ಎಲ್ಲವನ್ನೂ ತೊರೆದು, ಎಲೆಕಳಚಿ, ಉಲು-
ಹಡಗಿ, ಹಠತೊಟ್ಟು ಕೂತ ಮೈ-ಮನದ
ಕೊಂಬೆ ರೆಂಬೆಯ ತುಂಬ ಪಂಚಾಗ್ನಿ
ಪ್ರವಾಹ. ಈ ಬೆಂಕಿಯನು ಹಾದು, ಇದ-

ರಾಚೆಗಿರುವ ಬೆಳಕನ್ನು ಕಾಣುವ ತನಕ
ನಾನು ಇಲ್ಲಿಂದ ಕದಲುವುದಿಲ್ಲ, ಸೀದು
ಹೋದರು ಸರಿಯೆ. ಖಾಂಡವದಹನ
ದಾರ್ಭಟ. ಒಳಗು ಹೊರಗೂ ಉರಿದು

ಬರಿಬೂದಿ. ಎಲ್ಲಿ, ಎಲ್ಲಿದೆ ಬೆಳಕು, ಉಸಿ-
ರಾಡುತ್ತಿರುವ ಈ ಅಸ್ಥಿಪಂಜರ ಹೊರತು?
ಸುಟ್ಟ ನೆಲದಿಂದೇಳುವುದೆ ಥಟ್ಟನೆ ಮೊಳಕೆ?
ಹರಿದ ತಂತಿಯ ವೀಣೆ, ಹೇಗೆ ಸ್ವರ ಹೊಮ್ಮೀತು?

ಒಂದು ಮುಂಜಾನೆ ಬಂದಳು ಸುಜಾತ, ಪಾ-
ಯಸದ ಬಟ್ಟಲು ಹಿಡಿದು. ವರ್ಷಋತು-
ವಿನ ಹದಮಳೆಗೆ ಬೋಧಿವೃಕ್ಷದ ಸುತ್ತ
ತಂಪು. ನೈಜರಂಜನಾ ನದಿಗೆ ನೆರೆಬಂತು.

ಇದ್ದಕಿದ್ದಂತೆ ಸುದೀರ್ಘ ನಿದಾಘದಾತಪ-
ದಲ್ಲಿ ಒಣಗಿ ನಿಶ್ಶಬ್ದವಾಗಿ ನಿಂತ
ಬರಡು ಕೊಂಬೆಗಳೆಲ್ಲ ಝಗ್ಗನೆ ಚಿಗುರಿ, ವೈ-
ಶಾಖ ಶುಕ್ಲ ಪೂರ್ಣಿಮಾ ವಸಂತ.