ಮೈಸೂರು ಆಕಾಶವಾಣಿ

ನಮ್ಮ ಇಂದಿನ ಸುಗಮಸಂಗೀತಕ್ಕೆ ಭದ್ರವಾದ ಬುನಾದಿ ಹಾಕಿಕೊಟ್ಟ ಮಾಧ್ಯಮಗಳಲ್ಲಿ ಮೊದಲನೇಯ ಸ್ಥಾನದಲ್ಲಿ ಆಕಾಶವಾಣಿ ನಿಲ್ಲುತ್ತದೆ. ಇದಕ್ಕೂ ಸುಗಮಸಂಗೀತಕ್ಕೂ ಇರುವ ಬೆಸುಗೆ ನಿರಂತರವಾದದ್ದು. ಪ್ರಾಚೀನವಾದದ್ದೂ ಕೂಡ. ಆಕಾಶವಾಣಿಯಿಂದ ಬಿತ್ತರಗೊಂಡ ಶಾಸ್ತ್ರೀಯ ಸಂಗೀತದ ಮರುಹುಟ್ಟೇ ಇಂದಿನ ಸುಗಮಸಂಗೀತವಾಯಿತೆಂಬುದಕ್ಕೆ ಅನೇಕ ಆಧಾರಗಳು ದೊರೆಯುತ್ತವೆ.

ಈಗ ಮನೆ ಮಾತಾಗಿರುವ ರೇಡಿಯೋ ಮೂಲತಃ ಸಂಗೀತ ಪ್ರಸಾರಕ್ಕಾಗಿ ಸೃಷ್ಟಿಯಾದ ಸಾಮಗ್ರಿಯಲ್ಲದಿದ್ದರೂ, ಅದು ಜನ್ಮ ತಾಳಿ ಎರಡು ಮೂರು ದಶಕಗಳೊಳಗಾಗಿ ಈ ಶತಮಾನದಲ್ಲಿ ಜನತೆ ಸಂಗೀತವನ್ನು ಮನದಣಿಯುವ ಪ್ರಮಾಣದಲ್ಲಿ ಸವಿಯಲು ಅವಕಾಶ ಮಾಡಿಕೊಟ್ಟ ಅತ್ಯಂತ ಪ್ರಭಾವಶಾಲಿ ಸಾಧನವಾಗಿ ಬೆಳೆದಿದೆ.

೧೯೩೫ ರಲ್ಲಿ ಡಾ|| ಎನ್. ಗೋಪಾಲಸ್ವಾಮಿ ಎಂಬುವರು ಹವ್ಯಾಸಕ್ಕಾಗಿ ತಮ್ಮ ಮನೆಯಲ್ಲಿ ಪ್ರಾರಂಭಿಸಿದ ಪ್ರಸಾರ ಕೇಂದ್ರವೇ ಸರ್ಕಾರದ ತೆಕ್ಕೆಗೆ ಸೇರಿ ‘ಆಕಾಶವಾಣಿ’ ಎಂಬ ಹೆಸರನ್ನು ಪಡೆಯಿತು. ಆಟಕ್ಕಾಗಿ ಇದ್ದಂತಹ ೨೦೫ ಟ್ರಾನ್ಸ್‌ಮೀಟರ್‌ನ ಶಕ್ತಿ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿತು.

ಬ್ರಿಟಿಷ್ ಆಳ್ವಿಕೆಯ ಕಾಲದಲ್ಲೂ ನಮ್ಮ ರೇಡಿಯೋ ಕಾರ್ಯಕ್ರಮಗಳಲ್ಲಿ ಸಂಗೀತಕ್ಕೆ ಹೆಚ್ಚು ಸಮಯ ಮೀಸಲಾಗಿತ್ತು. ಆದರೆ ಸುಗಮಸಂಗೀತವೆಂಬ ಹೆಸರೇ ಆಕಾಶವಾಣಿಯಲ್ಲಿ ಕೇಳಿ ಬಂದಿರಲಿಲ್ಲ; ಸಂಗೀತ ಕಾರ್ಯಕ್ರಮಗಳನ್ನು, ಶಾಸ್ತ್ರೀಯ ಸಂಗೀತ, ಲಘು ಶಾಸ್ತ್ರೀಯ ಸಂಗೀತ, ಲಘು ಸಂಗೀತ, ಚಲನಚಿತ್ರ ಸಂಗೀತವೆಂದು ನಾಲ್ಕು ಭಾಗಗಳಾಗಿ ವರ್ಗಿಕರಿಸಲಾಗಿತ್ತು. ಶಾಸ್ತ್ರೀಯ ಸಂಗೀತದಲ್ಲಿ ರಾಗ, ಚೀಜ್, ಕೀರ್ತನೆ ಮುಂತಾದ ಶಾಸ್ತ್ರೀಯ ಕೃತಿಗಳು ಪ್ರಸಾರವಾಗುತ್ತಿದ್ದರೆ, ಲಘು ಶಾಸ್ತ್ರೀಯ ಸಂಗೀತದಲ್ಲಿ, ಠುಮರಿ, ದಾದರಾ, ಟಪ್ಪ, ಹೋರಿ, ಜಾವಳಿ, ಪದ, ತಿಲ್ಲಾನಗಳು ಪ್ರಸಾರವಾಗುತ್ತಿದ್ದವು. ‘ಲಘು ಸಂಗೀತ’ದಲ್ಲಿ ಭಕ್ತಿ ಸಂಗೀತ, ರಂಗ ಗೀತೆ, ಜನಪದ ಗೀತೆಗಳು ಪ್ರಸಾರವಾಗುತ್ತಿದ್ದವು. ಪ್ರಾರಂಭಿಕ ದಿನಗಳಲ್ಲಿ ಆಕಾಶವಾಣಿಯಲ್ಲಿ ಹೀಗೆ ವರ್ಗಿಕರಿಸಲ್ಪಟ್ಟು ಶಾಸ್ತ್ರೀಯ ಸಂಗೀತದ ನಿಯಮಗಳಾದ ‘ಶ್ರುತಿ-ರಾಗ-ತಾಳ-ಲಯ ಇತ್ಯಾದಿಗಳನ್ನು ಅನುಸರಿಸಿಕೊಂಡು, ಹಾಡಿನ ಭಾವಾರ್ಥ ಪದಲಾಲಿತ್ಯಗಳಿಗೆ ಹೆಚ್ಚಿನ ಒತ್ತು ಕೊಟ್ಟಿದ್ದ ನವಜಾತ ‘ಲಘು ಸಂಗೀತ’ ಶಾಸ್ತ್ರೀಯ ಸಂಗೀತದ ಜೊತೆ ಜೊತೆಯಲ್ಲಿಯೇ – ಆಕಾಶವಾಣಿಯಲ್ಲಿ ಬೆಳೆದು ಬಂದಿತು.

೧೯೪೦ರ ನಂತರ ‘ಲಘು ಸಂಗೀತ’ ಶಾಸ್ತ್ರೀಯ ಸಂಗೀತದ ನೆರಳು ಹುಟ್ಟಿಕೊಂಡಿತು. ಇದಕ್ಕಾಗಿ ತಮ್ಮ ಕೊರಳು ಕೊಟ್ಟವರೆಲ್ಲ ಪ್ರಖ್ಯಾತ ಸಂಗೀತ ವಿದ್ವಾಂಸರುಗಳೇ ಎಂಬುದು ಗಮನಿಸಬೇಕಾದ ಸಂಗತಿ. ಕುವೆಂಪು, ಬೇಂದ್ರೆ, ಪು.ತಿ.ನ, ಮುಂತಾದ ಎಲ್ಲ ಮಹನೀಯ ಕವಿಗಳ ಕವಿತೆಯನ್ನು ಹಾಡುವುದಕ್ಕೆ ತೋರಿಸಿಕೊಟ್ಟವರು. ಪ್ರಸಿದ್ಧ ಹಿಂದೂಸ್ತಾನಿ ಮತ್ತು ಕರ್ನಾಟಕ ವಿದ್ವಾಂಸರುಗಳಾದ ‘ಭೀಮಸೇನ ಜೋಶಿ’, ಜಯವಂತಿ ದೇವಿ ಹೀರೇಬೆಟ್, ಬಿ.ಜಿ. ರಾಮನಾಥ್‌, ಭಾಗವತ್, ಎಂ.ಎಲ್. ವಸಂತಕುಮಾರಿ, ಕುಮಾರ ಗಂಧರ್ವ, ಮುಂತಾದವರು. ಈ ವೇಳೆಗಾಗಲೇ ಇವರು ಹಾಡಿದ ಊ.ಒ.ಗಿ. ದನಿ ತಟ್ಟೆಗಳು ಧ್ವನಿಮುದ್ರಿತವಾಗಿ ಜನಪ್ರಿಯಗಳಿಸಿದ್ದವು. ಕರ್ನಾಟಕ ಸಂಗೀತದಲ್ಲಿ ದಿಗ್ಗಜರೆನಿಸಿದವರೂ, ಹಿಂದೂಸ್ತಾನಿ ಸಂಗೀತದಲ್ಲಿ ಅದ್ವಿತೀಯರೆನಿಸಿದವರ ಅನೇಕ ಗೀತೆಗಳು ಆಕಾಶವಾಣಿಯಲ್ಲಿ ಪ್ರಸಾರವಾದವು. ಕವಿಗಳಿಗೆ ಒಮ್ಮೆ ನೂರು ರೂಪಾಯಿ ಕೊಟ್ಟರೆ ಅವರ ಎಲ್ಲ ಹಾಡುಗಳೂ ಆಕಾಶವಾಣಿಯ ಪ್ರಸಾರಕ್ಕೆ ಒಳಪಡುವ ಗುತ್ತಿಗೆ ಕ್ರಮವಿದ್ದು ನಂತರ ಅದನ್ನು ಬದಲಾಯಿಸಲಾಯಿತು. ಆಕಾಶವಾಣಿ ಸ್ವಾಯತತ್ತೆಯನ್ನು ಪಡೆಯದ ಮುನ್ನ ಹಾಡುವ ಕಲಾವಿದರಿಗೆ ಅರಿಶಿನ, ಕುಂಕುಮ, ಪುರುಷ ಕಲಾವಿದರಿಗೆ ತೆಂಗಿನಕಾಯಿ ತಾಂಬೂಲದ ಮರ್ಯಾದೆ ಮಾಡಲಾಗುತ್ತಿತ್ತು. ಎ.ಎನ್. ಮೂರ್ತಿರಾವ್, ನಾ. ಕಸ್ತೂರಿ, ಮುಂತಾದವರು ನಿಲಯಕ್ಕೆ ಬಂದು ಸೇರಿದ ಮೇಲೆ ನಿಲಯದ ಕಾರ್ಯಕ್ರಮಗಳು ಮತ್ತಷ್ಟು ಚುರುಕಾದವು.

ಸಿತಾರ್ ವಾದನ ತಾಂತ್ರಿಕ ರವಿಶಂಕರ್ ಜನಪದ ಮಟ್ಟುಗಳನ್ನು ಹಿಡಿದು ಆಕಾಶವಾಣಿಗಾಗಿ ಅನೇಕ ಲಲಿತ ಗೀತೆಗಳನ್ನು ರಚಿಸಿದರು. ವಾದ್ಯವೃಂದದಲ್ಲಿ ನುಡಿಸಲೆಂದು ಅವರು ಕಲ್ಪಿಸಿರುವ ರಮಣೀಯ ರಾಗಸಂಯೋಜನೆಗಳು ಅನುಕರಣೀಯವಾದಂಥವು. ದಕ್ಷಿಣ ಕರ್ನಾಟಕದ ಶಾಸ್ತ್ರೀಯ ಸಂಗೀತ ಛಾಯೆಯಲ್ಲಿ ಸುಗಮಸಂಗೀತ ರೂಪುಗೊಳ್ಳಲು ಸಹಾಯ ಮಾಡಿದ ಅನೇಕ ವಿದ್ವಾಂಸರ ಪೈಕಿ ಇಬ್ಬರು ಶ್ರೇಷ್ಠ ವೈಣಿಕರ ಹೆಸರು ಅಮರವಾದವು. ಅವು ‘ಈಮನಿ ಶಂಕರ ಶಾಸ್ತ್ರಿ’ ಮತ್ತು ವೀಣಾ ದೊರೆಸ್ವಾಮಿ ಅಯ್ಯಂಗಾರ್ ಅವರದು. ಆಕಾಶವಾಣಿ ಪ್ರಸಾರ ಮಾಡಿದ ಅನೇಕ ಗೀತಮುದ್ರೆಗಳು ಇವರ ಹೆಸರನ್ನು ಅನನ್ಯವಾಗಿಸಿತು. ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿಟೀಲುವಾದಕರಾಗಿ, ಆಕಾಶವಾಣಿಯ ನಿಲಯದ ಕಲಾವಿದರಾಗಿ, ತಾವೂ ಕಲಾವಿದರಾಗಿ ಬೆಳೆಯುತ್ತಾ ತಮ್ಮ ಪರಿಸರವನ್ನೂ ಬೆಳಗಿಸಿದವರು. ಎ.ವಿ. ಕೃಷ್ಣಮಾಚಾರ್ ಅವರು. ‘ಸುಗಮಸಂಗೀತ’ ಪ್ರಕಾರಕ್ಕೆ ಅತ್ಯಂತ ಶ್ರೇಷ್ಠವಾದ ಗೀತೆಗಳನ್ನು ಕೊಟ್ಟು ‘ಪದ್ಮಚರಣ್’ ಎಂದೇ ಸುಗಮಸಂಗೀತ’ ವಲಯದಲ್ಲಿ ಪ್ರಸಿದ್ಧರಾದರು. ಸುಗಮಸಂಗೀತಕ್ಕೆ ತಮ್ಮದೇ ಆದ ಶ್ರೇಯಸ್ಸನ್ನು ತಂದು ಕೊಟ್ಟರು.

೧೯೪೫ರ ಪ್ರಾರಂಭದಲ್ಲಿಯೇ ಕನ್ನಡದ ಕೋಗಿಲೆ ಎನಿಸಿದ ಪಾಂಡೇಶ್ವರದ ಕಾಳಿಂಗರಾಯರು ಮೈಸೂರು ಆಕಾಶವಾಣಿಯಲ್ಲಿ ಪ್ರತಿಸ್ಥಾಪಿಸಿದ್ದರು. ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಅದಾಗಲೇ ಧ್ವನಿಮುದ್ರಿತವಾಗಿ ಜನಪ್ರಿಯವಾಗಿತ್ತು. ಜನಪ್ರಿಯತೆ ಎಷ್ಟಿತ್ತೆಂದರೆ ಆಕಾಶವಾಣಿ ಪ್ರತಿದಿನವೂ ಪ್ರಾರಂಭದ ಹಾಡಾಗಿ ಈ ಹಾಡನ್ನು ಬಿತ್ತರಿಸುತ್ತಿತ್ತು. ಕಾಳಿಂಗರಾಯರ ಹಾಡಿನ ನಂತರ ಪ್ರಾರ್ಥನೆ ಮಿಕ್ಕ ಕಾರ್ಯಕ್ರಮಗಳು ಬಿತ್ತರಗೊಳ್ಳುತ್ತಿದ್ದವು. ಪ್ರತಿದಿನ ಮುಂಜಾನೆ ರಾಯರ ಹಾಡಿನಿಂದಲೇ ಆಕಾಶವಾಣಿಯು ಪ್ರಾರಂಭವಾಗಿ ರಾಯರ ‘ಉದಯವಾಗಲಿ’ ಹಾಡು ಆಕಾಶವಾಣಿಯ ಸಿಗ್ನೇಚರ್ ಟ್ಯೂನಾಗಿತ್ತು. ಕಾಳಿಂಗರಾಯರಿಲ್ಲದೆ ಆಕಾಶವಾಣಿಯ ಯಾವ ಕಾರ್ಯಕ್ರಮವೂ ಸಪ್ಪೆ ಎನಿಸುವ ಮಟ್ಟಿಗೆ ರಾಯರು ಆಕಾಶವಾಣಿಯ ಅವಿಭಾಜ್ಯ ಅಂಗವಾಗಿದ್ದರು. ಅವರಿಗೂ ಆಕಾಶವಾಣಿಗೂ ಇದ್ದ ಸಂಬಂಧ ಕಡೆಯವರೆಗೂ ಮಧುರ ಸ್ಪರ್ಶಿಯಾಗಿಯೇ ಇತ್ತು.

ಈ ಮಧ್ಯೆ ‘ಹೂವಿನಕೋರಿಕೆ’ – ಎಂಬ ವಿನೂತನ ಕಾರ್ಯಕ್ರಮವೊಂದನ್ನು ಆಕಾಶವಾಣಿ ಹಮ್ಮಿಕೊಂಡಿತು. ಕವಿಯ ಕವಿತೆಗೆ ಪ್ರಸಿದ್ಧ ಗಾಯಕರು ರಾಗ ಸಂಯೋಜಿಸಿ ಹಾಡುವುದು. ಅಂದರೆ ಒಂದೇ ಗೀತೆಯನ್ನು ಹಲವಾರು ಗಾಯಕರು ರಾಗ ಸಂಯೋಜಿಸಿ ಹಾಡುವುದು. ಕವಿಯ ಎದುರಿನಲ್ಲಿಯೇ ಪ್ರಸ್ತುತ ಪಡಿಸುವುದು. ಹಲವಾರು ಗಾಯಕರ ಸಂಯೋಜನೆಗಳಲ್ಲಿ ಕವಿ ತನಗೆ ಪ್ರಿಯವಾದ ರಾಗಸಂಯೋಜನೆಯೊಂದನ್ನು ಆರಿಸಿ ಮೆಚ್ಚುಗೆ ಸೂಚಿಸುವುದು. ಈ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಯಿತಲ್ಲದೆ, ಹತ್ತಾರು ವರುಷ ಆಕರ್ಷಣೆ ಕಳೆದುಕೊಳ್ಳದೆ ನಡೆದು ಬಂದಿತು. ಈ ಕಾರ್ಯಕ್ರಮದಲ್ಲಿ ಪಂಡಿತ್ ಭೀಮಸೇನ್ ಜೋಶಿ, ಟಿ.ರುಕ್ಮಿಣಿ, ಸಿ.ಕೆ.ತಾರಾ, ವಸುಮತಿ, ಎಂ.ಎನ್.ರತ್ನ, ಆರ್.ಕೆ. ಶ್ರೀಕಂಠನ್, ವರಾಹಸ್ವಾಮಿ, (ಗಿಟಾರ್ ಮತ್ತು ಗೋಟುವಾದ್ಯ ವಾದಕರು) ಶೆಲ್ಲುಪಿಳ್ಳೈ ಅಯ್ಯಂಗಾರ್, ದೊರೆಸ್ವಾಮಿ, ದಿಂಡಿಗರ್‌ ನಟರಾಜನ್, ಎಮ್.ವಿ.ನಾಗೇಂದ್ರಪ್ಪ (ಕ್ಲಾರಿಯೋನಟ್ ಮತ್ತು ಡಬ್ಬಲ್ ಬೇಸ್ ವಾದಕರು) ಮುಂತಾದ ಕಲಾವಿದರು ಭಾಗವಹಿಸಿದ್ದರು. ಕುವೆಂಪು, ಡಿ.ವಿ.ಜಿ. ಮುಂತಾದ ಕವಿಗಳು ಭಾಗವಹಿಸಿ ಈ ಕಾರ್ಯಕ್ರಮಕ್ಕೆ ಪ್ರಮುಖ ಕೇಂದ್ರ ವ್ಯಕ್ತಿಗಳಾದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ಕಲಾವಿದರೂ ಶಾಸ್ತ್ರೀಯ ಸಂಗೀತಜ್ಞರೇ ಆಗಿದ್ದು, ಹಾಡುಗಾರರೆಲ್ಲ ಶಾಸ್ತ್ರೀಯ ಸಂಗೀತಗಾರರೇ ಆಗಿದ್ದರು – ಆಕಾಶವಾಣಿಯಲ್ಲಿ ಬಿತ್ತರಗೊಳಿಸುತ್ತಿದ್ದ ಹಾಡುಗಳು ‘ಕನ್ನಡ ಗೀತೆ, ದೇಶಭಕ್ತಿ ಗೀತೆ, ಭಾವಗೀತೆಯ ಎಲ್ಲಾ ಪ್ರಕಾರಗಳೂ ಆಗಿದ್ದವು.

ಪು.ತಿ.ನ. ಅವರ ಗೀತರೂಪಕ್ಕೆ ಪ್ರಸಿದ್ಧ ವಾಗ್ಗೇಯಕಾರರಾದ ಮೈಸೂರು ವಾಸುದೇವಾಚಾರ್ಯರು ಹಾಡಿದ್ದುದು, ‘ಸುಗಮಸಂಗೀತದ ಇತಿಹಾಸಕ್ಕೆ ವಿಶೇಷವಾದ ಮೈಲಿಗಲ್ಲಾಯಿತು. ಹಾಗೆಯೇ ಕರ್ನಾಟಕ ಸಂಗೀತ ವಿದ್ವಾಂಸರೂ ಗಾಯಕರೂ ಆಗಿದ್ದ ಚಿಟ್ಟೈ ಕೃಷ್ಣಯ್ಯಾಂಗಾರ್ ಅವರೂ ಗೀತ ರೂಪಕ ಹಾಡುಗಳನ್ನು ಹಾಡಿ ಇತಿಹಾಸ ಸೃಷ್ಟಿ ಮಾಡಿದರು. ಇದು ಸುಗಮಸಂಗೀತ ಕ್ಷೇತ್ರಕ್ಕೆ ಮೈಸೂರು ಆಕಾಶವಾಣಿ ನೀಡಿದ ಹೆಮ್ಮೆಯ ದಾಖಲೆಯಾಯಿತು.

ಬೆಂಗಳೂರು ಆಕಾಶವಾಣಿ

೧೯೫೫ರ ನಂತರ ಮೈಸೂರು ಆಕಾಶವಾಣಿ ಬೆಂಗಳೂರಿಗೆ ಬಂದು ನೆಲೆಸಿತು. ಕವಿಗಳು ಕವನಗಳನ್ನು ಉತ್ಸಾಹದಿಂದ ಕಳಿಸುವುದು ಮತ್ತು ಕಲಾವಿದರು ಬಂದು ಸಂತೋಷದಿಂದ ಹಾಡುವುದು ನಡೆದೇ ಇತ್ತು. ಈ ಮಧ್ಯೆ ಕೇಂದ್ರ ವಾರ್ತಾಮಂತ್ರಿಯಾಗಿದ್ದ ಡಾ|| ಬಿ.ಎ. ಕೇಸ್ಕರ್ ಅವರು ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಹಿಂದಿ ಭಾಷೆಯ ಚಲನಚಿತ್ರ ಗೀತೆಗಳನ್ನು ನಿಲ್ಲಿಸಿ ಅದರ ಜಾಗಕ್ಕೆ ಭಾವಗೀತೆಗಳನ್ನು ಪ್ರಸಾರ ಮಾಡಬೇಕೆಂದು ಆದೇಶ ಕಳಿಸಿದರು. ನವಷಾದ್, ಶಂಕರ್ ಜೈಕಿಷನ್‌ರಂತಹ ಮಹಾನ್ ಕಲಾವಿದರ ಸಂಗೀತ, ಮನ್ನಾಡೆ, ಆಶಾ, ಲತಾ ಮಂಗೇಶ್ಕರ್, ಮುಖೇಶ್‌ರಂತಹವರ ಹಾಡುಗಾರಿಕೆ ನಿಂತುಹೋಯಿತು. ಅದಕ್ಕೆ ಸಮಾನಂತರವಾಗಿ ಅಷ್ಟೇ ಜನಪ್ರಿಯತೆ ಬೇಡುವ ಹಾಡುಗಳ ಪ್ರಸಾರಣ ಅಗತ್ಯವಾಯಿತು. ಜನಪ್ರಿಯ ಹಿಂದಿ ಹಾಡುಗಳು ಪ್ರಸಾರವಾಗುತ್ತಿದ್ದ ಸಮಯದಲ್ಲಿ ಕವಿತಾಗಾಯನ ಪ್ರಾರಂಭವಾಯಿತು. ಸಾಮಾಜಿಕ ಸಂಸ್ಕೃತಿಯ ಕಾಳಜಿಯಿಂದ ಉತ್ಕೃಷ್ಟವಾದ ಕವಿತೆಗಳನ್ನೆ ಆರಿಸಿ ಹಾಡಲಾಯಿತು.

ಬೆಂಗಳೂರು ಆಕಾಶವಾಣಿಯಲ್ಲಿ ಯಾವಾಗ ಹಿಂದಿ ಹಾಡುಗಳು ನಿಂತವೋ ಕೂಡಲೇ ಈ ಸಮಯವನ್ನು ಶ್ರೀಲಂಕಾ ಬ್ರಾಡ್‌ಕಾಸ್ಟಿಂಗ್ ಕಂಪನಿಯು ಉಪಯೋಗಿಸಿಕೊಂಡು ‘ಬಿನಾಕಾ ಗೀತಮಾಲೆ’ ಯನ್ನು ಎಂದರೆ ಮತ್ತೇ ಹಳೆಯ ಹಿಂದಿ ಹಾಡುಗಳ ಪ್ರಸರಣವನ್ನು ಆರಂಭಿಸಿತು. ‘ಅಮೀನ್ ಸಯಾನಿ’ಯಂತಹ ಪ್ರಸಿದ್ಧ ನಿರೂಪಣಾಕಾರನ ಪ್ರಭಾವದಿಂದ ಹಿಂದಿ ಹಾಡುಗಳ ಬಿನಾಕಾಮಾಲೆಯು ಬಹು ಬೇಡಿಕೆಯ ಕಾರ್ಯಕ್ರಮವಾಯಿತು. ಅತ್ಯುತ್ತಮ ಹತ್ತು ಹಾಡುಗಳಲ್ಲಿ – ಶ್ರೋತೃಗಳು ಮೆಚ್ಚಿದ ಹಾಡುಗಳಿಗೆ ಬಹುಮಾನ ನೀಡುವ ಆಮಿಷವೂ ಸೇರಿಕೊಂಡು ಜನಪ್ರಿಯತೆಯ ತುತ್ತತುದಿಗೇರಿತು. ಈ ಸಮಯದಲ್ಲಿ ‘ಶ್ರೀಲಂಕಾ ಪ್ರಸರಣಕ್ಕೆ ಸಂವಾದಿಯಾಗಿ’ ಬೆಂಗಳೂರು ಆಕಾಶವಾಣಿ ‘ವಿವಿಧ ಭಾರತಿ’ ಎಂಬ ವಾಣಿಜ್ಯೋದ್ಯಮದ ಪ್ರಣಾಳಿಕೆಯನ್ನು ಹೊಸದಾಗಿ ತೆರೆದು ಮತ್ತೆ ಹಿಂದಿ ಹಾಡುಗಳನ್ನು ಪ್ರಸಾರ ಮಾಡಲು ತೊಡಗಿತು. ಆಗ ಎಂ.ಡಿ. ಪಾರ್ಥಸಾರಥಿ ಎನ್ನುವವರು ಮದ್ರಾಸಿನ ಹೆಚ್.ಎಂ.ವಿ. ಯಿಂದ ಬೆಂಗಳೂರು ಆಕಾಶವಾಣಿಗೆ ಬಂದು ಸೇರಿದರು. ೧೯೫೭ರಲ್ಲಿ ಬೆಂಗಳೂರಿನಲ್ಲಿ ವಿವಿಧ ಭಾರತಿ ಪ್ರಾರಂಭವಾದಾಗ ‘ಸುಗಮಸಂಗೀತ’ ಎಂದು ನಾಮಕರಣ ಮಾಡಿತು. ಶಾಸ್ತ್ರೀಯ ಸಂಗೀತವಲ್ಲದ ಪ್ರಕಾರಗಳನ್ನು ಸುಗಮಸಂಗೀತವೆಂದು ಕರೆಯಿತು. ಆಕಾಶವಾಣಿಯಲ್ಲಿ ತಮ್ಮ ಕವಿತೆ ಬಿತ್ತರಿಸಲು, ತಮ್ಮ ಕೊರಳು ಕೇಳಲು ಕವಿ ಕಲಾವಿದರ ಹಾತೊರೆಯುತ್ತಿದ್ದುದು ಸರ್ವೇಸಾಮಾನ್ಯವಾಗಿತ್ತು. ಇದು ಭಾರತದ ಎಲ್ಲಾ ಭಾಷೆಯಲ್ಲೂ ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಬೆಳೆಯುತ್ತ ಬಂದಿತೆನ್ನಬಹುದು.

ಆಕಾಶವಾಣಿ ಸುಬ್ರಹ್ಮಣ್ಯ ಭಾರತಿ, ರವೀಂದ್ರನಾಥ ಠಾಕೂರ್‌, ನಜರುಲ್‌ ಇಸ್ಲಾಂ ಮುಂತಾದ ಮಹಾಕವಿಗಳ ಕೃತಿಗಳನ್ನು ತಮ್ಮ ಲಲಿತ ಸಂಗೀತದ ಸಾಮಗ್ರಿಯಾಗಿ ಬಳಸುತ್ತಾ, ಶ್ರೋತೃವರ್ಗವನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನದಲ್ಲಿ ಅತ್ಯಂತ ಯಶಸ್ಸನ್ನು ಪಡೆದಿತ್ತು. ಮದರಾಸಿನ ಎಂ.ಎಲ್. ವಸಂತಕುಮಾರಿ ಕರ್ನಾಟಕ ಸಂಗೀತದಲ್ಲಿ ದೊಡ್ಡ ಹೆಸರು ಮಾಡಿದ್ದರು. ಅವರು ಹಾಡಿದ ‘ಬಾರೋ ಕೃಷ್ಣಯ್ಯ ದೇವರನಾಮ – ಮಲ್ಲಿಕಾರ್ಜುನ ಮನ್ಸೂರರು ಹಾಡಿದ ‘ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ’ ವಚನ – ಭೀಮಸೇನ ಜೋಶಿಯವರು ಹಾಡಿದ ‘ದೇವ ವಿಠ್ಠಲ’ ಎಂಬ ಅಭಂಗ್, ಇವೆಲ್ಲಾ ಸುಗಮಸಂಗೀತದತ್ತ ಶ್ರೋತೃಗಳನ್ನು ಸೆಳೆಯುವುದರಲ್ಲಿ ಪರಿಣಾಮ ಕಾರಿಯಾಗಿದ್ದವು. ಇವು ಸುಗಮಸಂಗೀತದ ಶ್ರೀಮಂತಿಕೆಯನ್ನು ಹೆಚ್ಚಿಸಿದವು. ಕನ್ನಡದ ದೇವರನಾಮಗಳು, ವಚನ, ನಾಡಪದಗಳು, ಶಿಶುನಾಳ ಷರೀಫರ ಅನುಭಾವ ಗೀತೆಗಳು ಬಾಳಪ್ಪ ಹುಕ್ಕೇರಿ, ಭಾಗವತ್ ಮುಂತಾದವರಿಂದ ಪ್ರಸ್ತುತಿಯಾಗುತ್ತಾ ಸುಗಮಸಂಗೀತದ ಸರಕುಗಳಾಗಿದ್ದವು. ಹೀಗೆಯೇ ಹಿಂದಿ ಭಾಷೆಯಲ್ಲಿ ಭಜನ್‌ಗಳೂ, ಮರಾಠಿಯಲ್ಲಿ ಅಭಂಗ್‌ಗಳೂ, ಬಂಗಾಲಿಯಲ್ಲಿ ಬಾವುಲ್‌ಗಳೂ, ಪಂಜಾಬಿಯಲ್ಲಿ ‘ಭಾಂಗ್ರ’ಗಳೂ ಅಸ್ಸಾಮಿಯಲ್ಲಿ ‘ಬಹುಗೀತ್‌’ಗಳೂ ಸುಗಮಸಂಗೀತದ ಪ್ರವಾಹದಲ್ಲಿ ಬೆರೆತು ಜನಪ್ರಿಯವಾಗಿದ್ದವು.

ಸುಗಮಸಂಗೀತಕ್ಕೆ ಹರಯ ಬಂದಂತೆ, ಎಲ್ಲ ಕಡೆಯಲ್ಲೂ ಶ್ರೋತೃಗಳ ಪ್ರೋತ್ಸಾಹ, ಜನಪ್ರಿಯತೆಗಳು ದುಪ್ಪಟ್ಟಾದವು. ಆಕಾಶವಾಣಿಯ ಕಾರ್ಯಕ್ರಮಕ್ಕಾಗಿ ಜನರು ಹಾತೊರೆಯುತ್ತಿದ್ದರು. ಲಘು ಸಂಗೀತವೆಂದು, ಲಲಿತ ಸಂಗೀತವೆಂದು, ಭಾವ-ಗೀತಾ ಗಾಯನವೆಂದು ಕರೆಸಿಕೊಳ್ಳುತ್ತಿದುದು ‘ಸುಗಮಸಂಗೀತ’ ವೆಂದು ಕರೆದುಕೊಂಡಿತು. ‘ಸರಳವಾಗಿ’, ‘ಸರಾಗವಾಗಿ’ ಎಲ್ಲ ವರ್ಗದ ಶ್ರೋತೃಗಳನ್ನು ರಂಜಿಸಬಲ್ಲದ್ದು ಎಂಬ ಕಾರಣದಿಂದ ‘ಸುಗಮಸಂಗೀತ’ ಎಂದೆನಿಸಿತು.

ಮೈಸೂರಿನಿಂದ ಬೆಂಗಳೂರಿಗೆ ಆಕಾಶವಾಣಿ ೧೯೫೬ರಲ್ಲಿ ಬಂದಾಗ, ಸುಗಮಸಂಗೀತದ ಮೊದಲ ನಿರ್ಮಾಪಕರಾಗಿದ್ದವರು ಎಂ.ಡಿ. ಪಾರ್ಥಸಾರಥಿಯವರು, ಶಾಸ್ತ್ರೀಯ ಸಂಗೀತದಲ್ಲಿ ಅನನ್ಯತೆಯನ್ನು ಸಾಧಿಸಿದ್ದ ಪಾರ್ಥಸಾರಥಿಯವರು ‘ಸುಗಮಸಂಗೀತ’ದ ಬಗೆಗೆ ವಿಶೇಷ ಕಾಳಜಿ ವಹಿಸಿದ್ದರು. ಗೀತೆಯ ಸಾಹಿತ್ಯ-ಸಂಗೀತದ ಹೊಂದಾಣಿಕೆಯ ಬಗೆಗೆ ತಮಗೆ ಖಚಿತವೆನಿಸಿದಾಗ ಮಾತ್ರ ಆಕಾಶವಾಣಿಯಲ್ಲಿ ಪ್ರಸಾರ ಮಾಡುತ್ತಿದ್ದರು. ಕಲಾವಿದರಿಗೆ ತಾಲಿಮು ಕೊಡದೆ ಧ್ವನಿಮುದ್ರಿಸುತ್ತಿರಲಿಲ್ಲ. ಅವರ ಅನೇಕ ರಾಗ ಸಂಯೋಜನೆಗಳು ಆಕಾಶವಾಣಿಯಲ್ಲಿ ಪ್ರಸಾರವಾದುವು. ಇದೇ ಪರಂಪರೆಯನ್ನು ಅನುಸರಿಸಿದವರು ಡಾ|| ವಿ.ದೊರೆಸ್ವಾಮಿ ಅಯ್ಯಂಗಾರ್, ವಿ.ಸೀತಾರಾಮಯ್ಯ, ನಾ.ಕಸ್ತೂರಿ, ಶ್ರೀರಂಗ ಮುಂತಾದ ಸಂಗೀತ ಸಾಹಿತ್ಯ ವಿದ್ವಾಂಸರುಗಳು.

ಸಿ.ಕೆ. ತಾರ, ಎಂ.ವಿ. ಮಾಲತಿ, ಎಸ್.ಕೆ. ವಸುಮತಿ, ಸರೋಜಾದೇವಿ, ಎನ್.ಎನ್. ರಾಮನ್, ಎಂ.ಎನ್.ರತ್ನ, ಕಮಲ, ಎಂ. ಪ್ರಭಾಕರ್, ದೇವಕಿರಾವ್, ವೈ.ಎನ್. ಇಂದಿರಾ, ಹೆಚ್.ಆರ್. ಲೀಲಾವತಿ, ಶ್ಯಾಮಲಾ ಭಾವೆ, ಹೆಚ್.ಕೆ. ನಾರಾಯಣ್, ಶ್ಯಾಮಲಾ ಜಾಗೀರ್‌ದಾರ್, ಮುಂತಾದವರು ಆಕಾಶವಾಣಿಯಲ್ಲಿ ಪ್ರಸಿದ್ಧರಾದರು. ಆಕಾಶವಾಣಿ ಪ್ರಸಾರ ಮಾಡುತ್ತಿದ್ದ ‘ಗೀತ ರೂಪಕ’ ಗಳಿಗೆಲ್ಲಾ ಇವರೇ ದನಿಯಾದರು. ಅನೇಕ ಸಂಗೀತ ರೂಪಕಗಳು ಬಾನುಲಿಯ ಕವಿಶ್ರೇಷ್ಠರಿಂದ ರಚಿಸಲ್ಪಟ್ಟು ಬಾನುಲಿಯಲ್ಲಿನ ಸಂಗೀತ ನಿರ್ದೇಶಕರಿಂದ ಸಂಯೋಜಿಸಲ್ಪಡುತ್ತಿತ್ತು. ಎ.ವಿ. ಕೃಷ್ಣಮಾಚಾರ್ಯರು ಬಾನುಲಿಯಲ್ಲಿ ಪಿಟೀಲು ವಿದ್ವಾಂಸರಾಗಿದ್ದರು. ಸುಗಮಸಂಗೀತದ ಸಂಗೀತ ನಿರ್ದೇಶಕರಾದ ನಂತರ ‘ಪದ್ಮಚರಣ್’ ಎಂದೇ ಪ್ರಖ್ಯಾತರಾಗಿ ಅನೇಕ ಭಾವಗೀತೆಗಳಿಗೆ ಗೀತರೂಪಕಗಳಿಗೆ ಸಂಗೀತ ನಿರ್ದೇಶನ ನೀಡಿ, ಕವಿತೆಯ ಅರ್ಥವನ್ನು ಚೆನ್ನಾಗಿ ಮನಗಂಡು, ಕವಿ ಹೃದಯದ ಆಳವನ್ನು ಅರಿತು ಸೂಕ್ತವಾದ ಸಂಯೋಜನೆ ಮಾಡಿ ಅತ್ಯಂತ ಜನಪ್ರಿಯರಾದರು. ಗೀತರೂಪಕಗಳು ಹುಚ್ಚೆಬ್ಬಿಸುವಷ್ಟು ಪ್ರಸಿದ್ಧಿಗಳಿಸಿದ್ದವು. ಎಸ್. ಕೃಷ್ಣಮೂರ್ತಿ (ವಾಗ್ಗೇಯಕಾರರಾದ ವಾಸುದೇವಾಚಾರ್ಯರ ಮೊಮ್ಮಗ) ವೀಣೆ ದೊರೆಸ್ವಾಮಿ ಅಯ್ಯಂಗಾರ್ ಮುಮತಾದವರು ಕಾರಂತರ ‘ಕಿಸಾಗೌತಮ’, ಪು.ತಿ.ನರಸಿಂಹಚಾರ್‌ರವರ ಎಲ್ಲಾ ಗೀತ ರೂಪಕಗಳನ್ನು ಸಂಗೀತಕ್ಕೆ ಅಳವಡಿಸಿ ಪ್ರಸಾರ ಮಾಡಿದರು. ಆಕಾಶವಾನಿಯಲ್ಲಿ ಗೋಟು ವಾದ್ಯದ ವರಾಹ ಸ್ವಾಮಿ, ವೀಣೆ ವೆಂಕಟ ಸುಬ್ಬರಾವ್, ಕ್ಲಾರಿಯೋನೆಟ್ ನಾಗೇಂದ್ರಪ್ಪ, ಪಿಟೀಲು ಎ.ವಿ. ಕೃಷ್ಣಮಾಚಾರ್, ಕೊಳಲು ರಂಗಪ್ಪ, ತಬಲ ಶೀನಪ್ಪ ಇವರು ಆರು ಜನರಿದ್ದ ವಾದ್ಯಮೇಳ ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿತ್ತು. ಭಾವಗೀತೆ, ಗೀತರೂಪಕಗಳ ಕಾರ್ಯಕ್ರಮಗಳಲ್ಲಿ ಇವು ಅದ್ಭುತವಾಗಿ ಮೇಳೈಸಿ ಹೆಸರು ಮಾಡಿತ್ತು. ಅನೇಕ ಗೀತ ರೂಪಕಗಳಲ್ಲಿ ಆರ್.ಕೆ. ಶ್ರೀಕಂಠನ್, ಡಾ|| ಬಾಲಮುರಳಿಕೃಷ್ಣ, ಶೆಲ್ವಪಿಳ್ಳೈ ಐಯ್ಯಂಗಾರ್, ಶ್ರೀರಂಗಂ ಗೋಪಾಲರತ್ನಂ, ಸೀತಾಲಕ್ಷ್ಮಿವೆಂಕಟೇಶ್‌, ಸಿ.ಕೆ.ತಾರಾ, ಮುಂತಾದ ಘನ ವಿದ್ವಾಂಸರುಗಳೇ ಭಾಗವಹಿಸಿ ಅನೇಕ ಗೀತೆಗಳನ್ನು ಹಾಡಿದರು. ೧೯೭೫ ರವರೆಗೆ ಇದು ನಿರಂತರವಾಗಿ ನಡೆದು ‘ಸುಗಮಸಂಗೀತ’ ಬಹುಮುಖಿಯಾಗಲು ತೊಡಗಿತು.

೧೯೭೫ರಲ್ಲಿ ‘ನವಸುಮ’ ಎಂಬ ಕಾರ್ಯಕ್ರಮ ಪ್ರಾರಂಭವಾಯಿತು. ತಿಂಗಳ ಹೊಸ ಹಾಡಾಗಿ ಒಬ್ಬ ಕವಿಯ ಕವಿತೆಯನ್ನು ಆಯ್ಕೆ ಮಾಡಿ ಸಂಯೋಜನೆ ಮಾಡಿ ಹಾಡುವುದು ಆರಂಭವಾಯಿತು. ಈ ಕಾರ್ಯಕ್ರಮದ ಮುಲಕ ಸಮೃದ್ಧವಾದ ಕವಿತೆಗಳ ಸೃಷ್ಟಿಯಾಯಿತು. ಹಾಡುವುದಕ್ಕಾಗಿಯೇ ಗೀತೆಗಳು ಬರೆಯಲ್ಪಟ್ಟವು. ರಾಮಚಂದ್ರ ಶರ್ಮ, ಗೋಪಾಲಕೃಷ್ಣ ಅಡಿಗ, ದ.ರಾ.ಬೇಂದ್ರೆ, ಡಿ.ವಿ. ಗುಂಡಪ್ಪ, ವೀ. ಸೀತಾರಾಮಯ್ಯ, ಕುವೆಂಪು, ಪು.ತಿ. ನರಸಿಂಹಾಚಾರ್, ಜಿ.ಪಿ. ರಾಜರತ್ನಂ ಮುಂತಾದವರು ಆಯಾ ಸಂದರ್ಭದ ಕೋರಿಕೆಗೆ ತಕ್ಕಂತೆ ಬರೆಯಲು ಪ್ರಾರಂಭಿಸಿದರು. ನವಸುಮ ಕವಿತಾ ಮಲೆ ಘಮ ಘಮಿಸುವ ರಾಗ ಕುಸುಮಗಳಿಂದ ಅಲಂಕೃತಗೊಂಡವು. ಹಿರಿಯ ಕವಿಗಳಿಂದ ಆರಂಭವಾದ ಈ ಸಂಪ್ರದಾಯಕ್ಕೆ ಕಿರಿಯ ಕವಿಗಳೂ ಸೇರಿಕೊಂಡರು.

ಮುಖ್ಯವಾಗಿ ಕವಿ ಲಕ್ಷ್ಮಿನಾರಾಯಣ ಭಟ್ಟರು ಆಕಾಶವಾಣಿಯ ಬಾನುಲಿ ರೂಪಕಗಳ ಮೂಲಕ ನವ್ಯದಿಂದ, ನವೋದಯ ಅಂಶವನ್ನು ಮೈಗೂಡಿಸಿಕೊಂಡ ಗೇಯ ಕವಿತೆಗಳನ್ನು ಬರೆದರು. ನವ್ಯ ಕವಿತೆಗಳನ್ನು ಬರೆಯುತ್ತಿದ್ದ ಭಟ್ಟರಿಗೆ ನವ್ಯ ಕವಿತೆಗಳಲ್ಲಿ ‘ಗೇಯತೆ’ ಕಳೆದುಹೋದ ಅನುಭವವಾಯಿತು. ನವ್ಯ ಕಾವ್ಯದ ರಾಗ ವಿರೋಧಿ ಭಾವದಿಂದ ಹೊರಬಂದು ಜನಪರ ಅಗತ್ಯಕ್ಕೆ ತಕ್ಕಂತೆ, ಹಿಂದಿನ ಭಾವಗೀತೆಗಳಿಗಿಂತ ಹೆಚ್ಚು ಸ್ಪಷ್ಟವಾದ ರಾಗಾಶಯಗಳನ್ನು ಅಪೇಕ್ಷಿಸುವ ಗೀತೆಗಳನ್ನೆ ಬರೆದುರ. ಅವು ನವ್ಯ ಕವಿತೆಯಂತೆ ವಿರುದ್ಧ ಭಾವಗಳು ಹಾಸುಹೊಕ್ಕಾಗಿ ಸೇರಿದ ಸಂಕೀರ್ಣ ಹೆಣಿಗೆಯಾಗದೆ, ಭಾವಲಹರಿಯಲ್ಲಿ ತನ್ನೆಲ್ಲ ತೀವ್ರತೆಯನ್ನು ಹೊಮ್ಮಿಸುವ ಹಾಡಾಗಿ ಸೃಷ್ಟಿಯಾಯಿತು. ‘ಯುಗಾದಿ’, ‘ದೀಪಾವಳಿ’, ‘ಸ್ವಾತಂತ್ರ‍್ಯೋತ್ಸವ’ ‘ಸಂಕ್ರಾಂತಿ’, ಮುಂತಾದ ವಿಶೇಷ ಸಂದರ್ಭಗಳಲ್ಲಿ ‘ಆಕಾಶವಾಣಿ’ಯಿಂದ ಆಹ್ವಾನಿತರಾದ ಭಟ್ಟರು ಅನೇಕ ಗೀತರೂಪಕಗಳನ್ನು ಸಿದ್ಧಪಡಿಸಿಕೊಟ್ಟರು. ಹಾಗೆ ಸಿದ್ಧಪಡಿಸುವಾಗ ಅನೇಕ ಕವಿಗಳ ಗೀತೆಗಳನ್ನು ಸಾಂದರ್ಭಿಕವಾಗಿ ಬಳಸಿಕೊಳ್ಳುತ್ತಿದ್ದರು. ಅಂತಹ ಗೀತೆಗಳು ದೊರೆಯದಿದ್ದಾಗ, ಅನಿವಾರ್ಯವಾಗಿ ತಾವೇ ಬರೆದು ಗೀತರೂಪಕದಲ್ಲಿ ಬಳಸಿಕೊಳ್ಳುತ್ತಿದ್ದರು. ಬಾನುಲಿಯ ನಿಲಯದ ‘ನವಸುಮ’ ಕಾರ್ಯಕ್ರಮದ ನಿರ್ವಾಹಕರಾಗಿದ್ದ ಎನ್.ಎಸ್. ಕೃಷ್ಣಮೂತಿಯವರ ಸಂಗೀತ, ಸಾಹಿತ್ಯ ಪ್ರೇಮಾಸಕ್ತಿಗಳಿಂದ ‘ನವಸುಮ’ ಅನ್ವರ್ಥನಾಮವಾಗಿ ತನ್ನ ಹೆಸರು ಸಾರ್ಥಕ ಪಡಿಸಿಕೊಂಡಿತು. ‘ನವಸುಮ’ ಕಾರ್ಯಕ್ರಮದಲ್ಲಿ ಹೊಸ ಹೊಸ ಹೊಚ್ಚ ಹೊಸ ಹೂಗಳನ್ನು, ಹೂಗೊಂಚಲುಗಳನ್ನು ತುಂಬಿಸಿಕೊಂಡಿತು. ಭಟ್ಟರು ರಚಿಸಿದ ‘ಬಾರೋ ವಸಂತ’ – ‘ಕಳೆದ ಕಾಲವ ಗುಣಿಸಿ’, ‘ಮತ್ತೆ ಮತ್ತೆ ಕಳಚಿದರೂ’, ‘ಯಾಕೆ ಕಾಡುತಿದೆ’, ‘ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ’ ಮುಂತಾದ ಹಾಡುಗಳು ಅರಳುತ್ತಾ ಬಂದವು. ಬಾನುಲಿಯ ನಿಮಿತ್ತದಿಂದ ಕವಿ ಹೃದಯದ ಗೀತ ರಚನಾಕಾರನೊಬ್ಬ ಉದಿಸಿದ. ಹಿರಿಯ ಕವಿಗಳೂ, ಶ್ರೋತೃವರ್ಗದವರೂ ಕಿರಿಯ ಕವಿಯನ್ನು ಆದರದಿಂದ ಬರಮಾಡಿಕೊಂಡರು. ಇದೇ ಸಾಲಿನಲ್ಲಿ ಕವಿ ನಿಸಾರ್ ಅಹಮದ್‌ರ ಹೆಸರನ್ನೂ ನೆನೆಯಬೇಕು. ಅರವತ್ತರ ದಶಕದ ಕೊನೆಯ ಹೊತ್ತಿಗೆ ನಾಲ್ಕ ನವ್ಯ ಕಾವ್ಯ ಸಂಕಲನಗಳನ್ನು ಹೊರತಂದು ಕೆಲವು ಪ್ರಯೋಗಶೀಲ ಪ್ರಯತ್ನಗಳನ್ನು ಮಾಡಿದ ನಿಸಾರ್ ಅವರು ನವ್ಯ ಕವಿಯೆಂದೇ ಗುರುತಿಸಿಕೊಂಡಿದ್ದರು. ಆದರೆ ವೈಚಾರಿಕತೆಯ ದೊಂಬರಾಟ, ಪೆಡಸುಗಳಿಂದ ಗತಿಗೇಡಿಯಾಗುತ್ತಿದ್ದ ನವ್ಯ ಕಾವ್ಯಕ್ಕೆ ಮತ್ತೊಮ್ಮೆ ಗೇಯತೆ, ಭಾವಗೀತಾತ್ಮಕತೆಯ ಮಂತಸ್ಪರ್ಶ ಅಗತ್ಯವೆಂಬ ಅರಿವು ಅವರಲ್ಲಿ ಮೂಡಿ ಉತ್ಕಟವಾಯಿತು. ಕವಿತೆ ಜನಪದ ಧೋರಣೆಯನ್ನು ಮೈಗೂಡಿಸಿಕೊಂಡು ಸಮಾಜದ ಬೇರೆ ಬೇರೆ ಪದರುಗಳ ತನಕ ವ್ಯಾಪಿಸಬೇಕಾದ ಅಗತ್ಯವಿದೆ ಎಂದೆನಿಸಿತು. ಮುಕ್ತವಿಲಾಸದಲ್ಲಿ ತನಗೆ ತಾನೇ ನಲಿಯುವ ಅರ್ಥ ಸಮೃದ್ಧಗೇಯ ಕವಿತೆಗಳು ಮತ್ತೊಮ್ಮೆ ಮೆರೆಯಬೇಕೆಂಬ ಹಂಬಲದಿಂದ ಭಾವಗೀತಾ ರಚನೆಗೆ ಕೈಹಾಕಿದರು. ಸತತ ಪ್ರಯೋಗಶೀಲರೂ, ಸಹೃದಯರೂ ಆಗಿದ್ದ ನಿಸಾರರು ಬಾನುಲಿಗಾಗಿ ಅನೇಕ ಗೀತೆಗಳನ್ನು, ಗೀತ ರೂಪಕಗಳನ್ನು ಬರೆದುಕೊಟ್ಟರು. ೧೯೬೩ ರಲ್ಲಿ ಭಾರತದ ಮೇಲೆ ಚೀನಾದ ಆಕ್ರಮಣವಾದಾಗ ಆಕಾಶವಾಣಿಯ ನಿರ್ದೇಶಕರು ದೇಶಭಕ್ತಿ ಪ್ರಚೋದಕವೂ, ಅಂದಿಗೆ ಪ್ರಕೃತವೂ ಆಗಿದ್ದು ಸಂದರ್ಭಕ್ಕೆ ಸರಿಯಾದಂತಹ ಗೀತ ರೂಪಕಗಳನ್ನು ಬಿತ್ತರಿಸುತ್ತಿದ್ದರು. ‘ನಿಸಾರ್‌ಅಹಮದ್‌’ರ ‘ಆತ್ಮಾರ್ಪಣ’ ಎಂಬ ಗೀತ ರೂಪಕವನ್ನು ಆಕಾಶವಾಣಿ ಬಿತ್ತರಿಸಿತು. ‘ಪದ್ಮಚರಣ್’ ಸಂಗೀತ ನಿರ್ದೇಶನ ಮಾಡಿದ್ದ ಆ ಸಂಗೀತ ರೂಪಕದಲ್ಲಿ ಅಂದಿನ ಪ್ರಸಿದ್ಧ ಗಾಯಕರಾಗಿದ್ದ ಪಿ. ಕಾಳಿಂಗರಾವ್‌ಮತ್ತು ಶ್ರೀಮತಿ ಎಂ.ಎನ್. ರತ್ನ ಪ್ರಧಾನ ಪಾತ್ರಗಳಿಗೆ ತಮ್ಮ ದನಿಗೂಡಿಸಿದ್ದರು. ನಿಸಾರ್‌ರು ಈ ರೂಪಕಕ್ಕಾಗಿ ಬರೆದ ಅನೇಕ ಹಾಡುಗಳು ಅತ್ಯಂತ ಜನಪ್ರಿಯವಾಗಿ ಮನೆ ಮನೆ ಮಾತಾದವು.

ಸುಮಾರು ಎರಡು ಮೂರು ವರುಷಗಳವರೆಗೆ ನಿಸಾರರ ಈ ಗೀತ ರೂಪಕದ ಹಾಡುಗಳು ಬಾನುಲಿಯಲ್ಲಿ ಪ್ರತಿದಿನ ಉಲಿಯತೊಡಗಿದವು. ‘ಜಲ ನಮ್ಮದು ನೆಲ ನಮ್ಮದು’ – ‘ನಾಡದೇವಿಯ ಕಂಡೆ ನಿನ್ನ ಮಡಿಲಲ್ಲಿ’ – ‘ನುಗ್ಗಿನಡೆ’ – ‘ಗಿರಿನೆತ್ತಿಯ ಎತ್ತರದಲ್ಲಿ’ – ‘ಸದಾ ಉರಿಯುತ್ತಿರುವ ಹಾಗೆ’ – ಮುಂತಾದ ಹಾಡುಗಳು ತಮ್ಮ ನಾದದ ಗುಂಗಿನಿಂದ, ಭಾವದ ಆತ್ಮೀಯತೆಯಿಂದ ಜನಪ್ರಿಯತೆಯ ತುತ್ತತುದಿಗೇರಿದವು. ಆಕಾಶವಾಣಿಯಿಂದ ಹಿಡಿದು ಸಾರ್ವಜನಿಕ ಸಮಾರಂಭಗಳಲ್ಲಿಯೂ ಈ ಹಾಡುಗಳು ಗಾಯಕರ ಕೊರಳಲ್ಲಿ ಸೆರೆಯಾದವು.

ಕನ್ನಡದ ‘ಪ್ರಪ್ರಥಮ ಯುದ್ಧ ಗೀತಕಾರ’ರೆಂಬ ಪ್ರಶಂಸೆಗೆ ಪಾತ್ರರಾಗಿದ್ದ, ಸಿದ್ದಯ್ಯ ಪುರಾಣಿಕ, ಜೆ.ಪಿ. ರಾಜರತ್ನಂ, ಕೆ.ಎಸ್. ನರಸಿಂಹಸ್ವಾಮಿ ಇವರುಗಳ ಜೊತೆಗೆ ನಿಸಾರರ ಹೆಸರೂ ಸೇರಿಕೊಂಡಿತು.

ಆಕಾಶವಾಣಿ ಶ್ರೋತೃಗಳಿಗೆ ಮನರಂಜನೆಯ ಜೊತೆ ಜೊತೆಗೆ ವೈಚಾರಿಕ ಸಂದೇಶಗಳನ್ನೂ ಬಿತ್ತರಿಸುತ್ತಾ, ವಾಸ್ತವ ಸ್ಥಿತಿಗೆ ಸ್ಪಂದಿಸುತ್ತಾ ಸಂಸ್ಕೃತಿಯ ಪ್ರಸಾರ, ಪ್ರಚಾರ ಮಾಡಿತು ಎಂಬುದು ಗಮನಿಸಬೇಕಾದದ್ದು. ಮನೋರಂಜನೆಯ ಮಾಧ್ಯಮವೊಂದು ಜನಪ್ರಿಯವಾಗಿ ಜನರ ಮನವನ್ನು ಗೆದ್ದು ಅವರಿಗೆ ಚಿಂತನ ಶೀಲತೆಯನ್ನು ತಂದುಕೊಟ್ಟಿತು. ಜೊತೆಗೆ ಹಳ್ಳಿ ಹಳ್ಳಿಗೆ ಸಂಸ್ಕೃತಿಯನ್ನು ಪ್ರಸಾರ ಮಾಡಿತು. ಉತ್ತಮ ಅಭಿರುಚಿಯನ್ನು ಬಿತ್ತಿತು. ಕರ್ಣರಂಜನೆಯ, ಮನರಂಜನೆಯ ಏಕೈಕ ಮಾಧ್ಯಮವಾಗಿದ್ದ ಆಕಾಶವಾಣಿಗೆ ಅವಶ್ಯಕವಾದ, ಗೀತ ರಚನೆ ಮಾಡಲು ಅನೇಕ ಪ್ರಸಿದ್ಧ ಕವಿಗಳು, ರಚನಾಕಾರರು ಸಿದ್ಧರಿದ್ದರು. ರಚನೆಗಳನ್ನು ಸುಶ್ರಾವ್ಯವಾಗಿ ಅರ್ಥವತ್ತಾಗಿ ಹಾಡಲು ಹಲವಾರು ಕಲಾವಿದರು ಸಿದ್ಧರಾಗಿದ್ದರು. ಇದಕ್ಕೆ ಕಾರಣ ಶಾಸ್ತ್ರೀಯ ಸಂಗೀತದ ಮುಂಚೂಣಿಯಲ್ಲಿದ್ದ ಅನೇಕ ಕಲಾವಿದರು ಸುಗಮಸಂಗೀತದ ಅಲೆಯನ್ನು ಉಕ್ಕಿಸಿದ್ದರು.

ಮುಂಬೈ ಆಕಾಶವಾಣಿ

೧೯೪೬ರಲ್ಲಿ ಮುಂಬೈನ ಆಕಾಶವಾಣಿಯಲ್ಲಿ ಕನ್ನಡ ವಿಭಾಗ ಆರಂಭವಾಯಿತು. ಎನ್.ಕೆ. ಕುಲಕರ್ಣಿ ಮತ್ತು ಕೈಲಾಸಂರವರ ಶಿಷ್ಯರಾದ ಬಿ.ಎಸ್. ರಾಮರಾವ್ ಇಬ್ಬರೂ ನಿಲಯದ ಮೊಟ್ಟಮೊದಲನೆಯ ಕಲಾವಿದ ಸಿಬ್ಬಂದಿಗಳಾಗಿದ್ದರು. ಕನ್ನಡ ಗೀತೆಗಳನ್ನು ಪ್ರಸಾರ ಮಾಡಲು ಕವಿಗಳೊಂದಿಗೆ ಕರಾರು (ಕಾಪಿರೈಟ್) ಮಾಡಿಕೊಂಡಿರದಿದ್ದರಿಂದ ಮೊದಲಿಗೆ ದಾಸರಪದಗಳನ್ನು ತತ್ವಪದಗಳನ್ನೂ ಬಿತ್ತರಿಸುವಂತೆ ಆದೇಶವಿತ್ತು. ನಿಜಗುಣ ಶಿವಯೋಗಿ, ಮುಪ್ಪಿನ ಷಡಕ್ಷರಿ, ಶಿವಶರಣರು, ಹರಿದಾಸರು ಇವರ ರಚನೆಗಳೇ ಮುಂಬೈ ಆಕಾಶವಾಣಿ ಪ್ರಸಾರ ಮಾಡಿದ ಮೊದಲ ಸುಗಮಸಂಗೀತವಾಯಿತು.

ಎನ್ಕೆಯವರು ಗದುಗಿನಲ್ಲಿದ್ದಾಗ ಅವರ ಶಿಷ್ಯೆಯಾಗಿದ್ದ ದಕ್ಷಿಣ ಕರ್ನಾಟಕದ ಮುಲ್ಕಿಯವರಾದ ಸೀತಾಮುಲ್ಕಿ ಮದುವೆಯಾಗಿ ಮುಂಬೈಗೆ ಬಂದು ನೆಲೆಸಿದ್ದರು. ಮುಂಬೈಯಲ್ಲಿ ಹಿಂದೂಸ್ಥಾನಿ ದೊಡ್ಡ ಹೆಸರು ಮಾಡಿದ್ದ ‘ಹೀರಾಬಾಯಿ ಬಡೋದೆಕರ್’ ಅವರ ಶಿಷ್ಯೆಯಾಗಿದ್ದರು. ಮುಂಬೈಯಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಮತ್ತು ಮರಾಠೀ ಗೋಡಗಾಣ್‌ ಗಾಯಕಿ ಎಂದೇ ಹೆಸರು ಮಾಡಿದ್ದ ಸೀತಾಮುಲ್ಕಿಯವರು ಮುಂಬಯಿ ಆಕಾಶವಾಣಿಯಲ್ಲಿ ಎನ್ಕೆಯವರ ಹಾಡೊಂದನ್ನು ಹಾಡುವುದರ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಕನ್ನಡದ ಹಾಡು ಬರೆದು ಕೊಟ್ಟರೆ ಹಾಡುತ್ತೇನೆ ಎಂದ ಸೀತಾ ಅವರಿಗೆ ಎನ್ಕೆಯವರು ಹಿಂದಿ ಭಜನೆಯೊಂದರ ಮಟ್ಟಿಗೆ ಕನ್ನಡ ಗೀತೆಯೊಂದನ್ನು ಬರೆದುಕೊಟ್ಟರು. ಹಿಂದಿ ಮೀರಾ ಭಜನೆಯ ಮೂಲ ಧಾಟಿಯೊಂದಕ್ಕೆ ಕನ್ನಡದಲ್ಲಿ ಗೀತೆ ಸೃಷ್ಟಿಯಾಯಿತು. ‘ತುಮಬಿನ ಮೋರಿಕೋನ ಖಬರಲೆ ಗೋವರಥನ ಗಿರಿಧಾರೆ’ – ಎಂಬ ಹಾಡೇ – ‘ಗಿಡ ಗಿಡದಲಿ ಹಾರಾಡುವ ಗಿಳಿಯೆ ನುಡಿ ನುಡಿ ಕನ್ನಡವ’ – ಎಂದು ಕನ್ನಡ ಪ್ರೇಮವನ್ನು ಉಕ್ಕಿಸುವ ಹಾಡಾಯಿತು. ಕನ್ನಡದ ನವೋದಯದ ಸಾಹಿತ್ಯ ಬೆಳೆದು ಬಂದಾಗ ಭಾರತ ತನ್ನ ಸ್ವಾತಂತ್ರ‍್ಯ ಹೋರಾಟದ ತೀವ್ರ ಸ್ಥಿತಿಯಲ್ಲಿ ಇತ್ತು. ದೇಶದ ಮಹಾ ಮುಕ್ತಿಗಾಗಿ ಜನಗಳನ್ನು ಪ್ರೇರಿಸುವ ಅಮೂಲ್ಯ ಹೊಣೆಯನ್ನು ನಮ್ಮ ಕವಿಗಳು ಹೊತ್ತಿದ್ದರಿಂದ ಆ ಹೊತ್ತಿನ ಕಾವ್ಯವೆಲ್ಲಾ ದೇಶಪ್ರೇಮ, ಭಾಷಾ ಪ್ರೇಮದ ಜೊತೆಗೆ ಸ್ವಾತಂತ್ರ‍್ಯದ ಹಂಬಲವನ್ನು ಮಡಿಲಲ್ಲಿ ಕಟ್ಟಿಕೊಂಡೇ ಹುಟ್ಟಿತ್ತು. ಸೀತಾಮುಲ್ಕಿಯವರು ಹಾಡಿದ ಈ ಕನ್ನಡ ಗೀತೆಯ ಮೋಡಿ ಎಷ್ಟಾಯಿತೆಂದರೆ ಕನ್ನಡೇತರರೂ ಮರಾಠೀ ‘ಗೋಡಗಾಣ’ದ ಮಟ್ಟಿನ ಧಾಟಿಗೆ ಎನ್ಕೆಯವರಿಂದ ಕನ್ನಡದ ಗೀತೆಗಳನ್ನು ಬರೆಯಿಸಿಕೊಂಡು ಬಾನುಲಿಯಲ್ಲಿ ಬಂದು ಹಾಡತೊಡಗಿದರು. ವಿಜಯಾದೇಸಾಯಿ, ಸುಶೀಲಾಟೇಂಬೆ, ತಾರಾಬಾಯಿ ಗದಗಕರ, ಅಮೀರ್‌ಬಾಯಿ ಕರ್ನಾಟಕಿ, ಮುಂತಾದ ಕನ್ನಡೇತರರು ಮತ್ತು ಕನ್ನಡಿಗರು ಅನೇಕ ‘ಗೋಡಗಾಣ’ ಗೀತೆಗಳನ್ನು ಕನ್ನಡಕ್ಕೆ ತಂದರು.

ಭೀಮಸೇನ ಜೋಶಿಯವರು ಹಾಡಿದ ಬೇಂದ್ರೆಯವರ ‘ಉತ್ತರ ಧ್ರುವದಿಂ ಕನ್ನಡ ಧ್ರುವಕು’, ‘ನನ್ನ ಹರಣ ನಿನಗೆ ಶರಣ’, ಮೊದಲಾದ ಗೀತೆಗಳು ಬೆಂಗಳೂರು ಕೇಂದ್ರದ ‘ನವಸುಮ’ದ ಹೊಸ ಹಾಡುಗಳಂತೆ ವಿಶೇಷ ಮಾಸದ ಹಾಡುಗಳಾಗಿ ಬಿತ್ತರಗೊಂಡವು. ಇದಕ್ಕಾಗಿ ಹೊಸ ಬಗೆಯ ಒಪ್ಪಂದವನ್ನು ಮುಂಬೈ ಆಕಾಶವಾಣಿ ಮಾಡಿಕೊಂಡಿತು. ಭೀಮಸೇನ ಜೋಶಿಯವರ ‘ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು’- ಅತ್ಯಂತ ಜನಪ್ರಿಯತೆ ಗಳಿಸಿತು. ಕೃಷ್ಣಾ ಹಾನಗಲ್, ಭೀಮಸೇನ ಜೋಶಿ, ಶಾರದಾ ಈ ಮೂವರೂ ಸೇರಿ ಹಾಕಿದ ‘ಉದಯವಾಲಿನಮ್ಮ ಚೆಲುವ ಕನ್ನಡ ನಾಡು’, ೧೯೪೭ರಲ್ಲಿ ಮಂಬಯಿಯಲ್ಲಿ ಧ್ವನಿಮುದ್ರಿವಾದ ಅತ್ಯತ ಜನಪ್ರಿಯ ಗೀತೆಯಾಗಿತ್ತು. ಕಾಳಿಂಗರಾಯರ ಇದೇ ಗತೆ ಮೈಸೂರು ಆಕಾಶವಾಣಿಯಲ್ಲಿ ಪ್ರತಿದಿನದ ಪ್ರಾರಂಭ ಗೀತೆಯಾಗಿದರೂ, ಕೆಲವು ಕಾರಣಗಳಿಂದ ಮುಂಬಯಿಯಲ್ಲಿ ಆಧ್ವಿಮುದ್ರಿಕೆಯನ್ನು ಪ್ರಸಾರ ಮಾಡುವಂತಿರಲಿಲ್ಲ. ಕೀರ್ತಿನಾಥ ಕುರ್ತಕೋಟೆಯವರ ‘ಅರಳದು ಪ್ರೇಮದ ಮೃದು ಕುಸುಮ’ – ಎಂಬ ಗೀತೆಯೂ ಭೀಮಸೇನ ಜಶಿಯವರ ಕೊರಳಲ್ಲಿ ಉಲಿದ ಜನಪ್ರಿಯವಾಯಿತು. ಹೆಚ್.ಎಂ.ವಿ. ಧ್ವನಿಮುದ್ರಣ ಸಂಸ್ಥೆಯ ನೆರವಿನಿಂದ ಹತ್ತಾರು ಧ್ವನಿ ತಟ್ಟಗಳು ಬಂದು ಮುಂಬೈ ಆಕಾಶವಾಣಿಯಲ್ಲಿ ಅನುರಣನಗೊಂಡವ. ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತದ ಮಲ್ಲಿಕಾರ್ಜುನ ಮನ್ಸೂರರು ಹಾಡಿದ ‘ತೇರನೇಳೆಯುತಾರ ತಂಗಿ’ ಎಂಬ ಶಿಶುನಾಳ ಷರೀಫರ ಪದವಂತೂ, ಕರ್ನಾಟಕವ್ನು ದಾಟಿ, ಮಹಾರಾಷ್ಟ್ರದಲ್ಲೂ ೧೯೩೩ರ ಸುಮಾರಿಗೆ ಅತ್ಯಂತ ಜನಪ್ರಿಯವಾಗಿತ್ತು.

ಧಾರವಾಡ ಆಕಾಶವಾಣಿ

೧೯೫೦ರ ಜನವರಿ ಎಂಟರಂದು ಧಾರವಾಡದಲ್ಲಿ ಆಕಾಶವಾಣಿ ಕೇಂದ್ರ ಪ್ರಾರಂಭವಾಯಿತು. ಉತ್ತರಕರ್ನಾಟಕದ ಕವಿಗಳೆಲ್ಲ A.I.R. ೬೫ ಕರಾರಿನಿಂದ ಬದ್ಧರಾದರು. ಕವಿಗಳಾದ ದ.ರಾ. ಬೇಂದ್ರೆ, ವಿನಾಯಕ, ರಸಿಕರಂಗ, ಆನಂದಕಂದ, ಚೆನ್ನವೀರಕಣವಿ, ಡಿ.ಎನ್. ಕರ್ಕಿ, ಆರ್.ಸಿ. ಹಿರೇಮಠ, ಜಿ.ವಿ. ಕುಲಕರ್ಣಿ, ಚಂದ್ರಶೇಖರ ಪಾಟೀಲ, ದೇವೇಂದ್ರ ಕುಮಾರ ಹಕಾರಿ, ಇಂಚಲ, ಎಕ್ಕುಂಡಿ, ಅಕ್ಬರ್ ಅಲಿ, ದಿನಕರ ದೇಸಾಯಿ, ಗೌರೀಶ ಕಾಯ್ಕಿಣಿ, ಸಿದ್ಧಣ್ಣ ಮೊಸಳಿ, ಮೊದಲಾದವರೆಲ್ಲಾ ಧಾರವಾಡ ನಿಲಯದ ಕವಿಗಳು ಒಪ್ಪಂದಕ್ಕೆ ಸಹಿ ಹಾಕಿದ್ದರು. ಮುಂಬಯಿ ಗಾಯಕಿಯರಲ್ಲದೆ ಧಾರವಾಡ ಕೇಂದ್ರದ ಕೃಷ್ಣಾ ಹಾನಗಲ್, ನೀಲಮ್ಮ ಕೊಡ್ಲಿ (ನೀಲಮ್ಮ ಮನ್ಸೂರ್‌) ಬಾಳಪ್ಪ ಹುಕ್ಕೇರಿ, ಅನುರಾಧಾ ಧಾರೇಶ್ವರ್, ಉಷಾ ಖಾಡಿಲಕರ್‌, ಆರ್.ಎಸ್. ಜಂತ್ಲಿ – ಎಸ್.ಕೆ.ದೇಶಪಾಂಡೆ, ಸಿದ್ಧರಾಮ ಜಂಬಲಿದಿನ್ನಿ, ಶಾರದಾ ಹಾನಗಲ್, ಸೋನುಬಾಯಿ ದೊಡ್ಡಮನಿ, ದೇವೇಂದ್ರ ಪತ್ತಾರ್, ಈಶ್ವರಪ್ಪ ಮಿಣಜಿ, ಎ.ಜಿ. ನೀಲಗಾರ ಮೊದಲಾದ ಕಲಾವಿದರೆಲ್ಲಾ ಧಾರವಾಡದ ಬಾನುಲಿಗೆ ಸುಗಮಸಂಗೀತದ ರಂಗು ತುಂಬಿದರು. ಅನುರಾಧ ದಾರೇಶ್ವರ ಹಾಡಿದ, ಸಿದ್ಧಣ ಮೊಸಳಿಯವರ ‘ಹೊಸಬಾಳಿನ ಹೊಸತಿನಲಿ ಝಗಝಗಿಸುವ ಬೆಳಕು’ ಎಂಬ ಗೀತೆ ಅತ್ಯಂತ ಅರ್ಥಪೂರ್ಣವಾಗಿ ಜನಪ್ರಿಯವಾಗಿತ್ತು.

ಬೇಂದ್ರೆಯವರ ‘ಗಂಗಾವತರಣ’, ಆನಂದಕಂದರ ‘ಬುತ್ತಿಗೊಂಡು ಹೋಗ್ತೀನಿ ಹೊಲಕ’, ‘ನಮ್ಮೂರು ನಮಗ ಬಲುಪಾಡ’, – ‘ನಾ ಸಂತಿಗೆ ಹೋಗಿದ್ನಿ’ ಮೊದಲಾದ ಜಾನಪದ ಭಾವಗೀತಗಳನ್ನು ರೋಮಾಂಚಕಾರಿಯಾಗಿ ಜನಪ್ರಿಯಗೊಳಿಸಿದವರು, ‘ಜನಪದ ರತ್ನ’ ಎಂದೇ ಪ್ರಖ್ಯಾತರಾಗಿದ್ದ ಬಾಳಪ್ಪ ಹುಕ್ಕೇರಿ. ಆನಂದಕಂದರ ‘ಬಾಳಿದು ಕನಸಲ್ಲ ನೋವಿನ ತಿನಿಸಲ್ಲ ನನ್ನ ಹಿಗ್ಗಿನ ಹೊಸಲೋಕ’ – ಎಂಬ ಗೀತೆಯನ್ನು ಜನಪ್ರಿಯಗೊಳಿಸಿ, ತಾವೂ ಹೆಸರು ಮಾಡಿಕೊಂಡವರು ಇಂದುಮತಿ ಮುಂಡೇವಾಡಿ. ಗೌರೀಶ್‌ ಕಾಯ್ಕಿಣಿಯವರ ಗೀತರೂಪಕವನ್ನು ಬಹಳ ಸುಂದರ ಸುಗಮ ಧಾಟಿಯಲ್ಲಿ ಲೋಕಪ್ರಿಯಗೊಳಿಸಿದವರು. ಪಿ.ಆರ್.ಭಾಗವತ, ಎನ್ಕೆಯವರ ‘ಆಷಾಡದ ಪ್ರಥಮ ದಿನ, ಬೇಂದ್ರೆಯವರ ‘ಪಾವನ ಪರಂಪತೆ’, ಚೆನ್ನವೀರ ಕಣವಿಯವರ ‘ಯುಗಾದಿ’ ಮತ್ತು ‘ಎಳ್ಳುಬೆಲ್ಲ’ – ಗಣಪತಿರಾವ್ ಪಾಂಡೇಶ್ವರ ಅವರ ‘ಬಲಿವಾಮನ’ ಧಾರವಾಡ ಆಕಾಶವಾಣಿಯಲ್ಲಿ ಯುಗಾದಿ, ಸಂಕ್ರಾಂತಿ, ದೀಪಾವಳಿ ಗೀತ ರೂಪಕಗಳಲ್ಲಿ ಪಿ.ಆರ್. ಭಾಗವತ ಮತ್ತು ಅವರ ಸೋದರ ಸೊಸೆಯಾದ ಕುಮುದಿನಿ ಇಬ್ಬರೂ ಹಾಡಿ ಯಶಸ್ಸು ಪಡೆದಿದ್ದರು. ಉತ್ತರ ಕರ್ನಾಟಕದಲ್ಲೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರೇ ಸುಗಮಸಂಗೀತವನ್ನು ಜನಪ್ರಿಯತೆಯತ್ತ ಬೆಳೆಸಲು ಆಧಾರದ ಅಡಿಗಲ್ಲಾದರು. (ಮೈಸೂರು – ಬೆಂಗಳೂರು ಆಕಾಶವಾಣಿಗಳಲ್ಲಿ ಇದನ್ನು ಮೊದಲೇ ಗುರುತಿಸಲಾಗಿದೆ) ಶ್ರೋತೃಗಳಿಗೂ, ಕಲಾವಿದರಿಗೂ, ಕವಿಗಳಿಗೂ, ರಸ ಸೇತುವೆಯಂತೆ ಕೆಲಸ ಮಾಡಿದ ಆಕಾಶವಾಣಿ ಸುಗಮ ಸಂಗೀತವನ್ನು ಆತಂಕವಿಲ್ಲದಂತೆ ಮುನ್ನಡೆಸಿ ಬೆಳೆಸಿತು. ಗಿಡವಾಗಿ ಹುಟ್ಟಿ ಮಾಮರವಾಗಿ ಬೆಳೆದು ನೂರಾರು ಟಿಸಿಲು, ಟಸಿಲಾಗಿ ಒಡೆದ ‘ಸುಗಮಸಂಗೀತ’ ಸುತ್ತಲೂ ತನ್ನ ಹೂಗೊಂಚಲನ್ನು ಚಾಚಿತು. ಜನಪ್ರಿಯತೆಯನ್ನು ಬಾಚಿತು. ಮದರಾಸು ನಿಲಯದಿಂದ ಹಾಡುತ್ತಿದ್ದ ಜಯವಂತಿ ದೇವಿ ಹಿರೇಬೆಟ್, ಮುಂಬಯಿಯಿಂದ ಹಾಡುತ್ತಿದ್ದ ಬಿ.ಜಿ. ರಾಮನಾಥ್‌, ಬೆಂಗಳೂರಿನಿಂದ ಹೆಚ್.ಆರ್. ಲೀಲಾವತಿ, ಪಿ. ಕಾಳಿಂಗರಾವ್‌, ಎಂ.ಎನ್. ರತ್ನಾ, ಶ್ಯಾಮಲಾಭಾವೆ, ಎಚ್.ಕೆ. ನಾರಾಯಣ, ಸಿ.ಕೆ. ತಾರಾ, ಎನ್.ಕೆ. ವಸುಮತಿ, ಬಿ.ಕೆ. ಸುಮಿತ್ರಾ, ಶ್ಯಾಮಲಾ ಜಾಗಿರ್‌ದಾರ್, ಎಂ. ಪ್ರಭಾಕರ್, ಎನ್.ಎಸ್. ರಾಮನ್, ರತ್ನಮಾಲ ಪ್ರಕಾಶ್, ಮಾಲತಿಶರ್ಮ, ಕಸ್ತೂರಿ ಶಂಕರ್, ಎಂ.ಕೆ. ಜಯಶ್ರಿ, ಮುಂತಾದ ಅನೇಕ ಗಾಯಕ ಗಾಯಕಿಯರು ಸುಗಮಸಂಗೀತದ ಮಾಮರದಲ್ಲಿ ಕುಕಿಲುವ ಕೋಗಿಲೆಗಳಾದರು.

ಈ ಮಧ್ಯೆ ಬೆಂಗಳೂರಿನ ಪ್ರಭಾತ್ ಕಲಾವಿದರು ತಮ್ಮ ನೃತ್ಯ ನಾಟಕಗಳ ಮೂಲಕ, ಶ್ರಾವ್ಯವೂ, ನಯನಮನೋಹರವೂ ಆದ ಹೊಸ ಪ್ರಯೋಗಗಳಿಂದ ಗಮನಾರ್ಹವಾದ ಬೆಳವಣಿಗೆಯನ್ನು ತಂದರು. ಗೀತ ನೃತ್ಯ ನಾಟಕಗಳಲ್ಲಿ ಕವಿಗಳ ಕವಿತೆಗಳನ್ನು ಅಳವಡಿಸಿಕೊಂಡು ಹೊಸ ಹಾದಿಗೆ ತೋರಣ ಕಟ್ಟಿದರು. ಇವರ ಗೀತ ರೂಪಕಗಳಿಗೆ ಸಂಗೀತ ನೀಡುವ ಮೂಲಕ ಹೊಸ ತಾರೆಯೊಂದು ಉದಯವಾಯಿತು. ಅವರೇ ಮೈಸೂರು ಅನಂತಸ್ವಾಮಿ. ಅವರ ಸಂಗೀತ ಸಂಯೋಜನೆಯಲ್ಲಿ ಪ್ರಭಾತ್‌ಕಲಾವಿದರ ಗೀತ ರೂಪಕಗಳು ಹೊಸ ಆಯಾಮ ಪಡೆದವು. ವಸ್ತು, ರೀತಿ, ಶೈಲಿಗಳಲ್ಲಿ ವಿನೂತನವಾಗುತ್ತಲೇ, ಪೌರಾಣಿಕ ನಾಟಕಗಳಿಂದ ಸಾಮಾಜಿಕ – ಜಾನಪದ, ಐತಿಹಾಸಿಕ ಮತ್ತು ಮಕ್ಕಳ ನೃತ್ಯನಾಟಕಗಳವರೆಗೆ ಇದರ ಹರಹು ಹರಡಿತು. ಜನಪದ ಆಧಾರಿತ ಪುಣ್ಯಕೋಟಿ, ಕೆರೆಗೆ ಹಾರ, ಕುವೆಂಪು ಅವರ ಕಿಂದರ ಜೋಗಿ, ಪಾಶ್ಚಾತ್ಯ ಕಥೆಯ ಸಿಂಡ್ರೆಲಾ (ಮಕ್ಕಳ ಗೀತ ನೃತ್ಯ ನಾಟಕ) ಮುಂತಾಗಿ ಸುಮಾರು ಮೂವತ್ತೆಂಟು ರೂಪಕಗಳನ್ನು ಪ್ರಭಾತ್ ಸಂಸ್ಥೆ ರಂಗಕ್ಕೇರಿಸಿತು. ಹೊಸ ಹೊಸ ಸುಗಮಸಂಗೀತ ಗಾಯಕರು ಈ ಗೀತ ರೂಪಕಗಳಿಂದ ಬೆಳಕಿಗೆ ಬಂದರು. ಎಂ.ಕೆ. ಜಯಶ್ರೀ, ಪುಷ್ಪ ಜಗದೀಶ್, ಸುಲೋಚನ ವೆಂಕಟೇಶ್‌, ರತ್ನಮಾಲ ಪ್ರಕಾಶ್, ಮುಂತಾದ ಗಾಯಕರು ಮೈಸೂರು ಅನಂತಸ್ವಾಮಿಯವರ ಸಂಯೋಜನೆಗಳ ಮೂಲಕ ಜನಪ್ರಿಯರಾದರು.

M.S.I.L. ಗೀತೆಗಳು

೧೯೭೭ರ ನಂತರ ನವೋದಯ ಸಂಭ್ರಮ ಎಲ್ಲಾ ಗಾಯಕರ ಕೊರಳಲ್ಲೂ ಝೇಂಕರಿಸುತ್ತಿತ್ತು. ಹಳೆಯ ಮೈಸೂರಿನಲ್ಲಿ ಹೆಚ್.ಆರ್. ಲೀಲಾವತಿ, ಎಸ್.ಕೆ. ವಸುಮತಿ, ಪದ್ಮಚರಣ್ (ಸಂಗೀತ ಸಂಯೋಜಕರು) ಪಿ. ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಎಂ.ಕೆ. ಜಯಶ್ರೀ, ಧಾರವಾಡ ದತ್ತ, ಬಾಳಪ್ಪ ಹುಕ್ಕೇರಿ, ಭಾಗವತ, ಅನುರಾಧ ಧಾರೇಶ್ವರ್ ಮುಂತಾದವರು ರಸಿಕರ ಹೃದಯದಲ್ಲಿ ಸ್ಥಾಪಿತರಾಗಿದ್ದರು. ಭರಾಟೆಯಿಂದ ಹಬ್ಬುತ್ತಿದ್ದ ಭಾವಗೀತೆಗಳೋ ಧಾಪುಗಾಲನಿಕ್ಕುವಂತಹ ಸಂದರ್ಭ. ಆದರೆ ಹಿಂದಿ ಚಿತ್ರಗಳ ಸೆಳೆತದಿಂದ ತಪ್ಪಿಸಿಕೊಂಡು ಬರುವುದು ಅಷ್ಟು ಸುಲಭವಾಗಿರಲಿಲ್ಲ. ಸಾಲದ್ದಕ್ಕೆ ಹಿಂದಿಯ ಗಾಯಕರು ಮಹಾನ್ ಮೇರುಸ್ಥಿತಿಯಲ್ಲಿದ್ದವರು. ಈ ಪರಿಸ್ಥಿತಿಯಲ್ಲಿ ಕುವೆಂಪು, ಬೇಂದ್ರೆ, ನರಸಿಂಹಸ್ವಾಮಿ, ಶಿವರುದ್ರಪ್ಪ, ಮುಂತಾದ ಶ್ರೇಷ್ಠ ಕವಿಗಳು ಬರೆದಂತ ಹತ್ತಾರು ಹಾಡುಗಳು ಆದಾಗಲೇ ಪ್ರಸಿದ್ಧವಾಗಿದ್ದವು. ‘ಇಳಿದು ಬಾ ತಾಯಿ’, ‘ರಾಯರು ಬಂದರು’, ‘ಹೌದೇನೇ ಉಮಾ’, ‘ಅಳುವ ಕಡಲಲಿ’, ‘ಬಾಗಿಲೊಳು ಕೈಮುಗಿದು’, ಹೃದಯ ಕಮಲದಿ ಮಧುರ ಪ್ರೇಮ ಮಕರಂದ’, ಮುಂತಾದ ಭಾವಗೀತೆಗಳು ಸಾಹಿತ್ಯ ಸಂಗೀತ ಪ್ರಿಯರ ಹೃದಯಕ್ಕೆ ಆಗಲೇ ಲಗ್ಗೆ ಹಾಕಿದ್ದವು.

ಭರಾಟೆಯಿಂದ ಹಬ್ಬುತ್ತಿದ್ದ ಈ ಭಾವಗೀತೆಯ ಬಳ್ಳಿಗೆ ಒಂದು ಆಸರೆಯಾಗಿ ಒದಗಿ, ಅದನ್ನು ನಾಡಿನ ಎಲ್ಲ ದಿಕ್ಕಿಗೆ ಹಬ್ಬಿಸಿದ ಕೀರ್ತಿ, ಎಂ.ಎಸ್.ಐ.ಎಲ್. ಸಂಸ್ಥೆಯದು ಈ ಸಂಸ್ಥೆ ಬೆಂಗಳೂರು ಮತ್ತು ಧಾರವಾಡ ಆಕಾಶವಾಣಿ ವಾಣಿಜ್ಯ ಕೇಂದ್ರಗಳಿಂದ (ಸುಮಾರು ಮೂರು ವರುಷ) ಪ್ರತಿ ಬುಧವಾರ ಮೂರು ಮೂರು ಭಾವಗೀತೆಗಳನ್ನು ಎಂ.ಎಸ್.ಐ.ಎಲ್. ಗೀತೆಗಳು ಎಂಬ ಹೆಸರಿನಲ್ಲಿ ಪ್ರಸಾರ ಮಾಡಿತು. ಇವುಗಳಿಗೆ ಸಂಗೀತ ಸಂಯೋಜನೆ ಮಾಡಿದ ಮತ್ತು ಹಾಡಿದ ಪ್ರತಿಭೆಗಳು ಎಷ್ಟು ಉತ್ತಮ ಮಟ್ಟದಲ್ಲಿದ್ದವೆಂದರೆ ಒಂದು ವರ್ಷ ಕಳೆಯುವುದರೊಳಗಾಗಿ ಹಿಂದಿ ಚಿತ್ರಗೀತೆಗಳ ದಾಸರಾಗಿದ್ದ ಸಾವಿರಾರು ಕನ್ನಡ ರಸಿಕರು ಕನ್ನಡದ ಕವಿಶ್ರೇಷ್ಠರ ಭಾವ ಗೀತೆಗಳನ್ನು ಗುಣುಗುಣಿಸಲಾರಂಭಿಸಿದರು. ಇದಕ್ಕೂ ಮೊದಲು ಪ್ರತೀ ಬುಧವಾರ ವಾರ್ತೆಯ ಅನಂತರ ‘ಗೀತಲಹರಿ’ ಎನ್ನುವ ಶೀರ್ಷಿಕೆಯಲ್ಲಿ ಕನ್ನಡ ಚಲನಚಿತ್ರ ಗೀತೆಗಳು ಪ್ರಸಾರವಾಗುತ್ತಿತ್ತು. ಇದಕ್ಕೆ ಪ್ರೇರಣೆ ಎಂದರೆ ಶ್ರೀಲಂಕಾ ಬ್ರಾಡ್‌ಕಾಸ್ಟಿಂಗ್‌ನ ಬಿನಾಕಾ ಹಿಂದಿ ಚಿತ್ರಗೀತೆಗಳು. ಪೋಸ್ಟ್‌ಕಾರ್ಡಿನಲ್ಲಿ ಶ್ರೋತೃಗಳು ತಮಗೆ ಪ್ರಿಯವಾದ ಹಾಡುಗಳನ್ನು ಬರೆದು ಕಳಿಸಿದರೆ ಆಯ್ಕೆ ಪಟ್ಟಿಯಲ್ಲಿ ಆ ಹಾಡಿದ್ದರೆ, ಆ ಹಾಡು ಕಳಿಸಿದವರಿಗೆ ಬಹುಮಾನ ಕಳಿಸಲಾಗುತ್ತಿತ್ತು. ಸುಮಾರು ಒಂದೂವರೆ ವರುಷ ಹೀಗೆ ನಡೆದು ಹಳೆಯ ಹಾಡುಗಳನ್ನೇ ಮತ್ತೆ ಮತ್ತೆ ಕೇಳಿ ಬೇಸರವಾಗಿತ್ತು.

ಎಂ.ಎಸ್.ಐ.ಎಲ್. ಸಂಸ್ಥೆಯಲ್ಲಿ ‘ಗೀತಲಹರಿ’ ಯೋಜನೆಯ ಹೊಣೆ ಹೊತ್ತ ಜಯದೇವರು ಸಂಗೀತ-ಸಾಹಿತ್ಯ ಅಭಿರುಚಿಯುಳ್ಳವರಾಗಿದ್ದರು. ಮನೆಯಲ್ಲಿದ್ದ ಹಲವಾರು ಕನ್ನಡದ ಪುಸ್ತಕಗಳನ್ನು ಆಗಾಗ ಓದುವ ಹವ್ಯಾಸ ಅವರಿಗಿತ್ತು. ಅವರ ಸ್ನೇಹಿತ ಶ್ರೀನಿವಾಸಾಚಾರ್ ಮತ್ತು ಪ್ರಭಾತ್ ಕಲಾವಿದ ಜಗನ್ನಾಥ್ ಅವರ ನೆರವಿನೊಂದಿಗೆ (ಜಯಸಿಂಹದಾಸರ ಹಿರಿಯ ಮಗ) ‘ಗೀತಲಹರಿ’ಯ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದರು. ‘ಗೀತಲಹರಿ’ಯ ಧ್ವನಿ ಮುದ್ರಣ ಕಾರ್ಯವನ್ನು ಜಗನ್ನಾಥರು ವಹಿಸಿಕೊಂಡಿದ್ದರು. ಜಾಹೀರಾತುಗಳನ್ನು ತಯಾರಿಸಿಕೊಡುತ್ತಿದ್ದ ಜಗನ್ನಾಥರ ಪ್ರಭಾತ್ ಧ್ವನಿಮುದ್ರಣ ಕೇಂದ್ರ, ಕೋಣೆಯೊಳಗೆ ಆಗಷ್ಟೇ ಕಣ್ಣು ಬಿಟ್ಟಿತ್ತು.

‘ಗೀತಲಹರಿ’ಯ ಏಕತಾನತೆಯನ್ನು ಅಳಿಸಿ ಹಾಕಲು ‘ಭಾವಗೀತೆಗಳನ್ನು ಯಾಕೆ ಧ್ವನಿ ಮುದ್ರಿಸಿ ಪ್ರಸಾರಕ್ಕೆ ನೀಡಬಾರದು ಎಂದು ಈ ಮೂವರು ಗೆಳೆಯರು ಆಲೋಚಿಸಿ ತೀರ್ಮಾನಿಸಿದರು. ಆಗ ಮೈಸೂರು ಅನಂತಸ್ವಾಮಿಯವರದ್ದು ದೊಡ್ಡ ಹೆಸರಾಗಿತ್ತು. ಪ್ರಭಾತ್ ಸಂಸ್ಥೆಯವರಾಗಿ ತಮ್ಮ ಗೀತನೃತ್ಯ ರೂಪಕಗಳಲ್ಲಿ ಆದಾಗಲೇ ಅನೇಕ ಭಾವಗೀತೆಯನ್ನು ಬಳಸಿ ಯಶಸ್ಸನ್ನು ಗಳಿಸಿದ್ದ ಜಗನ್ನಾಥರು ತಮ್ಮ ಸಂಸ್ಥೆಯ ಕಲಾವಿದರೇ ಆಗಿದ್ದ ಅನಂತಸ್ವಾಮಿಯವರ ನೆರವಿನೊಂದಿಗೆ ‘ಭಾವಗೀತಾ’ ಧ್ವನಿಮುದ್ರಣದ ಯೋಜನೆಯನ್ನು ಹಾಕಿಕೊಂಡರು. ಮೈಸೂರು ಅನಂತಸ್ವಾಮಿಯವರ ಸಂಗೀತ ಸಂಯೋಜನೆಗೆ ಕವಿಗಳು ಹಾತೊರೆಯುವ ಕಾಲವದಾಗಿತ್ತಾದ್ದರಿಂದ ಎಲ್ಲ ಕವಿಗಳ ಅನುಮತಿ ತಕ್ಷಣವೇ ದೊರೆಯಿತು. ಒಂದು ಹಾಡಿನ ಪ್ರಸಾರಕ್ಕೆ ಕವಿಗಳಿಗೆ ೨೫ ರೂ.ಗಳನ್ನು ಕೊಡುವ ಒಪ್ಪಂದವಾಯಿತು. ಆಗಿನ ಕಾಲದಲ್ಲಿ ಇದು ನಂಬುವುದಕ್ಕೆ ಸಾಧ್ಯವಾಗದ ಸಂಗತಿಯಾಗಿತ್ತು. ಸಂಭಾವನೆಯೇ ಕೊಡದ ಕಾಲದಲ್ಲಿ ಇಪ್ಪತ್ತೈದು ರೂಪಾಯಿಗಳು ಹೆಚ್ಚು ಮೌಲ್ಯವುಳ್ಳದ್ದಾಗಿತ್ತು. ಗಾಯಕರು ಸಂಯೋಜಕರಿಗೆ ದಿನಕ್ಕೆ ನಾಲ್ಕು ಅಥವಾ ಆರು ಹಾಡು ಮಾಡಿಕೊಡುವ ಒಪ್ಪಂದವಾಯ್ತು. ಈ ಕಾರ್ಯಕ್ರಮ ಜನಪ್ರಿಯವಾಗುತ್ತಿದ್ದಂತೆ, ಸಿ.ಅಶ್ವಥ್‌, ಚಂದ್ರಶೇಖರ ಕಂಬಾರ, ಪರ್ವತವಾಣಿ, ಶ್ಯಾಮಲಭಾವೆ ಹೀಗೆ ದಿನದಿಂದ ದಿನಕ್ಕೆ ಕಲಾವಿದರ ಸೇರ್ಪಡೆಯಾಗುತ್ತಲೇ ಹೊಸ ಹೊಸ ಆಯಾಮ ಪಡೆದುಕೊಳ್ಳುತ್ತಿತ್ತು. ಕವಿ ಲಕ್ಷ್ಮೀನಾರಾಯಣ ಭಟ್ಟರು ಜಯದೇವ ಅವರಿಗೆ ಸಾಹಿತ್ಯ ಸಲಹೆಗಾರರಾಗಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸಿ.ಆರ್.ಸಿಂಹ, ಆರ್.ನಾಗೇಶ್, ಒಮ್ಮೊಮ್ಮೆ ಲಕ್ಷ್ಮೀ ನಾರಾಯಣ ಭಟ್ಟ ಅವರೂ ಮಾಡುತ್ತಿದ್ದರು. ಕುವೆಂಪು, ಬೇಂದ್ರೆ ಮುಂತಾದ ಕವಿಗಳ ಹಾಡುಗಳೂ ಧ್ವನಿಮುದ್ರಿತವಾದವು. ಕವಿಗಳು ಅವರ ಕವಿತೆಯನ್ನು ಓದುವುದು ಗಾಯಕರು ಆ ಕೂಡಲೆ ಆ ಹಾಡನ್ನು ಹಾಡುವುದು. ಇದು ಪರಿಪಾಠವಾಗಿತ್ತು. ಕವಿಗಳು ಹೆಸರನ್ನು ಹೇಳಿ ಅವರಿಂದ ಎಂ.ಎಸ್.ಐ.ಎಲ್. ಗೀತೆಗಳು ಎಂದು ಪ್ರಸಾರವಾಗುತ್ತಿತ್ತು.

ಸುಮಾರು ಎರಡುವರ್ಷ ಪು.ತಿ.ನ. ರಾಜರತ್ನಂ, ಅಡಿಗ, ಮುಂತಾದ ಎಲ್ಲ ಕವಿಗಳ ಗೀತೆಗಳೂ ಈ ಸ್ಥಾನವನ್ನು ಅಲಂಕರಿಸಿದವು. ಹೊಸತನ ಬೇಕೆನಿಸಿತು. ಆಗ ತರಿಕೆರೆ ಲಿಂಗಪ್ಪನವರಿಂದ ಜಾನಪದ ಗೀತೆಗಳನ್ನು ಹಾಡಿಸಲಾಯಿತು. ಗೋವಿನ ಹಾಡು, ಕೆರೆಗೆ ಹಾರ, ಕೈಲಾಸಂ ಗೀತೆಗಳು, ನೋಡಿದ್ರಾ ನಂ ನಂಜೀನ, ನಮ್‌ತಿಪ್ಪಾರಳ್ಳೀ ಬಲುದೂರ, ಕೋಳೀಕೆರಂಗ, ಮುಂತಾದ ಹಾಡುಗಳೆಲ್ಲಾ ಏಕತಾನತೆಯನ್ನು ನೀಗಿಸಲು ಹೊಸದಾಗಿ ಬಂದು ಸೇರಿದವು.

ಈ ಮಧ್ಯೆ ಉದಯವಾಣಿ ದಿನಪತ್ರಿಕೆಯಲ್ಲಿ ಕಾಳಿಂಗರಾಯರ ಬಗೆಗೆ ಒಂದು ಲೇಖನ ಬಂದಿತು. ‘ಕನ್ನಡದ ಕೋಗಿಲೆಯ ಕಣ್ಣಲ್ಲಿ ನೀರು’ ಎನ್ನುವ ಶೀರ್ಷಿಕೆಯಲ್ಲಿ ಕಾಳಂಗರಾಯರು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಗೆಗೆ ತಿಳಿಸಲಾಗಿತ್ತು. ಜಯದೇವ್‌ ಅವರು ಕಾಳಿಂಗರಾಯರನ್ನು ಭೇಟಿಮಾಡಿ ಸ್ಟುಡಿಯೋಗೆ ಕರೆದುಕೊಂಡು ಬರುವಂತೆ ಲಕ್ಷ್ಮೀನಾರಾಯಣ ಭಟ್ಟರಿಗೆ ದುಂಬಾಲು ಬಿದ್ದರು. ಸ್ಟುಡಿಯೋಗೆ ಬಲು ಕಷ್ಟದಿಂದಲೇ ಬಂದ ಕಾಳಿಂಗರಾಯರಿಂದ ಎರಡು ಮಾತನಾಡಿಸಿ ಅದನ್ನೇ ಧ್ವನಿಮುದ್ರಿಸಿ, ಹಿಂದೆ ಅವರು ಹಾಡಿದ ಹಾಡನ್ನೇ ಮತ್ತೇ ಪ್ರಸಾರ ಮಾಡಿ ಸಂಭಾವನೆಯ ರೂಪದಲ್ಲಿ ನಿಯಮಕ್ಕಿಂತಾ ಹೆಚ್ಚು ಹಣವನ್ನು ಕೊಟ್ಟರು.

ಎಂ.ಎಸ್.ಐ.ಎಲ್. ಕಾರ್ಯಕ್ರಮದ ಮೂಲಕ ಹತ್ತಾರು ಮಂದಿ ಹೊಸ ಗಾಯಕರು ಬಂದರು. ರತ್ನಮಾಲಾ, ಬಿ.ಕೆ. ಸುಮಿತ್ರ, ಕಸ್ತೂರಿ ಶಂಕರ್, ಶಿವಮೊಗ್ಗ ಸುಬ್ಬಣ್ಣ, ಮಾಲತಿ, ಪುಷ್ಪಾ ಜಗದೀಶ್, ಟಿ.ಆರ್. ಶ್ರೀನಿವಾಸನ್, ಜಯಪಾಲ್, ಮುಂತಾದ ಗಾಯಕರು ಪ್ರಕಾಶಮಾನಕ್ಕೆ ಬಂದರು. ಎಂ.ಎಸ್.ಐ.ಎಲ್. ತನ್ನ ಹೆಸರನ್ನು ಪ್ರಸಿದ್ಧಿಗೊಳಿಸಲು ಒಂದು ಜಾಹೀರಾತಿನ ತಂತ್ರವಾಗಿ ಆರಂಭಿಸಿದ ಈ ಯೋಜನೆ ಒಂದು ಹೊಸ ಸಂಸ್ಕೃತಿಯನ್ನು ಒಂದು ಗಾಯನ ಕಲಾ ಪ್ರಕಾರವನ್ನು ಬೆಳಕಿಗೆ ತಂದಿತು. ತಾನೂ ಬೆಳಗಿ ಇತರರನ್ನೂ ಬೆಳಗಿಸಿತು.

ಅದೇ ಸಂಸ್ಥೆಯ ಎಚ್.ಜಯದೇವ್‌ ಅವರ ಸದಭಿರುಚಿ, ದೂರದೃಷ್ಟಿ, ನಿಸ್ವಾರ್ಥ ಸೇವೆಗಳಿಂದ ಒಂದು ಜನಪ್ರಿಯ ಸಂಗೀತ ಪ್ರಕಾರ ಪ್ರಸಿದ್ಧಿಗೆ ಬಂದಿತು.

ಈ ಕಾರ್ಯಕ್ರಮ ನಡೆಯುತ್ತಿದ್ದ ಅವಧಿಯಲ್ಲಿಯೇ ಕವಿ ಲಕ್ಷ್ಮೀನಾರಾಯಣ ಭಟ್ಟರು ಶಿಶುನಾಳ ಷರೀಫರು ಎರಡು ಗೀತೆಗಳನ್ನು ಅಶ್ವಥ್‌ ಅವರಿಗೆ ನೀಡಿ ಷರೀಫರ ವ್ಯಕ್ತಿತ್ವದ ಬಗ್ಗೆ, ಪದ್ಯಗಳ ಬಗ್ಗೆ ತಿಳಿಸಿ, ಆ ಎರಡು ಗೀತೆಗಳಿಗೆ ರಾಗಸಂಯೋಜಿಸಲು ಕೊಟ್ಟರು. ‘ತರವಲ್ಲ ತಗಿ ನಿನ್ನ ತಂಬೂರಿ’, ‘ಅಳಬೇಡ ತಂಗಿ’ ಎಂಬ ಎರಡೂ ಗೀತೆಗಳೂ ಅದ್ಭುತವಗಿ ಸಂಯೋಜಿಸಲ್ಪಟ್ಟು ಅಶ್ವಥ್‌ ಮತ್ತು ಶಿವಮೊಗ್ಗ ಸುಬ್ಬಣ್ಣ ಅವರ ಕಂಠದಲ್ಲೇ ಜನಪ್ರಿಯವಾಯಿತು. ೧೯೮೦ರಲ್ಲಿ ಜಯದೇವ್ ಸಂಸ್ಥೆಯನ್ನು ಬಿಟ್ಟಾಗ ಎಂ.ಎಸ್.ಐ.ಎಲ್. ಗೀತೆಗಳೂ ಅದರೊಂದಿಗೆ ನಿಂತುಹೋದವು.

* * *