‘ಶಿವಶರಣ ಹಾಗೂ ಹರಿದಾಸ’ ಈ ಎರಡು ಜನಮುಖಿ ಆಂದೋಲನಗಳು ಕರ್ನಾಟಕದ ಸಂಸ್ಕೃತಿಕ ಜಗತ್ತಿನ ಉತ್ಕೃಷ್ಟ ಮಾದರಿಗಳು. ಶಿವಶರಣರದು ವೈದಿಕ ಧರ್ಮದ ವಿರುದ್ಧದ ಪ್ರತಿಭಟನೆಯಾದರೆ ವೈದಿಕ ಧರ್ಮದ ಪುನರುತ್ಥಾನದ ಆಶಯದಲ್ಲಿ ಹರಿದಾಸ ಆಂದೋಲನ ಹುಟ್ಟಿತು. ವಚಲ ಸ್ವರವಚನಗಳ ಮೂಲಕ ಶಿವಶರಣರು ಹರೋತ್ತಮತೆಯನ್ನು ಪ್ರತಿಪಾದಿಸಿದರೆ ಹರಿದಾಸರು ಕೀರ್ತನೆ, ಸುಳಾದಿ ಉಗಾಭೋಗಗಳಲ್ಲಿ ಹರಿಸರ್ವೋತ್ತಮತೆಯನ್ನು ಮಂಡಿಸಿದರು.

ಕನ್ನಡದ ಪಾಡು ಮೇಲ್ಟಾಡು, ಬಾಜನೆಗಬ್ಬ, ಪದಗಳೇ ಕಾಲಾಂತರದಲ್ಲಿ ಕೀರ್ತನೆಯ ರೂಪ ಪಡೆಯಿತು. ೧೨ನೇ ಶತಮಾನಗಳಲ್ಲಿ ಶರಣರು ಹಾಡಿದ ಪದಗಳೇ ಕನ್ನಡದ ಮೊದಲ ಕೀರ್ತನೆಗಳಾದವು. ೧೫-೧೬ನೇ ಶತಮಾನಗಳಲ್ಲಿ ಹರಿದಾಸರು ಯಾವ ಕೀರ್ತನ ಸಾಹಿತ್ಯ ಪ್ರಕಾರದಿಂದ ಇಡೀ ದಕ್ಷಿಣ ಭಾರತದ ಸಂಗೀತ ಮತ್ತು ಸಾಹಿತ್ಯ ಪ್ರಪಂಚಗಳೆರಡರಲ್ಲೂ ಅದ್ವಿತೀಯ ಕೀರ್ತಿಯನ್ನು ಗಳಿಸಿದರೋ ಆ ಕೀರ್ತನ ಪ್ರಕಾರಕ್ಕೆ ಬಸವಾದಿ ಶಿವಶರಣರ ಗೀತೆಗಳೇ ಮೂಲವೂ, ಮಾದರಿಯೂ ಆಗಿರಬೇಕೆಂದು ಎಲ್. ಬಸವರಾಜು ಅವರು ಅಭಿಪ್ರಾಯಪಟ್ಟಿದ್ದಾರೆ.

ವಚನಕಾರರು ಕನ್ನಡ ಸಹಿತ್ಯಕ್ಕೆ ನೀಡಿದ ಕೊಡುಗೆಯೇ, ಜನ ಸಾಮಾನ್ಯರ ನಾಡಿಬಡಿತವನ್ನು ಕಾವ್ಯದಲ್ಲಿ ಮೂಡಿಸಿತು. ಕನ್ನಡ ಕೀರ್ತನ ಸಾಹಿತ್ಯದ ಮೊದಲ ಕೀರ್ತನಕಾರನೆಂಬ ಕೀರ್ತಗೆ ಪಾತ್ರನಾದ ಸಕಲೇಶ ಮಾದರಸ, ಬಸವೇಶ್ವರರ ಹಿರಿಯ ಸಮಕಾಲೀನನಾದುದರಿಂದ ೧೨ನೇ ಶತಮಾನದಲ್ಲಿ ಕೀರ್ತನ ಸಾಹಿತ್ಯದ ಪರಂಪರೆ ಅಧಿಕೃತವಾಗಿ ಪ್ರಾರಂಭವಾಯಿತೆನ್ನಬಹುದು. ಇದನ್ನು ಬಸವೇಶ್ವರ, ಅಲ್ಲಮಪ್ರಭು, ಚೆನ್ನಬಸವೇಶ್ವರ, ಸಿದ್ಧರಾಮ, ಅಕ್ಕಮಹಾದೇವಿ, ನೀಲಲೋಚನೆ ಮುಂತಾದ ನೂರಾರು ಶಿವಶರಣರು ಮುಂದುವರೆಸಿದರು. ಶಿವಶರಣರ ಅನುಭವಾಮೃತವೇ ವಚನಗಳೆನಿಸಿದವು.

ಬಸವೇಶ್ವರ ಮೊದಲಾದ ಶಿವಶರಣರು ಕನ್ನಡ ಕೀರ್ತನ ಸಾಹಿತ್ಯದ ಪ್ರವರ್ತಕರಾದರೂ ಈ ಪರಂಪರೆಗೆ ಒಂದು ಮಹಾಪೂರವನ್ನು ತಂದು ಅಸಂಖ್ಯಾತ ಹಾಡುಗಬ್ಬಗಳನ್ನು ರಚಿಸಿ ಕೀರ್ತನಕಾರರೆಂದೇ ಪ್ರಸಿದ್ಧರಾದವರು ಹರಿದಾಸರು. ಸಂಕೀರ್ಣವಾಗಿದ್ದ ಮತತತ್ವಗಳು ಹಾಗೂ ಆಧ್ಯಾತ್ಮಿಕ ಸಂಗತಿಗಳು ಸಂಗೀತದ ಮಾಧ್ಯಮದಲ್ಲಿ, ಸರಳ ಕನ್ನಡದಲ್ಲಿ, ಸುಲಭ ಭಕ್ತಿಯಲ್ಲಿ ಜನಸಾಮಾನ್ಯರಿದ್ದಲ್ಲೇ ದೊರೆತದ್ದು ರೋಚಕವಾಗಿತ್ತು. ದಾಸರು ಕೊಟ್ಟ ಈ ಹೊಸ ಪರಿಕಲ್ಪನೆ ಜನಸಾಮಾನ್ಯರಲ್ಲಿ ಒಂದು ಆತ್ಮವಿಶ್ವಾಸ ಹಾಗೂ ಭರವಸೆಯನ್ನು ಹುಟ್ಟು ಹಾಕಿತು. ಹರಿದಾಸ ಸಾಹಿತ್ಯ, ಜನರ ಮಧ್ಯೆ, ಜನರ ಮುಂದೆ ಹುಟ್ಟಿದ ಆಶುರಚನೆಗಳಾಗಿದ್ದವು. ಅವು ಅಂದಂದಿಗೆ ಮೌಖಿಕವಾಗಿ ಹಾಡಿದ ತುರ್ತಾಗಿತ್ತು. ಅನುಭವ ಮಂಟಪದಂತಹ ಕೇಂದ್ರೀಕೃತ ವ್ಯವಸ್ಥೆಯೊಳಗೆ ಇವು ನಿರ್ಮಾಣಗೊಂಡದ್ದಾಗಿರಲಿಲ್ಲ. ಅವು ಬೀದಿಬೀದಿಗಳಲ್ಲಿ, ಮನೆಮನೆಗಳಲ್ಲಿ, ಓಡಾಡುತ್ತ, ಹಾಡುತ್ತ, ತಿರುಗುತ್ತಾ, ಕುಣಿಯುತ್ತಾ ಸಾಗುವಗ ಕಂಡುಂಡ ಲೋಕಾನುಭವದ ಸಾರವಾಗಿದ್ದವು. ಕ್ಷಣದಲ್ಲಿಯೇ ಕಟ್ಟಿದ ಅನುಭವದ ಅಮೃತಬಿಂದುಗಳಾಗಿದ್ದವು. ಭಾವತನ್ಮಯತೆಯಲ್ಲಿ ಮೂಡಿದ್ದ ಈ ರಚನೆಗಳು ಕವಿತೆಯ ಎಲ್ಲ ಉತ್ತಮಾಂಶಗಳನ್ನು ತುಂಬಿಕೊಂಡು ಸಾಹಿತ್ಯ ಮತ್ತು ಸಂಗೀತದ ಸಮರಸದ ಪಾಕವಾಗಿದ್ದ ನಿರ್ಮಲ ಭಾವಗೀತೆಗಳಾಗಿದ್ದವು. ಮೌಖಿಕವಾಗಿ ಹುಟ್ಟಿ ಪ್ರಸಾರವಾದ ಈ ಭಾವಗೀತೆಗಳೇ ಲಿಖಿತರೂಪಕ್ಕೆ ಬಂದು ಉಳಿದು ‘ದಾಸಸಾಹಿತ್ಯ’ ಎಂಬ ಹೆಸರು ಪಡೆಯಿತು.

ಕನ್ನಡ ದಾಸ ಸಾಹಿತ್ಯದಲ್ಲಿ ಮೊದಲ ರಚನೆ ನೀಡಿದವರು ೧೩-೧೪ನೇ ಶತಮಾನದಲ್ಲಿದ್ದ ನರಹರಿತೀರ್ಥರೆನ್ನಬಹುದು. ಇವರ ‘ಎಂತುಮರುಳಾದೆ ನಾನೆಂತು ಮರುಳಾದೆ’ ಮತ್ತು ‘ಹರಿಯೆ ಇದು ಸರಿಯೆ’- ಎಂಬ ಎರಡು ಕೀರ್ತನೆಗಳು ಮಾತ್ರ ದೊರೆತಿದ್ದು ‘ನರಹರಿ’ ಎಂಬ ಅಂಕಿತವನ್ನು ಪಡೆದಿದೆ. ಕೀರ್ತನೆಗಳ ಎಲ್ಲಾ ಲಕ್ಷಣ, ಅವಯವಗಳನ್ನು, ಒಳಮಿಡಿತವನ್ನು ಚಿತ್ರಸುವ ಈ ಎರಡು ಕೀರ್ತನೆಗಳು ಆತ್ಮ ಚಿಂತನೆಯ ಪ್ರವೃತ್ತಿ ಮತ್ತು ಪ್ರಾಮಾಣಿಕ ನಿವೇದನೆಯೊಂದಿಗೆ ಹರಿದಾಸ ಪರಂಪರೆಯನ್ನು ತೆರೆದವು.

ಹರಿದಾಸರ ಕೀರ್ತನೆಗಳು ಮತ್ತು ಸುಗಮಸಂಗೀತ

ಹರಿದಾಸರು ಹಾಡಲೆಂದು ಕೀರ್ತನೆಗಳನ್ನು ಬರೆದರಾದರೂ, ಹಾಡಿಗಾಗಿಯೇ ಕೀರ್ತನೆಯನ್ನು ಬರೆಯಲಿಲ್ಲ. ಅದರ ದೃಷ್ಟಿಯಲ್ಲಿ ಕೃತಿಯೆಂಬುದು ಸಾಹಿತ್ಯ ಮತ್ತು ಸಂಗೀತಗಳ ಒಟ್ಟು ಮೊತ್ತ. ಶಿವದಾಸ, ಹರಿದಾಸ ಮತ್ತು ಶ್ರೀ ವೈಷ್ಣವ ಕವಿಗಳಲ್ಲಿ ಸಹಿತ್ಯ ಮತ್ತು ಸಂಗೀತ ಸಾಮರಸ್ಯವಾಗಿತ್ತು. ಭಕ್ತಿಯೇ ಈ ಹಾಡುಗಳಿಗೆ ಆಧಾರ ಶ್ರುತಿಯಾಗಿ ಮಿಡಿದಿತ್ತು. ಈ ಒಂದು ಗುಣವೇ ನವೋದಯ ಕವಿಗಳು ಬರೆದ ಕೀರ್ತನೆಗಳಲ್ಲೂ ಹಾಸುಹೊಕ್ಕಾಯಿತು. ಸಂಗೀತ ಮತ್ತು ಭಕ್ತಿ, ಕೀರ್ತನ ಸಾಹಿತ್ಯದ ಅವಿಭಾಜ್ಯ ಅಂಶಗಳಾದವು. ನವೋದಯದ ಕವಿಗಳಾದ ಮಾಸ್ತಿಯವರ (೧೯೨೨) ‘ಬಿನ್ನಹ’ ಕವಿತಾ ಸಂಗ್ರಹದಲ್ಲಿನ ಹಾಡುಗಳು ‘ದಾಸಸಾಹಿತ್ಯ’- ವಚನಸಾಹಿತ್ಯಗಳ ಸಂಪ್ರದಾಯಕ್ಕೆ ಸೇರಿ ರಾಗ-ತಾಳಗಳೊಂದಿಗೆ ಹೆಸರಿಸಲ್ಪಟ್ಟವು ‘ಬಿನ್ನಹ’ ಗೀತೆಗಳ ಗೊಂಚಲೆಂದು ಹೇಳಿಕೊಂಡ ಮಾಸ್ತಿಯವರು, ಶೈಲಿ ಬಂಧುಗಳಲ್ಲಿ ಪುರಂದರ ದಾಸರ ಕೀರ್ತನೆಗಳನ್ನೇ ಸ್ಫೂರ್ತಿಯನ್ನಾಗಿಸಿಕೊಂಡಿದ್ದರು. ೧೯೨೬ರಲ್ಲಿ ಬೆಟಗೇರಿ ಕೃಷ್ಣಶರ್ಮರು ‘ಭಾವಗೀತೆ’ ಎನ್ನುವ ಕವಿತಾ ಸಂಕಲನವೊಂದನ್ನು ಧಾರವಾಡದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಮೂಲಕ ಸಂಪಾದಿಸಿ ಪ್ರಕಟಿಸಿದರು. ಅದರ ತುಂಬ, ಪುರಂದರದಾಸ, ಕನಕದಾಸ, ವಾದಿರಾಜ, ನಿಜಗುಣ ಶಿವಯೋಗಿ ಮೊದಲಾದವರ ಕೀರ್ತನೆಗಳೇ ಅಲ್ಲದೆ, ಕೀರ್ತನೆಯ ಶಿಲ್ಪವನ್ನು ಉಪಯೋಗಿಸಿ ಡಿ.ವಿ.ಜಿ. ಬೆಟಗೇರಿ ಕೃಷ್ಣ ಶರ್ಮ ಮತ್ತು ಮಾಸ್ತಿಯವರು ಬರೆದ ಕವಿತೆಗಳೂ ಇದ್ದವು. ಕನ್ನಡದ ಭಾವಗೀತೆ ಕೀರ್ತನ ಸಾಹಿತ್ಯದಿಂದ ಪ್ರೇರಣೆ ಪಡೆದುಕೊಂಡಿದ್ದಕ್ಕೆ ಈ ಕವಿತಾ ಸಂಕಲನ ಸಾಕ್ಷಿಯಾಯಿತು. ಅದಾಗಲೇ ಹೊಸಗನ್ನಡದ ಬಾನಿನತ್ತ ಕಣ್ಣರಳಿಸಿ ನೋಡುತ್ತಿದ್ದರೂ, ಹೊಸ ಅನುಭವವನ್ನು ಬಾಚಿಕೊಳ್ಳಲು ಭಯ, ಸಂಕೋಚಗಳಿದ್ದವು.

ಪಾಶ್ಚಾತ್ತೀಕರಣದ ಅನುಕರಣದ ಭಯ, ಹೊಸಹಾದಿತ್ತ ದಿಗಿಲು ಮೂಡಿಸಿತ್ತು. ಕನ್ನಡತನದಲ್ಲಿಯೇ ಕಾವ್ಯ ಮಾರ್ಗವನ್ನು ಹುಡುಕುತ್ತಿದ್ದ ನವೋದಯ ಕವಿಗಳು ಇಂಗ್ಲಿಷ್ ಸಾಹಿತ್ಯದ ವಸ್ತುರೂಪಗಳನ್ನು ಕನ್ನಡದ ಭಾಷೆಯ ಮೂಲಕ ನಿರೂಪಿಸಲು ಪ್ರಾರಂಭಿಸಿದರು. ಕೀರ್ತನೆಗಳ ಪದಲಯ ವಿನ್ಯಾಸಗಳನ್ನೇ ಸ್ವೀಕರಿಸಿ, ಆಧುನಿಕ ಭವಗೀತೆಗಳ ಹುಟ್ಟಿಗೆ ಕಾರಣರಾದರು. ಕೀರ್ತನ ಸಾಹಿತ್ಯದಲ್ಲಿನ ದೈವಭಕ್ತಿಗೆ ಬದಲಾಗಿ ಪ್ರೀತಿ, ಸ್ನೇಹ ಮಿಲನ, ಹರ್ಷ, ವಿರಹಗಳೇ ಭಾವಗೀತೆಗಳಾಗಿ ಹುಟ್ಟಿಕೊಂಡವು. ಪ್ರಾರಂಭದ ಭಾವಗೀತೆಗಳು ಶಿಲ್ಪದಲ್ಲಿ ಕೀರ್ತನೆಗಳನ್ನೆ ಅನುಸರಿಸಿದವು. ಪಲ್ಲವಿಯಿಂದ ಅನುಪಲ್ಲವಿಗೆ ಪಲ್ಲವಿಸಿ ಬಳಿಕ ಮೂರು ಅಥವಾ ನಾಲ್ಕು ಅಥವ ಐದರು ಚರಣಗಳ ಪದ್ಯಗಳನ್ನು ಒಳಗೊಂಡು ಕಡೆಯಲ್ಲಿ ದಸರ ‘ಅಂಕಿತ’ದ ಮೂಲಕ ಅವರ ಅಧಿದೈವದ ಹೆಸರನ್ನು ಸೂಚಿಸುವ ಕೀರ್ತನೆಗಳನ್ನು ಅನುಕರಿಸುತ್ತಾ ಬಂದ ಭಾವಗೀತೆ ಅಂಕಿತವನ್ನು ಕೈಬಿಡುತ್ತಾ, ಕೀರ್ತನೆಯ ರುಪದಲ್ಲಿಯೇ ಹುಟ್ಟಿ ಕಾಲಕ್ರಮೇಣ ವಸ್ತು, ಶೈಲಿಯಲ್ಲಿ ಹೊಸತನ ತೆರೆದವು. ಹರಿದಾಸರ ಹಾಡುಗಳ ಜನಪ್ರಿಯತೆ ಭಾವಗಿತೆಗೂ ಹರಿದು ಬಂದಿತು. ಕಾರಣ ದಾಸರ ಹಾಡುಗಳಲ್ಲಿ ಹಾಸುಹೊಕ್ಕಾಗಿದ್ದ ಆಡುನುಡಿಯ ಭಾಷೆ ಮತ್ತು ಜೀವನದ ಚಿತ್ರಣ, ವೈಯುಕ್ತಿಕ ನೋವು, ನಲಿವುಗಳು, ಸಾಮಾಜಿಕ ಎಚ್ಚರದ ವಿಷಯಗಳು ಇವೆಲ್ಲಾ ಭಾವಗೀತೆಗೂ ಹರಿದು ಬಂದಿತು. ಮತ ಧರ್ಮ ಪ್ರತಿಪಾದನೆಯನ್ನು ಬಿಟ್ಟು ಲೌಕಿಕ ಆಸಕ್ತಿಯನ್ನು ಕ್ರೋಢೀಕರಿಸಿಕೊಳ್ಳುತ್ತಾ ಜನಪ್ರಿಯವಾಯಿತು.

ಹರಿದಾಸರ ನಂತರ ಬಂದ ಶ್ರೀವೈಷ್ಣವ ಹಾಡುಗಾರರು ಕೀರ್ತನೆಗಳ ವಸ್ತು ವ್ಯಾಪ್ತಿಯನ್ನು ಮತ್ತಷ್ಟು ಹಿಗ್ಗಿಸಿದರು. ದೈವಿಕ ಶೃಂಗಾರದಿಂದ ಮೊದಲುಗೊಂಡು, ಲೌಕಿಕ ಶೃಂಗಾರಗಳೊಂದಿಗೆ, ನಾಡು, ನುಡಿಗಳ ಅಭಿಮಾನ, ಪ್ರಕೃತಿ ವರ್ಣನೆ, ಸ್ನೇಹ, ರಾಜಭಕ್ತಿ ಮೊದಲಾದ ಅನೇಕ ಅಂಶಗಳು ಇವರ ಹಾಡುಗಳ ವಸ್ತುಗಳಾದವು. ವಸ್ತುವಿನಲ್ಲಿ ವೈವಿಧ್ಯತೆ ಕಾಲಿಕ್ಕಿತು. ಒಂದೇ ಭಾವವನ್ನು ಹಾಡಿನ ಪ್ರಾರಂಭದಿಂದ ಕಡೆಯವರೆವಿಗೆ ಸಾಧಿಸುವ ಗೀತ ಗೊಂಚಲುಗಳು ಬಳಕೆಗೆ ಬಂದವು. ಒಂದೇ ಭಾವದಿ ನಾನಾಮುಖದ ಚಿತ್ರಣಗಳು ತಲೆಯಿಟ್ಟವು. ಈ ಗೀತೆಗೊಂಚಲುಗಳನ್ನು ‘ಸಪ್ತಪದಿ’ ಗಳೆಂದು ಕರೆದರು. ಪಲ್ಲವಿಯುಳ್ಳ ಈ ಗೀತೆಗಳ ಲಯಧಾಟಿಗಳು ನವೋದಯ ಕಾವ್ಯದ ಅನೇಕ ಭಾವಗೀತೆಗಳಿಗೆ ಅದ್ಭುತವಾಗಿ ಹೆಗಣೆಯಾಗಿ ನಿಂತವು.

ಕನ್ನಡ ಭಾವಗೀತಾ ಗಾಯನವು ಪ್ರಾರಂಭವಾದಗ ಶಾಸ್ತ್ರೀಯ ಸಂಗೀತದ ಪಡಿನೆಳಲಿನಂತೆಯೇ ಶಾಸ್ತ್ರೀಯರಾಗದ ಮಡಿಲಿನಲ್ಲಿಯೇ ಹುಟ್ಟಿಕೊಂಡು ಅಲ್ಲಿಯೇ ಬೆಳೆಯಿತು. ಕೀರ್ತನ ಹಾಡುಗಾರಿಕೆಯಿಂದ ಸ್ವಲ್ಪಮಟ್ಟಿಗೆ ರಾಗಶೈಲಿಯಲ್ಲಿ ಲಘುವಾಗಿತ್ತಾದರೂ ಶಾಸ್ತ್ರೀಯ ಬಂಧದಿಂದ ಆಚೆ ಬಂದಿರಲಿಲ್ಲ.

ಪಾಶ್ಚಾತ್ತೀಕರಣದ ಅನುಕರಣದ ಭಯ, ಹೊಸಹಾದಿಯತ್ತ ದಿಗಿಲು ಮೂಡಿಸಿತ್ತು. ಕನ್ನಡತನದಲ್ಲಿಯೇ ಕಾವ್ಯ ಮಾರ್ಗವನ್ನು ಹುಡುಕುತ್ತಿದ್ದ ನವೋದಯ ಕವಿಗಳು ಇಂಗ್ಕಿಷ್ ಸಾಹಿತ್ಯದ ವಸ್ತುರೂಪಗಳನ್ನು ಕನ್ನಡದ ಭಾಷೆಯ ಮೂಲಕ ನಿರೂಪಿಸಲು ಪ್ರಾರಂಭಿಸಿದರು. ಕೀರ್ತನೆಗಳ ಪದಿಲಯ ವಿನ್ಯಾಸಗಳನ್ನೇ ಸ್ವೀಕರಿಸಿ, ಆಧುನಿಕ ಭಾವಗೀತೆಗಳ ಹುಟ್ಟಿಗೆ ಕಾರಣರಾದರು. ಕೀರ್ತನ ಸಾಹಿತ್ಯದಲ್ಲಿನ ದೈವಭಕ್ತಿಗೆ ಬದಲಾಗಿ ಪ್ರೀತಿ, ಸ್ನೇಹ ಮಿಲನ,ಹರ್ಷ, ವಿರಹಗಳೇ ಭಾವಗೀತೆಗಳಾಗಿ ಹುಟ್ಟಿಕೊಂಡವು.

ಕವಿತೆಯ ರುಚಿ ಸಂಗೀತದ ಸಾಹಚರ್ಯದಿಂದ ದ್ವಿಗುಣಿತವಾಗುತ್ತದೆ ಎಂದು ವಾಲ್ಮೀಕಿ ಮತ್ತು ಕಾಳಿದಾಸರು ಸಾರಿದ್ದಂತೆ, ಸಾಹಿತ್ಯಕ್ಕೆ ಸಂಗೀತ ಸೇರಿದಾಗ ಅದು ಕೇಳುಗನ ಅಂತರಂಗದ ಭಾವಗ್ರಹಣಶಕ್ತಿಯನ್ನು ತೀಕ್ಷ್ಣಗೊಳಿಸಿತು.

ನಮ್ಮ ಹರಿದಾಸರು ಸಂಗೀತ ಮತ್ತು ಸಾಹಿತ್ಯ ಸಮರಸ್ಯದ ಪ್ರತೀಕವದ ಕೀರ್ತನ ಸಾಹಿತ್ಯ, ಸಂಗೀತವನ್ನು, ಸಂಗೀತದ ಉನ್ನತಿಗಾಗಿ ಬಳಸದೆ, ಸಾಹಿತ್ಯವನ್ನು ಸರ್ವಜನಾದರಣೀಯವಾಗಿಸಲು ಬಳಸಿಕೊಂಡಿತು. ಕೀರ್ತನ ಸಾಹಿತ್ಯದಲ್ಲಿ ಕಂಡುಬರುವ ಸಂಗೀತ ಹೆಚ್ಚಾಗಿ ಹೃದಯದ ಸಂಗೀತವೇ ಹೊರತು ಬುದ್ಧಿಯ ಸಂಗೀತವಲ್ಲ. ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಸಿಸಿಲ್ಲದ ಜನಸಾಮಾನ್ಯರ ಬಾಯಲ್ಲೂ ಶರಣರ ಪದಗಳು, ಹರಿದಾಸರ ಹಾಡುಗಳು ನಲಿಯುವುದನ್ನು ನೋಡಿದರೆ ಈ ಅಂಶ ಸ್ಪಷ್ಟವಾಗುತ್ತದೆ. ಭಾವಗೀತಾಗಾಯನ ಅಥವಾ ಸುಗಮಸಂಗೀತವಾದರೋ ಹೃದಯವನ್ನು ಹೊಕ್ಕು ಬುದ್ಧಿಯನ್ನು ಮೀಟುವಂತಹ ಸಂಗೀತವಾಗಿದೆ. ಶರಣರವಚನ ದಾಸರಪದಗಳ ಸಾಹಿತ್ಯದ ಮಹತ್ ಉದ್ದೇಶ, ಒಟ್ಟುಗುರಿ, ಸಂಕಲ್ಪವೇ ಸತ್ಯದ ದರ್ಶನವಾಗಿದ್ದರೆ, ಸುಗಮಸಂಗೀತದ ಸಾಹಿತ್ಯದ ಉದ್ದೇಶ, ಸಂಕಲ್ಪ, ಕವಿತಾದರ್ಶನವಾಗಿದೆ. ಶರಣರ ವಚನಗಳು ಮತ್ತು ದಾಸರಪದಗಳು ತಾವು ಕಂಡ ಸತ್ಯವನ್ನು ಅನುಭವಿಸಿ, ಕಾಣದವರಿಗೂ ಅವುಗಳನ್ನು ತೋರಿಕೊಡುತ್ತವೆ. ಜೊತೆಗೆ ಸಮಾಜವನ್ನು ಮುನ್ನಡೆಸುತ್ತವೆ. ಸಮಾಜಕ್ಕೆ ಹಿತವನ್ನುಂಟುಮಾಡಬೇಕೆನ್ನುವುದೇ ಅವುಗಳ ಉದ್ದೇಶ. ಬದುಕಿನ ಮಹತ್ವತೆಯನ್ನು ಸಾರುತ್ತಾ, ಅದರ ಅನಿವಾರ್ಯತೆಯನ್ನು ಬೋಧಿಸುತ್ತವೆ. ಸುಗಮಸಂಗೀತದ ಉದ್ದೇಶವೂ ಇದೇ ಆಗಿದೆ. ಅದರಲ್ಲಿ ವೈಯುಕ್ತಿಕತೆಯ ಚಿಂತನೆಯೊಡನೆ, ಪ್ರಾಮಾಣಿಕವಾದ ಜೀವನಾನುಭವದ ದರ್ಶನವಿರುತ್ತದೆ. ಕಾವ್ಯದ ಭಾಷೆ ಉತ್ಕೃಷ್ಟಮಟ್ಟದ್ದಾಗಿರುತ್ತದೆ. ಭಾವಸೂಕ್ಷ್ಮತೆ, ವೈಚಾರಿಕತೆಗಳು ಎರಡೂ ಪ್ರಕಾರಗಳಲ್ಲಿ ಸಮಾನವಾಗಿರುತ್ತವೆ. ಭಾವುಕತೆಯೇ ಹಾಡಾಗಿ, ಕವಿತೆಯಾಗಿ ರೂಪು ತಾಳಿರುತ್ತದೆ.

ಸಂಪ್ರದಾಯ ಹಾಡುಗಳು

ಯಾವುದೇ ಜನಪದ ಸಾಹಿತ್ಯ ತಾನು ಬದುಕಿರುವ ಪರಿಸರದ ಹಿನ್ನೆಲೆಯಲ್ಲಿ ಆಯಾ ಸಮಾಜಕ್ಕೆ ಅನುಗುಣವಾದ ಭಾಷಿಕ ಹಾಗೂ ಸಾಂಸ್ಕೃತಿಕ ನೆಲೆಗಳನ್ನು ಗುರುತಿಸಿಕೊಳ್ಳುತ್ತದೆ. ಶಿಷ್ಟ ಸಂಪ್ರದಾಯದ ಬ್ರಾಹ್ಮಣ ಸಮಾಜದಲ್ಲಿ ಪುಷ್ಟಿಯಾಗಿ ಅಲ್ಲಿಯೇ ಬಳಕೆಗೊಳ್ಳುವ ಸಂಪ್ರದಾಯಪದಗಳು ಶಿಷ್ಟ ಸಾಹಿತ್ಯಿಕ ರಚನೆಗಳಂತೆ ಕಂಡರೂ, ತಮ್ಮ ಜಾಯಮಾನದಲ್ಲಿ ಅವು ಶುದ್ಧ ಜನಪದ ಗೀತೆಗಳೇ. ಈ ಹಾಡುಗಳೆಲ್ಲ ಒಂದು ಕಾಲಕ್ಕೆ ಅವಿದ್ಯಾವಂತರೇ ಆಗಿದ್ದ ಬ್ರಾಹ್ಮಣ ಸ್ತ್ರೀಯರಲ್ಲಿ ಮೌಖಿಕ ಮೂಲವನ್ನು ಅನುಸರಿಸಿ, ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದಿದೆ. ಇವುಗಳ ಕರ್ತೃತ್ವ ಅಜ್ಞಾತವಾಗಿಯೇ ಉಳಿದಿದೆ.

ಹೆಸರೇ ಸೂಚಿಸುವಂತೆ ಸಂಪ್ರದಾಯ ಪರಂಪರೆಯಲ್ಲಿ ಬಂದ ಹಾಡುಗಳೇ ಸಂಪ್ರದಾಯದ ಹಾಡುಗಳು. ಇವು ರೂಪುಗೊಂಡದ್ದು ಸಂಪ್ರದಾಯದಲ್ಲೇ. ನಮ್ಮ ನಾಡಿನ ಎಲ್ಲ ವಿಧವಾಗಿ ಸಂಗೀತಕ್ಕೂ ಸಂಪ್ರದಾಯದ ಸುಭದ್ರವಾದ ಅಡಿಪಾಯವಿದ್ದೇ ಇದೆ. ಮನೆಯಲ್ಲಿ ಹೆಂಗಸರು ಪೂಜೆ ಮಾಡುವಾಗ, ವ್ರತ ಮಾಡುವಾಗ, ವ್ರತದ ಕಥೆಗಳನ್ನೂ, ರಾಮಾಯಣ, ಮಹಾಭಾರತ ಮುಂತಾದ ಪೌರಾಣಿಕ ಕಥೆಗಳನ್ನೂ ಹೇಳಿಕೊಳ್ಳುವಾಗ, ಮಕ್ಕಳನ್ನು ತೂಗುವಾಗ, ಸುಪ್ರಭಾತಸಮಯದಲ್ಲಿ, ಮದುವೆ ಮಂಗಳ ಕಾಯ್ದಲ್ಲಿ, ಹಾಡುವ ಹಾಡುಗಳೇ ಸಂಪ್ರದಾಯ ಹಾಡುಗಳೆಂದು ಹೆಸರಾಗಿದೆ. ಈ ಹಾಡುಗಳಲ್ಲಿ ಹೆಚ್ಚಿನ ಸಂಖ್ಯೆ ಅವುಗಳ, ಕರ್ತೃಗಳು ಯಾರು? ಇದರ ರಚನೆ ಹೇಗೆ ಪ್ರಾರಂಭವಾಯಿತು ಮುಂತಾದ ವಿಷಯಗಳು ತಿಳಿದಿಲ್ಲ. ಹತ್ತಾರು ಕಡೆಗಳಲ್ಲಿ ಚಲಾವಣೆಗೊಳ್ಳುತ್ತಿರುವ ಈ ಹಾಡುಗಳನ್ನು ಚಾರಿತ್ರಿಕ ರೂಪದಲ್ಲಿ, ಭೌಗೋಳಿಕ ರೂಪದಲ್ಲಿ ಗುರುತಿಸಬಹುದು. ಜನಪದ ಸಾಹಿತ್ಯಕ್ಕೆ ಸಹಜವಾದ ಪ್ರಸರಣ ಗುಣವನ್ನು ಸಾಧಿಸಿಕೊಂಡಿದೆ ಎಂದೋ ಯಾರಿಂದಲೋ ಸೃಷ್ಟಿಯಾಗಿ ಕಾಲಕ್ರಮದಲ್ಲಿ ಸಾಮೂಹಿಕ ಪುನಸೃಷ್ಟಿಯಾದ ರಚನೆಗಳೇ ಆಗಿವೆ. ಇವುಗಳ ಭಾಷೆ ಸರಳವಾಗಿದೆ. ಸಂಸ್ಕೃತ ಶಬ್ಧಗಳ ಬಳಕೆ ವಿರಳವಾಗಿದೆ.ಪ್ರೌಢ ಸಾಹಿತ್ಯದಿಂದ ಪ್ರಭಾವಿತವಾದಂತೆ ತೋರಿದರೂ, ಜನಪದ ಸಾಹಿತ್ಯದ ಸರ್ವಗುಣಗಳನ್ನೂ ಹೊಂದಿರುವ ಈ ಸಂಪ್ರದಾಯದ ಹಾಡುಗಳು ಒಂದು ವರ್ಗದ ಜನಪದ ಸಾಹಿತ್ಯವೇ ಆಗಿವೆ.

ನಮ್ಮ ಕರ್ನಾಟಕದಲ್ಲಿ ಮೂರು ಬಗೆಯ ಪ್ರಮುಖ ಸಂಪ್ರದಾಯ ಸಾಹಿತ್ಯ ಪ್ರವಾಹಗಳನ್ನು ಗುರುತಿಸಬಹುದು.(೧) ಆದಿವಾಸಿ ಅಥವಾ ಬುಡಕಟ್ಟು ಜನಾಂಗಗಳ ಜನಪದ ಸಾಹಿತ್ಯ (೨) ಗ್ರಾಮೀಣ ಪ್ರದೇಶಗಳಲ್ಲಿನ ಹಿಂದುಳಿದ- ವರ್ಗಗಳಲ್ಲಿ ಕಂಡುಬರುವ ಗ್ರಾಮೀಣ ಜನಪದ ಸಾಹಿತ್ಯ (೩) ನಗರ ಹಾಗೂ ಗ್ರಾಮಾಂತರ ಮುಂದುವರೆದ ಸಮಾಜಗಳಲ್ಲಿನ ಸಂಪ್ರದಾಯ ಸಾಹಿತ್ಯ- ಈ ಮೇಲಿನ ಮೂರು ಸ್ತರಗಳಲ್ಲಿ ಕಂಡುಬರುವ ಜನಪದ ಸಾಹಿತ್ಯ ಆದಿವಾಸಿ, ಗ್ರಾಮೀಣ, ಬ್ರಾಹ್ಮಣ ಎಂಬ ಪ್ರಭೇದಗಳಲ್ಲಿ ನಿಂತುಕೊಳ್ಳುತ್ತದೆ. ಇವು ಭೌಗೋಳಿಕ ಹಾಗೂ ಸಾಮಾಜಿಕ ಕಾರಣಗಳಿಗಾಗಿ ಪರಸ್ಪರ ಪ್ರಭಾವಕ್ಕೆ ಒಳಗಾಗದೆ ಉಳಿದು ಬಂದಿವೆ.

ಬುಡಕಟ್ಟು ಜನಾಂಗಗಳು ಕಾಡು ಮೇಡುಗಳಲ್ಲಿ ವಾಸಿಸುತ್ತ ತಮ್ಮದೇ ಆದ ಜೀವನಕ್ರಮಗಳನ್ನು ರೂಢಿಸಿಕೊಂಡಿರುತ್ತವೆ. ಬಯಲು ಅಥವಾ ಮಲೆನಾಡಿನ ಕೃಷಿ ಪ್ರಧಾನ ಸಮಾಜದೊಡನೆ ಹೆಚ್ಚಾಗಿ ಬೆರೆಯುವ ಅವಕಾಶಗಳು ಈ ಜನಾಂಗಕ್ಕೆ ಕಡಿಮೆಯಿರುತ್ತದೆ. ಕೂಲಿನಾಲಿಗಳಿಗೂ ಇವರು ಗ್ರಾಮಾಂತರ ಪ್ರದೇಶಗಳಿಗೆ ಬರುವ ಆವಶ್ಯಕತೆಯನ್ನು ಹೊಂದಿರುವುದಿಲ್ಲ. ಬೇಟೆಯನ್ನೋ. ಸರಳ ಕೃಷಿಯನೋ ಅನುಸರಿಸಿ ಬದುಕುವ ಈ ಜನ ಕಾಡುಕಣಿವೆಗಳಲ್ಲಿಯೇ ಉಳಿದು ಹೋಗುತ್ತಾರೆ. ಈ ಕಾರಣದಿಂದ ಜನಪದ ಸಾಹಿತ್ಯದಲ್ಲಿ ಕೊಳು-ಕೊಡುಗೆ ಇಲ್ಲಿ ನಡೆಯಲು ಸಾಧ್ಯವಾಗಿಲ್ಲ. ಆದರೆ ಗ್ರಾಮೀಣ ಜನಪದ ಸಾಹಿತ್ಯ ಮತ್ತು ಬ್ರಾಹ್ಮಣ ಸಾಹಿತ್ಯ ಎರಡೂ ಪ್ರತ್ಯೇಕ ವಾಹಿನಿಗಳಾಗಿಯೇ ಉಳಿಯಲು ಸಾಮಾಜಿಕ ಸಂಗತಿಗಳು ಕಾರಣವಾದವು. ಗ್ರಾಮೀಣ ಜನಪದ ಸಾಹಿತ್ಯವೆಂಬುದು ಹಿಂದುಳಿನ ಸಮಾಜಗಳಲ್ಲಿ ಹೊಲ ಬಯಲು ಊರು ಕೇರಿಗಳಲ್ಲಿ, ಮನೆ ಮಂದಿರಗಳಲ್ಲಿ ಬೆಳೆದು ಅಲ್ಲಿಯೇ ಉಳಿದು ಬಂದರೆ, ಬ್ರಾಹ್ಮಣ ಸಾಹಿತ್ಯ, ಬ್ರಾಹ್ಮಣ ಸಮಾಜದಲ್ಲಿ ಮನೆಮನೆಯ ಅಂಗಳಗಳಲ್ಲಿ ಮಾತ್ರ ಅರಳಿ ಅಲ್ಲೇ ತನ್ನ ಕಂಪನ್ನು ಬೀರಿತು. ಇದರಲ್ಲಿ ಸಾಮೂಹಿಕ ಹಾಗೂ ಸಾರ್ವತ್ರಿಕ ಗುಣ ಕಡಿಮೆಯಾಯಿತು. ನಾಲ್ಕು ಗೋಡೆಗಳ ಚೌಕಟ್ಟು ಈ ಹಾಡಿನ ಒರತೆಗೆ ಬಂದು ತನ್ನ ಪರಿಧಿಯನ್ನು ನಿರ್ಮಿಸಿಕೊಂಡಿತು. ಆದ್ದರಿಂದ ಗ್ರಾಮೀಣ ಜನಪದ ಸಾಹಿತ್ಯದ ಮೇಲೆ ಇದು ಪ್ರಭಾವವನ್ನು ಬೀರಲಿಲ್ಲ. ಅದರಿಂದಲೂ ಯಾವ ಸ್ವೀಕಾರವನ್ನೂ ಮಾಡಲಿಲ್ಲ. ಒಂದು ವರ್ಗದ ಸ್ತ್ರೀಯರಲ್ಲಿ ಮಾತ್ರ ಉಳಿದು. ಅಲ್ಲೇ ಪ್ರಸಾರಗೊಂಡು ಗುಪ್ತಗಾಮಿನಿಯಾಗಿ ಉಳಿಯಿತು. ಬ್ರಾಹ್ಮಣರ ಮನೆಗಳಲ್ಲಿ ನಡೆಯುವ ಅನೇಕ ವ್ರತಗಳ ಜೊತೆಯಲ್ಲಿ ಸಂಪ್ರದಾಯಗಳ ಜೊತೆಯಲ್ಲಿ ಅವಿನಾಸಂಬಂಧಿಗಳಾಗಿ ಬಂದ ಈ ಹಾಡುಗಳೇ ಸಂಪ್ರದಾಯ ಗೀತೆಗಳೆನಿಸಿಕೊಂಡವು. ಸಂಪ್ರದಾಯ ಎನ್ನುವುದು ಸಂಸ್ಕೃತಿಯ ಪರಂಪರೆಗೆ ಸಂಬಂಧಿಸಿದ ವಿಷಯವಾದ್ದರಿಂದ ಇದು ಬಹಳ ಹಿಂದೆಯೂ ಇತ್ತು. ಈಗಲೂ ಇದೆ. ಮುಂದೆಯೂ ಇರುವಂತಹುದು. ಧಾರ್ಮಿಕ ಸಂಪ್ರದಾಯಗಳನ್ನು ಪ್ರತಿನಿಧಿಸುವ ಈ ಸಾಹಿತ್ಯ ನಮ್ಮ ಗ್ರಾಮೀಣ ಪ್ರದೇಶಗಳ ಹೊಲಗದ್ದೆ ತೋಟಗಳಲ್ಲಿ ಹುಲುಸಾಗಿ ಬೆಳೆದು ನಳನಳಿಸುವ ಸಾಹಿತ್ಯಕ್ಕಿಂತ ಭಿನ್ನವಾಗಿದೆ. ‘ಬ್ರಾಹ್ಮಣ ಸಂಪ್ರದಾಯ ಪದಗಳು ಮನೆಯ ಹಿತ್ತಲಲ್ಲಿ ಬೆಳೆದ ಕೈತೋಟದ ಮಲ್ಲಿಗೆ ಜಾಜಿಗಳಾದರೆ, ಗ್ರಾಮೀಣ ಪ್ರದೇಶದ ಜನಪದ ಸಾಹಿತ್ಯ ಬಯಲು ವಿಸ್ತಾರದಲ್ಲಿ ಹರಡಿಕೊಂಡ ತೆಂಗಿನ ಬನದಂತೆ”ಎಂದ ಜೀ.ಶಂ. ಪರಮಶಿವಯ್ಯನವರ ಮಾತು ಅರ್ಥಪೂರ್ಣವಾಗಿದೆ.

ವೈದಿಕ ಸಂಪ್ರದಾಯಕ ಉನ್ನತ ಸಾಂಸ್ಕೃತಿಕ ಪ್ರೌಢ ಆವರಣದಲ್ಲಿ, ವಿದ್ಯಾವಂತ ಸಮಾಜದಲ್ಲಿ ಸಾವಿರಾರು ವರ್ಷಗಳಿಂದ ಇಂತ ಒಂದು ಸಾಹಿತ್ಯ ಪರಂಪರೆ ಹೆಣ್ಣು ಮಕ್ಕಳಲ್ಲಿ ಉಳಿದು ಬಂದಿರುವುದು ಅಚ್ಚರಿಯ ವಿಷಯವಾಗಿದೆ. ಜನಪದ ಸಾಹಿತ್ಯದಲ್ಲಿ ಕಂಡುಬರುವ ಪ್ರಕಾರಗಳೇ ಇಲ್ಲಿಯು ಢಾಳಾಗಿ ಕಂಡುಬರುತ್ತವೆ. ಮೌಖಿಕ ಪರಂಪರೆ, ಅಜ್ಞಾನಕರ್ತೃತ್ವ, ಪ್ರಸರನಗುಣ, ಸಾಮೂಹಿಕ ಪುನಃಸೃಷ್ಟಿ, ಗೇಯತೆ ಮತ್ತು ಕಥಾಪ್ರಕಾರಗಳು-ಸಂಪ್ರದಾಯ ಹಾಡುಗಳು, ಈ ಎಲ್ಲ ಗುಣಗಳಿಂದ ಶುದ್ಧ ಜನಪದ ಸಾಹಿತ್ಯದ ಸೊಗಡನ್ನೇ ಉಳಿಕೊಂಡು ಬಂದಿದೆ.

ಒಂದು ಕಾಲಕ್ಕೆ ಗೃಹಿಣಿಯರ ಪ್ರತಿಷ್ಠೆ ಗೌರವಗಳನ್ನು ಹೆಚ್ಚಿಸುವ ಸಾಧನವೂ ಆಗಿದ್ದ ಈ ಸಂಪ್ರದಾಯಪದಗಳು ಮನೆಯ ಅಂಗಳವನ್ನು ಮಂಗಳಮಯ ಮಾಡುತ್ತಾ ಸದಾಚಾರ, ಸದ್ಭಾವನೆಲ, ಶಾಂತಿ, ನೆಮ್ಮದಿ ಹಾಗೂ ಆತ್ಮ ಸಂತೋಷದ ದ್ಯೋತಕವಾಗಿ ಉಳಿದುಬಂದವು. ಸುಂದರ ಭಾವಗೀತೆಗಳಂತೆ ಮೂಡಿ ಬಂದ ಈ ಹಾಡುಗಳ ವೈವಿಧ್ಯ ವ್ಯಾಪ್ತಿ ಅಪೂರ್ವವಾದವು. ನಮ್ಮ ನವೋದಯ ಸಾಹಿತ್ಯದ ಬ್ರಾಹ್ಮಣ ಕವಿಗಳನೇಕರ ರಚನೆಗಳಲ್ಲಿ ಸಂಪ್ರದಾಯಹಾಡುಗಳ, ಪ್ರಭಾವವನ್ನು ಕಾಣಬಹುದು. ವೀ.ಸೀ. ಅವರು ರಚಿಸಿದ ‘ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ‘ನಿಮ್ಮ ಮನೆಯೊಳಗಿಡಲು ತಂದಿರುವೆವು’- ಎನ್ನುವ ಗೀತೆಯಂತೂ ಪ್ರತಿಯೊಂದು ಮದುವೆ ಸಮಾರಂಭದಲ್ಲಿ ತಪ್ಪದೇ ಹಾಡುತ್ತಿದ್ದ ಹಾಡಾಗಿತ್ತು. ಗಂಡಿನವರಿಗೆ ‘ಹೆಣ್ಣೊಪಿಸುವ ಶಾಸ್ತ್ರ’ ಮಾಡುವಾಗ ಈ ಗೀತೆಯನ್ನು ಕೇಳಿ ಬಂಧು ಬಾಂಧವರ ಕಣ್ಣಲ್ಲಿ ನೀರು ಸುರಿಯುವುದು ಸಾಮಾನ್ಯವಾಗಿತ್ತು. ಬ್ರಾಹ್ಮಣ ಸಂಸ್ಕೃತಿ, ಜೀವನ ಸಂಪ್ರದಾಯವನ್ನು ಅನುಸರಿಸಿ ಅನೇಕ ಸಾಂದರ್ಭಿಕ ಗೀತೆಗಳನ್ನು ರಚಿಸಿದವರಲ್ಲಿ ಕೆ.ಎಸ್. ನರಸಿಂಹಸ್ವಾಮಿ, ಅತ್ಯಂತ ಪ್ರಸಿದ್ಧರಾದರು. ಅವರ ‘ಮೈಸೂರುಮಲ್ಲಿಗೆ’ ಬ್ರಾಹ್ಮಣ ಸಂಸ್ಕೃತಿಯ ಬ್ರಾಹ್ಮಣ ಸಂಪ್ರದಾಯ ಕುಟುಂಬದ ಎಲ್ಲಾ ಮಜಲುಗಳನ್ನೂ ಚಿತ್ರವತ್ತಾಗಿ ಕಟ್ಟಿಕೊಟ್ಟಿತ್ತು. ಬ್ರಾಹ್ಮಣರ ಮನೆಯ ಮುಂದಿರುವ ತುಳಸಿ ಬೃಂದಾವನದಿಂದ, ಅಂಗಳದ ರಂಗೋಲೆಯಿಂದ ಹಿಡಿದು ಗಂಡಹೆಂಡತಿಯರ ದಾಂಪತ್ಯಜೀವನದ ಸಾಂಸ್ಕ್ರತಿಕ ಸೌರಭವನ್ನು, ಸಂಪ್ರದಾಯದೊಡನೆ ಮಿಳಿತವಾಗಿದ್ದ ಜೀವನ ಚಿತ್ರವನ್ನು ರಂಗುರಂಗಾಗಿ ಬಿಡಿಸಿತೋರಿಸಿತು. ಜೀವನದ ಸಂಸ್ಕೃತಿಯ ಜೊತೆಗೆ ವ್ಯಕ್ತಿತ್ವದ ಭಾವ ಸೂಕ್ಷ್ಮತೆಯನ್ನೂ ಚಿತ್ರಸಿತು. ಸಂಪ್ರದಾಯ ಹಾಡುಗಳು ಕೌಟುಂಬಿಕ ಸಾಮರಸ್ಯವನ್ನು ಎತ್ತಿತೋರಿಸುತ್ತ, ಆಚಾರಿ ವಿಚಾರಗಳನ್ನು ಎತ್ತಿಹಿಡಿಯುತ್ತಿದ್ದವೆಂಬುದಕ್ಕೆ ಕೆ.ಎಸ್.ಎನ್. ಅವರ ‘ಬಳೆಗಾರ’ನ ಪಾತ್ರವನ್ನು ಉದಾಹರಿಸಬಹುದು. ಹೆಣ್ಣಿನ ಸೌಭಾಗ್ಯ ಚಿಹ್ನೆಯಾದ ‘ಬಳೆ’ ತನ್ನ ಅರ್ಥದ ಪರಿಮಿತಿಯನ್ನು ಭಾವಗೀತೆಯಲ್ಲಿ ಹಿಗ್ಗಿಸಿಕೊಂಡು ಪ್ರೇಮದ ಸಂದೇಶವನ್ನು ಸಾರುವವರೆಗೆ, ಅರಳಿಕೊಳ್ಳುತ್ತದೆ. ಗಂಡನ ಮನಸ್ಸಿಗೂ ಹೆಂಡತಿಯ ಮನಸ್ಸಿಗೂ ಸೇತುವೆಯಾಗಿ ‘ಬಳೆಗಾರ’ ಪ್ರೇಮದೂತನಾಗುತ್ತಾನೆ. ಸಂಸ್ಕೃತಿಯ ಸಂಕೇತವಾದ, ಸಂಪ್ರದಾಯವೇ ‘ಬಳೆ’ ಇಲ್ಲಿ ಪ್ರಧಾನಪಾತ್ರವಹಿಸುತ್ತದೆ. ಬಸಿರಿಗೆ ಬಳೆತೊಡಿಸುವ ಸಂಪ್ರದಾಯವೇ ‘ಭಾವಗೀತೆ’ಗೆ ಮಣೆ ಹಾಕಿಕೊಟ್ಟಿದೆ.

ಸರಳವಾದ ಸಾಹಿತ್ಯ, ಲಲಿತವಾದ ರಾಗಗಳು ಹಾಗೂ ಸುಲಭಗ್ರಾಹ್ಯವಾದ ಧಾಟಿಗಳಲ್ಲಿರುವ ಈ ಹಾಡುಗಳೆಲ್ಲ ದಾಸರ ಪಂಥದವರ ಹಾಡುಗಳನ್ನು ಹೋಲುತ್ತದೆ. ಸಾಹಿತ್ಯದ ಬಂಧದಲ್ಲಿಯೂ ಮತ್ತು ಹಾಡಿನ ಸಂಗೀತದ ಧಾಟಿಯಲ್ಲಿಯೂ ಇವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಶ್ರೀಪುರಂದರದಾಸರೇ ಮೊದಲಾದ ದಾಸರುಗಳು ರಚಿಸಿದ ಅಸಂಖ್ಯಾತ ದೇವರನಾಮಗಳು, ದಕ್ಷಿಣದಲ್ಲಿಲ್ಲಾ ಬಹಳ ಪ್ರಚಲಿತವಾಗಿದ್ದ ಕಾಲದ ಧಾಟಿಗಳು ಇಲ್ಲಿ ಬೆಳೆದು ಬಂದಿವೆ. ಸಂಗೀತ ತ್ರಿಮೂರ್ತಿಗಳಾದ ತ್ಯಾಗರಾಜರು, ಶ್ಯಾಮಾಶಾಸ್ತ್ರಿಗಳು, ದೀಕ್ಷಿತರಿಗೂ ಮುಂಚೆ ಇಡೀ ಉಳಿದು ಬಂದಿವೆ. ತಮಿಳುನಾಡು ಮತ್ತು ತೆಲುಗು ದೇಶಗಳಲ್ಲಿ ಹೆಂಗಸರು ಹಾಡುವ ಅನೇಕ ಸಂಪ್ರದಾಯದ ಹಾಡುಗಳು, ಅವುಗಳ ಧಾಟಿಗಳು, ನಮ್ಮ ಕನ್ನಡದ ಸಂಪ್ರದಾಯದ ಹಡುಗಳ ಮಟ್ಟುಗಳು, ಧಾಟಿಗಳನ್ನು ಬಹುಮಟ್ಟಿಗೆ ಹೋಲುತ್ತವೆ. “ನಮ್ಮ ಸಂಪ್ರದಾಯ ಹಾಡುಗಳೇ ರಂಗಗೀತೆಗಳಿಗೆ” ಅಡಿಪಾಯ ಎಂದು ಡಾ||ಹೆಚ್.ಕೆ. ರಂಗನಾಥ್ ಅವರು ಅಭಿಪ್ರಾಯಪಟ್ಟಿದ್ದಾರೆ.

ದಾಸಸಾಹಿತ್ಯಕ್ಕೂ ಹಿಂದೆ ಜಾನಪದ ಶೈಲಿಯಲ್ಲಿ ಕರ್ನಾಟಕ ಸಂಗೀತದ ಅಡಿಗಟ್ಟಿನ ಮೇಲೆ ರಚಿತವಾದ ಈ ಹಾಡುಗಳು ಮಹಿಳೆಯರಲ್ಲಿ ಪರಸ್ಪರ ಸಾಮೀಪ್ಯ ಹೆಚ್ಚಿಸಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಸಾಮೂಹಿಕವಾಗಿ ಸಂತೋಷ ಉಂಟುಮಾಡಬಲ್ಲ ಸಾಧನವಾಗಿತ್ತು. ಅಂದು ಮಹಿಳೆಯರು ಸಂಪ್ರದಾಯ ಮತ್ತು ಸಂಸ್ಕೃತಿಯ ಸಂಘಟಕರಾಗಿ ಸಮಾಜದಲ್ಲಿ ಶಕ್ತರಾಗಿದ್ದರೆಂಬುದಕ್ಕೆ ಸಂಪ್ರದಾಯ ಹಾಡುಗಳೇ ಸಾಕ್ಷಿಯಾಗಿವೆ.

ಕರ್ನಾಟಕ ಸಂಗೀತದ ನೆಲೆಗಟ್ಟಿನ ಮೇಲೆ ನಿರ್ಮಿತವಾದ ಈ ಹಾಡುಗಳಲ್ಲಿ. ಒಂದು ಗತಿ, ಗತ್ತುಗಳ ಜೊತೆಗೆ ರಗ ತಾಳಗಳ ಮೇಳವಿರುವುದನ್ನು ನೋಡಬಹುದು. ಆದರೆ ಈ ಹಾಡುಗಳನ್ನು ಹಾಡುವರ‍್ಯಾರಿಗೂ ಸಂಗೀತಸಾಸ್ತ್ರದ ಅರಿವು ಇರಲಿಲ್ಲವಾದ್ದರಿಂದ ಮಟ್ಟಿನ ಜಾಡು ಹಿಡಿದು ಇಂಪಾಗಿ ಹಾಡಿಕೊಂಡು ಹೋಗುತ್ತಿದ್ದರು. ರಾಗದ ಹೆಸರು ತಿಳಿಯದಿದ್ದರೂ, ಗಂಟಲಲ್ಲಿ ಧಾಟಿ ಹುದುಗಿ ಕುಳಿತುಕೊಳ್ಳುತ್ತಿತ್ತು. ತಾಳದ ಲೆಕ್ಕಾಚಾರ ತಿಳಿಯದಿದ್ದರೂ ಮನರಗೆಲಸದ ಸಮಯದಲ್ಲಿ ಹಾಡಿಕೊಳ್ಳುವಾಗ ಅರಿವಿಲ್ಲದೆಯೇ ಸಾಹಿತ್ಯಾಕ್ಷರಗಳ ಕಾಲ ಪ್ರಮಾಣ ಸಂಗೀತಾಕ್ಷರಗಳನ್ನು ಹೊಂದಿಕೊಂಡು ಸಹಜವಾಗಿರುತ್ತಿತ್ತು. ಕಷ್ಟಸಾಧ್ಯವಾದ ಶಾಸ್ತ್ರೀಯ ಸಂಗೀತದ ಕಟ್ಟುಪಾಡು, ಬಂಧನಗಳಿಲ್ಲದೆ ಇದ್ದುದರಿಂದ ಎಲ್ಲ ಗೃಹಿಣಿಯರು ಭಯ, ಸಂಕೋಚವಿಲ್ಲದೆ, ಸಂಪ್ರದಾಯ ಹಾಡುಗಳನ್ನು ಕಲಿತು ಉಳಿಸಿಬೆಳೆಸಿದರು.

ಕಾಲಕ್ರಮೇಣ ಸಂಪ್ರದಾಯ ಹಾಡುಗಳ ಮೇಲೆ ಸಂಗೀತ ಮತ್ತು ನವೀನತೆಯ ಪ್ರಭಾವವು ಬಿದ್ದು ಕೆಲವು ವೇಳೆ ಕೀರ್ತನೆಗಳ ಧಾಟಿಯಲ್ಲೂ, ಅವುಗಳ ಪಡಿಯಚಿನಂತೆಯೂ, ಕೆಲವು ವೇಳೆ ನಾಟಕದ ಮಟ್ಟಿನಂತೆಯೂ ರಚಿತವಾದದ್ದು ಕಂಡುಬರುತ್ತದೆ.

ಕನ್ನಡದಲ್ಲಿರುವ ಇತರ ಜಾನಪದ ಗೀತಗಳ ಹಾಗೆಯೇ ‘ಶೋಭಾನೆಗಳು’ ಹೆಚ್ಚಾಗಿ ಕಿವಿಯಿಂದ ಕಿವಿಗೆ ಧಾಟಿ, ಧಾಟಿ ಸೊಬಗನ್ನುಳಿಸಿಕೊಂಡು ಬಂದವು. ಇವು ಹೆಂಗಸರು ಹಾಡುವ ಹಾಡುಗಳಾರಿಂದ ಇವನ್ನು ಹೆಣ್ಣು ಮಕ್ಕಳು ಚಿಕ್ಕಂದಿನಲ್ಲಿ ತಮ್ಮ ತಾಯಂದಿರಿಂದ ಕಲಿಯುತ್ತಿದ್ದರು. ಕಲಿಸಿಕೊಡುವಾಗ ಇವುಗಳ ಧಾಟಿಗೆ ಲಕ್ಷ್ಯವಿಡುತ್ತಿದ್ದರು, ಹೀಗೆ ಕಲಿತ ಬಾಲೆಯರು ಸಂದರ್ಭ ಬಂದಾಗ, ಸಾಮಾಜಿಕ ಶುಭಕಾರ್ಯಗಳಲ್ಲಿ ಹಾಗೂ ಪೂಜೆ, ಹೋಮ, ಸಮಾರಭಗಳಲ್ಲಿ ಹಿರಿಯ ಮುತ್ತೈದೆಯರ ಜೊತೆಗೂಡಿ ಹಾಡುತ್ತಿದ್ದರು. ಪೂಜೆಗಳಲ್ಲಿ ಆರತಿ, ಮಂತ್ರಪುಷ್ಪ ಪ್ರಾರ್ಥನೆ, ಪ್ರಸಾದ, ಹೂ ಕೊಡುವುದು ಮುಂತಾದ ಸಂದರ್ಭಗಳಲ್ಲಿ ಕನ್ಯಾಮಣಿಯರಿಂದ ಶೋಭಾನೆಗಳನ್ನು ಹಾಡಿಸಲಾಗುತ್ತಿತ್ತು. ಇತ್ತೀಚಿನವರೆಗೂ ವಿವಾಹಯೋಗ್ಯ ಕನ್ಯೆಗೆ ‘ಶೋಭಾನೆ’ ಹಾಡಲು ಬರುವುದೆಂದರೆ ಯೋಗ್ಯವರನನ್ನು ಪಡೆಯಲು ಆಕೆಗೆ ಅದೊಂದು ಹೆಚ್ಚಿನ ಅರ್ಹತೆ ಎನಿಸುತ್ತಿತ್ತು. ಕನ್ಯೆಯನ್ನು ನೋಡಲು ಬಂದ ವರನ ಕಡೆಯವರು ಆಕೆಗೆ ‘ಶೋಭಾನೆ’ ಹಾಡಲು ಬರುತ್ತದೆಯೇ ಎಂದು ಹೇಳುತ್ತಿದ್ದರು. ಅವರು ಹಾಡುವ ಶೋಭಾನೆಗಳಲ್ಲಿ ರಾಮಾಯಣ, ಮಹಾಭಾರತಗಳ ಹಾಗೂ ಬೇರೆ ಬೇರೆ ಪುರಾಣಗಳ ಕಥೆಗಳು ಹಾಡಿನ ರೂಪದಲ್ಲಿದ್ದು ಭಗವಂತನ ಅವತಾರ ಲೀಲೆಗಳು, ಭಕ್ತರ ಆದರ್ಶ ಜೀವನದ ಘಟನೆಗಳು, ಉದಾತ್ತ ಸಾಹಸಮಯ ರಮ್ಯ ಜೀವನ ಚಿತ್ರಗಳು ಇದ್ದು ನೀತಿ ಪ್ರತಿಪದಾನೆ- ಇದ್ದುದರಿಂದ ನಮ್ಮ ಉಜ್ವಲ ಸಂಸ್ಕೃತಿಯ ಪರಿಜ್ಞಾನ, ಅನುಸರಣೆ, ರಕ್ಷಣೆ, ಪೋಷಣೆಗಳಿಗೆ ಇವು ಸಹಕಾರಿಗಳಾಗುತ್ತಿದ್ದವು. ಇವುಗಳ ಅಭ್ಯಾಸಕ್ಕೆ ಎಲ್ಲರೂ ಪ್ರೋತ್ಸಾಹ ಕೊಡುತ್ತಿದ್ದರು. ತಮಗೆ ಗೌರವವೆಂದು, ಮರ‍್ಯಾದೆಯೆಂದು ಭಾವಿಸಿ ಕಲಿತುಕೊಳ್ಳುತ್ತಿದ್ದರು. ಸಮರ್ಥರಾದ ಹಾಡುಗಾರ್ತಿಯರಿಗೆ ಹಾಡಲು ಅಡಕೆ ವೀಳ್ಯವನಿತ್ತು ವಿನಂತಿಸಿ ಕೊಳ್ಳುತ್ತಿದ್ದರು. ಶೋಭಾನೆ ಹಾಡುವ ಮರ‍್ಯಾದೆಗೆ ಮದುಮಗನ ಹಾಗೂ ಮದುಮಗಳ ಅಕ್ಕತಂಗಿಯರು ಹಾಗೂ ಸೋದರತ್ತೆ ಮಾತ್ರ ಅರ್ಹರಾಗಿದ್ದರು.

ಶ್ರುತಿ-ಸ್ಮೃತಿ ವೈಧಾನಿಕ ಸಂಸ್ಕಾರ ಕ್ರಮವನ್ನು ಯಾವದೋ ಪರಿಸ್ಥಿತಿಯಿಂದ ಬಿಟ್ಟವರು ಕೂಡ ಮಂತ್ರೋಚ್ಛಾರಣೆಯನ್ನು ಮಾತ್ರ ಬಿಟ್ಟಿರಬಹುದಲ್ಲದೆ, ಶಾಸ್ತ್ರಕ್ರಮವನ್ನು ಬಿಟ್ಟಿರಲಿಲ್ಲ. ಅಂಥವರ ಆಚಾರಕ್ರಮವನ್ನು ‘ಜಾನಪದ’ ಎಂದು ಹೆಸರಿಸಲಾಗಿದೆ. ಶೋಭಾನೆಯನ್ನು ಹಾಡುವ ಪದ್ಧತಿ ಈ ಎರಡು ವರ್ಗದವರಲ್ಲೂ (ಮಂತ್ರ ಸಹಿತರಲ್ಲಿ ಮತ್ತು ಮಂತ್ರರಹಿತರಲ್ಲಿ) ಆಚರಣೆಯಲ್ಲಿತ್ತು. ಹವ್ಯಕರಲ್ಲಿ ಹಾಗೂ ಇನ್ನೂ ಕೆಲವು ವೈದಿಕಮಾರ್ಗದವರಲ್ಲಿ ಶುಭಕಾರ್ಯಗಳು ವೇದ ಮಂತ್ರೋಕ್ತವಾಗೆ, ಶಾಸ್ತ್ರ ವಿಹಿತವಾಗಿ, ನಡೆಯುತ್ತಿರುವಾಗ ಮುತ್ತೈದೆಯರು ಶೋಭಾನೆ ಹಾಡುವುದು ಸಂಪ್ರದಾಯವಾಗಿತ್ತು. ಆ ಹಾಡುಗಳ ಅರ್ಥವೂ ಸಂಸ್ಕೃತದ ಮಂತ್ರಾರ್ಥವೂ ಒಂದೇ ಆಗಿರುತ್ತಿತ್ತು. ಸಂಸ್ಕೃತದ ಮಂತ್ರಗಳ ಅರ್ಥವನ್ನೇ ಆ ಹಾಡುಗಳು ಒಳಗೊಂಡಿರುತ್ತಿತ್ತು. ಎಷ್ಟೋ ವೇಳೆ ಪುರೋಹಿತರು ಶುಭಕಾರ್ಯಗಳನ್ನು ಮಾಡಿಸುವಾಗ, ಮಂತ್ರ ಸಂದರ್ಭವನ್ನು ಮರೆತಾಗ ಶೋಭಾನೆಗಳಿಂದಲೇ ಕ್ರಿಯಾತಂತ್ರದ ದಿಗ್ದರ್ಶನ ಪಡೆಯುತ್ತಿದ್ದರೆಂದು ತಿಳಿದುಬರುತ್ತದೆ.

ಯಾವುದೇ ಕಲಾಸಂಪ್ರದಾಯವೆಂದರೆ, ನಮಗಿಂತ ಪೂರ್ವದಲ್ಲಿದ್ದ ಕಲಾವಿದರು ಸೃಷ್ಟಿಸಿ ಬೆಳೆಯಿಸಿಕೊಂಡ ತಂತ್ರವಿಧಾನಗಳು. ಆ ಪೂರ್ವಿಕರು ತಮ್ಮ ಮನಸ್ಸಿನ ಭಾವನೆಗಳನ್ನು ತೋಡಿಕೊಳ್ಳುವುದಕ್ಕೆ ಯಾವ ರೀತಿಯ ತಂತ್ರ ಸಹಜ, ಸುಂದರ ಎಂದು ತಿಳಿದರೋ, ಅವುಗಳನ್ನು ಮುಂದಿನವರು ಕಾಯ್ದುಕೊಂಡು, ಅನುಕರಿಸುತ್ತಾ ಹೋಗುವುದೇ ಸಂಪ್ರದಾಯವಾಗುತ್ತದೆ. ಸಂಪ್ರದಾಯ ಹಾಡುಗಳು ಈ ಸೂತ್ರದಿಂದ ಮುಂದೆ ಮುಂದೆ ಸಾಗುತ್ತಾ ಉಳಿದುಕೊಂಡು ಬಂದವು. ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದ್ದ ಬ್ರಾಹ್ಮಣಕವಿಗಳ ಕವಿತೆಯ ವಸ್ತುವಾದವು. ಅವರು ನಂಬಿ ಆಚರಣೆಯಲ್ಲಿಟ್ಟುಕೊಂಡಿದ್ದ ಪದ್ಧತಿಗಳೂ, ಸಂದರ್ಭಗಳೂ, ವಿಚಾರಗಳೂ, ಹೊಸಕವಿತೆಯ ಉಡುಗೆಯಲ್ಲಿ ವಿನೂತನವಾದ ಅನುಭವಗಳನ್ನು ನೀಡಿದವು. ಹೊಸ ಕವಿತಾ ಪ್ರಕಾರಕ್ಕೆ ಪ್ರೇರಣೆಯನ್ನು ನೀಡಿದವು. ಕವಿತೆ ತನ್ನ ವಸ್ತು ಪ್ರತಿಪಾದನೆಯಲ್ಲಿ ಸಂಕೀರ್ಣತೆಯನ್ನು ಕಂಡುಕೊಂಡಿತು. ವೈವಿಧ್ಯತೆಗಳನ್ನು ಪಡೆಯಿತು. ಕವಿತಾ ಗಾಯಕ್ಕನುರೂಪವಾದ ಗಾಯನಪ್ರಕಾರವೊಂದು ಹುಟ್ಟಿಕೊಂಡಿತು. ಅದೇ ಕಾಲಾಂತರದಲ್ಲಿ ‘ಸುಗಮಸಂಗೀತ’ವೆಂದು ಜನಪ್ರಿಯವಾಯಿತು.

* * *