ಕಾವ್ಯ ಮುಖ್ಯವಾಗಿ ಎಲ್ಲ ಕಾಲಗಳಲ್ಲೂ ಎಲ್ಲ ದೇಶಗಳಲ್ಲೂ ಹೆಚ್ಚೂ ಕಡಿಮೆ ಒಂದೇ ರೀತಿಯ ಇಂದ್ರಿಯಗಳು, ಮನಸ್ಸು, ವಿವೇಚನೆ, ಕನಸು, ಇವುಗಳಿಂದ ಕೂಡಿದ ಒಂದೇ ಆದ ಮಾನವನ ಅಂತರಂಗಕ್ಕೆ ಸಂಬಂಧಪಟ್ಟಿದ್ದು. ದೇಶ; ಧರ್ಮ, ಜಾತಿ, ಕಾಲ, ಪಂಥ, ಭಾಷೆ, ಈ ಎಲ್ಲವನ್ನೂ ಮೀರಿ ನಿಲ್ಲುವಂಥದ್ದು. ಮೂಲದಲ್ಲಿರುವ ಭಾವನೆಗಳು, ಆಕಾಂಕ್ಷೆಗಳು, ಸುಖದುಃಖಗಳು, ಜನನ ಮರಣಗಳು, ಬಡತನ, ಶ್ರೀಮಂತಿಕೆಗಳು, ಆರೋಗ್ಯ, ಅನಾರೋಗ್ಯ, ಉನ್ಮಾದ, ಮನಸ್ವಾಸ್ಥ್ಯ, ಸಮಚಿತ್ತ, ಮನೋಗ್ರಂಥಿಗಳು ಈ ಎಲ್ಲವೂ ಆನುಷಂಗಿಕವೇ ಹೊರತು ಮೂಲವಲ್ಲ. ಮೂಲವಾದದ್ದು ಎಲ್ಲ ಕಾಲಕ್ಕೂ, ದೇಶಕ್ಕೂ, ಜನಕ್ಕೂ, ಸಲ್ಲುವ ಮಾನವ ಹೃದಯ, ಅಂತರಂಗದ ತುಮುಲ. ಇವು ಕಾಲಾತೀತವಾದದ್ದು. ಹಾಗೆಯೇ ಸಾರ್ವಕಾಲಿಕವೂ ಹೌದು. ಕಾವ್ಯ ನಿರ್ಮಾಣದಲ್ಲಿ ಇವು ಮಾನವ ಸಹಜವಾದ ಅಂಶಗಳಾಗಿ ಸೇರಿಕೊಳ್ಳುತ್ತವೆ. ಸಂಸ್ಕೃತಿ ವಿಶಿಷ್ಟವೂ, ಸಂದರ್ಭ ವಿಶಿಷ್ಟವೂ ಆದುದಲ್ಲದೆ, ಕವಿಯ ಮನೋಧರ್ಮದ ವೈಶಿಷ್ಟ್ಯವನ್ನು ಹೇಳುವಂತಹುದು. ಇದರ ಪರಿಣಾಮವಾಗಿ ಕಾವ್ಯದ ಹಲವು ಮಾದರಿಗಳು ಹಲವು ಸಂಸ್ಕೃತಿಗಳ ಹಲವು ಸಂದರ್ಭಗಳಲ್ಲಿ ಹುಟ್ಟಿಕೊಂಡವು ಕಾವ್ಯ ರಸಗ್ರಹಣಕ್ಕೋಸ್ಕರ ಬೇರೆ, ಬೇರೆ ದಾರಿಗಳು ಆವಿಷ್ಕಾರವಾದವು.

ನವೋದಯ ಸಾಹಿತ್ಯ ಭಾವಗೀತೆಯಾಗಿ ಮೂಡಿ ಹೊಸ ವ್ಯಕ್ತಿತ್ವವನ್ನು ಕಟ್ಟಿಕೊಂಡಿತು. ತನ್ನದೇ ಆದ ಹೊಸ ಭಾಷೆ, ಹೊಸ ವೈಚಾರಿಕ ಆಕೃತಿಗಳನ್ನು ಮೂಡಿಸಿ ರೂಪಿಸಿಕೊಂಡಿತು. ನಾದಲೀಲೆಯೇ ಇದರ ವ್ಯಕ್ತಿತ್ವದ ಮುಖ್ಯಾಂಗವೂ ಕೇಂದ್ರಬಿಂದುವೂ ಆಯಿತು. ಬೇಂದ್ರೆ, ಕುವೆಂಪು, ಪು.ತಿ.ನ. ರಂತಹ ಹಿರಿಯ ಕವಿಗಳು ನವೋದಯ ಕಾವ್ಯದ ರತ್ನತ್ರಯರೆಂದೇ ಖ್ಯಾತರಾದರು. ಇವರು ನವೋದಯ ಕಾವ್ಯಕ್ಕೆ ಪ್ರತ್ಯೇಕವಾದ ವಿಶಿಷ್ಟ ವ್ಯಕ್ತಿತ್ವವನ್ನು ತಂದುಕೊಟ್ಟರು ಭಾವುಕತೆ, ಗೇಯತೆಯ ಜೊತೆಯಲ್ಲಿ ಕೈ ಕೈ ಹಿಡಿದು ಸಾಗಿತು. ಮಾಸ್ತಿ, ವೀಸೀ, ರಾಜರತ್ನಂ, ಡಿ.ವಿ.ಜಿ. ಆನಂದ ಕಂದ, ಮಧುರಚೆನ್ನ, ಡಿ.ಎನ್.ಕರ್ಕಿ ಮೊದಲಾದ ಹಲವಾರು ಕವಿಗಳ ಗೀತೆಗಳು ಸುಗಮಸಂಗೀತದ ಮೂಲಕ ಬಹುಸಂಖ್ಯಾತರನ್ನು ತಲುಪಿದವು. ಕವಿತೆ ಪ್ರದರ್ಶಕ ಕಲೆಯಾಗಿ ರೂಪುಗೊಂಡಿತು. ಕವಿತೆಗೆ ಹಾಡುಗಾರಿಕೆಯಿಂದ ಶಕ್ತಿ ವರ್ಧಿಸಿತು. ಶಬ್ದಗಳು, ಅವುಗಳ ಹಿಂದೆ ಇರುವ ಸಂವೇದನೆಗಳು, ಲೋಕದೃಷ್ಟಿಗಳು, ಹಾಡಿನ ರಾಗ, ಲಯ, ತಾಳಗಳ ಮೂಲಕ ಹನಿಹನಿಯಾಗಿ ಕೇಳೂಗನೊಳಗೆ ಇಳಿದು ಅವನೇ ಹಾಡುಗಾರನಾಗುವಂತೆ, ಅವನೊಳಗೆ ಅವನೇ ಹಾಡಿಕೊಳ್ಳುವಂತಾಯಿತು. ಅವನ ವ್ಯಕ್ತಿತ್ವದ ಅಂಗವಾಯಿತು. ಅವನ ಉಸಿರಾಟದ ಭಾಗವಾಯಿತು. ಕವಿತೆ ಹೀಗೆ ಗೀತೆಯಾಗಿ ಗಾಯಕರ ಕೊರಳಿನಲ್ಲಿ ಮಧುರವಾಗಿಯೇ ಉಳಿದುಬರುವಾಗ ನವ್ಯ ಕಾವ್ಯ ಈ ಸಂಪ್ರದಾಯವನ್ನು ಕಡಿದುಹಾಕಿತು. ಕವಿತೆಗೆ ಬೇರೆ ಯಾವುದೇ ಕಲೆಯ ಹಂಗುಬೇಕಿಲ್ಲವೆಂದು ಸಮರವನ್ನೇ ಸಾರಿತು. ಗಾಯನಕ್ಕೆ ವಿರೋಧಿಯಾಯಿತು. ನವೋದಯ ಕವಿತೆ ಹಾಡಲಿಕ್ಕೆ ಬರೆದ ಕವಿತೆ ಎಂದೂ, ಕವಿತೆ ಹಾಡಿನ ರೂಪಕ್ಕೆ ಬರುವಾಗ ಅದರ ಸಾಹಿತ್ಯಮೌಲ್ಯ ಕುಗ್ಗಿಹೋಗುತ್ತದೆ, ಜಾಳಾಗುತ್ತದೆ. ಎಂಬ ಅಪವಾದವೂ ಹುಟ್ಟಿಕೊಂಡಿತು. ನವ್ಯ ಕವಿಗಳು ‘ಗೀತಕಾವ್ಯ’ವನ್ನು ಖಂಡಿಸುತ್ತಾ, ‘ಬುದ್ಧಿಪರವಾದ’ ಕಾವ್ಯ ರಚನೆಯನ್ನು ಪ್ರಾರಂಭಿಸಿದರು. ಅದುವರೆವಿಗೂ ಬಂದ ಕಾವ್ಯ ಉದ್ದಕ್ಕೂ ಸಂಗೀತದ ಜೊತೆ ಸಂಬಂಧವಿಟ್ಟುಕೊಂಡೇ ಬಂದಿದ್ದರೂ, ‘ನವ್ಯ ಕವಿತೆ’ವೊಂದೇ ಮೊದಲಬಾರಿಗೆ ನಿಯತಲಯವನ್ನು ಬಿಟ್ಟು ಆಡುಮಾತಿನ ಲಯವನ್ನು ಬಳಸಿ ಗೇಯತೆಗೆ ವಿರೋಧಿಯಾಗಿ ನಿಂತಿತು. ಉತ್ತಮ ಕವಿತೆಗಳು ಸೃಷ್ಟಿಯಾದರೂ, ಹಾಡುಗಳು ಇಲ್ಲವಾದವು. ನವೋದಯ ಕಾವ್ಯದಲ್ಲಿದ್ದ ಪ್ರಬೇಧಗಳು ಬಹುಮುಖಿಯಾಗಿದ್ದವು. ಸಮಾಜದ ನಾನಾ ಅಭಿರುಚಿಯ ಜನರಿಗೆ ಮುದ ನೀಡುತ್ತಾ, ಕಾವ್ಯದ ಒಂದು ಮುಖದಿಂದ ಅಲ್ಲದಿದ್ದರೆ, ಮತ್ತೊಂದು, ಮಗದೊಂದು ಮುಖದಿಂದ ಜನರನ್ನು ಅವು ತಣಿಸುತ್ತಿದ್ದವು. ಹೊಸಗನ್ನಡದ ಮೊದಲ ಮಜಲೇ ನವೋದಯ ಕಾವ್ಯದಲ್ಲಿತ್ತು. ಭಾವಗೀತೆಯೇ ನವೋದಯ ಕಾವ್ಯದ ಆತ್ಮವಾಗಿತ್ತು. ಅದಕ್ಕೆ ಕಥನಕವನ, ಗೀತರೂಪಕ, ಮಕ್ಕಳ ಕವನ, ಸಾನೆಟ್, ಪ್ರಗಾಥ ಹೀಗೆ ಹಲವು ಟಸಿಲು, ಉಪಟಸಿಲುಗಳಿದ್ದವು. ಹಲವು ಶಾಖೆಗಳಿದ್ದವು. ಓದುವ ಕವಿತೆ, ಹಾಡುವ ಕವಿತೆ, ಕಥನಗೀತೆ, ಎಲ್ಲವೂ ಸಮೃದ್ಧಿಯಾಗಿದ್ದವು. ಆದರೆ ನವ್ಯ ಬಂದ ಮೇಲೆ ಇದು ಪೂರ್ಣವಾಗಿ ಬದಲಾಯಿತು. ನವ್ಯಕವಿತೆ ನವೋದಯ ಕವಿತೆಗಿಂತ, ಅರ್ಥದಲ್ಲಿ, ಧ್ವನಿಯಲ್ಲಿ ದಟ್ಟವಾಗಿ, ಭಾಷೆಯಲ್ಲಿ ಬಿಗಿ ಸಾಧಿಸಿತಾದರೂ, ಗಾಯನ, ನಾಟಕಗಳ ಹಂಗಿಲ್ಲದೆ, ಪ್ರತ್ಯೇಕಗೊಂಡಿತು. ತಾನೇ ಪ್ರತ್ಯೇಕವಾಗಿ ಬೇರೆ ಯಾವ ಕಲೆಗಳೊಡನೆ ಹೊಂದಾವಣಿಕೆ ಮಾಡಿಕೊಳ್ಳದೆ ಏಕಾಂಗಿಯಾಯಿತು. ಇದರಿಂದ ಅದು ತನ್ನ ವೈವಿಧ್ಯತೆಯನ್ನು, ಬಹುರುಚಿ ಪೂರೈಕೆಗಳನ್ನು ಕಳೆದುಕೊಂಡಿತು. ಭಾಷೆಯ ಅತಿ ಬಿಗಿ, ವಿಶೇಷ ಪ್ರತೀಕಾತ್ಮಕತೆಗಳಿಂದ ಅದರ ಕ್ಷೇತ್ರ ವಿಪರೀತವಾಗಿ ಕುಗ್ಗಿಹೋಯಿತು. ಪರಿಧಿ ಸೀಮಿತವಾಯಿತು. ಆರಾಧಿಸುವ ಸಹೃದಯರ ಕ್ಷೇತ್ರವೂ ತೀರ ಚಿಕ್ಕದಾಗಿ ಹೋಯಿತು. ಸಮಾಜದ ಎಲ್ಲ ಅಭಿರುಚಿಗಳಿಗೆ ಪೂರೈಕೆಯಾಗುತ್ತಿದ್ದ ಕಾವ್ಯ ಕೇವಲ ಹಿಡಿಯಷ್ಟು ಜನರಿಗೆ, ಕಾವ್ಯವನ್ನೇ ವಿಶೇಷ ಅಧ್ಯಯನ ಮಾಡಿದ್ದವರಿಗೆ ಮಾತ್ರ ಮಿತವಾಯಿತು. ವಿದ್ಯಾವಂತರಾದ ಸಾಮಾನ್ಯ ಸಹೃದಯರು ಅದರಿಂದ ದೂರವಾಗಿಬಿಟ್ಟರು. ನವ್ಯದ ಅರಂಭದಲ್ಲಿ ಅದರ ಕೊರತೆ, ಮಿತಿಗಳು, ಯಾರಿಗೂ ಗೊತ್ತಾಗಲಿಲ್ಲ. ಆದರೆ ಇಪ್ಪತ್ತು ಇಪ್ಪತ್ತೈದು ವರುಷಗಳ ಹೊತ್ತಿಗೆ ನವ್ಯ ಕವಿತೆ ನಿಷ್ಠುರ ಕವಿತೆಯಾಗುತ್ತಾ ನಡೆಯಿತು. ಕವಿಗಳು ಬರೆದಿದ್ದು ಕವಿಗಳಿಗೇ ಗೊತ್ತಾಗದ ಸ್ಥಿತಿ ಬಂತು. ಅಡಿಗರ ಕಾವ್ಯ, ರಾಮಚಂದ್ರ ಶರ್ಮರ ಕಾವ್ಯ, ರಾಮಾನುಜರ ಕಾವ್ಯಗಳು ಈ ಸ್ಥಿತಿಗೆ ಹೊರತಾಗಲಿಲ್ಲ.

ನವೋದಯದ ಕವಿಗಳಾದ ಕೆ.ಎಸ್. ನರಸಿಂಹಸ್ವಾಮಿ, ಜಿ.ಎಸ್. ಶಿವರುದ್ರಪ್ಪ, ಚೆನ್ನವೀರಕಣಿವಿ, ಮುಂತಾದವರು ಕನ್ನಡ ಭಾವಗೀತೆಯ ಉತ್ಸಾಹದ ಮತ್ತು ಸಮೃದ್ಧಿಯ ಯುಗದಲ್ಲೇ ತಮ್ಮ ಕಾವ್ಯಕೃಷಿಯನ್ನು ಪ್ರಾರಂಭಿಸಿದ್ದರು. ನವ್ಯಯುಗ ಬಂದಾಗ ಕಾವ್ಯವು ಗದ್ಯಲಯದ ಕಡೆ, ಸಂಕೀರ್ಣತೆಯ ಕಡೆ ಬಂದಾಗಲೂ ತಾವು ಭಾವನಿಷ್ಠವೂ ಲಯಬದ್ಧವೂ ಆದ ಭಾವಗೀತೆಗಳನ್ನು ತಮ್ಮ ಸಂಕೀರ್ಣ ಕಾವ್ಯದ ಜೊತೆಜೊತೆಯಲ್ಲೇ ಬರೆದುಕೊಂಡು ಬಂದರು. ಅವರ ಮನಸ್ಸಿನ ಭಾವದೀಪ್ತ ಲಲಿತ ಕ್ಷಣಗಳನ್ನು ದಾಖಲಿಸಿಕೊಟ್ಟ ಅವರು ನವ್ಯದ ಸಂಪರ್ಕದಿಂದ, ಅವುಗಳ ಭಾಷೆ, ಭಾವ, ವಸ್ತು ಪ್ರಪಂಚಗಳಲ್ಲಿ ಸಾಕಷ್ಟು ಭಿನ್ನತೆಯನ್ನು ಸಾಧಿಸಿದರು. ನವ್ಯದ ಹೊಸ ವಿಚಾರಗಳೂ ಅವರ ಕಾವ್ಯಕ್ಕೆ ನುಗ್ಗಿದವು.

ನವ್ಯ ಕಾವ್ಯದ ಸಮೃದ್ಧಿಯ ಕಾಲದಲ್ಲೇ ತಮ್ಮ ಕಾವ್ಯ ರಚನೆ ಪ್ರಾರಂಭಿಸಿದಂತಹ ನಿಸ್ಸಾರ್ ಅಹಮದ್, ಲಕ್ಷ್ಮೀನಾರಾಯಣಭಟ್ಟ ಮುಂತಾದವರು ಗೋಪಾಲಕೃಷ್ಣ ಅಡಿಗರಿಂದ ನವ್ಯ ಕವಿತಾ ದೀಕ್ಷೆಯನ್ನು ಪಡೆದರು. ಕವಿ ಗೋಪಾಲಕೃಷ್ಣ ಅಡಿಗರು ‘ನವ್ಯ ಕಾವ್ಯದ’ ಮಹತ್ವದ ಕವಿಯಾಗಿ ಕಾವ್ಯಕ್ಕೆ ಹೊಸ ವ್ಯಕ್ತಿತ್ವನ್ನು ನೀಡಿದರು. ಗೇಯತೆಯನ್ನು ನಿರಾಕರಿಸುವ, ಆಂತರಿಕ ಲಯಯುಕ್ತ ಗದ್ಯಗ್ರಂಥಿಯಾದ ಮುಕ್ತ ಛಂದದ ‘ಚಂಡೆಮದ್ದಳೆ’ ಗೆಜ್ಜೆಕಟ್ಟಿ ಜೀವಂತಿಕೆಯಿಂದ ಕುಣಿಯತೊಡಗಿತು. ನವೋದಯದ ವಿರುದ್ಧ ಕಿಡಿಕಾರಿದ ಅಡಿಗರ ಆರಂಭದ ಗೀತೆಗಳನ್ನು ಬಿಟ್ಟರೆ ಅಡಿಗರಾಗಲಿ ಅಥವಾ ರಾಮಚಂದ್ರ ಶರ್ಮರಾಗಲಿ ಮುಂತಾದವರು ಹಾಡಲಿಕ್ಕಾಗಿ ಗೀತೆಗಳನ್ನು ಬರೆಯಲಿಲ್ಲ. ಅವರಿಗೆ ಅದು ಮುಖ್ಯವೆನಿಸಲಿಲ್ಲ. ಆ ನಂತರ ಬಂದ ಪ್ರಗತಿಶೀಲ ರೀತಿಯ ಬಂಡಾಯ ಪ್ರಾರಂಭವಾಯಿತಾದರೂ, ಸಿದ್ಧಲಿಂಗಯ್ಯನಂತಹವರ ಗೀತೆಗಳನ್ನು ಬಿಟ್ಟರೆ ಬೇರೆ ಯಾವುವೂ ಯಶಸ್ವಿಯಾಗಲಿಲ್ಲ. ಆದರೆ ಲಕ್ಷ್ಮಿನಾರಾಯಣಭಟ್ಟ, ನಿಸ್ಹಾರ್‌ಅಹಮದ್, ಈ ಇಬ್ಬರು ಕವಿಗಳು ಈ ಎಲ್ಲ ವಿರೋಧ, ಹಿನ್ನೆಳೆತಗಳ ನಡುವೆಯೂ ಮತ್ತೆ ಭಾವಗೀತೆಗಳ ರಚನೆಗೆ ತೊಡಗಿದ್ದು ಸುಗಮಸಂಗೀತಕ್ಕೆ ಅದೃಷ್ಟ ತಂದಿತು. ಪ್ರವಾಹದ ವಿರುದ್ಧ ಈಜಿದ ಕವಿಗಳಾದ ಇವರುಗಳು ಹೆಸರು ಸುಗಮಸಂಗೀತ ಹಾದಿಯಲ್ಲಿ ಸುವರ್ಣಾಕ್ಷರವನ್ನು ಬರೆಯಿತು. ನಿಸ್ಹಾರ್‌ರವರು ಬರೆದ ‘ನಿತ್ಯೋತ್ಸವ’ ಗೀತೆಗಳು ಏಕತಾನತೆಯಿಂದ ತಲ್ಲಣಿಸುತ್ತಿದ್ದ ನವ್ಯ ಕಾವ್ಯಮಾರ್ಗಕ್ಕೆ ಹೊಸದಿಗಂತವನ್ನು ತೋರಿಸಿ, ಗೇಯತೆಯ ಸ್ಪರ್ಶವನ್ನು ಮಾಡಿಸಿತು. ಕಾವ್ಯದ ಒಲವಿನೊಂದಿಗೆ ಸಂಗೀತದ ಬಗೆಗೆ ಒಲವಿದ್ದ ಕವಿಗಳೂ ಆದ ನಿಸ್ಹಾರರ ‘ನಿತ್ಯೋತ್ಸವ’ ಗೀತೆಗಳು ಅನಕ್ಷರಸ್ಥರನ್ನೂ ತಲಪಿ ಜನಪ್ರಿಯವಾದವು. ಎಂ.ಎಸ್.ಐ.ಎಲ್. ಗೀತೆಗಳಾಗಿ ಆಕಾಶವಾಣಿಯಲ್ಲಿ ಪ್ರಸಾರವಾಗಿ ನಾಡಿನ ಮೂಲೆಮೂಲೆಯಲ್ಲಿ ಹಳ್ಳಿ ಹಳ್ಳಿಗಳಲ್ಲಿ ಗುಣುಗುಣಿಸತೊಡಗಿದವು. ‘ನಿತ್ಯೋತ್ಸವ’ ಸುಗಮಸಂಗೀತದ ಇತಿಹಾಸದಲ್ಲಿ ಮೈಸೂರು ಅನಂತಸ್ವಾಮಿಯವರ ಸಂಗೀತ ನಿರ್ದೇಶನದಲ್ಲಿ ಪ್ರಪ್ರಥಮ ಧ್ವನಿಸುರುಳಿಯಾಗಿ ಶಾಶ್ವತವಾಯಿತು. ತನ್ನ ಹೆಸರಿಗೆ ಅನ್ವರ್ಥನಾಮವಾಗಿ ‘ಸುಗಮಸಂಗೀತ’ದ ಹಾದಿಯಲ್ಲಿ ನಿತ್ಯೋತ್ಸವದೇ ಮೆರವಣಿಗೆಯಾಯಿತು.

ನವ್ಯ ಮಾರ್ಗದಲ್ಲಿಯೇ ಕಾವ್ಯವನ್ನು ಆರಂಭಿಸಿದ ಲಕ್ಷ್ಮೀನಾರಾಯಣಭಟ್ಟರಿಗೆ ಕ್ರಮೇಣ ‘ಒಂದು ಸಂಸ್ಕೃತಿಗೆ ಬುದ್ಧಿ ಪ್ರಧಾನವಾದ ಪ್ರೌಢ ಕಾವ್ಯದ ಅಗತ್ಯ ಇರುವಂತೆಯೆ ಸರಳವೂ, ಸುಂದರವೂ, ಗಾಯನದ ಜೊತೆ ಬೆರೆಯಬಲ್ಲದ್ದೂ ಆದ ಗೀತಕಾವ್ಯದ ಅಗತ್ಯ ಇದೆ’ ಎನ್ನಿಸಿತು. ಸಾಕಷ್ಟು ನವ್ಯಕಾವ್ಯವನ್ನು ಬರೆದು ಹೆಸರು ಮಾಡಿದ ಲಕ್ಷ್ಮೀನಾರಾಯಣಭಟ್ಟರು ಅದರ ಜೊತೆಯಲ್ಲಿಯೇ ಭಾವಗೀತೆಗಳನ್ನು ಬರೆಯಲು ಆರಂಭಿಸಿದರು. ನವ್ಯದ ಉಚ್ಛ್ರಾಯ ಕಾಲದಲ್ಲಿ ಭಾವಗೀತೆಗಳನ್ನು ಬರೆಯುತ್ತಾ ಅದೂ ಹಾಡಬಹುದಾದ ಶುದ್ಧಾಂಗ ಭಾವಗೀತೆಗಳನ್ನು ಅಧಿಕ ಪ್ರಮಾಣದಲ್ಲಿ ಬರೆದರು. ಬೇರೆ ಬೇರೆ ಕವಿಗಳಿಗೆ ಬರೆಯಲು ಪ್ರೋತ್ಸಾಹಿಸಿದರು. ಕವಿತೆಯ ಹಾಡುಗಾರಿಕೆಗೆ ವಿರುದ್ಧವಾಗಿ ಮೂಗೆಳೆಯುತ್ತಾ ಟೀಕೆ ಮಾಡುತ್ತಿದ್ದವರ ಎದುರಿನಲ್ಲಿಯೇ ಶ್ರದ್ಧೆ ಉತ್ಸಾಹಗಳಿಂದ ಭಾವಗೀತೆಗಳ ಒಂದು ಚಳುವಳಿಯನ್ನೇ ನಡೆಸಿದರು. ಭಾವಗೀತೆಗಳ ಮರುಸೃಷ್ಟಿಗೆ ಕಾರಣರಾದದ್ದೇ ಅಲ್ಲದೆ, ಸುಗಮಸಂಗೀತದ ಮುನ್ನೆಡೆಗಾಗಿ ಎಲ್ಲಾ ರೀತಿಯಲ್ಲಿಯೂ ಪಾತ್ರವಹಿಸಿದರು. ನವೋದಯದ ಒಲವು, ನವ್ಯದ ಸಂಸ್ಕಾರ, ಕವಿಯ ವ್ಯಕ್ತಿ ವಿಶೇಷತೆಯ ಪಾಕದಲ್ಲಿ ಎರಕೆ ಹೊಯ್ದು ಕೊಟ್ಟ ಇವರ ಕವಿತೆಗಳು ಸುಗಮಸಂಗೀತಗಾರರಿಗಂತೂ ಹಬ್ಬವನ್ನೆ ತಂದಿತು. ‘ದೀಪಿಕಾ’ – ‘ಭಾವಸಂಗಮ’, ‘ನೀಲಾಂಜನ’ ‘ನಡೆದಿದೆ ಪೂಜಾರತಿ’ ‘ಬಂದೇ ಬರತಾವಕಾಲ’ – ಗೀತ ಸಂಕಲನಗಳು ನೂರಾರು ಗೀತೆಗಳಾಗಿ, ಗಾಯಕರಿಗೆ ಸಂಭ್ರಮವನ್ನು ತಂದುಕೊಟ್ಟವು. ನೆಮ್ಮದಿಯನ್ನುಮಟುಮಾಡಿದವು. ಮೈಸೂರು ಅನಂತಸ್ವಾಮಿಯವರು ಹೇಳಿದಂತೆ “ನವ್ಯ ಕವಿಗಳು ಬಂದ ಮೇಲೆ ಹಾಡಬಹುದಾದ ಹೊಸ ಕವನಗಳೇ ಇಲ್ಲದೆ ಕಾವ್ಯಗಾಯನ ಕ್ಷೇತ್ರದಲ್ಲಿ ಕತ್ತಲು ಆವರಿಸಿ ಮಂಕು ಕವಿದಿದ್ದ ಕಾಲದಲ್ಲಿ ನಮಗೆ ಭರವಸೆಯ ಬೆಳಕಾಗಿ ಬಂದವರು ಕವಿ ಲಕ್ಷ್ಮೀನಾರಾಯಣಭಟ್ಟರು. ಭಟ್ಟರ ಗೀತೆಗಳು ಪ್ರಕೃತಿಯಂತೆ ಸೆಳೆಯುತ್ತಾ, ಹಕ್ಕಿಯಂತೆ ಉಲಿಯುತ್ತಾ, ಗಾಳಿಯಂತೆ ಸುಳಿಯುತ್ತಾ, ಜೀವರಸ ಹರಿಸಿದವು.

ಸಿ. ಅಶ್ವಥ್‌ ಅವರು ಹೇಳಿದಂತೆ ಭಟ್ಟರು ಗೀತೆಗಳ ರಚನೆಗಿದ್ದ ಎಲ್ಲ ಆತಂಕಗಳನ್ನೂ ಗೆದ್ದು ಭಾವಗೀತೆಗಳ ರಚನೆಗೆ ಮತ್ತೆ ಚಾಲನೆ ಕೊಟ್ಟರು.

ಭಟ್ಟರ ಕವಿತೆಗಳಲ್ಲಿ ಕವಿಯ ವ್ಯಕ್ತಿಗತ ಆಶೆ, ಆಶಯಗಳ ಅಭಿವ್ಯಕ್ತಿಯೊಂದಿಗೆ ಪ್ರೀತಿಯ ಹಂಬಲ, ವಿರಹದ ನೋವು, ಶೃಂಗಾರ ತೃಪ್ತಿ, ಮಿಲನದ ಕಾತರ ಮುಂತಾದ ಭಾವನೆಗಳಿಗೆ ತಕ್ಕದಾದ ಪದಲಾಲಿತ್ಯಲಯದ ನಡಿಗೆಗಳ ಕೌಶಲದ ಚಿತ್ರಣಗಳಿಂದ, ಗೀತೆಗಳು ವೈವಿಧ್ಯಮಯವಾಯಿತು.

ಸುಗಮಸಂಗೀತದ ಪ್ರಪ್ರಥಮ ಧ್ವನಿಸುರುಳಿ ನಿಸ್ಸಾರರ ‘ನಿತ್ಯೋತ್ಸವ’ ಜನಪ್ರಿಯವಾದಂತೆ, ಲಕ್ಷ್ಮೀನಾರಾಯಣಭಟ್ಟರು ಸಂಗ್ರಹಿಸಿ ಸಂಪಾದಿಸಿದ ‘ಕಲ್ಲುಸಕ್ಕರೆ ಕೊಳ್ಳಿರೋ’ ಎಂಬ ಕೀರ್ತನ ಸಂಗ್ರಹದಿಂದ ಆರಿಸಿ ‘ಶಿಶುನಾಳ ಷರೀಫರ’ ಧ್ವನಿಸುರುಳಿ ಅತ್ಯಂತ ಜನಪ್ರಿಯವಾಯಿತು. ಸಂಗೀತಾ ಧ್ವನಿಸುರುಳಿ ಸಂಸ್ಥೆ ತಯಾರಿಸಿದ ಈ ಧ್ವನಿಸುರುಳಿ ಕರ್ನಾಟಕದಾದ್ಯಂತ ತನ್ನ ಕೀರ್ತಿ ಪತಾಕೆಯನ್ನು ಹಾರಿಸಿತು. ಸಿ. ಅಶ್ವಥ್ ಸಂಗೀತ ನೀಡಿದ, ಈ ಧ್ವನಿಸುರಳಿಯಲ್ಲಿ ಶಿವಮೊಗ್ಗ ಸುಬ್ಬಣ್ಣ, ಸುಲೋಚನ ಮತ್ತು ಅಶ್ವಥ್ ಅವರು ಹಾಡಿದ್ದರು. ಶಿಶುನಾಳ ಷರೀಫರ ಕಾವ್ಯವನ್ನು ಇಡೀ ಕರ್ನಾಟಕದ ತುಂಬ ಪ್ರಚಾರ ಮಾಡಿದ ಹಿರಿಮೆ ಲಕ್ಷ್ಮಿನಾರಾಯಣ ಭಟ್ಟರಿಗೆ ಸಂದಿತು. ಧಾರವಾಡದ ಸುತ್ತಮುತ್ತಲಿನವರಿಗೆ ಮಾತ್ರ ತಿಳಿದಿದ್ದ ಅವರ ಕಾವ್ಯ ಕರ್ನಾಟಕದ ಉದ್ದಗಲಕ್ಕೂ ಅತ್ಯಂತ ಆಕರ್ಷಕವಾಗಿ ತಲಪಿತು. ಅದಾಗಲೇ ‘ತರವಲ್ಲತಗಿ ನಿನ್ನ’ ಮತ್ತು ‘ಅಳಬೇಡತಂಗಿ’ ಎಂಬ ಗೀತೆಗಳು-ಎಂ.ಎಸ್.ಐ.ಎಲ್‌.ನ ಮೂಲಕ ಆಕಾಶವಾಣಿಯಲ್ಲಿ ಬಿತ್ತರಗೊಂಡು ಪ್ರಸಿದ್ಧವಾಗಿತ್ತು. ಮೊದಲ ಧ್ವನಿಸುರುಳಿಯ ಜನಪ್ರಿಯತೆಯ ಹುಚ್ಚು ಹೊಳೆಯಲ್ಲಿ ಇನ್ನೂ ಐದು ಧ್ವನಿ ಸುರುಳಿಗಳು ಹೊರಬಂದವು. ಷರೀಫರ ಬಗೆಗೆ ದೀರ್ಘವಾದ ಅಧ್ಯಯನ ನಡೆಯಿಸಿ ಅವರ ಕವಿತೆಗಳಿಗೆ ಟಿಪ್ಪಣಿ ಬರೆದು ಪರಿಷ್ಕರಿಸಿ, ಮುನ್ನುಡಿ ಬರೆದು ಪ್ರಕಟಿಸಿದ ಭಟ್ಟರು ಷರೀಫ್ ಭಟ್ಟರೆಂದೇ ಪ್ರಸಿದ್ಧಿಯಾದರು. ಭಾವಗೀತೆಗಳನ್ನುಬರೆದು ಸುಗಮಸಂಗೀತಕ್ಕೆ ಮತ್ತಷ್ಟು ಗೀತೆಗಳನ್ನು ಕೊಟ್ಟವರು ಸುಮತೀಂದ್ರ ನಾಡಿಗ್-ಚಂದ್ರಶೇಖರ ಪಾಟೀಲ ಸಿದ್ಧಲಿಂಗ ಪಟ್ಟಣಶೆಟ್ಟಿ, ಚಂದ್ರಶೇಖರ ಕಂಬಾರ, ಸುಬ್ರಾಯಚೊಕ್ಕಾಡಿ ಮುಂತಾದವರು, ಕನ್ನಡ ಕಾವ್ಯ ಸಂಪ್ರದಾಯದಲ್ಲಿ ಬಂದ ಕವಿಗಳು ಸಂಗೀತದ ಬಗೆಯೂ ಒಲವು ಮೂಡಿಸಿಕೊಂಡಿದ್ದರಿಂದ ಅವರ ಗೀತೆಗಳು ಮೂಲಕ ಅವರ ಮುಕ್ತ ಮನಸ್ಸಿನಲ್ಲಿಯೂ ಭಾವಗೀತೆಗಳ ಗೀತಗುಣಗಳೂ ಕಂಡುಬಂದವು. ಕಂಬಾರರು ಜಾನಪದ ಮೂಲದ ಹೊಸಭಾವ ಗೀತೆಗಳ ಕವಿಯಾದರೆ, ನಿಸಾರ್ ಮತ್ತು ಲಕ್ಷ್ಮೀನಾರಾಯಣಭಟ್ಟರು, ನಾಡಿಗ್ ಮುಂತಾದವರು ಶಿಷ್ಟ ಭಾವಗೀತೆಗಳನ್ನು ಬರೆದರು. ಸುಮತೀಂದ್ರನಾಡಿಗರು ತಮ್ಮ ಹೊಸಭಾವಗೀತೆಗಳಲ್ಲಿ ಹಾಸ್ಯ-ವ್ಯಂಗ್ಯ, ಪ್ರಾಸಗಳ ಲಾಸ್ಯದಿಂದ ವಿಶಿಷ್ಟವಾದರು. ಚಿಂತಾಮಣಿ ಕೂಡ್ಲೆಕೆರೆ, ದುಂಡಿರಾಜ್, ಮಹಾಬಲಮೂರ್ತಿ ಕೊಡ್ಲೆಕೆರೆ, ಎಲ್.ಎನ್. ಪುಷ್ಪಾ, ಕಮಲಾ ಹೆಮ್ಮಿಗೆ, ಎಂ.ಆರ್. ಕಮಲ, ಸವಿತಾ ನಾಗಭೂಷಣ ಮೊದಲಾದವರೂ ಭಾವಗೀತೆಗಳನ್ನು ಗೀತೆಗಳಿಗಾಗಿಯೇ ಬರೆದರು. ಕವಿಗಳಾದ ಎಚ್.ಎಸ್. ವೆಂಕಟೇಶ್ ಮೂರ್ತಿ, ಎಂ.ಎನ್. ವ್ಯಾಸರಾವ್-ಸಿದ್ದಲಿಂಗಯ್ಯ ಸ.ಶಿ. ಮರುಳಯ್ಯ, ದೊಡ್ಡರಂಗೇಗೌಡ, ಬಿ.ಆರ್. ಲಕ್ಷ್ಮಣರಾವ್ ಮುಂತಾದವರು ಸುಗಮಸಂಗೀತಕ್ಕೆ ತಮ್ಮ ನೂರಾರು ಗೀತೆಗಳ ಮೂಲಕ ಸಮೃದ್ಧಿಯನ್ನು ತಂದರು. ನವ್ಯಕಾವ್ಯದ ಜಾಡನ್ನು ಬಿಟ್ಟು ಸಮರ್ಥ ಪದಗಳ ಶೋಧನೆಯ ಹಾದಿ ಹಿಡಿದ ನಂತರ ತಾವು ಅದ್ಭುತ ಯಶಸ್ಸನ್ನು ಕಂಡುದಾಗಿ ಹೇಳಿದ ದೊಡ್ಡರಂಗೇಗೌಡರು ಅನೇಕ ಭಾವಗೀತೆಗಳನ್ನು ಬರೆದರು.

ಬಿ.ಎಂ.ಶ್ರೀ ಅವರಿಂದ ಆರಂಭಗೊಂಡ ಭಾವಗೀತಾ ಪ್ರಕಾರ ಪಂಜೆ ಮಂಗೇಶರಾವ್, ಎಂ. ಗೋವಿಂದಪೈ, ಟಿ.ಪಿ. ಕೈಲಾಸಂ, ಡಿ.ವಿ. ಗುಂಡಪ್ಪ, ಮಾಸ್ತಿ ವೆಂಕಟೇಶಯ್ಯಂಗಾರ್, ದ.ರಾ.ಬೇಂದ್ರೆ, ವೀ. ಸೀತಾರಾಮಯ್ಯ ಬೆಟಗೇರಿ ಕೃಷ್ಣಶರ್ಮ, ಮಧುರಚೆನ್ನ, ಕುವೆಂಪು, ಪು.ತಿ.ನರಸಿಂಹಚಾರ್, ಜಿ.ಪಿ. ರಾಜರತ್ನಂ, ಎಸ್.ವಿ. ಪರಮೇಶ್ವರಭಟ್ಟ, ಕೆ.ಎಸ್. ನರಸಿಂಹ ಸ್ವಾಮಿ, ಎಂ. ಗೋಪಾಲಕೃಷ್ಣ ಅಡಿಗ, ಸಿದ್ಧಯ್ಯ ಪುರಾಣಿಕ, ಜಿ.ಎಸ್. ಶಿವರುದ್ರಪ್ಪ ಚೆನ್ನವೀರ ಕಣವಿ, ಸುಮತೀಂದ್ರ ನಾಡಿಗ್, ಕೆ.ಎಸ್. ನಿಸಾರ್ ಅಹಮದ್, ಎನ್.ಎಸ್. ಲಕ್ಷ್ಮೀನಾರಾಯಣಭಟ್ಟ, ಚಂದ್ರಶೇಖರ ಕಂಬಾರ, ಎಚ್.ಎಸ್. ವೆಂಕಟೇಶಮೂರ್ತಿ, ಎಂ.ಎನ್. ವ್ಯಾಸರಾವ್, ದೊಡ್ಡರಂಗೇಗೌಡ, ಸುಬ್ರಾಯಚೊಕ್ಕಾಡಿ, ಬಿ.ಆರ್. ಲಕ್ಷ್ಮಣರಾವ್ ಮುಂತಾದ ಕವಿಗಳಿಂದ ಹಂತ ಹಂತವಾಗಿ ಅರಳುತ್ತಾ ಸುಗಮಸಂಗೀತಕ್ಕೆ ಹೊಸ ಆಯಾಮಗಳನ್ನು ಕಟ್ಟಿಕೊಟ್ಟವು. ಸ್ವಾತಂತ್ರ‍್ಯ ಪೂರ್ವದಲ್ಲಿ ಮತ್ತು ಸ್ವಾತಂತ್ತ್ರೋತ್ತರದ ಗೀತೆಗಳು ಕೇವಲ ದೇಶಭಕ್ತಿಯನ್ನೇ, ಕನ್ನಡ ಪ್ರೇಮವನ್ನೇ ತೋರಿಸಿದವಾದರೂ, ನಂತರ ಕ್ರಮೇಣ ವಸ್ತು, ಶೈಲಿ, ರೂಪಗಳಲ್ಲಿ, ಆಲೋಚನೆಗಳಲ್ಲಿ ವೈವಿಧ್ಯತೆಯನ್ನು ತೋರುತ್ತಾ ಬಂದವು. ಇವು ಸುಗಮಸಂಗೀತ ವಾಹಿನಿಯಾದ ಕೂಡಲೇ ಸುಲಭವಾಗಿ ಸಾಹಿತ್ಯವನ್ನು ಜನರಿಗೆ ತಲಪಿಸಿತು. ಒಮ್ಮೆಲೆ ಕೇಳುಗರಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳೆಸುತ್ತಾ ಬಂದಿತು. ಸುಗಮಸಂಗೀತದಲ್ಲಿ ಗೀತೆ, ಕವಿತೆಯನ್ನು ಗಾಯನದ ಮೂಲಕ ವ್ಯಾಖ್ಯಾನಿಸಿತು. ಕವಿತೆಯ ಅಂತರಂಗವನ್ನು ಅನುಸರಿಸಿದ ಸಂಗೀತ ಸಂಯೋಜನೆ ಮತ್ತು ಗಾಯನಗಳು ತಾವು ನಿರೂಪಿತವಾಗುವ ರೀತಿಯಿಂದಲೇ ಕವಿತೆಯನ್ನು ವ್ಯಾಖ್ಯಾನಿಸಿತು. ತಮ್ಮ ಮಾಧ್ಯರ್ಯದಿಂದ ಕೇಳುಗರಿಗೆ ಪ್ರಿಯವಾಗುತ್ತ ಕಾವ್ಯವನ್ನು ಅಸಂಖ್ಯಾತ ಜನರಿಗೆ ತಲಪಿಸಿದವು. ಮನೆಮನೆಗೆ ಹೂವು ಮಾರುವ ಹೂವಾಡಗಿತ್ತಿಯರ ಹಾಗೇ ಅರಿವು ಆನಂದ ಎರಡನ್ನೂ ಒಮ್ಮೆಲೇ ಹಂಚುವ, ಬೆಳೆಸುವ, ಮಾಧ್ಯಮವಾಯಿತು. ಅರಿವನ್ನು ಮೂಡಿಸಿ, ಜನರನ್ನು ಒಲಿಸಿಕೊಳ್ಳುತ್ತ, ಒಲಿಸಿಕೊಳ್ಳುತ್ತಲೇ, ಅವರ ಬದುಕನ್ನು ತಿದ್ದುವ ಮಧುರ ಕಾಂತಸಮ್ಮಿತವಾಯಿತು.

ಭಾವಗೀತೆಯನ್ನು ಬರೆಯುವವರು ಸಂಪ್ರದಾಯಕ್ಕೆ ಹತ್ತಿರವಾಗುತ್ತಾ ಸಹಜತೆಯಿಂದ ಸಮಾಜ ಮುಖಿಗಳಾಗುತ್ತಾ ಬಂದರು. ಕವಿತೆ ಸುಗಮಸಂಗೀತವಾದಾಗ ಭಾವ ಪ್ರಧಾನವಾದ ಗೀತೆಗಳಾಗಿ ಬದಲಾದವು. ಗೀತೆಯ ಮಾಧುರ್ಯ-ಕವಿತೆಯ ಭಾವಶಬ್ದ ಸೌಂದರ್ಯ ಎರಡೂ ಉದ್ದೀಪನಗೊಂಡವು. ಕೇಳುಗನನ್ನು ಕಾವ್ಯಾರ್ಥಕ್ಕೆ, ಭಾವ ಸ್ಪಂದನಕ್ಕೆ ರಸಸ್ವಾದನೆಗಳ ಹತ್ತಿರಕ್ಕೆ ಗೀತೆ ಕರೆದೊಯ್ಯಿತು. ಸಂಗೀತದ ಸತ್ವವೆಲ್ಲ ಕಾವ್ಯದ ಅರ್ಥ ಶ್ರೀಮಂತಿಕೆಯ ಸಮೃದ್ದಿಗಾಗಿಯೇ ಸಂದಿತು. ಜನಾಂತರಂಗಗಳನ್ನು ತಟ್ಟಿ ಅದಮ್ಯವಾದ ಹೊಸ ಅಲೆಯನ್ನೇ ಉಕ್ಕಿಸಿತು. ಕಿವಿಯ ಮೂಲಕ ತಲಪಿ ನೇರವಾಗಿ ಹೃದಯವನ್ನೇ ಪ್ರವೇಶಿಸಿತು. ಕವಿತೆ ಸಾರ್ಥಕವೂ, ಜನಪ್ರಿಯವೂ, ಜನರಪರವೂ ಆಯಿತು. ಜನಹಿತವೂ ಆಯಿತು.

ನವ್ಯಕಾವ್ಯವನ್ನು ಆರಂಭಿಸಿ ಬೆಳೆಸಿದ ಅಡಿಗರೇ ‘ಆಕಾಶವಾಣಿ’ಯ ‘ನವಸುಮ’ಕ್ಕಾಗಿ ‘ಭೂಮಿಗೀತ’ವನ್ನು ಬರೆದುಕೊಟ್ಟರು. ನವ್ಯಕವಿತೆ ತಿರಸ್ಕರಿಸಿದ ಗೇಯತೆಯೇ ಮತ್ತೆ ಕವಿತೆಯಲ್ಲಿ ಆವಿರ್ಭಾವವಾಯಿತು. ಕಾರಣ ಬಹುಜನರಿಗೆ ಅದು ತಲಪಬೇಕೆನ್ನುವ ಒಂದೇ ಆಸೆಯಿಂದ. ಹೃದಯಕ್ಕೆ ಹಾಯೆನಿಸುವ ಕವಿತೆ ಯಾವ ಕಾಲದಲ್ಲೂ ಇತ್ತು. ಕಾವ್ಯ ಸಂಗೀತಗಳ ಸಂಲಗ್ನದಿಂದ ಜನಕ್ಕೆ ಹೆಚ್ಚು ಸಂತೋಷವನ್ನು ಕೊಡಬೇಕೆನ್ನುವುದು ಹೊಸಪೀಳಿಗೆಯ ಕವಿಗಳ ಹಾದಿಯಾಯಿತು. ನವೋದಯ ನವ್ಯವನ್ನು ದಾಟುತ್ತಾ ಹಿಂದಿನ ಭಾವಗೀತೆಗಳಿಗಿಂತ ಹೆಚ್ಚು ಸ್ಪಷ್ಟವಾದ ರಾಗಾಶಯಗಳನ್ನು ಹೊಂದಿದ್ದ ಭಾವನಿಷ್ಠಕಾವ್ಯ ಸೃಷ್ಟಿಯಾಯಿತು. ಸಂಗೀತ ಮತ್ತು ಸಾಹಿತ್ಯಗಳ ವಿಷಯದಲ್ಲಿ ಜನಸಾಮಾನ್ಯರ ತಿಳುವಳಿಕೆ ಹಾಗೂ ಅಭಿರುಚಿಯ ಮಟ್ಟ ಏರಿದ ಬಗೆಯನ್ನು ಇಂತಹ ಭಾವಗೀತೆಗಳು ಮನದಟ್ಟು ಮಾಡಿಸಿದವು. ಕವಿಗಳ ಕಾವ್ಯವನ್ನು ಕೈಯಿಂದಲೂ ಮುಟ್ಟದ ಅನಕ್ಷರಸ್ಥರ ಮನೆ ಗುಡಿಸಿಲಿನಲ್ಲಿಯೂ ಕವಿತೆ ಸುಗಮಸಂಗೀತದ ಗೀತೆಯ ಮೂಲಕ ನೆರೆಯಂತೆ ನುಗ್ಗಿ ಆತ್ಮೀಯತೆ, ಪ್ರೀತಿಯಿಂದ ಉಳಿದು ಒಗ್ಗಿಕೊಂಡಿತು. ಕವಿ ಲಕ್ಷ್ಮೀನಾರಾಯಣಭಟ್ಟರು, ಹೆಚ್.ಎಸ್. ವೆಂಕಟೇಶಮೂರ್ತಿ, ನಿಸಾರ್ ಅಹಮದ್, ಬಿ.ಆರ್. ಲಕ್ಷ್ಮಣ್‌ರಾವ್ ಮುಂತಾದವರು ನವ್ಯ ಮಾರ್ಗದಲ್ಲಿ ಕಾವ್ಯ ಬರೆದರೂ ನವ್ಯದ ಮೂಲಕ ಹೊಸ ಮಾರ್ಗದ ಸಂಸ್ಕಾರದಿಂದ ಕೂಡಿದ ಗೇಯವೂ ಭಾವನಿಷ್ಠವೂ ಆದ ಕವಿತೆಗಳನ್ನು ಬರೆದರು. ಕೇಳುಗರ ಪ್ರಬುದ್ಧತೆಯನ್ನು ತಲಪಬಲ್ಲ ಅವರಲ್ಲಿ ಸಂವಾದಿಯಾದ ಭಾವಾವರಣವನ್ನು ಮಿಡಿಯಬಲ್ಲ ನೂರಾರು ಗೀತೆಗಳು ಜನ ಸಮುದಾಯವನ್ನು ಸೇರುವ ಮಹಾಪ್ರವಾಹವಾಗಿ ಹರಿದವು.

ನವೋದಯ ಕಾಲದ ಕವಿತೆಗಳ ವಸ್ತು ಮುಖ್ಯವಾಗಿ, ಪ್ರಣಯ ಪ್ರಕೃತಿ ಪ್ರೇಮ, ದಾಂಪತ್ಯದ ಒಲವು, ದೇಶಾಭಿಮಾನ ಮೊದಲಾದವುಗಳಾಗಿದ್ದವು. ಸಾಮಾಜಿಕ ಪ್ರಜ್ಞೆ, ಸಾಮಾಜಿಕ ಕಾಳಜಿ, ಸಾಮಾಜಿಕ ನ್ಯಾಯ ಮೊದಲಾದ ವಸ್ತುಗಳು ನಂತರದ ಆಧುನಿಕ ಕವಿತೆಗಳಲ್ಲಿ ಕಂಡುಬಂದವು. ಕೌಟುಂಬಿಕ ಹಾಗೂ ಸಾಮಾಜಿಕ ಬದುಕಿನ ಸುಖ ಶಾಂತಿ-ನೆಮ್ಮದಿಗಳಿಗೆ, ವ್ಯಕ್ತಿಯ ಮನೋಧರ್ಮ ಮತ್ತು ಜೀವನದೃಷ್ಟಿಗಳೇ ಕಾರಣವಾದವು. ಇತರರ ಭಾವನೆ-ವಿಚಾರಗಳ ಬಗೆಗೆ ಸಂವೇದನೆ, ಸ್ಪಂದನ, ನಿಸ್ವಾರ್ಥನಡೆ, ಸತ್ಯನಿಷ್ಠೆ, ನ್ಯಾಯಪರತೆ, ಪ್ರಾಮಾಣಿಕತೆ, ಜೀವನದ ಬಗೆಗೆ ಪ್ರೀತಿ, ಸರ್ವಭೂತಾನುಕಂಪ, ಸ್ನೇಹ-ಸೌಂದರ್ಯಯುಕ್ತವಾದ ಮಾನವೀಯ ಸಂಬಂಧ, ಸೌಜನ್ಯಯುಕ್ತ ನಡೆ, ನುಡಿ-ಮುಂತಾದ ಶ್ರೇಷ್ಠ ಮೌಲ್ಯಗಳನ್ನೊಳಗೊಂಡ ಕವಿತೆಗಳು, ಧೈರ್ಯ-ಸಹನೆ, ಪ್ರಸನ್ನತೆಗಳನ್ನು ಕಳೆದುಕೊಳ್ಳದ ಮನೋಸ್ಥೈರ್ಯವನ್ನು ಬೆಳೆಸಿಕೊಳ್ಳುವ ವ್ಯಕ್ತಿತ್ವ ವಿಕಾಸದ ಕವಿತೆಗಳು ಹುಟ್ಟಿಕೊಂಡವು.

ಸಂಗೀತ-ಸಾಹಿತ್ಯ ಎರಡೂ ತಮ್ಮ ತಮ್ಮ ಅತ್ಯುನ್ನತ ನೆಲೆಯಲ್ಲಿ ಸ್ವತಂತ್ರವಾಗಿ ನಿಲ್ಲುವಂತಹವು. ಸ್ವತಂತ್ರವಾಗಿ ಸಂಸ್ಕಾರವನ್ನು ನೀಡುವಂತಹವು. ಸಂಗಿತದ ಮಾಧುರ್ಯ ಸಾಹಿತ್ಯದ ಅರ್ಥಪೂರ್ಣತೆ ಎರಡೂ ಸೇರಿದಾಗ ಅವುಗಳ ಸತ್ವಗುಣ ದ್ವಿಗುಣವಾಯಿತು. ಹೊಸ ಅಭಿರುಚಿಯ, ಸಂಸ್ಕೃತಿಯು ಸೃಷ್ಟಿಯಾಯಿತು. ಆಪಾತ ಮಧುರವಾದ ಸಂಗೀತ, ಆಲೋಚನಾಮೃತವಾದ ಸಾಹಿತ್ಯದೊಂದಿಗೆ ಸೇರಿ ಅಪೂರ್ವ ಗೀತಗಾಯನ ರೂಪುಗೊಂಡಿತು. ಅದೇ ‘ಸುಗಮ ಸಂಗೀತ’ ವಾಯಿತು.

ಸುಗಮಸಂಗೀತದ ಇತಿಹಾಸ

ಇಂದು ಸುಗಮಸಂಗೀತವೆಂದು ಜನಪ್ರಿಯವಾಗಿರುವ ಗಾಯನ ಪದ್ಧತಿಗೆ ಎಂಟು ದಶಕಗಳ ಇತಿಹಾಸವಿದೆ. ಭಾವಗೀತೆ ಎಂದು ತನ್ನ ದನಿ ತೆರೆಯಿತೋ, ಭಾವದಹಕ್ಕಿ ಎಂದು ತನ್ನ ಗರಿಗಳನ್ನು ಬಿಚ್ಚಿಕೊಂಡು ಹಾರಲು ಸಜ್ಜಾಯಿತೋ, ಅಂದೇ ಸುಗಮಸಂಗೀತ ಹುಟ್ಟಿಕೊಂಡಿತು. ಸುಗಮಸಂಗೀತವೆಂಬ ಹೆಸರು ಪಡೆಯದ ಮುನ್ನ ‘ಲಘುಸಂಗೀತ’ ಅಥವಾ ‘Light music’ ಎಂದು ಕರೆಯಲ್ಪಡುತ್ತಿತ್ತು. ಶಾಸ್ತ್ರೀಯ ಸಂಗೀತದಲ್ಲಿರುವ ಶಾಸ್ತ್ರದ ನಿಯಮ, ಶಿಸ್ತು, ಬಿಗಿ, ಚೌಕಟ್ಟನ್ನು ದಾಟಿ, ಹೊರಗೆ ಬಂದದ್ದು, ಎಂಬುದನ್ನು ವ್ಯಕ್ತಪಡಿಸಲು ‘ಲಘು’ ಎಂಬ ಹೆಸರು ಪಡೆದಿತ್ತು. ಲಘುವಾದದ್ದು ಎಂಬುದಕ್ಕೆ ಹಗುರವಾದದ್ದೂ ಕೂಡ, ಎಂಬ ಅರ್ಥ ಸಂದಿತ್ತು.

‘ಲಘು ಸಂಗೀತ’ ಎಂಬ ತಲೆಯ ಬರಹದಿಂದ ಇದು ಸಂಗೀತ ಪ್ರಕಾರಕ್ಕೆ ಸೇರಿದ ಗಾಯನಕ್ರಮವಾಗಿತ್ತು. ಸಂಗೀತವೇ ಇದರ ಜೀವನಾಡಿಯಾಗಿತ್ತು. ಅಂದರೆ ಶಾಸ್ತ್ರೀಯ ಸಂಗೀತಕ್ಕಿಂತ ಭಿನ್ನವಾದ ಸ್ವಚ್ಛಂದರಾಗಭಾವಗಳಿಂದ ಕೂಡಿದ ಪ್ರಕಾರವಾಗಿತ್ತು. ಸಂಗೀತದ ಮೂಲಕ ರಂಜಿಸುವುದನ್ನೇ ಗುರಿಯಾಗಿಟ್ಟುಕೊಂಡಿತ್ತು. ಈ ಸಂಗೀತ ಪ್ರಕಾರಕ್ಕೆ ನಿರ್ದಿಷ್ಟವಾದ ವಸ್ತುವೇ ಇರಲಿಲ್ಲ. ಶಾಸ್ತ್ರೀಯ ಸಂಗೀತಕ್ಕಿದ್ದ ರೀತಿಯೇ ಇಲ್ಲಿ ಗಣ್ಯವಾಗಿ ವಸ್ತುಗೌಣವಾಗಿತ್ತು. ನಿರ್ದಿಷ್ಟವಾದ ಭಾಷೆಯೂ ಇರಲಿಲ್ಲ. ದೇವರನಾಮ, ಗಝಲ್, ದೇಶಭಕ್ತಿಗೀತೆ, ಜನಪದಗೀತೆ, ವಚನ, ಕನ್ನಡಗೀತೆ, ಮೀರಾಭಜನೆಗಳು, ಅಭಂಗಗಳು, ಹೀಗೆ ಯಾವುದೇ ಪ್ರಕಾರವೂ ಲಘು ಸಂಗೀತದ ವಸ್ತು ವಿಚಾರಗಳಾಗಿದ್ದವು. ಸಂಗೀತದ ನಿರೂಪಣೆಯಲ್ಲಿ ನಾವೀನ್ಯತೆಯನ್ನು ಶ್ರೋತೃಗಳು ಬಯಸುತ್ತಿದ್ದರು. ಸಾಹಿತ್ಯ ಗೌಣವಾಗಿ ಸಂಗೀತವೇ ಗಣ್ಯವಾಗಿತ್ತು. ಹಾಡುಗಾರಿಕೆಗೆ ಪ್ರಾಧಾನ್ಯತೆಯಿತ್ತು. ಶಾಸ್ತ್ರೀಯ ಸಂಗೀತದ ಹಾಡುಗಾರರಿಗೆ ಲಘು ಸಂಗೀತದ ಬಗೆಗೆ ತಾತ್ಸಾರ ಭಾವನೆಯಿದ್ದರೂ, ತಮ್ಮ ಸಂಗೀತ ಕಛೇರಿ ಕಾರ್ಯಕ್ರಮಗಳಲ್ಲಿ ಶ್ರೋತೃಗಳ ಬೇಡಿಕೆಯ ಮೇರೆಗೆ, ದಾಸರಪದ, ವಚನ, ಭಜನ್‌ಗಳನ್ನು ಹಾಡುತ್ತಿದ್ದರು. ‘ಜಾವಳಿ ಅಂತಹ ಲಘು ಶೃಂಗಾರದ ಗೀತೆಗಳನ್ನುಹಾಡುವುದೇ ಒಂದು ಆಕರ್ಷಣೆಯಾಗಿತ್ತು. ‘ಲಘು ಸಂಗೀತ’ ಎಂದರೆ ಹೊಣೆಗಾರಿಕೆ ಇಲ್ಲದ ಬೇಜವಾಬ್ದಾರಿಯ ಅಥವಾ ಪ್ರಾಮುಖ್ಯವಲ್ಲದ ಸಂಗೀತವೆಂಬ ಅರ್ಥವೂ ಇತ್ತು. ಶಾಸ್ತ್ರೀಯ ಸಂಗೀತದ ಕೊನೆಯಲ್ಲಿ ಹಾಡುವ ಲಘುವಾದ ಗೇಯ ಪ್ರಕಾರಗಳಾಗಿಯೂ ಆಚರಣೆಗೆ ಬಂದಿತ್ತು.

‘ಶ್ರೀ’ ಅವರ ‘ಇಂಗ್ಲಿಷ್ (೧೯೨೧) ಗೀತಗಳು’ ಪ್ರಕಟವಾದ ಕೂಡಲೇ ಕನ್ನಡತನದ ತೇಜಸ್ಸು ಸಾವಿರಾರು ಹೃದಯಗಳಲ್ಲಿ ಒಮ್ಮೆಲೆ ಹರಿಯತೊಡಗಿತು. ಕಾವ್ಯ ಸೃಷ್ಟಿಯೊಡನೆ ಕವಿಗಳ ಸೃಷ್ಟಿಯಾಯಿತು. ಮಬ್ಬಿನ ಮುಸುಕು ಸರಿದು ಬೆಳಗುಮೂಡಿತು. ಕಾವ್ಯದ ವಸ್ತು, ರೀತಿ, ಭಾವ, ವರ್ಣನೆ, ಶೈಲಿ, ರೂಪ, ಇವುಗಳ ಸಾಕ್ಷಾತ್ಕಾರವಾಯಿತು. ಇವುಗಳ ಅಭಿವ್ಯಕ್ತಿಗೆ ಸಂಗೀತ ಮಾಧ್ಯಮವಾಗಲು ಪ್ರಾರಂಭಿಸಿತು. ಇಂಗ್ಲಿಷಿನ ‘ಲಿರಿಕ್’ ಮಾದರಿಯನ್ನು ಅನುಸರಿಸಿ, ಕನ್ನಡದ ಕವಿಗಳು ರಚಿಸತೊಡಗಿದ ಭಾವಗೀತೆಗಳು ಸಾಂಪ್ರದಾಯಿಕ ಗೀತ, ಕೀರ್ತನೆ, ಪದಗಳಗಿಂತ ಭಿನ್ನವೂ, ವಿಶಿಷ್ಟವೂ ಆಗಿದ್ದು, ತಾವು ತಾಳಿದ ಧೋರಣೆಗಳಿಂದ. ಈ ಭಾವಗೀತೆಗಳು ಮತ, ಧರ್ಮ, ಸಾಂಪ್ರದಾಯಿಕ ಭಕ್ತಿಶ್ರದ್ಧೆಗಳಿಂದ ಮುಕ್ತವಾಗಿದ್ದವು. ಇವು ಭಾವಗೀತಾಕಾರನ ವೈಯಕ್ತಿಕ ಭಾವನೆಗಳ ಅನಿಸಿಕೆಗಳ ವಾಹಕಗಳಾಗಿದ್ದವು. ನಿಸರ್ಗದ ಅನೂಹ್ಯ ಶಕ್ತಿ ಸೌಂದರ್ಯ, ವೈಯುಕ್ತಿಕ ಹಂಬಲ, ದುಃಖ, ಆನಂದಗಳ ಅಭಿವ್ಯಕ್ತಿಗಾಗಿ ಬಳಕೆಯಾದ ಕವಿತೆಯೇ ಭಾವಗೀತೆಯಾಯಿತು. ಶ್ರೀ ಅವರಿಂದ ಪ್ರಾರಂಭಿಸಿದ ಈ ಕಾವ್ಯಜ್ಯೋತಿ ಅವರ ಶಿಷ್ಯರಾದ, ಮಾಸ್ತಿ, ಕುವೆಂಪು, ಪು.ತಿ.ನ ಮುಂತಾದ ಎಳೆಯ ಕವಿಗಳಿಂದ ಬೆಳಗುತ್ತ ಬೆಳಗುತ್ತಾ ನಿರಂತರವಾದ ಉಜ್ವಲ ಬೆಳಕಾಯಿತು. ಭಾವಗೀತೆಯ ಹರಿಕಾರರಾದ ಬಿ.ಎಂ.ಶ್ರೀ ಅವರ ಬಗೆಗೆ ಮಾಸ್ತಿಯವರು ತಮ್ಮ ‘ಮಲಾರ’ (೧೯೩೪)ದಲ್ಲಿ ಹೇಳಿರುವ ಮಾತು ಅರ್ಥಪೂರ್ಣವಾಗಿತ್ತು. ‘ಎಳೆಯರೆದೆಯಲಿ ಹಾಡುವಾಸೆಯ ಸುಳಿಸಿದಿರಿ’ ಎಂಬಲ್ಲಿ ‘ಶ್ರೀ’ ಅವರ ಹಿರಿಯತನದ ಸಾರಥ್ಯದಲ್ಲಿ ಅವರ ಶಿಷ್ಯರು ಪ್ರಭಾವಿತರಾದದ್ದು ಪ್ರೇರಣೆಯನ್ನು ಪಡೆದಿದ್ದು, ಎಲ್ಲವೂ ಎದ್ದು ಕಾಣುವ ಅಂಶವಾಗಿತ್ತು. ಶ್ರೀ ಅವರಿಂದ ಕಾವ್ಯದೀಕ್ಷೆ ಪಡೆದ ಕಿರಿಯ ಕವಿಗಳು ಸಂಪೂರ್ಣವಾಗಿ ಹೊಸಹಾದಿಯಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದರು.

ಇಂಗ್ಲಿಷ್ ಕವಿತೆಯ ರುಚಿಯನ್ನು ಕನ್ನಡಿಗರಿಗೆ ಒದಗಿಸುವುದರಲ್ಲಿ ಪ್ರಾರಂಭದ ಪ್ರಯತ್ನಮಾಡಿ ಮುಂದುವರೆಸಿದ ಹಿರಿಯರಲ್ಲಿ ದಿವಂಗತ ಹಟ್ಟಿಯಂಗಡಿ ನಾರಾಯಣರಾಯರು ಒಬ್ಬರು. (ಇವರು ಅನುವಾದ ಮಾಡುತ್ತಿದ್ದ ವಿಷಯವನ್ನು ಶ್ರೀ ಗೋವಿಂದ ಪೈ ಅವರು ೧೮೯೯-೧೯೦೦ರಲ್ಲಿ ಎಂ.ಎ. ತರಗತಿಯಲ್ಲಿದ್ದಾಗಲೇ ತಮ್ಮ ಗುರುಗಳಾದ ಪಂಜೆಯವರಿಂದ ತಿಳಿದಿದ್ದರಂತೆ) ಆದರೆ ಹಟ್ಟಿಯಂಗಡಿ ನಾರಾಯಣರಾಯರ ಕವನಗಳು ಬಹಳ ಕಾಲ ಬೆಳಕಿಗೆ ಬರಲಿಲ್ಲ. ಇವರ ನಂತರ ಹೊಸಗನ್ನಡದ ಕವಿತೆಗಳನ್ನು ಬರೆದು ಪ್ರಕಟಿಸಿದವರು ಪಂಜೆ ಮಂಗೇಶರಾಯರು. ಮಕ್ಕಳಿಗಾಗಿಯೇ ಸರಳವಾಗಿಯೂ, ಸುಲಲಿತವಾಗಿಯೂ ಇರುವ ಕೆಲವು ಕವಿತೆಗಳನ್ನು ಬರೆದು ಕೆಲವನ್ನು ಅನುವಾದಿಸಿ ‘ಕನ್ನಡದ ಮೊದಲನೆಯ ಪದ್ಯಪುಸ್ತಕ’ (೧೯೧೨)ದಲ್ಲಿ ಪ್ರಕಟಿಸಿದರು. ಸ್ವತಂತ್ರ ಕವನಗಳಿಂದ ‘ಹಾವಿನ ಹಾಡು’ – ‘ನಾಗಣ್ಣನ ಕನ್ನಡಕ’ – ‘ಹೊಗೆಯಗಾಡಿ’ ಮುಂತಾದವುಗಳಲ್ಲದೆ, ಕವನವನ್ನು ‘ನಕ್ಷತ್ರ’ ಎಂಬ ಶೀರ್ಷಿಕೆಯಿಟ್ಟು ಅನುವಾದಿಸಿದರು. ೧೯೧೯ರಲ್ಲಿ ‘ಕನ್ನಡ ಎರಡನೆಯ ಪದ್ಯಪುಸ್ತಕವೂ ಪ್ರಕಟವಾಯಿತು. ಇಂಗ್ಲಿಷ್ ಮಾರ್ಗಗಳ ಅನುಸರಣದಿಂದ ಕವಿಗಳು ಪಾರಮಾರ್ಥಿಕ ವಿಷಯಗಳಿಗಿಂತ, ರಾಷ್ಟ್ರೀಕ, ಸಾಮಾಜಿಕ, ಚಾರಿತ್ರಿಕ, ಲೌಕಿಕ ವಿಷಯಗಳನ್ನು ಕವಿತೆಯ ವಸ್ತುವಾಗಿಸಿಕೊಂಡರು. ದೀರ್ಘ ಪುರಾಣಗಳಿಗೆ ಬದಲಾಗಿ ಹ್ರಸ್ವ ಕವಿತೆಗಳು ಹುಟ್ಟಿಕೊಂಡವು. ಛಂದಸ್ಸಿನಲ್ಲಿ ಬಗೆಬಗೆಯ ಹೊಸ ಮಾದರಿಗಳು ಕಣ್ಣು ತೆರೆದವು. ಕವಿತೆಗಳನ್ನು ಗೀತೆಗಳನ್ನಾಗಿ ಹಾಡುವುದು ಪ್ರಾರಂಭವಾಯಿತು. ಪ್ರಾರಂಭದಲ್ಲಿ ಮೊದಲೇ ಸಿದ್ಧವಾಗಿ, ಪ್ರಸಿದ್ಧವಾಗಿದ್ದ ಧಾಟಿಗೆ ಕವಿಗೀತೆಗಳನ್ನು ಹೊಂದಿಸಿಕೊಂಡು ಹಾಡುವ ಪ್ರಕ್ರಿಯೆ ಕಂಡುಬಂದವು. ಜನಪ್ರಿಯವಾಗಿದ್ದ ಧಾಟಿಗೆ ತಮಗೆ ಪ್ರಿಯವಾದ ಸಾಹಿತ್ಯವನ್ನು ಹೊಂದಿಸಿಕೊಂಡು ಗಾಯಕರು ಅಲ್ಲಿ ಇಲ್ಲಿ ಹಾಡಲು ತೊಡಗಿದರು. ಶಾಸ್ತ್ರೀಯ ಬಲ್ಲವರು ಶಾಸ್ತ್ರೀಯ ರಾಗಳ ಬಂಧದಲ್ಲಿಯೇ ಹಾಡಲು ತೊಡಗಿದರು. ಕವಿತೆಯ ಪ್ರಸ್ತುತಿಗಿಂತಾ, ಸಂಗೀತದ ಅಬ್ಬರ ಭರಾಟೆಯೇ ಹೆಚ್ಚಾಗುತ್ತಿದ್ದ ಪ್ರಕರಣಗಳೂ ಇದ್ದವು. ಹಿಂದೂಸ್ತಾನೀ ಸಂಗೀತಗಾರರು ತಾವು ಹಾಡುತ್ತಿದ್ದ ಚೀಜ್‌ನ್ನು ಕವಿತೆಗೆ ಆರೋಪಿಸಿದ್ದರೆ, ಕರ್ನಾಟಕೀ ಸಂಗೀತಗಾರರು ಕೀರ್ತನೆಗಳ ಬಂಧದಲ್ಲಿಯೇ ಕವಿತೆಯನ್ನು ಕಟ್ಟಿ ಹಾಕುತ್ತಿದ್ದರು. ಇತ್ತ ಕಟ್ಟಾ ಶಾಸ್ತ್ರೀಯ ಸಂಗೀತಗಾರರು ಲಘುಸಂಗೀತವನ್ನು ಹಾಡುವುದೇ ಅವಮಾನವೆಂದು ತಿಳಿದು ಅದರತ್ತ ಅಸಡ್ಡೆ ತೋರುತ್ತಾ ಅನಾದರಣೆ ತೋರಿಸುತ್ತಿರುವಾಗಲೇ, ನವಿರಾದ ಹೊಸರಾಗವನ್ನು ಹೊತ್ತ ಕಾವ್ಯಕನ್ನಿಕೆ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಕಠಿಣರಾಗದ ಮೇಲ್ಮುಸುಕವನ್ನು ತೆರೆದು ತನ್ನ ಅಪೂರ್ವ ಸೌಂದರ್ಯವನ್ನು ತೋರಿಸುತ್ತಾ ಬಂದಳು. ಅವಕುಂಠನ ಮೂಲಕ ಮಬ್ಬಾಗಿ ತೋರುತ್ತಿದ್ದ ಅವರ ಸೊಬಗು, ಬೆಡಗು, ಒಮ್ಮೆಲೆ ಪ್ರಕಾಶಗೊಂಡಿತು.

ಸುಗಮಸಂಗೀತದ ಕಲ್ಪನೆ ಮೊದಲು ಮೂಡಿಬಂದುದು ಪ್ರಾಯಶಃ ‘ರವೀಂದ್ರನಾಥ ಠಾಕೂರ್’ ಅವರ ಗೀತೆಗಳಲ್ಲಿ ಎನ್ನಬಹುದು. ಅವರ ಗೀತೆಗಳೆಲ್ಲಾ ರಾಗಪ್ರಧಾನ, ಕಾವ್ಯ ಪ್ರಧಾನ ರಚನೆಗಳು. ಅನೇಕ ಗೀತೆಗಳಲ್ಲಿ ಶಾಸ್ತ್ರೀಯ ಸಂಗೀತದ ರಾಗಗಳನ್ನು ಬಳಸಿದ್ದರೂ, ಗೀತೆಯ ಭಾವಕ್ಕನುಗುಣವಾಗಿ ರಾಗವನ್ನು ತಿಳಿಯಾದ ಮತ್ತು ಸರಳವಾದ ರೂಪದಲ್ಲಿ ಪ್ರಯೋಗಿಸಿದ್ದಾರೆ. ರವೀಂದ್ರನಾಥಠಾಕೂರರು ನಮ್ಮ ಭಾರತೀಯ ಸುಗಮಸಂಗೀತ ಹರಿಕಾರರಾಗಿದ್ದಾರೆ. ಅವರ ‘ಗೀತಾಂಜಲಿ’ ಬಂಗಾಳಿ ಭಾವಗೀತಾ ಸಂಕಲನ ಅಪೂರ್ವವಾಗಿದೆ. ಸಾಧಕನೊಬ್ಬನ ಮನೋಗತವನ್ನು ನಿವೇದನೆ ಮಾಡುವ ಈ ಸಂಕಲನದಲ್ಲಿ ಯಾವುದೇ ಒಂದು ಮತ, ಜಾತಿಯ ನಂಬಿಕೆ ಶ್ರದ್ಧೆ, ಅಥವಾ ಪಕ್ಷ, ದೈವದ ಚಿತ್ರಣ ಅಥವಾ ಅವಲಂಬನವಿಲ್ಲ. ಕೇವಲ ಆತ್ಮದ ಒಂದು ಅವಲೋಕನ, ಪ್ರಾಮಾಣಿಕ ನಿವೇದನೆ, ಸೃಷ್ಟಿಕರ್ತನ ಆರಾಧನೆ, ಮನಸ್ಸಿನ ಕಾತರ, ಕಳವಳ ‘ಆತ್ಮಭಾವದ ಚಿತ್ರಣವಿದೆ. ರವೀಂದ್ರರು ಸಂಗೀತಗಾರರಾಗಿದ್ದರಿಂದ ಆಧುನಿಕ ಸ್ವರೂಪದ ಶುದ್ಧಹಾಡುಗಳೇ ಇಲ್ಲಿ ಸುಗಮಸಂಗೀತಕ್ಕೆ ಮಾದರಿಯಾದವು.

ಮುಂದೆ ಈ ಜಾಡನ್ನೇ ಹಿಡಿದು ತೆಲುಗು, ಮರಾಠಿ ಮುಂತಾದ ಭಾಷೆಗಳಲ್ಲಿಯೂ ಈ ರೀತಿಯ ಕಾವ್ಯದ ಸೊಗಸನ್ನು ಎತ್ತಿತೋರುವ ಕಾವ್ಯ ಪ್ರಧಾನ ಭಾವಗೀತೆಗಳು ಬೇಕಾದಷ್ಟು ರಚಿತವಾದವು. ಕರ್ನಾಟಕದಲ್ಲಿಯೂ ಈ ಬಗೆಯ ಸರಳ ಛಾಯೆಯನ್ನು ಒಳಗೊಂಡ ಭಾವಗೀತೆಗಳು ಪ್ರಚಾರಕ್ಕೆ ಬರಲು ಆರಂಭವಾಯಿತು. ಕವಿಗಳು ಅರ್ಥ ಮತ್ತು ಭಾವಪೂರ್ಣವಾದ ಕವಿತೆಗಳನ್ನು ಆರಿಸಿ ಅದಕ್ಕೆ ರಾಗ ಸಂಯೋಜನೆ ಮಾಡುವ ಸಂಗೀತಗಾರರು ಬೆಳಕಿಗೆ ಬಂದರು. ರಾಗಸಂಯೋಜನೆಯಲ್ಲಿ ಅನ್ಯ ಸ್ವರಗಳ ಸಂಯೋಜನೆಯ ಹೊಸತನವೂ ಕಂಡುಬಂದಿತು.

ದಕ್ಷಿಣ ಕರ್ನಾಟಕ ಮತ್ತು ಹಳೇ ಮೈಸೂರು ಪ್ರಾಂತ್ಯಗಳಲ್ಲಿ ಸುಗಮಸಂಗೀತ

ಕನ್ನಡದಲ್ಲಿ ಭಾವಗೀತೆಯ ಸ್ವರೂಪ ಇನ್ನೂ ಖಚಿತಗೊಳ್ಳುವ ಮೊದಲೇ ಹೊಸ ಕವಿತೆಗೆ ಮನಸ್ಸು ತೆತ್ತ ಹಿರಿಯ ತಲೆಮಾರಿನ ಕವಿಗಳಲ್ಲಿ ವೀ. ಸೀತಾರಮಯ್ಯ ಮುಖ್ಯವಾದವರು. “ಆಚಾರ್ಯ ಶ್ರೀ ಅವರ ಶಿಷ್ಯರಾಗಿ ಪ್ರತ್ಯಕ್ಷ ಪ್ರಭಾವದಲ್ಲಿ ಸ್ಫೂರ್ತಿ ಪಡೆದು ಕಾವ್ಯ ರಚನೆಯಲ್ಲಿ ತವರಿಗೆ ಸಹಜವಾದ, ನೇರವಾದ ಹಾದಿಯನ್ನು ಹಿಡಿದು ಧೀರರಾಗಿ ನಡೆದವರು. ವಿಷಯ, ರೀತಿ, ಛಂದಸ್ಸುಗಳಲ್ಲಿ ಯಾವುದೇ ಅತಿರೇಕಕ್ಕೆ ಹೋಗದೇ, ಆ ಕಾಲದ ಪ್ರವೃತ್ತಿಗೆ, ಮನೋಭಾವಕ್ಕೆ ತಕ್ಕಂತೆ, ಒಂದು ನಿರ್ಬಂಧದಲ್ಲಿಯೇ ಒಳಮನೆ ತಿಳಿವನ್ನು, ಶುಚಿಯನ್ನು, ಅದಕ್ಕೆ ಧಾರೆ ಎರೆದವರು” ಎಂದ ಚನ್ನವೀರ ಕಣವಿಯವರ ಮಾತು ವೀಸೀ ಅವರ ಒಳ ಹೊರಗಿನ ವ್ಯಕ್ತಿತ್ವವನ್ನು ಬಣ್ಣಿಸುತ್ತದೆ. ತಮ್ಮಕವನಗಳ ಸರಳ ಮಧುರ ಶೈಲಿಯಿಂದ ಹಿರಿತನವನ್ನು ಎತ್ತಿ ತೋರಿದವರು ಅವರು. ಯಾರು ಸರಳವಾಗಿ ಸುಲಭವಾಗಿ ಹೇಳಬಲ್ಲರೋ ಅವರು ಹೆಚ್ಚು ತಿಳಿದವರಾಗಿರುತ್ತಾರೆ ಎಂದು ಒಬ್ಬ ಆಂಗ್ಲ ವಿಮರ್ಶಕ ಹೇಳಿದ್ದಾನೆ. ವೀಸೀ ಅವರ ಪರಿಪೂರ್ಣವಾದ ಆಹ್ಲಾದಕರವಾದ ಸರಳ ಸುಭಗ ಬರವಣಿಗೆಯಲ್ಲಿ ಗಾಢವಾದ ಚಿಂತನೆಗಳು ಎದ್ದು ಕಾಣುತ್ತವೆ. ಪದ ಸಮಾಸಗಳ ದೊಂಬರಾಟವಿಲ್ಲದ ಪ್ರಸನ್ನ ಲಲಿತ ಪದಗಳು ಅವರ ವ್ಯಕ್ತಿತ್ವದ ಮುದ್ರೆಯನ್ನೊತ್ತುತ್ತವೆ. ವೀಸೀ ಅವರ ‘ಗೀತಗಳು’ ಕವಿತಾ ಸಂಕಲನದಿಂದ (೧೯೩೧) ಹಳೆ ಮೈಸೂರು ಪ್ರಾಂತ್ಯದಲ್ಲಿ ಸುಗಮಸಂಗೀತ ತನ್ನ ದನಿ ತೆರೆಯಿತು. ನಮ್ಮ ಕರ್ನಾಟಕದ ಗಮಕಿಗಳು ಹೊಸಗನ್ನಡದ ಪದ್ಯಗಳನ್ನು ವಾಚಿಸಲು ಉತ್ಸುಖರಾದರು. ಶಾಸ್ತ್ರೀಯ ಸಂಗೀತದ ಮೂಲಧಾಟಿಯನ್ನು ಹಿಡಿದುಕೊಂಡೇ ಹೊಸಗಾಯನ ಪದ್ಧತಿ ಆವಿಷ್ಕಾರಗೊಂಡಿತು.

ಕರ್ನಾಟಕದಲ್ಲಿ ‘ಶ್ಲೋಕ ಸಂಗೀತ ಪಟು’ ಎಂದೇ ಬಿರುದಾಂಕಿತರಾಗಿದ್ದ ಕಳಲೆ (ನಂಜನಗೂಡಿನ ಬಳಿ) ಸಂಪತ್ಕುಮಾರಾಚಾರ್ಯರು ‘ಆಧುನಿಕ ಕವಿತೆಗಳ ಪ್ರತ್ಯೇಕ ಕಾರ್ಯಕ್ರಮಗಳನ್ನು ಪಕ್ಕವಾದ್ಯದೊಂದಿಗೆ ನಡೆಸಿದ್ದರು. ಸಾಹಿತ್ಯ ಶುದ್ಧವಾಗಿ ಭಾವಪೂರಿತವಾಗಿ ದೇವರನಾಮಗಳನ್ನು ಹಾಡುವುದರಲ್ಲಿ ಸಿದ್ಧಹಸ್ತರೆನಿಸಿದ್ದ ಆಚಾರ್ಯರು, ಭಾವಗೀತೆಗಳನ್ನು ಸಹ ತಮ್ಮ ಭಾವಪೂರ್ಣಕಂಠದಿಂದ ಹಾಡುವಲ್ಲಿ ವಿಶೇಷ ಪಾಂಡಿತ್ಯ ಹೊಂದಿದ್ದರು. ಬಿ.ಎ. ಬಿ.ಟಿ. ಪದವಿ ಗಳಿಸಿ ಅಧ್ಯಾಪಕ ವೃತ್ತಿ ಹಿಡಿದಿದ್ದ ಆಚಾರ್ಯರು ಕರ್ನಾಟಕ ಮತ್ತು ಹಿಂದೂಸ್ತಾನೀ ಎರಡೂ ಪದ್ಧತಿಗಳನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದ್ದರು. ತಮ್ಮ ಗಂಡುದನಿಯ ಗಾಯನಕ್ಕೆ ಹೆಸರಾದಂತೆ, ಭಾವಪೂರ್ಣ ಗಾಯನಕ್ಕೂ ಹೆಸರಾಗಿದ್ದರು. ೧೯೦೨ ರಲ್ಲಿ ಹುಟ್ಟಿ ೧೯೪೫ ರವರೆಗೆ ಮಾತ್ರ ಜೀವಿಸಿದ್ದ ಆಚಾರ್ಯರು ಸ್ವಾತಂತ್ರ‍್ಯಾಂದೋಲನಕ್ಕೆ ಸ್ಫೂರ್ತಿಯಾಗಿದ್ದರು.

ನಿನ್ನ ನಾಡೀ ನಾಡು ನಿನ್ನ ಮಕ್ಕಳು ನಾವು
ಎಮ್ಮನು ನೀ ನಡೆಸು ದಿಗ್ವಜಯಕ್ಕೆ
ಕಣ್ತುಂಬ ನೋಡೆಮ್ಮ ಹರಸು ತಾಯಿ
ಭಾರತ ಭಾಗ್ಯೇಶ್ವರಿ

ಎಂದು ವೀ.ಸಿ. ಯವರ ಗೀತೆಗಳನ್ನು ಹಾಡುತ್ತಾ ಎಲ್ಲೆಲ್ಲೂ ಸ್ವಾತಂತ್ರ‍್ಯ ಗೀತೆಯನ್ನು ಹಾಡಿ, ಆಂದೋಲನಕ್ಕೆ ಉತ್ತೇಜಿಸುತ್ತಿದ್ದ ಆಚಾರ್ಯರು ದೇಶಕ್ಕೆ ಸ್ವಾತಂತ್ರ‍್ಯ ಬಂದದ್ದನ್ನು ನೋಡಲೇ ಇಲ್ಲ. ಅದಕ್ಕೆ ಮುನ್ನವೇ ನೇಪಥ್ಯಕ್ಕೆ ತೆರಳಿದರು. ಹಳೆಯ ಮೈಸೂರಿನಲ್ಲಿ ‘ಭಾವಗೀತೆಯನ್ನು ಹಾಡುವ ಸಂಪ್ರದಾಯವನ್ನು ಮೊದಲು ಪ್ರಾರಂಭಿಸಿದವರು ನಮ್ಮ ಸಂತ್ಕುಮಾರಾಚಾರ್ಯರು. ಅವರು ಹಾಡುತ್ತಿದ್ದ ವಿಸೀ ಅವರ ‘ಮನೆ ತುಂಬಿಸುವ ಹಾಡು ಎಲ್ಲ ಮದುವೆ ಮನೆಗಳಲ್ಲೂ ಸಂಪ್ರದಾಯಗೀತೆಯಾಗಿಬಿಟ್ಟಿತ್ತು. ‘ಎಮ್ಮ ಮನೆಯಂಗಳದಿ ಬೆಳೆದೊಂದ ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು’ – ಎನ್ನುವಾಗ ಸಂತೋಷ, ಸಡಗರ, ಸಂಭ್ರಮದಿಂದ ತುಳುಕಾಡುತ್ತಿದ್ದ ಮದುವೆ ಮನೆಯಲ್ಲಿ ದುಃಖದ ನೆರೆ ನುಗ್ಗುತ್ತಿತ್ತು.

ಬಿ.ಎಂ.ಶ್ರೀ ಅವರ ‘ಕರುಣಾಳು ಬಾ ಬೆಳಕೇ’, ಡಿವಿಜಿಯವರ ‘ವನಸುಮದೊಳೆನ್ನ ಜೀವನವು, ವಿ.ಸೀ. ಅವರ ‘ಹರಸುತಾಯೆ’ ಹುಯಿಲಗೋಳರ ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಮುಂತಾದ ಗೀತೆಗಳು, ಆಚಾರ್ಯರು ಸುಗಮಸಂಗೀತ ಪ್ರಕಾರಕ್ಕೆ ಹಾಕಿಕೊಟ್ಟ ಆರೋಹಣ ಗೀತೆಗಳಾದವು. ಪುರಂದರದಾಸರ ದೇವರನಾಮವನ್ನು ಭಜನೆಗಳಲ್ಲಿ ಅಲ್ಲದೆ, ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಹಾಡುವುದು ಹೀನಾಯವೆಂದು ತಿಳಿದಿದ್ದ ಅಂದಿನ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದ ಆಚಾರ್ಯರು ಆಧುನಿಕ ಕವಿತೆಗಳ ಕಾರ್ಯಕ್ರಮವನ್ನು ಪ್ರತ್ಯೇಕವಾಗಿ ನೀಡುತ್ತಿದ್ದರು. ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ‘ಆಚಾರ್ಯರ ಕಾರ್ಯಕ್ರಮದ ನಾಂದಿಗೀತೆಯಾಗಿತ್ತು. ಹಾಗೆಯೇ ಹೆಣ್ಣೊಪ್ಪಿಸುವಾಗ ಹಾಡುತ್ತಿದ್ದ ‘ಎಮ್ಮ ಮನೆಯಂಗಳದಿ’ ಗೀತೆಯನ್ನು ಕೇಳಿ ಬಂಧು ಬಾಂಧವರ ಕಣ್ಣಲ್ಲಿ ನೀರು ಸುರಿಯುವುದು ಸಾಮಾನ್ಯವಾಗಿತ್ತು. ಸುಗಮಸಂಗೀತ ತನ್ನ ಆರಂಭಕಾಲದಿಂದಲೇ ಜನರಿಗೆ ಪ್ರಿಯವಾಗಿದ್ದಕ್ಕೆ ಇವೇ ಸಾಕ್ಷಿಗಳಾಗಿದ್ದವು.

ಒಂದು ಕಡೆ ಬ್ರಿಟಿಷ್ ರೆಸಿಡೆನ್ಸಿ ಆಡಳಿತ ಜೀವನಕ್ರಮ, ಇನ್ನೊಂದೆಡೆ ಸದಾ ಹೊಸತನ ಬಯಸುತ್ತಿದ್ದ ಮೈಸೂರಿನ ಅರಸರ ಕಾವ್ಯ ನಾಟಕಗಳ ಆಸಕ್ತಿ, ಇತ್ತಲಾಗಿ ಹರಿದು ಬರುತ್ತಿದ್ದ ಪಾಶ್ಚಾತ್ಯರ ಹೊಸ ಸಾಹಿತ್ಯದ ಪ್ರಭಾವ, ಇವೆಲ್ಲದರ ಹೊಸಕಾಟದಲ್ಲಿ ಕನ್ನಡ ಆಧುನಿಕ ಸಾಹಿತ್ಯ ಹೊಸತನ ಕಂಡು, ಸ್ವಚ್ಛಂದವೂ, ಸ್ವತಂತ್ರವೂ ಆಯಿತು. ಆದರೆ ಸುಗಮಸಂಗೀತದ ಹಾಡುಗಾರಿಕೆ ಮತ್ತು ಸಂಯೋಜನೆಯ ಶೈಲಿಯಲ್ಲಿ ಹೊಸತನವೇನೂ ಬರಲಿಲ್ಲ. ಶಾಸ್ತ್ರೀಯ ಸಂಗೀತದ ಪರಿಮಿತಿಯಲ್ಲೆ ಹೊಸಗನ್ನಡ ಸಾಹಿತ್ಯವು ಹಾಡತೊಡಗಿತು. ಕರ್ನಾಟಕ ಗಮಕಿಗಳೇ ಹಾಡಲು ಪ್ರಾರಂಭಿಸಿದರು.

ಕಳಲೆ ಸಂಪತ್ಕುಮಾರಾಚಾರ್ಯರು ತಂದ ಆಕರ್ಷಣೆ ಶ್ರೋತೃಗಳಲ್ಲಿ ಕಾವ್ಯದ ಆಸಕ್ತಿ ಮೂಡಿಸಿತು. ಇವರು ಹಾಕಿದ ಹಾದಿಯಲ್ಲೇ ನಡೆದವರು ಗುಡಿಬಂಡೆ ರಾಮಾಚಾರ್ ಎನ್ನುವ ಮತ್ತೊಬ್ಬ ಗಮಕಿ. ೧೯೧೭ರಲ್ಲಿ ಕೋಲಾರ ಜಿಲ್ಲೆಯ ಗುಡಿಬಂಡೆಯಲ್ಲಿ ಜನಿಸಿದ ರಾಮಾಚಾರ್‌ ಕಾವ್ಯಗಾಯನ ಕಲೆಯಲ್ಲಿ ವಿಶೇಷ ಪರಿಣತಿ ಪರಿಶ್ರಮ ಪಡೆದಿದ್ದರು. ೧೯೩೮ ರಲ್ಲಿ ಕುವೆಂಪು ಅವರ ‘ದೋಣಿಸಾಗಲಿ’ ಗೀತೆಯೊಂದಿಗೆ ಸುಗಮಸಂಗೀತ ಯಾನವನ್ನು ಪ್ರಾರಂಭಿಸಿದ ಆಚಾರ್ಯರು ಬೇಂದ್ರೆಯವರ ‘ಗಂಗಾವತರಣ’ ಗೀತೆಯ ಗಾಯನದ ಮೂಲಕ ಕವಿ ದ.ರಾ.ಬೇಂದ್ರೆಯವರಿಂದಲೇ ಶಹಭಾಸ್‌ಗಿರಿ ಪಡೆದು ಪ್ರಸಿದ್ಧರಾದರು. ಕರ್ನಾಟಕದ ಇತರ ಗಮಕಿಗಳು ಇವರ ಹಾದಿಯಲ್ಲಿಯೇ ಕವಿತಾ ಗಾಯನವನ್ನು ಮುನ್ನಡೆಸಿದರು.

ಉತ್ತರ ಕರ್ನಾಟಕದಲ್ಲಿ ಸುಗಮಸಂಗೀತ

ಉತ್ತರ ಕರ್ನಾಟಕದಲ್ಲಿ ಹಿಂದೂಸ್ತಾನೀ ಸಂಗೀತ, ಮೊದಮೊದಲು ಶ್ರೀಮಂತರ ಮನೆಯಲ್ಲಿ ನಡೆಯುತ್ತದ್ದ ಪ್ರತಿಷ್ಠಿತ ಕಛೇರಿಗಳಾಗಿ ನೆಲೆಗೊಂಡಿತ್ತು. ಶಾಸ್ತ್ರೀಯ ಸಂಗೀತವನ್ನು ಕೇಳಬೇಕೆಂದು ಆಸೆಪಡುತ್ತಿದ್ದ ಸಾಮಾನ್ಯರಿಗೆ ಅದು ಅಪರೂಪವಾಗಿತ್ತು. ನಾಟಕಗಳು ಈ ಆಸೆಯನ್ನು ಪೂರೈಸಲೆಂದೇ ಶಾಸ್ತ್ರೀಯ ಸಂಗೀತವನ್ನು ನಾಟಕಗಳಲ್ಲಿ ಅಳವಡಿಸಿಕೊಂಡರು. ಅಂದು ಜನರು ಸಂಗೀತ ಕೇಳಲು ನಾಟಕಗಳನ್ನು ಅವಲಂಬಿಸಿಕೊಂಡರು. ಉತ್ತರ ಕರ್ನಾಟಕದ ರಂಗ ಸಂಗೀತ ಹಿಂದೂಸ್ತಾನಿ ಪದ್ಧತಿಯ ಮರಾಠೀ ಹಾಡುಗಳನ್ನು ಅವಲಂಬಿಸಿ ಇನ್ನು ಒಂದು ಹೆಜ್ಜೆ ಮುಂದೆ ಹೋಯಿತು. ಮರಾಠಿಯಲ್ಲಿ ‘ಗೋಡಗಾಣ’ ಎಂಬ ರಸಾಲ ರಚನೆಗಳು ಸಂಗೀತಮಯವಾಗಿದ್ದು ಮಂಜುಳ ಲಲಿತ ಶಬ್ದಗಳಿಂದ ಕೂಡಿ ಅತಿ ಮಧುರವಾದ ಗೀತೆಗಳಾಗಿದ್ದವು. ಇವು ಸಾಹಿತ್ಯಕವಾಗಿ ಭಿನ್ನಶೈಲಿಯಲ್ಲಿದ್ದು ಬೆಲ್ಲದಂತೆ ಸವಿಯಾಗಿದ್ದವೆಂದು (ಗೋಡ=ಬೆಲ್ಲ, ಗಾಣ=ಗೀತೆ) ಗೋಡಗಾಣವೆಂಬ ಹೆಸರು ಪಡೆದಿತ್ತು. ಸರಳವಾದ ಸಾಹಿತ್ಯ ಸಂಗೀತ ಶೈಲಿಯಿಂದ ಅತ್ಯಂತ ಜನಪ್ರಿಯವಾಗಿತ್ತು. ಸುಮಧುರ ಶೈಲಿಯ, ಮೋಹಕ ಲಯವಿನ್ಯಾಸದ ಸೂಕ್ಷ್ಮತೆಗಳನ್ನು, ಪದಲಾಲಿತ್ಯಗಳನ್ನೂ ತುಂಬಿಕೊಂಡು ನಾದದ ಗುಂಗಿನಿಂದ ಹುಟ್ಟಿಕೊಂಡಿದ್ದ ಈ ರಸಾಲಗೀತೆಗಳು ನಾಲಿಗೆ ಚಪ್ಪರಿಸುವಂತೆ ಸವಿಯಾದ, ಆರೋಗ್ಯಕ್ಕೆ ಹಿತಕಾರಿಯಾದ ಸಾಹಿತ್ಯವನ್ನು ಒಳಗೊಂಡಿದ್ದವು. ಮರಾಠಿ ‘ಗೋಡಗಾಣ’ದಲ್ಲಿ ಪ್ರಸಿದ್ಧ ಹೆಸರು ಮಾಡಿದ್ದ ಹೀರಾಬಾಯಿ ಬಡೋದೆಕರ, ಸುಶಿಲಾಟೇಂಬೆ, ಸೀತಾಮುಲ್ಕಿ’ ಮುಂತಾದ ಗಾಯಕರಿಯರು ಮರಾಠಿ ಗೋಡಗಾಣದ ಧಾಟಿಯಲ್ಲಿಯೇ ಬರೆದ ಕನ್ನಡದ ಗೀತೆಗಳನ್ನು ಹಾಡು ಪ್ರಸಿದ್ಧಗೊಳಿಸಿದರು. ಹೀರಾಬಾಯಿ ಬಡೋದೆಕರ ಅವರಿಂದ ಪ್ರಾರಂಭವಾದ ಭಾವಗೀತೆಗಳನ್ನು (ಮರಾಠಿಧಾಟಿಯ) ಹಾಡುವ ಪರಿಪಾಠ ಸುಗಮಸಂಗೀತಕ್ಕೆ ಮತ್ತೊಂದು ಆಯಾಮ ತಂದುಕೊಟ್ಟಿತು. ಮರಾಠಿ ಧಾಟಿಯ ಕನ್ನಡ ಭಾವಗೀತೆಗಳು ಹೊಸ ಆಕರ್ಷಣೆಯನ್ನು ಬೀರತೊಡಗಿದವು. ಮರಾಠಿ ಭಾಷೆಯನ್ನು ಅರಿತಿದ್ದ ಉತ್ತರ ಕರ್ನಾಟಕದ ಪ್ರಮುಖ ಕವಿಗಳಲ್ಲಿ ಇದರ ಪ್ರಭಾವ ತಿಳಿದೋ, ತಿಳಿಯದೆಯೋ ಅವರ ಶೈಲಿಯಲ್ಲಿ ಅಂತರ್ಗತವಾಯಿತು. ಉತ್ತರ ಕರ್ನಾಟಕದ ಕನ್ನಡ ಭಾವಗೀತೆಗಳು ‘ಗೋಡಗಾಣ’ದ ನೆರಳಿನಲ್ಲಿಯೇ ಹುಟ್ಟಿ ಬಂದವು.

ಹೀರಾಬಾಯಿ ಬಡೊದೆಕರ ಅವರಿಂದ ಪ್ರಾರಂಭವಾದ ಭಾವಗೀತೆಗಳನ್ನು (ಮರಾಠಿ) ಹಾಡುವ ಪರಿಪಾಠ ಸುಗಮಸಂಗೀತಕ್ಕೆ ದಿಕ್ಸೂಚಿಯಾಯಿತು. ಮಾಧವ ಜ್ಯೂಲಿಯನ್ ಅವರ ‘ಪಾಕವ ಮಧುಬೋಲ ಕೋಕಿಲ’ ಮತ್ತು ‘ಉಪವನಿಗಾತಕೋಕಿಳಾ’ ಅಂದು ಅತ್ಯಂತ ‌ಪ್ರಚಲಿತವಾದ ಹಾಡುಗಳಾಗಿದ್ದವು. ‘ಹೀ ಏಕ್ ಆಸಮಸಿ ಮುರಳೀ ಕನ್ಹಯ್ಯ’ ‘ಬಜಾವ್ ಬಜಲಾವ್ ಮುರಲಿ’ ಎಂಬ ಗೀತೆ ೧೯೩೭ರಲ್ಲಿಯೇ ಧ್ವನಿಮುದ್ರಿತವಾಗಿತ್ತು. ಹೀರಾಬಾಯಿ ಅವರ ಶಿಷ್ಯೆಯಾದ ‘ಸೀತಾಮುಲ್ಕಿ’ಯವರು ಮುಂಬಯಿಯಲ್ಲಿ ಶಾಸ್ತ್ರೀಯ ಸಂಗೀತ ಮತ್ತು ಮರಾಠಿ ಗೋಡಗಾಣದಲ್ಲಿ ದೊಡ್ಡ ಹೆಸರು ಮಾಡಿದ್ದರು. ೧೯೪೬ರಲ್ಲಿ ಎನ್ಕೆ ಕುಲಕರ್ಣಿಯವರು ಮುಂಬಯಿ ಆಕಾಶವಾಣಿಗೆ ಸೇರಿದಾಗ ಗುರುಗಳನ್ನು ಭೇಟಿ ಮಾಡಲು ಬಂದರು. ನಿಲಯದ ಕಲಾವಿದರಾಗಿದ್ದ ಸೀತಾ ಮುಲ್ಕಿಯವರನ್ನು ‘ನೀವು ಕನ್ನಡದ ಹಾಡುಗಳನ್ನು ಯಾಕೆ ಹಾಡುವುದಿಲ್ಲ’ ಎಂದಾಗ ‘ನಾನು ಹೇಳುವ ಧಾಟಿಗೆ ನೀವು ಗೋಡಗೀತ ರಚಿಸಿಕೊಟ್ಟರೆ ಹಾಡುತ್ತೇನೆ! ಎಂದರು. ಆ ಒಂದು ಸಂಭಾಷಣೆ, ಆಲೋಚನೆ, ಸುಗಮಸಂಗೀತದ ಪಾಲಿಗೆ ಅಮೃತ ಸಿಂಚನವಾಯಿತು. ಸೀತಾಮುಲ್ಕಿಯವರು ಮುಂಬಯಿಯಲ್ಲಿ ಶಾಸ್ತ್ರೀಯ ಸಂಗೀತ ಮತ್ತು ಮರಾಠಿ ಗೋಡಗಾಣದಲ್ಲಿ ದೊಡ್ಡ ಹೆಸರು ಮಾಡಿದ್ದರು. ೧೯೪೬ ರಲ್ಲಿ ಎನ್ಕೆ ಕುಲಕರ್ಣಿಯವರು ಮುಂಬಯಿ ಆಕಾಶವಾಣಿಗೆ ಸೇರಿದಾಗ ಗುರುಗಳನ್ನು ಭೇಟಿ ಮಡಲು ಬಂದರು. ನಿಲಯದ ಕಲಾವಿದರಾಗಿದ್ದ ಸೀತಾ ಮುಲ್ಕಿಯವರನ್ನು ‘ನೀವು ಕನ್ನಡದ ಹಾಡುಗಳನ್ನು ಯಾಕೆ ಹಾಡುವುದಿಲ್ಲ’ ಎಂದಾಗ ‘ನಾನು ಹೇಳುವ ಧಾಟಿಗೆ ನೀವು ಗೋಡೆಗೀತ ರಚಿಸಿಕೊಟ್ಟರೆ ಹಾಡುತ್ತೇನೆ’ ಎಂದರು. ಆ ಒಂದು ಸಂಭಾಷಣೆಗೆ, ಆಲೋಚನೆ, ಸುಗಮಸಂಗೀತದ ಪಾಲಿಗೆ ಅಮೃತ ಸಿಂಚನವಾಯಿತು. ಸೀತಾಮುಲ್ಕಿಯವರು ಹಾಡುತ್ತಿದ್ದ ‘ತುಮಬಿನ ಮೋರಿಕೋನ ಖಬರಲೆ ಗೋವರಧನ ಗಿರಿಧಾರಿ’ ಎನ್ನುವ ಯಮನ್ (ಕಲ್ಯಾಣಿರಾಗ) ರಾಗದ ಹಿಂದಿ ಭಜನೆ – ‘ಗಿಡಗಿಡದಲಿ ಹಾರಾಡುವ ಗಿಳಿಯೆ ನುಡಿನುಡಿ ಕನ್ನಡವ’ ಎಂಬ ಸುಂದರ ರೂಪ ಪಡೆಯಿತು. ಅಂದಿನ ತುರ್ತಾಗಿದ್ದ ಕನ್ನಡಾಭಿಮಾನವನ್ನು ಮೂಡಿಸಿದ ಈ ಗೀತೆ ಕನ್ನಡ ವಿಭಾಗದ ಸವಿಕಟ್ಟಾಗಿ, ಸೊಗಸಾಗಿ, ಹೊಸರುಚಿಯನ್ನು ಸೃಷ್ಟಿಮಾಡಿತು. ಹಾಗೆಯೇ ಮುಂದುವರೆದು ‘ವಿನವಿತ ಶಬರೀ ರಘುರಾಮೋ ತುಜಸಾಠಿ ವೇಚಲೆ ಬೋರೆ’ ಎಂದು ಸೀತಾಮುಲ್ಕಿಯವರು ಹಾಡಿದ ಧಾಟಿಗೆ – ‘ನುಡಿದಳು ಶಬರೀ ರಘುವರಗೆ’ ಎಂಬ ಮತ್ತೊಂದು ರಸಾಲಗೀತೆ ವಿನ್ಯೆಯವರಿಂದ ಸೃಷ್ಟಿಯಾಯಿತು. ವೀಸೀಯವರ ‘ಕಾದಿರುವಳು ಶಬರಿ’ಯಂತೆ ಈ ಹಾಡೂ ಜಗಜನಿತವಾಯಿತು. ಸೀತಾಮುಲ್ಕಿಯವರ ಈ ಕನ್ನಡ ಸುಗಮ ಲಲಿತ ಗೀತರಚನೆಗಳ ಗಾಯನದ ಜನಪ್ರಿಯತೆ ಎಷ್ಟಾಯಿತೆಂದರೆ ಕನ್ನಡೇತರರಿಗೂ ಕನ್ನಡದ ಹಾಡುಗಳನ್ನು ಹಾಡುವ ಬಯಕೆ ಅದಮ್ಯವಾಯಿತು. ಮರಾಠೀ ಗಾಯನದ ಮತ್ತೊಬ್ಬ ಕಲಾವಿದೆ ವಿಜಯಾದೇಸಾಯಿ ಆಕಾಶವಾಣಿಗೆ ಬಂದು ಎನ್ಕೆಯವರಿಗೆ, ‘ನೀವೇ ಗೀತ ರಚಿಸಿಕೊಡಿರಿ ನಾನು ಚಾಲೀ ಹಚ್ಚುತ್ತೇನೆ’ – ಎಂದು ದುಂಬಾಲು ಬಿದ್ದರು. ಎನ್ಕೆಯವರು ಕನ್ನಡರಾಜರ, ಕವಿಗಳ ವರ್ಣನೆಗಳುಳ್ಳ ಸರಳಗೀತವೊಂದನ್ನು ರಚಿಸಿಕೊಟ್ಟರು.

ನಾಡ ಗುಡಿಯನೆರಿಸುವ | ಹಾರಿಸುವ ಬಾನಿಗೆ
ದುಡಿದು ದಣಿದು ಹಾಡಿ ತಣಿದು ಮುಡಿಸುವ ನುಡಿರಾಣಿಗೆ ||

ಎಂಬ ಗೀತೆ H.M.V. ಗ್ರಾಮಾಫೋನ್ ಕಂಪನಿಯ ಎ.ಪಿ. ನಾರಾಯಣ ಗಾಂವಕರರ ಸಂಗೀತ ನಿರ್ದೇಶನದಲ್ಲಿ ಧ್ವನಿಮುದ್ರಿತವಾಯಿತು. ಪಕ್ಕವಾದ್ಯಗಳ ಜೊತೆ ಒಳ್ಳೆಯ ಉತ್ಸಾಹಭರಿತವಾಗಿದ್ದ ಆ ಗೀತೆಯನ್ನು H.M.V. ಕಂಪನಿಯ ಮುಖ್ಯಸ್ಥರಾಗಿದ್ದ ಶ್ರೀ ಜಿ.ಎನ್.ಜೋಶಿ ಅವರು ಮೆಚ್ಚಿಕೊಂಡು ಎನ್ಕೆಯವರಿಂದ ಮತ್ತೊಂದು ಗೀತವನ್ನು ಆ ಹಾಡಿಗೆ ಜೋಡಾಗಿ ಬರೆಸಿದರು.

ಕಾಡಿನ ಎಡೆಯಲಿ, ತಿಳಿಗೊಳ ತಡಿಯಲಿ
ಮಲ್ಲಿಗೆ ಅರಳುತಿದೆ

ಎಂಬ ಮತ್ತೊಂದು ಮಧುರ ಕನ್ನಡಗೀತೆ (ಕನ್ನಡ ಗೋಡಗಾಣ) ಸೃಷ್ಟಿಯಾಯಿತು. ಇವು H.M.V. ಕಂಪನಿಯಿಂದ ಹೊರಬಿದ್ದಾಗ – ಉತ್ತರ ಕರ್ನಾಟಕದ ಮೂಲೆಮೂಲೆಗಳಲ್ಲೆಲ್ಲಾ ಬಿಸಿಬಿಸಿ (ಗಾನದೋಸೆ) ದೋಸೆಗಳಂತೆ ಖರ್ಚಾದವು. ವಿಜಯದೇಸಾಯಿ ಅವರು ಅನಂತರವೂ ಅನೇಕ ಕನ್ನಡ ಗೀತಗಳನ್ನು ಧ್ವನಿ ಮುದ್ರಿಸಿದರು.

ಸೀತಾಮುಲ್ಕಿಯವರು ಹಾಡಿದ –

ಕ್ಷಣದ ಪ್ರಣಯ ಭಾವನಾ
ಭಜಿಸೋ ರಾಮ ದಯಾಘನಾ

ಎಂಬ ಧ್ವನಿಮುದ್ರಿಕೆ, ಸುಶೀಲಾಟೇಂಬೆ ಅವರು ಹಾಡಿದ ಅನೇಕ ಮುದ್ರಿಕೆಗಳೊಡನೆ ‘ಬೇಡ ಕೃಷ್ಣ ಗೋಕುಳ ಚಿನ್ನಾ’ ಎಂಬ ರೆಕಾರ್ಡುಗಳಂತೂ ಮುಂಬಯಿಯಿಂದ ಧಾರವಾಡಕ್ಕೆ ಏಕೆ? ಮೈಸೂರು, ದಕ್ಷಿಣ ಕನ್ನಡ ಪ್ರಾಂತ್ಯದ ಕೊನೆಯವರೆವಿಗೂ ಹಬ್ಬಿಹೋಗಿತ್ತು. ಅದುವರೆವಿಗೂ ಇರದ ಹೊಚ್ಚಹೊಸದಾದ ಗೀತ ಮತ್ತು ಸಾಹಿತ್ಯಗಳ ಪಾಕ, ಗಾಯನ ನಿರೂಪಣಾ ಸುಭಗಶೈಲಿ, ಜೊತೆಗೆ ಮಧುಮಧುರ ಹೊಸಗನ್ನಡದ ಪದಗಳ ಪ್ರಯೋಗ, ಇವೆಲ್ಲಾ ಸೇರಿ ಪರಿಶುದ್ಧವಾದ ಹಾಲಿಗೆ ಪರಿಮಳ ರುಚಿ ಬಣ್ಣಗಳು ಸೇರಿದಂತಾಯಿತು. ಮರಾಠೀ ಗೋಡಗಾಣದ ಸಂಗೀತ ಶೈಲಿಯ, ಲಯ ವಿನ್ಯಾಸದಲ್ಲಿದ್ದ ಸೂಕ್ಷ್ಮತೆಗಳನ್ನು, ಪದಲಾಲಿತ್ಯಗಳನ್ನು, ನಾದದ ಗುಂಗನ್ನು ಕನ್ನಡ ಭಾವಗೀತೆಗಳು ಮೈದುಂಬಿಕೊಂಡು ಮತ್ತಷ್ಟು ಚಂದವಾದವು. ಅದರ ಜನಪ್ರಿಯತೆ ಎಷ್ಟು ಹೆಚ್ಚಾಯಿತೆಂದರೆ ಅವುಗಳ ಅನುಕರಣೆಯ ರೂಪಗಳೂ ಇನ್ನೊಂದು ಭಾಗದಲ್ಲಿ ಎಡೆಬಿಡದೆ ಮೂಡತೊಡಗಿದವು. ಸುಶೀಲಾಟೇಂಬೆಯವರು ಹಾಡಿದ ‘ಬೇಡ ಕೃಷ್ಣಾಗೋಕುಳ ಚಿನ್ನಾ’ ಎಂಬ ಧ್ವನಿ ಮುದ್ರಿಕೆಯಂತೂ ಕನ್ನಡ ಚಲನಚಿತ್ರ’ ಸಂತ ತುಕಾರಾಂ’ನಲ್ಲಿ ಮೂಲಧಾಟಿಯನ್ನೇ ಉಳಿಸಿಕೊಂಡು – ‘ಬೇಡಕೃಷ್ಣಾರಂಗಿನಾಟ ಎಂಬ ಪಲ್ಲವಿಯಿಂದ, ಜನಪ್ರಿಯವಾದ ಗೀತೆಯಾಯಿತು. ಹೆಚ್.ಎಂ.ವಿ. ಕಂಪನಿಯಲ್ಲಿ ಕನ್ನಡದ ಹಾಡುಗಬ್ಬಗಳ ಒಂದು ಹಬ್ಬವೇ ಪ್ರಾರಂಭವಾಯಿತು. ಕವಿ ಬೇಂದ್ರೆಯವ ‘ತುಂತುಂ ತುಂಬಿ ಬಂದಿತ್ತು’, ‘ಉತ್ತರಧ್ರುವದಿಂ’, ‘ನನ್ನ ಹರಣ ನಿನಗೆ ಶರಣ’ – ‘ನಾನು ಬಡವಿ ಆತ ಬಡವ’ – ‘ಬಂತಿದೋಶೃಂಗಾರಮಾಸ’ ಕೀರ್ತಿನಾಥ ಕುರ್ತಕೋಟಿಯವರ ‘ಅರಳದು ಪ್ರೇಮದ ಮೃದು ಕುಸುಮ’ ಅಂದು ಅತ್ಯಂತ ಜನಪ್ರಿಯವಾದ ಗೀತೆಗಳಾಗಿದ್ದವು.

ಹಿಂದೂಸ್ತಾನಿ ಸಂಗೀತ ವಿದ್ವಾಂಸರಾದ ಭೀಮಸೇನ ಜೋಶಿಯವರು ಹಾಡಿದ್ದ ‘ನಾನು ಬಡವಿ’ ಶೃಂಗಾರಮಾಸ – ‘ಅರಳದು ಪ್ರೇಮದ ಮೃದು ಕುಸುಮ’ ಗೀತೆಗಳು ಅಂದಿನ ರಸಿಕರ ಕವಿಗೆ ಹಬ್ಬದೌತಣವಾಗಿತ್ತು. ಮಲ್ಲಿಕಾರ್ಜುನ ಮನ್ಸೂರರು ಹಾಡಿದ ‘ತೇರನೆಳೆಯುತಾರ ತಂಗಿ’ – ಎಂಬ ಶಿಶುನಾಳ ಷರೀಫರ ಪದವಂತೂ ಕರ್ನಾಟಕವನ್ನು ದಾಟಿ ಮಹಾರಾಷ್ಟ್ರದಲ್ಲೂ ಸುಮಾರು ೧೯೩೩ ರ ಹೊತ್ತಿಗೆ ಜಗಜ್ಜನಿತವಾಗಿ ಹುಚ್ಚು ಹಿಡಿಸಿತ್ತು.

* * *