ, ಶಾಸ್ತ್ರೀಯ ಸಂಗೀತದ ನೆಲದಿಂದ ಸ್ವರ ಕಲ್ಪನೆಯ ಬಾನಿನಲ್ಲಿ ಹಕ್ಕಯಂತೆ ಸ್ವಚ್ಛಂದದಿಂದ ಹಾರಿ ನಲಿಯುತ್ತ ಹೊಸಲೋಕವನ್ನು ತೆರೆದಿದೆ.

ಶಾಸ್ತ್ರೀಯ ಸಂಗೀತ ಮತ್ತು ಸುಗಮಸಂಗೀತ ಎರಡನ್ನೂ ಹೋಲಿಸಿ ನೋಡಿದರೆ, ಸುಗಮಸಂಗೀತಕ್ಕೆ ರಾಗದ ಮಿತಿಯಾಗಲಿ, ಚೌಕಟ್ಟಾಗಲಿ ಇಲ್ಲ. ಆದರೆ ಶಾಸ್ತ್ರೀಯ ಸಂಗೀತದಲ್ಲಿ ರಾಗಗಳಿಗೆ ಒಂದು ಚೌಕಟ್ಟು, ಮತ್ತು ಒಂದು ರೀತಿಯ, ನಿರ್ಬಂಧಕ್ಕೊಳಪಟ್ಟ ಪರಿಮಿತಿ ಇರುತ್ತದೆ. ಸುಗಮಸಂಗೀತಕ್ಕೆ ಬೇಕಾಗಿರುವುದು ಶಬ್ದ ಚಿತ್ರಗಳ ಅಭಿವ್ಯಕ್ತಿ, ಅಂದರೆ ಕವಿತೆಯ ಶಾಬ್ಧಿಕ ಅಭಿವ್ಯಕ್ತಿಗೆ ಹೊಂದುವಂತಹ ರಾಗಸಂಯೋಜನೆ. ಅದು ಒಂದೇ ರಾಗವಾದರೂ ಆಗಿರಬಹುದು. ಅಥವಾ ಯಾವ ರಾಗಕ್ಕೂ ಹೊಂದದಂತಹ ಹೊಸ ಸ್ವರ ಸಂಚಾರಗಳೂ ಆಗಿರಬಹುದು. ಅದು ಕವಿತೆಯನ್ನು ನಾದದ ಮೂಲಕ ಅರ್ಥೈಸುತ್ತದೆ. ಕಿವಿಗೆ ಕೇಳುವ ಅರ್ಥವತ್ತಾದ ಶಬ್ದಗಳು ಸ್ವರಗಳು ಉಪಯೋಗಿಸಿಕೊಂಡ ವಾದ್ಯಗಳಿಂದ ಚಿತ್ರವತ್ತಾಗಿ ಕಣ್ಣಿಗೆ ಕಾಣಿಸುತ್ತದೆ. ತಾವು ಕಂಡ ಅನುಭವಗಳನ್ನು ನಾದದ ಮೂಲಕ ಕಟ್ಟಿಕೊಡುತ್ತವೆ. ಶಾಸ್ತ್ರೀಯ ಸಂಗೀತದಲ್ಲಿ ರಾಗ ವಿಜೃಂಭಿಸಿದರೆ, ಸುಗಮ ಸಂಗೀತದಲ್ಲಿ ಕವಿತೆ ಗರಿಬಿಚ್ಚಿ ಕುಣಿಯುತ್ತದೆ. ವಾದ್ಯ ಸಂಯೋಜನೆ, ಕವಿತೆಗೆ ಅರ್ಥಪೂರ್ಣವಾದ ಆವರಣವನ್ನು ಸೃಷ್ಟಿಮಾಡಿಕೊಡುತ್ತದೆ.

ಶಾಸ್ತ್ರೀಯ ಸಂಗೀತ ಮತ್ತು ಸುಗಮಸಂಗೀತ ಎರಡನ್ನೂ ತಾಳೆ ಮಾಡಿ ನೋಡಿದರೆ ಕೆಲವು ಅಂಶಗಳು ಮನದಟ್ಟಾಗುತ್ತವೆ. ಶಾಸ್ತ್ರೀಯ ಸಂಗೀತ ಒಂದು ರಾಗವನ್ನು ಅಥವಾ ಒಂದು ಕೃತಿಯನ್ನು ಸರ್ವಾಂಗ ಸುಂದರವಾಗಿ ಪ್ರಸ್ತುತಪಡಿಸಲು ಒಂದು ಗಂಟೆ ತೆಗೆದುಕೊಂಡರೆ, ಅಥವಾ ಅದಕ್ಕೂ ಹೆಚ್ಚು ಸಮಯ ತೆಗೆದುಕೊಂಡರೆ. ಸುಗಮಸಂಗೀತವಾದರೋ, ಐದು ಅಥವಾ ಆರು ನಿಮಿಷಗಳಲ್ಲೇ ತನ್ನ ಕವಿತೆಯನ್ನು ಅತ್ಯಂತ ಸುಂದರವಾಗಿ ನಿರೂಪಿಸುತ್ತದೆ. ಅಂದರೆ ಶಾಸ್ತ್ರೀಯ ಸಂಗೀತ ಒಂದು ಗಂಟೆಯ ಅವಧಿಯಲ್ಲಿ ಕೇಳುಗರನ್ನು ಮೆಚ್ಚಿಸುವಂತಹುದನ್ನು ಸುಗಮಸಂಗೀತ ಕೇವಲ ಕೆಲವೇ ನಿಮಿಷಗಳಲ್ಲಿ ಮಾಡುತ್ತದೆ. ಸುಗಮಸಂಗೀತದ ಅತಿಶಯತೆ ಇರುವುದೇ ಈ ಪ್ರಸ್ತುತಿಯಲ್ಲಿ. ಆದರೆ ಕಾಲದ ಕಲ್ಪನೆಗಿಂತ ಭಾವದ ಕಲ್ಪನೆಯೇ ಸುಗಮಸಂಗೀತದ ಜೀವಾಳವಾಗಿದೆ. ಭಾವದ ದರ ಪದರಗಳನ್ನು ಬಿಡಿಸಿ ತೋರಿಸುವ ಸುಗಮಸಂಗೀತಕ್ಕೆ ಶಾಸ್ತ್ರೀಯ ಸಂಗೀತದ ಜ್ಞಾನವಿದ್ದೇ ಇರಬೇಕಾಗುತ್ತದೆ. ಒಮ್ಮೆ ಹೇಳಿದ್ದನ್ನು ಮತ್ತೊಮ್ಮೆ ನೆನಪಿನಲ್ಲಿಟ್ಟು ಹಾಡಲು, ಮತ್ತು ಗೀತೆಯ ಭಾವಪ್ರಕಾಶನನದ ವ್ಯತ್ಯಾಸಗಳನ್ನು ಗುರುತಿಸಿಕೊಳ್ಳಲು ನಿಖರವಾದ ಸ್ವರಜ್ಞಾನವಿರಬೇಕಾಗುತ್ತದೆ. ನಿರೂಪಣೆಯ ಸಂಗತಿಗಳ ಸ್ತರಗಳನ್ನು ರೂಪಿಸಿಕೊಳ್ಳಲು ಮತ್ತು ಪ್ರಸ್ತುತಿಗೊಳಿಸಲು ಶಾಸ್ತ್ರೀಯ ಸಂಗೀತದ ಸ್ವರಗಳ ತಿಳಿವಳಿಕೆ ಬೇಕಾಗುತ್ತದೆ. ಹೀಗಾಗಿ ಶಾಸ್ತ್ರೀಯ ಸಂಗೀತದಷ್ಟೇ ಸಮಪ್ರಮಾಣದ ಸ್ವತಂತ್ರ ಸ್ಥಾಯಿತ್ವವುಳ್ಳ, ಗತಿಗಮನವುಳ್ಳ, ವ್ಯಕ್ತಿತ್ವವಿರುವ ಜೀವಂತಕಲೆ, ಸುಗಮಸಂಗೀತವಾಗಿದೆ. ಇದು ಶುದ್ಧ ಶಾಸ್ತ್ರೀಯ ಸಂಗೀತವಲ್ಲದಿದ್ದರೂ, ಶಾಸ್ತ್ರೀಯದಂತೆ ‘ಸ್ವರ’ಭಾರ ಕಸರತ್ತು, ತಾಳದಗತ್ತು, ಲೆಕ್ಕಾಚಾರವಿರದೆ, ಕಲಾತ್ಮಕವೂ, ವೈಜ್ಞಾನಿಕವೂ, ಸರಳವೂ ಆದ ಸಂಗೀತವಾಗಿದೆ. ಸಮರ್ಥ ಗಾಯನ ಪ್ರಸ್ತುತಿಯ ನೈಪುಣ್ಯದಿಂದ ಅಪೂರ್ವವೂ ಅನನ್ಯವೂ ಆದ ಅನುಭವವನ್ನು ಕೊಡುತ್ತದೆ. ಮನುಷ್ಯ ಬುದ್ಧಿಜೀವಿ ಹಾಗೂ ಭಾವಜೀವಿಯಾದುದರಿಂದ ಭಾಷೆ ಮತ್ತು ಗೀತೆ ಎರಡೂ ಅವನ ಮನದಿಂಗಿತವನ್ನು ವ್ಯಕ್ತಪಡಿಸುವ ಮಾಧ್ಯಮವಾಗಿದೆ. ನಾದ ಸಿದ್ಧಿಗೆ ಸಾಹಿತ್ಯಾಂಶದ ಅವಶ್ಯಕತೆ ಇಲ್ಲದಿದ್ದರೂ, ಬುದ್ಧಿಗಮ್ಯವಾದ ಅಭಿವ್ಯಕ್ತಿಗೆ ಸಂಗೀತದ ರಸಸ್ಪರ್ಶ ಅವಶ್ಯಕವಾಗಿದೆ. ಹೀಗಾಗಿ ಸಂಗೀತ, ಸಾಹಿತ್ಯ ಅಂದಿನಿಂದ ಇಂದಿನವರೆವಿಗೆ ಪರಸ್ಪರ ಕೈ ಕೈ ಹಿಡಿದುಕೊಂಡು ಇತಿಹಾಸದ ಹಾದಿಯಲ್ಲಿ ನಡೆದುಬರುತ್ತಿದೆ. ಕಆಲದ ಅಂದಂದಿನ ಅಭಿರುಚಿಗೆ ತಕ್ಕಂತೆ, ತುರ್ತಿಗೆ ಅನುಕೂಲವಾಗುವಂತೆ ಹೊರಳುತ್ತಾ, ಉರುಳುತ್ತಾ, ಬದಲಾವಣೆಯನ್ನು ಪಡೆಯುತ್ತಾ ಬಂದಿದೆ. ಇದು ಅನಿವಾರ್ಯವೂ, ಅವಶ್ಯವೂ ಹೌದು. ಬದಲಾವಣೆಯೇ ಜೀವಂತಿಕೆಯ ಲಕ್ಷಣವಾಗಿದೆ.

ಜನಪದ ಗೀತೆಗಳು ಮತ್ತು ಸುಗಮಸಂಗೀತ

‘ಜನವಾಣಿ ಬೇರು; ಕವಿವಾಣಿ ಹೂವು’- ಎಂಬ ಉಕ್ತಿಯಂತೆ ಜನಪದ ಸಾಹಿತ್ಯ ಹಾಗೂ ಜನಪದ ಸಂಗೀತ, ಶಿಷ್ಟ ಸಾಹಿತ್ಯ ಹಾಗೂ ಶಿಷ್ಟ-ಸಂಗೀತಕ್ಕೆ ಮೂಲವಾಗಿದೆ. ಈ ಬೇರುಗಳ ಮುಲವನ್ನು ಹುಡುಕಿಕೊಂಡು ಹೋದರೆ ಅದು ಸೃಷ್ಟಿಯಲ್ಲಿ ಮಾನವನ ಉಗಮದವರೆಗೂ ಹೋಗುತ್ತದೆ. ಸೃಜನಶೀಲನಾದ ಮಾನವ ಅನಾದಿಕಾಲದಿಂದಲೂ ತನ್ನ ದುಡಿಮೆಯ ಶ್ರಮನಿವಾರಣೆಗಾಗಿ, ಮನರಂಜನೆಗಾಗಿ, ದೈವದೇವರುಗಳ ಆರಾಧನೆಗಾಗಿ ಸಂಗೀತ ರೂಪದ ಸಾಹಿತ್ಯವನ್ನು ಕುಣಿತವನ್ನು ಬೆಳೆಸಿಕೊಂಡು ಬಂದಿದ್ದಾನೆ. ಅದು ಅವನ ನೋವು ನಲಿವುಗಳ ಅಭಿವ್ಯಕ್ತಿ ಮಾಧ್ಯಮವಾಗಿ ಬೆಳೆದದ್ದೇ ಅಲ್ಲದೆ ಅವನ ಜೀವನಾಭಿರುಚಿಯನ್ನೂ ತಿಳಿಸುತ್ತಾ ಬಂದಿದೆ. ಆದಿ ಕಾಲದಲ್ಲಿ ಇನ್ನೂ ಕವಿತ್ವವೂ, ಶಾಸ್ತ್ರವೂ ಶೈಶವದೆಶೆಯಲ್ಲಿದ್ದಾಗಲೇ, ಹಳ್ಳಿಯ ಹೊಲದ ಕಣದಲ್ಲಿ, ಹಬ್ಬ ಹುಣ್ಣಿಮೆಗಳಲ್ಲಿ, ಸುಖದುಃಖದ ಸಂದರ್ಭಗಳಲ್ಲಿ ಮಾನವ ತನ್ನ ಭಾವನೆಗಳನ್ನು ಹಾಡಿನ ಮೂಲಕ ಕುಣಿತದ ಮೂಲಕ ವ್ಯಕ್ತಪಡಿಸಿದ್ದಾನೆ. ಹೆಂಗಸರು, ಹೊಲದಲ್ಲಿ ಕೆಲಸ ಮಾಡುವ ರೈತರು ತಮ್ಮ ಕೆಲಸದ ಬಳಲಿಕೆಯನ್ನು ಮರೆಸಿಕೊಳ್ಳಲು, ಕುಟ್ಟುವಾಗ, ಬೀಸುವಾಗ, ಉಳುವಾಗ, ತೊಟ್ಟಿಲು ತೂಗುವಾಗ, ಮದುವೆಯ ಸಂಭ್ರಮದಲ್ಲಿ ನಲಿಯುವಾಗ, ಸಾವಿಗಾಗಿ ಅಳುವಾಗ, ಭಾರವನ್ನೆತ್ತುವಾಗ, ಬಂಡಿಯನ್ನು ಹೊಡೆಯುವಾಗ, ದೋಣಿಯನ್ನು ನಡೆಸುವಾಗ, ಕಾಳಗದ ಸಾಧನೆಗಳನ್ನು ಮಾಡುವಾಗ ಹಾಡುಗಳನ್ನು ಹೇಳುತ್ತಿದ್ದರು. ಹೇಳುತ್ತಿದ್ದರು. ಹೇಳುತ್ತಾ ಮುಂದುವರೆಸಿ ತಮ್ಮ ಅನುಭವವನ್ನೂ ಅದರೊಂದಿಗೆ ಕಟ್ಟುತ್ತಿದ್ದರು. ಹೀಗೆ ತಮ್ಮಕಾಯಕದೊಂದಿಗೆ ಹಾಡುತ್ತಿದ್ದ ಹೆಂಗಸರ ಮತ್ತು ಗಂಡಸರ ಉಸಿರಿಗನುಗುಣವಾದ ಲಯ ರಾಗ ಮತ್ತು ಛಂದಸ್ಸುಗಳು ತಾವಾಗಿಯೇ ಹುಟ್ಟಿಕೊಂಡವು. ಅವೇ ಜನರ ಮನೋಭಾವವನ್ನು ಬಿಂಬಿಸುತ್ತಾ, ಜನರಿಂದಲೇ ಸೃಷ್ಟಿಯಾಗಿ ಜನಪದ ಗೀತೆಗಳಾದವು.

ಹೀಗೆ ಜೀವನಾನುಭವದಿಂದ, ಜೀವನದ ಚಿತ್ರಣವನ್ನೇ ಹಾಡುತ್ತಾ ಪ್ರಾರಂಭವಾದ ಜನಪದ ಗೀತೆಗಳು ಸಾಹಿತ್ಯ -ಸಂಗೀತ ಎರಡೂ ದೃಷ್ಟಿಯಿಂದ ಸಹಜವೂ ಸುಂದರವೂ ಆದ ಗೀತೆಗಳಾದವು. ಸಾಹಿತ್ಯ ಮತ್ತು ಸಂಗೀತವೆರಡೂ ಪೂರಕವಾಗಿ ಒಂದಾಗಿ ಮೂಡಿ ಬೇರ್ಪಡದ ಅವಿನಾ ಸಂಬಂಧಿಗಳಾದವು. ಕವಿವರ್ಯ ರವೀಂದ್ರನಾಥ ಠಾಕೂರರು ಹೇಳುವಂತೆ ‘ಜಾನಪದ ಗೀತೆಗಳು ಜನತೆಯ ಮನಸ್ಸು ಮತ್ತು ಹೃದಯವನ್ನು ತಿಳಿಯಲು ನಮಗೆ ಸಹಕಾರಿಯಾಗಿವೆ. ಬೇರೆ ಬೇರೆ ಪ್ರದೇಶದ ಹಳ್ಳಿಯ ಹಾಡುಗಳಲ್ಲಿ ಕಂಡುಬರುವ ಸಮಾನಗುಣಗಳಿಂದ ಭಾರತದಾದ್ಯಂತ ಮಾನವ ಸ್ವಭಾವದ ವೈವಿಧ್ಯತೆಯಲ್ಲಿರುವ ಏಕತೆ ಕಾಣುತ್ತದೆ. ಎಲ್ಲ ದೇಶಗಳ ಲೋಕಗೀತೆಗಳನ್ನು ಸಂಗ್ರಹಿಸಿ, ಒಂದನ್ನೊಂದು ಹೋಲಿಸಿ ನೋಡಿದರೆ, ಎಲ್ಲಾ ಮಾನವ ಕುಲಕ್ಕೂ ಸಾಮಾನ್ಯವಾದ ಮನಸ್ಸು ಹೃದಯಗಳು ಅವುಗಳಲ್ಲಿ ಅಡಗಿರುವುದು ಕಂಡುಬರುತ್ತದೆ.

ಯಾವ ದೇಶದಲ್ಲಿಯೇ ಆಗಲಿ, ಯಾವ ಜನಾಂಗದಲ್ಲಿಯೇ ಆಗಲಿ ಸುತ್ತಮುತ್ತಲಿನ ವಾತಾವರಣದ ಮೇಲಿಂದ ಮಾನವನ ಸಂಸ್ಕಾರಗಳು ಮಾತ್ರ ಬದಲಾಗುತ್ತವೆಯಲ್ಲದೆ, ಅವರ ಮನೋಭಾವನೆಗಳು ಎಲ್ಲಿದ್ದರೂ ಒಂದೇ ಆಗಿರುತ್ತದೆ. ಗಂಡಹೆಂಡಿರ ಪ್ರೇಮ, ತಾಯಿ ಮಕ್ಕಳ ವಾತ್ಸಲ್ಯ, ಪ್ರೀತಿ, ಪ್ರೇಮ, ವಿರಹ, ಮಿಲನ, ಆಸೆ, ನಿರಾಸೆ ಮೊದಲಾದ ಜೀವನ ಚಿತ್ರಗಳು ಎಲ್ಲ ಕಡೆಗೂ ಒಂದೇ ಆಗಿದೆ, ಅವುಗಳ ಬಣ್ಣಗಳು ಬೇರೆ ಕಂಡರೂ ರೂಪಗಳು ಒಂದೇ ಆಗಿರುತ್ತವೆ. ಇಂತಹ ಜೀವನ ಚಿತ್ರಗಳನ್ನು ಅಲಿಖಿತರೂಪದಲ್ಲಿ ಇತಿಹಾಸವಿಲ್ಲದಿದ್ದರೂ, ಪರಂಪರೆಯ ಮುದ್ರೆಯನೊತ್ತಿಕೊಂಡೇ ಬಾಯಿಂದ ಕಿವಿಗೆ, ಕಿವಿಯಿಂದ ಬಾಯಿಗೆ, ಅವಿರತವಾಗಿ ಸಾವಿರಾರು ವರುಷಗಳಿಂದ ಹೊತ್ತು ತಂದಿರುವ ಜನಪದ ಗೀತೆಗಳು ಶಿಷ್ಟ ಸಾಹಿತ್ಯದ ಜೊತೆ ಜೊತೆ ಗುಪ್ತಗಾಮಿನಿಯಾಗಿ ಹರಿದುಬಂದಿದೆ. ಜಾನಪದೀಯತೆ ಮತ್ತು ನಾಗರೀಕತೆಗಳು ಪರಸ್ಪರ ವಿರೋಧಿಗಳಂತೆ ತೋರಿದರೂ, ಆಂತರ್ಯದಲ್ಲಿ ಒಂದನ್ನೊಂದು ಆಧರಿಸಿಕೊಂಡು, ನಿರಂತರ ಕೊಳ್ಕೊಡುಗೆಗಳ ಮುಖಾಂತರ ಒಡನಾಡಿಗಳಾಗಿವೆ. ಜನಪದ ಸಾಹಿತ್ಯ ಶಿಷ್ಟ ಸಾಹಿತ್ಯದ ಮೂಲಕ ತಿರಸ್ಕೃತಗೊಂಡರೂ, ಅದರ ಪ್ರವಹನೆಗೆ ಸ್ಫೂರ್ತಿ ಪ್ರೇರಣೆಗಳನ್ನಿತ್ತು ಜನಸಮ್ಮುಖವಾಗಿ ಪ್ರವಹಿಸುವ ದಾರಿಯನ್ನು ತೋರಿಸುತ್ತಲೇ ಬಂದಿದೆ. ಶಿಷ್ಟ ಸಾಹಿತ್ಯದ ಮೇಲೆ ಪ್ರಭಾವವನ್ನು ಬೀರುತ್ತಲೇ ಬಂದಿದೆ. ಪಂಪನಿಂದ ಹಿಡಿದು ವಚನಕಾರರು, ದಾಸಪಂಥದವರು, ಹೊಸಗನ್ನಡದ ಕವಿಗಳು ಎಲ್ಲರೂ ಜನಪದ ಸಾಹಿತ್ಯ ಸಂಗೀತದಿಂದ ಪ್ರಭಾವಿತರಾಗಿ ಕಾವ್ಯ ರಚನೆ ಮಾಡಿದ್ದಾರೆ. ಪೂರ್ವದ ಹಳಗನ್ನಡ, ನಡುಗನ್ನಡ, ಹೊಸಗನ್ನಡ ಮೊದಲಾದ ಕನ್ನಡ ಕಾವ್ಯ ಘಟ್ಟಗಳಲ್ಲಿ ಅನೇಕ ಏಳು ಬೀಳುಗಳನ್ನು ಅನುಭವಿಸಿದರೂ ಜಾನಪದ ತನ್ನ ಅಸ್ತಿತ್ವವನ್ನು ಉಳಿಸಿಕೊಂಡೇ ಜೀವಂತವಾಗಿದೆ.

ಸುಗಮಸಂಗೀತದ ಪ್ರಮುಖ ಗುಣವೇ ಸಾಹಿತ್ಯವನ್ನವಲಂಬಿಸಿದ ಸಂಗೀತ. ಇದನ್ನು ಅದು ಜನಪದ ಗೀತೆಗಳಿಂದಲೇ ಪ್ರಭಾವಿತಗೊಂಡು ಸ್ವೀಕರಿಸಿರುವುದು ಕಂಡು ಬರುತ್ತದೆ. ಆದರೆ ಜನಪದ ಗೀತೆಗಳಲ್ಲಿ ಕಂಡುಬರದ ಬೌದ್ಧಿಕ ವಿಚಾರಗಳು, ಆಲೋಚನೆಗಳು ಸುಗಮಸಂಗೀತದ ವಸ್ತುಗಳಾಗಿವೆ. ವಸ್ತು ವೈವಿಧ್ಯತೆಗಳಲ್ಲಿ ಎತ್ತರ, ಬಿತ್ತರಗಳನ್ನು ಪಡೆದಿದೆ.

ನಾಗರಿಕ ಸಾಹಿತ್ಯಕ್ಕೆ ಇರುವ ಹಾಗೆ ಜನಪದ ಸಾಹಿತ್ಯಕ್ಕೂ ಅದರದೇ ಆದ ಒಂದು ಪರಂಪರೆ ಇದೆ. ಆದರೆ ನಾಗರಿಕ ಸಾಹಿತ್ಯಕ್ಕೆ ಇರುವಂತೆ ಜನಪದ ಸಾಹಿತ್ಯಕ್ಕೆ ಇತಿಹಾಸವಿಲ್ಲ. ನಾಗರೀಕ ಸಾಹಿತ್ಯದಲ್ಲಿ ನಾವು ಸ್ಪಷ್ಟವಾದ ಬೆಳವಣಿಗೆಯನ್ನು ಗುರುತಿಸುವುದು ಸಾಧ್ಯವಿದೆ. ಕನ್ನಡ ಸಾಹಿತ್ಯವನ್ನೇ ತೆಗೆದುಕೊಂಡರೆ ಭಾಷೆಯ ಉಪಯೋಗ, ಕಾವ್ಯದ ನಿರ್ದಿಷ್ಟ ರೂಢಿ ಸಂಪ್ರದಾಯಗಳು, ಕಾವ್ಯಾದರ್ಶಗಳು, ಜೀವನದೃಷ್ಟಿ ಮೊದಲಾದವರುಗಳ ಆಧಾರ ಮೇಲೆ ನಿರ್ಮಾಣವಾದ ಕಾವ್ಯ ಪರಂಪರೆಯನ್ನೂ, ಅದಕ್ಕೆ ಕಾಲಕಾಲಕ್ಕೆ ಪ್ರಕಟವಾದ ಬಂಡಾಯ, ಪ್ರತಿಕ್ರಿಯೆಗಳು ಮುಂತಾದವುಗಳನ್ನೂ ಗುರುತಿಸುವುದು ಸಾಧ್ಯವಿದೆ. ಹೀಗೆ ಚಂಪೂ ಸಾಹಿತ್ಯ, ವಚನಕಾರರ ಸಾಹಿತ್ಯ, ಷಟ್ಪದಿ ಸಾಹಿತ್ಯ, ರತ್ನಾಕರವರ್ಣಿ ಮೊದಲಾದವರ ಸಾಹಿತ್ಯ, ನವೋದಯ ಸಾಹಿತ್ಯ ಮುಂತಾಗಿ ಕನ್ನಡ ಕಾವ್ಯದ ಪರಂಪರೆಯನ್ನು ಅದರ ಐತಿಹಾಸಿಕ ಬೆಳವಣಿಗೆಯ ಮೂಲಕ ಅಭ್ಯಾಸಿಸಬಹುದು. ಆದರೆ ಜನಪದ ಸಾಹಿತ್ಯಕ್ಕೆ ಇಂಥ ಬೆಳವಣಿಗೆಯ ಇತಿಹಾಸವಿಲ್ಲ. ಅದರ ಪರಂಪರೆ ಎಲ್ಲ ಕಾಲಕ್ಕೂ ಅಖಂಡವಾದ ಏಕೈಕ ಸಮಕಾಲೀನ ಪರಂಪರೆ. ಅದರಲ್ಲಿ ನಡೆದಿರಬಹುದಾದ ಬದಲಾವಣೆಗಳನ್ನೂ, ಬೆಳವಣಿಗೆಯನ್ನೂ, ತೀರ ಇತ್ತೀಚಿನದನ್ನೂ ಬಿಟ್ಟಿರೆ, ಗುರುತಿಸಲು ಸಾಧ್ಯವಿಲ್ಲ. ಅಂತೆಯೇ ಇಡಿಯ ಜನಪದ ಸಾಹಿತ್ಯದ ಮನೋಧರ್ಮ ಒಂದೇ ರೀತಿಯಾಗಿ ಕಾಣುತ್ತದೆ. ಇದಕ್ಕೆ ಮುಖ್ಯ ಕಾರಣ. ಜನಪದ ಸಾಹಿತ್ಯಕ್ಕೆ ಲಿಖಿತ ಪರಂಪರೆ ಇಲ್ಲದಿರುವುದು. ಇದು ಕೇವಲ ಮೌಖಿಕವಾದ ಸಾಹಿತ್ಯವಾದ್ದರಿಂದ ಹೆಚ್ಚಾಗಿ ಭಾಷೆಯ ದೃಷ್ಟಿಯಿಂದ ಒಂದು ಪದ್ಯ. ಕಾಲ ಕಾಲಕ್ಕೆ, ಆಯಾ ಕಾಲದ ಭಾಷಾರೂಢಿಗಳಿಗೆ ಅನುಗುಣವಾಗಿ ಬದಲಾಗುತ್ತಾ ಬಂದಿದೆ. ಇದರಲ್ಲಿ ಯಾವ ಪದ್ಯ ಯಾವ ಅವಧಿಯಲ್ಲಿ ರಚಿತವಾಯಿತೆಂದು ತಿಳಿಯಲು ಸಾಧ್ಯವಿಲ್ಲ. ಆದರೆ ಭಾಷೆಯ ದೃಷ್ಟಿಯಿಂದ ಪ್ರಾದೇಶಿಕ ಭಿನ್ನತೆಗಳು ಕಾಣುತ್ತವೆಯೇ ಹೊರತು, ಕಾಲಮಾನದ ಭಿನ್ನತೆಗಳು ಕಾಣುವುದಿಲ್ಲ. ಇತಿಹಾಸ ಮತ್ತು ಕಾಲ್ಪನಿಕ ಐತಿಹ್ಯಗಳನ್ನು ಕುರಿತ ಹಾಡುಗಳಿಗೂ ಸಹ ಸ್ಥೂಲವಾಗಿ ಮಾತ್ರ ಒಂದು ಕಡೆಯ ಕಾಲಮಿತಿಯನ್ನು ಹೇಳಬಹುದು. ಆದರೆ ಇಂತಹ ಹಾಡುಗಳಲ್ಲಿ ಭಾಷೆಯ ಪುರಾವೆಗಳು ಸಿಗುವುದಿಲ್ಲ. ಇದೇನೆ ಇದ್ದರೂ ಎಲ್ಲ ಕಾಲದ ಜನಪದ ಕವಿಗಳಿಗೂ ಅವರವರ ಕಾಲಕ್ಕೆ ಹಿಂದಿನಿಂದಲೂ ಉಳಿದು ಬಂದ ಜನಪದ ಕಾವ್ಯದ ಜೀವಂತ ಪರಂಪರೆ ಲಭ್ಯವಿತ್ತು ಎಂಬುದು ತಿಳಿಯುತ್ತದೆ.

ಸುಗಮ ಸಂಗೀತದ ಗೀತೆಗಳು ಬಾಯಿಂದ ಕಿವಿಗೆ ಕಿವಿಯಿಂದ ಬಾಯಿಗೆ ಬಂದು ಜನರ ಹೃದಯಕ್ಕಿಳಿದದ್ದು ಅದರ ಆಕರ್ಷಣೆಯಿಂದ. ಅದು ಶಿಕ್ಷಿತರನ್ನೂ ಮತ್ತು ಅಶಿಕ್ಷಿತರನ್ನೂ ಏಕಕಾಲದಿಂದ ಗೆದ್ದಿತು. ಮೌಖಿಕ ರೂಪದಲ್ಲಿ ಲಭಿಸಿ ಜನಪ್ರಿಯವಾದರೂ ಲಿಖಿತರೂಪದಲ್ಲಿ ದೊರೆತು ನಾಗರೀಕ ಸಾಹಿತ್ಯದ ಅಂಗವಾಯಿತು. ಮೊದಲು ಗ್ರಂಥಸ್ಥವಾಗಿ ನಂತರ ಮೌಖಿಕ ರೂಪವನ್ನು ಪಡೆಯಿತು. ಜನಪದ ಸಂಗೀತಕ್ಕೆ ಇಲ್ಲದ ಇತಿಹಾಸ ಮತ್ತು ಕಾಲಮಾನದ ಭಿನ್ನತೆಗಳು ಸುಗಮಸಂಗೀತಕ್ಕೆ ದೊರೆತಿತು. ಶಿಷ್ಟ ಸಂಗೀತದ ಆವರಣದಲ್ಲಿಯೇ ಹುಟ್ಟಿ ಬೆಳೆದರೂ, ಶಿಷ್ಟ ಸಂಗೀತದಿಂದಾಚೆ ದಾಟಿ ಮುಂದೆ ನಿಂತು ಹೊಸ ಚೆಲುವನ್ನು ತೋರಿತು. ಸುಗಮಸಂಗೀತದಲ್ಲಿ ಸಾಹಿತ್ಯ ಗ್ರಂಥಸ್ಥವಾದ್ದರಿಂದ ಸಾಹಿತ್ಯದಲ್ಲಿ ದೋಷಗಳಾಗಲಿ, ಬದಲಾವಣೆಗಳಾಗಲಿ ಆಗಲಿಲ್ಲ. ವಿದ್ಯಾವಂತರು ಅದನ್ನು ಸೃಷ್ಟಿಮಾಡಿದ್ದರಿಂದ ಅದಕ್ಕೆ ರಾಜ ಮರ್ಯಾದೆ ದೊರೆತಿತು. ಸೂಕ್ತವಾದ ವೇದಿಕೆಗಳು ದೊರೆತವು. ಆದರೆ ಜಾನಪದ ಕವಿಗಳಂತೂ ನಿರಕ್ಷರಿಗಳೇ ಆದ್ದರಿಂದ, ಬಲ್ಲವರಿಂದ ಬರೆಯಿಸಿ ಇಡಬೇಕೆಂಬ ವಿಚಾರ ಅವರನ್ನು ಸೋಂಕಲೇ ಇಲ್ಲ. ಸ್ಫೂರ್ತಿ ತುಂಬಿದಾಗ, ಸಂತೋಷವಾದಾಗ, ಪ್ರಸಂಗಬಂದಾಗ, ತಮಗೆ ಬಂದಂತೆ ಹಾಡಿಕೊಂಡು ತೃಪ್ತಿ ಪಡೆದರು. ಕೆಲವೊಂದು ಹಾಡುಗಳು ಜನರ ಬಾಯಲ್ಲಿ ಉಳಿದು ಅನೇಕ ವೇಳೆ ಮಾರ್ಪಾಟು ಹೊಂದಿ ಬೆಳೆಯುತ್ತಾ ಬಂದವು.

ಜನಪದ ಗೀತೆಗಳಲ್ಲಿ ನಮ್ಮ ಜನತೆಯ ಮನಸ್ಸು ಸಹಜ ಸುಂದರವಾಗಿ ಚಿತ್ರಿತವಾಗಿದೆ. ಇಲ್ಲಿಯ ಭಾಷೆ ದಿನಬಳಕೆಯ ಸರಳ ನೇರವಾಗಿದ್ದು, ಕೇಳುಗರ ಮನಸ್ಸನ್ನು ಅರ್ಥಕ್ಕೆ ನೇರವಾಗಿ ಒಯ್ಯುತ್ತದೆ. ಕಾವ್ಯದ ವಸ್ತು ಕೇವಲ ಐಶ್ವರ್ಯವಂತರ ಬಾಳು ಮಾತ್ರವಲ್ಲ, ಶೃಂಗಾರ ಲೀಲೇ ಮಾತ್ರವಲ್ಲ, ಅತೀ ಸಾಮಾನ್ಯ ಜನರ ಬದುಕಿನ ಬೇನೆಗಳೂ, ಬೇಗೆಗಳೂ, ನಲುಮೆ, ನಗೆಯಾಟಗಳೂ ಕಾವ್ಯದಲ್ಲಿ ಸುಂದರವಾಗಿ ರೂಪುಗೊಳ್ಳಬಹುದು ಎಂಬುದು ಜನಪದ ಗೀತೆಗಳಲ್ಲಿ ಎದ್ದು ಕಾಣುವ ಮುಖ್ಯಾಂಶವಾಗಿದೆ. ನಮ್ಮ ಒಡನಾಡಿನ, ಬಡಜೀವನದ ವಿಷಯದಲ್ಲಿ ಮರುಕವನ್ನೂ, ಇಂಥ ಬಡತನದಲ್ಲಿ ಬೆಳೆದರೂ ನಮ್ಮ ಅಕ್ಕತಂಗಿಯರು, ತಾಯಿ, ಅಜ್ಜಿಯರು ತಮ್ಮ ಹೃದಯದಲ್ಲಿ ತುಂಬಿಕೊಂಡಿರುವ ಸೌಜನ್ಯ, ಸರಳತೆ, ಬಂಧು ಮಿತ್ರ ಪ್ರೇಮದ ಔನ್ನತ್ಯ, ಇವೆಲ್ಲಾ ಚಿತ್ರಿತವಾಗಿದೆ. ಜನಪದ ಗೀತೆಗಳ ಈ ಕೌಟುಂಬಿಕ ಒಗ್ಗಟ್ಟು, ವಿನಯದ ವ್ಯಕ್ತಿತ್ವ ಚಿತ್ರಣ, ಕನ್ನಡ ಭಾಷೆಯ ಕಸುವು ಹೊಸಗನ್ನಡದ ಕವಿತೆಗೆ ಚೈತನ್ಯ ನೀಡಿತು. ಉತ್ತರ ಕರ್ನಾಟಕ ಕವಿಗಳು (ಜಾನಪದ ಸಾಹಿತ್ಯದಿಂದ ಪ್ರಭಾವ ಪಡೆದ ಬಗ್ಗೆಯನ್ನು ಮುಂದೆ ವಿವರಿಸಲಾಗಿದೆ) ಜನಪದ ಸಾಹಿತ್ಯದಿಂದ ಪ್ರೇರಣೆ ಪಡೆದು ರಚಿಸಿದ ನವೋದಯ ಸಾಹಿತ್ಯವೇ ಸುಗಮಸಂಗೀತದ ವಸ್ತುವಾಗಿದ್ದರಿಂದ, ಜನಪದ ಗೀತೆಗಳಿಗೂ, ಸುಗಮಸಂಗೀತಕ್ಕೂ ವಸ್ತು, ಭಾಷೆಗಳಲ್ಲಿ ಕೆಲಮಟ್ಟಿಗೆ ಹೋಲಿಕೆ ಕಂಡುಬರುತ್ತದೆ. ಆದರೆ ಸಂಗೀತದ ಮಾತು ಬಂದಾಗ, ಜನಪದ ಗೀತೆಗಳು ಸುಗಮಸಂಗೀತ ಪ್ರಕಾರಗಳಿಂತಾ ತುಸು ಭಿನ್ನವಾಗಿರುತ್ತವೆ. ಆತ್ಮನಿವೇದನಾಗುಣದಲ್ಲಿ, ಸ್ವಾಂತತೆಯಲ್ಲಿ ಸುಗಮಸಂಗೀತದ ಮತ್ತು ಜನಪದ ಗೀತೆಗಳು ಏಕರೀತಿಯ ಅನುಭವವನ್ನು ನೀಡುತ್ತವೆಯಾದರೂ, ಸುಗಮಸಂಗೀತದಲ್ಲಿರುವ ಸಂಕ್ಷಿಪ್ತತೆ ಎಲ್ಲಾ ಜನಪದ ಗೀತೆಗಳಲ್ಲೂ ಕಂಡುಬರುವುದಿಲ್ಲ. ಕಥನ ಕವನಗಳನ್ನೂ, ಮಹಾಕಾವ್ಯಗಳನ್ನು ಗಂಟೆಗಟ್ಟಲೆ ದಿನಗಟ್ಟಲೆ ಹಾಡುವ ಅವರ ಉದ್ದೇಶವೂ ಮಹತ್ತರವಾದುದು. ಜನಪದ ವೃತ್ತಿಗಾಯಕರ ಪರಂಪರೆ ನಾಡಿನ ಮೂಲೆಮೂಲೆಗಳಲ್ಲಿ, ತುಂಬಿದ ಸಭೆಗಳಲ್ಲಿ, ಹಬ್ಬಹರಿದಿನಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ ತಮ್ಮಕಾವ್ಯಗಳನ್ನು ಹಾಡಿ ಜನತೆಯಲ್ಲಿ ಸದ್ಭಾವನೆಗಳನ್ನು ಬೆಳೆಸಿತು. ತಮ್ಮ ಅರಿವಿನ ಹಾದಿಯನ್ನಾಗಿ ಮಾಡಿಕೊಂಡು ಆತ್ಮತುಷ್ಟಿಯನ್ನೂ ಪಡೆದುಕೊಂಡಿತು. ಜನಪದ ಸಂಗೀತ, ಜನಪದ ಗೀತೆಗಳು ಜನರ ಕಾಯಕದ ಕೈದೀವಿಗೆಯಾದವು. ಜೀವನದ ಅವಶ್ಯಕತೆಗಳಲ್ಲೊಂದಾಗಿತ್ತಾ, ಗಾಳಿಯಂತೆ, ನೀರಿನಂತೆ, ಅನ್ನದಂತೆ, ಬೆಳಕಿನಂತೆ, ಜನರ ಬದುಕಿಗೆ ಅಂಟಿಕೊಂಡು ಸೇರಿ ಹೋದವು. ಜೀವಕ್ಕೆ ಉಸಿರಾದವು. ಭಾವಕ್ಕೆ ಬೆಳಕಾದವು.

ಜನಪದ ಗೀತೆಗಳ ಆದ್ರತೆ, ವೈಯಕ್ತಿಕತೆ ಅಲ್ಲದೆ, ಜನಪದ ಗೀತೆಗಳ ಮುಗ್ಧತೆ, ಸ್ನಿಗ್ಧ ಸೌಂದರ್ಯಕ್ಕಿಂತಾ, ಗಂಭೀರತೆಯನ್ನು ಭಾವತೀವ್ರತೆಯನ್ನು ಸುಗಮಸಂಗೀತವು ಒಳಗೊಂಡಿತು. ಜನಪದ ಗೀತೆಗಳಲ್ಲಿ ಬದುಕಿನ ಬಗ್ಗೆ ಶ್ರದ್ಧೆ ವ್ಯಕ್ತವಾದರೆ, ಸುಗಮಸಂಗೀತದಲ್ಲಿ ಶ್ರದ್ಧೆಯನ್ನೊಳಗೊಂಡ ಕಾಳಜಿ, ಆಸ್ಥೆಗಳು ಪ್ರಕಟಗೊಂಡವು. ಜನಪದಗೀತೆ ಸರಳವಾಗಿ ತಿಳಿಸುವುದನ್ನು ಸುಗಮಸಂಗೀತ ಕಾವ್ಯದ ಧ್ವನಿಯ ಮೂಲಕ ಪ್ರಕಾಶಪಡಿಸಿತು. ಜನಪದಗೀತೆ ತನ್ನ ದೀರ್ಘಕಾವ್ಯಗಳ ಪ್ರಸ್ತುತಿಯಿಂದ ತನಗಿರುವ ಅದ್ಭುತ ಸ್ಮರಣಶಕ್ತಿಯನ್ನು ವ್ಯಕ್ತಪಡಿಸಿದರೆ ಸುಗಮಸಂಗೀತ ಅಲ್ಪಕಾಲದಲ್ಲಿ ಮಿಂಚಿನಂತೆ ಹೊಳೆದು ಎದೆಯ ಭಾರವನ್ನಿಳಿಸಿಹೋಯಿತು. ಜನಪದ ಗೀತೆಗಳಲ್ಲಿ ದೈನಂದಿನ ಬಾಳಿನ ಎಲ್ಲಾ ಅನುಭವಗಳಿಗೆ ತನ್ನನ್ನು ಒಡ್ಡಿಕೊಳ್ಳುವ, ಪ್ರವೃತ್ತಿ ಕಾಣುತ್ತದೆ. ಎಲ್ಲಿಯೂ ಅವು ಬಾಳಿಗೆ ವಿಮುಖವಾಗಿ ನಡೆಯುವುದಿಲ್ಲ. ಎಲ್ಲಿಯೂ ನಿರಾಶಾವಾದಿತನ ಕಾಣುವುದಿಲ್ಲ. ಸುಗಮಸಂಗೀತದಲ್ಲಿ ಇದಕ್ಕೆ ವಿರುದ್ಧವಾಗಿ ಬಾಳಿನ ಪ್ರಕ್ರಿಯೆಗೆ ಕ್ರಾಂತಿ, ಹೋರಾಟ, ನಿರಾಶಾವಾದಿತನ, ಏಕಾಂಗಿತನದ ಕೊರಗು ಎಲ್ಲವೂ ಕಂಡುಬರುತ್ತವೆ. ಮನಸ್ಸನ್ನು ಮೀರಿದ ಬುದ್ಧಿಯ ಕೆಚ್ಚು, ಸಾಧನೆಗಳು ಕಾಣುತ್ತ, ಹಲವು ಸಲ ಬದುಕಿಗೆ ವಿಮುಖವಾದದ್ದು ಕಾಣಸಿಗುತ್ತವೆ.

ಜನಪದ ಗೀತೆಯಲ್ಲಿ ಛಂದಸ್ಸು

ನಮ್ಮ ಜನಪದ ಗೀತೆಗಳು ಲಯಬದ್ಧವಾದ ಕುಣಿತ-ಹಾಡುಗಳಿಂದಲೇ ಹುಟ್ಟಿಬಂದವಾದ್ದರಿಂದ ಅವುಗಳು ವಿಶಿಷ್ಟವಾದ ಲಯಗತಿಯಲ್ಲಿಯೇ ನಿರ್ಮಿತವಾದವು. ಅಕ್ಷರಗಣವಾಗಲಿ, ಮಾತ್ರಾಗಣವಾಗಲಿ, ಯಾವುದೂ ಬೇಕಾಗದೆ, ತಮ್ಮ ಗೇಯಕ್ಕೆ ಅನುಗುಣವಾದ ಶಬ್ದದ ಇಟ್ಟಿಗೆಗಳಿಂದಲೇ ಅವು ಕಟ್ಟಲ್ಪಟ್ಟವು. ಗೇಯಗುಣಕ್ಕನುಸ್ತಾರವಾಗಿ ಅಂಶಗಣ ಛಂದಸ್ಸಿಗೆ ಅವು ಹೊಂದಿಕೆಯಾದವು. ಗೇಯತೆಯ ಶಬ್ದಕ್ಕನುಗುಣವಾಗಿ ಮೂರು ಬಗೆಯ ಶಬ್ದಗಣಗಳು ಹುಟ್ಟಿ ಅವು ಬ್ರಹ್ಮ-ವಿಷ್ಣು-ರುದ್ರಗಣಗಳಾದವು. ತ್ರಿಪದಿಯೇ ಜನಪದರ ಜೀವವಾಣಿಯು ತಾನೇ ತಾನಾಗಿ ಹರಿಯಲು ತೋಡಿಕೊಂಡ ಕಾಲುವೆಯಾಯ್ತು. ಮೂರು ಪಾದದ ಚಿಕ್ಕ ಪದ್ಯವು ಕನ್ನಡದ ಗಾಯತ್ರಿ ಎಂದೇ ಕರೆಸಿಕೊಂಡಿತು. ಕನ್ನಡದ ಮೊತ್ತಮೊದಲ ಗೇಯಕೃತಿಯ-ಛಂದೋಬಂಧವೂ ಆಯಿತು. ಚಿಕ್ಕ ಚಿಕ್ಕ ಭಾವಗಳನ್ನು ಹಸಿಗೋಡೆಯಲ್ಲಿ ಹರಳು ಬಗೆದಂತೆ ಪರಿಣಾಮಕಾರಿಯಾಗಿ ವ್ಯಕ್ತಮಾಡಲು ಇದು ಸಹಕಾರಿಯಾಯಿತು. ರಸದಶ ಸ್ಥಾನಗಳಲ್ಲಿ ಬರುವ ಬ್ರಹ್ಮಗಣ ರಾಗಾಲಾಪಕ್ಕೂ, ರಾಗರಂಜನೆಗೂ ಕಾರಣವಾಯಿತು. ಅತಿಕಟ್ಟುನಿಟ್ಟಿನ ಬಂಧವಲ್ಲದ ತ್ರಿಪದಿಯ ಲಯದಲ್ಲಿ ನಿಯತವಾದ ಎಡೆಗಳಲ್ಲಿ ಪಲ್ಲವಿಯ ರೂಪವಾಗಿ ‘ಸೋ’-‘ನೀ’-‘ಕೋಲ’ ಮೊದಲಾದ ಸ್ವರ ಸಂಯೋಜನೆಗಳು ಬಂದು ಪಲ್ಲವಿ ಕೊಡುವ ರಾಗ-ಸುಖವನ್ನು ಬರಮಾಡಿಕೊಂಡಿತು.

ಜಾನಪದ ಪದ್ಯ ಸಾಹಿತ್ಯದ ಬಹುಭಾಗವು ಈ ತ್ರಿಪದಿ ರೂಪದ್ದೇ ಆಗಿದೆ. ಜೋಗುಳ, ಬೀಸುವ ಹಾಡು, ಸುವ್ವಾಲೆಪದ, ಬೇರೆ ಬೇರೆ ಮಂಗಳಕಾರ್ಯದ ಹಾಡುಗಳು, ಜಾತ್ರೆಯ ಪದಗಳು, ಹಬ್ಬದ ಹಾಡುಗಳು, ಶೋಕಗೀತೆಗಳು ಇವೆಲ್ಲಾ ಹೆಚ್ಚಾಗಿ ತ್ರಿಪದಿಯಲ್ಲಿವೆ. ಕನ್ನಡ ಮಾತ್ರಾಗಣ ಛಂದಸ್ಸಿನ ಉದಯಕ್ಕೆ ತ್ರಿಪದಿಯ ಲಯ ವಿಕೃತಿಗಳೇ ಮೂಲಕಾರಣವಾಗಿ, ಶಿವಶರಣರ ವಚನಗಳು, ಹರಿದಾಸರ ಕೀರ್ತನೆಗಳು ಮುಂತಾದ ಕಾವ್ಯ ಪ್ರಕಾರಗಳಲ್ಲಿ ಅದು ಮುಂದುವರೆಯಿತು. ತ್ರಿಪದಿಯ ಎರಡನೆ ಸಾಲಿನ ಪುನರುಕ್ತಿಯನ್ನು ತಪ್ಪಿಸಿ, ಅದರ ಸ್ಥಳದಲ್ಲಿ ಬೇರೆ ಪದಗಳನ್ನು ತುಂಬಿ ‘ಸಾಂಗತ್ಯ’ವೆಂದು ಕರೆಯಲಾಯಿತು. ಸಾಂಗತ್ಯ ಚೌಪದಿಯಾಗಿ ರೂಢಿಯಲ್ಲಿ ಬಂದಿತು. ಸಾಂಗತ್ಯವೇ ಮುಂದೆ ಲಾವಣಿಯ ಚರಣವಾಗಿ ಪರಿಣಾಮಗೊಂಡಿತು. ಷಟ್ಪದಿ ಸಾಂಗತ್ಯಗಳು ತ್ರಿಪದಿಯ ವಿಸ್ತಾರಗಳಾದವು.

ಕನ್ನಡ ಜನಪದದಲ್ಲಿ ತ್ರಿಪದಿ ಸಾಹಿತ್ಯ ಪಡೆದಷ್ಟು ವಿಸ್ತಾರ, ಬಾಹುಲ್ಯವನ್ನು ಬೇರೆ ಯಾವ ಸಾಹಿತ್ಯ ರೂಪಗಳೂ ಪಡೆಯಲಿಲ್ಲ. ಅದು ಲೋಕಪ್ರಿಯವಾಗುತ್ತಾ ಬಂದಿದ್ದರೂ ಯಾವುದೇ ಒಂದು ಕಾವ್ಯದಲ್ಲಿ ಅದು ಸಂಪೂರ್ಣವಾಗಿ ವಿನಿಯೋಗವಾಗಲಿಲ್ಲ. ಏಕೆಂದರೆ ಅದರ ವ್ಯಾಪ್ತಿ ಕಿರಿದು. ಆದ್ದರಿಂದ ಅದರಲ್ಲಿ ಒಂದು ವಿಸ್ತಾರದ ವರ್ಣನೆಯನ್ನಾಗಲಿ, ದೀರ್ಘಕಾಲ ಮಿಡಿಯುವ ಭಾವವನ್ನಾಗಲಿ, ಸವಿವರವಾಗಿ ಕಾಣಲು ಸಾಧ್ಯವಾಗಲಿಲ್ಲ. ಕನ್ನಡ ಛಂದದ ಮೂಲವಾದ ತ್ರಿಪದಿಯ ಗತಿಯೇ ವಿಕಾಸಗೊಳ್ಳುತ್ತಾ, ಅಭಿಜಾತ ಸಮಾಜದಲ್ಲಿ ಪ್ರಚಲಿತವಿದ್ದ ಸಂಗೀತ ರಾಗ-ತಾಳಗಳನ್ನು ಹೊಂದಿಸಿಕೊಂಡ ಹಾಡುಪದಗಳೂ ಜಾನಪದ ರೀತಿಯಲ್ಲಿ ನಿರ್ಮಿತವಾಗಿ,ಕ್ರಮೇಣ ಪ್ರಚಾರದಲ್ಲಿ ಬರಲಾರಂಭಿಸಿದವು. ಇವು ಕನ್ನಡ ನಾಡಿನ ಎಲ್ಲ ಭಾಗಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿ ಹರಡಿಕೊಂಡವು. ಇಂತಹ ಗೀತ ಸಾಹಿತ್ಯದಲ್ಲಿ ದೇವದೇವತೆಗಳು, ಸ್ತುತಿಸ್ತೋತ್ರಗಳು, ಜೀವಿತ ಸುಖಕ್ಷೇಮಗಳ ಕೋರಿಕೆಗಳು, ಕೋಲಾಟದ ಪದಗಳು, ಸುಗ್ಗಿಯ ಕುಣಿತದ ಹಾಡುಗಳು, ಪ್ರೀತಿಪ್ರಣಯದ ಹಾಡುಗಳು, ದುಃಖದುಮ್ಮಾನದ ಹಾಡುಗಳು, ಹಾಸ್ಯವಿನೋದ ಗೀತೆಗಳು, ವ್ಯಕ್ತಿಯ ಮನದ ಒಳತೋಟಿಯನ್ನು ಸೂಚಿಸುವ ಭಾವಗೀತೆಗಳು, ಭಜನೆಯ ಕಾಲದಲ್ಲಿ ಬಳಸುವ ದೈವಭಕ್ತಿಗೀತೆಗಳು, ತತ್ವಜ್ಞಾನಗಳನ್ನು ಕುರಿತ ಹಾಡು ಕೀರ್ತನೆಗಳು, ಲೋಕದ ವಿಶಿಷ್ಟ ಘಟನಾ ಸಂದರ್ಭಗಳನ್ನು ಕುರಿತ ಹಾಡುಗಳು, ಸಾಧು ಸತ್ಪುರುಷರ ಪವಾಡದ ಪದಗಳು, ವೀರಪುರುಷರ ಚರಿತ್ರೆಗೆ ಸಂಬಂಧಿಸಿದ ಉತ್ಸಾಹಭಾವದ ಹಾಡುಗಳು, ಮಂಗಲಪದ್ಯಗಳು, ಆರತಿ ಹಾಡುಗಳು ಮುಂತಾದ ಎಷ್ಟೋ ಪ್ರಕಾರದ ಹಾಡುಗಳು ಹುಟ್ಟಿಕೊಂಡವು.

ಜನಪದ ಗೀತೆಗಳಲ್ಲಿ ಗೇಯತೆಯೇ ಪ್ರಧಾನ ಲಕ್ಷಣವಾಯಿತು. ಹಾಡಿನ ಮೋಡಿ, ರಾಗದ ರಂಜನೆ, ನಾದದ ಸುಖ ಇವುಗಳಿಗಾಗಿಯೇ ಜಾನಪದ ಗೀತೆಗಳು ರಚಿತವಾದಂಥವು. ಕಿವಿಗೆ ಇಂಪನ್ನೂ, ಮನಸ್ಸಿಗೆ ತಂಪನ್ನೂ ನೀಡುವುದಕ್ಕಾಗಿ ಅವು ಮೂಡುತ್ತಾ ಬಂದವು. ಬೀಸುವಕಲ್ಲಿನ ನಾದವೇ, ತೋಟಕ್ಕೆ ನೀರು ತೋಡುವ ಏತದ ಸ್ವರವೇ ಅವುಗಳ ಸಹಜ ಶ್ರುತಿಯಾದವು. ತ್ರಿಪದಿಯನ್ನು ರಾಗಿ ಬೀಸುತ್ತಾ ಹೇಳುವ ಧಾಟಿಗೂ, ಹಚ್ಚೆ ಕುಕ್ಕುತ್ತಾ, ಹೇಳುವ ಧಾಟಿಗೂ, ಒನಕೆ ಹಿಡಿದು ಕುಟ್ಟುತ್ತಾ ಹೇಳುವ ಧಾಟಿಗೂ, ತಮ್ಮಟೆ ಡೋಲು, ತಾಳ, ಗಂಟೆ ಮೊದಲಾದ ವಾದ್ಯಗಳೊಂದಿಗೆ ದೇವರನ್ನು ಮೆರೆಸುತ್ತ ಹೇಳುವ ಧಾಟಿಗೂ, ಮದುವೆ ಮುಂಜಿಗಳಲ್ಲಿ ಹಬ್ಬ ಹರಿದಿನಗಳಲ್ಲಿ ಒಸಗೆ ಸೋಬಾನೆಗಳಲ್ಲಿ ಹೇಳುವ ಧಾಟಿಗೂ, ಕೋಲಾಟ ಆಡುವಾಗ, ಬಂಡಿ ಹೊಡೆಯುವಾಗ, ಸುಗ್ಗಿ ಕುಣಿತ ಕುಣಿಯುವಾಗ ಹೇಳುವ ಧಾಟಿಗೂ, ಕಥೆಯನ್ನು ಕುಳಿತು ಹೇಳುವಾಗಿನ ಧಾಟಿಗೂ ಎಷ್ಟೋ ವ್ಯತ್ಯಾಸವಿರುವುದು ಕಂಡುಬರುತ್ತದೆ. ಒಸಗೆ ಮತ್ತು ಸೋಬಾನೆ ಪದಗಳಲ್ಲಿ ಸಾಮೂಹಿಕ ಗಾಯನದ ಹಿಮ್ಮೇಳನಕ್ಕೆ ಹೊಂದಿಕೊಳ್ಳುವ ಧಾಟಿ ರೂಪುಗೊಳ್ಳುತ್ತದೆ. ತ್ರಿಪದಿಯಲ್ಲಿ ಬೇಕಾದ ಉಚ್ಛಾರಗಳನ್ನು ಹಿಗ್ಗಿಸಿಕೊಳ್ಳುತ್ತಾ ಬೇಡದಿದ್ದೆಡೆ ಕುಗ್ಗಿಸಿಕೊಳ್ಳಲು ಅವಕಾಶವಿದ್ದಿದ್ದರಿಂದ ಇದರ ಛಂದಸ್ಸಿನಿಂದ ಹಲವಾರು ಶಾಖೆಗಳು, ಪ್ರತ್ಯೇಕ ಛಂದಪ್ರಕಾರಗಳು ಹುಟ್ಟಿಕೊಳ್ಳುತ್ತಾ ಬಂದವು. ಹಾಡುಗಾರಿಕೆಯ ರಾಗಕ್ಕೆ ತ್ರಿಪದಿಯ ಛಂಧಸ್ಸು ಹೊಂದಿಕೊಳ್ಳುತ್ತಾ, ಸ್ವರಗಳನ್ನು ತೇಲಿಸುತ್ತಾ, ಸ್ವಚ್ಛಂದತೆಯನ್ನು ತರುತ್ತಾ ಹೊಸ ಹೊಸ ಛಂದ ಪ್ರಕಾರಗಳನ್ನು ಹುಟ್ಟು ಹಾಕಿತು. ಸಾಮಾನ್ಯವಾಗಿ ಆದಿಪ್ರಾಸ ಮತ್ತು ಅನುಪ್ರಾಸ ಮತ್ತು ಅಂತ್ಯಪ್ರಾಸಗಳ ಬಂಧದಲ್ಲಿ ಹುಟ್ಟಿಕೊಂಡವು. ಹೆಣ್ಣುಮಕ್ಕಲ ಹಾಡುಗಳು ಸಾಮಾನ್ಯವಾಗಿ ಸಂಪ್ರದಾಯದ ಕಡೆಗೆ ಒಲಿದರೆ, ಪುರುಷರ ಹಾಡುಗಳು ಪ್ರಾಯಶಃ ಸಾಹಸದ ಕಡೆಗೆ ಒಲಿಯಿತು. ಸ್ತ್ರೀಯರ ಹಾಡುಗಳು ತ್ರಿಪದಿಯಲ್ಲಿ ಮೂಡಿಬಂದರೆ ಗಂಡಸರ ಹಾಡುಗಳು ಲಾವಣಿಯ ಚೌಕುಗಳಲ್ಲಿ ಹುಟ್ಟಿಬಂದವು.

ಹೀಗೆ ತ್ರಿಪದಿಯು ವಿವಿಧ ರೂಪಗಳನ್ನು ತುಂಬುತ್ತಾ, ಕನ್ನಡ ಜನಪದ ಛಂದಸ್ಸಿಗೆ ಒಂದು ಚಲನೆಯನ್ನು ತಂದುಕೊಟ್ಟಿತು. ಕನ್ನಡ ಛಂದಸ್ಸಿಗೆ ಜನಪದ ಛಂದಸ್ಸೇ ಮೂಲಾಧಾರವೆಂಬುದನ್ನು ಸ್ಪಷ್ಟಪಡಿಸಿತು. ಅಂಶಗಣ ಗಣಗಳನ್ನೊಳಗೊಂಡ ಈ ಜನಪದ ಗೀತೆಗಳಲ್ಲಿ ಕಂಡುಬರುವ ಛಂದಸ್ಸೇ, ಕನ್ನಡ ಭಾಷೆಯ ನಿಜವಾದ ಛಂದಸ್ಸೆಂಬುದು ಮನದಟ್ಟಾಯಿತು. ಕನ್ನಡ ಪ್ರೌಢ ಸಾಹಿತ್ಯಕ್ಕೆ ಜನಪದ ಸಾಹಿತ್ಯವೇ ತಳಹದಿಯಾಗಿತ್ತು. ಕವಿರಾಜಮಾರ್ಗದಲ್ಲಿ ಅದುವರೆಗೆ ಕನ್ನಡದಲ್ಲಿ ಪ್ರಸಿದ್ಧವಾಗಿದ್ದ ಕನ್ನಡ ಪದ್ಯ ಪ್ರಕಾರಗಳಾದ ಮದನವತಿ, ಅಕ್ಕರ, ದ್ವಿಪದಿ, ಗೀತಿಕೆ, ಏಳೆ, ರಗಳೆ,ಚೌಪದಿ, ಷಟ್ಪದಿ ಮುಂತಾದ ಕಾವ್ಯ ಪ್ರಕಾರಗಳು ಉಲ್ಲೇಖವಿತ್ತು. ಈಗ ಕನ್ನಡ ಜನಪದ ಗೀತೆಗಳಲ್ಲಿ ದ್ವಿಪದಿ, ಏಳೆ, ತ್ರಿಪದಿ, ಚತುಷ್ಪದಿ, ಪಂಚಪದಿ, ಷಟ್ಪದಿ, ರಗಳೆ, ಸಾಂಗತ್ಯ, ಸೀಸಪದ್ಯಗಳೇ ಅಲ್ಲದೆ ಹಲವು ಅಪರೂಪವಾದ ಕನ್ನಡದ ಪದ್ಯಗಳನ್ನೂ ಕಾಣಬಹುದು.

ಜನಪದ ಸಂಗೀತ ಮತ್ತು ಸುಗಮಸಂಗೀತಕ್ಕೂ ಇರುವ ಪ್ರಮುಖ ವ್ಯತ್ಯಾಸಗಳು

ಜನಪದ ಸಂಗೀತ ಮತ್ತು ಸುಗಮಸಂಗೀತಕ್ಕೂ ಇರುವ ಪ್ರಮುಖ ವ್ಯತ್ಯಾಸಗಳು ಪ್ರಾರಂಭವಾಗುವುದೇ ಅವುಗಳ ಸೃಷ್ಟಿಯಲ್ಲಿ. ಜನಪದ ಗೀತೆ ಸಮಷ್ಠಿ ಸೃಷ್ಟಿಯಾದರೆ ಸುಗಮಸಂಗೀತ ವ್ಯಕ್ತಿಯ ಸೃಷ್ಟಿ ಮೊದಲನೆಯ ಹಾಡುಗಾರಿಕೆ ದೇಸೀಯ ಶೈಲಿಯದಾದರೆ, ಎರಡನೆಯದು ಮಾರ್ಗ ಶೈಲಿಯದಾಗುತ್ತದೆ. ಜನಪದ ಅಂಶಗಣದ ಛಂದಸ್ಸಿನಲ್ಲಿ ರಚಿತವಾಗಿದ್ದರೆ ಸುಗಮ ಮಾತ್ರಾ ಛಂದಸ್ಸಿನಲ್ಲಿ ರಚಿತವಾಗಿರುತ್ತದೆ. ಜನಪದ ಗೀತ ಗಾಯನದಲ್ಲಿ ಶಾಸ್ತ್ರೀಯ ಸಂಗೀತದ ಧಾಟಿ ಇರುವುದಿಲ್ಲ. ಜಾನಪದ ಗೀತೆಗಳ ಸ್ವರಗಳು-ಹೆಚ್ಚಾಗಿ ಒಂದು ಸಪ್ತಕವನ್ನು ದಾಟುವುದಿಲ್ಲ. ಅವು ಅರ್ಧ ಸಪ್ತಕದಲ್ಲೇ ಸುತ್ತಿಸುಳಿಯುತ್ತವೆ. ಅವುಗಳ ನಾದತರಂಗ ಮಿತವಾಗಿರುತ್ತದೆ. ಆ ಮಿತಿಯಲ್ಲೇ ಅವು ಭಾವದ ಆಳವನ್ನು ತೋರಿಸುತ್ತವೆ. ಸುಗಮಸಂಗೀತದಲ್ಲಾದರೋ ಸ್ವರಗಳು ಮೂರು ಸಪ್ತಕಗಳನ್ನೂ ದಾಟಬಹುದು. ಒಂದೇ ರಾಗದಲ್ಲಿಯಾದರೂ ಇರಬಹುದು ಅಥವಾ ಹಲವು ರಾಗಗಳ ಸ್ವರಗಳನ್ನು ಸೇರಿಕೊಂಡೂ ಇರಬಹುದು. ಇವುಗಳ ನಾದತರಂಗಕ್ಕೆ ಮಿತಿಯೇ ಇಲ್ಲ. ಕವಿತೆಯ ದರ್ಶನ ಮಾಡಿಸುವದಷ್ಟೇ ಅದರ ಗುರಿ. ಜನಪದಗೀತೆಗಳು ರಾಗಗಳ ವೈವಿಧ್ಯವನ್ನು ತೋರಿಸಲಾರವು. ಅವುಗಳ ಉದ್ದೇಶ ಸಂಗೀತದ ಶಾಸ್ತ್ರ ವಿನ್ಯಾಸವನ್ನಾಗಲಿ, ಪ್ರಾವೀಣ್ಯತೆಯನ್ನು ಪ್ರದರ್ಶಿಸುವುದಾಗಲಿ ಅಲ್ಲ. ರಾಗವೈವಿಧ್ಯತೆಯಿಂದ ಸಾಧಿಸಬಲ್ಲ ಕೆಲಸವನ್ನು ನಾದಕ್ಕೊದಗುವ ತರಂಗಿತತೆಯ ಅನ್ಯಗುಣದಿಂದ ಅವು ತೋರಿಸಬಲ್ಲವು. ಸುಗಮದಲ್ಲಾದರೋ ಸಂಗೀತದ ಪ್ರಾವೀಣ್ಯತೆಯ ಪ್ರದರ್ಶನವಿಲ್ಲದಿದ್ದರೂ, ಕವಿತಾಭಾವದರ್ಶನಕ್ಕೆ ಅಗತ್ಯವಿರುವಷ್ಟು ಸಂಗೀತವನ್ನು ತೋರಿಸಬೇಕಾಗುತ್ತದೆ. ಕಲಾಪ್ರದರ್ಶನದ ಜೊತೆಯಲ್ಲಿ ಭಾವಪ್ರದರ್ಶನವನ್ನೂ ಮಾಡಬೇಕಾಗುತ್ತದೆ. ಸಂಗೀತ ಶಾಸ್ತ್ರ ಕಲೆಯಾಗಿ ಪರಿವರ್ತಿತವಾಗಬೇಕಾಗುತ್ತದೆ.

ಜನಪದ ಗೀತೆಗಳಲ್ಲಿ ಸುಗಮಸಂಗೀತದಲ್ಲಿರುವಷ್ಟು ರಾಗ, ವೈವಿಧ್ಯ, ತಾಳ ವೈವಿಧ್ಯಗಳಿಲ್ಲ. ಕೆಲವೊಮ್ಮೆ ಒಂದೇ ಗೀತೆ ಮತ್ತೊಂದು ಗೀತೆಯಂತೆ ಕೇಳಬಹುದು. ಕೆಲವೇ ರಾಗಗಳಲ್ಲಿ ಆದರೂ ಸ್ವತಂತ್ರವಾದ ನಾದತರಂಗಿತತತೆಯಿಂದ ಅದು ಅಪೂರ್ವವೆನಿಸುತ್ತದೆ.

ಜನಪದ ಗೀತೆಗಳಲ್ಲಿ ಶಾಸ್ತ್ರವಿಲಾಸವನ್ನು ಕಾಣಲಾರೆವು. ಆದರೆ ಅದರ ಸಂಗೀತ ಸರಳ, ಸುಲಭ ಸಂಗೀತ, ಹೆಚ್ಚಿನ ಹಾಡುಗಳೆಲ್ಲಾ ಒಂದೇ ತೆರನದ ರಾಗದಂತೆ ಕೇಳಿಸುತ್ತವೆ. ಅವುಗಳಲ್ಲಿ ಬಹುಸಂಖ್ಯೆಯವು ಅರ್ಧರಾಗಗಳು. ಆದರೆ ಈ ತೆರೆನದ ದೇಶೀಯ ಗೀತದಿಂದಲೇ ಮುಂದೆ ಪೂರ್ಣರಾಗಗಳು ಹುಟ್ಟಿದವು ಎಂಬುದನ್ನು ನಾವು ಮರೆಯಬಾರದು. ರಾಗಪೂರ್ಣತೆಯಿಲ್ಲದಿದ್ದರೂ, ಧಾಟಿಯ ರೀತಿಯಿಂದ ಅವು ಪ್ರಕಟಿಸುವ ವಿಷಯ ವೈವಿಧ್ಯರಸಗಳು ಧಾರಾಳವಾಗಿವೆ.ಜನಪದ ಗೀತೆಗಳ ಕರ್ತೃ ಯಾರು? ಗೀತೆಗಳಿಗೆ ಮಟ್ಟು ಕೂಡಿಸಿದವರಾರು? ಎಂಬುದು ನಮಗೆ ತಿಳಿಯುವುದಿಲ್ಲ. ಅವುಗಳು ಬಾಯಿಂದ ಕಿವಿಗೆ ಕಿವಿಯಿಂದ ಬಾಯಿಗೆ ಬರುವಾಗ ಅವುಗಳ ಸತ್ವಗುಣವನ್ನಷ್ಟೇ ಹೊತ್ತುಕೊಂಡು ಬರುತ್ತದೆ. ಆ ಧಾಟಿಯನ್ನಷ್ಟೇ ಹೊತ್ತುಕೊಂಡು ಬರುತ್ತದೆ. ಸುಗಮದಲ್ಲಾದರೋ ಕವಿ ಗೀತೆಯ ರಾಗಸಂಯೋಜನಕಾರ ಅದನ್ನು ಪ್ರಸ್ತುತಪಡಿಸುವ ಗಾಯಕ ಈ ಮೂರರ ಹೆಸರನ್ನೂ ದಾಖಲಿಸಿಕೊಂಡು ಬರುತ್ತದೆ.

ಜಾನಪದದ ಅಂಶಗಣಗಳಿಂದ ಹುಟ್ಟಿದ, ಬ್ರಹ್ಮ | ವಿಷ್ಣು | ರುದ್ರ ಈ ಮೂರು ಲಯಗಳು ಅಕ್ಷರಕಾಲಕ್ಕನುಗುಣವಾಗಿ ಉತ್ಸಾಹ | ಮಂದಾನಿಲ | ಲಲಿತ ಲಯಗಳಾಗಿ ಮಾತ್ರಾಗಣಗಳಾಗಿ ಪರಿವರ್ತನಗೊಂಡವು. ಜನಪದ ಕಾವ್ಯಗಳ ಮತ್ತೊಂದು ಪ್ರಸಿದ್ಧ ಛಂದೋರೂಪವಾದ ‘ರಗಳೆ’ ಮಾತ್ರಾಗಣದಿಂದ ಹುಟ್ಟಿಕೊಂಡಿತು. ರಗಳೆಯನ್ನು ಹರಿಹರ ಕವಿ ಬಳಸಿಕೊಂಡು ಕಾವ್ಯವನ್ನೇ ಬರೆದ. ಹೊಸಗನ್ನಡ ಸಾಹಿತ್ಯಕ್ಕೆ ರಗಳೆಯೇ ಅಡಿ ಮೆಟ್ಟಲಾಯಿತು. ಹೊಸಗನ್ನಡಕ್ಕೆ ‘ರಗಳೆ’ಯನ್ನು ಪ್ರಥಮವಾಗಿ ತಂದವರು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು. ಮಾಸ್ತಿಯವರ ‘ನವರಾತ್ರಿ’ -‘ಯಶೋಧರಾ’ ಕೃತಿಗಳ ಛಂದಸ್ಸು ಸರಳ ರಗಳೆಯಲ್ಲಿಯೇ ರೂಪುಗೊಂಡವು. ಮುಂದೆ ರಾಷ್ಟ್ರಕವಿ ಕುವೆಂಪು ಅವರು ತಮ್ಮ ‘ರಾಮಾಯಣದರ್ಶನಂ’ ಮಹಾಕಾವ್ಯಕ್ಕೆ ಸರಳ ರಗಳೆಯ ಛಂದಸ್ಸನ್ನೇ ಬಳಸಿದರು.

ಶಾಸ್ತ್ರೀಯ ಸಂಗೀತ ತನ್ನ ಆಳ, ವಿಸ್ತಾರ ಮತ್ತು ನಿರ್ದಿಷ್ಟ ರಾಗಗಳ ಅಂತಶ್ಚಲನೆಗಳ, ಸ್ವರಕಲ್ಪನೆಗಳ ಮನೋಧರ್ಮಕ್ಕೆ ತನ್ನನ್ನು ಒಡ್ಡಿಗೊಂಡಂತೆ, ಜನಪದ ಸಂಗೀತ ಉತ್ತಮವಾದ ಸಾಹಿತ್ಯವನ್ನು, ಅದ್ಭುತವಾದ ಶಕ್ತಿಯುಳ್ಳ ಗ್ರಾಮೀಣ ಧಾಟಿಗಳಿಂದ ಸರಳ ಸಹಜವಾದ ಛಂದಸ್ಸಿನಿಂದ, ಆಡುಮಾತಿನ ನುಡಿಕಟ್ಟಿನಿಂದ ನಿರೂಪಿಸಿತು. ಆದರೆ ಈ ಎರಡೂ ಪ್ರಕಾರದಿಂದ ಪ್ರೇರಣೆ ಪಡೆದು ಇವುಗಳ ಅತ್ಯುತ್ತಮ ಗುಣಗಳನ್ನು ತನ್ನದಾಗಿಸಿಕೊಂಡು ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಮಹತ್ಪತೆಯನ್ನು ಪಡೆದ ಸುಗಮಸಂಗೀತ, ಸಂದೇಶವನ್ನೂ, ಸಂಸ್ಕೃತಿಯನ್ನೂ, ಮಾಧುರ್ಯವನ್ನೂ, ಮುಪ್ಪುರಿಗೊಳಿಸಿತು.

ಸುಗಮಸಂಗೀತ ಮತ್ತು ಗಮಕ ಅಥವಾ ಕಾವ್ಯಗಾಯನಕಲೆ

ಕಾವ್ಯಗಾಯನ ಕಲೆಯು ನಮ್ಮ ನಾಡಿನ ಅತ್ಯಂತ ಪ್ರಾಚೀನವಾದ ಕಲೆಗಳಲ್ಲಿ ಒಂದಾಗಿದೆ. ಇದನ್ನೆ ‘ಗಮಕಕಲೆ’ ಅಥವಾ ‘ಪುಸ್ತಕವಾಚನಕಲೆ’ ಎಂದು ನಮ್ಮ ಪೂರ್ವಿಕರು ಹೇಳಿದ್ದಾರೆ. ನಮ್ಮ ಭಾರತ ಭೂಮಿಯಲ್ಲಿ ಪ್ರಾಚೀನ ಕಾಲದಿಂದಲೂ ಹೆಸರಾಂತ ಅರವತ್ತುನಾಲ್ಕು ಕಲೆಗಳಲ್ಲಿ ಗಮಕಕಲೆಯನ್ನು ೩೮ನೆಯ ಕಲೆಯನ್ನಾಗಿ ಪರಿಗಣಿಸಿದ್ದಾರೆ.

ಸಾಹಿತ್ಯ ಮತ್ತು ಸಂಗೀತ ಇವುಗಳೆರಡರ ಸ್ನೇಹ ಸಮ್ಮೇಳನದ ಫಲರೂಪವೇ ‘ಗಮಕಕಲೆ’ಯಾಗಿದೆ. ಅಂದರೆ ಸಾಹಿತ್ಯದೊಡನೆ ಸಂಗೀತವು ಒಂದು ಹಿತವಾದ ಪ್ರಮಾಣದಲ್ಲಿ ಬೆರೆತು ಕಾವ್ಯದ ಕಥಾಭಾಗದ ವಿವಿಧ ರಸಗಳ ಪೋಷಣೆಗೆ ಸಹಕಾರಿಯಾಗುತ್ತಾ, ಸಾಹಿತ್ಯದ ಭಾವಗಳನ್ನು ವ್ಯಕ್ತಪಡಿಸುವ ಹಾಡುಗಾರಿಕೆ. ಕಾವ್ಯವನ್ನು ಸರ್ವಾಂಗ ಸುಂದರವನ್ನಾಗಿಸಿ ಹಾಡುವವನೆ ‘ಗಮಕಿ’. ಒಂದು ಪದ್ಯವು ಸರ್ವಾಂಗ ಸುಂದರವಾಗಿ ಹಾಡಲ್ಪಡಬೇಕಾದರೆ, ಆ ಪದ್ಯ ಅರ್ಥವೇನು? ಆ ಅರ್ಥ ಕೊಡುವ ಕಥಾಭಾಗದ ಹಿನ್ನೆಲೆ ಏನು? ಅದರ ರಸ ಸನ್ನಿವೇಶವೇನು? ಆ ಪದ್ಯದಲ್ಲಿ ಪ್ರತಿಪಾದಿಸಿರತಕ್ಕ ವ್ಯಕ್ತಿ, ವಸ್ತು ಅಥವಾ ವಿಷಯದ ಹೆಚ್ಚುಗಾರಿಕೆಯೇನು? ಆ ಪದ್ಯದಲ್ಲಿ ಕವಿಯು ಜನತೆಗೆ ಹೇಳಬಯಸುವ ವಿಶೇಷ ಸಂಗತಿಯೇನು? ಆ ಪದಗಳ ಲಾಲಿತ್ಯ-ಅಥವಾ ಕಾಠಿಣ್ಯವೇನು? ಆ ಪದಗಳು ತಾವು ಕೊಡುವ ವಿವಿದಾರ್ಥಗಳಿಗೆ ಅಪೇಕ್ಷಿಸುವ ‘ಧ್ವನಿ ವಿಶೇಷಗಳೇನು? ಎಂಬೀ ಮುಂತಾದ ವಿಷಯಗಳನ್ನು ಆಳವಾಗಿ ಯೋಚಿಸಿ, ಆ ಪದ್ಯವನ್ನು ಹಾಗೆ ಹಾಡಿದ ಪಕ್ಷದಲ್ಲಿ ಅದು ಶಾಸ್ತ್ರೀಯವಾದ ಗಮಕವಾಗಿ ಸರ್ವಾಂಗ ಸುಂದರವಾದ ವಾಚನವಾಗುತ್ತದೆ. ಇದು ಪದ್ಯದ ಅಂತರಂಗದ ಅಧ್ಯಯನವಾಗುತ್ತದೆ. ಪದ್ಯಕ್ಕೆ ರಸಾನುಗುಣವಾಗಿ ನಿಯೋಗಿಸಲ್ಪಟ್ಟ ರಾಗ ಮತ್ತು ಗೊತ್ತಾದ ಪದಗಳಿಗೆ ಅನ್ವಯಿಸಲ್ಪಡುವ ಆ ರಾಗಭಾಗದ ಧ್ವನಿ ವಿಶೇಷ ಅಥವಾ ಸ್ವರ ಸಂಯೋಜನೆಯ ಸಫಲತೆಯ ಪರಿಣಾಮವಾಗಿ ಕಾವ್ಯಾಮೃತ ರಸಸ್ವಾದನೆಯಾಗುತ್ತದೆ. ಅಂದರೆ ಸುಮಧುರವಾಗಿ ಅರ್ಥಪೂರ್ಣವಾಗಿ ಭಾಷಾಸೌಂದರ್ಯವನ್ನು ಪ್ರದರ್ಶಿಸುತ್ತ ರಸಾನುಭವವಾಗುವಂತೆ ವಾಚಿಸುವ ಕಲೆಯೇ ಗಮಕ ಎಂಬುದು ಮುಖ್ಯವಾಗಿ ಗಮನಿಸಬೇಕಾದ ಅಂಶವಾಗಿದೆ. ಇಲ್ಲಿ ವಾಚನಾಕ್ರಮವೇ ಪ್ರಧಾನವಾಗಿದೆ. ಶಾಸ್ತ್ರೀಯ ಸಂಗೀತದಲ್ಲಿರುವಂತೆ ಇಲ್ಲಿ ತಾಳಮೇಳಗಳ ಸಹಕಾರ ಬೇಕಿಲ್ಲ. ಕಾರಣ ಇದು ತಾಳನಿಬದ್ಧ ಸಂಗೀತವಲ್ಲ. ಕಾವ್ಯದಲಯವನ್ನು ವಾಚನದ ಮೂಲಕ ನಿರೂಪಿಸುವ ಬಗೆಯಿದೆ. ಭಾವನಿರೂಪಣೆಯ ಈ ಮಾಧ್ಯಮದಲ್ಲಿ ಒಂದು ಖಚಿತವಾದ ವಿಧಾನವೂ ಇಲ್ಲ. ಎಷ್ಟು ಜನ ಗಮಕಿಗಳಿದ್ದಾರೋ ಅಷ್ಟೇ ವಿಧದ ಗಮಕ ಶ್ರೇಣಿಗಳಿವೆ. ಕವಿಯ ಕಾವ್ಯವು ಅವನಿಗೆ ಎಷ್ಟು ಚೆನ್ನಾಗಿ ಅರ್ಥವಾಗಿದೆ ಎಂಬುದು ಅವನ ವಾಚನದಿಂದ ತಿಳಿಯುತ್ತದೆ.

ಒಂದು ಪದ್ಯ ಕಾವ್ಯದ ಕಥಾಭಾಗವು ಶ್ರೋತೃಗಳ ಕಿವಿಗೆ ಮತ್ತು ಮನಸ್ಸಿಗೆ ರಂಜಕವಾಗಿರುವಂತೆ ಮಾಡುವುದೇ ಗಮಕಿಯ ಕೆಲಸವಾಯಿತು.

ಇಲ್ಲಿ ‘ಗಮಕ’ ಎನ್ನುವುದು ಪಾರಿಭಾಷಿಕ ಶಬ್ದವಾಗಿ, ಸುಮಧುರವೂ ಅರ್ಥಪೂರ್ಣವೂ, ಭಾಷಾಸೌಂದರ್ಯವನ್ನು ಪ್ರದರ್ಶಿಸುತ್ತಾ, ರಸಾನುಭವವಾಗುವಂತೆ ವಾಚಿಸುವ ಕಲೆ ಎಂಬ ಅರ್ಥ ತಂದಿತು. ಕಲಾಭಿರುಚಿಯನ್ನೂ ಉಲ್ಲೇಕಿಸುವ ಅನೇಕ ಚಿತ್ರಣಗಳು ದಾಖಲಾತಿಯನ್ನು ಒದಗಿಸುತ್ತ ಗಮಕ ಕಲೆಯ ಮಹತ್ ಗುಣವನ್ನು ತಿಳಿಸುತ್ತದೆ.

ಕಾವ್ಯವೆನ್ನುವುದು ಕವಿಯೋ ಅಥವ ಇನ್ನೊಬ್ಬನೋ ಓದಿದ್ದನ್ನು ಕೇಳಿಕೊಂಡು ಅಥವಾ ತಾನೇ ಓದಿಕೊಂಡು ಅನುಭವಿಸಬೇಕಾದದ್ದು. ಕಾವ್ಯವೆಂದರೆ ಕೇವಲ ಬರೆದದ್ದು ಅಥವಾ ಅಚ್ಚುಮಾಡಿದ್ದಲ್ಲ. ಅದು ಶಬ್ದ ಶರೀರ; ಆದ್ದರಿಂದ ಅದು ಕಿವಿಯ ಮೂಲಕ ಮನಸ್ಸಿನಲ್ಲಿ ಮೂಡಿ ನಿಲ್ಲಬೇಕು. ಹಾಗೆ ಕಾವ್ಯ ಗಾಯನ ಮಾಡುವವನಿಗಾದರೋ ಕಂಠದಲ್ಲಿ ರಾಗವುಕ್ಕಿದಾಗ ಮಾತ್ರ ಅದು ಸಾಧ್ಯ. ಅಷ್ಟು ಇಷ್ಟು ಸಂಸ್ಕಾರವಿದ್ದವನು ಹಾಗೂ ಹೀಗೂ ಕಾವ್ಯವನ್ನು ರಚಿಸಬಹುದು. ಆದರೆ ಯಾರಿಗೆ ಸರಸ್ವತಿ ಪ್ರಸನ್ನಳಾಗುವಳೋ ಅವನು ಮಾತ್ರ ಪಾಠಕಲೆಯನ್ನು ಅರಿತಿರುತ್ತಾನೆ ಎನ್ನುವ ಸಂಸ್ಕೃತ ಅಲಂಕಾರಿಕ ರಾಜಶೇಖರ, ಒಬ್ಬ ಕಾವ್ಯಗಾಯಕನಿಗೆ, ಗಮಕಿಗೆ ಇರಬೇಕಾದ ಅರ್ಹತೆಗಳನ್ನು ಸ್ಪಷ್ಟವಾಗಿ ನುಡಿದಿದ್ದಾನೆ. ಜನ್ಮಾಂತರದ ಸಂಸ್ಕಾರದ ಬಲದಿಂದ ಮಾತ್ರ ಒಬ್ಬನ ಕಂಠದಲ್ಲಿ ರಾಗ ಉಕ್ಕುತ್ತದೆ. ಹಾಗೆ ಓದುತ್ತಾ ಕಾವ್ಯದ ಗಾಯನದಲ್ಲಿ ಚೆಲುವು ಉಕ್ಕಿಸುವುದು ಅನೇಕ ಜನ್ಮಗಳ ಪುಣ್ಯಫಲ ಎಂದಿದ್ದಾನೆ.

ಗಮಕಕಲೆ ತಾಳ ನಿಬದ್ಧವಲ್ಲದ ಕಾವ್ಯಗಾಯನ ಕಲೆ ಎಂಬುದು ಸ್ಪಷ್ಟವಾಗಿಯೇ ಇದೆ. ಶಾಸ್ತ್ರೀಯ ಸಂಗೀತದಲ್ಲಿ ‘ಧಾತು’ವಿಗೆ ಪ್ರಾಧನ್ಯತೆ ಇದ್ದರೆ, ಗಮಕಕಲೆಯಲ್ಲಿ ‘ಮಾತು’ವಿಗೆ ಪ್ರಾಧಾನ್ಯತೆ ಇದೆ. ಕನ್ನಡ ಛಂದಸ್ಸಿಗೆ ಸಹಜವಾದ ಯತಿಗೆ ಗಮನವಿಟ್ಟು ತಾಳದ ಗತಿ ಸ್ಫುಟವಾಗಿ ಪ್ರತೀತವಾಗುವಂತೆ ವಾಚನ ಮಾಡುವುದೇ ಗಮಕದ ಅಂತರಾಳ. ನಮಗೆ ಕಂಡುಬರುವ ಮೊದಲ ಗಮಕಿಗಳೆಂದರೆ ‘ಕುಶಲವರು’. ಮೊದಲ ಕಾವ್ಯವೇ ವಾಲ್ಮೀಕಿಯ ‘ರಾಮಾಯಣ’ ಎನ್ನಬಹುದು. ಪ್ರಾಚೀನ ಸಂಸ್ಕೃತ ಮತ್ತು ಕನ್ನಡ ಕೃತಿಗಳಲ್ಲಿ ಈ ಕಲೆಯ ಬಗೆಗೆ ವಿಶಿಷ್ಟ ಮಾಹಿತಿಗಳು ದೊರೆಯುತ್ತವೆ. ಲಕ್ಷ್ಮೀಶನಂತೂ ತನ್ನ ಜೈಮಿನಿ ಭಾರತದಲ್ಲಿ ರಾಗಗಳ ಹೆಸರು, ಜತಿ, ರೀತಿ, ತಾಳ ಪ್ರಮಾಣ, ಕಂಪಿತ, ಮೂರ್ಛನ, ರಸ, ಹಾಡಿನ ಬೆಡಗು, ಬಿನ್ನಾಣ, ಲಯ, ಆಹತ ಮತ್ತು ಪ್ರತ್ಯಾಹತ ವ್ಯಾಪ್ತಿಯನ್ನು ತಿಳಿದು, ವೀಣೆಯನ್ನು ಕೈಯ್ಯಲ್ಲಿ ಹಿಡಿದ, ಬಾಲಕರ ವದನದೊಳ್ ಸರಸ್ವತಿಯೇ ನೆಲೆಸಿದಂತೆ, ವಾಣಿಯ ಆಶೀರ್ವಾದವೆಂಬಂತೆ, ಮೋಹಕವಾದ ಇಂಪಾದ ಧ್ವನಿಯಿಂದ ಕಿವಿಗೆ ಹಬ್ಬವನ್ನುಂಟುಮಾಡುವಂತೆ ವೀಣೆಯನ್ನು ನುಡಿಸಿಕೊಂಡು ಕಾವ್ಯವನ್ನು ಹಾಡಿದರು ಎನ್ನುತ್ತಾನೆ.

ಕನ್ನಡ ಸಾಹಿತ್ಯದಲ್ಲಿ ಕಾವ್ಯ ಎಂದು ಆವಿರ್ಭವಿಸಿತೋ, ಅಂದೇ ಗಮಕ ವಾಚನ ಕಲೆಯೂ ಹುಟ್ಟಿಕೊಂಡಿತು. ಅಷ್ಟೇ ಅಲ್ಲ ರಾಜಾಸ್ತಾಣದಲ್ಲಿ ಕವಿಯ ಕಾವ್ಯದ ವಾಚನದೊಂದಿಗೆ ಅದನ್ನು ವಿಶ್ಲೇಷಿಸುವ ಪರ, ಅಪರಗಳ ಬಗೆಗೆ ಚರ್ಚೆ ಮಾಡುವ ರೀತಿಯೂ ರೂಢಿಗೆ ಬಂದಿತು. ಜೈನ ಸಾಹಿತ್ಯ, ವೀರಶೈವ ಸಾಹಿತ್ಯ ಮತ್ತು ತಮಿಳು ಸಾಹಿತ್ಯದ ಇತಿಹಾಸದಲ್ಲಿ ಕವಿ, ಗಮಕಿ, ವಾದಿ, ವಾಗ್ಮಿ ಎಂಬ ನಾಲ್ಕು ಬಗೆಯ ಪಂಡಿತರನ್ನು ಹೆಸರಸಿದೆ. ಹಿಂದೆ ಈ ನಾಲ್ಕೂ ತರದ ಪಾಂಡಿತ್ಯದಲ್ಲಿ ಪ್ರವೀಣರಾದವರು ಅನೇಕರಿದ್ದರೆಂದೂ ತಿಳಿದುಬರುತ್ತದೆ. ನಮ್ಮ ಕನ್ನಡದ ಕವಿಗಳಾದ ಆದಿಕವಿ ಪಂಪ, ಪೊನ್ನ, ದುರ್ಗಸಿಂಹ, ಕುಮಾರವ್ಯಾಸ, ಹರೀಶ್ವರ ಮುಂತಾದ ಕವಿಗಳು ಕವಿ, ಗಮಕಿ, ವಾದಿ, ವಾಗ್ಮಿಗಳ ಬಗೆಗೆ ಅನೇಕ ವಿಚಾರಗಳನ್ನು, ವಿವರಗಳನ್ನು ನೀಡಿದ್ದಾರೆ. ಕಾವ್ಯಗಾಯನ ಕಲೆಗೆ ಬೇಕಾದ ಅದ್ಭುತ ಸಾಹಿತ್ಯ-ಸಂಗೀತ ಸಂಸ್ಕಾರವನ್ನು ವಿಶ್ಲೇಷಿಸಿದ್ದಾರೆ. ಗಮಕ ವಾಚನದ ಮೂಲಕ ಒಂದು ಕಾಳದ ಸಂಸ್ಕೃತಿಯನ್ನೂ, ಇತ್ತ ಶಾಸ್ತ್ರದ ಲಕ್ಷಣ ಅತ್ತ ಸೌಂದರ್ಯದ ಚಿತ್ರಣ, ಎರಡರಲ್ಲೂ ಪಳಗಿದ ಲಕ್ಷ್ಮೀಶ ಕವಿ, ಕಾವ್ಯಗಾಯನ ಕಲೆಯ ಸ್ಪಷ್ಟ ಸ್ವರೂಪವನ್ನು ನೀಡಿದ್ದಾನೆ. “ವೀಣೆಯನ್ನು ನುಡಿಸಿಕೊಂಡು ಲವಕುಶರು ಕಾವ್ಯವನ್ನು ಹಾಡಿದರು”- ಎಂಬ ಮಾತು ಅತ್ಯಂತ ಮುಖ್ಯವಾದುದು. ‘ವಾಲ್ಮೀಕಿ ರಾಮಾಯಣ’ದಲ್ಲಿಯೂ ತಂತ್ರೀಲಯಸಮನ್ವಿತಃ ಎಂಬ ಉಲ್ಲೇಖವಿದೆ. ಆದಿಕವಿ ವಾಲ್ಮಿಕಿಕವಿ ಗಮಕ ವಾಚನದ ಬಗೆಗೆ ಸ್ಪಷ್ಟಚಿತ್ರಣ ಕೊಟ್ಟಿದ್ದಾನೆ. ಇಲ್ಲಿ ವೀಣೆಯನ್ನು ಶ್ರುತಿಗಾಗಿಯೂ, ಕಾವ್ಯದ ಸೌಂದರ್ಯಕ್ಕೆ ಪೂರಕವಾಗಿಯೂ ಎಂಬಂತೆ ಬಳಸಿದ್ದಾನೆ. ಸಂಸ್ಕೃತದ ಆಕರದಲ್ಲಿ ಕಾವ್ಯವಾಚನಕ್ಕೆ ಸಂಗೀತದ ಅವಶ್ಯಕತೆಯನ್ನು ಒತ್ತಿ ಹೇಳಿದಂತೆ ಪಾಶ್ಚಾತ್ಯ ಸಾಹಿತ್ಯದಲ್ಲಿ ಕಾವ್ಯಕ್ಕೆ ಸಂಗೀತ ಒತ್ತಾಸೆ ನೀಡಿದ ಸಂದರ್ಭಗಳು ಕಂಡುಬರುತ್ತವೆ. ಪುರಾತನ ಗ್ರೀಕ್ ಕವಿಗಳು ತಮ್ಮ ಕಾವ್ಯಗಳನ್ನು ಹಾಡುವಾ ‘ಲೈರ್’ ಎಂಬ ತಂತಿವಾದ್ಯವನ್ನು ನುಡಿಸಿಕೊಂಡು ಹಾಡುತ್ತಿದ್ದರು. ‘ಲೈರ್’ ವಾದ್ಯದೊಂದಿಗೆ ಹಾಡುತ್ತಿದ್ದ ಗೀತೆಯೇ ‘ಲಿರಿಕ್’ ಎಂದಾಯಿತು. ಹೊಸ ಕನ್ನಡ ಸಾಹಿತ್ಯದ ‘ಭಾವಗೀತೆ’ ಎಂಬ ಪದವನ್ನು ಇಂಗ್ಲೀಷಿನ ‘ಲಿರಿಕ್’ ಎಂಬ ಪದದ ಸಮಾನಾರ್ಥವಾಗಿ ಬಳಸಲಾಯಿತು. ಸಾಮಾನ್ಯವಾಗಿ ಚರಣ ಅಥವಾ ನುಡಿಗಳಂತೆ ವಿಂಗಡವಾಗುತ್ತಾ, ಕವಿಯ ವೈಯುಕ್ತಿಕ ಭಾವಗಳನ್ನು ನೇರವಾಗಿ ಅಭಿವ್ಯಕ್ತಗೊಳಿಸುವ ಸಣ್ಣ ಕವಿತೆಯೇ ಇಂಗ್ಲಿಷಿನಲ್ಲಿ ‘ಲಿರಿಕ್’‌ಆಗಿ ಹೊಸಗನ್ನಡ ಸಾಹಿತ್ಯದ ‘ಭಾವಗೀತೆ’ಗಳಾಗಿ ಬಂದವು. ಈ ಭಾವಗೀತೆಗಳೇ ಮುಂದೆ ಸುಗಮಸಂಗೀತ ಪ್ರಕಾರವಾಗಿ ರೂಪುಗೊಂಡವು.

‘ಕವಿರಾಜಮಾರ್ಗ’ದಲ್ಲಿ ಉಕ್ತವಾಗಿರುವ ‘ಚತ್ತಾಣ’ ಮತ್ತು ‘ಬೆದಂಡೆ’, ಕಾವ್ಯಾವಲೋಕನದಲ್ಲಿ ಉಕ್ತವಾಗಿರುವ ‘ಮೆಲ್ಪಾಡು, ಪದ, ಬಾಜನೆಗಬ್ಬ-ಇವುಗಳನ್ನು ಗಮನಿಸಿ ಪರಿಶೀಲಿಸಿದರೆ ಇವೆಲ್ಲಾ ಹಾಡತಕ್ಕಂತ ಪದ್ಯಕಾವ್ಯಗಳೆಂದು ತಿಳಿದುಬರುತ್ತದೆ. ಕಬ್ಬಿಗರ ಕಾವ್ಯ, ‘ಸೂಕ್ತಿ ಸುಧಾರ್ಣವ’ ಮುಂತಾದ ಕೆಲವು ಕಾವ್ಯಗಳಲ್ಲಿನ ಉಲ್ಲೇಕಗಳು ‘ಬೆದಂಡೆ’ ಹಾಡುಗಬ್ಬವೆಂಬ ಅಂಶವನ್ನು ಸಮರ್ಥಿಸುತ್ತದೆ. ‘ಬೆದಂಡೆ’ ಪದವು ‘ವೈದಂಡಿಕಾ’ ಎಂಬ ಸಂಸ್ಕೃತ ಶಬ್ದದ ಅಪಭ್ರಂಶ ರೂಪವಾಗಿದೆ. ‘ವಿದಂಡಾ’ ಸಂಬಂಧವಾದದ್ದು ‘ವೈದಂಡಿಕಾ’. ಕನ್ನಡದಲ್ಲಿ ‘ದಂಡಿಗೆ’ ಎಂಬ ಪದವೇ ಸಂಸ್ಕೃತದಲ್ಲಿ ‘ದಂಡಿಕಾ’ ಎಂಬ ಶಬ್ದದಿಂದ ಬಂದದ್ದು. ‘ಎನ್ನಕಾಯವ ದಂಡಿಗೆಯ ಮಾಡಯ್ಯ’ ಎಂಬ ಬಸವೇಶ್ವರರ ಉಕ್ತಿ; -‘ದಂಡಿಗೆ ಬೆತ್ತ ಹಿಡಿಸಿದಳಣ್ಣ’ – ಎಂಬ ಪುರಂದರದಾಸರ ಮಾತು ‘ಬಲಗೈಯಿಂದ ಮಿಡಿವುತ ಭಾರಿ ದಂಡಿಗೆಯ’-ಎಂಬ ರತ್ನಾಕರನ ವರ್ಣನೆ, ಇವುಗಳಿಂದ ‘ದಂಡಿಗೆ’ ಎಂದರೆ ಈಗಿನ ಕಾಳದ ಗೋಟುವಾದ್ಯದಂತಹ ‘ವೀಣೆ’ ಅಥವಾ ಸಾಧಾರಣ ತಂಬೂರಿ ಎಂದು ತಿಳಿಯಬಹುದು. ಆದ್ದರಿಂದ ‘ಬೆದಂಡೆ’ ಎಂಬುದು ‘ದಂಡಿಕಾ’ ವಾದ್ಯದೊಂದಿಗೆ ಹಾಡುತ್ತಿದ್ದ ಕಾವ್ಯ ಎಂದು ಊಹಿಸಬಹುದು. ಸಂಸ್ಕೃತದ ‘ಚಿತ್ತಾಯತನ’ ಕನ್ನಡದ ‘ಚತ್ತಾಣ’ವನ್ನು ನಾಗವರ್ಮ ಹೇಳುವ ಬಾಜನೆಗಬ್ಬದೊಂದಿಗೆ ಸಮೀಕರಿಸಿ ‘ಚತ್ತಾಣ’ ಓದುಗಬ್ಬ ಎಂದು ತೀನಂಶ್ರೀ ಅವರು ಅಭಿಪ್ರಾಯಪಟ್ಟಿದ್ದಾರೆ. ‘ಬಾಜನ-‘ವಾಚನ’ ಎಂಬ ಸಂಸ್ಕೃತ ಪದದ ತದ್ಭವವಾದ್ದರಿಂದ ‘ಬಾಜನೆಗಬ್ಬ’ ಎಂದರೆ ವಾದ್ಯವಾದನ ಸಮೇತ ಹಾಡುವ ಕಾವ್ಯವೆಂದು ತಿಳಿಯಬಹುದು.

ತಾಳನಿಬದ್ಧವಾಗಿ ಹಾಡುವುದು ‘ಗಾನವೆಂದೂ’ ತಾಳವನ್ನು ಅಲಕ್ಷಿಸಿ ವಿವಿಧ ರಾಗಗಳ ಮೂಲಕ ಕಾವ್ಯವನ್ನು ಹಾಡುವುದು ‘ವಾಚನ’ ಅಥವಾ ‘ಓದುವುದು’ ಎಂದೂ ವ್ಯವಹರಿಸಿರುವುದು ಬಹಳ ಹಿಂದಿನಿಂದಲೇ ರೂಢಿಗೆ ಬಂದಂತೆ ಕಾಣುತ್ತದೆ. ಕನ್ನಡ ಕವಿಗಳು, ಓದು, ವಾಚಿಸು ಎಂಬ ಕ್ರಿಯಾಪದಗಳಿಗೆ ರಾಗಸಹಿತವಾಗಿ ಪಠಿಸು ಎಂಬ ಅರ್ಥವನ್ನು ಕಡೆಯ ಪಕ್ಷ ಒಂದು ಸಾವಿರ ವರ್ಷಗಳಷ್ಟು ಹಿಂದಿನಿಂದಾದರು ಬಳಸುತ್ತಿರುವುದು ಕಂಡುಬರುತ್ತದೆ.

ರನ್ನ(೯೯೦) ‘ಭರತಮನೋದುವ ಸಪ್ತಸ್ವರಮಂ ಕುಣಿಯಿಸುವ’ – ಎನ್ನುವ ಜನ್ನ (೧೨೨೫) ಚಂಪೂಕೃತಿಯೊಳ್ ಓದಿಪೊಗಳ್ವ-ಎನ್ನುವ, ಅಗ್ಗಳನು (೧೨೦೦) ಸರಸ ಕವಿಕಾವ್ಯ ಮಧು ಮತ್ತೇ ರಾಗದೊಳ್ ಪೊರೆದುಪೊಂಗೆ-ಎನ್ನುವಲ್ಲಿ, ಕಾವ್ಯಗಳನ್ನು ರಾಗದಿಂದ ಓದಿ ಹೇಳುವ ರೂಢಿಯನ್ನು ಹೇಳುತ್ತಾ, ರಾಗದಿಂದ ಕಾವ್ಯ ಪಡೆಯುವ ಉತ್ತಮ ಫಲವನ್ನು ವಿವರಿಸಿದ್ದಾರೆ.

(೧೨೨೫) ಗುಣವರ್ಮ: ಪೂರ್ಣಕಥೆಯನೊರ್ವಳ್ ಸುರಾಗದಿಂವಾಚಿಸಿದಳ್’-ಎನ್ನುತ್ತಾ ಮಹಿಳಾ ಗಮಕಿಗಳ ಬಗೆಗೆ ವಿವರಗಳನ್ನು ನೀಡಿದರೆ, ಸಿಂಗಿರಾಜ (೧೪೪೦-೧೫೫೦); ಕವಿಗಳ ಸಮೂಹದ ‘ಗಮಕಿಗಳ ನಿವಹ’ ಎಂದು ರಾಜಾಸ್ತಾನದಲ್ಲಿ ಗಮಕಿಗಳು ಇದ್ದ ಬಗೆಯನ್ನು ತಿಳಿಸಿದ್ದಾನೆ. ಕುಮಾರವ್ಯಾಸ. ಓದಿ ಹೊಗಳಿಸಿಕೊಂಡ ಗಮಕಿಗಳು ಎಂದು ಕಾವ್ಯವಾಚನದಲ್ಲಿ ಪ್ರಶಂಸನೀಯರಾದ ಗಮಕಿಗಳ ವೈಭವವನ್ನು ಚಿತ್ರಿಸಿದ್ದಾನೆ. ರತ್ನಾಕರವರ್ಣಿಯಂತೂ, ಕಾವ್ಯವಾಚನವನ್ನು ಮಾಡುತ್ತಿದ್ದ ಗಮಕಿಯೊಬ್ಬಳ ಬಗೆಗೆ ಚಿತ್ರಕಾವ್ಯವನ್ನೇ ತೆರೆದಿದ್ದಾನೆ.

ಇನ್ನೋದು ಕಾವ್ಯವನೆಂದನಾ ಪಾಡುವ
ಕನ್ನೆಯಾ ಹೊತ್ತಗೆ ವಿಡಿದು
ಕನ್ನೆಗೋಗಿಲೆ ತಾನೆ ಬಾಯ್ದೆರೆದುದೊಯೆಂಬ
ಬಿನ್ನಾಣವೆಸೆಯಲೋದಿದಳು ||

ಪಡಲಿಗೆ ಹೊತ್ತಗೆಯ ದಾರವನೊತ್ತಿ
ಸಡಲಿಸಿ ಕಿರಿದೋಲೆಗಳನು
ಎಡಗೈಯೊಳಾಂತೋದಿದಳು ಬಲಗೈಯಿಂದ
ಮಿಡಿವುತ ಭಾರಿದಂಡಿಗೆಯ ||

‘ಕನ್ನೆಕೋಗಿಲೆ ತಾನೆಯೋ’ ಎಂಬಂತೆ ಹಾಡಿದ ಬಿನ್ನಾಣಗಿತ್ತಿಯಾದ ಗಮಕವಿದುಷಿಯ ವಾಚನದ ಚಿತ್ರಣ ಇಲ್ಲಿದೆ. ಓಲೆಗರಿಯನ್ನು ಎಡದಗೈಯಲ್ಲಿ ಹಿಡಿದುಕೊಂಡು ಬಲಗೈಯಿಂದ ದಂಡಿಗೆ (ತಂಬೂರಿ)ಯನ್ನು ಮಿಡಿಯುತ್ತಾ ಹಾಡಿದಳು. ‘ಪಾಡುವಕನ್ನೆ’ ಎಂಬುದರಲ್ಲಿ ಗಮಕವನ್ನು ವೃತ್ತಿಯಾಗಿಸಿಕೊಂಡಿದ್ದಳು ಎನ್ನುವುದು ವ್ಯಕ್ತವಾಗುತ್ತದೆ. ಈ ‘ಪಾಡುವಕನ್ನೆ’ ಯಾದರೋ ಕೋಗಿಲೆ ಬಾಯ್ದೆರೆದುದೋ ಎಂಬಂತೆ ಕಾವ್ಯವನ್ನು ಹಾಡಲಿಲ್ಲ. ಕಾವ್ಯವನ್ನು ಓದಿದಳು ಎನ್ನುವಲ್ಲಿ ‘ಓದಿದಳು’-ಎನ್ನುವ ಪದವನ್ನು ಗಮನಿಸಬೇಕು. ಕಾವ್ಯದ ಒಳಅಂಗಳಕ್ಕೆ ಸಂಗೀತದಿಂದ ಇಳಿದು, ಒಳಗುಹೊರಗನ್ನು ಒಮ್ಮೆಲೆ ಬೆಳಗಿಸುವುದೇ ಈ ಓದುವಿಕೆ. ಸಂಗೀತ ಕೇವಲ ತೆಳು ಪರದೆ ಮಾತ್ರ. ಒಳಗಿನ ಚೆಲುವನ್ನು ಬೆಳಗಿಸುವ ಸಾಧನ ಮಾತ್ರ ಎನ್ನುವುದೇ ‘ಗಮಕ’ ಕಲೆ ಸಾರುತ್ತಾ ಬಂದ ಸಂದೇಶ.

ಚಂಪೂ, ಷಟ್ಪದಿ, ರಗಳೆ, ಸಾಂಗತ್ಯ ತ್ರಿಪದಿರೂಪಗಳಿದ್ದ ನಮ್ಮ ಹಳೆಗನ್ನಡ ಹಾಗೂ ನಡುಗನ್ನಡದ ಕವಿತೆಗಳು ‘ಗೋಷ್ಠಿ’ಯ ಅಲಂಪಿನ ಇಂಪುಗಳ ಮೂಲಕವೇ ಜನತೆಯನ್ನು ತಲಪಿ, ಕವಿಗಳ ಮಹತ್ವವನ್ನು ಅಳತೆ ಮಾಡುತ್ತಿದ್ದವು. ಪ್ರತಿಯೊಬ್ಬ ಕವಿ ಸ್ವತಃ ಹಾಡುಗಾರರನಾಗಿದ್ದನೋ, ಇಲ್ಲವೋ, ಆದರೆ ಆಗ ‘ಗಮಕದ’ ಗತನ್ನು ಬಲ್ಲವನಂತೂ ಆಗಿರುತ್ತಿದ್ದ. ಭಕ್ತಿ, ವೀರ, ವೈರಾಗ್ಯ, ಶೃಂಗಾರ ಭಾವಗಳನ್ನು ಉದ್ದೀಪಿಸುವ ಕವಿತೆಗಳು ರಸಾನುಭವವನ್ನು ಕೊಡುವ ಮೂಲಕ, ಕೇಳುಗನಿಗೆ ಕವಿಯ ಭಾವಸಂದೇಶವನ್ನು ವಿಸ್ತರಿಸುತ್ತಿದ್ದವು. ‘ಕುಮಾರವ್ಯಾಸ’ ಲಕ್ಷ್ಮೀಶರ ಮಹಾಕಾವ್ಯಗಳು, ಕರ್ನಾಟಕದಾದ್ಯಂತ ಜನಪ್ರಿಯವಾಗಲು ‘ಗಮಕಕಲೆ’ ಯೇ ಕಾರಣವಾಯ್ತು.

‘ಸಾಹಿತ್ಯಕ್ಕಾಗಿ ಸಂಗೀತ’ ರೂಪುಗೊಂಡದ್ದನ್ನು ಪ್ರಪಂಚದ ವಿವಿಧ ಸನ್ನಿವೇಶಗಳಲ್ಲಿ ಕಂಡುಬಂದಂತೆ, ಆ ಕಾವ್ಯವನ್ನು ವಾಚಿಸುವ ಸಂಗೀತ ಶೈಲಿ ಸಾಹಿತ್ಯದ ಸ್ವರೂಪ ಬದಲಾದಂತೆಲ್ಲಾ ತಾನೂ ಬದಲಾಗುತ್ತಾ ಬಂದಿದೆ. ಕುಮಾರವ್ಯಾಸ ಲಕ್ಷ್ಮೀಶರಂಥ ಷಟ್ಪದಿ ಕವಿಗಳನ್ನು ಓದುವ ಸಂಗೀತ ಶೈಲಿ, ಒಂದು ಬಗೆಯಾದರೆ ಸರ್ವಜ್ಞನಂಥ ತ್ರಿಪದಿಕಾರನನ್ನು ಓದುವ ಶೈಲಿ ಇನ್ನೊಂದು. ರತ್ನಾಕರನಂಥ ಸಾಂಗತ್ಯಕಾರನನ್ನು ಓದುವ ಶೈಲಿ ಮತ್ತೊಂದು. ಜಾನಪದ ಲಾವಣಿಗಳನ್ನು ಓದುವ ಶೈಲಿ ಮಗದೊಂದು. ಇವೆಲ್ಲಾ ಗಮಕದ ವಿಶಾಲ ಕಕ್ಷೆಯಲ್ಲಿ ಬರುವುದಾದರೂ ಸೂಕ್ಷ್ಮವಾದ ಅಂತಃಭೇದಗಳನ್ನು ಹೊಂದಿದೆ ಎನ್ನುವುದು ಗಮನಿಸಬೇಕಾದ ಅಂಶ. ಕಾವ್ಯವು ಹೊರಳಿದಂತೆಲ್ಲಾ ಸಂಗೀತವೂ ಕೂಡ ಹೊರಳುತ್ತಾ ಕಾವ್ಯವನ್ನು ಅನುಸರಿಸುತ್ತಾ ಬದಲಾಗುತ್ತಾ ಬಂದಿತು. ಭಾಷೆಯ ಬಂಧ, ವಸ್ತು, ಶೈಲಿ, ಭಾವ, ಬದಲಾದಂತೆಲ್ಲಾ, ಸಂಗೀತವೂ ಅದಕ್ಕೆ ಪೂರಕವಾಗುತ್ತಾ, ಹೊಂದಿಕೊಳ್ಳುತ್ತಾ ಬಂದಿತು. ಸುಗಮಸಂಗೀತವೂ ಇದಕ್ಕೆ ಹೊರತಾಗಲಿಲ್ಲ.

ಸುಗಮಸಂಗೀತವು ಗಮಕ ಕಲೆಯ ವಿಸ್ತರಣೆಯಾಯಿತು. ಶಾಸ್ತ್ರೀಯ ಸಂಗೀತದ ರಾಗಗಳನ್ನು ಭಾವಾನುವರ್ತಿಗೊಳಿಸಿ, ಒಂದು ಕವಿತೆಗೆ ದಾಟಿ ಹಚ್ಚುತ್ತಾ, ಹಾಡುತ್ತಾ, ಕವಿತೆಯನ್ನು ಜನಪ್ರಿಯಗೊಳಿಸುವಲ್ಲಿ ಮಹತ್ತರ ಸಾಧನೆ ಮಾಡಿತು. ನವೋದಯ ಕಾಲದ ಕವಿತೆಗಳು ಅವುಗಳ ಹ್ರಸ್ವತೆ ಮತ್ತು ಗೇಯಗುಣದಿಂದಾಗಿ, ಸಂಗೀತಗಾರರ ಗಮನವನ್ನು ಸೆಳೆದುಕೊಂಡವು. ಇದರ ಪರಿಣಾಮವಾಗಿ ಆ ಕಾಲದ ಕವಿತೆಗಳನ್ನು ಹಾಡುಗಾರಿಕೆಗೆ ಅಳವಡಿಸುವ ಹೊಸ ಪ್ರಯೋಗವೊಂದು ಪ್ರಾರಂಭವಾಯಿತು. ಅದು ಅನಂತರ ‘ಸುಗಮಸಂಗೀತ’ವೆಂಬ ಪರಂಪರೆಯಾಗಿ ಬೆಳೆದು ಬಂದಿತು.

ಭಾವಾಭಿನಯದ ಮೂಲಕ ಅಭಿವ್ಯಕ್ತವಾಗುವ ಕವಿತೆಗಳನ್ನು ರಾಗಾಭಿನಯದ ಮೂಲಕ ನಿರೂಪಿಸಲು ಪ್ರಾರಂಭಿಸಿದ ಸುಗಮಸಂಗೀತದಲ್ಲಿ ಆತ್ಮಾವಲೋಕನದ ಹೊಸ ಭಾವವೂ ಪ್ರಕಾಶಗೊಳ್ಳಲು ತೊಡಗಿತು. ಜನಪರವಾದ ಸುಗಮಸಂಗೀತ ಜೀವನದ ಪ್ರತಿಬಿಂಬವೂ, ಗತಿಬಿಂಬವೂ ಆಗಿ ಜನಪ್ರಿಯವಾಗತೊಡಗಿತು. ಅಕ್ಷರಸ್ಥರಿಗೂ, ಅನಕ್ಷರಸ್ಥರಿಗೂ ಕವಿಯ ಕವಿತೆಯನ್ನು ಪರಿಣಾಮಕಾರಿಯಾಗಿ ತಲಪಿಸಿತು.

ತಾಳನಿಬದ್ಧವಾದ ಗಮಕ ಗಾಯನದಿಂದ ಪ್ರೇರಣೆ ಪಡೆದ ಸುಗಮಸಂಗೀತ ತಾನು ತಾಳಕ್ಕೆ ಬದ್ಧವಾಯಿತು. ಜೊತೆಗೆ ಪಕ್ಕವಾದ್ಯ ಪರಿಕರಗಳನ್ನೂ ಸೇರಿಸಿಕೊಂಡು ತನ್ನ ದಿಗಂತಗಳನ್ನು ಮತ್ತಷ್ಟು ಹಿಗ್ಗಿಸಿಕೊಂಡಿತು. ವಾಚನದ ಉತ್ತಮಾಂಶಗಳನ್ನು ಅರಗಿಸಿಕೊಂಡು ಆ ವಾಚನ ಶೈಲಿಗೆ ಸಂಗೀತದ ಮೆರಗನಿತ್ತಿದ್ದೇ ಅಲ್ಲದೆ ಲಯ ವೈವಿಧ್ಯತೆಗಳಿಂದ, ಭಾವಪ್ರಕಾಶನದ ಪ್ರಸ್ತುತಿಯಿಂದ ಸ್ವಂತಿಕೆಯನ್ನು ತಂದಿತು.

* * *