ಮಾನವ ಸಮಾಜದಲ್ಲಿರುವಾಗ ಸಂಘಜೀವಿಯಾಗಿದ್ದು, ತಾನು ಕಂಡ ಚೆಲುವು, ಉಂಡ ನಲಿವು, ಇವುಗಳು ಇತರರಿಗೂ ದೊರೆಯಲಿ, ಮುಂದೆಯೂ ಉಳಿಯಲಿ ಎಂಬ ಆಕಾಂಕ್ಷೆಯಿಂದ ಅದನ್ನು ಮತ್ತೊಬ್ಬರಲ್ಲಿ ಹೇಳಿಕೊಳ್ಳುತ್ತಾನೆ. ಸಮಾನವು ವಿಕಾಸಗೊಡಂತೆ ಅವನ ಅನುಭವವೂ ವಿಕಾಸಗೊಳ್ಳುತ್ತದೆ. ಭಾಷೆಯೂ ವಿಕಾಸಗೊಳ್ಳುತ್ತದೆ. ಅಂತೆಯೇ ಸಾಹಿತ್ಯವೂ ವಿಕಾಸಗೊಳ್ಳುತ್ತದೆ. ಈ ವಿಕಸನದಲ್ಲಿ ಹಲವು ಬಾರಿ ತಡೆಯಾಗಬಹುದು; ಹಲವು ಸಾರಿ ಕವಲು ದಾರಿಗಳಲ್ಲಿ ನಡೆಯಬಹುದು. ಇದೆಲ್ಲವೂ ಸಮಾಜದಲ್ಲಿ ಆಗುವ ಬದಲಾವಣೆಯನ್ನವಲಂಬಿಸಿರುತ್ತದೆ. ಆಯಾ ಕಾಲಕ್ಕೆ ಆಯಾ ಸಮಾಜದ ಸ್ಥಿತಿಗೆ ಅನುಗುಣವಾದ ಸಾಹಿತ್ಯವು ಸೃಷ್ಟಿಯಾಗುತ್ತದೆ. ಇದು ಸಾಹಿತ್ಯದ ನಿಯಮ. ಈ ರೀತಿಯಲ್ಲಿಯೇ ಕನ್ನಡ ಕಾವ್ಯದ ಇತಿಹಾಸದಲ್ಲಿ ಹಳಗನ್ನಡ ನಡುಗನ್ನಡ ಮತ್ತು ಹೊಸಗನ್ನಡ ಕಾವ್ಯಗಳು ರೂಪುಗೊಂಡವು.

ಕನ್ನಡ ಕಾವ್ಯದ ಇತಿಹಾಸ ಆರಂಭದಿಂದಲೂ ಸಂಸ್ಕೃತದ ಸಂಪರ್ಕದಲ್ಲಿ ಬೆಳೆದು ಬಂದಿತು. ಕನ್ನಡ ಸಾಹಿತ್ಯಕ್ಕೆ ಸಂಸ್ಕೃತ ಸಾಹಿತ್ಯವೇ ಪ್ರೇರಕ, ಪೋಷಕ ಗುರುವಾಯಿತು. ಸಂಸ್ಕೃತ ಸಾಹಿತ್ಯದಿಂದ ಕನ್ನಡ ಸಾಹಿತ್ಯ ಉದ್ದಕ್ಕೂ ಸ್ಫೂರ್ತಿ ಪಡೆಯಿತು. ಹಳೆಯದನ್ನು ಬಿಸುಟು ಹೊಸದನ್ನು ಬರಮಾಡಿಕೊಳ್ಳುವ ಬದುಕಿನ ಜೀವಂತಿಕೆಯ ಹೊರಳಿನಲ್ಲಿ ಕನ್ನಡ ಭಾಷೆಯೂ ಹೊರತಾಗದೆ ಇಂಗ್ಲಿಷ್ ಭಾಷೆಯ ಪ್ರಭಾವಕೆಕ ಒಳಗಾಯಿತು. ೧೯ನೇಯ ಶತಮಾನದಲ್ಲಿ ಇಂಗ್ಲಿಷರ ಆಳ್ವಿಕೆಯಲ್ಲಿ ಪಾಶ್ಚಾತ್ಯರ ನಾಗರೀಕತೆ, ಐಹಿಕ ಸಾಧನ ಸಂಪತ್ತು, ರಾಜ್ಯಶಾಸ್ತ್ರ, ಕಲೆ, ಮತ ಸಾಹಿತ್ಯ ಮುಂತಾದವುಗಳಿಗೆ ಸಂಬಂಧಪಟ್ಟ ನವೀನ ಜ್ಞಾನದ ಸೆಳೆತಕ್ಕೆ ಮಿಕ್ಕ ದೇಶಭಾಷೆಗಳಂತೆಯೇ ಕನ್ನಡವೂ ಸಿಕ್ಕಿ ಒಂದು ಹೊಸ ದೇಶಾಭಿಮಾನವನ್ನೂ, ಹೊಸರುಚಿಯನ್ನೂ ಕಲಿತು, ಹೊಸರೀತಿಗಳಲ್ಲಿ ಕಾವ್ಯ ಸೃಷ್ಟಿಯ ಕಾವ್ಯಾಭ್ಯಾಸ ಪ್ರಾರಂಭವಾಯಿತು. ಭಾಷಾಂತರಗಳೂ, ಅನುಕರಣಗಳು, ಸ್ವಂತ ಕವಿತೆಗಳು, ಹೊಸಕಾವ್ಯ ರೂಪಗಳು, ಹೊಸ ಛಂದಸ್ಸುಗಳು, ಹೊಸ ಅಭಿಪ್ರಾಯಗಳು ಸಂಪ್ರದಾಯವನ್ನು ಮರೆತು ಸ್ವಾತಂತ್ರ್ಯ ಪ್ರಿಯತೆಯನ್ನು ಮೈಗೂಡಿಸಿಕೊಳ್ಳತೊಡಗಿದವು. ಇಂಗ್ಲಿಷ್ ಸಾಹಿತ್ಯವನ್ನು ಅಭ್ಯಾಸ ಮಾಡಿದವರು ಕನ್ನಡ ಕಾವ್ಯಕ್ಕೂ ಅದಕ್ಕೂ ಇದ್ದ ವ್ಯತ್ಯಾಸಗಳನ್ನು ಮನನ ಮಾಡುತ್ತಾ, ವ್ಯಕ್ತಿ ಸ್ವಾತಂತ್ರ್ಯ ಸಹಜತೆಗೆ, ಒತ್ತು ಕೊಡತೊಡಗಿದರು. ಜನಸಾಮಾನ್ಯರ ಆಶೋತ್ತರಗಳ ಕಡೆಗೆ, ಪ್ರಕೃತಿಯ ಕಡೆಗೆ ಸಾಹಿತ್ಯ ತಿರುಗಲು ಪ್ರಾರಂಭವಾಯಿತು. ಜಾನಪದ ಛಂದಸ್ಸುನ್ನು ಪ್ರೌಢವಾದ ವಸ್ತುವಿಗೆ ಬಳಸುವುದೂ, ಜನಬಳಕೆಯ ಆಡುಮಾತಿನ ಹತ್ತಿರ ಹತ್ತಿರದ ಭಾಷೆಯನ್ನೇ ಸಾಹಿತ್ಯದಲ್ಲಿ ಬಳಸುವುದು ಹೊಸತನದ ಅಲೆ ಎಬ್ಬಿಸಿತು. ಸಾಹಿತ್ಯದ ರೂಪ, ವಸ್ತು, ಶೈಲಿ ಎಲ್ಲವೂ ಹೊಚ್ಚ ಹೊಸದಾಯಿತು.

೧೯ನೆಯ ಶತಮಾನದ ಕೊನೆಯಲ್ಲಿ ಹಳೆಯದರ ನಡುವೆ ಹೊಸದು ಅಲ್ಲಲ್ಲಿ ಕಾಣಿಸಿಕೊಂಡಿತು. ಹೊಸಹೊಲೆಯು ಹರಿದ ಕವಲು ದಾರಿಗಳು ಹತ್ತಾರಾದವು. ಕನ್ನಡಕ್ಕೆ ಇಂಗ್ಲಿಷ್ ನಾಟಕಗಳು ರೂಪಾಂತರಗೊಂಡು ಬರತೊಡಗಿದವು. ಷೇಕ್ಸ್‌ಪಿಯರ್‌ನ ‘ಒಥೆಲೊ’ ಕನ್ನಡಕ್ಕೆ ರೂಪಾಂತರಗೊಂಡು ‘ಶೊರಸೇನ ಚರಿತ್ರೆ’ಯಾಯಿತು. ರೋಮಿಯೋ ಎಂರ್ಡ್ ಜೂಲಿಯೆಟ್ ‘ರಾಮವರ್ಮ ಲೀಲಾವತಿ’ಯಾಯಿತು. ದಿ ಟೇಮಿಂಗ್ ಆಫ್ ದಿ ಶ್ರೊ ‘ಚಂಡೀಮದಮರ್ದನ’ವಾಗಿ ಬಂತು. ಅಲ್ಲಲ್ಲಿ ಇಂಗ್ಲಿಷ್ ಕವಿತೆಗಳ ಅನುವಾದಗಳೂ, ಸ್ವತಂತ್ರವಾಗಿ ಅವುಗಳ ರೀತಿಯನ್ನನುಸರಿಸುವ ಕವಿತೆಗಳೂ ಬಂದವು. ಹಾಡುಗಳನ್ನು ಕಂದ, ವೃತ್ತಗಳಲ್ಲಿಯೂ ಬರೆಯಲಾಯಿತು.

ಮೈಸೂರಿನಲ್ಲಿ ರಾಜಾಶ್ರಯವಿದ್ದುದರಿಂದ ಕನ್ನಡದ ಕಾವ್ಯ ಉಸಿರಾಡಿಕೊಂಡಿತ್ತು. ಆದರೆ, ಉತ್ತರ ಕರ್ನಾಟಕದಲ್ಲಿ ಮರಾಠಿಯವರ ಪ್ರಾಬಲ್ಯದಿಂದ ಕನ್ನಡಕ್ಕೆ ಸಜಹವಾಗಿಯೇ ಸಿಗಬೇಕಾಗಿದ್ದ ಸ್ಥಾನವೂ ಇರಲಿಲ್ಲ. ಮೈಸೂರು ಮತ್ತು ಮಂಗಳೂರು ಕಡೆಗಳಲ್ಲಿ ಸಂಪ್ರದಾಯಬದ್ಧತೆ ಮುಂತಾದ ಕಾರಣಗಳಿಂದ ಕಾವ್ಯವು ಜನಸಾಮಾನ್ಯರಿಂದ ದೂರವಾಯಿತು. ಧಾರವಾಡ ಜಿಲ್ಲೆಯಲ್ಲಿ ಬರಿಯ ಮರಾಠಿ ಶಾಲೆಗಳೇ ತುಂಬಿ, ಕನ್ನಡ ಕಲಿಸುವ ಶಾಲೆಗಳಲ್ಲಿ ಮರಾಠಿಯನ್ನು ಬಾಲಬೋಧ ಲಿಪಿಯನ್ನಾಗಿ ಕಲಿಸಬೇಕೆಂದು ಸರ್ಕಾರವೇ ಆಜ್ಞೆವಿಧಿಸಿತ್ತು. ಶೇಷಗಿರಿರಾವ್ ಚೂರಮುರಿಯವರಂತಹ ಕಟ್ಟಾ ಕನ್ನಡದ ಅಭಿಮಾನಿಗಳು, ೧೮೨೨-೨೭ರ ಸುಮಾರಿನಲ್ಲಿ ‘ಶಾಕುಂತಲ’ ನಾಟಕದ ಅನುವಾದ, ಎಲ್ಲಾ ಭಾಷೆಯಲ್ಲಿದ್ದರೂ, ಕನ್ನಡ ಭಾಷೆಯಲ್ಲಿ ಇರಲಿಲ್ಲವೆಂದೂ ತಾವು ಸಾಯುವ ಮೊದಲು ಹೇಗೋ ಆ ನಾಟಕವನ್ನು ಕನ್ನಡಕ್ಕೆ ತಂದುದಾಗಿಯೂ ಹೇಳಿಕೊಂಡರು. ೧೮೯೦ನೇ ಇಸವಿಯಲ್ಲಿ ಶ್ರೀರಾಮಚಂದ್ರ ಹನುಮಂತ ದೇಶಪಾಂಡೆ, ವೆಂಕಟರಂಗೋಕಟ್ಟಿ, ಶ್ಯಾಮರಾವ್‌ವಿಠಲ, ಧೋಂಡೋನರಸಿಂಹ ಮುಳಬಾಗಿಲು ಮುಂತಾದ ಕನ್ನಡದ ಕಟ್ಟಾಭಿಮಾನಿಗಳಿಂದ ವಿದ್ಯಾವರ್ಧಕ ಸಿಂಘವು ಸ್ಥಾಪಿತವಾಯಿತು. ಮರಾಠಿಯ ಮೋಹದೊಳಗೆ ಸಿಲುಕಿಕೊಂಡ ಕನ್ನಡಿಗರ ಕಣ್ಣು ತೆರೆಯಿಸಲು ಹಲವಾರು ಮಹನೀಯರು ತಮ್ಮ ಕಾಣಿಕೆ ಸಲ್ಲಿಸಿದರು. ಭುಜಂಗರಾವ್ ಹುಯಿಲಗೋಳ, ಅಣ್ಣರಾವಸವದಿ, ಶೇಷಗಿರಿರಾವ್ ಚೂರಿಮುರಿ, ಗಂಗಾಧರ ಮಡಿವಾಳೇಶ್ವರ, ಡೆಪ್ಯೂಟಿ ಚೆನ್ನಬಸಪ್ಪನವರು ಮುಂತಾದವರು ಕನ್ನಡದ ಕಟ್ಟಾಳಾಗಿ ಕೆಲಸ ಮಾಡಿದರು. ಡೆಪ್ಯೂಟಿ ಚೆನ್ನಬಸಪ್ಪನವರಂತೂ ವಿದ್ಯಾ ಇಲಾಖೆಯೊಂದಿಗೆ ಸತತವಾಗಿ ಹೋರಾಡಿ ಧಾರವಾಡದಲ್ಲಿ ಕನ್ನಡ ಶಾಲೆಗಳಾಗುವಂತ ಮಾಡಿದರು. ಶ್ರೀ ಡಿ.ವಿ. ಗುಂಡ್ಪನವರು ಬರೆದ ‘ಶ್ರೀವಿದ್ಯಾರಣ್ಯರು’ ಗ್ರಂಥ ಪ್ರಸಕ್ತ ಕನ್ನಡ ಇತಿಹಾಸವನ್ನು ತೋರಿಕೊಟ್ಟು ಕನ್ನಡಿಗರಿಗೆ ಅಭಿಮಾನವುಕ್ಕುವಂತೆ ಪ್ರೇರೇಪಿಸಿತು. ಆಲೂರ ವೆಂಕಟರಾಯರು, ಮುದವೀಡು ಕೃಷ್ಣರಾಯರು, ಕನ್ನಡ ಪತ್ರಿಕೆಗಳನ್ನು ಹೊರಡಿಸಿ ಜನರಲ್ಲಿ ಕ್ನನಡದ ಅಭಿಮಾನ ತುಂಬಿ ಹೊಸ ಚೈತನ್ಯವನ್ನು ಬೆಳಗಿಸಲು ಕಾರಣರಾದರು. ತಳುಕಿನ ವೆಂಕಣ್ಣಯ್ಯನವರೂ, ಎ.ಆರ್. ಕೃಷ್ಣಶಾಸ್ತ್ರಿಗಳೂ ‘ಪ್ರಬುದ್ಧ ಕರ್ನಾಟಕ’ದ ಮೂಲಕ ಹೊಸ ಕವಿಗಳನ್ನು ಬೆಳಕಿಗೆ ತಂದರು.

ಮೈಸೂರಿನ ಕಡೆ ತಾತಯ್ಯ ಎಂ. ವೆಂಕಟಕೃಷ್ಣಯ್ಯನವರು, ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರು ಕನ್ನಡಕ್ಕಾಗಿ ಪ್ರಚಾರಮಾಡತೊಡಗಿದರು. ಇಂಗ್ಲಿಷ್ ಗೀತೆಗಳು ತೆರೆದ ಹೊಸ ಬೆಳಕಿನ ಹಾದಿ ಇಂಗ್ಲಿಷ್ ಸಾಹಿತ್ಯದ ಉಕ್ತಿ ವೈವಿಧ್ಯ. ಅರ್ಥಸಂಪತ್ತು, ವಸ್ತು ವೈವಿಧ್ಯ, ಭಾವ ಸ್ವಾತಂತ್ರ್ಯ ಇವುಗಳಿಂದ ಪ್ರೇರಿತರಾದವರು ಕನ್ನಡವನ್ನು ಅನಾದರಿಸುವುದನ್ನು ಕಂಡು, ಕನ್ನಡವನ್ನು ಇಂತಹ ಸ್ಥಿತಿಯಿಂದ ಪಾರು ಮಾಡಬೇಕೆಂದು ಎಚ್ಚರಿಕೆಯ ಉಪನ್ಯಾಸಗಳನ್ನು ಬಿ.ಎಂ.ಶ್ರೀ ಅವರು ನಾಡಿನಾದ್ಯಂತ ಬಿತ್ತರಿಸಿದರ. ‘ಕನ್ನಡ ಮಾತು ತಲೆ ಎತ್ತುವ ಬಗೆ’ ಎಂಬುದೇ ಅವರ ಮಂತ್ರವಾಗಿತ್ತು. ಹೊಸಗನ್ನಡವನ್ನೇ ಬರೆಯಬೇಕು. ಕಠಿನ ಪದಗಳಲ್ಲಿ ಕೈವಲ್ಲವುಂಟೆಂದು ಮೋಸ ಹೋಗದೆ, ಅರ್ಥದಲ್ಲಿ ಬುದ್ಧಿಯನ್ನು ಓಡಿಸಿ ಪ್ರೌಢಿಮೆ ತೋರಿಸಬೇಕು ಎಂದು ಸಾರಿದರು. ತಮ್ಮ ‘ಇಂಗ್ಲಿಷ್ ಗೀತಗಳು’ ಕವಿತಾ ಸಂಗ್ರಹದ ಮೂಲಕ ಹೊಸ ಹಾದಿಯನ್ನೇ ಸೃಷ್ಟಿಮಾಡಿದರು. ‘ಶ್ರೀ’ ಯವರಿಗಿಂತಲೂ ಮೊದಲು ಇಂಗ್ಲಿಷ್ ಕವಿತೆಯ ಆಸ್ವಾದವನ್ನು ಪಡೆದ ಕವಿಗಳೂ ಎಸ್.ಜಿ. ನರಸಿಂಹಾಚಾರ್ಯ, ಜಯರಾಮಾಚಾರ್ಯ, ಎಸ್.ಜಿ. ಗೋವಿಂದರಾಜಯ್ಯಂಗಾರ್, ಪಂಜೆ ಮಂಗೇಶರಾಯ, ಹಟ್ಟಿಯಂಗಡಿ ನಾರಾಯಣರಾಯ, ಶಾಂತಕವಿ, ಸಾಲಿರಾಮ ಚಂದ್ರರಾಯ ಮುಂತಾದವರಿಂದ ಕನ್ನಡದ ಹೊಸಕಾವ್ಯ ಪ್ರಾರಂಭವಾದರೂ, ನಿಜವಾದ ಹೊಸತನ ಪ್ರಾರಂಭವಾಗಿದ್ದು ಬಿ.ಎಂ.ಶ್ರೀ. ಅವರಿಂದಲೇ. ‘ಶ್ರೀ’ ಅವರಿಗಿಂತ ಮೊದಲಿನವರು ಹಳೆಯ ಜಾಡಿನಲ್ಲಿ ಸಾಗಿದ್ದರೂ, ಕಾವ್ಯದ ರೂಪ ಬದಲಾಗಿರಲಿಲ್ಲ. ಹೊಸ ಕಾವ್ಯಕ್ಕೆ ಮನೋಭೂಮಿ ಸಿದ್ಧವಾಗಿದ್ದರೂ, ಹೊಸ ಬಣ್ಣದ ಹೂಗಳು ಚಿಗುರಿದ್ದು, ‘ಶ್ರೀ’ ಅವರ ಇಂಗ್ಲಿಷ್ ಗೀತಗಳು ಬಂದ ಮೇಲೆಯೇ, ಇಂಗ್ಲಿಷ್ ಸಾಹಿತ್ಯವೇ ಸಂಸ್ಕೃತ ಸಾಹಿತ್ಯದಿಂದ ನಮ್ಮ ಕನ್ನಡ ಕಾವ್ಯಮಾಲೆಗೆ ಇಳಿದಿರುವ ದೋಷಗಳನ್ನು ಪರಿಹಾರ ಮಾಡಬೇಕು ಎಂದು ಹೇಳಿ ಕಾವ್ಯಗಳ ವಸ್ತು, ರೀತಿ, ಭಾವ, ವರ್ಣನೆ, ಶೈಲಿ, ರೂಪ ಎಂದು ಆರು ಬಗೆಯಾಗಿ ಆ ದೋಷಗಳನ್ನು ತೋರಿದರು. ‘೧೯೬೧’ರಲ್ಲಿ ‘ಶ್ರೀ’ ಅವರ ‘ಇಂಗ್ಲಿಷ್ ಗೀತಗಳು’ ಪ್ರಕಟವಾಯಿತು. ಹಳೆಯ ಛಂದೋರೂಪಗಳ ಬಂಧನದಲ್ಲಿ ಸಿಲುಕಿ ಕಾವ್ಯ ಕ್ಲೀಷೆಯಾಗುತ್ತಿದ್ದ ಸಂದರ್ಭದಲ್ಲಿ ನಮ್ಮ ಯುಗಧರ್ಮಕ್ಕೆ ಹೊಂದಿಕೊಳ್ಳುವಂಥ, ಅರ್ಥಪೂರ್ಣ ಎನ್ನಿಸಿಕೊಳ್ಳುತ್ತಿದ್ದ ಇಂಗ್ಲಿಷ್ ರೊಮ್ಯಾಂಟಿಕ್ ಕಾವ್ಯದ ಪ್ರಭಾವದಿಂದ ಕನ್ನಡ ಕಾವ್ಯಕ್ಕೆ ಜೀವತುಂಬಿದ್ದೇ ಬಿ.ಎಂ.ಶ್ರೀಯವರು ಕನ್ನಡ ನವೋದಯಕ್ಕೆ ನೀಡಿದ ಮಹೋನ್ನತ ಕೊಡುಗೆಯಾಯಿತು. ನಮ್ಮ ನವೋದಯ ಕಾಲದ ಎಲ್ಲ ಕವಿಗಳು ‘ಶ್ರೀ’ ಅವರ ಈ ಪ್ರಯೋಗಗಳ ಪ್ರಭಾವದಿಂದ ಬೆಳೆದು ತಮ್ಮ ಸಾಹಿತ್ಯ ಸತ್ವಗುಣವನ್ನು ತೋರಿದರು. ಕಾವ್ಯದ ಹೊರರೂಪವಾದ ಛಂದಸ್ಸೇ ಇಡೀ ಒಂದು ನಾಡಿನ ಕಾವ್ಯಮಾರ್ಗದಲ್ಲಿ ಕ್ರಾಂತಿಕಾರಕ ಆಯಾಮಗಳನ್ನು ಸೃಷ್ಟಿಸಬಲ್ಲದು ಎಂಬುದಕ್ಕೆ ‘ಶ್ರೀ’ ಅವರು ಹಾಕಿಕೊಟ್ಟ ಕಾವ್ಯರೂಪವೇ ಸಾಕ್ಷಿಯಾಯಿತು. ಬಿ.ಎಂ.ಶ್ರೀ ಅವರಿಗೆ ಶ್ರೇಷ್ಠ ಕಾವ್ಯವನ್ನು ಕೊಡಬೇಕೆಂಬ ಆಸೆಗಿಂತ ಮಿಗಿಲಾಗಿ ಶ್ರೇಷ್ಠಕಾವ್ಯ ಪರಂಪರೆಯತ್ತ ಜನರ ಮನಸ್ಸು ಹರಿಯುವಂತೆ ಮಾಡುವುದೇ ಮುಖ್ಯವಾಗಿತ್ತು. ‘ಶ್ರೀ’ ಅವರ ‘ಇಂಗ್ಲಿಷ್ ಗೀತಗಳು’ ೧೯೬೧ರಲ್ಲಿ ಪ್ರಕಟವಾದ ದಿನದಿಂದಲೇ ಖ್ಯಾತಿ ಗೌರವಗಳನ್ನು ಪಡೆಯಿತು. ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿ ನಿಂತು ‘ಯುಗ ಪ್ರವರ್ಥಕಕೃತಿ’ ಎಂಬ ವಿಶಿಷ್ಟ ಸ್ಥಾನವನ್ನು ಪ್ರಸಿದ್ಧಿಯನ್ನೂ ಗಳಿಸಿತು.

“ಇಂಗ್ಲಿಷ್ ಸಾಹಿತ್ಯ ಸಮುದ್ರದ ಕರೆಯಲ್ಲಿ ತೆರೆಯೆಸೆದ ಈ ಕೆಲವು ಸಣ್ಣ ಚಿಪ್ಪುಗಳಿಂದ ಆ ದಿವ್ಯ ರತ್ನಾಕರದ ಲಾವಣ್ಯವೂ, ವಾಸನೆಯೂ, ಘೋಷವೂ, ರುಚಿಯೂ, ಸಹೃದಯರ ಅನುಭವಕ್ಕೆ ಸಿದ್ಧಸದೆ ಇರಲಾರವೆಂದು ನಾನು ನಂಬಿರುತ್ತೇನೆ” ಎಂದು ತಮ್ಮ ‘ಇಂಗ್ಲಿಷ್ ಗೀತಗಳ’ ಅರಿಕೆಯಲ್ಲಿ ತಿಳಿಸಿರುವ ಶ್ರೀ ಅವರು ತಮ್ಮ ಕಾವ್ಯೋದ್ದೇಶವೇನೆಂಬುದನ್ನು ಸೃಷ್ಟಿಪಡಿಸಿದ್ದಾರೆ. “ಸಂಪ್ರದಾಯ ಮಾರ್ಗವನ್ನೇ ಛಲ ಹಿಡಿಯದೆ. ವಿಶ್ವಕವಿತಾ ವಿಷಯಗಳಾದ ಯುದ್ಧ, ಪ್ರೇಮ, ಮರಣ, ದೇಶಭಕ್ತಿ, ದೈವಭಕ್ತಿ, ಪ್ರಕೃತಿ ಸೌಂದರ್ಯ, ಮಾನವ ಜನ್ಮದ ಸುಖದುಃಖಗಳು, ರಾಗದ್ವೇಷಗಳು, ಪುರುಷಾರ್ಥಗಳು, ಜನ್ಮಾಂತರ ದರ್ಶನಗಳು ಮುಂತಾದ ಕಾವ್ಯವಸ್ತುಗಳನ್ನು ಇತರ ದೇಶದ ಕವಿಗಳು ಯಾವ ರೀತಿಯಲ್ಲಿ ಪುಷ್ಠಿಗೊಳಿಸಿ ಸಹಜ ಭಾಷೆಯಲ್ಲಿ ಸೌಂದರ್ಯ ರಚನೆಯನ್ನು ಮಾಡಿರುವರೋ ಅದನ್ನೆಲ್ಲ ಶ್ರದ್ಧೆಯಿಂದ ಪರಾಮರ್ಶಿಸಿ, ಧೈರ್ಯವನ್ನೂ ಶಿಕ್ಷಣಬದ್ಧವಾದ ಸ್ವಾತಂತ್ರ್ಯವನ್ನೂ ವಹಿಸಿ ಕನ್ನಡ ಕವಿಗಳು ಹಿಂದಕ್ಕಿಂದಲೂ ಮುಂದೆ ಇನ್ನೂ ಶ್ರೇಯಸ್ಸನ್ನು ತಾಳಲಿ ಎನ್ನುವುದೇ ನಮ್ಮೆಲ್ಲರ ಹಾರೈಕೆಯಾಗಿದೆ” ಎಂದಿದ್ದಾರೆ.

ಇಂಗ್ಲಿಷ್ ಗೀತಗಳು ತೆರೆದಿದ್ದು ಇಂಗ್ಲಿಷ್ ಕಾವ್ಯದ ಭಾವಗೀತೆಗಳ ಮಾರ್ಗವನ್ನು ಅದರಲ್ಲೂ ರೊಮ್ಯಾಂಟಿಕ್ ಭಾವಗೀತೆಗಳ ಮಾರ್ಗವನ್ನು ಎಂಬುದು ಗಮನಾರ್ಹ. ಇವು ತಂದ ಹಿರಿಮೆ ಎಂದರೆ, ಛಂದಸ್ಸಿನ ಮತ್ತು ಭಾಷೆಯ ವಿಷಯಗಳಲ್ಲಿ ತಂದ ಬಗೆಬಗೆ ಹೊಸತನ. ಭಾಷೆಯ ಮೂಲಕ ‘ಶ್ರೀ’ಯವರು ಅದುವರೆಗೂ ಇದ್ದ ಕಾವ್ಯದ ಭಾಷೆಯ ಆಡಂಬರತೆಯನ್ನು ನೀಗಿಸಿ ಬಿಟ್ಟರು. ಅಚ್ಚಕನ್ನಡದ ಚಿಕ್ಕ ಸರಳ ಪದಗಳು, ಆಡುಮಾತಿನ ಲಯ, ನೇರವಾದ ನಿರಾಡಂಬರವಾದ ವರ್ಣನೆ, ದೈನಂದಿನ ಜೀವನದ ನುಡಿಗಟ್ಟು, ನಿರಲಂಕೃತವಾದ ವರ್ಣನೆ, ಕಥನ ಶೈಲಿ, ಇವುಗಳಲ್ಲಿ ಕನ್ನಡ ಭಾಷೆಯ ಅಜ್ಞಾತಶಕ್ತಿ ಸಾಮರ್ಥ್ಯಗಳನ್ನು ಅಪೂರ್ವವಾಗಿ ಪ್ರಕಟಿಸಿದವು. ಅದುವರೆಗೂ ಇದ್ದ ಕಾವ್ಯದ ಭಾಷೆಯ ಮೂಲ ಭಾವನೆಗಳು ಕರಗಿ ಹೋಗಿ ಕಂಡರಿಯದ ನವ ಭಾಷಾಕಟ್ಟು ಕಾಣಿಸಿಕೊಂಡಿತು.

ಇಂಗ್ಲಿಷ್ ಗೀತಗಳು ಪ್ರಕಟವಾದಗಳಿಗೆ ‘ಅಮೃತಗಳಿಗೆ’. ಅದನ್ನು ರಚಿಸಿದ ಹಸ್ತ ‘ಅಮೃತಹಸ್ತ’ ಎಂದ ದ.ರಾ. ಬೇಂದ್ರಯವರು, ಇದು ‘ಹೊಸಕವನಗಳಿಗೆ ಮಾರ್ಗದರ್ಶಕವಾಗಿ, ತರುಣರ ಮೆಚ್ಚಿಕೆಯದಾಗಿ, ಭಾವಗೀತೆಗಳ ಭಾಷಾಂತರಕ್ಕೊಂದು ಕೈಪಿಡಿಯಾಗಿದೆ. ಆಕ್ಲಿಷ್ಟ ಪ್ರಸನ್ನ ಕಾವ್ಯ ಶೈಲಿಗೆ ಮಾದರಿಯಾಗಿ ನಿಂತಿದೆ. ಹೊಸಕವನಗಳ ಓಂಕಾರದಲ್ಲಿ ‘ಶ್ರೀಯವರ ಶ್ರೀ ಕಾರವು ನಿತ್ಯ ನವೀನವಾಗಿದೆ ಎಂದಿದ್ದಾರೆ.

‘ಶ್ರೀ’ ಯವರ ಹಿರಿಯ ಶಿಷ್ಯರಲ್ಲಿ ಒಬ್ಬರಾದ ಮಾಸ್ತಿಯವರು ‘ಎಳೆಯರೆದೆಯಲಿ ಹಾಡುವಾಸೆಯನು ಸುಳಿಸಿದಿರಿ’- ಎಂದು ತಮ್ಮನ್ನು ‘ಶ್ರೀ’ ಯವರ ಕಾವ್ಯಮಾರ್ಗ ಸೆಳೆದಿದ್ದನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ. ಕುವೆಂಪು ಅವರು ‘ಶ್ರೀ’ ಯವರ ಬಗೆಗೆ ಹೇಳುತ್ತಾ ‘ನನ್ನ ಕವಿ ಪ್ರತಿಭೆಯನ್ನು ಕನ್ನಡದ ಕಡೆಗೆ ತಿರುಗಿಸಿದ ನಿಮಿತ್ತ ಮಾತ್ರ ವ್ಯಕ್ತಿ ಒಬ್ಬ ವಿದೇಶಿಯ ಕವಿಯಾದರೂ, ಅದಕ್ಕೆ ಮೆಚ್ಚುಗೆಯ ಪ್ರೋತ್ಸಾಹ ತೀರ್ಥವನ್ನು ತಳಿದು ನಿದರ್ಶನ ಮಾತ್ರದಿಂದಲೇ ನನಗೆ ಮಾರ್ಗದರ್ಶಕರಾಗಿ ಅದರ ಬೆಳೆಗೆ ಬೇಕಾದ ವಿದ್ವದ್ಬಲವನ್ನು ಶೇಖರಿಸಲು ಕಾರಣವಾದ ವ್ಯಕ್ತಿಗಳಲ್ಲಿ ಶ್ರೀಯವರು ಅಮಿತಗಣ್ಯರಾಗಿದ್ದಾರೆ” ಎಂದಿದ್ದಾರೆ.

‘ಇಂಗ್ಲಿಷ್ ಗೀತ’ಗಳನ್ನು ರಚಿಸಿ ಕನ್ನಡದ ಕಾವ್ಯ ಸಂಪತ್ತನ್ನು ಬೆಳೆಸುವುದರ ಜೊತೆಗೆ ಹೊಸಗನ್ನಡದ ‘ಕವಿಕುಲ’ವನ್ನು ಬೆಳೆಸಿದ ‘ಶ್ರೀ’ಯವರು ನವಯುಗದ ಪ್ರವರ್ತಕರಾದರು. ಹೊಸಗನ್ನಡದ ಕವಿಕುಲಪತಿಗಳಾದರು. ಕನ್ನಡದಲ್ಲಿ ಹೊಸಕವಿತೆ ಸೊಂಪಾಗಿ ಚಿಗುರುವಂತೆ ಮಾಡಿ ‘ಆಧುನಿಕ ಕರ್ನಾಟಕ’ ಕವಿ ಚೂತವನ ಚೈತ್ರರಾದರು. ‘ಇಂಗ್ಲಿಷ್ ಗೀತಗಳು’ ಪ್ರಕಟವಾದ ಅನಂತರ ಹೊಸಕಾವ್ಯದ ಅಭ್ಯಾಸದಲ್ಲಿ, ಹೊಸಕವಿತಯ ಸೃಷ್ಟಿಯಲ್ಲಿ ಕವಿಗಳಿಗೆ ಹೆಚ್ಚು ಹೆಚ್ಚು ಆಸಕ್ತಿ ಬಂದಿತು. ಹೊಸ ಸ್ಫೂರ್ತಿ ಹೊಸ ಕವಿಗಳನ್ನು ಸೃಷ್ಟಿಸಿತು. ಮಾಸ್ತಿ, ಕೆ.ವಿ. ಪುಟ್ಟಪ್ಪ, ಪು.ತಿ. ನರಸಿಂಹಾಚಾರ್, ವಿ.ಸೀತಾರಾಮಯ್ಯ ಮತ್ತು ‘ಶ್ರೀ’ಯವರ ಉಳಿದ ಶಿಷ್ಯರು ಸೇರಿ ‘ಕಿರಿಯರ ಕಾಣಿಕೆ’ ಮತ್ತು ‘ತಳಿರು’ ಎಂಬ ಸಂಗ್ರಹ ಕವಿತೆಗಳ ಗ್ರಂಥಗಳನ್ನು ತಂದರು. ಈ ಸಂಗ್ರಹಗಳೇ ಮುಂದಿನ ಕಾವ್ಯದ ರಸಸಿದ್ಧಿಯ ಹಾದಿತೋರಿದವು.

ಕವಿತೆ ಗರಿಬಿಚ್ಚಿದಾಗ

‘ಶ್ರೀ’ಯವರ ಹಿರಿಯ ಶಿಷ್ಯರಾದ ಮಾಸ್ತಿಯವರು ೧೯೬೬ರಲ್ಲಿ ‘ಬಿನ್ನಹ’ವೆಂಬ ಕವಿತಾ ಸಂಗ್ರಹವನ್ನು ಪ್ರಕಟಿಸಿದರು. ರಾಗ ತಾಳಗಳೊಂದಿಗೆ ಹೆಸರಿಸಲಾದ ಈ ಗೀತಗಳು ಪುರಂದರದಾಸ ಕೀರ್ತನೆಗಳಿಂದ ಸ್ಫೂರ್ತಿ ಪಡೆದವಾಗಿದ್ದವು. ‘ಬಿನ್ನಹ’ವನ್ನು ಗೀತೆಗಳ ಗೊಂಚಲೆಂದೇ ಹೇಳಿದ ಮಾಸ್ತಿಯವರು, ಅವು ಹಾಡಲೆಂದೇ ಬರೆದ ಗೀತೆಗಳಾಗಿದ್ದವು. ೧೯೬೪ರಲ್ಲಿ ಮಾಸ್ತಿಯವರು ಪ್ರಕಟಿಸಿದ ‘ಅರುಣ’ ಕವಿತಾ ಸಂಕಲನ ತನ್ನ ವಸ್ತು, ನಿರೂಪಣೆ, ರೂಪ ದೃಷ್ಟಿಗಳಿಂದ ಹೊಸತನವನ್ನೇ ತೆರೆಯಿತು. ಛಂದಸ್ಸು, ಭಾಷೆಯ ಬಳಕೆ ಎಲ್ಲವೂ ಹಳೆಯದ್ದೇ ಆಗಿದ್ದರೂ, ಈ ಸಂಗ್ರಹದ ವೈಶಿಷ್ಯವಾಗಿ ‘ಸರಳ ರಗಳೆ’ಯನ್ನು ಮಾಸ್ತಿಯವರು ಮೊತ್ತಮೊದಲಬಾರಿಗೆ ಪ್ರಯೋಗಿಸಿದರು. ‘ಸ್ಥಳಗಳ ಹೆಸರು’ ಎಂಬ ಕವಿತೆಯೇ ಹೊಸಗನ್ನಡದ ಕಾವ್ಯವದಲ್ಲಿ ಮೊತ್ತಮೊದಲ ಬಾರಿಗೆ ಸರಳರಗಳೆಯನ್ನು ಸಫಲವಾಗಿ ಪ್ರಯೋಗ ಮಾಡಿದ ಕವಿತೆಯಾಯಿತು. ಈ ಛಂದೋರೂಪವು ಹೊಸಗನ್ನಡಕ್ಕೆ ಮಾಸ್ತಿಯವರು ನೀಡಿದ ಹಿರಿಯ ಕಾಣಿಕೆಯಾಯಿತು. ಇವರ ‘ನವರಾತ್ರಿ’- ‘ಯಶೋಧರಾ’ ಕೃತಿಗಳ ಛಂದಸ್ಸು ಸರಳರಗಳೆಯಲ್ಲಿಯೇ ರೂಪುಗೊಂಡವು. ಕನಕದಾಸ ಕತೆಗಳು ಕಥನ ಕವನಕ್ಕೆ ‘ಸರಳರಗಳೆ’ ಸೊಗಸು ತಂದಿತಲ್ಲದೆ ಸರಳ ರಗಳೆಯನ್ನು ಕಥನ ಕವನಕ್ಕೆ ಹೇಗೆ ಬಳಸಿಕೊಂಡರೆ ಚೆನ್ನ ಎನ್ನವುದನ್ನು ಮನದಟ್ಟು ಮಾಡಿಕೊಟ್ಟಿತ್ತು. ಮಾಸ್ತಿಯವರ ಮುಖ್ಯವಾದ ಸಾಧನೆ ಎಂದರೆ ಅವರ ‘ಕಥನ ಕವನ’ಗಳು ಮತ್ತು ಸಾನೆಟ್ಟುಗಳು.

೧೯೨೮ರಲ್ಲಿ ಕಿರಿಯ ಕಾಣಿಕೆ ಕವಿತಾ ಸಂಲಕವು ಹೊರಬಂದು ಹಲವು ಅನುವಾದಗಳೂ, ಎಲ್. ಗುಂಡಪ್ಪನವರ ‘ಚಟಾಕಿ’ಯಂತಹ ಉತ್ತಮವಾದ ಅಣಕವಾಡು, ಪುಟ್ಟಪ್ಪನವರ ರೂಪಾಂತರ ಕವಿತೆ ‘ಬೊಮ್ಮನಹಳ್ಳಿಯ ಕಿಂದರಜೋಗಿ’ ಪು.ತಿ.ನ. ಅವರ ಮನಮುಟ್ಟುವ ಕವಿತೆ ‘ನನ್ನ ನಾಯಿ’, ಮನದ ಒಳತೋಟಿಯನ್ನು ತೋಡಿದ ತೀ.ನಂ.ಶ್ರೀ ಅವರ ‘ಎರಡು ದಾರಿ’- ಕವಿತೆಗಳು ಹೊಸ ದಾರಿಯನ್ನು ತೆರೆದವು.

೧೯೩೦ರಲ್ಲಿ ಹೊರಬಂದ ‘ತಳಿರು’ ಕವಿತಾ ಸಂಗ್ರಹವೂ ಹೊಸ ಪ್ರಯೋಗಗಳ ಮತ್ತೊಂದು ಮಜಲನ್ನು ಪಡೆಯಿತು. ‘ಕಿರಿಯಕಾಣಿಕೆ’ಯಲ್ಲಿ ಕಾಣದ ಹಲವಾರು ಹೊಸಯುವಕವಿಗಳಾದ ಎಂ.ವಿ. ಸೀತಾರಾಮಯ್ಯ, ಜಿ.ಪಿ. ರಾಜರತ್ನಂ, ದಿನಕರದೇಸಾಯಿ ಮುಂತಾದ ಕವಿಗಳು ತಮ್ಮ ಮೊದಮೊದಲ ಕವನಗಳನ್ನು ‘ತಳಿರು’ ಸಂಗ್ರಹಕ್ಕೆ ನೀಡಿದರು. ಈ ಸಂಗ್ರಹದ ಕವಿಗಳಾಗಿ ತಮ್ಮ ಕವಿ ಜೀವನವನ್ನು ಪ್ರಾರಂಭಿಸಿದ ಬಹುಪಾಲು ಕವಿಗಳು ಹೊಸಗನ್ನಡದ ಆಶಾಕಿರಣಗಳಾಗಿ ಜಗಜಗಿಸುವ ತಾರೆಗಳಾದರು. ಹೊಸಗನ್ನಡ ಕವಿತೆಯ ಬೇರು ಭದ್ರವಾಗಿ ಊರಲು ‘ತಳಿರು’ ಸಂಕಲನವೇ ನಾಂದಿ ಹಾಡಿತು.

೧೯೩೦ರಲ್ಲಿ ‘ಶ್ರೀ’ಯವರ ಶಿಷ್ಯರಾದ ಪುಟ್ಟಪ್ಪನವರು ‘ಕೊಳಲು’ ಎಂಬ ಕವಿತಾ ಸಂಗ್ರಹವೊಂದನ್ನು ಪ್ರಕಟಿಸಿದರು. ಪ್ರಗಾಥ, ಸಾನೆಟ್ ವಿವಿಧ ಛಂದೋರೂಪಗಳ ಭಾವಗೀತೆಗಳು ಈ ಸಂಗ್ರಹದ ಚೆಲುವನ್ನು, ಗುಣವನ್ನು ಹೆಚ್ಚಿಸಿದವು. ಇಂಪಾದ, ಮಧುರವಾದ ಹೊಸ ಹೊಸ ಮುದ್ದುಪದ್ಯಗಳು ತಮ್ಮ ಸರಳ ಶೈಲಿಯಿಂದ ಅತ್ಯಂತ ಆಕರ್ಷಣೆಯನ್ನು ಮೂಡಿಸಿದವು. ಹೃದಯದಿಂದ ಬಂದು ಹೃದಯವನ್ನು ನೇರವಾಗಿ ಮುಟ್ಟುವ ಗುಣಗಳನ್ನು ಹೊಂದಿದ್ದ ಈ ಕವನಗಳು ಛಂದಸ್ಸಿನಲ್ಲಿ, ಪ್ರಾಸವೈಖರಿಯಲ್ಲಿ, ಭಾಷೆಯಲ್ಲಿ ಮತ್ತು ವಸ್ತುವಿನ ಎಲ್ಲ ರೀತಿಯಲ್ಲಿಯೂ ಈ ಸಂಗ್ರಹದ ನೂರಮೂರು ಪದ್ಯಗಳು ಹೊಸ ಪ್ರಯೋಗಗಳಾಗಿ ಸಿದ್ಧಪ್ರಯೋಗಗಳಾದವು.

೧೯೩೧ರಲ್ಲಿ ಸಿ.ವಿ. ಸೀತಾರಾಮಯ್ಯನವರ ‘ಗೀತಗಳು’ ಪ್ರಕಟವಾಯಿತು. ೧೯೩೩ರಲ್ಲಿ ‘ದೀಪಗಳು’, ೧೯೩೩ರಲ್ಲಿ ‘ನೆಳಲು-ಬೆಳಕು ಸಂಗ್ರಹಗಳು ಪ್ರಕಟಗೊಂಡವು. ‘ಗೀತಗಳು’ ಕವನ ಸಂಕಲನ ತನ್ನ ಶೀರ್ಷಿಕೆಯಿಂದಲೇ ತಾವು ಹಾಡುವುದಕ್ಕ ಎಂದೇ ಹುಟ್ಟಿದವು ಎಂಬುದನ್ನು ಸೂಚಿಸಿದವು. ಈ ಕವಿತೆಗಳ ಮುಖ್ಯಗುಣವೇ ಹಾಡುತನ. ಗೀತಗಳೆಂದೇ ಕರೆದ ಅರ್ಥದಲ್ಲಿ ಇವು ಸಾರ್ಥ್ಯಕ್ಯವಾದವು. ವಿ.ಸಿ. ಅವರ ಕವನಗಳಲ್ಲಿ ಪ್ರತಿಯೊಂದರಲ್ಲಿಯೂ ಗುರುತಿಸಬಹುದಾದ ಅಂಶವೆಂದರೆ ಗೇಯತೆ ಹಾಡುಗಳಾಗಿಯೇ ಹುಟ್ಟಿದ್ದವು. ಹೊಸಕವಿತೆಯ ಪರವಾಗಿ ಕಾವ್ಯದ ಸ್ವರೂಪವನ್ನು ಶಬ್ಧರೂಪಕ್ಕೂ, ಸಂಧಿ ನಿಯಮಗಳಿಗೂ ಕಡೆಗೆ ನಿರ್ದುಷ್ಟತೆಗೂ ಮೀರಿದ ಗುಣವೊಂದಿದೆ ಎಂದು ಧೈರ್ಯವಾಗಿ ಘೋಷಿಸಿದರು. ಈಗಿನ ಕವಿಗಳು ವಿಶ್ವಸಾಹಿತ್ಯದ ಅಭ್ಯಾಸದಿಂದ ತಮ್ಮ ಮನಸ್ಸನ್ನು ವಿಶಾಲಪಡಿಸಿಕೊಂಡಿರುವರೆಂದು ಸೂಚಿಸಿದರು. ಹೊಸಕವಿಗಳು ಬರೆಯುತ್ತಿರುವ ಭಾವಗೀತಗಳ ಲಕ್ಷಣಗಳನ್ನು ಕ್ರೋಢಿಕರಿಸಿ ನಿರೂಪಿಸುವ ಪ್ರಯತ್ನವನ್ನು ಮೊತ್ತಮೊದಲು ಮಾಡಿದವರು. ವಿ.ಸಿ. ಅವರು ಕವಿ ಕವಿತೆಗೆಳನ್ನು ಬರೆಯುವುದು ಆತ್ಮನಿವೇದನೆಗೆ ಮಾತ್ರವಲ್ಲೆ, ಇನ್ನೊಬ್ಬರು ಅದನ್ನು ಅನುಕರಿಸಲೆಂದಲ್ಲ. ಸ್ವರವಿನ್ಯಾಸ, ಅಕ್ಷರ ಯೋಗ, ಲಯಗತಿ, ಚಿತ್ರ ಕಲ್ಪನಾಶಕ್ತಿ ಇವುಗಳು ಕವಿಯ ಮನಸ್ಸಿನ ಭಾವವನ್ನು ಓದುಗರಿಗೆ ತಂದುಕೊಡುವ ಸಾಧನಗಳಾಗುವಷ್ಟು ಮಟ್ಟಿಗೆ ಪ್ರಾಮುಖ್ಯವಾದವು. ‘ಕವಿಯು ಪ್ರಪಂಚವನ್ನು ಕಣ್ಣು ತುಂಬಾ ನೋಡಲಿ. ತನ್ನ ಆದೇಶಗಳು ಒಂದು ಹದಕ್ಕೂ, ಪಾಕಕ್ಕೂ ಬರುವಂತೆ ಮನಸ್ಸನ್ನು ನಿರಂತರವಾಗಿ ಒಂದು ಶಾಖದಲ್ಲಿಟ್ಟುಕೊಳ್ಳಲಿ, ತನ್ನ ವ್ಯಕ್ತಿತ್ವದ ಮುದ್ರೆಯನ್ನು ಕವಿತೆಯ ಮೇಲೆ ಹಾಕಲಿ. ಅವನು ನಿಜವಾಗಿ ವ್ಯಕ್ತಿಯಾದರೆ ಆ ಮುದ್ರೆ ಬಿದ್ದೇ ಅವನ ವಾಣಿ ಕೇಳುವುದು. ಪ್ರಪಂಚಕ್ಕೆ ಒಂದು ಹೊಸದೃಷ್ಟಿಯನ್ನು ಸಾತ್ವಿಕದಿಂದ ಮಿಡಿಯುವ ಒಂದು ಮೃದು ಜೀವನವನ್ನೂ ಕಾಣಿಕೆಯಾಗಿ ಅರ್ಪಿಸಲಿ; ಅದರಿಂದ ಪ್ರಪಂಚದ ಸತ್ವವು ಬೆಳೆಯುವಂತಾಗಲಿ” ಎಂದು ಕವಿವಾಣಿಯ ಗುರಿಯನ್ನು, ರೀತಿಯನ್ನು ನಿರ್ದೇಶಿಸಿದರು. ಭಾವಗೀತೆಯ ರೂಪರೇಖೆಗಳನ್ನು, ಕಾವ್ಯತತ್ವವನ್ನು ಸ್ಪಷ್ಟವಾಗಿ ನಿರೂಪಿಸಲು ಯತ್ನಿಸಿದರು. ವಿ.ಸಿ ಅವರ ಗೀತೆಗಳು ಸಂಕಲನದ ‘ಕೋಗಿಲೆ’- ‘ಮೃಗಶಾಲೆಯ ಸಿಂಹಗಳು’ -ಅಭೀಃ- ‘ಮಗಳನ್ನು ಒಪ್ಪಿಸುವ ಹಾಡು’ ಇವೆಲ್ಲಾ ಪ್ರಸಿದ್ಧ ಗೀತಗಳಾದವು. ಮಗಳನ್ನು ಒಪ್ಪಿಸುವ ಹಾಡಂತೂ ಹಾಡಿನ ಗೂಡಿಗೆ ತೋರಣ ಪ್ರಾಯವಾಯಿತು.

ಮಂಗಳೂರಿನ ಮುಖ್ಯ ಕವಿಗಳಾದ ಎಂ. ಗೋವಿಂದಪೈ ಅವರು ಯಾವ ಬಳಗವನ್ನೂ ಕಟ್ಟದೆ ಏಕಾಂಗಿಯಾಗಿ ನಿಂತು ಕಾವ್ಯ ಸೃಷ್ಟಿಗೆ ತೊಡಗಿದರು. ೧೯೩೦ರಲ್ಲಿ ಪ್ರಕಟವಾದ ‘ಗಿಳಿವಿಂಡು’ ಕವಿತಾ ಸಂಕಲನ ಒಬ್ಬ ಕವಿ ಮಾಡಿದ ಅದ್ಭುತ ಕಾವ್ಯವಾಗಿ ಸಿದ್ಧಿಪಡೆಯಿತು. ಸರಳರಗಳೆಯಲ್ಲಿ ಮಾಸ್ತಿಯವರು ಮೊದಲಿಗರಾದಂತೆ, ಕನ್ನಡದ ಮೊತ್ತಮೊದಲನೆಯ ಸಾನೆಟ್ ಬರೆದವರು ಗೋವಿಂದಪೈಗಳಾದರು. ಕಾವ್ಯದ ನಿಯಮಗಳನ್ನು ಪ್ರಾಸವನ್ನೂ ಬಿಟ್ಟರೆ, ಕೈಕಾಲು ಊನವಾಗುತ್ತದೆ ಎಂಬ ಕುರುಡು ನಂಬಿಕೆಯನ್ನು ಮುರಿದು, ಪ್ರಾಸತ್ಯಾಗವನ್ನು ಮಾಡಿ, ಕನ್ನಡ ಕವಿತಾ ಕನ್ನೆಯ ಕೈಯ್ಯಲ್ಲಿ ತೊಡಿಸಿದ ಸಂಕೋಲೆಗಳನ್ನು ಬಿಡಿಸಿದ ಕೀರ್ತಿ ಇವರಿಗೆ ಸಂದಿತು. ಕಥನ ಕವನ, ಪ್ರಗಾಥ, ಮಹಾಕಾವ್ಯಖಂಡ, ಸಾನೆಟ್ ಮುಂತಾದ ಪ್ರತಿಯೊಂದು ಕಾವ್ಯರೂಪದಲ್ಲಿಯೂ ಹಿರಿಯಸಿದ್ಧಿ ಪಡೆದಿದ್ದರು. ಇವರ ಕವಿತೆಗಳಲ್ಲಿ ಬಹುಮುಖವಾದ ಪಾಂಡಿತ್ಯ ಶಬ್ಧ ಪ್ರಭುತ್ವ, ಭಾವವಿಲಾಸ, ದೈವಭಕ್ತಿ, ನಾಡುನುಡಿಗಳ ಪ್ರೇಮ ಮಿಡಿಯಿತು. ಪಾಶ್ಚಾತ್ಯ ಸಾಹಿತ್ಯ ಮತ್ತು ನಮ್ಮ ದೇಶದ ಸಾಹಿತ್ಯಗಳನ್ನು ಚೆನ್ನಾಗಿ ಅರಗಿಸಿಕೊಂಡ ಸಮನ್ವಯ ಗೋವಿಂದಪೈ ಅವರಲ್ಲಿ ಎದ್ದು ಕಂಡಿತು. ಇವರ ಕವಿತಾವಸ್ತು, ವಿಶ್ವವ್ಯಾಪ್ತಿಯಾದ ಧರ್ಮವನ್ನು ಕುರಿತದ್ದು. ಹೇಳುವ ಬಗೆಯಾದರೋ ಧ್ವನಿಪೂರ್ಣವಾಗಿ ನೇರವಾಗಿ ಎದೆಯನ್ನೇ ಮುಟ್ಟುವಂತಹುದು. ಈ ಸಾಧನೆ ಸಿದ್ಧಿಗಳನ್ನು ಇವರ ‘ಗೊಲ್ಗೊಥಾ ಮತ್ತು ವೈಶಾಖೀ’ ಮಹಾಕಾವ್ಯ ಖಂಡಗಳು ನಿರೂಪಿಸಿದವು. ‘ತಾಯೆ ಬಾರ ಮೊಗವತೋರೆ ಕನ್ನಡಿಗರ ಮಾತೆಯೆ ಹರಸು ತಾಯೆ, ಸುತರಕಾಯೆ, ನಮ್ಮ ಜನ್ಮದಾತೆಯೆ ಕವಿತೆಯಲ್ಲಿ ಬಳಸಿದ ಅರ್ಥ, ಶಬ್ದ ಸೌಂದರ್ಯ ಗೋವಿಂದಪೈಯವರ ಕಲ್ಪನೆಯ ಘನತೆಯನ್ನು ಎತ್ತಿ ಹಿಡಿಯಿತು.

ಗೋವಿಂದ ಪೈ ಅವರಲ್ಲದೆ ಮಂಗಳೂರು ಪ್ರಾಂತ್ಯದಲ್ಲಿ ಬಹಳ ಕವಿಗಳು ಆಗ ಮುಂದೆ ಬರಲಿಲ್ಲ. ಮುಳಿಯ ತಿಮ್ಮಪ್ಪಯ್ಯ, ಎಂ.ಎನ್. ಕಾಮತ್, ಕಡ್ಲೆಂಗೋಡ್ಲು ಶಂಕರಘಟ್ಟ, ಸೇರಿಯಾಪ ಕೃಷ್ಣಭಟ್ಟ, ಪಾಂಡೇಶ್ವರ ಗಣಪತಿರಾವ್, ಪೇಜಾಚರದ ಸದಾಶಿವರಾವ್, ಪಂಜೆ ಮಂಗೇಶರಾವ್ ಇವರುಗಳು ಮಾತ್ರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಸರು ಮಾಡಿದ್ದರು. ತುಳುವಿನಲ್ಲಿದ್ದ ಜಾನಪದ ಕಥೆಗಳನ್ನು ಜೋಗುಳದ ಹಾಡುಗಳನ್ನು ಕೇಳಿ ಮೆಚ್ಚಿದ್ದ ಪಂಜೆ ಮಂಗೇಶರಾಯರು ಅವುಗಳಲ್ಲಿ ಕೆಲವನ್ನು ಕನ್ನಡಿಸಿ, ಜೋಗುಳಗಳನ್ನು, ತಮ್ಮ ಕವಿತಾ ಸಂಕಲನ ‘ಪದ್ಯಪುಸ್ತಕ’ದಲ್ಲಿ ಅಚ್ಚುಹಾಕಿದರು. ಕಥನ ಕವನಗಳನ್ನು ರೂಢಿಸಿ ಸಂಶೋಧನೆ ನಡೆಸಿದರು. ಯಕ್ಷಗಾನದ ಪದಗಳನ್ನೂ ತಮ್ಮ ‘ಪದ್ಯ ಪುಸ್ತಕ’ಗಳಲ್ಲಿ ಹಾಕಿದರು. ಜಾನಪದ ಕಲೆಯ ಮುಖ್ಯರೂಪವಾದ ಯಕ್ಷಗಾನ ಮತ್ತು ಮನೆಮನೆಯಲ್ಲೂ ಪ್ರತಿಧ್ವನಿಸುವ ಜೋಗುಳದ ಹಾಡುಗಳಿಗೆ ಮತ್ತೇ ಪ್ರಾಮುಖ್ಯತೆ ಬಂದಿತು. ಹಳೆಯ ಜೋಗುಳದ ಹಾಡುಗಳ ಹಾದಿಯಲ್ಲಿಯೇ ಕೆಲವು ಹೊಸ ಜೋಗುಳದ ಹಾಡುಗಳ ಸೃಷ್ಟಿಯಾಯಿತು. ಹಿಂದಿನ ಯಕ್ಷಗಾನಗಳ ಹಾದಿಯಲ್ಲೇ ಕೆಲವು ಹೊಸ ಯಕ್ಷಗಾನಗಳೂ ಸಿದ್ಧವಾದವು.

ಜಾನಪದ ಬಾನಂಗಣಕೆ ಹಾರಿದ ನವೋದಯ ಪಕ್ಷಿ

ಜಾನಪದ ಸಾಹಿತ್ಯದಲ್ಲಿ ಆಸಕ್ತಿ ಮೂಡಿ ಆ ಬಗೆಯ ಸಾಹಿತ್ಯವನ್ನು ಸೃಷ್ಟಿಮಾಡುವ ಪ್ರಯತ್ನ ಎಲ್ಲಾ ಭಾಷೆಗಳ ಸಾಹಿತ್ಯಗಳ ನವೋದಯ ಕಾಲದಲ್ಲಿ ನಡೆದಂತೆ ನಮ್ಮ ಕನ್ನಡದಲ್ಲೂ ನಡೆಯಿತು. ಬೇರೆ ಬೇರೆ ದೇಶದ ಸಾಹಿತ್ಯದ ಇತಿಹಾಸದಂತೆ ಕನ್ನಡ ಭಾಷೆಯಲ್ಲೂ ಜಾನಪದ ಸಾಹಿತ್ಯ ‘ಪುರ್ನದರ್ಶನ’ವಾಯಿತು. ಪಂಜೆಯವರ ಕಾಲದಿಂದ ಪ್ರಾರಂಭವಾದ ಈ ಪ್ರಯತ್ನವನ್ನು ನಂತರ ಬಂದ ವಿದ್ವಾಂಸರು ತಾವೂ ಮುಂದುವರೆಸಿದರು. ಜಾನಪದ ಹಾಡುಗಳನ್ನು ಸಂಗ್ರಹಿಸಿ ಕೂಡಿಸಿದರು. ಹೀಗೆ ಮಂಗಳೂರಿನಲ್ಲಿ ಪ್ರಾರಂಭವಾದ ಈ ಆಸಕ್ತಿ ನಂತರ ಧಾರವಾಡ ಮತ್ತು ಮೈಸೂರು ಕಡೆಗಳಿಗೂ ಆವರಿಸಿ ಜಾನಪದ ಗೀತೆಗಳ ಮೇಲಿನ ಒಲವು ಹೆಚ್ಚಾಯಿತು.

ಧಾರವಾಡ ‘ಗೆಳೆಯರ ಗುಂಪು’ ರಚಿಸಿ ಪ್ರಕಟಿಸಿದ್ದ ‘ಹಕ್ಕಿ ಹಾರುತಿದೆ’ ಹೊಸ ಬಗೆಯ ಸಾಹಿತ್ಯದೊಂದಿಗೆ ಪರ್ವಕಾಲವನ್ನು ಆರಂಭಿಸಿತು. ಬದಲಾವಣೆ ಮತ್ತು ಬೆಳವಣಿಗೆ, ಇವುಗಳ ಮಧ್ಯೆ, ದ.ರಾ.ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಶಂಭಾಜೋಶಿ, ಅಭ್ಯಂಕರ, ಮಧುರಚೆನ್ನ, ವಿನೀತ ರಾಮಚಂದ್ರ, ವಿ.ಕೆ.ಗೋಕಾಕ, ರಂ.ಶ್ರೀ.ಮುಗಳಿ, ಶ್ರೀಧರ ಖನೋಳ್ಕರ ಮುಂತಾದವರು ಗೆಳೆಯರ ಗುಂಪಿನ ಗರಿಗಳಾಗಿ ಸೇರಿದರು. ‘ಮನೋಹರ ಗ್ರಂಥ ಮಾಲೆ’ ‘ಜಯಂತಿ’ಯಂತಹ ಪ್ರಕಟನಾ ಸಂಸ್ಥೆಗಳು, ನಿಯತಕಾಲಿಕಗಳು ಪ್ರಾರಂಭವಾಗತೊಡಗಿದವು. ಕಾವ್ಯವಿಮರ್ಶೆಯ ತತ್ವಗಳನ್ನು ಪಾಶ್ಚಾತ್ಯ ವಿಮರ್ಶನ ಮಾಡುವುದು ಪ್ರಾರಂಭವಾಯಿತು. ಹಾಗೆಯೇ ಜಾನಪದ ಗೀತಗಳನ್ನು ಹಳ್ಳಿ ಹಳ್ಳಿಯಿಂದ ಸಂಗ್ರಹಿಸುವ, ಮರೆತು ಹೋಗುತ್ತಿದ್ದ ಅವನ್ನು ಹೊಸ ಸಾಹಿತ್ಯಗಳ ಸೃಷ್ಟಿಯ ಮೂಲಕ, ಮೂಲ ಮಟ್ಟುಗಳನ್ನು ಬಳಿಸಿಕೊಳ್ಳುವ ಪ್ರಯತ್ನವೂ ನಡೆಯಿತು. ಹೊಸ ಕವಿತೆಗೆ ಬೇಕಾದ ಹೊಸ ಛಂದೋರೂಪಗಳ ಸಲುವಾಗಿ ಜಾನಪದ ಧಾಟಿಗಳನ್ನು ಅಳವಡಿಸಿಕೊಂಡರು.

ಕವಿ ದ.ರಾ. ಬೇಂದ್ರೆಯವರು ಗೆಳೆಯರ ಗುಂಪಿನ ನಿರ್ದೇಶಕರಾಗಿದ್ದರು. ಕನ್ನಡದ ಏಕೀಕರಣದ ಕಡೆಗೆ ಒಂದು ಮುಖ್ಯ ಹೆಜ್ಜೆಯನ್ನಿಟ್ಟಿದ್ದ ಗೆಳೆಯರ ಗುಂಪು ಹೊಸ ಸಾಹಿತ್ಯದ ಅರಿವು, ಅಗತ್ಯಗಳನ್ನು ತಿಳಿದುಕೊಂಡಿತ್ತು. ಕಾವ್ಯ ರಚನೆಯಲ್ಲಿ ಹೊಸ ಪ್ರಯೋಗಗಳನ್ನು ನಡೆಸಿದುದೇ ಅಲ್ಲದೆ ಕಾವ್ಯದ ವಿಮರ್ಶೆಯನ್ನೂ ಬೆಳೆಸಿತು. ‘ಗೆಳೆಯರ ಗುಂಪಿ’ನವರ ಶುಭಾರಂಭದಿಂದ ಕಾವ್ಯದ ಹಳೆಯ ರೂಪಕ್ಕೆ ಹೊಸ ಆತ್ಮವೂ ಅನುಭವ ಸಾಹಿತ್ಯದ ಬಗ್ಗೆ ಆಸಕ್ತಿಯೂ ಬಂದಿತು. ಛಂದಸ್ಸು ತಾನಾಗಿಯೇ ಭಾವಕ್ಕೆ ತಕ್ಕಂತೆ ಬಳುಕಿ ಬದಲಾಯಿತು. ಈ ಕಾಲದಲ್ಲಿ ಬೇಂದ್ರೆಯವರು ತಾವು ಮನೆಯಲ್ಲಿ, ತಮ್ಮ ಚಿಕ್ಕಂದಿನಲ್ಲಿ ತಾಯಿಯಿಂದ ಕೇಳಿದ್ದ ಮರಾಠೀ ಅಭಂಗ್, ದಾಸರಪದಗಳು, ಊರಲ್ಲಿ ವರ್ಷ ತುಂಬಾ ಕೇಳುತ್ತಿದ್ದ ಲಾವಣಿ, ಅನುಭವ ಪದಗಳು, ಇವುಗಳಿಂದ ಕನ್ನಡ ಕಾವ್ಯಕ್ಕೆ ಜಾನಪದ ಮಟ್ಟುಗಳನ್ನು ಅಳವಡಿಸಿಕೊಳ್ಳಲು ಯತ್ನಿಸುತ್ತಿದ್ದರು.

‘ಹಕ್ಕಿ ಹಾರುತಿದೆ’ ಕವನ ಸಂಗ್ರಹ ತಂದ ಗೆಳೆಯರ ಗುಂಪು ಭಾವ ಪ್ರಪಂಚವನ್ನು ವಿಸ್ತರಿಸಿದಂತೆ ಛಂದಸ್ಸಿನ ಚೌಕಟ್ಟನ್ನೂ ವಿಸ್ತರಿಸಿತು ‘ಹಕ್ಕಿ ಹಾರುತಿದೆ’ ಎನ್ನುವ ಶೀರ್ಷಿಕೆಯಿಂದಲೇ ಕವಿತೆಯಲ್ಲಿ ಒಂದು ಹೊಸ ತಂತಿಯನ್ನು ಮೀಟಿತು. ಕಾವ್ಯದ ಹಳೆಯ ಸಂಕೋಲೆಗಳನ್ನು ಕಳಚಿ ಹೊಸಯುಗದ ಬಾಗಿಲನ್ನು ತೆರೆಯಿತು.

ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ. ಕನ್ನಡದ ಹೊಸಕವಿತೆಯಲ್ಲಿ ಮೊತ್ತಮೊದಲ ಬಾರಿಗೆ ಹಳ್ಳಿಯ ಹಾಡುಗಳ ಮಟ್ಟುಗಳಿಗೆ ಸಾಹಿತ್ಯದಲ್ಲಿ ಮುಖ್ಯ ಸ್ಥಾನವನ್ನು ದೊರಕಿಸಿಕೊಟ್ಟ ಕೀರ್ತಿ, ಗೆಳೆಯರ ಗುಂಪಿನ ಕವಿಗಳಿಗೆ ಸೇರುತ್ತದೆ. ಜಾನಪದ ಗೀತೆಗಳನ್ನು ಕೂಡಿಸಿ, ಅವುಗಳನ್ನು ಪರಿಶೋಧಿಸಿ, ಅಭ್ಯಾಸ ಮಾಡಿ, ಅವುಗಳ ಹಿರಿಯಗುಣವನ್ನು ಗುರುತಿಸಿ, ಪುನರ್ಜನ್ಮ ಕೊಟ್ಟಿದ್ದೇ ಈ ಗೆಳಯರ ಗುಂಪಿನ ಮಹಾತ್ಸಾಧನೆ ಎನ್ನಬೇಕು.

ಜಾನಪದ ಗೀತಗಳನ್ನು ಸಂಕಲಿಸುವ ಕಾರ್ಯವನ್ನು ಗೆಳೆಯರ ಗುಂಪಿನ ಧೂಲಾ, ಕಾಪಸೆ, ರೇವಪ್ಪ, ಹಲಸಂಗಿ ಚೆನ್ನಮಲ್ಲಪ್ಪ, ಸಿಂಪಿ ಲಿಂಗಣ್ಣ, ಮಧುರಚೆನ್ನ ಮುಂತಾದವರು ಕೈಕೊಂಡರು. ಈ ಜಾನಪದ ಗೀತಗಳ ಮಟ್ಟುಗಳನ್ನು ಪ್ರತಿಭಾಪೂರ್ಣವಾಗಿ ತಮ್ಮ ಕವಿತೆಗೆ ಉಪಯೋಗಿಸಿಕೊಂಡವರಲ್ಲಿ ಬೇಂದ್ರೆಯವರು ಮುಖ್ಯರು. ಅವರೇ ಹೇಳಿದಂತೆ ಜಾನಪದ ಗೀತಗಳಲ್ಲಿ ನೆಲದೆದೆಯ ತಾಯಿಬೇರಿನ ಸಂಚಲನವನ್ನು ಅನುಭವಿಸುತ್ತಾ, ತಮ್ಮ ಕವಿತೆಗಳಿಗೆ ಈ ಸಂಚಲನವನ್ನು ನೀಡಿದರು. ಶಿಶುನಾಳ ಷರೀಷ್ ಸಾಹೇಬರ ತತ್ವಪದಗಳು ಆಗ ಎಲ್ಲೆಲ್ಲಿಯೂ ಪ್ರಚಾರದಲ್ಲಿದ್ದವು. ಸಾಮಾನ್ಯ ಜನರ ದಿನಬಳಕೆಯ ಮಾತನ್ನು ಜನರ ಜೀವನದಿಂದಲೇ ಅರಿಸಿಕೊಂಡ ಘಟನೆಗಳನ್ನು ವೇದಾಂತದ ಹೋಲಿಕೆಗಳ ಮೂಲಕ ಕವಿತೆಯಲ್ಲಿ ಹೇಳುವುದು ಜನಪ್ರಿಯವಾಯಿತು. ಅನುಭವವನ್ನು ಜೀವನದಿಂದಲೇ ಅರಿಸಿಕೊಂಡು ಸಮರ್ಥ ಉಪಮೆಗಳ ಮೂಲಕ ಬಿತ್ತರಿಸುವ ಷರೀಫರ ಹಾಡುಗಳು ಜನಜನಿತವಾದವು.

ಗೆಳೆಯರ ಗುಂಪಿನ ಮಧುರಚೆನ್ನರಿಗೆ, ಷರೀಫರ ಹಾಡು, ಅರವಿಂದ ದರ್ಶನ, ವಚನ ಸಾಹಿತ್ಯ, ಜಾನಪದ ಹಾಡುಗಳು ವಿಶೇಷ ಪ್ರಭಾವ ಬೀರಿದವು. ಜೊತೆಗೆ ಎ.ಇ.ಯೇಟ್ಸ್ ಎಂಬ ಇಂಗ್ಲೀಷ್ ಅನುಭಾವಿ ಕವಿಯ ಪ್ರಭಾವವೂ ಜೊತೆಗೂಡಿತು.

ಜಾನಪದ ಹಾಡುಗಳ ಪುನರುಜ್ಜೀವನವು ಎಲ್ಲ ದೇಶಗಳ ಸಾಹಿತ್ಯದ ನವೋದಯದ ಕಾಲದಲ್ಲಿಯೂ ಆಗಿದ್ದಲ್ಲದೆ ಇಂಗ್ಲೆಂಡಿನಲ್ಲಿ ವರ್ಡ್ಸ್‌ವರ್ತ್, ಕೋಲರಿಜ್ ಮುಂತಾದ ರೊಮ್ಯಾಂಟಿಕ್ ಕವಿಗಳ ಹೊಸಕಾವ್ಯ ಸಿದ್ಧತೆಗೆ ಜನಪದ ಸಾಹಿತ್ಯವೇ ಪೋಷಕ ಶಕ್ತಿಯಾಗಿ ಬಂದದ್ದು ಕಂಡುಬರುತ್ತದೆ. ಜಾನಪದ ಗೀತಗಳು ಜನಜೀವನದಲ್ಲಿ ತುಂಬಿದ್ದ ಶೃಂಗಾರ, ರಮ್ಯತೆ, ಅನುಭಾವ, ಮೈ ಜುಮ್ಮೆನಿಸುವ ಅದ್ಭುವ ಕತೆಗಳು, ಇವುಗಳನ್ನೂ, ಭಾಷೆಯ ಸಹಜತೆಯನ್ನೂ, ಕಲ್ನೆಯ ಹೊಸತನವನ್ನೂ, ಕಾವ್ಯಕ್ಕೆ ತಂದುಕೊಟ್ಟವು. ರೊಮ್ಯಾಂಟಿಕ್ ಕಾವ್ಯಕ್ಕೆ ಇವು ನಿಜವಾದ, ನಿರ್ವಿವಾವಿವಾದ ಸ್ಫೂರ್ತಿಗಳಾದವು. ಕನ್ನಡ ಸಾಹಿತ್ಯದಲ್ಲಿಯೂ ಜಾನಪದ ಗೀತೆಗಳು ಹಿರಿಯಸ್ಥಾನವನ್ನು ಪಡೆದುಕೊಂಡವು. ವಿಶೇಷವಾಗಿ ನವೋದಯದ ಕಾಲದಲ್ಲಿನ ಕವಿಗಳಿಗೆ ಜಾನಪದ ಗೀತೆಗಳು ಹೊಸ ಸ್ಫೂರ್ತಿಯನ್ನು ತಂದುಕೊಟ್ಟವು.

* * *