ಎಂ.ಎಸ್.ಐ.ಎಲ್‌.ನಿಂದ ಭಾವಗೀತೆಗಳ ಬೆಳೆ ಹುಲುಸಾಯಿತು. ಮನೆ ಮನೆಯಲ್ಲೂ ರೇಡಿಯೋ ಕಾರ್ಯಕ್ರಮಗಳೇ ಮಾತಿಗೆ ಗ್ರಾಸವಾಗಿದ್ದವು. ಯಾವುದೇ ಹೊಸತನವಾಗಲಿ, ಹಬ್ಬ ಸಂದರ್ಭವಾಗಲಿ, ಆಕಾಶವಾಣಿಯ ಮೂಲಕವೇ ವ್ಯಕ್ತವಾಗುತ್ತಿತ್ತು. ಬುಧವಾರದ ಕಾರ್ಯಕ್ರಮಕ್ಕೋಸ್ಕರ ರೇಡಿಯೋವಿಗೆ ಕಿವಿಯಿಟ್ಟು ಕಾಯುವ ಸರದಿ ಕವಿಗಳದ್ದೂ ಆಗಿತ್ತು. ಹಾಡುವರದ್ದೂ ಆಗಿತ್ತು. ಶ್ರೋತೃಗಳದ್ದೂ ಆಗಿತ್ತು. ಎಂ.ಎಸ್.ಐ.ಎಲ್.ಗಾಗಿ ಧ್ವನಿ ಮುದ್ರಿಸಿದ ಗೀತೆಗಳಲ್ಲಿ ನಿಸಾರರ, ‘ಕುರಿಗಳು ಸಾರ್ ಕುರಿಗಳು’, ಬೆಣ್ಣೆ ಕದ್ದ ನಮ್ಮ ಕೃಷ್ಣ, ಎಲ್ಲ ಮರೆತಿರುವಾಗ, ಮುಂತಾದ ಗೀತೆಗಳು ಜನಪ್ರಿಯವಾಗಿದ್ದವು. ಇವುಗಳನ್ನು ಧ್ವನಿಸುರುಳಿಯಲ್ಲಿ ಹಿಡಿದಿಟ್ಟುಕೊಳ್ಳುವ ಕೆಲಸ ಮಾಡಿದವರು ಕವಿ ನಿಸಾರ್ ಅಹಮದ್ ಮತ್ತು ಸಂಗೀತ ಸಂಯೋಜಕ ಮೈಸೂರು ಅನಂತಸ್ವಾಮಿ.

ಅರವತ್ತರ ದಶಕದ ಕೊನೆಯಲ್ಲಿ ನಾಲ್ಕು ನವ್ಯ ಕಾವ್ಯ ಸಂಕಲನಗಳನ್ನು ಹೊರತಂದು ಕೆಲವು ಪ್ರಯೋಗಶೀಲ ಪ್ರಯತ್ನಗಳನ್ನು ಮಾಡಿದ ನಿಸಾರರು ಬಳಿಕ ಭಾವಗೀತೆಗಳ ರಚನೆಗೆ ಕಯ ಹಾಕಿದರು. ಅವರೇ ಹೇಳಿರುವಂತೆ ಕನ್ನಡ ಕಾವ್ಯ ಜಗತ್ತಿನ ಮೋಜುಗಳಲ್ಲಿ ಒಂದು ವೈಚಾರಿಕತೆಯ ದೊಂಬರಾಟ, ಪೆಡಸುಗಳಿಂದ ಗತಿಗೇಡಿಯಾಗುತ್ತಿದ್ದ ಕಾವ್ಯಕ್ಕೆ, ಮತ್ತೊಮ್ಮೆ ಗೇಯತೆ, ಭಾವಗೀತಾತ್ಮಕತೆಯ ಮಂತ್ರಸ್ಪರ್ಶ ಅಗತ್ಯವೆಂಬ ಅರಿವು ಅವರಲ್ಲುಂಟಾಯಿತು. ಅದು ಉತ್ಕಟಗೊಂಡಿತು. ಜನಪದದಿಂದ ಗಾವುದ ದೂರ ಸಿಡಿದು ಯೂನಿವರ್ಸಿಟಿ ಕಾಲೇಜು ವಲಯಗಳಲ್ಲಿ ತೊಂಡಲೆಯುವ ಕಾವ್ಯ ಮರಳಿ ಜನಪದ ಧೋರಣೆಯನ್ನು ಮೈಗೂಡಿಸಿಕೊಂಡು ಸಮಾಜದ ಬೇರೆ ಬೇರೆ ಪದರುಗಳತನಕ ವ್ಯಾಪಿಸಬೇಕಾದ ಅಗತ್ಯ ತೋರಿಬಂದಿತ್ತು. ನಾಟಕೀಯತೆ, ವೈಯಕ್ತಿಕ ಸಂಕೇತ ಪ್ರತಿಮೆಗಳ ಭಾರದಿಂದ ಬಿಡುಗಡೆಗೊಂಡು ಮುಕ್ತ ವಿಲಾಸದಲ್ಲಿ ನಲಿಯುವ ಅರ್ಥ ಸಮೃದ್ಧ ಗೇಯ ಕವಿತಾ ರಚನೆ ಮತ್ತೊಮ್ಮೆ ಮೆರೆಯಬೇಕಿತ್ತು. ಈ ಕಾರಣಕ್ಕಾಗಿ ‘ನಿತ್ಯೋತ್ಸವ’ ಗೀತಸಂಕಲನವನ್ನು (೧೯೭೬) ಪ್ರಕಟಿಸಿದರು. ನಿತ್ಯೋತ್ಸವ ಗೀತಸಂಕಲನ ಹೀಗೆ ನವ್ಯ ಮಾರ್ಗದಿಂದ ಗೇಯಮಾರ್ಗಕ್ಕೆ ಸಾಹಿತ್ಯವನ್ನು ತಂದಿತು. ಶಾಸ್ತ್ರೀಯ ಸಂಗೀತ ಮಾರ್ಗದಿಂದ ಸುಗಮ ಮಾರ್ಗಕ್ಕೆ ಭಾವಗೀತೆಯನ್ನು ಎಳೆತಂದಿತು.

ಏಕತಾನತೆಯಿಂದ ತಲ್ಲಣಿಸುತ್ತಿದ್ದ ನವ್ಯಕಾವ್ಯ ಮಾರ್ಗಕ್ಕೆ ಹೊಸದಿಗಂತವನ್ನು ತೋರಿಸಿ ಗೇಯತೆಯ ಸ್ಪರ್ಶವನ್ನು ಮಾಡಿಸಿದ ಕೀರ್ತಿ ನಿಸಾರರಿಗೆ ಸಲ್ಲುತ್ತದೆ. ಸಾಹಿತ್ಯ ವಲಯದಲ್ಲಿ ಕವಿತೆಯ ಶೈಲಿ ಸರಳವೂ ಮನೋಹರವೂ ಆದಂತೆ, ಸಂಗೀತ ಪದ್ಧತಿಯಲ್ಲೂ ಕವಿತಾ ಗಾಯನ, ಸರಳ ಸುಂದರವಾದ ಸಂಗೀತ ಶೈಲಿಯಾಗಲು ನಿಸಾರರಿಗಿದ್ದ ಘಜಲ್ ಸಂಗೀತದ ತುಡಿತವೇ ಕಾರಣವಾಯಿತು. ಗುಲಾಂಆಲಿ, ಮೆಹಂದಿಹಸನ್, ತಲತ್‌ ಮಹಮೂದ್, ಪಂಕಜ್ ಉದಾಸ್, ಚಿತ್ರಾಸಿಂಗ್, ಜಗದೀಪ್‌ಸಿಂಗ್ ಮುಂತಾದವರ ಘಜಲ್ ಗಾಯನದಿಂದ ಪ್ರಭಾವಿತರಾಗಿದ್ದ ನಿಸಾರರಿಗೆ ಕನ್ನಡದಲ್ಲಿ ಈ ತೆರನಾದ ಕವಿತೆ ಏಕೆ ಬರೆಯಬಾರದು ಎಂಬ ಹಠ ಬಂದಿತು. ತಲತ್ ಮಹಮೂದ್ ಹಾಡಿದ ಫಿರ್‌ವಹೀ ಶ್ಯಾಮ್ ಘಜಲ್ ನಿಸಾರ್‌ರ ಪ್ರಿಯಗೀತೆಯಾಗಿತ್ತು. ಆ ಘಜಲ್‌ನ ಮೊದಲನೇ ಸಾಲನ್ನಿಟ್ಟುಕೊಂಡು ‘ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ’, ಎಂದು ಕನ್ನಡಕ್ಕೆ ಅನುವಾದ ಮಾಡಿದರು. ಆಗಷ್ಟೇ ಎಲ್.ಪಿ.ಗಳ ಭರಾಟೆ ಹುಚ್ಚು ಹೊಳೆಯಂತೆ ಹರಿಯುತ್ತಿತ್ತು. ಹಿಂದಿ ಭಾಷೆಯ ಕ್ಯಾಸೆಟ್ ಪ್ರಾರಂಭವಾಗಿ ಮಾರಾಟವಾಗುತ್ತಿತ್ತು. ಘಜಲ್ ಗಾಯಕರ ಧ್ವನಿಸುರಳಿಗಳಿಂದ ಪ್ರಭಾವಿತರಾಗಿ ನಿಸಾರ್‌ ಅವರಿಗೆ ಕನ್ನಡದಲ್ಲೂ ಅದನ್ನು ತರಬಾರದೇಕೆ ಎಂಬ ಮನಸ್ಸಾಯಿತು. ಆಗ ಈಗಿನಂತೆ ಕ್ಯಾಸೆಟ್ ತಯಾರಿಕೆಯ ಸಂಸ್ಥೆಗಳಾಗಲಿ, ಅದನ್ನು ಧ್ವನಿಮುದ್ರಿಸುವ ಸ್ಟುಡಿಯೋಗಳಾಗಲಿ ಇರಲಿಲ್ಲ. ಬೆಂಗಳೂರಿನಲ್ಲಿದ್ದ ಪ್ರಭಾತ್ ಕಲಾವಿದರು ತಮ್ಮ ಸ್ವಂತ ಅಗತ್ಯ ಕೆಲಸಗಳಿಗಾಗಿ ರೇಡಿಯೋಗೆ ಮಾಡಿಕೊಡುತ್ತಿದ್ದ ಸಣ್ಣಪುಟ್ಟ ಧ್ವನಿಮುದ್ರಣ ಕಾರ್ಯಕ್ರಮಗಳಿಗಾಗಿ ಕೇವಲ ಪ್ರಾರಂಭಿಕ ಸೌಲಭ್ಯಗಳನ್ನು ಒಳಗೊಂಡ ಸ್ಟುಡಿಯೋ ಒಂದನ್ನು ಹೊಂದಿದ್ದರು. ಧ್ವನಿಮುದ್ರಣದ ಜವಾಬ್ದಾರಿ ಪ್ರಭಾತ್ ಸಂಸ್ಥೆಯ ಜಗನ್ನಾಥ್‌ ಅವರದ್ದಾಗಿತ್ತು. ನಿಸಾರರು ಕನ್ನಡದ ಕವಿತೆಗಳನ್ನೊಳಗೊಂಡ ಧ್ವನಿಸುರುಳಿಯನ್ನು ತಯಾರಿಸುವ ಕನಸು ಹೊತ್ತು ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ಹೋಗುತ್ತಾ, ಕಡೆಗೂ ಧ್ವನಿಸುರುಳಿಯನ್ನು ತಯಾರು ಮಾಡುವ ನಿರ್ಧಾರ ತೆಗೆದುಕೊಂಡರು ಎಂದೂ ಸಾಹಿತ್ಯದ, ಸಂಗೀತದ, ಗುಣಮಟ್ಟವನ್ನು ಕಾಪಾಡಿಕೊಂಡು ಬರುತ್ತಿದ್ದ ನಿಸಾರರು ಮೊದಲು ತಮ್ಮ ಧ್ವನಿಸುರುಳಿ ಹೇಗಿರಬೇಕೆಂದು ರೂಪುರೇಖೆ ಹಾಕಿಕೊಂಡರು. ಮೊದಲನೆಯದಾಗಿ ಸಿನಿಮಾದ ದಾಂಧಲೆಗಳಿಂದ ವಿಮುಕ್ತವಾಗಿದ್ದು, ಒಳ್ಳೆಯ ಸಾಹಿತ್ಯಗುಣದಿಂದ ಕೂಡಿದ್ದು, ಎಲ್ಲರೂ ಕುಳಿತು ಕೇಳುವಂತಹ ಸಾಹಿತ್ಯ ಶಕ್ತಿಯುಳ್ಳದ್ದಾಗಿರಬೇಕು. ಶಾಸ್ತ್ರೀಯ ಸಂಗೀತದ ಆಲಾಪಗಳು ಸಂಗೀತದ ಪೆಡಸುಗಳಿಂದ ದೂರವಿರಬೇಕೆಂದು ತೀರ್ಮಾನಿಸಿದರು. ಸುಮಾರು ಇಪ್ಪತ್ತೈದು ಹಾಡುಗಳನ್ನು ಆರಿಸಿಕೊಂಡು ಮೈಸೂರು ಅನಂತಸ್ವಾಮಿಯವರ ಸಂಯೋಜನೆಯ ಉತ್ಕೃಷ್ಟ ಕವಿತೆಗಳನ್ನು ಆರಿಸಿಕೊಂಡರು. ತಮ್ಮ ಗೆಳೆಯ ರಾಮಸ್ವಾಮಿ ಮತ್ತು ಬಿ.ಕೆ. ಪಾರ್ಥಸಾರಥಿಯವರೊಂದಿಗೆ ಸಮಾಲೋಚಿಸಿ ಬ್ಯಾಂಕಿನಿಂದ ಸಾಲ ತೆಗೆದು ನಿತ್ಯೋತ್ಸವ ಕ್ಯಾಸೆಟ್‌ನ ಧ್ವನಿಮುದ್ರಣಕ್ಕೆ ಅನಂತಸ್ವಾಮಿಯವರನ್ನು ಒಪ್ಪಿಸಿದರು. ಎ.ಎಸ್.ಮೂರ್ತಿ ಮತ್ತು ವಿಜಯ ಅವರ ವಶೀಲಿಯಿಂದ ಬ್ಯಾಂಕಿನಲ್ಲಿ ಸಾಲ ದೊರೆತು, ಕ್ಯಾಸೆಟ್ ತಯಾರಾಯಿತು. ೧೯೭೮ರ ನವೆಂಬರ್ ತಿಂಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವೇದಿಕೆಯಲ್ಲಿ ಕವಿ ಕೆ.ಎಸ್. ನರಸಿಂಹಸ್ವಾಮಿಯವರಿಂದ ನಿತ್ಯೋತ್ಸವ ಧ್ವನಿಸುರುಳಿ ಬಿಡುಗಡೆಗೊಂಡಿತು. ಅಂದು ಮಂತ್ರಿಯಾಗಿದ್ದ ಕೆ.ಎಚ್. ಶ್ರೀನಿವಾಸ್ ಅವರು ಮುಖ್ಯ ಅತಿಥಿಯಾಗಿ ಬಂದಿದ್ದು, ಕವಿ ಗೋಕಾಕ ಧ್ವನಿಸುರುಳಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕನ್ನಡದ ಮೊದಲನೆಯ ಸುಗಮಸಂಗೀತದ, ಪ್ರಾಯಾಶಃ ಭಾರತೀಯ ಭಾಷೆಯಲ್ಲೇ, ಕವಿತಾ ಸಂಗ್ರಹವೊಂದರಿಂದ ಆರಿಸಿದ ರಚನೆಗಳನ್ನೊಳಗೊಂಡ ಚೊಚ್ಚಲ ಧ್ವನಿಸುರುಳಿ ಬಿಡುಗಡೆಯಾಯಿತು. ರಚನಾರಾವ್ ಎಂಬುವವರು ಮುಂಬಯಿನಿಂದ ಬೆಂಗಳೂರಿಗೆ ಬಂದು ಜಾಹೀರಾತು ಕಂಪನಿಯನ್ನು ನಡೆಸುತ್ತಿದ್ದರು. ಡಾ. ವಿಜಯಾ ಅವರ ಮೂಲಕ ನಿಸ್ಸಾರ್ ಅವರಿಗೆ ರಚನಾರಾವ್ ಅವರ ಪರಿಚಯವಾಯಿತು. ನಿತ್ಯೋತ್ಸವ ಧ್ವನಿಸುರುಳಿಯ ಬಗೆಗೆ ಪ್ರಜಾವಾಣಿ ಮತ್ತಿತರರ ಪತ್ರಿಕೆಗಳಲ್ಲಿ ಪ್ರಚಾರಕೊಟ್ಟು ನಿತ್ಯೋತ್ಸವ ಧ್ವನಿಸುರುಳಿಯ ಪ್ರಸರಣಕ್ಕೆ ರಚನಾರಾವ್ ನೆರವಾದರು. ಅದು ಬಹುದೊಡ್ಡ ಉಪಕಾರವಾಯಿತು. ಆಗ ಸ್ಪೂಲ್ ಟೇಪ್ ರೆಕಾರ್ಡಿಂಗ್‌ನಲ್ಲಿ ಧ್ವನಿಮುದ್ರಣವಾದ ನಿತ್ಯೋತ್ಸವ ಧ್ವನಿಸುರುಳಿ ಡಬ್ ಆಗಬೇಕಾದರೆ ಮೂಲದಲ್ಲಿದ್ದ ಸಮಯವೇ ಬೇಕಾಗುತ್ತಿತ್ತು. ಒಂದು ಧ್ವನಿಸುರುಳಿ ಎಷ್ಟು ನಿಮಿಷ ಧ್ವನಿಮುದ್ರಣವಾಗಿದೆಯೋ, ಅದನ್ನು ಡಬ್ ಮಾಡಬೇಕಾದಾಗಲೂ ಅಷ್ಟು ಸಮಯ ಬೇಕಾಗುತ್ತಿತ್ತು. ದಿವಸಕ್ಕೆ ೧೦ ರಿಂದ ೧೫ ಧ್ವನಿಸುರುಳಿಗಳನ್ನು ಬಹಳ ಕಷ್ಟದಿಂದ ಡಬ್ ಮಾಡಬಹುದಿತ್ತು. ಅದರ ಬೆಲೆಯೂ ೭೫ ರೂ.ಗಳಷ್ಟು ತೆರಬೇಕಾಗಿತ್ತು. ಕೊಂಡುಕೊಳ್ಳುವ ಜನರಿಗೆ ಕ್ಯಾಸೆಟ್ ಎನ್ನಲು ತಿಳಿಯದೆ ಕ್ಯಾಸ್ಕೆಟ್ ಇದೆಯೇ ಎಂದು ಕೇಳತೊಡಗಿದರು. ಧ್ವನಿಸುರುಳಿಗಾಗಿ ಹೆಸರನ್ನು ಮುಂಗಡವಾಗಿ ಸಾಲಿನಲ್ಲಿ ನಿಂತು ಕಾದು ಬರೆಯಿಸುವವರೂ ಇದ್ದರು. ರವೀಂದ್ರ ಸ್ಟೋರ್ಸ್, ಗಾಂಧಿಬಜಾರ್‌ನಲ್ಲಿ ಧ್ವನಿಸುರುಳಿಗಾಗಿ ಜನ ಮುಗಿಬೀಳುತ್ತಿದ್ದರು. ನಿತ್ಯೋತ್ಸವ ಕ್ಯಾಸೆಟ್ ಇದೆಯೇ? ಸಾರ್? ಎಂದು ಜನ ಬಂದು ಕೇಳಿ ಮುಂಗಡವಾಗಿ ಕಾದಿರಿಸಿ ತೆಗೆದುಕೊಂಡು ಹೋಗುತ್ತಿದ್ದರು. ಎಡೆಬಿಡದೆ ಒತ್ತಡದಿಂದ ಬೇಸತ್ತ ನಿಸಾರರಿಗೆ ಈ ಕೆಲಸದಿಂದ ವಿಮುಕ್ತಿ ನೀಡಿದವರು ಆಗ ಐ.ಬಿ.ಹೆಚ್‌.ನಲ್ಲಿದ್ದ ಜಿ.ಕೆ. ಅನಂತರಾಮ್ ಅವರು ಅಮರ್‌ನಾಥ್ ಸಂಸ್ಥೆಗೆ ಈ ಧ್ವನಿಸುರುಳಿಯ ಮಾರಾಟದ ಹಕ್ಕನ್ನು ನೀಡಲು ಸಲಹೆ ಕೊಟ್ಟರು. ಅಮರನಾಥ್‌ಮಾರಾಟದ ಹಕ್ಕನ್ನು ತೆಗೆದುಕೊಂಡ ಮೇಲೆ ನಿಸಾರರು ನೆಮ್ಮದಿಯಿಂದ ಉಸಿರಾಡುವಂತಾಯಿತು. ಅಲ್ಲಿಯವರೆಗೆ ಅವರೆ ಕ್ಯಾಸೆಟ್ ಡಬ್ ಆಗಲು ಶ್ರಮಿಸಿ ಶ್ರಮಿಸಿ ಸೊರಗಿ ಹೋಗಿದ್ದರು. ಅಮರ್‌ನಾಥ್ ಸಂಸ್ಥೆ ಸಾವಿರಾರು ಕ್ಯಾಸೆಟ್‌ಗಳ ಮಾರಾಟ ಮಾಡಿ ದಾಖಲೆಯನ್ನು ನಿರ್ಮಿಸಿತು. ನಿತ್ಯೋತ್ಸವ ಕ್ಯಾಸೆಟ್‌ ಬಿಡುಗಡೆಯಾಗುತ್ತಲೆ, ಹಲವು ಹೊಸ ಆಸಕ್ತಿ ಕಲೆ, ಕಲಾವಿದರನ್ನು, ಸಾಹಿತ್ಯದ ಹೊಸಮಾರ್ಗವನ್ನು ಒಮ್ಮೆಲೆ ಬಿಡುಗಡೆ ಮಾಡಿತು. ಕವಿ, ಸಂಯೋಜಕ, ಗಾಯಕರ ತ್ರಿವೇಣಿ ಸಂಗಮದ ನವಪರಂಪರೆಯ ಸಂಸ್ಕೃತಿಯ ನಿರ್ಮಾಣಕ್ಕೆ ಅಡಿಪಾಯ ಹಾಕಿಕೊಟ್ಟಿತು. ಆನಂತರ ಸಂಗೀತ ‘ನಾದಲಹರಿ-ಲಹರಿ’ ಮುಂತಾದ ಅನೇಕ ಕ್ಯಾಸೆಟ್ ಸಂಸ್ಥೆಗಳು ಪ್ರಾರಂಭವಾಗಿ ಧ್ವನಿಸುರುಳಿಗಳು ವರ್ಷಧಾರೆಯಾಗಿ ಸುರಿದು ಹರಿಯಿತು.

ನಿತ್ಯೋತ್ಸವ ಕ್ಯಾಸೆಟ್ ಬಂದ ಮೇಲೆ ಸುಗಮಸಂಗೀತದ ದಾರಿ ಸುಗಮವಾಗಿ ಹಲವಾರು ದಾರಿಗಳಾಗಿ ಸಾಗಿ ತನ್ನ ವಿಸ್ತೀರ್ಣವನ್ನು ಹತ್ತುಪಟ್ಟು ನೂರುಪಟ್ಟು ಹೆಚ್ಚಿಸಿಕೊಂಡಿತು. ಹತ್ತಾರು ಗಾಯಕರು ದಿನ ಬೆಳಗಾಗುವುದರಲ್ಲಿ ಕೇಳುಗರ ಕಣ್ಮಣಿಗಳಾದರು. ಜೋಗದ ಸಿರಿ ಬೆಳಕಿನಲ್ಲಿ, ಬೆಣ್ಣೆ ಕದ್ದ, ಕುರಿಗಳ್ ಸಾರ್, ಎಲ್ಲ ಮರೆತಿರುವಾಗನನ್ನ ನಲವಿನ ಬಳ್ಳಿ, ನೀ ನುಡಿಯದಿರಲೇನು, ಒಂದೊಂದು ಹಾಡು ಅನಂತಸ್ವಾಮಿಯವರ ಸಂಯೋಜನೆಗೆ ಸವಾಲಿನಂತೆ ಇದ್ದವು. ಭಾವಕ್ಕೆ ಪ್ರಾಶಸ್ತ್ಯ ಕೊಟ್ಟು ಕನ್ನಡಕ್ಕೆ ತಂದಿದ್ದ ಘಜಲ್ ಶೈಲಿಯ, ಮತ್ತದೇ ಬೇಸರ ಅದೇ ಸಂಜೆ ಗೀತೆ ಕೇಳುಗರ ಕಿವಿಯಲ್ಲಿ ರಿಂಗಣಿಸಿತು. ಕ್ಯಾಸೆಟ್ ಲೋಕ ಕಣ್ತೆರೆಯಿತು. ಸುಗಮಸಂಗೀತಕ್ಕೆ ಬೆಳಕಾಯಿತು. ಒಬ್ಬ ಪ್ರಜ್ಞಾವಂತಕವಿ ಮತ್ತು ಒಬ್ಬ ಭಾವುಕ ಸಂಗೀತ ಸಂಯೋಜಕನ ಸಾಹಸದಿಂದ ಒಂದು ಹೊಸ ದಿಗಂತದ ಸೃಷ್ಟಿಯಾಯಿತು.

ಈ ಧ್ವನಿಸುರುಳಿಯ ಜನಪ್ರಿಯತೆ ಎಷ್ಟು ಏರಿತೆಂದರೆ ಇದಕ್ಕೆ ಸಮನಾದ ಅಥವಾ ಇದನ್ನು ಮೀರಿಸುವಂತಹ ಎರಡನೇಯ ಧ್ವನಿಸುರುಳಿಯನ್ನು ತರುವುದು ನಿಸಾರರಿಗೆ ಸಾಧ್ಯವಾಗಲಿಲ್ಲ. ಕಾರಣ ಇಷ್ಟು ವೈವಿಧ್ಯತೆಯನ್ನು ಬೇರೊಂದು ಧ್ವನಿಸುರುಳಿ ನೀಡಲು ಸಾಧ್ಯವಾಗುತ್ತದೆ ಎಂಬ ಭರವಸೆ ಅವರಿಗೆ ಇರಲಿಲ್ಲ. ‘ನಿತ್ಯೋತ್ಸವದ ಕವಿ’ ಎಂದೇ ನಿಸಾರರು ಜನಪ್ರಿಯರಾದರು. ಕೆ.ಎಸ್. ನರಸಿಂಹಸ್ವಾಮಿಗಳು ‘ಮೈಸೂರು ಮಲ್ಲಿಗೆ’ ಕವಿಯಾದಂತೆ. ನಿಸಾರರು ನಿತ್ಯೋತ್ಸವ ಕವಿತೆಗಿಂತ ಉತ್ತಮ ಕವಿತೆಗಳನ್ನು ಬರೆದರೂ ಅವರಿಗೆ ನಿತ್ಯೋತ್ಸವ ಕವಿ ಎಂದೇ ಜನರು ಕರೆಯತೊಡಗಿದರು. ಸುಗಮಸಂಗೀತದ ಧ್ವನಿಸುರುಳಿಯ ಹರಿಕಾರರಾದ ನಿಸಾರ್ ಅವರು ೧೯೭೮ ರಲ್ಲಿ ತಮ್ಮ ಮೊದಲ ಧ್ವನಿಸುರುಳಿಯನ್ನು ತಯಾರಿಸುವುದರ ಮೂಲಕ ನವಪರಂಪರೆಯ ನಿರ್ಮಾಣ ಮಾಡಿದರು.

ಸುಗಮಸಂಗೀತ

ಧ್ವನಿಸುರುಳಿಗಳ ಮಹಾಪೂರ

ನಿತ್ಯೋತ್ಸವದ ಅನಂತರ ಧ್ವನಿಸುರುಳಿಗಳ ಸಾಲು ಸಾಲೇ ಹುಟ್ಟಿಕೊಂಡಿತು. ೧೯೮೦ ಮಾರ್ಚ್‌ತಿಂಗಳಲ್ಲಿ ಪ್ರಾರಂಭವಾದ ಹೆಚ್.ಎಂ.ಮಹೇಶ್‌ ಅವರ ‘ಸಂಗೀತ’ ಕ್ಯಾಸೆಟ್ ಕಂಪನಿ ಭಾವಗೀತೆಗಳ ಮಹಾಪೂರವನ್ನೇ ಉಕ್ಕಿಸಿತು. ಕವಿ ಲಕ್ಷ್ಮಿನಾರಾಯಣ ಭಟ್ಟರು ಸಂಗ್ರಹಿಸಿ ಪ್ರಕಟಿಸಿದ ‘ಸಂತ ಶಿಶುನಾಳ ಷರೀಫ್’ ಕ್ಯಾಸೆಟ್ ಅಶ್ವಥ್‌ಅವರ ಸಂಯೋಜನೆಯಲ್ಲಿ ಅತ್ಯಂತ ಜನಪ್ರಿಯವಾಯಿತು. ಶಿಶುನಾಳರ ಕಾವ್ಯಬಂಧಕ್ಕೆ ಅಶ್ವಥ್‌ನೀಡಿದ ಸಂಗೀತ ಅಭೂತಪೂರ್ವವಾಗಿತ್ತು. ಲಕ್ಷ್ಮಿ ನಾರಾಯಣ ಭಟ್ಟರ ‘ಬಾರೋ ವಸಂತ’, ‘ದೀಪಿಕಾ’, ಕೆ.ಎಸ್.ನರಸಿಂಹಸ್ವಾಮಿಗಳ ‘ಮೈಸೂರು ಮಲ್ಲಿಗೆ’ ಇರುವಂತಿಗೆ, ‘ಕೆಂಗುಲಾಬಿ’, ‘ಅನುರಾಗ’, ‘ಮಾವು ಬೇವು’, ಉಂಗುರ, ಶ್ರೀಮುಖ, ಕನ್ನಡವೇ ಸತ್ಯ ಮುಂತಾದ ಧ್ವನಿಸುರುಳಿಗಳಿಗೆ ಅಶ್ವಥ್ ಸಂಗೀತ ನೀಡಿದ್ದರು. ಅಶ್ವಥ್ ಅವರು ಷರೀಫರ ಪ್ರತಿನಿಧಿಯಾಗಿ ನಾಡಿನಾದ್ಯಂತ ಜನಪ್ರಿಯರಾಗಿ ಹಬ್ಬಿಕೊಂಡರು. ಸುಗಮಸಂಗೀತದ ದಿಕ್ಕುಗಳನ್ನೇ ವಿಸ್ತರಿಸುತ್ತಾ ಹೋದರು. ನಾಡಿನ ಪ್ರಮುಖ ಕವಿಗಳ ಎಲ್ಲಾ ಗೀತೆಗಳೂ ಕ್ಯಾಸೆಟ್ ಮಾಧ್ಯಮದಲ್ಲಿ ಮಾತನಾಡತೊಡಗಿದವು. ಅದೂವರೆವಿಗೂ ಪುಸ್ತಕದಲ್ಲಿ ಅಡಗಿದ್ದ ಅನೇಕ ಭಾವಗೀತೆಗಳು ಮೇಲೆದ್ದು ಬಂದು ಜೀವಂತವಾದವು.

ಸಂಗೀತ ಧ್ವನಿಸುರುಳಿ ಸಂಸ್ಥೆ ತಯಾರಿಸಿದ ಮತ್ತೊಂದು ಅತ್ಯಂತ ಜನಪ್ರಿಯವಾದ ಧ್ವನಿಸುರುಳಿ ಎಂದರೆ ಮೈಸೂರು ಅನಂತಸ್ವಾಮಿಯವರು ಸಂಗೀತ ನೀಡಿದ್ದ ‘ಭಾವ ಸಂಗಮ’ – ಹಲವು ಕವಿಗಳ ಕವಿತೆಗಳನ್ನೊಳಗೊಂಡಿದ್ದ ಭಾವ ಸಂಗಮ ಧ್ವನಿಸುರುಳಿ ಅತ್ಯಂತ ವಿಶಿಷ್ಟವಾದದ್ದು ತನ್ನ ವೈವಿಧ್ಯತೆಯಿಂದ ಇಲ್ಲಿ ಒಂದೊಂದು ಹಾಡೂ ತನ್ನ ಅರ್ಥ ಶೈಲಿಯಿಂದ ಭಿನ್ನವಾಗಿ ನಿಂತಿತು. ಜಿ.ಎಸ್. ಶಿವರುದ್ರಪ್ಪನವರ ‘ಎದೆ ತುಂಬಿ ಹಾಡಿದೆನು’ – ಅಡಿಗರ ‘ಯಾವ ಮೋಹನ ಮುರಲೀ’ – ಮಾಸ್ತಿಯವರ ‘ಬಾ ಸವಿತಾ’ – ಕೆ.ಎನ್. ನರಸಿಂಹಸ್ವಾಮಿಗಳ ‘ಹೆಂಡತಿಯೊಬ್ಬಳು ಮನೆಯಲ್ಲಿದ್ದರೆ’ – ಅತ್ತಿತ್ತ ನೋಡದಿರು, ಹೀಗೆ ಮುಂತಾಗಿ ಕವಿತೆಗಳು ಹಿರಿಯ ಭಾವನೆಗಳನ್ನು ಸರಳವಾಗಿ ಮುಟ್ಟಿಸಿದಕ್ಕೂ ಏನೋ, ಸಾಮಾನ್ಯರ ನಾಲಿಗೆಯಲ್ಲೂ ದಶಕಗಳು ಕಳೆದರೂ ನಾದದ ಗುಂಗಿನಿಂದ ಚಿರಂತನವಾದವು. ನಾಡಿನ ಪ್ರಖ್ಯಾತ ಕವಿಗಳ ಹಾಡುಗಳೆಲ್ಲಾ ಸುಗಮಸಂಗೀತದ ರೇಶಿಮೆ ತೊಡುಗೆಯಲ್ಲಿ ಚಂದ ಕಾಣುತ್ತಾ ಹೊಳೆದವು. ಕಾವ್ಯ ಮತ್ತು ಗೇಯದ ಬಲದಿಂದ ಅನಂತವಾದವು.

ಸಂಗೀತ ನಿರ್ದೇಶಕ ಎಚ್.ಕೆ. ನಾರಾಯಣರ ನಿರ್ದೇಶನದಲ್ಲಿ ಹಲವು ಜನಪ್ರಿಯ ಧ್ವನಿಸುರುಳಿಗಳು ಬಂದವು. ಲಕ್ಷ್ಮಿನಾರಾಯಣ ಭಟ್ಟರ ‘ಬಾರೋ ವಸಂತ’, ‘ಮಾಧುರಿ’, ವಿವಿಧ ಕವಿಗಳ ‘ಸಂಜೆ ಮಲ್ಲಿಗೆ’, ಕೆ.ಸಿ. ಶಿವಪ್ಪನವರ ‘ಸಂಗಾತಿ’ ‘ಗೆಳತಿ’ ಲಕ್ಷ್ಮಿನಾರಾಯಣ ಭಟ್ಟರ ‘ನೀಲಾಂಜನ’ ಧ್ವನಿಸುರುಳಿ ಮುಂತಾದವು ಜನಪ್ರಿಯವಾದವು. ‘ನೀಲಾಂಜನ’ದ ಗೀತೆಗಳಂತೂ ಕನ್ನಡದ ಮೀರಾ ಭಜನೆಗಳಾಗಿ ನಾದದ ಗುಂಗನ್ನು ಹಬ್ಬಿಸಿದವು. ಶಾಸ್ತ್ರೀಯ ಸಂಗೀತ ವಿದ್ವಾಂಸರಾದರೂ ಸುಗಮಸಂಗೀತಕ್ಕೆ ಬಂದಾಗ ಸುಗಮವಾಗಿ ಗೀತೆಗಳನ್ನು ಹಾದು ಹೊಕ್ಕು ಸಂಯೋಜನೆ ಮಾಡಿದ ನಾರಾಯಣರ ‘ನೀಲಾಂಜನ’ ಧ್ವನಿಸುರುಳಿ ಅವರ ಹೆಸರನ್ನು ನೀಲಾಂಜನದಂತೆ ಬೆಳಗಿತು.

ಮದರಾಸಿನಲ್ಲಿ ನೆಲೆಯಾಗಿ ನಿಂತು ಕನ್ನಡದ ಭಾವಗೀತೆಗಳನ್ನು ತಯಾರು ಮಾಡಿದ ಮಂಗಳೂರು ಅಪ್ಪಟ ಕನ್ನಡಿಗ ಹೆಚ್.ಎಂ. ಮಹೇಶ್ ಅವರ ಸಂಗೀತ ಪ್ರೇಮ, ಆಸಕ್ತಿ – ಛಲಗಳಿಂದ ಕನ್ನಡ ಭಾವಗೀತೆಯ ಬೆಳೆ ಹುಲುಸಾಯಿತು. ಪ್ರಸಾರ ಮಾಧ್ಯಮಕ್ಕೆ ಆಕಾಶವಾಣಿಯ ನಂತರದಲ್ಲಿ, ಧ್ವನಿಸುರುಳಿಗಳೇ ಅತ್ಯಂತ ಪ್ರಭಾವಶಾಲಿಯಾಗಿದ್ದವು. ಕ್ಯಾಸೆಟ್ ಎನ್ನುವ ಹೆಸರೇ ಅಪರಿಚಿತವಾಗಿದ್ದ ಕಾಲದಲ್ಲಿ ಸಂಗೀತಾ ಸಂಸ್ಥೆ ಹೊರನಾಡಿನಲ್ಲಿದ್ದುಕೊಂಡೇ ತನ್ನ ಕನ್ನಡ ಸೇವೆಯನ್ನು ಸಲ್ಲಿಸಿತು. ಅವುಗಳ ಗುಣಮಟ್ಟದಲ್ಲಿ ಗೆದ್ದು ಜನಪ್ರಿಯವಾದವು. ಮೈಸೂರು ಅನಂತಸ್ವಾಮಿ ಅವರ ‘ಭಾವಸಂಗಮ’ – ದೀಪೋತ್ಸವ – ‘ಎದೆತುಂಬಿ ಹಾಡಿದೆನು’ – ಅನಂತನಮನ – ಹೆಚ್.ಕೆ.ನಾರಾಯಣ್ ಅವರ – ‘ಬಾರೋ ವಸಂತ’ ಸಂಜೆಮಲ್ಲಿಗೆ ‘ಅರಳುಮಲ್ಲಿಗೆ’ – ಕಾವ್ಯಸುಧೆ, ಶಿವಮೊಗ್ಗ ಸುಬ್ಬಣ್ಣ ಅವರ ‘ಅಗ್ನಿಹಂಸ’ ‘ಗೀತಗಂಗಾ’ – ‘ಬಾರಿಸು ಕನ್ನಡ ಡಿಂಡಿಮವ’ – ಡಾ|| ಬಾಲಮುರಳಿ ಕೃಷ್ಣ | ಮತ್ತು ರಮಾದೇವಿ ಅವರ ‘ಭಾವಭೃಂಗ’ – ಹೆಚ್.ಆರ್. ಲೀಲಾವತಿ ಅವರ ‘ಭಾವಗೀತೆ’ – ಕಸ್ತೂರಿ ಶಂಕರ್‌ಅವರ ‘ಕಾವ್ಯಕಸ್ತೂರಿ’ ಡಾ|| ಜಯಶ್ರೀ ಅರವಿಂದ್ ಅವರ ‘ಮಧುಕೋಗಿಲೆ’ ಇಂದು ವಿಶ್ವನಾಥ್‌ ಅವರ ‘ಅಭಿಸಾರಿಕೆ’ – ಮುದ್ದುಮೋಹನ್‌ ಅವರ ‘ಅನಾದಿಗಾನ’ ಹೀಗೆ ನೂರಾರು ಧ್ವನಿಸುರುಳಿಗಳು ಸಂಗೀತ ಸಂಸ್ಥೆ ಹೆಮ್ಮೆಯ ಬಿಡುಗಡೆಯಾಗಿವೆ. ಸಿ. ಅಶ್ವಥ್‌ರ ‘ದೀಪಿಕಾ’ – ಶಿಶುನಾಳಷರೀಫರ ಸುಮಾರು ಐದಾರು ಸಂಪುಟಗಳು ಕರ್ನಾಟಕದ ಮನೆ ಮನೆ ಮಾತಾಗಿವೆ.

‘ಭಾವ ಸಂಗಮ’ ‘ಮೈಸೂರು ಮಲ್ಲಿಗೆ’ – ‘ಬಾರೋ ವಸಂತ’ – ‘ದೀಪಿಕಾ’ – ಕ್ಯಾಸೆಟ್ಟುಗಳ ಜೊತೆಯಲ್ಲಿ ಜಾನಪದ ಗೀತೆಗಳ ಧ್ವನಿ ಸುರುಳಿಗಳನ್ನೂ ತಯಾರಿಸಿ, ಜನಪದ ಗೀತೆಗಳ ಅಲೆಯನ್ನೇ ಸೃಷ್ಟಿ ಮಾಡತೊಡಗಿತು. ಬಿ.ಕೆ. ಸುಮಿತ್ರಾ ಅವರ ‘ಮೊದಲು ನೆನೆದೇವ’, ‘ನಿಂಬಿಯಾ ಬನದಲ್ಲಿ’, ‘ಮಾಯದಂತ ಮಳೆ ಬಂತಣ್ಣಾ’, ‘ಘಲ್ಲುಘಲ್ಲೆನುತಾ’ ಮೊದಲಾದ ಗೀತೆಗಳು ಜನಪ್ರಿಯವಾಗಿ ಎಲ್ಲೆಲ್ಲೂ ಕೇಳತೊಡಗಿದವು. ಜನಪದ ಗೀತೆಗಳ ಹಲವಾರು ಸಂಪುಟಗಳನ್ನೇ ‘ಸಂಗೀತ’ ಸಂಸ್ಥೆ ತಯಾರಿಸಿತು. ‘ಮತಿಘಟ್ಟ ಕೃಷ್ಣಮೂರ್ತಿ’ ಗಳಂತಹ ಜಾನಪದ ವಿದ್ವಾಂಸರುಗಳಿಗೆ ಪರಿಷ್ಕರಿಸಿ ಶೋಧಿಸಲ್ಪಟ್ಟ ಹಲವಾರು ಗೀತೆಗಳು ಸುಮಿತ್ರ ಅವರ ಗಾಯನದಲ್ಲಿ ಪೂನರ್ಭವವಾದವು. ಜನಪದ ಗೀತೆಗಳ ಒಂದು ಅಲೆಯೇ ಹುಟ್ಟಿಕೊಂಡಿತು. ಶಿವಮೊಗ್ಗದ ಗಾಯಕ ಯುವರಾಜ್ ‘ಜೇನುಗೂಡು’ ‘ಮುತ್ತಿನ ತೆನೆ’ – ಜನಪದ ಗೀತೆಗಳ ಧ್ವನಿಸುರುಳಿಗಳ ಮೂಲಕ ಜನಪ್ರಿಯರಾದರು. ಸಂಗೀತ ಸಂಸ್ಥೆ ಹೊರತಂದ ಈ ಜನಪದ ಗೀತೆಗಳು ಹೊಸ ರುಚಿಯನ್ನು ಸೃಷ್ಟಿಮಾಡಿದವು. ಜನಪದ ಗೀತೆಗಳ ಗಾಯನವನ್ನು ಪ್ರಾರಂಭಿಸಿ ಹುಚ್ಚೆಬ್ಬಿಸಿದ್ದ ಪಿ. ಕಾಳಿಂಗರಾವ್ ಮತ್ತು ಬಾಳಪ್ಪ ಹುಕ್ಕೇರಿಯವರ ಸಾಲಿಗೆ ಯುವ ಗಾಯಕ ಯುವರಾಜರೂ ಸೇರಿಕೊಂಡರು. ಅನೇಕ ಭಾವಗೀತೆಗಳು, ಎಡೆಯೂರು ಸಿದ್ದಲಿಂಗೇಶ್ವರ, ಮಲೆ ಮಾದೇಶ್ವರನನ್ನು ಕುರಿತ ಅನೇಕ ಭಕ್ತಿ ಗೀತೆಗಳು, ಧ್ವನಿ ಸುರುಳಿಗಳಾಗಿ ಹಬ್ಬಿಕೊಂಡವು.

ಭಾವಗೀತೆ, ಜನಪದಗೀತೆ, ಭಕ್ತಿಗೀತೆ, ವಚನಗಳು, ದಾಸರ ಪದಗಳೂ ಎಲ್ಲವೂ ನೂರಾರು ಸಂಖ್ಯೆಗಳಲ್ಲಿ ಪ್ರವಾಹದಂತೆ ಉಕ್ಕುತ್ತಾ ಬಂದವು. ದೇಶಭಕ್ತಿ ಗೀತೆಗಳು, ಪ್ರೇಮಗೀತೆಗಳೂ, ಇವುಗಳ ಜೊತೆ ಸೇರಿಕೊಂಡವು. ದಿನ ಬೆಳಗಾಗುವಲ್ಲಿ ಹತ್ತಾರು ಕಲಾವಿದರು ಹೊಸದಾಗಿ ಹುಟ್ಟಿಕೊಳ್ಳುತ್ತಾ, ಬೆಳಕಿಗೆ ಬರುತ್ತಿದ್ದರು. ಸಂಗೀತ ಸಂಸ್ಥೆಯು ತನ್ನ ಗಾತ್ರವನ್ನು ಹಿಗ್ಗಿಸಿಕೊಳ್ಳುತ್ತಾ, ವೈವಿಧ್ಯತೆಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿತು.

ಹೆಚ್.ಎಂ. ಮಹೇಶ್ ಅವರು ಕಲಾಭಿಮಾನಿಗಳು, ಸುಸಂಸ್ಕೃತರೂ ಉತ್ತಮ ಅಭಿರುಚಿಯುಳ್ಳವರೂ ಆಗಿದ್ದರಿಂದ ಧ್ವನಿಸುರುಳಿಗಳ ಗುಣಮಟ್ಟ ಅತ್ಯಂತ ಉತ್ಕೃಷ್ಟವಾಗಿತ್ತು. ಎಲ್ಲಿಯೂ ಜೊಳ್ಳಾದ ಸಾಹಿತ್ಯ, ಸಂಗೀತಗಳ ಧ್ವನಿಸುರುಳಿಗಳು ಒಂದೂ ಅವರ ಸಂಸ್ಥೆಯಲ್ಲಿ ಸೇರ್ಪಡೆಯಾಗಲಿಲ್ಲ. ಹಾಡುಗಾರರಾಗಿದ್ದ ಅವರು ಕಲಾವಿದರೂ ಸಾಹಿತ್ಯಜ್ಞರೂ ಆಗಿದ್ದರಿಂದ, ನೂರಾರು ಭಾವಗೀತೆಯ ಧ್ವನಿಸುರುಳಿಗಳು ಹೊರಬಂದವು. ಕರ್ನಾಟಕದ ಎಲ್ಲಾ ಕಲಾವಿದರ ಕಂಠಸಿರಿಯೂ ‘ಸಂಗೀತಾ’ ಸಂಸ್ಥೆಯಲ್ಲಿ ದಾಖಲಾಯಿತು. ‘ಸಂಗೀತಾ’ ಸಂಸ್ಥೆ ಹೊಸ ಕಲಾವಿದರಿಗೆ ಪ್ರೋತ್ಸಾಹ ನೀಡಿತಲ್ಲದೆ ಪ್ರಚಾರ, ಪ್ರಸಿದ್ಧಿಗಳನ್ನೂ ಒದಗಿಸಿಕೊಟ್ಟಿತು. ‘ಸಂಗೀತಾ’ ಸಂಸ್ಥೆಯಲ್ಲಿ ‘ತಮ್ಮ ಧ್ವನಿ ಇರುವುದೇ’ ಕಲಾವಿದರಿಗೆ ಹೆಮ್ಮೆಯ ವಿಷಯವಾಗಿತ್ತು. ತಮ್ಮ ಸಂಸ್ಥೆಯಲ್ಲಿ ಹಾಡುವ ಕಲಾವಿದ, ಸಂಯೋಜಕರು ಬೇರೆ ಯಾವ ಕಂಪನಿಗೂ ಹಾಡಬಾರದೆಂಬ ಕರಾರಿಗೆ ಸಿದ್ಧವಾಗಿಯೇ ಬದ್ಧವಾಗಿಯೇ ಬೆಳೆದ ಕಲಾವಿದರು ತಾವೂ ಬೆಳೆದು ಸಂಸ್ಥೆಯ ಘನತೆ ಗೌರವಗಳನ್ನೂ ಬೆಳೆಸಿದರು. ದಕ್ಷಿಣ ಕನ್ನಡ ಎಲ್ಲ ಭಾಷೆಗಳಲ್ಲಿ ಭಾವಗೀತೆ – ಚಿತ್ರಗೀತೆ ಎಲ್ಲ ಪ್ರಕಾರವೂ ಸೇರಿ ಸುಮಾರು ೪೦೦೦ ಕ್ಕಿಂತಲೂ ಹೆಚ್ಚು ಧ್ವನಿಸುರುಳಿಗಳನ್ನು ಧ್ವನಿ ಮುದ್ರಿಸಿದ ಮಂಗಳೂರು ಕನ್ನಡಿಗ ಮಹೇಶ್ ಅವರು ಪ್ರಾಮುಖ್ಯತೆ ನೀಡಿದ್ದು ಕನ್ನಡ ಭಾವಗೀತೆಗಳ ಧ್ವನಿಸುರುಳಿಗಳಿಗೆ ನಾಡಗೀತೆಯಿಂದ, ತತ್ವಪದದವರೆವಿಗೆ, ಜನಪದ ಗೀತೆಯಿಂದ ಭಾವಗೀತೆ, ಭಕ್ತಿಗೀತೆಯವರೆವಿಗೆ, ವ್ಯಕ್ತಿ, ವಿಷಯ, ವಿಚಾರಗಳ ವೈವಿಧ್ಯತೆಯನ್ನು ತಮ್ಮ ನಿರ್ಮಾಣದಲ್ಲಿ ತಂದ ಮಹೇಶ್ ಅವರನ್ನು ಕರ್ನಾಟಕ ಸರ್ಕಾರ ೧೯೯೨-೯೩ರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿತು. ಇದು ಸುಗಮಸಂಗೀತಕ್ಕೆ ಅದರ ಪ್ರಸರಣಕ್ಕೆ ಸಂದ ಮೊಟ್ಟ ಮೊದಲನೆಯ ಗೌರವವಾಯಿತು.

೧೯೮೨ರ ನವೆಂಬರ್ ೧೬ ರಂದು ‘ನಾದಲಹರಿ’ ಎಂಬ ಮತ್ತೊಂದು ಸಂಸ್ಥೆ ಮಡಿಕೇರಿಯಿಂದ ಬೆಂಗಳೂರಿಗೆ ಬಂದು ಪ್ರಾರಂಭವಾಯಿತು. ತಮ್ಮು ಪೂವಯ್ಯ, ಅರವಿಂದ್ ಕಿಗ್ಗಾಲ್, ಜಯಶ್ರೀ ಅರವಿಂದ್ – ಈ ಮೂವರ ನಿರ್ದೇಶನದಲ್ಲಿ ಹಲವಾರು ಭಾವಗೀತೆಗಳ ಧ್ವನಿಸುರುಳಿಗಳು ನಿರ್ಮಾಣಗೊಂಡವು. ಅವುಗಳಲ್ಲಿ ಬಹುಮುಖ್ಯವಾದದ್ದು ಪದ್ಮಚರಣ್ ಸಂಗೀತ ನಿರ್ದೇಶನದ ‘ನವೋದಯ’ ಕ್ಯಾಸೆಟ್ ಆಕಾಶವಾಣಿಯಿಂದ ಜಿ.ಎಸ್. ಶಿವರುದ್ರಪ್ಪನವರ ಗೀತೆಗಳು ಅದಾಗಲೇ ಪ್ರಸಾರವಾಗಿ ಜನಪ್ರಿಯವಾಗಿತ್ತು. ಹೆಚ್.ಆರ್. ಲೀಲಾವತಿಯವರು ಅವುಗಳನ್ನೆಲ್ಲಾ ಅಲ್ಲಲ್ಲಿ ಹಾಡಿ ಪ್ರಚಾರ ಮಾಡಿದ್ದರು. ‘ಉಡುಗಣವೇಷ್ಟಿತ’ ‘ಹೌದೇನೇ ಉಮಾ’ ಮುಂತಾದ ಹಾಡುಗಳು ಐವತ್ತರ ದಶಕದಲ್ಲೇ ಪದ್ಮಚರಣ್ ಅವರ ಸಂಯೋಜನೆಯಲ್ಲಿ ಆಕಾಶವಾಣಿಯಲ್ಲಿ ಬಿತ್ತರಗೊಂಡಿತ್ತು. ‘ನಾದಲಹರಿ’ ಸಂಸ್ಥೆಯ ಮೂಲಕ ಇದು ಲೀಲಾವತಿಯವರ ಕಂಠದ ಬದಲು ಆಗ ಪ್ರವರ್ಧಮಾನದಲ್ಲಿದ್ದ ‘ರತ್ನಮಾಲಾ ಪ್ರಕಾಶ್’ ಅವರ ಕಂಠದಲ್ಲಿ ಮೂಡಿ ಬಂದಿತು. ‘ಋತು ವಸಂತ ಬಂದ’, ‘ಓ ಎಲ್ಲಿದೆ ಬೃಂದಾವನ ತೋರಿರೋ’, ‘ನವೋದಯ ಕಿರಣ ಲೀಲೆ’, ‘ಅಧರದಿ ನಸು ನಗೆ’, ‘ನೀನು ನೆಲ ನಾನು ಜಲ’ – ಮುಂತಾದ ಗೀತೆಗಳು ಪದ್ಮಚರಣರ ಸಂಯೋಜನೆಗಳಾಗಿ ಬಂದವು. ಸಾವಿರಾರು ಕ್ಯಾಸೆಟ್‌ಗಳು ಖರ್ಚಾದವು. ಎಂ.ಎಸ್.ಐ.ಎಲ್‌.ನಿಂದ ಕೇಳುತ್ತಿದ್ದ ಹಾಡುಗಳು ಅದಾಗಲೇ ನಿಂತುಹೋಗಿದ್ದರಿಂದ ಇದು ಮತ್ತೆ ಅದೇ ಹಾಡುಗಳ ವಿಸ್ತರಣಾ ಕಾರ್ಯಕ್ರಮದಂತಾಯಿತು. ಕ್ಯಾಸೆಟ್ ಜನಪ್ರಿಯವಾಯಿತು. ಅದೇ ವರುಷದ ಮತ್ತೊಂದು ಕ್ಯಾಸೆಟೆಂದರೆ ಬೇಂದ್ರೆಯವರ ಕವನಗಳನ್ನಾಧರಿಸಿದ ‘ನಾಕುತಂತಿ’ ಕ್ಯಾಸೆಟ್. ಮೈಸೂರು ಅನಂತಸ್ವಾಮಿಯವರ ಸಂಗೀತ ನಿರ್ದೇಶನದೊಂದಿಗೆ ಬಿಡುಗಡೆಯಾಯಿತು. ಮೊದಲೇ ಪ್ರಸಿದ್ಧವಾಗಿದ್ದ ಎಂ.ಎಸ್.ಐ.ಎಲ್. ಗೀತಗಳೊಡನೆ ಮತ್ತಷ್ಟು ಗೀತೆಗಳು ಸೇರಿ ಅತ್ಯಂತ ಜನಪ್ರಿಯವಾಯಿತು. ‘ನಾಕುತಂತಿ’, ‘ಏಲಾವನ’, ‘ನಾನು ಬಡವಿ’, ‘ಹಕ್ಕಿ ಹಾರುತಿದೆ ನೋಡಿದಿರಾ’, ‘ಅಂತರಂಗದಾ ಮೃದಂಗ’, ‘ಕಥೆಯಾದಳು ಹುಡುಗಿ’, ಕುಣಿಯೋಣುsಬಾರಾs – ನಾರೀ ನಿನ್ನ ಮಾsರೀ ಮ್ಯಾಲೇs – ಮುಂತಾದವು ಅತ್ಯಂತ ಜನಪ್ರಿಯವಾದವು.

ಬೆಂಗಳೂರಿನ ‘ಲಹರಿ’ ಸಂಸ್ಥೆ ಜನಪದ ಗೀತೆ, ಭಕ್ತಿಗೀತೆಗಳ ದನಿಸುರುಳಿಯನ್ನು ನಿರ್ಮಿಸುತ್ತಾ ಭಾವಗೀತೆಯ ಧ್ವನಿ ಸುರುಳಿಯ ಪ್ರಕಾರಕ್ಕೂ ಕೈ ಹಾಕಿದುದರ ಪರಿಣಾಮ ಅನೇಕ ಭಾವಗೀತೆಯ ಧ್ವನಿಸುರುಳಿಗಳು ಬೆಳಕಿಗೆ ಬಂದವು. ಕುವೆಂಪು ರಚಿತ ‘ಓಕುಳಿ’ ಶಿವರುದ್ರಪ್ಪನವರು ರಚಿಸಿದ ‘ಚೈತ್ರ’, ಪು.ತಿ.ನ., ಕೆ.ಎಸ್‌.ನ., ಅಡಿಗ, ಶಿವರುದ್ರಪ್ಪ, ನಿಸಾರ್, ಲಕ್ಷ್ಮೀನಾರಾಯಣ ಭಟ್ಟ, ಕಂಬಾರ, ಹೆಚ್.ಎಸ್. ವೆಂಕಟೇಶಮೂರ್ತಿ, ಸಿದ್ಧಲಿಂಗಯ್ಯ, ಬಿ.ಆರ್. ಲಕ್ಷ್ಮಣರಾವ್, ಈ ಹತ್ತು ಖ್ಯಾತ ಕವಿಗಳು ತಾವು ರಚಿಸಿದ ಕವಿತೆಯೊಂದನ್ನು ತಾವೇ ಓದಿ ಅಭಿಮಾನಿಗಳಿಗೆ ತಿಳಿಸಿದ ವಿಶೇಷತೆ ‘ಸಮ್ಮಿಲನ’ ಧ್ವನಿ ಸುರುಳಿಯದು. ತನ್ನ ಕಾವ್ಯವನ್ನು ಕವಿ ತಾನು ಓದಿದಂತೆ, ತಾನು ಕಂಡಂತೆ ತಿಳಿಸುವುದೇ ಈ ಧ್ವನಿಸುರುಳಿಯ ಹಿರಿಮೆ, ಹಿರಿಯ ಕವಿಗಳ ಧ್ವನಿಯನ್ನು ಮುಂಬರುವ ಪೀಳಿಗೆಗಾಗಿ ಕಾದಿರಿಸುವುದು ಗಮನಾರ್ಹವಾದ ಕೆಲಸ. ಈ ಧ್ವನಿಸುರುಳಿಯ ಆರಂಭದಲ್ಲಿ ಮತ್ತೊಬ್ಬ ಸಾಹಿತಿ ಡಾ|| ಯು.ಆರ್. ಅನಂತಮೂರ್ತಿಯವರು ‘ಮುನ್ನುಡಿ’ ನುಡಿದಿದ್ದರು. ಕನ್ನಡ ಸುಗಮಸಂಗೀತದ ಧ್ವನಿಸುರುಳಿ ಪ್ರಕಾರದಲ್ಲಿ ಇದೊಂದು ಹೊಸ ರೀತಿಯ ಪ್ರಪ್ರಥಮ ಬಿಡುಗಡೆಯಾಯಿತು. ಮೈಸೂರು ಅನಂತಸ್ವಾಮಿಯವರು ಹಾಡಿರುವ ‘ದುಂದುಭಿ’ – ಭಾವೋತ್ಸವ, ರತ್ನನ ಪದಗಳು, ಮಂದಾರ, ಗೀತಲಹರಿ, ಮಿಂಚು, ಪ್ರಣಯೋತ್ಸವ ಧ್ವನಿಸುರುಳಿಗಳು ಸಿ.ಅಶ್ವಥ್‌ಅವರ ದನಿಯಿಂದ ಹೊರಬಂದ ‘ಸಲ್ಲಾಪ, ಸ್ಪಂದನ, ಸೌರಭ, ಕವಿತಾ, ಪ್ರೇಯಸಿ, ಸುಬ್ಬಾಭಟ್ಟರ ಮಗಳೇ, ಪ್ರೇಮಧಾರೆ, ಮುಂತಾದ ಧ್ವನಿ ಸುರುಳಿಗಳು ‘ಲಹರಿ’ ರೆಕಾರ್ಡಿಂಗ್‌ಕಂಪನಿಯಿಂದ ಹೊರಬಂದು ಸುಗಮಸಂಗೀತಕ್ಕೆ ಸುಗ್ಗಿ ಬಂದಿತು.

ಸಾಲು ಸಾಲಾಗಿ ಭಾವಗೀತೆಗಳ ಕ್ಯಾಸೆಟ್‌ಗಳನ್ನು ತಯಾರಿಸಿದವರು ಸಿ.ಬಿ.ಎಸ್. ಸಂಸ್ಥೆಯಲ್ಲಿದ್ದ ಜಯಸಿಂಹ ಅವರು. ಅವರು ತೋರಿಸಿದ ಕಾವ್ಯಾಸಕ್ತಿಯಿಂದ ಸಿ.ಬಿ.ಎಸ್. ಸಂಸ್ಥೆ ತಯಾರಿಸಿದ ಅಶ್ವಥ್ ಅವರ ಸಂಗೀತ ನಿರ್ದೇಶನದ ವಾಸಂತಿ, ರೋಮಾಂಚ, ಆಲಿಂಗನ, ಜಯಶ್ರೀ ಅರವಿಂದ್ ಅವರ ‘ಒಲುಮೆ’, ‘ಹೂಜೇನು’ – ಬಿ. ಚಂದ್ರಶೇಖರರ ‘ನಯನ’ – ಸೊಗಸು ಮುಂತಾದ ಧ್ವನಿಸುರುಳಿಗಳು ಜನಪ್ರಿಯತೆಯಿಂದ ಮಿಂಚಿದವು.

ಕ್ಯಾಸೆಟ್ ಲೋಕದಲ್ಲಿ ಭಾವಗೀತಾ ಗಾಯನದ ಪ್ರವೇಶವಾದಂತೆ ಭಾವಗೀತೆ ಹಾಡುವವರು ನೂರಾರು ಮಂದಿಯಾದರು ಕೇಳುಗರು, ಅಭಿಮಾನಿಗಳು ಹತ್ತುಪಟ್ಟಾದರು. ಯುವ ಗಾಯಕರು, ಸಂಯೋಜಕರು ಯುವಕವಿಗಳು ಎಲ್ಲಾ ಉತ್ಸಾಹಿಗಳ ಸಮಾವೇಶವಾಗಿ ಸಾಮರ್ಥ್ಯವಿದ್ದವರು ಮಾತ್ರ ಉಳಿದುಕೊಂಡರು. ಕೇಳುಗರನ್ನು ತಮ್ಮ ಗಾಯನದಿಂದ ಗೆಲ್ಲಲಾರದವರು ಮಾತ್ರ ಹಿಂದಕ್ಕೆ ತೆರಳಿದರು. ತಮ್ಮ ಮಾಧುರ್ಯ ಗಾಯನಕ್ಕೆ ಹಸರಾದವರು ಗಾಯಕಿಯರಾದ ರತ್ನಮಾಲಪ್ರಕಾಶ್, ಕಸ್ತೂರಿ ಶಂಕರ್, ಬಿ.ಕೆ.ಸುಮಿತ್ರ, ಬಿ.ಆರ್. ಛಾಯಾ, ಮಾಲತಿ ಶರ್ಮಾ, ಜಯಶ್ರೀ, ಎಂ.ಕೆ.ಸುನೀತ ಅನಂತಸ್ವಾಮಿ, ಸರೋಜ, ಶೈಲಜ, ಇಂದು ವಿಶ್ವನಾಥ್‌, ಸುರೇಖಾ, ಮಂಜುಳಾ ಗುರುರಾಜ್ ಮುಂತಾದವರು. ಗಾಯಕರಾದ ಮೈಸೂರು ಅನಂತಸ್ವಾಮಿ, ಸಿ. ಅಶ್ವಥ್‌, ಶಿವಮೊಗ್ಗ ಸುಬ್ಬಣ್ಣ, ನರಸಿಂಹನಾಯಕ್, ಶ್ರೀನಿವಾಸ ಉಡುಪ, ಶಂಕರಶಾನಭಾಗ್, ರಾಜೂಅನಂತಸ್ವಾಮಿ, ರಮೇಶ್ಚಂದ್ರ ಮುಂತಾದವರು.

ಸುಗಮಸಂಗೀತ ಮತ್ತು ದೂರದರ್ಶನ

೧೯೮೬ರಲ್ಲಿ ಬೆಂಗಳೂರಿಗೆ ದೂರದರ್ಶನ ಬಂದಿತು. ಭಾವಗೀತೆಯನ್ನು ದೃಶ್ಯ ಮಾಧ್ಯಮಕ್ಕೆ ಅನ್ವಯಿಸಿ ತೋರಿಸುವ ಹೊಸ ಪ್ರಯತ್ನದ ಫಲವೇ ‘ಗೀತಚಿತ್ರ’ವಾಗಿ ರೂಪುಗೊಂಡಿತು. ದೂರದರ್ಶನದ ಮೊದಲ ಗೀತಚಿತ್ರವೇ ಜಿ.ಎಸ್.ಶಿವರುದ್ರಪ್ಪನವರು ರಚಿಸಿದ ‘ಎಲ್ಲೋ ಹುಡುಕಿದೆ ಇಲ್ಲದ ದೇವರ’ ಮತ್ತು ಪ್ರೋ|| ಚೆನ್ನವೀರ ಕಣವಿಯವರ ‘ಹೂವು ಹೊರಳುತಿದೆ’ ಎಂಬು ಗೀತೆಗಳು. ಪದ್ಮಚರಣರ ರಾಗಸಂಯೋಜನೆಯಲ್ಲಿ ಈ ಕವನಗಳು ಸುಂದರ ಗೀತಚಿತ್ರಗಳಾಗಿ ಮೂಡಿದವು. ಭಾವಗೀತೆಗಳು ಶ್ರವ್ಯದಿಂದ ದೃಶ್ಯವಾಗಿ ಮೂಡಲು ಪ್ರಾರಂಭಿಸಿದವು. ಪ್ರಭಾತ್ ಕಲಾವಿದರು ಇದನ್ನು ವೇದಿಕೆಯ ಮೇಲೆ ದಶಕಗಳ ಹಿಂದೆಯೇ ಅಭಿನಯಿಸಲು ಪ್ರಾರಂಭಿಸಿದ್ದರು. ದೂರದರ್ಶನ ಭಾವಗೀತೆಗಳನ್ನು ಹನುಮಂತನಗರದ ಅರವಿಂದ್ ಸ್ಟುಡಿಯೋದಲ್ಲಿ ಧ್ವನಿಮುದ್ರಿಸಿ ಹಾಡಿಗೆ ಬೇಕಾದ ಅಬಿನಯವನ್ನು (ನೃತ್ಯವನ್ನಲ್ಲ) ಚಿತ್ರೀಕರಿಸಿಕೊಂಡಿತು. ಬೆಂಗಳೂರು ದೂರದರ್ಶನದಲ್ಲಿ ಮೊದಲ ಗೀತಚಿತ್ರದ ಸಂಗೀತ ನಿರ್ದೇಶಕರೆಂಬ ಹೆಮ್ಮೆ ಪದ್ಮಚರಣರದಾಯಿತು. ಅನಂತ ಹಲವಾರು ಭಾವಗೀತೆಗಳನ್ನು ಹಲವಾರು ಸಂಗೀತ ನಿರ್ದೇಶಕರ ನಿರ್ದೇಶನದಲ್ಲಿ ದೂರದರ್ಶನ ಚಿತ್ರೀಕರಿಸಿತು. ಅಶ್ವಥ್‌ರವರ ‘ಬಣ್ಣದಹಕ್ಕಿ’ ಮಕ್ಕಳ ಧ್ವನಿಸುರುಳಿ ದೂರದರ್ಶನದ ಚಿತ್ರೀಕರಣಕ್ಕೆ ಒಳಪಟ್ಟು ಜನಪ್ರಿಯವಾಯಿತು. ಡಾ|| ಲಕ್ಷ್ಮೀನಾರಾಯಣಭಟ್ಟರ ‘ಬಾಳ ಒಳ್ಯೋರ್‌ನಮ್ ಮಿಸ್ಸು’, ‘ಗೇರ್‌ಗೇರ್ ಮಂಗಣ್ಣ’ ಮುಂತಾದ ಶಿಶು ಗೀತೆಗಳು ಎ.ಆರ್. ಅಚ್ಚುತ ಅವರ ಸಂಗೀತದಿಂದ ಜನಪ್ರಿಯವಾಗಿದ್ದವು. ಡಾ|| ಎಚ್.ಎಸ್.ವೆಂಕಟೇಶ ಮೂರ್ತಿರವರ ‘ಹಕ್ಕಿಸಾಲು’ ಮಕ್ಕಳ ಗೀತ ಸಂಕಲನದಿಂದ ಆರಿಸಲಾದ ಗೀತೆಗಳು ಎಷ್ಟು ಜನಪ್ರಿಯವಾಯಿತೆಂದರೆ ದಿನಕ್ಕೊಮೆಯಾದರೂ ಅದು ದೂರದರ್ಶನದಲ್ಲಿ ಪ್ರಸಾರವಾಗುತ್ತಿತ್ತು.

೧೯೯೦ರಲ್ಲಿ ರಾಜರತ್ನಂ ಅವರ ‘ತುತ್ತೂರಿ’ ಮಕ್ಕಳ ಗೀತೆಯಿಂದ ಮೂವತ್ತೆಂಟು ಮಕ್ಕಳ ಗೀತೆಗಳನ್ನಾಧರಿಸಿ ‘ಕಂದನ ಕಾವ್ಯ’ ಎಂಬ ದೂರದರ್ಶನ ಧಾರವಾಹಿ ಪ್ರಸಾರವಾಯಿತು. ‘ಡಾ|| ಜಯಶ್ರೀ ಅರವಿಂದ್’ ರವರ ಸಂಗೀತ ನಿರ್ದೇಶನದಲ್ಲಿ ಈ ಧಾರವಾಹಿ ಅತ್ಯಂತ ಜನಪ್ರಿಯವಾಗಿತ್ತು. ‘ಬಣ್ಣದ ತಗಡಿನ ತುತ್ತೂರಿ’, ಕುರಿಮರಿ ಬ್ಯಾ ‘ಟಂಟಂ’ ರೊಟ್ಟಿ ಅಂಗಡಿ ಕಿಟ್ಟಪ್ಪ’ ‘ಜುಟ್ಟು ಮೀಸೆ ಇಟ್ಟುಕೊಂಡು’, ‘ಕಾಳನ ಪೀಪಿ’ ‘ಹತ್ತು ಹತ್ತು ಇಪ್ಪತ್ತು’ ಮುಂತಾದ ಅನೇಕ ಹಾಡುಗಳು ದೂರದರ್ಶನದಲ್ಲಿ ಜನಪ್ರಿಯವಾದವು. ದೃಶ್ಯ ಮಾಧ್ಯಮದಿಂದ ಭಾವಗೀತೆಗಳು ಬಣ್ಣ ಪಡೆದವು. ಪುಸ್ತಕದಲ್ಲಿರುವ ಕವಿತೆ ಓದುವ ಕವಿತೆಯಾಗಿರುತ್ತದೆ. ಕೇಳಿದಾಗ ಕೇಳುವ ಪುಸ್ತಕವಾಗುತ್ತದೆ. ನೋಡುವಾಗ ನೋಡುವ ಕವಿತೆಯಾಗುತ್ತದೆ. ದೃಶ್ಯಮಾಧ್ಯಮದಲ್ಲಿ ಈ ಮೂರು ಕ್ರಿಯೆಗಳೂ ಒಂದಾಗುತ್ತವೆ. ಓದುವ+ಕೇಳುವ+ನೋಡುವ ಈ ಮೂರು ಮಾಧ್ಯಮಗಳಿಂದ ಕವಿತೆ ಹೃದ್ಯವಾಗುತ್ತದೆ ವೇದ್ಯವಾಗುತ್ತದೆ. ಮನೋವೇಗದಲ್ಲಿ ಕವಿಯ ಮನಸ್ಸಿನೊಂದಿಗೆ, ಭಾವನೆಗಳೊಂದಿಗೆ ಬೆರೆತು ಹೋಗುತ್ತದೆ. ದೂರದರ್ಶನದಲ್ಲಿ ಇವು ಸಾಬೀತಾದವು.

೧೯೯೫-೯೬ರಲ್ಲಿ ಚಲನಚಿತ್ರ ನಿರ್ದೇಶಕರು ಸೃಜನಶೀಲ ನಿರ್ದೇಶಕರೂ ಆದ ನಾಗಾಭರಣ ಮತ್ತು ಅಶ್ವಥ್‌ರವರು ಸೇರಿ ಸುಗಮಸಂಗೀತ ವಸ್ತುವನ್ನೇ ಧಾರಾವಾಹಿಯಾಗಿ ಹದಿಮೂರು ಕಂತುಗಳಲ್ಲಿ ದೂರದರ್ಶನಕ್ಕಾಗಿ ಚಿತ್ರೀಕರಿಸಿದರು. ಸಿ. ಅಶ್ವಥ್‌, ಅನಂತಸ್ವಾಮಿ, ಡಾ|| ಜಯಶ್ರೀ ಅರವಿಂದ್, ಬಿ.ಕೆ. ಚಂದ್ರಶೇಖರ್ ರಾಗಸಂಯೋಜಿಸಿದ್ದ ಸುಮಾರು ೮೦ ಹಾಡುಗಳನ್ನು ದೃಶ್ಯ ಮಾಧ್ಯಮಕ್ಕೆ ‘ನಾಗಾಭರಣ’ ಅವರು ಅಳವಡಿಸಿದ್ದರು. ಹದಿಮೂರು ಕವಿಗಳ, ವಿವಿದ ಮನೋಭಾವ, ವ್ಯಕ್ತಿತ್ವವನ್ನು ನಿರೂಪಿಸುವ ಕವಿತೆಗಳನ್ನು ಆರಿಸಿ ಕವಿತೆಯ ಅಂತರಾಳದೊಳಗಿಳಿದು, ಚಿತ್ರೀಕರಿಸಿದ ‘ಗೀತಮಾಧುರಿ’ ತನ್ನ ಸವಿನೆನಪನ್ನು ಪ್ರೇಕ್ಷಕರಲ್ಲಿ ಬಹುಕಾಲ ಉಳಿಸಿತು. ಕುವೆಂಪು, ಬೇಂದ್ರೆ, ಪು.ತಿ.ನ., ಅಡಿಗ, ಶಿವರುದ್ರಪ್ಪ, ಲಕ್ಷ್ಮೀನಾರಾಯಣಭಟ್ಟ, ಕಂಬಾರ, ನಿಸಾರ್ ಅಹಮದ್, ಸಿದ್ಧಲಿಂಗಯ್ಯ, ಚೆನ್ನವೀರ ಕಣವಿ, ಬಿ.ಟಿ. ಲಲಿತಾನಾಯಕ್ ಅವರ ವ್ಯಕ್ತಿತ್ವ ಪರಿಚಯದೊಂದಿಗೆ ಅವರ ಕಾವ್ಯಪರಿಚಯವನ್ನೂ ಮಾಡಿಕೊಟ್ಟವು.

(೨೦೦೦) ಇಪ್ಪತ್ತು ವರ್ಷಗಳ ಅನಂತರ ಜಯದೇವ್ ಅವರಂತೆ ಆಸೆ ಹೊತ್ತ ಮತ್ತೊಬ್ಬ ಅಧಿಕಾರಿ ವಿಠಲಮೂರ್ತಿಯವರ ಆಗಮನದಿಂದ ‘ನಿತ್ಯೋತ್ಸವ’ ಎನ್ನುವ ಸುಂದರ ಶೀರ್ಷಿಕಯೊಡನೆ ಮತ್ತೊಮ್ಮೆ ಸುಗಮಸಂಗೀತ ದನಿ ತೆರೆಯಿತು. ಆದರೆ ಅದರ ರೂಪು ರೇಖೆಗಳು ಹೊಚ್ಚ ಹೊಸದಾಗಿದ್ದವು. ನಾಡಿನ ಎಲ್ಲೆಡೆ ಇರುವ ಯುವಗಾಯನದ ಪ್ರತಿಭಾನ್ವೇಷಣೆ ಮತ್ತು ಅವರಿಗೆ ಪ್ರೋತ್ಸಾಹ ಕೊಡಬೇಕೆಂಬುದೇ ವಿಠಲ ಮೂರ್ತಿಗಳ ಆಶಯವಾಗಿತ್ತು. ಬೆಂಗಳೂರು ದೂರದರ್ಶನದಲ್ಲಿ ಭಾವಗೀತಾ ಗಾಯನ ಸ್ಪರ್ಧೆಯನ್ನು ಯೋಜಿಸಲಾಯಿತು. ಅವರ ನಿರೀಕ್ಷೆಗೂ ಮೀರಿ ಸುಮಾರು ಯುವಪ್ರತಿಭೆಗಳು ಬಂದರು, ಆಯ್ಕೆಯಾದವರಿಗಾಗಿ ವಿವಿಧ ಕವಿಗಳ ಆಯ್ದ ಕವಿತೆಗಳ ಧ್ವನಿ ಸುರುಳಿಯನ್ನು ತಯಾರಿಸಲಾಯಿತು. ಆರು ಮಂದಿ ಸಂಗೀತ ನಿರ್ದೇಶಕರಿಂದ ಆರು ಧ್ವನಿಸುರುಳಿಗಳು ಸಿದ್ಧವಾದವು ಅವು:

೧. ನಿನ್ನ ಬಾಂದಳದಂತೆ – ಸಂಗೀತ ಡಾ|| ಜಯಶ್ರೀ ಅರವಿಂದ್

೨. ಗುಡಿಸಲಿನಲ್ಲಿ ಅರಳುವ ಗುಲಾಬಿ – ಸಂಗೀತ ಸಿ.ಅಶ್ವಥ್‌

೩. ಹಸಿರ ಮೇಲ ಗುಲಾಬಿ – ಸಂಗೀತ ವಿ.ಮನೋಹರ್

೪. ಶತಮಾನದ ಹತಭಾಗ್ಯರು – ಸಂಗೀತ ಹೆಚ್.ಕೆ.ನಾರಾಯಣ

೫. ಎಲ್ಲಿಂದಿಳಿಯಿತು ಈ ಗೀತೆ – ಸಂಗೀತ ಬಿ.ವಿ.ಶ್ರೀನಿವಾಸ್

೬. ಬೆಳದಿಂಗಳು – ಸಂಗೀತ ರಾಜು ಅನಂತಸ್ವಾಮಿ

ಎಂ.ಎಸ್.ಐ.ಎಲ್. ೧೯೭೦ರ ದಶಕದಲ್ಲಿ ಆಕಾಶವಾಣಿಯಿಂದ ಪ್ರಸಾರಗೊಂಡ ಏಳು ಧ್ವನಿಸುರುಳಿಗಳು ೧) ಬಾಗಿಲೊಳು ಕೈಮುಗಿದು ೨) ಎದೆ ತುಂಬಿ ಹಾಡಿದೆನು ೩) ಹೇಳ್ಕೊಳ್ಳಾಕೊಂದೂರು ೪) ಕರುಣಾಳು ಬಾ ಬೆಳಕೆ ೫) ಕುರಿಗಳು ಸಾರ್ ಕುರಿಗಳು ೬) ತರವಲ್ಲ ತಗಿ ನಿನ್ನ ತಂಬೂರಿ ೭) ಯಾವ ಮೋಹನ ಮುರಳಿ – ಇವಿಷ್ಟೂ ಧ್ವನಿಸುರುಳಿಗಳನ್ನು ‘ಲಹರಿ’ ಸಂಸ್ಥೆ ಮಾರಾಟ ಮಾಡಿತು.

* * *