ಇದು ಸುಗಮಸಂಗೀತ ಹೆಮ್ಮರವಾಗಿ ಬೆಳೆಯುತ್ತ ನಾನಾ ಕೊಂಬೆ ರೆಂಬೆಗಳಾಗಿ ಒಡದು ಮೈತುಂಬಾ ಹೂಗೊಂಚಲುಗಳನ್ನು ತುಂಬಿಕೊಂಡಿದೆ. ಆದರೆ ಇದರ ಬೆನ್ನ ಹಿಂದೆ ಹಲವಾರು ಕವಿಗಳ, ಕಲಾವಿದರ, ಸಾಧಕರ ಕಾಣಿಕೆಯನ್ನು ನಾವು ಮರೆಯುವಂತಿಲ್ಲ. ಈ ಹಾದಿಯಲ್ಲಿ ಗಮನಾರ್ಹವಾದ ಕಾಣಿಕೆಗಳನ್ನು ನೀಡಿದವರು ನೂರಾರು ಮಂದಿಯಾದರೂ, ಸಾಂಕೇತಿಕವಾಗಿ ಕೆಲವರನ್ನು ಅವರ ಸಾಧನೆಯ ಮಹಾತ್ಮತತೆಯನ್ನು ನೆನೆಯುವುದು ಅತ್ಯವಶ್ಯಕವಾಗಿದೆ. ಸುಗಮಸಂಗೀತದಲ್ಲಿ ಇತಿಹಾಸ ನಿರ್ಮಿಸಿದ ಕವಿಗಳ ಪೈಕಿ ಕವಿ ಡಾ|| ಲಕ್ಷ್ಮೀನಾರಾಯಣ ಭಟ್ಟರ ಹೆಸರು ಮೊದಲು ನಿಲ್ಲುತ್ತದೆ. ನವೋದಯದ ನಂತರ ಅದನ್ನು ವಿರೋಧಿಸಿದ ನವ್ಯ, ನವ್ಯೋತ್ತರದ ಸಂದರ್ಭದಲ್ಲಿ ಸುಗಮಸಂಗೀತಗಾರರಿಗೆ ಬೆಳಕಾಗಿ ಬಂದವರು ಡಾ|| ಲಕ್ಷ್ಮೀನಾರಾಯಣ ಭಟ್ಟರು. ಕಾವ್ಯಗಾಯನ ಕ್ಷೇತ್ರಕ್ಕೆ ಕವಿತೆಗಳೇ ಇಲ್ಲದೆ ಕತ್ತಲು ಆವರಿಸಿ, ಮಂಕು ಕವಿದಿದ್ದ ಕಾಲದಲ್ಲಿ, ಗೀತೆಗಳ ರಚನೆಗಿದ್ದ ಎಲ್ಲ ಆತಂಕಗಳನ್ನೂ ಗೆದ್ದು ಭಾವಗೀತೆಗಳ ರಚನೆಗೆ ಮರುಜೀವ ಕೊಟ್ಟ ಕವಿ ಲಕ್ಷ್ಮೀನಾರಾಯಣ ಭಟ್ಟರು. ನಿಸಾರ್‌ರ ‘ನಿತ್ಯೋತ್ಸವ’ ಕ್ಯಾಸೆಟ್ ಬಂದಾಗ ಜನರಿಗೆ ಕ್ಯಾಸೆಟ್ ಎಂದು ಹೇಳಲು ತಿಳಿಯದೆ ‘ಕ್ಯಾಸ್ಕೆಟ್’ ಎಂದೇ ಕೇಳುತ್ತಿದ್ದರಂತೆ. ನಿಸ್ಸಾರ್‌ರು ಪ್ರಾರಂಭಿಸಿದ ಧ್ವನಿಸುರುಳಿ ಪರಂಪರೆಗೆ ಚಾಲನೆ ಕೊಟ್ಟವರು ಲಕ್ಷ್ಮಿನಾರಾಯಣ ಭಟ್ಟರು. ‘ಬಾರೋ ವಸಂತ’ ‘ದೀಪಿಕಾ’, ಷರೀಫರ ಹಾಡುಗಳ ಸಂಪುಟಗಳನ್ನು ಲೋಕಾರ್ಪಣೆ ಮಾಡುತ್ತ ಮುನ್ನುಗ್ಗಿದ ಭಟ್ಟರು, ಸುಗಮಸಂಗೀತಕ್ಕೆ ಆಧಾರಸ್ತಂಭವಾಗಿ ನಿಂತರು. ಒಮ್ಮೆ ಆಕಾಶವಾಣಿಯವರು ಆಕಾಶವಾಣಿಯ ವಾರ್ಷಿಕೋತ್ಸವದಲ್ಲಿ ಆಹ್ವಾನಿತ ಶ್ರೋತೃಗಳೆದುರು ಶಾಸ್ತ್ರೀಯ ಕಾರ್ಯಕ್ರಮಗಳನ್ನು ಯೋಜಿಸಿಕೊಂಡಿದ್ದು, ಸುಗಮಸಂಗೀತವನ್ನು ಅಲಕ್ಷಿಸಿದ್ದರಂತೆ. ಮೈಸೂರು ಅನಂತಸ್ವಾಮಿಯವರು ಸಂಬಂಬಂಧಪಟ್ಟವರನ್ನು ಹೋಗಿ ಕೇಳಿದಾಗ ‘ಸುಗಮಸಂಗೀತಾನು ಒಂದು ಸಂಗೀತವೇನ್ರಿ’? ಬರೀ ಅಪಸ್ವರ, ಯಾವುದದು? ಸುಗಮಸಂಗೀತ. ಶುದ್ಧ ಶ್ರುತಿಯಲ್ಲಿರುವುದು ಶಾಸ್ತ್ರೀಯ ಸಂಗೀತ, ಅಪಸ್ವರ ಹಾಡುವುದೇ ಸುಗಮಸಂಗೀತ ಅಷ್ಟೇ ಎಂದರು. ನೊಂದ ಮೈಸೂರು ಅನಂತಸ್ವಾಮಿಯವರು ಭಟ್ಟರ ಬಳಿ ಬಂದು ಹೇಳಿಕೊಂಡು ವ್ಯಥೆಪಟ್ಟರು. ಸ್ವತಃ ಅನಂತಸ್ವಾಮಿಯವರೇ ಅದನ್ನು ಪ್ರತಿಭಟಿಸಲು ಹಿಂಜರಿಯುತ್ತಿದ್ದಾಗ ಭಟ್ಟರು ಅವರ ಪರವಾಗಿ, ಸುಗಮಸಂಗೀತ ಕಲಾವಿದರ ಪರವಾಗಿ ಅದನ್ನು ಪ್ರತಿಭಟಿಸಿ, ಕಲಾವಿದರನ್ನು ಸಂಘಟಿಸಿ ಆಗಿನ ಆಕಾಶವಾಣಿ ನಿರ್ದೇಸಕರಿಗೆ ಸೌಜನ್ಯದಲ್ಲಿಯೇ ಪತ್ರ ಬರೆದರು. ಆದರೆ ಅದಕ್ಕೆ ಉತ್ತರ ಬಾರದ್ದರಿಂದ ಕೂಡಲೆ ಭಟ್ಟರು ಪ್ರಜಾವಾಣಿ, ಕನ್ನಡಪ್ರಭ ಪತ್ರಿಕೆಗಳಿಗೆ ಕಲಾವಿದರಿಗಾಗಿರುವ ಅನ್ಯಾಯ ಕುರಿತು ಬರೆದರು. ಕಲಾವಿದರಾದ ಬಿ.ಕೆ. ಸುಮಿತ್ರ, ಅಶ್ವಥ್‌, ಅನಂತಸ್ವಾಮಿ, ಕಸ್ತೂರಿ ಶಂಕರ್, ರತ್ನಮಾಲಪ್ರಕಾಶ್ ಮುಂತಾದವರೆಲ್ಲರೂ ಭಟ್ಟರೊಂದಿಗೆ ಕೈಬೆಸೆದರು. ಕಲಾವಿದರ ದಂಡೆಲ್ಲಾ ಭಟ್ಟರ ಮನೆಯ ಜಗಲಿಯಲ್ಲಿ ಬಂದು ಸೇರಿದರು. ‘ಸಂಡೇ ಮಿಡ್‌ಡೇ’ – ಪತ್ರಿಕೆಯ ವರದಿಯಲ್ಲಿ ಆ ಬಗ್ಗೆ ವಿವರವಾದ ಲೇಖನ ಬಂದಿತು. ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದ ಎಷ್ಟೋ ಕಲಾವಿದರೇ ಆ ಲೇಖನದ ಅಭಿಪ್ರಾಯಕ್ಕೆ ಪರವಾಗಿದ್ದರು. ಕಡೆಗೆ ಆಕಾಶವಾಣಿ ತನ್ನ ನಿಲುವನ್ನು ಬದಲಿಸಿತು. ‘ಸುಗಮಸಂಗೀತ’ ಆಕಾಶವಾಣಿ ಆಹ್ವಾನಿತರ ವೇದಿಕೆಯನ್ನೇರಿ ಕುಳಿತಿತು. ಭಟ್ಟರು ಗೆದ್ದರು. ‘ಸುಗಮಸಂಗೀತ’ವನ್ನು ಪ್ರಚಾರ ಮಾಡಿ ಅದರ ಬೆಳವಣಿಗೆಗೆ ಕಾರಣವಾಗಿದ್ದ ಆಕಾಶವಾಣಿಯೇ ಅದನ್ನು ತಿರಸ್ಕರಿಸಿ ಮೂಲೆಗೆ ತಳ್ಳಿದ ತಪ್ಪನ್ನು ಅರಿತು ಸರಿಪಡಿಸಿಕೊಂಡಿತು. ಲಕ್ಷ್ಮೀನಾರಾಯಣ ಭಟ್ಟರು ತಮಗೆ ನೇರವಾಗಿ ಸಂಬಂಧಪಡ ವಿಚಾರಗಳಲ್ಲೂ ಕೈಚೆಲ್ಲಿ ಕೂರದೆ ಸುಗಮಸಂಗೀತ ಪುರೋವೃದ್ಧಿಗಾಗಿ ಗಮನಾರ್ಹವಾಗಿ ಕೆಲಸ ಮಾಡಿದರು.

ನವ್ಯಕಾವ್ಯದ ಸಮೃದ್ಧಿಯ ಕಾಲದಲ್ಲೇ ತಮ್ಮ ಕಾವ್ಯರಚನೆಯನ್ನು ಪ್ರಾರಂಭಿಸಿದ ಲಕ್ಷ್ಮೀನಾರಾಯಣ ಭಟ್ಟರು ನವ್ಯೋತ್ತರದಲ್ಲಿ ಯಾರ ವಿರುದ್ಧ, ಕುಹಕ, ಪ್ರತಿಭಟನೆಗಳನ್ನು ಲೆಕ್ಕಿಸದೆ, ಶುದ್ಧ ಭಾವಗೀತೆಗಳನ್ನೆ ಬರೆದರು. ಡಾ|| ಹೆಚ್.ವೆಂಕಟೇಶ್‌ಮೂರ್ತಿಯವರು ಹೇಳುವಂತೆ ಪ್ರವಾಹದ ವಿರುದ್ಧ ಈಜಿದರು. ‘ಹಾಡಬಹುದಾದ ಶುದ್ಧಾಂಗ ಭಾವಗೀತೆಗಳನ್ನು ಅಧಿಕ ಪ್ರಮಾಣದಲ್ಲಿ ಬರೆಯುತ್ತಾ, ಬೇರೆ ಬೇರೆ ಕವಿಗಳಿಗೆ ಬರೆಯಲು ಪ್ರೋತ್ಸಾಹಿಸುತ್ತಾ, ಕವಿತೆಯ ಹಾಡುಗಾರಿಕೆಗೆ ವಿರುದ್ಧವಾಗಿದ್ದವರ ಕಟುಟೀಕೆಗಳಿಗೆ ಗುರಿಯಾಗಿಯೂ ತಮ್ಮ ಶ್ರದ್ಧೆ ಮತ್ತು ಉತ್ಸಾಹವನ್ನು ಕಳೆದುಕೊಳ್ಳದೆ ಒಂದು ಚಳುವಳಿಯಂತೆ ಭಾವಗೀತೆಗಳ ಪುನರೋದಯಕ್ಕೆ ಕಾರಣರಾದವರು ಲಕ್ಷ್ಮೀನಾರಾಯಣಭಟ್ಟರು.

ಮೈಸೂರು ಅನಂತಸ್ವಾಮಿ, ಶ್ಯಾಮಲಭಾವೆ, ಆರ್.ಆರ್. ಕೇಶವಮೂರ್ತಿ, ಇವರನ್ನೆಲ್ಲಾ ಸಂಘಟಿಸಿದ ಭಟ್ಟರು, ಸುಗಮಸಂಗೀತ ಸೆಮಿನಾರ್, ಗೋಷ್ಠಿಗಳನ್ನು ಪು.ತಿ.ನ. ಅವರ ಅಧ್ಯಕ್ಷತೆಯಲ್ಲಿ ಯೋಜಿಸಿ ಸುಗಮಸಂಗೀತವೆಂಬುದು ಬರಿಯ ಡಿಪ್ಲೋಮೊ ಅಲ್ಲ, ‘Post graduate Diploma’ ಎಂಬ ಪ್ರಶಂಸೆಯನ್ನು ತಂದು ಕೊಟ್ಟರು.

ಮೈಸೂರು ಅನಂತಸ್ವಾಮಿಯವರು ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿದ್ದಾಗ, ಭಟ್ಟರು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು. ಅನಂತಸ್ವಾಮಿ ಅವರು ಭಟ್ಟರೊಂದಿಗೆ ‘ಸುಗಮಸಂಗೀತ’ಕ್ಕೆ ಪ್ರಶಸ್ತಿಯನ್ನು ಸ್ಥಾಪಿಸಬೇಕೆನ್ನುವ ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದಾಗ ಸಾಹಿತ್ಯ ಅಕಾಡೆಮಿಯ ನೆರವಿನೊಂದಿಗೆ ಸಂಗೀತ ನೃತ್ಯ ಅಕಾಡೆಮಿಯನ್ನೂ ಜೋಡಿಸಿ ಒಂದು ಸಮಿತಿ ಮಾಡಿಕೊಂಡರು. ಮೈಸೂರು ಅನಂತಸ್ವಾಮಿ, ಶ್ಯಾಮಲಾಭಾವೆ, ಆರ್.ಆರ್.ಕೇಶವಮೂರ್ತಿ, ಲಕ್ಷ್ಮೀನಾರಾಯಣ ಭಟ್ಟ ಇವರೆಲ್ಲಾ ಆ ಸಮಿತಿಯಲ್ಲಿ ಸೇರಿ ಕುಳಿತು ಚರ್ಚಿಸಿದರು. ಬಹುಜನ ಸಮುದಾಯವನ್ನು ಪ್ರತಿನಿಧಿಸುವ ಸಾಹಿತ್ಯವೇ ಪ್ರಧಾನವಾಗಿರುವ ಈ ಪ್ರಕಾರಕ್ಕೆ ‘ಗಮಕ’ ಕಲೆಗೆ ಕೊಡುತ್ತಿರುವ ಹಾಗೆಯೇ ಪ್ರಶಸ್ತಿಯನ್ನು ನೀಡಬೇಕೆಂದು ಆ ಸಮಿತಿಯಲ್ಲಿ ತೀರ್ಮಾನಿಸಲಾಯಿತು. ಸುಗಮಸಂಗೀತದ ಮುಖ್ಯ ಉದ್ದೇಶವೇ ಸಾಹಿತ್ಯ ಪ್ರಚಾರವಾದ್ದರಿಂದ ಸಾಹಿತ್ಯ ಅಕಾಡೆಮಿ ಇದಕ್ಕೆ ಒಪ್ಪಲೇಬೇಕೆಂದು ಭಟ್ಟರು ಪಟ್ಟು ಹಿಡಿದಿದ್ದರ ಪರಿಣಾಮವಾಗಿ ಸಾಹಿತ್ಯ ಅಕಾಡೆಮಿಯ ಈಗಿನ ಅಧ್ಯಕ್ಷರಾಗಿದ್ದ ಹಾ.ಮಾ. ನಾಯಕರು ಒಪ್ಪಿಗೆ ಇತ್ತರು. ೧೯೮೫ ರಿಂದ ‘ಸುಗಮಸಂಗೀತ’ ಪ್ರಕಾರಕ್ಕೆ ಸರಕಾರದಿಂದ ಪ್ರಶಸ್ತಿ ಕೊಡಲು ಪ್ರಾರಂಭವಾಯಿತು. ಮೊದಲನೇಯ ಪ್ರಶಸ್ತಿಗೆ ಹೆಚ್.ಆರ್. ಲೀಲಾವತಿಯವರು ಪಾತ್ರರಾದರು.

೧೯೮೨ರಲ್ಲಿ ಸಾಹಿತ್ಯ ಅಕಾಡೆಮಿಯಿಂದ ‘ಸುಗಮಸಂಗೀತ’ದ ಒಂದು ಸೆಮಿನಾರ್ ಏರ್ಪಡಿಸಿದವರು ಲಕ್ಷ್ಮೀನಾರಾಯಣ ಭಟ್ಟರು. ಬಾಳಪ್ಪ ಹುಕ್ಕೇರಿಯವರ ಅಧ್ಯಕ್ಷತೆಯಲ್ಲಿ ‘ಕವಿತಾ ಸಂಗೀತ’ ಎಂಬ ಇಡೀ ದಿವಸದ ಕಾರ್ಯಕ್ರಮದಲ್ಲಿ ಕರ್ನಾಟಕದ ಸುಪ್ರಸಿದ್ಧ ಸುಗಮಸಂಗೀತಗಾರರೆಲ್ಲ ಒಂದಾಗಿ ಸೇರಿ ಹಾಡಿದರು. ಮೊಟ್ಟ ಮೊದಲ ಬಾರಿಗೆ ಸಾಹಿತ್ಯ ಅಕಾಡೆಮಿ ಸುಗಮಸಂಗೀತವನ್ನು ಆತ್ಮೀಯವಾಗಿ ತನ್ನ ಕಕ್ಷೆಗೆ ತೆಗೆದುಕೊಂಡಿತು. ಭಟ್ಟರ ಸಾಹಸ ಇಲ್ಲಿಗೆ ನಿಲ್ಲದೆ ಕರ್ನಾಟಕ ಗಡೀ ಪ್ರದೇಶಗಳಲ್ಲಿ ಸಾಹಿತ್ಯ ಪ್ರಜ್ಞೆಯನ್ನೂ, ಭಾವೈಕ್ಯತೆಯನ್ನೂ ಮೂಡಿಸುವಲ್ಲಿ ಕಾರ್ಯಪ್ರವರ್ತವಾಯಿತು. ಆಗಿನ ಸಾಹಿತ್ಯ ಆಕಾಡೆಮಿಯ ಅಧ್ಯಕ್ಷರಾಗಿದ್ದ ಹಾ.ಮಾ. ನಾಯಕ್ ಅವರ ಒತ್ತಾಸೆಯಿಂದ ಅನಂತಸ್ವಾಮಿ ಮತ್ತು ಸಂಗಡಿಗರ ಆರು ಜನರ ತಂಡದೊಂದಿಗೆ ರಾಯಚೂರಿನಿಂದ ಹಿಡಿದು ಎಲ್ಲಾ ಗಡಿ ಭಾಗಗಳಲ್ಲಿ ಸುಗಮಸಂಗೀತದ ಕಹಳೆಯನ್ನು ಮೊಳಗಿಸಿದವರು. ಕವಿ, ಸುಗಮಸಂಗೀತ ಪ್ರೇಮಿ ಲಕ್ಷ್ಮೀನಾರಾಯಣ ಭಟ್ಟರು. ಸಾಹಿತ್ಯ ಅಕಾಡೆಮಿಯಿಂದ ಕುವೆಂಪು, ಬೇಂದ್ರೆ, ಮುಂತಾದ ಕವಿಗಳ ವಾಚನವನ್ನು ಧ್ವನಿಸುರುಳಿಯಲ್ಲಿ ಹಿಡಿದಿಟ್ಟಿದ್ದೇ ಅಲ್ಲದೆ ಅವುಗಳ ಗಾಯನವನ್ನೊಳಗೊಂಡ ಮೂರು ಧ್ವನಿಸುರುಳಿಗಳನ್ನು ಅಕಾಡೆಮಿಯ ಸಂಗ್ರಹಕ್ಕೆ ತುಂಬಿಕೊಟ್ಟರು.

ತಮ್ಮ ಭಾವಗೀತೆಗಳು ಧ್ವನಿಸುರುಳಿಯಲ್ಲಿ ಅಡಕಗೊಳ್ಳಲು ತೆಗೆದುಕೊಂಡ ಆಸಕ್ತಿ, ಶ್ರಮವನ್ನೇ, ಬೇರೆ ಕವಿಗಳ ಭಾವಗೀತೆಗಳ ಧ್ವನಿಸುರುಳಿ ತಯಾರಾಗುವಾಗಲೂ ತೆಗೆದುಕೊಂಡವರು ಲಕ್ಷ್ಮೀನಾರಾಯಣ ಭಟ್ಟರು. ಸಿ. ಅಶ್ವಥ್ ಅವರು ರಾಗ ಸಂಯೋಜಿಸಿದ ‘ಷರೀಫ್‌ರ ಗೀತೆಗಳು’, ಕೆ.ಎಸ್.ನರಸಿಂಹಸ್ವಾಮಿಯವರ ‘ಮೈಸೂರು ಮಲ್ಲಿಗೆ’ ಮುಂತಾದ ಅನೇಕ ಧ್ವನಿಸುರುಳಿಗಳ ಯಶಸ್ಸಿನಲ್ಲಿ ಭಟ್ಟರ ಹೆಸರು ಚಿರಸ್ಥಾಯಿಯಾಗಿದೆ. ಸುಗಮಸಂಗೀತಕ್ಕೆ ಶ್ರೀ ಭಟ್ಟರ ಕೊಡುಗೆ ಅಪಾರವಾದದ್ದು. ಕವನಗಳನ್ನು ಹಾಡುವುದೇ ತಪ್ಪು ಎನ್ನುತ್ತಿದ್ದವರನ್ನು ಎದುರಿಸಿ ಸುಗಮಸಂಗೀತದ ಏಳಿಗೆಗೆ ಅವರು ತುಂಬಾ ಸಹಾಯ ಮಾಡಿದ್ದಾರೆ; ಹಲವಾರು ಕವಿಗಳು ಈ ಕ್ಷೇತ್ರಕ್ಕೆ ಬರಲು ಸ್ಫೂರ್ತಿ ನೀಡಿದ್ದಾರೆ. ಸುಗಮಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದ ಯಾರೇ ಆದರೂ ಶ್ರೀ ಭಟ್ಟರನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವಂಥ ಅನೇಕ ಘನವಾದ ಕಾರ್ಯಗಳು ಅವರಿಂದ ನಡೆದಿವೆ” ಎಂದು ಸಿ.ಅಶ್ವಥ್‌ಅವರು ಭಟ್ಟರು ಸುಗಮಸಂಗೀತಕ್ಕೆ ನೀಡಿದ ಆತ್ಮಸ್ಥೈರ್ಯ, ಸಹಕಾರಗಳನ್ನು ಮೆಚ್ಚಿ ನುಡಿದಿದ್ದರೆ, ಶ್ರೀ ಮೈಸೂರು ಅನಂತಸ್ವಾಮಿಯವರು – “ಲಕ್ಷ್ಮೀನಾರಾಯಣ ಭಟ್ಟರು ನಮ್ಮಂಥ ಗಾಯಕರ ಜೊತೆ ಸ್ನೇಹದಿಂದ ಬೆರೆತವರು. ನಮ್ಮನ್ನು ಬೆಳೆಸುವ ಅನೇಕ ಸಲಹೆ ಸೂಚನೆಗಳನ್ನು ಕೊಡುತ್ತ ನಮಗೆ ಬೆನ್ನೆಲುಬಾಗಿ ನಿಂತವರು; ಸುಗಮಸಂಗೀತದ ಅನೇಕ ಹೊಸ ಚಟುವಟಿಕೆಗಳಿಗೆ ಕಾರಣರಾದವರು. ಈ ಕ್ಷೇತ್ರಕ್ಕೆ ಹೊಸ ಚೈತನ್ಯ, ತೇಜಸ್ಸು ಕೊಟ್ಟು ಅದರ ಪುನರುಜ್ಜೀವನ ಮಾಡಿದ ಕವಿಯೆಂದು ಅವರ ಹೆಸರು ಬೇರೆ ಎಲ್ಲರಿಗಿಂತ ಮೇಲೆ ಶಾಶ್ವತವಾಗಿ ಉಳಿಯುತ್ತದೆ. ಅವರ ಕೊಡುಗೆಗಾಗಿ ನನ್ನಂಥ ಸುಗಮಸಂಗೀತಗಾರರೆಲ್ಲ ಅವರಿಗೆ ಸದಾ ಋಣಿಗಳು” ಎಂದು ಎದೆ ತುಂಬಿ ನುಡಿದಿದ್ದಾರೆ. ಶಾಸ್ತ್ರೀಯ ಸಂಗೀತ ಮತ್ತು ಸುಗಮಸಂಗೀತ ಎರಡೂ ಪ್ರಕಾರಗಳಲ್ಲಿ ಪ್ರಸಿದ್ಧಿ ಮನ್ನಣೆಗಳಿಸಿದ ಹೆಚ್.ಕೆ.ನಾರಾಯಣ್ ಅವರು – “ಡಾ|| ಲಕ್ಷ್ಮೀನಾರಾಯಣ ಭಟ್ಟರು ಪ್ರಸಿದ್ಧರಾದ ಕವಿ, ವಿಮರ್ಶಕರು, ವಿದ್ವಾಂಸರು, ಅವರು ಸುಗಮಸಂಗೀತಕ್ಕೆ ಮಾಡಿರುವ ಕೆಲಸ ಎಷ್ಟು ದೊಡ್ಡದೆಂದು ನನ್ನಂಥ ಅನೇಕರಿಗೆ ಚೆನ್ನಾಗಿ ಗೊತ್ತು. ಹಾಡಲು ಸಾಧ್ಯವಾಗದ ನವ್ಯ ಕವನಗಳೇ ತುಂಬಿದ್ದಾಗ ಅವರು ನವ್ಯ ಕವನಗಳ ಜೊತೆಗೆ ನೂರಾರು ಮೋಹಕ ಗೀತೆಗಳನ್ನೂ ಬರೆದರು. ‘ಬಾರೋ ವಸಂತ’ – ‘ಭಾವೋತ್ಸವ’ ಮಾಧುರಿ, ಮಂದಾರ, ಕವಿತಾ, ದೀಪಿಕಾ ಮೊದಲಾದ ಅವರ ಕ್ಯಾಸೆಟ್ಟುಗಳು ಅವರ ಭಾವಗೀತೆಗಳನ್ನು ನಾಡಿನ ತುಂಬ ಹರಡಿವೆ. ಅವರ ಕೆಲಸ ಇಷ್ಟಕ್ಕೆ ಸೀಮಿತವಾಗಿಲ್ಲ. ಷರೀಫರ ಗೀತೆಗಳು, ಮೈಸೂರು ಮಲ್ಲಿಗೆ, ಭಾವ ಸಂಗಮಗಳಂಥ ಧ್ವನಿಮುದ್ರಿಕೆಗಳ ಕೆಲಸದಲ್ಲೂ ಅವರು ಹಿಂದೆ ನಿಂತು ದುಡಿದಿದ್ದಾರೆ. ನನ್ನಂಥ ಅನೇಕ ನಿರ್ದೇಶಕರಿಗೆ ಆ ಬಗೆಯ ಕೆಲಸದಲ್ಲಿ ನೆರವು ನೀಡಿದ್ದಾರೆ. ಕನ್ನಡ ಸುಗಮಸಂಗೀತದ ಹೊಸ ಚಳುವಳಿಯಲ್ಲಿ ಅವರಂತೆ ಶ್ರಮಿಸಿರುವ ಕವಿ ಇನ್ನೊಬ್ಬರಿಲ್ಲ ಎಂದು ಭಟ್ಟರು ಸುಗಮಸಂಗೀತಕ್ಕೆ ನೀಡಿದ ಮಹತ್ತರ ಕಾಣಿಕೆಗಳನ್ನೂ ಅವರ ಸಹೃದಯತೆಯನ್ನೂ ಎತ್ತಿ ನುಡಿದಿದ್ದಾರೆ.

ಶಿವಮೊಗ್ಗ ಸುಬ್ಬಣ್ಣನವರಂತೂ – ‘ತನ್ನ ಸೊಗಸಾದ ಭಾವಪೂರ್ಣವಾದ ಗೀತೆಗಳಿಂದ ಈ ಕವಿ ನಮ್ಮ ಮನ ಅರಳಿಸಿಬಿಟ್ಟ. ‘ಮುದುಡಿ ಕೂತ ಹಕ್ಕಿ ಹಾರಿ’ ಎಲ್ಲ ಒಟ್ಟಿಗೇ ದನಿ ಎತ್ತಿದೆವು. ಅನಂತಸ್ವಾಮಿ, ಅಶ್ವಥ್, ಸುಮಿತ್ರ, ಕಸ್ತೂರಿ ಶಂಕರ್, ರತ್ನಮಾಲ, ಮಾಲತಿ, ನಾನು, ಛಾಯಾ, ಒಬ್ಬರೇ ಇಬ್ಬರೆ? ಸುಗಮಸಂಗೀತ ಕಲಾವಿದರ ದಂಡೇ ಈ ಗೀತೆಗಳಿಗೆ ದಾಳಿಯಿಟ್ಟವು. ಸುಗಮಸಂಗೀತವೆಂದರೆ ಮೂಗು ಮುರಿಯುತ್ತಿದವರಿಗೂ ಅದರ ರುಚಿ ಹತ್ತಿಸಿದ್ದು ನಮ್ಮ ಸಾಧನೆ. ಈ ಕಾರ್ಯದಲ್ಲಿ ಭಟ್ಟ ನಮ್ಮ ಬೆನ್ನಿಗೆ ನಿಂತ. ಸುಗಮಸಂಗೀತದ ನೆಲೆ-ಬೆಲೆಗಳನ್ನು ಎಲ್ಲರಿಗೆ ಮನದಟ್ಟು ಮಾಡಿಕೊಟ್ಟ ದಿಶೆಯಲ್ಲಿ ಅಭಿರುಚಿ ಬೆಳೆಸಲು ಹಮ್ಮಿಕೊಂಡ ಅನೇಕ ಕಾರ್ಯಕ್ರಮಗಳು ಅವನ ಆಲೋಚನೆಯ ಫಲವೇ. ಕ್ಯಾಸೆಟ್‌ಗಳ ಮೂಲಕ ನಾಡಿನ ಉದ್ದಗಲಕ್ಕೂ ಕನ್ನಡ ಗೀತೆಗಳ ತಂಗಾಳಿ ಸುಳಿಸಿದ್ದರಲ್ಲಿ ಅವನದೇ ಪ್ರಮುಖ ಪಾತ್ರ. ದೀಪಿಕಾ, ಬಾರೋ ವಸಂತ, ಭಾವೋತ್ಸವ, ಮಂದಾರ, ಛಾಯಾ, ಮಾಧುರಿ – ಒಂದೇ ಎರಡೇ? ಇವನದೇ ಹತ್ತು ಹನ್ನೆರಡು ಕ್ಯಾಸೆಟ್‌ಗಳು. ಸಾಲದ್ದಕ್ಕೆ ಭಟ್ಟ ತಾನು ಮೆಚ್ಚಿದ ಕವಿಗಳನ್ನೂ ಕ್ಯಾಸೆಟ್ ಮೂಲಕ ಕನ್ನಡಿಗರಿಗೆ ಪರಿಚಯಿಸಿದ. ಶರೀಫ್ ಕರ್ನಾಟಕದ ಮನೆ ಮಾತಾಗಿದ್ದು, ಈ ಶರೀಫ್ ಭಟ್ಟನಿಂದಲೇ ! ಶರೀಫರ ಗೀತೆಗಳನ್ನು ಅವನು ವಿಶ್ವವಿದ್ಯಾಲಯಕ್ಕೆ ಸಂಪಾದಿಸಿಕೊಟ್ಟ. ಎಂ.ಎಸ್.ಐ.ಎಲ್. ಕಾರ್ಯಕ್ರಮದಲ್ಲಿ ಅವುಗಳನ್ನು ಹಾಡು ಮಾಡಲು ಪ್ರೇರಣೆಕೊಟ್ಟ. ಮುಂದೆ ಭಟ್ಟನ ಪ್ರಯತ್ನ, ಸಂಗೀತ ಸಂಸ್ಥೆಯ ಮಹೇಶರ ಧೈರ್ಯ, ಅಶ್ವಥ್‌ರ ಕೆಚ್ಚಿನ ರಾಗ ಸಂಯೋಜನೆ ಒಂದಾಗಿ ಷರೀಫ್‌ರು ಕನ್ನಡಿಗರ ಮನೆ – ಮನ ತುಂಬಿದರು. ನರಸಿಂಹಸ್ವಾಮಿಯವರ ‘ಮೈಸೂರು ಮಲ್ಲಿಗೆ’ ಕ್ಯಾಸೆಟ್‌ಆದದ್ದರಲ್ಲೂ ಭಟ್ಟನ ಪಾತ್ರವಿದೆ. ಕನ್ನಡಕ್ಕೆ ಹೊಸದೆನಿಸುವ ಕವಿಗಳ ಕಾವ್ಯ ವಾಚನದ ಕ್ಯಾಸೆಟ್, ‘ಸಮ್ಮಿಲನ’ ಕೂಡ ಭಟ್ಟನದೇ ಆದ ಹೊಸ ಕೊಡುಗೆ. ಕನ್ನಡದಲ್ಲಿ ಇದು ಮೊದಲ ಪ್ರಯತ್ನ. ಸುಗಮಸಂಗೀತ ಕಲಾವಿದರೊಡನೆ ಅವನು ಕೈಗೂಡಿಸಿದ ಫಲವಾಗಿ ಇಂದು ಅದರ ಬಗೆಗೆ ಚರ್ಚೆ, ಗೋಷ್ಠಿ, ಅದರದೇ ಕಛೇರಿ, ಸಾಹಿತ್ಯ ಸಮ್ಮೇಳನದಲ್ಲಿ ‘ಗೀತ ಸಂಗೀತ’ ಮೊದಲಾದುವೆಲ್ಲ ನಡೆಯುತ್ತಿದೆ’ – ಎಂದು ಹೇಳಿ ಸುಗಮಸಂಗೀತ ಇತಿಹಾಸ ಮತ್ತು ಭಟ್ಟರ ಕಾಣಿಕೆಯನ್ನು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ. ಬಿ.ಕೆ. ಸುಮಿತ್ರ ಅವರು ‘ಕಲಾವಿದರ ಪರನಿಂತ ಕವಿ’ ಎಂದು ಬಣ್ಣಿಸುತ್ತಾ – “ಸುಗಮಸಂಗೀತ ಕ್ಷೇತ್ರಕ್ಕೆ ಭಟ್ಟರ ಹಾಗೆ ನಾನಾ ವಿಧದಲ್ಲಿ ಒದಗಿದ ಕವಿ ಇನ್ನೊಬ್ಬರಿಲ್ಲ. ಅವರಿಂದಾಗಿ ಸುಗಮಸಂಗೀತ ಚಳುವಳಿಗೆ ಬಹಳ ಬಲ ಬಂತು. ಎಷ್ಟೋ ಜನ ಕಲಾವಿದರ ನೆರವಿಗೆ ಅವರು ಬಂದಿದ್ದಾರೆ’. – ಎಂದು ಲಕ್ಷ್ಮೀನಾರಾಯಣ ಭಟ್ಟರು, ನುಡಿಯಲ್ಲಿ ಮತ್ತು ನಡೆಯಲ್ಲಿ ಹೇಗೆ ಅಭಿನ್ನರು ಎಂಬುದನ್ನು ತಿಳಿಸಿದ್ದಾರೆ.

ಸುಗಮಸಂಗೀತದ ಮುನ್ನಡೆಗಾಗಿ ಅದರ ಪುರೋವೃದ್ಧಿಗಾಗಿ ಶ್ರಮಿಸಿದ ಲಕ್ಷ್ಮೀನಾರಾಯಣ ಭಟ್ಟರು ಕೇವಲ ಕನ್ನಡನಾಡಿನಲ್ಲಾಗಲಿ ಅಥವಾ ಗಡಿನಾಡುಗಳಲ್ಲಾಗಲಿ ತಮ್ಮನ್ನು ಸೀಮಿತಗೊಳಿಸದೆ ಹೊರದೇಶಗಳಲ್ಲಿಯೂ ಸಾಹಿತ್ಯ ಹಾಗೂ ಸುಗಮಸಂಗೀತದ ಪರಿಚಾರಕರಾಗಿ, ಪ್ರಚಾರಕರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎಪ್ಪತ್ತು ವರ್ಷ ಇಳಿವಯಸ್ಸಿನಲ್ಲಿಯೂ ಕ್ರಿಯಾಶೀಲರಾಗಿದ್ದಾರೆ. ತೀರ ಇತ್ತೀಚೆಗೆ (೨೦೦೬ ಜೂನ್-ಜುಲೈ) ಸಾಹಿತ್ಯ ಪ್ರಚಾರಕ್ಕಾಗಿ ಅಮೇರಿಕಾಗೆ ತೆರಳಿ ಅಲ್ಲಿಯ ಕನ್ನಡಿಗರಿಗೆ ಸಾಹಿತ್ಯೋಪನ್ಯಾಸಗಳನ್ನು ನೀಡಿ ಅವರ ಮನಸ್ಸನ್ನು ಗೆದ್ದು ಬಂದಿದ್ದಾರೆ. ಕನ್ನಡ ಸಾಹಿತ್ಯದ ಹಿರಿಮೆಯನ್ನು ಧ್ವನಿಸುರುಳಿಯ ಹೂರಣವಾಗಿಸಿ ಹಂಚಿ ಬಂದಿದ್ದಾರೆ. ಹಳೆಗನ್ನಡದಿಂದ ಹೊಸಗನ್ನಡದವರೆಗಿನ ಸಾಹಿತ್ಯದಲ್ಲಿ ಗಮಕ, ಸುಗಮಸಂಗೀತ ಎಲ್ಲವನ್ನೂ ಅಡಕಿಸಿ ಹುದುಗಿಸಿಕೊಟ್ಟಿದ್ದಾರೆ. ಇವರು ನೀಡಿದ ಉಪನ್ಯಾಸಗಳ ಬಗೆಗೆ ಕನ್ನಡಿಗರು ಪ್ರಶಂಸನೆಯ ಹುಚ್ಚುಹೊಳೆಯನ್ನೇ ಸುರಿಸಿದ್ದಾರೆ – “ಇದು ಪ್ರೋ|| ಲಕ್ಷ್ಮೀನಾರಾಯಣ ಭಟ್ಟರ ಅದ್ಭುತ ಸಾಹಸ’ ಎಂದು ಕ್ಯಾಲಿಫೋರ್ನಿಯದ ಆಹಿತಾಲನರು ಹೇಳಿದರೆ, ಶರೀಫ್‌ಭಟ್ಟರೊಡನೆ ಅಟ್ಲಾಂಟಾದಲ್ಲೊಂದು ಸುಮಧುರ ಸಂಜೆ’ ಎಂದು ಮಂಗಳಾ ಮಧುಸೂದನ್ ವರ್ಣಿಸಿದ್ದಾರೆ. ಫ್ಲಾರಿಡಾದಲ್ಲಿ ನಡೆದ ಸಾಹಿತ್ಯ ಶಿಬಿರದ ಬಗೆಗೆ ಮಂದಗೆರೆ ಅಶೋಕ ಭಾರಧ್ವಜ ಬರೆಯುತ್ತಾ ‘ಎನ್‌.ಎಸ್.ಎಲ್. ಭಟ್ಟರೆಂಬ ಬೋಧಿವೃಕ್ಷದ ಕೆಳಗೆ’ – ಎಂದು ಭಟ್ಟರ ಉಪನ್ಯಾಸವನ್ನು ಬುದ್ಧ ನೀಡಿದ ಜ್ಞಾನೋಪದೇಶಕ್ಕೆ ಹೋಲಿಸಿದರೆ, ಉತ್ತರ ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನ ಜೋತಿಮಹಾದೇವ್, – ‘ಜ್ಞಾನದಾಹಿಗಳಿಗೆ ಗಂಗೆಯನ್ನು ಹನಿಸಿದ ಹಿರಿಯ ಕವಿ ಡಾ|| ಎನ್.ಎಸ್.ಎಲ್. ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಸಮುದಾಯವೊಂದರ ಕಣ್ ತೆರೆಸಿದರು – ಎಂದಿದ್ದಾರೆ. “ಶಿಕಾಗೋ ಕನ್ನಡಿಗರ ಮುಂದೆ ಸಾಹಿತ್ಯ ಸರಸ್ವತಿ” ಎಂದು ತ್ರಿವೇಣಿ ಶ್ರೀನಿವಾಸರಾವ್ ಭಟ್ಟರನ್ನು ಕೊಂಡಾಡಿದರೆ, ಲಾಸ್‌ ಎಂಜಲಿಸ್‌ನಲ್ಲಿ ನಡೆದ ಕನ್ನಡ ಕಾವ್ಯ ಪರಂಪರೆ ಕುರಿತ ರಸಗವಳದ ಬಗೆಗೆ ವರ್ಣಿಸುತ್ತಾ – ‘ಪಂಪನಿಂದ ಚಂಪಾವರೆಗೆ ಕನ್ನಡದ ಕಂಪನ್ನು ಫರಂಗಿಯರ ದೇಶದಲ್ಲಿ ಪಸರಿಸಿದುದು ಕನ್ನಡ ಭಟ್ಟರ ಹೆಮ್ಮೆ ಎಂದು ಶ್ರೀನಿವಾಸಭಟ್ಟ ಪ್ರಶಂಸಿದ್ದಾರೆ. ಭಟ್ಟರು ಎಲ್ಲಿದ್ದರೂ ಹೇಗಿದ್ದರೂ ತಮ್ಮ ಸಾಹಿತ್ಯ – ಸಂಗೀತ ಪ್ರೀತಿಯಿಂದ ಇತಿಹಾಸವನ್ನೇ ನಿರ್ಮಿಸಬಲ್ಲರು – ಎನ್ನುವುದು ಇದರಿಂದ ಗೋಚರವಾಗುತ್ತದೆ. ‘ಸುಗಮಸಂಗೀತ’ ಕ್ಷೇತ್ರ ಶ್ರೀಮಂತವಾಗಿರುವುದು, ಮುಂದೆಯೂ ಇದೇ ಮುಂದುವರಿಯಬೇಕಾದರೆ ಇಂತಹ ಇತಿಹಾಸಕಾರರಿಂದ ಮಾತ್ರ ಅದು ಸಾಧ್ಯ.

‘ಸುಗಮಸಂಗೀತ’ದ ಸಂಗೀತ ನಿರ್ದೇಶಕರಾಗಿ ಗಾಯಕರಾಗಿ ತಮ್ಮ ಅನುಪಮ ಕೊಡುಗೆಯನ್ನು ನೀಡಿ ಈ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಹಿರಿಮೆ ಸಿ. ಅಶ್ವಥ್ ಅವರಿಗೆ ಸೇರುತ್ತದೆ. ತಮ್ಮ ವಿಶಿಷ್ಟಶೈಲಿಯ ಸಂಯೋಜನೆಯಿಂದ, ಸಿರಿಕಂಠದಿಂದ ಅಶ್ವಥ್‌ನಾಡಿನಲ್ಲಿ ಮನೆ ಮಾತಾಗಿದ್ದಾರೆ.ನಾಟಕ, ಸಿನಿಮಾ, ಸುಗಮಸಂಗೀತ – ಈ ಮೂರೂ ಮುಪ್ಪುರಿಗೊಂಡ ಅವರಲ್ಲಿ ಸಹಜ ಪ್ರತಿಭೆ, ಸ್ವಂತ ಚಿಂತನೆಗಳು ತುಂಬಿಕೊಂಡ ಕಾರಣದಿಂದ ಅಶ್ವಥ್ ಒಬ್ಬ ಕನಸುಗಾರರಾಗಿದ್ದಾರೆ. ನಿರಂತರ ಪ್ರಯೋಗಶೀಲರಾಗಿದ್ದಾರೆ. ಅವರಂತೆ ವಸ್ತುನಿಷ್ಠರಾಗಿ ‘ಸುಗಮಸಂಗೀತ’ ಕ್ಷೇತ್ರಕ್ಕೆ ಬದುಕನ್ನು ಅರ್ಪಿಸಿಕೊಂಡವರು ಯಾರೂ ಇಲ್ಲ ಎನ್ನಬಹುದು. ಸಾವಿರಾರು ಹಾಡುಗಳ ಸಂಯೋಜನೆಯಲ್ಲಿ ಹೊಚ್ಚಹೊಸತನವಿದೆ. ಬಣ್ಣ ಬಣ್ಣಗಳಿವೆ.

ಅಶ್ವಥ್ ಕ್ಯಾಸೆಟ್ ಪ್ರಪಂಚಕ್ಕಂತೂ ನೀಡಿದ ಕಾಣಿಕೆ ಅಭೂತಪೂರ್ವವಾಗಿದೆ. ಶಿಶುಗೀತೆ, ರಂಗಗೀತೆ, ಜಾನಪದ ಗೀತೆ, ಭಾವಗೀತೆ, ದಾಸರ ಪದಗಳು, ಷರೀಫ್‌ರ ಗೀತೆಗಳು, ತತ್ವಪದಗಳು, ವಚನಗಳು, ಕಾನೂನು ಗೀತೆಗಳು, ದೇಶಭಕ್ತಿ ಗೀತೆಗಳು, ಒಂದೇ, ಎರಡೇ ಸಹ ಸಂಯೋಜಕರುಗಳಿಗೆ ಹೊಟ್ಟೆಗಿಚ್ಚು ಬರುವಷ್ಟರ ಮಟ್ಟಿಗೆ ಇವು ವೈವಿಧ್ಯತೆಯನ್ನು ಪಡೆದುಕೊಂಡಿವೆ. ಅಶ್ವಥ್ ಮನಸ್ಸಿಗೆ ಏನಾದರೂ ಹೊಸತು ಹೊಳೆದರೆ, ಎಡೆಬಿಡದ ತ್ರಿವಿಕ್ರಮನಂತೆ, ಅದು ಸಿದ್ಧಿಯಾಗುವವರೆವಿಗೆ ತಿರುಗಿ ನೋಡಲಾರರು. ಏನನ್ನೂ ಮಾರಿಯಾದರೂ ಅದನ್ನು ಸಾಧಿಸಿಯೇ ತೀರುವವರು.

ನಿರಂತರ ಹುಡುಕಾಟದಲ್ಲಿ ಇರುವ ಅಶ್ವಥ್ ಸಿನಿಮಾರಂಗವನ್ನು ಪಕ್ಕಕ್ಕೆ ಇಟ್ಟು ಸುಗಮಸಂಗೀತವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದಕ್ಕೆ ಮುಖ್ಯ ಕಾರಣ ಅವರಲ್ಲಿದ್ದ ಸ್ವಂತಿಕೆ, ಕಾವ್ಯ ಪ್ರೇಮ ಮತ್ತು ಸೃಜನಶೀಲತೆ.

ಸುಗಮಸಂಗೀತವನ್ನು ಬೇರೆ ಬೇರೆ ಕಲಾ ಮಾಧ್ಯಮದೊಂದಿಗೆ ಸಮೀಕರಿಸಿ ಪ್ರಯೋಗಗಳನ್ನು ನಡೆಸಿದವರು ಅಶ್ವಥ್‌ಅವರು. ಅವರ ‘ಗೀತಮಾಧುರಿ’ (೧೯-೧೨-೧೯೮೮ ರಂದು) ಸುಗಮಸಂಗೀತೋತ್ಸವದಲ್ಲಿ ಚಿತ್ರ – ಸಂಗೀತ – ಸಾಹಿತ್ಯ – ನರ್ತನ – ಅಭಿನಯ, ಕಲೆಗಳ ಒಂದು ರಸಯೋಗವನ್ನು ಸೃಷ್ಟಿಮಾಡಿದರು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೊಟ್ಟಮೊದಲನೆಯ ಬಾರಿಗೆ ಕವಿಗಳು, ಸಂಗೀತಗಾರರು, ಚಿತ್ರಕಾರರು, ನಟರು, ನರ್ತಕರು, ರಂಗತಜ್ಞರು, ಧ್ವನಿತಜ್ಞರು, ತಂತ್ರಜ್ಞರು ಒಮ್ಮನಸ್ಸಿನಿಂದ ಒಂದೇ ನಿಶ್ಚಿತ ಗುರಿಗೆ ತಮ್ಮ ಪ್ರತಿಭಾ ಪ್ರಕಾಶವನ್ನು ಕೇಂದ್ರಿಕರಿಸಿ ಯಶಸ್ವಿಯಾದರು. ನಾಡಿನ ಸಾಂಸ್ಕೃತಿಕ ಇತಿಹಾಸದಲ್ಲಿ ಈ ಕಾರ್ಯಕ್ರಮ ಅಪೂರ್ವವಾಗಿದ್ದಲ್ಲೆ, ಅಶ್ವಥ್‌ರ ಕಲ್ಪನಾ ಶಕ್ತಿ, ಕರ್ತುತ್ಪಶಕ್ತಿಗೆ ಸಾಕ್ಷಿಯಾಯಿತು.

ಮುಖ್ಯವಾಗಿ ಕರ್ನಾಟಕದ ವಾದ್ಯಗಾರರನ್ನೇ ಧ್ವನಿಮುದ್ರಣಕ್ಕೆ ವೇದಿಕೆಗೆ ಬಳಸಬೇಕೆಂಬ ಪರಿಕಲ್ಪನೆಯನ್ನು ತಂದು ಪಾಲಿಸಿದವರು ನಮ್ಮ ಅಶ್ವಥ್ ಅವರು. ‘ಸುಗಮಸಂಗೀತ’ ಎನ್ನುವ ಹೆಸರಿನ ಹಿಂದೆ ಅವರ ಪರಿಶ್ರಮವನ್ನು ಮರೆಯುವಂತೆಯೇ ಇಲ್ಲ. ಸುಗಮಸಂಗೀತದ ಬಗೆಗಿನ ಅವರ ಕಾಳಜಿ ‘ಸುಗಮಸಂಗೀತ’ಕ್ಕೊಂದು ಭಾಷ್ಯವಿದ್ದಂತೆ ಬರೆದಿರುವ ಪುಸ್ತಕದಲ್ಲಿ (೧೯೮೮) ವ್ಯಕ್ತವಾಗುತ್ತದೆ.

ಸುಗಮಸಂಗೀತದಲ್ಲಿ ‘ಸಮೂಹಗಾಯನ’ ಕಲ್ಪನೆಯನ್ನು ತಂದ ಅಶ್ವಥ್ ಸುಮಾರು ಸಾವಿರ ಜನ ಗಾಯಕ ಗಾಯಕಿಯರಿಂದ ಕುವೆಂಪು ಅವರ ವೈಚಾರಿಕ ಗೀತೆಗಳನ್ನು ಮೊತ್ತ ಮೊದಲ ಬಾರಿಗೆ ಹಾಡಿಸಿದರು. ೨೦೦೦ದಲ್ಲಿ ಅಮೇರಿಕಾದ ಹೂಸ್ಟನ್‌ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸುಮಾರು ೯ ವಿವಿಧ ಭಾಗದಿಂದ ಆಯ್ದ ೨೨೦ ಗಾಯಕರಿಗೆ ಕುವೆಂಪು ಗೀತೆಗಳ ತರಬೇತಿ ನೀಡಿ ಹಾಡಿಸಿದರು. ‘ವಚನ’ ಗಾಯನ ಶೈಲಿಯನ್ನೇ ಬದಲಿಸಿ ನೃತ್ಯ ಶೈಲಿಗೆ ಅಳವಡಿಸಿ ಸುಮಾರು ೪೨ ವಚನಗಳಿಗೆ ರಾಗ ಸಂಯೋಜಿಸಿದರು.

‘ಗೀತಮಾಧುರಿ’ ಎಂಬ ಹೆಸರಿನಲ್ಲಿ ಅಶ್ವಥ್ ವಿವಿಧ ಆಯಾಮಗಳ ಮೂಲಕ ಸುಗಮಸಂಗೀತವನ್ನು ಪ್ರಸ್ತುತ ಪಡಿಸಿದರು. ದೂರದರ್ಶನದ ಧಾರವಾಹಿಯಾಗಿ ೬೦ ಕವಿತೆಗಳಿಗೆ ರಾಗ ಸಂಯೋಜಿಸಿ ಅದನ್ನು ದೃಶ್ಯ ಮಾಧ್ಯಮದ ಮೂಲಕ ಆಕರ್ಷಕವಾಗಿ ಮಾಡಿದರು. ಶ್ರಾವ್ಯದಿಂದ ಸುಗಮಸಂಗೀತ ವಿಸ್ತರಗೊಂಡು ದೃಶ್ಯಕ್ಕೂ ಇಳಿಯಿತು. ನೃತ್ಯಾಭಿನಯದಲ್ಲಿ ಮತ್ತಷ್ಟು ಆಕರ್ಷಕವಾಯಿತು. ‘ಸ್ವರಮಾಧುರಿ’ ಎನ್ನುವ ಪುಸ್ತಕದಲ್ಲಿ ಅಶ್ವಥ್ ಅವರು ತಮ್ಮ ರಾಗ ಸಂಯೋಜನೆಗಳ ೧೫೦ ಗೀತೆಗಳನ್ನು ಸಂಗೀತದ ಸ್ವರ ಪ್ರಸ್ತಾರದ ಮೂಲಕ ಮುದ್ರಿಸಿ ಹೊರತಂದರು. ಚಲನಚಿತ್ರ ಗೀತೆಗಳು, ರಂಗ ಗೀತೆಗಳು, ಸುಗಮಸಂಗೀತ, ಇವುಗಳ ಜೊತೆಗೆ ಅಶ್ವಥ್‌ರ ಹೊಸ ಸಾಧನೆ ಎಂದರೆ ಸುಮಾರು ದೂರದರ್ಶನ ಧಾರವಾಹಿಗಳ ಶೀರ್ಷಿಕೆ ಗೀತೆಗಳಿಗೆ ರಾಗಸಂಯೋಜನೆ ಮಾಡಿದ್ದುದು. ಅಶ್ವಥ್‌ಅವರು ರಾಗಸಂಯೋಜನೆ ಮಾಡಿದ ಎಲ್ಲಾ ಶೀರ್ಷಿಕೆ ಗೀತೆಗಳೂ ಅತ್ಯಂತ ಯಶಸ್ವೀ ಗೀತೆಗಳಾದವು. ಅವುಗಳ ಜನಪ್ರಿಯತೆ ಎಷ್ಟಾಯಿತೆಂದರೆ ದೂರದರ್ಶನದ ಆಚೆಗಿನ ವೇದಿಕೆಗೂ ಅವು ಬಂದಿಳಿದು ಕೇಳುಗರ ಕೋರಿಕೆಯ ಗೀತೆಗಳಾದವು. ಟಿ.ಎನ್. ಸೀತಾರಾಂ ಅವರ ‘ಮಾಯಾಮೃಗ’ – ‘ಮನ್ವಂತರ’ – ‘ಮುಕ್ತಾ’ ಧಾರವಾಹಿಗಳ ಜೀವರಾಗವೇ ಅಶ್ವಥ್ ಅವರ ಶೀರ್ಷಿಕೆ ಗೀತೆಯಿಂದ ಆರಂಭಗೊಂಡಿತು.

ಸುಗಮಸಂಗೀತಕ್ಕೆ ಒಂದು ಹೊಸ ಆಯಾಮವನ್ನು ನೀಡಬೇಕೆಂಬ ಗಂಭೀರ ಯೋಚನೆಯಲ್ಲಿ ಮೂಡಿದ ಕಾರ್ಯಕ್ರಮವೇ ಅವರ ‘ಕನ್ನಡವೇ ಸತ್ಯ’ – ಕಾರ್ಯಕ್ರಮ. ಸುಗಮಸಂಗೀತದಲ್ಲಿ ಪ್ರತಿಯೊಂದು ಹಂತದಲ್ಲಿಯೂ ಅಪೂರ್ವ ದಾಖಲೆಗಳನ್ನೆ ಮಾಡಿದ ಅಶ್ವಥ್ ೨೦೦೫ರ ಏಪ್ರಿಲ್ ತಿಂಗಳಲ್ಲಿ ಬೆಂಗಳೂರು ಅರಮನೆಯ ಆವರಣದಲ್ಲಿ ನೀಡಿದ ‘ಕನ್ನಡವೇ ಸತ್ಯ’ ಕಾರ್ಯಕ್ರಮ ಅಭೂತಪೂರ್ವ ಯಶಸ್ಸಿನಿಂದ ಅಶ್ವಥ್‌ರನ್ನು ಒಂದೇ ರಾತ್ರಿಯಲ್ಲಿ ತಾರೆಯನ್ನಾಗಿ ಮಾಡಿತು. ಮಹಾತಾರೆಗಳು, ಚಲನಚಿತ್ರ ನಟರು ನೀಡುವ ಕಾರ್ಯಕ್ರಮ, ಅದರಲ್ಲೂ ಕನ್ನಡ ಬಿಟ್ಟು ಬೇರೆ ಯಾವುದೇ ಭಾಷೆಯವರ ಕಾರ್ಯಕ್ರಮಕ್ಕೆ ಸಾಮಾನ್ಯವಾಗಿ ಅರಮನೆಯ ಆವರಣ ತುಂಬಿ ತುಳುಕುತ್ತಿತ್ತು. ಆದರೆ ಅಂದು ಹಿಂದಿನ ಎಲ್ಲಾ ದಾಖಲೆಗಳನ್ನು ‘ಕನ್ನಡವೇ ಸತ್ಯ’ ಒಂದೇ ರಾತ್ರಿಯಲ್ಲಿ ಸುಳ್ಳು ಮಾಡಿತು. ಒಂದು ಲಕ್ಷಕ್ಕೂ ಹೆಚ್ಚು ಜನ ಯಾವ ಸಿನಿಮಾ ತಾರೆಯರ ಆಕರ್ಷಣೆಯಿಲ್ಲದ, ‘ಸುಗಮಸಂಗೀತ’ ಕಾರ್ಯಕ್ರಮಕ್ಕೆ ನೆರೆದಿದ್ದರು. ಅಶ್ವಥ್‌ಕೇವಲ ಒಬ್ಬ ಹಾಡುಗಾರನಾಗಿ ಮಾತ್ರ ಸಲ್ಲದೆ, ಕನ್ನಡ ಕಲೆಯ ಸುಗಮಸಂಗೀತದ, ಸಂಸ್ಕೃತಿಯ ಒಬ್ಬ ಬಹುಮುಖ್ಯ ಪ್ರತಿನಿಧಿಯಾಗಿ ಕನ್ನಡನಾಡಿನ ಆಸ್ತಿಯಾದರು. ಕನ್ನಡಿಗರೆಲ್ಲರನ್ನು ಒಗ್ಗೂಡಿಸುವುದು ಸುಗಮಸಂಗೀತಕ್ಕೆ ಮಾತ್ರ ಸಾಧ್ಯವಿದೆ ಎಂಬುದನ್ನು ಸಾಬೀತುಮಾಡಿ ತೋರಿಸಿದರು. ರಾಜಕೀಯ ಚಳುವಳಿಗಿಂತ ಸಾಂಸ್ಕೃತಿಕ ಚಳುವಳಿ ಶಕ್ತಿಯುತವಾದದ್ದು ಎಂಬುದನ್ನು ಅಶ್ವಥ್‌ರ ‘ಕನ್ನಡವೇ ಸತ್ಯ’ ಎತ್ತಿ ಹಿಡಿಯಿತು.

ಸುಗಮಸಂಗೀತ ಜನಮಾನಸ ಭಾವ ಪ್ರಪಂಚವನ್ನು ತಣಿಸಿದರಷ್ಟೇ ಸಾಲದು. ವೈಚಾರಿಕ ಎಚ್ಚರವನ್ನು ಮೂಡಿಸುವ ಶಕ್ತಿಯಾಗಿಯೂ ಅದು ರೂಪುಗೊಳ್ಳಬೇಕು ಎಂಬುದು ಅಶ್ವಥ್‌ಅವರ ಇತ್ತೀಚಿನ ನಿಲುವು. ಹೀಗಾಗಿಯೇ ಅವರು ಸುಗಮಸಂಗೀತವನ್ನು ವೈಯಕ್ತಿಕ ನೆಲೆಯಿಂದ ಸಮಷ್ಠಿಯ ಕಡೆಗೆ ಕರೆದೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲರನ್ನೂ ಎಲ್ಲವನ್ನೂ ಒಳಗೊಳ್ಳುವ ಮೂಲಕ ಅದೊಂದು ಶಕ್ತಿಯಾಗಿ ರೂಪಾಂತರ ಪಡೆಯಬೇಕು ಎಂದು ಹಂಬಲಿಸುತ್ತಿದ್ದಾರೆ. ಆದ್ದರಿಂದಲೇ ಅಶ್ವಥ್ ಅವರಿಗೆ ಸುಗಮಸಂಗೀತ – ಕೇವಲ ಕಲೆ ಮಾತ್ರವಲ್ಲ. ಎಚ್ಚರದ ದನಿಯಾಗಿದೆ. ಅದೊಂದು ಚಳುವಳಿಯಾಗಿದೆ.

ಕವಿಯಾಗಿ ಡಾ|| ಲಕ್ಷ್ಮೀನಾರಾಯಣ ಭಟ್ಟರು, ಸುಗಮಸಂಗೀತಗಾರರಾಗಿ ಸಿ. ಅಶ್ವಥ್‌ರ ಹಾಗೆ ವೈ.ಕೆ.ಎಂ. ಮುದ್ದುಕೃಷ್ಣ ಅವರ ಹೆಸರು ಸಂಘಟನೆಯಲ್ಲಿ ಮುಖ್ಯವಾದ ಹೆಸರಾಗಿದೆ. ಗಾಯಕರಾಗಿ ತಮ್ಮ ಒಲವನ್ನು ಸುಗಮಸಂಗೀತದತ್ತ ಮೂಡಿಸಿಕೊಂಡಿರುವ ಮುದ್ದುಕೃಷ್ಣ ಅವರ ಸಾಮರ್ಥ್ಯ ಎದ್ದು ಕಾಣುವುದು ಅವರ ಸಂಘಟನಾ ಕೌಶಲದಿಂದ.

ಇಂದು ‘ಸುಗಮಸಂಗೀತ’ ಎಲ್ಲರ ಮನೆ ಮನಗಳಲ್ಲಿ ಹುದುಗಿ ಕುಳಿತುಕೊಂಡಿದ್ದರ ಹಿಂದೆ ಅನೇಕ ಸಂಘಟನಾಕಾರರ ಹೆಸರಿದೆ. ಮುಖ್ಯವಾಗಿ ಜಿ.ವಿ. ಅತ್ರಿಯವರು ‘ಸುಗಮಸಂಗೀತ’ ನೀಡಿದ ಕಾಣಿಕೆ ಅಪೂರ್ವ. ‘ಕನ್ನಡ ಸಂಗೀತ’ ಎಂದೇ ‘ಸುಗಮಸಂಗೀತ’ವನ್ನು ಕರೆದವರು ಅತ್ರಿ. ನಂತರ ಬೆಂಗಳೂರು, ಧಾರವಾಡ, ಹೈದ್ರಾಬಾದ್ ಕರ್ನಾಟಕದ ಗಡಿ ಭಾಗದ ಗುಲ್ಬರ್ಗ ಮತ್ತು ಚಿಕ್ಕಮಗಳೂರಿನಲ್ಲಿ ಅತ್ರಿ ನಡೆಸಿದ ‘ಕನ್ನಡ ಸಂಗೀತ’ ಸಮ್ಮೇಳನಗಳು, ‘ಸುಗಮಸಂಗೀತ’ದ ಮೊದಲ ೬ ಸಮ್ಮೆಳನಗಳಾದವು. ಮಹಾ ಕನಸುಗಾರರಾದ ಅತ್ರಿ ಹಿರಿಯ ಕಿರಿಯ ಶಾಸ್ತ್ರೀಯ ಸಂಗೀತ ವಿದ್ವಾಂಸರುಗಳನ್ನು, ಕವಿಗಳನ್ನು ಆಹ್ವಾನಿಸಿ, ಸನ್ಮಾನಿಸಿದ್ದೇ ಅಲ್ಲದೆ ಸುಗಮಸಂಗೀತದ ವಿಸ್ತರಣೆಯ ಬಗೆಗೆ ಹೆಚ್ಚು ತಲೆ ಕೆಡಿಸಿಕೊಂಡದ್ದೂ ಉಂಟು. ಪ್ರಥಮ ಸಮ್ಮೇಳನದಲ್ಲಿಯೇ ಸ್ಥಳದಲ್ಲೇ ಕವಿತೆಗೆ ರಾಗ ಸಂಯೋಜಿಸಿ ಹಾಡುವ ‘ಸೃಷ್ಠಿ;’ ಎಂಬ ವಿನೂತನ ಕಾರ್ಯಕ್ರಮವನ್ನು ಅತ್ರಿ ಹಮ್ಮಿಕೊಂಡಿದ್ದರು. ವಿಚಾರ ಸಂಕಿರಣಗಳೂ ನಡೆದವು. ಕವಿತೆ ಹಾಡಾಗುತ್ತಾ ಚಿತ್ರಕಲೆ ಮತ್ತು ನೃತ್ಯದೊಂದಿಗೆ ಸವಾಲು ಎಸೆಯುವ ಕಾರ್ಯಕ್ರಮಗಳನ್ನು ಅತ್ರಿ ಆಯೋಜಿಸಿದ್ದರು. ಅತ್ರಿಯವರ ಕ್ರಿಯಾಶೀಲತೆ ಸಾಕ್ಷಿಯಾದ ಕಾರ್ಯಕ್ರಮವೆಂದರೆ ಕಾರಾಗೃಹದಲ್ಲಿನ ಖೈದಿಗಳಿಗೆ ಸುಗಮಸಂಗೀತ ಕಮ್ಮಟವನ್ನು ಹಮ್ಮಿಕೊಂಡಿದ್ದು. ಶ್ರೀ ವಿಜಯ ಸಾಸನೂರ, ಕಾ.ತ. ಚಿಕ್ಕಣ್ಣ ಮತ್ತು ಡಾ|| ಜಯ ಅರವಿಂದ್ ಅವರ ಕವಿತೆಗಳಿಗೆ ರಾಗ ಸಂಯೋಜಿಸಿದ ಅತ್ರಿ ಖೈದಿಗಳಿಗೂ ಮನಃ ಪರಿವರ್ತನೆಯಾಗುವಂತೆ ‘ಸುಗಮಸಂಗೀತ’ವನ್ನು ಕಲಿಸಲು ಪ್ರಯತ್ನಿಸಿದರು. ತಮ್ಮ ‘ಸಂಗೀತ ಗಂಗಾ’ ಸಂಸ್ಥೆಯಲ್ಲಿ ಪ್ರತಿ ವರ್ಷ ‘ಸಂಗೀತ ಗಂಗಾ’ ಎಂಬ ವಾರ್ಷಿಕ ಪ್ರಶಸ್ತಿಯನ್ನು ಸ್ಥಾಪಿಸಿದಿ ಅತ್ರಿ ಕಾಲದ ಕೆಸರಲ್ಲಿ ಮುಳುಗಿಹೋದದ್ದು ವಿಪರ್ಯಾಸವಾಯಿತು. ಆದರೆ ಅವರ ಹೆಸರು ಮಾತ್ರ ಚಿರಸ್ಥಾಯಿಯಾಯಿತು. ಅತ್ರಿಯವರ ಕಣ್ಮರೆಯ ನಂತರ ‘ಸುಗಮಸಂಗೀತ’ವನ್ನು ತಮ್ಮ ಸಂಘಟನೆಗಳ ಮೂಲಕ ಮುನ್ನೆಡೆಸಿದವರೆಂದರೆ ವೈ.ಕೆ. ಮುದ್ದುಕೃಷ್ಣ ಅವರು. ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ಮುದ್ದುಕೃಷ್ಣ ಅವರು ಅಶ್ವಥ್‌ರ ಜೊತೆಗೂಡಿ ‘ಧ್ವನಿ’ ಎನ್ನುವ ಸುಗಮ ಸಂಸ್ಥೆಯನ್ನು ಸಂಘಟಿಸಿದರು. ಎಲ್ಲಾ ಸುಗಮಸಂಗೀತ ಗಾಯಕಿ ಗಾಯಕರನ್ನು ಒಗ್ಗೂಡಿಸಿ ನಾಡಿನಾದ್ಯಂತ – ಮೈಸೂರಿನಿಂದ ಬೀದರ್‌ವರೆಗೂ ಪ್ರವಾಸ ಮಾಡಿ ‘ಸುಗಮಸಂಗೀತ’ ಯಾತ್ರೆ ನಡೆಸಿ ಕಾರ್ಯಕ್ರಮಗಳನ್ನು ನೀಡಿದರು. ೧೯೯೩ ರಲ್ಲಿ ಕೊಪ್ಪಳದ ಸಾಹಿತ್ಯ ಸಮ್ಮೇಳನದಲ್ಲಿ ಅಂದಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಗೋ.ರೂ. ಚೆನ್ನಬಸಪ್ಪನವರೊಂದಿಗೆ ಜೊತೆಗೂಡಿ ನಾಡಗೀತೆಯ ಒಂದು ಧ್ವನಿಸುರುಳಿ ‘ಹಚ್ಚೇವು ಕನ್ನಡದ ದೀಪ’ವನ್ನು ಹೊರತಂದರು. ಕೊಪ್ಪಳ ಸಾಹಿತ್ಯ ಸಮ್ಮೇಳನದಿಂದ ‘ಸುಗಮಸಂಗೀತ’ ಸಾಹಿತ್ಯ ವೇದಿಕೆಯನ್ನು ಹಂಚಿಕೊಂಡಿತು. ನಿರಂತರವಾಗಿ ಸಾಹಿತ್ಯ ಸಮ್ಮೇಳನಗಳಲ್ಲಿ ‘ಸುಗಮಸಂಗೀತ’ದ ಕಾರ್ಯಕ್ರಮ ನಡೆಸಲು ಪ್ರಾರಂಭವಾಯಿತು.

ಮುಖ್ಯವಾಗಿ ಮೈಸೂರು ಅರಮನೆ ದರ್ಬಾರ್ ಹಾಲಿನಲ್ಲಿ ಬರಿಯ ಶಾಸ್ತ್ರೀಯ ಕಛೇರಿಗಳು ಮಾತ್ರ ನಡೆಯುವುದಕ್ಕೆ ಆಸ್ಪದವಿತ್ತು. ಆದರೆ ಮುದ್ದುಕೃಷ್ಣ ಮತ್ತು ‘ಧ್ವನಿ’ ಬಳಗದವರ ಹೋರಾಟದಿಂದ ಸುಗಮಸಂಗೀತವೂ ಅರಮನೆಯ ದರ್ಬಾರ್ ಹಾಲಿನ ವೇದಿಕೆಯನ್ನೇರಿತು. ಹಾಗೆಯೇ ೧೯೯೧ ರಲ್ಲಿ ಗೋ.ರೂ. ಚೆನ್ನಬಸಪ್ಪನವರ ಕಾಲದಲ್ಲಿಯೇ ‘ಕಾವ್ಯಕಾವೇರಿ’ ಎಂಬ ಸುಗಮಸಂಗೀತ ಕಾರ್ಯಕ್ರಮವು ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಪ್ರತಿ ತಿಂಗಳು ನಡೆಯಲು ಪ್ರಾರಂಭವಾಯಿತು. ಇಡೀ ರಾಜ್ಯಾದಾದ್ಯಂತ ಕಾವೇರಿ ಹರಿದಂತೆ ಸುಗಮಸಂಗೀತ ಗಾಯನಸುಧೆ ಹರಿಯಬೇಕೆನ್ನುವ ಮುದ್ದುಕೃಷ್ಣರ ಸಂಕಲ್ಪ ಈಡೇರಿತು.

ಈ ಮಧ್ಯೆ ಸುಗಮಸಂಗೀತದ ಕೆಲ ಕಲಾವಿದರು ಅಪಘಾತದಿಂದ ನಿಧನರಾಗಿ ಅವರ ಎಳೆಯ ಕಂದಮ್ಮಗಳು ವಿದ್ಯಾಭ್ಯಾಸ, ಜೀವನ ನಿರ್ವಹಣೆಗಾಗಿ ಪರಿತಪಿಸುವ ಸನ್ನಿವೇಶಗಳು ಎದುರಾದವು. ಕೆಲವರು ಅಪಘಾತದಿಂದ ಕಾರ್ಯಕ್ರಮಗಳಿಗೆ ಹೋಗಲಾಗದೆ ಮನೆಯಲ್ಲಿಯೇ ಕೆಲಸವಿಲ್ಲದೆ ಉಳಿಯಬೇಕಾಯಿತು. ಅಂತಹ ಪರಿಸ್ಥಿತಿಯಲ್ಲಿ ಅರವಿಂದ್ ರೆಕಾರ್ಡಿಂಗ್ ಸ್ಟುಡಿಯೋವಿನ ಧ್ವನಿತಂತ್ರಜ್ಞರೂ, ಮಾಲೀಕರೂ ಆದ ಶ್ರೀ ಅರವಿಂಗ್ ಕಿಗ್ಗಾಲ್ ಅವರು ಎಲ್ಲಾ ಕಲಾವಿದರನ್ನೂ ಕಲೆ ಹಾಕಿ ನಿಧಿ ಸಂಗ್ರಹಿಸಿದರು. ಕಲಾವಿದರ ಬಾಳಿಗೆ ಆಸರೆಯಾಗಲೂ ಇತರರನ್ನೂ ಕೋರಿಕೊಂಡರು. ಇವರ ಆತ್ಮೀಯ ಗೆಳೆಯರಾದ ವೈ.ಕೆ. ಮುದ್ದುಕೃಷ್ಣ ಅವರ ಬಳಿ ಈ ಪ್ರಸ್ತಾಪ ಮಾಡಿ ತಾವು ಸಂಗ್ರಹಿಸಿದ ಮೊತ್ತವನ್ನು ಕಲಾವಿದರ ನಿಧಿಗಾಗಿ ನೀಡಿದರು. ಮೊದಲೇ ಸುಗಮಸಂಗೀತದ ಸಂಘಟಕ, ಮೇಲಾಗಿ ಹೃದಯವಂತರಾಗಿದ್ದ ಮುದ್ದುಕೃಷ್ಣ ಅವರು ಈ ಸಮಯದಲ್ಲಿಯೇ ‘ಕಲಾವಿದರ ಕ್ಷೇಮಾಭಿವೃದ್ಧಿ ಸಂಘ’ ವೊಂದನ್ನು ಸ್ಥಾಪಿಸಿಯೇ ಬಿಟ್ಟರು. ಅಶಕ್ತರಾದ ಕಲಾವಿದರೆಲ್ಲರಿಗೂ ಆಪತ್ಕಾಲದಲ್ಲಿ ಇದು ನೆರವಿಗೆ ಬಂದಿತು. ಶಕ್ತರಾದ ಕಲಾವಿದರು ಅಶಕ್ತ ಕಲಾವಿದರಿಗೆ ನೆರವು ನೀಡುವಲ್ಲಿ ಇದು ಬಹು ಮುಖ್ಯ ಪಾತ್ರವಹಿಸಿತು.

ಇದೇ ಸಂಘಟನೆಯನ್ನು ರಾಜ್ಯ ವ್ಯಾಪ್ತಿಯಲ್ಲಿ ಮಾಡಬೇಕೆನ್ನುವ ಯೋಚನೆಯಿಂದ, ವಿಸ್ತಾರಗೊಳಿಸಬೇಕು ಎನ್ನುವ ಯೋಜನೆಗಳಿಂದ ‘ಕರ್ನಾಟಕ ಸುಗಮಸಂಗೀತ ಪರಿಷತ್ತು’ ಎಂಬುದು ಮುದ್ದುಕೃಷ್ಣ ಅವರ ಕನಸಿನ ಕೂಸಾಗಿ ಸಾಕಾರಗೊಂಡಿತು. ೨೦೦೩ರ ಏಪ್ರಿಲ್ ತಿಂಗಳಲ್ಲಿ ಇದು ನಾಂದಿ ಹಾಡಿತು. ನಾಡಿನ ಶ್ರೇಷ್ಟಕವಿಗಳು, ಹಿರಿಯ ಕಿರಿಯ ಕಲಾವಿದರ ಸಮಾಲೋಚನೆಗಳಿಂದ ಇದು ಪ್ರಾರಂಭವಾಯಿತು. ‘ಸುಗಮಸಂಗೀತ’ದ ನಾಲ್ಕು ಯಶಸ್ವಿ ಸಮ್ಮೇಳನಗಳನ್ನು ಮಂಡ್ಯ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಬಳ್ಳಾರಿಯಲ್ಲಿ ಕ್ರಮವಾಗಿ ನಡೆಸಿತು. ನೂರಾರು ಸುಗಮಸಂಗೀತ ಶಿಬಿರಗಳನ್ನು ರಾಜ್ಯಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ನಡೆಸಿತು. ಕವಿನಮನಗಳು, ವಿಚಾರ ಸಂಕಿರಣಗಳು ನಡೆದವು. ಮುದ್ದುಕೃಷ್ಣ ಅವರ ನೂರಾರು ಕನಸುಗಳು ಇದರಿಂದ ನನಸಾದವು. ವಿಶೇಷವಾಗಿ ಕದಂಬ ಉತ್ಸವ, ಹಂಪಿ ಉತ್ಸವ, ಕಿತ್ತೂರು ಉತ್ಸವ, ಲಕ್ಕುಂಡಿ ಉತ್ಸವ, ಹೊಯ್ಸೋಳೋತ್ಸವ, ಕರಾವಳಿ ಉತ್ಸವಗಳಲ್ಲಿ ಸುಗಮಸಂಗೀತ ಕಾರ್ಯಕ್ರಮವನ್ನು ಪ್ರಾರಂಭಿಸಿದ ಮುದ್ದುಕೃಷ್ಣ ಅವರು, ಸುಗಮಸಂಗೀತವನ್ನು ಸಾಂಸ್ಕೃತಿಕವಾಗಿ ಎತ್ತರಕ್ಕೇರಿಸಲು ಬಹುವಾಗಿ ಶ್ರಮಿಸಿದರು. ಅನೇಕ ಅಪವಾದಗಳಿಗೆ ಈಡಾದರೂ, ಯಾವುದಕ್ಕೂ ಜಗ್ಗದೆ ತಮ್ಮ ಸಮರ್ಥ ಸಂಘಟನಾ ಶೈಲಿಯಿಂದ, ಸ್ನೇಹಪರತೆಯಿಂದ, ಆತ್ಮೀಯತೆಯ ಮೋಡಿಯಿಂದ ಜನರನ್ನು ಗೆದ್ದುಕೊಂಡರು. ತಾವು ಕನ್ನಡ ಸಂಸ್ಕೃತಿಯ ನಿರ್ದೇಶಕರಾಗಿದ್ದಾಗಲೂ ಸರಳತೆ, ಸಜ್ಜನಿಕೆಯನ್ನೇ ಮೈಗೂಸಿಡಿಕೊಂಡ ಮುದ್ದುಕೃಷ್ಣ ಅವರು ‘ಕನ್ನಡ ಭವನ’ದ ರೂವಾರಿಯಾದಂತೆ ಸುಗಮಸಂಗೀತ ಸಂಘಟನಾಕಾರರಿಗೊಂದು ಮಾದರಿಯಾದರು.

ಸುಗಮಸಂಗೀತದ ವೇದಿಕೆಯಲ್ಲಿ ಮತ್ತು ಧ್ವನಿ ಸುರುಳಿಗಳಲ್ಲಿ ಜನಪ್ರಿಯವಾದಂತೆ, ಅದರ ಬಗ್ಗೆ ವಿಚಾರಣ ಸಂಕಿರಣಗಳೂ, ಚಿಂತನೆಗಳೂ ನಡೆದವು. ಇಂತಹ ಎಲ್ಲ ಚಿಂತನೆಗಳಿಗೆ ಪೂರಕವಾದಂತೆ ಲೇಖನಗಳೂ, ಪುಸ್ತಕಗಳೂ, ಹೊರಬಂದವು. ಸಿ. ಅಶ್ವತ್ಥ್‌ರ ‘ಸುಗಮಸಂಗೀತ’ ಹೆಚ್.ಆರ್.ಲೀಲಾವತಿ ಅವರ ‘ಸುಗಮಸಂಗೀತ ಒಂದು ಸಿಂಹಾವಲೋಕನ’ ವೆಂಬ ಎರಡು ಪುಸ್ತಕಗಳನ್ನು ಸಂಗೀತ ನೃತ್ಯ ಅಕಾಡೆಮಿ ಹೊರತಂದಿತು. ಸುಗಮಸಂಗೀತದ ಸಂಗೀತ ನಿರ್ದೇಶಕೂ, ಲೇಖಕರೂ, ಉಪನ್ಯಾಸಕರೂ ಆಗಿದ್ದ ಜಯಶ್ರೀ ಅರವಿಂದ್ ಅವರು ಸಂಶೋಧನೆ ನಡೆಸಿ ‘ಸುಗಮಸಂಗೀತ ಒಂದು ಸಮಗ್ರ ಅಧ್ಯಯನ’ ವೆಂಬ ಮಹಾಪ್ರಬಂಧವನ್ನು ಹಂಪೆ ವಿಶ್ವವಿದ್ಯಾನಿಲಯ ಸಲ್ಲಿಸಿ ಡಾಕ್ಟರೇಟ್ ಪದವಿ ಪಡೆದರು. ಇದರಿಂದ ಸುಗಮಸಂಗೀತಕ್ಕೊಂದು ಶಾಸ್ತ್ರೀಯ ಅಧ್ಯಯನದ ದೃಷ್ಟಿ ಬಂದಿತಲ್ಲದೆ ಅದರ ಗೌರವ ಘನತೆಗಳು ಎತ್ತರಕ್ಕೇರಿದವು. ಸುಗಮಸಂಗೀತ ವಿಶ್ವವಿದ್ಯಾನಿಲಯದ ಆವರಣವನ್ನೂ ಪ್ರವೇಶಿಸಿ ಇತಿಹಾಸದಲ್ಲಿ ಹೊಸ ದಿಕ್ಕನ್ನು ತೆರೆಯಿತು. ಹಂಪೆ ವಿಶ್ವವಿದ್ಯಾನಿಲಯವೇ, ಸುಗಮಸಂಗೀತಕ್ಕೆ ಪ್ರಥಮ ಡಾಕ್ಟರೇಟ್ ಪದವಿ ನೀಡಿದ ಪ್ರಥಮ ವಿಶ್ವವಿದ್ಯಾನಿಲಯವೂ ಆಯಿತು. ಕನ್ನಡ ಸಂಗೀತ, ಸಂಸ್ಕೃತಿ, ಭಾಷೆಯ ಬೆಳವಣಿಗೆಗೆ ಅರ್ಥಪೂರ್ಣವಾಗಿ ಸ್ಪಂದಿಸುತ್ತಾ ಮುನ್ನಡೆಸಿತು.

ಸುಗಮಸಂಗೀತಮತ್ತುಸಂಘಟನಾಸಂಸ್ಥೆಗಳು

ಧ್ವನಿ ಸುಗಮಸಂಗೀತ ಕೇಂದ್ರ, ಬೆಂಗಳೂರು

ಸುಗಮಸಂಗೀತ ಪ್ರಾರಂಭಿಕ ಹಂತದಲ್ಲಿ ರೆಡಿಯೋ ಮೂಲಕ ಸಂಘಟಿಸಿತು. ನಂತರ ಹಂತಹಂತವಾಗಿ ಬೆಳೆದು ಒಂದು ಚೌಕಟ್ಟಿಗೆ ಮಾರ್ಪಟ್ಟು ಧ್ವನಿಸುರುಳಿಯ ಒಳಗೆ ಇಳಿಯಿತು. ಅನಂತರ ದೃಶ್ಯ ಮಾಧ್ಯಮವಾದ ದೂರದರ್ಶನದೊಳಗೂ ತನ್ನ ಹೆಜ್ಜೆಗಳನ್ನು ಊರಿತು. ಹತ್ತಾರು ಜನಪ್ರಿಯ ಕಲಾವಿದರು ಬೇರೆ ಬೇರೆ ಮಾಧ್ಯಮಗಳ ಮೂಲಕ ಸುಗಮಸಂಗೀತ ಪ್ರಕಾರವನ್ನು ಬೆಳೆಸಲು ಪ್ರಯತ್ನಪಟ್ಟರು. ಆದರೆ ಎಲ್ಲಾ ಜನಪ್ರಿಯ ಕಲಾವಿದರಿಗೂ ಪ್ರತ್ಯೇಕತೆ ಇತ್ತು. ಎಲ್ಲರೂ ಒಂದಾಗಿ ಒಂದೇ ವೇದಿಕೆಯಲ್ಲಿ ಬರುತ್ತಿರಲಿಲ್ಲ. ಅಶ್ವಥ್, ಅನಂತಸ್ವಾಮಿ, ಕಸ್ತೂರಿ ಶಂಕರ್, ಬಿ.ಕೆ.ಸುಮಿತ್ರ, ಶಿವಮೊಗ್ಗ ಸುಬ್ಬಣ್ಣ, ರತ್ನಮಾಲ ಪ್ರಕಾಶ್, ಮಾಲತಿ ಶರ್ಮಾ, ಇವರೆಲ್ಲಾ ತಮ್ಮದೇ ಆದ ವೈಯುಕ್ತಿಕ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಇವರೆಲ್ಲ ಒಂದೇ ವೇದಿಕೆಯಲ್ಲಿಹಾಡುವ ಸಂಘಟನೆಯನ್ನು ತಂದವರು ಶ್ರೀ ವೈ.ಕೆ. ಮುದ್ದುಕೃಷ್ಣ ಅವರು. ಅಶ್ವತ್ಥ್ ಅವರು ಸಂಕಲ್ಪಸಿದ್ದನ್ನು ಮುದ್ದುಕೃಷ್ಣ ಅವರು ಕಾರ್ಯರೂಪಕ್ಕೆ ತಂದರು. ೧೯೯೧ರಲ್ಲಿ ಧ್ವನಿ ಸುಗಮಸಂಗೀತ ಕೇಂದ್ರ ಸ್ಥಾಪಿತವಾಯ್ತು. ಮೈಸೂರಿನಿಂದ ಬೀದರ್‌ವರೆಗೂ ಹಾಡುತ್ತಾ ಸುಗಮಸಂಗೀತ ಯಾತ್ರೆ ಮಾಡಿದರು.

೧೯೯೩ರ ಕೊಪ್ಪಳ ಸಾಹಿತ್ಯ ಸಮ್ಮೇಳನದಲ್ಲಿ ಆವತ್ತಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಗೊ.ರು. ಚೆನ್ನಬಸಪ್ಪ ಅವರೊಡನೆ ಸುದೀರ್ಘವಾದ ಚರ್ಚೆ ಮಾಡಿ ನಾಡಗೀತೆಯ ಧ್ವನಿಸುರುಳಿ ‘ಹಚ್ಚೇವು ಕನ್ನಡದ ದೀಪ’ ತರುವುದರ ಮೂಲಕ ಸಾಹಿತ್ಯ ಪರಿಷತ್ತಿಗೂ ಸುಗಮಸಂಗೀತಕ್ಕೂ ಇದ್ದ ನಂಟನ್ನು ಭದ್ರವಾಗಿ ಪಡೆದುಕೊಂಡರು. ಆದಾ ಮೇಲೆ ಪ್ರತಿ ಸಾಹಿತ್ಯ ಸಮ್ಮೇಳನದಲ್ಲಿ ಸುಗಮಸಂಗೀತ ಅದರ ಅವಿಭಾಜ್ಯ ಅಂಗವಾಗಿ ನಡೆದುಕೊಂಡು ಬಂದಿತು. ‘ಧ್ವನಿ ಸಂಸ್ಥೆ ಸುಗಮಸಂಗೀತದ ಅಭಿವೃದ್ಧಿಗಾಗಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು.

ಸುಗಮಸಂಗೀತ ಅಕಾಡೆಮಿ ಮೈಸೂರು

ಸುಗಮಸಂಗೀತದ ಮುನ್ನಡೆಗಾಗಿ ೧೯೮೫ರಲ್ಲಿ ಪ್ರಾರಂಭವಾದ ಈಸಂಸ್ಥೆಯ ನಿರ್ದೇಶಕರು ಹೆಚ್.ಆರ್.ಲೀಲಾವತಿ ಮತ್ತು ಅವರ ಯಜಮಾನರಾದ ರಘುರಾಂ, ನೂರಾರು ಗಾಯಕ ಗಾಯಕಿಯರಿಗೆ ಗಾಯನದಲ್ಲಿ ತರಬೇತಿ ನೀಡಿ, ವೇದಿಕೆ ಕಲ್ಪಿಸಿರುವುದಲ್ಲದೆ ಹೊಸ ಪ್ರತಿಭೆಗಳ ಗಾಯನದಲ್ಲಿ ಅನೇಕ ಧ್ವನಿ ಸುರುಳಿಗಳನ್ನು ತಂದಿದೆ. ಕರ್ನಾಟಕದ ಎಲ್ಲಾಮೂಲೆ ಮೂಲೆಗೂ ಸುಗಮಸಂಗೀತವನ್ನು ಹಂಚುತ್ತಾ ಬಂದಿರುವ ಅಕಾಡೆಮಿ ಕಲಾವಿದರು ಹೊರದೇಶಗಳಲ್ಲೂ ಸುಗಮಸಂಗೀತವನ್ನು ಪರಿಚಯಸಿದ್ದಾರೆ. ಉದ್ಯಮಿ ಕೆ.ವಿ. ಮೂರ್ತಿ ಅಧ್ಯಕ್ಷರಾಗಿರುವ ಈ ಸಂಸ್ಥೆ ೫೦೦ ಜನ ಸದಸ್ಯರನ್ನು ಹೊಂದಿದೆ.

ರಮ್ಯ ಕಲ್ಚರಲ್ ಅಕಾಡೆಮಿ (೧೧೧೯೯೩)

ಸುಗಮಸಂಗೀತದ ಮುನ್ನೆಡೆಯೊಂದಿಗೆ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಆಸಕ್ತಿಗಳನ್ನು ಹೊಂದಿರುವ ಈ ಸಂಸ್ಥೆಯ ಅಧ್ಯಕ್ಷ ಎಸ್.ಬಾಲಿ, ಖ್ಯಾತ ಲೇಖಕರ ಪುಸ್ತಕ ಬಿಡುಗಡೆಯಲ್ಲದೆ ‘ಗೀತಧಾರೆ’ ‘ಗೀತಮಾಲಿಕೆ’ ಎಂಬಭಾವಗೀತೆಗಳ ಕಾರ್ಯಕ್ರಮಗಳ ಮೂಲಕ ನಾಡಿನ ಪ್ರಸಿದ್ಧ ಕವಿಗಳ ರಚನೆಯನ್ನು ಹಿರಿಯ ಮತ್ತು ಕಿರಿಯ ಗಾಯಕ-ಗಾಯಕಿಯರಿಂದ ಪ್ರಸ್ತುತಪಡಿಸುತ್ತ ಬಂದಿದೆ. ‘ಉಯ್ಯಾಲೆ’ ಹಾಗೂ ‘ತಂಗಾಳಿ’ ಎಂಬ ಧ್ವನಿಸುರಳಿಯನ್ನು ಹೊರತಂದಿದ್ದಾರೆ. ಸಂಗೀತ ನಿರ್ದೇಶಕರಾಗಿದ್ದಾರೆ.

ಸಂಗೀತ ಗಂಗಾ

ಗಾಯಕ ಸಂಗೀತ ನಿರ್ದೇಶಕ ಜಿ.ವಿ. ಅತ್ರಿ ಸ್ಥಾಪಕ ಅಧ್ಯಕ್ಷರಾಗಿದ್ದ ‘ಸಂಗೀತಗಂಗಾ’ ಮಿಕ್ಕ ಎಲ್ಲಾ ಸಂಘಟನಾಕಾರರಿಗೂ ಸ್ಪೂರ್ತಿಯಾಯಿತು. ಕವಿ ಕಾವ್ಯಗಳ ಬಗೆಗೆ ವಿಶೇಷ ಜ್ಞಾನವಿದ್ದ ಅತ್ರಿಯವರು ಮೊಟ್ಟ ಮೊದಲ ಕನ್ನಡ ಸಂಗೀತ ಸಮ್ಮೇಲನ ಮಾಡಿದವರು. ಮೊದಲ ಮೂರು ವರುಷ ಬೆಂಗಳೂರಿನಲ್ಲಿ. ನಂತರ ಧಾರವಾಡ, ಗುಲ್ಬರ್ಗಾ ಮತ್ತು ಚಿಕ್ಕಮಗಳೂರಿನಲ್ಲಿ ಇದು ಮುಂದುವರೆಯಿತು. ೧೯೯೯ರಲ್ಲಿ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿನ ಖೈದಿಗಳಿಗಾಗಿ ನಡೆಸಿಕೊಟ್ಟ ‘ಕಲಾವಿಕಾಸ’ ಎಂಬ ಒಂದು ವಾರದ ಕಮ್ಮಟ ಅಪೂರ್ವವಾದದ್ದು. ಅತ್ರಿಯವರ ಅಕಾಲಿಕ ಮರಣದ ನಂತರ ಅವರ ಸೋದರಿ ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

ಹೊಂಬಾಳೆ (೧೯೯೫)

ಪ್ರತಿಭಾವಂತರಾದ ನವಗಾಯಕ ಗಾಯಕಿಯರಿಗೆ ವೇದಿಕೆ ಕಲ್ಪಿಸಿದೆ. ಪ್ರತಿಭಾ ‘ಹೊಸ ಚಿಗುರು ಹಳೇಬೇರು’, ‘ಭಾವಾಂಜಲಿ’, ‘ಕಾವ್ಯಸಂಭ್ರಮ’, ‘ಅನಂತನಮನ’ – ಮುಂತಾದ ನಿರಂತರ ಕಾರ್ಯಕ್ರಮಗಳ ಮೂಲಕ ಈ ಸಂಸ್ಥೆ ತನ್ನ ಉದ್ದೇಶ ಸಾಧಿಸುತ್ತಾ ಮುನ್ನಡೆದಿದೆ. ಸುಮಾರು ೯೦ಕ್ಕೂ ಹೆಚ್ಚು ಜನ ಗಾಯಕ ಗಾಯಕಿಯರನ್ನು ಸುಗಮಕ್ಷೇತ್ರಕ್ಕೆ ಪರಿಚಯಿಸಿದೆ. ‘ಚಿಂವ್ ಚಿಂವ್ ಗುಬ್ಬಿ’(ಮಕ್ಕಳ ಗೀತೆಗಳು) ಅಪರಂಜಿ (ಜನಪದ ಗೀತೆಗಳು) ಭಾವಾಂಜಲಿ, ಭಾವಾಂಕುರ, ಆಲಾಪ ಹಾಗೂ ಪ್ರಣತಿ (ಭಾವಗೀತೆಗಳು) ಧ್ವನಿಸುರುಳಿಗಳನ್ನು ಹೊರತಂದಿದೆ. ಸ್ಥಾಪಕ ಅಧ್ಯಕ್ಷ ಹೆಚ್. ಫಾಲ್ಗುಣ ಅವರು ಸುಗಮಸಂಗೀತ ಕ್ಷೇತ್ರದಲ್ಲಿ ತೊಡಗಿರುವ ಎಲ್ಲ ಸಾಹಿತಿ, ಸಂಗೀತ ನಿರ್ದೇಶಕ, ಗಾಯಕಿ, ಗಾಯಕಿ, ವಾದ್ಯಗಾರ, ಧ್ವನಿಸುರುಳಿ ಸಂಸ್ಥೆ, ಸ್ಟುಡಿಯೋ, ಮುಂತಾದವರ ವಿವರ ಮತ್ತು ವಿಳಾಸಗಳನ್ನೊಳಗೊಂಡ ‘ಪ್ರತಿಭಾ ಸಂಕುಲ’ ಎಂಬ ಕೈಪಿಡಿಯನ್ನು ಹೊರತಂದಿದ್ದಾರೆ.

ವಿಶೇಷವಾಗಿ ಸುಗಮಸಂಗೀತಕ್ಕೆ ಮೀಸಲಾದ ಪ್ರಪ್ರಥಮ ಮಾಸಪತ್ರಿಕೆಯನ್ನು ಈ ಸಂಸ್ಥೆ ಹೊರತುರುತ್ತಿರುವುದು ಅಪೂರ್ವವಾಗಿದೆ. ಸುಗಮಸಂಗೀತದ ಹಿರಿಯ ವಾದ್ಯಗಾರರಿಗೆ ‘ಕಲಾಕೋವಿದ’ ಹಾಗೂ ಸುಗಮಸಂಗೀತದ ಧ್ವನಿಸುರುಳಿಗಳಲ್ಲಿನ ಶ್ರೇಷ್ಠರಿಗೆ ‘ಸ್ವರಮಂದಾರ’ ಪ್ರಶಸ್ತಿಗಳನ್ನು ಪ್ರತಿ ವರ್ಷ ನೀಡುತ್ತಾ ಬಂದಿದೆ.

ಆದರ್ಶ ಸುಗಮಸಂಗೀತ ಅಕಾಡೆಮಿ

೨೫-೮-೧೯೯೬ರಲ್ಲಿ ಪ್ರಾರಂಭವಾದ ಈ ಅಕಾಡೆಮಿಯ ಅಧ್ಯಕ್ಷರು ಕೃಷ್ಣಮೂರ್ತಿ ಕಿಕ್ಕೇರಿ. ಗಾಯನ-ವಾದ್ಯ ವಾದನದಲ್ಲಿ ತರಬೇತಿ ನೀಡುತ್ತಿದೆ. ‘ಗೀತಾಂಜಲಿ’ ಎಂಬ ಖ್ಯಾತ ಕವಿಗಳ ಗೀತೆಗಳನ್ನು ಪ್ರಕಟಿಸಿದೆ. ಕರೀಂಖಾನ್ ಅವರ ಹೆಸರಿನಲ್ಲಿ ‘ಜಾನಪದಶ್ರೀ’ ಪ್ರಶಸ್ತಿಯನ್ನು ಮೂರು ವರ್ಷ ಕೊಟ್ಟಿದೆ. ಕರ್ನಾಟಕ ಸುಗಮಸಂಗೀತ ಪರಿಷತ್ತಿನ ಕಾರ್ಯದರ್ಶಿಗಳಾಗಿದ್ದು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಉಪಾಸನಾ

ಗಾಯಕ, ಸಂಯೋಜಕ, ಜೆ. ಮೋಹನ್, ಇದರ ಅಧ್ಯಕ್ಷರು. ಉದಯೋನ್ಮಖರಿಗೆ ಸುಗಮಸಂಗೀತ ಗಾಯನ ಹಾಗೂ ವಾದ್ಯ ವಾದನಲ್ಲಿ ತರಬೇತಿ ನೀಡುತ್ತಿದೆ. ‘ಉಪಾಸನಾ’ ಎಂಬ ಪ್ರಶಸ್ತಿಯನ್ನು ಜಿ.ವಿ. ಅತ್ರಿಯವರ ನೆನಪಾಗಿ ನೀಡುತ್ತಿದೆ. ಸುಗಮಸಂಗೀತ ಶಿಬಿರ, ಮನೆಯಂಗಳದಲ್ಲಿ ಸುಗಮಸಂಗೀತ ಇದರ ಹೆಗ್ಗಳಿಕೆ.

ಸ್ವರಸುರಭಿ ಸಂಸ್ಥೆ

ಬೆಂಗಳೂರಿನ ಯುವ ಗಾಯಕ ಶ್ರೀಧರ್ ಅಯ್ಯರ್ ಅವರ ಕನಸಿನ ಕೂಸೆ ಸ್ವರಸುರಭಿ ಸಂಸ್ಥೆ. ಯುವಕಲಾವಿದರಿಗೊಂದು ವೇದಿಕೆಯನ್ನು ಕಲ್ಪಿಸುವುದಕ್ಕೋಸ್ಕರ ಈ ಸಂಸ್ಥೆ ೨೦೦೪ ಆಗಸ್ಟ್ ೧೨ರಂದು ಪ್ರಾರಂಭವಾಯಿತು. ಜಿ.ವಿ. ಅತ್ರಿಯವರ ನಿಕಟ ಸ್ನೇಹಿತರೂ ಶಿಷ್ಯರೂ ಆಗಿದ್ದ ಶ್ರೀಧರ್ ಪ್ರಾಮಾಣಿಕ, ಕ್ರಿಯಾಶೀಲ ಕಲಾವಿದರು. ಔಷಧಿ ಕಂಪನಿಯೊಂದರಲ್ಲಿ ಹಿರಿಯ ಅಧಿಕಾರಿಗಳಾಗಿರುವ ಶ್ರೀಧರ್ ಒಲಿದದ್ದು ‘ಸುಗಮಸಂಗೀತ’ಕ್ಕೆ ತಮ್ಮ ಸಂಸ್ಥೆಯ ಮೂಲಕ ‘ಸುಗಮಸಂಗೀತ’ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯುವ ಪ್ರತಿಭೆಗಳಿಗೆ ವೇದಿಕೆ ನೀಡುತ್ತಿದ್ದಾರೆ. ಡಾ|| ಜಯಶ್ರೀ ಅರವಿಂದ್ ಅವರ ಸಂಗೀತ ನಿರ್ದೇಶನದಲ್ಲಿ ಮಕ್ಕಳಿಗಾಗಿಯೋಜಿಸಿದ ‘ಹಾಡುತ್ತೀವಿರಾಗ’ ಕಾರ್ಯಕ್ರಮದ ಯಶಸ್ಸು ಇವರ ಬೆನ್ನಿಗಿದೆ. ಕರ್ನಾಟಕದ ಎಲ್ಲಜಿಲ್ಲೆ, ತಾಲ್ಲೂಕುಗಳಲ್ಲಿ ‘ಮಕ್ಕಳಿಗಾಗಿ ಕವಿತಾಗಾಯನ ತರಬೇತಿ ಶಿಬಿರವನ್ನು ನಡೆಸುತ್ತಾ ಸುಗಮಸಂಗೀತ ಗಾಯನಕ್ಕೆ ಸುಮಾರು ೮೦೦ ಮಕ್ಕಳನ್ನು ತೊಡಗಿಸಿದ್ದಾರೆ. ‘ಸುಗಮಸಂಗೀತದ’ ಮೂಲಕ ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನ ಪ್ರಜ್ಞೆಯನ್ನು ಮೂಡಿಸುತ್ತಿದ್ದಾರೆ.

ಚಿಕ್ಕಮಗಳೂರು ಸಂಗೀತಗಂಗಾ

೧೯೯೯ರಲ್ಲಿ ಜಿ.ವಿ. ಅತ್ರಿಯವರ ಪ್ರೇರಣೆಯಿಂದ ಪ್ರಾರಂಭವಾದ ಈ ಸಂಸ್ಥೆಯ ಕಾರ್ಯದರ್ಶಿಗಳು ಮಂಜುನಾಥ್ ಕಾಮತ್. ಅಧ್ಯಕ್ಷರು ದಿ|| ಜೆ.ಪಿ. ಕೃಷ್ಣೇಗೌಡರು. ಸುಗಮಸಂಗೀತಾಸಕ್ತರ ನೂರಾರು ಜನ ಬಳಗವನ್ನು ಹೊಂದಿರುವ ಈ ಸಂಸ್ಥೆಯ ಉದ್ದೇಶ, ಸುಗಮಸಂಗೀತದ ಕಲಿಕೆ ಮತ್ತು ಪ್ರಚಾರವಾಗಿದೆ. ಕವಿನಮನ, ಕಾವ್ಯವಾಣಿಗಳ ಮೂಲಕ ಕನ್ನಡದ ಎಲ್ಲ ಕವಿಗಳ ವಿತೆಗಳ ಗಾಯನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ. ಪ್ರತಿ ತಿಂಗಳೂ ಪ್ರಸಿದ್ಧ ಹಿರಿಯ ಸುಗಮಸಂಗೀತ ಕಲಾವಿದರಿಂದ ತರಬೇತಿ ಶಿಬಿರ ಇಡಿಸಿ ಹೊಸ ಹೊಸ ಕವಿಗೀತೆಗಳನ್ನು ಕಲಿಸುತ್ತಾ ಬಂದಿದೆ. ಭಾವಗೀತೆ, ರಂಗಗೀತೆ, ದಾಸರಪದ, ಶಿಶುಗೀತೆ, ಜನಪದಗೀತೆ, ಸಂಪ್ರದಾಯ ಹಾಡುಗಳು ತರಬೇತಿ ಶಿಬಿರ ನಡೆಸುತ್ತಾ ನೂರಾರು ಹಿರಿಯ ಕಿರಿಯ ಗಾಯಕರನ್ನು ‘ಸುಗಮಸಂಗೀತ’ ಗಾಯಕರನ್ನಾಗಿ ರೂಪುಗೊಳಿಸಿದೆ. ಕಲೆ, ಸಂಸ್ಕೃತಿ, ಸಾಹಿತ್ಯಗಳು ಮುಪ್ಪುರಿಗೊಂಡ ಈ ಸಂಸ್ಥೆ ಸಮಾಜದ ಸರ್ವತೋಮುಖವಾದ ಬೆಳವಣಿಗೆಗೆ ಸಹಕರಿಸುತ್ತಿದೆ. ಕರ್ನಾಟಕ ಸುಗಮಸಂಗೀತ ಪರಿಷತ್ತಿನ ಜೊತೆ ಕೈಜೋಡಿಸಿ, ೨೦೦೫ರ ಫೆಬ್ರವರಿ ೧೨ ಮತ್ತು ೧೩ರಂದು ‘ರಾಜ್ಯಮಟ್ಟದ ಗೀತೋತ್ಸವ’ವನ್ನು ಅಭೂತಪೂರ್ವ ಯಶಸ್ಸಿನಲ್ಲಿ ನೆರವೇರಿಸಿದ ಕೀರ್ತಿ ಈ ಸಂಸ್ಥೆಗೆ ಸೇರುತ್ತದೆ.

ಪ್ರತಿಭಾಂಜಲಿ

೨೦೦೧ ಫೆಬ್ರವರಿ ೮ರಂದು ಮಂಡ್ಯದಲ್ಲಿ ಪ್ರಾರಂಭವಾದ ಈ ಸಂಸ್ಥೆ ಸುಗಮಸಂಗೀತವನ್ನು ಸಮಾಜಮುಖಿಯನ್ನಾಗಿ ಮಾಡುವ ಆಕಾಂಕ್ಷೆಯಿಂದ ಪ್ರಾರಂಭವಾಯಿತು. ಯುವ ಗಾಯಕ ಡೇವಿಡ್ ಸೂತ್ರ ಹಿಡಿದಿರುವ ಈ ಸಂಸ್ಥೆಯ ಮೊದಲ ಕಾರ್ಯಕ್ರಮವೇ ‘ಕುವೆಂಪು ಅವರ ‘ಮನುಜಮತ ವಿಶ್ವಪಥ’ದ ಸಂದೇಶವಾಗಿತ್ತು. ಸುಗಮಸಂಗೀತದ ಶಿಬಿರಗಳು, ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದ ಈ ಶಾಲೆಯಲ್ಲಿ ಇದುವರೆವಿಗೆ ೭೦೦ ಕಲಾವಿದರೂ ಭಾಗವಹಿಸಿದ್ದಾರೆ. ಯುವ ಕಿರಿಯ ಹಿರಿಯರಾದಿಯಾಗಿ ಭಾಗವಹಿಸಿದ್ದಾರೆ. ‘ಕೂಡಲ ಸಂಗಮ’ ವಚನಗಳಿಂದ ಹಿಡಿದು ನಾಡಗೀತೆಯ ಸಮೂಹ ಗೋಷ್ಠಿ, ಗಾಯನವನ್ನು ನಡೆಸಲಾಗಿದೆ. ‘ಶಾಲೆಗೊಂದು ಸುಗಮಸಂಗೀತ’- ವಿಶೇಷ ಕಾರ್ಯಕ್ರಮದ ರೂವಾರಿಯಾಗಿ ಡೇವಿಡ್ ಪ್ರತಿಶಾಲೆಯಲ್ಲೂ ಸುಗಮಸಂಗೀತ ಪ್ರಜ್ಞೆಯನ್ನು ಮೂಡಿಸಿದ್ದಾರೆ. ಮನೆಯಿಂದ ಮನೆಗೆ ಸುಗಮಸಂಗೀತವೆಂಬ ನಿರಂತರ ಹದಿಮೂರು ತಿಂಗಳು ಗಾಯನ ಕಾರ್ಯಕ್ರಮಗಳನ್ನು ಪ್ರಖ್ಯಾತರಿಂದ ಹವ್ಯಾಸಿಗಳವರೆಗೆ ನಡೆಸಿಕೊಂಡು ಬಂದಿದ್ದಾರೆ. ಮಂಡ್ಯದ ಸ್ಥಳೀಯ ಪ್ರತಿಭೆಗಳಿಗೆ ಕರ್ನಾಟಕ ಹಿರಿಯರೊಂದಿಗೆ ಅವಕಾಶ ನೀಡಲಾಗಿದೆ. ಮಕ್ಕಳ ದಿನಾಚರಣೆಯಂದು ಮತ್ತು ನಾಡಹಬ್ಬಗಳಂದು ಕವಿಕಾವ್ಯ ಗಾಯನ, ಕನ್ನಡವಾಣಿ. ‘ಹಾಡುವೆವು ನಿಮಗಾಗಿ’ ಸುಗಮಸಂಗೀತ ಗಾಯನ ಕಾರ್ಯಕ್ರಮ ‘ಅಷ್ಟಕವಿ ಗೀತೋತ್ಸವ-ಮುಂತಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ (ಒಖಿಓ). ಮಂಡ್ಯಟೆಲಿವಿಷನ್ ನೆಟ್‌ವರ್ಕ್‌ಪ್ರಸಾರದಲ್ಲಿ ‘ಮಂಡ್ಯ ಪ್ರತಿಭಾಂಜಲಿ ಸರಿಗಮಪ’ ಎಂಬ ಸುಗಮಸಂಗೀತ ಸ್ಪರ್ಧೆಯನ್ನು ನಡೆಸುತ್ತಿದ್ದಾರೆ.

ಸಪ್ರಸ್ವರ ಸುಗಮಸಂಗೀತ ಶಾಲೆ

ಶ್ರೀಮತಿ ಜ್ಯೋತಿ ಅನಂತರಾಮು ೨೦೦೦ನೇ ಜನವರಿಯಲ್ಲಿ ಬೀರೂರಿನಲ್ಲಿ ಪ್ರಾರಂಭಿಸಿ ನಡೆಸುತ್ತಿರುವ ಸುಗಮಸಂಗೀತ ಶಾಲೆಯಲ್ಲಿ ಶಾಸ್ತ್ರೀಯ ಸಂಗೀತ ಮತ್ತು ತಬಲ ವಾದನಗಳನ್ನು ಕಲಿಸುತ್ತಿದೆ. ಈಗ್ಗೇ ಆರು ವರುಷಗಳಿಂದ ನೂರಾರು ಮಕ್ಕಳು, ಮಹಿಳೆಯರು ಸುಗಮಸಂಗೀತ ಕಲಿಯುತ್ತಿರುವ ‘ಸಪ್ತಸ್ವರ ಸಂಗೀತ ಶಾಲೆ’ಯಲ್ಲಿ ಸುಗಮಸಂಗೀತಕ್ಕೆ ಆಧಾರವಾಗಿ ಬೇಕಾದ ಶಾಸ್ತ್ರೀಯ ಸಂಗೀತವನ್ನೂ ಕಲಿಸಲಾಗುತ್ತಿದೆ. ಪ್ರಸಿದ್ಧ ಸುಗಮಸಂಗೀತಗಾರರಿಂದ ಸುಗಮಸಂಗೀತ ತರಬೇತಿ ಶಿಬಿರವನ್ನು ವರುಷ ವರುಷವೂ ನಡೆಸಲಾಗುತ್ತಿದೆ. ಗೃಹಿಣಿಯರಿಗೂ ಸಂಪ್ರದಾಯಗೀತೆ ಮತ್ತು ‘ಸುಗಮಸಂಗೀತ’ವನ್ನು ಕಲಿಸಿಕೊಡುತ್ತಿರುವ ಜ್ಯೋತಿ ಅನಂತರಮು ಅವರು ಶಾಸ್ತ್ರೀಯ ಮತ್ತು ಸುಗಮಸಂಗೀತ ಗಾಯನದಲ್ಲಿ ವಿಶೇಷ ಪರಿಣತಿ ಪಡೆದಿದ್ದು ಬೀರೂರಿನಂತಹ ಸಣ್ಣ ಊರಿನಲ್ಲಿಯೂ ಕ್ರಿಯಾಶೀಲತೆಯನ್ನು ತೋರಿಸಿದ್ದಾರೆ.

ಸಹ್ಯಾದ್ರಿ ಸುಗಮಸಂಗೀತ ಅಕಾಡೆಮಿ: ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಎಸ್.ಬಿ. ಶಿವಲಿಂಗಪ್ಪನವರು ಸ್ಥಾಪಿಸಿದ ‘ಸಹ್ಯಾದ್ರಿ ಸುಗಮಸಂಗೀತ’ ಅಕಾಡೆಮಿ ಸುಗಮಸಂಗೀತವನ್ನು ಕಿರಿಯರಿಗೆ, ಯುವಕರಿಗೆ ಕಲಿಸುತ್ತಾ ಬೆಳೆದ ಸಂಸ್ಥೆಯಾಗಿದೆ. ಕೋಮು ಸೌಹಾರ್ದತೆಯ ಬಂಡಾಯ ಗೀತೆಗಳನ್ನು ಹಾಡುತ್ತಾ, ಜನ ಮನ್ನಣೆ ಪಡೆದಿದೆ. ನೂರಾರು ಸುಗಮಸಂಗೀತ ಕಾರ‍್ಯಾಗಾರಗಳನ್ನು ಕಳೆದ ಆರು ವರುಷಗಳಿಂದ ನಡೆಸಿಕೊಂಡು ಬಂದಿದೆ.

ಜೇನುಗೂಡು : ಜಾವಗಲ್ಲಿನ ವಸಂತ್‌ ಕುಮಾರ್ ಮತ್ತು ಮಿತ್ರರು ಪ್ರಾರಂಭಿಸಿದ ಈ ಸಂಸ್ಥೆ, ಸುಗಮಸಂಗೀತ ಮತ್ತು ಸಂಸ್ಕೃತಿಯ ಪ್ರಸರಣಕ್ಕಾಗಿ ಕಾರ್ಯಯುತವಾಗಿದೆ. ಮಕ್ಕಳಿಗೆ ಸುಗಮಸಂಗೀತ ಶಿಬಿರಗಳನ್ನು ಏರ್ಪಡಿಸುತ್ತಾ ಮಹಾನ್ ಕವಿಗಳ ಶತಮಾನ ದಿನೋತ್ಸವಗಳನ್ನು ಆಚರಿಸುತ್ತಾ ಕವಿ, ಕಾವ್ಯ ಪ್ರಚಾರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ೨೦೦೩ರ ಮಾರ್ಚಿ ತಿಂಗಳಲ್ಲಿ ಪ್ರಾರಂಭವಾದ ಈ ಸಂಸ್ಥೆ ಯುವ ಕಲಾವಿದರಿಗೆ ‘ಅರಳುಮಲ್ಲಿಗೆ ಪ್ರಶಸ್ತಿ’ಯನ್ನು ನೀಡುತ್ತಾ ಬಂದಿದೆ. ಕಳಪೆ ದರ್ಜೆಯ ಕ್ಯಾಸೆಟ್‌ಗಳಿಗೆ ವಿರೋಧಿಸುತ್ತ, ಉತ್ತಮ ಸಂಸ್ಕೃತಿ ಪ್ರಸಾರಕ್ಕೆ ಟೊಂಕ ಕಟ್ಟಿ ನಿಂತಿದೆ. ೩೬ ಜನ ಯುವಕಲಾವಿದ, ಕಾರ್ಯಕರ್ತರು ಕೂಡಿ ಕಲೆತಿರುವ ಈ ಸಂಸ್ಥೆ ಜಾವಗಲ್‌ನ ಪ್ರಖ್ಯಾತ ಸಂಸ್ಥೆ ಎನ್ನಿಸಿದೆ. ಕ್ರಿಯಾಶೀಲವೂ, ಸಮಾಜ ಮುಖಿಯೂ ಆಗಿ ಸುಗಮಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಮುಂದುವರೆಯುತ್ತಿದೆ.

ಮೇಲ್ಕಂಡ ಶಾಲೆ ಸಂಸ್ಥೆಗಳೇ ಅಲ್ಲದೆ ಬಿ.ಕೆ. ಸುಮಿತ್ರ ಅವರ ‘ಆರಾಧನಾ’ ಎಸ್. ಸೋಮಸುಂದರಂ ಅವರ ‘ಗಾನಸುಧಾ’, ಮಾಲತಿಶರ್ಮರ ‘ವಿಕಸನಾ’ ರಾಜ ಅನಂತಸ್ವಾಮಿ ಅವರ ‘ಮೈಸೂರು ಅನಂತಸ್ವಾಮಿ ಸುಗಮಸಂಗೀತ ಅಕಾಡೆಮಿ’ ಗಾಯತ್ರಿ ಕೇಶವಮೂರ್ತಿ ಅವರ ‘ಪಂಚಾಮೃತ’ ಮುಂತಾದವು ಸುಗಮಸಂಗೀತದ ಪ್ರಸಾರಕ್ಕೆ ಶ್ರಮಿಸುತ್ತಾ ಸುಗಮಸಂಗೀತದ ಸಂಘಟನೆಗೆ ಪ್ರತ್ಯಕ್ಷ ಪರೋಕ್ಷವಾಗಿ ಆಧಾರವಾಗಿವೆ.

* * *