ಇಂದು ಸುಗಮ ಸಂಗೀತವೆಂಬ ಗಾಯನ ಪ್ರಕಾರ ಒಂದು ಸಂಗೀತದ ಶೈಲಿಯಾದರೂ ಸಂಗೀತವನ್ನು ಮೀರಿದ ಕವಿತೆಯ ದರ್ಶನವನ್ನು ತೋರುವ ಗಾಯನ ಪ್ರಕಾರವಾಗಿದೆ. ಇಲ್ಲಿ ಸಾಹಿತ್ಯಕ್ಕಾಗಿ ಸಂಗೀತವಿದೆಯಲ್ಲದೆ, ಸಂಗೀತಕ್ಕಾಗಿ ಸಾಹಿತ್ಯವಿಲ್ಲ. ಸಂಗೀತ ಮತ್ತು ಸಾಹಿತ್ಯಗಳ ಅನ್ಯೋನ್ಯ ಹೊಂದಾಣಿಕೆಯಲ್ಲಿಯೇ ಇದರ ಸಫಲತೆ ಇದೆ. ಪ್ರಸ್ತುತ ಪಡಿಸುವ ಕಲಾವಿದನ ಜಾಣ್ಮೆ, ಕಂಠಸಿರಿಯ ಮಾಧುರ್ಯವೇ ಪಾತ್ರ ಧಾರಿಯಾಗಿದೆ.ಕವಿ, ಸಂಯೋಜಕ ಸೂತ್ರಧಾರಿಗಳಾದರೆ, ಗಾಯಕನೇ ಪಾತ್ರಧಾರಿ. ಅವನ ರಾಗಾಭಿನಯದ ಮೋಡಿಯಲ್ಲಿಯೇ ಸುಗಮ ಸಂಗೀತದ ಜನಪ್ರಿಯತೆ ಅಡಗಿದೆ. ಸುಗಮ ಸಂಗೀತದ ಜನಪ್ರಿಯತೆಯಲ್ಲಿ ನೂರಾರು ಕವಿಗಳ, ಕಲಾವಿದರ, ಸಂಗೀತ ವಾದ್ಯಗಾರರ, ಸಂಘಟನಾಕಾರರ, ಸಂಯೋಜಕರ, ಕಾಳಜಿ ಇದೆ. ಶಾಸ್ತ್ರೀಯ ಸಂಗೀತಗಾರರಿಂದ ಅಲಕ್ಷ್ಯಗೊಂಡು ‘ಲಘುಸಂಗೀತ’ವೆಂದಾಗಿ, ಕಡೆಗೆ ‘ಸುಗಮ ಸಂಗೀತ’ವೆಂಬ ಹೆಸರು ಪಡೆದ ಈ ಗಾಯನ ಪ್ರಕಾರ, ತನ್ನ ಸಾಹಿತ್ಯಾರ್ಥಶಕ್ತಿಯಿಂದ ಎತ್ತರ ಬಿತ್ತರಗಳಿಂದ ಶೈಕ್ಷಣಿಕ ಮಟ್ಟಕ್ಕೇರಿದೆ. ವಿಶ್ವವಿದ್ಯಾಲಯದಲ್ಲಿ ಸಂಶೋಧನ ಪದವಿ ಪಡೆಯುವಷ್ಟು ಔನ್ನತ್ಯವನ್ನೂ, ವಿಚಾರ ಸಂಪತನ್ನೂ ಹೊಂದಿದೆ. ಇದೀಗ ಹಂಪೆ ವಿಶ್ವವಿದ್ಯಾನಿಲಯದ ಸುವರ್ಣ ಅರಿವಿನಂಗಳ ಮಾಲೆಗೆ ‘ನವಸುಮ’ವಾಗಿ ಸೇರುತ್ತಿದೆ. ಇದು ನನಗೆ ಅತ್ಯಂತ ಸಂತೋಷ ತಂದಿದೆ. ಕೇವಲ ವೇದಿಕೆಗಳಲ್ಲಿ, ಆಕಾಶವಾಣಿಯಲ್ಲಿ, ಧ್ವನಿಸುರುಳಿಗಳಲ್ಲಿ ಪ್ರಸಾರವಾಗುತ್ತಾ, ಪ್ರಚಾರಗಳಿಸುತ್ತಾ ಜನಪ್ರಿಯವಾಗಿದ್ದ ಈ ಗಾಯನ ಪ್ರಕಾರ, ತನ್ನ ಅಪೂರ್ವ ವ್ಯಕ್ತಿತ್ವ, ಸಿದ್ಧಾಂತಗಳ ಮೂಲಕ ವಿಶ್ವವಿದ್ಯಾನಿಲಯದ ಆವರಣವನ್ನು ಪ್ರವೇಶಿಸಿದೆ. ಶಾಸ್ತ್ರೀಯ ಕಲೆಯ ಗೌರವವನ್ನೂ ಘನತೆಯನ್ನೂ ಪಡೆಯುತ್ತಾ ಇತಿಹಾಸವನ್ನು ಸೃಷ್ಟಿಮಾಡುತ್ತಿದೆ. ಈ ಅರಿವಿನ ಅಂಗಳ ಮಾಲಿಕೆಯಲ್ಲಿ ನನ್ನ ಕೆಲವು ಚಿಂತನೆಗಳು, ವಿಚಾರಗಳು ದಾಖಲಾಗುತಿತರುವುದಲ್ಲದೆ, ಸುಗಮಸಂಗೀತದ ಇತಿಹಾಸವೂ ಮುಂದುವರೆಯುತ್ತಿದೆ. ಅಲ್ಲದೆ, ಜನಸಾಮಾನ್ಯರಿಗೆ, ಮುಂದಿನ ಪರಂಪರೆಗೆ, ಯುವಪೀಳಿಗೆಗೆ, ಸುಗಮ ಸಂಗೀತದ ಅರಿವನ್ನು ಮೂಡಿಸುವಲ್ಲಿ ಪರಿಣಾಮಕಾರಿಯಾಗಿದೆ. ಈ ಪುಸ್ತಕದಲ್ಲಿ ನನ್ನ ವಿಚಾರಗಳನ್ನು ಹಂಚಿಕೊಳ್ಳಲು ಅನುವುಮಾಡಿಕಟ್ಟ ಕನ್ನಡ ವಿಶ್ವವಿದ್ಯಾಲಯ, ಹಂಪಿ ಪ್ರಸಾರಾಂಗದ ನಿದೇಶಕರಾದ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ಅವರಿಗೆ ಆಭಾರಿಯಾಗಿದ್ದೇನ.

ಈ ಗ್ರಂಥವನ್ನು ರಚಿಸಲು ಅವಕಾಶ ಮಾಡಿಕೊಟ್ಟ ಅಂದಿನ ಕುಲಪತಿಗಳಾಗಿದ್ದ ಡಾ. ಬಿ.ಎ. ವಿವೇಕ ರೈ ಅವರನ್ನು ಇಂದಿನ ಕುಲಪತಿಗಳಾದ ಡಾ. ಎ ಮುರಿಗೆಪ್ಪ ಇವರನ್ನು ನಾನು ಕೃತಜ್ಞತಾಪೂರ್ವಕವಾಗಿ ನೆನೆಯುತ್ತೇನೆ. ಈ ಗ್ರಂಥ ರಚನೆಯ ಸಂದರ್ಭದಲ್ಲಿ ನೆರವಾದ ಹಲವಾರು ಮಿತ್ರರನ್ನೂ ಸಂಗೀತಜ್ಞರನ್ನೂ ತುಂಬ ಹೃದಯದಿಂದ ನೆನೆಯುವುದು ನನ್ನ ಕರ್ತವ್ಯ.

ಈ ಗ್ರಂಥವು ಸುಗಮ ಸಂಗೀತ ಕ್ಷೇತ್ರದ ಆಸಕ್ತರಿಗೆ ‘ಕೈಪಿಡಿ’ ಆಗುವುದೆಂಬ ನಂಬುಗೆ ನನಗಿದೆ. ಕನ್ನಡ ನಾಡಿನ ಸುಗಮ ಸಂಗೀತ ಸಮುದಾಯಕ್ಕೆ ಈ ಗ್ರಂಥವನ್ನು ಆದರದಿಂದ ಒಪ್ಪಿಸುತ್ತಿದ್ದೇನೆ.

ಡಾ. ಜಯಶ್ರೀ ಅರವಿಂದ್
ಬೆಂಗಳೂರು