ತೊರೆಮಾವಿನ ಹಳ್ಳಿಯ ದುರ್ಗೇಶ್ವರನ ಮಗನು ಪರಪತ್ನಿಯನ್ನು ಕಾಮಿಸಿ ಆಕೆಯ ಪತಿಯನ್ನು  ಕೊಲೆ ಮಾಡುತ್ತಾನೆ. ಅದರ ಪರಿಣಾಮವಾಗಿ ಯುವರಾಜನೊಂದಿಗಿನ ಆತನ ತಂಗಿಯ ಪ್ರೇಮ ಜೀವನ ಭಗ್ನವಾದದ್ದು, ಅಲ್ಲದೇ ತೊರೆಮಾವಿನ ಹಳ್ಳಿಯವರನ್ನು ಮೈಸೂರು ಅರಸರು ಸೋಲಿಸಿ ಅವರಿಂದ ‘ಸುಗುಣ ಗಂಭೀರ’ ಎಂಬ ಬಿರುದನ್ನು ಸಂಪಾದಿಸಿಕೊಂಡದ್ದು ಈ ನಾಟಕದ ವಸ್ತು.

ತೊರೆಮಾವಿನ ಹಳ್ಳಿಯ ಶ್ರೀಮದ್ರೇಟಿ ವೆಂಕಟನಾಯಕನು ತನ್ನ ಮಗಳು ಅಂಬಿಕೆಯನ್ನು ಮೈಸೂರು ಯುವರಾಜನಿಗೆ ಮದುವೆ ಮಾಡಿಕೊಡುವ ಪ್ರಸ್ತಾಪಕ್ಕಾಗಿ ಮಹಾರಾಜನ ಸನ್ನಿಧಾನಕ್ಕೆ ಮಂಗಲದ್ರವ್ಯಗಳೊಂದಿಗೆ ಬರುತ್ತಾನೆ. ಆ ಸಂದರ್ಭದಲ್ಲಿ ವೃದ್ಧಮಂತ್ರಿ ರೇಮಟಿ ವೆಂಕಟರಾಯನ ವಂಶ, ಗುಪ್ತ ನರಹತ್ಯೆಗಳಿಂದ ಕಲಂಕಿತವಾಗಿರುವದನ್ನು ಅರುಹಿ, ಶ್ರೀ ಮದಾನಂದ ಸನ್ಯಾಸಿಯು ಅದನ್ನು ದೃಢಪಡಿಸುತ್ತಾನೆ. ಇದರಿಂದ ಮದುವೆಯ  ಸಂಬಂಧ ಮುರಿದು ಬೀಳುತ್ತದೆ. ಅಂಬಿಕೆಯನ್ನು ಗಾಢವಾಗಿ ಪ್ರೀತಿಸಿದ್ದ ಬೆಟ್ಟದ ಚಾಮರಾಜ ಶೋಕಿಸುತ್ತಾನೆ. ಈ ಮಧ್ಯೆ, ಮೈಸೂರಿನಲ್ಲಿ ವಿದ್ಯೆ ಕಲಿಯಲು ಬಂದ ಭಾಮನಾಯಕನ ತಮ್ಮ ಚಂದ್ರಮ, ಅರಸರೊಂದಿಗೆ ದುರ್ಗಾಷ್ಟಮಿಯ ದಿನ ಬೆಟ್ಟವೇರುವಾಗ ಸಿಡಿಲು ಬಿದ್ದು ಸಾಯುತ್ತಾನೆ. ಕ್ರುದ್ಧಗೊಂಡ ತೊರೆ ಮಾವಿನ ಹಳ್ಳಿಯವರು ಮೈಸೂರು ಅರಸರ ವಿರುದ್ಧ ಯುದ್ಧ ಸಾರುತ್ತಾರೆ. ತೇಜಸ್ವಿನಿ ತನ್ನ ಗಂಡನ ಕೊಲೆಯ ಪ್ರತೀಕಾರಕ್ಕಾಗಿ ಯುದ್ಧವನ್ನು ಹೊತ್ತಿಸಿದ್ದರೂ ಭಾಮನಾಯಕನ ಪಶ್ಚಾತ್ತಾಪದಿಂದಾಗಿ, ಯುದ್ಧನಿಂತರೆ ಸಾಕೆನ್ನುವ ಮಟ್ಟಕ್ಕೆ ಬರುತ್ತಾಳೆ. ಅಂಬಿಕೆಯು ವೇಷ ಮರೆಯಿಸಿಕೊಂಡಾದರೂ ಹೋಗಿ ಯುದ್ಧನಿಲ್ಲಿಸಲು ಪ್ರಯತ್ನಿಸುತ್ತಾಳೆ. ಅದು ಕೈಗೂಡುವುದಿಲ್ಲ. ಕೊನೆಗೆ ಅಣ್ಣನ ಯುದ್ಧ ನೋಡಲು ರಣಭೂಮಿಗೆ ಹೋಗಿ, ಗಾಯಗಳಾಗಿ ರಕ್ತ ಸೋರಿ, ಅಲ್ಲಿಯೇ ಕೊನೆಯುಸಿರೆಳೆಯುತ್ತಾಳೆ. ಭಾಮನಾಯಕನೂ ಯುವರಾಜನೊಂದಿಗಿನ ಯುದ್ದದಲ್ಲಿ ಸೋತು  ಸಾಯುತ್ತಾನೆ. ಕೊನೆಯಲ್ಲಿ ಮೈಸೂರಿಗೇ ಜಯವಾಗುತ್ತದೆ. ತೊರೆಮಾವಿನ ಹಳ್ಳಿಯವರ ‘ಸುಗುಣಗಂಭೀರ’ ಬಿರುದು ಮೈಸೂರು ಅರಸರದಾಗುತ್ತದೆ.

ಯುದ್ಧ, ಪ್ರೇಮ ಮುಂತಾದ ಅನೇಕ ಸ್ವಾರಸ್ಯಕರ ಅಂಶಗಳನ್ನು ಒಳಗೊಂಡ ೧೬ ಪ್ರವೇಶಗಳ ನಾಟಕವಿದು. ಅಂಬಿಕೆಯ ಪ್ರೇಮ, ತೇಜಸ್ವಿನಿಯ ಮಾನಸಿಕ ದ್ವಂದ್ವ ಇವೆಲ್ಲ ಬಹಳ ಸಮರ್ಥವಾಗಿ ನಾಟಕದಲ್ಲಿ ಮೂಡಿಬಂದಿವೆ. ಈ ನಾಟಕದ ಮೇಲೆ ಷೇಕ್ಸಪಿಯರ್ ನ ಪ್ರಭಾವ ಗಾಢವಾಗಿ ಆದಂತೆ ತೋರುತ್ತದೆ. ಸಂಸರ ಹಾಸ್ಯಪ್ರಜ್ಞೆ, ಸಂಭಾಷಣೆಯಲ್ಲಿ ದೇಸಿ ಮುಂತಾದವುಗಳು ಈ ಕೃತಿಯಲ್ಲಿ ವಿಶೇಷವಾಗಿ ಗಮನಿಸುವಂತಿವೆ.