ಕರ್ನಾಟಕದ ಮಹಿಳಾ ಹಿಂದೂಸ್ಥಾನಿ ಗಾಯಕಿಯವರಲ್ಲಿ ತಮ್ಮ ವಿಶಿಷ್ಠ ಹಾಡುಗಾರಿಕೆಯಿಂದ ಹೆಸರು ಗಳಿಸಿರುವ ಬಾಗಲಕೋಟೆಯ ಖ್ಯಾತ ಖ್ಯಾಲ್‌ ಗಾಯಕಿ ಶ್ರೀಮತಿ ಸಗುಣಾ ಚಂದಾವರಕರ ಅವರು ದಿನಾಂಕ ೧೬-೭-೧೯೨೬ ರಂದು ಮುಂಬಯಿಯಲ್ಲಿ ಜನಿಸಿದರು. ಇವರದು ಸಂಗೀತದ ಮನೆತನ ಅಕ್ಕ ಶಾಂತಿಮತಿ ಮಂಜೀಖಾನರ ಶಿಷ್ಯೆ. ಅಕ್ಕನ ಮಾರ್ಗದರ್ಶನದಲ್ಲೇ ಇವರ ಸಂಗೀತ ಕಲಿಕೆ ಆರಂಭ. ಇವರ ಅತ್ತೆಯ ತಂಗಿ ಇಂದುಮತಿ ಹತ್ತಂಗಡಿ ಉಸ್ತಾದ್‌ ಖಾದಿಮ್‌ ಹುಸೇನರ ಶಿಷ್ಯೆ. ಅವರಿಂದಲೇ ಇವರಿಗೆ ಬಾಲಪಾಠ. ಮುಂದೆ ವಿವಾಹವಾದ ನಂತರ ಪಂ. ಭೀಮರಾವ್‌ ನಿಡಗುಂಡಿ, ಪಂ. ಮೃತ್ಯುಂಜಯ ಬುವಾ ಪುರಾಣಿಕಮಠ ಅವರಲ್ಲಿ ಗ್ವಾಲಿಯರ್, ಪಂ. ಸಂಗಮೇಶ್ವರ ಗುರವ ಅವರ ಬಳಿ ಕಿರಾಣಾ ಘರಾಣೆಗಳ ಶಿಕ್ಷಣ ಪಡೆದಿರುವುದೇ ಅಲ್ಲದೆ ಭಾತಖಂಡೆ ಹಾಗೂ ಗಂಧರ್ವ ಮಹಾ ವಿದ್ಯಾಲಯದ ಅನೇಕ ಶಾಸ್ತ್ರ ಗ್ರಂಥಗಳನ್ನೂ ಅಧ್ಯಯನ ಮಾಡಿ ಸಂಗೀತ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಗಳಿಸಿದ್ದಾರೆ.

೧೯೬೦ರಲ್ಲಿ ಬೆಳಗಾವಿಯಲ್ಲಿ ನಡೆದ ಸಂಗೀತ ಸಮ್ಮೇಳನದಲ್ಲಿ ಇವರ ಪ್ರಥಮ ಸಂಗೀತ ಕಛೇರಿ ನಡೆಯಿತು. ಅಲ್ಲಿಂದ ಧಾರವಾಡ, ಬೆಂಗಳೂರು ಆಕಾಶವಾಣಿ ಕೇಂದ್ರಗಳಿಂದ ಕಾರ್ಯಕ್ರಮ ಪ್ರಸಾರ ಆರಂಭವಾಗಿ ೧೯೭೪ರಲ್ಲಿ ದೆಹಲಿಯ ಆಕಾಶವಾಣಿಯಿಂದ ಪ್ರಸಾರವಾಗುವ ಪ್ರತಿ ಮಂಗಳವಾರ ಸಂಗೀತ ಕಛೇರಿ, ಮುಂಬಯಿ, ನಾಗಪೂರ, ಪುಣೆ,  ಔರಂಗಾಬಾದ್‌ ಹಾಗೂ ಬೆಳಗಾವಿ ಕೇಂದ್ರಗಳಲ್ಲೂ ಇವರ ಕಾರ್ಯಕ್ರಮಗಳು ಬಿತ್ತರಗೊಂಡಿವೆ.

ಬೆಂಗಳೂರಿನ ಅನೇಕ ಹಿಂದೂಸ್ಥಾನಿ ಸಂಗೀತ ವೇದಿಕೆಗಳಲ್ಲಿ, ಬೆಳಗಾವಿ, ಮಂಗಳೂರು, ಹೊಸಪೇಟೆ ಮುಂತಾದೆಡೆಗಳಲ್ಲಿ ಅಲ್ಲದೆ ಕುಂದಗೋಳದಲ್ಲಿ ಪಂ. ಭೀಮಸೇನ ಜೋಶಿಯವರು ನಡೆಸುವ ಸವಾಯಿ ಗಂಧರ್ವ ಸ್ಮಾರಕ ಸಂಗೀತ ಸಮ್ಮೇಳನದಲ್ಲೂ ಪಾಲ್ಗೊಂಡಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸಹ ಹಲವಾರು ಬಾರಿ ಇವರ ಸಂಗೀತ ಕಾರ್ಯಕ್ರಮಗಳನ್ನು ನಡೆಸಿದೆ.

ಶ್ರೀಮತಿ ಚಂದಾವರಕರ ಅವರು ಕೇವಲ ಭಾರತದಲ್ಲೇ ಅಲ್ಲದೆ ಹೊರ ರಾಷ್ಟ್ರಗಳಾದ ಅಮೆರಿಕದ ಚಿಕಾಗೊ, ನ್ಯೂಜರ್ಸಿ ಹಾಗೂ ಫಿಲಿಡೆಲ್ಫಿಯ ಮುಂತಾದೆಡೆ ಕಾರ್ಯಕ್ರಮ ನೀಡಿದ್ದಾರೆ. ಇವರ ಖ್ಯಾಲ್‌ ಗಾಯನ ಅತ್ಯಂತ ಜನಾದರಿಣೀಯ. ಅಲ್ಲದೆ ಠುಮರಿ, ಹಿಂದಿ, ಮರಾಠಿ, ಕನ್ನಡ ಭಜನ್‌ಗಳನ್ನು ಭಾವಪೂರ್ಣವಾಗಿ ಹಾಡುವ ಹಿರಿಮೆ ಇವರದು. ಸದ್ಯ ಇವರು ಬಾಗಲಕೋಟೆಯಲ್ಲೇ ಇದ್ದು ಅಲ್ಲಿ ಅನೇಕ ಶಿಷ್ಯರನ್ನು ತಯಾರು ಮಾಡುತ್ತಿದ್ದಾರೆ. ಸಂಗೀತದ ಜೊತೆಗೆ ಸಾಹಿತ್ಯವನ್ನು ಮೇಳೈಸಿಕೊಂಡು ಉತ್ತಮ ಕವಿಯಿತ್ರಿಯಾಗಿ ಇತ್ತೀಚೆಗೆ ಭಾವ ಬಿಂದುಗಳು ಎಂಬ ಕವನ ಸಂಕಲನವನ್ನು ಹೊರ ತಂದಿದ್ದಾರೆ. ಸಾಮಾಜಿಕ ಕಾರ್ಯಕರ್ತೆಯಾಗಿ ಬೆಂಗಳೂರಿನ ಸಿಸ್ಟರ್ಸ್ ಆಫ್‌ ಚಾರಿಟಿ, ಬಳ್ಳಾರಿಯ ಕ್ರಾಂಪ್ಟನ್‌ ಕ್ಲಬ್‌ ಮತ್ತು ಬಾಗಲಕೋಟೆಯ ಭಗಿನಿ ಸಮಾಜದ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹೀಗೆ ಸಂಗೀತ, ಸಾಹಿತ್ಯ, ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಪಾರ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಗುಣಾ ಚಂದಾವರಕರ ಅವರ ಅಮೋಘ ಸಂಗೀತ ಸೇವೆಗಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೩ನೇ ಸಾಲಿ ಕರ್ನಾಟಕ ಕಲಾಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪತಿ ನಿವೃತ್ತಿ ಜಿಲ್ಲಾಧಿಕಾರಿ ಸಿ.ಎಂ. ಚಂದಾವರಕರ, ಸೊಸೆ ಪ್ರಾಚಾರ್ಯೆ ಡಾ. ಮೀನಾ ಚಂದಾವರಕರ ಅವರೆಲ್ಲರ ಮಧ್ಯೆ ಸದಾ ಸಂಗೀತದ ಅಭ್ಯುದಯದತ್ತ ಒಲವಿರುವ ಶ್ರೀಮತಿ ಸಗುಣಾ ಬಾಯಿಯವರಿಗೆ ಸಂಗೀತ ಹಾಗೂ ಆಧ್ಯಾತ್ಮ ಅವರ ಜೀವನದ ಪರಮಾನಂದದ ಘತ್ವಗಳು. ಬದುಕಿನ ಆಧಾರಸ್ತಂಭವಾಗಿದ್ದ ಮಗನನ್ನು ಕರುಳಬಳ್ಳಿ ಮೊಮ್ಮಗಳು ಅಮೃತಾಳನ್ನು ಕಳೆದುಕೊಂಡ ದುಃಖದ ಮಧ್ಯೆ ಅವರು ಸಂಗೀತ ಹಾಗೂ ಆಧ್ಯಾತ್ಮದ ಶಕ್ತಿಯಿಂದ ಕಹಿ ಘಟನೆ ಮರೆತು ನಾದಲೋಕದ ಆನಂದದಲ್ಲಿ ದುಃಖ ಮರೆಯುತ್ತ ಕಾಲ ಕಳೆಯುತ್ತಿದ್ದಾರೆ.