ಪಿ.ಕಾಳಿಂಗರಾವ್

ಜನನ:೩೧-೮-೧೯೧೪-ಪಾಂಡೇಶ್ವರದಲ್ಲಿ ಜನ್ಮನಾಮ ಸುಬ್ರಾಯ ಶಾನುಭೋಗ್-ಅನಂತರ ಕಾಳಿಂಗಶರ್ಮನಾಗಿ ಮುಂದೆ ಕಾಳಿಂಗರಾವ್ ಆದರು.

ಮನೆತನ: ಸುಪ್ರಸಿದ್ಧ ಯಕ್ಷಗಾನ ಕಲಾವಿದರ ಮನೆತನ. ತಂದೆ ಪುಟ್ಟಯ್ಯನವರು ಯಕ್ಷಗಾನ ಕಲಾವಿದರು. ತಾಯಿ ನಾಗರತ್ನಮ್ಮ.

ಗುರು ಪರಂಪರೆ: ನಾಟಕ ಕಂಪೆನಿಯ ರಂಗನಾಥ ಭಟ್ಟರು ನಟನೆಯಲ್ಲಿ ಶಿಕ್ಷಣ ನೀಡಿ ಬಾಲನಟನಾಗಿ ಪಾತ್ರ ನೀಡಿದ್ದೇ ಅಲ್ಲದೆ ಕರ್ನಾಟಕ ಸಂಗೀತವನ್ನೂ ಕಲಿಸಿ ಹನ್ನೆರಡನೆ ವಯಸ್ಸಿನಲ್ಲಿ ಕಚೇರಿ ಮಾಡುವಷ್ಟು ಶಿಕ್ಷಣ ನೀಡಿದರು. ಮುಂದೆ ಸವಾಯಿ ಗಂಧರ್ವ ಅವರ ಶಿಷ್ಯರಾದ ವೆಂಕಟರಾವ್ ರಾಮದುರ್ಗ ಅವರಲ್ಲಿ ಹಿಂದೂಸ್ಥಾನಿ ಸಂಗೀತವನ್ನೂ ಅಭ್ಯಸಿಸಿದರು. ಅನಂತರ ಪಂ. ರಾಮಚಂದ್ರ ಬುವಾ ಮರೊಲ್‌ಕರ್ ರವರಲ್ಲಿ ಉನ್ನತ ಶಿಕ್ಷಣ ಪಡೆದು ಅವರ ಪಟ್ಟ ಶಿಷ್ಯರಾದರು.

ಸಾಧನೆ: ಮೊದಲ ಗುರು ರಂಗನಾಥ ಭಟ್ಟರ ಕಂಪೆನಿಯಲ್ಲಿ ಬಾಲಪ್ರತಿಭೆಯಾಗಿ ಗಾಯನ-ನಟನೆಯೆರಡರಲ್ಲೂ ಹೆಸರು ಮಾಡಿದರು. ಆ ಕಂಪೆನಿ ನಿಂತು ಹೋದ ಮೇಲೆ ದಕ್ಷಿಣ ಭಾರತ ಹಿಂದೀ ಪ್ರಚಾರ ಮಂಡಲಿಯ ಕಲಾಶಾಲೆಯ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದರು. ಅಲ್ಲಿರುವಾಗಲೇ ಚಲನಚಿತ್ರರಂಗ ಪ್ರವೇಶಮಾಡಿ ಗಾಯಕನಾಗಿ, ನಟನಾಗಿ ಮೆರೆದರು. ಅಂಬಾ ಪ್ರಸಾದಿನ ನಾಟಕ ಸಂಸ್ಥೆಯಲ್ಲಿ ಗಾಯಕ-ನಟನಾಗಿ ಅಲ್ಲಿ ಪ್ರಮುಖ ಸ್ತ್ರೀ ಪಾತ್ರಧಾರಿಯಾಗಿಯೂ ಹೆಸರು ಮಾಡಿದರು. ಮುಂದೆ ಸುಗಮ ಸಂಗೀತದ ಕಡೆಗೆ ಅವರ ಮನಸ್ಸುವಾಲಿತು. ಅನೇಕ ಕನ್ನಡ ಗೀತೆಗಳಿಗೆ, ಜಾನಪದ ಹಾಡುಗಳಿಗೆ ತಾವೇ ರಾಗ ಸಂಯೋಜನೆ ಮಾಡಿ ಹಾಡಲು ತೊಡಗಿದರು. ಕನ್ನಡ ದೇವರನಾಮಗಳಿಗೆ ಆಧುನಿಕ ರಾಗಗಳ ಸೊಗಡನ್ನು ನೀಡಿ ಹಾಡುತ್ತಿದ್ದರು. ಹುಯಿಲುಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆ ಇವರ ಕಂಠದಿಂದ ಹೊರ ಹೊಮ್ಮಿ ಪ್ರಸಿದ್ಧಿಯಾಗಿ ಒಂದು ರೀತಿಯಲ್ಲಿ ನಾಡಗೀತೆಯೇ ಆಯಿತು. ಬೇಂದ್ರೆಯವರ ಗೀತೆಗಳಿಗೆ ಜಾನಪದ ಸೊಗಡನ್ನು ನೀಡಿದರು. ರಾಜರತ್ನಂರವರ ರತ್ನನ ಪದಗಳು, ಅನೇಕ ಜಾನಪದ ಗೀತೆಗಳು ಇವರ ಕಂಠದಿಂದ ಹೊರಬಂದವು. ಕಾಳಿಂಗರಾಯರು-ಮೋಹನ್‌ಕುಮಾರಿ, ಸೋಹನ್ ಕುಮಾರಿ ಸಹೋದರಿಯರೊಂದಿಗೆ-ಹಾಡುತ್ತಿದ್ದ ಗಾಯನ ಕಾರ್ಯಕ್ರಮಗಳು ನಾಡಿನಾದ್ಯಂತ ಹೆಸರು ಗಳಿಸಿತು.

೧೯೫೬ರಲ್ಲಿ ಕನ್ನಡ ನಾಡು ಒಂದಾದಾಗ ಇವರಿಂದ ಉದಯವಾಗಲಿ ನಾಡಗೀತೆ ಹಾಡಿಸಿ ಸರ್ಕಾರ ಗೌರವಿಸಿತು. ಅಣ್ಣ ತಂಗಿ, ಕಿತ್ತೂರು ಚೆನ್ನಮ್ಮ, ಅಬ್ಬಾ ಆ ಹುಡುಗಿ, ತುಂಬಿದ ಕೊಡ ಮುಂತಾದ ಚಲನಚಿತ್ರಗಳಲ್ಲೂ ಹಾಡಿದ್ದಾರೆ. ನಟಶೇಖರ, ಅಬ್ಬಾ ಆ ಹುಡುಗಿ, ತರಂಗ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ರಾಗ ಸಂಯೋಜನೆ ಮಾಡಿದ್ದಾರೆ. ಆಕಾಶವಾಣಿಯ ಕಲಾವಿದರಾಗಿ ಅನಭಿಷಿಕ್ತ ದೊರೆಯಾಗಿ ಮೆರೆದವರು.

ಪ್ರಶ್ತಸ್ತಿ-ಸನ್ಮಾನ: ಬಾಲ ಗಂಧರ್ವ, ಜಾನಪದ ಸಂಗೀತ ರತ್ನ, ಗಾಯನ ಚಕ್ರವರ್ತಿ, ಗಾಯನ ಕಂಠೀರವ, ಕನ್ನಡ ಉದಯಗಾನ ಕೋಗಿಲೆ, ಸಂಗೀತ ರಸ ವಿಹಾರಿ ಮುಂತಾದ ಬಿರುದು ಗೌರವಗಳಿಗೆ ಪಾತ್ರರಾದ ರಾಯರನ್ನು ರಾಜ್ಯ ಸಂಗೀತ-ನಾಟಕ ಅಕಾಡೆಮಿ ೧೯೬೮-೬೯ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.

ಸುಗಮ ಹಾಗೂ ಶಾಸ್ತ್ರೀಯ ಸಂಗೀತದ ಅನಭಿಷಿಕ್ತ ದೊರೆಯಾಗಿ ರಾಜ್ಯಾದ್ಯಂತ ಮನೆಮಾತಾಗಿದ್ದ ಕಾಳಿಂಗರಾಯರು ದಿನಾಂಕ: ೨೧-೯-೧೯೮೧ರಂದು ನಿಧನರಾದರು.